Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
1 ಸಮುವೇಲನು 30-31

ಚಿಕ್ಲಗಿಗೆ ಅಮಾಲೇಕ್ಯರ ಆಕ್ರಮಣ

30 ಮೂರನೆಯ ದಿನ ದಾವೀದನು ಮತ್ತು ಅವನ ಜನರು ಚಿಕ್ಲಗ್ ಊರಿಗೆ ಬಂದರು. ಅಮಾಲೇಕ್ಯರು ಚಿಕ್ಲಗನ್ನು ಆಕ್ರಮಣ ಮಾಡಿರುವುದನ್ನು ಅವರು ನೋಡಿದರು. ಅಮಾಲೇಕ್ಯರು ನೆಗೆವ್ ಪ್ರದೇಶದ ಮೇಲೆ ದಾಳಿ ಮಾಡಿದರು. ಅವರು ಚಿಕ್ಲಗನ್ನು ಆಕ್ರಮಿಸಿದ್ದರು ಮತ್ತು ಆ ನಗರವನ್ನು ಸುಟ್ಟುಹಾಕಿದ್ದರು. ಅವರು ಚಿಕ್ಲಗಿನ ಸ್ತ್ರೀಯರನ್ನೂ ಚಿಕ್ಕವರನ್ನೂ ದೊಡ್ಡವರನ್ನೂ ಎಲ್ಲರನ್ನೂ ಬಂಧಿಗಳನ್ನಾಗಿ ಎಳೆದುಕೊಂಡು ಹೋಗಿದ್ದರು; ಅವರು ಯಾರನ್ನೂ ಕೊಂದಿರಲಿಲ್ಲ, ಆದರೆ ಎಲ್ಲರನ್ನೂ ಎಳೆದುಕೊಂಡು ಹೋಗಿದ್ದರು.

ದಾವೀದನು ಮತ್ತು ಅವನ ಜನರು ಚಿಕ್ಲಗಿಗೆ ಬಂದರು. ನಗರವು ಸುಡುತ್ತಿರುವುದನ್ನು ಅವರು ನೋಡಿದರು. ಅವರ ಹೆಂಡತಿಯರಾಗಲಿ ಗಂಡುಮಕ್ಕಳಾಗಲಿ ಹೆಣ್ಣುಮಕ್ಕಳಾಗಲಿ ಅಲ್ಲಿರಲಿಲ್ಲ. ಅಮಾಲೇಕ್ಯರು ಅವರನ್ನು ಎಳೆದುಕೊಂಡು ಹೋಗಿದ್ದರು. ದಾವೀದ ಮತ್ತು ಅವನ ಸೈನ್ಯದ ಇತರರು ಶಕ್ತಿಮೀರಿ ಜೋರಾಗಿ ಅತ್ತರು. ದಾವೀದನ ಇಬ್ಬರು ಹೆಂಡತಿಯರಾದ ಇಜ್ರೇಲಿನ ಅಹೀನೋವಮಳನ್ನೂ ಕರ್ಮೆಲಿನ ನಾಬಾಲನ ವಿಧವೆಯಾದ ಅಬೀಗೈಲಳನ್ನೂ ಅಮಾಲೇಕ್ಯರು ಎಳೆದುಕೊಂಡು ಹೋಗಿದ್ದರು.

ಸೈನ್ಯದಲ್ಲಿದ್ದ ಎಲ್ಲರೂ ದುಃಖತಪ್ತರಾಗಿದ್ದರು ಮತ್ತು ಕೋಪಗೊಂಡಿದ್ದರು; ಯಾಕೆಂದರೆ ಅವರ ಗಂಡು ಮತ್ತು ಹೆಣ್ಣುಮಕ್ಕಳೆಲ್ಲ ಸೆರೆಯಾಳುಗಳಾಗಿ ಒಯ್ಯಲ್ಪಟ್ಟಿದರು. ದಾವೀದನನ್ನು ಕಲ್ಲುಗಳಿಂದ ಕೊಲ್ಲಬೇಕೆಂದು ಅವರು ಮಾತಾಡಿಕೊಳ್ಳುತ್ತಿದ್ದರು. ದಾವೀದನು ಇದರಿಂದ ತಳಮಳಗೊಂಡರೂ ತನ್ನ ದೇವರಾದ ಯೆಹೋವನಲ್ಲಿ ತನ್ನನ್ನು ಬಲಪಡಿಸಿಕೊಂಡನು. ದಾವೀದನು ಯಾಜಕನಾದ ಎಬ್ಯಾತಾರನಿಗೆ, “ಏಫೋದನ್ನು ತೆಗೆದುಕೊಂಡು ಬಾ” ಎಂದನು. ಅವನು ಎಫೋದನ್ನು ತಂದನು.

ನಂತರ ದಾವೀದನು ಯೆಹೋವನಲ್ಲಿ, “ನಮ್ಮ ಕುಟುಂಬಗಳನ್ನು ಅಪಹರಿಸಿದ ಜನರನ್ನು ನಾನು ಅಟ್ಟಿಸಿಕೊಂಡು ಹೋಗಬೇಕೇ? ನಾನು ಅವರನ್ನು ಸೆರೆಹಿಡಿಯುವೆನೇ?” ಎಂದು ಪ್ರಾರ್ಥಿಸಿದನು.

ಯೆಹೋವನು, “ಅವರನ್ನು ಅಟ್ಟಿಸಿಕೊಂಡು ಹೋಗು. ಅವರನ್ನು ನೀನು ಸೆರೆಹಿಡಿಯಬಹುದು. ನಿಮ್ಮ ಕುಟುಂಬಗಳನ್ನು ನೀವು ರಕ್ಷಿಸಬಹುದು” ಎಂದು ಉತ್ತರಿಸಿದನು.

ದಾವೀದ ಮತ್ತು ಅವನ ಜನರು ಈಜಿಪ್ಟಿನ ಗುಲಾಮನನ್ನು ಕಂಡರು

9-10 ದಾವೀದನು ತನ್ನ ಆರುನೂರು ಜನರೊಂದಿಗೆ ಬೆಸೋರ್ ಹಳ್ಳಕ್ಕೆ ಹೋದನು. ಸುಮಾರು ಇನ್ನೂರು ಜನರು ಬಹಳ ಆಯಾಸಗೊಂಡು ಬಲಹೀನರಾಗಿದ್ದುದರಿಂದ ಅಲ್ಲಿಯೇ ಉಳಿದರು. ಆದ್ದರಿಂದ ದಾವೀದನು ಮತ್ತು ಅವನ ನಾನೂರು ಜನರು ಅಮಾಲೇಕ್ಯರನ್ನು ಅಟ್ಟಿಸಿಕೊಂಡು ಹೋದರು.

11 ಈಜಿಪ್ಟಿನವನೊಬ್ಬನು ಹೊಲದಲ್ಲಿ ಬಿದ್ದಿರುವುದನ್ನು ದಾವೀದನ ಜನರು ಕಂಡರು. ಅವರು ಈಜಿಪ್ಟಿನವನನ್ನು ದಾವೀದನ ಹತ್ತಿರಕ್ಕೆ ತಂದರು. ಅವರು ಈಜಿಪ್ಟಿನವನಿಗೆ ಕುಡಿಯಲು ನೀರನ್ನು ಮತ್ತು ತಿನ್ನಲು ಆಹಾರವನ್ನು ಕೊಟ್ಟರು. 12 ಅವರು ಈಜಿಪ್ಟಿನವನಿಗೆ ಅಂಜೂರದ ಹಣ್ಣಿನ ಉಂಡೆಯನ್ನೂ ಎರಡು ಗೊಂಚಲು ಒಣ ದ್ರಾಕ್ಷಿಯನ್ನೂ ಕೊಟ್ಟರು. ಅವನು ತಿಂದನಂತರ ಚೇತರಿಸಿಕೊಂಡನು. ಅವನು ಮೂರು ದಿವಸ ಹಗಲಿರುಳು ಆಹಾರವನ್ನೇನೂ ತಿಂದಿರಲಿಲ್ಲ; ನೀರನ್ನೂ ಕುಡಿದಿರಲಿಲ್ಲ.

13 ದಾವೀದನು ಈಜಿಪ್ಟಿನವನನ್ನು, “ನಿಮ್ಮ ಒಡೆಯನು ಯಾರು? ನೀನು ಬಂದಿರುವುದು ಎಲ್ಲಿಂದ?” ಎಂದು ಕೇಳಿದನು.

ಈಜಿಪ್ಟಿನವನು, “ನಾನು ಒಬ್ಬ ಈಜಿಪ್ಟಿನವನು ನಾನು ಒಬ್ಬ ಅಮಾಲೇಕ್ಯನ ಗುಲಾಮನು. ಮೂರು ದಿನಗಳ ಹಿಂದೆ ನಾನು ಅಸ್ವಸ್ಥನಾಗಿದ್ದರಿಂದ ನಮ್ಮ ಒಡೆಯನು ನನ್ನನ್ನು ಬಿಟ್ಟುಹೋದನು. 14 ಕೆರೇತ್ಯರು ವಾಸಿಸುವ ನೆಗೆವ್ ಮೇಲೆ ನಾವು ಆಕ್ರಮಣ ಮಾಡಿದೆವು. ನಾವು ಯೆಹೂದ ದೇಶದ ಮೇಲೆ ಮತ್ತು ಕಾಲೇಬ್ಯರು ವಾಸಿಸುವ ನೆಗೆವ್ ಪ್ರಾಂತ್ಯಗಳ ಮೇಲೆ ಆಕ್ರಮಣ ಮಾಡಿದೆವು. ನಾವು ಚಿಕ್ಲಗನ್ನು ಸುಟ್ಟುಹಾಕಿದೆವು” ಎಂದು ಹೇಳಿದನು.

15 ದಾವೀದನು ಈಜಿಪ್ಟಿನವನನ್ನು, “ನಮ್ಮ ಕುಟುಂಬಗಳನ್ನು ಅಪಹರಿಸಿರುವ ಜನರ ಹತ್ತಿರಕ್ಕೆ ನಮ್ಮನ್ನು ಕರೆದುಕೊಂಡು ಹೋಗುವೆಯಾ?” ಎಂದು ಕೇಳಿದನು.

ಈಜಿಪ್ಟಿನವನು, “ನೀವು ನನ್ನನ್ನು ಕೊಲ್ಲುವುದಿಲ್ಲವೆಂದು ಇಲ್ಲವೆ ನನ್ನ ಒಡೆಯನಿಗೆ ಮರಳಿ ಒಪ್ಪಿಸುವುದಿಲ್ಲವೆಂದು ದೇವರ ಮುಂದೆ ಪ್ರಮಾಣ ಮಾಡಿರಿ. ಆಗ ನಾನು ನಿಮ್ಮವರನ್ನು ಕಂಡು ಹಿಡಿಯಲು ಸಹಾಯ ಮಾಡುತ್ತೇನೆ” ಎಂದು ಹೇಳಿದನು.

ದಾವೀದನು ಅಮಾಲೇಕ್ಯರನ್ನು ಸೋಲಿಸುವನು

16 ಈಜಿಪ್ಟಿನವನು ದಾವೀದನನ್ನು ಅಮಾಲೇಕ್ಯರ ಬಳಿಗೆ ಕರೆದುಕೊಂಡು ಹೋದನು. ಅವರು ತಿನ್ನುತ್ತಾ ಕುಡಿಯುತ್ತಾ ಸುತ್ತುವರಿದು ನೆಲದ ಮೇಲೆ ಬಿದ್ದಿದ್ದರು. ಫಿಲಿಷ್ಟಿಯರ ಮತ್ತು ಯೆಹೂದ್ಯರ ದೇಶದಿಂದ ಸೂರೆಮಾಡಿದ ವಸ್ತುಗಳಿಂದ ಸಂಭ್ರಮವನ್ನು ಆಚರಿಸುತ್ತಿದ್ದರು. 17 ದಾವೀದನು ಅವರನ್ನು ಸೋಲಿಸಿ ಅವರನ್ನು ಕೊಂದನು. ಅವರು ಹೊತ್ತಾರೆಯಿಂದ ಮಾರನೆಯ ದಿನದ ಸಂಜೆಯವರೆಗೆ ಹೋರಾಡಿದರು. ನಾನೂರು ಮಂದಿ ಯುವಕರು ತಮ್ಮ ಒಂಟೆಗಳ ಮೇಲೇರಿ ಓಡಿಹೋದದ್ದನ್ನು ಬಿಟ್ಟರೆ, ಉಳಿದ ಅಮಾಲೇಕ್ಯರಲ್ಲಿ ಯಾರೂ ತಪ್ಪಿಸಿಕೊಳ್ಳಲಾಗಲಿಲ್ಲ.

18 ದಾವೀದನು ತನ್ನ ಇಬ್ಬರು ಹೆಂಡತಿಯರನ್ನು ಮರಳಿ ಪಡೆದನು. ಅಮಾಲೇಕ್ಯರು ಸೂರೆಮಾಡಿದ್ದೆಲ್ಲವನ್ನೂ ದಾವೀದನು ಮತ್ತೆ ಹಿಂದಕ್ಕೆ ಪಡೆದನು. 19 ಏನೂ ಕಳೆದು ಹೋಗಿರಲಿಲ್ಲ. ಅವರು ತಮ್ಮ ಎಲ್ಲ ಮಕ್ಕಳನ್ನೂ ಮುದುಕರನ್ನೂ ಅವರ ಗಂಡುಹೆಣ್ಣು ಮಕ್ಕಳನ್ನೂ ಮತ್ತೆ ಪಡೆದುಕೊಂಡರು. ಅವರು ತಮ್ಮ ಬೆಲೆಬಾಳುವ ವಸ್ತುಗಳನ್ನೂ ಅಮಾಲೇಕ್ಯರು ತೆಗೆದುಕೊಂಡು ಹೋಗಿದ್ದ ಎಲ್ಲವನ್ನೂ ಮತ್ತೆ ಪಡೆದುಕೊಂಡರು. ಹೀಗೆ ದಾವೀದನು ಎಲ್ಲವನ್ನೂ ತೆಗೆದುಕೊಂಡು ಬಂದನು. 20 ದಾವೀದನು ಎಲ್ಲ ಕುರಿಗಳನ್ನು ಮತ್ತು ದನಗಳನ್ನು ತೆಗೆದುಕೊಂಡನು. ಈ ಪಶುಗಳು ಮುಂದೆ ಹೋಗುವಂತೆ ದಾವೀದನ ಜನರು ಮಾಡಿದರು. ದಾವೀದನ ಜನರು, “ಅವು ದಾವೀದನ ಕೊಡುಗೆಗಳು” ಎಂದು ಹೇಳಿದರು.

ಎಲ್ಲರೂ ಸಮಾನವಾಗಿ ಹಂಚಿಕೊಂಡರು

21 ದಾವೀದನು ತನ್ನ ಇನ್ನೂರು ಮಂದಿ ಉಳಿದುಕೊಂಡಿದ್ದ ಬೆಸೋರ್ ಹಳ್ಳಕ್ಕೆ ಬಂದನು. ತಮ್ಮ ಅತಿಯಾದ ಆಯಾಸದಿಂದಲೂ ಬಲಹೀನತೆಯಿಂದಲೂ ದಾವೀದನನ್ನು ಹಿಂಬಾಲಿಸಲಾಗದ ಜನರೇ ಇವರು. ದಾವೀದನನ್ನು ಮತ್ತು ಅವನೊಡನೆ ಹೋಗಿದ್ದ ಸೈನಿಕರನ್ನು ಸಂಧಿಸಲು ಇವರು ಹೊರಗೆ ಬಂದರು. ದಾವೀದ ಮತ್ತು ಅವನ ಸೈನ್ಯವು ಸಮೀಪಿಸಿದಾಗ, ಬೆಸೋರ್ ಹಳ್ಳದಲ್ಲಿದ್ದ ಜನರು ಅವರನ್ನು ವಂದಿಸಿದರು. ದಾವೀದನು ಸಹ ಅವರನ್ನು ಸಂಧಿಸಿ ಅವರ ಯೋಗಕ್ಷೇಮವನ್ನು ವಿಚಾರಿಸಿದನು. 22 ಆದರೆ ದಾವೀದನ ಜೊತೆಯಲ್ಲಿ ಹೋಗಿದ್ದ ಜನರ ಗುಂಪಿನಲ್ಲಿ ಕೆಟ್ಟ ಜನರೂ ಕಿಡಿಗೇಡಿಗಳೂ ಇದ್ದರು. ಆ ಕೀಡಿಗೇಡಿಗಳು, “ಈ ಇನ್ನೂರು ಜನರು ನಮ್ಮೊಡನೆ ಬರಲಿಲ್ಲ. ಆದ್ದರಿಂದ ನಾವು ವಶಪಡಿಸಿಕೊಂಡ ವಸ್ತುಗಳಲ್ಲಿ ಯಾವುದನ್ನೂ ಇವರಿಗೆ ಕೊಡುವುದಿಲ್ಲ. ಇವರು ತಮ್ಮ ಹೆಂಡತಿಯರನ್ನು ಮತ್ತು ಮಕ್ಕಳನ್ನು ಮಾತ್ರ ತೆಗೆದುಕೊಳ್ಳಬಹುದು” ಎಂದು ಹೇಳಿದರು.

23 ದಾವೀದನು, “ನನ್ನ ಸಹೋದರರೇ, ಆ ರೀತಿ ಮಾಡಬೇಡಿ! ಯೆಹೋವನು ನಮಗೆ ದಯಪಾಲಿಸಿರುವುದನ್ನು ಕುರಿತು ಯೋಚಿಸಿ! ನಮ್ಮ ಮೇಲೆ ಧಾಳಿಮಾಡಿದ ಶತ್ರುಗಳನ್ನು ಸೋಲಿಸಲು ಯೆಹೋವನು ನಮ್ಮನ್ನು ನೇಮಿಸಿದನು. 24 ನೀವು ಹೇಳುವುದನ್ನು ಯಾರೂ ಕೇಳುವುದಿಲ್ಲ! ಯುದ್ಧಮಾಡುವವನಿಗೆ ಸಿಗುವ ಪಾಲು ಮತ್ತು ಯುದ್ಧ ಸಾಮಾಗ್ರಿಗಳನ್ನು ಕಾಯುವವನಿಗೆ ಸಿಗುವ ಪಾಲು ಒಂದೇ ಸಮನಾಗಿರಬೇಕು. ಪ್ರತಿಯೊಬ್ಬರ ಪಾಲೂ ಒಂದೇ ಸಮವಾಗಿರಬೇಕು” ಎಂದು ಉತ್ತರಿಸಿದನು. 25 ಇಸ್ರೇಲಿಗೆ ದಾವೀದನು ಇದನ್ನು ಆಜ್ಞೆಯನ್ನಾಗಿ ಮತ್ತು ನಿಯಮವನ್ನಾಗಿ ಮಾಡಿದನು. ಈ ನಿಯಮವು ಇವತ್ತಿಗೂ ಮುಂದುವರಿಯುತ್ತಿದೆ.

26 ದಾವೀದನು ಚಿಕ್ಲಗಿಗೆ ಆಗಮಿಸಿದನು. ನಂತರ ಅವನು ಅಮಾಲೇಕ್ಯರಿಂದ ವಶಪಡಿಸಿಕೊಂಡಿದ್ದ ಕೆಲವು ವಸ್ತುಗಳನ್ನು ಯೆಹೂದದ ಅವನ ಗೆಳೆಯರಿಗೂ ನಾಯಕರಿಗೂ ಕಳುಹಿಸಿದನು. ದಾವೀದನು, “ಯೆಹೋವನ ಶತ್ರುಗಳಿಂದ ನಾವು ವಶಪಡಿಸಿಕೊಂಡ ವಸ್ತುಗಳ ಕೊಡುಗೆಯು ನಿಮಗಾಗಿ ಇಲ್ಲಿದೆ” ಎಂದು ಹೇಳಿದನು.

27 ದಾವೀದನು ಅಮಾಲೇಕ್ಯರಿಂದ ವಶಪಡಿಸಿಕೊಂಡ ಕೆಲವು ವಸ್ತುಗಳನ್ನು ಬೇತೇಲಿನವರಿಗೆ, ನೆಗೆವಿನ ರಾಮೋತಿನವರಿಗೆ, ಯತ್ತೀರಿನವರಿಗೆ, 28 ಅರೋಯೇರಿನವರಿಗೆ, ಸಿಪ್ಮೋತಿನವರಿಗೆ, ಎಷ್ಟೆಮೋವದವರಿಗೆ, 29 ರಾಕಾಲಿನವರಿಗೆ, ಎರಹ್ಮೇಲ್ಯರ ಮತ್ತು ಕೇನ್ಯರ ಪಟ್ಟಣಗಳಿಗೆ, 30 ಹೊರ್ಮದವರಿಗೆ, ಬೋರಾಷಾನಿನವರಿಗೆ, ಅತಾಕಿನವರಿಗೆ 31 ಮತ್ತು ಹೆಬ್ರೋನಿನವರಿಗೆ ಕಳುಹಿಸಿಕೊಟ್ಟನು ಮತ್ತು ತನ್ನ ಜನರು ಹೋಗಿದ್ದ ಇತರ ಸ್ಥಳಗಳ ನಾಯಕರಿಗೂ ಆ ವಸ್ತುಗಳಲ್ಲಿ ಕೆಲವನ್ನು ಕಳುಹಿಸಿದನು.

ಸೌಲನ ಮರಣ

31 ಫಿಲಿಷ್ಟಿಯರು ಇಸ್ರೇಲರ ವಿರುದ್ಧ ಹೋರಾಡಿದರು. ಇಸ್ರೇಲರು ಫಿಲಿಷ್ಟಿಯರಿಂದ ಸೋತು ಓಡಿಹೋದರು. ಬಹಳ ಜನ ಇಸ್ರೇಲರು ಗಿಲ್ಬೋವ ಶಿಖರದಲ್ಲಿ ಹತರಾದರು. ಫಿಲಿಷ್ಟಿಯರು ಸೌಲ ಮತ್ತು ಅವನ ಮಕ್ಕಳೊಂದಿಗೆ ಭೀಕರವಾಗಿ ಹೋರಾಡಿದರು. ಸೌಲನ ಮಕ್ಕಳಾದ ಯೋನಾತಾನ, ಅಬೀನಾದಾಬ ಮತ್ತು ಮಲ್ಕೀಷೂವ ಎಂಬವರನ್ನು ಫಿಲಿಷ್ಟಿಯರು ಕೊಂದರು.

ಸೌಲನ ವಿರುದ್ಧವಾದ ಈ ಯುದ್ಧವು ಬಹಳ ಘೋರವಾಗಿತ್ತು. ಬಿಲ್ಲುಗಾರರು ಸೌಲನ ಮೇಲೆ ಬಾಣಗಳನ್ನು ಬಿಟ್ಟಿದ್ದರಿಂದ ಸೌಲನು ಬಹಳವಾಗಿ ಗಾಯಗೊಂಡನು. ಸೌಲನು ತನ್ನ ಅಯುಧವಾಹಕನಿಗೆ, “ನಿನ್ನ ಖಡ್ಗದಿಂದ ಇರಿದು ನನ್ನನ್ನು ಕೊಂದುಬಿಡು. ಆಗ, ಈ ಪರದೇಶೀಯರು ನನ್ನನ್ನು ಗಾಯಗೊಳಿಸುವುದಕ್ಕಾಗಲಿ ಅಪಹಾಸ್ಯ ಮಾಡುವುದಕ್ಕಾಗಲಿ ಸಾಧ್ಯವಾಗುವುದಿಲ್ಲ” ಎಂದನು. ಆದರೆ ಸೌಲನ ಆಯುಧವಾಹಕನು ನಿರಾಕರಿಸಿದನು. ಸೌಲನ ಸಹಾಯಕನು ಬಹಳ ಭಯಗೊಂಡಿದ್ದನು. ಆದ್ದರಿಂದ ಸೌಲನು ತನ್ನ ಸ್ವಂತ ಖಡ್ಗದಿಂದಲೇ ಇರಿದು ಆತ್ಮಹತ್ಯೆ ಮಾಡಿಕೊಂಡನು.

ಸೌಲನು ಸತ್ತುಹೋದದ್ದನ್ನು ಕಂಡ ಆಯುಧವಾಹಕನೂ ತನ್ನ ಖಡ್ಗದಿಂದ ತಾನೂ ಆತ್ಮಹತ್ಯೆ ಮಾಡಿಕೊಂಡನು. ಅವನು ಸೌಲನೊಂದಿಗೆ ಅಲ್ಲಿಯೇ ಸತ್ತುಹೋದನು. ಹೀಗೆ ಸೌಲನು ಮತ್ತು ಅವನ ಮೂವರು ಗಂಡುಮಕ್ಕಳೂ ಮತ್ತು ಸೌಲನ ಆಯುಧವಾಹಕನೂ ಅದೇ ದಿನ ಸತ್ತುಹೋದರು.

ಸೌಲನ ದೇಹವು ಫಿಲಿಷ್ಟಿಯರಿಗೆ ಸಿಕ್ಕಿತು

ಇಸ್ರೇಲರ ಸೈನ್ಯವು ಓಡಿಹೋಗುತ್ತಿರುವುದನ್ನು ಕಣಿವೆಯ ಮತ್ತೊಂದು ಪಕ್ಕದಲ್ಲಿ ವಾಸಮಾಡುತ್ತಿದ್ದ ಇಸ್ರೇಲರು ನೋಡಿದರು. ಸೌಲನು ಮತ್ತು ಅವನ ಮಕ್ಕಳು ಸತ್ತದ್ದನ್ನೂ ಅವರು ನೋಡಿದರು. ಆದ್ದರಿಂದ ಆ ಇಸ್ರೇಲರು ತಮ್ಮ ನಗರಗಳನ್ನು ಬಿಟ್ಟು ಓಡಿಹೋದರು. ನಂತರ ಫಿಲಿಷ್ಟಿಯರು ಬಂದು ಆ ನಗರಗಳನ್ನು ವಶಪಡಿಸಿಕೊಂಡು ನೆಲೆಸಿದರು.

ಮಾರನೆಯ ದಿನ, ಸತ್ತದೇಹಗಳಿಂದ ವಸ್ತುಗಳನ್ನು ದೋಚಲು ಫಿಲಿಷ್ಟಿಯರು ಬಂದರು. ಸೌಲನು ಮತ್ತು ಅವನ ಮೂರು ಜನ ಮಕ್ಕಳು ಗಿಲ್ಬೋವ ಶಿಖರದಲ್ಲಿ ಸತ್ತಿರುವುದನ್ನು ಅವರು ನೋಡಿದರು. ಸೌಲನ ತಲೆಯನ್ನು ಫಿಲಿಷ್ಟಿಯರು ಕಡಿದುಹಾಕಿದರು. ಮತ್ತು ಅವನ ಆಯುಧಗಳನ್ನು ತೆಗೆದುಕೊಂಡರು. ಫಿಲಿಷ್ಟಿಯ ಜನರಿಗೆ ಮತ್ತು ಅವರ ವಿಗ್ರಹಗಳ ಗುಡಿಗೆ ಈ ವಿಜಯದ ವಾರ್ತೆಯನ್ನು ಕಳುಹಿಸಿದರು. 10 ಅಷ್ಟೋರೆತಳ ದೇವಾಲಯದಲ್ಲಿ ಅವರು ಸೌಲನ ಆಯುಧಗಳನ್ನು ಇಟ್ಟರು. ಫಿಲಿಷ್ಟಿಯರು ಸೌಲನ ದೇಹವನ್ನು ಬೇತ್‌ಷೆಯಾನಿನ ಗೋಡೆಗೆ ನೇತುಹಾಕಿದರು.

11 ಫಿಲಿಷ್ಟಿಯರು ಸೌಲನಿಗೆ ಏನೇನು ಮಾಡಿದರೆಂಬುದನ್ನು ಯಾಬೆಷ್‌ಗಿಲ್ಯಾದಿನಲ್ಲಿ ವಾಸಿಸುತ್ತಿದ್ದ ಜನರೆಲ್ಲ ತಿಳಿದುಕೊಂಡರು. 12 ಆದ್ದರಿಂದ ಯಾಬೆಷಿನ ಸೈನಿಕರೆಲ್ಲ ಬೇತ್‌ಷೆಯಾನಿಗೆ ಹೋದರು. ಅವರು ರಾತ್ರಿಯೆಲ್ಲಾ ನಡೆದರು! ನಂತರ ಅವರು ಬೇತ್‌ಷೆಯಾನಿನ ಗೋಡೆಯಲ್ಲಿದ್ದ ಸೌಲನ ದೇಹವನ್ನು ಇಳಿಸಿದರು. ನಂತರ ಅವರು ಸೌಲನ ಗಂಡುಮಕ್ಕಳ ದೇಹಗಳನ್ನೂ ಇಳಿಸಿದರು. ನಂತರ ಅವರು ಆ ದೇಹಗಳನ್ನು ಯಾಬೇಷಿಗೆ ತೆಗೆದುಕೊಂಡು ಹೋದರು. ಸೌಲ ಮತ್ತು ಅವನ ಮೂವರು ಗಂಡುಮಕ್ಕಳ ದೇಹಗಳನ್ನು ಯಾಬೇಷಿನ ಜನರು ಅಲ್ಲಿ ದಹಿಸಿಬಿಟ್ಟರು. 13 ನಂತರ ಈ ಜನರು ಸೌಲ ಮತ್ತು ಅವನ ಮೂರು ಮಕ್ಕಳ ಮೂಳೆಗಳನ್ನು ತೆಗೆದುಕೊಂಡು, ಅವುಗಳನ್ನು ಯಾಬೇಷಿನ ಪಿಚುಲ ಮರದ ಕೆಳಗೆ ಸಮಾಧಿಮಾಡಿದರು. ನಂತರ ಯಾಬೇಷಿನ ಜನರು ದುಃಖದಿಂದ ಏಳು ದಿನಗಳ ಕಾಲ ಉಪವಾಸ ಮಾಡಿದರು.[a]

ಲೂಕ 13:23-35

23 ಯಾರೋ ಒಬ್ಬನು ಯೇಸುವಿಗೆ, “ಸ್ವಾಮೀ, ಎಷ್ಟು ಜನರು ರಕ್ಷಿಸಲ್ಪಡುವರು? ಕೇವಲ ಸ್ವಲ್ಪ ಜನರೋ?” ಎಂದು ಕೇಳಿದನು.

ಅದಕ್ಕೆ ಯೇಸು, 24 “ಸ್ವರ್ಗಕ್ಕೆ ನಡೆಸುವ ಕಿರಿದಾದ ಬಾಗಿಲಿನ ಮೂಲಕ ಹೋಗಲು ಪ್ರಯಾಸಪಡಿರಿ! ಅನೇಕ ಜನರು ಅದರ ಮೂಲಕ ಹೋಗಲು ಪ್ರಯತ್ನಿಸುತ್ತಾರೆ. ಆದರೆ ಅವರಿಂದ ಆಗುವುದಿಲ್ಲ. 25 ಮನೆಯ ಯಜಮಾನನು ಎದ್ದು ಬಾಗಿಲನ್ನು ಮುಚ್ಚಿದ ಮೇಲೆ ನೀವು ಹೊರಗೆ ನಿಂತುಕೊಂಡು ಬಾಗಿಲು ತಟ್ಟಬೇಕಷ್ಟೇ, ಆದರೂ ಅವನು ತೆರೆಯುವುದಿಲ್ಲ. ‘ಸ್ವಾಮೀ, ನಮಗೆ ಬಾಗಿಲು ತೆರೆ!’ ಎಂದು ನೀವು ಕೇಳುವಿರಿ. ಅವನು ನಿಮಗೆ, ‘ನೀವು ಯಾರೋ ನನಗೆ ತಿಳಿಯದು. ನೀವು ಎಲ್ಲಿಯವರು?’ ಎಂದು ಉತ್ತರಿಸುವನು. 26 ಆಗ ನೀವು, ‘ನಾವು ನಿನ್ನೊಡನೆ ಊಟಮಾಡಿದೆವು, ಪಾನಮಾಡಿದೆವು. ನೀನು ನಮ್ಮ ಬೀದಿಗಳಲ್ಲಿ ನಮಗೆ ಉಪದೇಶಿಸಿದೆ’ ಎಂದು ಹೇಳುವಿರಿ. 27 ಆಗ ಅವನು ನಿಮಗೆ, ‘ನೀವು ಯಾರೋ ನನಗೆ ಗೊತ್ತಿಲ್ಲ! ನೀವು ಎಲ್ಲಿಯವರು? ಇಲ್ಲಿಂದ ಹೊರಟುಹೋಗಿ! ನೀವೆಲ್ಲರೂ ಪಾಪಕೃತ್ಯಗಳನ್ನು ಮಾಡುವ ಜನರು!’ ಎಂದು ನಿಮಗೆ ಹೇಳುವನು.

28 “ಅಬ್ರಹಾಮ, ಇಸಾಕ, ಯಾಕೋಬ ಮತ್ತು ಎಲ್ಲಾ ಪ್ರವಾದಿಗಳು ದೇವರ ರಾಜ್ಯದಲ್ಲಿರುವುದನ್ನು ನೀವು ನೋಡುವಿರಿ. ಆದರೆ ನಿಮ್ಮನ್ನು ಹೊರಗೆ ಹಾಕಲಾಗುವುದು. ಆಗ ನೀವು ಭಯದಿಂದಲೂ ಕೋಪದಿಂದಲೂ ಕೂಗಿಕೊಳ್ಳುವಿರಿ. 29 ಜನರು ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣದಿಕ್ಕುಗಳಿಂದ ಬರುವರು. ಅವರು ದೇವರ ರಾಜ್ಯದಲ್ಲಿ ಊಟಕ್ಕೆ ಕುಳಿತುಕೊಳ್ಳುವರು. 30 ಇಗೋ, ಕಡೆಯವರಾಗಿರುವ ಕೆಲವರು ಮೊದಲಿನವರಾಗುವರು, ಮೊದಲಿನವರಾಗಿರುವ ಕೆಲವರು ಕಡೆಯವರಾಗುವರು.”

ಜೆರುಸಲೇಮಿನಲ್ಲಿ ಯೇಸುವಿನ ಮರಣ

(ಮತ್ತಾಯ 23:37-39)

31 ಆ ಸಮಯದಲ್ಲಿ ಕೆಲವು ಫರಿಸಾಯರು ಯೇಸುವಿನ ಬಳಿಗೆ ಬಂದು, “ಇಲ್ಲಿಂದ ಹೋಗಿ ಅಡಗಿಕೊ! ಹೆರೋದನು ನಿನ್ನನ್ನು ಕೊಲ್ಲಬೇಕೆಂದಿದ್ದಾನೆ!” ಎಂದು ಹೇಳಿದರು.

32 ಯೇಸು ಅವರಿಗೆ, “ನೀವು ಹೋಗಿ ಆ ನರಿಗೆ (ಹೆರೋದನಿಗೆ), ‘ಈ ದಿನ ಮತ್ತು ನಾಳೆ ನಾನು ಜನರನ್ನು ದೆವ್ವಗಳಿಂದ ಬಿಡಿಸುತ್ತೇನೆ ಮತ್ತು ರೋಗಿಗಳನ್ನು ಗುಣಪಡಿಸುವ ಕಾರ್ಯವನ್ನು ಪೂರ್ಣಗೊಳಿಸುತ್ತೇನೆ. ನಾಳಿದ್ದು, ನನ್ನ ಕಾರ್ಯವೆಲ್ಲಾ ಸಂಪೂರ್ಣ ಮುಕ್ತಾಯವಾಗುವುದು’ ಎಂದು ಹೇಳಿರಿ. 33 ಅನಂತರ ನಾನು ಜೆರುಸಲೇಮಿಗೆ ಹೋಗಬೇಕು. ಏಕೆಂದರೆ ಪ್ರವಾದಿಗಳು ಅಲ್ಲೇ ಕೊಲ್ಲಲ್ಪಡತಕ್ಕದ್ದು.

34 “ಜೆರುಸಲೇಮೇ, ಜೆರುಸಲೇಮೇ! ನೀನು ಪ್ರವಾದಿಗಳನ್ನು ಕೊಲ್ಲುವವಳು. ದೇವರು ನಿನ್ನ ಬಳಿಗೆ ಕಳುಹಿಸಿದ ಜನರನ್ನು ನೀನು ಕಲ್ಲೆಸೆದು ಕೊಲ್ಲುವೆ. ಕೋಳಿ ತನ್ನ ಮರಿಗಳನ್ನು ತನ್ನ ರೆಕ್ಕೆಗಳ ಕೆಳಗೆ ಕೂಡಿಸಿಕೊಳ್ಳುವಂತೆ ನಾನು ನಿನ್ನ ಜನರಿಗೆ ಸಹಾಯ ಮಾಡಲು ಎಷ್ಟೋ ಸಲ ಅಪೇಕ್ಷಿಸಿದೆ. ಆದರೆ ನೀನು ನನಗೆ ಆಸ್ಪದವನ್ನು ಕೊಡಲಿಲ್ಲ. 35 ನಿನ್ನ ಆಲಯವು ಬರಿದಾಗುವುದು. ‘ಪ್ರಭುವಿನ ಹೆಸರಿನಲ್ಲಿ ಬರುವಾತನಿಗೆ ಆಶೀರ್ವಾದ!’(A) ಎಂದು ಹೇಳುವ ಸಮಯದ ತನಕ ನೀನು ನನ್ನನ್ನು ನೋಡುವುದೇ ಇಲ್ಲವೆಂದು ನಾನು ನಿನಗೆ ಹೇಳುತ್ತೇನೆ” ಎಂದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International