Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
1 ಸಮುವೇಲನು 22-24

ದಾವೀದನು ಬೇರೆಬೇರೆ ಸ್ಥಳಗಳಿಗೆ ಹೋದನು

22 ದಾವೀದನು ಗತ್ ಊರನ್ನು ಬಿಟ್ಟು ಅದುಲ್ಲಾಮ್ ಗವಿಗೆ ಓಡಿಹೋದನು. ದಾವೀದನು ಅದುಲ್ಲಾಮಿನಲ್ಲಿರುವುದು ಅವನ ಅಣ್ಣಂದಿರಿಗೂ ಬಂಧುಗಳಿಗೂ ತಿಳಿಯಿತು. ಅವರು ದಾವೀದನನ್ನು ನೋಡಲು ಅಲ್ಲಿಗೆ ಹೋದರು. ದಾವೀದನ ಜೊತೆ ಅನೇಕ ಜನರು ಸೇರಿಕೊಂಡರು. ತೊಂದರೆಯಲ್ಲಿರುವವರು, ಸಾಲಗಾರರು ಮತ್ತು ಅತೃಪ್ತರಾದವರು ದಾವೀದನನ್ನು ಆಶ್ರಯಿಸಿಕೊಂಡರು. ದಾವೀದನು ಅವರಿಗೆಲ್ಲಾ ನಾಯಕನಾದನು. ದಾವೀದನೊಂದಿಗೆ ನಾನೂರು ಜನರಿದ್ದರು.

ದಾವೀದನು ಅದುಲ್ಲಾಮನ್ನು ಬಿಟ್ಟು ಮೋವಾಬಿನ ಮಿಚ್ಪೆಗೆ ಹೋದನು. ದಾವೀದನು ಮೋವಾಬ್ ರಾಜನಿಗೆ, “ದೇವರು ನನಗೇನು ಮಾಡುತ್ತಾನೆಂಬುದನ್ನು ನಾನು ತಿಳಿದುಕೊಳ್ಳುವ ತನಕ, ನನ್ನ ತಂದೆತಾಯಿಗಳು ನಿನ್ನಲ್ಲಿಗೆ ಬಂದು ಇರಲು ದಯವಿಟ್ಟು ನನಗೆ ಅವಕಾಶ ಕೊಡು” ಎಂದು ಕೇಳಿಕೊಂಡನು. ದಾವೀದನು ತನ್ನ ತಂದೆತಾಯಿಗಳನ್ನು ಮೋವಾಬ್ ರಾಜನ ಹತ್ತಿರ ಬಿಟ್ಟನು. ದಾವೀದನ ತಂದೆತಾಯಿಗಳು ಅವನು ಕೋಟೆಯಲ್ಲಿರುವ ತನಕ ಮೋವಾಬಿನ ರಾಜನೊಂದಿಗೆ ನೆಲೆಸಿದರು.

ಆದರೆ ಗಾದ್ ಪ್ರವಾದಿಯು ದಾವೀದನಿಗೆ, “ನೀನು ಕೋಟೆಯಲ್ಲಿರಬೇಡ. ಯೆಹೂದ್ಯರ ದೇಶಕ್ಕೆ ಹೋಗು” ಎಂದು ಹೇಳಿದನು. ಆದ್ದರಿಂದ ದಾವೀದನು ಹೆರೆತ್ ಅರಣ್ಯಕ್ಕೆ ಹೊರಟುಹೋದನು.

ಸೌಲನಿಂದ ಅಹೀಮೆಲೆಕನ ಕುಟುಂಬದ ನಾಶನ

ದಾವೀದನ ಮತ್ತು ಅವನ ಜನರ ಬಗ್ಗೆ ಜನರು ತಿಳಿದಿದ್ದಾರೆಂಬುದು ಸೌಲನಿಗೆ ಗೊತ್ತಾಯಿತು. ಗಿಬೆಯ ಬೆಟ್ಟದ ಮೇಲಿನ ಮರದ ಕೆಳಗೆ ಸೌಲನು ಕುಳಿತಿದ್ದನು. ಸೌಲನ ಕೈಯಲ್ಲಿ ಭರ್ಜಿಯಿತ್ತು. ಸೌಲನ ಅಧಿಕಾರಿಗಳೆಲ್ಲ ಅವನ ಸುತ್ತಲೂ ನಿಂತಿದ್ದರು. ಸೌಲನು ತನ್ನ ಸುತ್ತಲೂ ನಿಂತಿದ್ದ ಅಧಿಕಾರಿಗಳಿಗೆ, “ಬೆನ್ಯಾಮೀನನ ಜನರೇ, ಕೇಳಿ! ಇಷಯನ ಮಗನಾದ ದಾವೀದನು ನಿಮಗೆ ಹೊಲಗಳನ್ನೂ ದ್ರಾಕ್ಷಿತೋಟಗಳನ್ನೂ ಕೊಡುತ್ತಾನೆಂದು ತಿಳಿದಿರುವಿರಾ? ದಾವೀದನು ನಿಮಗೆ ಸಹಸ್ರಾಧಿಪತಿಗಳಾಗಿ ಮತ್ತು ಶತಾಧಿಪತಿಗಳಾಗಿ ಬಡ್ತಿ ನೀಡುತ್ತಾನೆಂದು ನೀವು ತಿಳಿದಿರುವಿರಾ? ನೀವು ನನ್ನ ವಿರುದ್ಧವಾಗಿ ಸಂಚುನಡೆಸುತ್ತಿರುವಿರಿ! ನೀವು ರಹಸ್ಯಯೋಜನೆಗಳನ್ನು ಮಾಡಿದ್ದೀರಿ. ನನ್ನ ಮಗ ಯೋನಾತಾನನ ಬಗ್ಗೆ ನಿಮ್ಮಲ್ಲಿ ಒಬ್ಬರೂ ನನಗೆ ತಿಳಿಸಲಿಲ್ಲ! ಅವನು ಇಷಯನ ಮಗನ ಜೊತೆ ಒಪ್ಪಂದ ಮಾಡಿಕೊಂಡಿದ್ದಾನೆಂದು ನಿಮ್ಮಲ್ಲಿ ಒಬ್ಬರೂ ನನಗೆ ತಿಳಿಸಲಿಲ್ಲ! ನಿಮ್ಮಲ್ಲಿ ಒಬ್ಬರೂ ನನ್ನ ಬಗ್ಗೆ ಚಿಂತಿಸುವುದಿಲ್ಲ! ನನ್ನ ಮಗ ಯೋನಾತಾನನು ದಾವೀದನನ್ನು ಪ್ರೋತ್ಸಾಹಿಸಿದ್ದಾನೆಂದು ನಿಮ್ಮಲ್ಲಿ ಒಬ್ಬರೂ ನನಗೆ ತಿಳಿಸಲಿಲ್ಲ. ಅಡಗಿಕೊಂಡು ನನ್ನ ಮೇಲೆ ಆಕ್ರಮಣ ಮಾಡುವಂತೆ ನನ್ನ ಸೇವಕನಾದ ದಾವೀದನಿಗೆ ಯೋನಾತಾನನು ಹೇಳಿಕೊಟ್ಟಿದ್ದಾನೆ! ಈಗ ದಾವೀದನು ಮಾಡುತ್ತಿರುವುದು ಅದನ್ನೇ!” ಎಂದು ಹೇಳಿದನು.

ಸೌಲನ ಅಧಿಕಾರಿಗಳೊಂದಿಗೆ ಎದೋಮ್ಯನಾದ ದೋಯೇಗನು ನಿಂತಿದ್ದನು. ದೋಯೇಗನು, “ನಾನು ನೋಬಿನಲ್ಲಿ ಇಷಯನ ಮಗನನ್ನು ನೋಡಿದೆನು. ದಾವೀದನು ಅಹೀಟೂಬನ ಮಗನಾದ ಅಹೀಮೆಲೆಕನನ್ನು ನೋಡಲು ಬಂದಿದ್ದನು. 10 ಅಹೀಮೆಲೆಕನು ದಾವೀದನಿಗಾಗಿ ಯೆಹೋವನಲ್ಲಿ ಪ್ರಾರ್ಥಿಸಿದನು. ಅಹೀಮೆಲೆಕನು ದಾವೀದನಿಗೆ ಆಹಾರವನ್ನೂ ಫಿಲಿಷ್ಟಿಯನಾದ ಗೊಲ್ಯಾತನ ಖಡ್ಗವನ್ನೂ ಕೊಟ್ಟನು” ಎಂದು ಹೇಳಿದನು.

11 ಆಗ ರಾಜನಾದ ಸೌಲನು ಯಾಜಕನನ್ನು ತನ್ನ ಹತ್ತಿರಕ್ಕೆ ಕರೆತರಲು ಕೆಲವು ಜನರಿಗೆ ಅಪ್ಪಣೆಕೊಟ್ಟನು. ಸೌಲನು, ಅಹೀಟೂಬನ ಮಗನಾದ ಅಹೀಮೆಲೆಕನನ್ನೂ ಅವನ ಎಲ್ಲ ಬಂಧುಗಳನ್ನೂ ಕರೆತರಲು ಅವರಿಗೆ ಹೇಳಿದನು. ಅಹೀಮೆಲೆಕನ ಬಂಧುಗಳು ನೋಬಿನಲ್ಲಿ ಯಾಜಕರಾಗಿದ್ದರು. ಅವರೆಲ್ಲ ರಾಜನ ಹತ್ತಿರಕ್ಕೆ ಬಂದರು. 12 ಸೌಲನು ಅಹೀಮೆಲೆಕನಿಗೆ, “ಅಹೀಟೂಬನ ಮಗನೇ, ಈಗ ನನ್ನ ಮಾತನ್ನು ಕೇಳು” ಎಂದು ಹೇಳಿದನು.

ಅಹೀಮೆಲೆಕನು, “ಆಗಲೀ, ಸ್ವಾಮಿ” ಎಂದು ಉತ್ತರಿಸಿದನು.

13 ಸೌಲನು ಅಹೀಮೆಲೆಕನಿಗೆ, “ನೀನು ಮತ್ತು ಇಷಯನ ಮಗ ನನ್ನ ವಿರುದ್ಧ ರಹಸ್ಯಯೋಜನಗೆಳನ್ನು ಏಕೆ ಮಾಡಿದಿರಿ? ನೀನು ದಾವೀದನಿಗೆ ರೊಟ್ಟಿಯನ್ನೂ ಖಡ್ಗವನ್ನೂ ಕೊಟ್ಟೆ! ನೀನು ಅವನಿಗಾಗಿ ದೇವರಲ್ಲಿ ಪ್ರಾರ್ಥಿಸಿದೆ. ಈಗ ದಾವೀದನು ನನ್ನ ಮೇಲೆ ಆಕ್ರಮಣಮಾಡಲು ಕಾಯುತ್ತಿದ್ದಾನೆ!” ಎಂದು ಹೇಳಿದನು.

14 ಅಹೀಮೆಲೆಕನು, “ದಾವೀದನು ನಿನಗೆ ಬಹಳ ನಂಬಿಗಸ್ತನಾಗಿದ್ದಾನೆ. ದಾವೀದನಷ್ಟು ನಂಬಿಗಸ್ತನು ನಿನ್ನ ಇತರ ಅಧಿಕಾರಿಗಳಲ್ಲಿ ಇಲ್ಲವೇ ಇಲ್ಲ. ದಾವೀದನು ನಿನ್ನ ಸ್ವಂತ ಅಳಿಯ. ದಾವೀದನು ನಿನ್ನ ಅಂಗರಕ್ಷಕ ದಳಪತಿ. ದಾವೀದನನ್ನು ನಿನ್ನ ಸ್ವಂತ ಕುಟುಂಬವೆಲ್ಲ ಗೌರವಿಸುತ್ತದೆ. 15 ದಾವೀದನಿಗಾಗಿ ನಾನು ದೇವರಲ್ಲಿ ಪ್ರಾರ್ಥಿಸಿದ್ದು ಅದು ಮೊದಲನೆಯ ಸಲವಂತೂ ಅಲ್ಲವೇ ಅಲ್ಲ. ನನ್ನ ಮೇಲಾಗಲಿ ನನ್ನ ಬಂಧುಗಳ ಮೇಲಾಗಲಿ ತಪ್ಪು ಹೊರಿಸಬೇಡ. ನಾವೆಲ್ಲ ನಿನ್ನ ಸೇವಕರು. ಈಗ ಏನು ನಡೆಯುತ್ತಿದೆಯೋ ಅದು ನನಗೆ ಸ್ವಲ್ಪವೂ ತಿಳಿದಿಲ್ಲ” ಎಂದು ಉತ್ತರಿಸಿದನು.

16 ಆದರೆ ರಾಜನು, “ಅಹೀಮೆಲೆಕನೇ, ನೀನು ಮತ್ತು ನಿನ್ನ ಬಂಧುಗಳೆಲ್ಲರೂ ಸಾಯಲೇಬೇಕು!” ಎಂದು ಹೇಳಿದನು. 17 ನಂತರ ರಾಜನು ತನ್ನ ಸಿಪಾಯಿಗಳಿಗೆ, “ನೀವು ಹೋಗಿ ಯೆಹೋವನ ಯಾಜಕರನ್ನು ಕೊಂದುಹಾಕಿ. ಅವರು ದಾವೀದನ ಪಕ್ಷ ವಹಿಸಿದ್ದಾರೆ. ದಾವೀದನು ಓಡಿಹೋಗುತ್ತಿರುವುದು ತಿಳಿದಿದ್ದರೂ ಅವರು ನನಗೆ ತಿಳಿಸಲಿಲ್ಲ!” ಎಂದನು.

ಆದರೆ ಯೆಹೋವನ ಯಾಜಕರನ್ನು ಕೊಲ್ಲಲು ಸೈನಿಕರು ನಿರಾಕರಿಸಿದರು. 18 ಆದ್ದರಿಂದ ರಾಜನು ದೋಯೇಗನಿಗೆ, “ನೀನು ಹೋಗಿ ಯಾಜಕರನ್ನು ಕೊಂದುಹಾಕು” ಎಂದು ಹೇಳಿದನು. ಆದ್ದರಿಂದ ಎದೋಮ್ಯನಾದ ದೋಯೇಗನು ಹೋಗಿ ಆ ದಿನ ಎಂಭತ್ತೈದು ಮಂದಿ ಯಾಜಕರನ್ನು ಕೊಂದನು. 19 ನೋಬ್ ಪಟ್ಟಣವು ಯಾಜಕರ ನಗರವಾಗಿತ್ತು. ದೋಯೇಗನು ನೋಬ್ ಪಟ್ಟಣದ ಎಲ್ಲ ಜನರನ್ನೂ ಅಂದರೆ ಗಂಡಸರನ್ನೂ ಹೆಂಗಸರನ್ನೂ ಮಕ್ಕಳನ್ನೂ ಹಸುಗೂಸುಗಳನ್ನೂ ತನ್ನ ಖಡ್ಗದಿಂದ ಕೊಂದುಹಾಕಿದನು. ದೋಯೇಗನು ಅವರ ಹಸುಗಳನ್ನೂ ಕತ್ತೆಗಳನ್ನೂ ಕುರಿಗಳನ್ನೂ ಕೊಂದುಬಿಟ್ಟನು.

20 ಆದರೆ ಎಬ್ಯಾತಾರನು ತಪ್ಪಿಸಿಕೊಂಡನು. ಎಬ್ಯಾತಾರನು ಅಹೀಮೆಲೆಕನ ಮಗ. ಅಹೀಮೆಲೆಕನು ಅಹೀಟೂಬನ ಮಗ. ಎಬ್ಯಾತಾರನು ಓಡಿಹೋಗಿ ದಾವೀದನ ಜೊತೆ ಸೇರಿಕೊಂಡನು. 21 ಯೆಹೋವನ ಯಾಜಕರನ್ನು ಸೌಲನು ಕೊಲ್ಲಿಸಿದನೆಂದು ಎಬ್ಯಾತಾರನು ದಾವೀದನಿಗೆ ತಿಳಿಸಿದನು. 22 ಆಗ ದಾವೀದನು ಎಬ್ಯಾತಾರನಿಗೆ, “ನಾನು ಎದೋಮ್ಯನಾದ ದೋಯೇಗನನ್ನು ಆ ದಿನ ನೋಬ್ ಪಟ್ಟಣದಲ್ಲಿ ನೋಡಿದೆ. ಅವನು ಸೌಲನಿಗೆ ತಿಳಿಸುತ್ತಾನೆಂದು ನನಗೆ ಗೊತ್ತಿತ್ತು! ನಿನ್ನ ತಂದೆಯ ಕುಟುಂಬದ ಮರಣಕ್ಕೆ ನಾನೇ ಕಾರಣ. 23 ನಿನ್ನನ್ನು ಕೊಲ್ಲಲು ಯಾವ ಮನುಷ್ಯ ಬಯಸಿರುವನೋ ಅವನು ನನ್ನನ್ನು ಸಹ ಕೊಲ್ಲಲು ಬಯಸಿದ್ದಾನೆ. ನನ್ನ ಜೊತೆಯಲ್ಲಿರು. ಆಗ ನೀನು ಸುರಕ್ಷಿತವಾಗಿರುವೆ” ಎಂದು ಹೇಳಿದನು.

ಕೆಯೀಲಾದಲ್ಲಿ ದಾವೀದನು

23 ಜನರು ದಾವೀದನಿಗೆ, “ನೋಡು, ಫಿಲಿಷ್ಟಿಯರು ಕೆಯೀಲಾದವರ ವಿರುದ್ಧ ಹೋರಾಡುತ್ತಿದ್ದಾರೆ; ಅವರು ಕಣದಿಂದ ಧಾನ್ಯವನ್ನು ಸೂರೆ ಮಾಡುತ್ತಿದ್ದಾರೆ” ಎಂದು ಹೇಳಿದನು.

ದಾವೀದನು, “ನಾನು ಹೋಗಿ ಈ ಫಿಲಿಷ್ಟಿಯರೊಡನೆ ಹೋರಾಡಲೇ?” ಎಂದು ಯೆಹೋವನನ್ನು ಕೇಳಿದನು.

ಯೆಹೋವನು ದಾವೀದನಿಗೆ, “ಹೋಗು ಫಿಲಿಷ್ಟಿಯರ ಮೇಲೆ ಆಕ್ರಮಣ ಮಾಡು. ಕೆಯೀಲಾವನ್ನು ರಕ್ಷಿಸು” ಎಂದು ಹೇಳಿದನು.

ಆದರೆ ದಾವೀದನ ಜನರು ಅವನಿಗೆ, “ನೋಡು, ನಾವು ಯೆಹೂದದಲ್ಲಿದ್ದರೂ ಹೆದರಿರುವೆವು. ಫಿಲಿಷ್ಟಿಯರ ಸೈನ್ಯವೆಲ್ಲಿದೆಯೋ ಅಲ್ಲಿಗೆ ನಾವು ಹೋದರೆ, ಇನ್ನೆಷ್ಟು ಹೆದರುತ್ತೇವೆ ಎಂಬುದನ್ನು ಯೋಚಿಸು” ಎಂದರು.

ದಾವೀದನು ಮತ್ತೆ ಯೆಹೋವನನ್ನು ಕೇಳಿದನು. ಯೆಹೋವನು ದಾವೀದನಿಗೆ, “ಕೆಯೀಲಾಕ್ಕೆ ಹೋಗು. ಫಿಲಿಷ್ಟಿಯರನ್ನು ಸೋಲಿಸಲು ನಾನು ನಿನಗೆ ಸಹಾಯ ಮಾಡುತ್ತೇನೆ” ಎಂದು ಹೇಳಿದನು. ಹೀಗೆ ದಾವೀದನು ಮತ್ತು ಅವನ ಜನರು ಕೆಯೀಲಾಕ್ಕೆ ಹೋದರು. ದಾವೀದನ ಜನರು ಫಿಲಿಷ್ಟಿಯರೊಡನೆ ಹೋರಾಡಿ ಅವರನ್ನು ಸೋಲಿಸಿ ಅವರ ಹಸುಗಳನ್ನು ವಶಪಡಿಸಿಕೊಂಡರು. ದಾವೀದನು ಈ ರೀತಿಯಲ್ಲಿ ಕೆಯೀಲಾದ ಜನರನ್ನು ರಕ್ಷಿಸಿದನು. (ಎಬ್ಯಾತಾರನು ದಾವೀದನ ಹತ್ತಿರಕ್ಕೆ ಓಡಿಹೋದಾಗ ತನ್ನೊಂದಿಗೆ ಒಂದು ಏಫೋದನ್ನು ತೆಗೆದುಕೊಂಡಿದ್ದನು.)

ದಾವೀದನು ಈಗ ಕೆಯೀಲಾದಲ್ಲಿದ್ದಾನೆಂದು ಜನರು ಸೌಲನಿಗೆ ತಿಳಿಸಿದರು. ಸೌಲನು, “ದೇವರು ದಾವೀದನನ್ನು ನನಗೆ ಕೊಟ್ಟಿದ್ದಾನೆ! ದಾವೀದನು ತಾನಾಗಿಯೇ ಸಿಕ್ಕಿಹಾಕಿಕೊಂಡಿದ್ದಾನೆ. ಅವನು, ಬಾಗಿಲುಗಳಿರುವ ಹಾಗೂ ಕಬ್ಬಿಣದ ಸಲಾಕೆಗಳಿಂದ ಬೀಗ ಹಾಕಬಲ್ಲ ಬಾಗಿಲುಗಳಿರುವ ಪಟ್ಟಣದೊಳಕ್ಕೆ ಹೋಗಿದ್ದಾನೆ” ಎಂದು ಹೇಳಿದನು. ಸೌಲನು ಯುದ್ಧಕ್ಕಾಗಿ ತನ್ನ ಸೈನ್ಯವನ್ನೆಲ್ಲ ಒಟ್ಟಿಗೆ ಕರೆದನು. ದಾವೀದನನ್ನೂ ಅವನ ಜನರನ್ನೂ ಆಕ್ರಮಿಸಲು ಕೆಯೀಲಾಕ್ಕೆ ಹೋಗಲು ಅವರೆಲ್ಲ ಸಿದ್ಧಗೊಂಡರು.

ಸೌಲನು ತನ್ನ ವಿರುದ್ಧವಾಗಿ ಉಪಾಯಗಳನ್ನು ಮಾಡುತ್ತಿದ್ದಾನೆಂಬುದು ದಾವೀದನಿಗೆ ತಿಳಿಯಿತು. ಆಗ ದಾವೀದನು ಯಾಜಕನಾದ ಎಬ್ಯಾತಾರನಿಗೆ, “ಎಫೋದನ್ನು ತೆಗೆದುಕೊಂಡು ಬಾ” ಎಂದನು.

10 ದಾವೀದನು, “ಇಸ್ರೇಲರ ದೇವರಾದ ಯೆಹೋವನೇ, ಸೌಲನು ನನಗಾಗಿ ಕೆಯೀಲಾಕ್ಕೆ ಬರುತ್ತಾನೆಂಬುದೂ ಈ ಪಟ್ಟಣವನ್ನು ನಾಶಗೊಳಿಸುತ್ತಾನೆಂಬುದೂ ತಿಳಿಯಿತು. 11 ಸೌಲನು ಕೆಯೀಲಾಕ್ಕೆ ಬರುತ್ತಾನೆಯೇ? ಕೆಯೀಲಾದ ಜನರು ನನ್ನನ್ನು ಸೌಲನಿಗೆ ಒಪ್ಪಿಸುತ್ತಾರೆಯೇ? ಇಸ್ರೇಲರ ದೇವರಾದ ಯೆಹೋವನೇ, ನಾನು ನಿನ್ನ ಸೇವಕ! ದಯವಿಟ್ಟು ನನಗೆ ತಿಳಿಸು!” ಎಂದು ಪ್ರಾರ್ಥಿಸಿದನು.

ಯೆಹೋವನು, “ಸೌಲನು ಬರುತ್ತಾನೆ” ಎಂದು ಉತ್ತರಿಸಿದನು.

12 ಅನಂತರ ದಾವೀದನು, “ಕೆಯೀಲಾದ ಜನರು ನನ್ನನ್ನೂ ನನ್ನ ಜನರನ್ನೂ ಸೌಲನಿಗೆ ಒಪ್ಪಿಸುತ್ತಾರೆಯೇ?” ಎಂದು ಕೇಳಿದನು.

ಯೆಹೋವನು, “ಅವರು ಒಪ್ಪಿಸುತ್ತಾರೆ” ಎಂದನು.

13 ಆದ್ದರಿಂದ ದಾವೀದನು ಮತ್ತು ಅವನ ಜನರು ಕೆಯೀಲಾವನ್ನು ಬಿಟ್ಟುಹೋದರು. ದಾವೀದನ ಜೊತೆಯಲ್ಲಿ ಸುಮಾರು ಆರುನೂರು ಜನರಿದ್ದರು. ದಾವೀದನು ಮತ್ತು ಅವನ ಜನರು ಸ್ಥಳದಿಂದ ಸ್ಥಳಕ್ಕೆ ಹೋಗುತ್ತಿದ್ದರು. ದಾವೀದನು ಕೆಯೀಲಾದಿಂದ ತಪ್ಪಿಸಿಕೊಂಡು ಹೋದನೆಂಬುದು ಸೌಲನಿಗೆ ತಿಳಿಯಿತು. ಆದ್ದರಿಂದ ಸೌಲನು ಆ ನಗರಕ್ಕೆ ಹೋಗಲಿಲ್ಲ.

ಸೌಲನು ದಾವೀದನನ್ನು ಅಟ್ಟಿಸಿಕೊಂಡು ಹೋಗುವನು

14 ದಾವೀದನು ಜೀಫ್ ಅರಣ್ಯದಲ್ಲಿರುವ ಬೆಟ್ಟಪ್ರದೇಶವಾದ ಆಶ್ರಯಗಿರಿಗಳಲ್ಲಿ ಅಡಗಿಕೊಂಡಿದ್ದನು. ಸೌಲನು ಪ್ರತಿದಿನವೂ ದಾವೀದನಿಗಾಗಿ ಹುಡುಕುತ್ತಿದ್ದನು, ಆದರೆ ದಾವೀದನನ್ನು ಹಿಡಿಯಲು ಯೆಹೋವನು ಸೌಲನಿಗೆ ಅವಕಾಶ ಕೊಡಲಿಲ್ಲ.

15 ದಾವೀದನು ಜೀಫ್ ಅರಣ್ಯದ ಹೋರೆಷದಲ್ಲಿ ಅಡಗಿಕೊಂಡಿದ್ದನು. ಸೌಲನು ತನ್ನನ್ನು ಕೊಲ್ಲಲು ಬರುತ್ತಾನೆಂದು ದಾವೀದನು ಹೆದರಿದ್ದನು. 16 ಆದರೆ ಸೌಲನ ಮಗನಾದ ಯೋನಾತಾನನು ಹೋರೆಷಿಗೆ ಹೋಗಿ ದಾವೀದನನ್ನು ಸಂಧಿಸಿ ದೇವರಲ್ಲಿ ಹೆಚ್ಚು ನಂಬಿಕೆಯನ್ನಿಡುವಂತೆ ಅವನನ್ನು ಪ್ರೋತ್ಸಾಹಿಸಿ, 17 “ಹೆದರಬೇಡ, ನನ್ನ ತಂದೆಯಾದ ಸೌಲನು ನಿನಗೆ ತೊಂದರೆ ಮಾಡುವುದಿಲ್ಲ. ನೀನು ಇಸ್ರೇಲಿನ ರಾಜನಾಗುವೆ! ನಾನು ನಿನಗೆ ಎರಡನೆಯವನಾಗುತ್ತೇನೆ. ಇದು ನನ್ನ ತಂದೆಗೂ ಸಹ ತಿಳಿದಿದೆ” ಎಂದು ಹೇಳಿದನು.

18 ಯೋನಾತಾನನು ಮತ್ತು ದಾವೀದನು ಯೆಹೋವನ ಸನ್ನಿಧಿಯಲ್ಲಿ ಒಂದು ಒಪ್ಪಂದವನ್ನು ಮಾಡಿಕೊಂಡರು. ನಂತರ ಯೋನಾತಾನನು ಮನೆಗೆ ಹೋದನು. ದಾವೀದನು ಹೋರೆಷಿನಲ್ಲಿ ನೆಲೆಸಿದನು.

ದಾವೀದನ ಬಗ್ಗೆ ಜೀಫಿನ ಜನರು ಸೌಲನಿಗೆ ತಿಳಿಸಿದರು

19 ಜೀಫಿನ ಜನರು ಗಿಬೆಯದಲ್ಲಿದ್ದ ಸೌಲನ ಬಳಿಗೆ ಬಂದು, “ದಾವೀದನು ನಮ್ಮ ಪ್ರಾಂತ್ಯದಲ್ಲಿ ಅಡಗಿಕೊಂಡಿದ್ದಾನೆ. ಅವನು ಹೋರೆಷಿನ ಕೋಟೆಯಲ್ಲಿದ್ದಾನೆ. ಅವನು ಜೆಸಿಮೋನಿನ ದಕ್ಷಿಣಕ್ಕಿರುವ ಹಕೀಲಾ ಬೆಟ್ಟದ ಮೇಲಿದ್ದಾನೆ. 20 ಈಗ ರಾಜನೇ, ನಿನಗಿಷ್ಟ ಬಂದಾಗ ಯಾವ ಸಮಯದಲ್ಲೇ ಆಗಲಿ ಬಂದುಬಿಡು. ದಾವೀದನನ್ನು ನಿನಗೆ ಒಪ್ಪಿಸುವುದು ನಮ್ಮ ಕರ್ತವ್ಯ” ಎಂದು ಹೇಳಿದರು.

21 ಸೌಲನು, “ನೀವು ನನಗೆ ಸಹಾಯ ಮಾಡುತ್ತಿರುವುದಕ್ಕಾಗಿ ಯೆಹೋವನು ನಿಮ್ಮನ್ನು ಆಶೀರ್ವದಿಸಲಿ. 22 ಹೋಗಿ, ಅವನ ಬಗ್ಗೆ ಹೆಚ್ಚು ತಿಳಿದುಕೊಳ್ಳಿ. ದಾವೀದನು ಎಲ್ಲಿ ನೆಲೆಸಿದ್ದಾನೆಂಬುದನ್ನೂ ಅವನನ್ನು ನೋಡಿದವರು ಯಾರೆಂಬುದನ್ನೂ ಕಂಡುಹಿಡಿಯಿರಿ. ಅವನು ಬಹಳ ಯುಕ್ತಿವಂತನಾಗಿದ್ದಾನೆ. 23 ದಾವೀದನು ಅಡಗಿಕೊಳ್ಳತಕ್ಕ ಎಲ್ಲಾ ಸ್ಥಳಗಳನ್ನು ಕಂಡುಹಿಡಿಯಿರಿ. ನೀವು ಹಿಂದಿರುಗಿ ನನ್ನ ಬಳಿಗೆ ಬಂದು ಎಲ್ಲವನ್ನೂ ನನಗೆ ತಿಳಿಸಿ. ಅನಂತರ ನಾನು ನಿಮ್ಮೊಂದಿಗೆ ಬರುತ್ತೇನೆ. ದಾವೀದನು ಆ ಪ್ರಾಂತ್ಯದಲ್ಲಿದ್ದರೆ, ನಾನು ಅವನನ್ನು ಕಂಡು ಹಿಡಿಯುತ್ತೇನೆ. ಅವನು ಯೆಹೂದ ಕುಲಗಳಲ್ಲಿ ಎಲ್ಲೇ ಇದ್ದರೂ ಸಹ ನಾನು ಅವನನ್ನು ಕಂಡುಹಿಡಿಯುತ್ತೇನೆ” ಎಂದು ಹೇಳಿದನು.

24 ನಂತರ ಜೀಫಿನ ಜನರು ಜೀಫಿಗೆ ಹಿಂದಿರುಗಿದರು. ಸೌಲನು ಅನಂತರ ಅಲ್ಲಿಗೆ ಹೋದನು.

ದಾವೀದನು ಮತ್ತು ಅವನ ಜನರು ಮಾವೋನ್ ಅರಣ್ಯದ ದಕ್ಷಿಣ ದಿಕ್ಕಿನಲ್ಲಿರುವ ಜೆಸಿಮೋನಿನ ಮರಳುಗಾಡಿನ ಪ್ರಾಂತ್ಯದಲ್ಲಿದ್ದರು. 25 ಸೌಲನು ಮತ್ತು ಅವನ ಜನರು ದಾವೀದನನ್ನು ಕಂಡುಹಿಡಿಯಲು ಹೋದರು. ಆದರೆ ದಾವೀದನನ್ನು ಜನರು ಎಚ್ಚರಿಸಿದರು. ಸೌಲನು ಅವನನ್ನು ಹುಡುಕುತ್ತಿರುವನೆಂದು ಜನರು ಅವನಿಗೆ ಹೇಳಿದರು. ದಾವೀದನು ಮಾವೋನಿನ ಅರಣ್ಯದಲ್ಲಿರುವ ಕಡಿದಾದ ಬೆಟ್ಟಕ್ಕೆ ಹೋದನು. ದಾವೀದನು ಮಾವೋನಿನ ಅರಣ್ಯಕ್ಕೆ ಹೋದನೆಂಬುದನ್ನು ಕೇಳಿದ ಸೌಲನು ದಾವೀದನನ್ನು ಕಂಡುಹಿಡಿಯಲು ಆ ಸ್ಥಳಕ್ಕೆ ಹೋದನು.

26 ಸೌಲನು ಬೆಟ್ಟದ ಒಂದು ದಿಕ್ಕಿನಲ್ಲಿದ್ದನು. ದಾವೀದ ಮತ್ತು ಅವನ ಜನರು ಅದೇ ಬೆಟ್ಟದ ಮತ್ತೊಂದು ದಿಕ್ಕಿನಲ್ಲಿದ್ದರು. ದಾವೀದನು ಸೌಲನಿಂದ ದೂರ ಹೋಗಲು ತವಕಿಸುತ್ತಿದ್ದನು. ದಾವೀದನನ್ನು ಅವನ ಜನರೊಡನೆ ಬಂಧಿಸಲು ಸೌಲನು ತನ್ನ ಸೈನಿಕರೊಂದಿಗೆ ಬೆಟ್ಟದ ಸುತ್ತಲೂ ಹೋಗುತ್ತಿದ್ದನು.

27 ಆದರೆ ಸೌಲನ ಬಳಿಗೆ ಒಬ್ಬ ಸಂದೇಶಕನು ಬಂದು, “ಫಿಲಿಷ್ಟಿಯರು ನಮ್ಮನ್ನು ಆಕ್ರಮಣ ಮಾಡುತ್ತಿದ್ದಾರೆ, ಬೇಗ ಬಾ!” ಎಂದು ಹೇಳಿದನು.

28 ಆದ್ದರಿಂದ ದಾವೀದನನ್ನು ಅಟ್ಟಿಸಿಕೊಂಡು ಹೋಗುವುದನ್ನು ಸೌಲನು ನಿಲ್ಲಿಸಿ ಫಿಲಿಷ್ಟಿಯರೊಡನೆ ಹೋರಾಡಲು ಹೋದನು. ಆದ್ದರಿಂದಲೇ ಜನರು ಆ ಜಾಗವನ್ನು “ಜಾರುಬಂಡೆ” ಎಂದು ಕರೆಯುತ್ತಾರೆ. 29 ದಾವೀದನು ಮಾವೋನ್ ಅರಣ್ಯವನ್ನು ಬಿಟ್ಟು ಏಂಗೆದಿಯ ಕೋಟೆಗಳಿಗೆ ಹೋದನು.

ದಾವೀದನಿಂದ ಸೌಲನಿಗಾದ ಅವಮಾನ

24 ಸೌಲನು ಫಿಲಿಷ್ಟಿಯರನ್ನು ಅಟ್ಟಿಸಿಕೊಂಡು ಹೋಗಿ ಓಡಿಸಿದನಂತರ, ಅವನಿಗೆ ಜನರು, “ದಾವೀದನು ಏಂಗೆದಿಯ ಹತ್ತಿರದ ಮರಳುಗಾಡಿನಲ್ಲಿದ್ದಾನೆ” ಎಂದು ಹೇಳಿದರು.

ಇಸ್ರೇಲಿನ ಮೂರು ಸಾವಿರ ಜನರನ್ನು ಸೌಲನು ಆರಿಸಿದನು. ಸೌಲನು ಈ ಜನರೊಂದಿಗೆ ದಾವೀದನನ್ನು ಮತ್ತು ಅವನ ಜನರನ್ನು ಹುಡುಕಲು ಆರಂಭಿಸಿದನು. ಅವರು ಕಾಡು ಹೋತದ ಬಂಡೆಗಳ ಹತ್ತಿರ ಹುಡುಕಿದರು. ಸೌಲನು ರಸ್ತೆಯ ಪಕ್ಕದ ಕುರಿದೊಡ್ಡಿಗೆ ಬಂದನು. ಅಲ್ಲಿಗೆ ಸಮೀಪದಲ್ಲಿ ಒಂದು ಗವಿಯಿದ್ದಿತು. ಸೌಲನು ಶೌಚಕ್ಕೋಸ್ಕರ ಗವಿಯ ಒಳಗಡೆಗೆ ಹೋದನು. ದಾವೀದನೂ ಅವನ ಜನರೂ ಅದೇ ಗವಿಯ ಹಿಂದಗಡೆ ಅಡಗಿಕೊಂಡಿದ್ದರು. ಜನರು ದಾವೀದನಿಗೆ, “ಯೆಹೋವನು ಈ ದಿನವನ್ನೇ ಕುರಿತು ನಿನ್ನೊಂದಿಗೆ ಮಾತನಾಡಿದನು. ಯೆಹೋವನು ನಿನಗೆ, ‘ನಾನು ನಿನ್ನ ಶತ್ರುವನ್ನು ನಿನಗೆ ಒಪ್ಪಿಸುತ್ತೇನೆ. ನಿನ್ನ ಇಷ್ಟದಂತೆ ಶತ್ರುವಿಗೆ ಏನು ಬೇಕಾದರೂ ಮಾಡು’ ಎಂದು ಹೇಳಿದನು” ಎಂದರು.

ನಂತರ ದಾವೀದನು ಸೌಲನ ಹತ್ತಿರಕ್ಕೆ ತೆವಳುತ್ತಾ ಹೋಗಿ ಸೌಲನ ಅಂಗಿಯ ಒಂದು ಮೂಲೆಯನ್ನು ಕತ್ತರಿಸಿದನು. ದಾವೀದನನ್ನು ಸೌಲನು ನೋಡಲಿಲ್ಲ. ತರುವಾಯ ಸೌಲನ ಅಂಗಿಯ ಮೂಲೆಯನ್ನು ಕತ್ತರಿಸಿದ್ದಕ್ಕಾಗಿ ದಾವೀದನಿಗೆ ಅಸಮಾಧಾನವಾಯಿತು. ದಾವೀದನು ತನ್ನ ಜನರಿಗೆ, “ಸೌಲನು ಯೆಹೋವನಿಂದ ಅಭಿಷೇಕಿಸಲ್ಪಟ್ಟವನೂ ನನ್ನ ರಾಜನೂ ಆಗಿರುವುದರಿಂದ ನಾನು ಅವನ ವಿರುದ್ಧವಾಗಿ ಏನೂ ಮಾಡಬಾರದು!” ಎಂದು ಹೇಳಿದನು. ದಾವೀದನು ತನ್ನ ಜನರನ್ನು ತಡೆಯಲು ಈ ಮಾತುಗಳನ್ನು ಹೇಳಿದನು. ಸೌಲನನ್ನು ಆಕ್ರಮಿಸಲು ದಾವೀದನು ತನ್ನ ಜನರಿಗೆ ಅವಕಾಶ ಕೊಡಲಿಲ್ಲ.

ಸೌಲನು ಗವಿಯನ್ನು ಬಿಟ್ಟು ತನ್ನ ದಾರಿಯಲ್ಲಿ ಹೊರಟನು. ದಾವೀದನು ಗವಿಯಿಂದ ಹೊರಗೆ ಬಂದನು. ದಾವೀದನು ಸೌಲನಿಗೆ, “ಅರಸನೇ, ನನ್ನ ಒಡೆಯನೇ!” ಎಂದು ಕೂಗಿದನು.

ಸೌಲನು ಹಿಂದಿರುಗಿ ನೋಡಿದಾಗ ದಾವೀದನು ಅವನಿಗೆ ಸಾಷ್ಟಾಂಗನಮಸ್ಕಾರಮಾಡಿ, “‘ದಾವೀದನು ನಿನಗೆ ಕೇಡುಮಾಡಲು ಸಂಚುಗಳನ್ನು ಮಾಡುತ್ತಿದ್ದಾನೆ’ ಎಂಬುದಾಗಿ ಜನರು ಹೇಳುವಾಗ ನೀನು ಕೇಳುವುದೇಕೆ? 10 ನಾನು ನಿನಗೆ ಕೇಡುಮಾಡಲು ಇಚ್ಛಿಸುವುದಿಲ್ಲ! ನೀನು ಅದನ್ನು ನಿನ್ನ ಸ್ವಂತ ಕಣ್ಣುಗಳಿಂದ ನೋಡಬಹುದು! ಈ ದಿನ ಗವಿಯಲ್ಲಿ ಯೆಹೋವನು ನಿನ್ನನ್ನು ನನಗೆ ಒಪ್ಪಿಸಿದ್ದನು. ಆದರೆ ನಾನು ನಿನ್ನನ್ನು ಕೊಲ್ಲಲು ನಿರಾಕರಿಸಿದೆ. ನಾನು ನಿನಗೆ ದಯಾಳುವಾಗಿದ್ದೆ. ‘ನಾನು ನನ್ನ ಒಡೆಯನಿಗೆ ಕೇಡು ಮಾಡುವುದಿಲ್ಲ. ಸೌಲನು ಯೆಹೋವನಿಂದ ಅಭಿಷೇಕಿಸಲ್ಪಟ್ಟ ರಾಜ!’ 11 ನನ್ನ ತಂದೆಯೇ, ನನ್ನ ಕೈಯಲ್ಲಿರುವ ಚೂರು ಬಟ್ಟೆಯನ್ನು ನೋಡು. ನಾನು ನಿನ್ನ ಅಂಗಿಯ ಮೂಲೆಯನ್ನು ಕತ್ತರಿಸಿಹಾಕಿದೆ. ನಾನು ನಿನ್ನನ್ನು ಕೊಲ್ಲಬಹುದಿತ್ತು, ಆದರೆ ಕೊಲ್ಲಲಿಲ್ಲ! ನೀನು ಇದನ್ನು ಅರ್ಥಮಾಡಿಕೊಳ್ಳಬೇಕೆಂದು ನಾನು ಬಯಸಿದ್ದೇನೆ. ನಾನು ನಿನ್ನ ವಿರುದ್ಧವಾಗಿ ಯಾವ ಸಂಚನ್ನೂ ಮಾಡುತ್ತಿಲ್ಲವೆಂದು ನೀನು ತಿಳಿದುಕೊಳ್ಳಬೇಕಾಗಿದೆ! ನಾನು ನಿನಗೆ ಯಾವ ತಪ್ಪನ್ನೂ ಮಾಡಿಲ್ಲ! ಆದರೆ ನೀನು ನನ್ನನ್ನು ಹುಡುಕುತ್ತಿರುವೆ; ನನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿರುವೆ. 12 ಯೆಹೋವನೇ ನಮಗೆ ನ್ಯಾಯಾಧೀಶನಾಗಿರಲಿ! ನೀನು ಮಾಡಿರುವ ತಪ್ಪಿಗಾಗಿ ಯೆಹೋವನು ನಿನ್ನನ್ನು ದಂಡಿಸಲಿ. ಆದರೆ ನಾನು ನಿನ್ನೊಡನೆ ಹೋರಾಡುವುದಿಲ್ಲ.

13 ‘ಕೆಟ್ಟಕಾರ್ಯಗಳನ್ನು ಕೆಟ್ಟ ಜನರೇ ಮಾಡುತ್ತಾರೆ!’

ಎಂಬ ಹಳೆಯ ನಾಣ್ಣುಡಿಯೊಂದಿದೆ.

“ನಾನು ಕೆಟ್ಟದ್ದನ್ನೇನೂ ಮಾಡಿಲ್ಲ! ನಾನು ಕೆಟ್ಟ ವ್ಯಕ್ತಿಯಲ್ಲ! ಆದ್ದರಿಂದ ನಾನು ನಿನಗೆ ಕೇಡು ಮಾಡುವುದಿಲ್ಲ! 14 ನೀನು ಯಾರನ್ನು ಅಟ್ಟಿಸಿಕೊಂಡು ಹೋಗುತ್ತಿರುವೆ? ಇಸ್ರೇಲರ ರಾಜನಾದ ನೀನು ಯಾರೊಂದಿಗೆ ಹೋರಾಡಬೇಕೆಂದಿರುವೆ? ನಿನಗೆ ಕೇಡು ಮಾಡಬಹುದಾದವನನ್ನು ನೀನು ಅಟ್ಟಿಸಿಕೊಂಡು ಹೋಗುತ್ತಿಲ್ಲ! ನೀನು ಸತ್ತ ನಾಯಿಯನ್ನೋ ಇಲ್ಲವೆ ಚಿಟ್ಟೆಯನ್ನೋ ಅಟ್ಟಿಸಿಕೊಂಡು ಹೋಗುತ್ತಿರುವೆ! 15 ಯೆಹೋವನೇ ನಮ್ಮಿಬ್ಬರಿಗೂ ನ್ಯಾಯಾಧೀಶನಾಗಿದ್ದು ತೀರ್ಪು ನೀಡಲಿ. ಯೆಹೋವನು ನನ್ನ ಪರವಾಗಿ ವಾದಿಸಿ ನಾನು ನೀತಿವಂತನೆಂದು ನಿರೂಪಿಸಿ ನನ್ನನ್ನು ನಿನ್ನಿಂದ ರಕ್ಷಿಸುತ್ತಾನೆ” ಎಂದು ಹೇಳಿದನು.

16 ದಾವೀದನು ಈ ಮಾತುಗಳನ್ನು ಹೇಳಿದಾಗ ಸೌಲನು, “ನನ್ನ ಮಗನಾದ ದಾವೀದನೇ, ಇದು ನಿನ್ನ ಧ್ವನಿಯೇ?” ಎಂದು ಕೇಳಿದನು. ನಂತರ ಸೌಲನು ಅಳಲಾರಂಭಿಸಿದನು. ಸೌಲನು ಬಹಳ ಅತ್ತನು. 17 ಸೌಲನು, “ನೀನೇ ನೀತಿವಂತನು. ನಾನು ತಪ್ಪು ಮಾಡಿದೆ. ನೀನು ನನಗೆ ಒಳ್ಳೆಯವನಾಗಿದ್ದೆ; ಆದರೆ ನಾನು ನಿನಗೆ ಕೆಟ್ಟವನಾದೆ. 18 ನೀನು ನನಗೆ ಮಾಡಿದ ಒಳ್ಳೆಯ ಕಾರ್ಯಗಳ ಬಗ್ಗೆ ನನಗೆ ತಿಳಿಸಿರುವೆ. ಯೆಹೋವನು ನನ್ನನ್ನು ನಿನ್ನ ಬಳಿಗೆ ಕರೆದು ತಂದನು, ಆದರೆ ನೀನು ನನ್ನನ್ನು ಕೊಲ್ಲಲಿಲ್ಲ. 19 ಒಬ್ಬ ಮನುಷ್ಯನು ತನ್ನ ಶತ್ರುವನ್ನು ಹಿಡಿದುಕೊಂಡರೆ, ಅವನಿಗೆ ಕೇಡನ್ನು ಮಾಡದೆ ಕಳುಹಿಸಿಬಿಡುವನೇ? ಅವನು ಶತ್ರುವಿಗೆ ಒಳ್ಳೆಯದನ್ನು ಮಾಡುವುದಿಲ್ಲ. ನೀನು ನನಗೆ ಈ ದಿನ ಒಳ್ಳೆಯದನ್ನು ಮಾಡಿರುವುದರಿಂದ ಯೆಹೋವನು ನಿನಗೆ ಒಳ್ಳೆಯದನ್ನು ಮಾಡಲಿ. 20 ನೀನು ನೂತನ ರಾಜನಾಗುವೆಯೆಂಬುದು ನನಗೆ ತಿಳಿದಿದೆ. ಇಸ್ರೇಲ್ ರಾಜ್ಯವನ್ನು ನೀನು ಆಳುವೆ. 21 ಈಗ ನೀನು ನನಗೆ ಒಂದು ಪ್ರಮಾಣವನ್ನು ಮಾಡು. ನನ್ನ ಸಂತಾನದವರನ್ನು ನೀನು ಕೊಲ್ಲುವುದಿಲ್ಲವೆಂದು ಯೆಹೋವನ ಹೆಸರಿನಲ್ಲಿ ನನಗೆ ಪ್ರಮಾಣಮಾಡು. ನನ್ನ ತಂದೆಯ ಕುಲದಲ್ಲಿ ನನ್ನ ಹೆಸರನ್ನು ನಾಶಮಾಡುವುದಿಲ್ಲವೆಂದು ಪ್ರಮಾಣ ಮಾಡು” ಎಂದು ಬೇಡಿಕೊಂಡನು.

22 ಸೌಲನ ವಂಶದವರನ್ನು ಕೊಲ್ಲುವುದಿಲ್ಲವೆಂದು ದಾವೀದನು ಪ್ರಮಾಣಮಾಡಿದನು. ನಂತರ ಸೌಲನು ಮನೆಗೆ ಹಿಂದಿರುಗಿದನು. ದಾವೀದನು ಮತ್ತು ಅವನ ಜನರು ತಾವು ಅಡಗಿಕೊಂಡಿದ್ದ ಸ್ಥಳಕ್ಕೆ ಹೊರಟುಹೋದರು.

ಲೂಕ 12:1-31

ಫರಿಸಾಯರಂತಾಗಬೇಡಿ

12 ಸಾವಿರಾರು ಜನರು ಒಬ್ಬರನ್ನೊಬ್ಬರು ನೂಕುತ್ತಾ ಕಿಕ್ಕಿರಿದು ನೆರೆದಿದ್ದರು. ಜನರಿಗೆ ಉಪದೇಶಿಸುವ ಮೊದಲು ಯೇಸು ತನ್ನ ಶಿಷ್ಯರಿಗೆ, “ಫರಿಸಾಯರ ಹುಳಿಹಿಟ್ಟಿನ ಬಗ್ಗೆ ಅಂದರೆ ಅವರ ಕಪಟತನದ ಬಗ್ಗೆ ಎಚ್ಚರಿಕೆಯಾಗಿರಿ. ಮರೆಯಾದ ಪ್ರತಿಯೊಂದೂ ಬಯಲಾಗುವುದು. ಗುಪ್ತವಾಗಿರುವ ಪ್ರತಿಯೊಂದೂ ಪ್ರಕಟಿಸಲ್ಪಡುವುದು. ಕತ್ತಲಿನಲ್ಲಿ (ಗುಪ್ತವಾಗಿ) ನೀವು ಹೇಳುವ ವಿಷಯಗಳು ಬೆಳಕಿನಲ್ಲಿ (ಬಹಿರಂಗವಾಗಿ) ತಿಳಿಸಲ್ಪಡುವವು. ಗುಪ್ತವಾಗಿ ಕೋಣೆಯಲ್ಲಿ ನೀವು ಪಿಸುಗುಟ್ಟುವ ವಿಷಯಗಳು, ಮನೆಯ ಮೇಲಿನಿಂದ ಗಟ್ಟಿಯಾಗಿ ಪ್ರಕಟಿಸಲ್ಪಡುವವು” ಎಂದು ಹೇಳಿದನು.

ದೇವರಿಗೆ ಮಾತ್ರ ಭಯಪಡಿರಿ

(ಮತ್ತಾಯ 10:28-31)

ಬಳಿಕ ಯೇಸು ಜನರಿಗೆ ಹೀಗೆಂದನು: “ಗೆಳೆಯರೇ, ನಾನು ನಿಮಗೆ ಹೇಳುವುದೇನೆಂದರೆ, ಮನುಷ್ಯರಿಗೆ ಭಯಪಡಬೇಡಿ. ಅವರು ನಿಮ್ಮನ್ನು ಕೊಲ್ಲಬಹುದಷ್ಟೇ. ಆ ಬಳಿಕ ಬೇರೇನೂ ಮಾಡಲು ಅವರಿಂದಾಗದು. ನೀವು ಯಾರಿಗೆ ಭಯಪಡಬೇಕೆಂದರೆ, ನಿಮ್ಮನ್ನು ಕೊಂದು ನರಕಕ್ಕೆ ಹಾಕಲು ಅಧಿಕಾರವುಳ್ಳಾತನಿಗಷ್ಟೇ (ದೇವರಿಗೆ). ಹೌದು, ಆತನೊಬ್ಬನಿಗೇ ನೀವು ಭಯಪಡಬೇಕು.

“ಐದು ಗುಬ್ಬಿಗಳ ಬೆಲೆ ಕೇವಲ ಎರಡು ಪೈಸೆಗಳು. ಆದರೆ ದೇವರು ಅವುಗಳಲ್ಲಿ ಒಂದನ್ನೂ ಮರೆತುಬಿಡುವುದಿಲ್ಲ. ಹೌದು, ನಿಮ್ಮ ತಲೆಯಲ್ಲಿ ಎಷ್ಟು ಕೂದಲುಗಳಿವೆ ಎಂಬುದು ಸಹ ದೇವರಿಗೆ ಗೊತ್ತಿದೆ. ಹೆದರಬೇಡಿರಿ. ನೀವು ಅನೇಕ ಗುಬ್ಬಿಗಳಿಗಿಂತ ಹೆಚ್ಚು ಬೆಲೆಯುಳ್ಳವರಾಗಿದ್ದೀರಿ.

ಯೇಸುವಿನ ಕುರಿತು ನಾಚಿಕೆಪಡಬೇಡಿರಿ

(ಮತ್ತಾಯ 10:32-33; 12:32; 10:19-20)

“ನಾನು ನಿಮಗೆ ಹೇಳುವುದೇನೆಂದರೆ, ಯಾವನಾದರೂ ಬೇರೆಯವರ ಎದುರಿನಲ್ಲಿ ತಾನು ನನ್ನವನೆಂದು ಹೇಳಿದರೆ, ನಾನು ಸಹ[a] ಅವನನ್ನು ನನ್ನವನೆಂದು ದೇವದೂತರ ಮುಂದೆ ಹೇಳುವೆನು. ಆದರೆ ಯಾವನಾದರೂ ಬೇರೆಯವರ ಎದುರಿನಲ್ಲಿ ತಾನು ನನ್ನವನಲ್ಲವೆಂದು ಹೇಳಿದರೆ, ನಾನು ಸಹ ದೇವದೂತರ ಮುಂದೆ ಅವನನ್ನು ನನ್ನವನಲ್ಲವೆಂದು ಹೇಳುವೆನು.

10 “ಯಾವನಾದರೂ ಮನುಷ್ಯಕುಮಾರನಿಗೆ ವಿರೋಧವಾಗಿ ಮಾತಾಡಿದರೆ ಅವನಿಗೆ ಕ್ಷಮೆ ದೊರಕಬಹುದು. ಆದರೆ ಪವಿತ್ರಾತ್ಮನನ್ನು ದೂಷಿಸುವವನಿಗೆ ಕ್ಷಮೆಯೇ ಇಲ್ಲ.

11 “ಜನರು ನಿಮ್ಮನ್ನು ಸಭಾಮಂದಿರಗಳಿಗೂ ನ್ಯಾಯಾಧಿಪತಿಗಳ ಮತ್ತು ದೇಶಾಧಿಕಾರಿಗಳ ಬಳಿಗೂ ಎಳೆದೊಯ್ಯುವಾಗ ಅವರಿಗೆ ಏನು ಹೇಳಬೇಕೆಂದು ಚಿಂತೆ ಮಾಡಬೇಡಿ. 12 ಆ ಸಮಯದಲ್ಲಿ ನೀವು ಹೇಳಬೇಕಾದುದನ್ನು ಪವಿತ್ರಾತ್ಮನೇ ನಿಮಗೆ ತಿಳಿಸುವನು.”

ಸ್ವಾರ್ಥತೆಯ ಬಗ್ಗೆ ಯೇಸುವಿನ ಎಚ್ಚರಿಕೆ

13 ಸಮೀಪದಲ್ಲಿದ್ದ ಒಬ್ಬನು ಯೇಸುವಿಗೆ, “ಬೋಧಕನೇ, ನಮ್ಮ ತಂದೆ ಇದೀಗ ಸತ್ತುಹೋದನು. ನಮ್ಮ ತಂದೆಯ ಆಸ್ತಿಯಲ್ಲಿ ನನಗೆ ಪಾಲುಕೊಡಬೇಕೆಂದು ನನ್ನ ಅಣ್ಣನಿಗೆ ಹೇಳು” ಎಂದು ಹೇಳಿದನು.

14 ಆದರೆ ಯೇಸು ಅವನಿಗೆ, “ನಾನು ನಿಮ್ಮ ನ್ಯಾಯಾಧಿಪತಿ ಎಂದಾಗಲಿ ನಿಮ್ಮ ತಂದೆಯ ಆಸ್ತಿಯನ್ನು ನಿಮ್ಮಿಬ್ಬರಿಗೆ ಹಂಚಿಕೊಡುವವನು ಎಂದಾಗಲಿ ನಿನಗೆ ಯಾರು ಹೇಳಿದರು?” ಎಂದು ಕೇಳಿದನು. 15 ಬಳಿಕ ಯೇಸು ನೆರೆದಿದ್ದ ಜನರಿಗೆ, “ಎಚ್ಚರಿಕೆ, ಯಾವ ವಿಧವಾದ ಸ್ವಾರ್ಥಕ್ಕೂ ಒಳಗಾಗದಂತೆ ಜಾಗರೂಕರಾಗಿರಿ. ಒಬ್ಬನಿಗೆ ಎಷ್ಟೇ ಆಸ್ತಿಯಿದ್ದರೂ ಅದರಿಂದ ಅವನು ಜೀವವನ್ನು ಪಡೆದುಕೊಳ್ಳಲಾರನು” ಎಂದನು.

16 ಬಳಿಕ ಯೇಸು ಈ ಸಾಮ್ಯವನ್ನು ಹೇಳಿದನು: “ಒಬ್ಬ ಐಶ್ವರ್ಯವಂತನಿದ್ದನು. ಅವನಿಗೆ ಬಹಳ ಜಮೀನಿತ್ತು. ಒಮ್ಮೆ ಅವನ ಜಮೀನಿನಲ್ಲಿ ಸಮೃದ್ಧಿಯಾದ ಬೆಳೆ ಆಯಿತು. 17 ಆಗ ಐಶ್ವರ್ಯವಂತನು, ‘ನಾನೇನು ಮಾಡಲಿ? ನನ್ನ ಬೆಳೆಯನ್ನೆಲ್ಲಾ ತುಂಬಿಡಲು ನನಗೆ ಸ್ಥಳವಿಲ್ಲವಲ್ಲಾ!’ ಎಂದುಕೊಂಡನು.

18 “ಬಳಿಕ ಅವನು, ‘ನಾನೇನು ಮಾಡಬೇಕೆಂಬುದು ನನಗೆ ತಿಳಿದದೆ. ನನ್ನ ಕಣಜಗಳನ್ನು ಕೆಡವಿ, ದೊಡ್ಡ ಕಣಜಗಳನ್ನು ಕಟ್ಟುವೆನು! ನನ್ನ ಹೊಸ ಕಣಜಗಳಲ್ಲಿ ಗೋಧಿಯನ್ನೂ ಒಳ್ಳೆಯ ಪದಾರ್ಥಗಳನ್ನೂ ತುಂಬಿಸಿಡುವೆನು.’ 19 ಆ ಬಳಿಕ ನಾನು ‘ನನಗೆ ಅನೇಕ ವರ್ಷಗಳವರೆಗೆ ಬೇಕಾದಷ್ಟು ಸರಕನ್ನು ಕೂಡಿಸಿಟ್ಟಿದ್ದೇನೆ. ವಿಶ್ರಮಿಸಿಕೊ, ತಿನ್ನು, ಕುಡಿ, ಸಂತೋಷಪಡು! ಎಂದು ಹೇಳಿಕೊಳ್ಳುವೆನು’ ಎಂಬುದಾಗಿ ಆಲೋಚಿಸಿಕೊಂಡನು.

20 “ಆದರೆ ದೇವರು ಅವನಿಗೆ, ‘ನೀನು ಬುದ್ಧಿಹೀನ! ಈ ರಾತ್ರಿ ನೀನು ಸಾಯುವೆ! ಈಗ ಹೇಳು, ನೀನು ಕೂಡಿಟ್ಟ ಪದಾರ್ಥಗಳ ಗತಿ ಏನಾಗುವುದು? ಅವು ಯಾರ ಪಾಲಾಗುತ್ತವೆ?’ ಎಂದು ಕೇಳಿದನು.

21 “ತನಗೋಸ್ಕರ ಮಾತ್ರ ಸಂಪತ್ತನ್ನು ಕೂಡಿಸಿಟ್ಟುಕೊಳ್ಳುವವನ ಗತಿ ಇದೇ. ದೇವರ ದೃಷ್ಟಿಯಲ್ಲಿ ಅವನು ಐಶ್ವರ್ಯವಂತನಲ್ಲ.”

ದೇವರ ರಾಜ್ಯಕ್ಕೆ ಮೊದಲನೆ ಪ್ರಾಧಾನ್ಯತೆ

(ಮತ್ತಾಯ 6:25-34,19-21)

22 ಯೇಸು ತನ್ನ ಶಿಷ್ಯರಿಗೆ ಹೀಗೆ ಹೇಳಿದನು: “ಈ ಕಾರಣದಿಂದ ನಾನು ನಿಮಗೆ ಹೇಳುವುದೇನೆಂದರೆ, ನಿಮ್ಮ ಪ್ರಾಣಧಾರಣೆಗೆ ಬೇಕಾದ ಊಟಕ್ಕಾಗಿ ಮತ್ತು ತೊಟ್ಟುಕೊಳ್ಳಲು ಬೇಕಾದ ಬಟ್ಟೆಗಾಗಿ ಚಿಂತಿಸಬೇಡಿರಿ. 23 ಆಹಾರಕ್ಕಿಂತ ಪ್ರಾಣ ಹೆಚ್ಚು ಪ್ರಾಮುಖ್ಯವಾದದ್ದು. ಬಟ್ಟೆಗಿಂತಲೂ ದೇಹ ಹೆಚ್ಚು ಪ್ರಾಮುಖ್ಯವಾದದ್ದು. 24 ಪಕ್ಷಿಗಳನ್ನು ನೋಡಿರಿ. ಅವು ಬಿತ್ತುವುದೂ ಇಲ್ಲ, ಕೊಯ್ಯುವುದೂ ಇಲ್ಲ. ಅವು ಆಹಾರವನ್ನು ಮನೆಗಳಲ್ಲಾಗಲಿ ಕಣಜಗಳಲ್ಲಾಗಲಿ ತುಂಬಿಟ್ಟುಕೊಳ್ಳುವುದಿಲ್ಲ. ದೇವರೇ ಅವುಗಳನ್ನು ಪರಿಪಾಲಿಸುತ್ತಾನೆ. ನೀವು ಪಕ್ಷಿಗಳಿಗಿಂತ ಎಷ್ಟೋ ಅಮೂಲ್ಯರಾಗಿದ್ದೀರಿ. 25 ನೀವು ಊಟಬಟ್ಟೆಗಳಿಗಾಗಿ ಎಷ್ಟೇ ಚಿಂತಿಸಿದರೂ ನಿಮ್ಮ ಆಯುಷ್ಯೇನೂ ಹೆಚ್ಚಾಗುವುದಿಲ್ಲ. 26 ಚಿಕ್ಕಕಾರ್ಯಗಳನ್ನೇ ಮಾಡಲು ನಿಮಗೆ ಸಾಧ್ಯವಿಲ್ಲದಿರುವಾಗ, ದೊಡ್ಡಕಾರ್ಯಗಳ ಕುರಿತು ನೀವು ಚಿಂತಿಸುವುದೇಕೆ?

27 “ಅಡವಿಯ ಹೂವುಗಳು ಬೆಳೆಯುವ ಬಗೆಯನ್ನು ನೋಡಿರಿ. ಅವು ದುಡಿಯುವುದಿಲ್ಲ. ತಮಗಾಗಿ ಉಡುಪುಗಳನ್ನು ಹೊಲಿದುಕೊಳ್ಳುವುದಿಲ್ಲ. ಆದರೂ ಸೊಲೊಮೋನ ರಾಜನು ತನ್ನ ಸಕಲ ವೈಭವದಲ್ಲಿ ಇದ್ದಾಗಲೂ ಈ ಹೂವುಗಳಲ್ಲಿ ಒಂದರಷ್ಟೂ ಸುಂದರವಾದ ಉಡುಪನ್ನು ಧರಿಸಿರಲಿಲ್ಲ. 28 ದೇವರು ಬಯಲಿನ ಹುಲ್ಲಿಗೂ ಹೀಗೆ ಉಡಿಸುತ್ತಾನೆ. ಹುಲ್ಲಾದರೋ ಈ ಹೊತ್ತಿದ್ದು ನಾಳೆ ಬೆಂಕಿಯ ಪಾಲಾಗುವುದು. ಹೀಗಿರಲು ದೇವರು ನಿಮಗೆ ಎಷ್ಟೋ ಹೆಚ್ಚಾಗಿ ಉಡಿಸುವುದಿಲ್ಲವೇ? ಆದ್ದರಿಂದ ಅಲ್ಪವಿಶ್ವಾಸಿಗಳಾಗಿರಬೇಡಿ!

29 “ಏನು ಊಟಮಾಡಬೇಕು? ಏನು ಕುಡಿಯಬೇಕು? ಎಂದು ಯಾವಾಗಲೂ ಆಲೋಚಿಸಬೇಡಿರಿ ಮತ್ತು ಚಿಂತಿಸಬೇಡಿರಿ. 30 ಅವುಗಳನ್ನು ಪಡೆದುಕೊಳ್ಳುವುದಕ್ಕಾಗಿ ಲೋಕದ ಜನರೆಲ್ಲರೂ ಪ್ರಯತ್ನಿಸುತ್ತಾರೆ. ಅವುಗಳ ಅವಶ್ಯಕತೆ ನಿಮಗೂ ಇದೆ ಎಂಬುದು ನಿಮ್ಮ ತಂದೆಗೆ (ದೇವರು) ತಿಳಿದಿದೆ. 31 ನೀವು ದೇವರ ರಾಜ್ಯಕ್ಕೆ ಮೊದಲನೆ ಪ್ರಾಧಾನ್ಯತೆಯನ್ನು ಕೊಡಿರಿ. ಆಗ ನಿಮಗೆ ಬೇಕಾಗಿರುವ ಉಳಿದವುಗಳನ್ನು ಕೊಡಲಾಗುವುದು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International