Old/New Testament
ದಾವೀದನು ಫಿಲಿಷ್ಟಿಯರ ಜೊತೆಯಲ್ಲಿ ವಾಸಿಸುವನು
27 ಆದರೆ ದಾವೀದನು, “ಸೌಲನು ಎಂದಾದರೂ ಒಂದು ದಿನ ನನ್ನನ್ನು ಹಿಡಿದುಕೊಳ್ಳುವನು. ಈಗ ಫಿಲಿಷ್ಟಿಯರ ರಾಜ್ಯಕ್ಕೆ ತಪ್ಪಿಸಿಕೊಂಡು ಹೋಗುವುದೇ ನಾನು ಮಾಡಬಹುದಾದ ಒಳ್ಳೆಯ ಕೆಲಸ. ಆಗ ಸೌಲನು ಇಸ್ರೇಲಿನಲ್ಲಿ ನನ್ನನ್ನು ಹುಡುಕುವುದನ್ನು ಬಿಟ್ಟುಬಿಡುತ್ತಾನೆ. ಸೌಲನಿಂದ ತಪ್ಪಿಸಿಕೊಳ್ಳಲು ಇದೇ ಸರಿಯಾದ ಮಾರ್ಗ” ಎಂದು ತನ್ನಲ್ಲೇ ಯೋಚಿಸಿದನು.
2 ಆದ್ದರಿಂದ ದಾವೀದನು ತನ್ನ ಆರುನೂರು ಜನರೊಡನೆ ಇಸ್ರೇಲನ್ನು ಬಿಟ್ಟುಹೋದನು. ಅವನು ಮಾವೋಕನ ಮಗನಾದ ಆಕೀಷನಲ್ಲಿಗೆ ಹೋದನು. ಆಕೀಷನು ಗತ್ನ ರಾಜ. 3 ದಾವೀದನೂ ಅವನ ಜನರೂ ಅವರ ಕುಟುಂಬಗಳವರೂ ಆಕೀಷನೊಂದಿಗೆ ಗತ್ನಲ್ಲಿ ನೆಲೆಸಿದರು. ದಾವೀದನ ಜೊತೆಯಲ್ಲಿ ಅವನ ಇಬ್ಬರು ಹೆಂಡತಿಯರೂ ಇದ್ದರು. ಅವರು ಯಾರೆಂದರೆ, ಇಜ್ರೇಲ್ಯಳಾದ ಅಹೀನೋವಮಳು ಮತ್ತು ಕರ್ಮೆಲಿನ ಅಬೀಗೈಲಳು. ಅಬೀಗೈಲಳು ನಾಬಾಲನ ವಿಧವೆ. 4 ದಾವೀದನು ಗತ್ಗೆ ಓಡಿಹೋದನೆಂದು ಜನರು ಸೌಲನಿಗೆ ತಿಳಿಸಿದರು. ಸೌಲನು ಅವನನ್ನು ಹುಡುಕುವುದನ್ನು ಬಿಟ್ಟುಬಿಟ್ಟನು.
5 ದಾವೀದನು ಆಕೀಷನಿಗೆ, “ನೀನು ನನ್ನನ್ನು ಮೆಚ್ಚಿಕೊಂಡಿದ್ದರೆ ಯಾವುದಾದರೊಂದು ಊರಲ್ಲ್ಲಿ ನನಗೆ ಸ್ಥಳವನ್ನು ಕೊಡು. ನಾನು ನಿನ್ನ ಸೇವಕನಷ್ಟೆ. ನಾನು ನಿನ್ನೊಡನೆ ಈ ರಾಜಧಾನಿಯಲ್ಲಿ ಇರುವುದಕ್ಕಿಂತ ಅಲ್ಲಿ ವಾಸಮಾಡುತ್ತೇನೆ” ಎಂದು ಹೇಳಿದನು.
6 ಆಕೀಷನು ಕೂಡಲೆ ದಾವೀದನಿಗೆ ಚಿಕ್ಲಗ್ ಎಂಬ ಊರನ್ನು ಕೊಟ್ಟನು. ಅಂದಿನಿಂದಲೂ ಚಿಕ್ಲಗ್ ಊರು ಯೆಹೂದದ ರಾಜನಿಗೆ ಸೇರಿರುತ್ತದೆ. 7 ದಾವೀದನು ಫಿಲಿಷ್ಟಿಯರೊಂದಿಗೆ ಒಂದು ವರ್ಷ ನಾಲ್ಕು ತಿಂಗಳು ವಾಸಮಾಡಿದನು.
ದಾವೀದನು ರಾಜನಾದ ಆಕೀಷನನ್ನು ಮೋಸಗೊಳಿಸುವನು
8 ದಾವೀದನು ಮತ್ತು ಅವನ ಜನರು ಅಮಾಲೇಕ್ಯರ ಮೇಲೆಯೂ ಗೆಷೂರ್ಯರ ಮೇಲೆಯೂ ಗಿಜ್ರೀಯರ ಮೇಲೆಯೂ ಯುದ್ಧಮಾಡಲು ಹೋದರು. ದಾವೀದನ ಜನರು ಅವರನ್ನು ಸೋಲಿಸಿ ಅವರ ಸಂಪತ್ತನ್ನು ವಶಪಡಿಸಿಕೊಂಡರು. ಈಜಿಪ್ಟಿನವರೆಗೆ ವಿಸ್ತರಿಸಿರುವ ಶೂರಿನ ಸಮೀಪದ ತೇಲಾಮಿನವರೆಗೂ ಆ ಜನರು ವಾಸಿಸುತ್ತಿದ್ದರು. 9 ದಾವೀದನು ಆ ಪ್ರದೇಶದ ಜನರೊಂದಿಗೆ ಯುದ್ಧಮಾಡಿ ಯಾರನ್ನೂ ಜೀವಸಹಿತ ಬಿಡಲಿಲ್ಲ. ಅವರಿಗೆ ಸೇರಿದ ಕುರಿಗಳನ್ನು ದನಗಳನ್ನು, ಹೇಸರಕತ್ತೆಗಳನ್ನು, ಒಂಟೆಗಳನ್ನು ಮತ್ತು ಬಟ್ಟೆಗಳನ್ನು ದಾವೀದನು ವಶಪಡಿಸಿಕೊಂಡನು. ನಂತರ ಅವುಗಳನ್ನು ಆಕೀಷನ ಬಳಿಗೆ ತಂದನು.
10 ದಾವೀದನು ಅನೇಕ ಸಲ ಹೀಗೆ ಮಾಡಿದನು. ಪ್ರತಿಸಲವೂ ಆಕೀಷನು ದಾವೀದನನ್ನು, “ನೀನು ಎಲ್ಲಿ ಯುದ್ಧಮಾಡಿದೆ ಮತ್ತು ಇವುಗಳನ್ನು ಎಲ್ಲಿಂದ ತಂದೆ” ಎಂದು ಕೇಳುತ್ತಿದ್ದನು. ದಾವೀದನು, “ನಾನು ಯೆಹೂದ ದೇಶದ ದಕ್ಷಿಣ ಭಾಗದ ವಿರುದ್ಧ ಯುದ್ಧಮಾಡಿದೆ” ಎಂದಾಗಲಿ, “ನಾನು ಎರಹ್ಮೇಲ್ಯರ ದಕ್ಷಿಣಭಾಗದ ವಿರುದ್ಧ ಯುದ್ಧಮಾಡಿದೆ” ಎಂದಾಗಲೀ “ನಾನು ಕೇನ್ಯರ ದಕ್ಷಿಣ ಭಾಗದ ವಿರುದ್ಧ ಯುದ್ಧಮಾಡಿದೆ” ಎಂದಾಗಲೀ ಹೇಳುತ್ತಿದ್ದನು. 11 ದಾವೀದನು ಒಬ್ಬ ಗಂಡಸನ್ನಾಗಲಿ ಹೆಂಗಸನ್ನಾಗಲಿ ಗತ್ ಊರಿಗೆ ಜೀವಸಹಿತ ಎಂದೂ ತರಲಿಲ್ಲ. ದಾವೀದನು, “ನಾವು ಒಬ್ಬ ಮನುಷ್ಯನನ್ನು ಜೀವಸಹಿತ ಬಿಟ್ಟರೆ, ನಾನು ನಿಜವಾಗಿ ಮಾಡುತ್ತಿರುವುದನ್ನು ಅವನು ಆಕೀಷನಿಗೆ ತಿಳಿಸಬಹುದು” ಎಂದು ಯೋಚಿಸಿದನು.
ದಾವೀದನು ಫಿಲಿಷ್ಟಿಯರ ದೇಶದಲ್ಲಿ ವಾಸವಾಗಿದ್ದ ಕಾಲದಲ್ಲೆಲ್ಲಾ ಹೀಗೆಯೇ ಮಾಡುತ್ತಿದ್ದನು. 12 ಆಕೀಷನು ದಾವೀದನಲ್ಲಿ ಭರವಸೆ ಇಡತೊಡಗಿದನು. ಆಕೀಷನು ತನ್ನೊಳಗೆ, “ಈಗ ದಾವೀದನ ಸ್ವಂತ ಜನರೇ ಅವನನ್ನು ದ್ವೇಷಿಸುವರು. ಇಸ್ರೇಲರು ದಾವೀದನನ್ನು ಬಹಳವಾಗಿ ದ್ವೇಷಿಸುತ್ತಾರೆ. ಈಗ ದಾವೀದನು ಶಾಶ್ವತವಾಗಿ ನನ್ನ ಸೇವೆಮಾಡುವನು” ಎಂದುಕೊಂಡನು.
ಫಿಲಿಷ್ಟಿಯರು ಯುದ್ಧಕ್ಕೆ ಸಿದ್ಧರಾದರು
28 ತರುವಾಯ, ಫಿಲಿಷ್ಟಿಯರು ಇಸ್ರೇಲರ ವಿರುದ್ಧ ಹೋರಾಡಲು ತಮ್ಮ ಸೈನ್ಯವನ್ನೆಲ್ಲ ಒಟ್ಟುಗೂಡಿಸಿದರು. ಆಕೀಷನು, “ನೀನು ಮತ್ತು ನಿನ್ನ ಜನರು ಇಸ್ರೇಲರ ವಿರುದ್ಧ ಹೋರಾಡುವುದಕ್ಕಾಗಿ ನನ್ನ ಜೊತೆಗೂಡಬೇಕೆಂಬುದನ್ನು ನೀನು ಅರ್ಥಮಾಡಿಕೊಂಡಿರುವೆಯಾ?” ಎಂದು ದಾವೀದನನ್ನು ಕೇಳಿದನು.
2 ದಾವೀದನು, “ಹೌದು! ಆಗ ನಾನು ಮಾಡುವುದನ್ನು ಸ್ವತಃ ನೀವೇ ನೋಡುವಿರಿ” ಎಂದನು.
ಆಕೀಷನು, “ಸರಿ, ನಾನು ನಿನ್ನನ್ನು ಅಂಗರಕ್ಷಕನನ್ನಾಗಿ ಮಾಡಿಕೊಳ್ಳುತ್ತೇನೆ. ನೀನು ನನ್ನನ್ನು ಯುದ್ಧಕಾಲದಲ್ಲೆಲ್ಲಾ ರಕ್ಷಿಸುವೆ” ಎಂದನು.
ಸೌಲನು ಮತ್ತು ಏಂದೋರಿನ ಯಕ್ಷಿಣಿ
3 ಸಮುವೇಲನು ಮರಣಹೊಂದಿದನು. ಸಮುವೇಲನ ಮರಣಕ್ಕಾಗಿ ಇಸ್ರೇಲರೆಲ್ಲಾ ತಮ್ಮ ಸಂತಾಪವನ್ನು ಸೂಚಿಸಿದರು. ಅವರು ಸಮುವೇಲನನ್ನು ಅವನ ಊರಾದ ರಾಮದಲ್ಲಿ ಸಮಾಧಿಮಾಡಿದರು.
ಸೌಲನು ಈ ಮೊದಲು, ಸತ್ತವರ ಆತ್ಮದೊಂದಿಗೆ ಮಾತನಾಡುವವರನ್ನೂ ಜ್ಯೋತಿಷಿಗಳನ್ನೂ ಬಲಾತ್ಕಾರದಿಂದ ಇಸ್ರೇಲಿನಿಂದ ಓಡಿಸಿದ್ದನು.
4 ಫಿಲಿಷ್ಟಿಯರು ಯುದ್ಧಕ್ಕೆ ಸಿದ್ಧರಾದರು. ಅವರೆಲ್ಲ ಶೂನೇಮಿಗೆ ಬಂದು ಆ ಸ್ಥಳದಲ್ಲಿಯೇ ಪಾಳೆಯಮಾಡಿಕೊಂಡರು. ಸೌಲನು ಇಸ್ರೇಲರನ್ನೆಲ್ಲ ಒಟ್ಟುಗೂಡಿಸಿಕೊಂಡು ಬಂದು ಗಿಲ್ಬೋವದಲ್ಲಿ ಪಾಳೆಯ ಮಾಡಿಕೊಂಡನು. 5 ಸೌಲನು ಫಿಲಿಷ್ಟಿಯರ ಸೈನ್ಯವನ್ನು ನೋಡಿ ಹೆದರಿದನು. ಅವನ ಹೃದಯವು ಭಯದಿಂದ ಬಡಿದುಕೊಳ್ಳತೊಡಗಿತು. 6 ಸೌಲನು ಯೆಹೋವನಿಗೆ ಪ್ರಾರ್ಥನೆ ಮಾಡಿದನು. ಆದರೆ ಯೆಹೋವನು ಅವನಿಗೆ ಉತ್ತರ ನೀಡಲಿಲ್ಲ. ದೇವರು ಕನಸುಗಳಲ್ಲಿಯೂ ಸೌಲನೊಡನೆ ಮಾತನಾಡಲಿಲ್ಲ. ದೇವರು ಅವನಿಗೆ ಊರೀಮಿನಿಂದಾಗಲಿ ಪ್ರವಾದಿಗಳಿಂದಾಗಲಿ ಉತ್ತರಕೊಡಲಿಲ್ಲ. 7 ಕಡೆಯದಾಗಿ, ಸೌಲನು ತನ್ನ ಸೇನಾಧಿಪತಿಗಳಿಗೆ, “ಸತ್ತವರ ಆತ್ಮಗಳೊಂದಿಗೆ ಮಾತನಾಡಬಲ್ಲ ಒಬ್ಬ ಮಾಂತ್ರಿಕ ಹೆಂಗಸನ್ನು ಕಂಡುಹಿಡಿಯಿರಿ. ಈ ಯುದ್ಧದಲ್ಲಿ ಏನಾಗುವುದೆಂಬುದನ್ನು ನಾನು ಹೋಗಿ ಅವಳನ್ನು ಕೇಳುತ್ತೇನೆ” ಎಂದು ಹೇಳಿದನು.
ಅವನ ಅಧಿಕಾರಿಗಳು, “ಏಂದೋರಿನಲ್ಲಿ ಒಬ್ಬ ಬೇತಾಳಿಕಳಿದ್ದಾಳೆ” ಎಂದು ಉತ್ತರಿಸಿದರು.
8 ಯಾರಿಗೂ ತನ್ನ ಗುರುತು ಸಿಕ್ಕದಂತೆ ಸೌಲನು ವೇಷವನ್ನು ಬದಲಾಯಿಸಿಕೊಂಡನು. ಸೌಲನು ತನ್ನ ಜನರಿಬ್ಬರೊಡನೆ ಅದೇ ರಾತ್ರಿಯಲ್ಲೇ ಆ ಬೇತಾಳಿಕಳನ್ನು ನೋಡಲು ಹೋದನು. ಸೌಲನು ಅವಳಿಗೆ, “ಬೇತಾಳದ ಮೂಲಕ ನನ್ನ ಭವಿಷ್ಯವನ್ನು ನನಗೆ ತೋರಿಸು, ನಾನು ಹೆಸರಿಸುವ ವ್ಯಕ್ತಿಯನ್ನು ಕರೆ” ಎಂದು ಕೇಳಿದನು.
9 ಆದರೆ ಆ ಬೇತಾಳಿಕಳು ಸೌಲನಿಗೆ, “ಸೌಲನು ಏನು ಮಾಡಿದನೆಂಬುದು ನಿನಗೆ ನಿಜವಾಗಿಯೂ ತಿಳಿದಿದೆ. ಅವನು ಮಾಂತ್ರಿಕರನ್ನೂ ಜ್ಯೋತಿಷಿಗಳನ್ನೂ ಬಲಾತ್ಕಾರವಾಗಿ ದೇಶದಿಂದ ಹೊರಗಟ್ಟಿದನು. ನೀನು ನನ್ನನ್ನು ಬಲೆಗೆ ಬೀಳಿಸಿ ಕೊಲ್ಲಲು ಪ್ರಯತ್ನಿಸುತ್ತಿರುವೆ” ಎಂದಳು.
10 ಸೌಲನು ಯೆಹೋವನ ಹೆಸರಿನಲ್ಲಿ ಆ ಬೇತಾಳಿಕಳಿಗೆ ವಾಗ್ದಾನಮಾಡಿ, “ಯೆಹೋವನಾಣೆ, ಈ ಕಾರ್ಯವನ್ನು ಮಾಡಿದ್ದಕ್ಕಾಗಿ ನಿನಗೆ ದಂಡನೆಯಾಗುವುದಿಲ್ಲ” ಎಂದು ಹೇಳಿದನು.
11 ಅವಳು, “ನಿನಗಾಗಿ ನಾನು ಯಾರನ್ನು ಬರಮಾಡಬೇಕು?” ಎಂದು ಕೇಳಿದಳು.
ಸೌಲನು, “ಸಮುವೇಲನನ್ನು ಬರಮಾಡು” ಎಂದು ಉತ್ತರಿಸಿದನು.
12 ಅಂತೆಯೇ ಆಯಿತು. ಆ ಹೆಂಗಸು ಸಮುವೇಲನನ್ನು ಕಂಡ ಕೊಡಲೇ ಗಟ್ಟಿಯಾಗಿ ಅರಚಿದಳು. ಅವಳು ಸೌಲನಿಗೆ, “ನೀನು ನನ್ನನ್ನು ವಂಚಿಸಿದೆ! ನೀನೇ ಸೌಲನು” ಎಂದಳು.
13 ರಾಜನು ಆ ಹೆಂಗಸಿಗೆ, “ಹೆದರದಿರು! ನಿನಗೇನು ಕಾಣಿಸುತ್ತಿದೆ?” ಎಂದು ಕೇಳಿದನು.
ಆ ಹೆಂಗಸು, “ಒಂದು ಆತ್ಮವು ಭೂಮಿಯೊಳಗಿಂದ[a] ಮೇಲಕ್ಕೆ ಬರುತ್ತಿರುವುದು ನನಗೆ ಕಾಣುತ್ತಿದೆ” ಎಂದು ಉತ್ತರಕೊಟ್ಟಳು.
14 ಸೌಲನು, “ಅವನ ರೂಪ ಹೇಗಿದೆ?” ಎಂದು ಕೇಳಿದನು.
ಆ ಹೆಂಗಸು, “ಅವನು ನಿಲುವಂಗಿಯನ್ನು ಧರಿಸಿಕೊಂಡಿರುವ ಒಬ್ಬ ಮುದುಕನಂತಿದ್ದಾನೆ” ಎಂದು ಹೇಳಿದಳು.
ಅವನೇ ಸಮುವೇಲನೆಂಬುದನ್ನು ಸೌಲನು ತಿಳಿದುಕೊಂಡು ಸಾಷ್ಟಾಂಗನಮಸ್ಕಾರ ಮಾಡಿದನು. 15 ಸಮುವೇಲನು, “ನನಗೆ ತೊಂದರೆಯನ್ನೇಕೆ ಕೊಡುತ್ತಿರುವೆ? ನೀನು ನನ್ನನ್ನು ನೆಲದ ಮೇಲಕ್ಕೆ ಬರಮಾಡಿದ್ದೇಕೆ?” ಎಂದು ಸೌಲನನ್ನು ಕೇಳಿದನು.
ಸೌಲನು, “ನಾನು ತೊಂದರೆಯಲ್ಲಿದ್ದೇನೆ! ಫಿಲಿಷ್ಟಿಯರು ನನ್ನ ವಿರುದ್ಧ ಹೋರಾಡಲು ಬರುತ್ತಿದ್ದಾರೆ; ದೇವರು ನನ್ನನ್ನು ತ್ಯಜಿಸಿದ್ದಾನೆ. ದೇವರು ನನಗೆ ಉತ್ತರವನ್ನೇ ಕೊಡುತ್ತಿಲ್ಲ; ಆತನು ಪ್ರವಾದಿಗಳಿಂದಾಗಲೀ ಕನಸುಗಳಿಂದಾಗಲೀ ನನಗೆ ಉತ್ತರಿಸುತ್ತಿಲ್ಲ. ಆದ ಕಾರಣವೇ ನಾನು ನಿನ್ನನ್ನು ಕರೆದೆನು. ನಾನು ಮಾಡಬೇಕಾದದ್ದನ್ನು ನನಗೆ ತಿಳಿಸು!” ಎಂದನು.
16 ಸಮುವೇಲನು, “ಯೆಹೋವನು ನಿನ್ನನ್ನು ತ್ಯಜಿಸಿದ್ದಾನೆ. ಈಗ ಆತನು ನಿನ್ನ ವಿರೋಧಿಯಾಗಿದ್ದಾನೆ. ಆದ್ದರಿಂದ ನನ್ನನ್ನೇಕೆ ಕರೆಯುವೆ? 17 ಯೆಹೋವನು ನಿನಗೆ ಹೇಳಿದ್ದಂತೆಯೇ ಮಾಡಿದನು. ಆತನು ಅವುಗಳ ಬಗ್ಗೆ ನನ್ನ ಮೂಲಕವಾಗಿ ನಿನಗೆ ತಿಳಿಸಿದನು. ಯೆಹೋವನು ರಾಜ್ಯಾಧಿಕಾರವನ್ನು ನಿನ್ನ ಕೈಗಳಿಂದ ಕಿತ್ತುಕೊಂಡು ನಿನ್ನ ನೆರೆಯವರಲ್ಲಿ ಒಬ್ಬನಿಗೆ ಕೊಟ್ಟಿದ್ದಾನೆ. ದಾವೀದನೇ ಆ ನೆರೆಯವನು. 18 ನೀನು ಯೆಹೋವನಿಗೆ ವಿಧೇಯನಾಗಲಿಲ್ಲ. ನೀನು ಅಮಾಲೇಕ್ಯರನ್ನು ನಾಶಗೊಳಿಸಲಿಲ್ಲ; ಯೆಹೋವನು ಅವರ ಬಗ್ಗೆ ಎಷ್ಟು ಕೋಪಗೊಂಡಿದ್ದನೆಂಬುದನ್ನು ಅವರಿಗೆ ತಿಳಿಯಪಡಿಸಿಲ್ಲ. ಆದ್ದರಿಂದಲೇ ಯೆಹೋವನು ಇಂದು ನಿನಗೆ ಹೀಗೆ ಮಾಡಿದ್ದಾನೆ. 19 ಯೆಹೋವನು ನಿನ್ನನ್ನು ಮತ್ತು ಇಸ್ರೇಲರನ್ನು ಫಿಲಿಷ್ಟಿಯರ ವಶಕ್ಕೆ ಒಪ್ಪಿಸುತ್ತಾನೆ. ಫಿಲಿಷ್ಟಿಯರು ಇಸ್ರೇಲ್ ಸೈನ್ಯವನ್ನು ಸೋಲಿಸುವಂತೆ ಯೆಹೋವನು ಮಾಡುತ್ತಾನೆ. ಮಾರನೆಯ ದಿನ, ನೀನು ಮತ್ತು ನಿನ್ನ ಮಕ್ಕಳು ನನ್ನೊಡನೆ ಇಲ್ಲಿರುತ್ತೀರಿ!” ಎಂದು ಹೇಳಿದನು.
20 ಆ ಕೂಡಲೇ ಸೌಲನು ನೆಲದ ಮೇಲೆ ಕುಸಿದು ಬಿದ್ದನು. ಸಮುವೇಲನು ಹೇಳಿದ ಮಾತುಗಳನ್ನು ಕೇಳಿ ಸೌಲನು ಭಯಗೊಂಡನು. ಸೌಲನು ಅಂದು ಹಗಲು ಮತ್ತು ರಾತ್ರಿ ಏನನ್ನೂ ತಿಂದಿರಲಿಲ್ಲ; ಆದ್ದರಿಂದ ಅವನು ಬಹಳ ಬಲಹೀನನಾಗಿದ್ದನು.
21 ಆ ಹೆಂಗಸು ಸೌಲನ ಬಳಿಗೆ ಬಂದಳು. ಸೌಲನು ನಿಜವಾಗಿಯೂ ಭಯಗೊಂಡಿರುವುದನ್ನು ಅವಳು ನೋಡಿ, “ಇಲ್ಲಿ ನೋಡು, ನಾನು ನಿನ್ನ ಸೇವಕಿ. ನಾನು ನಿನಗೆ ವಿಧೇಯಳಾಗಿದ್ದೇನೆ. ನಾನು ನನ್ನ ಜೀವವನ್ನೇ ಕಡೆಗಣಿಸಿ ನೀನು ಹೇಳಿದ್ದನ್ನು ಮಾಡಿದೆ. 22 ಈಗ ದಯವಿಟ್ಟು ನನ್ನ ಮಾತನ್ನು ಆಲಿಸು. ನಾನು ನಿನಗೆ ಸ್ವಲ್ಪ ಆಹಾರವನ್ನು ಕೊಡುತ್ತೇನೆ. ನೀನು ತಿನ್ನಲೇಬೇಕು. ಆಗ ನಿನ್ನ ಪ್ರಯಾಣವನ್ನು ಮುಂದುವರಿಸಲು ನಿನಗೆ ಸಾಕಷ್ಟು ಶಕ್ತಿಯಿರುವುದು” ಎಂದು ಹೇಳಿದಳು.
23 ಆದರೆ ಸೌಲನು ನಿರಾಕರಿಸಿ, “ನಾನು ತಿನ್ನುವುದಿಲ್ಲ” ಅಂದನು.
ಊಟಮಾಡುವಂತೆ ಸೌಲನ ಅಧಿಕಾರಿಗಳೂ ಬೇಡಿಕೊಂಡರು. ಕೊನೆಗೆ ಸೌಲನು ಅವರ ಮಾತಿಗೆ ಕಿವಿಗೊಟ್ಟನು. ಅವನು ನೆಲದಿಂದ ಮೇಲಕ್ಕೆದ್ದು ಮಂಚದ ಮೇಲೆ ಕುಳಿತನು. 24 ಆ ಹೆಂಗಸಿನ ಮನೆಯಲ್ಲಿ ಒಂದು ಕೊಬ್ಬಿದ ಕರು ಇತ್ತು. ಅವಳು ಬೇಗನೆ ಅದನ್ನು ಕೊಯ್ದಳು. ಅವಳು ಸ್ವಲ್ಪ ಹಿಟ್ಟನ್ನು ತೆಗೆದುಕೊಂಡು ಅದನ್ನು ತನ್ನ ಕೈಗಳಿಂದಲೇ ನಾದಿದಳು. ನಂತರ ಅವಳು ಕೆಲವು ರೊಟ್ಟಿಗಳನ್ನು ಸುಟ್ಟಳು. 25 ಆ ಹೆಂಗಸು ಸೌಲನ ಮತ್ತು ಅವನ ಸೇನಾಧಿಕಾರಿಗಳ ಮುಂದೆ ಆಹಾರವನ್ನಿಟ್ಟಳು. ಸೌಲನು ಮತ್ತು ಅವನ ಅಧಿಕಾರಿಗಳು ಊಟಮಾಡಿದರು. ನಂತರ ಆ ರಾತ್ರಿಯೇ ಅವರು ಅಲ್ಲಿಂದ ಹೊರಟುಹೋದರು.
ಫಿಲಿಷ್ಟಿಯರ ಅಧಿಪತಿಗಳು ದಾವೀದನ ಸಹಾಯವನ್ನು ನಿರಾಕರಿಸಿದರು
29 ಫಿಲಿಷ್ಟಿಯರ ಸೈನಿಕರೆಲ್ಲಾ ಅಫೇಕಿನಲ್ಲಿ ಒಟ್ಟುಗೂಡಿದರು. ಇಸ್ರೇಲರು ಇಜ್ರೇಲ್ ಬಳಿಯಿರುವ ಚಿಲುಮೆಯ ಹತ್ತಿರ ಪಾಳೆಯಮಾಡಿಕೊಂಡರು. 2 ಫಿಲಿಷ್ಟಿಯರ ಅಧಿಪತಿಗಳು ನೂರು ಜನರ ಗುಂಪುಗಳಾಗಿಯೂ ಒಂದು ಸಾವಿರ ಜನರ ಗುಂಪುಗಳಾಗಿಯೂ ಬರುತ್ತಿದ್ದರು. ದಾವೀದನು ಮತ್ತು ಅವನ ಜನರು ಆಕೀಷನ ಹಿಂದೆ ಬರುತ್ತಿದ್ದರು.
3 ಫಿಲಿಷ್ಟಿಯರ ಅಧಿಪತಿಗಳು, “ಈ ಇಬ್ರಿಯರು ಇಲ್ಲಿ ಮಾಡುತ್ತಿರುವುದೇನು?” ಎಂದು ಆಕೀಷನನ್ನು ಕೇಳಿದರು.
ಆಕೀಷನು ಫಿಲಿಷ್ಟಿಯರ ಸೇನಾಧಿಪತಿಗಳಿಗೆ, “ಇವನು ದಾವೀದ. ದಾವೀದನು ಸೌಲನ ಅಧಿಕಾರಿಗಳಲ್ಲಿ ಒಬ್ಬನು. ದಾವೀದನು ಬಹಳ ಕಾಲದಿಂದ ನನ್ನೊಡನೆ ಇದ್ದಾನೆ. ದಾವೀದನು ಸೌಲನನ್ನು ತೊರೆದು ನನ್ನ ಬಳಿಗೆ ಬಂದಾಗಿನಿಂದ ನಾನು ಅವನಲ್ಲಿ ಯಾವ ತಪ್ಪುನ್ನೂ ಗುರುತಿಸಿಲ್ಲ” ಎಂದನು.
4 ಆದರೆ ಫಿಲಿಷ್ಟಿಯರ ಅಧಿಪತಿಗಳು ಆಕೀಷನ ಮೇಲೆ ಬಹಳ ಕೋಪಗೊಂಡು, “ದಾವೀದನನ್ನು ಹಿಂದಕ್ಕೆ ಕಳುಹಿಸು! ನೀನು ಕೊಟ್ಟಿರುವ ನಗರಕ್ಕೆ ದಾವೀದನು ಹಿಂದಿರುಗಿ ಹೋಗಲೇಬೇಕು. ಅವನು ನಮ್ಮೊಡನೆ ಯುದ್ಧಕ್ಕೆ ಬರುವಂತಿಲ್ಲ. ಅವನು ನಮ್ಮ ಜೊತೆಯಲ್ಲಿದ್ದರೆ, ಆಗ ನಮ್ಮ ಪಾಳೆಯದಲ್ಲಿ ಒಬ್ಬ ಶತ್ರುವಿದ್ದಂತಾಗುತ್ತದೆ. ಅವನು ನಮ್ಮ ಜನರನ್ನು ಕೊಲ್ಲುವುದರ ಮೂಲಕ ತನ್ನ ರಾಜನ ಮೆಚ್ಚಿಕೆಯನ್ನು ಗಳಿಸುತ್ತಾನೆ. 5 ದಾವೀದನೆಂಬ ಈ ವ್ಯಕ್ತಿಯನ್ನು ಕುರಿತು, ಇಸ್ರೇಲರು ಕುಣಿಯುತ್ತಾ ಹಾಡುವ ಹಾಡು ಹೀಗಿದೆ:
‘ಸೌಲನು ಸಾವಿರಗಟ್ಟಲೆ ಶತ್ರುಗಳನ್ನು ಕೊಂದನು.
ದಾವೀದನು ಲಕ್ಷಾಂತರಗಟ್ಟಲೆ ಶತ್ರುಗಳನ್ನು ಕೊಂದನು!’”
ಎಂದು ಹೇಳಿದರು.
6 ಆದ್ದರಿಂದ ಆಕೀಷನು ದಾವೀದನನ್ನು ಕರೆದು, “ಯೆಹೋವನಾಣೆ, ನೀನು ನನಗೆ ಯಥಾರ್ಥನಾಗಿರುವೆ. ನೀನು ನನ್ನ ಸೈನ್ಯದಲ್ಲಿ ಸೇವೆ ಮಾಡುವುದೂ ನನಗೆ ಇಷ್ಟ. ನೀನು ನನ್ನ ಹತ್ತಿರಕ್ಕೆ ಬಂದಾಗಿನಿಂದ ನಾನು ನಿನ್ನಲ್ಲಿ ಯಾವ ತಪ್ಪನ್ನೂ ಗುರುತಿಸಿಲ್ಲ. ನೀನು ಒಳ್ಳೆಯವನೆಂದು ಫಿಲಿಷ್ಟಿಯರ ಅಧಿಪತಿಗಳು[b] ಸಹ ಯೋಚಿಸಿದ್ದಾರೆ. 7 ಆದ್ದರಿಂದ ಸಮಾಧಾನದಿಂದ ಹಿಂದಿರುಗಿ ಹೋಗು. ಫಿಲಿಷ್ಟಿಯರ ಅಧಿಪತಿಗಳ ವಿರುದ್ಧ ಏನನ್ನೂ ಮಾಡಬೇಡ” ಎಂದು ಹೇಳಿದನು.
8 ದಾವೀದನು, “ನಾನು ಮಾಡಿರುವ ತಪ್ಪಾದರೂ ಏನು? ನಾನು ನಿನ್ನ ಹತ್ತಿರಕ್ಕೆ ಬಂದಾಗಿನಿಂದ ಈಗಿನವರೆಗೆ ನನ್ನಲ್ಲಿ ನೀನು ಗುರುತಿಸಿರುವ ದುಷ್ಟತನವಾದರೂ ಏನು? ರಾಜನಾದ ನನ್ನ ಒಡೆಯನ ಶತ್ರುಗಳ ವಿರುದ್ಧ ಹೋರಾಡಲು ನನ್ನನ್ನು ಬಿಡುವುದಿಲ್ಲವೇಕೆ?” ಎಂದು ಹೇಳಿದನು.
9 ಆಕೀಷನು, “ನೀನು ಒಳ್ಳೆಯವನೆಂದು ನಾನು ನಂಬುತ್ತೇನೆ. ನೀನು ದೇವದೂತನಂತಿರುವೆ. ಆದರೆ ಫಿಲಿಷ್ಟಿಯ ಸೇನಾಧಿಪತಿಗಳು, ‘ದಾವೀದನು ನಮ್ಮ ಜೊತೆ ಯುದ್ಧಕ್ಕೆ ಬರುವಂತಿಲ್ಲ’ ಎಂದು ಈಗಲೂ ಹೇಳುತ್ತಿದ್ದಾರೆ. 10 ನೀನು ಮತ್ತು ನಿನ್ನ ಜನರು ಮುಂಜಾನೆಯಲ್ಲಿಯೇ ಹಿಂದಿರುಗಿ ಹೋಗಿ. ನಾನು ನಿನಗೆ ಕೊಟ್ಟಿರುವ ನಗರಕ್ಕೆ ಹಿಂದಿರುಗು. ಅಧಿಪತಿಗಳು ನಿನ್ನ ಬಗ್ಗೆ ಹೇಳುತ್ತಿರುವ ಕೆಟ್ಟ ಮಾತುಗಳಿಗೆ ಗಮನ ನೀಡಬೇಡ. ನೀನು ಒಬ್ಬ ಒಳ್ಳೆಯ ಮನುಷ್ಯ. ಆದ್ದರಿಂದ ಸೂರ್ಯನು ಮೇಲೇರುವಷ್ಟರಲ್ಲಿ ನೀನು ನಮ್ಮನ್ನು ಬಿಟ್ಟುಹೋಗು” ಎಂದು ಹೇಳಿದನು.
11 ಆದ್ದರಿಂದ ದಾವೀದನು ಮತ್ತು ಅವನ ಜನರು ಮಾರನೆಯ ದಿನ ಬೆಳಿಗ್ಗೆ ಬೇಗನೆ ಎದ್ದು ಫಿಲಿಷ್ಟಿಯರ ದೇಶಕ್ಕೆ ಹಿಂದಿರುಗಿ ಹೋದರು. ಫಿಲಿಷ್ಟಿಯರು ಇಜ್ರೇಲಿಗೆ ಹೋದರು.
ಹೃದಯ ಪರಿವರ್ತನೆ
13 ಅದೇ ಸಮಯದಲ್ಲಿ ಅಲ್ಲಿದ್ದ ಕೆಲವರು ಯೇಸುವಿನ ಬಳಿಗೆ ಬಂದು ಗಲಿಲಾಯದಲ್ಲಿ ಯಜ್ಞ ಅರ್ಪಿಸುತ್ತಿದ್ದವರನ್ನು ಪಿಲಾತನು[a] ಕೊಲ್ಲಿಸಿದ್ದನ್ನೂ ಅವರು ಯಜ್ಞವಾಗಿ ಅರ್ಪಿಸಿದ್ದ ಪಶುಗಳ ರಕ್ತದೊಡನೆ ಅವರ ರಕ್ತವನ್ನು ಬೆರಸಿದ್ದನ್ನೂ ಯೇಸುವಿಗೆ ತಿಳಿಸಿದರು. 2 ಯೇಸು ಅವರಿಗೆ, “ಕೊಲೆಗೀಡಾದವರು ಗಲಿಲಾಯದ ಇತರರೆಲ್ಲರಿಗಿಂತ ಹೆಚ್ಚು ಪಾಪಿಗಳಾಗಿದ್ದರೆಂದು ಭಾವಿಸುತ್ತೀರೋ? 3 ಇಲ್ಲ! ಅವರು ಅಂತಹ ಪಾಪಿಗಳಾಗಿರಲಿಲ್ಲ! ಆದರೆ ನೀವು ನಿಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳದಿದ್ದರೆ ಅವರಂತೆಯೇ ನಾಶವಾಗುವಿರಿ! 4 ಸಿಲೊವಾ ಎಂಬಲ್ಲಿ ಗೋಪುರ ಕುಸಿದು ಬಿದ್ದಾಗ, ಸತ್ತುಹೋದ ಹದಿನೆಂಟು ಮಂದಿಯ ಕುರಿತು ನಿಮ್ಮ ಅಭಿಪ್ರಾಯವೇನು? ಜೆರುಸಲೇಮಿನಲ್ಲಿ ವಾಸವಾಗಿದ್ದ ಇತರರೆಲ್ಲರಿಗಿಂತಲೂ ಅವರು ಹೆಚ್ಚು ಪಾಪಿಗಳಾಗಿದ್ದರೆಂದು ಭಾವಿಸುತ್ತೀರೋ? 5 ಅವರು ಅಂತಹ ಪಾಪಿಗಳಾಗಿರಲಿಲ್ಲ! ಆದರೆ ನೀವು ನಿಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳದಿದ್ದರೆ ಅವರಂತೆಯೇ ನಾಶವಾಗುವಿರಿ ಎಂದು ನಾನು ನಿಮಗೆ ಹೇಳುತ್ತೇನೆ!” ಎಂದು ಉತ್ತರಿಸಿದನು.
ಉಪಯೋಗವಿಲ್ಲದ ಮರ
6 ಯೇಸು ಈ ಸಾಮ್ಯವನ್ನು ಹೇಳಿದನು: “ಒಬ್ಬನು ತನ್ನ ತೋಟದಲ್ಲಿ ಒಂದು ಅಂಜೂರದ ಮರವನ್ನು ನೆಡಿಸಿದ್ದನು. ಒಮ್ಮೆ ಅವನು ಆ ಮರ ಹಣ್ಣು ಫಲಿಸಿರಬಹುದೆಂದು ಅಲ್ಲಿಗೆ ಬಂದನು. ಆದರೆ ಅವನು ಅದರಲ್ಲಿ ಒಂದು ಹಣ್ಣನ್ನೂ ಕಾಣಲಿಲ್ಲ. 7 ಅವನು ತನ್ನ ತೋಟವನ್ನು ನೋಡಿಕೊಳ್ಳುವುದಕ್ಕಾಗಿ ಒಬ್ಬ ತೋಟಗಾರನನ್ನೂ ನೇಮಿಸಿದ್ದನು. ಅವನು ತನ್ನ ಆ ಸೇವಕನಿಗೆ, ‘ಈ ಮರವು ಹಣ್ಣು ಬಿಡಬಹುದೆಂದು ನಾನು ಮೂರು ವರ್ಷದಿಂದ ಕಾಯುತ್ತಿದ್ದೇನೆ. ಆದರೆ ಇದು ಹಣ್ಣನ್ನು ಬಿಡಲೇ ಇಲ್ಲ. ಇದನ್ನು ಕತ್ತರಿಸಿಹಾಕು! ಇದು ಭೂಮಿಯ ಸಾರವನ್ನೇಕೆ ವ್ಯರ್ಥಗೊಳಿಸಬೇಕು?’ ಎಂದು ಹೇಳಿದನು. 8 ಆದರೆ ಆ ಸೇವಕನು, ‘ಯಜಮಾನನೇ, ಇನ್ನೊಂದು ವರ್ಷ ತಾಳಿಕೊ. ಅದು ಫಲವನ್ನು ಕೊಡಬಹುದು. ಅದರ ಸುತ್ತಲೂ ಅಗೆದು ಸ್ವಲ್ಪ ರಸಗೊಬ್ಬರವನ್ನು ಹಾಕುತ್ತೇನೆ. 9 ಆಗ ಮುಂದಿನ ವರ್ಷ ಈ ಮರ ಫಲವನ್ನು ಕೊಡಬಹುದು. ಒಂದುವೇಳೆ ಇದು ಫಲವನ್ನು ಕೊಡದಿದ್ದರೆ ನೀನು ಇದನ್ನು ಕಡಿದುಹಾಕು’ ಎಂದು ಉತ್ತರಿಸಿದನು.”
ಯೇಸುವಿನಿಂದ ಗುಣಹೊಂದಿದ ಸ್ತ್ರೀ
10 ಒಂದು ಸಬ್ಬತ್ದಿನ ಯೇಸು ಸಭಾಮಂದಿರದಲ್ಲಿ ಉಪದೇಶಿಸಿದನು. 11 ದೆವ್ವದಿಂದ ಪೀಡಿತಳಾಗಿದ್ದ ಒಬ್ಬ ಸ್ತ್ರೀ ಅಲ್ಲಿದ್ದಳು. ಆ ದೆವ್ವದಿಂದಾಗಿ ಆಕೆಗೆ ಹದಿನೆಂಟು ವರ್ಷಗಳಿಂದ ನಡು ಬಗ್ಗಿಕೊಂಡಿತ್ತು. ನೆಟ್ಟಗೆ ನಿಂತುಕೊಳ್ಳಲು ಆಕೆಗೆ ಸಾಧ್ಯವಿರಲಿಲ್ಲ. 12 ಯೇಸು ಆಕೆಯನ್ನು ಕಂಡು, ತನ್ನ ಬಳಿಗೆ ಕರೆದು, “ಅಮ್ಮಾ, ನಿನ್ನ ಕಾಯಿಲೆ ನಿನ್ನನ್ನು ಬಿಟ್ಟುಹೋಗಿದೆ!” ಎಂದು ಹೇಳಿದನು. 13 ಯೇಸು ಆಕೆಯ ಮೇಲೆ ತನ್ನ ಕೈಗಳನ್ನಿಟ್ಟಾಗ ಆಕೆ ನೆಟ್ಟಗೆ ನಿಲ್ಲಲು ಶಕ್ತಳಾದಳು. ಆಕೆ ದೇವರನ್ನು ಕೊಂಡಾಡಿದಳು.
14 ಯೇಸು ಸಬ್ಬತ್ದಿನದಲ್ಲಿ ವಾಸಿಮಾಡಿದ್ದರಿಂದ ಸಭಾಮಂದಿರದ ಅಧಿಕಾರಿ ಕೋಪಗೊಂಡು ಜನರಿಗೆ, “ಕೆಲಸಕ್ಕಾಗಿ ವಾರದಲ್ಲಿ ಆರು ದಿನಗಳಿವೆ. ಆ ದಿನಗಳಲ್ಲಿ ಬಂದು ವಾಸಿಮಾಡಿಸಿಕೊಳ್ಳಿರಿ. ಸಬ್ಬತ್ದಿನದಲ್ಲಿ ವಾಸಿಮಾಡಿಸಿಕೊಳ್ಳಬಾರದು” ಎಂದು ಹೇಳಿದನು.
15 ಅದಕ್ಕೆ ಪ್ರಭುವು (ಯೇಸು), “ನೀವು ಕಪಟಿಗಳು! ನೀವೆಲ್ಲರೂ ನಿಮ್ಮ ದುಡಿಮೆಯ ಪಶುಗಳನ್ನು ಪ್ರತಿದಿನ ಬಿಚ್ಚಿ ನೀರು ಕುಡಿಸಲು ಕರೆದೊಯ್ಯುತೀರಿ. ಸಬ್ಬತ್ದಿನದಲ್ಲಿಯೂ ನೀವು ಹಾಗೆಯೇ ಮಾಡುತ್ತೀರಿ! 16 ನಾನು ವಾಸಿಮಾಡಿದ ಈ ಸ್ತ್ರೀಯಾದರೋ ಯೆಹೂದ್ಯಳು. ಸೈತಾನನು ಆಕೆಯನ್ನು ಹದಿನೆಂಟು ವರ್ಷಗಳಿಂದ ಕಟ್ಟಿಹಾಕಿದ್ದನು. ಆದ್ದರಿಂದ ಆಕೆಯನ್ನು ಸಬ್ಬತ್ದಿನದಂದು ಕಾಯಿಲೆಯಿಂದ ಬಿಡುಗಡೆ ಮಾಡುವುದು ಖಂಡಿತವಾಗಿಯೂ ತಪ್ಪಲ್ಲ!” ಎಂದು ಹೇಳಿದನು. 17 ಈ ಮಾತನ್ನು ಕೇಳಿದಾಗ, ಆತನನ್ನು ಟೀಕಿಸುತ್ತಿದ್ದ ಜನರೆಲ್ಲರಿಗೂ ತಮ್ಮ ಬಗ್ಗೆ ನಾಚಿಕೆಯಾಯಿತು. ಯೇಸು ಮಾಡುತ್ತಿದ್ದ ಅದ್ಭುತಕಾರ್ಯಗಳಿಗಾಗಿ ಜನರೆಲ್ಲರೂ ಸಂತೋಷಪಟ್ಟರು.
ದೇವರ ರಾಜ್ಯ ಯಾವುದಕ್ಕೆ ಹೋಲಿಕೆಯಾಗಿದೆ?
(ಮತ್ತಾಯ 13:31-33; ಮಾರ್ಕ 4:30-32)
18 ಬಳಿಕ ಯೇಸು, “ದೇವರ ರಾಜ್ಯ ಯಾವುದಕ್ಕೆ ಹೋಲಿಕೆಯಾಗಿದೆ? ಅದನ್ನು ನಾನು ಯಾವುದಕ್ಕೆ ಹೋಲಿಸಲಿ? 19 ದೇವರ ರಾಜ್ಯ ಸಾಸಿವೆಕಾಳಿನಂತಿದೆ. ಒಬ್ಬನು ತನ್ನ ತೋಟದಲ್ಲಿ ಈ ಬೀಜವನ್ನು ಹಾಕುತ್ತಾನೆ. ಅದು ಬೆಳೆದು ಮರವಾಗುತ್ತದೆ. ಪಕ್ಷಿಗಳು ಅದರ ಕೊಂಬೆಗಳಲ್ಲಿ ಗೂಡುಗಳನ್ನು ಕಟ್ಟಿಕೊಳ್ಳುತ್ತವೆ” ಎಂದು ಹೇಳಿದನು.
20 ಯೇಸು ಮತ್ತೆ ಹೀಗೆಂದನು: “ದೇವರ ರಾಜ್ಯವನ್ನು ನಾನು ಯಾವುದಕ್ಕೆ ಹೋಲಿಸಲಿ? 21 ಅದು, ಸ್ತ್ರೀಯೊಬ್ಬಳು ರೊಟ್ಟಿಮಾಡುವುದಕ್ಕಾಗಿ ದೊಡ್ಡ ಪಾತ್ರೆಯೊಂದರಲ್ಲಿರುವ ಹಿಟ್ಟಿಗೆ ಬೆರೆಸುವ ಹುಳಿಯಂತಿದೆ. ಆ ಹುಳಿಯು ನಾದಿದ ಹಿಟ್ಟನ್ನೆಲ್ಲ ಉಬ್ಬಿಸುತ್ತದೆ.”
ಕಿರಿದಾದ ಬಾಗಿಲು
(ಮತ್ತಾಯ 7:13-14,21-23)
22 ಯೇಸು ಪ್ರತಿಯೊಂದು ಊರಿನಲ್ಲಿಯೂ ಹಳ್ಳಿಯಲ್ಲಿಯೂ ಉಪದೇಶಿಸುತ್ತಾ ಜೆರುಸಲೇಮಿನ ಕಡೆಗೆ ಪ್ರಯಾಣ ಮಾಡಿದನು.
Kannada Holy Bible: Easy-to-Read Version. All rights reserved. © 1997 Bible League International