Old/New Testament
ನಾತಾನನು ದಾವೀದನೊಂದಿಗೆ ಮಾತಾಡಿದ್ದು
12 ಯೆಹೋವನು ನಾತಾನನನ್ನು ದಾವೀದನ ಬಳಿಗೆ ಕಳುಹಿಸಿದನು. ನಾತಾನನು ದಾವೀದನ ಬಳಿಗೆ ಬಂದು, “ಒಂದು ನಗರದಲ್ಲಿ ಇಬ್ಬರು ಮನುಷ್ಯರಿದ್ದರು. ಒಬ್ಬನು ಶ್ರೀಮಂತ. ಆದರೆ ಮತ್ತೊಬ್ಬನು ತೀರಾ ಬಡವ. 2 ಶ್ರೀಮಂತನ ಹತ್ತಿರ ಅನೇಕ ಕುರಿಗಳು ಮತ್ತು ದನಗಳು ಇದ್ದವು. 3 ಆದರೆ ಬಡವನ ಹತ್ತಿರ ಅವನೇ ತಂದ ಒಂದು ಕುರಿಮರಿಯ ಹೊರತಾಗಿ ಬೇರೇನೂ ಇರಲಿಲ್ಲ. ಆ ಕುರಿಮರಿಯನ್ನು ಬಹು ಪ್ರೀತಿಯಿಂದ ಆ ಬಡವನು ಸಾಕಿದನು. ಅವನ ಮಕ್ಕಳೊಂದಿಗೆ ಈ ಕುರಿಮರಿಯೂ ಬೆಳೆಯಿತು. ಆ ಕುರಿಮರಿಯು ಬಡವನ ಊಟವನ್ನೇ ತಿನ್ನುತ್ತಿತ್ತು. ಅವನ ಬಟ್ಟಲಿನಲ್ಲಿಯೇ ಅದು ನೀರನ್ನು ಕುಡಿಯುತ್ತಿತ್ತು. ಅವನ ಎದೆಯ ಮೇಲೆಯೇ ಆ ಕುರಿಮರಿಯು ಮಲಗುತ್ತಿತ್ತು. ಆ ಕುರಿಮರಿಯು ಬಡವನಿಗೆ ಮಗಳಂತೆಯೇ ಇತ್ತು.
4 “ಆಗ ಶ್ರೀಮಂತನ ಮನೆಗೆ ಒಬ್ಬ ಪ್ರಯಾಣಿಕನು ಬಂದನು. ಶ್ರೀಮಂತನು ಆ ಪ್ರಯಾಣಿಕನಿಗೆ ಊಟವನ್ನು ಕೊಡಲು ಇಚ್ಛಿಸಿದನು. ಆದರೆ ಶ್ರೀಮಂತನು ಆ ಪ್ರಯಾಣಿಕನಿಗೆ ಕೊಡಲು ತನ್ನ ಸ್ವಂತ ಕುರಿಗಳಿಂದಾಗಲಿ ದನಗಳಿಂದಾಗಲಿ ಯಾವುದನ್ನೇ ಆಗಲಿ ತೆಗೆದುಕೊಳ್ಳಲು ಇಚ್ಛಿಸಲಿಲ್ಲ. ಶ್ರೀಮಂತನು ಆ ಬಡವನಿಂದ ಕುರಿಮರಿಯನ್ನು ತೆಗೆದುಕೊಂಡು ಅದನ್ನು ಕೊಯ್ಯಿಸಿ ತನ್ನ ಅತಿಥಿಗಾಗಿ ಅಡಿಗೆ ಮಾಡಿಸಿದನು” ಎಂದು ಹೇಳಿದನು.
5 ದಾವೀದನು ಶ್ರೀಮಂತನ ಮೇಲೆ ಬಹಳ ಕೋಪಗೊಂಡನು. ಅವನು ನಾತಾನನಿಗೆ, “ಯೆಹೋವನ ಆಣೆಯಾಗಿ ಈ ಕಾರ್ಯವನ್ನು ಮಾಡಿದ ಮನುಷ್ಯನು ಸಾಯಲೇಬೇಕು! 6 ಅವನು ಕರುಣೆಯಿಲ್ಲದೆ ಇಂತಹ ಕೆಟ್ಟಕಾರ್ಯವನ್ನು ಮಾಡಿದ್ದಕ್ಕಾಗಿ ಕುರಿಮರಿಯ ಬೆಲೆಯ ನಾಲ್ಕರಷ್ಟು ಹಿಂದಕ್ಕೆ ಕೊಡಲೇಬೇಕು” ಎಂದು ಹೇಳಿದನು.
ನಾತಾನನು ದಾವೀದನ ಪಾಪದ ಬಗ್ಗೆ ಹೇಳಿದನು
7 ಆಗ ನಾತಾನನು ದಾವೀದನಿಗೆ, “ನೀನೇ ಆ ಮನುಷ್ಯ! ಇಸ್ರೇಲರ ದೇವರಾದ ಯೆಹೋವನು ಹೀಗೆನ್ನುತ್ತಾನೆ: ‘ನಿನ್ನನ್ನು ಇಸ್ರೇಲರ ರಾಜನನ್ನಾಗಿ ಆರಿಸಿದವನು ನಾನೇ. ಸೌಲನಿಂದ ನಿನ್ನನ್ನು ರಕ್ಷಿಸಿದವನು ನಾನೇ. 8 ಅವನ ಕುಟುಂಬವನ್ನೂ ಅವನ ಪತ್ನಿಯರನ್ನೂ ನಿನಗೆ ಕೊಟ್ಟವನು ನಾನೇ. ನಿನ್ನನ್ನು ಇಸ್ರೇಲಿನ ಮತ್ತು ಯೆಹೂದದ ರಾಜನನ್ನಾಗಿ ಮಾಡಿದವನು ನಾನೇ. ಅದು ಸಾಲದು ಎನ್ನುವಂತೆ, ನಾನು ಮತ್ತಷ್ಟು ಹೆಚ್ಚಿನದನ್ನೂ ನೀಡಿದೆನು. 9 ನೀನು ಯೆಹೋವನ ಆಜ್ಞೆಯನ್ನು ಏಕೆ ಕಡೆಗಣಿಸಿದೆ? ಆತನು ತಪ್ಪೆಂದು ಹೇಳಿದ ಕಾರ್ಯವನ್ನು ಏಕೆ ಮಾಡಿದೆ? ಹಿತ್ತಿಯನಾದ ಊರೀಯನನ್ನು ಕತ್ತಿಯಿಂದ ನೀನು ಕೊಲ್ಲಿಸಿದೆ. ಅವನ ಪತ್ನಿಯನ್ನು ನಿನ್ನ ಪತ್ನಿಯನ್ನಾಗಿ ಸ್ವೀಕರಿಸಿದೆ. ಹೌದು, ನೀನು ಅಮ್ಮೋನಿಯರ ಕತ್ತಿಯಿಂದ ಊರೀಯನನ್ನು ಕೊಲ್ಲಿಸಿದೆ. 10 ನೀನು ಅವನ ಹೆಂಡತಿಯನ್ನು ತೆಗೆದುಕೊಂಡದ್ದರಿಂದ ಮತ್ತು ನನ್ನ ಆಜ್ಞೆಯನ್ನು ತಿರಸ್ಕರಿಸಿದ್ದರಿಂದ ಕತ್ತಿಯು ನಿನ್ನ ಕುಟುಂಬವನ್ನು ಸದಾ ಹಿಡಿದಿರುವುದು.’
11 “ಯೆಹೋವನು ಹೇಳುವುದೇನೆಂದರೆ: ‘ನಾನು ನಿನಗೆ ತೊಂದರೆಯನ್ನುಂಟುಮಾಡುತ್ತೇನೆ. ನಿನ್ನ ಸ್ವಂತ ಕುಟುಂಬದಿಂದಲೇ ಈ ತೊಂದರೆಯು ಬರುತ್ತದೆ. ನಾನು ನಿನ್ನ ಪತ್ನಿಯರನ್ನು ತೆಗೆದುಕೊಂಡು ನಿನಗೆ ತೀರ ಹತ್ತಿರನಾಗಿರುವ ಒಬ್ಬ ವ್ಯಕ್ತಿಗೆ ಕೊಡುತ್ತೇನೆ. ಅವನು ನಿನ್ನ ಪತ್ನಿಯರ ಜೊತೆಯಲ್ಲಿ ಮಲಗುತ್ತಾನೆ. ಇದು ಎಲ್ಲರಿಗೂ ತಿಳಿಯುತ್ತದೆ.[a] 12 ನೀನು ಬತ್ಷೆಬೆಳೊಂದಿಗೆ ಗುಟ್ಟಾಗಿ ಮಲಗಿದೆ. ಆದರೆ ನಾನು ಹೇಳುತ್ತಿರುವ ಮಾತೆಲ್ಲಾ ಇಸ್ರೇಲ್ ಜನರ ಕಣ್ಣೆದುರಿನಲ್ಲಿ ನಡೆಯುವುದು’”[b] ಎಂದು ಹೇಳಿದನು.
13 ಆಗ ದಾವೀದನು ನಾತಾನನಿಗೆ, “ನಾನು ಯೆಹೋವನಿಗೆ ವಿರುದ್ಧವಾಗಿ ಪಾಪಮಾಡಿದೆನು” ಎಂದನು.
ನಾತಾನನು ದಾವೀದನಿಗೆ, “ಯೆಹೋವನು ನಿನ್ನ ಪಾಪವನ್ನು ಕ್ಷಮಿಸಿದ್ದಾನೆ. ನೀನು ಸಾಯುವುದಿಲ್ಲ. 14 ನೀನು ನಿನ್ನ ಪಾಪಕೃತ್ಯಗಳಿಂದ ಯೆಹೋವನ ವೈರಿಗಳು ಯೆಹೋವನನ್ನು ಹೆಚ್ಚು ದ್ವೇಷಿಸುವಂತೆ ಮಾಡಿದೆ. ನಿನಗೆ ಹುಟ್ಟಿದ ಗಂಡುಮಗು ಈ ಕಾರಣಕ್ಕಾಗಿ ಸತ್ತುಹೋಗುವುದು” ಎಂದು ಹೇಳಿದನು.
ದಾವೀದ ಮತ್ತು ಬತ್ಷೆಬೆಳ ಮಗುವಿನ ಮರಣ
15 ನಾತಾನನು ಮನೆಗೆ ಹೋದನು. ದಾವೀದನಿಗೆ ಊರೀಯನ ಹೆಂಡತಿಯಲ್ಲಿ ಹುಟ್ಟಿದ ಗಂಡುಮಗುವಿಗೆ ಯೆಹೋವನು ಬಹಳ ಕಾಯಿಲೆಯನ್ನು ಬರಮಾಡಿದನು. 16 ದಾವೀದನು ಮಗುವಿಗಾಗಿ ದೇವರಲ್ಲಿ ಪ್ರಾರ್ಥಿಸಿದನು. ಅವನು ಉಪವಾಸ ಮಾಡಿದನು. ಅವನು ತನ್ನ ಮನೆಯೊಳಗೇ ಇದ್ದನು. ಅವನು ರಾತ್ರಿಯೆಲ್ಲ ನೆಲದ ಮೇಲೆಯೇ ಬಿದ್ದುಕೊಂಡಿದ್ದನು.
17 ದಾವೀದನ ಕುಟುಂಬದ ನಾಯಕರು ಬಂದು ಅವನನ್ನು ನೆಲದಿಂದ ಮೇಲಕ್ಕೆತ್ತಲು ಪ್ರಯತ್ನಿಸಿದರು. ಆದರೆ ದಾವೀದನು ಮೇಲೇಳಲಿಲ್ಲ. ಅವನು ಈ ನಾಯಕರೊಂದಿಗೆ ಊಟ ಮಾಡಲಿಲ್ಲ. 18 ಏಳನೆಯ ದಿನ ಆ ಮಗು ಸತ್ತಿತು. ಮಗು ಸತ್ತದ್ದನ್ನು ದಾವೀದನಿಗೆ ತಿಳಿಸಲು ಅವನ ಸೇವಕರು ಅಂಜಿದರು. ಅವರು, “ನೋಡಿ, ಮಗು ಜೀವಂತವಾಗಿರುವಾಗ ನಾವು ದಾವೀದನೊಂದಿಗೆ ಮಾತನಾಡಲು ಪ್ರಯತ್ನಿಸಿದೆವು. ಆದರೆ ಅವನು ನಮ್ಮ ಮಾತನ್ನು ಕೇಳಲಿಲ್ಲ. ಮಗುವು ಸತ್ತಿತೆಂದು ನಾವು ದಾವೀದನಿಗೆ ತಿಳಿಸಿದರೆ, ಬಹುಶಃ ಅವನು ತನಗೆ ಏನಾದರೂ ಕೇಡುಮಾಡಿಕೊಳ್ಳುತ್ತಾನೆ” ಎಂಬುದಾಗಿ ಮಾತಾಡಿಕೊಂಡರು.
19 ಆದರೆ ದಾವೀದನು ತನ್ನ ಸೇವಕರು ಗುಸುಗುಸು ಮಾತನಾಡುವುದನ್ನು ಕೇಳಿ, ಮಗು ಸತ್ತಿದೆಯೆಂಬುದನ್ನು ಅರ್ಥಮಾಡಿಕೊಂಡನು. ಆದ್ದರಿಂದ ದಾವೀದನು ತನ್ನ ಸೇವಕರನ್ನು ಕರೆದು, “ಮಗು ಸತ್ತುಹೋಯಿತೇ?” ಎಂದು ಕೇಳಿದನು.
“ಹೌದು, ಸತ್ತುಹೋಯಿತು” ಎಂದು ಸೇವಕರು ಉತ್ತರಿಸಿದರು.
20 ಆಗ ದಾವೀದನು ನೆಲದಿಂದ ಮೇಲಕ್ಕೆದ್ದನು. ಅವನು ತನ್ನನ್ನು ಶುಚಿಗೊಳಿಸಿಕೊಂಡನು. ಅವನು ತನ್ನ ಬಟ್ಟೆಗಳನ್ನು ಬದಲಿಸಿ ಬೇರೆ ಬಟ್ಟೆಗಳನ್ನು ಧರಿಸಿದನು. ನಂತರ ಅವನು ಯೆಹೋವನನ್ನು ಆರಾಧಿಸುವುದಕ್ಕಾಗಿ ಆತನ ಆಲಯಕ್ಕೆ ಹೋದನು. ಅವನು ಮನೆಗೆ ಹೋಗಿ ತಿನ್ನಲು ಏನನ್ನಾದರೂ ಕೊಡುವಂತೆ ಕೇಳಿದನು. ಅವನ ಸೇವಕರು ಕೊಟ್ಟ ಸ್ವಲ್ಪ ಆಹಾರವನ್ನು ಅವನು ತಿಂದನು.
21 ದಾವೀದನ ಸೇವಕರು ಅವನಿಗೆ, “ನೀನು ಹೀಗೇಕೆ ಮಾಡುತ್ತಿರುವೆ? ಮಗುವು ಇನ್ನೂ ಜೀವಂತವಾಗಿದ್ದಾಗ ನೀನು ಊಟಮಾಡಲಿಲ್ಲ. ನೀನು ಗೋಳಾಡಿದೆ, ಆದರೆ ಮಗುವು ಸತ್ತಮೇಲೆ ನೀನು ಮೇಲಕ್ಕೆದ್ದು ಊಟ ಮಾಡಿದೆ?” ಎಂದು ಕೇಳಿದರು.
22 ದಾವೀದನು, “ಮಗು ಜೀವದಿಂದ ಇರುವಾಗ ನಾನು ಊಟಮಾಡದೆ ಗೋಳಾಡಿದೆ, ಏಕೆಂದರೆ ‘ಒಂದುವೇಳೆ ಯೆಹೋವನು ನನ್ನ ಬಗ್ಗೆ ಅನುಕಂಪವನ್ನು ತೋರಿ ಮಗುವನ್ನು ಬದುಕಿಸಬಹುದು’ ಎಂದು ನಾನು ಯೋಚಿಸಿಕೊಂಡಿದ್ದೆ. 23 ಆದರೆ ಈಗ ಮಗು ಸತ್ತುಹೋಗಿದೆ. ಆದ್ದರಿಂದ ಈಗ ನಾನೇಕೆ ಉಪವಾಸಮಾಡಬೇಕು? ಆ ಮಗುವಿಗೆ ಮತ್ತೆ ನಾನು ಜೀವವನ್ನು ಕೊಡಲು ಸಾಧ್ಯವೇ? ಇಲ್ಲ! ಎಂದಾದರೂ ಒಂದು ದಿನ ನಾನು ಅವನ ಬಳಿಗೆ ಹೋಗುತ್ತೇನೆ. ಆದರೆ ಅವನು ನನ್ನ ಬಳಿಗೆ ಹಿಂದಿರುಗುವುದಿಲ್ಲ” ಎಂದನು.
ಸೊಲೊಮೋನನು ಹುಟ್ಟಿದ್ದು
24 ನಂತರ ದಾವೀದನು ತನ್ನ ಪತ್ನಿಯಾದ ಬತ್ಷೆಬೆಳನ್ನು ಸಂತೈಸಿ ಅವಳೊಂದಿಗೆ ಮಲಗಿಕೊಂಡನು. ಬತ್ಷೆಬೆಳು ಮತ್ತೆ ಗರ್ಭಿಣಿಯಾದಳು. ಅವಳಿಗೆ ಮತ್ತೊಂದು ಗಂಡು ಮಗುವಾಯಿತು. ಆ ಮಗುವಿಗೆ ಸೊಲೊಮೋನ್ ಎಂದು ದಾವೀದನು ಹೆಸರಿಟ್ಟನು. ಯೆಹೋವನು ಸೊಲೊಮೋನನನ್ನು ಪ್ರೀತಿಸಿದನು. 25 ಯೆಹೋವನು ಪ್ರವಾದಿಯಾದ ನಾತಾನನ ಮೂಲಕವಾಗಿ ಸಂದೇಶವನ್ನು ಕಳುಹಿಸಿದನು. ಯೆಹೋವನು ಆಜ್ಞಾಪಿಸಿದಂತೆ ನಾತಾನನು ಸೊಲೊಮೋನನಿಗೆ ಯೆದೀದ್ಯನೆಂದು ಹೆಸರಿಟ್ಟನು.
ದಾವೀದನು ರಬ್ಬವನ್ನು ವಶಪಡಿಸಿಕೊಂಡದ್ದು
26 ಯೋವಾಬನು ಅಮ್ಮೋನಿಯರ ರಾಜಧಾನಿಯಾದ ರಬ್ಬಕ್ಕೆ ವಿರುದ್ಧವಾಗಿ ಹೋರಾಡಿ ಆ ನಗರವನ್ನು ವಶಪಡಿಸಿಕೊಂಡನು. 27 ಯೋವಾಬನು ದಾವೀದನ ಬಳಿಗೆ ಸಂದೇಶಕರನ್ನು ಕಳುಹಿಸಿ, “ನಾನು ರಬ್ಬದ ವಿರುದ್ಧ ಹೋರಾಡಿ ನೀರಿರುವ ನಗರವನ್ನು ವಶಪಡಿಸಿಕೊಂಡಿದ್ದೇನೆ. 28 ಈಗ ಇತರ ಜನರನ್ನು ಒಟ್ಟುಗೂಡಿಸಿಕೊಂಡುಬಂದು ಈ ನಗರಕ್ಕೆ ಮುತ್ತಿಗೆ ಹಾಕು. ನಾನು ಈ ನಗರವನ್ನು ವಶಪಡಿಸಿಕೊಳ್ಳುವುದಕ್ಕೆ ಮೊದಲೇ ಇದನ್ನು ವಶಪಡಿಸಿಕೋ. ಈ ನಗರವನ್ನು ನಾನು ವಶಪಡಿಸಿಕೊಂಡರೆ ಇದನ್ನು ನನ್ನ ಹೆಸರಿನಿಂದ ಕರೆಯಬೇಕಾಗುವುದು” ಎಂದು ಹೇಳಿ ಕಳುಹಿಸಿದನು.
29 ಆಗ ದಾವೀದನು ಜನರೆಲ್ಲರನ್ನು ಒಟ್ಟುಗೂಡಿಸಿಕೊಂಡು ರಬ್ಬಕ್ಕೆ ಹೋದನು. ಅವನು ರಬ್ಬದ ವಿರುದ್ಧ ಹೋರಾಡಿ ಆ ನಗರವನ್ನು ವಶಪಡಿಸಿಕೊಂಡನು. 30 ದಾವೀದನು ಅವರ ರಾಜನ ತಲೆಯ[c] ಮೇಲಿದ್ದ ಕಿರೀಟವನ್ನು ತೆಗೆದುಕೊಂಡನು. ಆ ಕೀರಿಟವು ಚಿನ್ನದ್ದೂ ಎಪ್ಪತ್ತೈದು ಪೌಂಡುಗಳಷ್ಟು ಭಾರವುಳ್ಳದ್ದೂ ಆಗಿತ್ತು. ಆ ಕಿರೀಟದಲ್ಲಿ ಬೆಲೆಬಾಳುವ ರತ್ನಗಳಿದ್ದವು. ಅವರು ಆ ಕೀರಿಟವನ್ನು ದಾವೀದನ ತಲೆಯ ಮೇಲೆ ಇಟ್ಟರು. ದಾವೀದನು ಆ ನಗರದಿಂದ ಅನೇಕ ಬೆಲೆಬಾಳುವ ವಸ್ತುಗಳನ್ನು ತಂದನು.
31 ದಾವೀದನು ರಬ್ಬ ನಗರದ ಜನರನ್ನು ಹೊರದೂಡಿದನು. ದಾವೀದನು ಅವರನ್ನು ಗರಗಸ, ಕಬ್ಬಿಣದ ಗುದ್ದಲಿ ಮತ್ತು ಕೊಡಲಿಗಳಿಂದ ಕೆಲಸ ಮಾಡಿಸಿದನು. ಅವನು ಅವರಿಂದ ಬಲವಂತವಾಗಿ ಇಟ್ಟಿಗೆಗಳಿಂದ ಕಟ್ಟಡವನ್ನು ಕಟ್ಟಿಸಿದನು. ಅಮ್ಮೋನಿಯರ ನಗರಗಳಲ್ಲೆಲ್ಲಾ ದಾವೀದನು ಇದೇ ರೀತಿ ಮಾಡಿದನು. ನಂತರ ದಾವೀದನು ತನ್ನ ಸೈನ್ಯದೊಂದಿಗೆ ಜೆರುಸಲೇಮಿಗೆ ಹಿಂದಿರುಗಿದನು.
ಅಮ್ನೋನನು ತಾಮಾರಳನ್ನು ಮೋಹಿಸಿದ್ದು
13 ದಾವೀದನಿಗೆ ಅಬ್ಷಾಲೋಮನೆಂಬ ಮಗನಿದ್ದನು. ಅವನಿಗೆ ತಾಮಾರಳೆಂಬ ತಂಗಿಯಿದ್ದಳು. ಆಕೆ ಬಹಳ ಸುಂದರಿಯಾಗಿದ್ದಳು. ದಾವೀದನ ಮತ್ತೊಬ್ಬ ಮಗನಾದ ಅಮ್ನೋನನು, 2 ತಾಮಾರಳನ್ನು ಮೋಹಿಸಿದನು. ತಾಮಾರಳು ಕನ್ಯೆಯಾಗಿದ್ದಳು. ಈ ಕಾರಣದಿಂದ ಅವನು ಆಕೆಗೆ ಏನು ಮಾಡಲೂ ಸಾಧ್ಯವಿರಲಿಲ್ಲ. ಅವಳ ಮೋಹದಲ್ಲಿಯೇ ಅಮ್ನೋನನು ಬಲಹೀನನಾದನು.[d]
3 ಅಮ್ನೋನನಿಗೆ ಶಿಮ್ಮನ ಮಗನಾದ ಯೋನಾದಾಬನೆಂಬ ಹೆಸರಿನ ಗೆಳೆಯನಿದ್ದನು. (ಶಿಮ್ಮನು ದಾವೀದನ ಸೋದರ.) ಯೋನಾದಾಬನು ಬಹಳ ಯುಕ್ತಿಯುಳ್ಳ ಮನುಷ್ಯ. 4 ಯೋನಾದಾಬನು ಅಮ್ನೋನನಿಗೆ, “ದಿನದಿಂದ ದಿನಕ್ಕೆ ನೀನು ತೆಳ್ಳಗಾಗುತ್ತಲೇ ಇರುವೆ. ನೀನು ರಾಜನ ಮಗ, ನಿನ್ನ ಬಳಿ ತಿನ್ನಲು ಬಹಳ ಇದ್ದರೂ ನೀನು ತೆಳ್ಳಗಾಗುತ್ತಿರುವುದು ಏಕೆ? ನನಗೆ ತಿಳಿಸು” ಎಂದು ಕೇಳಿದನು.
ಅಮ್ನೋನನು ಯೋನಾದಾಬನಿಗೆ, “ನಾನು ತಾಮಾರಳನ್ನು ಮೋಹಿಸಿದ್ದೇನೆ. ಆದರೆ ಅವಳು ನನ್ನ ಸೋದರನಾದ ಅಬ್ಷಾಲೋಮನ ತಂಗಿ” ಎಂದು ಹೇಳಿದನು.
5 ಯೋನಾದಾಬನು ಅಮ್ನೋನನಿಗೆ, “ನೀನು ಹೋಗಿ ಹಾಸಿಗೆಯಲ್ಲಿ ಮಲಗಿಕೋ. ನೀನು ಕಾಯಿಲೆಯವನಂತೆ ನಟಿಸು. ಆಗ ನಿನ್ನನ್ನು ನೋಡಲು ನಿನ್ನ ತಂದೆಯು ಬರುತ್ತಾನೆ. ಆಗ ನೀನು ಅವನಿಗೆ, ‘ದಯವಿಟ್ಟು ನನ್ನ ಸೋದರಿಯಾದ ತಾಮಾರಳು ಇಲ್ಲಿಗೆ ಬಂದು, ನನಗೆ ಊಟವನ್ನು ಕೊಡಲಿ. ಅವಳು ನನ್ನ ಎದುರಿನಲ್ಲೇ ಅಡಿಗೆಯನ್ನು ಮಾಡಲಿ. ನಾನು ಅದನ್ನು ಕಣ್ಣಾರೆ ಕಂಡು ಅವಳ ಕೈಗಳಿಂದ ಊಟಮಾಡುತ್ತೇನೆ’ ಎಂದು ಹೇಳು” ಎಂಬುದಾಗಿ ಹೇಳಿಕೊಟ್ಟನು.
6 ಅಮ್ನೋನನು ಹಾಸಿಗೆಯಲ್ಲಿ ಮಲಗಿ ಕಾಯಿಲೆಯವನಂತೆ ನಟಿಸಿದನು. ಅವನನ್ನು ನೋಡಲು ರಾಜನಾದ ದಾವೀದನು ಅಲ್ಲಿಗೆ ಬಂದನು. ಅಮ್ನೋನನು ರಾಜನಾದ ದಾವೀದನಿಗೆ, “ದಯವಿಟ್ಟು ನನ್ನ ಸೋದರಿಯಾದ ತಾಮಾರಳನ್ನು ಒಳಕ್ಕೆ ಕರೆಯಿರಿ. ನಾನು ನೋಡುತ್ತಿರುವಂತೆ ಅವಳು ನನಗಾಗಿ ಎರಡು ಸಿಹಿ ರೊಟ್ಟಿಗಳನ್ನು ತಯಾರಿಸಲಿ. ಅವಳ ಕೈಗಳಿಂದ ಮಾಡಿದ ರೊಟ್ಟಿಗಳನ್ನೇ ನಾನು ತಿನ್ನುತ್ತೇನೆ” ಎಂದು ಬೇಡಿಕೊಂಡನು.
7 ದಾವೀದನು ತಾಮಾರಳ ಮನೆಗೆ ಸಂದೇಶಕರನ್ನು ಕಳುಹಿಸಿದನು. ಸಂದೇಶಕರು ತಾಮಾರಳಿಗೆ, “ನಿನ್ನ ಸೋದರನಾದ ಅಮ್ನೋನನ ಮನೆಗೆ ಹೋಗಿ ಅವನಿಗೋಸ್ಕರ ಸ್ವಲ್ಪ ಊಟವನ್ನು ತಯಾರಿಸು” ಎಂದರು.
8 ತಾಮಾರಳು ತನ್ನ ಸೋದರನಾದ ಅಮ್ನೋನನ ಮನೆಗೆ ಹೋದಳು. ಅಮ್ನೋನನು ಹಾಸಿಗೆಯಲ್ಲಿ ಮಲಗಿದ್ದನು. ತಾಮಾರಳು ಸ್ವಲ್ಪ ಹಿಟ್ಟನ್ನು ತೆಗೆದುಕೊಂಡು ಅದನ್ನು ತನ್ನ ಕೈಗಳಿಂದಲೇ ಕಲಸಿ ಅಮ್ನೋನನ ಕಣ್ಣೆದುರಿನಲ್ಲಿಯೇ ನಾದಿದಳು. ನಂತರ ಅವಳು ನಾದಿದ ಹಿಟ್ಟನ್ನು ಸುಟ್ಟು, ರೊಟ್ಟಿಗಳನ್ನು ಮಾಡಿದಳು. 9 ತಾಮಾರಳು ರೊಟ್ಟಿಗಳನ್ನು, ರೊಟ್ಟಿಮಾಡುವ ಪಾತ್ರೆಯಿಂದ ಹೊರ ತೆಗೆದು ಅಮ್ನೋನನಿಗೋಸ್ಕರ ಅವುಗಳನ್ನು ಬಡಿಸಿದಳು. ಆದರೆ ಅಮ್ನೋನನು ತಿನ್ನಲಿಲ್ಲ. ಅಮ್ನೋನನು ತನ್ನ ಸೇವಕರೆಲ್ಲರಿಗೆ, “ನೀವೆಲ್ಲರೂ ನನ್ನನ್ನು ಒಬ್ಬಂಟಿಗನನ್ನಾಗಿ ಬಿಟ್ಟು ಹೋಗಿ!” ಎಂದನು. ಆದ್ದರಿಂದ ಸೇವಕರೆಲ್ಲರೂ ಅಮ್ನೋನನ ಕೊಠಡಿಯಿಂದ ಹೊರಗೆ ಹೋದರು.
ಅಮ್ನೋನನು ತಾಮಾರಳನ್ನು ಕೆಡಿಸಿದ್ದು
10 ಅಮ್ನೋನನು ತಾಮಾರಳಿಗೆ, “ರೊಟ್ಟಿಗಳನ್ನು ಒಳ ಕೋಣೆಗೆ ತೆಗೆದುಕೊಂಡು ಬಾ. ನಾನು ನಿನ್ನ ಕೈಗಳಿಂದಲೇ ತಿನ್ನುತ್ತೇನೆ” ಎಂದನು.
ತಾಮಾರಳು ತನ್ನ ಸೋದರನಾದ ಅಮ್ನೋನನಿದ್ದ ಒಳಕೋಣೆಗೆ ಹೋದಳು. ಅವಳು ತಾನು ಮಾಡಿದ ರೊಟ್ಟಿಗಳನ್ನು ತಂದಳು. 11 ತನ್ನ ಕೈಗಳಿಂದಲೇ ಅಮ್ನೋನನು ತಿನ್ನಲಿ ಎಂಬುದಕ್ಕಾಗಿ ಅವಳು ಅವನ ಬಳಿಗೆ ಹೋದಳು. ಆದರೆ ಅಮ್ನೋನನು ತಾಮಾರಳನ್ನು ಬಿಗಿಯಾಗಿ ಹಿಡಿದುಕೊಂಡನು. ಅವನು ಅವಳಿಗೆ, “ತಂಗಿಯೇ, ಬಂದು ನನ್ನ ಜೊತೆಯಲ್ಲಿ ಮಲಗು” ಎಂದು ಹೇಳಿದನು.
12 ತಾಮಾರಳು ಅಮ್ನೋನನಿಗೆ, “ಸೋದರನೇ ಬೇಡ! ನನ್ನನ್ನು ಬಲಾತ್ಕರಿಸದಿರು! ಇಸ್ರೇಲಿನಲ್ಲಿ ಇಂತಹ ಕಾರ್ಯ ಎಂದೆಂದಿಗೂ ನಡೆಯಬಾರದು! ಅಪಮಾನಕರವಾದ ಈ ಕಾರ್ಯವನ್ನು ಮಾಡಬೇಡ! 13 ನನಗಾದ ಈ ಕಳಂಕವನ್ನು ಎಂದೆಂದಿಗೂ ನಾನು ತೊಡೆದುಹಾಕಲಾಗುವುದಿಲ್ಲ. ಇಸ್ರೇಲಿನ ಜನರಲ್ಲಿ ತಮ್ಮ ಅಪಮಾನಕರವಾದ ಕಾರ್ಯಗಳಿಂದ ನೀಚರೆನಿಸಿಕೊಳ್ಳುವ ಜನರಂತೆ ನೀನೂ ಆಗಿಬಿಡುವೆ. ದಯವಿಟ್ಟು ರಾಜನೊಂದಿಗೆ ಮಾತನಾಡು. ಅವನು ನಿನ್ನ ಜೊತೆಯಲ್ಲಿ ನನ್ನ ಮದುವೆ ಮಾಡಲಿ” ಎಂದಳು.
14 ಆದರೆ ತಾಮಾರಳ ಮಾತುಗಳನ್ನು ಅಮ್ನೋನನು ಕೇಳಲಿಲ್ಲ. ಅವನು ತಾಮಾರಳಿಗಿಂತ ಬಲಶಾಲಿಯಾಗಿದ್ದುದರಿಂದ ಅವಳ ಮೇಲೆ ಬಲಾತ್ಕಾರ ಮಾಡಿದನು. 15 ಅನಂತರ ಅಮ್ನೋನನು ತಾಮಾರಳನ್ನು ದ್ವೇಷಿಸಿದನು. ಅಮ್ನೋನನು ತಾನು ಅವಳನ್ನು ಮೊದಲು ಮೋಹಿಸಿದುದಕ್ಕಿಂತ ಹೆಚ್ಚಾಗಿ ದ್ವೇಷಿಸಿದನು. ಅಮ್ನೋನನು ತಾಮಾರಳಿಗೆ, “ಮೇಲೇಳು, ಹೊರಟುಹೋಗು!” ಎಂದನು.
16 ತಾಮಾರಳು ಅಮ್ನೋನನಿಗೆ, “ಇಲ್ಲ! ನನ್ನನ್ನು ಹೊರಗೆ ಕಳುಹಿಸುವುದು ನೀನು ಮೊದಲು ಮಾಡಿದ್ದಕ್ಕಿಂತಲೂ ಹೆಚ್ಚಿನ ದುಷ್ಕೃತ್ಯವಾಗಿದೆ” ಎಂದು ಹೇಳಿದಳು.
ಆದರೆ ಅಮ್ನೋನನು ತಾಮಾರಳ ಮಾತುಗಳನ್ನು ಆಲಿಸಲಿಲ್ಲ. 17 ಅಮ್ನೋನನು ತನ್ನ ಕಿರಿಯ ಸೇವಕನೊಬ್ಬನನ್ನು ಕರೆದು, “ಈ ಹುಡುಗಿಯನ್ನು ಈಗಲೇ ಈ ಕೊಠಡಿಯಿಂದ ಹೊರಗೆ ನೂಕು! ಅವಳು ಹೋದ ನಂತರ ಬಾಗಿಲಿಗೆ ಬೀಗಹಾಕು” ಎಂದು ಹೇಳಿದನು.
18 ಅಮ್ನೋನನ ಸೇವಕನು ತಾಮಾರಳನ್ನು ಹೊರನೂಕಿ ಅವಳು ಹೋದ ನಂತರ ಬಾಗಿಲಿಗೆ ಬೀಗವನ್ನು ಹಾಕಿದನು.
ತಾಮಾರಳು ನಾನಾ ಬಣ್ಣದ ನಿಲುವಂಗಿಯನ್ನು ಧರಿಸಿಕೊಂಡಿದ್ದಳು. ರಾಜನ ಹೆಣ್ಣುಮಕ್ಕಳು ಕನ್ಯೆಯರಾಗಿದ್ದಾಗ ಇಂತಹ ನಿಲುವಂಗಿಗಳನ್ನು ಧರಿಸುತ್ತಿದ್ದರು. 19 ತಾಮಾರಳು ಬೂದಿಯನ್ನು ತೆಗೆದುಕೊಂಡು ತನ್ನ ತಲೆಯ ಮೇಲೆ ಸುರಿದುಕೊಂಡು ತನ್ನ ನಿಲುವಂಗಿಯನ್ನು ಹರಿದುಕೊಂಡಳು; ತನ್ನ ತಲೆಯ ಮೇಲೆ ಕೈಗಳನ್ನಿಟ್ಟುಕೊಂಡು ಗಟ್ಟಿಯಾಗಿ ಗೋಳಾಡಿದಳು.
20 ತಾಮಾರಳ ಸೋದರನಾದ ಅಬ್ಷಾಲೋಮನು ತಾಮಾರಳಿಗೆ, “ನಿನ್ನ ಸೋದರನಾದ ಅಮ್ನೋನನು ನಿನ್ನನ್ನು ಕೆಡಿಸಿ ಬಿಟ್ಟನಲ್ಲವೇ? ಅಮ್ನೋನನು ನಿನ್ನ ಸೋದರ. ತಂಗಿಯೇ, ಈಗ ಸದ್ಯಕ್ಕೆ ಸುಮ್ಮನಿರು. ಇದರಿಂದ ನೀನು ಹೆಚ್ಚು ಗಲಿಬಿಲಿಯಾಗದಿರು” ಎಂದು ಹೇಳಿದನು. ತಾಮಾರಳು ಏನನ್ನೂ ಹೇಳಲಿಲ್ಲ. ಅವಳು ಅಬ್ಷಾಲೋಮನ ಮನೆಯಲ್ಲಿ ವಾಸಿಸಲು ಹೋದಳು.
21 ರಾಜನಾದ ದಾವೀದನಿಗೆ ಈ ವರ್ತಮಾನವು ತಿಳಿದು ಬಹಳ ಕೋಪಗೊಂಡನು. 22 ಅಬ್ಷಾಲೋಮನು ಅಮ್ನೋನನನ್ನು ದ್ವೇಷಿಸಿದನು. ಅಬ್ಷಾಲೋಮನು ಒಳ್ಳೆಯದನ್ನಾಗಲಿ ಕೆಟ್ಟದ್ದನ್ನಾಗಲಿ ಏನನ್ನೂ ಅಮ್ನೋನನಿಗೆ ಹೇಳಲಿಲ್ಲ. ಅಮ್ನೋನನು ತನ್ನ ತಂಗಿಯಾದ ತಾಮಾರಳನ್ನು ಕೆಡಿಸಿದ್ದಕ್ಕಾಗಿ ಅಬ್ಷಾಲೋಮನು ಅಮ್ನೋನನನ್ನು ದ್ವೇಷಿಸಿದನು.
ಅಬ್ಷಾಲೋಮನ ಪ್ರತೀಕಾರ
23 ಎರಡು ವರ್ಷಗಳ ನಂತರ, ಅಬ್ಷಾಲೋಮನ ಕುರಿಗಳ ತುಪ್ಪಟವನ್ನು ಕತ್ತರಿಸುವುದಕ್ಕಾಗಿ ಕೆಲವು ಜನರು ಬಾಳ್‌ಹಾಚೋರಿಗೆ ಬಂದರು. ಇದನ್ನು ಬಂದು ನೋಡುವಂತೆ ರಾಜನ ಮಕ್ಕಳಿಗೆಲ್ಲ ಅಬ್ಷಾಲೋಮನು ಆಹ್ವಾನವನ್ನು ನೀಡಿದನು. 24 ಅಬ್ಷಾಲೋಮನು ರಾಜನ ಬಳಿಗೆ ಹೋಗಿ, “ನನ್ನ ಕುರಿಗಳ ತುಪ್ಪಟವನ್ನು ಕತ್ತರಿಸಲು ಕೆಲವು ಜನರು ಬರುತ್ತಾರೆ. ದಯವಿಟ್ಟು ನೀವು ನಿಮ್ಮ ಸೇವಕರೊಂದಿಗೆ ಬಂದು ಅದನ್ನು ಗಮನಿಸಿ” ಎಂದನು.
25 ರಾಜನಾದ ದಾವೀದನು ಅಬ್ಷಾಲೋಮನಿಗೆ, “ಮಗನೇ, ನಾವೆಲ್ಲ ಬರುವುದಿಲ್ಲ. ಅದು ನಿನಗೆ ಬಹಳ ತೊಂದರೆಯಾಗುತ್ತದೆ” ಎಂದು ಹೇಳಿದನು.
ಅಬ್ಷಾಲೋಮನು ಬೇಡಿಕೊಂಡರೂ ದಾವೀದನು ಹೋಗಲಿಲ್ಲ; ಆದರೆ ದಾವೀದನು ಅವನನ್ನು ಆಶೀರ್ವದಿಸಿದನು.
26 ಅಬ್ಷಾಲೋಮನು, “ನೀನು ಬರಲು ಇಚ್ಛಿಸದಿದ್ದರೆ, ದಯವಿಟ್ಟು ನನ್ನ ಸೋದರನಾದ ಅಮ್ನೋನನನ್ನು ಕಳುಹಿಸು” ಎಂದು ಕೇಳಿದನು.
ರಾಜನಾದ ದಾವೀದನು ಅಬ್ಷಾಲೋಮನಿಗೆ, “ನಿನ್ನ ಜೊತೆಯಲ್ಲಿ ಅವನೇಕೆ ಬರಬೇಕು?” ಎಂದನು.
27 ಅಬ್ಷಾಲೋಮನು ದಾವೀದನನ್ನು ಬಹಳವಾಗಿ ಬೇಡಿಕೊಂಡನು. ಕೊನೆಗೆ ದಾವೀದನು ಅಮ್ನೋನನನ್ನು ಮತ್ತು ರಾಜನ ಗಂಡುಮಕ್ಕಳೆಲ್ಲರನ್ನು ಅಬ್ಷಾಲೋಮನ ಜೊತೆಯಲ್ಲಿ ಹೋಗಲು ಹೇಳಿದನು.
ಅಮ್ನೋನನನ್ನು ಕೊಂದುಹಾಕಿದ್ದು
28 ಆಗ ಅಬ್ಷಾಲೋಮನು ತನ್ನ ಸೇವಕರಿಗೆ ಈ ರೀತಿ ಆಜ್ಞೆ ಮಾಡಿದನು: “ಅಮ್ನೋನನನ್ನು ಗಮನಿಸುತ್ತಿರಿ. ಅವನು ಮತ್ತನಾಗಿ ಆನಂದಿಸುತ್ತಿರುವಾಗ ನಾನು ಆಜ್ಞೆಯನ್ನು ಕೊಡುತ್ತೇನೆ. ಆಗ ನೀವು ಅವನ ಮೇಲೆ ಆಕ್ರಮಣಮಾಡಿ ಕೊಲ್ಲಬೇಕು. ನಿಮಗೆ ಶಿಕ್ಷೆಯಾಗುತ್ತದೆ ಎಂಬ ಭಯವಿಲ್ಲದಿರಲಿ, ಯಾಕೆಂದರೆ ನೀವು ನನ್ನ ಆಜ್ಞೆಯನ್ನು ಪಾಲಿಸಿದಿರಷ್ಟೇ, ಆದ್ದರಿಂದ ಶಕ್ತರಾಗಿಯೂ ಧೈರ್ಯವಂತರಾಗಿಯೂ ಇರಿ” ಎಂದನು.
29 ಅಬ್ಷಾಲೋಮನ ಸೇವಕರು ಅವನ ಆಜ್ಞೆಯಂತೆ ಅಮ್ನೋನನನ್ನು ಕೊಂದುಬಿಟ್ಟರು. ಆದರೆ ದಾವೀದನ ಇತರ ಗಂಡುಮಕ್ಕಳೆಲ್ಲರೂ ತಮ್ಮತಮ್ಮ ಹೇಸರಕತ್ತೆಗಳನ್ನೇರಿ ತಪ್ಪಿಸಿಕೊಂಡರು.
ಅಮ್ನೋನನ ಮರಣದ ಸುದ್ದಿಯು ದಾವೀದನಿಗೆ ಮುಟ್ಟಿತು
30 ರಾಜನ ಗಂಡುಮಕ್ಕಳು ತಮ್ಮ ಮಾರ್ಗದಲ್ಲಿ ಬರುತ್ತಿರುವಾಗಲೇ ದಾವೀದನಿಗೆ ಈ ಸುದ್ದಿಯು ತಲುಪಿತು. “ಅಬ್ಷಾಲೋಮನು ರಾಜನ ಮಕ್ಕಳೆಲ್ಲರನ್ನೂ ಕೊಂದುಹಾಕಿದನು; ಒಬ್ಬ ಮಗನನ್ನೂ ಜೀವಂತವಾಗಿ ಬಿಟ್ಟಿಲ್ಲ” ಎಂಬುದೇ ಆ ಸುದ್ದಿ.
31 ರಾಜನಾದ ದಾವೀದನು ಬಟ್ಟೆಗಳನ್ನು ಹರಿದುಕೊಂಡು ನೆಲದ ಮೇಲೆ ಬಿದ್ದನು. ದಾವೀದನ ಸುತ್ತಲೂ ನಿಂತಿದ್ದ ಅವನ ಸೇವಕರೂ ತಮ್ಮತಮ್ಮ ಬಟ್ಟೆಗಳನ್ನು ಹರಿದುಕೊಂಡರು.
32 ಆದರೆ ದಾವೀದನ ಅಣ್ಣನಾದ ಶಿಮ್ಮನ ಮಗ ಯೋನಾದಾಬನು ದಾವೀದನಿಗೆ, “ರಾಜನ ಗಂಡುಮಕ್ಕಳೆಲ್ಲರನ್ನೂ ಕೊಂದುಹಾಕಿದರೆಂದು ಯೋಚಿಸುವುದು ಸರಿಯಲ್ಲ. ಅಮ್ನೋನನು ಮಾತ್ರ ಸತ್ತಿರಬೇಕು. ಅಬ್ಷಾಲೋಮನ ತಂಗಿಯಾದ ತಾಮಾರಳನ್ನು ಅಮ್ನೋನನು ಕೆಡಿಸಿದ್ದಕ್ಕಾಗಿ ಅಬ್ಷಾಲೋಮನು ಆ ದಿನದಿಂದ ಅವನನ್ನು ಕೊಲ್ಲಲು ಸಂಚು ಮಾಡುತ್ತಿದ್ದನು. 33 ರಾಜನಾದ ನನ್ನ ಒಡೆಯನೇ, ರಾಜನ ಮಕ್ಕಳೆಲ್ಲರೂ ಸತ್ತರೆಂದು ಯೋಚಿಸಬೇಡ. ಅಮ್ನೋನನು ಮಾತ್ರ ಸತ್ತುಹೋದನು” ಎಂದನು.
34 ಅಬ್ಷಾಲೋಮನು ಓಡಿಹೋದನು.
ಆ ನಗರದ ಗೋಡೆಯ ಮೇಲೆ ಒಬ್ಬ ಕಾವಲುಗಾರನು ನಿಂತಿದ್ದನು. ಬೆಟ್ಟದ ಬೇರೊಂದು ಕಡೆಯಿಂದ ಅಂದರೆ ಹೋರೋನಿನ ಮಾರ್ಗವಾಗಿ ಅನೇಕ ಜನರು ಬರುತ್ತಿರುವುದನ್ನು ಅವನು ನೋಡಿದನು. 35 ಯೋನಾದಾಬನು ರಾಜನಾದ ದಾವೀದನಿಗೆ, “ನಾನು ಹೇಳಿದ್ದು ಸರಿ. ಅಲ್ಲಿ ನೋಡು, ರಾಜನ ಗಂಡುಮಕ್ಕಳೆಲ್ಲರೂ ಬರುತ್ತಿದ್ದಾರೆ” ಎಂದನು.
36 ಯೋನಾದಾಬನು ಈ ಮಾತುಗಳನ್ನು ಹೇಳಿ ಮುಗಿಸುವಷ್ಟರಲ್ಲಿ ರಾಜನ ಗಂಡುಮಕ್ಕಳೆಲ್ಲರೂ ಬಂದರು. ಅವರು ಗಟ್ಟಿಯಾಗಿ ಅಳುತ್ತಿದ್ದರು. ದಾವೀದನು ಮತ್ತು ಅವನ ಸೇವಕರೆಲ್ಲ ಅಳರಾಂಭಿಸಿದರು. ಅವರೆಲ್ಲರೂ ಮತ್ತಷ್ಟು ಜೋರಾಗಿ ಗೋಳಾಡಿದರು. 37 ದಾವೀದನು ತನ್ನ ಮಗನಿಗಾಗಿ ಪ್ರತಿನಿತ್ಯವೂ ಗೋಳಾಡುತ್ತಿದ್ದನು.
ಅಬ್ಷಾಲೋಮನು ಗೆಷೂರಿಗೆ ತಪ್ಪಿಸಿಕೊಂಡು ಹೋದದ್ದು
ಗೆಷೂರಿನ ರಾಜನೂ ಅಮ್ಮೀಹೂದನ ಮಗನೂ ಆದ ತಲ್ಮೈನ[e] ಹತ್ತಿರಕ್ಕೆ ಅಬ್ಷಾಲೋಮನು ಓಡಿಹೋದನು. 38 ಅಬ್ಷಾಲೋಮನು ಗೆಷೂರಿಗೆ ಓಡಿಹೋದ ನಂತರ, ಅಲ್ಲಿ ಅವನು ಮೂರು ವರ್ಷಗಳ ಕಾಲ ನೆಲೆಸಿದನು. 39 ಅಮ್ನೋನನ ಮರಣದ ವಿಷಯದಲ್ಲಿ ರಾಜನಾದ ದಾವೀದನು ಸಂತೈಸಿಕೊಂಡನು. ಆದರೆ ಅವನು ಅಬ್ಷಾಲೋಮನನ್ನು ಕಾಣಲು ಬಹಳವಾಗಿ ಹಾತೊರೆಯತೊಡಗಿದನು.
ನಿಜವಾದ ಐಶ್ವರ್ಯ
16 ಯೇಸು ತನ್ನ ಶಿಷ್ಯರಿಗೆ ಹೀಗೆಂದನು: “ಒಂದಾನೊಂದು ಕಾಲದಲ್ಲಿ ಒಬ್ಬ ಐಶ್ವರ್ಯವಂತನಿದ್ದನು. ಈ ಐಶ್ವರ್ಯವಂತನು ತನ್ನ ವ್ಯಾಪಾರವನ್ನು ನೋಡಿಕೊಳ್ಳಲು ಒಬ್ಬ ಮೇಲ್ವಿಚಾರಕನನ್ನು ನೇಮಿಸಿದನು. ಸ್ವಲ್ಪಕಾಲದ ನಂತರ, ಆ ಮೇಲ್ವಿಚಾರಕನು ತನಗೆ ಮೋಸಮಾಡುತ್ತಿದ್ದಾನೆಂಬುದು ಐಶ್ವರ್ಯವಂತನಿಗೆ ತಿಳಿಯಿತು. 2 ಆದ್ದರಿಂದ ಅವನು ಆ ಮೇಲ್ವಿಚಾರಕನನ್ನು ಕರೆದು, ‘ನಿನ್ನ ಬಗ್ಗೆ ನನಗೆ ದೂರುಗಳು ಬಂದಿವೆ. ನನ್ನ ಹಣವನ್ನು ನೀನು ಯಾವುದಕ್ಕಾಗಿ ಖರ್ಚು ಮಾಡಿರುವೆ? ನನಗೆ ವರದಿ ಒಪ್ಪಿಸು. ಇನ್ನು ಮೇಲೆ ನನ್ನ ವ್ಯಾಪಾರಕ್ಕೆ ನೀನು ಮೇಲ್ವಿಚಾರಕನಾಗಿರಲು ಸಾಧ್ಯವಿಲ್ಲ’ ಎಂದು ಹೇಳಿದನು.
3 “ಆಗ, ಆ ಮೇಲ್ವಿಚಾರಕನು ತನ್ನೊಳಗೆ, ‘ಈಗ ನಾನೇನು ಮಾಡಲಿ? ನನ್ನ ಯಜಮಾನನು ನನ್ನನ್ನು ಈ ಕೆಲಸದಿಂದ ತೆಗೆದುಬಿಡುತ್ತಾನೆ! ಗುಂಡಿಗಳನ್ನು ಅಗಿಯುವುದಕ್ಕೂ ನನಗೆ ಬಲವಿಲ್ಲ. ಭಿಕ್ಷೆ ಬೇಡುವುದಕ್ಕೂ ನನಗೆ ನಾಚಿಕೆ. 4 ಈಗ ನಾನೇನು ಮಾಡಬೇಕೆಂಬುದು ನನಗೆ ಗೊತ್ತಿದೆ! ನಾನು ಕೆಲಸವನ್ನು ಕಳೆದುಕೊಂಡ ಮೇಲೆ ಬೇರೆ ಜನರು ನನ್ನನ್ನು ತಮ್ಮ ಮನೆಗಳಿಗೆ ಸೇರಿಸಿಕೊಳ್ಳುವಂಥ ಕಾರ್ಯವೊಂದನ್ನು ನಾನು ಈಗ ಮಾಡುವೆ’ ಅಂದುಕೊಂಡನು.
5 “ಆಮೇಲೆ ಆ ಮೇಲ್ವಿಚಾರಕನು, ಯಜಮಾನನ ಸಾಲಗಾರರಲ್ಲಿ ಪ್ರತಿಯೊಬ್ಬನನ್ನು ಕರೆದನು. ಅವನು ಮೊದಲನೆಯವನಿಗೆ, ‘ನೀನು ನನ್ನ ಯಜಮಾನನಿಗೆ ಎಷ್ಟು ಸಾಲ ಕೊಡಬೇಕು?’ ಎಂದು ಕೇಳಿದನು. 6 ಅದಕ್ಕೆ ಮೊದಲನೆಯ ವ್ಯಕ್ತಿ, ‘ನಾನು ಎಂಟುಸಾವಿರ ಕಿಲೋಗ್ರಾಂ ಆಲಿವ್ ಎಣ್ಣೆ ಕೊಡಬೇಕು’ ಎಂದು ಉತ್ತರಿಸಿದನು. ಮೇಲ್ವಿಚಾರಕನು ಅವನಿಗೆ, ‘ನಿನ್ನ ಲೆಕ್ಕಪತ್ರ ಇಲ್ಲಿದೆ. ಕುಳಿತುಕೊಂಡು ಬೇಗನೆ ಅದನ್ನು ಕಡಿಮೆಮಾಡಿ ನಾಲ್ಕುಸಾವಿರ ಎಂದು ಬರೆ’ ಅಂದನು.
7 “ಬಳಿಕ ಆ ಮೇಲ್ವಿಚಾರಕನು ಎರಡನೆಯವನಿಗೆ, ‘ನೀನು ನನ್ನ ಯಜಮಾನನಿಗೆ ಎಷ್ಟು ಕೊಡಬೇಕಾಗಿದೆ’ ಎಂದು ಕೇಳಿದನು. ಎರಡನೆಯವನು, ‘ನಾನು ಅವನಿಗೆ ಅರವತ್ತುಸಾವಿರ ಕಿಲೋಗ್ರಾಂ ಗೋಧಿ ಕೊಡಬೇಕು’ ಎಂದು ಉತ್ತರಿಸಿದನು. ಆಗ ಆ ಮೇಲ್ವಿಚಾರಕನು ಅವನಿಗೆ, ‘ನಿನ್ನ ಲೆಕ್ಕಪತ್ರ ಇಲ್ಲಿದೆ. ನೀನು ಅದನ್ನು ಕಡಿಮೆ ಮಾಡು. ಐವತ್ತುಸಾವಿರ ಎಂದು ಬರೆ’ ಅಂದನು.
8 “ಬಳಿಕ ಯಜಮಾನನು ಮೋಸಗಾರನಾದ ಮೇಲ್ವಿಚಾರಕನಿಗೆ, ‘ನೀನು ಜಾಣತನ ಮಾಡಿದೆ’ ಎಂದು ಹೇಳಿದನು. ಹೌದು, ಲೌಕಿಕ ಜನರು ತಮ್ಮ ಜನರೊಡನೆ ವ್ಯಾಪಾರದಲ್ಲಿ ದೈವಿಕ ಜನರಿಗಿಂತಲೂ ಜಾಣರಾಗಿದ್ದಾರೆ.
9 “ಈ ಲೋಕದಲ್ಲಿ ನೀವು ಹೊಂದಿರುವಂಥವುಗಳಿಂದ ದೇವರಿಗೆ ಸ್ನೇಹಿತರನ್ನು ಮಾಡಿಕೊಡಿರಿ. ನೀವು ಹೀಗೆ ಮಾಡಿದರೆ, ಈ ಲೋಕದವುಗಳು ನಿಮ್ಮ ಕೈಬಿಟ್ಟು ಹೋದಾಗ ನಿಮ್ಮನ್ನು ಶಾಶ್ವತವಾದ ಮನೆಗೆ ಸ್ವೀಕರಿಸಿಕೊಳ್ಳಲಾಗುವುದು. 10 ಸ್ವಲ್ಪವಾದದ್ದರಲ್ಲಿ ನಂಬಿಗಸ್ತನಾಗಿರುವವನು ಬಹಳವಾದದ್ದರಲ್ಲಿಯೂ ನಂಬಿಗಸ್ತನಾಗಿರುವನು. ಸ್ವಲ್ಪವಾದದ್ದರಲ್ಲಿ ಅನ್ಯಾಯಗಾರನಾಗಿರುವವನು ಬಹಳವಾದದ್ದರಲ್ಲಿಯೂ ಅನ್ಯಾಯಗಾರನಾಗಿರುವನು. 11 ಲೌಕಿಕ ಐಶ್ವರ್ಯಗಳಲ್ಲಿ ನೀವು ನಂಬಿಗಸ್ತರಾಗಿಲ್ಲದಿದ್ದರೆ ಪರಲೋಕದ ಐಶ್ವರ್ಯಗಳಲ್ಲಿಯೂ ನೀವು ನಂಬಿಗಸ್ತರಾಗಿರುವುದಿಲ್ಲ. 12 ಮತ್ತೊಬ್ಬನ ಸ್ವತ್ತುಗಳಲ್ಲಿ ನೀವು ನಂಬಿಗಸ್ತರಾಗಿಲ್ಲದಿದ್ದರೆ ನಿಮ್ಮ ಸ್ವಂತ ಸ್ವತ್ತುಗಳನ್ನೇ ನಿಮಗೆ ಯಾರೂ ಕೊಡುವುದಿಲ್ಲ.
13 “ಯಾವ ಸೇವಕನೂ ಒಂದೇ ಸಮಯದಲ್ಲಿ ಇಬ್ಬರು ಯಜಮಾನರಿಗೆ ಸೇವೆ ಮಾಡಲಾರನು. ಅವನು ಒಬ್ಬನನ್ನು ದ್ವೇಷಿಸಿ ಇನ್ನೊಬ್ಬನನ್ನು ಪ್ರೀತಿಸುವನು ಅಥವಾ ಒಬ್ಬನಿಗೆ ಹೊಂದಿಕೊಂಡು ಇನ್ನೊಬ್ಬನನ್ನು ತಾತ್ಸಾರ ಮಾಡುವನು. ನೀವು ಒಂದೇ ಸಮಯದಲ್ಲಿ ದೇವರ ಮತ್ತು ಹಣದ ಸೇವೆಮಾಡಲಾರಿರಿ.”
ದೇವರ ಧರ್ಮಶಾಸ್ತ್ರ ಬದಲಾಗಲಾರದು
(ಮತ್ತಾಯ 11:12-13)
14 ಫರಿಸಾಯರು ಈ ಎಲ್ಲಾ ಸಂಗತಿಗಳನ್ನು ಕೇಳುತ್ತಿದ್ದರು. ಫರಿಸಾಯರೆಲ್ಲರು ಹಣದಾಸೆ ಉಳ್ಳವರಾಗಿದ್ದರಿಂದ ಅವರು ಯೇಸುವನ್ನು ಟೀಕಿಸಿದರು. 15 ಯೇಸು ಫರಿಸಾಯರಿಗೆ ಹೀಗೆಂದನು, “ನೀವು ಜನರ ಮುಂದೆ ನಿಮ್ಮನ್ನು ಒಳ್ಳೆಯವರೆಂದು ತೋರಿಸಿಕೊಳ್ಳುತ್ತೀರಿ. ಆದರೆ ನಿಜವಾಗಿಯೂ ನಿಮ್ಮ ಹೃದಯದಲ್ಲಿರುವುದು ದೇವರಿಗೆ ಗೊತ್ತು. ಜನರ ದೃಷ್ಟಿಯಲ್ಲಿ ಅಮೂಲ್ಯವಾದುವುಗಳು ದೇವರ ದೃಷ್ಟಿಯಲ್ಲಿ ಅಸಹ್ಯವಾಗಿವೆ.
16 “ಜನರು ಮೋಶೆಯ ಧರ್ಮಶಾಸ್ತ್ರಕ್ಕೂ ಪ್ರವಾದಿಗಳ ಗ್ರಂಥಗಳಿಗೂ ಅನುಸಾರವಾಗಿ ಜೀವಿಸಬೇಕೆಂಬುದು ದೇವರ ಅಪೇಕ್ಷೆಯಾಗಿತ್ತು. ಸ್ನಾನಿಕನಾದ ಯೋಹಾನನು ಬಂದ ಕಾಲದಿಂದ ದೇವರ ರಾಜ್ಯದ ಸುವಾರ್ತೆಯು ತಿಳಿಸಲ್ಪಡುತ್ತಿದೆ. ಅನೇಕ ಜನರು ದೇವರ ರಾಜ್ಯದೊಳಗೆ ಹೋಗಲು ಬಹಳ ಪ್ರಯಾಸಪಡುತ್ತಿದ್ದಾರೆ. 17 ಧರ್ಮಶಾಸ್ತ್ರದಲ್ಲಿರುವ ಒಂದು ಚುಕ್ಕೆಯು ಬದಲಾಗುವುದಕ್ಕಿಂತಲೂ ಭೂಮ್ಯಾಕಾಶಗಳು ಅಳಿದುಹೋಗುವುದು ಸುಲಭ.
ವಿವಾಹವಿಚ್ಛೇದನ ಮತ್ತು ಪುನರ್ವಿವಾಹ
18 “ತನ್ನ ಪತ್ನಿಯನ್ನು ಬಿಟ್ಟು ಮತ್ತೊಬ್ಬಳನ್ನು ಮದುವೆ ಆಗುವವನು ವ್ಯಭಿಚಾರ ಮಾಡಿದವನಾಗುತ್ತಾನೆ. ವಿವಾಹವಿಚ್ಛೇದನ ಹೊಂದಿದ ಸ್ತ್ರೀಯನ್ನು ಮದುವೆ ಆಗುವವನು ಸಹ ವ್ಯಭಿಚಾರ ಮಾಡಿದವನಾಗುತ್ತಾನೆ.”
ಐಶ್ವರ್ಯವಂತನು ಮತ್ತು ಲಾಜರನು
19 ಯೇಸು ಹೀಗೆಂದನು: “ಒಬ್ಬ ಐಶ್ವರ್ಯವಂತನಿದ್ದನು. ಅವನು ಯಾವಾಗಲೂ ಉತ್ತಮವಾದ ಉಡುಪುಗಳನ್ನು ಧರಿಸುತ್ತಿದ್ದನು. ಅವನು ಬಹಳ ಐಶ್ವರ್ಯವಂತನಾಗಿದ್ದುದರಿಂದ ಪ್ರತಿದಿನವೂ ವೈಭವದೊಡನೆ ಊಟಮಾಡುತ್ತಾ ಸಂತೋಷಪಡುತ್ತಿದ್ದನು. 20 ಅಲ್ಲಿ ಲಾಜರನೆಂಬ ಒಬ್ಬ ಬಡಮನುಷ್ಯನೂ ಇದ್ದನು. ಅವನ ಮೈತುಂಬ ಹುಣ್ಣುಗಳಿದ್ದವು. ಅವನು ಐಶ್ವರ್ಯವಂತನ ಮನೆಯ ಹೊರಬಾಗಿಲ ಬಳಿ ಬಿದ್ದುಕೊಂಡಿರುತ್ತಿದ್ದನು. 21 ಐಶ್ವರ್ಯವಂತನು ಊಟ ಮಾಡಿದ ಮೇಲೆ ಹೊರಗೆಸೆದ ಎಂಜಲನ್ನು ತಿನ್ನುವುದಕ್ಕಾಗಿ ಅಲ್ಲಿ ಬಿದ್ದುಕೊಂಡಿರುತ್ತಿದ್ದನು. ನಾಯಿಗಳು ಬಂದು ಅವನ ಹುಣ್ಣುಗಳನ್ನು ನೆಕ್ಕುತ್ತಿದ್ದವು.
22 “ಸ್ವಲ್ಪ ಸಮಯದ ನಂತರ ಲಾಜರನು ಸತ್ತನು. ದೇವದೂತರು ಲಾಜರನನ್ನು ತೆಗೆದುಕೊಂಡು ಹೋಗಿ ಅಬ್ರಹಾಮನ ಎದೆಗೆ ಒರಗಿಸಿದರು. ಒಂದು ದಿನ ಐಶ್ವರ್ಯವಂತನೂ ಸತ್ತನು. ಅವನಿಗೆ ಸಮಾಧಿ ಮಾಡಲಾಯಿತು. 23 ಆದರೆ ಅವನು ಪಾತಾಳದಲ್ಲಿ ಬಹಳ ಯಾತನೆಪಡುತ್ತಾ ಬಹಳ ದೂರದಲ್ಲಿ ಅಬ್ರಹಾಮನ ಎದೆಗೆ ಒರಗಿಕೊಂಡಿದ್ದ ಲಾಜರನನ್ನು ನೋಡಿ, 24 ‘ತಂದೆಯಾದ ಅಬ್ರಹಾಮನೇ, ನನ್ನ ಮೇಲೆ ಕರುಣೆತೋರು! ಲಾಜರನನ್ನು ನನ್ನ ಬಳಿಗೆ ಕಳುಹಿಸು. ಅವನು ತನ್ನ ಬೆರಳನ್ನು ನೀರಿನಲ್ಲಿ ಅದ್ದಿ ನನ್ನ ನಾಲಿಗೆಯನ್ನು ತಣ್ಣಗೆ ಮಾಡಲಿ, ನಾನು ಈ ಬೆಂಕಿಯಲ್ಲಿ ಯಾತನೆಪಡುತ್ತಿದ್ದೇನೆ!’ ಎಂದು ಬೇಡಿಕೊಂಡನು.
25 “ಅದಕ್ಕೆ ಅಬ್ರಹಾಮನು, ‘ಕಂದಾ, ನಿನ್ನ ಜೀವಮಾನದ ದಿನಗಳು ನಿನಗೆ ನೆನಪಿಲ್ಲವೇ? ಅಲ್ಲಿ ನಿನಗೆ ಎಲ್ಲ ಬಗೆಯ ಸುಖವಿತ್ತು. ಆದರೆ ಲಾಜರಿನಿಗಾದರೋ ಕಷ್ಟಗಳೇ ತುಂಬಿಕೊಂಡಿದ್ದವು. ಆದ್ದರಿಂದ ಈಗ ಅವನು ಸುಖಪಡುತ್ತಿದ್ದಾನೆ, ನೀನು ಸಂಕಟಪಡುತ್ತಿರುವೆ. 26 ಮಾತ್ರವಲ್ಲದೆ ನಿನಗೂ ನಮಗೂ ಮಧ್ಯೆ ದೊಡ್ಡ ಡೊಂಗುರವಿದೆ. ಅಲ್ಲಿಗೆ ಬಂದು ನಿನಗೆ ಸಹಾಯ ಮಾಡಲು ಯಾರಿಗೂ ಸಾಧ್ಯವಿಲ್ಲ. ಅಲ್ಲದೆ ಯಾರು ಅಲ್ಲಿಂದ ಇಲ್ಲಿಗೆ ಬರಲು ಸಾಧ್ಯವಿಲ್ಲ’ ಎಂದು ಹೇಳಿದನು.
27 “ಐಶ್ವರ್ಯವಂತನು, ‘ಹಾಗಾದರೆ, ದಯಮಾಡಿ ಲಾಜರನನ್ನು ಭೂಲೋಕದಲ್ಲಿರುವ ನನ್ನ ತಂದೆಯ ಮನೆಗೆ ಕಳುಹಿಸು! 28 ನನಗೆ ಐದು ಮಂದಿ ಸಹೋದರರಿದ್ದಾರೆ. ಅವರು ಈ ಯಾತನೆಯ ಸ್ಥಳಕ್ಕೆ ಬಾರದಂತೆ ಲಾಜರನು ಅವರನ್ನು ಎಚ್ಚರಿಸಲಿ’ ಎಂದು ಹೇಳಿದನು.
29 “ಅದಕ್ಕೆ ಅಬ್ರಹಾಮನು, ‘ಮೋಶೆಯ ಧರ್ಮಶಾಸ್ತ್ರ ಮತ್ತು ಪ್ರವಾದಿಗಳ ಗ್ರಂಥಗಳು ಅವರಲ್ಲಿ ಇವೆ. ಅವರು ಅವುಗಳನ್ನು ಓದಿ ಕಲಿತುಕೊಳ್ಳಲಿ’ ಅಂದನು.
30 “ಅದಕ್ಕೆ ಐಶ್ವರ್ಯವಂತನು, ‘ತಂದೆಯಾದ ಅಬ್ರಹಾಮನೇ, ಹಾಗೆನ್ನಬೇಡ! ಯಾರಾದರೊಬ್ಬರು ಸತ್ತವರೊಳಗಿಂದ ಎದ್ದುಹೋದರೆ, ಅವರು ತಮ್ಮ ಹೃದಯಗಳನ್ನೂ ಜೀವಿತಗಳನ್ನೂ ಮಾರ್ಪಡಿಸಿಕೊಳ್ಳುವರು’ ಎಂದು ಹೇಳಿದನು.
31 “ಅದಕ್ಕೆ ಅಬ್ರಹಾಮನು ಅವನಿಗೆ, ‘ಇಲ್ಲ! ನಿನ್ನ ಸಹೋದರರು ಮೋಶೆಯ ಮತ್ತು ಪ್ರವಾದಿಗಳ ನುಡಿಗಳನ್ನು ಕೇಳುವುದಿಲ್ಲವಾದರೆ, ಸತ್ತವರೊಳಗಿಂದ ಜೀವಿತನಾಗಿ ಎದ್ದುಬಂದವನ ಮಾತನ್ನೂ ಅವರು ಕೇಳುವುದಿಲ್ಲ’” ಎಂದು ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International