Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
1 ಸಮುವೇಲನು 10-12

ಸಮುವೇಲನಿಂದ ಸೌಲನಿಗೆ ಅಭಿಷೇಕ

10 ಸಮುವೇಲನು ವಿಶೇಷವಾದ ಎಣ್ಣೆಯ ಕುಪ್ಪಿಯನ್ನು ತೆಗೆದುಕೊಂಡು ಸೌಲನ ತಲೆಯ ಮೇಲೆ ಆ ಎಣ್ಣೆಯನ್ನು ಸುರಿದನು. ಸಮುವೇಲನು ಸೌಲನಿಗೆ ಮುದ್ದಿಟ್ಟು, “ಯೆಹೋವನು ತನ್ನ ಜನರನ್ನು ಮುಂದೆ ನಡೆಸಲು ನಿನ್ನನ್ನು ಅವರಿಗೆ ನಾಯಕನನ್ನಾಗಿ ಅಭಿಷೇಕಿಸಿದ್ದಾನೆ. ನೀನು ಯೆಹೋವನ ಜನರನ್ನು ಆಳುವೆ; ಅವರನ್ನು ಸುತ್ತುವರೆದಿರುವ ಶತ್ರುಗಳಿಂದ ರಕ್ಷಿಸುವೆ. ಯೆಹೋವನು ತನ್ನ ಜನರನ್ನು ಆಳುವುದಕ್ಕಾಗಿ ನಿನ್ನನ್ನು ಅಭಿಷೇಕಿಸಿದ್ದಾನೆ. ಇದು ನಿಜವೆಂಬುದಕ್ಕೆ ಸಾಕ್ಷಿಯೇನೆಂದರೆ: ಈ ದಿನ ನನ್ನನ್ನು ಬಿಟ್ಟು ನೀನು ಮುಂದೆ ಸಾಗಿದಾಗ, ಬೆನ್ಯಾಮೀನನ ಮೇರೆಯಲ್ಲಿರುವ ಚೆಲ್ಚಹಿನಲ್ಲಿನ ರಾಹೇಲಳ ಸಮಾಧಿಯ ಬಳಿ ಇಬ್ಬರು ಮನುಷ್ಯರನ್ನು ಸಂಧಿಸುವೆ. ಅವರಿಬ್ಬರೂ ನಿನಗೆ, ‘ನೀನು ಹುಡುಕುತ್ತಿದ್ದ ಕತ್ತೆಗಳು ಒಬ್ಬನಿಗೆ ಸಿಕ್ಕಿವೆ. ನಿನ್ನ ತಂದೆಯು ಕತ್ತೆಗಳ ಬಗ್ಗೆ ಚಿಂತಿಸುವುದನ್ನು ಬಿಟ್ಟು ನಿನ್ನ ಬಗ್ಗೆ ಚಿಂತಿಸುತ್ತಿದ್ದಾನೆ. ನನ್ನ ಮಗನು ಎಲ್ಲಿಗೆ ಹೋದನೋ ಎಂದು ಹಂಬಲಿಸುತ್ತಿದ್ದಾನೆ’ ಎಂದು ಹೇಳುವರು” ಎಂದನು.

ಸಮುವೇಲನು, “ನೀನು ಅಲ್ಲಿಂದ ಮುಂದೆ ಹೋಗುತ್ತಾ ತಾಬೋರಿನ ಹತ್ತಿರವಿರುವ ಒಂದು ದೊಡ್ಡ ಓಕ್ ವೃಕ್ಷದ ಬಳಿಗೆ ಬರುವೆ. ಅಲ್ಲಿ ನಿನ್ನನ್ನು ಮೂರು ಜನರು ಭೇಟಿಯಾಗುತ್ತಾರೆ. ಆ ಮೂರು ಜನರು ದೇವರ ಆರಾಧನೆಗಾಗಿ ಬೇತೇಲಿಗೆ ಹೋಗುತ್ತಿರುತ್ತಾರೆ. ಮೊದಲನೆಯವನು ಮೂರು ಮರಿ ಹೋತಗಳನ್ನೂ ಎರಡನೆಯವನು ಮೂರು ರೊಟ್ಟಿಗಳನ್ನೂ ಮೂರನೆಯವನು ಒಂದು ಸೀಸೆ ದ್ರಾಕ್ಷಾರಸವನ್ನೂ ತೆಗೆದುಕೊಂಡು ಹೋಗುತ್ತಿರುತ್ತಾರೆ. ಈ ಮೂವರೂ ನಿನ್ನ ಕ್ಷೇಮವನ್ನು ವಿಚಾರಿಸುತ್ತಾರೆ. ಅವರು ನಿನಗೆ ಎರಡು ರೊಟ್ಟಿಗಳನ್ನು ಕೊಡುತ್ತಾರೆ. ನೀನು ಆ ಎರಡು ರೊಟ್ಟಿಗಳನ್ನು ಅವರಿಂದ ತೆಗೆದುಕೊಳ್ಳುವೆ. ನಂತರ ನೀನು ಗಿಬಿಯತ್ ಎಲೋಹಿಮಿಗೆ ಹೋಗುವೆ. ಅಲ್ಲಿ ಒಂದು ಫಿಲಿಷ್ಟಿಯರ ಕೋಟೆಯಿದೆ. ನೀನು ಆ ಪಟ್ಟಣಕ್ಕೆ ಬಂದಾಗ, ಪ್ರವಾದಿಗಳ ಗುಂಪೊಂದು ಹೊರಬರುತ್ತದೆ. ಈ ಪ್ರವಾದಿಗಳು ಆರಾಧನಾ ಸ್ಥಳದಿಂದ ಇಳಿದು ಬರುತ್ತಾರೆ, ಅವರು ಪ್ರವಾದಿಸುತ್ತಿರುತ್ತಾರೆ. ಅವರು ಸ್ವರಮಂಡಲವನ್ನೂ ದಮ್ಮಡಿಯನ್ನೂ ಕೊಳಲನ್ನೂ ಕಿನ್ನರಿಯನ್ನೂ ನುಡಿಸುತ್ತಿರುತ್ತಾರೆ. ಆಗ ಯೆಹೋವನ ಆತ್ಮವು ಮಹಾಶಕ್ತಿಯೊಡನೆ ನಿನ್ನ ಮೈಮೇಲೆ ಬರುತ್ತದೆ. ನೀನು ಮಾರ್ಪಾಟಾಗಿ ಬೇರೊಬ್ಬ ಮನುಷ್ಯನಾಗುವೆ. ನೀನೂ ಆ ಪ್ರವಾದಿಗಳಂತೆ ಪ್ರವಾದಿಸಲು ಆರಂಭಿಸುವೆ. ಈ ಕಾರ್ಯಗಳು ಸಂಭವಿಸಿದ ಮೇಲೆ, ನೀನು ನಿನ್ನ ನಿರ್ಧಾರದಂತೆ ಮಾಡು. ಯಾಕೆಂದರೆ ದೇವರು ನಿನ್ನೊಂದಿಗಿರುತ್ತಾನೆ.

“ನನಗಿಂತ ಮೊದಲು ನೀನು ಗಿಲ್ಗಾಲಿಗೆ ಹೋಗು. ನಾನು ನಿನ್ನನ್ನು ಅಲ್ಲಿ ಭೇಟಿಯಾಗುತ್ತೇನೆ. ನಾನು ಅಲ್ಲಿ ಸರ್ವಾಂಗಹೋಮಗಳನ್ನು ಮತ್ತು ಸಮಾಧಾನಯಜ್ಞಗಳನ್ನು ಅರ್ಪಿಸುತ್ತೇನೆ. ಆದರೆ ನೀನು ಏಳು ದಿನಗಳವರೆಗೆ ಕಾಯಲೇಬೇಕು. ಅನಂತರ ನಾನು ನಿನ್ನ ಬಳಿಗೆ ಬಂದು ನೀನು ಮಾಡಬೇಕಾದದ್ದನ್ನು ತಿಳಿಸುತ್ತೇನೆ” ಎಂದು ಹೇಳಿದನು.

ಸೌಲನು ಪ್ರವಾದಿಗಳಂತಾಗುವನು

ಸೌಲನು ಸಮುವೇಲನನ್ನು ಬಿಟ್ಟುಹೊರಡಲು ತಿರುಗಿದಂತೆಯೇ ದೇವರು ಸಹ ಸೌಲನ ಜೀವಿತವನ್ನು ಮಾರ್ಪಾಟು ಮಾಡಿದನು. ಅಂದು ಆ ಸಂಗತಿಗಳೆಲ್ಲಾ ಸಂಭವಿಸಿದವು. 10 ಸೌಲನು ಮತ್ತು ಅವನ ಸೇವಕನು ಗಿಬಿಯತ್ ಎಲೋಹಿಮಿಗೆ ಹೋದರು. ಸೌಲನು ಆ ಸ್ಥಳದಲ್ಲಿ ಪ್ರವಾದಿಗಳ ಸಮೂಹವನ್ನು ಸಂಧಿಸಿದನು. ದೇವರ ಆತ್ಮವು ಮಹಾಶಕ್ತಿಯೊಡನೆ ಸೌಲನ ಮೈಮೇಲೆ ಬಂದಿತು. ಆಗ ಸೌಲನು ಪ್ರವಾದಿಗಳ ಜೊತೆಯಲ್ಲಿ ಪ್ರವಾದಿಸಿದನು. 11 ಸೌಲನನ್ನು ಮೊದಲು ನೋಡಿದ್ದ ಜನರು, ಪ್ರವಾದಿಗಳ ಜೊತೆಯಲ್ಲಿ ಸೌಲನು ಪ್ರವಾದಿಸುತ್ತಿರುವುದನ್ನು ಕಂಡರು. ಈ ಜನರು, “ಕೀಷನ ಮಗನಿಗೆ ಏನಾಯಿತು? ಸೌಲನೂ ಪ್ರವಾದಿಗಳಲ್ಲಿ ಒಬ್ಬನಾದನೇ?” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು.

12 ಆಗ ಗಿಬಿಯತ್ ಎಲೋಹಿಮಿನಲ್ಲಿ ವಾಸಿಸುತ್ತಿದ್ದ ಮನುಷ್ಯನೊಬ್ಬನು, “ಹೌದು, ಅವನು ಅವರ ನಾಯಕನಂತೆ ಕಾಣುತ್ತಿದ್ದಾನೆ” ಎಂದು ಹೇಳಿದನು. ಆದ್ದರಿಂದಲೇ, “ಸೌಲನೂ ಪ್ರವಾದಿಗಳಲ್ಲಿ ಒಬ್ಬನಾದನು” ಎಂಬ ಗಾದೆಯು ಹುಟ್ಟಿಕೊಂಡಿತು.

ಮನೆಗೆ ಸೌಲನ ಆಗಮನ

13 ಸೌಲನು ಪ್ರವಾದಿಸಿದ ನಂತರ, ತನ್ನ ಮನೆಯ ಸಮೀಪದಲ್ಲಿದ್ದ ಸ್ಥಳಕ್ಕೆ ಆರಾಧನೆಗೋಸ್ಕರ ಹೋದನು.

14 ಸೌಲನ ಚಿಕ್ಕಪ್ಪನು ಸೌಲನನ್ನು ಮತ್ತು ಅವನ ಸೇವಕನನ್ನು, “ನೀವು ಎಲ್ಲಿಗೆ ಹೋಗಿದ್ದಿರಿ?” ಎಂದು ಕೇಳಿದನು.

ಸೌಲನು ಅವನಿಗೆ, “ನಾವು ಕತ್ತೆಗಳನ್ನು ಹುಡುಕುತ್ತಿದ್ದೆವು. ನಾವು ಅವುಗಳನ್ನು ಕಂಡುಕೊಳ್ಳಲಾರದೆ ಹೋದಾಗ ಸಮುವೇಲನನ್ನು ನೋಡಲು ಹೋದೆವು” ಎಂದು ಹೇಳಿದನು.

15 ಸೌಲನ ಚಿಕ್ಕಪ್ಪನು, “ಸಮುವೇಲನು ನಿನಗೆ ಹೇಳಿದ್ದನ್ನು ನನಗೆ ದಯವಿಟ್ಟು ತಿಳಿಸು” ಎಂದು ಹೇಳಿದನು.

16 ಸೌಲನು ಅವನಿಗೆ, “ಕತ್ತೆಗಳು ಈಗಾಗಲೇ ಸಿಕ್ಕಿವೆ ಎಂದು ಸಮುವೇಲನು ಹೇಳಿದನು” ಅಂದನು. ಸೌಲನು ತನ್ನ ಚಿಕ್ಕಪ್ಪನಿಗೆ ಎಲ್ಲವನ್ನೂ ತಿಳಿಸಲಿಲ್ಲ. ರಾಜ್ಯದ ಬಗ್ಗೆ ಸಮುವೇಲನು ಹೇಳಿದ ಮಾತುಗಳನ್ನು ಸೌಲನು ತನ್ನ ಚಿಕ್ಕಪ್ಪನಿಗೆ ತಿಳಿಸಲಿಲ್ಲ.

ಸೌಲನು ರಾಜನೆಂದು ಸಮುವೇಲನ ಪ್ರಕಟನೆ

17 ಸಮುವೇಲನು ಇಸ್ರೇಲರನ್ನು ಮಿಚ್ಪೆಗೆ ಕರೆಸಿ, ಯೆಹೋವನ ಸನ್ನಿಧಿಯಲ್ಲಿ ಸಭೆಸೇರಿಸಿದನು. 18 ಸಮುವೇಲನು ಅವರಿಗೆ, “ಇಸ್ರೇಲರ ದೇವರಾದ ಯೆಹೋವನು ಹೇಳುವುದೇನೆಂದರೆ, ‘ನಾನು ಇಸ್ರೇಲರನ್ನು ಈಜಿಪ್ಟ್ ದೇಶದಿಂದ ಕರೆದುಕೊಂಡು ಬಂದೆನು. ನಾನು ಈಜಿಪ್ಟಿನವರ ಆಳ್ವಿಕೆಯಿಂದ ಮತ್ತು ನಿಮಗೆ ಹಾನಿಮಾಡಲು ಪ್ರಯತ್ನಿಸಿದ ಇತರ ರಾಜ್ಯಗಳಿಂದ ರಕ್ಷಿಸಿದೆನು’ ಎನ್ನುತ್ತಾನೆ. 19 ಆದರೆ ಇಂದು ನೀವು ನಿಮ್ಮ ದೇವರನ್ನು ತಿರಸ್ಕರಿಸಿರುವಿರಿ. ನಿಮ್ಮ ದೇವರು ನಿಮ್ಮನ್ನು ಕಷ್ಟಗಳಿಂದ ಮತ್ತು ಸಮಸ್ಯೆಗಳಿಂದ ರಕ್ಷಿಸುತ್ತಾನೆ. ಆದರೆ ನೀವು, ‘ಇಲ್ಲ, ನಮ್ಮನ್ನಾಳಲು ನಮಗೊಬ್ಬ ರಾಜನು ಬೇಕು’ ಎಂದು ಕೇಳಿದಿರಿ. ಈಗ ಬನ್ನಿ, ನೀವು, ನಿಮ್ಮ ಕುಲಗಳ ಮತ್ತು ಗೋತ್ರಗಳ ಸಮೇತವಾಗಿ ಯೆಹೋವನ ಸಮ್ಮುಖದಲ್ಲಿ ನಿಲ್ಲಿರಿ” ಎಂದು ಹೇಳಿದನು.

20 ಸಮುವೇಲನು ಇಸ್ರೇಲಿನ ಎಲ್ಲಾ ಕುಲದವರನ್ನು ಹತ್ತಿರಕ್ಕೆ ಕರೆದನು. ನಂತರ ಸಮುವೇಲನು ಹೊಸ ರಾಜನನ್ನು ಆರಿಸಲು ಚೀಟು ಹಾಕತೊಡಗಿದನು. ಮೊದಲನೆಯದಾಗಿ, ಬೆನ್ಯಾಮೀನ್ ಕುಲವು ಆರಿಸಲ್ಪಟ್ಟಿತು. 21 ಬೆನ್ಯಾಮೀನ್ ಕುಲದಲ್ಲಿ ಒಂದು ಕುಟುಂಬವನ್ನು ಆರಿಸಿಕೊಳ್ಳುವುದಕ್ಕಾಗಿ ಮತ್ತೆ ಚೀಟು ಹಾಕಲಾಯಿತು. ಅದರಲ್ಲಿ ಮಟ್ರಿಯ ಕುಟುಂಬವು ಆರಿಸಲ್ಪಟ್ಟಿತು. ನಂತರ ಸಮುವೇಲನು ಮಟ್ರಿಯ ಕುಟುಂಬದ ಪ್ರತಿಯೊಬ್ಬನನ್ನು ಸಮೀಪಕ್ಕೆ ಕರೆದು ಅವರಲ್ಲಿ ಒಬ್ಬನನ್ನು ಆರಿಸಿಕೊಳ್ಳುವುದಕ್ಕಾಗಿ ಚೀಟು ಹಾಕಿದನು. ಅದರಲ್ಲಿ ಕೀಷನ ಮಗನಾದ ಸೌಲನು ಆರಿಸಲ್ಪಟ್ಟನು.

ಆದರೆ ಜನರು ಸೌಲನನ್ನು ಹುಡುಕಿದಾಗ ಅವರಿಗೆ ಅವನು ಸಿಕ್ಕಲಿಲ್ಲ. 22 ಆಗ ಅವರು ಯೆಹೋವನನ್ನು, “ಸೌಲನು ಇಲ್ಲಿಗೆ ಬರುವನೋ?” ಎಂದು ಕೇಳಿದರು.

ಯೆಹೋವನು, “ಸೌಲನು ಸರಕುಗಳ ಹಿಂದೆ ಅಡಗಿಕೊಂಡಿದ್ದಾನೆ” ಎಂದು ಹೇಳಿದನು.

23 ಜನರು ಓಡಿಹೋಗಿ, ಸರಕುಗಳ ಹಿಂದೆ ಅಡಗಿಕೊಂಡಿದ್ದ ಸೌಲನನ್ನು ಹಿಡಿದುಕೊಂಡು ಬಂದರು. ಸೌಲನು ಜನರ ಮಧ್ಯದಲ್ಲಿ ನಿಂತುಕೊಂಡನು. ಸೌಲನು ಇತರ ಜನರಿಗಿಂತ ಎತ್ತರವಾಗಿದ್ದನು.

24 ಸಮುವೇಲನು ಜನರೆಲ್ಲರಿಗೆ, “ಯೆಹೋವನು ಆರಿಸಿಕೊಂಡಿರುವ ಮನುಷ್ಯನನ್ನು ನೋಡಿದಿರಾ! ಸರ್ವಜನರಲ್ಲಿಯೂ ಸೌಲನಂತಹ ಮನುಷ್ಯನು ಇನ್ನೊಬ್ಬನಿಲ್ಲ!” ಎಂದು ಹೇಳಿದನು.

ಆಗ ಜನರೆಲ್ಲ, “ರಾಜನು ಚಿರಂಜೀವಿಯಾಗಿರಲಿ” ಎಂದು ಆರ್ಭಟಿಸಿದರು.

25 ಸಮುವೇಲನು ಜನರಿಗೆ ರಾಜನೀತಿಯ ನಿಯಮಗಳನ್ನು ವಿವರಿಸಿದನು. ಅವನು ಒಂದು ಪುಸ್ತಕದಲ್ಲಿ ಆ ನಿಯಮಗಳನ್ನು ಬರೆದನು. ಅವನು ಯೆಹೋವನ ಸನ್ನಿಧಿಯಲ್ಲಿ ಆ ಪುಸ್ತಕವನ್ನಿಟ್ಟನು. ಬಳಿಕ ಸಮುವೇಲನು ಜನರನ್ನು ಮನೆಗಳಿಗೆ ಹಿಂದಿರುಗಲು ಹೇಳಿದನು.

26 ಸೌಲನು ಸಹ ಗಿಬೆಯದ ತನ್ನ ಮನೆಗೆ ಹೋದನು. ಕೆಲವು ಶೂರರು ದೈವಪ್ರೇರಣೆಯಿಂದ ಸೌಲನನ್ನು ಹಿಂಬಾಲಿಸಿದರು. 27 ಆದರೆ ಕೆಲವು ಕಿರುಕುಳಕಾರರು, “ಈ ಮನುಷ್ಯನು ಹೇಗೆ ತಾನೆ ನಮ್ಮನ್ನು ರಕ್ಷಿಸುವನು?” ಎಂದು ಹೇಳಿದರು. ಅವರು ಸೌಲನ ಬಗ್ಗೆ ಕೆಟ್ಟಮಾತುಗಳನ್ನು ಆಡಿದರು; ಅವನನ್ನು ತಿರಸ್ಕರಿಸಿ, ಕಾಣಿಕೆಗಳನ್ನು ತಂದುಕೊಡಲಿಲ್ಲ. ಆದರೆ ಸೌಲನು ಏನೂ ಮಾತನಾಡಲಿಲ್ಲ.

ಅಮ್ಮೋನಿಯರ ರಾಜನಾದ ನಾಹಾಷ

ಅಮ್ಮೋನಿಯರ ರಾಜನಾದ ನಾಹಾಷನು, ಗಾದ್ ಮತ್ತು ರೂಬೆನ್ ಕುಲದವರಿಗೆ ಕಿರುಕುಳಕೊಡುತ್ತಿದ್ದನು. ನಾಹಾಷನು ಪ್ರತಿ ಮನುಷ್ಯನ ಬಲಗಣ್ಣನ್ನು ಕಿತ್ತುಹಾಕುತ್ತಿದ್ದನು. ನಾಹಾಷನು ಅವರಿಗೆ ಸಹಾಯಮಾಡಲು ಯಾರಿಗೂ ಅವಕಾಶಕೊಡುತ್ತಿರಲಿಲ್ಲ. ಅಮ್ಮೋನಿಯರ ರಾಜನಾದ ನಾಹಾಷನು ಜೋರ್ಡನ್ ನದಿಯ ಪೂರ್ವ ಪ್ರದೇಶದಲ್ಲಿ ವಾಸವಾಗಿದ್ದ ಎಲ್ಲ ಇಸ್ರೇಲರ ಬಲಗಣ್ಣನ್ನು ಕಿತ್ತುಹಾಕುತ್ತಿದ್ದನು. ಆದ್ದರಿಂದ ಅಮ್ಮೋನಿಯರಿಂದ ಏಳು ಸಾವಿರ ಮಂದಿ ಇಸ್ರೇಲರು ಯಾಬೇಷ್ ಗಿಲ್ಯಾದಿಗೆ ಓಡಿಹೋದರು.

11 ಅಮ್ಮೋನಿಯನಾದ ನಾಹಾಷನು ಒಂದು ತಿಂಗಳ ನಂತರ, ತನ್ನ ಸೈನ್ಯದೊಂದಿಗೆ ಯಾಬೇಷ್‌ಗಿಲ್ಯಾದಿಗೆ ಮುತ್ತಿಗೆ ಹಾಕಿದನು. ಯಾಬೇಷಿನ ಜನರೆಲ್ಲ ನಾಹಾಷನಿಗೆ, “ನೀನು ನಮ್ಮೊಂದಿಗೆ ಒಪ್ಪಂದ ಮಾಡಿಕೊಳ್ಳುವುದಾದರೆ, ನಾವು ನಿನ್ನ ಸೇವೆಮಾಡುತ್ತೇವೆ” ಎಂದು ಹೇಳಿದರು.

ಆದರೆ ಅಮ್ಮೋನಿಯನಾದ ನಾಹಾಷನು, “ನಾನು ನಿಮ್ಮಲ್ಲಿ ಪ್ರತಿಯೊಬ್ಬರ ಬಲಗಣ್ಣನ್ನು ಕಿತ್ತುಹಾಕಿದಾಗ ಮಾತ್ರ ನಿಮ್ಮೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತೇನೆ. ಆಗ ಇಸ್ರೇಲರಿಗೆಲ್ಲಾ ಅವಮಾನವಾಗುವುದು” ಎಂದು ಉತ್ತರಿಸಿದನು.

ಯಾಬೇಷಿನ ಹಿರಿಯರು ನಾಹಾಷನಿಗೆ, “ನಮಗೆ ಏಳು ದಿನಗಳವರೆಗೆ ಸಮಯ ಕೊಡು. ನಾವು ಇಸ್ರೇಲಿನ ಎಲ್ಲಾ ಕಡೆಗೆ ದೂತರನ್ನು ಕಳುಹಿಸುತ್ತೇವೆ. ನಮ್ಮನ್ನು ರಕ್ಷಿಸಲು ಯಾರೂ ಬರದಿದ್ದರೆ ನಾವೆಲ್ಲ ನಿನ್ನ ಬಳಿಗೆ ಬರುತ್ತೇವೆ ಹಾಗೂ ನಿನಗೆ ಅಧೀನರಾಗುತ್ತೇವೆ” ಎಂದು ಹೇಳಿದರು.

ಸೌಲನು ಯಾಬೇಷ್ ಗಿಲ್ಯಾದನ್ನು ರಕ್ಷಿಸುವನು

ಸೌಲನು ವಾಸವಾಗಿದ್ದ ಗಿಬೆಯಕ್ಕೆ ಸಂದೇಶಕರು ಬಂದು ಜನರಿಗೆ ಸುದ್ದಿಯನ್ನು ತಿಳಿಸಿದರು. ಜನರು ಗಟ್ಟಿಯಾಗಿ ಅತ್ತರು. ಸೌಲನು ಹಸುಗಳನ್ನು ಹೊಡೆದುಕೊಂಡು ಹೊಲಕ್ಕೆ ಹೋಗಿದ್ದನು. ಸೌಲನು ಹೊಲದಿಂದ ಬಂದಾಗ ಜನರೆಲ್ಲ ಅಳುವುದು ಕೇಳಿಸಿತು. ಸೌಲನು, “ಏನಾಯಿತು? ಜನರು ಅಳುತ್ತಿರುವುದೇಕೆ?” ಎಂದು ಕೇಳಿದನು.

ಆಗ ಜನರೆಲ್ಲ ಯಾಬೇಷಿನ ಸಂದೇಶಕರು ಹೇಳಿದ್ದನ್ನೆಲ್ಲ ಸೌಲನಿಗೆ ತಿಳಿಸಿದರು. ಅವರು ಹೇಳಿದ್ದನ್ನು ಕೇಳಿದಾಗ ದೇವರಾತ್ಮನು ಸೌಲನ ಮೈಮೇಲೆ ಮಹಾಶಕ್ತಿಯೊಡನೆ ಬಂದಿತು. ಸೌಲನು ಬಹುಕೋಪಗೊಂಡನು. ಸೌಲನು ಒಂದು ಜೊತೆ ಹಸುಗಳನ್ನು ತೆಗೆದುಕೊಂಡು ಅವುಗಳನ್ನು ತುಂಡುತುಂಡಾಗಿ ಕತ್ತರಿಸಿ ಆ ತುಂಡುಗಳನ್ನು ಸಂದೇಶಕರಿಗೆ ಕೊಟ್ಟನು. “ಇಸ್ರೇಲಿನ ನಾಡಿನಲ್ಲೆಲ್ಲಾ ಈ ತುಂಡುಗಳನ್ನು ತೆಗೆದುಕೊಂಡು ಹೋಗಿ ಅವರಿಗೆ, ‘ಸೌಲನನ್ನೂ ಮತ್ತು ಸಮುವೇಲನನ್ನೂ ಹಿಂಬಾಲಿಸಿರಿ, ಸೌಲನನ್ನು ಮತ್ತು ಸಮುವೇಲನನ್ನು ಯಾರು ಹಿಂಬಾಲಿಸುವುದಿಲ್ಲವೋ, ಯಾರು ಅವರಿಗೆ ಸಹಾಯ ಮಾಡುವುದಿಲ್ಲವೋ ಅಂತಹವರ ಹಸುಗಳಿಗೂ ಇದೇ ಗತಿಯಾಗುತ್ತದೆ’ ಎಂದು ತಿಳಿಸಿರಿ” ಎಂದನು.

ಯೆಹೋವನ ಮೇಲೆ ಜನರಲ್ಲಿ ಹೆಚ್ಚು ಭಯವುಂಟಾಯಿತು. ಅವರೆಲ್ಲಾ ಒಂದೇ ಮನಸ್ಸಿನಿಂದ ಒಟ್ಟಾಗಿ ಸೇರಿ ಬಂದರು. ಸೌಲನು ಬೆಜೆಕಿನಲ್ಲಿ ಅವರೆಲ್ಲರನ್ನೂ ಒಟ್ಟುಗೂಡಿಸಿದನು. ಅಲ್ಲಿ ಮೂರು ಲಕ್ಷ ಇಸ್ರೇಲರೂ ಮೂವತ್ತು ಸಾವಿರ ಯೆಹೂದ್ಯರೂ ಇದ್ದರು.

ಸೌಲನು ಮತ್ತು ಅವನ ಸೈನಿಕರು ಯಾಬೇಷಿನ ಸಂದೇಶಕರಿಗೆ, “ಗಿಲ್ಯಾದಿನ ಯಾಬೇಷ್ ಜನರಿಗೆ ನಾಳೆ ನಡುಮಧ್ಯಾಹ್ನದೊಳಗೆ ನಿಮ್ಮನ್ನು ರಕ್ಷಿಸುತ್ತೇವೆಂದು ತಿಳಿಸಿ” ಎಂಬುದಾಗಿ ಹೇಳಿದರು.

ಯಾಬೇಷಿನ ಜನರಿಗೆ ಸೌಲನ ಸಂದೇಶವನ್ನು ಸಂದೇಶಕರು ತಿಳಿಸಿದರು. ಯಾಬೇಷಿನ ಜನರು ಹರ್ಷಿತರಾದರು. 10 ನಂತರ ಯಾಬೇಷಿನ ಜನರು ಅಮ್ಮೋನಿಯದ ನಾಹಾಷನಿಗೆ, “ನಾವು ನಾಳೆ ನಿನ್ನ ಬಳಿಗೆ ಬರುತ್ತೇವೆ. ಆಗ ನಿನಗೆ ತೋಚಿದ್ದನ್ನು ನಮಗೆ ಮಾಡು” ಎಂದು ಹೇಳಿದರು.

11 ಮಾರನೆಯ ದಿನ ಬೆಳಿಗ್ಗೆ ಸೌಲನು ತನ್ನ ಸೈನ್ಯವನ್ನು ಮೂರು ಗುಂಪುಗಳಾಗಿ ವಿಂಗಡಿಸಿದನು. ಸೌಲನು ಮತ್ತು ಅವನ ಸೈನಿಕರು ಬೆಳಗಿನ ಜಾವದಲ್ಲೇ ಅಮ್ಮೋನಿಯರ ಶಿಬಿರದೊಳಕ್ಕೆ ನುಗ್ಗಿದರು. ಅವರು ಆ ದಿನ ಬೆಳಗಿನ ಜಾವ ಶಿಬಿರ ರಕ್ಷಕರನ್ನು ಬದಲಾಯಿಸುತ್ತಿದ್ದಂತೆಯೇ ಸೌಲನು ಆಕ್ರಮಣ ಮಾಡಿದನು. ಸೌಲನು ಮತ್ತು ಅವನ ಸೈನಿಕರು ನಡುಮಧ್ಯಾಹ್ನದೊಳಗೆ ಅಮ್ಮೋನಿಯರನ್ನು ಸೋಲಿಸಿದರು. ಅಮ್ಮೋನಿಯ ಸೈನಿಕರೆಲ್ಲರೂ ದಿಕ್ಕುಪಾಲಾಗಿ ಓಡಿಹೋದರು; ಅವರು ಒಟ್ಟಾಗಿ ಸೇರಿಬರಲು ಸಾಧ್ಯವಾಗಲಿಲ್ಲ.

12 ತರುವಾಯ ಜನರೆಲ್ಲರು ಸಮುವೇಲನಿಗೆ, “ಸೌಲನು ರಾಜನಾಗಿ ಆಳುವುದು ಬೇಕಿಲ್ಲ ಎಂದು ಹೇಳಿದ್ದ ಜನರೆಲ್ಲ ಎಲ್ಲಿ ಹೋದರು? ಅವರನ್ನು ನಮಗೆ ಒಪ್ಪಿಸಿ, ನಾವು ಅವರನ್ನು ಕೊಂದುಹಾಕುತ್ತೇವೆ” ಎಂದು ಹೇಳಿದರು.

13 ಆದರೆ ಸೌಲನು, “ಯೆಹೋವನು ಇಸ್ರೇಲನ್ನು ರಕ್ಷಿಸಿದ್ದಾನೆ. ಈ ದಿನ ಯಾರನ್ನೂ ಕೊಲ್ಲುವುದು ಬೇಡ” ಎಂದು ಹೇಳಿದನು.

14 ಬಳಿಕ ಸಮುವೇಲನು, “ನಾವೆಲ್ಲ ಗಿಲ್ಗಾಲಿಗೆ ಹೋಗಿ ಸೌಲನನ್ನು ಮತ್ತೆ ರಾಜನನ್ನಾಗಿ ಮಾಡೋಣ” ಎಂದು ಜನರಿಗೆ ಹೇಳಿದನು.

15 ಜನರೆಲ್ಲ ಗಿಲ್ಗಾಲಿಗೆ ಹೋದರು. ಅಲ್ಲಿ ಯೆಹೋವನ ಸಮ್ಮುಖದಲ್ಲಿ ಜನರೆಲ್ಲ ಸೌಲನನ್ನು ರಾಜನನ್ನಾಗಿ ಮಾಡಿದರು. ಅವರೆಲ್ಲರು ಯೆಹೋವನಿಗೆ ಸಮಾಧಾನಯಜ್ಞಗಳನ್ನು ಅರ್ಪಿಸಿದರು. ಸೌಲನು ಮತ್ತು ಇಸ್ರೇಲರೆಲ್ಲಾ ಒಂದು ದೊಡ್ಡ ಉತ್ಸವವನ್ನೇ ಮಾಡಿದರು.

ಸಮುವೇಲನು ಇಸ್ರೇಲರಿಗೆ ರಾಜನ ಕುರಿತು ಹೇಳಿದ ಮಾತುಗಳು

12 ಸಮುವೇಲನು ಇಸ್ರೇಲರೆಲ್ಲರಿಗೆ, “ನೀವು ನನ್ನಿಂದ ಅಪೇಕ್ಷಿಸಿದ ಎಲ್ಲವನ್ನೂ ನಾನು ಮಾಡಿರುತ್ತೇನೆ. ನಾನು ನಿಮಗಾಗಿ ಒಬ್ಬ ರಾಜನನ್ನು ನೇಮಿಸಿದ್ದೇನೆ. ಈಗ ನಿಮ್ಮನ್ನು ಮುನ್ನಡೆಸಲು ಒಬ್ಬ ರಾಜನಿದ್ದಾನೆ. ನಾನು ಮುದುಕನಾಗಿರುವೆ ಮತ್ತು ನನ್ನ ತಲೆ ನರೆತುಹೋಗಿದೆ. ನನ್ನ ಗಂಡುಮಕ್ಕಳು ನಿಮ್ಮೊಂದಿಗಿದ್ದಾರೆ. ನಾನು ಚಿಕ್ಕಂದಿನಿಂದಲೇ ನಿಮ್ಮ ನಾಯಕನಾಗಿದ್ದೆ. ನಾನು ಇಲ್ಲಿದ್ದೇನೆ. ನಾನು ಯಾವ ತಪ್ಪುಗಳನ್ನಾದರೂ ಮಾಡಿದ್ದರೆ, ನೀವು ಯೆಹೋವನಿಗೆ ಮತ್ತು ಆತನು ಆರಿಸಿರುವ ರಾಜನಿಗೆ ಅವುಗಳನ್ನು ಹೇಳಲೇಬೇಕು. ನಾನು ಬೇರೊಬ್ಬರ ಹಸುವನ್ನಾಗಲಿ ಕತ್ತೆಯನ್ನಾಗಲಿ ಕದ್ದಿರುವೆನೇ? ನಾನು ಯಾರನ್ನಾದರೂ ನೋಯಿಸಿರುವೆನೇ? ವಂಚಿಸಿರುವೆನೇ? ನಾನು ತಪ್ಪುಮಾಡಲು ಯಾರಿಂದಲಾದರೂ ಹಣವನ್ನಾಗಲೀ ಪಾದರಕ್ಷೆಗಳನ್ನಾಗಲೀ ತೆಗೆದುಕೊಂಡಿರುವೆನೇ? ನಾನು ಈ ಕಾರ್ಯಗಳನ್ನು ಮಾಡಿರುವುದಾದರೆ ತಿಳಿಸಿ, ಅವುಗಳನ್ನು ಸರಿಪಡಿಸುತ್ತೇನೆ” ಎಂದು ಹೇಳಿದನು.

ಇಸ್ರೇಲರು, “ಇಲ್ಲ, ನೀನು ನಮಗೆ ಕೆಟ್ಟದ್ದೇನನ್ನೂ ಮಾಡಿಲ್ಲ. ನೀನು ನಮ್ಮನ್ನು ಎಂದೂ ವಂಚಿಸಿಲ್ಲ; ನಮ್ಮಿಂದ ಏನನ್ನೂ ತೆಗೆದುಕೊಂಡಿಲ್ಲ” ಎಂದು ಉತ್ತರಿಸಿದರು.

ಸಮುವೇಲನು ಇಸ್ರೇಲರಿಗೆ, “ನಿಮ್ಮ ಮಾತುಗಳಿಗೆಲ್ಲ ಯೆಹೋವನೇ ಸಾಕ್ಷಿ. ಯೆಹೋವನಿಂದ ಆಯ್ಕೆಯಾದ ರಾಜನೂ ಈ ದಿನ ಸಾಕ್ಷಿಯಾಗಿದ್ದಾನೆ. ನೀವು ನನ್ನಲ್ಲಿ ಯಾವ ತಪ್ಪನ್ನೂ ಗುರುತಿಸಿಲ್ಲವೆನ್ನುವುದಕ್ಕೆ ಈ ಇಬ್ಬರು ಸಾಕ್ಷಿಗಳಾಗಿದ್ದಾರೆ” ಎಂದು ಹೇಳಿದನು. ಜನರು, “ಹೌದು, ಯೆಹೋವನೇ ಸಾಕ್ಷಿ” ಎಂದು ಉತ್ತರಿಸಿದರು.

ಆಗ ಸಮುವೇಲನು ಜನರಿಗೆ, “ಯೆಹೋವನೇ ಸಾಕ್ಷಿ. ಯೆಹೋವನು, ಮೋಶೆ ಆರೋನರನ್ನು ಆರಿಸಿಕೊಂಡನು. ಆತನು ನಿಮ್ಮ ಪೂರ್ವಿಕರನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದನು. ಇಲ್ಲಿ ನಿಂತುಕೊಂಡು ಕೇಳಿರಿ. ಯೆಹೋವನು ನಿಮಗೆ ಮತ್ತು ನಿಮ್ಮ ಪೂರ್ವಿಕರಿಗೆ ಮಾಡಿದ ಒಳ್ಳೆಯ ಕಾರ್ಯಗಳನ್ನು ನಾನು ನಿಮಗೆ ತಿಳಿಸುತ್ತೇನೆ.

“ಯಾಕೋಬನು ಈಜಿಪ್ಟಿಗೆ ಹೋದನು. ತರುವಾಯ, ಈಜಿಪ್ಟಿನವರು ಅವನ ವಂಶದವರಿಗೆ ಜೀವನವನ್ನು ಕಠಿಣಗೊಳಿಸಿದರು. ಆದ್ದರಿಂದ ಅವರು ಯೆಹೋವನಲ್ಲಿ ಸಹಾಯಕ್ಕಾಗಿ ಮೊರೆಯಿಟ್ಟರು. ಯೆಹೋವನು ಮೋಶೆ ಆರೋನರನ್ನು ಕಳುಹಿಸಿದನು. ಮೋಶೆ ಆರೋನರು ನಿಮ್ಮ ಪೂರ್ವಿಕರನ್ನು ಈಜಿಪ್ಟಿನಿಂದ ಹೊರತಂದು ಇಲ್ಲಿ ನೆಲೆಗೊಳಿಸಿದರು.

“ಆದರೆ ನಿಮ್ಮ ಪೂರ್ವಿಕರು ತಮ್ಮ ದೇವರಾದ ಯೆಹೋವನನ್ನು ಮರೆತುಬಿಟ್ಟದ್ದರಿಂದ ಆತನು ಅವರನ್ನು ಸೀಸೆರನ ಗುಲಾಮರಾಗಲು ಬಿಟ್ಟುಬಿಟ್ಟನು. ಸೀಸೆರನು ಹಾಚೋರಿನ ಸೈನ್ಯಾಧಿಪತಿ. ನಂತರ ಯೆಹೋವನು ಅವರನ್ನು ಫಿಲಿಷ್ಟಿಯರ ಮತ್ತು ಮೋವಾಬ್ ರಾಜನ ಗುಲಾಮರಾಗುವಂತೆ ಬಿಟ್ಟುಬಿಟ್ಟನು. ಅವರೆಲ್ಲರು ನಿಮ್ಮ ವಂಶದವರ ವಿರುದ್ಧ ಹೋರಾಡಿದರು. 10 ಆದರೆ ನಿಮ್ಮ ಪೂರ್ವಿಕರು ಸಹಾಯಕ್ಕಾಗಿ ಯೆಹೋವನಿಗೆ ಮೊರೆಯಿಟ್ಟು, ‘ನಾವು ಯೆಹೋವನಾದ ನಿನ್ನನ್ನು ಬಿಟ್ಟು ಸುಳ್ಳುದೇವರಾದ ಬಾಳನ ಮತ್ತು ಸುಳ್ಳುದೇವತೆಯಾದ ಅಷ್ಟೋರೆತಳ ಸೇವೆ ಮಾಡಿ ಪಾಪಮಾಡಿದ್ದೇವೆ. ಆದರೆ ಈಗ ನಮ್ಮನ್ನು ಶತ್ರುಗಳಿಂದ ರಕ್ಷಿಸು; ಆಗ ನಾವು ನಿನ್ನ ಸೇವೆಮಾಡುತ್ತೇವೆ’ ಎಂದು ಹೇಳಿದರು.

11 “ಆದ್ದರಿಂದ ಯೆಹೋವನು ಯೆರುಬ್ಬಾಳ್, ಬಾರಾಕ್, ಯೆಫ್ತಾಹ ಮತ್ತು ಸಮುವೇಲ ಎಂಬವರನ್ನು ಕಳುಹಿಸಿದನು. ನಿಮ್ಮನ್ನು ಸುತ್ತುವರಿದಿದ್ದ ಶತ್ರುಗಳಿಂದ ಯೆಹೋವನು ರಕ್ಷಿಸಿದನು. ನೀವು ಸುರಕ್ಷಿತವಾಗಿ ವಾಸಿಸಿದಿರಿ. 12 ಆದರೆ ಅಮ್ಮೋನಿಯರ ರಾಜನಾದ ನಾಹಾಷನು ನಿಮ್ಮ ವಿರುದ್ಧ ಹೋರಾಡಲು ಬರುತ್ತಿರುವುದನ್ನು ಕಂಡು ನೀವು, ‘ನಮ್ಮನ್ನಾಳಲು ನಮಗೆ ಒಬ್ಬ ರಾಜ ಬೇಕು’ ಎಂದು ಕೇಳಿದಿರಿ. ನಿಮ್ಮ ದೇವರಾದ ಯೆಹೋವನು ನಿಮ್ಮ ರಾಜನಾಗಿದ್ದರೂ ನೀವು ಹೀಗೆ ಕೇಳಿದಿರಿ. 13 ಇಗೋ, ನೀವು ಆಸೆಪಟ್ಟು ಆರಿಸಿದ ರಾಜನು ಇಲ್ಲಿರುವನು. ಯೆಹೋವನು ಈ ರಾಜನನ್ನು ನಿಮಗೆ ನೇಮಿಸಿದ್ದಾನೆ. 14 ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ನಿರಂತರವಾಗಿ ರಕ್ಷಿಸುತ್ತಾನೆ. ಆದರೆ ನೀವು ಈ ಕಾರ್ಯಗಳನ್ನು ಮಾಡಿದರೆ ಮಾತ್ರ ದೇವರು ನಿಮ್ಮನ್ನು ರಕ್ಷಿಸುತ್ತಾನೆ: ನೀವು ಯೆಹೋವನನ್ನು ಗೌರವಿಸಬೇಕು ಮತ್ತು ಆತನ ಸೇವೆ ಮಾಡಬೇಕು. ನೀವು ಆತನ ಆಜ್ಞೆಗಳನ್ನು ವಿರೋಧಿಸಬಾರದು. ನಿಮ್ಮ ದೇವರಾದ ಯೆಹೋವನ ಮಾರ್ಗವನ್ನು ನೀವು ಮತ್ತು ನಿಮ್ಮನ್ನು ಆಳುವ ರಾಜನು ಅನುಸರಿಸಬೇಕು. ನೀವು ಈ ಕಾರ್ಯಗಳನ್ನು ಮಾಡಿದಾಗ ದೇವರು ನಿಮ್ಮನ್ನು ರಕ್ಷಿಸುತ್ತಾನೆ. 15 ಆದರೆ ನೀವು ಯೆಹೋವನಿಗೆ ವಿಧೇಯರಾಗಿ ನಡೆಯದಿದ್ದರೆ ಮತ್ತು ಆತನ ಆಜ್ಞೆಗಳನ್ನು ವಿರೋಧಿಸಿದರೆ, ಆತನು ನಿಮ್ಮ ಪೂರ್ವಿಕರಿಗೆ ವಿರೋಧವಾಗಿದ್ದಂತೆ ನಿಮಗೂ ವಿರೋಧವಾಗಿಯೇ ಇರುವನು.

16 “ಈಗ ಯೆಹೋವನು ನಿಮ್ಮ ಕಣ್ಣುಗಳ ಮುಂದೆ ಮಾಡುವ ಮಹತ್ಕಾರ್ಯಗಳನ್ನು ನೋಡುವುದಕ್ಕಾಗಿ ಅಲುಗಾಡದೆ ನಿಂತುಕೊಳ್ಳಿ. 17 ಈಗ ಗೋಧಿಯ ಸುಗ್ಗಿಕಾಲ. ನಾನು ಯೆಹೋವನಲ್ಲಿ ಪ್ರಾರ್ಥಿಸುತ್ತೇನೆ. ಆತನು ಗುಡುಗನ್ನು ಮತ್ತು ಮಳೆಯನ್ನು ಕಳುಹಿಸಲೆಂದು ನಾನು ಪ್ರಾರ್ಥಿಸುತ್ತೇನೆ. ರಾಜನು ಬೇಕೆಂದು ನೀವು ಕೇಳಿದ್ದು ಯೆಹೋವನಿಗೆ ವಿರುದ್ಧವಾಗಿ ನೀವು ಮಾಡಿದ ಎಂತಹ ಕೆಟ್ಟಕಾರ್ಯವಾಗಿದೆ ಎಂಬದನ್ನು ನಿಮಗೇ ತಿಳಿಯುತ್ತದೆ” ಎಂದು ಹೇಳಿದನು.

18 ಸಮುವೇಲನು ಯೆಹೋವನಲ್ಲಿ ಪ್ರಾರ್ಥಿಸಿದನು. ಅದೇ ದಿನ ಯೆಹೋವನು ಗುಡುಗು ಮತ್ತು ಮಳೆಗಳನ್ನು ಕಳುಹಿಸಿದನು. ಜನರು ಯೆಹೋವನ ಬಗ್ಗೆ ಮತ್ತು ಸಮುವೇಲನ ಬಗ್ಗೆ ಬಹಳ ಭಯಗೊಂಡರು. 19 ಜನರೆಲ್ಲಾ ಸಮುವೇಲನಿಗೆ, “ನಿನ್ನ ಸೇವಕರಾದ ನಮಗಾಗಿ, ನಿನ್ನ ದೇವರಾದ ಯೆಹೋವನಲ್ಲಿ ಪ್ರಾರ್ಥಿಸು. ನಮ್ಮನ್ನು ಸಾಯಲು ಬಿಡಬೇಡ. ನಾವು ಅನೇಕ ಸಲ ಪಾಪಗಳನ್ನು ಮಾಡಿದ್ದೇವೆ. ಈಗ ನಾವು ರಾಜನನ್ನು ಕೇಳಿಕೊಂಡಿದ್ದು ನಮ್ಮ ಪಾಪಗಳೊಂದಿಗೆ ಮತ್ತೊಂದು ಪಾಪವನ್ನು ಮಾಡಿದಂತಾಯಿತು” ಎಂದು ಹೇಳಿದರು.

20 ಸಮುವೇಲನು, “ಭಯಪಡಬೇಡಿ. ಅದೇನೋ ನಿಜ. ನೀವು ಆ ಕೆಟ್ಟಕಾರ್ಯಗಳನ್ನೆಲ್ಲಾ ಮಾಡಿದಿರಿ. ಆದರೆ ಯೆಹೋವನ ಮಾರ್ಗದಲ್ಲಿ ನಡೆಯುವುದನ್ನು ನಿಲ್ಲಿಸದಿರಿ. ಯೆಹೋವನ ಸೇವೆಯನ್ನು ಪೂರ್ಣಹೃದಯದಿಂದ ಮಾಡಿರಿ. 21 ವಿಗ್ರಹಗಳು ಕೇವಲ ಪ್ರತಿಮೆಗಳಷ್ಟೇ. ಅವು ನಿಮಗೆ ಸಹಾಯ ಮಾಡಲಾರವು. ಆದ್ದರಿಂದ ಅವುಗಳನ್ನು ಪೂಜಿಸಬೇಡಿ. ವಿಗ್ರಹಗಳು ನಿಮಗೆ ಸಹಾಯ ಮಾಡಲಾರವು ಮತ್ತು ರಕ್ಷಿಸಲಾರವು. ಅವುಗಳಿಂದ ಪ್ರಯೋಜನವೇನೂ ಇಲ್ಲ.

22 “ಆದರೆ ಯೆಹೋವನು ತನ್ನ ಜನರನ್ನು ಕೈಬಿಡುವುದಿಲ್ಲ. ಯೆಹೋವನು ನಿಮ್ಮನ್ನು ತನ್ನ ಸ್ವಂತ ಜನರನ್ನಾಗಿ ಮಾಡಿಕೊಳ್ಳಲು ಇಷ್ಟಪಟ್ಟನು. ಆದ್ದರಿಂದ ಆತನು ತನ್ನ ಮಹಾ ಹೆಸರಿನ ನಿಮಿತ್ತವಾಗಿ ನಿಮ್ಮನ್ನು ತ್ಯಜಿಸುವುದಿಲ್ಲ. 23 ನಾನು ನಿಮಗಾಗಿ ಪ್ರಾರ್ಥಿಸದಿದ್ದರೆ ಯೆಹೋವನಿಗೆ ವಿರುದ್ಧವಾಗಿ ಪಾಪಮಾಡಿದವನಾಗುತ್ತೇನೆ. ನಾನು ನಿಮಗೆ ಒಳ್ಳೆಯದೂ ಯೋಗ್ಯವೂ ಆಗಿರುವ ಮಾರ್ಗವನ್ನು ಉಪದೇಶಿಸುತ್ತೇನೆ. 24 ಆದರೆ ನೀವು ಯೆಹೋವನನ್ನು ಗೌರವಿಸಬೇಕು. ನೀವು ನಿಮ್ಮ ಪೂರ್ಣಹೃದಯದಿಂದ ಯೆಹೋವನ ಸೇವೆಯನ್ನು ನಿಜವಾಗಿಯೂ ಮಾಡಬೇಕು. ಆತನು ನಿಮಗಾಗಿ ಮಾಡಿದ ಮಹತ್ಕಾರ್ಯಗಳನ್ನು ನೆನಸಿಕೊಳ್ಳಿರಿ. 25 ಆದರೆ ನೀವು ಮೊಂಡರಾಗಿ ಕೆಟ್ಟಕಾರ್ಯಗಳನ್ನು ಮಾಡಿದ್ದಾದರೆ ಯೆಹೋವನು ನಿಮ್ಮನ್ನು ಮತ್ತು ನಿಮ್ಮ ರಾಜನನ್ನು ನಾಶಪಡಿಸುತ್ತಾನೆ” ಎಂದು ಹೇಳಿದನು.

ಲೂಕ 9:37-62

ದೆವ್ವದಿಂದ ಪೀಡಿತನಾಗಿದ್ದ ಬಾಲಕನಿಗೆ ಬಿಡುಗಡೆ

(ಮತ್ತಾಯ 17:14-18; ಮಾರ್ಕ 9:14-27)

37 ಮರುದಿನ, ಯೇಸು, ಪೇತ್ರ, ಯಾಕೋಬ ಮತ್ತು ಯೋಹಾನ ಬೆಟ್ಟದಿಂದಿಳಿದು ಬಂದರು. ಜನರ ಬಹು ದೊಡ್ಡ ಗುಂಪೊಂದು ಯೇಸುವನ್ನು ಎದುರುಗೊಂಡಿತು. 38 ಗುಂಪಿನಲ್ಲಿದ್ದ ಒಬ್ಬ ಮನುಷ್ಯನು, “ಉಪದೇಶಕನೇ, ದಯಮಾಡಿ ಬಂದು ನನ್ನ ಮಗನನ್ನು ನೋಡು. ನನಗೆ ಅವನೊಬ್ಬನೇ ಮಗನು. 39 ದೆವ್ವವೊಂದು ನನ್ನ ಮಗನೊಳಗೆ ಬರುತ್ತದೆ. ಆಗ ಅವನು ಕೂಗಾಡುತ್ತಾನೆ. ಸ್ವಾಧೀನ ಕಳೆದುಕೊಂಡು ಬಾಯಿಂದ ನೊರೆಸುರಿಸುತ್ತಾನೆ. ದೆವ್ವವು ಅವನನ್ನು ಒದ್ದಾಡಿಸಿ ಜಜ್ಜದ ಹೊರತು ಬಿಟ್ಟುಬಿಡುವುದೇ ಇಲ್ಲ. 40 ನನ್ನ ಮಗನನ್ನು ದೆವ್ವದಿಂದ ಬಿಡಿಸಬೇಕೆಂದು ನಿನ್ನ ಶಿಷ್ಯರನ್ನೂ ಬೇಡಿಕೊಂಡೆನು. ಆದರೆ ಅವರಿಂದ ಸಾಧ್ಯವಾಗಲಿಲ್ಲ” ಎಂದು ಯೇಸುವಿಗೆ ಕೂಗಿ ಹೇಳಿದನು.

41 ಆಗ ಯೇಸು, “ನಂಬಿಕೆಯಿಲ್ಲದ ದುಷ್ಟಸಂತಾನವೇ, ಇನೆಷ್ಟು ಕಾಲ ನಾನು ನಿಮ್ಮ ಸಂಗಡ ತಾಳ್ಮೆಯಿಂದ ಇರಲಿ?” ಎಂದು ಉತ್ತರಿಸಿ, ಆ ಮನುಷ್ಯನಿಗೆ, “ನಿನ್ನ ಮಗನನ್ನು ಇಲ್ಲಿಗೆ ಕರೆದುಕೊಂಡು ಬಾ” ಅಂದನು.

42 ಆ ಹುಡುಗನು ಬರುತ್ತಿದ್ದಾಗ, ದೆವ್ವವು ಅವನನ್ನು ನೆಲಕ್ಕೆ ಅಪ್ಪಳಿಸಿತು. ಹುಡುಗನು ತನ್ನ ಸ್ವಾಧೀನ ಕಳೆದುಕೊಂಡನು. ಆಗ ಯೇಸು ದೆವ್ವವನ್ನು ಗದರಿಸಿ ಆ ಹುಡುಗನನ್ನು ಗುಣಪಡಿಸಿದನು. ಬಳಿಕ ಅವನನ್ನು ಅವನ ತಂದೆಗೆ ಒಪ್ಪಿಸಿಕೊಟ್ಟನು. 43 ಜನರೆಲ್ಲರೂ ದೇವರ ಮಹಾಶಕ್ತಿಯನ್ನು ಕಂಡು ಬೆರಗಾದರು.

ತನ್ನ ಮರಣದ ಬಗ್ಗೆ ಯೇಸುವಿನ ಪ್ರಕಟಣೆ

(ಮತ್ತಾಯ 17:22-23; ಮಾರ್ಕ 9:30-32)

ಯೇಸು ಮಾಡಿದ ಎಲ್ಲಾ ಕಾರ್ಯಗಳ ಬಗ್ಗೆ ಜನರು ಇನ್ನೂ ಆಶ್ಚರ್ಯಚಕಿತರಾಗಿದ್ದರು. ಯೇಸು ತನ್ನ ಶಿಷ್ಯರಿಗೆ, 44 “ಮನುಷ್ಯಕುಮಾರನನ್ನು ಕೆಲವರ ವಶಕ್ಕೆ ಒಪ್ಪಿಸಲಾಗುವುದು. ನೀವು ಇದನ್ನು ಮರೆಯಕೂಡದು” ಎಂದು ಹೇಳಿದನು. 45 ಆದರೆ ಯೇಸುವಿನ ಈ ಮಾತುಗಳು ಶಿಷ್ಯರಿಗೆ ಅರ್ಥವಾಗಲಿಲ್ಲ. ಏಕೆಂದರೆ ಅವುಗಳ ಅರ್ಥವು ಅವರಿಗೆ ಮರೆಯಾಗಿತ್ತು. ಆದರೂ ಯೇಸು ಹೇಳಿದ್ದರ ಬಗ್ಗೆ ಆತನನ್ನು ಕೇಳುವದಕ್ಕೆ ಶಿಷ್ಯರು ಭಯಪಟ್ಟರು.

ಅತ್ಯಂತ ದೊಡ್ಡ ವ್ಯಕ್ತಿ

(ಮತ್ತಾಯ 18:1-5; ಮಾರ್ಕ 9:33-37)

46 ತಮ್ಮಲ್ಲಿ ಯಾವನು ಅತ್ಯಂತ ಪ್ರಮುಖನು ಎಂಬುದರ ಬಗ್ಗೆ ಯೇಸುವಿನ ಶಿಷ್ಯರು ವಾದಮಾಡತೊಡಗಿದರು. 47 ಅವರ ಆಲೋಚನೆಯು ಯೇಸುವಿಗೆ ತಿಳಿದಿತ್ತು. ಆದ್ದರಿಂದ ಯೇಸು ಒಂದು ಚಿಕ್ಕ ಮಗುವನ್ನು ಕರೆದು ತನ್ನ ಬಳಿಯಲ್ಲಿ ನಿಲ್ಲಿಸಿದನು. 48 ಬಳಿಕ ಯೇಸು ತನ್ನ ಶಿಷ್ಯರಿಗೆ, “ಒಬ್ಬನು ನನ್ನ ಹೆಸರಿನಲ್ಲಿ ಒಂದು ಚಿಕ್ಕ ಮಗುವನ್ನು ಸ್ವೀಕರಿಸಿಕೊಂಡರೆ ಅವನು ನನ್ನನ್ನೇ ಸ್ವೀಕರಿಸಿಕೊಂಡಂತಾಯಿತು. ಒಬ್ಬನು ನನ್ನನ್ನು ಸ್ವೀಕರಿಸಿಕೊಂಡರೆ ಅವನು ನನ್ನನ್ನು ಕಳುಹಿಸಿದಾತನನ್ನೇ (ದೇವರನ್ನು) ಸ್ವೀಕರಿಸಿಕೊಂಡಂತಾಯಿತು. ನಿಮ್ಮಲ್ಲಿ ಯಾವನು ದೀನನಾಗಿದ್ದಾನೋ ಅವನೇ ನಿಮ್ಮಲ್ಲಿ ಪ್ರಮುಖನಾಗಿದ್ದಾನೆ” ಎಂದು ಹೇಳಿದನು.

ನಿಮಗೆ ವಿರೋಧವಾಗಿಲ್ಲದ ವ್ಯಕ್ತಿ ನಿಮ್ಮವನೇ

(ಮಾರ್ಕ 9:38-40)

49 ಯೋಹಾನನು, “ಗುರುವೇ, ನಿನ್ನ ಹೆಸರಿನ ಮೂಲಕ ಜನರಿಂದ ದೆವ್ವಗಳನ್ನು ಬಿಡಿಸುತ್ತಿದ್ದ ಒಬ್ಬ ವ್ಯಕ್ತಿಯನ್ನು ನಾವು ನೋಡಿದೆವು. ಅವನು ನಮ್ಮವನಲ್ಲದ ಕಾರಣ ನಿನ್ನ ಹೆಸರನ್ನು ಬಳಸಕೂಡದೆಂದು ಅವನಿಗೆ ಹೇಳಿದೆವು” ಎಂದರು.

50 ಅದಕ್ಕೆ ಯೇಸು, “ಅವನಿಗೆ ಅಡ್ಡಿಮಾಡಬೇಡಿ. ಏಕೆಂದರೆ, ನಿಮಗೆ ವಿರೋಧವಾಗಿಲ್ಲದವನು ನಿಮ್ಮವನೇ” ಎಂದನು.

ಸಮಾರ್ಯ ಪಟ್ಟಣ

51 ಯೇಸು ಮತ್ತೆ ಪರಲೋಕಕ್ಕೆ ಹಿಂತಿರುಗುವ ಸಮಯ ಹತ್ತಿರವಾಗುತ್ತಿತ್ತು. ಆದ್ದರಿಂದ ಆತನು ಜೆರುಸಲೇಮಿಗೆ ಹೋಗಲು ತೀರ್ಮಾನಿಸಿದನು. 52 ಯೇಸು ಕೆಲವರನ್ನು ತನ್ನ ಮುಂದಾಗಿ ಕಳುಹಿಸಿದನು. ಯೇಸುವಿಗಾಗಿ ಪ್ರತಿಯೊಂದನ್ನು ಸಿದ್ಧಪಡಿಸಲು ಅವರು ಸಮಾರ್ಯ ಪಟ್ಟಣಕ್ಕೆ ಹೋದರು. 53 ಆದರೆ ಆತನು ಜೆರುಸಲೇಮಿಗೆ ಹೋಗುತ್ತಿದ್ದ ಕಾರಣ ಸಮಾರ್ಯದ ಜನರು ಆತನನ್ನು ಸ್ವಾಗತಿಸಲಿಲ್ಲ. 54 ಯೇಸುವಿನ ಶಿಷ್ಯರಾದ ಯಾಕೋಬ ಮತ್ತು ಯೋಹಾನ ಇದನ್ನು ಕಂಡು, “ಸ್ವಾಮೀ, ಆಕಾಶದಿಂದ ಬೆಂಕಿ ಬಿದ್ದು ಇವರನ್ನು ನಾಶಮಾಡಲಿ ಎಂದು ನಾವು ಆಜ್ಞಾಪಿಸಬೇಕೆನ್ನುವಿಯೋ!”[a] ಎಂದು ಕೇಳಿದರು.

55 ಆದರೆ ಯೇಸು ಅವರ ಕಡೆಗೆ ತಿರುಗಿ ಗದರಿಸಿದನು.[b] 56 ಬಳಿಕ ಯೇಸು ಮತ್ತು ಆತನ ಶಿಷ್ಯರು ಇನ್ನೊಂದು ಪಟ್ಟಣಕ್ಕೆ ಹೋದರು.

ಯೇಸುವನ್ನು ಹಿಂಬಾಲಿಸಿ

(ಮತ್ತಾಯ 8:19-22)

57 ಅವರೆಲ್ಲರೂ ದಾರಿಯಲ್ಲಿ ಹೋಗುತ್ತಿದ್ದಾಗ, ಒಬ್ಬನು ಯೇಸುವಿಗೆ, “ನೀನು ಎಲ್ಲಿಗೆ ಹೋದರೂ ನಾನು ನಿನ್ನನ್ನು ಹಿಂಬಾಲಿಸುತ್ತೇನೆ” ಎಂದನು.

58 ಯೇಸು, “ನರಿಗಳಿಗೆ ಗುಹೆಗಳಿವೆ, ಪಕ್ಷಿಗಳಿಗೆ ಗೂಡುಗಳಿವೆ. ಆದರೆ ಮನುಷ್ಯಕುಮಾರನಿಗೆ ತಲೆ ಇಡುವಷ್ಟು ಸ್ಥಳವೂ ಇಲ್ಲ” ಎಂದು ಉತ್ತರಿಸಿದನು.

59 ಯೇಸು ಇನೊಬ್ಬನಿಗೆ, “ನನ್ನನ್ನು ಹಿಂಬಾಲಿಸು!” ಎಂದನು.

ಆದರೆ ಅವನು, “ಸ್ವಾಮೀ, ನಾನು ಮೊದಲು ಹೋಗಿ ನನ್ನ ತಂದೆಯ ಅಂತ್ಯಕ್ರಿಯೆಯನ್ನು ಮಾಡಲು ಅವಕಾಶ ನೀಡು” ಎಂದು ಹೇಳಿದನು.

60 ಯೇಸು ಅವನಿಗೆ, “ಸತ್ತಜನರೇ ತಮ್ಮವರಲ್ಲಿ ಸತ್ತುಹೋದವರ ಅಂತ್ಯಕ್ರಿಯೆ ಮಾಡಲಿ! ನೀನು ಹೋಗಿ ದೇವರ ರಾಜ್ಯದ ಬಗ್ಗೆ ತಿಳಿಸು” ಎಂದು ಹೇಳಿದನು.

61 ಮತ್ತೊಬ್ಬನು, “ಸ್ವಾಮೀ, ನಾನು ನಿನ್ನನ್ನು ಹಿಂಬಾಲಿಸುವೆನು. ಆದರೆ ಮೊದಲು ನನ್ನ ಕುಟುಂಬದವರ ಬಳಿಗೆ ಹೋಗಿಬರಲು ಅವಕಾಶ ನೀಡು” ಎಂದು ಹೇಳಿದನು.

62 ಯೇಸು, “ನೇಗಿಲಿನ ಮೇಲೆ ಕೈಯನ್ನು ಹಾಕಿ ಹಿಂತಿರುಗಿ ನೋಡುವವನು ದೇವರ ರಾಜ್ಯಕ್ಕೆ ತಕ್ಕವನಲ್ಲ” ಅಂದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International