Old/New Testament
ಶೀಲೋವಿನಲ್ಲಿ ಆರಾಧನೆ
1 ಎಲ್ಕಾನ ಎಂಬ ಒಬ್ಬ ಮನುಷ್ಯನಿದ್ದನು. ಅವನು ಎಫ್ರಾಯೀಮ್ ಬೆಟ್ಟದ ಸೀಮೆಯ ರಾಮಾತಯಿಮ್ ಎಂಬ ಊರಿನವನು. ಅವನು ಚೋಫೀಮ್ ಕುಟುಂಬದವನೂ ಯೆರೋಹಾಮನ ಮಗನೂ ಆಗಿದ್ದನು. ಯೆರೋಹಾಮನು ಎಲೀಹುವಿನ ಮಗ. ಎಲೀಹುವನು ತೋಹುವನ ಮಗ. ತೋಹುವನು ಚೂಫನ ಮಗ. ಇವರೆಲ್ಲ ಎಫ್ರಾಯೀಮ್ ಕುಲದವರು.
2 ಎಲ್ಕಾನನಿಗೆ ಇಬ್ಬರು ಹೆಂಡತಿಯರು. ಹನ್ನಳು ಎಂಬುದು ಒಬ್ಬಳ ಹೆಸರಾದರೆ, ಇನ್ನೊಬ್ಬಳು ಪೆನಿನ್ನಳು. ಪೆನಿನ್ನಳಿಗೆ ಮಕ್ಕಳಿದ್ದರು. ಆದರೆ ಹನ್ನಳಿಗೆ ಮಕ್ಕಳಿರಲಿಲ್ಲ.
3 ಎಲ್ಕಾನನು ಪ್ರತಿ ವರ್ಷವೂ ತನ್ನ ಪಟ್ಟಣವಾದ ರಾಮಾತಯಿಮ್ ಬಿಟ್ಟು ಶೀಲೋವಿಗೆ ಹೋಗುತ್ತಿದ್ದನು. ಅವನು ಶೀಲೋವಿನಲ್ಲಿ ಸರ್ವಶಕ್ತನಾದ ಯೆಹೋವನನ್ನು ಆರಾಧಿಸಿ ಆತನಿಗೆ ಯಜ್ಞವನ್ನು ಅರ್ಪಿಸುತ್ತಿದ್ದನು. ಹೊಫ್ನಿ ಮತ್ತು ಫೀನೆಹಾಸರೆಂಬ ಯಾಜಕರು ಯೆಹೋವನ ಸೇವೆಮಾಡುವ ಸ್ಥಳವೇ ಶೀಲೋವ. ಹೊಫ್ನಿ ಮತ್ತು ಫೀನೆಹಾಸರು ಏಲಿಯನ ಮಕ್ಕಳು. 4 ಎಲ್ಕಾನನು ಪ್ರತಿಸಲ ಯಜ್ಞವನ್ನು ಅರ್ಪಿಸುವಾಗ, ಪೆನಿನ್ನಳಿಗೆ ಯಜ್ಞದ ಒಂದು ಭಾಗವನ್ನೂ ಅವಳ ಮಕ್ಕಳಿಗೆ ಒಂದು ಭಾಗವನ್ನೂ ಕೊಡುತ್ತಿದ್ದನು. 5 ಎಲ್ಕಾನನು ಹನ್ನಳಿಗೆ ಯಾವಾಗಲೂ ಎರಡು ಭಾಗವನ್ನು ಕೊಡುತ್ತಿದ್ದನು. ಯೆಹೋವನು ಹನ್ನಳಿಗೆ ಮಕ್ಕಳನ್ನು ಕೊಡದೇ ಇದ್ದರೂ, ಎಲ್ಕಾನನು ಎರಡು ಭಾಗವನ್ನು ಕೊಡುತ್ತಿದ್ದನು. ಎಲ್ಕಾನನು ಹನ್ನಳನ್ನು ಬಹಳವಾಗಿ ಪ್ರೀತಿಸುತ್ತಿದ್ದ ಕಾರಣ ಹೀಗೆ ಮಾಡುತ್ತಿದ್ದನು.
ಪೆನಿನ್ನಳು ಹನ್ನಳನ್ನು ನೋಯಿಸುವಳು
6 ಪೆನಿನ್ನಳು ಯಾವಾಗಲೂ ಹನ್ನಳನ್ನು ಕೆಣಕಿ ನೋವು ಮಾಡುತ್ತಿದ್ದಳು. ಹನ್ನಳು ಬಂಜೆಯಾಗಿದ್ದುದೇ ಅದಕ್ಕೆ ಕಾರಣ. 7 ಪ್ರತಿ ವರ್ಷವೂ ಶೀಲೋವಿನಲ್ಲಿದ್ದ ಯೆಹೋವನ ಆಲಯಕ್ಕೆ ಅವರ ಕುಟುಂಬವು ಹೋದಾಗಲೆಲ್ಲ ಪೆನಿನ್ನಳು ಹನ್ನಳನ್ನು ಕೆಣಕಿ ನೋವು ಮಾಡುತ್ತಿದ್ದಳು. ಒಂದು ದಿನ ಎಲ್ಕಾನನು ಯಜ್ಞವನ್ನು ಅರ್ಪಿಸುವಾಗ, ಹನ್ನಳು ನೊಂದುಕೊಂಡು ಅಳಲಾರಂಭಿಸಿದಳು. ಹನ್ನಳು ಊಟಮಾಡಲೇ ಇಲ್ಲ. 8 ಅವಳ ಗಂಡನಾದ ಎಲ್ಕಾನನು ಅವಳನ್ನು ಕುರಿತು, “ಹನ್ನಾ, ಯಾಕೆ ಅಳುತ್ತಿರುವೆ? ಯಾಕೆ ಊಟಮಾಡುತ್ತಿಲ್ಲ? ಯಾಕೆ ವ್ಯಸನದಿಂದಿರುವೆ? ನಿನಗೆ ನಾನಿಲ್ಲವೇ? ನಾನು ನಿನ್ನ ಗಂಡ. ನಾನು ನಿನಗೆ ಹತ್ತು ಗಂಡುಮಕ್ಕಳಿಗಿಂತಲೂ ಹೆಚ್ಚಾಗಿದ್ದೇನಲ್ಲಾ” ಎಂದು ಹೇಳಿದನು.
ಹನ್ನಳ ಪ್ರಾರ್ಥನೆ
9 ಹನ್ನಳು ಅನ್ನಪಾನಗಳನ್ನು ತೆಗೆದುಕೊಂಡು ಸದ್ದಿಲ್ಲದೆ ಮೇಲೆದ್ದು ಯೆಹೋವನಿಗೆ ಪ್ರಾರ್ಥಿಸಲು ಹೋದಳು. ಯೆಹೋವನ ಪವಿತ್ರ ಆಲಯದ ದ್ವಾರದ ಹತ್ತಿರ ಯಾಜಕನಾದ ಏಲಿಯು ಕುಳಿತಿದ್ದನು. 10 ಹನ್ನಳು ಬಹು ದುಃಖಿತಳಾಗಿದ್ದುದರಿಂದ ಕಣ್ಣೀರು ಸುರಿಯುತ್ತಿತ್ತು. ಅವಳು ಯೆಹೋವನಿಗೆ ಪ್ರಾರ್ಥಿಸುತ್ತಿದ್ದಳು. 11 ಅವಳು ದೇವರಲ್ಲಿ ಒಂದು ವಿಶೇಷ ವಾಗ್ದಾನವನ್ನು ಮಾಡಿದಳು. ಅವಳು, “ಯೆಹೋವನೇ, ಸರ್ವಶಕ್ತನೇ,[a] ನಾನು ಎಷ್ಟು ದುಃಖಿತಳೆಂಬುದನ್ನು ನೋಡು, ನನ್ನನ್ನು ಜ್ಞಾಪಿಸಿಕೊ! ನನ್ನನ್ನು ಮರೆಯದಿರು. ನೀನು ನನಗೊಬ್ಬ ಮಗನನ್ನು ಕರುಣಿಸಿದರೆ, ಅವನು ಜೀವದಿಂದಿರುವ ತನಕ ನಿನ್ನವನಾಗಿರುವಂತೆ ನಿನಗೇ ಪ್ರತಿಷ್ಠಿಸುತ್ತೇನೆ. ಅವನು ನಾಜೀರನಾಗಿರುವನು. ಅವನು ದ್ರಾಕ್ಷಾರಸವನ್ನಾಗಲಿ ಇತರೆ ಮದ್ಯವನ್ನಾಗಲಿ ಸೇವಿಸುವುದಿಲ್ಲ. ಅವನ ತಲೆಕೂದಲನ್ನು ಕ್ಷೌರ ಕತ್ತಿಯಿಂದ ಕತ್ತರಿಸುವುದಿಲ್ಲ”[b] ಎಂದು ಹೇಳಿದಳು
12 ಹನ್ನಳು ಬಹಳ ಹೊತ್ತಿನವರೆಗೆ ಯೆಹೋವನಿಗೆ ಪ್ರಾರ್ಥನೆ ಮಾಡಿದಳು. ಅವಳು ಪ್ರಾರ್ಥನೆ ಮಾಡುತ್ತಿದ್ದಾಗ ಏಲಿಯು ಅವಳ ಬಾಯನ್ನೇ ನೋಡುತ್ತಿದ್ದನು. 13 ಹನ್ನಳು ತನ್ನ ಹೃದಯದಲ್ಲಿಯೇ ಪ್ರಾರ್ಥಿಸುತ್ತಿದ್ದಳು. ಅವಳ ತುಟಿಗಳು ಚಲಿಸಿದರೂ ಮಾತುಗಳು ಕೇಳಿಸಲಿಲ್ಲ. ಅವಳು ಮದ್ಯಪಾನ ಮಾಡಿರುತ್ತಾಳೆಂದು 14 ಏಲಿಯು ನೆನಸಿ, “ನೀನು ಹೆಚ್ಚು ಕುಡಿದಿರುವೆ. ಅಮಲನ್ನು ಇಳಿಸಿಕೊ” ಎಂದು ಹನ್ನಳಿಗೆ ಹೇಳಿದನು.
15 ಹನ್ನಳು “ಸ್ವಾಮೀ, ನಾನು ಯಾವುದೇ ದ್ರಾಕ್ಷಾರಸವನ್ನಾಗಲಿ ಮದ್ಯವನ್ನಾಗಲಿ ಕುಡಿದಿಲ್ಲ. ನಾನು ಬಹುದುಃಖಿತಳು. ನಾನು ಯೆಹೋವನಲ್ಲಿ ನನ್ನ ಎಲ್ಲ ತೊಂದರೆಗಳನ್ನು ನಿವೇದಿಸಿಕೊಳ್ಳುತ್ತಿದ್ದೆನು. 16 ನನ್ನನ್ನು ಅಯೋಗ್ಯ ಹೆಂಗಸೆಂದು ನೆನಸಬೇಡಿ. ನಾನು ಬಹು ದುಃಖಿತಳಾಗಿರುವುದರಿಂದ ಮತ್ತು ಹೆಚ್ಚು ನೊಂದಿರುವುದರಿಂದ ದೀರ್ಘಕಾಲ ಪ್ರಾರ್ಥನೆ ಮಾಡಿದೆ” ಎಂದು ಉತ್ತರಿಸಿದಳು.
17 ಏಲಿಯು, “ಸಮಾಧಾನದಿಂದ ಹೋಗು. ಇಸ್ರೇಲಿನ ದೇವರು ನಿನ್ನ ಇಷ್ಟಾರ್ಥಗಳನ್ನು ನೆರವೇರಿಸುತ್ತಾನೆ” ಎಂದು ಉತ್ತರಿಸಿದನು.
18 ಹನ್ನಳು, “ನನ್ನ ಮೇಲೆ ನಿಮ್ಮ ದಯೆಯಿರಲಿ” ಎಂದು ಹೇಳಿದಳು. ಆಗ ಅವಳು ತನ್ನ ಮಾರ್ಗದಲ್ಲಿಯೇ ಹಿಂದಿರುಗಿ. ಸ್ವಲ್ಪ ಊಟ ಮಾಡಿದಳು. ಅಂದಿನಿಂದ ಅವಳು ದುಃಖಿತಳಾಗಲಿಲ್ಲ.
19 ಎಲ್ಕಾನನ ಕುಟುಂಬದವರು ಮರುದಿನ ಬೆಳಿಗ್ಗೆ ಎದ್ದು ಯೆಹೋವನನ್ನು ಆರಾಧಿಸಿ, ರಾಮಾತಯಿಮಿನಲ್ಲಿದ್ದ ತಮ್ಮ ಮನೆಗೆ ಹಿಂದಿರುಗಿದರು.
ಸಮುವೇಲನ ಜನನ
ಎಲ್ಕಾನನು ಹನ್ನಳನ್ನು ಕೂಡಿದನು. ಯೆಹೋವನು ಹನ್ನಳನ್ನು ಜ್ಞಾಪಿಸಿಕೊಂಡನು. 20 ಹನ್ನಳು ಗರ್ಭಿಣಿಯಾಗಿ ಮಗನನ್ನು ಹೆತ್ತಳು. ಹನ್ನಳು ಆ ಮಗನಿಗೆ ಸಮುವೇಲನೆಂದು ಹೆಸರಿಟ್ಟಳು. ಅವಳು, “ಅವನ ಹೆಸರು ಸಮುವೇಲ, ಏಕೆಂದರೆ ನಾನು ಅವನಿಗಾಗಿ ಯೆಹೋವನಲ್ಲಿ ಪ್ರಾರ್ಥಿಸಿದ್ದೆ” ಎಂದಳು.
21 ಎಲ್ಕಾನನು ಯಜ್ಞವನ್ನು ಅರ್ಪಿಸಲು ಮತ್ತು ಯೆಹೋವನಿಗೆ ಮಾಡಿದ ಹರಕೆಯನ್ನು ಸಲ್ಲಿಸಲು ಆ ವರ್ಷವೂ ಶೀಲೋವಿಗೆ ತನ್ನ ಕುಟುಂಬ ಸಮೇತವಾಗಿ ಹೋದನು. 22 ಆದರೆ ಹನ್ನಳು ಹೋಗಲಿಲ್ಲ. ಅವಳು ಎಲ್ಕಾನನಿಗೆ, “ಮಗುವು ಗಟ್ಟಿಯಾದ ಊಟಮಾಡುವ ತನಕ ನಾನು ಬರುವುದಿಲ್ಲ. ಅವನು ದೊಡ್ಡವನಾದ ಮೇಲೆ ನಾನೇ ಶೀಲೋವಿಗೆ ಕರೆದೊಯ್ದು ಯೆಹೋವನಿಗೆ ಒಪ್ಪಿಸುತ್ತೇನೆ. ಅವನು ನಾಜೀರನಾಗುತ್ತಾನೆ. ಅವನು ಯಾವಾಗಲೂ ಶೀಲೋವಿನಲ್ಲಿಯೇ ಇರುತ್ತಾನೆ” ಎಂದು ಹೇಳಿದಳು.
23 ಹನ್ನಳ ಗಂಡನಾದ ಎಲ್ಕಾನನು ಅವಳಿಗೆ, “ನಿನಗೆ ಸರಿತೋರಿದಂತೆ ಮಾಡು. ಮಗುವು ಗಟ್ಟಿಯಾದ ಊಟ ಮಾಡುವಷ್ಟು ವಯಸ್ಸಾಗುವ ತನಕ ಮನೆಯಲ್ಲಿಯೇ ಇರು. ನೀನು ಹೇಳಿದ್ದನ್ನು ಯೆಹೋವನು ನೆರವೇರಿಸಲಿ” ಎಂದು ಹೇಳಿದನು. ಆದ್ದರಿಂದ ಹನ್ನಳು ತನ್ನ ಮಗುವು ಗಟ್ಟಿಯಾದ ಆಹಾರವನ್ನು ತಿನ್ನಲು ಆರಂಭಿಸುವ ತನಕ ಆರೈಕೆಮಾಡಿ ಬೆಳೆಸಲು ಮನೆಯಲ್ಲಿಯೇ ಇದ್ದಳು.
ಸಮುವೇಲನನ್ನು ಯೆಹೋವನಿಗೆ ಒಪ್ಪಿಸಿದ್ದು
24 ಮಗುವು ಗಟ್ಟಿಯಾದ ಊಟ ಮಾಡುವಂತಾದಾಗ ಹನ್ನಳು ಶೀಲೋವಿನಲ್ಲಿದ್ದ ಯೆಹೋವನ ಆಲಯಕ್ಕೆ ಅವನನ್ನು ಕರೆದುಕೊಂಡು ಹೋದಳು. ಹನ್ನಳು ಮೂರು ವರ್ಷದ ಒಂದು ಹೋರಿಯನ್ನೂ ಮೂವತ್ತು ಸೇರು ಹಿಟ್ಟನ್ನೂ ಒಂದು ಸೀಸೆ ದ್ರಾಕ್ಷಾರಸವನ್ನೂ ತೆಗೆದುಕೊಂಡು ಹೋದಳು.
25 ಅವರೆಲ್ಲಾ ಯೆಹೋವನ ಸನ್ನಿಧಿಗೆ ಹೋದರು. ಎಲ್ಕಾನನು ಎಂದಿನಂತೆ ಹೋರಿಯನ್ನು ಯಜ್ಞವಾಗಿ ಅರ್ಪಿಸಿದನು. ಆಮೇಲೆ ಹನ್ನಳು ಏಲಿಯನ ಬಳಿಗೆ ಮಗನನ್ನು ಕರೆದೊಯ್ದಳು. 26 ಹನ್ನಳು, “ಸ್ವಾಮೀ, ನನ್ನನ್ನು ಕ್ಷಮಿಸಿ. ನಿಮ್ಮ ಬಳಿ ನಿಂತಿರುವ ನಾನೇ ಅಂದು ಯೆಹೋವನಿಗೆ ಪ್ರಾರ್ಥನೆ ಮಾಡಿದವಳು. ನಾನು ಹೇಳುತ್ತಿರುವುದು ನಿಜವೆಂದು ಪ್ರಮಾಣ ಮಾಡುತ್ತೇನೆ. 27 ನಾನು ಈ ಮಗುವಿಗಾಗಿ ಪ್ರಾರ್ಥನೆ ಮಾಡಿದೆ. ಯೆಹೋವನು ನನ್ನ ಪ್ರಾರ್ಥನೆಗೆ ಉತ್ತರಿಸಿದನು. ಯೆಹೋವನು ಅನುಗ್ರಹಿಸಿದ ಮಗನೇ ಇವನು. 28 ಈಗ ನಾನು ಈ ಮಗನನ್ನು ಯೆಹೋವನಿಗೆ ಒಪ್ಪಿಸುತ್ತೇನೆ. ಇವನು ಜೀವದಿಂದಿರುವ ತನಕ ಯೆಹೋವನಿಗೆ ಪ್ರತಿಷ್ಠಿತನಾಗಿರುತ್ತಾನೆ” ಎಂದು ಏಲಿಗೆ ಹೇಳಿದಳು.
ಬಳಿಕ ಹನ್ನಳು ಆ ಬಾಲಕನನ್ನು ಅಲ್ಲಿಯೇ ಬಿಟ್ಟು ಯೆಹೋವನನ್ನು ಆರಾಧಿಸಿದಳು.
ಹನ್ನಳ ಸ್ತೋತ್ರ
2 ಹನ್ನಳು ಇಂತೆಂದಳು:
“ನನ್ನ ಹೃದಯವು ಯೆಹೋವನಲ್ಲಿ ಉಲ್ಲಾಸಿಸುತ್ತದೆ.
ನಾನು ನನ್ನ ದೇವರಾದ ಯೆಹೋವನಲ್ಲಿ ಬಲಶಾಲಿಯಾಗಿದ್ದೇನೆ.
ನಾನು ನನ್ನ ಶತ್ರುಗಳ ಬಗ್ಗೆ ನಗುವೆನು.[c]
ನಾನು ನಿನ್ನ ರಕ್ಷಣೆಯಲ್ಲಿ ಆನಂದಿಸುತ್ತೇನೆ.
2 ಯೆಹೋವನಂತಹ ಪವಿತ್ರ ದೇವರು ಬೇರೆ ಯಾರೂ ಇಲ್ಲ.
ನಿನ್ನ ಹೊರತು ಅನ್ಯದೇವರಿಲ್ಲ!
ನಮ್ಮ ದೇವರಿಗಿಂತ ಬೇರೊಂದು ಬಂಡೆಯಿಲ್ಲ.
3 ಇನ್ನು ಮುಂದೆ ಬಡಾಯಿಕೊಚ್ಚಬೇಡಿ!
ಸೊಕ್ಕಿನ ಮಾತುಗಳನ್ನು ಆಡಬೇಡಿ!
ಏಕೆಂದರೆ ಯೆಹೋವನು ಪ್ರತಿಯೊಂದನ್ನು ಬಲ್ಲನು.
ಆತನು ಮನುಷ್ಯರನ್ನು ಮುನ್ನಡೆಸುತ್ತಾನೆ ಮತ್ತು ತೂಗಿ ನೋಡುತ್ತಾನೆ.
4 ಶಕ್ತಿಶಾಲಿ ಯೋಧರ ಬಿಲ್ಲುಗಳು ಮುರಿದುಹೋಗುತ್ತವೆ.
ಬಲಹೀನರು ಶಕ್ತಿವಂತರಾಗುವರು.
5 ಹಿಂದೆ ಆಹಾರವನ್ನು ಸಮೃದ್ಧಿಕರವಾಗಿ ಹೊಂದಿದ್ದವರು
ಆಹಾರಕ್ಕಾಗಿ ದುಡಿಯಬೇಕಾಗುವುದು.
ಹಿಂದೆ ಆಹಾರವಿಲ್ಲದೆ ಹಸಿದಿದ್ದವರಿಗೆ
ಇಂದು ಆಹಾರ ಸಮೃದ್ಧಿಕರವಾಗಿರುವುದು!
ಬಂಜೆಗೆ ಈಗ ಏಳು ಜನ ಮಕ್ಕಳಿರುವರು.
ಆದರೆ ಹೆಚ್ಚು ಮಕ್ಕಳಿದ್ದ ತಾಯಿ ಇಂದು ವೇದನೆಗೊಂಡಿರುವಳು
ಏಕೆಂದರೆ ಅವಳ ಮಕ್ಕಳೆಲ್ಲ ಸತ್ತುಹೋಗಿದ್ದಾರೆ.
6 ಯೆಹೋವನು ಜನರಿಗೆ ಸಾವನ್ನೂ ತರುವನು.
ಅಂತೆಯೇ ಅವರಿಗೆ ಜೀವವನ್ನೂ ದಯಪಾಲಿಸುವನು.
ಆತನು ಅವರಿಗೆ ಮರುಜೀವವನ್ನು ದಯಪಾಲಿಸಬಲ್ಲನು.
ಯೆಹೋವನು ಜನರನ್ನು ಮರಣ ಸ್ಥಳವಾದ ಪಾತಾಳಕ್ಕೆ ತಳ್ಳುವನು.
7 ಯೆಹೋವನು ಜನರನ್ನು ಬಡವರನ್ನಾಗಿಸುತ್ತಾನೆ.
ಆತನು ಜನರನ್ನು ಹಣವಂತರನ್ನಾಗಿಸುತ್ತಾನೆ.
ಯೆಹೋವನು ಜನರನ್ನು ದೀನರನ್ನಾಗಿಸುತ್ತಾನೆ.
ಆತನು ಜನರನ್ನು ದೊಡ್ಡವರನ್ನಾಗಿಸುತ್ತಾನೆ.
8 ಯೆಹೋವನು ಬಡವರನ್ನು ಧೂಳಿನಿಂದ ಮೇಲಕ್ಕೆತ್ತುತ್ತಾನೆ.
ಯೆಹೋವನು ದೀನರನ್ನು ತಿಪ್ಪೆಯಿಂದ ಮೇಲಕ್ಕೆತ್ತುತ್ತಾನೆ.
ಯೆಹೋವನು ಬಡವರನ್ನು ರಾಜಕುಮಾರರೊಂದಿಗೆ ಕುಳ್ಳಿರಿಸುತ್ತಾನೆ.
ಆತನು ಬಡವರನ್ನು ಗೌರವಪೀಠದಲ್ಲಿ ಕುಳ್ಳಿರಿಸುತ್ತಾನೆ.
ಲೋಕವೂ ಅದರ ಅಡಿಪಾಯಗಳೂ ಯೆಹೋವನವೇ.
ಆತನು ಆ ಕಂಬಗಳ ಮೇಲೆ ಲೋಕವನ್ನು ನಿಲ್ಲಿಸಿರುವನು.
9 ಯೆಹೋವನು ತನ್ನ ಪವಿತ್ರ ಜನರನ್ನು ರಕ್ಷಿಸುವನು.
ಆತನು ಅವರನ್ನು ಎಡವದಂತೆ ಕಾಪಾಡುವನು.
ಆದರೆ ಕೆಟ್ಟವರು ನಾಶವಾಗಿ ಕತ್ತಲೆಯಲ್ಲಿ ಬೀಳುವರು.
ಅವರ ಶಕ್ತಿ ಅವರಿಗೆ ಜಯನೀಡಲಾರದು.
10 ಯೆಹೋವನು ತನ್ನ ಶತ್ರುಗಳನ್ನು ನಾಶಗೊಳಿಸುವನು.
ಮಹೋನ್ನತನಾದ ದೇವರು ಪರಲೋಕದಲ್ಲಿ ಜನರಿಗೆ ವಿರುದ್ಧವಾಗಿ ಗುಡುಗುವನು.
ಯೆಹೋವನು ಬಹುದೂರದ ದೇಶಗಳಿಗೂ ತೀರ್ಪನ್ನು ಕೊಡುವನು.
ಆತನು ತನ್ನ ರಾಜನಿಗೆ ಶಕ್ತಿಯನ್ನು ಕೊಡುವನು.
ತಾನು ಅಭಿಷೇಕಿಸಿದ ರಾಜನನ್ನು ಬಲಗೊಳಿಸುವನು.”
11 ಎಲ್ಕಾನ ಮತ್ತು ಅವನ ಕುಟುಂಬದವರು ರಾಮಾತಯಿಮಿನಲ್ಲಿದ್ದ ತಮ್ಮ ಮನೆಗೆ ಹಿಂತಿರುಗಿದರು. ಬಾಲಕನು ಶೀಲೋವಿನಲ್ಲಿಯೇ ಉಳಿದುಕೊಂಡನು ಮತ್ತು ಯಾಜಕನಾದ ಏಲಿಯ ಮಾರ್ಗದರ್ಶನದಲ್ಲಿ ಯೆಹೋವನ ಸೇವೆಮಾಡಿದನು.
ಏಲಿಯ ದುಷ್ಟ ಮಕ್ಕಳು
12 ಏಲಿಯ ಮಕ್ಕಳು ದುಷ್ಟರಾಗಿದ್ದರು. ಅವರು ಯೆಹೋವನನ್ನು ಲಕ್ಷಿಸುತ್ತಿರಲಿಲ್ಲ. 13 ಯಾಜಕರು ಜನರೊಡನೆ ಯಾವ ರೀತಿ ವರ್ತಿಸಬೇಕು ಎಂಬುದನ್ನು ಅವರು ಲಕ್ಷಿಸುತ್ತಿರಲಿಲ್ಲ. ಯಾಜಕರು ಜನರಿಗಾಗಿ ಮಾಡಬೇಕಾದ ಕಾರ್ಯವೆಂದರೆ: ಒಬ್ಬ ವ್ಯಕ್ತಿಯು ಪ್ರತಿಸಲ ಯಜ್ಞವನ್ನರ್ಪಿಸಲು ಬಂದಾಗ ಯಾಜಕರು ಯಜ್ಞಮಾಂಸವನ್ನು ಒಂದು ಮಡಕೆಯಲ್ಲಿ ಬೇಯಿಸಬೇಕು. ಯಾಜಕರ ಸೇವಕನು ಕೈಯಲ್ಲಿ ತ್ರಿಶೂಲವನ್ನು ಹಿಡಿದುಕೊಂಡು ಬರಬೇಕು. 14 ಯಾಜಕರ ಸೇವಕನು ತ್ರಿಶೂಲವನ್ನು ಕೊಪ್ಪರಿಗೆಯಲ್ಲಾಗಲಿ ತಪ್ಪಲೆಯಲ್ಲಾಗಲಿ ಗಡಿಗೆಯಲ್ಲಾಗಲಿ ಭಾಂಡದಲ್ಲಾಗಲಿ ಚುಚ್ಚಿ ಹೊರ ತೆಗೆದಾಗ, ಅದರೊಂದಿಗೆ ಬರುವ ಮಾಂಸವನ್ನು ಮಾತ್ರ ಯಾಜಕನು ಸ್ವೀಕರಿಸಬೇಕು. ಶೀಲೋವಿಗೆ ಯಜ್ಞವನ್ನರ್ಪಿಸಲು ಬರುವ ಎಲ್ಲ ಇಸ್ರೇಲರೊಂದಿಗೆ ಇದೇ ರೀತಿ ಮಾಡಬೇಕಿತ್ತು. 15 ಆದರೆ ಏಲಿಯ ಮಕ್ಕಳು ಈ ರೀತಿ ಮಾಡುತ್ತಿರಲಿಲ್ಲ. ಯಜ್ಞವೇದಿಕೆಯ ಮೇಲೆ ಕೊಬ್ಬನ್ನು ಹೋಮ ಮಾಡುವುದಕ್ಕಿಂತ[d] ಮೊದಲೇ ಅವರ ಸೇವಕರು ಯಜ್ಞಗಳನ್ನು ಅರ್ಪಿಸುವ ಜನರ ಬಳಿಗೆ ಹೋಗುತ್ತಿದ್ದರು. ಯಾಜಕನ ಸೇವಕನು, “ಯಾಜಕನಿಗೆ ಕರಿದು ಕೊಡಲು ಸ್ವಲ್ಪ ಮಾಂಸವನ್ನು ಕೊಡಿ. ಬೇಯಿಸಿದ ಮಾಂಸವನ್ನು ಯಾಜಕನು ನಿಮ್ಮಿಂದ ಸ್ವೀಕರಿಸಿಕೊಳ್ಳುವುದಿಲ್ಲ” ಎಂದು ಹೇಳುತ್ತಿದ್ದನು.
16 ಯಜ್ಞವನ್ನರ್ಪಿಸುವವನು, “ಕೊಬ್ಬನ್ನು ಮೊದಲು ಹೋಮ ಮಾಡೋಣ. ಅನಂತರ ನಿಮಗೆ ಬೇಕಾದುದನ್ನು ತೆಗೆದುಕೊಳ್ಳಿ” ಎಂದು ಹೇಳಿದರೆ, ಯಾಜಕರ ಸೇವಕನು, “ಇಲ್ಲ, ಯಾಜಕನಿಗಾಗಿ ಕರಿಯಲು ಮಾಂಸವನ್ನು ಈಗಲೇ ಕೊಡು. ನೀನು ಕೊಡುವುದಿಲ್ಲವಾದರೆ, ನಾನೇ ತೆಗೆದುಕೊಳ್ಳುತ್ತೇನೆ” ಎಂದು ಹೇಳುತ್ತಿದ್ದನು.
17 ಯೆಹೋವನಿಗೆ ಅರ್ಪಿಸುವ ಯಜ್ಞವನ್ನು ಹೊಫ್ನಿ ಮತ್ತು ಫೀನೆಹಾಸರು ತುಚ್ಛೀಕರಿಸುತ್ತಿದ್ದರು. ಇದು ಯೆಹೋವನಿಗೆ ವಿರೋಧವಾದ ಮಹಾ ಪಾಪವಾಗಿತ್ತು.
18 ಆದರೆ ಬಾಲಕನಾದ ಸಮುವೇಲನು ಏಫೋದ್ ಎಂಬ ನಾರುಬಟ್ಟೆಯನ್ನು ಧರಿಸಿ ಯೆಹೋವನ ಸೇವೆ ಮಾಡುತ್ತಿದ್ದನು. 19 ಸಮುವೇಲನ ತಾಯಿಯು ಪ್ರತಿವರ್ಷವೂ ಒಂದು ಚಿಕ್ಕ ಮೇಲಂಗಿಯನ್ನು ಅವನಿಗಾಗಿ ತಯಾರಿಸಿ, ಗಂಡನೊಡನೆ ವಾರ್ಷಿಕ ಯಜ್ಞವನ್ನು ಅರ್ಪಿಸಲು ಶೀಲೋವಿಗೆ ಹೋದಾಗ ಅವನಿಗೆ ಕೊಡುತ್ತಿದ್ದಳು.
20 ಏಲಿಯು ಎಲ್ಕಾನನನ್ನು ಮತ್ತು ಅವನ ಹೆಂಡತಿಯಾದ ಹನ್ನಳನ್ನು ಆಶೀರ್ವದಿಸಿ, “ಹನ್ನಳು ಯೆಹೋವನನ್ನು ಪ್ರಾರ್ಥಿಸಿ ಪಡೆದ ಮಗನನ್ನು ಆತನಿಗೆ ಒಪ್ಪಿಸಿದ್ದರಿಂದ ಯೆಹೋವನು ಅವಳಿಗೆ ಬೇರೆ ಮಕ್ಕಳನ್ನು ಅನುಗ್ರಹಿಸಲಿ” ಎಂದು ಹೇಳಿದನು.
ಆಮೇಲೆ ಎಲ್ಕಾನ ಮತ್ತು ಹನ್ನ ಮನೆಗೆ ಹೋದರು. 21 ಯೆಹೋವನು ಹನ್ನಳಿಗೆ ದಯೆತೋರಿದನು. ಅವಳಿಗೆ ಮೂರು ಮಂದಿ ಗಂಡುಮಕ್ಕಳೂ ಇಬ್ಬರು ಹೆಣ್ಣುಮಕ್ಕಳೂ ಆದರು. ಬಾಲಕನಾದ ಸಮುವೇಲನು ಯೆಹೋವನ ಸನ್ನಿಧಿಯಲ್ಲಿ ದೊಡ್ಡವನಾದನು.
ಏಲಿಯು ತನ್ನ ದುಷ್ಟಮಕ್ಕಳನ್ನು ಹತೋಟಿಯಲ್ಲಿಡಲಿಲ್ಲ
22 ಏಲಿಯು ಬಹಳ ವೃದ್ಧನಾದನು. ತನ್ನ ಗಂಡುಮಕ್ಕಳು ಶೀಲೋವಿನಲ್ಲಿ ಇಸ್ರೇಲರೊಂದಿಗೆ ನಡೆದುಕೊಳ್ಳುತ್ತಿರುವ ರೀತಿಯನ್ನು ಮತ್ತು ಅವರು ದೇವದರ್ಶನ ಗುಡಾರದ ಬಾಗಿಲಿನಲ್ಲಿ ಸೇವೆ ಮಾಡುತ್ತಿರುವ ಸ್ತ್ರೀಯರೊಡನೆ ಕೂಡುತ್ತಿರುವುದನ್ನು ಅವನು ಕೇಳುತ್ತಿದ್ದನು.
23 ಏಲಿಯು ತನ್ನ ಗಂಡುಮಕ್ಕಳಿಗೆ, “ಇಲ್ಲಿಯ ಜನರು ನೀವು ಮಾಡುವ ದುಷ್ಕೃತ್ಯಗಳ ಬಗ್ಗೆ ತಿಳಿಸಿದ್ದಾರೆ. ನೀವು ಇಂತಹ ದುಷ್ಕೃತ್ಯಗಳನ್ನು ಏಕೆ ಮಾಡುತ್ತೀರಿ? 24 ಮಕ್ಕಳೇ, ಇಂತಹ ದುಷ್ಕೃತ್ಯಗಳನ್ನು ಮಾಡಬೇಡಿ. ಯೆಹೋವನ ಜನರು ನಿಮ್ಮ ಬಗ್ಗೆ ಕೆಟ್ಟ ಸಂಗತಿಗಳನ್ನು ಮಾತಾಡುತ್ತಿದ್ದಾರೆ. 25 ಒಬ್ಬ ಮನುಷ್ಯನು ಬೇರೊಬ್ಬನ ವಿರುದ್ಧ ಅಪರಾಧ ಮಾಡಿದರೆ, ಯೆಹೋವನು ಅವನಿಗೆ ಸಹಾಯ ಮಾಡಬಹುದು, ಆದರೆ ಒಬ್ಬ ಮನುಷ್ಯನು ಯೆಹೋವನ ವಿರುದ್ಧವೇ ಅಪರಾಧ ಮಾಡಿದರೆ, ಆಗ ಅವನಿಗೆ ಸಹಾಯ ಮಾಡುವವರು ಯಾರು?” ಎಂದು ಬುದ್ಧಿಮಾತು ಹೇಳಿದನು.
ಆದರೆ ಏಲಿಯ ಮಾತನ್ನು ಅವನ ಮಕ್ಕಳು ಕೇಳಲಿಲ್ಲ. ಆದ್ದರಿಂದ ಯೆಹೋವನು ಏಲಿಯ ಮಕ್ಕಳನ್ನು ಕೊಲ್ಲಲು ನಿರ್ಧರಿಸಿದನು.
26 ಬಾಲಕನಾದ ಸಮುವೇಲನು ದೊಡ್ಡವನಾಗುತ್ತಲೇ ಇದ್ದನು. ಅವನು ದೇವರಿಗೆ ಮತ್ತು ಜನರಿಗೆ ಪ್ರಿಯನಾದನು.
ಏಲಿಯ ಕುಟುಂಬದ ಬಗ್ಗೆ ಭೀಕರ ಪ್ರವಾದನೆ
27 ದೇವಮನುಷ್ಯನೊಬ್ಬನು ಏಲಿಯ ಬಳಿಗೆ ಬಂದು, “ಯೆಹೋವನು ಈ ಸಂಗತಿಗಳನ್ನು ತಿಳಿಸಿದನು: ‘ನಿನ್ನ ಪೂರ್ವಿಕರು ಈಜಿಪ್ಟಿನಲ್ಲಿ ಫರೋಹನ ಗುಲಾಮರಾಗಿದ್ದರು. ಆಗ ನಾನು ನಿನ್ನ ಪೂರ್ವಿಕರಿಗೆ ದರ್ಶನ ನೀಡಿದೆ. 28 ಇಸ್ರೇಲಿನ ಎಲ್ಲಾ ಕುಲಗಳಲ್ಲಿ ನಿನ್ನ ಕುಟುಂಬದವರನ್ನು ನನ್ನ ಯಾಜಕರನ್ನಾಗಿ ಆರಿಸಿಕೊಂಡೆನು. ಏಫೋದನ್ನು ಧರಿಸಿಕೊಳ್ಳುವುದಕ್ಕೂ ಯಜ್ಞವನ್ನು ಅರ್ಪಿಸುವುದಕ್ಕೂ ಧೂಪಹಾಕುವುದಕ್ಕೂ ನಾನು ಅವರನ್ನು ಆರಿಸಿಕೊಂಡೆನು. ಇಸ್ರೇಲರು ನನಗೆ ಅರ್ಪಿಸುವ ಯಜ್ಞಗಳಲ್ಲಿ ಮಾಂಸವನ್ನು ಪಡೆಯುವ ಅವಕಾಶವನ್ನೂ ನಾನು ನಿಮ್ಮ ಕುಲದವರಿಗೆ ನೀಡಿದೆನು. 29 ಹೀಗಿರುವಾಗ ಆ ಯಜ್ಞಗಳನ್ನು ಮತ್ತು ಕಾಣಿಕೆಗಳನ್ನು ನೀವು ಗೌರವಿಸದಿರುವುದೇಕೇ? ನಿನ್ನ ಮಕ್ಕಳನ್ನು ನನಗಿಂತ ಹೆಚ್ಚು ಗೌರವಿಸುತ್ತಿರುವೆ. ಇಸ್ರೇಲರು ನನಗಾಗಿ ತರುವ ಯಜ್ಞಮಾಂಸದ ಉತ್ತಮ ಭಾಗಗಳಿಂದ ನಿಮ್ಮನ್ನು ಕೊಬ್ಬಿಸಿಕೊಂಡಿರುವಿರಿ.’
30 “ನಿಮ್ಮ ತಂದೆಯ ಕುಟುಂಬವು ಸರ್ವಕಾಲವೂ ಆತನ ಸೇವೆ ಮಾಡುವುದೆಂದು ಇಸ್ರೇಲಿನ ದೇವರಾದ ಯೆಹೋವನು ವಾಗ್ದಾನ ಮಾಡಿದ್ದನು. ಆದರೆ ಈಗ ಯೆಹೋವನು ಹೀಗೆನ್ನುತ್ತಾನೆ: ‘ಅದೆಂದಿಗೂ ಸಾಧ್ಯವಿಲ್ಲ. ನನ್ನನ್ನು ಸನ್ಮಾನಿಸುವವರನ್ನು ನಾನೂ ಸನ್ಮಾನಿಸುತ್ತೇನೆ. ಆದರೆ ನನ್ನನ್ನು ತಿರಸ್ಕರಿಸುವವರನ್ನು ನಾನೂ ತಿರಸ್ಕರಿಸುತ್ತೇನೆ. 31 ನಿನ್ನ ಸಂತತಿಯವರನ್ನೆಲ್ಲಾ ನಾಶಮಾಡುವ ಕಾಲವು ಬರುತ್ತಿದೆ. ನಿನ್ನ ಮನೆಯಲ್ಲಿ ಯಾರೂ ವೃದ್ಧಾಪ್ಯದವರೆಗೆ ಬದುಕುವುದಿಲ್ಲ. 32 ಇಸ್ರೇಲಿಗೆ ಶುಭಗಳಾದರೂ ನಿನ್ನ ಮನೆಯಲ್ಲಿ ಅಶುಭಗಳಿರುವುದನ್ನು ನೀನು ನೋಡುವೆ. ನಿನ್ನ ಕುಟುಂಬದಲ್ಲಿ ಯಾರೂ ವೃದ್ಧಾಪ್ಯದವರೆಗೆ ಬದುಕುವುದಿಲ್ಲ. 33 ನನ್ನ ಯಜ್ಞವೇದಿಕೆಯ ಬಳಿಯಲ್ಲಿ ಯಾಜಕಸೇವೆ ಮಾಡುವುದಕ್ಕಾಗಿ ನಾನು ಒಬ್ಬನನ್ನು ಉಳಿಸಿಕೊಳ್ಳುವೆನು. ಅವನು ಬಹುಮುಪ್ಪಿನವರೆಗೂ ಬದುಕುವನು. ಅವನ ಕಣ್ಣುಗಳು ಕಾಣದೆ ಹೋಗುವವರೆಗೂ ಬಲಹೀನನಾಗುವವರೆಗೂ ಅವನು ಬದುಕುವನು. ಉಳಿದ ನಿನ್ನ ಸಂತತಿಯವರೆಲ್ಲಾ ಖಡ್ಗದಿಂದ ಸಾಯುವರು. 34 ಈ ಸಂಗತಿಗಳು ನಿಜವಾಗುತ್ತವೆಯೆಂದು ತೋರಿಸಲು ನಾನು ನಿನಗೊಂದು ಗುರುತನ್ನು ಕೊಡುವೆನು. ನಿನ್ನ ಇಬ್ಬರು ಮಕ್ಕಳಾದ ಹೊಫ್ನಿ ಮತ್ತು ಫೀನೆಹಾಸರು ಒಂದೇ ದಿನದಲ್ಲಿ ಸಾಯುವರು. ಅದೇ ಆ ಗುರುತು. 35 ನಾನು ನನಗೋಸ್ಕರ ನಂಬಿಗಸ್ತನಾದ ಯಾಜಕನೊಬ್ಬನನ್ನು ಆರಿಸಿಕೊಳ್ಳುತ್ತೇನೆ. ಈ ಯಾಜಕನು ನಾನು ಹೇಳುವುದನ್ನು ಕೇಳುವನು ಮತ್ತು ನನಗೆ ಇಷ್ಟವಾದುದನ್ನು ಮಾಡುವನು. ಈ ಯಾಜಕನ ಕುಟುಂಬವನ್ನು ನಾನು ಬಲಗೊಳಿಸುವೆನು. ನಾನು ಆರಿಸಿಕೊಂಡಿರುವ ರಾಜನ ಬಳಿಯಲ್ಲಿ ಅವನು ಸದಾಕಾಲ ಸೇವೆಮಾಡುವನು. 36 ಆಗ ನಿನ್ನ ಕುಟುಂಬದವರಲ್ಲಿ ಉಳಿದವರೆಲ್ಲ ಬಂದು ಈ ಯಾಜಕನಿಗೆ ಅಡ್ಡಬೀಳುವರು. ಈ ಜನರೆಲ್ಲ ಅವನಲ್ಲಿ ಬಿಡಿಕಾಸನ್ನೂ ರೊಟ್ಟಿಯ ಚೂರನ್ನೂ ಬೇಡುವರು. ಅವರೆಲ್ಲ, “ನಮಗೆ ದೇವಸ್ಥಾನದಲ್ಲಿ ಯಾಜಕನ ಹುದ್ದೆಯನ್ನು ಕೊಡು, ಅದರಿಂದ ಹೊಟ್ಟೆ ತುಂಬಿಸಿಕೊಳ್ಳುತ್ತೇವೆ ಎಂದು ಬೇಡಿಕೊಳ್ಳುವರು”’” ಎಂದನು.
ಸಮುವೇಲನಿಗೆ ದೇವರ ಕರೆ
3 ಬಾಲಕನಾದ ಸಮುವೇಲನು ಏಲಿಯ ಕೈಕೆಳಗಿದ್ದು ಯೆಹೋವನ ಸೇವೆಮಾಡುತ್ತಿದ್ದನು. ಆ ಕಾಲದಲ್ಲಿ ಯೆಹೋವನು ಜನರೊಂದಿಗೆ ಪದೇಪದೇ ಮಾತಾಡುತ್ತಿರಲಿಲ್ಲ; ದರ್ಶನಗಳ ಸಂಖ್ಯೆಯೂ ಕಡಿಮೆಯಾಗಿತ್ತು.
2 ಏಲಿಯ ಕಣ್ಣುಗಳು ಮಂಜಾಗಿ ಕುರುಡನೆನ್ನುವಷ್ಟು ಕಾಣುತ್ತಿರಲಿಲ್ಲ. ಒಂದು ರಾತ್ರಿ ಏಲಿಯು ತನ್ನ ಸ್ಥಳದಲ್ಲಿ ಮಲಗಿದ್ದನು. 3 ಸಮುವೇಲನು ಯೆಹೋವನ ಪವಿತ್ರ ಆಲಯದಲ್ಲಿ ಹಾಸಿಗೆಯ ಮೇಲೆ ಮಲಗಿದ್ದನು. ಯೆಹೋವನ ಪವಿತ್ರ ಪೆಟ್ಟಿಗೆಯು ಅಲ್ಲಿಯೇ ಇತ್ತು. ಯೆಹೋವನ ದೀಪವು ಇನ್ನೂ ಬೆಳಗುತ್ತಿತ್ತು. 4 ಯೆಹೋವನು ಸಮುವೇಲನನ್ನು ಕರೆದನು. ಸಮುವೇಲನು, “ಇಗೋ, ಇಲ್ಲಿದ್ದೇನೆ” ಎಂದನು. 5 ಏಲಿಯು ಕರೆದಿರಬಹುದೆಂದು ಸಮುವೇಲನು ನೆನೆಸಿದನು. ಆದ್ದರಿಂದ ಸಮುವೇಲನು ಏಲಿಯ ಬಳಿಗೆ ಓಡಿಹೋಗಿ, “ಇಗೋ, ಇಲ್ಲಿದ್ದೇನೆ. ನೀನು ನನ್ನನ್ನು ಕರೆದೆಯಲ್ಲಾ” ಅಂದನು.
ಆದರೆ ಏಲಿಯು, “ನಾನು ನಿನ್ನನ್ನು ಕರೆಯಲಿಲ್ಲ. ಹೋಗಿ ಮಲಗಿಕೋ” ಅಂದನು.
ಸಮುವೇಲನು ಹೋಗಿ ಮಲಗಿಕೊಂಡನು. 6 ನಂತರ ಯೆಹೋವನು, “ಸಮುವೇಲನೇ” ಎಂದು ಮತ್ತೆ ಕರೆದನು. ಸಮುವೇಲನು ಮತ್ತೆ ಏಲಿಯ ಬಳಿಗೆ ಓಡಿಹೋಗಿ, “ಇಗೋ, ಇಲ್ಲಿದ್ದೇನೆ. ನೀನು ನನ್ನನ್ನು ಕರೆದೆಯಲ್ಲಾ” ಎಂದು ಹೇಳಿದನು.
ಏಲಿಯು, “ನಾನು ನಿನ್ನನ್ನು ಕರೆಯಲಿಲ್ಲ, ಹೋಗಿ ಮಲಗಿಕೋ” ಅಂದನು.
7 ಆ ವರೆಗೂ ಸಮುವೇಲನಿಗೆ ಯೆಹೋವನ ಅನುಭವವಿರಲಿಲ್ಲ; ಯೆಹೋವನು ಅವನೊಂದಿಗೆ ನೇರವಾಗಿ ಮಾತಾಡಿರಲಿಲ್ಲ.[e]
8 ಯೆಹೋವನು ಸಮುವೇಲನನ್ನು ಮೂರನೆಯ ಸಲ ಕರೆದನು. ಸಮುವೇಲನು ಮತ್ತೆ ಮೇಲೆದ್ದು ಏಲಿಯನ ಬಳಿಗೆ ಹೋಗಿ, “ಇಗೋ, ಇಲ್ಲಿದ್ದೇನೆ. ನೀನು ನನ್ನನ್ನು ಕರೆದೆಯಲ್ಲಾ” ಅಂದನು.
ಬಾಲಕನನ್ನು ಕರೆಯುತ್ತಿರುವವನು ಯೆಹೋವನೆಂಬುದು ಏಲಿಗೆ ಆಗ ಅರ್ಥವಾಯಿತು. 9 ಏಲಿಯು ಸಮುವೇಲನಿಗೆ, “ಹೋಗಿ ಮಲಗಿಕೋ. ನಿನ್ನನ್ನು ಮತ್ತೆ ಕರೆದರೆ, ‘ಅಪ್ಪಣೆಯಾಗಲಿ, ಯೆಹೋವನೇ ನಾನು ನಿನ್ನ ಸೇವಕ, ಕೇಳಿಸಿಕೊಳ್ಳುತ್ತಿದ್ದೇನೆ’ ಎಂದು ಉತ್ತರಿಸು” ಎಂಬುದಾಗಿ ಹೇಳಿದನು.
ಸಮುವೇಲನು ತನ್ನ ಸ್ಥಳದಲ್ಲಿ ಮಲಗಲು ಹೋದನು. 10 ಯೆಹೋವನು ಅಲ್ಲಿ ಪ್ರತ್ಯಕ್ಷನಾಗಿ ನಿಂತು ಮೊದಲು ಕರೆದಂತೆಯೇ “ಸಮುವೇಲನೇ, ಸಮುವೇಲನೇ” ಎಂದು ಕರೆದನು.
ಸಮುವೇಲನು, “ಅಪ್ಪಣೆಯಾಗಲಿ, ನಾನು ನಿನ್ನ ಸೇವಕ, ಕೇಳಿಸಿಕೊಳ್ಳುತ್ತಿದ್ದೇನೆ” ಎಂದನು.
11 ಯೆಹೋವನು ಸಮುವೇಲನಿಗೆ, “ನಾನು ಇಸ್ರೇಲಿನಲ್ಲಿ ಒಂದು ಕಾರ್ಯವನ್ನು ಶೀಘ್ರದಲ್ಲೇ ಮಾಡುವೆನು. ಈ ಕಾರ್ಯದ ಬಗ್ಗೆ ಕೇಳಿದ ಜನರು ಗಾಬರಿಗೊಳ್ಳುವರು. 12 ನಾನು ಇದನ್ನು ಏಲಿ ಮತ್ತು ಅವನ ಕುಟುಂಬದ ವಿರುದ್ಧ ಸಂಪೂರ್ಣವಾಗಿ ಮಾಡುತ್ತೇನೆ. 13 ಏಲಿಯ ಕುಟುಂಬವನ್ನು ನಿತ್ಯದಂಡನೆಗೆ ಗುರಿಪಡಿಸುತ್ತೇನೆಂದು ನಾನು ಏಲಿಗೆ ಹೇಳಿರುವೆನು. ಏಲಿಯ ಮಕ್ಕಳು ನನಗೆ ವಿರೋಧವಾಗಿ ಮಾತಾಡಿದ್ದರಿಂದ ಮತ್ತು ಕೆಟ್ಟಕಾರ್ಯಗಳನ್ನು ಮಾಡಿದ್ದರಿಂದ ನಾನು ಇದನ್ನು ಮಾಡುತ್ತೇನೆ. ಅಲ್ಲದೆ ಅವರನ್ನು ಹತೋಟಿಯಲ್ಲಿಡಲು ಏಲಿಗೆ ಸಾಧ್ಯವಾಗಲಿಲ್ಲ. 14 ಆದಕಾರಣವೇ, ಏಲಿಯ ಕುಟುಂಬವು ಅರ್ಪಿಸುವ ಯಜ್ಞವಾಗಲಿ ಧಾನ್ಯನೈವೇದ್ಯವಾಗಲಿ ಅವರ ಪಾಪಗಳಿಗೆ ಪ್ರಾಯಶ್ಚಿತ್ತವಾಗುವುದಿಲ್ಲವೆಂದು ಪ್ರಮಾಣ ಮಾಡುತ್ತೇನೆ” ಎಂದು ಹೇಳಿದನು.
15 ಸಮುವೇಲನು ನಿದ್ರಿಸಿದನು. ಅವನು ಮುಂಜಾನೆ ಮೇಲೆದ್ದು ಯೆಹೋವನ ಆಲಯದ ಬಾಗಿಲುಗಳನ್ನು ತೆರೆದನು. ಸಮುವೇಲನು ತಾನು ಕಂಡ ದರ್ಶನದ ಬಗ್ಗೆ ಏಲಿಗೆ ತಿಳಿಸಲು ಭಯಪಟ್ಟನು.
16 ಆದರೆ ಏಲಿಯು, “ಸಮುವೇಲನೇ, ನನ್ನ ಮಗನೇ” ಎಂದು ಕರೆದನು.
ಸಮುವೇಲನು, “ಇಗೋ, ಇದ್ದೇನೆ” ಅಂದನು.
17 ಏಲಿಯು, “ಯೆಹೋವನು ನಿನಗೆ ಹೇಳಿದ್ದೇನು? ನನ್ನೊಂದಿಗೆ ಅದನ್ನು ಮುಚ್ಚಿಡಬೇಡ. ಆತನು ನಿನ್ನೊಂದಿಗೆ ಆಡಿದ ಮಾತುಗಳಲ್ಲಿ ಏನನ್ನಾದರೂ ಮುಚ್ಚಿಟ್ಟರೆ ಆತನು ನಿನ್ನನ್ನು ಶಿಕ್ಷಿಸುತ್ತಾನೆ” ಎಂದು ತಿಳಿಸಿದನು.
18 ಸಮುವೇಲನು ಏನನ್ನೂ ಮುಚ್ಚಿಡದೆ, ಎಲ್ಲವನ್ನೂ ಏಲಿಗೆ ತಿಳಿಸಿದನು.
ಏಲಿಯು, “ಆತನು ಯೆಹೋವ. ಆತನು ತನಗೆ ಸರಿಕಾಣುವದನ್ನೇ ಮಾಡಲಿ” ಎಂದು ಹೇಳಿದನು.
19 ಯೆಹೋವನು ಸಮುವೇಲನ ಸಂಗಡವಿದ್ದನು; ಸಮುವೇಲನು ಬೆಳೆದು ದೊಡ್ಡವನಾದನು; ಸಮುವೇಲನ ಯಾವ ಸಂದೇಶವೂ ಸುಳ್ಳಾಗದಂತೆ ಯೆಹೋವನು ನೋಡಿಕೊಂಡನು. 20 ಸಮುವೇಲನು ಯೆಹೋವನ ನಿಜಪ್ರವಾದಿಯೆಂಬುದು ದಾನಿನಿಂದ ಬೇರ್ಷೆಬದವರೆಗಿದ್ದ ಎಲ್ಲಾ ಇಸ್ರೇಲರಿಗೂ ಆಗ ತಿಳಿದು ಬಂದಿತು. 21 ಯೆಹೋವನು ಶೀಲೋವಿನಲ್ಲಿ ಸಮುವೇಲನಿಗೆ ದರ್ಶನ ಕೊಡುವುದನ್ನು ಮುಂದುವರಿಸಿದನು. ಯೆಹೋವನು ಸಮುವೇಲನಿಗೆ ತನ್ನ ವಾಕ್ಯದ ಮೂಲಕ ತನ್ನನ್ನು ಪ್ರಕಟಿಸಿಕೊಂಡನು.
ದೆವ್ವಗಳಿಂದ ಪೀಡಿತನಾಗಿದ್ದ ಮನುಷ್ಯ
(ಮತ್ತಾಯ 8:28-34; ಮಾರ್ಕ 5:1-20)
26 ಯೇಸು ಮತ್ತು ಆತನ ಶಿಷ್ಯರು ಗಲಿಲಾಯದಿಂದ ಸರೋವರವನ್ನು ದಾಟಿ, ಗೆರೆಸೇನರ ನಾಡಿಗೆ ಪ್ರಯಾಣ ಮಾಡಿದರು. 27 ಯೇಸು ದೋಣಿಯಿಂದ ಇಳಿದಾಗ, ಆ ಪಟ್ಟಣದ ಮನುಷ್ಯನೊಬ್ಬನು ಯೇಸುವಿನ ಬಳಿಗೆ ಬಂದನು. ಈ ಮನುಷ್ಯನಿಗೆ ದೆವ್ವ ಹಿಡಿದಿತ್ತು. ಬಹಳ ಕಾಲದಿಂದ ಅವನು ಬಟ್ಟೆಯನ್ನೇ ಹಾಕಿಕೊಂಡಿರಲಿಲ್ಲ. ಅವನು ಸಮಾಧಿಯ ಗವಿಗಳಲ್ಲಿ ವಾಸಿಸುತ್ತಿದ್ದನು.
28-29 ದೆವ್ವವು ಅವನನ್ನು ಪದೇಪದೇ ವಶಪಡಿಸಿಕೊಳ್ಳುತ್ತಿತ್ತು. ಆ ಮನುಷ್ಯನನ್ನು ಸೆರೆಮನೆಗೆ ಹಾಕಿ ಕೈಕಾಲುಗಳನ್ನು ಸರಪಣಿಗಳಿಂದ ಕಟ್ಟಿದರೂ ಅವನು ಅವುಗಳನ್ನು ಕಿತ್ತೊಗೆದುಬಿಡುತ್ತಿದ್ದನು. ಅವನೊಳಗಿದ್ದ ದೆವ್ವವು ಅವನನ್ನು ಜನರಿಲ್ಲದ ಸ್ಥಳಗಳಿಗೆ ಬಲವಂತವಾಗಿ ಕೊಂಡೊಯ್ಯುತ್ತಿತ್ತು. ಯೇಸು ಆ ದೆವ್ವಕ್ಕೆ, “ಅವನನ್ನು ಬಿಟ್ಟು ಹೋಗು” ಎಂದು ಆಜ್ಞಾಪಿಸಿದನು. ಆ ಮನುಷ್ಯನು ಯೇಸುವಿನ ಮುಂದೆ ಅಡ್ಡಬಿದ್ದು ಗಟ್ಟಿಯಾದ ಸ್ವರದಿಂದ, “ಯೇಸುವೇ, ಮಹೋನ್ನತನಾದ ದೇವರ ಮಗನೇ, ನನ್ನಿಂದ ನಿನಗೇನಾಗಬೇಕಾಗಿದೆ? ದಯಮಾಡಿ ನನ್ನನ್ನು ದಂಡಿಸಬೇಡ!” ಎಂದು ಕೂಗಿದನು.
30 “ನಿನ್ನ ಹೆಸರೇನು?” ಎಂದು ಯೇಸು ಕೇಳಿದನು.
“ದಂಡು” ಎಂದು ಅವನು ಉತ್ತರಿಸಿದನು. (ಏಕೆಂದರೆ ಅವನೊಳಗೆ ಅನೇಕ ದೆವ್ವಗಳು ಸೇರಿಕೊಂಡಿದ್ದವು.) 31 ತಮ್ಮನ್ನು ಪಾತಾಳಕ್ಕೆ ಕಳುಹಿಸಕೂಡದೆಂದು ಆ ದೆವ್ವಗಳು ಯೇಸುವನ್ನು ಬೇಡಿಕೊಂಡವು. 32 ಅಲ್ಲಿದ್ದ ಒಂದು ಗುಡ್ಡದ ಮೇಲೆ ಹಂದಿಗಳ ಒಂದು ದೊಡ್ಡ ಗುಂಪು ಮೇಯುತ್ತಿತ್ತು. ಹಂದಿಗಳೊಳಗೆ ಹೋಗಲು ತಮಗೆ ಅನುಮತಿ ಕೊಡಬೇಕೆಂದು ಆ ದೆವ್ವಗಳು ಯೇಸುವನ್ನು ಬೇಡಿಕೊಂಡವು. ಯೇಸು ಅವುಗಳಿಗೆ ಅನುಮತಿಕೊಟ್ಟನು. 33 ಆಗ ದೆವ್ವಗಳು ಆ ಮನುಷ್ಯನಿಂದ ಹೊರಬಂದು ಹಂದಿಗಳೊಳಗೆ ಸೇರಿಕೊಂಡವು. ಆ ಕೂಡಲೇ ಹಂದಿಗಳ ಗುಂಪು ಗುಡ್ಡದ ಕೆಳಗೆ ಓಡಿಹೋಗಿ ಸರೋವರದಲ್ಲಿ ಬಿದ್ದು ಮುಳುಗಿಹೋದವು.
34 ಹಂದಿಗಳನ್ನು ಕಾಯುತ್ತಿದ್ದವರು ಓಡಿಹೋಗಿ, ನಡೆದ ಈ ಸಂಗತಿಯನ್ನು ಹೊಲಗಳಲ್ಲಿಯೂ ಊರುಗಳಲ್ಲಿಯೂ ಇದ್ದ ಜನರಿಗೆ ತಿಳಿಸಿದರು. 35 ಅದನ್ನು ನೋಡಲು ಜನರೆಲ್ಲರೂ ಯೇಸುವಿದ್ದಲ್ಲಿಗೆ ಬಂದರು. ಆ ಮನುಷ್ಯನು ಯೇಸುವಿನ ಪಾದಗಳ ಬಳಿಯಲ್ಲಿ ಕುಳಿತಿದ್ದುದನ್ನು ಅವರು ನೋಡಿದರು. ಅವನು ಬಟ್ಟೆಗಳನ್ನು ಹಾಕಿಕೊಂಡಿದ್ದನು; ಸ್ವಸ್ಥಬುದ್ಧಿಯುಳ್ಳವನಾಗಿದ್ದನು. ದೆವ್ವಗಳು ಅವನನ್ನು ಬಿಟ್ಟುಹೋಗಿದ್ದವು. ಜನರಿಗೆ ಭಯವಾಯಿತು. 36 ಯೇಸು ಆ ಮನುಷ್ಯನನ್ನು ಗುಣಪಡಿಸಿದ ರೀತಿಯನ್ನು ನೋಡಿದ್ದವರು ಆತನನ್ನು ನೋಡಲು ಬಂದ ಜನರೆಲ್ಲರಿಗೂ ಆ ಘಟನೆಯನ್ನು ವಿವರಿಸಿ ಹೇಳಿದರು. 37 ಜನರು ಯೇಸುವಿಗೆ, “ನೀನು ಇಲ್ಲಿಂದ ಹೊರಟುಹೋಗು” ಎಂದು ಕೇಳಿಕೊಂಡರು. ಏಕೆಂದರೆ ಅವರು ಬಹಳ ಭಯಗೊಂಡಿದ್ದರು.
ಆದ್ದರಿಂದ ಯೇಸು ದೋಣಿಯನ್ನು ಹತ್ತಿ ಮತ್ತೆ ಗಲಿಲಾಯಕ್ಕೆ ಹಿಂತಿರುಗಿದನು. 38 ದೆವ್ವಗಳಿಂದ ಬಿಡುಗಡೆಯಾಗಿದ್ದವನು, “ನನ್ನನ್ನು ನಿನ್ನ ಜೊತೆಯಲ್ಲೇ ಕರೆದುಕೊಂಡು ಹೋಗು,” ಎಂದು ಕೇಳಿಕೊಂಡನು. 39 ಅದಕ್ಕೆ ಯೇಸು, “ನಿನ್ನ ಮನೆಗೆ ಹಿಂತಿರುಗಿ ಹೋಗು. ದೇವರು ನಿನಗೆ ಮಾಡಿದ ಉಪಕಾರವನ್ನು ಜನರಿಗೆ ತಿಳಿಸು” ಎಂದು ಹೇಳಿ ಅವನನ್ನು ಕಳುಹಿಸಿದನು.
ಆದ್ದರಿಂದ ಆ ಮನುಷ್ಯನು ಅಲ್ಲಿಂದ ಹೊರಟುಹೋಗಿ ಯೇಸು ತನಗೆ ಮಾಡಿದ ಉಪಕಾರವನ್ನು ಊರಲ್ಲೆಲ್ಲಾ ತಿಳಿಸಿದನು.
ಸತ್ತುಹೋಗಿದ್ದ ಹುಡುಗಿಗೆ ಜೀವದಾನ ಮತ್ತು ಕಾಯಿಲೆಯ ಸ್ತ್ರೀಗೆ ಆರೋಗ್ಯದಾನ
(ಮತ್ತಾಯ 9:18-26; ಮಾರ್ಕ 5:21-43)
40 ಯೇಸು ಗಲಿಲಾಯಕ್ಕೆ ಹಿಂತಿರುಗಿದಾಗ ಜನರು ಆತನನ್ನು ಸ್ವಾಗತಿಸಿದರು. ಪ್ರತಿಯೊಬ್ಬರೂ ಆತನಿಗಾಗಿ ಕಾಯುತ್ತಿದ್ದರು. 41 ಯಾಯಿರನೆಂಬ ಒಬ್ಬ ಮನುಷ್ಯನು ಯೇಸುವಿನ ಬಳಿಗೆ ಬಂದನು. ಅವನು ಸಭಾಮಂದಿರದ ಅಧಿಕಾರಿಯಾಗಿದ್ದನು. ಅವನು ಯೇಸುವಿನ ಪಾದಗಳಿಗೆ ಅಡ್ಡಬಿದ್ದು ತನ್ನ ಮನೆಗೆ ಬರಬೇಕೆಂದು ಬೇಡಿಕೊಂಡನು. 42 ಅವನಿಗೆ ಒಬ್ಬಳೇ ಮಗಳಿದ್ದಳು. ಆಕೆಗೆ ಹನೆರಡು ವರ್ಷ ವಯಸ್ಸಾಗಿತ್ತು. ಆಕೆಯು ಸಾಯುವ ಸ್ಥಿತಿಯಲ್ಲಿದ್ದಳು.
ಯೇಸುವು ಯಾಯಿರನ ಮನೆಗೆ ಹೋಗುತ್ತಿದ್ದಾಗ ಜನರು ಆತನ ಸುತ್ತಲೂ ಸೇರಿಬಂದರು. 43 ಹನ್ನೆರಡು ವರ್ಷಗಳಿಂದ ರಕ್ತಸ್ರಾವವಾಗುತ್ತಿದ್ದ ಸ್ತ್ರೀಯೊಬ್ಬಳು ಅಲ್ಲಿದ್ದಳು. ಆಕೆ ತನ್ನಲ್ಲಿದ್ದ ಹಣವನ್ನೆಲ್ಲಾ ವೈದ್ಯರಿಗೆ ಖರ್ಚು ಮಾಡಿದ್ದಳು. ಆದರೆ ಯಾವ ವೈದ್ಯನಿಗೂ ಆಕೆಯನ್ನು ವಾಸಿಮಾಡಲು ಸಾಧ್ಯವಾಗಿರಲಿಲ್ಲ. 44 ಆ ಸ್ತ್ರೀಯು ಯೇಸುವಿನ ಹಿಂದೆ ಬಂದು ಆತನ ನಿಲುವಂಗಿಯ ಕೆಳಭಾಗವನ್ನು ಮುಟ್ಟಿದಳು. ಆ ಕ್ಷಣವೇ ಆಕೆಯ ರಕ್ತಸ್ರಾವ ನಿಂತುಹೋಯಿತು. 45 ಆಗ ಯೇಸು, “ನನ್ನನ್ನು ಮುಟ್ಟಿದವರು ಯಾರು?” ಎಂದು ಕೇಳಿದನು.
ಜನರೆಲ್ಲರೂ ತಾವು ಮುಟ್ಟಲಿಲ್ಲವೆಂದು ಹೇಳುತ್ತಿರಲು ಪೇತ್ರನು, “ಗುರುವೇ, ಇಷ್ಟೊಂದು ಜನರು ಮೇಲೆ ಬೀಳುತ್ತಾ ನಿನ್ನನ್ನು ನೂಕುತ್ತಿದ್ದಾರಲ್ಲಾ” ಎಂದನು.
46 ಅದಕ್ಕೆ ಯೇಸು, “ಯಾರೋ ಒಬ್ಬರು ನನ್ನನ್ನು ಮುಟ್ಟಿದರು! ನನ್ನಿಂದ ಶಕ್ತಿ ಹೊರಟದ್ದು ನನಗೆ ತಿಳಿಯಿತು” ಎಂದು ಹೇಳಿದನು. 47 ಇನ್ನು ತಾನು ಅಡಗಿಕೊಂಡಿರಲು ಸಾಧ್ಯವಿಲ್ಲವೆಂದು ತಿಳಿದುಕೊಂಡ ಆ ಸ್ತ್ರೀಯು ನಡುಗುತ್ತಾ ಆತನ ಮುಂದೆ ಬಂದು ಅಡ್ಡಬಿದ್ದು ತಾನು ಮುಟ್ಟಿದ್ದಕ್ಕೆ ಕಾರಣವನ್ನು ಎಲ್ಲರ ಎದುರಿನಲ್ಲಿ ತಿಳಿಸಿದಳು. ಅಲ್ಲದೆ ಆತನನ್ನು ಮುಟ್ಟಿದಾಕ್ಷಣವೇ ತನಗೆ ವಾಸಿಯಾಯಿತೆಂದು ಹೇಳಿದಳು. 48 ಯೇಸು ಆಕೆಗೆ, “ಮಗಳೇ, ನೀನು ನಂಬಿದ್ದರಿಂದ ನಿನಗೆ ಸ್ವಸ್ಥವಾಯಿತು. ಸಮಾಧಾನದಿಂದ ಹೋಗು” ಎಂದು ಹೇಳಿದನು.
49 ಯೇಸು ಇನ್ನೂ ಮಾತನಾಡುತ್ತಿದ್ದಾಗ ಸಭಾಮಂದಿರದ ಅಧಿಕಾರಿಯ (ಯಾಯಿರನ) ಮನೆಯಿಂದ ಒಬ್ಬ ವ್ಯಕ್ತಿ ಬಂದು, “ನಿನ್ನ ಮಗಳು ಸತ್ತುಹೋದಳು! ಈಗ ಬೋಧಕನಿಗೆ (ಯೇಸುವಿಗೆ) ತೊಂದರೆ ಕೊಡಬೇಡ” ಎಂದು ಹೇಳಿದನು.
50 ಯೇಸು ಇದನ್ನು ಕೇಳಿ ಯಾಯಿರನಿಗೆ, “ಭಯಪಡಬೇಡ. ನಂಬಿಕೆಯೊಂದಿರಲಿ. ನಿನ್ನ ಮಗಳಿಗೆ ಗುಣವಾಗುವುದು” ಎಂದು ಹೇಳಿದನು.
51 ಯೇಸು ಯಾಯಿರನ ಮನೆಗೆ ಹೋದನು. ಪೇತ್ರ, ಯೋಹಾನ, ಯಾಕೋಬ ಮತ್ತು ಹುಡುಗಿಯ ತಂದೆತಾಯಿಗಳಿಗೆ ಮಾತ್ರ ತನ್ನೊಂದಿಗೆ ಬರಲು ಅನುಮತಿಕೊಟ್ಟನು. ಬೇರೆ ಯಾರೂ ಒಳಗೆ ಬರಕೂಡದೆಂದು ಯೇಸು ತಿಳಿಸಿದನು. 52 ಸತ್ತುಹೋದ ಆ ಬಾಲಕಿಗಾಗಿ ಜನರೆಲ್ಲರೂ ದುಃಖದಿಂದ ಗೋಳಾಡುತ್ತಿದ್ದರು. ಆದರೆ ಯೇಸು ಅವರಿಗೆ, “ಅಳಬೇಡಿ, ಆಕೆ ಸತ್ತಿಲ್ಲ; ನಿದ್ರಿಸುತ್ತಿದ್ದಾಳೆ” ಎಂದನು.
53 ಆಗ ಜನರು ಯೇಸುವನ್ನು ಗೇಲಿಮಾಡಿದರು. ಏಕೆಂದರೆ ಆ ಹುಡುಗಿ ಸತ್ತುಹೋದಳೆಂದು ಅವರಿಗೆ ಖಂಡಿತವಾಗಿ ತಿಳಿದಿತ್ತು. 54 ಆದರೆ ಯೇಸು ಆಕೆಯ ಕೈಯನ್ನು ಹಿಡಿದು, “ಮಗು, ಎದ್ದೇಳು!” ಎಂದನು. 55 ಆ ಕೂಡಲೇ ಆಕೆಗೆ ಜೀವ ಬಂದಿತು. ಆಕೆ ಎದ್ದುನಿಂತುಕೊಂಡಳು. ಯೇಸು ಅವರಿಗೆ, “ಆಕೆಗೆ ತಿನ್ನಲು ಏನಾದರೂ ಕೊಡಿರಿ” ಎಂದು ಹೇಳಿದನು. 56 ಬಾಲಕಿಯ ತಂದೆತಾಯಿಗಳು ಬೆರಗಾದರು. ಈ ಘಟನೆಯ ಬಗ್ಗೆ ಯಾರಿಗೂ ತಿಳಿಸಬಾರದೆಂದು ಯೇಸು ಅವರಿಗೆ ಆಜ್ಞಾಪಿಸಿದನು.
Kannada Holy Bible: Easy-to-Read Version. All rights reserved. © 1997 Bible League International