Old/New Testament
ಸಿಮೆಯೋನ್ ಕುಲದವರಿಗೆ ಭೂಮಿ
19 ಅನಂತರ ಯೆಹೋಶುವನು ಸಿಮೆಯೋನ್ ಕುಲದ ಎಲ್ಲ ಗೋತ್ರಗಳಿಗೆ ಅವರ ಪಾಲಿನ ಭೂಮಿಯನ್ನು ಕೊಟ್ಟನು. ಅವರಿಗೆ ಸಿಕ್ಕ ಭೂಮಿಯು ಯೆಹೂದ ಕುಲದವರಿಗೆ ಸೇರಿದ ಭೂಭಾಗದ ಮಧ್ಯದಲ್ಲಿತ್ತು. 2 ಅವರಿಗೆ ದೊರೆತ ಭಾಗವಿದು: ಬೇರ್ಷೆಬ, ಮೋಲಾದಾ, 3 ಹಚರ್‌ಷೂವಾಲ್, ಬಾಲಾ, ಎಚೆಮ್, 4 ಎಲ್ತೋಲದ್, ಬೆತೂಲ್, 5 ಹೊರ್ಮಾ, ಚಿಕ್ಲಗ್, ಬೇತ್‌ಮರ್ಕಾಬೋತ್, ಹಚರ್‌ಸೂಸಾ, 6 ಬೇತ್ ಲೆಬಾವೋತ್ ಮತ್ತು ಶಾರೂಹೆನ್ ಎಂಬ ಹದಿಮೂರು ಪಟ್ಟಣಗಳು ಮತ್ತು ಅವುಗಳ ಸುತ್ತಮುತ್ತಲಿನ ಎಲ್ಲ ಹೊಲಗದ್ದೆಗಳು.
7 ಆಯಿನ್, ರಿಮ್ಮೋನ್, ಏತೆರ್, ಆಷಾನ್ ಎಂಬ ನಾಲ್ಕು ಪಟ್ಟಣಗಳು ಮತ್ತು ಅವುಗಳ ಸುತ್ತಮುತ್ತಲಿನ ಎಲ್ಲ ಹೊಲಗದ್ದೆಗಳನ್ನು ಅವರು ಪಡೆದುಕೊಂಡರು. 8 ಬಾಲತ್‌ಬೇರನ (ನೆಗೇವದಲ್ಲಿದ್ದ ರಾಮ)ವರೆಗೆ ಹಬ್ಬಿದ ಎಲ್ಲ ಪಟ್ಟಣಗಳ ಸುತ್ತಲಿನ ಹೊಲಗದ್ದೆಗಳನ್ನು ಸಹ ಅವರು ಪಡೆದುಕೊಂಡರು. ಇದೇ ಸಿಮೆಯೋನ್ ಕುಲದವರಿಗೆ ದೊರೆತ ಭಾಗವಾಗಿತ್ತು. ಪ್ರತಿಯೊಂದು ಗೋತ್ರದವರು ತಮ್ಮ ಭೂಮಿಯನ್ನು ಪಡೆದುಕೊಂಡರು. 9 ಸಿಮೆಯೋನ್ಯರ ಭೂಮಿಯು ಯೆಹೂದದ ಭೂಮಿಯ ಒಂದು ಭಾಗವಾಗಿತ್ತು. ಯೆಹೂದ್ಯರಿಗೆ ಅವರ ಅವಶ್ಯಕತೆಗಿಂತ ಹೆಚ್ಚು ಭೂಮಿ ಇದ್ದಕಾರಣ ಸಿಮೆಯೋನ್ಯರು ಅದರಲ್ಲಿ ಒಂದು ಭಾಗವನ್ನು ಪಡೆದುಕೊಂಡರು.
ಜೆಬುಲೂನ್ ಕುಲದವರಿಗೆ ಭೂಮಿ
10 ತರುವಾಯ ತಮ್ಮ ಪಾಲಿನ ಭೂಮಿಯನ್ನು ಪಡೆದವರು ಜೆಬುಲೂನ್ ಕುಲದವರು. ಜೆಬುಲೂನ್ ಕುಲದ ಪ್ರತಿಯೊಂದು ಗೋತ್ರಕ್ಕೆ ವಾಗ್ದಾನದ ಪ್ರಕಾರ ಭೂಮಿಯನ್ನು ಕೊಡಲಾಯಿತು. ಜೆಬುಲೂನ್ಯರ ಪ್ರದೇಶವು ಸಾರೀದಿನವರೆಗೂ ವಿಸ್ತರಿಸಿತ್ತು. 11 ಅಲ್ಲಿಂದ ಅದು ಪಶ್ಚಿಮಕ್ಕೆ ಮರ್ಗಲಾಕ್ಕೆ ಹೋಗಿ ದಬ್ಬೆಷೆತ್‌ನ್ನು ತಲುಪುತ್ತದೆ. ಅಲ್ಲಿಂದ ಯೊಕ್ನೆಯಾಮ್ ಊರಿನ ಈಚೆ ಇರುವ ಹಳ್ಳಕ್ಕೆ ಹೋಗುತ್ತದೆ. 12 ಅಲ್ಲಿಂದ ಅದು ಪೂರ್ವಕ್ಕೆ ತಿರುಗಿಕೊಂಡು ಸಾರೀದಿನಿಂದ ಕಿಸ್ಲೋತ್ ತಾಬೋರಿಗೆ ಹೋಗುತ್ತದೆ. ಅಲ್ಲಿಂದ ಅದು ದಾಬೆರತ್ ಮತ್ತು ಯಾಫೀಯಕ್ಕೆ ಹೋಗುತ್ತದೆ. 13 ಅಲ್ಲಿಂದ ಪೂರ್ವಕ್ಕೆ ಮುಂದುವರೆದು ಗತ್‌ಹೇಫೆರ್ ಮತ್ತು ಎತ್‌ಕಾಚೀನಿನ ಮೇಲಿಂದ ರಿಮ್ಮೋನಿಗೆ ತಲುಪಿ ಅಲ್ಲಿಂದ ತಿರುಗಿಕೊಂಡು “ನೇಯಕ್ಕೆ” ಹೋಗುತ್ತದೆ. 14 “ನೇಯ”ದಿಂದ ಅದು ತಿರುಗಿಕೊಂಡು ಉತ್ತರದಿಕ್ಕಿನ ಹನ್ನಾತೋನಿನ ಮೇಲಿಂದ ಇಫ್ತಹೇಲಿನ ಕಣಿವೆಗೆ ಹೋಗುತ್ತದೆ. 15 ಕಟ್ಟಾತ್, ನಹಲ್ಲಾಲ್, ಶಿಮ್ರೋನ್, ಇದಲ್ಲಾ, ಬೆತ್ಲೆಹೇಮ್ ಇವೇ ಮೊದಲಾದ ಹನ್ನೆರಡು ಪಟ್ಟಣಗಳು ಮತ್ತು ಅವುಗಳ ಸುತ್ತಮುತ್ತಲಿನ ಎಲ್ಲ ಹೊಲಗದ್ದೆಗಳು ಈ ಸೀಮೆಯಲ್ಲಿ ಸೇರಿವೆ.
16 ಈ ಪಟ್ಟಣಗಳನ್ನು ಮತ್ತು ಅವುಗಳ ಸುತ್ತಮುತ್ತಲಿನ ಹೊಲಗದ್ದೆಗಳನ್ನು ಜೆಬುಲೂನ್ಯರಿಗೆ ಕೊಡಲಾಯಿತು. ಜೆಬುಲೂನ್ಯರ ಪ್ರತಿಯೊಂದು ಗೋತ್ರದವರು ತಮ್ಮ ಪಾಲಿನ ಭೂಮಿಯನ್ನು ಪಡೆದರು.
ಇಸ್ಸಾಕಾರ್ ಕುಲದವರಿಗೆ ಭೂಮಿ
17 ಭೂಮಿಯ ನಾಲ್ಕನೆಯ ಭಾಗವನ್ನು ಇಸ್ಸಾಕಾರ್ ಕುಲದವರಿಗೆ ಕೊಡಲಾಯಿತು. ಆ ಕುಲದ ಪ್ರತಿಯೊಂದು ಗೋತ್ರದವರು ತಮ್ಮ ಪಾಲಿನ ಭೂಮಿಯನ್ನು ಪಡೆದರು. 18 ಈ ಭೂಮಿಯನ್ನು ಆ ಕುಲದವರಿಗೆ ಕೊಡಲಾಯಿತು: ಇಜ್ರೇಲ್, ಕೆಸುಲ್ಲೋತ್, ಶೂನೇಮ್, 19 ಹಫಾರಯಿಮ್, ಶೀಯೋನ್, ಅನಾಹರತ್, 20 ರಬ್ಬೀತ್, ಕಿಷ್ಯೋನ್, ಎಬೆಜ್, 21 ರೆಮೆತ್, ಏಂಗನ್ನೀಮ್, ಏನ್‌ಹದ್ದಾ ಮತ್ತು ಬೇತ್ ಪಚ್ಚೇಚ್.
22 ಅವರ ಭೂಮಿಯ ಮೇರೆಯು ತಾಬೋರ್, ಶಹಚೀಮಾ, ಬೇತ್‌ಷೆಮೆಷ್ ಎಂಬ ಊರುಗಳನ್ನು ತಲುಪಿತ್ತು. ಆ ಸೀಮೆಯು ಜೋರ್ಡನ್ ನದಿಗೆ ಮುಕ್ತಾಯಗೊಳ್ಳುತ್ತಿತ್ತು. ಒಟ್ಟಿನಲ್ಲಿ ಹದಿನಾರು ಪಟ್ಟಣಗಳು ಮತ್ತು ಅವುಗಳ ಸುತ್ತಮುತ್ತಲಿನ ಎಲ್ಲಾ ಹೊಲಗದ್ದೆಗಳು ಇದರಲ್ಲಿದ್ದವು. 23 ಈ ನಗರಗಳು ಮತ್ತು ಪಟ್ಟಣಗಳು ಇಸ್ಸಾಕಾರ್ ಕುಲದವರಿಗೆ ಕೊಟ್ಟ ಭೂಮಿಯ ಭಾಗಗಳಾಗಿದ್ದವು. ಪ್ರತಿಯೊಂದು ಗೋತ್ರದವರು ತಮ್ಮ ಪಾಲಿನ ಭೂಮಿಯನ್ನು ಪಡೆದರು.
ಆಶೇರ್ ಕುಲದವರಿಗೆ ಭೂಮಿ
24 ಭೂಮಿಯ ಐದನೆಯ ಭಾಗವನ್ನು ಆಶೇರ್ ಕುಲದವರಿಗೆ ಕೊಡಲಾಯಿತು. ಆ ಕುಲದ ಪ್ರತಿಯೊಂದು ಗೋತ್ರದವರು ಭೂಮಿಯಲ್ಲಿ ತಮ್ಮ ಪಾಲನ್ನು ಪಡೆದುಕೊಂಡರು. 25 ಆ ಕುಲದವರಿಗೆ ಕೊಟ್ಟ ಭೂಮಿಯಿದು: ಹೆಲ್ಕತ್, ಹಲೀ ಬೆಟೆನ್, ಆಕ್ಷಾಫ್, 26 ಅಲಮ್ಮೆಲೆಕ್, ಅಮಾದ್ ಮತ್ತು ಮಿಷಾಲ್.
ಇದರ ಪಶ್ಚಿಮ ಮೇರೆಯು ಕರ್ಮೆಲ್ ಬೆಟ್ಟ ಮತ್ತು ಶೀಹೋರ್‌ಲಿಬ್ನತ್‌ವರೆಗೆ ಚಾಚಿಕೊಂಡಿತ್ತು. 27 ಅಲ್ಲಿಂದ ಅದರ ಸೀಮೆಯು ಪೂರ್ವಕ್ಕೆ ತಿರುಗಿಕೊಂಡು ಬೇತ್‌ದಾಗೋನಿಗೆ ಹೋಗಿತ್ತು. ಆ ಸೀಮೆಯು ಜೆಬುಲೂನ್ಯರ ಮೇರೆಗೂ ಮತ್ತು ಇಪ್ತಹೇಲ್ ಕಣಿವೆಗೂ ತಲುಪಿತ್ತು. ಅಲ್ಲಿಂದ ಅದು ಬೇತ್‌ಏಮೆಕ್ ಮತ್ತು ನೆಗೀಯೇಲ್‌ನ ಉತ್ತರಕ್ಕೆ ಮುಂದುವರಿದು ಕಾಬೂಲಿನ ಉತ್ತರ ಭಾಗವನ್ನು ದಾಟಿತ್ತು. 28 ಅಲ್ಲಿಂದ ಆ ಮೇರೆಯು ಎಬ್ರೋನ್, ರೆಹೋಬ್, ಹಮ್ಮೋನ್ ಮತ್ತು ಕಾನಾ ಇವುಗಳ ಮೂಲಕ ಚೀದೋನ್ ಎಂಬ ಮಹಾನಗರಕ್ಕೆ ತಲುಪಿತ್ತು. 29 ಅಲ್ಲಿಂದ ಆ ಸೀಮೆಯು ದಕ್ಷಿಣದಿಕ್ಕಿಗೆ ಹಿಂತಿರುಗಿ ರಾಮಾವನ್ನು ತಲುಪಿ, ಅಲ್ಲಿಂದ ಸುಭದ್ರ ನಗರವಾದ ತೂರ್‌ಗೆ ಮುಂದುವರೆದು ಅಲ್ಲಿಂದ ತಿರುಗಿಕೊಂಡು ಹೋಸಾಕ್ಕೆ ತಲುಪುತ್ತದೆ. ಅಲ್ಲಿಂದ ಅಕ್ಜೀಬ್, 30 ಉಮ್ಮಾ, ಅಫೇಕ್ ಮತ್ತು ರೆಹೋಬ್ ಹತ್ತಿರ ಸಮುದ್ರದಲ್ಲಿ ಕೊನೆಗೊಳ್ಳುತ್ತದೆ.
ಒಟ್ಟಿನಲ್ಲಿ ಇಪ್ಪತ್ತೆರಡು ಪಟ್ಟಣಗಳು ಮತ್ತು ಅವುಗಳ ಸುತ್ತಮುತ್ತಲಿನ ಎಲ್ಲ ಹೊಲಗದ್ದೆಗಳು ಇದರಲ್ಲಿ ಸೇರಿದ್ದವು. 31 ಈ ನಗರಗಳು ಮತ್ತು ಅವುಗಳ ಸುತ್ತಮುತ್ತಲಿನ ಹೊಲಗದ್ದೆಗಳು ಆಶೇರ್ ಕುಲದವರಿಗೆ ಕೊಡಲಾಗಿತ್ತು. ಆ ಕುಲದ ಪ್ರತಿಯೊಂದು ಕುಟುಂಬವು ತನ್ನ ಪಾಲಿನ ಭೂಭಾಗವನ್ನು ಪಡೆಯಿತು.
ನಫ್ತಾಲಿ ಕುಲದವರಿಗೆ ಭೂಮಿ
32 ಭೂಮಿಯ ಆರನೆಯ ಭಾಗವನ್ನು ನಫ್ತಾಲಿ ಕುಲದವರಿಗೆ ಕೊಡಲಾಯಿತು. ಆ ಕುಲದ ಪ್ರತಿಯೊಂದು ಗೋತ್ರವು ತನ್ನ ಭೂಭಾಗವನ್ನು ಪಡೆಯಿತು. 33 ಅವರ ಭೂಮಿಯ ಮೇರೆಯು ಚಾನನ್ನೀಮಿನ ಹತ್ತಿರ ಇರುವ ದೊಡ್ಡ ಮರದಿಂದ ಆರಂಭವಾಗುತ್ತದೆ. ಇದು ಹೇಲೆಫಿನ ಹತ್ತಿರ ಇದೆ. ಬಳಿಕ ಆ ಮೇರೆಯು ಅದಾಮೀನೆಕೆಬ್ ಮತ್ತು ಯಬ್ನೆಯೇಲ್ ಇವುಗಳ ಮೂಲಕ ಲಕ್ಕೂಮಿಗೆ ಹೋಗಿ, ಜೋರ್ಡನ್ ನದಿಯ ತೀರದಲ್ಲಿ ಮುಕ್ತಾಯಗೊಂಡಿತು. 34 ಅಲ್ಲಿಂದ ಆ ಮೇರೆಯು ಆಜ್ನೋತ್‌ತಾಬೋರಿನ ಮೂಲಕ ಹುಕ್ಕೋಕಿಗೆ ಹೋಗಿ ನಿಲ್ಲುತ್ತದೆ. ಅದರ ದಕ್ಷಿಣದ ಮೇರೆ ಜೆಬುಲೂನ್ಯರ ಮೇರೆಗೂ ಪಶ್ಚಿಮದ ಮೇರೆ ಆಶೇರ್ಯರ ಮೇರೆಗೂ ಹೊಂದಿಕೊಂಡಿದೆ. ಆ ಮೇರೆಯು ಪೂರ್ವದಿಕ್ಕಿನಲ್ಲಿ ಜೋರ್ಡನ್ ನದಿಯ ಬಳಿಯಿದ್ದ ಯೆಹೂದಕ್ಕೂ ಹೋಯಿತು. 35 ಈ ಸೀಮೆಯ ಒಳಗಡೆ ಕೆಲವು ಅತಿ ಭದ್ರವಾದ ಪಟ್ಟಣಗಳಿದ್ದವು. ಆ ಪಟ್ಟಣಗಳೆಂದರೆ: ಚಿದ್ದೀಮ್, ಚೇರ್, ಹಮ್ಮತ್, ರಕ್ಕತ್, ಕಿನ್ನೆರೆತ್, 36 ಅದಾಮಾ, ರಾಮಾ, ಹಾಚೋರ್, 37 ಕೆದೆಷ್, ಎದ್ರೈ, ಏನ್‌ಹಾಚೋರ್, 38 ಇರೋನ್, ಮಿಗ್ದಲೇಲ್, ಹೊರೇಮ್, ಬೇತನಾತ್ ಮತ್ತು ಬೇತ್‌ಷೆಮೆಷ್ ಎಂಬವುಗಳು. ಒಟ್ಟಿನಲ್ಲಿ ಹತ್ತೊಂಭತ್ತು ಪಟ್ಟಣಗಳು ಮತ್ತು ಅವುಗಳ ಸುತ್ತಮುತ್ತಲಿನ ಎಲ್ಲ ಹೊಲಗದ್ದೆಗಳು.
39 ಈ ನಗರಗಳನ್ನು ಮತ್ತು ಅವುಗಳ ಸುತ್ತಮುತ್ತಲಿನ ಹೊಲಗದ್ದೆಗಳನ್ನು ನಫ್ತಾಲಿ ಕುಲದವರಿಗೆ ಕೊಡಲಾಗಿತ್ತು. ಆ ಕುಲದ ಪ್ರತಿಯೊಂದು ಗೋತ್ರದವರು ತಮ್ಮ ಪಾಲಿನ ಭೂಮಿಯನ್ನು ಪಡೆದುಕೊಂಡರು.
ದಾನ್ ಕುಲದವರಿಗೆ ಭೂಮಿ
40 ಆಮೇಲೆ ದಾನ್ ಕುಲದವರಿಗೆ ಭೂಮಿಯನ್ನು ಕೊಡಲಾಯಿತು. ಆ ಕುಲದ ಪ್ರತಿಯೊಂದು ಗೋತ್ರವು ತನ್ನ ಭೂಮಿಯನ್ನು ಪಡೆಯಿತು. 41 ಅವರಿಗೆ ಕೊಟ್ಟ ಊರುಗಳು: ಚೊರ್ಗಾ, ಎಷ್ಟಾವೋಲ್, ಈರ್ಷೆಮೆಷ್, 42 ಶಾಲಬ್ಬೀನ್, ಅಯ್ಯಾಲೋನ್, ಇತ್ಲಾ, 43 ಏಲೋನ್, ತಿಮ್ನಾ, ಎಕ್ರೋನ್, 44 ಎಲ್ತೆಕೇ, ಗಿಬ್ಬೆತೋನ್, ಬಾಲತ್, 45 ಯೆಹುದ್, ಬೆನೇಬೆರಕ್, ಗತ್‌ರಿಮ್ಮೋನ್, 46 ಮೇಯರ್ಕೋನ್ ಮತ್ತು ರಕ್ಕೋನ್, ಯೊಪ್ಪಕ್ಕೆ ಹತ್ತಿರದ ಪ್ರದೇಶಗಳೂ ಇವರಿಗೆ ದೊರೆತವು.
47 ದಾನ್‌ಕುಲದವರು ತಮ್ಮ ಪ್ರಾಂತ್ಯವನ್ನು ವಿಸ್ತರಿಸುವಲ್ಲಿ ಕಷ್ಟಪಡಬೇಕಾಯಿತು. ಅಲ್ಲಿ ಅವರಿಗೆ ಬಲಿಷ್ಠರಾದ ವೈರಿಗಳಿದ್ದರು. ದಾನ್ ಕುಲದವರು ಅವರನ್ನು ಸುಲಭವಾಗಿ ಸೋಲಿಸಲಾಗಲಿಲ್ಲ. ಆದ್ದರಿಂದ ಅವರು ಲೆಷೆಮ್ ಜನರೊಡನೆ ಯುದ್ಧಮಾಡಿ ಅವರನ್ನು ಸಂಹರಿಸಿ ಲೆಷೆಮ್ ಪಟ್ಟಣದಲ್ಲಿ ನೆಲೆಸಿದರು. ಅದಕ್ಕೆ ತಮ್ಮ ಮೂಲಪುರುಷನ ಹೆಸರಾದ ದಾನ್ ಎಂಬ ಹೆಸರನ್ನಿಟ್ಟರು. 48 ಈ ಎಲ್ಲ ನಗರಗಳನ್ನು ಮತ್ತು ಅವುಗಳ ಸುತ್ತಮುತ್ತಲಿನ ಹೊಲಗದ್ದೆಗಳನ್ನು ದಾನ್‌ಕುಲದವರಿಗೆ ಕೊಡಲಾಯಿತು. ಪ್ರತಿಯೊಂದು ಗೋತ್ರದವರು ತಮ್ಮ ಪಾಲಿನ ಭೂಮಿಯನ್ನು ಪಡೆದುಕೊಂಡರು.
ಯೆಹೋಶುವನಿಗೆ ಭೂಮಿ
49 ಹೀಗೆ ದೇಶವನ್ನು ಆಯಾ ಕುಲಗಳವರಿಗೆ ನಾಯಕರು ಹಂಚಿಕೊಟ್ಟರು. ಆಗ ಇಸ್ರೇಲರು ನೂನನ ಮಗನಾದ ಯೆಹೋಶುವನಿಗೂ ಸ್ವಲ್ಪ ಭೂಮಿಯನ್ನು ಕೊಡಬೇಕೆಂದು ನಿರ್ಧರಿಸಿದರು. ಈ ಭೂಮಿಯನ್ನು ಅವನಿಗೆ ಕೊಡುವುದಾಗಿ ವಾಗ್ದಾನ ಮಾಡಲಾಗಿತ್ತು. 50 ಆ ಭೂಮಿಯನ್ನು ಕೊಡಬೇಕೆಂಬುದು ಯೆಹೋವನ ಆಜ್ಞೆಯಾಗಿತ್ತು. ಆದ್ದರಿಂದ ಅವರು ಯೆಹೋಶುವನ ಅಪೇಕ್ಷೆಯಂತೆ ಎಫ್ರಾಯೀಮ್ಯರ ಬೆಟ್ಟಪ್ರದೇಶದಲ್ಲಿರುವ ತಿಮ್ನತ್‌ಸೆರಹ ಎಂಬ ಪಟ್ಟಣವನ್ನು ಅವನಿಗೆ ಕೊಟ್ಟರು. ಯೆಹೋಶುವನು ಆ ಪಟ್ಟಣವನ್ನು ಭದ್ರಗೊಳಿಸಿ ಅಲ್ಲಿ ವಾಸವಾಗಿದ್ದನು.
51 ಯಾಜಕನಾದ ಎಲ್ಲಾಜಾರನೂ ನೂನನ ಮಗನಾದ ಯೆಹೋಶುವನೂ ಇಸ್ರೇಲಿನ ಕುಲಪ್ರಧಾನರೂ ಶೀಲೋವಿನಲ್ಲಿ ಸೇರಿಬಂದು ದೇವದರ್ಶನಗುಡಾರದ ಬಾಗಿಲಲ್ಲಿ ಯೆಹೋವನ ಸನ್ನಿಧಿಯಲ್ಲೇ ಚೀಟುಹಾಕಿ ಹಂಚಿಕೊಟ್ಟ ಪ್ರಾಂತ್ಯಗಳೇ ಇವು. ಹೀಗೆ ದೇಶ ವಿಭಾಗ ಕಾರ್ಯವು ಪೂರ್ಣಗೊಂಡಿತು.
ಆಶ್ರಯನಗರಗಳು
20 ತರುವಾಯ ಯೆಹೋವನು ಯೆಹೋಶುವನಿಗೆ, 2 “ನಾನು ಮೋಶೆಯ ಮೂಲಕ ನಿನಗೆ ಆಜ್ಞಾಪಿಸಿದಂತೆ ಕೆಲವು ನಗರಗಳನ್ನು ವಿಶೇಷ ಆಶ್ರಯನಗರಗಳನ್ನಾಗಿ ಗೊತ್ತುಪಡಿಸು. 3 ನಿಮ್ಮಲ್ಲಿ ಒಬ್ಬನು ತಿಳಿಯದೆ ಆಕಸ್ಮಿಕವಾಗಿ ನರಹತ್ಯ ಮಾಡಿದರೆ ಅವನು ಯಾವುದಾದರೊಂದು ಆಶ್ರಯನಗರಕ್ಕೆ ಹೋಗಿ ಅಡಗಿಕೊಳ್ಳಲಿ.
4 “ಆಶ್ರಯನಗರಕ್ಕೆ ಓಡಿಹೋದವನು ಆ ಪಟ್ಟಣದ ಪ್ರವೇಶದ್ವಾರದಲ್ಲಿ ನಿಂತು ಅಲ್ಲಿಯ ಜನನಾಯಕರಿಗೆ ನಡೆದ ಸಂಗತಿಯನ್ನು ತಿಳಿಸಲಿ. ಆಗ ನಾಯಕರು ಅವನಿಗೆ ನಗರವನ್ನು ಪ್ರವೇಶಿಸಲು ಅನುಮತಿ ಕೊಡಲಿ; ತಮ್ಮ ಜೊತೆಯಲ್ಲಿ ವಾಸಿಸಲು ಒಂದು ಸ್ಥಳವನ್ನು ಕೊಡಲಿ. 5 ಆದರೆ ಅವನನ್ನು ಬೆನ್ನಟ್ಟಿಕೊಂಡು ಬಂದವನು ಆಶ್ರಯನಗರಕ್ಕೆ ಬಂದರೆ, ಆ ನಗರದ ನಾಯಕರು ಕೊಂದವನನ್ನು ಬೆನ್ನಟ್ಟಿ ಬಂದವನ ಕೈಗೆ ಒಪ್ಪಿಸಬಾರದು. ಆಶ್ರಯಕೋರಿ ಅವರಲ್ಲಿಗೆ ಬಂದ ವ್ಯಕ್ತಿಯನ್ನು ಅವರು ರಕ್ಷಿಸಬೇಕು. ಯಾಕೆಂದರೆ ಆ ನರಹತ್ಯವು ಆಕಸ್ಮಿಕವಾದದ್ದೇ ಹೊರತು ದ್ವೇಷದಿಂದ ಮಾಡಿದ್ದಲ್ಲ. 6 ಆ ನಗರದ ನ್ಯಾಯಾಸ್ಥಾನದಲ್ಲಿ ನ್ಯಾಯನಿರ್ಣಯವಾಗುವವರೆಗೂ ಮತ್ತು ಮಹಾಯಾಜಕನು ಜೀವದಿಂದ ಇರುವವರೆಗೂ ಅವನು ಅಲ್ಲಿಯೇ ಇರಬೇಕು. ತರುವಾಯ ಅವನು ತಾನು ಬಿಟ್ಟುಬಂದ ಊರಿನ ತನ್ನ ಮನೆಗೆ ಹೋಗಬಹುದು” ಎಂದು ಹೇಳಿದನು.
7 ಆದ್ದರಿಂದ ಇಸ್ರೇಲರು “ಆಶ್ರಯನಗರಗಳನ್ನಾಗಿ” ಕೆಲವು ನಗರಗಳನ್ನು ಆರಿಸಿದರು. ಅವು ಯಾವುವೆಂದರೆ: ನಫ್ತಾಲಿ ಕುಲದವರ ಪರ್ವತ ಪ್ರದೇಶವಾದ ಗಲಿಲಾಯ ಪ್ರಾಂತ್ಯದಲ್ಲಿನ ಕೆದೆಷ್; ಎಫ್ರಾಯೀಮ್ ಪರ್ವತ ಪ್ರದೇಶದಲ್ಲಿನ ಶೆಕೆಮ್; ಯೆಹೂದ್ಯರ ಬೆಟ್ಟದ ಸೀಮೆಯಲ್ಲಿನ ಹೆಬ್ರೋನ್ ಎಂಬ ಕಿರ್ಯತರ್ಬ. 8 ಜೆರಿಕೊವಿನ ಹತ್ತಿರ ಜೋರ್ಡನ್ ನದಿಯ ಪೂರ್ವದಲ್ಲಿದ್ದ ರೂಬೇನ್ಯರ ಪ್ರಾಂತ್ಯದ ಅರಣ್ಯಪ್ರದೇಶದಲ್ಲಿನ ಬೆಚೆರ್, ಗಾದ್ಯರಿಗೆ ಸೇರಿದ ಗಿಲ್ಯಾದ್ ಪ್ರಾಂತ್ಯದಲ್ಲಿನ ರಾಮೋತ್; ಮನಸ್ಸೆಯವರಿಗೆ ಸೇರಿದ ಬಾಷಾನಿನಲ್ಲಿರುವ ಗೋಲಾನ್. ಇವೇ ಆ ಆಶ್ರಯನಗರಗಳು.
9 ಇಸ್ರೇಲಿನವನಾಗಲಿ ಅಥವಾ ಅವರೊಂದಿಗೆ ಇರುವ ಒಬ್ಬ ಪರದೇಶಿಯನಾಗಲಿ ಆಕಸ್ಮಿಕವಾಗಿ ನರಹತ್ಯೆ ಮಾಡಿದ್ದರೆ ಒಂದು ಆಶ್ರಯನಗರಕ್ಕೆ ಓಡಿಹೋಗಲು ಅವಕಾಶವಿತ್ತು. ಯಾವನೇ ಆಗಲಿ ಮತ್ತೊಬ್ಬನನ್ನು ಆಕಸ್ಮಿಕವಾಗಿ ಕೊಂದರೆ ಆ ಪಟ್ಟಣಗಳಲ್ಲಿ ಆಶ್ರಯ ಪಡೆಯಬಹುದಾಗಿತ್ತು; ಅಲ್ಲಿ ಸುರಕ್ಷಿತವಾಗಿ ವಾಸಿಸಬಹುದಾಗಿತ್ತು. ಬೆನ್ನಟ್ಟಿ ಬಂದವನು ಅವನನ್ನು ಕೊಲ್ಲಲು ಸಾಧ್ಯವಿರಲಿಲ್ಲ. ಕೊಲೆ ಮಾಡಿದವನಿಗೆ ಆ ಪಟ್ಟಣದ ನ್ಯಾಯಾಲಯವೇ ತೀರ್ಪು ನೀಡುತ್ತಿತ್ತು.
ಯಾಜಕರಿಗೆ ಮತ್ತು ಲೇವಿಕುಲದವರಿಗೆ ಪಟ್ಟಣಗಳು
21 ಲೇವಿ ಕುಲಾಧಿಪತಿಗಳು ಮಾತಾಡುವುದಕ್ಕಾಗಿ ಯಾಜಕನಾದ ಎಲ್ಲಾಜಾರನ, ನೂನನ ಮಗನಾದ ಯೆಹೋಶುವನ ಮತ್ತು ಇಸ್ರೇಲಿನ ಬೇರೆ ಕುಲಾಧಿಪತಿಗಳ ಬಳಿಗೆ ಹೋದರು. 2 ಇದು ಕಾನಾನ್ ದೇಶದ ಶೀಲೋವಿನಲ್ಲಿ ನಡೆಯಿತು. ಲೇವಿ ಕುಲಾಧಿಪತಿಗಳು ಅವರಿಗೆ, “ಯೆಹೋವನು ಮೋಶೆಗೆ ಆಜ್ಞಾಪಿಸಿರುವಂತೆ ನೀವು ನಮಗೆ ವಾಸಮಾಡುವುದಕ್ಕೆ ಪಟ್ಟಣಗಳನ್ನೂ ನಮ್ಮ ಪಶುಗಳು ಮೇಯುವುದಕ್ಕಾಗಿ ಹೊಲಗಳನ್ನೂ ಕೊಡಬೇಕು” ಎಂದು ಹೇಳಿದರು. 3 ಇಸ್ರೇಲರು ಯೆಹೋವನ ಈ ಆಜ್ಞೆಯನ್ನು ಪಾಲಿಸಿದರು. ಅವರು ಲೇವಿಯರಿಗೆ ಈ ಪಟ್ಟಣಗಳನ್ನು ಮತ್ತು ಅವರ ಪಶುಗಳಿಗಾಗಿ ಅವುಗಳ ಸುತ್ತಮುತ್ತಲಿನ ಭೂಮಿಯನ್ನು ಕೊಟ್ಟರು:
4 ಕೆಹಾತ್ಯರ ಒಂದು ಭಾಗಕ್ಕೆ ಯೆಹೂದ, ಸಿಮೆಯೋನ್ ಮತ್ತು ಬೆನ್ಯಾಮೀನ್ ಕುಲಗಳ ಭೂಭಾಗದಿಂದ ಹದಿಮೂರು ಪಟ್ಟಣಗಳನ್ನು ಕೊಡಲಾಯಿತು, ಕೆಹಾತ್ಯರು ಲೇವಿ ಕುಲದವನೂ ಯಾಜಕನೂ ಆದ ಆರೋನನ ಸಂತತಿಯವರಾಗಿದ್ದರು.
5 ಉಳಿದೆಲ್ಲ ಕೆಹಾತ್ಯರಿಗೆ ಎಫ್ರಾಯೀಮ್, ದಾನ್ ಮತ್ತು ಮನಸ್ಸೆಯ ಅರ್ಧಕುಲದ ಪ್ರದೇಶಗಳಿಂದ ಹತ್ತು ಪಟ್ಟಣಗಳನ್ನು ಕೊಡಲಾಯಿತು.
6 ಗೇರ್ಷೋನ್ಯ ಗೋತ್ರದವರಿಗೆ ಹದಿಮೂರು ಪಟ್ಟಣಗಳನ್ನು ಕೊಡಲಾಯಿತು. ಈ ಪಟ್ಟಣಗಳು ಇಸ್ಸಾಕಾರ್, ಆಶೇರ್, ನಫ್ತಾಲಿ ಮತ್ತು ಬಾಷಾನಿನಲ್ಲಿರುವ ಮನಸ್ಸೆಯ ಅರ್ಧಕುಲದವರಿಗೆ ಸೇರಿದ ಪ್ರದೇಶಗಳಲ್ಲಿದ್ದವು.
7 ಮೆರಾರೀ ಗೋತ್ರದವರಿಗೆ ಹನ್ನೆರಡು ಪಟ್ಟಣಗಳನ್ನು ಕೊಡಲಾಯಿತು. ಈ ಹನ್ನೆರಡು ಪಟ್ಟಣಗಳು ರೂಬೇನ್, ಗಾದ್ ಮತ್ತು ಜೆಬುಲೂನ್ ಕುಲಗಳಿಗೆ ಸೇರಿದ ಪ್ರದೇಶಗಳಲ್ಲಿದ್ದವು.
8 ಹೀಗೆ ಇಸ್ರೇಲರು ಲೇವಿಯರಿಗೆ ಈ ಪಟ್ಟಣಗಳನ್ನು ಮತ್ತು ಅವುಗಳ ಸುತ್ತಮುತ್ತಲಿನ ಹೊಲಗದ್ದೆಗಳನ್ನು ಕೊಟ್ಟರು; ಯೆಹೋವನು ಮೋಶೆಗೆ ಕೊಟ್ಟ ಆಜ್ಞೆಯನ್ನು ಪಾಲಿಸಿದರು.
9 ಯೆಹೂದ ಮತ್ತು ಸಿಮೆಯೋನ್ ಕುಲದವರ ಪ್ರದೇಶಗಳಲ್ಲಿ ಬರುವ ಪಟ್ಟಣಗಳ ಹೆಸರುಗಳು ಇಂತಿವೆ: 10 ಪಟ್ಟಣಗಳನ್ನು ಆರಿಸಿಕೊಳ್ಳುವ ಮೊದಲ ಅಧಿಕಾರವನ್ನು ಕೆಹಾತ್ಯ ಗೋತ್ರದ ಲೇವಿಯರಿಗೆ ಕೊಡಲಾಯಿತು. 11 ಅವರಿಗೆ ಹೆಬ್ರೋನ್ ಎಂಬ ಕಿರ್ಯತರ್ಬನಗರ (ಇದಕ್ಕೆ ಅನಾಕನ ತಂದೆಯಾದ ಅರ್ಬನ ಹೆಸರಿಡಲಾಗಿತ್ತು.) ಮತ್ತು ಅವರ ಪಶುಗಳಿಗಾಗಿ ಆ ನಗರದ ಹತ್ತಿರದ ಸ್ವಲ್ಪ ಭೂಮಿಯನ್ನು ಕೊಡಲಾಯಿತು. 12 ಆದರೆ ಕಿರ್ಯತರ್ಬ ನಗರದ ಸುತ್ತಮುತ್ತಲಿನ ಸಣ್ಣಸಣ್ಣ ಊರುಗಳು ಮತ್ತು ಅವುಗಳಿಗೆ ಸೇರಿದ ಭೂಮಿಯು ಯೆಫುನ್ನೆಯ ಮಗನಾದ ಕಾಲೇಬನಿಗೆ ಸೇರಿತ್ತು. 13 ಆದ್ದರಿಂದ ಆರೋನನ ಸಂತತಿಯವರಿಗೆ ಆಶ್ರಯನಗರವಾದ ಹೆಬ್ರೋನ್ ನಗರವನ್ನು ಕೊಡಲಾಯಿತು. ಆರೋನನ ಸಂತತಿಯವರಿಗೆ ಅವರು ಲಿಬ್ನಾ, 14 ಯತ್ತೀರ್, ಎಷ್ಟೆಮೋಹ, 15 ಹೋಲೋನ್, ದೆಬೀರ್, 16 ಆಯಿನ್, ಯುಟ್ಟಾ ಮತ್ತು ಬೇತ್‌ಷೆಮೆಷ್ ಎಂಬ ಪಟ್ಟಣಗಳನ್ನು ಸಹ ಕೊಟ್ಟರು. ಅವರ ಪಶುಗಳಿಗಾಗಿ ಪಟ್ಟಣಗಳ ಸಮೀಪದಲ್ಲಿದ್ದ ಭೂಮಿಯನ್ನು ಸಹ ಕೊಟ್ಟರು. ಈ ಎರಡು ಗುಂಪುಗಳಿಗೆ ಅವರು ಒಂಭತ್ತು ಪಟ್ಟಣಗಳನ್ನು ಕೊಟ್ಟರು.
17 ಬೆನ್ಯಾಮೀನ್ ಕುಲದವರಿಗೆ ಸೇರಿದ ನಗರಗಳನ್ನು ಸಹ ಆರೋನನ ಸಂತತಿಯವರಿಗೆ ಕೊಡಲಾಯಿತು. ಅವು ಯಾವುವೆಂದರೆ: ಗಿಬ್ಯೋನ್, ಗೆಬ, 18 ಅನಾತೋತ್ ಮತ್ತು ಅಲ್ಮೋನ್. ಈ ನಾಲ್ಕು ಪಟ್ಟಣಗಳನ್ನೂ ಅವರ ಪಶುಗಳಿಗಾಗಿ ಆ ಪಟ್ಟಣಗಳ ಸಮೀಪದಲ್ಲಿದ್ದ ಸ್ವಲ್ಪ ಭೂಮಿಯನ್ನೂ ಅವರಿಗೆ ಕೊಡಲಾಯಿತು. 19 ಒಟ್ಟಿನಲ್ಲಿ ಆರೋನನ ಸಂತತಿಯವರಾದ ಎಲ್ಲಾ ಯಾಜಕರಿಗೆ ಅವರು ಹದಿಮೂರು ಪಟ್ಟಣಗಳನ್ನು ಕೊಟ್ಟರು. ಅವರ ಪಶುಗಳಿಗಾಗಿ ಪಟ್ಟಣದ ಸಮೀಪದಲ್ಲಿದ್ದ ಸ್ವಲ್ಪ ಭೂಮಿಯನ್ನು ಅವರಿಗೆ ಕೊಡಲಾಯಿತು.
20 ಕೆಹಾತ್ಯರ ಕುಟುಂಬಕ್ಕೆ ಸೇರಿದ ಇತರ ಜನರಿಗೆ ಎಫ್ರಾಯೀಮ್ ಕುಲದವರ ಪ್ರದೇಶದಿಂದ ಕೆಲವು ಪಟ್ಟಣಗಳನ್ನು ಕೊಡಲಾಯಿತು. ಅವರು ಪಡೆದ ಪಟ್ಟಣಗಳು ಇವು: 21 ಎಫ್ರಾಯೀಮ್ ಪ್ರದೇಶದ ಬೆಟ್ಟದಲ್ಲಿರುವ ಆಶ್ರಯನಗರವಾದ ಶೆಕೆಮ್, ಗೆಜೆರ್, 22 ಕಿಬ್‌ಚೈಮ್ ಮತ್ತು ಬೇತ್‌ಹೋರೋನ್. ಒಟ್ಟಿನಲ್ಲಿ ಎಫ್ರಾಯೀಮರು ಅವರಿಗೆ ನಾಲ್ಕು ಪಟ್ಟಣಗಳನ್ನೂ ಅವರ ಪಶುಗಳಿಗಾಗಿ ಆ ಪಟ್ಟಣಗಳ ಸುತ್ತಮುತ್ತಲಿನ ಸ್ವಲ್ಪ ಭೂಮಿಯನ್ನೂ ಕೊಟ್ಟರು.
23 ದಾನ್ ಕುಲದವರು ಅವರಿಗೆ ಎಲ್ತೆಕೇ, ಗಿಬ್ಬೆತೋನ್, 24 ಅಯ್ಯಾಲೋನ್ ಮತ್ತು ಗತ್‌ರಿಮ್ಮೋನ್ ಎಂಬ ನಾಲ್ಕು ಪಟ್ಟಣಗಳನ್ನು ಮತ್ತು ಅವರ ಪಶುಗಳಿಗಾಗಿ ಪ್ರತಿಯೊಂದು ಪಟ್ಟಣದ ಸುತ್ತಮುತ್ತಲಿನ ಸ್ವಲ್ಪ ಭೂಮಿಯನ್ನು ಕೊಟ್ಟರು.
25 ಮನಸ್ಸೆಕುಲದ ಅರ್ಧಜನರು ಅವರಿಗೆ ತಾನಾಕ್ ಮತ್ತು ಗತ್‌ರಿಮ್ಮೋನ್ ಎಂಬ ಪಟ್ಟಣಗಳನ್ನು ಕೊಟ್ಟರು. ಒಟ್ಟಿನಲ್ಲಿ ಮನಸ್ಸೆಕುಲದ ಅರ್ಧಜನರು ಅವರಿಗೆ ಎರಡು ಪಟ್ಟಣಗಳನ್ನು ಮತ್ತು ಅವರ ಪಶುಗಳಿಗಾಗಿ ಪ್ರತಿಯೊಂದು ಪಟ್ಟಣದ ಸುತ್ತಮುತ್ತಲಿನ ಸ್ವಲ್ಪ ಭೂಮಿಯನ್ನು ಕೊಟ್ಟರು.
26 ಕೆಹಾತ್ಯ ಕುಟುಂಬದ ಉಳಿದ ಜನರು ಒಟ್ಟಿನಲ್ಲಿ ಹತ್ತು ಪಟ್ಟಣಗಳನ್ನು ಮತ್ತು ತಮ್ಮ ಪಶುಗಳಿಗಾಗಿ ಪ್ರತಿಯೊಂದು ಪಟ್ಟಣದ ಸುತ್ತಮುತ್ತಲಿನ ಸ್ವಲ್ಪಭೂಮಿಯನ್ನು ಪಡೆದರು.
27 ಲೇವಿಯ ಸಂತತಿಯವರಾದ ಗೇರ್ಷೋನ್ಯರಿಗೆ ಈ ಊರುಗಳನ್ನು ಕೊಡಲಾಯಿತು:
ಮನಸ್ಸೆಕುಲದ ಅರ್ಧಜನರು ಅವರಿಗೆ ಬಾಷಾನಿನಲ್ಲಿದ್ದ ಆಶ್ರಯನಗರವಾದ ಗೋಲಾನ್ ನಗರವನ್ನು ಕೊಟ್ಟರು. ಮನಸ್ಸೆಯವರು ಬೆಯೆಷ್ಟೆರಾವನ್ನು ಸಹ ಅವರಿಗೆ ಕೊಟ್ಟರು. ಒಟ್ಟಿನಲ್ಲಿ ಈ ಮನಸ್ಸೆಕುಲದ ಅರ್ಧಜನರು ಎರಡು ಪಟ್ಟಣಗಳನ್ನು ಮತ್ತು ಅವರ ಪಶುಗಳಿಗಾಗಿ ಆ ಪಟ್ಟಣಗಳ ಸುತ್ತಮುತ್ತಲಿನ ಸ್ವಲ್ಪ ಭೂಮಿಯನ್ನು ಕೊಟ್ಟರು.
28 ಇಸ್ಸಾಕಾರ್ ಕುಲದವರು ಕಿಷ್ಯೋನ್, ದಾಬೆರತ್, 29 ಯರ್ಮೂತ್, ಏಂಗನ್ನೀಮ್ ಎಂಬ ಪಟ್ಟಣಗಳನ್ನು ಕೊಟ್ಟರು. ಒಟ್ಟಿನಲ್ಲಿ ಇಸ್ಸಾಕಾರ್ ಕುಲದವರು ಅವರಿಗೆ ನಾಲ್ಕು ಪಟ್ಟಣಗಳನ್ನು ಮತ್ತು ಅವರ ಪಶುಗಳಿಗಾಗಿ ಆ ಪಟ್ಟಣಗಳ ಸುತ್ತಮುತ್ತಲಿನ ಸ್ವಲ್ಪ ಭೂಮಿಯನ್ನು ಕೊಟ್ಟರು.
30 ಆಶೇರ್ ಕುಲದವರು ಮಿಷಾಲ್, ಅಬ್ದೋನ್, 31 ಹೆಲ್ಕಾತ್, ರೆಹೋಬ್‌ಗಳನ್ನು ಕೊಟ್ಟರು. ಒಟ್ಟಿನಲ್ಲಿ ಆಶೇರರು ಅವರಿಗೆ ನಾಲ್ಕು ಪಟ್ಟಣಗಳನ್ನು ಮತ್ತು ಅವರ ಪಶುಗಳಿಗಾಗಿ ಪ್ರತಿಯೊಂದು ಪಟ್ಟಣದ ಸುತ್ತಮುತ್ತಲಿನ ಸ್ವಲ್ಪ ಭೂಮಿಯನ್ನು ಕೊಟ್ಟರು.
32 ನಫ್ತಾಲಿ ಕುಲದವರು ಗಲಿಲಾಯದ ಆಶ್ರಯನಗರವಾದ ಕೆದೆಷ್, ಹಮ್ಮೋತ್‌ದೋರ್, ಕರ್ತಾನ್ ಎಂಬವುಗಳನ್ನು ಕೊಟ್ಟರು. ಒಟ್ಟಿನಲ್ಲಿ ನಫ್ತಾಲಿಯರು ಮೂರು ಪಟ್ಟಣಗಳನ್ನು ಮತ್ತು ಅವರ ಪಶುಗಳಿಗಾಗಿ ಆ ಪಟ್ಟಣಗಳ ಸುತ್ತಮುತ್ತಲಿನ ಸ್ವಲ್ಪ ಭೂಮಿಯನ್ನು ಕೊಟ್ಟರು.
33 ಒಟ್ಟಿನಲ್ಲಿ ಗೇರ್ಷೋನ್ಯರಿಗೆ ಹದಿಮೂರು ಪಟ್ಟಣಗಳು ಮತ್ತು ಅವರ ಪಶುಗಳಿಗಾಗಿ ಆ ಪಟ್ಟಣಗಳ ಸುತ್ತಮುತ್ತಲಿನ ಸ್ವಲ್ಪ ಭೂಮಿಯು ಸಿಕ್ಕಿತು.
34 ಲೇವಿಯರ ಮತ್ತೊಂದು ಗೋತ್ರವು ಮೆರಾರೀ ಎಂಬುದು. ಆ ಗೋತ್ರಕ್ಕೆ ದೊರೆತ ಪಟ್ಟಣಗಳು ಇಂತಿವೆ: ಜೆಬುಲೂನ್ ಕುಲದವರು ಅವರಿಗೆ ಚೂಕ್ನೀಮ್, ಕರ್ತಾ, 35 ದಿಮ್ನಾ, ನಹಲಾಲ್‌ಗಳನ್ನು ಕೊಟ್ಟರು. ಒಟ್ಟಿನಲ್ಲಿ ಜೆಬುಲೂನ್ಯರು ಅವರಿಗೆ ನಾಲ್ಕು ಪಟ್ಟಣಗಳನ್ನು ಮತ್ತು ಅವರ ಪಶುಗಳಿಗಾಗಿ ಪ್ರತಿಯೊಂದು ಪಟ್ಟಣದ ಸುತ್ತಮುತ್ತಲಿನ ಸ್ವಲ್ಪ ಭೂಮಿಯನ್ನು ಕೊಟ್ಟರು. 36 ರೂಬೇನ್ಯರು ಅವರಿಗೆ ಬೆಚೆರ್, ಯಹಚಾ, 37 ಕೆದೇಮೋತ್, ಮೇಫಾಗತ್ ಪಟ್ಟಣಗಳನ್ನು ಕೊಟ್ಟರು. ಒಟ್ಟಿನಲ್ಲಿ ರೂಬೇನ್ಯರು ಅವರಿಗೆ ನಾಲ್ಕು ಪಟ್ಟಣಗಳನ್ನು ಮತ್ತು ಅವರ ಪಶುಗಳಿಗಾಗಿ ಪ್ರತಿಯೊಂದು ಪಟ್ಟಣದ ಸುತ್ತಮುತ್ತಲಿನ ಸ್ವಲ್ಪ ಭೂಮಿಯನ್ನು ಕೊಟ್ಟರು. 38 ಗಾದ್ಯರು ಅವರಿಗೆ ಗಿಲ್ಯಾದಿನ ಆಶ್ರಯನಗರವಾದ ರಾಮೋತ್, ಮಹನಯೀಮ್, 39 ಹೆಷ್ಬೋನ್, ಯಗ್ಜೇರ್ ಪಟ್ಟಣಗಳನ್ನು ಕೊಟ್ಟರು. ಒಟ್ಟಿನಲ್ಲಿ ಗಾದ್ಯರು ಅವರಿಗೆ ನಾಲ್ಕು ಪಟ್ಟಣಗಳನ್ನು ಮತ್ತು ಅವರ ಪಶುಗಳಿಗಾಗಿ ಪ್ರತಿಯೊಂದು ಪಟ್ಟಣಗಳ ಸುತ್ತಮುತ್ತಲಿನ ಸ್ವಲ್ಪ ಭೂಮಿಯನ್ನು ಕೊಟ್ಟರು.
40 ಲೇವಿಯರ ಕೊನೆಯ ಗೋತ್ರದವರಾದ ಮೆರಾರೀಯರು ಒಟ್ಟಿನಲ್ಲಿ ಹನ್ನೆರಡು ಪಟ್ಟಣಗಳನ್ನು ಪಡೆದುಕೊಂಡರು.
41 ಹೀಗೆ ಲೇವಿಯರು ಒಟ್ಟಿನಲ್ಲಿ ನಲವತ್ತೆಂಟು ಪಟ್ಟಣಗಳನ್ನು ಮತ್ತು ತಮ್ಮ ಪಶುಗಳಿಗಾಗಿ ಪ್ರತಿಯೊಂದು ಪಟ್ಟಣದ ಸುತ್ತಮುತ್ತಲಿನ ಸ್ವಲ್ಪ ಭೂಮಿಯನ್ನು ಪಡೆದರು. ಈ ಎಲ್ಲ ಪಟ್ಟಣಗಳು ಬೇರೆ ಕುಲದವರ ಪ್ರದೇಶಗಳಲ್ಲಿದ್ದವು. 42 ಪ್ರತಿಯೊಂದು ಪಟ್ಟಣದಲ್ಲಿ ಪಶುಗಳಿಗಾಗಿ ಸ್ವಲ್ಪ ಭೂಮಿ ಇತ್ತು. ಇದು ಪ್ರತಿಯೊಂದು ಪಟ್ಟಣಕ್ಕೂ ಅನ್ವಯಿಸುತ್ತಿತ್ತು.
43 ಹೀಗೆ ಯೆಹೋವನು ಇಸ್ರೇಲರಿಗೆ ಮಾಡಿದ ತನ್ನ ವಾಗ್ದಾನವನ್ನು ಪೂರ್ಣಗೊಳಿಸಿದನು. ಆತನು ಅವರಿಗೆ ವಾಗ್ದಾನ ಮಾಡಿದ ದೇಶವನ್ನು ಕೊಟ್ಟನು. ಅವರು ಅದನ್ನು ಹಂಚಿಕೊಂಡು ವಾಸವಾಗಿದ್ದರು. 44 ಯೆಹೋವನು ಅವರ ಪೂರ್ವಿಕರಿಗೆ ಪ್ರಮಾಣ ಮಾಡಿದಂತೆ ಅವರ ಪ್ರದೇಶದಲ್ಲೆಲ್ಲಾ ಶಾಂತಿ ನೆಲೆಸುವಂತೆ ಮಾಡಿದನು. ಅವರ ಯಾವ ಶತ್ರುಗಳೂ ಅವರನ್ನು ಸೋಲಿಸಲಿಲ್ಲ. ಇಸ್ರೇಲರು ತಮ್ಮ ಎಲ್ಲ ಶತ್ರುಗಳನ್ನು ಸೋಲಿಸುವಂತೆ ಯೆಹೋವನು ಮಾಡಿದನು. 45 ಯೆಹೋವನು ಇಸ್ರೇಲರಿಗೆ ಮಾಡಿದ ಪ್ರತಿಯೊಂದು ವಾಗ್ದಾನವನ್ನು ನೆರವೇರಿಸಿದನು. ಆತನು ಕಾರ್ಯರೂಪಕ್ಕೆ ತರದ ವಾಗ್ದನವೇ ಉಳಿಯಲಿಲ್ಲ. ಪ್ರತಿಯೊಂದು ವಾಗ್ದಾನವೂ ನೆರವೇರಿತು.
ಸಿಮೆಯೋನನು ಯೇಸುವನ್ನು ನೋಡಿದನು
25 ಸಿಮೆಯೋನನೆಂಬ ಒಬ್ಬ ಮನುಷ್ಯನು ಜೆರುಸಲೇಮಿನಲ್ಲಿ ವಾಸಿಸುತ್ತಿದ್ದನು. ಅವನು ಒಳ್ಳೆಯವನಾಗಿದ್ದನು ಮತ್ತು ಬಹಳ ಧಾರ್ಮಿಕನಾಗಿದ್ದನು. ದೇವರು ಇಸ್ರೇಲರಿಗೆ ಸಹಾಯ ಮಾಡುವ ಕಾಲವನ್ನೇ ಸಿಮೆಯೋನನು ಎದುರು ನೋಡುತ್ತಿದ್ದನು. ಅವನು ಪವಿತ್ರಾತ್ಮಭರಿತನಾಗಿದ್ದನು. 26 ಪ್ರಭುವು ಕಳುಹಿಸುವ ಕ್ರಿಸ್ತನನ್ನು ನೋಡುವ ತನಕ ನೀನು ಸಾಯುವುದಿಲ್ಲ ಎಂದು ಪವಿತ್ರಾತ್ಮನು ಸಿಮೆಯೋನನಿಗೆ ತಿಳಿಸಿದ್ದನು. 27 ಸಿಮೆಯೋನನು ಪವಿತ್ರಾತ್ಮನ ಪ್ರೇರಣೆಯಿಂದ ದೇವಾಲಯಕ್ಕೆ ಬಂದನು. ಯೆಹೂದ್ಯರ ಧರ್ಮಶಾಸ್ತ್ರದ ವಿಧಿಗಳನ್ನು ಪೂರೈಸಲು ಮರಿಯಳು ಮತ್ತು ಯೋಸೇಫನು ದೇವಾಲಯಕ್ಕೆ ಹೋದರು. ಅವರು ಮಗು ಯೇಸುವನ್ನು ದೇವಾಲಯಕ್ಕೆ ತಂದರು. 28 ಸಿಮೆಯೋನನು ಮಗುವನ್ನು ತನ್ನ ಕೈಗಳಲ್ಲಿ ಎತ್ತಿಕೊಂಡು ದೇವರಿಗೆ ಹೀಗೆಂದು ಸ್ತೋತ್ರ ಸಲ್ಲಿಸಿದನು:
29 “ಪ್ರಭುವೇ, ನಿನ್ನ ವಾಗ್ದಾನದಂತೆ ಸಮಾಧಾನದಿಂದ ಸಾಯಲು ನಿನ್ನ ದಾಸನಿಗೆ ಅಪ್ಪಣೆಯಾಗಲಿ.
30 ನೀನು ದಯಪಾಲಿಸಿದ ರಕ್ಷಕನನ್ನು[a] ಕಣ್ಣಾರೆಕಂಡೆನು.
31 ನೀನು ಆತನನ್ನು ಜನರೆಲ್ಲರಿಗೆ ಪ್ರತ್ಯಕ್ಷ ಮಾಡಿರುವೆ.
32 ಆತನು ಯೆಹೂದ್ಯರಲ್ಲದ ಜನರಿಗೆ ನಿನ್ನ ಮಾರ್ಗವನ್ನು ತೋರಿಸುವ ಬೆಳಕಾಗಿದ್ದಾನೆ.
ಆತನಿಂದ ನಿನ್ನ ಜನರಾದ ಇಸ್ರೇಲರಿಗೆ ಕೀರ್ತಿಯಾಗುವುದು.”
33 ಸಿಮೆಯೋನನು ಮಗುವಿನ ಕುರಿತಾಗಿ ಹೇಳಿದ ಮಾತುಗಳನ್ನು ಕೇಳಿ ತಂದೆತಾಯಿಗಳಿಗೆ ಆಶ್ಚರ್ಯವಾಯಿತು. 34 ಬಳಿಕ ಸಿಮೆಯೋನನು ಅವರನ್ನು ಆಶೀರ್ವದಿಸಿ ಮರಿಯಳಿಗೆ, “ಈ ಮಗುವಿನ ನಿಮಿತ್ತ ಯೆಹೂದ್ಯರಲ್ಲಿ ಅನೇಕರು ಬೀಳುವರು. ಅನೇಕರು ಏಳುವರು. ಕೆಲವರು ಅಂಗೀಕರಿಸರು ಎಂಬುದಕ್ಕೆ ಈತನು ದೇವರಿಂದ ಬಂದ ಗುರುತಾಗಿರುವನು. 35 ಜನರು ಗುಟ್ಟಾಗಿ ಯೋಚಿಸುವ ಸಂಗತಿಗಳು ಬಯಲಾಗುವವು. ಮುಂದೆ ಸಂಭವಿಸುವ ಸಂಗತಿಗಳಿಂದ ನಿನ್ನ ಹೃದಯಕ್ಕೆ ಅಲಗು ನಾಟಿದಂತಾಗುವುದು” ಎಂದು ಹೇಳಿದನು.
ಅನ್ನಳು ಯೇಸುವನ್ನು ನೋಡಿದಳು
36 ದೇವಾಲಯದಲ್ಲಿ ಅನ್ನಳೆಂಬ ಒಬ್ಬ ಪ್ರವಾದಿನಿ[b] ಇದ್ದಳು. ಆಕೆಯು ಅಸೇರನ ವಂಶದ ಫನುವೇಲನ ಕುಟುಂಬದವಳಾಗಿದ್ದಳು. ಅನ್ನಳು ಬಹಳ ಮುಪ್ಪಿನವಳಾಗಿದ್ದಳು. ಆಕೆಯು ಮದುವೆಯಾದ ಏಳು ವರ್ಷಕ್ಕೆ ಗಂಡನನ್ನು ಕಳೆದುಕೊಂಡಳು. 37 ತನ್ನ ಉಳಿದ ಜೀವಮಾನವೆಲ್ಲಾ ವಿಧವೆಯಾಗಿದ್ದ ಆಕೆಗೆ ಈಗ ಎಂಭತ್ತನಾಲ್ಕು ವರ್ಷ ವಯಸ್ಸಾಗಿತ್ತು. ಅನ್ನಳು ಯಾವಾಗಲೂ ದೇವಾಲಯದಲ್ಲಿಯೇ ಇದ್ದಳು. ಆಕೆ ಬೇರೆಲ್ಲಿಗೂ ಹೋಗುತ್ತಿರಲಿಲ್ಲ. ಆಕೆ ಉಪವಾಸ ಮಾಡುತ್ತಾ ಮತ್ತು ಹಗಲಿರುಳು ಪ್ರಾರ್ಥಿಸುತ್ತಾ ದೇವರನ್ನು ಆರಾಧಿಸುತ್ತಿದ್ದಳು.
38 ಅವಳು ಅದೇ ಸಮಯದಲ್ಲಿ ಅಲ್ಲಿಗೆ ಬಂದು, ದೇವರಿಗೆ ಸ್ತೋತ್ರ ಸಲ್ಲಿಸಿ ದೇವರು ಜೆರುಸಲೇಮಿಗೆ ದಯಪಾಲಿಸುವ ಬಿಡುಗಡೆಯನ್ನು ಎದುರುನೋಡುತ್ತಿದ್ದ ಜನರಿಗೆ ಯೇಸುವಿನ ವಿಷಯವಾಗಿ ತಿಳಿಸಿದಳು.
ಯೋಸೇಫನು ಮತ್ತು ಮರಿಯಳು ಮನೆಗೆ ಮರಳಿದರು
39 ಪ್ರಭುವಿನ ಧರ್ಮಶಾಸ್ತ್ರದ ಎಲ್ಲ ವಿಧಿಗಳನ್ನು ನೆರವೇರಿಸಿದ ಮೇಲೆ ಯೋಸೇಫ ಮತ್ತು ಮರಿಯಳು ಗಲಿಲಾಯ ಪ್ರಾಂತ್ಯದಲ್ಲಿದ್ದ ತಮ್ಮ ಸ್ವಂತ ಊರಾದ ನಜರೇತಿಗೆ ಹಿಂತಿರುಗಿದರು. 40 ಬಾಲಕ ಯೇಸು ಬೆಳೆದು ಬಲಗೊಂಡು ಸಂಪೂರ್ಣ ಜ್ಞಾನಿಯಾದನು. ದೇವರ ಆಶೀರ್ವಾದವು ಆತನೊಡನೆ ಇತ್ತು.
ಬಾಲಕ ಯೇಸು
41 ಪ್ರತಿವರ್ಷ ಯೇಸುವಿನ ತಂದೆತಾಯಿಗಳು ಪಸ್ಕಹಬ್ಬಕ್ಕಾಗಿ[c] ಜೆರುಸಲೇಮಿಗೆ ಹೋಗುತ್ತಿದ್ದರು. 42 ಯೇಸುವಿಗೆ ಹನ್ನೆರಡು ವರ್ಷವಾಗಿದ್ದಾಗ ಎಂದಿನಂತೆ ಅವರು ಪಸ್ಕ ಹಬ್ಬಕ್ಕಾಗಿ ಜೆರುಸಲೇಮಿಗೆ ಹೋದರು. 43 ಹಬ್ಬದ ದಿನಗಳು ಮುಗಿದ ನಂತರ ಅವರು ಮನೆಗೆ ಹೋದರು. ಆದರೆ ಬಾಲಕನಾದ ಯೇಸು ಜೆರುಸಲೇಮಿನಲ್ಲಿ ಉಳಿದುಕೊಂಡನು. ಆತನ ತಂದೆತಾಯಿಗಳಿಗೆ ಇದು ತಿಳಿದಿರಲಿಲ್ಲ. ಯೇಸುವು ಯಾತ್ರಿಕರ ಗುಂಪಿನಲ್ಲಿರಬಹುದೆಂದು ಭಾವಿಸಿಕೊಂಡ 44 ಯೋಸೇಫನು ಮತ್ತು ಮರಿಯಳು ಒಂದು ದಿನವೆಲ್ಲ ಪ್ರಯಾಣ ಮಾಡಿದರು. ನಂತರ ಮಗನನ್ನು ಕಾಣದೆ ತಮ್ಮ ಕುಟುಂಬದವರ ಮತ್ತು ಆಪ್ತಸ್ನೇಹಿತರ ಮಧ್ಯದಲ್ಲಿ ಆತನಿಗಾಗಿ ಹುಡುಕತೊಡಗಿದರು. 45 ಆದರೆ ಅಲ್ಲೆಲ್ಲೂ ಕಾಣದೆ ಯೇಸುವನ್ನು ಹುಡುಕಲು ಜೆರುಸಲೇಮಿಗೆ ಮರಳಿಹೋದರು.
46 ಮೂರು ದಿನಗಳಾದ ಮೇಲೆ ಆತನನ್ನು ಕಂಡುಕೊಂಡರು. ಯೇಸುವು ದೇವಾಲಯದಲ್ಲಿ ಧಾರ್ಮಿಕ ಉಪದೇಶಕರೊಡನೆ ಕುಳಿತುಕೊಂಡು ಅವರ ಉಪದೇಶವನ್ನು ಆಲಿಸುತ್ತಾ ಮತ್ತು ಅವರಿಗೆ ಪ್ರಶೆಗಳನ್ನು ಕೇಳುತ್ತಾ ಇದ್ದನು. 47 ಆತನ ಮಾತುಗಳನ್ನು ಕೇಳಿ ಆತನ ತಿಳುವಳಿಕೆಗೂ ಆತನ ಬುದ್ಧಿವಂತಿಕೆಯ ಉತ್ತರಗಳಿಗೂ ಅವರೆಲ್ಲರೂ ಆಶ್ಚರ್ಯಪಟ್ಟರು. 48 ಯೇಸುವಿನ ತಂದೆತಾಯಿಗಳು ಆತನನ್ನು ಅಲ್ಲಿ ಕಂಡು ಆಶ್ಚರ್ಯಪಟ್ಟರು. ಮರಿಯಳು ಆತನಿಗೆ, “ಮಗನೇ, ನೀನು ನಮಗೆ ಏಕೆ ಹೀಗೆ ಮಾಡಿದೆ? ನಿನ್ನ ತಂದೆ ಮತ್ತು ನಾನು ನಿನಗಾಗಿ ಬಹಳ ಚಿಂತಿಸುತ್ತಿದ್ದೆವು. ನಿನಗೋಸ್ಕರ ನಾವು ಹುಡುಕುತ್ತಿದ್ದೆವು” ಎಂದು ಹೇಳಿದಳು.
49 ಯೇಸು ಅವರಿಗೆ, “ನೀವು ನನಗೋಸ್ಕರ ಏಕೆ ಹುಡುಕಬೇಕಿತ್ತು? ನನ್ನ ತಂದೆಯ (ದೇವರ) ಕೆಲಸ ಎಲ್ಲಿರುತ್ತದೋ ಅಲ್ಲಿ ನಾನು ಇರಬೇಕು ಎಂಬುದನ್ನು ನೀವು ತಿಳಿದಿರಬೇಕಾಗಿತ್ತು!” ಎಂದು ಹೇಳಿದನು. 50 ಆದರೆ ಆತನ ಮಾತು ಅವರಿಗೆ ಅರ್ಥವಾಗಲಿಲ್ಲ.
51 ಯೇಸು ಅವರೊಡನೆ ನಜರೇತಿಗೆ ಬಂದು ಅವರಿಗೆ ವಿಧೇಯನಾಗಿದ್ದನು. ಆತನ ತಾಯಿ ಈ ವಿಷಯಗಳನ್ನೆಲ್ಲಾ ಇನ್ನೂ ಆಲೋಚಿಸುತ್ತಿದ್ದಳು. 52 ಯೇಸುವು ಜ್ಞಾನದಲ್ಲಿಯೂ ದೇಹಬಲದಲ್ಲಿಯೂ ವೃದ್ಧಿಯಾಗುತ್ತಾ ಬಂದನು. ದೇವರಿಗೂ ಜನರಿಗೂ ಅಚ್ಚುಮೆಚ್ಚಾದನು.
Kannada Holy Bible: Easy-to-Read Version. All rights reserved. © 1997 Bible League International