Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
2 ಸಮುವೇಲನು 6-8

ದೇವರ ಪವಿತ್ರ ಪೆಟ್ಟಿಗೆಯನ್ನು ಜೆರುಸಲೇಮಿಗೆ ತಂದರು

ಇಸ್ರೇಲಿನಲ್ಲಿ ಆರಿಸಲ್ಪಟ್ಟ ಮೂವತ್ತು ಸಾವಿರ ಮಂದಿಯನ್ನು ದಾವೀದನು ಮತ್ತೆ ಒಟ್ಟುಗೂಡಿಸಿದನು. ಆಗ ದಾವೀದನು ತನ್ನ ಜನರೊಂದಿಗೆ ಯೆಹೂದದ ಬಾಳಾ ಎಂಬಲ್ಲಿಗೆ ಹೋದನು. ಯೆಹೂದದ ಬಾಳಾ ಎಂಬ ಸ್ಥಳದಲ್ಲಿದ್ದ ಪವಿತ್ರ ಪೆಟ್ಟಿಗೆಯನ್ನು ಜೆರುಸಲೇಮಿಗೆ ತೆಗೆದುಕೊಂಡು ಬಂದನು. ಯೆಹೋವನನ್ನು ಆರಾಧಿಸುವುದಕ್ಕಾಗಿ ಜನರು ಪವಿತ್ರ ಪೆಟ್ಟಿಗೆಯ ಬಳಿ ಹೋಗುತ್ತಿದ್ದರು. ಪವಿತ್ರ ಪೆಟ್ಟಿಗೆಯು ಯೆಹೋವನ ಪೀಠದಂತಿತ್ತು. ಪವಿತ್ರ ಪೆಟ್ಟಿಗೆಯ ಮೇಲ್ಭಾಗದಲ್ಲಿ ಕೆರೂಬಿಗಳಿದ್ದವು. ಯೆಹೋವನು ರಾಜನಂತೆ ದೂತರ ಮೇಲೆ ಆಸೀನನಾಗಿದ್ದನು. ದಾವೀದನ ಜನರು ಪವಿತ್ರ ಪೆಟ್ಟಿಗೆಯನ್ನು ಹೊಸಬಂಡಿಯ ಮೇಲಿಟ್ಟರು. ಅವರು ಬೆಟ್ಟದ ಮೇಲಿರುವ ಅಬೀನಾದಾಬನ ಮನೆಯಿಂದ ದೇವರ ಪವಿತ್ರ ಪೆಟ್ಟಿಗೆಯನ್ನು ತಂದರು. ಅಬೀನಾದಾಬನ ಮಕ್ಕಳಾದ ಉಜ್ಜನೂ ಅಹಿಯೋವನೂ ಆ ಬಂಡಿಯನ್ನು ಹೊಡೆದರು.

ಬೆಟ್ಟದ ಮೇಲಿನ ಅಬೀನಾದಾಬನ ಮನೆಯಿಂದ ಹೊಸ ಬಂಡಿಯನ್ನು ತರುವಾಗ ಉಜ್ಜನೂ ಅಹಿಯೋವನೂ ಮುನ್ನಡೆಸಿದರು. ಈ ಬಂಡಿಯ ಮೇಲೆ ದೇವರ ಪವಿತ್ರ ಪೆಟ್ಟಿಗೆಯಿತ್ತು. ಉಜ್ಜನೂ ಬಂಡಿಯ ಮೇಲಿದ್ದನು. ಪವಿತ್ರ ಪೆಟ್ಟಿಗೆಯ ಮುಂದೆ ಅಹಿಯೋವನು ನಡೆಯುತ್ತಿದ್ದನು. ದಾವೀದನು ಮತ್ತು ಇಸ್ರೇಲರೆಲ್ಲರು ಕಿನ್ನರಿ, ದಮ್ಮಡಿ, ಝಲ್ಲರಿ, ತಾಳಗಳನ್ನು ಬಾರಿಸುತ್ತಾ ಸನ್ನಿಧಿಯಲ್ಲಿ ನೃತ್ಯಮಾಡುತ್ತಿದ್ದರು. ದಾವೀದನ ಜನರು ನಾಕೋನನ ಕಣಕ್ಕೆ ಬಂದಾಗ ಹಸುಗಳು ಮುಗ್ಗರಿಸಿದವು ಹಾಗೂ ದೇವರ ಪವಿತ್ರ ಪೆಟ್ಟಿಗೆಯು ಬಂಡಿಯಿಂದ ಕೆಳಗೆ ಬೀಳುವುದರಲ್ಲಿತ್ತು. ಪವಿತ್ರ ಪೆಟ್ಟಿಗೆಯು ಬೀಳದಂತೆ ಉಜ್ಜನು ಹಿಡಿದನು. ಯೆಹೋವನು ಉಜ್ಜನ ಮೇಲೆ ಕೋಪಗೊಂಡು ಅವನನ್ನು ಕೊಂದನು.[a] ಉಜ್ಜನು ದೇವರಿಗೆ ಗೌರವವನ್ನು ತೋರಿಸದೆ ಪವಿತ್ರ ಪೆಟ್ಟಿಗೆಯನ್ನು ಸ್ಪರ್ಶಿಸಿದನು. ದೇವರ ಪವಿತ್ರ ಪಟ್ಟಿಗೆಯ ಹತ್ತಿರದಲ್ಲೇ ಉಜ್ಜನು ಸತ್ತನು. ಯೆಹೋವನು ಉಜ್ಜನನ್ನು ಕೊಂದದ್ದರಿಂದ ದಾವೀದನು ತಳಮಳಗೊಂಡನು. ದಾವೀದನು ಆ ಸ್ಥಳವನ್ನು “ಪೆರೆಚುಜ್ಜಾ” ಎಂದು ಕರೆದನು. ಆ ಸ್ಥಳವನ್ನು ಇಂದಿಗೂ “ಪೆರೆಚುಜ್ಜಾ” ಎಂದೇ ಕರೆಯುತ್ತಾರೆ.

ಅಂದು ದಾವೀದನು ಯೆಹೋವನಿಗೆ ಭಯಪಟ್ಟು, “ದೇವರ ಪವಿತ್ರ ಪೆಟ್ಟಿಗೆಯನ್ನು ನಾನಿರುವಲ್ಲಿಗೆ ತೆಗೆದುಕೊಂಡು ಹೋಗುವುದು ಹೇಗೆ?” ಎಂದು ಯೋಚಿಸಿಕೊಂಡು 10 ಯೆಹೋವನ ಪವಿತ್ರ ಪೆಟ್ಟಿಗೆಯನ್ನು ದಾವೀದ ನಗರದೊಳಕ್ಕೆ ತರಲಿಲ್ಲ. ದಾವೀದನು ಪವಿತ್ರ ಪೆಟ್ಟಿಗೆಯನ್ನು ಗತ್‌ನ ಓಬೇದೆದೋಮನ ಮನೆಯಲ್ಲಿಟ್ಟನು. 11 ಓಬೇದೆದೋಮನ ಮನೆಯಲ್ಲಿ ಪವಿತ್ರ ಪೆಟ್ಟಿಗೆಯು ಮೂರು ತಿಂಗಳ ಕಾಲ ಇತ್ತು. ಓಬೇದೆದೋಮನನ್ನೂ ಅವನ ಕುಟುಂಬವನ್ನೂ ಯೆಹೋವನು ಆಶೀರ್ವದಿಸಿದನು.

12 ತರುವಾಯ ಜನರು ದಾವೀದನಿಗೆ, “ದೇವರ ಪವಿತ್ರ ಪೆಟ್ಟಿಗೆಯು ಓಬೇದೆದೋಮನ ಮನೆಯಲ್ಲಿರುವುದರಿಂದ ಯೆಹೋವನು ಅವನ ಕುಟುಂಬವನ್ನೂ ಅವನ ಸಮಸ್ತವನ್ನೂ ಆಶೀರ್ವದಿಸಿದನು.” ಎಂದು ಹೇಳಿದರು. ಆದ್ದರಿಂದ ದಾವೀದನು ಹೋಗಿ ಓಬೇದೆದೋಮನ ಮನೆಯಿಂದ ಪವಿತ್ರ ಪೆಟ್ಟಿಗೆಯನ್ನು ಸಂತೋಷದಿಂದ ತಂದನು. 13 ಯೆಹೋವನ ಪವಿತ್ರ ಪೆಟ್ಟಿಗೆಯನ್ನು ಹೊತ್ತವರು ಆರು ಹೆಜ್ಜೆಗಳನ್ನು ನಡೆದು ನಿಂತಾಗ ದಾವೀದನು ಒಂದು ಹೋರಿಯನ್ನು ಮತ್ತು ಕೊಬ್ಬಿದ ಕರುವನ್ನು ಯಜ್ಞವಾಗಿ ಅರ್ಪಿಸಿದನು. 14 ಆಗ ದಾವೀದನು ಯೆಹೋವನ ಸನ್ನಿಧಿಯಲ್ಲಿ ತನ್ನ ಶಕ್ತಿಮೀರಿ ನರ್ತಿಸಿದನು. ಅವನು ಏಫೋದನ್ನು ಧರಿಸಿದ್ದನು.

15 ಯೆಹೋವನ ಪವಿತ್ರ ಪೆಟ್ಟಿಗೆಯನ್ನು ನಗರಕ್ಕೆ ತರುವಾಗ ದಾವೀದನು ಮತ್ತು ಇಸ್ರೇಲರೆಲ್ಲರು ಸಂತೋಷದಿಂದ ಆರ್ಭಟಿಸಿದರು; ತುತ್ತೂರಿಯನ್ನು ಊದಿದರು. 16 ಸೌಲನ ಮಗಳಾದ ಮೀಕಲಳು ಕಿಟಕಿಯಿಂದ ಹೊರಗೆ ನೋಡುತ್ತಿದ್ದಳು. ಅದೇ ಸಮಯದಲ್ಲಿ ಯೆಹೋವನ ಪವಿತ್ರ ಪೆಟ್ಟಿಗೆಯು ನಗರಕ್ಕೆ ಬಂದಿತು. ದಾವೀದನು ಯೆಹೋವನ ಸನ್ನಿಧಿಯಲ್ಲಿ ಜಿಗಿಯುತ್ತಾ ಕುಣಿದಾಡುತ್ತಿದ್ದನು. ಮೀಕಲಳು ಇದನ್ನು ಕಂಡು ದಾವೀದನನ್ನು ತನ್ನ ಹೃದಯದಲ್ಲಿ ತಿರಸ್ಕರಿಸಿದಳು; ಅವನು ತನ್ನನ್ನು ತಾನೇ ಮೂರ್ಖನನ್ನಾಗಿ ಮಾಡಿಕೊಳ್ಳುತ್ತಿದ್ದಾನೆ ಎಂದು ಆಲೋಚಿಸಿಕೊಂಡಳು.

17 ದಾವೀದನು ಪವಿತ್ರ ಪೆಟ್ಟಿಗೆಗಾಗಿ ಒಂದು ಗುಡಾರವನ್ನು ನಿರ್ಮಿಸಿದನು. ಇಸ್ರೇಲರು, ಯೆಹೋವನ ಪವಿತ್ರ ಪೆಟ್ಟಿಗೆಯನ್ನು ಗುಡಾರದಲ್ಲಿ ಪ್ರತ್ಯೇಕವಾದ ಸ್ಥಳದಲ್ಲಿ ಇಟ್ಟರು. ಆಗ ದಾವೀದನು ಯೆಹೋವನ ಸನ್ನಿಧಿಯಲ್ಲಿ ಸರ್ವಾಂಗಹೋಮಗಳನ್ನೂ ಸಮಾಧಾನಯಜ್ಞಗಳನ್ನೂ ಸಮರ್ಪಿಸಿದನು.

18 ಬಳಿಕ, ದಾವೀದನು ಸರ್ವಶಕ್ತನಾದ ಯೆಹೋವನ ಹೆಸರಿನಲ್ಲಿ ಜನರನ್ನು ಆಶೀರ್ವದಿಸಿದನು. 19 ದಾವೀದನು ಇಸ್ರೇಲಿನ ಜನರಲ್ಲಿ ಪ್ರತಿಯೊಬ್ಬ ಗಂಡಸಿಗೂ ಹೆಂಗಸಿಗೂ ಒಂದು ತುಂಡು ರೊಟ್ಟಿಯನ್ನೂ ಒಣಗಿದ ದ್ರಾಕ್ಷೆಹಣ್ಣಿನ ಉಂಡೆಯನ್ನೂ ಒಂದು ತುಂಡು ಮಾಂಸವನ್ನೂ ಕೊಟ್ಟನು. ಆಗ ಜನರೆಲ್ಲರೂ ತಮ್ಮ ತಮ್ಮ ಮನೆಗಳಿಗೆ ಹೋದರು.

ಮೀಕಲಳು ದಾವೀದನನ್ನು ತಿರಸ್ಕರಿಸಿದಳು

20 ದಾವೀದನು ತನ್ನ ಕುಟುಂಬದವರನ್ನು ಆಶೀರ್ವದಿಸಲು ಹೋದನು. ಆದರೆ ಸೌಲನ ಮಗಳಾದ ಮೀಕಲಳು ಅವನನ್ನು ಭೇಟಿಮಾಡಲು ಹೊರಗೆ ಬಂದು, “ಇಸ್ರೇಲರ ರಾಜನು ಈ ದಿನ ತನ್ನ ಗೌರವವನ್ನು ಕಾಪಾಡಿಕೊಳ್ಳಲಿಲ್ಲ! ನಾಚಿಕೆಯಿಲ್ಲದೆ ತನ್ನೆಲ್ಲ ಬಟ್ಟೆಗಳನ್ನೂ ತೆಗೆದುಹಾಕುವ ಮೂರ್ಖನಂತೆ, ನೀನು ನಿನ್ನ ಸೇವಕರ ಮತ್ತು ದಾಸಿಯರ ಮುಂದೆ ನಿನ್ನ ಬಟ್ಟೆಗಳನ್ನೆಲ್ಲ ತೆಗೆದು ಹಾಕಿದೆಯಲ್ಲ”[b] ಎಂದಳು.

21 ಆಗ ದಾವೀದನು ಮೀಕಲಳಿಗೆ, “ಯೆಹೋವನು ನಿನ್ನ ತಂದೆಯನ್ನಾಗಲಿ ಅವರ ಕುಟುಂಬದ ಇತರ ಯಾರನ್ನೇ ಆಗಲಿ ಆರಿಸಿಕೊಳ್ಳದೆ ನನ್ನನ್ನೇ ಇಸ್ರೇಲರ ನಾಯಕನನ್ನಾಗಿ ಆರಿಸಿಕೊಂಡಿದ್ದಾನೆ. ಆದ್ದರಿಂದಲೇ ನಾನು ಯೆಹೋವನ ಸನ್ನಿಧಿಯಲ್ಲಿ ಕುಣಿದಾಡಿದೆನು. 22 ಆತನ ಮುಂದೆ ಇನ್ನೂ ಹೀನವಾಗಿ ಕಾಣಿಸಿಕೊಳ್ಳುವುದಕ್ಕೂ ನನ್ನನ್ನು ನಾನು ಕಡೆಗಣಿಸಿಕೊಳ್ಳುವುದಕ್ಕೂ ಸಿದ್ಧನಿದ್ದೇನೆ. ಬಹುಶಃ ನೀನು ನನ್ನನ್ನು ಗೌರವಿಸದಿರಬಹುದು, ಆದರೆ ನೀನು ಯಾವ ದಾಸಿಯರ ಬಗ್ಗೆ ಮಾತನಾಡಿದೆಯೋ ಅವರು ನನ್ನನ್ನು ಗೌರವಿಸುತ್ತಾರೆ” ಎಂದು ಹೇಳಿದನು.

23 ಸೌಲನ ಮಗಳಾದ ಮೀಕಲಳು ಬಂಜೆಯಾಗಿ ಉಳಿದಳು. ಅವಳು ಮಕ್ಕಳೇ ಇಲ್ಲದೆ ಸತ್ತುಹೋದಳು.

ದೇವಾಲಯ ಕಟ್ಟಲು ದಾವೀದನ ಅಪೇಕ್ಷೆ

ದಾವೀದನು ತನ್ನ ಅರಮನೆಯಲ್ಲಿ ಸುಖವಾಗಿ ವಾಸಿಸುವಂತೆಯೂ ಅವನ ಸುತ್ತಲಿನ ಶತ್ರುಗಳಿಂದ ಭಯವಿಲ್ಲದಂತೆಯೂ ಯೆಹೋವನು ಮಾಡಿದನು. ಆಗ ರಾಜನಾದ ದಾವೀದನು ಪ್ರವಾದಿಯಾದ ನಾತಾನನಿಗೆ, “ನೋಡು, ನಾನು ದೇವದಾರು ಮರದಿಂದ ನಿರ್ಮಿಸಿದ ವೈಭವದ ಮನೆಯಲ್ಲಿ ವಾಸವಾಗಿದ್ದೇನೆ; ಆದರೆ ದೇವರ ಪವಿತ್ರ ಪೆಟ್ಟಿಗೆಯನ್ನು ಇನ್ನೂ ಗುಡಾರದಲ್ಲಿಯೇ ಇಟ್ಟಿದ್ದೇನೆ. ಅದಕ್ಕಾಗಿ ಒಂದು ಆಲಯವನ್ನು ಕಟ್ಟಬೇಕು” ಎಂದು ಹೇಳಿದನು.

ನಾತಾನನು ರಾಜನಾದ ದಾವೀದನಿಗೆ, “ನೀನು ನಿಜವಾಗಿಯೂ ಏನನ್ನು ಮಾಡಬೇಕೆಂದಿರುವೆಯೋ ಅದನ್ನು ಮಾಡು; ಯೆಹೋವನು ನಿನ್ನೊಂದಿಗಿದ್ದಾನೆ” ಎಂದು ಹೇಳಿದನು.

ಆದರೆ ಅಂದು ರಾತ್ರಿ ನಾತಾನನಿಗೆ ಯೆಹೋವನು ಹೀಗೆ ಹೇಳಿದನು:

“ನೀನು ನನ್ನ ಸೇವಕನಾದ ದಾವೀದನ ಬಳಿಗೆ ಹೋಗಿ ಈ ಸಂದೇಶವನ್ನು ತಿಳಿಸು: ‘ನನ್ನ ವಾಸಕ್ಕಾಗಿ ಆಲಯವನ್ನು ಕಟ್ಟುವ ವ್ಯಕ್ತಿಯು ನೀನಲ್ಲ. ಈಜಿಪ್ಟಿನಿಂದ ಇಸ್ರೇಲರನ್ನು ಹೊರತಂದ ಸಮಯದಲ್ಲಿ ನಾನು ಆಲಯದಲ್ಲಿ ವಾಸಮಾಡಲಿಲ್ಲ. ನಾನು ಗುಡಾರದಲ್ಲಿ ವಾಸಮಾಡುತ್ತಾ ಸಂಚರಿಸಿದೆನು. ಗುಡಾರವೇ ನನ್ನ ಆಲಯವಾಗಿತ್ತು. ನನಗಾಗಿ ದೇವದಾರು ಮರದಿಂದ ಆಲಯ ಕಟ್ಟುವಂತೆ ಇಸ್ರೇಲರ ಯಾವ ಕುಲದವರನ್ನಾಗಲಿ ನಾನು ಕೇಳಿಕೊಳ್ಳಲಿಲ್ಲ ಎಂಬುದಾಗಿ ಯೆಹೋವನು ತಿಳಿಸುತ್ತಾನೆ’ ಎಂದು ಹೇಳು.

“ನೀನು ಇದನ್ನು ನನ್ನ ಸೇವಕನಾದ ದಾವೀದನಿಗೆ ಹೇಳಲೇಬೇಕು: ‘ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, ಹುಲ್ಲುಗಾವಲಿನಲ್ಲಿ ಕುರಿಕಾಯುತ್ತಿದ್ದ ನಿನ್ನನ್ನು ನಾನು ನನ್ನ ಜನರಾದ ಇಸ್ರೇಲರಿಗೆ ನಾಯಕನಾಗಿ ಮಾಡಲು ಕರೆತಂದೆನು. ನೀನು ಹೋದ ಸ್ಥಳಗಳಲ್ಲೆಲ್ಲಾ ನಿನ್ನೊಂದಿಗಿದ್ದೆನು. ನಿನ್ನ ಶತ್ರುಗಳನ್ನು ಸೋಲಿಸಿದೆನು. ನಾನು ನಿನ್ನನ್ನು ಲೋಕದ ಇತರ ಮಹಾಪುರುಷರಂತೆಯೇ ಪ್ರಸಿದ್ಧಿಗೊಳಿಸುವೆನು. 10-11 ನಾನು ನನ್ನ ಜನರಾದ ಇಸ್ರೇಲರಿಗೆ ಒಂದು ಸ್ಥಳವನ್ನು ಆರಿಸಿಕೊಂಡು ಅವರನ್ನು ನೆಲೆಗೊಳಿಸಿದ್ದೇನೆ. ವಾಸಿಸುವುದಕ್ಕಾಗಿ ಅವರ ಸ್ವಂತ ಸ್ಥಳವನ್ನು ಅವರಿಗೆ ಕೊಟ್ಟಿದ್ದೇನೆ. ಆದ್ದರಿಂದ ಈಗ ಅವರು ಅಲೆದಾಡುವ ಅಗತ್ಯವೇ ಇಲ್ಲ. ಮೊದಲು ನನ್ನ ಜನರಾದ ಇಸ್ರೇಲರನ್ನು ಮುನ್ನಡೆಸಲು ನ್ಯಾಯಾಧಿಪತಿಗಳನ್ನು ಕಳುಹಿಸಿದೆನು. ದುಷ್ಟಜನರು ಅವರಿಗೆ ತೊಂದರೆ ಕೊಟ್ಟರು. ಆದರೆ ಅದು ಈಗ ಸಂಭವಿಸುವುದಿಲ್ಲ. ನಿನಗೆ ಶತ್ರು ಭಯವಿಲ್ಲದಂತೆ ಮಾಡುತ್ತೇನೆ; ನಿನ್ನ ಕುಟುಂಬದಿಂದಲೇ ರಾಜರುಗಳನ್ನು ಬರಮಾಡುತ್ತೇನೆ.

12 “‘ನಿನ್ನ ದಿನಗಳು ಮುಗಿದುಹೋಗುತ್ತವೆ; ನೀನು ನಿನ್ನ ಪೂರ್ವಿಕರ ಜೊತೆಯಲ್ಲಿ ಸೇರುತ್ತಿ. ಆ ಸಮಯದಲ್ಲಿ, ನಿನ್ನ ಮಕ್ಕಳಲ್ಲಿ ಒಬ್ಬನನ್ನು ರಾಜನನ್ನಾಗಿ ಮಾಡಿ ಅವನ ರಾಜ್ಯವನ್ನು ಭದ್ರಗೊಳಿಸುತ್ತೇನೆ. 13 ಅವನು ನನ್ನ ಹೆಸರಿಗಾಗಿ ಒಂದು ಆಲಯವನ್ನು ನಿರ್ಮಿಸುತ್ತಾನೆ. ಅವನ ರಾಜ್ಯವು ಸದಾಕಾಲಕ್ಕೂ ಇರುವಂತೆ ನಾನು ಮಾಡುತ್ತೇನೆ. 14 ನಾನು ಅವನಿಗೆ ತಂದೆಯಾಗಿರುವೆನು; ಅವನು ನನಗೆ ಮಗನಾಗಿರುವನು. ಅವನು ಪಾಪಗಳನ್ನು ಮಾಡಿದರೆ ಇತರ ಜನರ ಮೂಲಕ ನಾನು ಅವನನ್ನು ದಂಡಿಸುವೆನು. ಅವರೇ ನನ್ನ ಚಾವಟಿಗಳಾಗಿರುತ್ತಾರೆ. 15 ಆದರೆ ನಾನು ಅವನನ್ನು ಪ್ರೀತಿಸುವುದನ್ನು ನಿಲ್ಲಿಸುವುದಿಲ್ಲ. ಅವನು ಯಾವಾಗಲೂ ನನ್ನ ಕರುಣಾಶ್ರಯದಲ್ಲಿರುವನು. ಸೌಲನ ಮೇಲಿಟ್ಟಿದ್ದ ಪ್ರೀತಿಯನ್ನು ಮತ್ತು ದಯೆಯನ್ನು ಹಿಂತೆಗೆದುಕೊಂಡೆನು. ಸೌಲನನ್ನು ನಿನ್ನ ಎದುರಿನಿಂದ ನಾನು ದೂರ ತಳ್ಳಿದೆನು. ನಾನು ನಿನ್ನ ಕುಟುಂಬಕ್ಕೆ ಹಾಗೆ ಮಾಡುವುದಿಲ್ಲ. 16 ನಿನ್ನ ಕುಟುಂಬ ಮತ್ತು ರಾಜ್ಯ ಎಂದೆಂದಿಗೂ ಸ್ಥಿರವಾಗಿರುವುದು. ನಿನ್ನ ಸಿಂಹಾಸನವು ಶಾಶ್ವತವಾಗಿರುವುದು.’”

17 ಆ ದರ್ಶನದಲ್ಲಿ ದೇವರು ತನಗೆ ಹೇಳಿದ ಪ್ರತಿಯೊಂದನ್ನು ನಾತಾನನು ದಾವೀದನಿಗೆ ತಿಳಿಸಿದನು.

ದಾವೀದನು ದೇವರಲ್ಲಿ ಪ್ರಾರ್ಥಿಸುವನು

18 ಆಗ ರಾಜನಾದ ದಾವೀದನು ಹೋಗಿ ಯೆಹೋವನ ಸನ್ನಿಧಿಯಲ್ಲಿ ಕುಳಿತು,

“ನನ್ನ ಒಡೆಯನಾದ ಯೆಹೋವನೇ, ನಾನೆಷ್ಟರವನು? ನನ್ನ ಕುಲ ಎಷ್ಟರದು? ನೀನು ನನ್ನನ್ನೇಕೆ ಇಷ್ಟು ಉದ್ಧರಿಸಿದೆ? 19 ನಾನು ಕೇವಲ ನಿನ್ನ ಸೇವಕನು. ನೀನು ನನ್ನ ಮೇಲೆ ಬಹಳ ದಯೆ ತೋರಿಸಿರುವೆ. ನನಗೆ ಮಾತ್ರವಲ್ಲದೆ ನೀನು ನನ್ನ ಮುಂದಿನ ಸಂತಾನದ ಬಗ್ಗೆಯೂ ಇದೇ ರೀತಿಯ ದಯಾಪರವಾದ ಮಾತುಗಳನ್ನು ಆಡಿರುವೆ. ನನ್ನ ಒಡೆಯನಾದ ಯೆಹೋವನೇ, ನರಪ್ರಾಣಿಯಾದ ನನ್ನೊಂದಿಗೆ ಇಂಥ ಮಹತ್ತಾದ ಕಾರ್ಯ ಮಾಡಬಹುದೇ? 20 ನಾನು ನಿನಗೆ ಇನ್ನೇನು ಹೇಳಲಿ? ನಿನ್ನ ಜೊತೆ ಹೇಗೆ ಮಾತನಾಡುತ್ತಲೇ ಇರಲಿ? ನನ್ನ ಒಡೆಯನಾದ ಯೆಹೋವನೇ, ನಾನು ನಿನ್ನ ಸೇವಕನೆಂಬುದು ನಿನಗೆ ತಿಳಿದಿದೆ. 21 ನೀನು ಈ ಕಾರ್ಯವನ್ನು ನಿನ್ನ ವಾಗ್ದಾನದ ಪ್ರಕಾರವಾಗಿಯೂ ನಿನ್ನ ಚಿತ್ತದ ಪ್ರಕಾರವಾಗಿಯೂ ಮಾಡಿರುವೆ ಮತ್ತು ನಿನ್ನ ಸೇವಕನಿಗೆ ಅದನ್ನು ತಿಳಿಸಿರುವೆ. 22 ದೇವರಾದ ಯೆಹೋವನೇ, ನಾನು ಕೇಳಿದ ಪ್ರಕಾರ ನೀನೇ ದೊಡ್ಡವನು; ನಿನ್ನ ಸಮಾನರು ಬೇರೆ ಯಾರೂ ಇಲ್ಲ; ನಿನ್ನ ಹೊರತು ಬೇರೆ ದೇವರಿಲ್ಲ.

23 “ನಿನ್ನ ಜನರಾದ ಇಸ್ರೇಲರಂಥವರು ಈ ಲೋಕದಲ್ಲಿ ಬೇರೆ ಯಾರೂ ಇಲ್ಲ, ಅವರು ವಿಶೇಷವಾದ ಜನರು. ಅವರು ಗುಲಾಮರಾಗಿದ್ದರು, ಆದರೆ ಅವರನ್ನು ಈಜಿಪ್ಟಿನಿಂದ ನೀನು ಹೊರತಂದು ಸ್ವತಂತ್ರರನ್ನಾಗಿ ಮಾಡಿರುವೆ. ನೀನು ಅವರನ್ನು ನಿನ್ನ ಜನರನ್ನಾಗಿ ಮಾಡಿಕೊಂಡೆ. ಇಸ್ರೇಲರಿಗಾಗಿ ನೀನು ಉತ್ತಮವಾದ ಮತ್ತು ಮಹತ್ತಾದ ಕಾರ್ಯಗಳನ್ನು ಮಾಡಿದೆ. ನಿನ್ನ ದೇಶಕ್ಕಾಗಿ ನೀನು ಮಹತ್ಕಾರ್ಯಗಳನ್ನು ಮಾಡಿದೆ. 24 ಇಸ್ರೇಲಿನ ಜನರನ್ನು ಎಂದೆಂದಿಗೂ ನಿನ್ನ ಸ್ವಂತ ಜನರನ್ನಾಗಿ ಮಾಡಿಕೊಂಡೆ. ಯೆಹೋವನೇ, ನೀನು ಅವರಿಗಾಗಿ ದೇವರಾದೆ.

25 “ದೇವರಾದ ಯೆಹೋವನೇ, ಈಗ ನೀನು ನನ್ನ ಬಗ್ಗೆ ಮಾತನಾಡಿರುವೆ. ನಾನು ನಿನ್ನ ಸೇವಕ. ನೀನು ನನ್ನ ಕುಲದ ಬಗ್ಗೆಯೂ ವಾಗ್ದಾನ ಮಾಡಿರುವೆ. ನಿನ್ನ ವಾಗ್ದಾನಗಳನ್ನು ನೆರವೇರಿಸು. ನೀನು ವಾಗ್ದಾನ ಮಾಡಿದ ಕಾರ್ಯಗಳನ್ನು ಮಾಡು. 26 ಆಗ ನಿನ್ನ ಹೆಸರು ಎಂದೆಂದೂ ಗೌರವಿಸಲ್ಪಡುತ್ತದೆ. ಜನರೆಲ್ಲರೂ ‘ಸರ್ವಶಕ್ತನಾದ ಯೆಹೋವನೇ ಇಸ್ರೇಲರ ದೇವರು!’ ಎಂದು ಹೇಳುವರು. ಅಲ್ಲದೆ ‘ನಿನ್ನ ಸೇವಕನಾದ ದಾವೀದನ ಕುಟುಂಬವು ನಿನ್ನ ಸನಿಧಿಯಲ್ಲಿ ಸ್ಥಿರವಾಗುವುದು’ ಎಂದು ಹೇಳುವರು.

27 “ಇಸ್ರೇಲರ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನೇ, ನೀನು ನನಗೆ ಮುಂದಿನ ಸಂಗತಿಗಳನ್ನು ತೋರಿಸಿರುವೆ. ‘ನಾನು ನಿನ್ನ ಕುಟುಂಬವನ್ನು ಸ್ಥಿರಪಡಿಸುವೆನು’ ಎಂದು ಹೇಳಿರುವೆ. ಆ ಕಾರಣದಿಂದಲೇ ನಿನ್ನ ಸೇವಕನಾದ ನಾನು ನಿನ್ನಲ್ಲಿ ಈ ಪ್ರಾರ್ಥನೆಯನ್ನು ಸಲ್ಲಿಸಲು ತೀರ್ಮಾನಿಸಿದ್ದೇನೆ. 28 ನನ್ನ ಒಡೆಯನಾದ ಯೆಹೋವನೇ, ನೀನೇ ದೇವರು. ನಿನ್ನ ಮಾತುಗಳು ಸತ್ಯವಾದವು. ನಿನ್ನ ಸೇವಕನಾದ ನನಗೆ ಅತೀ ಉತ್ತಮವಾದ ವಾಗ್ದಾನಗಳನ್ನು ಮಾಡಿರುವೆ. 29 ದಯವಿಟ್ಟು ನನ್ನ ಕುಟುಂಬವನ್ನು ಆಶೀರ್ವದಿಸು. ಅದು ನಿನ್ನ ಸನ್ನಿಧಿಯಲ್ಲಿ ಎಂದೆಂದಿಗೂ ಮುಂದುವರಿಯಲಿ. ದೇವರಾದ ಯೆಹೋವನೇ, ಆಶ್ಚರ್ಯಕರವಾದ ವಾಗ್ದಾನಗಳನ್ನು ನೀನು ನನಗೆ ಮಾಡಿರುವೆ. ನಿನ್ನ ಆಶೀರ್ವಾದದಿಂದ ನನ್ನ ಕುಟುಂಬವು ಎಂದೆಂದಿಗೂ ಆಶೀರ್ವಾದವನ್ನು ಹೊಂದಲಿ” ಎಂದು ಪ್ರಾರ್ಥಿಸಿದನು.

ದಾವೀದನು ಅನೇಕ ಯುದ್ಧಗಳಲ್ಲಿ ಜಯಗಳಿಸಿದ್ದು

ತರುವಾಯ, ದಾವೀದನು ಫಿಲಿಷ್ಟಿಯರನ್ನು ಸೋಲಿಸಿ ಬಹುವಿಸ್ತಾರವಾದ ಪ್ರದೇಶವನ್ನು ಹತೋಟಿಯಲ್ಲಿಟ್ಟುಕೊಂಡಿದ್ದ ಅವರ ರಾಜಧಾನಿಯನ್ನು ಸ್ವಾಧೀನಪಡಿಸಿಕೊಂಡನು. ಮೋವಾಬಿನ ಜನರನ್ನು ಸಹ ದಾವೀದನು ಸೋಲಿಸಿದನು. ಅವರನ್ನು ನೆಲದ ಮೇಲೆ ಬಲವಂತದಿಂದ ಮಲಗಿಸಿ ಹಗ್ಗದಿಂದ ಅವರನ್ನು ಸಾಲುಸಾಲಾಗಿ ವಿಂಗಡಿಸಿದನು. ಎರಡು ಸಾಲಿನ ಗಂಡಸರನ್ನು ಕೊಲ್ಲಿಸಿದನು; ಆದರೆ ಮೂರನೆಯ ಸಾಲಿನ ಗಂಡಸರನ್ನು ಜೀವಂತವಾಗಿ ಉಳಿಸಿದನು. ಮೋವಾಬಿನ ಜನರು ದಾವೀದನ ಸೇವಕರಾದರು. ಅವರು ಅವನಿಗೆ ಕಪ್ಪಕಾಣಿಕೆಗಳನ್ನು ಅರ್ಪಿಸಿದರು.

ಹದದೆಜೆರನು ರೆಹೋಬನ ಮಗ ಹಾಗೂ ಚೋಬದ ರಾಜ. ದಾವೀದನು ಯೂಫ್ರೇಟೀಸ್ ನದಿಯ ಸುತ್ತಲಿನ ಪ್ರದೇಶವನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾಗ, ಹದದೆಜೆರನನ್ನು ಸೋಲಿಸಿದನು. ಹದದೆಜೆರನಿಂದ ಒಂದು ಸಾವಿರ ರಥಗಳನ್ನೂ ಒಂದು ಸಾವಿರದ ಏಳುನೂರು ಅಶ್ವಪಡೆಗಳನ್ನೂ ದಾವೀದನು ತೆಗೆದುಕೊಂಡನು. ಅವನು ಇಪ್ಪತ್ತು ಸಾವಿರ ಕಾಲಾಳು ಸೈನಿಕರನ್ನು ಸಹ ಪಡೆದನು. ದಾವೀದನು ಒಂದು ನೂರು ರಥದ ಕುದುರೆಗಳನ್ನು ಇಟ್ಟುಕೊಂಡು ಉಳಿದವುಗಳನ್ನು ಕುಂಟುವಂತೆ ಮಾಡಿದನು.

ಚೋಬದ ರಾಜನಾದ ಹದದೆಜೆರನ ಸಹಾಯಕ್ಕೆ ದಮಸ್ಕದ ಅರಾಮ್ಯರು ಬಂದರು. ಆದರೆ ದಾವೀದನು ಆ ಇಪ್ಪತ್ತೆರಡು ಸಾವಿರ ಅರಾಮ್ಯರನ್ನು ಸಂಹರಿಸಿದನು. ಬಳಿಕ ದಾವೀದನು ದಮಸ್ಕದ ಅರಾಮ್ ದೇಶದಲ್ಲಿ ಕಾವಲುದಂಡನ್ನು ಇರಿಸಿದನು. ಅರಾಮ್ಯರು ದಾವೀದನ ಸೇವಕರಾದರು ಮತ್ತು ಅವನಿಗೆ ಕಾಣಿಕೆಗಳನ್ನು ತಂದರು. ದಾವೀದನು ಹೋದ ಸ್ಥಳಗಳಲ್ಲೆಲ್ಲ ಯೆಹೋವನು ಜಯವನ್ನು ಉಂಟುಮಾಡಿದನು.

ಹದದೆಜೆರನ ಸೇವಕರಿಗೆ ಸೇರಿದ ಚಿನ್ನದ ಗುರಾಣಿಗಳನ್ನು ದಾವೀದನು ವಶಪಡಿಸಿಕೊಂಡನು. ದಾವೀದನು ಅವುಗಳನ್ನು ಜೆರುಸಲೇಮಿಗೆ ತಂದನು. ಹದದೆಜೆರನಿಗೆ ಸೇರಿದ ನಗರಗಳಾದ ಬೆಟಹ ಮತ್ತು ಬೇರೋತೈಗಳಿಂದ ಹಿತ್ತಾಳೆಯ ಅನೇಕಾನೇಕ ವಸ್ತುಗಳನ್ನು ದಾವೀದನು ವಶಪಡಿಸಿಕೊಂಡನು.

ಹದದೆಜೆರನ ಸೈನ್ಯವನ್ನೆಲ್ಲ ದಾವೀದನು ಸೋಲಿಸಿದನೆಂಬ ವರ್ತಮಾನವು ಹಮಾತಿನ ರಾಜನಾದ ತೋವಿಗೆ ತಿಳಿಯಿತು. 10 ಆಗ ತೋವಿಯು ತನ್ನ ಮಗನಾದ ಯೋರಾಮನನ್ನು ರಾಜನಾದ ದಾವೀದನ ಬಳಿಗೆ ಕಳುಹಿಸಿದನು. ದಾವೀದನು ಹದದೆಜೆರನ ವಿರುದ್ಧ ಹೋರಾಡಿ ಅವನನ್ನು ಸೋಲಿಸಿದ್ದಕ್ಕಾಗಿ ಯೋರಾಮನು ದಾವೀದನನ್ನು ಅಭಿನಂದಿಸಿದನು ಮತ್ತು ಆಶೀರ್ವದಿಸಿದನು. (ಈ ಮೊದಲು ಹದದೆಜೆರನು ತೋವಿಗೆ ವಿರುದ್ಧವಾಗಿ ಯುದ್ಧವನ್ನು ಮಾಡಿದನು.) ಯೋರಾಮನು ಚಿನ್ನ, ಬೆಳ್ಳಿ ಮತ್ತು ಹಿತ್ತಾಳೆಯಿಂದ ಮಾಡಿದ ವಸ್ತುಗಳನ್ನು ತಂದಿದ್ದನು. 11 ದಾವೀದನು ಆ ವಸ್ತುಗಳನ್ನು ತೆಗೆದುಕೊಂಡು ಯೆಹೋವನಿಗೆ ಸಮರ್ಪಿಸಿದನು. ಅವನು ಅನ್ಯದೇಶಗಳನ್ನು ಸೋಲಿಸಿದ್ದಾಗ ಯೆಹೋವನಿಗೆ ಸಮರ್ಪಿಸಿದ್ದ ಬೆಳ್ಳಿ ಮತ್ತು ಚಿನ್ನಗಳೊಂದಿಗೆ ಇವುಗಳನ್ನೂ ಸೇರಿಸಿದನು. 12 ಆತನು ಸೋಲಿಸಿದ ದೇಶಗಳು ಯಾವುವೆಂದರೆ: ಅರಾಮ್, ಮೋವಾಬ್, ಅಮ್ಮೋನಿಯ, ಫಿಲಿಷ್ಟಿಯ ಮತ್ತು ಅಮಾಲೇಕ್ಯ. ಚೋಬದ ರಾಜನಾದ ರೆಹೋಬನ ಮಗ ಹದದೆಜೆರನನ್ನು ಸಹ ದಾವೀದನು ಸೋಲಿಸಿದನು. 13 ದಾವೀದನು ಉಪ್ಪಿನ ಕಣಿವೆಯಲ್ಲಿ ಹದಿನೆಂಟು ಸಾವಿರ ಎದೋಮ್ಯರನ್ನು ಸೋಲಿಸಿದನು. ಅವನು ಮನೆಗೆ ಹಿಂದಿರುಗುವಷ್ಟರಲ್ಲಿ ಪ್ರಸಿದ್ಧನಾಗಿದ್ದನು. 14 ದಾವೀದನು ಎದೋಮಿನ ಎಲ್ಲಾ ಕಡೆಯಲ್ಲೂ ಕಾವಲುದಂಡನ್ನು ಇರಿಸಿದನು. ಎದೋಮಿನ ಜನರೆಲ್ಲರೂ ದಾವೀದನ ಸೇವಕರಾದರು. ದಾವೀದನು ಹೋದ ಕಡೆಗಳಲ್ಲೆಲ್ಲಾ ಯೆಹೋವನು ಜಯವನ್ನು ಉಂಟುಮಾಡಿದನು.

ದಾವೀದನ ರಾಜ್ಯಾಡಳಿತ

15 ದಾವೀದನು ಸಮಸ್ತ ಇಸ್ರೇಲರನ್ನು ಆಳಿದನು. ದಾವೀದನು ಜನರಿಗೆ ನ್ಯಾಯವಾದ ಮತ್ತು ಸರಿಯಾದ ತೀರ್ಪುಗಳನ್ನು ಕೊಡುತ್ತಿದ್ದನು. 16 ಚೆರೂಯಳ ಮಗನಾದ ಯೋವಾಬನು ಅವನ ಸೈನ್ಯದ ಅಧಿಕಾರಿಯಾಗಿದ್ದನು. ಅಹೀಲೂದನ ಮಗನಾದ ಯೆಹೋಷಾಫಾಟನು ಇತಿಹಾಸಕಾರನಾಗಿದ್ದನು. 17 ಅಹೀಟೂಬನ ಮಗನಾದ ಚಾದೋಕನೂ ಎಬ್ಯಾತಾರನ ಮಗನಾದ ಅಹೀಮೆಲೆಕನೂ ಯಾಜಕರಾಗಿದ್ದರು. ಸೆರಾಯನು ಕಾರ್ಯದರ್ಶಿಯಾಗಿದ್ದನು. 18 ಯೆಹೋಯಾದಾವನ ಮಗ ಬೆನಾಯನು ಕೆರೇತ್ಯರು ಮತ್ತು ಪೆಲೇತ್ಯರು ಎಂಬ ಕಾವಲು ದಂಡುಗಳ ಅಧಿಪತಿಯಾಗಿದ್ದನು. ದಾವೀದನ ಮಕ್ಕಳೆಲ್ಲರೂ ಮುಖ್ಯಾಧಿಕಾರಿಗಳಾಗಿದ್ದರು.[c]

ಲೂಕ 15:1-10

ಸ್ವರ್ಗದಲ್ಲಿ ಆನಂದ

(ಮತ್ತಾಯ 18:12-14)

15 ಅನೇಕ ಸುಂಕವಸೂಲಿಗಾರರು ಮತ್ತು ಪಾಪಿಗಳು ಯೇಸುವಿನ ಉಪದೇಶವನ್ನು ಕೇಳಲು ಬಂದಿದ್ದರು. ಆಗ ಫರಿಸಾಯರು ಮತ್ತು ಧರ್ಮೋಪದೇಶಕರು, “ನೋಡಿರಿ! ಈ ಮನುಷ್ಯನು (ಯೇಸು) ಪಾಪಿಗಳನ್ನು ಬರಮಾಡಿಕೊಳ್ಳುತ್ತಾನೆ; ಅವರ ಜೊತೆಯಲ್ಲಿ ಊಟಮಾಡುತ್ತಾನೆ!” ಎಂದು ದೂರು ಹೇಳತೊಡಗಿದರು.

ಆಗ ಯೇಸು ಅವರಿಗೆ ಈ ಸಾಮ್ಯವನ್ನು ಹೇಳಿದನು: “ನಿಮ್ಮಲ್ಲಿ ಒಬ್ಬನಿಗೆ ನೂರು ಕುರಿಗಳಿವೆ ಎಂದು ತಿಳಿದುಕೊಳ್ಳೋಣ. ಆ ಕುರಿಗಳಲ್ಲಿ ಒಂದು ಕಳೆದುಹೋದರೆ, ಅವನು ಉಳಿದ ತೊಂಭತ್ತೊಂಭತ್ತು ಕುರಿಗಳನ್ನು ಅಲ್ಲೇ ಬಿಟ್ಟು ಕಳೆದುಹೋದ ಒಂದು ಕುರಿಗೋಸ್ಕರ ಹುಡುಕುತ್ತಾ ಹೋಗುವನು. ಆ ಕುರಿಯು ಸಿಕ್ಕುವ ತನಕ ಅವನು ಅದಕ್ಕಾಗಿ ಹುಡುಕುತ್ತಲೇ ಇರುವನು. ಅವನು ಆ ಕುರಿಯನ್ನು ಕಂಡುಕೊಂಡಾಗ ಬಹು ಸಂತೋಷಪಡುವನು. ಅವನು ಆ ಕುರಿಯನ್ನು ತನ್ನ ಮನೆಗೆ ಹೊತ್ತುಕೊಂಡು ಹೋಗುವನು. ಅವನು ತನ್ನ ಸ್ನೇಹಿತರ ಮತ್ತು ನೆರೆಹೊರೆಯವರ ಬಳಿಗೆ ಹೋಗಿ, ‘ನನ್ನೊಡನೆ ಸಂತೋಷಪಡಿರಿ, ಕಳೆದುಹೋದ ನನ್ನ ಕುರಿ ಸಿಕ್ಕಿತು’ ಎಂದು ಹೇಳುವನು. ಅದೇ ರೀತಿಯಲ್ಲಿ, ಒಬ್ಬ ಪಾಪಿ ತನ್ನ ಹೃದಯವನ್ನು ಪರಿವರ್ತಿಸಿಕೊಂಡಾಗ ಸ್ವರ್ಗದಲ್ಲಿ ಬಹಳ ಸಂತೋಷವಾಗುತ್ತದೆ ಎಂದು ನಾನು ನಿಮಗೆ ಹೇಳುತ್ತೇನೆ. ತಮ್ಮ ಹೃದಯಗಳನ್ನು ಪರಿವರ್ತಿಸಲು ಅವಶ್ಯವಿಲ್ಲದ ತೊಂಭತ್ತೊಂಭತ್ತು ಒಳ್ಳೆಯ ಜನರಿಗಿಂತ ಆ ಒಬ್ಬ ಪಾಪಿಯ ವಿಷಯದಲ್ಲಿ ಹೆಚ್ಚು ಸಂತೋಷವಾಗುತ್ತದೆ.

“ಒಬ್ಬ ಸ್ತ್ರೀಯ ಬಳಿ ಹತ್ತು ಬೆಳ್ಳಿನಾಣ್ಯಗಳು ಇವೆಯೆಂದು ಭಾವಿಸಿಕೊಳ್ಳಿರಿ. ಆಕೆಯು ಅವುಗಳಲ್ಲಿ ಒಂದನ್ನು ಕಳೆದುಕೊಳ್ಳುತ್ತಾಳೆ. ಆಕೆ ದೀಪವನ್ನು ತಂದು ಮನೆಯನ್ನು ಗುಡಿಸುತ್ತಾಳೆ. ಆ ನಾಣ್ಯವು ಸಿಕ್ಕುವ ತನಕ ಆಕೆ ಎಚ್ಚರಿಕೆಯಿಂದ ಹುಡುಕುತ್ತಾಳೆ. ಕಳೆದುಹೋದ ಆ ನಾಣ್ಯ ಸಿಕ್ಕಿದಾಗ ಆಕೆ ತನ್ನ ಸ್ನೇಹಿತರನ್ನೂ ನೆರೆಹೊರೆಯವರನ್ನೂ ಕರೆದು, ‘ನನ್ನೊಡನೆ ಸಂತೋಷಪಡಿರಿ ಕಳೆದುಹೋಗಿದ್ದ ನನ್ನ ನಾಣ್ಯ ಸಿಕ್ಕಿತು’ ಎಂದು ಹೇಳುವಳು. 10 ಅದೇರೀತಿ ಒಬ್ಬ ಪಾಪಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳುವಾಗ ದೇವದೂತರ ಮುಂದೆ ಸಂತೋಷವಾಗುವುದು.”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International