Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
1 ಸಮುವೇಲನು 17-18

ಗೊಲ್ಯಾತನು ಇಸ್ರೇಲರ ಮೇಲೆ ಸ್ಪರ್ಧಿಸಿದ್ದು

17 ಫಿಲಿಷ್ಟಿಯರು ತಮ್ಮ ಸೈನ್ಯವನ್ನು ಯುದ್ಧಕ್ಕಾಗಿ ಯೆಹೂದದೇಶದ ಸೋಕೋವಿನಲ್ಲಿ ಒಟ್ಟುಗೂಡಿಸಿದರು. ಅವರು ಸೋಕೋವಿಗೂ ಅಜೇಕಕ್ಕೂ ಮಧ್ಯದಲ್ಲಿರುವ ಎಫೆಸ್ದಮ್ಮೀಮ್ ಎಂಬ ಹೆಸರಿನ ಪಟ್ಟಣದಲ್ಲಿ ಪಾಳೆಯಮಾಡಿಕೊಂಡರು.

ಸೌಲನು ಮತ್ತು ಇಸ್ರೇಲಿನ ಸೈನಿಕರು ಒಟ್ಟಾಗಿ ಸೇರಿ ಏಲಾ ಕಣಿವೆಯಲ್ಲಿ ಪಾಳೆಯಮಾಡಿಕೊಂಡರು. ಸೌಲನ ಸೈನಿಕರು ಸಾಲಾಗಿನಿಂತು ಫಿಲಿಷ್ಟಿಯರ ಮೇಲೆ ಯುದ್ಧಕ್ಕೆ ಸಿದ್ಧರಾದರು. ಫಿಲಿಷ್ಟಿಯರು ಒಂದು ಗುಡ್ಡದ ಮೇಲೂ ಇಸ್ರೇಲರು ಮತ್ತೊಂದು ಗುಡ್ಡದ ಮೇಲೂ ನಿಂತರು. ಕಣಿವೆಯು ಆ ಎರಡು ಗುಡ್ಡಗಳ ಮಧ್ಯೆ ಇದ್ದಿತು.

ಫಿಲಿಷ್ಟಿಯರಲ್ಲಿ ಗೊಲ್ಯಾತನೆಂಬ ಹೆಸರಿನ ವೀರ ಯೋಧನಿದ್ದನು. ಆತನು ಗತ್ ಊರಿನವನು. ಗೊಲ್ಯಾತನು ಒಂಭತ್ತು ಅಡಿ ಎತ್ತರವಾಗಿದ್ದನು. ಅವನು ಫಿಲಿಷ್ಟಿಯರ ಪಾಳೆಯದಿಂದ ಹೊರಬಂದನು. ಅವನು ತಾಮ್ರದ ಶಿರಸ್ತ್ರಾಣವನ್ನು ಧರಿಸಿದ್ದನು. ಮೀನಿನ ಮೇಲಿರುವ ಚಿಪ್ಪುಗಳಂತಿದ್ದ ತಾಮ್ರದ ಕವಚವನ್ನು ಅವನು ತೊಟ್ಟಿದ್ದನು. ಅದು ನೂರಿಪ್ಪತ್ತೈದು ಪೌಂಡ್‌ಗಳಷ್ಟು ಭಾರವಾಗಿತ್ತು. ಗೊಲ್ಯಾತನು ಕಾಲುಗಳಿಗೂ ತಾಮ್ರದ ಕವಚವನ್ನು ತೊಟ್ಟಿದ್ದನು. ಅವನು ಹೆಗಲಿನಲ್ಲಿ ತಾಮ್ರದ ಈಟಿಯನ್ನು ಕಟ್ಟಿಕೊಂಡಿದ್ದನು. ಗೊಲ್ಯಾತನ ಬರ್ಜಿಯ ಹಿಡಿಕೆಯು ನೇಕಾರರ ಕುಂಟೆಯ ಗಾತ್ರದಷ್ಟಿತ್ತು. ಆ ಬರ್ಜಿಯ ಅಲಗಿನ ಭಾರವು ಹದಿನೈದು ಪೌಂಡ್‌ಗಳಷ್ಟಿತ್ತು. ಗೊಲ್ಯಾತನ ಗುರಾಣಿಯನ್ನು ಹೊತ್ತಿದ್ದ ಅವನ ಸಹಾಯಕನು ಅವನ ಮುಂದೆ ಹೋಗುತ್ತಿದ್ದನು.

ಗೊಲ್ಯಾತನು ಪ್ರತಿದಿನ ಹೊರಕ್ಕೆ ಬಂದು ಇಸ್ರೇಲಿನ ಸೈನಿಕರನ್ನು ಕಂಡು ಆರ್ಭಟಿಸುತ್ತಿದ್ದನು. ಅವನು, “ನೀವೆಲ್ಲ ಸಾಲಾಗಿನಿಂತು ಯುದ್ಧಕ್ಕೆ ಸಿದ್ಧರಾಗಿರುವುದೇಕೆ? ನೀವು ಸೌಲನ ಸೇವಕರು. ನಾನು ಫಿಲಿಷ್ಟಿಯನು, ನೀವು ಒಬ್ಬನನ್ನು ಆರಿಸಿ ನನ್ನೊಡನೆ ಹೋರಾಡಲು ಕಳುಹಿಸಿ. ಅವನು ನನ್ನನ್ನು ಕೊಂದುಬಿಟ್ಟರೆ, ನಾವು ಅಂದರೆ ಫಿಲಿಷ್ಟಿಯರೆಲ್ಲ ನಿಮ್ಮ ಗುಲಾಮರಾಗುತ್ತೇವೆ. ಆದರೆ ನಾನು ಅವನನ್ನು ಸೋಲಿಸಿ ಕೊಂದುಬಿಟ್ಟರೆ, ನೀವೆಲ್ಲ ನಮಗೆ ಗುಲಾಮರಾಗಿದ್ದು ನಮ್ಮ ಸೇವೆಯನ್ನು ಮಾಡಬೇಕು” ಎಂದು ಆರ್ಭಟಿಸಿದನು.

10 ಫಿಲಿಷ್ಟಿಯನು, “ಈ ದಿನ ನಾನು ಇಸ್ರೇಲ್ ಸೈನ್ಯವನ್ನು ಹೀಯಾಳಿಸುವೆನು. ನನ್ನೊಂದಿಗೆ ಹೋರಾಡಲು ನಿಮ್ಮ ಮನುಷ್ಯನೊಬ್ಬನನ್ನು ಕಳುಹಿಸಿ” ಎಂದು ಕೊಚ್ಚಿಕೊಂಡನು.

11 ಸೌಲನು ಮತ್ತು ಅವನ ಸೈನಿಕರು ಗೊಲ್ಯಾತನು ಹೇಳಿದ್ದನ್ನು ಕೇಳಿ ಬಹಳ ಭಯಪಟ್ಟರು.

ದಾವೀದನು ಯುದ್ಧರಂಗದ ಮುಂಭಾಗಕ್ಕೆ ಬರುವನು

12 ದಾವೀದನು ಇಷಯನ ಮಗ. ಇಷಯನು ಯೆಹೂದ ಪ್ರಾಂತ್ಯದ ಬೆತ್ಲೆಹೇಮಿನ ಎಫ್ರಾತ ವಂಶದವನು. ಇಷಯನಿಗೆ ಎಂಟು ಜನ ಮಕ್ಕಳಿದ್ದರು. ಸೌಲನ ಕಾಲಕ್ಕಾಗಲೇ ಇಷಯನು ಮುದುಕನಾಗಿದ್ದನು. 13 ಇಷಯನ ಮೂವರು ಹಿರಿಯ ಮಕ್ಕಳು ಸೌಲನೊಂದಿಗೆ ಯುದ್ಧಕ್ಕೆ ಹೋಗಿದ್ದರು. ಎಲೀಯಾಬನು ಮೊದಲನೆಯ ಮಗ. ಅಬೀನಾದಾಬನು ಎರಡನೆಯ ಮಗ. ಶಮ್ಮನು ಮೂರನೆಯ ಮಗ. 14 ದಾವೀದನು ಎಲ್ಲರಿಗಿಂತ ಕಿರಿಯ ಮಗ. ಅವನಿಗಿಂತ ಹಿರಿಯರಾದ ಮೂವರು ಮಕ್ಕಳು ಸೌಲನ ಸೈನ್ಯದಲ್ಲಿದ್ದರು. 15 ಆದರೆ ದಾವೀದನು ಆಗಾಗ್ಗೆ ಸೌಲನನ್ನು ಬಿಟ್ಟು ತನ್ನ ತಂದೆಯ ಕುರಿಗಳನ್ನು ಕಾಯುವುದಕ್ಕಾಗಿ ಬೆತ್ಲೆಹೇಮಿಗೆ ಹೋಗುತ್ತಿದ್ದನು.

16 ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಗೊಲ್ಯಾತನು ಹೊರಬಂದು ಇಸ್ರೇಲ್ ಸೈನ್ಯಕ್ಕೆ ಎದುರಾಗಿ ನಿಲ್ಲುತ್ತಿದ್ದನು. ಈ ರೀತಿ ಗೊಲ್ಯಾತನು ಇಸ್ರೇಲರನ್ನು ನಲವತ್ತು ದಿನಗಳ ಕಾಲ ಹೀಯಾಳಿಸಿದನು.

17 ಒಂದು ದಿನ ಇಷಯನು ತನ್ನ ಮಗನಾದ ದಾವೀದನಿಗೆ, “ಬೇಯಿಸಿದ ಮೂವತ್ತು ಸೇರು ಕಾಳುಗಳನ್ನು ಮತ್ತು ಹತ್ತು ರೊಟ್ಟಿಗಳನ್ನು ಸೈನ್ಯದಲ್ಲಿರುವ ನಿನ್ನ ಸಹೋದರರಿಗಾಗಿ ತೆಗೆದುಕೊಂಡು ಹೋಗು. 18 ನಿನ್ನ ಸಹೋದರರ ಸಹಸ್ರಾಧಿಪತಿಗೆ ಹತ್ತು ಉಂಡೆ ಗಿಣ್ಣನ್ನೂ ತೆಗೆದುಕೊಂಡು ಹೋಗು. ನಿನ್ನ ಸಹೋದರರ ಕ್ಷೇಮ ಸಮಾಚಾರವನ್ನು ಕೇಳಿಕೊಂಡು, ಅವರು ಕ್ಷೇಮವಾಗಿದ್ದಾರೆಂಬುದಕ್ಕೆ ಒಂದು ಗುರುತನ್ನು ತೆಗೆದುಕೊಂಡು ಬಾ. 19 ನಿನ್ನ ಸಹೋದರರು ಎಲ್ಲಾ ಇಸ್ರೇಲ್ ಸೈನಿಕರಂತೆ ಸೌಲನ ಜೊತೆಯಲ್ಲಿ ಏಲಾ ಕಣಿವೆಯಲ್ಲಿದ್ದಾರೆ. ಅವರು ಫಿಲಿಷ್ಟಿಯರ ವಿರುದ್ಧ ಹೋರಾಡುತ್ತಿದ್ದಾರೆ” ಎಂದು ಹೇಳಿದನು.

20 ದಾವೀದನು ಮಾರನೆಯ ದಿನ ಬೆಳಿಗ್ಗೆ ಕುರುಬನೊಬ್ಬನಿಗೆ ತನ್ನ ಕುರಿಗಳನ್ನು ಕಾಯಲು ಒಪ್ಪಿಸಿದನು. ಇಷಯನು ತಿಳಿಸಿದಂತೆ ದಾವೀದನು ಆಹಾರವನ್ನೆಲ್ಲ ತೆಗೆದುಕೊಂಡು ಹೊರಟನು. ದಾವೀದನು ತನ್ನ ಬಂಡಿಯನ್ನು ಪಾಳೆಯಕ್ಕೆ ಹೊಡೆದುಕೊಂಡು ಹೋದನು. ದಾವೀದನು ಅಲ್ಲಿಗೆ ಬರುವಷ್ಟರಲ್ಲಿ ಸೈನಿಕರೆಲ್ಲರು ಯುದ್ಧಭೂಮಿಗೆ ಹೋಗುವುದರಲ್ಲಿದ್ದರು. ಸೈನಿಕರೆಲ್ಲರು ಆರ್ಭಟಿಸುತ್ತಾ ಯುದ್ಧಭೂಮಿಯಲ್ಲಿ ಸೇರುತ್ತಿದ್ದರು. 21 ಇಸ್ರೇಲರು ಮತ್ತು ಫಿಲಿಷ್ಟಿಯರು ಯುದ್ಧಕ್ಕೆ ಸಿದ್ಧರಾಗಲು ಸಾಲುಸಾಲಾಗಿ ನಿಲ್ಲುತ್ತಿದ್ದರು.

22 ದಾವೀದನು ತಾನು ತಂದಿದ್ದವುಗಳನ್ನು ಕಾವಲುಗಾರನ ಬಳಿಯಲ್ಲಿಟ್ಟು ಇಸ್ರೇಲ್ ಸೈನಿಕರಿದ್ದ ಸ್ಥಳಕ್ಕೆ ಓಡಿಹೋಗಿ ತನ್ನ ಸಹೋದರರ ಬಗ್ಗೆ ವಿಚಾರಿಸಿದನು. 23 ಬಳಿಕ ತನ್ನ ಸಹೋದರರನ್ನು ಕಂಡುಕೊಂಡು ಅವರೊಂದಿಗೆ ಮಾತಾಡತೊಡಗಿದನು. ಆ ಸಮಯದಲ್ಲಿ ಗತ್ ದೇಶದ ಗೊಲ್ಯಾತನೆಂಬ ಹೆಸರಿನ ಫಿಲಿಷ್ಟಿಯ ರಣವೀರನು ಆ ಸೇನೆಯಿಂದ ಹೊರಬಂದನು. ಗೊಲ್ಯಾತನು ಎಂದಿನಂತೆ ಇಸ್ರೇಲರ ವಿರುದ್ಧ ಆರ್ಭಟಿಸಿದನು. ದಾವೀದನಿಗೆ ಅವನ ಆರ್ಭಟವು ಕೇಳಿಸಿತು.

24 ಇಸ್ರೇಲ್ ಸೈನಿಕರು ಗೊಲ್ಯಾತನನ್ನು ಕಂಡು ಬಹಳವಾಗಿ ಭಯಪಟ್ಟು ಅಲ್ಲಿಂದ ಓಡಿಹೋದರು. 25 ಇಸ್ರೇಲರಲ್ಲಿನ ಒಬ್ಬನು, “ನೀವು ಅವನನ್ನು ನೋಡಿದಿರಾ! ಅವನನ್ನು ನೋಡಿ! ಆ ಗೊಲ್ಯಾತನು ಪ್ರತಿನಿತ್ಯ ಹೊರಗೆ ಬಂದು ಇಸ್ರೇಲರನ್ನು ಮತ್ತೆಮತ್ತೆ ಹಾಸ್ಯಮಾಡುತ್ತಿದ್ದಾನೆ. ಅವನನ್ನು ಕೊಂದವನಿಗೆ ಸೌಲನು ಅಪಾರ ಐಶ್ವರ್ಯವನ್ನು ಕೊಡುವುದಲ್ಲದೆ ತನ್ನ ಮಗಳನ್ನೂ ಅವನಿಗೆ ಕೊಟ್ಟು ಮದುವೆ ಮಾಡುತ್ತಾನೆ; ಅಲ್ಲದೆ ಅವನ ವಂಶವನ್ನು ಇಸ್ರೇಲಿನಲ್ಲಿ ಸ್ವತಂತ್ರಗೊಳಿಸುತ್ತಾನೆ” ಎಂದು ಹೇಳಿದನು.

26 ದಾವೀದನು ತನ್ನ ಹತ್ತಿರ ನಿಂತಿದ್ದವನಿಗೆ, “ಈ ಫಿಲಿಷ್ಟಿಯನನ್ನು ಕೊಂದು ಇಸ್ರೇಲರಿಗೆ ಉಂಟಾಗಿರುವ ಅಪನಿಂದೆಯನ್ನು ಹೋಗಲಾಡಿಸುವವನಿಗೆ ಸಿಗುವ ಬಹುಮಾನವೇನು? ಈ ಗೊಲ್ಯಾತನ್ಯಾರು? ಇವನು ಕೇವಲ ಒಬ್ಬ ಪರದೇಶಿ. ಗೊಲ್ಯಾತನು ಫಿಲಿಷ್ಟಿಯನೇ ಹೊರತು ಬೇರೆ ಯಾರೂ ಅಲ್ಲ. ಜೀವಸ್ವರೂಪನಾದ ದೇವರ ಸೈನ್ಯದ ವಿರೋಧವಾಗಿ ಮಾತಾಡಲು ಇವನು ತನ್ನನ್ನು ಯಾರೆಂದು ಯೋಚಿಸಿಕೊಂಡಿದ್ದಾನೆ?” ಎಂದನು.

27 ಗೊಲ್ಯಾತನನ್ನು ಕೊಲ್ಲುವದರಿಂದ ಸಿಗುವ ಬಹುಮಾನವನ್ನು ಇಸ್ರೇಲರು ದಾವೀದನಿಗೆ ತಿಳಿಸಿದರು. 28 ದಾವೀದನು ಸೈನಿಕರೊಡನೆ ಮಾತಾಡುತ್ತಿರುವುದನ್ನು ಅವನ ಹಿರಿಯ ಅಣ್ಣ ಎಲೀಯಾಬನು ಕೇಳಿಸಿಕೊಂಡನು. ಎಲೀಯಾಬನು ದಾವೀದನ ಮೇಲೆ ಕೋಪಗೊಂಡು ಅವನಿಗೆ, “ನೀನು ಇಲ್ಲಿಗೆ ಬಂದದ್ದೇಕೆ? ಅಲ್ಲಿದ್ದ ಕೆಲವು ಕುರಿಗಳನ್ನು ಯಾರ ಬಳಿ ಬಿಟ್ಟಿರುವೆ? ನೀನು ಇಲ್ಲಿಗೆ ಏಕೆ ಬಂದಿರುವೆಯೆಂಬುದು ನನಗೆ ಗೊತ್ತು. ನಿನಗೆ ಹೇಳಿದ್ದನ್ನು ನೀನು ಮಾಡುವುದಿಲ್ಲ. ನೀನು ಕೇವಲ ಯುದ್ಧವನ್ನು ನೋಡುವುದಕ್ಕಾಗಿಯೇ ಇಲ್ಲಿಗೆ ಬಂದಿರುವೆ” ಎಂದು ಗದರಿಸಿದನು.

29 ಅದಕ್ಕೆ ದಾವೀದನು, “ನಾನೇನು ಮಾಡಿದೆ? ನಾನು ಯಾವ ತಪ್ಪನ್ನೂ ಮಾಡಲಿಲ್ಲ. ನಾನು ಕೇವಲ ಮಾತನಾಡುತ್ತಿದ್ದೆ” ಎಂದು ಹೇಳಿದನು. 30 ದಾವೀದನು ಬೇರೆ ಜನರ ಕಡೆಗೆ ತಿರುಗಿ, ಅವರಿಗೂ ಅದೇ ಪ್ರಶ್ನೆಗಳನ್ನು ಕೇಳಿದನು. ಅವರು ಸಹ ಅದೇ ಉತ್ತರಗಳನ್ನು ದಾವೀದನಿಗೆ ಕೊಟ್ಟರು.

31 ದಾವೀದನು ಮಾತನಾಡುತ್ತಿರುವುದನ್ನು ಕೆಲವು ಜನರು ಕೇಳಿಸಿಕೊಂಡರು. ಅವರು ಸೌಲನಿಗೆ ದಾವೀದನ ಬಗ್ಗೆ ಹೇಳಿದರು. ಸೌಲನು ದಾವೀದನನ್ನು ಅವನ ಹತ್ತಿರ ಕರೆತರಲು ಅಪ್ಪಣೆ ಮಾಡಿದನು. 32 ದಾವೀದನು ಸೌಲನಿಗೆ, “ಜನರು ಗೊಲ್ಯಾತನಿಗೆ ಹೆದರಿಕೊಳ್ಳುವುದು ಬೇಕಾಗಿಲ್ಲ. ನಾನು ನಿನ್ನ ಸೇವಕ. ನಾನು ಈ ಫಿಲಿಷ್ಟಿಯನ ವಿರುದ್ಧ ಹೋರಾಡುತ್ತೇನೆ” ಎಂದು ಹೇಳಿದನು.

33 ಸೌಲನು, “ನೀನು ಹೊರಗೆ ಹೋಗಿ ಗೊಲ್ಯಾತನೊಂದಿಗೆ ಹೋರಾಡಲು ಸಾಧ್ಯವಿಲ್ಲ. ನೀನು ಒಬ್ಬ ಸೈನಿಕನೂ ಅಲ್ಲ! ಗೊಲ್ಯಾತನು ಬಾಲ್ಯದಿಂದಲೂ ಯುದ್ಧವೀರನಾಗಿದ್ದಾನೆ” ಎಂದನು.

34 ಆದರೆ ದಾವೀದನು ಸೌಲನಿಗೆ, “ನಾನು ನಿನ್ನ ಸೇವಕ. ನಾನು ನನ್ನ ತಂದೆಯ ಕುರಿಗಳನ್ನು ಕಾಯುತ್ತಿದ್ದೆ. ಸಿಂಹವಾಗಲಿ ಕರಡಿಯಾಗಲಿ ಬಂದು ಕುರಿಮಂದೆಯಿಂದ ಕುರಿಗಳನ್ನು ಹಿಡಿದುಕೊಂಡರೆ, 35 ಆದನ್ನು ನಾನು ಅಟ್ಟಿಸಿಕೊಂಡು ಹೋಗುತ್ತಿದ್ದೆ. ನಾನು ಆ ಕ್ರೂರ ಮೃಗದ ಮೇಲೆ ಆಕ್ರಮಣ ಮಾಡಿ, ಅದರ ಬಾಯಿಂದ ಕುರಿಯನ್ನು ಬಿಡಿಸುತ್ತಿದ್ದೆನು. ಅದು ನನ್ನ ಮೇಲೆ ಆಕ್ರಮಣ ಮಾಡಿದರೆ, ನಾನು ಅದರ ಗಡ್ಡ ಹಿಡಿದು ಹೋರಾಡಿ ಅದನ್ನು ಕೊಲ್ಲುತ್ತಿದ್ದೆನು. 36 ನಾನು ಒಂದು ಸಿಂಹವನ್ನೂ ಒಂದು ಕರಡಿಯನ್ನೂ ಕೊಂದಿದ್ದೇನೆ. ಅದೇ ರೀತಿಯಲ್ಲಿ ನಾನು ಅನ್ಯದೇಶಿಯನಾದ ಗೊಲ್ಯಾತನನ್ನೂ ಕೊಂದು ಹಾಕುತ್ತೇನೆ. ಜೀವಸ್ವರೂಪನಾದ ದೇವರ ಸೈನ್ಯವನ್ನು ಹೀಯಾಳಿಸಿದ್ದರಿಂದ ಗೊಲ್ಯಾತನು ಸಾಯಲೇಬೇಕು. 37 ಯೆಹೋವನು ನನ್ನನ್ನು ಸಿಂಹದಿಂದಲೂ ಕರಡಿಯಿಂದಲೂ ರಕ್ಷಿಸಿದನು. ಯೆಹೋವನು ಈ ಗೊಲ್ಯಾತನಿಂದಲೂ ನನ್ನನ್ನು ರಕ್ಷಿಸುತ್ತಾನೆ” ಎಂದು ಹೇಳಿದನು.

ಸೌಲನು ದಾವೀದನಿಗೆ, “ಹೋಗು, ಯೆಹೋವನು ನಿನ್ನೊಂದಿಗಿರಲಿ” ಎಂದು ಹೇಳಿದನು.

38 ಸೌಲನು ತನ್ನ ಯುದ್ಧವಸ್ತ್ರಗಳನ್ನು ದಾವೀದನಿಗೆ ತೊಡಿಸಿದನು. ಸೌಲನು ತಾಮ್ರದ ಶಿರಸ್ತ್ರಾಣವನ್ನು ದಾವೀದನ ತಲೆಯ ಮೇಲಿಟ್ಟನು ಮತ್ತು ಲೋಹದ ಕವಚವನ್ನು ದಾವೀದನ ಮೈಗೆ ತೊಡಿಸಿದನು. 39 ದಾವೀದನು ಕತ್ತಿಯನ್ನು ಸಿಕ್ಕಿಸಿಕೊಂಡು, ಆ ಕಡೆ ಈ ಕಡೆ ಸುತ್ತಾಡಿದನು. ಸೌಲನ ಯುದ್ಧ ವಸ್ತ್ರಗಳನ್ನು ದಾವೀದನು ಧರಿಸಲು ಪ್ರಯತ್ನಿಸಿದನು. ಆದರೆ ದಾವೀದನಿಗೆ ಅಂತಹ ಭಾರದ ವಸ್ತ್ರಗಳನ್ನು ಧರಿಸಿ ಅಭ್ಯಾಸವಿರಲಿಲ್ಲ.

ದಾವೀದನು ಸೌಲನಿಗೆ, “ನಾನು ಇವುಗಳನ್ನು ಧರಿಸಿಕೊಂಡು ಹೋರಾಡಲಾಗುವುದಿಲ್ಲ; ನನಗೆ ಇವುಗಳನ್ನು ಧರಿಸಿಕೊಂಡು ಅಭ್ಯಾಸವಿಲ್ಲ” ಎಂದು ಹೇಳಿ ಅವುಗಳನ್ನೆಲ್ಲ ತೆಗೆದು ಹಾಕಿದನು. 40 ದಾವೀದನು ತನ್ನ ಕೋಲನ್ನು ಕೈಯಲ್ಲಿ ಹಿಡಿದುಕೊಂಡು, ಕಣಿವೆಯಲ್ಲಿ ಐದು ನುಣುಪುಕಲ್ಲುಗಳನ್ನು ಆರಿಸಿಕೊಂಡು ಅವುಗಳನ್ನು ಕುರಿಕಾಯಲು ಬಳಸುವ ಚೀಲದಲ್ಲಿ ಹಾಕಿಕೊಂಡು ಕವಣೆಯನ್ನು ಕೈಯಲ್ಲಿ ಹಿಡಿದುಕೊಂಡನು. ನಂತರ ಗೊಲ್ಯಾತನನ್ನು ಎದುರಿಸಲು ಹೋದನು.

ದಾವೀದನು ಗೊಲ್ಯಾತನನ್ನು ಕೊಂದದ್ದು

41 ಫಿಲಿಷ್ಟಿಯನು (ಗೊಲ್ಯಾತನು) ದಾವೀದನ ಬಳಿಗೆ ನಿಧಾನವಾಗಿ ನಡೆಯುತ್ತಾ ಬಂದನು. ಗೊಲ್ಯಾತನ ಮುಂದೆ ಅವನ ಸಹಾಯಕನು ಗುರಾಣಿಯನ್ನು ಹೊತ್ತುಕೊಂಡು ನಡೆಯುತ್ತಾ ಹೋದನು. 42 ಗೊಲ್ಯಾತನು ದಾವೀದನನ್ನು ನೋಡಿ ನಕ್ಕನು. ದಾವೀದನು ಸೈನಿಕನಲ್ಲವೆಂಬುದು ಗೊಲ್ಯಾತನಿಗೆ ಗೊತ್ತಾಯಿತು. ದಾವೀದನು ಕೆಂಬಣ್ಣದ ಸುಂದರ ಯುವಕನಾಗಿದ್ದನು. 43 ಗೊಲ್ಯಾತನು ದಾವೀದನಿಗೆ, “ಈ ಕೋಲು ಏನಕ್ಕೆ? ನಾಯಿಯನ್ನು ಓಡಿಸುವಂತೆ ನನ್ನನ್ನು ಓಡಿಸುವುದಕ್ಕೆ ಬಂದೆಯಾ?” ಎಂದು ಕೇಳಿದನು. ಬಳಿಕ ಗೊಲ್ಯಾತನು ತನ್ನ ದೇವರ ಹೆಸರುಗಳ ಮೇಲೆ ದಾವೀದನನ್ನು ಶಪಿಸಿದನು. 44 ಗೊಲ್ಯಾತನು ದಾವೀದನಿಗೆ, “ಬಾ ಇಲ್ಲಿಗೆ, ನಿನ್ನ ದೇಹವನ್ನು ಪಕ್ಷಿಗಳಿಗೂ ಕ್ರೂರಪ್ರಾಣಿಗಳಿಗೂ ಆಹಾರವನ್ನಾಗಿ ಮಾಡುತ್ತೇನೆ!” ಎಂದನು.

45 ದಾವೀದನು ಫಿಲಿಷ್ಟಿಯನಿಗೆ, “ನೀನಾದರೋ ಖಡ್ಗ, ಈಟಿ ಮತ್ತು ಭರ್ಜಿಗಳನ್ನು ಹಿಡಿದುಕೊಂಡು ನನ್ನ ಬಳಿಗೆ ಬಂದಿರುವೆ. ನಾನಾದರೋ ಸರ್ವಶಕ್ತನೂ ಇಸ್ರೇಲರ ಸೈನ್ಯಗಳ ದೇವರೂ ಆಗಿರುವ ಯೆಹೋವನ ಹೆಸರಿನಲ್ಲಿ ನಿನ್ನ ಬಳಿಗೆ ಬಂದಿರುವೆ! ನೀನು ಹೀಯಾಳಿಸಿದ್ದು ಆತನನ್ನೇ. 46 ಇಂದು ನಾನು ನಿನ್ನನ್ನು ಸೋಲಿಸಲು ಯೆಹೋವನು ಸಹಾಯಮಾಡುತ್ತಾನೆ. ನಾನು ನಿನ್ನನ್ನು ಕೊಲ್ಲುತ್ತೇನೆ. ಇಂದು ನಾನು ನಿನ್ನ ತಲೆಯನ್ನು ಕತ್ತರಿಸಿ ನಿನ್ನ ದೇಹವನ್ನು ಪಕ್ಷಿಗಳಿಗೂ ಕ್ರೂರಮೃಗಗಳಿಗೂ ಆಹಾರವನ್ನಾಗಿ ಕೊಡುತ್ತೇನೆ. ಉಳಿದೆಲ್ಲ ಫಿಲಿಷ್ಟಿಯರಿಗೂ ಸಹ ನಾವು ಅದೇ ರೀತಿ ಮಾಡುತ್ತೇವೆ. ಆಗ ಇಸ್ರೇಲಿನಲ್ಲಿ ದೇವರಿದ್ದಾನೆಂಬುದು ಇಡೀ ಜಗತ್ತಿಗೆಲ್ಲ ಗೊತ್ತಾಗುವುದು! 47 ಜನರನ್ನು ರಕ್ಷಿಸಲು ಯೆಹೋವನಿಗೆ ಕತ್ತಿ ಮತ್ತು ಈಟಿಗಳ ಅಗತ್ಯವಿಲ್ಲ ಎಂಬುದು ಇಲ್ಲಿ ಸೇರಿರುವ ಜನರಿಗೆಲ್ಲ ತಿಳಿಯುತ್ತದೆ. ಇದು ಯೆಹೋವನ ಯುದ್ಧ. ಫಿಲಿಷ್ಟಿಯರನ್ನೆಲ್ಲ ಸೋಲಿಸಲು ಯೆಹೋವನು ನಮಗೆ ಸಹಾಯ ಮಾಡುತ್ತಾನೆ” ಎಂದು ಹೇಳಿದನು.

48 ಫಿಲಿಷ್ಟಿಯನಾದ ಗೊಲ್ಯಾತನು ಆಕ್ರಮಣಮಾಡಲು ದಾವೀದನ ಹತ್ತಿರಕ್ಕೆ ಬಂದನು. ದಾವೀದನೂ ಗೊಲ್ಯಾತನನ್ನು ಸಂಧಿಸಲು ವೇಗವಾಗಿ ಓಡಿದನು.

49 ದಾವೀದನು ತನ್ನ ಚೀಲದಿಂದ ಒಂದು ಕಲ್ಲನ್ನು ಹೊರತೆಗೆದನು. ಅದನ್ನು ಅವನು ಕವಣೆಯಲ್ಲಿ ಸಿಕ್ಕಿಸಿ ಬೀಸಿ ಹೊಡೆದನು. ಕವಣೆಯಿಂದ ಅವನು ಬೀಸಿದ ಕಲ್ಲು ಗೊಲ್ಯಾತನ ಹಣೆಗೆ ಬಡಿಯಿತು. ಆ ಕಲ್ಲು ಅವನ ಹಣೆಯಲ್ಲಿ ಆಳವಾದ ಗಾಯವನ್ನು ಮಾಡಿತು. ಕೂಡಲೇ ಗೊಲ್ಯಾತನು ಬೋರಲಾಗಿ ನೆಲದ ಮೇಲೆ ಬಿದ್ದನು.

50 ಹೀಗೆ ದಾವೀದನು ಕವಣಿಯ ಒಂದೇ ಕಲ್ಲಿನಿಂದ ಫಿಲಿಷ್ಟಿಯನನ್ನು ಹೊಡೆದು ಕೊಂದನು! ದಾವೀದನು ಕತ್ತಿಯನ್ನೂ ಹೊಂದಿರಲಿಲ್ಲ. 51 ದಾವೀದನು ಓಡುತ್ತಾ ಹೋಗಿ ಫಿಲಿಷ್ಟಿಯನ ಪಕ್ಕದಲ್ಲಿ ನಿಂತುಕೊಂಡನು. ದಾವೀದನು ಗೊಲ್ಯಾತನ ಕತ್ತಿಯನ್ನು ಒರೆಯಿಂದ ತೆಗೆದು ಅದೇ ಕತ್ತಿಯಿಂದ ಅವನ ತಲೆಯನ್ನು ಕತ್ತರಿಸಿ ಹಾಕಿದನು. ದಾವೀದನು ಈ ರೀತಿಯಲ್ಲಿ ಗೊಲ್ಯಾತನನ್ನು ಕೊಂದನು.

ಫಿಲಿಷ್ಟಿಯರು ತಮ್ಮ ನಾಯಕನು ಸತ್ತದ್ದನ್ನು ನೋಡಿದಾಗ ಹಿಂದಿರುಗಿ ಓಡಿಹೋದರು. 52 ಇಸ್ರೇಲಿನ ಮತ್ತು ಯೆಹೂದದ ಸೈನಿಕರು ಆರ್ಭಟಮಾಡುತ್ತಾ ಫಿಲಿಷ್ಟಿಯರ ಬೆನ್ನಟ್ಟಿದರು. ಇಸ್ರೇಲರು ಫಿಲಿಷ್ಟಿಯರನ್ನು ಗತ್ ನಗರದ ಗಡಿಯವರೆಗೂ ಎಕ್ರೋನಿನ ಬಾಗಿಲುಗಳ ವರೆಗೂ ಅಟ್ಟಿಸಿಕೊಂಡು ಹೋದರು. ಅವರು ಅನೇಕ ಫಿಲಿಷ್ಟಿಯರನ್ನು ಕೊಂದರು. ಅವರ ಶವಗಳು ಶಾರಯಿಮಿನ ಮಾರ್ಗದುದ್ದಕ್ಕೂ ಗತ್ ಮತ್ತು ಎಕ್ರೋನ್‌ಗಳವರೆಗೆ ಬಿದ್ದಿದ್ದವು. 53 ಫಿಲಿಷ್ಟಿಯರನ್ನು ಅಟ್ಟಿಸಿಕೊಂಡು ಹೋಗಿದ್ದ ಇಸ್ರೇಲರು ಫಿಲಿಷ್ಟಿಯರ ಪಾಳೆಯಕ್ಕೆ ನುಗ್ಗಿ ಅವರ ಪಾಳೆಯದಲ್ಲಿದ್ದ ಅನೇಕ ವಸ್ತುಗಳನ್ನು ವಶಪಡಿಸಿಕೊಂಡರು.

54 ದಾವೀದನು ಗೊಲ್ಯಾತನ ತಲೆಯನ್ನು ಜೆರುಸಲೇಮಿಗೆ ತೆಗೆದುಕೊಂಡು ಹೋದನು. ದಾವೀದನು ಅವನ ಆಯುಧಗಳನ್ನು ತನ್ನ ಗುಡಾರದಲ್ಲೇ ಇರಿಸಿಕೊಂಡನು.

ಸೌಲನು ದಾವೀದನ ಬಗ್ಗೆ ಹೆದರಲಾರಂಭಿಸಿದನು

55 ದಾವೀದನು ಗೊಲ್ಯಾತನೊಂದಿಗೆ ಯುದ್ಧಕ್ಕೆ ಹೊರಟಿದ್ದನ್ನು ಸೌಲನು ಗಮನಿಸುತ್ತಿದ್ದನು. ಸೌಲನು ತನ್ನ ಸೇನಾಧಿಪತಿಯಾದ ಅಬ್ನೇರನನ್ನು, “ಆ ಯುವಕನ ತಂದೆ ಯಾರು?” ಎಂದು ಪ್ರಶ್ನಿಸಿದನು.

ಅಬ್ನೇರನು, “ಅರಸನೇ, ನಿನ್ನ ಜೀವದಾಣೆ, ಅವನು ಯಾರೋ ನನಗೆ ಗೊತ್ತಿಲ್ಲ” ಎಂದು ಉತ್ತರಕೊಟ್ಟನು.

56 ಅದಕ್ಕೆ ಅರಸನು, “ಆ ಯುವಕನ ತಂದೆ ಯಾರೆಂಬುದನ್ನು ಪತ್ತೆಹಚ್ಚು” ಎಂದು ಹೇಳಿದನು.

57 ದಾವೀದನು ಗೊಲ್ಯಾತನನ್ನು ಕೊಂದು ಹಿಂದಿರುಗಿದಾಗ, ಅಬ್ನೇರನು ಅವನನ್ನು ಸೌಲನ ಹತ್ತಿರಕ್ಕೆ ಕರೆತಂದನು. ದಾವೀದನು ಫಿಲಿಷ್ಟಿಯನ ತಲೆಯನ್ನು ಕೈಯಲ್ಲಿ ಹಿಡಿದುಕೊಂಡೇ ಇದ್ದನು.

58 ಸೌಲನು, “ಯುವಕನೇ, ನಿನ್ನ ತಂದೆ ಯಾರು?” ಎಂದು ಪ್ರಶ್ನಿಸಿದನು.

ದಾವೀದನು, “ನಾನು ನಿಮ್ಮ ಸೇವಕನಾದ ಬೆತ್ಲೆಹೇಮಿನ ಇಷಯನ ಮಗ” ಎಂದು ಉತ್ತರಿಸಿದನು.

ದಾವೀದ ಮತ್ತು ಯೋನಾತಾನರು ಆತ್ಮೀಯ ಗೆಳೆಯರಾದರು

18 ದಾವೀದನು ಸೌಲನೊಂದಿಗೆ ಮಾತನಾಡಿದ ಬಳಿಕ ಯೋನಾತಾನನು ದಾವೀದನೊಂದಿಗೆ ಒಂದಾದನು. ಯೋನಾತಾನನು ತನ್ನನ್ನು ಪ್ರೀತಿಸುವಷ್ಟೇ ದಾವೀದನನ್ನು ಪ್ರೀತಿಸಲಾರಂಭಿಸಿದನು. ಸೌಲನು ಅಂದಿನಿಂದ ದಾವೀದನನ್ನು ತನ್ನ ಜೊತೆಯಲ್ಲಿಯೇ ಇರಿಸಿಕೊಂಡನು. ಸೌಲನು ದಾವೀದನನ್ನು ಅವನ ತಂದೆಯ ಮನೆಗೆ ಹೋಗಲು ಬಿಡಲಿಲ್ಲ. ಯೋನಾತಾನನು ದಾವೀದನನ್ನು ಬಹಳವಾಗಿ ಪ್ರೀತಿಸುತ್ತಿದ್ದನು. ಅವನು ದಾವೀದನೊಂದಿಗೆ ಒಂದು ಒಪ್ಪಂದವನ್ನು ಮಾಡಿಕೊಂಡನು. ಯೋನಾತಾನನು ತಾನು ಧರಿಸಿದ್ದ ಮೇಲಂಗಿಯನ್ನೂ ತನ್ನ ಸಮವಸ್ತ್ರಗಳನ್ನೂ ತನ್ನ ಬಿಲ್ಲನ್ನೂ ಕತ್ತಿಯನ್ನೂ ಸೊಂಟಪಟ್ಟಿಯನ್ನೂ ದಾವೀದನಿಗೆ ಕೊಟ್ಟನು.

ಸೌಲನು ದಾವೀದನ ಯಶಸ್ಸನ್ನು ಗಮನಿಸಿದನು

ಸೌಲನು ದಾವೀದನನ್ನು ಬೇರೆಬೇರೆ ಯುದ್ಧಗಳಲ್ಲಿ ಹೋರಾಡಲು ಕಳುಹಿಸಿದನು. ದಾವೀದನು ಆ ಯುದ್ಧಗಳಲ್ಲೆಲ್ಲಾ ಯಶ್ವಸಿಯಾದನು. ಆದ್ದರಿಂದ ಸೌಲನು ದಾವೀದನನ್ನು ಸೈನ್ಯಾಧಿಪತಿಯನ್ನಾಗಿ ನೇಮಿಸಿದನು. ಇದು ಸೌಲನ ಅಧಿಕಾರಿಗಳಿಗೂ ಇತರರಿಗೂ ಸಂತಸವನ್ನು ಉಂಟುಮಾಡಿತು! ದಾವೀದನು ಫಿಲಿಷ್ಟಿಯರೊಡನೆ ಹೋರಾಡಲು ಹೋಗುತ್ತಿದ್ದನು. ಯುದ್ಧದ ನಂತರ ಅವನು ಮನೆಗೆ ಹಿಂದಿರುಗುತ್ತಿದ್ದನು. ಇಸ್ರೇಲಿನ ಎಲ್ಲ ಪಟ್ಟಣಗಳಲ್ಲೂ ಹೆಂಗಸರು ದಾವೀದನನ್ನು ನೋಡುವುದಕ್ಕಾಗಿ ಹೊರಬರುತ್ತಿದ್ದರು. ಅವರು ಡೋಲು ಮುಂತಾದ ವಾದ್ಯಗಳನ್ನು ಬಾರಿಸುತ್ತಾ ಕೇಕೆ ಹಾಕಿ ನಗುತ್ತಾ ನರ್ತಿಸುತ್ತಿದ್ದರು. ಅವರು ಸೌಲನ ಸಮ್ಮುಖದಲ್ಲಿಯೇ ಇವನ್ನೆಲ್ಲ ಮಾಡುತ್ತಿದ್ದರು. ಹೆಂಗಸರು,

“ಸೌಲನು ಸಾವಿರಾರು ಶತ್ರುಗಳನ್ನು ಕೊಂದರೆ,
    ದಾವೀದನು ಲಕ್ಷಾಂತರ ಶತ್ರುಗಳನ್ನು ಕೊಂದನು”

ಎಂದು ಹಾಡುತ್ತಿದ್ದರು.

ಹೆಂಗಸರ ಈ ಹಾಡಿನಿಂದ ಸೌಲನು ಬಹಳವಾಗಿ ವ್ಯಸನಗೊಂಡನು ಮತ್ತು ರೋಷಗೊಂಡನು. “ದಾವೀದನು ಲಕ್ಷಾಂತರ ಶತ್ರುಗಳನ್ನು ಕೊಂದನು ಎಂದು ಇವರು ಹಾಡುತ್ತಾರಲ್ಲಾ, ಇವನಿಗೆ ರಾಜ್ಯವೊಂದನ್ನು ಬಿಟ್ಟು ಬೇರೆ ಏನು ಕಡಿಮೆಯಾಯಿತು?” ಎಂದು ಆಲೋಚಿಸತೊಡಗಿದನು. “ಸೌಲನು ಸಾವಿರಾರು ಶತ್ರುಗಳನ್ನು ಕೊಂದನು” ಎಂದು ಹಾಡಿದ ಹೆಂಗಸರ ಮಾತುಗಳಿಂದ ಸೌಲನು ಚಿಂತೆಗೀಡಾದನು. ಸೌಲನು ಅಂದಿನಿಂದ ದಾವೀದನನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದನು.

ಸೌಲನು ದಾವೀದನಿಗೆ ಭಯಪಟ್ಟನು

10 ಮಾರನೆಯ ದಿನ, ದೇವರಿಂದ ಬಂದ ದುರಾತ್ಮವು ಸೌಲನನ್ನು ಸಂಪೂರ್ಣವಾಗಿ ವಶಪಡಿಸಿಕೊಂಡಿತು. ಸೌಲನು ತನ್ನ ಮನೆಯಲ್ಲಿ ಹುಚ್ಚನಂತೆ ಕೂಗಿಕೊಳ್ಳುತ್ತಿದ್ದನು. ಆಗ ದಾವೀದನು ಎಂದಿನಂತೆ ಕಿನ್ನರಿಯನ್ನು ಬಾರಿಸುತ್ತಿದ್ದನು. 11 ಸೌಲನ ಕೈಯಲ್ಲಿ ಒಂದು ಈಟಿಯಿತ್ತು. “ಗೋಡೆಗೆ ಹತ್ತಿಕೊಳ್ಳುವಂತೆ ನಾನು ದಾವೀದನನ್ನು ತಿವಿಯುವೆ” ಎಂದು ಅವನು ಯೋಚಿಸಿ ಎರಡು ಬಾರಿ ಈಟಿಯನ್ನು ಎಸೆದನು. ಆದರೆ ದಾವೀದನು ಎರಡು ಸಲವೂ ತಪ್ಪಿಸಿಕೊಂಡನು.

12 ಯೆಹೋವನು ಸೌಲನನ್ನು ಬಿಟ್ಟು ದಾವೀದನ ಜೊತೆಗಿದ್ದನು. ಆದ್ದರಿಂದ ಸೌಲನು ದಾವೀದನಿಗೆ ಭಯಪಟ್ಟನು. 13 ಸೌಲನು ದಾವೀದನನ್ನು ತನ್ನಿಂದ ದೂರಕಳುಹಿಸಿದನು. ಸೌಲನು ದಾವೀದನನ್ನು ಒಂದು ಸಾವಿರ ಸೈನಿಕರಿಗೆ ಸೇನಾಪತಿಯನ್ನಾಗಿ ಮಾಡಿದನು. ದಾವೀದನು ಯುದ್ಧದಲ್ಲಿ ಸೈನಿಕರನ್ನು ಮುನ್ನಡೆಸಿದನು. 14 ಯೆಹೋವನು ದಾವೀದನ ಜೊತೆಗಿದ್ದನು. ಆದ್ದರಿಂದ ದಾವೀದನು ಎಲ್ಲದರಲ್ಲೂ ಯಶ್ವಸಿಯಾದನು. 15 ದಾವೀದನು ಬಹಳವಾಗಿ ಯಶ್ವಸಿಯಾಗುತ್ತಿರುವುದನ್ನು ಕಂಡ ಸೌಲನು ದಾವೀದನಿಗೆ ಮತ್ತಷ್ಟು ಭಯಪಟ್ಟನು. 16 ಆದರೆ ಇಸ್ರೇಲಿನ ಮತ್ತು ಯೆಹೂದದ ಜನರೆಲ್ಲ ದಾವೀದನನ್ನು ಪ್ರೀತಿಸಿದರು. ಅವನು ಯುದ್ಧದಲ್ಲಿ ಅವರನ್ನು ಮುನ್ನಡೆಸಿದ್ದರಿಂದ ಮತ್ತು ಅವರಿಗೋಸ್ಕರ ಹೋರಾಡಿದ್ದರಿಂದ ಅವರು ಅವನನ್ನು ಬಹಳವಾಗಿ ಪ್ರೀತಿಸಿದರು.

ಸೌಲನ ಮಗಳೊಂದಿಗೆ ದಾವೀದನ ಮದುವೆ

17 ಆದರೆ ಸೌಲನು ದಾವೀದನನ್ನು ಕೊಲ್ಲಬೇಕೆಂದಿದ್ದನು. ದಾವೀದನಿಗೆ ಮೋಸಮಾಡಲು ಸೌಲನು ಒಂದು ಉಪಾಯವನ್ನು ಹೂಡಿ ಅವನಿಗೆ, “ನನ್ನ ಹಿರಿಯ ಮಗಳಾದ ಮೇರಬಳು ಇದ್ದಾಳೆ. ನಾನು ಅವಳನ್ನು ನಿನಗೆ ಮದುವೆ ಮಾಡಿಕೊಡುತ್ತೇನೆ. ಆಗ ನೀನೊಬ್ಬ ಬಲಶಾಲಿಯಾದ ಸೈನಿಕನಾಗುವೆ. ನೀನು ನನಗೆ ಮಗನಂತಿರುವೆ! ನಂತರ ನೀನು ಹೋಗಿ ಯೆಹೋವನ ಯುದ್ಧಗಳಲ್ಲಿ ಹೋರಾಡು” ಎಂದು ಹೇಳಿದನು. ಆದರೆ ಇದೊಂದು ಮೋಸವಾಗಿತ್ತು. “ಈಗ ನಾನು ದಾವೀದನನ್ನು ಕೊಲ್ಲುವ ಅಗತ್ಯವಿಲ್ಲ. ನನಗೋಸ್ಕರ ಫಿಲಿಷ್ಟಿಯರೇ ಅವನನ್ನು ಕೊಲ್ಲುವಂತೆ ಮಾಡುತ್ತೇನೆ” ಎಂಬದು ಸೌಲನ ನಿಜವಾದ ಆಲೋಚನೆಯಾಗಿತ್ತು.

18 ಆದರೆ ದಾವೀದನು, “ನಾನು ಪ್ರಮುಖ ಕುಲದವನೂ ಅಲ್ಲ; ಪ್ರಮುಖನಾದ ವ್ಯಕ್ತಿಯೂ ಅಲ್ಲ! ರಾಜನ ಮಗಳನ್ನು ಮದುವೆಯಾಗಲು ನಾನು ಯೋಗ್ಯನಲ್ಲ” ಎಂದು ಹೇಳಿದನು.

19 ಸೌಲನ ಮಗಳಾದ ಮೇರಾಬಳಿಗೆ ದಾವೀದನನ್ನು ಮದುವೆಯಾಗುವ ಕಾಲ ಬಂದಾಗ, ಸೌಲನು ಅವಳನ್ನು ಮೆಹೋಲದ ಅದ್ರೀಯೇಲನಿಗೆ ಮದುವೆ ಮಾಡಿಕೊಟ್ಟನು.

20 ಸೌಲನ ಮತ್ತೊಬ್ಬ ಮಗಳಾದ ಮೀಕಲಳು ದಾವೀದನನ್ನು ಪ್ರೀತಿಸಿದಳು. ಮೀಕಲಳು ದಾವೀದನನ್ನು ಪ್ರೀತಿಸುತ್ತಿರುವುದನ್ನು ಸೌಲನಿಗೆ ಜನರು ತಿಳಿಸಿದರು. ಸೌಲನಿಗೆ ಇದು ಸಂತಸವನ್ನು ಉಂಟುಮಾಡಿತು. 21 ಸೌಲನು, “ನಾನು ದಾವೀದನನ್ನು ಬಲೆಗೆ ಬೀಳಿಸಲು ಮೀಕಲಳನ್ನು ಬಳಸಿಕೊಳ್ಳುತ್ತೇನೆ. ದಾವೀದನನ್ನು ಮದುವೆಯಾಗಲು ನಾನು ಮೀಕಲಳಿಗೆ ಅವಕಾಶ ಕೊಡುತ್ತೇನೆ. ನಂತರ ಅವನನ್ನು ಕೊಲ್ಲಲು ಫಿಲಿಷ್ಟಿಯರಿಗೆ ಬಿಟ್ಟುಕೊಡುತ್ತೇನೆ” ಎಂದು ಯೋಚಿಸಿದನು. ಹೀಗೆ ಸೌಲನು ಎರಡನೆಯ ಸಲ ದಾವೀದನಿಗೆ, “ನೀನು ನನ್ನ ಮಗಳನ್ನು ಇಂದು ಮದುವೆಯಾಗು” ಎಂದು ಹೇಳಿದನು.

22 ಸೌಲನು ತನ್ನ ಅಧಿಕಾರಿಗಳಿಗೆ ಅಪ್ಪಣೆ ಮಾಡಿದನು. ಸೌಲನು ಅವರಿಗೆ, “ದಾವೀದನೊಂದಿಗೆ ಪ್ರತ್ಯೇಕವಾಗಿ ಮಾತನಾಡಿ. ‘ರಾಜನು ನಿನ್ನನ್ನು ಇಷ್ಟಪಟ್ಟಿದ್ದಾನೆ. ಅವನ ಅಧಿಕಾರಿಗಳೂ ನಿನ್ನನ್ನು ಇಷ್ಟಪಡುತ್ತಾರೆ. ನೀನು ಅವನ ಮಗಳನ್ನು ಮದುವೆಯಾಗಬೇಕು’ ಎಂದು ಹೇಳಿರಿ” ಎಂಬುದಾಗಿ ತಿಳಿಸಿದನು.

23 ಸೌಲನ ಅಧಿಕಾರಿಗಳು ದಾವೀದನಿಗೆ ಆ ವಿಚಾರಗಳನ್ನು ತಿಳಿಸಿದರು. ಆದರೆ ದಾವೀದನು, “ರಾಜನ ಅಳಿಯನಾಗುವುದು ಸುಲಭವೆಂದು ನೀವು ತಿಳಿದಿರುವಿರಾ? ರಾಜನ ಮಗಳಿಗೆ ಕೊಡಲು ನನ್ನ ಹತ್ತಿರ ಹಣವೇ ಇಲ್ಲ! ನಾನು ಕೇವಲ ಬಡವ, ಸಾಮಾನ್ಯ ಮನುಷ್ಯ” ಎಂದು ಉತ್ತರಿಸಿದನು.

24 ದಾವೀದನು ತಿಳಿಸಿದ್ದನ್ನೆಲ್ಲ ಸೌಲನ ಅಧಿಕಾರಿಗಳು ಸೌಲನಿಗೆ ಹೇಳಿದರು. 25 ಸೌಲನು ಅವರಿಗೆ, “ನೀವು ದಾವೀದನ ಬಳಿಗೆ ಹೋಗಿ ಹೇಳಿ: ‘ನೀನು ರಾಜನ ಮಗಳಿಗಾಗಿ ಹಣ ಕೊಡಬೇಕಿಲ್ಲ. ಸೌಲನು ತನ್ನ ಶತ್ರುಗಳ ಮೇಲೆ ಸೇಡನ್ನು ತೀರಿಸಿಕೊಳ್ಳುತ್ತಾನೆ. ಆದ್ದರಿಂದ ಅವನ ಮಗಳನ್ನು ಮದುವೆಯಾಗಲು ಕೊಡಬೇಕಾದ ದಕ್ಷಿಣೆ ಏನೆಂದರೆ ನೂರು ಮಂದಿ ಫಿಲಿಷ್ಟಿಯರ ಮುಂದೊಗಲುಗಳು’ ಎಂದು ಹೇಳಿರಿ” ಎಂಬುದಾಗಿ ತಿಳಿಸಿದನು. ಸೌಲನ ರಹಸ್ಯವಾದ ಉಪಾಯ ಇದಾಗಿದ್ದಿತು. ಫಿಲಿಷ್ಟಿಯರು ದಾವೀದನನ್ನು ಕೊಂದು ಬಿಡಬಹುದೆಂದು ಸೌಲನು ಭಾವಿಸಿದ್ದನು.

26 ಸೌಲನ ಅಧಿಕಾರಿಗಳು ಆ ಸಂಗತಿಗಳನ್ನು ದಾವೀದನಿಗೆ ತಿಳಿಸಿದರು. ದಾವೀದನು ರಾಜನ ಅಳಿಯನಾಗಬೇಕೆಂದು ಬಯಸಿದನು. ಆದ್ದರಿಂದ ಅವನು ತಕ್ಷಣವೇ ಕಾರ್ಯನಿರತನಾದನು. 27 ದಾವೀದನು ಮತ್ತು ಅವನ ಜನರು ಫಿಲಿಷ್ಟಿಯರೊಂದಿಗೆ ಹೋರಾಡಲು ಹೋದರು. ಅವರು ಇನ್ನೂರು ಜನ ಫಿಲಿಷ್ಟಿಯರನ್ನು ಕೊಂದು ಅವರ ಮುಂದೊಗಲುಗಳನ್ನು ತೆಗೆದುಕೊಂಡು ಬಂದು ರಾಜನ ಅಳಿಯನಾಗುವುದಕ್ಕೋಸ್ಕರ ಅವುಗಳನ್ನು ಸಂಪೂರ್ಣವಾಗಿ ಸೌಲನಿಗೆ ಒಪ್ಪಿಸಿದರು.

ಆಗ ಸೌಲನು ತನ್ನ ಮಗಳಾದ ಮೀಕಲಳನ್ನು ದಾವೀದನಿಗೆ ಮದುವೆ ಮಾಡಿಕೊಟ್ಟನು. 28 ಯೆಹೋವನು ದಾವೀದನೊಂದಿಗಿರುವುದನ್ನೂ ತನ್ನ ಮಗಳಾದ ಮೀಕಲಳು ದಾವೀದನನ್ನು ಪ್ರೀತಿಸುತ್ತಿರುವುದನ್ನೂ ಸೌಲನು ಗಮನಿಸಿದನು. 29 ಆದ್ದರಿಂದ ಸೌಲನು ದಾವೀದನಿಗೆ ಇನ್ನೂ ಹೆಚ್ಚು ಭಯಪಟ್ಟನು. ಸೌಲನು ಆ ಕಾಲದಲ್ಲೆಲ್ಲ ದಾವೀದನಿಗೆ ವಿರೋಧವಾಗಿದ್ದನು.

30 ಫಿಲಿಷ್ಟಿಯ ಸೇನಾಧಿಪತಿಗಳು ಇಸ್ರೇಲರೊಂದಿಗೆ ಹೋರಾಡಲು ಹೋಗುತ್ತಲೇ ಇದ್ದರು. ಆದರೆ ದಾವೀದನು ಪ್ರತಿಸಲವೂ ಅವರನ್ನು ಸೋಲಿಸುತ್ತಿದ್ದನು. ದಾವೀದನು ಸೌಲನ ಒಬ್ಬ ಯಶಸ್ವಿಯಾದ ಅಧಿಕಾರಿಯಾಗಿದ್ದನು! ಆದ್ದರಿಂದ ದಾವೀದನು ಪ್ರಖ್ಯಾತನಾದನು.

ಲೂಕ 11:1-28

ಪ್ರಾರ್ಥನೆಯ ಕುರಿತು ಯೇಸುವಿನ ಉಪದೇಶ

(ಮತ್ತಾಯ 6:9-15)

11 ಒಮ್ಮೆ ಯೇಸು ಒಂದು ಸ್ಥಳದಲ್ಲಿ ಪ್ರಾರ್ಥಿಸುತ್ತಿದ್ದನು. ಯೇಸು ಪ್ರಾರ್ಥನೆ ಮಾಡಿ ಮುಗಿಸಿದಾಗ, ಆತನ ಶಿಷ್ಯರಲ್ಲೊಬ್ಬನು, “ಪ್ರಭುವೇ, ಯೋಹಾನನು ತನ್ನ ಶಿಷ್ಯರಿಗೆ ಪ್ರಾರ್ಥಿಸುವ ವಿಧಾನವನ್ನು ಕಲಿಸಿದಂತೆ, ದಯಮಾಡಿ ನಮಗೂ ಪ್ರಾರ್ಥಿಸುವ ವಿಧಾನವನ್ನು ಹೇಳಿಕೊಡು” ಎಂದನು.

ಯೇಸು ಅವರಿಗೆ ಹೀಗೆಂದನು: “ನೀವು ಹೀಗೆ ಪ್ರಾರ್ಥಿಸಿರಿ:

‘ತಂದೆಯೇ, ನಿನ್ನ ನಾಮವು ಯಾವಾಗಲೂ ಪರಿಶುದ್ಧವಾಗಿರಲಿ.
ನಿನ್ನ ರಾಜ್ಯವು ಬರಲಿ.
ನಮ್ಮ ಅನುದಿನದ ಆಹಾರವನ್ನು ನಮಗೆ ದಯಪಾಲಿಸು.
ನಮಗೆ ತಪ್ಪುಮಾಡಿದವರನ್ನು ನಾವು ಕ್ಷಮಿಸುವಂತೆ
    ನಮ್ಮಪಾಪಗಳನ್ನೂ ಕ್ಷಮಿಸು.
ನಮ್ಮನ್ನು ಶೋಧನೆಗೆ ಒಳಪಡಿಸಬೇಡ.’”

ಎಡಬಿಡದೆ ಪ್ರಾರ್ಥಿಸಿ

(ಮತ್ತಾಯ 7:7-11)

5-6 ಆಗ ಯೇಸು ಅವರಿಗೆ, “ನಿಮ್ಮಲ್ಲಿ ಒಬ್ಬನು ತನ್ನ ಸ್ನೇಹಿತನೊಬ್ಬನ ಮನೆಗೆ ರಾತ್ರಿ ಬಹಳ ತಡವಾಗಿ ಹೋಗಿದ್ದಾನೆ ಎಂದು ಭಾವಿಸಿಕೊಳ್ಳೋಣ. ಅವನು ತನ್ನ ಸ್ನೇಹಿತನಿಗೆ, ‘ನನ್ನ ಗೆಳೆಯನೊಬ್ಬನು ನನ್ನನ್ನು ನೋಡಲು ದೂರದಿಂದ ನಮ್ಮ ಮನೆಗೆ ಬಂದಿದ್ದಾನೆ. ಆದರೆ ಅವನಿಗೆ ಊಟಕ್ಕೆ ಕೊಡಲು ನನಲ್ಲಿ ಏನೂ ಇಲ್ಲ. ದಯಮಾಡಿ ನನಗೆ ಮೂರು ರೊಟ್ಟಿಗಳನ್ನು ಕೊಡು’ ಎಂದು ಕೇಳುತ್ತಾನೆ. ಮನೆಯೊಳಗಿರುವ ಸ್ನೇಹಿತನು, ‘ಹೊರಟುಹೋಗು! ನನಗೆ ತೊಂದರೆ ಕೊಡಬೇಡ! ಬಾಗಿಲು ಮುಚ್ಚಿದೆ! ನಾನು ಮತ್ತು ನನ್ನ ಮಕ್ಕಳು ಮಲಗಿದ್ದೇವೆ. ಈಗ ಎದ್ದು ನಿನಗೆ ರೊಟ್ಟಿ ಕೊಡಲಾರೆ’ ಎಂದು ಉತ್ತರಕೊಡುತ್ತಾನೆ. ಕೇವಲ ಸ್ನೇಹವೊಂದೇ ಅವನನ್ನು ಏಳಿಸಿ ರೊಟ್ಟಿ ಕೊಡುವಂತೆ ಮಾಡಲಾರದೆಂದು ನಾನು ನಿಮಗೆ ಹೇಳುತ್ತೇನೆ. ಆದರೆ ಅವನು ಎಡಬಿಡದೆ ಕೇಳುತ್ತಲೇ ಇದ್ದರೆ, ಅವನು ಎದ್ದು ತನ್ನ ಸ್ನೇಹಿತನಿಗೆ ಬೇಕಾಗಿರುವ ರೊಟ್ಟಿಯನ್ನು ಖಂಡಿತವಾಗಿ ಕೊಡುವನು. ಆದ್ದರಿಂದ ನಾನು ನಿಮಗೆ ಹೇಳುವುದೇನೆಂದರೆ, ಬೇಡಿಕೊಳ್ಳಿರಿ, ನಿಮಗೆ ದೊರೆಯುವುದು. ಹುಡುಕಿರಿ, ಆಗ ನೀವು ಕಂಡುಕೊಳ್ಳುವಿರಿ. ತಟ್ಟಿರಿ, ಆಗ ನಿಮಗೆ ಬಾಗಿಲು ತೆರೆಯುವುದು. 10 ಹೌದು, ಎಡಬಿಡದೆ ಬೇಡಿಕೊಳ್ಳುವವನಿಗೆ ದೊರೆಯುವುದು. ಎಡಬಿಡದೆ ಹುಡುಕುವವನು ಕಂಡುಕೊಳ್ಳುವನು. ಒಬ್ಬನು ಎಡಬಿಡದೆ ತಟ್ಟುತ್ತಿದ್ದರೆ, ಅವನಿಗೆ ಬಾಗಿಲು ತೆರೆಯಲ್ಪಡುವುದು. 11 ನಿಮ್ಮಲ್ಲಿ ಎಷ್ಟು ಜನರು ತಂದೆಗಳಾಗಿದ್ದೀರಿ? ನಿಮ್ಮ ಮಗನು ಮೀನನ್ನು ಕೇಳಿದರೆ, ನೀವು ಅವನಿಗೆ ಹಾವನ್ನು ಕೊಡುವಿರೋ? ಇಲ್ಲ! ನೀವು ಮೀನನ್ನೇ ಕೊಡುತ್ತೀರಿ. 12 ನಿಮ್ಮ ಮಗನು ಮೊಟ್ಟೆಯನ್ನು ಕೇಳಿದರೆ, ನೀವು ಅವನಿಗೆ ಚೇಳನ್ನು ಕೊಡುವಿರೋ? ಇಲ್ಲ! 13 ನೀವು ಇತರ ಜನರಂತೆ ಕೆಟ್ಟವರಾಗಿದ್ದೀರಿ. ಆದರೆ ನಿಮ್ಮ ಮಕ್ಕಳಿಗೆ ಒಳ್ಳೆಯ ಪದಾರ್ಥಗಳನ್ನು ಕೊಡುತ್ತೀರಿ. ಅದೇ ರೀತಿಯಲ್ಲಿ ಪರಲೋಕದಲ್ಲಿರುವ ನಿಮ್ಮ ತಂದೆಯು ಸಹ ತನ್ನನ್ನು ಬೇಡಿಕೊಳ್ಳುವವರಿಗೆ ಪವಿತ್ರಾತ್ಮನನ್ನು ಖಂಡಿತವಾಗಿ ಕೊಡುತ್ತಾನೆ” ಎಂದು ಹೇಳಿದನು.

ಯೇಸುವಿನ ಶಕ್ತಿ ದೇವರಿಂದ ಬಂದದ್ದು

(ಮತ್ತಾಯ 12:22-30; ಮಾರ್ಕ 3:20-27)

14 ಒಮ್ಮೆ ಯೇಸು ಮೂಕದೆವ್ವದಿಂದ ಪೀಡಿತನಾಗಿದ್ದ ಒಬ್ಬನನ್ನು ಬಿಡಿಸುತ್ತಿದ್ದನು. ಆ ದೆವ್ವವು ಅವನನ್ನು ಬಿಟ್ಟು ಹೊರಗೆ ಬಂದಾಗ ಅವನು ಮಾತಾಡಿದನು. ಇದನ್ನು ಕಂಡ ಜನರು ಬೆರಗಾದರು. 15 ಆದರೆ ಕೆಲವರು, “ದೆವ್ವದಿಂದ ಪೀಡಿತರಾಗಿರುವವರನ್ನು ಇವನು ಬೆಲ್ಜೆಬೂಲನ ಶಕ್ತಿಯಿಂದ ಬಿಡಿಸುತ್ತಾನೆ. ಬೆಲ್ಜೆಬೂಲನು ದೆವ್ವಗಳ ಅಧಿಪತಿ” ಎಂದು ಹೇಳಿದರು.

16 ಇತರ ಜನರು ಯೇಸುವನ್ನು ಪರೀಕ್ಷಿಸಬೇಕೆಂದು ದೇವರಿಂದ ಒಂದು ಸೂಚಕಕಾರ್ಯವನ್ನು ನಮಗೆ ತೋರಿಸು ಎಂದು ಕೇಳಿದರು. 17 ಆದರೆ ಅವರ ಆಲೋಚನೆಯನ್ನು ತಿಳಿದಿದ್ದ ಯೇಸು ಅವರಿಗೆ, “ಒಡೆದುಹೋದ ಮತ್ತು ತನಗೆ ವಿರುದ್ಧವಾಗಿ ತಾನೇ ಕಾದಾಡುವ ರಾಜ್ಯವು ನಾಶವಾಗುವುದು. ಭೇದಭಾವದಿಂದ ಕೂಡಿರುವ ಕುಟುಂಬವು ಮುರಿದು ಹೋಗುವುದು. 18 ಅಂತೆಯೇ, ಸೈತಾನನು ತನಗೆ ವಿರುದ್ಧವಾಗಿ ತಾನೇ ಕಾದಾಡಿದರೆ ಅವನ ರಾಜ್ಯವು ಮುಂದುವರಿಯಲು ಹೇಗೆ ಸಾಧ್ಯ? ನಾನು ದೆವ್ವಗಳನ್ನು ಬೆಲ್ಜೆಬೂಲನ ಶಕ್ತಿಯಿಂದ ಬಿಡಿಸುತ್ತೇನೆಂದು ನೀವು ಹೇಳುತ್ತೀರಿ. 19 ನಾನು ಬೆಲ್ಜೆಬೂಲನ ಶಕ್ತಿಯಿಂದ ದೆವ್ವಗಳನ್ನು ಬಿಡಿಸುವುದಾಗಿದ್ದರೆ, ನಿಮ್ಮ ಜನರು ದೆವ್ವಗಳನ್ನು ಯಾವ ಶಕ್ತಿಯಿಂದ ಬಿಡಿಸುತ್ತಾರೆ? ಆದ್ದರಿಂದ ನಿಮ್ಮ ಸ್ವಂತ ಜನರೇ ನಿಮ್ಮನು ತಪ್ಪಿತಸ್ಥರೆಂದು ಹೇಳುತ್ತಾರೆ. 20 ಆದರೆ ನಾನು ದೆವ್ವಗಳನ್ನು ದೇವರ ಬಲದಿಂದ ಹೊರಡಿಸುವುದಾದರೆ ದೇವರ ರಾಜ್ಯವು ನಿಮ್ಮ ಬಳಿಗೆ ಬಂದಿದೆ ಎಂಬುದಕ್ಕೆ ಇದೇ ಸಾಕ್ಷಿಯಾಗಿದೆ.

21 “ಒಬ್ಬ ಬಲಿಷ್ಠನು ಅನೇಕ ಆಯುಧಗಳಿಂದ ಸುಸಜ್ಜಿತನಾಗಿ ತನ್ನ ಮನೆಯನ್ನು ಕಾಯುತ್ತಿರುವಾಗ, ಮನೆಯೊಳಗಿರುವ ವಸ್ತುಗಳು ಸುರಕ್ಷಿತವಾಗಿರುತ್ತವೆ. 22 ಆದರೆ ಅವನಿಗಿಂತಲೂ ಬಲಿಷ್ಠನಾದ ಮತ್ತೊಬ್ಬನು ಬಂದು ಅವನನ್ನು ಸೋಲಿಸಿದರೆ, ಮೊದಲನೆಯ ಬಲಿಷ್ಠನು ತನ್ನ ಮನೆಯನ್ನು ಸುರಕ್ಷಿತವಾಗಿಡುವುದಕ್ಕಾಗಿ ಅವಲಂಬಿಸಿಕೊಂಡಿದ್ದ ಆಯುಧಗಳನ್ನೆಲ್ಲಾ ಆ ಮತ್ತೊಬ್ಬ ಬಲಿಷ್ಠನು ತೆಗೆದುಕೊಂಡು ಹೋಗುವನು. ಬಳಿಕ ಆ ಮತ್ತೊಬ್ಬ ಬಲಿಷ್ಠನು ಆ ಮನುಷ್ಯನ ವಸ್ತುಗಳನ್ನು ತನಗೆ ಇಷ್ಟಬಂದ ಹಾಗೆ ಮಾಡುವನು.

23 “ನನ್ನೊಂದಿಗಿಲ್ಲದವನು ನನಗೆ ವಿರೋಧವಾಗಿದ್ದಾನೆ. ನನ್ನೊಂದಿಗೆ ಶೇಖರಿಸದವನು ಚದರಿಸುವವನಾಗಿದ್ದಾನೆ.

ಬರಿದಾದ ಹೃದಯ

(ಮತ್ತಾಯ 12:43-45)

24 “ದೆವ್ವವು ಒಬ್ಬ ವ್ಯಕ್ತಿಯಿಂದ ಹೊರಗೆ ಬಂದ ಮೇಲೆ ವಿಶ್ರಾಂತಿಗಾಗಿ ಸ್ಥಳವನ್ನು ಹುಡುಕುತ್ತಾ ನೀರಿಲ್ಲದ ಸ್ಥಳಗಳಲ್ಲಿ ಅಲೆದಾಡುತ್ತದೆ. ಆದರೆ ವಿಶ್ರಮಿಸಿಕೊಳ್ಳಲು ಅದಕ್ಕೆ ಸ್ಥಳ ದೊರೆಯುವುದಿಲ್ಲ. ಆದ್ದರಿಂದ ‘ನಾನು ಬಿಟ್ಟುಬಂದ ಮನೆಗೆ (ವ್ಯಕ್ತಿ) ಹಿಂತಿರುಗುವೆನು’ ಎಂದುಕೊಳ್ಳುತ್ತದೆ. 25 ಅದು ಆ ವ್ಯಕ್ತಿಯ ಬಳಿಗೆ ಹಿಂತಿರುಗಿ ಬಂದಾಗ, ಆ ಮನೆಯನ್ನು (ವ್ಯಕ್ತಿ) ಗುಡಿಸಿ ಅಲಂಕರಿಸಿರುವುದನ್ನು ಕಾಣುತ್ತದೆ. 26 ಆಗ ಹೊರಟುಹೋಗಿ ತನಗಿಂತಲೂ ಹೆಚ್ಚು ಕೆಟ್ಟವುಗಳಾದ ಬೇರೆ ಏಳು ದೆವ್ವಗಳನ್ನು ಕರೆದುಕೊಂಡು ಬರುತ್ತದೆ. ಬಳಿಕ ಆ ದೆವ್ವಗಳೆಲ್ಲಾ ಆ ಮನುಷ್ಯನೊಳಗೆ ಹೋಗಿ ಅಲ್ಲೇ ವಾಸಿಸುತ್ತವೆ. ಆಗ ಆ ವ್ಯಕ್ತಿಯು ಮೊದಲಿಗಿಂತಲೂ ಹೆಚ್ಚಿನ ಸಂಕಟಕ್ಕೆ ಒಳಗಾಗುತ್ತಾನೆ” ಎಂದು ಹೇಳಿದನು.

ನಿಜವಾದ ಭಾಗ್ಯವಂತರು

27 ಯೇಸು ಈ ಸಂಗತಿಗಳನ್ನು ಹೇಳಿದಾಗ, ಅಲ್ಲಿ, ಜನರೊಂದಿಗಿದ್ದ ಒಬ್ಬ ಸ್ತ್ರೀ ಯೇಸುವಿಗೆ, “ನಿನ್ನನ್ನು ಹೆತ್ತು ಪೋಷಿಸಿದ ತಾಯಿ ಭಾಗ್ಯವಂತಳೇ ಸರಿ!” ಎಂದು ಹೇಳಿದಳು.

28 ಆದರೆ ಯೇಸು, “ದೇವರ ವಾಕ್ಯವನ್ನು ಕೇಳಿ ಅದಕ್ಕೆ ವಿಧೇಯರಾಗುವ ಜನರೇ ಭಾಗ್ಯವಂತರು!” ಎಂದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International