Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ನ್ಯಾಯಸ್ಥಾಪಕರು 13-15

ಸಂಸೋನನ ಜನನ

13 ಇಸ್ರೇಲರು ಮತ್ತೆ ಯೆಹೋವನಿಗೆ ವಿರೋಧವಾಗಿ ದುಷ್ಕೃತ್ಯಗಳನ್ನು ಮಾಡಿದರು. ಆದ್ದರಿಂದ ಫಿಲಿಷ್ಟಿಯರು ನಲವತ್ತು ವರ್ಷ ಅವರನ್ನು ಆಳುವಂತೆ ಯೆಹೋವನು ಮಾಡಿದನು.

ಚೊರ್ಗಾ ನಗರದಲ್ಲಿ ಒಬ್ಬ ಮನುಷ್ಯನಿದ್ದನು. ಅವನ ಹೆಸರು ಮಾನೋಹ, ಅವನು ದಾನ್ ಕುಲದವನಾಗಿದ್ದನು. ಮಾನೋಹನಿಗೆ ಒಬ್ಬ ಹೆಂಡತಿಯಿದ್ದಳು. ಆದರೆ ಅವಳು ಬಂಜೆಯಾಗಿದ್ದಳು. ಒಮ್ಮೆ ಯೆಹೋವನ ದೂತನು ಮಾನೋಹನ ಹೆಂಡತಿಗೆ ಪ್ರತ್ಯಕ್ಷನಾಗಿ, “ನೀನು ಮಕ್ಕಳನ್ನು ಪಡೆಯಲು ಸಾಧ್ಯವಾಗಿಲ್ಲ; ಆದರೆ ನೀನು ಗರ್ಭವತಿಯಾಗಿ ಒಬ್ಬ ಮಗನನ್ನು ಹೆರುವೆ. ದ್ರಾಕ್ಷಾರಸವನ್ನಾಗಲಿ ಬೇರೆ ಯಾವ ಮದ್ಯವನ್ನಾಗಲಿ ಕುಡಿಯಬೇಡ; ಯಾವ ನಿಷಿದ್ಧ ಪದಾರ್ಥವನ್ನೂ ಊಟಮಾಡಬೇಡ. ಏಕೆಂದರೆ ನೀನು ಗರ್ಭವತಿಯಾಗಿರುವೆ ಮತ್ತು ನಿನಗೊಬ್ಬ ಮಗನು ಹುಟ್ಟಲಿದ್ದಾನೆ. ಅವನು ಹುಟ್ಟಿದಂದಿನಿಂದಲೇ ದೇವರಿಗೆ ಪ್ರತಿಷ್ಠಿತನಾಗಿದ್ದಾನೆ. ಆದ್ದರಿಂದ ಅವನ ಕೂದಲನ್ನು ಕತ್ತರಿಸಕೂಡದು. ಅವನು ಇಸ್ರೇಲರನ್ನು ಫಿಲಿಷ್ಟಿಯರ ಹಿಡಿತದಿಂದ ಬಿಡಿಸುವನು” ಎಂದು ಹೇಳಿದನು.

ಆಗ ಆ ಸ್ತ್ರೀಯು ತನ್ನ ಗಂಡನ ಬಳಿಗೆ ಹೋಗಿ, “ಒಬ್ಬ ದೇವಪುರುಷನು ನನ್ನಲ್ಲಿಗೆ ಬಂದನು. ಅವನು ದೇವರಿಂದ ಬಂದ ದೇವದೂತನಂತೆ ಕಂಡನು. ನನಗೆ ಭಯವಾಯಿತು. ನಾನು ಅವನಿಗೆ, ‘ನೀನು ಎಲ್ಲಿಂದ ಬಂದೆ?’ ಎಂದು ಕೇಳಲಿಲ್ಲ; ಅವನೂ ನನಗೆ ತನ್ನ ಹೆಸರನ್ನು ಹೇಳಲಿಲ್ಲ. ಆದರೆ ಅವನು ನನಗೆ, ‘ನೀನು ಗರ್ಭವತಿಯಾಗಿರುವೆ; ನಿನಗೊಬ್ಬ ಮಗನು ಹುಟ್ಟುತ್ತಾನೆ. ನೀನು ದ್ರಾಕ್ಷಾರಸವನ್ನಾಗಲಿ ಬೇರೆ ಯಾವ ಮದ್ಯವನ್ನಾಗಲಿ ಕುಡಿಯಬೇಡ. ಯಾವ ನಿಷಿದ್ಧ ಆಹಾರವನ್ನೂ ತಿನ್ನಬೇಡ. ಏಕೆಂದರೆ ಆ ಹುಡುಗನು ಹುಟ್ಟಿದಂದಿನಿಂದ ಸಾಯುವವರೆಗೂ ದೇವರಿಗೆ ಪ್ರತಿಷ್ಠಿತನಾಗಿರುವನು ಎಂದು ಹೇಳಿದನು’” ಅಂದಳು.

ಆಗ ಮಾನೋಹನು ಯೆಹೋವನಿಗೆ, “ಸ್ವಾಮೀ, ಆ ದೇವಪುರುಷನನ್ನು ನಮ್ಮಲ್ಲಿಗೆ ಇನ್ನೊಮ್ಮೆ ದಯವಿಟ್ಟು ಕಳುಹಿಸೆಂದು ಬೇಡಿಕೊಳ್ಳುತ್ತೇವೆ. ಹುಟ್ಟಿಲಿರುವ ಮಗನಿಗಾಗಿ ನಾವು ಮಾಡಬೇಕಾದದ್ದನ್ನು ಅವನು ನಮಗೆ ತಿಳಿಸಲಿ” ಎಂದು ಬೇಡಿಕೊಂಡನು.

ದೇವರು ಮಾನೋಹನ ಪ್ರಾರ್ಥನೆಯನ್ನು ಕೇಳಿದನು. ದೇವದೂತನು ಮತ್ತೊಮ್ಮೆ ಆ ಸ್ತ್ರೀಯ ಬಳಿಗೆ ಬಂದನು. ಆಗ ಅವಳು ಹೊಲದಲ್ಲಿ ಕುಳಿತಿದ್ದಳು; ಅವಳ ಗಂಡ ಅಲ್ಲಿರಲಿಲ್ಲ. 10 ಆ ಸ್ತ್ರೀಯು ಓಡಿಹೋಗಿ ತನ್ನ ಗಂಡನಿಗೆ, “ಆ ಮನುಷ್ಯನು ತಿರುಗಿ ಬಂದಿದ್ದಾನೆ, ಆ ದಿನ ನನ್ನಲ್ಲಿಗೆ ಬಂದ ಮನುಷ್ಯನು ಈಗ ಇಲ್ಲಿದ್ದಾನೆ” ಅಂದಳು.

11 ಮಾನೋಹನು ಎದ್ದು ತನ್ನ ಹೆಂಡತಿಯನ್ನು ಹಿಂಬಾಲಿಸಿದನು. ಅವನು ಆ ಮನುಷ್ಯನ ಹತ್ತಿರ ಬಂದಾಗ, “ನನ್ನ ಹೆಂಡತಿಯ ಜೊತೆಗೆ ಹಿಂದೆ ಮಾತನಾಡಿದ ಮನುಷ್ಯನು ನೀನೋ?” ಎಂದು ಕೇಳಿದನು.

ಆ ದೇವದೂತನು, “ಹೌದು, ನಾನೇ” ಅಂದನು.

12 ಮಾನೋಹನು, “ನೀನು ಹೇಳಿದ್ದು ನೆರವೇರುವುದೆಂದು ನಾನು ನಂಬುತ್ತೇನೆ. ಆ ಮಗುವಿಗೋಸ್ಕರ ನಾವು ಮಾಡತಕ್ಕದ್ದೇನು? ಅವನನ್ನು ಹೇಗೆ ನಡಿಸತಕ್ಕದ್ದು” ಎಂದು ಕೇಳಿದನು.

13 ಯೆಹೋವನ ದೂತನು ಮಾನೋಹನಿಗೆ, “ನಿನ್ನ ಹೆಂಡತಿಯು ನಾನು ಹೇಳಿದ್ದೆಲ್ಲವನ್ನು ಮಾಡಬೇಕು. ಅವಳು ದ್ರಾಕ್ಷಾಫಲಗಳನ್ನು ತಿನ್ನಬಾರದು; ದ್ರಾಕ್ಷಾರಸವನ್ನಾಗಲಿ ಬೇರೆ ಯಾವ ಮದ್ಯವನ್ನಾಗಲಿ ಕುಡಿಯಬಾರದು. 14 ಅವಳು ನಿಷಿದ್ಧವಾದ ಯಾವ ಆಹಾರವನ್ನೂ ತಿನ್ನಬಾರದು. ಹೀಗೆ ನಾನು ಅವಳಿಗೆ ಆಜ್ಞಾಪಿಸಿದ್ದನ್ನೆಲ್ಲಾ ಮಾಡಬೇಕು” ಎಂದು ಹೇಳಿದನು.

15 ಆಗ ಮಾನೋಹನು ಯೆಹೋವನ ದೂತನಿಗೆ, “ನೀನು ಸ್ವಲ್ಪಹೊತ್ತು ಇಲ್ಲಿಯೇ ಇರಬೇಕೆಂಬುದು ನಮ್ಮ ಇಚ್ಛೆ. ನಾವು ನಿನ್ನ ಊಟಕ್ಕಾಗಿ ಒಂದು ಮರಿಹೋತವನ್ನು ಬೇಯಿಸಿ ಬಡಿಸುತ್ತೇವೆ” ಎಂದನು.

16 ಆಗ ಯೆಹೋವನ ದೂತನು ಮಾನೋಹನಿಗೆ, “ನೀನು ನನ್ನನ್ನು ಹೋಗದಂತೆ ನಿಲ್ಲಿಸಿಕೊಂಡರೂ ಸಹ ನಾನು ನಿಮ್ಮ ಆಹಾರವನ್ನು ಊಟ ಮಾಡುವುದಿಲ್ಲ. ಏನಾದರೂ ಕೊಡಬೇಕೆಂದು ನಿನಗೆ ಮನಸ್ಸಿದ್ದರೆ ಅದನ್ನು ಯೆಹೋವನಿಗೆ ಸರ್ವಾಂಗಹೋಮವಾಗಿ ಸಮರ್ಪಿಸು” ಅಂದನು. (ಅವನು ಯೆಹೋವನ ದೂತನೆಂಬುದು ಮಾನೋಹನಿಗೆ ಗೊತ್ತಿರಲಿಲ್ಲ.)

17 ಆದ್ದರಿಂದ ಮಾನೋಹನು ಯೆಹೋವನ ದೂತನಿಗೆ, “ನೀನು ಹೇಳಿದ್ದು ನೆರವೇರಿದಾಗ ನಿನ್ನನ್ನು ಸನ್ಮಾನಿಸಬೇಕೆಂದಿರುತ್ತೇವೆ. ನಿನ್ನ ಹೆಸರೇನು?” ಎಂದು ಕೇಳಿದನು.

18 ಯೆಹೋವನ ದೂತನು, “ನೀನು ನನ್ನ ಹೆಸರನ್ನು ಏಕೆ ಕೇಳುವೆ? ಅದು ನೀನು ನಂಬಲಾರದಷ್ಟು ಆಶ್ಚರ್ಯಕರವಾದದ್ದು” ಅಂದನು.

19 ಮಾನೋಹನು ಒಂದು ಮರಿಹೋತವನ್ನೂ ಧಾನ್ಯದ್ರವ್ಯವನ್ನೂ ತಂದು ಬಂಡೆಯ ಮೇಲಿಟ್ಟು ಯೆಹೋವನಿಗೆ ಸಮರ್ಪಿಸಿದನು. 20 ಮಾನೋಹ ಮತ್ತು ಅವನ ಹೆಂಡತಿಯ ಕಣ್ಣೆದುರಿನಲ್ಲಿಯೇ ಯಜ್ಞವೇದಿಕೆಯಿಂದ ಆಕಾಶಕ್ಕೆ ಹೋಗುತ್ತಿರುವ ಅಗ್ನಿಜ್ವಾಲೆಯಲ್ಲಿ ಆ ಯೆಹೋವನ ದೂತನು ಆಕಾಶಕ್ಕೆ ಏರಿ ಹೋದನು.

ಮಾನೋಹ ಮತ್ತು ಅವನ ಹೆಂಡತಿ ಅದನ್ನು ಕಂಡು ನೆಲದ ಮೇಲೆ ಅಡ್ಡಬಿದ್ದರು. 21 ಆ ಮನುಷ್ಯನು ನಿಜವಾಗಿಯೂ ಯೆಹೋವನ ದೂತನೆಂದು ಕೊನೆಗೆ ಮಾನೋಹನು ಅರಿತುಕೊಂಡನು. ಯೆಹೋವನ ದೂತನು ಅವರಿಗೆ ಪುನಃ ಕಾಣಿಸಲಿಲ್ಲ. 22 ನಂತರ ಮಾನೋಹನು ತನ್ನ ಹೆಂಡತಿಗೆ, “ನಾವು ದೇವರನ್ನು ಕಣ್ಣಾರೆ ಕಂಡೆವು, ಆದ್ದರಿಂದ ಖಂಡಿತವಾಗಿ ನಾವು ಸತ್ತುಹೋಗುತ್ತೇವೆ” ಅಂದನು.

23 ಆದರೆ ಅವನ ಹೆಂಡತಿಯು ಅವನಿಗೆ, “ಯೆಹೋವನು ನಮ್ಮನ್ನು ಕೊಲ್ಲಬಯಸುವುದಿಲ್ಲ. ಯೆಹೋವನು ನಮ್ಮನ್ನು ಕೊಲ್ಲಬೇಕೆಂದಿದ್ದರೆ ಆತನು ನಮ್ಮ ಕೈಯಿಂದ ಸರ್ವಾಂಗಹೋಮವನ್ನೂ ಧಾನ್ಯಸಮರ್ಪಣೆಯನ್ನೂ ಸ್ವೀಕರಿಸುತ್ತಿರಲಿಲ್ಲ; ಆತನು ಇವುಗಳನ್ನೆಲ್ಲಾ ನಮಗೆ ತೋರಿಸುತ್ತಿರಲಿಲ್ಲ; ಇದನ್ನೆಲ್ಲ ನಮಗೆ ಹೇಳುತ್ತಿರಲಿಲ್ಲ” ಅಂದಳು.

24 ಆ ಸ್ತ್ರೀಗೆ ಒಂದು ಗಂಡುಮಗು ಜನಿಸಿತು. ಅವಳು ಅದಕ್ಕೆ ಸಂಸೋನ ಎಂದು ಹೆಸರಿಟ್ಟಳು. ಸಂಸೋನನು ಬೆಳೆದು ದೊಡ್ಡವನಾದನು. ಯೆಹೋವನು ಅವನನ್ನು ಆಶೀರ್ವದಿಸಿದನು. 25 ಅವನು ಮಾಹಾನೆಹದಾನ ನಗರದಲ್ಲಿದ್ದಾಗ ಯೆಹೋವನ ಆತ್ಮವು ಸಂಸೋನನನ್ನು ಪ್ರೇರೇಪಿಸತೊಡಗಿತು. ಈ ನಗರವು ಚೊರ್ಗ ಮತ್ತು ಎಷ್ಟಾವೋಲ್ ನಗರಗಳ ಮಧ್ಯದಲ್ಲಿದೆ.

ಸಂಸೋನನ ಮದುವೆ

14 ಸಂಸೋನನು ತಿಮ್ನಾ ನಗರಕ್ಕೆ ಹೋದನು. ಅವನು ಅಲ್ಲಿ ಒಬ್ಬ ಫಿಲಿಷ್ಟಿಯರ ತರುಣಿಯನ್ನು ನೋಡಿದನು. ಅವನು ಮನೆಗೆ ಹಿಂದಿರುಗಿ ತನ್ನ ತಂದೆತಾಯಿಗಳಿಗೆ, “ನಾನು ತಿಮ್ನಾ ನಗರದಲ್ಲಿ ಒಬ್ಬ ಫಿಲಿಷ್ಟಿಯರ ಸ್ತ್ರೀಯನ್ನು ನೋಡಿದ್ದೇನೆ. ನೀವು ಅವಳನ್ನು ನನಗೆ ಮದುವೆ ಮಾಡಿಸಿಕೊಡಿ” ಎಂದು ಕೇಳಿದನು.

ಅವನ ತಂದೆತಾಯಿಗಳು, “ಇಸ್ರೇಲರಲ್ಲಿಯೇ ಒಬ್ಬ ಸ್ತ್ರೀ ಇದ್ದಾಳೆ. ನೀನು ಅವಳನ್ನು ಮದುವೆಯಾಗು. ನೀನು ಫಿಲಿಷ್ಟಯರ ಹೆಣ್ಣನ್ನು ಮದುವೆಯಾಗುವುದೇಕೆ? ಅವರು ಸುನ್ನತಿಯನ್ನು ಮಾಡಿಸಿಕೊಂಡವರಲ್ಲ” ಎಂದರು.

ಆದರೆ ಸಂಸೋನನು, “ನನಗೆ ಆಕೆಯೊಡನೇ ಮದುವೆಮಾಡಿಸಿ. ನಾನು ಆಕೆಯನ್ನೇ ಮೆಚ್ಚಿಕೊಂಡಿದ್ದೇನೆ” ಎಂದನು. ಇದು ಯೆಹೋವನ ಚಿತ್ತವೆಂಬುದು ಸಂಸೋನನ ತಂದೆತಾಯಿಗಳಿಗೆ ತಿಳಿದಿರಲಿಲ್ಲ. ಫಿಲಿಷ್ಟಿಯರಿಗೆ ಕೇಡುಮಾಡಲು ಯೆಹೋವನು ತಕ್ಕಮಾರ್ಗವನ್ನು ಹುಡುಕುತ್ತಿದ್ದನು. ಆ ಸಮಯದಲ್ಲಿ ಫಿಲಿಷ್ಟಿಯರು ಇಸ್ರೇಲರ ಮೇಲೆ ಆಳ್ವಿಕೆ ಮಾಡುತ್ತಿದ್ದರು.

ಸಂಸೋನನು ತನ್ನ ತಂದೆತಾಯಿಗಳೊಂದಿಗೆ ತಿಮ್ನಾ ನಗರಕ್ಕೆ ಹೋದನು. ಅವರು ನಗರದ ಸಮೀಪದ ದ್ರಾಕ್ಷಿತೋಟಗಳವರೆಗೆ ಹೋದರು. ಅಲ್ಲಿ ಹಠಾತ್ತಾಗಿ ಒಂದು ಪ್ರಾಯದ ಸಿಂಹವು ಘರ್ಜಿಸಿ ಸಂಸೋನನ ಮೇಲೆರಗಿತು. ಯೆಹೋವನ ಆತ್ಮವು ಸಂಸೋನನ ಮೇಲೆ ಪ್ರಬಲವಾಗಿ ಬಂದುದರಿಂದ ಅವನು ಬರಿಗೈಯಿಂದಲೇ ಹೋತದ ಮರಿಯನ್ನೋ ಎಂಬಂತೆ ಅದನ್ನು ಎರಡು ಹೋಳಾಗಿ ಸೀಳಿಬಿಟ್ಟನು. ಆದರೆ ಸಂಸೋನನು ಇದನ್ನು ತನ್ನ ತಂದೆತಾಯಿಗಳಿಗೆ ಹೇಳಲಿಲ್ಲ.

ಸಂಸೋನನು ನಗರಕ್ಕೆ ಹೋಗಿ ಆ ಫಿಲಿಷ್ಟಿಯ ಸ್ತ್ರೀಯೊಂದಿಗೆ ಮಾತನಾಡಿ ಅವಳನ್ನು ಇಷ್ಟಪಟ್ಟನು. ಕೆಲವು ದಿನಗಳಾದ ಮೇಲೆ ಸಂಸೋನನು ಆ ಫಿಲಿಷ್ಟಿಯ ಸ್ತ್ರೀಯನ್ನು ಮದುವೆಯಾಗುವುದಕ್ಕೋಸ್ಕರ ತಿರುಗಿ ಹೋಗುತ್ತಿದ್ದನು. ದಾರಿಯಲ್ಲಿ ಅವನು ಆ ಸತ್ತಸಿಂಹವನ್ನು ನೋಡುವುದಕ್ಕೆ ಹೋದನು. ಅವನು ಆ ಸತ್ತಸಿಂಹದ ದೇಹದಲ್ಲಿ ಒಂದು ಜೇನುಗೂಡನ್ನು ಕಂಡನು. ಅದರಲ್ಲಿ ಜೇನುತುಪ್ಪವಿತ್ತು. ಸಂಸೋನನು ತನ್ನ ಕೈಯಿಂದ ಸ್ವಲ್ಪ ಜೇನುತುಪ್ಪವನ್ನು ತೆಗೆದುಕೊಂಡು ಅದನ್ನು ತಿನ್ನುತ್ತಾ ನಡೆದನು. ತಂದೆತಾಯಿಗಳ ಹತ್ತಿರ ಬಂದು ಅವರಿಗೆ ಸ್ವಲ್ಪ ಜೇನುತುಪ್ಪವನ್ನು ಕೊಟ್ಟನು. ಅವರೂ ತಿಂದರು. ಆದರೆ ಆ ಸತ್ತಸಿಂಹದ ದೇಹದಿಂದ ಜೇನುತುಪ್ಪವನ್ನು ತೆಗೆದುಕೊಂಡ ಸಂಗತಿಯನ್ನು ಸಂಸೋನನು ಅವರಿಗೆ ಹೇಳಲಿಲ್ಲ.

10 ಸಂಸೋನನ ತಂದೆಯು ಈ ಫಿಲಿಷ್ಟಿಯ ಸ್ತ್ರೀಯನ್ನು ನೋಡುವುದಕ್ಕೆಂದು ಹೋದನು. ಮದುವೆಯ ಗಂಡು ಒಂದು ಔತಣವನ್ನು ಕೊಡುವ ಪದ್ಧತಿ ಇತ್ತು. ಆದ್ದರಿಂದ ಸಂಸೋನನು ಒಂದು ಔತಣವನ್ನು ಏರ್ಪಡಿಸಿದನು. 11 ಅವನು ಔತಣದ ಏರ್ಪಾಟು ಮಾಡಿದ್ದನ್ನು ಕಂಡು ಫಿಲಿಷ್ಟಿಯರು ಅವನ ಸಂಗಡ ಇರುವುದಕ್ಕೆ ಮೂವತ್ತು ಜನರನ್ನು ಕಳುಹಿಸಿದರು.

12 ಆಗ ಸಂಸೋನನು ಆ ಮೂವತ್ತು ಜನರಿಗೆ, “ನಾನು ನಿಮಗೊಂದು ಒಗಟನ್ನು ಹೇಳಬಯಸುತ್ತೇನೆ. ಈ ಔತಣವು ಏಳು ದಿನ ಮುಂದುವರಿಯುತ್ತದೆ. ಈ ಅವಧಿಯಲ್ಲಿ ನೀವು ಉತ್ತರವನ್ನು ಹೇಳುವ ಪ್ರಯತ್ನ ಮಾಡಿರಿ. ನೀವು ಈ ಅವಧಿಯಲ್ಲಿ ಒಗಟುಗಳ ಅರ್ಥ ಹೇಳಿದರೆ ನಾನು ನಿಮಗೆ ಮೂವತ್ತು ನಾರುಬಟ್ಟೆಯ ಅಂಗಿಗಳನ್ನು ಮತ್ತು ಮೂವತ್ತು ವಿಶೇಷ ವಸ್ತ್ರಗಳನ್ನು ಕೊಡುತ್ತೇನೆ. 13 ಆದರೆ ಉತ್ತರ ಹೇಳಲು ನಿಮಗೆ ಸಾಧ್ಯವಾಗದಿದ್ದರೆ ನೀವು ನನಗೆ ಮೂವತ್ತು ನಾರುಬಟ್ಟೆಯ ಅಂಗಿಗಳನ್ನು ಮತ್ತು ಮೂವತ್ತು ವಿಶೇಷ ವಸ್ತ್ರಗಳನ್ನು ಕೊಡಬೇಕು” ಎಂದು ಹೇಳಿದನು. ಆ ಮೂವತ್ತು ಜನರು, “ನಮಗೆ ನಿನ್ನ ಒಗಟನ್ನು ಹೇಳು, ನಾವು ಅದನ್ನು ಕೇಳಬಯಸುತ್ತೇವೆ” ಎಂದರು.

14 ಸಂಸೋನನು ಅವರಿಗೆ ಈ ಒಗಟನ್ನು ಹೇಳಿದನು:

“ತಿಂದುಬಿಡುವಂಥದರಿಂದ ತಿನ್ನತಕ್ಕದ್ದು ದೊರಕಿತು.
    ಕ್ರೂರವಾದದ್ದರಿಂದ ಮಧುರವಾದದ್ದು ಸಿಕ್ಕಿತು.”

ಆ ಮೂವತ್ತು ಜನರು ಮೂರು ದಿನಗಳವರೆಗೆ ಒಗಟಿನ ಅರ್ಥವನ್ನು ಕಂಡುಹಿಡಿಯಲು ಪ್ರಯತ್ನ ಮಾಡಿದರು. ಆದರೆ ಅವರಿಂದ ಸಾಧ್ಯವಾಗಲಿಲ್ಲ.

15 ನಾಲ್ಕನೆಯ ದಿನ[a] ಅವರು ಸಂಸೋನನ ಹೆಂಡತಿಯಲ್ಲಿಗೆ ಬಂದು, “ನೀನು ನಮ್ಮನ್ನು ಬಡವರನ್ನಾಗಿ ಮಾಡಲು ಇಲ್ಲಿಗೆ ಕರೆದಿರುವಿಯಾ? ನೀನು ನಿನ್ನ ಗಂಡನನ್ನು ಮರುಳುಗೊಳಿಸಿ ನಮಗೆ ಒಗಟಿನ ಅರ್ಥವನ್ನು ಹೇಳುವಂತೆ ಮಾಡು. ನೀನು ನಮಗೆ ಒಗಟಿನ ಅರ್ಥವನ್ನು ಹೇಳದಿದ್ದರೆ ನಾವು ನಿನ್ನನ್ನು ಮತ್ತು ನಿನ್ನ ತಂದೆಯ ಮನೆಯಲ್ಲಿರುವ ಎಲ್ಲರನ್ನೂ ಸುಟ್ಟುಹಾಕುತ್ತೇವೆ” ಎಂದರು.

16 ಸಂಸೋನನ ಹೆಂಡತಿಯು ಅವನ ಹತ್ತಿರ ಹೋಗಿ ಅಳುವುದಕ್ಕೆ ಪ್ರಾರಂಭಿಸಿದಳು. ಅವಳು, “ನೀನು ನನ್ನನ್ನು ನಿಜವಾಗಿ ಪ್ರೀತಿಸುವುದಿಲ್ಲ, ನನ್ನನ್ನು ದ್ವೇಷಿಸುತ್ತಿ; ನೀನು ನಮ್ಮ ಜನರಿಗೆ ಒಗಟನ್ನು ಹೇಳಿರುವೆ; ಆದರೆ ಅದರ ಅರ್ಥವನ್ನು ನನಗೆ ಹೇಳಿಲ್ಲ” ಎಂದು ಗೋಳಾಡತೊಡಗಿದಳು.

ಅದಕ್ಕೆ ಸಂಸೋನನು, “ನಾನು ನನ್ನ ತಂದೆತಾಯಿಯರಿಗೆ ಅದನ್ನು ತಿಳಿಸಲಿಲ್ಲ, ನಿನಗೆ ತಿಳಿಸುವೆನೋ?” ಎಂದನು.

17 ಸಂಸೋನನ ಹೆಂಡತಿಯು ಔತಣದ ಏಳು ದಿನಗಳೆಲ್ಲಾ ಅಳುತ್ತಿದ್ದಳು. ಆದ್ದರಿಂದ ಏಳನೆಯ ದಿನ ಅವನು ಒಗಟಿನ ಅರ್ಥವನ್ನು ಅವಳಿಗೆ ಹೇಳಿದನು. ಅವಳು ಪೀಡಿಸಿದ್ದರಿಂದ ಅವನು ಹೇಳಿದನು. ಆಗ ಅವಳು ತನ್ನ ಜನರಲ್ಲಿಗೆ ಹೋಗಿ ಆ ಒಗಟಿನ ಅರ್ಥವನ್ನು ತಿಳಿಸಿದಳು.

18 ಔತಣದ ಏಳನೆಯ ದಿನ ಸೂರ್ಯಾಸ್ತಮಾನಕ್ಕಿಂತ ಮುಂಚೆ ಫಿಲಿಷ್ಟಿಯರಿಗೆ ಅರ್ಥ ಗೊತ್ತಾಯಿತು. ಅವರು ಸಂಸೋನನಲ್ಲಿಗೆ ಬಂದು ಅವನಿಗೆ,

“ಜೇನಿಗಿಂತ ಸಿಹಿಯಾದದ್ದು ಯಾವುದು;
    ಸಿಂಹಕ್ಕಿಂತ ಕ್ರೂರವಾದದ್ದು ಯಾವುದು”

ಎಂದರು.

ಅದಕ್ಕೆ ಸಂಸೋನನು ಅವರಿಗೆ,

“ನೀವು ನನ್ನ ಹಸುವಿನಿಂದ ನೇಗಿಲು ಹೊಡೆಯದ್ದಿದ್ದರೆ
    ಒಗಟನ್ನು ಬಿಡಿಸುವುದು ನಿಮ್ಮಿಂದ ಆಗುತ್ತಿರಲಿಲ್ಲ”

ಎಂದನು.

19 ಸಂಸೋನನು ಬಹಳ ಕೋಪಗೊಂಡನು. ಯೆಹೋವನ ಆತ್ಮವು ಸಂಸೋನನ ಮೇಲೆ ಪ್ರಬಲವಾಗಿ ಬಂತು. ಅವನು ಅಷ್ಕೆಲೋನ್ ನಗರಕ್ಕೆ ಧಾವಿಸಿದನು. ಆ ನಗರದಲ್ಲಿ ಅವನು ಮೂವತ್ತು ಜನ ಫಿಲಿಷ್ಟಿಯರನ್ನು ಕೊಂದನು. ಆಮೇಲೆ ಅವನು ಹೆಣಗಳ ಮೇಲಿನ ಎಲ್ಲ ಬಟ್ಟೆಗಳನ್ನೂ ಸ್ವತ್ತನ್ನೂ ಸುಲಿದುಕೊಂಡನು. ಆ ಬಟ್ಟೆಗಳನ್ನು ತಂದು ಒಗಟಿನ ಅರ್ಥ ಹೇಳಿದ ಜನರಿಗೆ ಕೊಟ್ಟನು. ಬಳಿಕ ಅವನು ತನ್ನ ತಂದೆಯ ಮನೆಗೆ ಹೋದನು. 20 ಸಂಸೋನನು ತನ್ನ ಹೆಂಡತಿಯನ್ನು ಕರೆದುಕೊಂಡು ಹೋಗಲಿಲ್ಲ. ಆಕೆಯ ತಂದೆ ಮೂವತ್ತು ಜನರಲ್ಲಿದ್ದ ಉತ್ತಮ ಪುರುಷನೊಬ್ಬನಿಗೆ ಅವಳನ್ನು ಕೊಟ್ಟು ಮದುವೆಮಾಡಿದನು.

ಸಂಸೋನನು ಫಿಲಿಷ್ಟಿಯರನ್ನು ಪೀಡಿಸಿದನು

15 ಗೋಧಿಯ ಸುಗ್ಗಿಕಾಲದಲ್ಲಿ ಸಂಸೋನನು ತನ್ನ ಹೆಂಡತಿಯನ್ನು ನೋಡಲು ಹೋದನು. ಅವನು ತನ್ನ ಸಂಗಡ ಒಂದು ಮರಿಹೋತವನ್ನು ತೆಗೆದುಕೊಂಡು ಹೋದನು. ಆಕೆಯ ತಂದೆಗೆ ಅವನು, “ನನ್ನ ಹೆಂಡತಿಯ ಕೋಣೆಗೆ ಹೋಗಬೇಕು” ಎಂದನು.

ಆದರೆ ಆಕೆಯ ತಂದೆಯು ಸಂಸೋನನನ್ನು ಒಳಗೆ ಬಿಡಲಿಲ್ಲ. ಅವನು ಸಂಸೋನನಿಗೆ, “ನೀನು ಅವಳನ್ನು ದ್ವೇಷಿಸುವೆ ಎಂದು ತಿಳಿದು ಮದುವೆಯಲ್ಲಿ ನಿನ್ನೊಂದಿಗಿದ್ದ ಉತ್ತಮ ಪುರುಷನೊಬ್ಬನಿಗೆ ಅವಳನ್ನು ಮದುವೆ ಮಾಡಿಕೊಟ್ಟೆ. ಅವಳ ತಂಗಿಯು ಆಕೆಗಿಂತ ಹೆಚ್ಚು ಸುಂದರಿಯಾಗಿದ್ದಾಳೆ. ಆಕೆಯನ್ನು ನೀನು ಮದುವೆಯಾಗು” ಎಂದನು.

ಸಂಸೋನನು ಅವನಿಗೆ, “ಫಿಲಿಷ್ಟಿಯರಾದ ನಿಮಗೆ ತೊಂದರೆಕೊಡಲು ನನಗೊಂದು ಒಳ್ಳೆಯ ಕಾರಣ ಸಿಕ್ಕಿತು. ಈಗ ಯಾರೂ ನನ್ನದು ತಪ್ಪೆಂದು ಹೇಳುವುದಿಲ್ಲ” ಎಂದು ಹೇಳಿದನು.

ಸಂಸೋನನು ಹೊರಗೆ ಹೋಗಿ ಮುನ್ನೂರು ನರಿಗಳನ್ನು ಹಿಡಿದನು. ಅವುಗಳಲ್ಲಿ ಎರಡೆರಡು ನರಿಗಳನ್ನು ಹಿಡಿದು ಒಂದರ ಬಾಲವನ್ನು ಮತ್ತೊಂದರ ಬಾಲಕ್ಕೆ ಕಟ್ಟಿದನು. ನರಿಗಳ ಪ್ರತಿಯೊಂದು ಜೋಡಿಯ ಬಾಲಗಳ ಮಧ್ಯದಲ್ಲಿ ಒಂದು ಪಂಜನ್ನು ಕಟ್ಟಿದನು. ಸಂಸೋನನು ಆ ಪಂಜುಗಳಿಗೆ ಬೆಂಕಿ ಹಚ್ಚಿ ಆ ನರಿಗಳನ್ನು ಫಿಲಿಷ್ಟಿಯರ ಪೈರುಗಳಿದ್ದ ಹೊಲಗಳಲ್ಲಿ ಓಡಾಡಲು ಬಿಟ್ಟನು. ಈ ರೀತಿ ಅವನು ಅವರ ಹೊಲಗಳಲ್ಲಿ ಬೆಳೆದ ಪೈರನ್ನೂ ಮತ್ತು ಅವರು ಕೊಯ್ದುಹಾಕಿದ ತೆನೆಗೂಡುಗಳನ್ನೂ ಸುಟ್ಟುಹಾಕಿದನು. ಅವನು ಅವರ ದ್ರಾಕ್ಷಿಯ ತೋಟಗಳನ್ನು ಮತ್ತು ಆಲಿವ್ ಮರಗಳನ್ನು ಸುಟ್ಟುಹಾಕಿದನು.

“ಇದನ್ನು ಮಾಡಿದವರು ಯಾರು?” ಎಂದು ಫಿಲಿಷ್ಟಿಯರು ವಿಚಾರಿಸಿದರು.

ಒಬ್ಬನು, “ತಿಮ್ನಾ ನಗರದವನ ಅಳಿಯನಾದ ಸಂಸೋನನು ಇದನ್ನು ಮಾಡಿದನು. ಸಂಸೋನನ ಮಾವನು ಸಂಸೋನನ ಹೆಂಡತಿಯನ್ನು ಮದುವೆಯಲ್ಲಿದ್ದ ಉತ್ತಮ ಪುರುಷನೊಬ್ಬನಿಗೆ ಮದುವೆಮಾಡಿಕೊಟ್ಟಿದ್ದಕ್ಕಾಗಿ ಅವನು ಹೀಗೆಲ್ಲಾ ಮಾಡಿದನು” ಎಂದು ಹೇಳಿದನು. ಆಗ ಫಿಲಿಷ್ಟಿಯರು ಸಂಸೋನನ ಹೆಂಡತಿಯನ್ನು ಮತ್ತು ಅವಳ ತಂದೆಯನ್ನು ಸುಟ್ಟುಹಾಕಿದರು.

ಸಂಸೋನನು ಫಿಲಿಷ್ಟಿಯರಿಗೆ, “ನೀವು ನನಗೆ ಈ ದುಷ್ಕೃತ್ಯವನ್ನು ಮಾಡಿರುವುದರಿಂದ ನಾನೂ ನಿಮಗೆ ಕೇಡನ್ನು ಮಾಡುತ್ತೇನೆ” ಎಂದು ಹೇಳಿ,

ಅವರ ಮೇಲೆ ಆಕ್ರಮಣ ಮಾಡಿ ಅವರಲ್ಲಿ ಅನೇಕರನ್ನು ಕೊಂದುಹಾಕಿದನು. ಆಮೇಲೆ ಅವನು ಹೋಗಿ ಒಂದು ಗುಹೆಯಲ್ಲಿ ಇದ್ದುಬಿಟ್ಟನು. ಆ ಗುಹೆಯು ಏಟಾಮಿನ ಬಂಡೆಯ ಬಳಿಯಲ್ಲಿತ್ತು.

ಆಗ ಫಿಲಿಷ್ಟಿಯರು ಯೆಹೂದಕ್ಕೆ ಹೋಗಿ, ಅವರು ಲೆಹೀ ಎಂಬ ಸ್ಥಳದ ಬಳಿ ಪಾಳೆಯಮಾಡಿಕೊಂಡರು ಮತ್ತು ಯುದ್ಧದ ಸಿದ್ಧತೆ ಮಾಡತೊಡಗಿದರು. 10 ಯೆಹೂದ್ಯರು ಅವರಿಗೆ, “ಫಿಲಿಷ್ಟಿಯರಾದ ನೀವು ನಮ್ಮ ಸಂಗಡ ಯುದ್ಧ ಮಾಡುವುದಕ್ಕೆ ಇಲ್ಲಿಗೇಕೆ ಬಂದಿದ್ದೀರಿ?” ಎಂದು ಕೇಳಿದರು.

ಅದಕ್ಕೆ ಅವರು, “ನಾವು ಸಂಸೋನನನ್ನು ಹಿಡಿಯಲು ಬಂದಿದ್ದೇವೆ. ನಾವು ಅವನನ್ನು ಬಂಧಿಸಬೇಕಾಗಿದೆ. ಅವನು ನಮ್ಮ ಜನರಿಗೆ ಮಾಡಿದ ದ್ರೋಹಕ್ಕಾಗಿ ಅವನನ್ನು ಶಿಕ್ಷಿಸಬೇಕು” ಎಂದು ಉತ್ತರಕೊಟ್ಟರು.

11 ಆಗ ಯೆಹೂದಕುಲದ ಮೂರು ಸಾವಿರ ಜನರು ಸಂಸೋನನಲ್ಲಿಗೆ ಹೋದರು. ಅವರು ಏಟಾಮಿನ ಬಂಡೆಯ ಬಳಿಯಲ್ಲಿದ್ದ ಗುಹೆಗೆ ಬಂದು ಅವನಿಗೆ, “ನೀನು ನಮಗೆ ಮಾಡಿರುವುದೇನು? ಫಿಲಿಷ್ಟಿಯರು ನಮ್ಮನ್ನು ಆಳುತ್ತಿದ್ದಾರೆ ಎಂಬುದು ನಿನಗೆ ಗೊತ್ತಿಲ್ಲವೇ?” ಎಂದು ಕೇಳಿದರು.

ಸಂಸೋನನು, “ಅವರು ನನಗೆ ಮಾಡಿದ ದ್ರೋಹಕ್ಕಾಗಿ ನಾನು ಅವರನ್ನು ಶಿಕ್ಷಿಸಿದೆ” ಎಂದನು.

12 ಆಗ ಅವರು ಸಂಸೋನನಿಗೆ, “ನಾವು ನಿನ್ನನ್ನು ಬಂಧಿಸಲು ಬಂದಿದ್ದೇವೆ. ನಾವು ನಿನ್ನನ್ನು ಫಿಲಿಷ್ಟಿಯರಿಗೆ ಕೊಡುತ್ತೇವೆ” ಎಂದರು.

ಸಂಸೋನನು ಯೆಹೂದ್ಯರಿಗೆ, “ನೀವು ನನ್ನನ್ನು ಕೊಲ್ಲುವುದಿಲ್ಲವೆಂದು ಆಣೆಮಾಡಿರಿ” ಅಂದನು.

13 ಯೆಹೂದ್ಯರು, “ಆಗಲಿ, ನಾವು ನಿನ್ನನ್ನು ಬಂಧಿಸಿ ಫಿಲಿಷ್ಟಿಯರಿಗೆ ಕೊಡುತ್ತೇವೆ. ನಾವು ನಿನ್ನನ್ನು ಕೊಲ್ಲುವುದಿಲ್ಲವೆಂದು ಆಣೆಮಾಡುತ್ತೇವೆ” ಎಂದು ಹೇಳಿದರು. ಅವರು ಸಂಸೋನನನ್ನು ಎರಡು ಹೊಸ ಹಗ್ಗಗಳಿಂದ ಬಂಧಿಸಿ ಗುಹೆಯಿಂದ ಹೊರ ಕರೆತಂದರು.

14 ಸಂಸೋನನನ್ನು ಲೆಹೀ ಎಂಬ ಸ್ಥಳಕ್ಕೆ ತಂದಾಗ ಫಿಲಿಷ್ಟಿಯರು ಅವನನ್ನು ನೋಡುವದಕ್ಕೆ ಬಂದರು. ಅವರು ಸಂತೋಷದಿಂದ ಆರ್ಭಟಿಸುತ್ತಿದ್ದರು. ಆಗ ಯೆಹೋವನ ಆತ್ಮವು ಪ್ರಬಲವಾಗಿ ಸಂಸೋನನ ಮೇಲೆ ಬಂದಿತು. ಸಂಸೋನನು ಹಗ್ಗಗಳನ್ನು ಸುಟ್ಟದಾರಗಳೊ ಎಂಬಂತೆ ಕಿತ್ತುಹಾಕಿದನು; ಕೈಗೆ ಕಟ್ಟಿದ್ದ ಹಗ್ಗಗಳು ಕಳಚಿಬಿದ್ದವು. 15 ಸಂಸೋನನು ಸತ್ತಕತ್ತೆಯ ದವಡೇ ಎಲುಬನ್ನು ಕಂಡನು. ಅವನು ಆ ದವಡೇ ಎಲುಬನ್ನು ತೆಗೆದುಕೊಂಡು ಅದರಿಂದ ಒಂದು ಸಾವಿರ ಫಿಲಿಷ್ಟಿಯರನ್ನು ಕೊಂದುಹಾಕಿದನು. 16 ಆಗ ಸಂಸೋನನು,

“ಕತ್ತೆಯ ದವಡೇ ಎಲುಬಿನಿಂದ
    ನಾನು ಒಂದು ಸಾವಿರ ಜನರನ್ನು ಕೊಂದೆನು,
ಕತ್ತೆಯ ದವಡೇ ಎಲುಬಿನಿಂದ
    ನಾನು ಹೆಣಗಳನ್ನು ರಾಶಿರಾಶಿಯಾಗಿ ಬೀಳಿಸಿದೆನು”

ಅಂದನು.

17 ಬಳಿಕ ಸಂಸೋನನು ದವಡೇ ಎಲುಬನ್ನು ಬಿಸಾಡಿದನು. ಆದ್ದರಿಂದ ಆ ಸ್ಥಳಕ್ಕೆ ರಾಮತ್ ಲೆಹೀ ಎಂದು ಹೆಸರಾಯಿತು.

18 ಸಂಸೋನನಿಗೆ ತುಂಬ ನೀರಡಿಕೆಯಾಗಿತ್ತು. ಅವನು ಯೆಹೋವನಿಗೆ, “ನಾನು ನಿನ್ನ ಸೇವಕನಾಗಿದ್ದೇನೆ. ನೀನು ನನಗೆ ಈ ಮಹಾವಿಜಯವನ್ನು ಕೊಟ್ಟಿರುವೆ. ದಯವಿಟ್ಟು ಈಗ ನಾನು ನೀರಡಿಕೆಯಿಂದ ಸಾಯಲು ಬಿಡಬೇಡ. ಸುನ್ನತಿ ಮಾಡಿಸಿಕೊಂಡಿಲ್ಲದವರು ನನ್ನನ್ನು ಹಿಡಿದುಕೊಡುವಂತೆ ಮಾಡಬೇಡ” ಎಂದು ಪ್ರಾರ್ಥಿಸಿದನು.

19 ಲೆಹೀಯ ನೆಲದಲ್ಲಿ ಒಂದು ಸುರಂಗವಿದೆ. ದೇವರು ಆ ಸುರಂಗವನ್ನು ಸೀಳಿ ಅದರೊಳಗಿಂದ ನೀರು ಬರುವಂತೆ ಮಾಡಿದನು. ಸಂಸೋನನು ನೀರು ಕುಡಿದು ಪುನಃ ಚೈತನ್ಯ ಪಡೆದನು. ಆದ್ದರಿಂದ ಅವನು ಆ ನೀರಿನ ಬುಗ್ಗೆಗೆ ಏನ್ ಹಕ್ಕೋರೇ ಎಂದು ಕರೆದನು. ಅದು ಇಂದಿಗೂ ಲೆಹೀ ನಗರದಲ್ಲಿ ಇದೆ.

20 ಸಂಸೋನನು ಇಪ್ಪತ್ತು ವರ್ಷ ಇಸ್ರೇಲರ ನ್ಯಾಯಾಧೀಶನಾಗಿದ್ದನು. ಅದು ಫಿಲಿಷ್ಟಿಯರ ಕಾಲವಾಗಿತ್ತು.

ಲೂಕ 6:27-49

ನಿಮ್ಮ ವೈರಿಗಳನ್ನು ಪ್ರೀತಿಸಿರಿ

(ಮತ್ತಾಯ 5:38-48; 7:12)

27 “ನನ್ನ ಮಾತುಗಳನ್ನು ಆಲಿಸುತ್ತಿರುವ ನಿಮಗೆ ನಾನು ಹೇಳುವುದೇನೆಂದರೆ: ನಿಮ್ಮ ವೈರಿಗಳನ್ನು ಪ್ರೀತಿಸಿರಿ. ನಿಮ್ಮನ್ನು ದ್ವೇಷಿಸುವವರಿಗೆ ಒಳ್ಳೆಯದನ್ನು ಮಾಡಿರಿ. 28 ನಿಮ್ಮನ್ನು ಶಪಿಸುವವರನ್ನು ಆಶೀರ್ವದಿಸಿರಿ. ನಿಮ್ಮನ್ನು ಹೀನೈಸುವ ಜನರಿಗೋಸ್ಕರ ಪ್ರಾರ್ಥಿಸಿರಿ. 29 ಒಬ್ಬನು ನಿಮ್ಮ ಕೆನ್ನೆಗೆ ಹೊಡೆದರೆ, ಅವನಿಗೆ ಮತ್ತೊಂದು ಕೆನ್ನೆಯನ್ನೂ ಒಡ್ಡಿರಿ. ಒಬ್ಬನು ನಿಮ್ಮ ಮೇಲಂಗಿಯನ್ನು ಕೇಳಿದರೆ, ಅವನಿಗೆ ನಿಮ್ಮ ಒಳಂಗಿಯನ್ನೂ ಕೊಡಿ. 30 ನಿಮ್ಮನ್ನು ಬೇಡುವ ಪ್ರತಿಯೊಬ್ಬನಿಗೆ ಕೊಡಿ. ಒಬ್ಬನು ನಿಮ್ಮಿಂದ ಏನಾದರೂ ತೆಗೆದುಕೊಂಡಾಗ ಅದನ್ನು ಹಿಂದಕ್ಕೆ ಕೊಡೆಂದು ಕೇಳಬೇಡಿ. 31 ನಿಮಗೆ ಬೇರೆ ಜನರು ಏನು ಮಾಡಬೇಕೆಂದು ಆಸೆಪಡುತ್ತೀರೋ ಅದನ್ನೇ ನೀವು ಅವರಿಗೆ ಮಾಡಿರಿ.

32 “ನಿಮ್ಮನ್ನು ಪ್ರೀತಿಸುವ ಜನರನ್ನೇ ನೀವು ಪ್ರೀತಿಸಿದರೆ, ನಿಮಗೆ ಹೊಗಳಿಕೆ ಏಕೆ ಬರಬೇಕು? ಇಲ್ಲ! ತಮ್ಮನ್ನು ಪ್ರೀತಿಸುವವರನ್ನು ಪಾಪಿಷ್ಠರು ಸಹ ಪ್ರೀತಿಸುತ್ತಾರೆ! 33 ನಿಮಗೆ ಒಳ್ಳೆಯದನ್ನು ಮಾಡುವವರಿಗೇ ನೀವು ಒಳ್ಳೆಯದನ್ನು ಮಾಡಿದರೆ, ಅದರಿಂದ ನಿಮಗೆ ಹೊಗಳಿಕೆ ಬರುವುದೇ? ಪಾಪಿಷ್ಠರು ಸಹ ಹಾಗೆಯೇ ಮಾಡುತ್ತಾರೆ! 34 ನೀವು ಯಾರಿಗಾದರೂ ಸಾಲಕೊಟ್ಟು, ಅದನ್ನು ಪೂರ್ತಿಯಾಗಿ ಮತ್ತೆ ಅವರಿಂದ ತೆಗೆದುಕೊಂಡರೆ ಅದರಿಂದ ನಿಮಗೆ ಹೊಗಳಿಕೆ ಬರುವುದೇ? ಪಾಪಿಷ್ಠರು ಸಹ ಹಾಗೆಯೇ ಸಾಲಕೊಟ್ಟು ಮತ್ತೆ ಅದನ್ನು ಪೂರ್ತಿಯಾಗಿ ಮರಳಿ ಪಡೆಯುತ್ತಾರೆ!

35 “ಆದ್ದರಿಂದ ನಿಮ್ಮ ವೈರಿಗಳನ್ನು ಪ್ರೀತಿಸಿರಿ. ಅವರಿಗೆ ಒಳ್ಳೆಯದನ್ನು ಮಾಡಿರಿ. ನೀವು ಅವರಿಗೆ ಸಾಲ ಕೊಡುವಾಗ ಮತ್ತೆ ಅವರಿಂದ ಪಡೆಯಬಹುದೆಂಬ ನಿರೀಕ್ಷೆಯಿಲ್ಲದೆ ಕೊಡಿರಿ. ಆಗ ನಿಮಗೆ ದೊಡ್ಡ ಪ್ರತಿಫಲವಿರುವುದು. ನೀವು ಮಹೋನ್ನತನಾದ ದೇವರ ಮಕ್ಕಳಾಗುವಿರಿ. ಏಕೆಂದರೆ ದೇವರು ಪಾಪಿಷ್ಠರಿಗೂ ಕೃತಜ್ಞತೆಯಿಲ್ಲದವರಿಗೂ ಒಳ್ಳೆಯವನಾಗಿದ್ದಾನೆ. 36 ನಿಮ್ಮ ಪರಲೋಕದ ತಂದೆಯು ಕರುಣಾಮಯನಾಗಿರುವಂತೆ ನೀವೂ ಕರುಣೆಯುಳ್ಳವರಾಗಿರಿ.

ನಿನ್ನನ್ನು ಪರೀಕ್ಷಿಸಿಕೊ

(ಮತ್ತಾಯ 7:1-5)

37 “ಬೇರೆಯವರಿಗೆ ತೀರ್ಪು ಮಾಡಬೇಡಿರಿ, ಆಗ ನಿಮಗೂ ತೀರ್ಪಾಗುವುದಿಲ್ಲ. ಬೇರೆಯವರನ್ನು ಅಪರಾಧಿಗಳೆಂದು ನಿರ್ಣಯಿಸಬೇಡಿರಿ, ಆಗ ನಿಮ್ಮನ್ನೂ ಅಪರಾಧಿಗಳೆಂದು ನಿರ್ಣಯಿಸುವುದಿಲ್ಲ. ಇತರರನ್ನು ಕ್ಷಮಿಸಿರಿ, ಆಗ ನಿಮಗೂ ಕ್ಷಮಾಪಣೆ ಆಗುವುದು. 38 ಇತರರಿಗೆ ಕೊಡಿರಿ, ಆಗ ನಿಮಗೂ ದೊರೆಯುವುದು. ಪಾತ್ರೆಯಲ್ಲಿ ಅದುಮಿ, ಅಲ್ಲಾಡಿಸಿ ಹೊರಚೆಲ್ಲುವಂತೆ ಅಳೆದು ನಿಮ್ಮ ಸೆರಗಿಗೆ ಹಾಕುವರು. ನೀವು ಅಳೆಯುವ ಅಳತೆಯಿಂದಲೇ ನಿಮಗೂ ಅಳೆದುಕೊಡುವರು.”

39 ಯೇಸು ಅವರಿಗೆ ಈ ಸಾಮ್ಯವನ್ನೂ ಹೇಳಿದನು: “ಒಬ್ಬ ಕುರುಡನು ಇನ್ನೊಬ್ಬ ಕುರುಡನನ್ನು ನಡಿಸುವುದಕ್ಕಾದೀತೇ? ಇಲ್ಲ! ಅವರಿಬ್ಬರೂ ಗುಂಡಿಯಲ್ಲಿ ಬೀಳುವರು. 40 ಶಿಷ್ಯನು ಗುರುವಿಗಿಂತ ಮೇಲಲ್ಲ. ಆದರೆ, ಶಿಷ್ಯನು ಪೂರ್ಣ ಕಲಿತಾಗ ಗುರುವಿನಂತೆ ಆಗುವನು.

41 “ನಿನ್ನ ಕಣ್ಣಿನಲ್ಲಿರುವ ತೊಲೆಯನ್ನು ನೋಡದೆ, ನಿನ್ನ ಸಹೋದರನ ಕಣ್ಣಿನಲ್ಲಿರುವ ಅಣುವನ್ನು ನೀನು ಗಮನಿಸುವುದೇಕೆ? 42 ನೀನು ಅವನಿಗೆ, ‘ಸಹೋದರನೇ, ನಿನ್ನ ಕಣ್ಣಿನಲ್ಲಿರುವ ಅಣುವನ್ನು ತೆಗೆಯುತ್ತೇನೆ’ ಎಂದು ನೀನು ಹೇಗೆ ಹೇಳಬಲ್ಲೆ? ನಿನ್ನ ಸ್ವಂತ ಕಣ್ಣಿನಲ್ಲಿರುವ ತೊಲೆಯೇ ನಿನಗೆ ಕಾಣಿಸದು! ನೀನು ಕಪಟಿ.[a] ಮೊದಲು ನಿನ್ನ ಕಣ್ಣಿನಲ್ಲಿರುವ ತೊಲೆಯನ್ನು ತೆಗೆದುಹಾಕು. ಆಗ ನಿನ್ನ ಸಹೋದರನ ಕಣ್ಣಿನಲ್ಲಿರುವ ಅಣುವನ್ನು ತೆಗೆಯಲು ನಿನಗೆ ಸ್ಪಷ್ಟವಾಗಿ ಕಾಣಿಸುವುದು.

ಎರಡು ವಿಧವಾದ ಫಲ

(ಮತ್ತಾಯ 7:17-20; 12:34-35)

43 “ಒಳ್ಳೆಯ ಮರವು ಕೆಟ್ಟ ಫಲವನ್ನು ಕೊಡುವುದಿಲ್ಲ. ಅದೇ ರೀತಿಯಲ್ಲಿ ಕೆಟ್ಟಮರವು ಒಳ್ಳೆಯ ಫಲವನ್ನು ಕೊಡುವುದಿಲ್ಲ. 44 ಪ್ರತಿಯೊಂದು ಮರವನ್ನು ಅದರ ಫಲದಿಂದಲೇ ಗುರುತಿಸಲಾಗುವುದು. ಜನರು ಮುಳ್ಳುಗಿಡಗಳಲ್ಲಿ ಅಂಜೂರದ ಹಣ್ಣುಗಳನ್ನಾಗಲಿ ಪೊದೆಗಳಲ್ಲಿ ದ್ರಾಕ್ಷಿಹಣ್ಣುಗಳನ್ನಾಗಲಿ ಪಡೆಯುವುದಿಲ್ಲ! 45 ಒಳ್ಳೆಯವನ ಹೃದಯದಲ್ಲಿ ಒಳ್ಳೆಯವು ಇರುತ್ತವೆ. ಆದ್ದರಿಂದ ಅವನ ಹೃದಯದೊಳಗಿಂದ ಒಳ್ಳೆಯವು ಹೊರಬರುತ್ತವೆ. ಆದರೆ ಕೆಟ್ಟವನ ಹೃದಯದಲ್ಲಿ ಕೆಟ್ಟವು ಇರುತ್ತವೆ. ಆದ್ದರಿಂದ ಅವನ ಹೃದಯದೊಳಗಿಂದ ಕೆಟ್ಟವು ಹೊರಬರುತ್ತವೆ. ಹೃದಯದಲ್ಲಿ ತುಂಬಿರುವುದೇ ಬಾಯಲ್ಲಿ ಬರುವುದು.

ಎರಡು ವಿಧವಾದ ಜನರು

(ಮತ್ತಾಯ 7:24-27)

46 “ನನ್ನನ್ನು ಸ್ವಾಮೀ, ಸ್ವಾಮೀ, ಎಂದು ಕರೆದು ನಾನು ಹೇಳುವುದನ್ನು ನಡಿಸದೆ ಇರುವುದೇಕೆ? 47 ನನ್ನ ಬಳಿಗೆ ಬಂದು ನನ್ನ ಮಾತುಗಳನ್ನು ಕೇಳಿ, ಅವುಗಳಿಗೆ ವಿಧೇಯನಾಗುವ ಪ್ರತಿಯೊಬ್ಬನು ಮನೆಯನ್ನು ಕಟ್ಟುವ ವ್ಯಕ್ತಿಯಂತಿರುವನು. 48 ಅವನು ಆಳವಾದ ಅಸ್ತಿವಾರ ಹಾಕಿ, ಬಲವಾದ ಬಂಡೆಯ ಮೇಲೆ ತನ್ನ ಮನೆಯನ್ನು ಕಟ್ಟುತ್ತಾನೆ. ಪ್ರವಾಹವು ಏರಿಬಂದು ಆ ಮನೆಗೆ ಅಪ್ಪಳಿಸಿದರೂ ಆ ಮನೆಯನ್ನು ಕದಲಿಸಲಾರದು; ಏಕೆಂದರೆ ಆ ಮನೆಯು ಬಲವಾಗಿ ಕಟ್ಟಲ್ಪಟ್ಟಿದೆ.

49 “ಅದೇ ರೀತಿಯಲ್ಲಿ, ನನ್ನ ಮಾತುಗಳನ್ನು ಕೇಳಿಯೂ ಅವುಗಳಿಗೆ ವಿಧೇಯನಾಗದ ವ್ಯಕ್ತಿಯು ಅಸ್ತಿವಾರವಿಲ್ಲದೆ ನೆಲದಮೇಲೆ ಮನೆ ಕಟ್ಟಿದ ಮನುಷ್ಯನಂತಿರುವನು. ಪ್ರವಾಹ ಬಂದಾಗ, ಮನೆಯು ಬೇಗನೆ ಕುಸಿದುಹೋಗಿ ಸಂಪೂರ್ಣವಾಗಿ ನಾಶವಾಗುತ್ತದೆ.”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International