Old/New Testament
ಎಫ್ರಾಯೀಮ್ ಮತ್ತು ಮನಸ್ಸೆ ಕುಲದವರಿಗೆ ಸ್ವಾಸ್ತ್ಯಗಳು
16 ಯೋಸೇಫನ ಕುಟುಂಬದವರು ಈ ಸ್ವಾಸ್ತ್ಯವನ್ನು ಪಡೆದುಕೊಂಡರು. ಅವರ ಸ್ವಾಸ್ತ್ಯವು ಜೋರ್ಡನ್ ನದಿಯಿಂದ (ಜೆರಿಕೊ ಹತ್ತಿರ) ಆರಂಭವಾಗಿ ಜೆರಿಕೊವಿನ ಹಳ್ಳಗಳ ಉದ್ದಕ್ಕೂ ಮುಂದುವರೆದಿದೆ. (ಇದು ಜೆರಿಕೊವಿನ ಪೂರ್ವದಲ್ಲಿದೆ.) ಆ ಸೀಮೆಯು ಜೆರಿಕೊವಿನಿಂದ ಬೇತೇಲಿನ ಬೆಟ್ಟಪ್ರದೇಶಕ್ಕೆ ಮುಂದುವರೆಯುತ್ತದೆ. 2 ಲೂಜ್ ಎಂದು ಕರೆಯುವ ಬೇತೇಲಿನಿಂದ ಅಟಾರೋತಿನಲ್ಲಿ ಅರ್ಕೀಯರ ಸೀಮೆಗೆ ಹೋಗುತ್ತದೆ. 3 ಅಲ್ಲಿಂದ ಪಶ್ಚಿಮದಿಕ್ಕಿನಲ್ಲಿರುವ ಯಪ್ಲೇಟ್ಯರ ಪ್ರಾಂತ್ಯದ ಸೀಮೆಗೆ ಮುಟ್ಟಿ ಅಲ್ಲಿಂದ ಕೆಳಗಿನ ಬೇತ್‌ಹೋರೋನ್ ಕಡೆಗೆ ಮುಂದುವರೆಯುತ್ತದೆ. ಅಲ್ಲಿಂದ ಗೆಜೆರಿಗೆ ಹೋಗಿ ಮೆಡಿಟರೆನಿಯನ್ ಸಮುದ್ರದತ್ತ ಮುಂದುವರೆಯುತ್ತದೆ.
4 ಯೋಸೇಫನ ಮಕ್ಕಳಾದ ಮನಸ್ಸೆ ಕುಲದವರು ಮತ್ತು ಎಫ್ರಾಯೀಮ್ ಕುಲದವರು ತಮ್ಮ ಪಾಲಿನ ಸ್ವಾಸ್ತ್ಯವನ್ನು ಪಡೆದರು.
5 ಎಫ್ರಾಯೀಮ್ ಕುಲದವರಿಗೆ ಕೊಟ್ಟ ಸ್ವಾಸ್ತ್ಯವು ಇಂತಿದೆ: ಅವರ ಸ್ವಾಸ್ತ್ಯದ ಪೂರ್ವದಿಕ್ಕಿನ ಸೀಮೆಯು ಮೇಲಿನ ಬೇತ್‌ಹೋರೋನಿನ ಹತ್ತಿರ ಇದ್ದ ಅಟಾರೋತದ್ದಾರಿನಿಂದ ಆರಂಭವಾಗುತ್ತದೆ. 6 ಅದರ ಪಶ್ಚಿಮದಿಕ್ಕಿನ ಸೀಮೆಯು ಮಿಕ್ಮೆತಾತ್‌ನಿಂದ ಆರಂಭವಾಗಿ ಪೂರ್ವದ ಕಡೆಗೆ ತಿರುಗಿಕೊಂಡು ತಾನತ್ ಶೀಲೋ ಎಂಬಲ್ಲಿಗೆ ಹೋಗಿ ಯಾನೋಹ ಊರಿನ ಪೂರ್ವದಿಕ್ಕಿನಲ್ಲಿ ಮುಂದುವರಿಯುತ್ತದೆ. 7 ಅಲ್ಲಿಂದ ಆ ಸೀಮೆಯು ಯಾನೋಹ ಮಾರ್ಗವಾಗಿ ಅಟಾರೋತ್, ನಾರಾ ಎಂಬ ಊರುಗಳ ಮೇಲೆ ಇಳಿಯುತ್ತದೆ. ಆ ಸೀಮೆಯು ಜೆರಿಕೊವಿನವರೆಗೆ ಮುನ್ನಡೆದು ಜೋರ್ಡನ್ ನದಿಯ ಹತ್ತಿರ ಮುಗಿಯುತ್ತದೆ. 8 ಆ ಮೇರೆಯು ತಪ್ಪೂಹದಿಂದ ಪಶ್ಚಿಮದ ಕಡೆಗೆ ಹೋಗುವ ಕಾನಾ ನದಿಗೆ ಹೋಗಿ ಸಮುದ್ರದಲ್ಲಿ ಕೊನೆಗೊಳ್ಳುತ್ತದೆ. ಈ ಪ್ರದೇಶವನ್ನು ಎಫ್ರಾಯೀಮ್ ಕುಲದವರಿಗೆ ಅವರ ಕುಟುಂಬಗಳಿಗನುಸಾರವಾಗಿ ಕೊಡಲಾಗಿತ್ತು. 9 ಎಫ್ರಾಯೀಮಿನ ಹಲವಾರು ಗಡಿಯ ಗ್ರಾಮಗಳು ಮನಸ್ಸೆ ಕುಲದವರ ಪ್ರದೇಶದೊಳಗೆ ಸೇರಿಕೊಂಡಿದ್ದವು. ಆದರೂ ಎಫ್ರಾಯೀಮ್ ಜನರು ಆ ಊರುಗಳನ್ನು ಮತ್ತು ಅವುಗಳ ಸುತ್ತಮುತ್ತಲಿನ ಹೊಲಗದ್ದೆಗಳನ್ನು ತಮ್ಮ ಸ್ವತ್ತಾಗಿ ಮಾಡಿಕೊಂಡಿದ್ದರು. 10 ಆದರೆ ಎಫ್ರಾಯೀಮಿನ ಜನರಿಗೆ ಗೆಜೆರಿನಲ್ಲಿದ್ದ ಕಾನಾನ್ಯರನ್ನು ಅಲ್ಲಿಂದ ಹೊರದೂಡುವುದು ಸಾಧ್ಯವಾಗಲಿಲ್ಲ. ಅದಕ್ಕಾಗಿ ಇಂದಿಗೂ ಕಾನಾನ್ಯರು ಎಫ್ರಾಯೀಮ್ ಜನರೊಂದಿಗೆ ಇರುತ್ತಾರೆ. ಆದರೆ ಕಾನಾನ್ಯರು ಎಫ್ರಾಯೀಮ್ ಜನರ ದಾಸರಾಗಿದ್ದಾರೆ.
17 ಆಮೇಲೆ ಮನಸ್ಸೆ ಕುಲದವರಿಗೆ ಭೂಮಿಯನ್ನು ಕೊಡಲಾಯಿತು. ಮನಸ್ಸೆಯು ಯೋಸೇಫನ ಚೊಚ್ಚಲ ಮಗನು. ಗಿಲ್ಯಾದನ ತಂದೆಯಾದ ಮಾಕೀರನು ಮನಸ್ಸೆಯ ಚೊಚ್ಚಲ ಮಗನು. ಮಾಕೀರನು ವೀರ ಸೈನಿಕನಾಗಿದ್ದನು. ಈ ಕಾರಣದಿಂದ ಗಿಲ್ಯಾದ್ ಮತ್ತು ಬಾಷಾನ್ ಕ್ಷೇತ್ರಗಳನ್ನು ಮಾಕೀರ ಮನೆತನದವರಿಗೆ ಕೊಡಲಾಯಿತು. 2 ಮನಸ್ಸೆ ಕುಲದ ಅಬೀಯೆಜೆರ್, ಹೇಲೆಕ್, ಅಸ್ರೀಯೇಲ್, ಶೆಕೆಮ್, ಹೇಫೇರ್, ಶೆಮೀದಾ ಎಂಬವರ ವಂಶದವರಿಗೂ ಭೂಮಿಯನ್ನು ಕೊಡಲಾಯಿತು. ಇವರೆಲ್ಲರು ಯೋಸೇಫನ ಮಗನಾದ ಮನಸ್ಸೆಯ ಉಳಿದ ಗಂಡುಮಕ್ಕಳು. ಈ ಜನರ ವಂಶದವರೂ ತಮ್ಮ ಪಾಲಿನ ಭೂಮಿಯನ್ನು ಪಡೆದುಕೊಂಡರು.
3 ಚಲ್ಪಹಾದನು ಹೇಫೆರನ ಮಗನು, ಹೇಫೆರನು ಗಿಲ್ಯಾದನ ಮಗನು, ಗಿಲ್ಯಾದನು ಮಾಕೀರನ ಮಗನು. ಮಾಕೀರನು ಮನಸ್ಸೆಯ ಮಗನು. ಚಲ್ಪಹಾದನಿಗೆ ಗಂಡುಮಕ್ಕಳಿರಲಿಲ್ಲ. ಆದರೆ ಅವನಿಗೆ ಐದು ಜನ ಹೆಣ್ಣುಮಕ್ಕಳಿದ್ದರು. ಅವರ ಹೆಸರುಗಳು: ಮಹ್ಲಾ, ನೋಹಾ, ಹೊಗ್ಲಾ, ಮಿಲ್ಕಾ ಮತ್ತು ತಿರ್ಚಾ. 4 ಆ ಹೆಣ್ಣುಮಕ್ಕಳು ಯಾಜಕನಾದ ಎಲ್ಲಾಜಾರ್, ನೂನನ ಮಗನಾದ ಯೆಹೋಶುವ ಮತ್ತು ಇಸ್ರೇಲರ ನಾಯಕರ ಹತ್ತಿರ ಹೋಗಿ, “ಗಂಡುಮಕ್ಕಳಿಗೆ ಕೊಟ್ಟ ಹಾಗೆ ನಮಗೂ ಭೂಮಿಯನ್ನು ಕೊಡಬೇಕೆಂದು ಯೆಹೋವನು ಮೋಶೆಗೆ ಹೇಳಿದ್ದಾನೆ” ಅಂದರು. ಎಲ್ಲಾಜಾರನು ಯೆಹೋವನ ಆಜ್ಞೆಯನ್ನು ಪಾಲಿಸಿ ಆ ಹೆಣ್ಣುಮಕ್ಕಳಿಗೆ ಸ್ವಲ್ಪ ಭೂಮಿಯನ್ನು ಕೊಟ್ಟನು. ಹೀಗೆ ಈ ಹೆಣ್ಣುಮಕ್ಕಳು ಗಂಡುಮಕ್ಕಳಂತೆಯೇ ಭೂಮಿಯನ್ನು ಪಡೆದರು.
5 ಮನಸ್ಸೆ ಕುಲದವರು ಜೋರ್ಡನ್ ನದಿಯ ಪಶ್ಚಿಮದಲ್ಲಿ ಹತ್ತು ಭೂಭಾಗಗಳನ್ನು ಮತ್ತು ಆ ನದಿಯ ಮತ್ತೊಂದು ದಿಕ್ಕಿನಲ್ಲಿ ಗಿಲ್ಯಾದ್ ಮತ್ತು ಬಾಷಾನ್ ಎಂಬ ಮತ್ತೆರಡು ಭೂಭಾಗಗಳನ್ನು ಪಡೆದುಕೊಂಡರು. 6 ಮನಸ್ಸೆಯ ಹೆಣ್ಣುಮಕ್ಕಳು ಗಂಡುಮಕ್ಕಳಂತೆಯೇ ಭೂಮಿಯನ್ನು ಪಡೆದರು. ಗಿಲ್ಯಾದ್ ಪ್ರದೇಶವನ್ನು ಮನಸ್ಸೆ ಕುಲದ ಉಳಿದ ಕುಟುಂಬಗಳಿಗೆ ಕೊಡಲಾಯಿತು.
7 ಮನಸ್ಸೆ ಕುಲದವರ ಪ್ರದೇಶಗಳು ಆಶೇರ್ ಮತ್ತು ಶೆಕಮಿನ ಹತ್ತಿರವಿದ್ದ ಮಿಕ್ಮೆತಾತಿನ ಮಧ್ಯದಲ್ಲಿ ಬರುತ್ತವೆ. ಅದರ ಸೀಮೆಯು ದಕ್ಷಿಣದಲ್ಲಿ ಎನ್‌ತಪ್ಪೂಹ ಪ್ರದೇಶಕ್ಕೆ ಮುಟ್ಟುತ್ತದೆ. 8 ಎನ್‌ತಪ್ಪೂಹದ ಸುತ್ತಮುತ್ತಲಿನ ಭೂಮಿ ಮನಸ್ಸೆಕುಲದವರ ಸ್ವತ್ತಾಗಿದ್ದರೂ ಆ ಊರು ಮಾತ್ರ ಅವರ ಅಧೀನದಲ್ಲಿರಲಿಲ್ಲ. ಎನ್‌ತಪ್ಪೂಹ ಎಂಬ ಊರು ಮನಸ್ಸೆ ಕುಲದವರ ಪ್ರಾಂತ್ಯದ ಸೀಮೆಯಲ್ಲಿದ್ದರೂ ಅದು ಎಫ್ರಾಯೀಮ್ ಜನರ ಸ್ವಾಸ್ತ್ಯದಲ್ಲಿತ್ತು. 9 ಮನಸ್ಸೆ ಪ್ರಾಂತ್ಯದ ಸೀಮೆ ದಕ್ಷಿಣದಲ್ಲಿ ಕಾನಾ ನದಿಯವರೆಗೆ ಹೋಗುತ್ತದೆ. ಈ ಕ್ಷೇತ್ರ ಮನಸ್ಸೆ ಕುಲದವರ ಸ್ವಾಸ್ತ್ಯದಲ್ಲಿದ್ದರೂ ಪಟ್ಟಣಗಳು ಎಫ್ರಾಯೀಮ್ ಜನರ ಸ್ವಾಸ್ತ್ಯದಲ್ಲಿದ್ದವು. ಮನಸ್ಸೆ ಪ್ರಾಂತ್ಯದ ಸೀಮೆಯು ನದಿಯ ಉತ್ತರದಿಕ್ಕಿನಿಂದ ಪಶ್ಚಿಮದಲ್ಲಿ ಮೆಡಿಟರೆನಿಯನ್ ಸಮುದ್ರದವರೆಗೆ ಮುಂದುವರೆದಿದೆ. 10 ದಕ್ಷಿಣದ ಭೂಮಿ ಎಫ್ರಾಯೀಮ್ ಜನರಿಗೆ ಸೇರಿದೆ. ಉತ್ತರದ ಭೂಮಿ ಮನಸ್ಸೆಯ ಜನರಿಗೆ ಸೇರಿದೆ. ಮೆಡಿಟರೆನಿಯನ್ ಸಮುದ್ರವು ಅದರ ಪಶ್ಚಿಮದ ಗಡಿಯಾಗಿತ್ತು. ಅದರ ಸೀಮೆಯು ಉತ್ತರದಲ್ಲಿ ಆಶೇರ್ ಕುಲದವರ ಪ್ರಾಂತ್ಯವನ್ನೂ ಪೂರ್ವದಲ್ಲಿ ಇಸ್ಸಾಕಾರ್ ಕುಲದವರ ನಾಡನ್ನೂ ಮುಟ್ಟುತ್ತದೆ.
11 ಮನಸ್ಸೆ ಕುಲದವರು ಇಸ್ಸಾಕಾರ್, ಆಶೇರ್ ಪ್ರಾಂತಗಳಲ್ಲಿಯೂ ಕೆಲವು ಊರುಗಳನ್ನು ಹೊಂದಿದ್ದರು. ಬೇತ್‌ಷೆಯಾನ್, ಇಬ್ಲೆಯಾಮ್ ಮತ್ತು ಅವುಗಳ ಸುತ್ತಮುತ್ತಲಿನ ಸಣ್ಣ ಊರುಗಳು ಮನಸ್ಸೆಯ ಜನರ ಅಧೀನದಲ್ಲಿದ್ದವು. ಮನಸ್ಸೆಯ ಜನರು ದೋರ್, ಎಂದೋರ್, ತಾನಕ್, ಮೆಗಿದ್ದೋ ಮತ್ತು ಆ ಪಟ್ಟಣಗಳ ಸುತ್ತಮುತ್ತಲಿನ ಹಳ್ಳಿಗಳಲ್ಲಿಯೂ ವಾಸವಾಗಿದ್ದರು. ಅವರು ನಾಫೊತ್‌ನ ಮೂರು ಊರುಗಳಲ್ಲಿಯೂ ಇದ್ದರು. 12 ಮನಸ್ಸೆ ಕುಲದವರಿಗೆ ಆ ಪಟ್ಟಣಗಳಲ್ಲಿದ್ದ ಜನರನ್ನು ಹೊರಡಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಕಾನಾನ್ಯರು ಅಲ್ಲಿಯೇ ನೆಲೆಸಿದರು. 13 ಆದರೆ ಸ್ವಲ್ಪ ಕಾಲದ ನಂತರ ಇಸ್ರೇಲರು ಬಲಶಾಲಿಗಳಾಗಿ ಕಾನಾನ್ಯರನ್ನು ತಮ್ಮ ಗುಲಾಮರನ್ನಾಗಿ ಮಾಡಿಕೊಂಡರು. ಆದರೆ ಅವರನ್ನು ಅಲ್ಲಿಂದ ಹೊರಗಟ್ಟಲಿಲ್ಲ.
14 ಯೋಸೇಫನ ವಂಶಸ್ಥರು ಯೆಹೋಶುವನೊಂದಿಗೆ ಮಾತನಾಡಿ, “ನೀನು ನಮಗೆ ಸ್ವಾಸ್ತ್ಯದ ಒಂದು ಕ್ಷೇತ್ರವನ್ನು ಮಾತ್ರ ಕೊಟ್ಟಿರುವೆ. ಆದರೆ ನಾವು ಬಹಳ ಜನರಿದ್ದೇವೆ. ಯೆಹೋವನು ತನ್ನ ಜನರಿಗೆ ಕೊಟ್ಟ ಈ ದೇಶದಲ್ಲಿ ನೀನು ನಮಗೆ ಕೇವಲ ಒಂದು ಭಾಗವನ್ನು ಮಾತ್ರ ಏಕೆ ಕೊಟ್ಟೆ?” ಎಂದು ಕೇಳಿದರು.
15 ಯೆಹೋಶುವನು, “ನಿಮ್ಮಲ್ಲಿ ಬಹಳ ಜನರಿದ್ದರೆ ಬೆಟ್ಟಪ್ರದೇಶಕ್ಕೆ ಹೋಗಿ ಆ ಭೂಮಿಯನ್ನು ತೆಗೆದುಕೊಳ್ಳಿರಿ. ಆ ಭೂಮಿಯು ಈಗ ಪೆರಿಜ್ಜೀಯರ ಮತ್ತು ರೆಫಾಯರ ಸ್ವತ್ತಾಗಿದೆ. ನಿಮಗೆ ಕೊಟ್ಟಿರುವ ಎಫ್ರಾಯೀಮ್ ಬೆಟ್ಟಪ್ರದೇಶವು ಚಿಕ್ಕದೆನಿಸಿದರೆ ಹೋಗಿ ಆ ಭೂಮಿಯನ್ನು ತೆಗೆದುಕೊಳ್ಳಿರಿ” ಎಂದನು.
16 ಯೋಸೇಫನ ಜನರು, “ಎಫ್ರಾಯೀಮ್ ಬೆಟ್ಟಪ್ರದೇಶವು ನಮಗೆ ಸಾಕಾಗುವುದಿಲ್ಲ ಎಂಬುದೇನೋ ನಿಜ. ಆದರೆ ಅಲ್ಲಿ ವಾಸಮಾಡುವ ಕಾನಾನ್ಯರಲ್ಲಿ ಬಲವಾದ ಆಯುಧಗಳಿವೆ; ಕಬ್ಬಿಣದ ರಥಗಳಿವೆ. ಇಜ್ರೇಲ್, ಬೇತ್‌ಷೆಯಾನ್ ಕಣಿವೆಗಳು ಮತ್ತು ಆ ಕ್ಷೇತ್ರದ ಎಲ್ಲ ಸಣ್ಣ ಹಳ್ಳಿಗಳು ಅವರ ಅಧೀನದಲ್ಲಿವೆ” ಎಂದರು.
17 ಆಗ ಯೆಹೋಶುವನು ಯೋಸೇಫನ ಮನೆತನದವರಾದ ಎಫ್ರಾಯೀಮನ ಮತ್ತು ಮನಸ್ಸೆಯ ಜನರಿಗೆ, “ನೀವು ಬಹಳಷ್ಟು ಜನರಿದ್ದೀರಿ. ನೀವು ಬಹಳ ಶಕ್ತಿಶಾಲಿಗಳಾಗಿದ್ದೀರಿ. ಆದ್ದರಿಂದ ನೀವು ದೇಶದ ಒಂದು ಪಾಲಿಗಿಂತಲೂ ಹೆಚ್ಚು ಪಡೆಯಬೇಕು. 18 ನೀವು ಬೆಟ್ಟಪ್ರದೇಶವನ್ನು ತೆಗೆದುಕೊಳ್ಳಿರಿ. ಅದೊಂದು ಕಾಡು. ಆದರೆ ನೀವು ಆ ಮರಗಳನ್ನು ಕಡಿದುಹಾಕಿ ಅದನ್ನು ವಾಸಿಸಲು ಒಳ್ಳೆಯ ಸ್ಥಳವನ್ನಾಗಿ ಮಾಡಿಕೊಳ್ಳಬಹುದು. ನೀವು ಆ ಪ್ರದೇಶವನ್ನೆಲ್ಲಾ ನಿಮ್ಮ ಸ್ವತ್ತನ್ನಾಗಿ ಮಾಡಿಕೊಳ್ಳಿರಿ. ಆ ಪ್ರದೇಶವನ್ನು ಬಿಟ್ಟುಹೋಗುವಂತೆ ಕಾನಾನ್ಯರನ್ನು ಒತ್ತಾಯಿಸಿರಿ. ಅವರು ಶಕ್ತಿಯುತರಾಗಿದ್ದರೂ ಅವರ ಬಳಿ ಬಲವಾದ ಆಯುಧಗಳಿದ್ದರೂ ನೀವು ಅವರನ್ನು ಸೋಲಿಸುವಿರಿ” ಎಂದು ಹೇಳಿದನು.
ಉಳಿದ ಭೂಮಿಯ ಹಂಚುವಿಕೆ
18 ಇಸ್ರೇಲರೆಲ್ಲರು ಶೀಲೋವಿನಲ್ಲಿ ಒಟ್ಟಾಗಿ ಸೇರಿದರು. ಆ ಸ್ಥಳದಲ್ಲಿ ಅವರು ದೇವದರ್ಶನ ಗುಡಾರವನ್ನು ನಿಲ್ಲಿಸಿದರು. ಇಸ್ರೇಲರು ಆ ದೇಶವನ್ನು ಸ್ವಾಧೀನ ಮಾಡಿಕೊಂಡಿದ್ದರು. ಅವರು ಆ ದೇಶದ ಎಲ್ಲ ಶತ್ರುಗಳನ್ನು ಸೋಲಿಸಿದ್ದರು. 2 ಆದರೂ ದೇವರು ವಾಗ್ದಾನ ಮಾಡಿದ ಭೂಮಿಯನ್ನು ಇಸ್ರೇಲರ ಏಳು ಕುಲಗಳು ಇನ್ನೂ ಪಡೆದಿರಲಿಲ್ಲ.
3 ಆದ್ದರಿಂದ ಯೆಹೋಶುವನು ಇಸ್ರೇಲರಿಗೆ, “ನೀವು ನಿಮ್ಮ ಭೂಮಿಯನ್ನು ಪಡೆದುಕೊಳ್ಳಲು ಅಷ್ಟು ದೀರ್ಘಕಾಲದವರೆಗೆ ಏಕೆ ಕಾಯುತ್ತೀರಿ? ನಿಮ್ಮ ಪೂರ್ವಿಕರ ದೇವರಾದ ಯೆಹೋವನು ಈ ಭೂಮಿಯನ್ನು ನಿಮಗೆ ಕೊಟ್ಟಿದ್ದಾನೆ. 4 ಆದ್ದರಿಂದ ಪ್ರತಿಯೊಂದು ಕುಲದಿಂದ ಮೂರು ಮೂರು ಜನರನ್ನು ಆರಿಸಬೇಕು. ಭೂಮಿಯನ್ನು ಪರಿಶೀಲಿಸಲು ನಾನು ಅವರನ್ನು ಕಳುಹಿಸುತ್ತೇನೆ. ಅವರು ಭೂಮಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಅದರ ನಕ್ಷೆಯನ್ನು ಮಾಡಿ ನನ್ನ ಬಳಿಗೆ ತೆಗೆದುಕೊಂಡು ಬರಲಿ. 5 ಅವರು ಆ ಭೂಮಿಯನ್ನು ಏಳು ಭಾಗಗಳಾಗಿ ವಿಂಗಡಿಸಲಿ. ಯೆಹೂದದ ಜನರು ದಕ್ಷಿಣದಲ್ಲಿ ತಮ್ಮ ಭೂಮಿಯನ್ನು ಇಟ್ಟುಕೊಳ್ಳಲಿ. ಯೋಸೇಫನ ಜನರು ಉತ್ತರದಲ್ಲಿ ತಮ್ಮ ಭೂಮಿಯನ್ನು ಇಟ್ಟುಕೊಳ್ಳಲಿ. 6 ಆದರೆ ನೀವು ಒಂದು ನಕ್ಷೆಯನ್ನು ಮಾಡಿ ಭೂಮಿಯನ್ನು ಏಳು ಭಾಗಗಳಾಗಿ ವಿಂಗಡಿಸಬೇಕು. ಆ ನಕ್ಷೆಯನ್ನು ನನ್ನ ಬಳಿಗೆ ತೆಗೆದುಕೊಂಡು ಬನ್ನಿ. ಯಾವ ಕುಲದವರು ಯಾವ ಭೂಮಿಯನ್ನು ತೆಗೆದುಕೊಳ್ಳಬೇಕೆಂಬುದನ್ನು ನಮ್ಮ ದೇವರಾದ ಯೆಹೋವನು ನಿರ್ಣಯಿಸಲಿ. 7 ಲೇವಿಯ ಕುಲದವರಿಗೆ ಭೂಮಿಯಲ್ಲಿ ಪಾಲು ದೊರೆಯುವುದಿಲ್ಲ. ಯಾಜಕರಾಗಿ ಯೆಹೋವನ ಸೇವೆ ಮಾಡುವುದೇ ಅವರ ಪಾಲು. ಗಾದ್ಯರು, ರೂಬೇನ್ಯರು ಮತ್ತು ಮನಸ್ಸೆ ಕುಲದ ಅರ್ಧಜನರು ವಾಗ್ದಾನ ಮಾಡಲಾದ ಭೂಮಿಯನ್ನು ಈಗಾಗಲೇ ಪಡೆದುಕೊಂಡಿದ್ದಾರೆ. ಅವರು ಜೋರ್ಡನ್ ನದಿಯ ಪೂರ್ವದಿಕ್ಕಿನಲ್ಲಿದ್ದಾರೆ. ಯೆಹೋವನ ಸೇವಕನಾದ ಮೋಶೆಯು ಈಗಾಗಲೇ ಆ ಭೂಮಿಯನ್ನು ಅವರಿಗೆ ಕೊಟ್ಟಿದ್ದಾನೆ” ಎಂದನು.
8 ಆದ್ದರಿಂದ ಭೂಮಿಯನ್ನು ಪರಿಶೀಲಿಸಲು ಆರಿಸಲ್ಪಟ್ಟ ಜನರಿಗೆ ಯೆಹೋಶುವನು, “ಹೋಗಿ, ಭೂಮಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿರಿ; ಅದರ ನಕ್ಷೆಗಳನ್ನು ತೆಗೆಯಿರಿ. ಆಮೇಲೆ ಶೀಲೋವಿನಲ್ಲಿ ನಾನಿರುವ ಸ್ಥಳಕ್ಕೆ ಬನ್ನಿ. ಆಗ ನಾನು ಚೀಟುಹಾಕುತ್ತೇನೆ. ಯೆಹೋವನು ನಿಮ್ಮ ಪಾಲುಗಳನ್ನು ಕೊಡಲಿ” ಅಂದನು.
9 ಅಂತೆಯೇ ಅವರು ಹೋಗಿ ಭೂಮಿಯನ್ನು ಚೆನ್ನಾಗಿ ಪರಿಶೀಲಿಸಿದರು; ಯೆಹೋಶುವನಿಗಾಗಿ ನಕ್ಷೆಗಳನ್ನು ತೆಗೆದರು. ಅವರು ಪ್ರತಿಯೊಂದು ಹಳ್ಳಿಯನ್ನು ಪರಿಶೀಲಿಸಿದರು. ಭೂಮಿಯನ್ನು ಏಳು ಭಾಗಗಳಾಗಿ ವಿಂಗಡಿಸಿದರು. ಅವರು ನಕ್ಷೆಗಳನ್ನು ತೆಗೆದು ಯೆಹೋಶುವನ ಬಳಿಗೆ ಶೀಲೋವಿಗೆ ಹಿಂತಿರುಗಿ ಹೋದರು. 10 ಯೆಹೋಶುವನು ಅವರಿಗಾಗಿ ಶೀಲೋವಿನಲ್ಲಿ ಯೆಹೋವನ ಮುಂದೆ ಚೀಟುಹಾಕಿದನು. ಹೀಗೆ ಯೆಹೋಶುವನು ಭೂಮಿಯನ್ನು ಹಂಚಿದನು; ಪ್ರತಿಯೊಂದು ಕುಲಕ್ಕೆ ಅದರ ಭೂಭಾಗವನ್ನು ಕೊಟ್ಟನು.
ಬೆನ್ಯಾಮೀನ್ ಕುಲದವರಿಗೆ ಭೂಮಿ
11 ಬೆನ್ಯಾಮೀನ್ ಕುಲದವರಿಗೆ ಯೆಹೂದ್ಯರ ಮತ್ತು ಯೋಸೇಫ್ಯರ ಪ್ರಾಂತ್ಯಗಳ ಮಧ್ಯದಲ್ಲಿರುವ ಭೂಮಿಯನ್ನು ಕೊಡಲಾಯಿತು. ಬೆನ್ಯಾಮೀನ್ ಕುಲದ ಪ್ರತಿಯೊಂದು ಗೋತ್ರವು ತಮ್ಮ ಭೂಮಿಯನ್ನು ಪಡೆದುಕೊಂಡಿತು. ಇದು ಬೆನ್ಯಾಮೀನ್ ಕುಲದವರಿಗೆ ಆರಿಸಲ್ಪಟ್ಟ ಭೂಮಿಯಾಗಿತ್ತು. 12 ಅದರ ಉತ್ತರದಿಕ್ಕಿನ ಮೇರೆಯು ಜೋರ್ಡನ್ ನದಿಯಿಂದ ಆರಂಭವಾಗುತ್ತದೆ. ಅದು ಜೆರಿಕೊವಿನ ಉತ್ತರ ಅಂಚಿನೊಂದಿಗೆ ಹೊರಟು ಪಶ್ಚಿಮದ ಬೆಟ್ಟಪ್ರದೇಶದೊಳಗೆ ಹೋಗುತ್ತದೆ. ಆ ಸೀಮೆಯು ಬೇತಾವೆನಿನ ಪೂರ್ವದಿಕ್ಕಿಗೆ ಅತಿಸಮೀಪದಲ್ಲಿ ಮುಂದುವರೆದು 13 ದಕ್ಷಿಣದಲ್ಲಿರುವ ಬೇತೇಲ್ ಎಂಬ ಲೂಜಿಗೆ ಹೋಗುತ್ತದೆ. ಅಲ್ಲಿಂದ ಇಳಿದು ಅಟಾರೋತದ್ದಾರ್‌ಗೆ ಹೋಗುತ್ತದೆ. ಅಟಾರೋತದ್ದಾರ್ ಕೆಳಗಿನ ಬೇತ್‌ಹೋರೋನಿನ ದಕ್ಷಿಣದಲ್ಲಿರುವ ಬೆಟ್ಟದ ಮೇಲೆ ಇದೆ. 14 ಬೇತ್‌ಹೋರೋನಿನ ದಕ್ಷಿಣದಲ್ಲಿರುವ ಬೆಟ್ಟದಿಂದ ಆ ಸೀಮೆಯು ದಕ್ಷಿಣಕ್ಕೆ ತಿರುಗಿಕೊಂಡು ಆ ಬೆಟ್ಟದ ಪಶ್ಚಿಮಭಾಗದ ಜೊತೆಗೆ ಮುಂದುವರೆಯುತ್ತದೆ. ಆ ಸೀಮೆಯು ಕಿರ್ಯತ್ಯಾರೀಮ್ ಎಂಬ ಕಿರ್ಯತ್‌ಬಾಳ್‌ಗೆ ಹೋಗುತ್ತದೆ. ಈ ಪಟ್ಟಣವು ಯೆಹೂದ್ಯರಿಗೆ ಸೇರಿದ್ದು. ಇದು ಪಶ್ಚಿಮದಿಕ್ಕಿನ ಸೀಮೆಯಾಗಿತ್ತು.
15 ದಕ್ಷಿಣದಿಕ್ಕಿನ ಮೇರೆಯು ಕಿರ್ಯತ್ಯಾರೀಮಿನ ಹತ್ತಿರದಿಂದ ಪ್ರಾರಂಭವಾಗಿ ನೆಪ್ತೋಹ ನದಿಯವರೆಗೆ ಹೋಗುತ್ತದೆ. 16 ಅಲ್ಲಿಂದ ಆ ಮೇರೆಯು ರೆಫಾಯಿಮ್ ತಗ್ಗಿನ ಉತ್ತರದಲ್ಲಿರುವ ಬೆನ್‌ಹಿನ್ನೋಮ್ ತಗ್ಗಿನ ಹತ್ತಿರ ಆ ಬೆಟ್ಟದ ಬುಡಕ್ಕೆ ಇಳಿಯುತ್ತದೆ. ಆ ಮೇರೆಯು ಹಿನ್ನೋಮ್ ತಗ್ಗಿನಿಂದ ಯೆಬೂಸಿಯ ಪಟ್ಟಣದ ದಕ್ಷಿಣದವರೆಗೆ ಮುಂದುವರೆಯುತ್ತದೆ. ಅಲ್ಲಿಂದ ಅದು ಏನ್‌ರೋಗೆಲಿಗೆ ಬರುತ್ತದೆ. 17 ಅಲ್ಲಿಂದ ಆ ಸೀಮೆಯು ಉತ್ತರಕ್ಕೆ ತಿರುಗಿ ಏನ್‌ಷೆಮೆಸ್‌ಗೆ ಹೋಗುತ್ತದೆ. ಅದು ಗೆಲೀಲೋತದವರೆಗೆ ಮುಂದುವರೆಯುತ್ತದೆ. (ಬೆಟ್ಟಗಳಲ್ಲಿರುವ ಅದುಮ್ಮೀಮ್ ಎಂಬ ಇಕ್ಕಟ್ಟಾದ ಮಾರ್ಗದ ಸಮೀಪದಲ್ಲಿದೆ ಗೆಲೀಲೋತ್.) ಆ ಸೀಮೆಯು ರೂಬೇನನ ಮಗನಾದ ಬೋಹನನ ಹೆಸರಿನ ಮಹಾಬಂಡೆಗೆ ಹೋಗುತ್ತದೆ. 18 ಆ ಸೀಮೆಯು ಬೇತ್‌ಅರಾಬ ಉತ್ತರಭಾಗಕ್ಕೆ ಮುಂದುವರೆದು ಅಲ್ಲಿಂದ ಅದು ಜೋರ್ಡನ್ ಕಣಿವೆಗೆ ಇಳಿಯುತ್ತದೆ. 19 ಅಲ್ಲಿಂದ ಆ ಮೇರೆಯು ಬೇತ್‌ಹೊಗ್ಲಾವಿನ ಉತ್ತರಭಾಗದಲ್ಲಿ ಮುಂದುವರೆದು ಲವಣಸಮುದ್ರದ ಉತ್ತರ ದಡದಲ್ಲಿ ಮುಕ್ತಾಯಗೊಳ್ಳುತ್ತದೆ. ಜೋರ್ಡನ್ ನದಿಯು ಸಮುದ್ರಕ್ಕೆ ಸೇರುವುದು ಇಲ್ಲಿಯೇ. ಇದು ದಕ್ಷಿಣದಿಕ್ಕಿನ ಸೀಮೆ.
20 ಜೋರ್ಡನ್ ನದಿಯು ಅವರ ಪೂರ್ವದಿಕ್ಕಿನ ಮೇರೆ. ಬೆನ್ಯಾಮೀನ್ ಗೋತ್ರಗಳ ಸ್ವಾಸ್ತ್ಯದ ಸುತ್ತಲಿನ ಮೇರೆಯು ಇದೇ. 21 ಬೆನ್ಯಾಮೀನ್ ಗೋತ್ರಗಳಿಗೆ ದೊರಕಿದ ಪಟ್ಟಣಗಳು: ಜೆರಿಕೊ, ಬೇತ್‌ಹೊಗ್ಲಾ, ಏಮೆಕ್ಕೆಚ್ಚೀಚ್, 22 ಬೇತ್‌ಅರಾಬಾ, ಚೆಮಾರಯಿಮ್, ಬೇತೇಲ್, 23 ಅವ್ವೀಮ್, ಪಾರಾ, ಒಫ್ರಾ, 24 ಅಮ್ಮೋನ್ಯ, ಕೆಫೆರ್, ಒಫ್ನೀ ಮತ್ತು ಗೆಬಾ ಎಂಬ ಹನ್ನೆರಡು ನಗರಗಳು ಮತ್ತು ಅವುಗಳ ಸುತ್ತಮುತ್ತಲಿನ ಎಲ್ಲ ಹೊಲಗದ್ದೆಗಳು.
25 ಬೆನ್ಯಾಮೀನ್ ಗೋತ್ರದವರು ಹದಿನಾಲ್ಕು ಊರುಗಳನ್ನು ಮತ್ತು ಅವುಗಳ ಸುತ್ತಮುತ್ತಲಿನ ಎಲ್ಲಾ ಹೊಲಗದ್ದೆಗಳನ್ನು ಪಡೆದುಕೊಂಡರು. ಆ ಊರುಗಳು ಇಂತಿವೆ: ಗಿಬ್ಯೋನ್, ರಾಮಾ, ಬೇರೋತ್, 26 ಮಿಚ್ಪೆ, ಕೆಫೀರಾ, ಮೋಚಾ, 27 ರೆಕೆಮ್, ಇರ್ಫೇಲ್, ತರಲಾ, 28 ಚೇಲ, ಎಲೆಫ್, ಜೆರುಸಲೇಮ್ ಎಂದು ಕರೆಯಲ್ಪಡುವ ಯೆಬೂಸಿಯರ ಪಟ್ಟಣ, ಗಿಬೆಯತ್ ಮತ್ತು ಕಿರ್ಯತ್. ಬೆನ್ಯಾಮೀನ್ ಗೋತ್ರಗಳವರು ಈ ಪ್ರದೇಶಗಳನ್ನೆಲ್ಲ ಪಡೆದುಕೊಂಡರು.
ಯೇಸುವಿನ ಜನನ
(ಮತ್ತಾಯ 1:18-25)
2 ಆ ಕಾಲದಲ್ಲಿ ಚಕ್ರವರ್ತಿ ಅಗಸ್ಟಸ್ ಸೀಸರನು ರೋಮನ್ನರ ಆಳ್ವಿಕೆಗೆ ಒಳಪಟ್ಟಿದ್ದ ಎಲ್ಲಾ ದೇಶಗಳಲ್ಲಿ ಜನಗಣತಿ ಆಗಬೇಕೆಂದು ಆಜ್ಞಾಪಿಸಿದನು. 2 ಇದು ಮೊಟ್ಟಮೊದಲನೆಯ ಜನಗಣತಿಯಾಗಿತ್ತು. ಕುರೇನ್ಯನು ಸಿರಿಯ ದೇಶದ ರಾಜ್ಯಪಾಲನಾಗಿದ್ದಾಗ ಇದು ಸಂಭವಿಸಿತು. 3 ಜನರೆಲ್ಲರೂ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಲು ತಮ್ಮತಮ್ಮ ಊರುಗಳಿಗೆ ಪ್ರಯಾಣ ಮಾಡಿದರು.
4 ಆದ್ದರಿಂದ ಯೋಸೇಫನು ಗಲಿಲಾಯದಲ್ಲಿನ ನಜರೇತ್ ಎಂಬ ಊರಿನಿಂದ ಹೊರಟು ಜುದೇಯದಲ್ಲಿನ ಬೆತ್ಲೆಹೇಮ್ ಎಂಬ ಊರಿಗೆ ಹೋದನು. ಯೋಸೇಫನು ದಾವೀದನ ಮನೆತನದವನಾಗಿದ್ದುದರಿಂದ ದಾವೀದನ ಊರಾದ ಬೆತ್ಲೆಹೇಮಿಗೆ ಹೋದನು. 5 ಅವನು ತನ್ನೊಂದಿಗೆ ಮರಿಯಳನ್ನೂ ಕರೆದುಕೊಂಡು ಹೋದನು. ಆಕೆಗೆ ಅವನೊಂದಿಗೆ ನಿಶ್ಚಿತಾರ್ಥವಾಗಿತ್ತು. (ಮರಿಯಳು ಆಗ ಗರ್ಭಿಣಿಯಾಗಿದ್ದಳು.) 6 ಅವರು ಬೆತ್ಲೆಹೇಮಿನಲ್ಲಿದ್ದಾಗ ಮರಿಯಳಿಗೆ ಹೆರಿಗೆಕಾಲ ಬಂತು. 7 ಆಕೆ ತನ್ನ ಚೊಚ್ಚಲಮಗುವನ್ನು (ಯೇಸು) ಹೆತ್ತಳು. ಅವರಿಗೆ ಇಳಿದುಕೊಳ್ಳಲು ಛತ್ರದಲ್ಲಿ ಸ್ಥಳ ದೊರೆಯಲಿಲ್ಲ. ಆದ್ದರಿಂದ ಮರಿಯಳು ಮಗುವನ್ನು ಬಟ್ಟೆಯಿಂದ ಸುತ್ತಿ ದನದ ಕೊಟ್ಟಿಗೆಯಲ್ಲಿ ಮೇವು ಹಾಕುತ್ತಿದ್ದ ತೊಟ್ಟಿಯಲ್ಲಿ ಮಲಗಿಸಿದಳು.
ಕುರುಬರಿಗೆ ದೊರೆತ ಸಂದೇಶ
8 ಆ ರಾತ್ರಿ, ಕೆಲವು ಕುರುಬರು ಹೊಲಗಳ ಸಮೀಪದಲ್ಲಿ ತಮ್ಮ ಕುರಿಗಳನ್ನು ಕಾಯುತ್ತಿದ್ದರು. 9 ಪ್ರಭುವಿನ ದೂತನೊಬ್ಬನು ಕುರುಬರ ಮುಂದೆ ನಿಂತನು. ಅವರ ಸುತ್ತಲೂ ಪ್ರಭುವಿನ ಪ್ರಭೆಯು ಪ್ರಕಾಶಿಸಿತು. ಕುರುಬರು ಬಹಳವಾಗಿ ಹೆದರಿದರು. 10 ದೇವದೂತನು ಅವರಿಗೆ, “ಹೆದರಬೇಡಿರಿ, ಜನರೆಲ್ಲರಿಗೆ ಮಹಾಸಂತೋಷವನ್ನು ಉಂಟುಮಾಡುವ ಶುಭಸಂದೇಶವನ್ನು ನಿಮಗೆ ತಿಳಿಸುತ್ತೇನೆ. ಅದೇನೆಂದರೆ: 11 ಈ ದಿನ ನಿಮಗೋಸ್ಕರ ದಾವೀದನ ಊರಿನಲ್ಲಿ ರಕ್ಷಕನು ಜನಿಸಿದ್ದಾನೆ. ಆತನೇ ಪ್ರಭುವಾದ ಕ್ರಿಸ್ತನು. 12 ಬಟ್ಟೆಯಲ್ಲಿ ಸುತ್ತಿರುವ ಒಂದು ಮಗು ದನದ ಕೊಟ್ಟಿಗೆಯಲ್ಲಿ ಮಲಗಿರುವುದನ್ನು ನೀವು ಕಾಣುವಿರಿ. ನೀವು ಆತನನ್ನು ಗೊತ್ತುಪಡಿಸಿಕೊಳ್ಳಲು ಅದೇ ಗುರುತಾಗಿದೆ” ಎಂದು ಹೇಳಿದನು.
13 ತಕ್ಷಣವೇ ಪರಲೋಕದಿಂದ ದೇವದೂತರು ಬಹು ದೊಡ್ಡ ಗುಂಪಾಗಿ ಬಂದು ಮೊದಲನೆಯ ದೇವದೂತನೊಡನೆ ಸೇರಿಕೊಂಡರು. ಅವರೆಲ್ಲರೂ,
14 “ಮೇಲಿನಲೋಕಗಳಲ್ಲಿ ದೇವರಿಗೆ ಮಹಿಮೆ;
ಭೂಲೋಕದಲ್ಲಿ ದೇವರೊಲಿದವರಿಗೆ ಸಮಾಧಾನ”
ಎಂದು ಹೇಳುತ್ತಾ ದೇವರನ್ನು ಸ್ತುತಿಸಿದರು.
15 ದೇವದೂತರು ಕುರುಬರ ಬಳಿಯಿಂದ ಪರಲೋಕಕ್ಕೆ ಹಿಂತಿರುಗಿದ ಮೇಲೆ ಕುರುಬರು, “ನಾವು ಈಗಲೇ ಬೆತ್ಲೆಹೇಮಿಗೆ ಹೋಗಿ, ಪ್ರಭುವು ನಮಗೆ ತಿಳಿಸಿದ ಈ ಘಟನೆಯನ್ನು ನೋಡೋಣ” ಎಂದು ಮಾತಾಡಿಕೊಂಡರು.
16 ಆದ್ದರಿಂದ ಕುರುಬರು ಬೇಗನೆ ಹೋಗಿ ಮರಿಯಳನ್ನೂ ಯೋಸೇಫನನ್ನೂ ದನದ ಕೊಟ್ಟಿಗೆಯಲ್ಲಿ ಮಲಗಿದ್ದ ಮಗುವನ್ನೂ ಕಂಡುಕೊಂಡರು. 17 ಕುರುಬರು ಮಗುವನ್ನು ನೋಡಿದಾಗ ಅದರ ವಿಷಯವಾಗಿ ತಮಗೆ ದೇವದೂತರು ತಿಳಿಸಿದ್ದನ್ನು ಅವರಿಗೆ ತಿಳಿಯಪಡಿಸಿದರು. 18 ಕುರುಬರು ತಿಳಿಸಿದ್ದನ್ನು ಕೇಳಿದ ಅವರೆಲ್ಲರೂ ಆಶ್ಚರ್ಯಪಟ್ಟರು. 19 ಮರಿಯಳು ಈ ವಿಷಯಗಳನ್ನು ತನ್ನ ಹೃದಯದಲ್ಲಿಟ್ಟುಕೊಂಡು, ಅವುಗಳ ಬಗ್ಗೆ ಯೋಚಿಸತೊಡಗಿದಳು. 20 ಕುರುಬರು ತಾವು ಕಂಡು ಕೇಳಿದ ಪ್ರತಿಯೊಂದು ಸಂಗತಿಗಾಗಿ ದೇವರನ್ನು ಕೊಂಡಾಡುತ್ತಾ ಆತನನ್ನು ಸ್ತುತಿಸುತ್ತಾ ತಮ್ಮ ಕುರಿಗಳಿದ್ದಲ್ಲಿಗೆ ಮರಳಿಹೋದರು. ದೇವದೂತರು ಅವರಿಗೆ ತಿಳಿಸಿದಂತೆಯೇ ಪ್ರತಿಯೊಂದು ಸಂಗತಿಯೂ ನಡೆದಿತ್ತು.
21 ಮಗುವಿಗೆ ಎಂಟು ದಿನವಾದಾಗ ಸುನ್ನತಿ[a] ಆಯಿತು ಮತ್ತು ಆತನಿಗೆ “ಯೇಸು” ಎಂದು ಹೆಸರಿಡಲಾಯಿತು. ಮರಿಯಳ ಗರ್ಭದಲ್ಲಿ ಮಗುವು ಬೆಳೆಯುವುದಕ್ಕೆ ಪ್ರಾರಂಭಿಸುವ ಮೊದಲೇ ದೇವದೂತನು ಈ ಹೆಸರನ್ನೇ ಕೊಡಬೇಕೆಂದು ಸೂಚಿಸಿದ್ದನು.
ದೇವಾಲಯದಲ್ಲಿ ಯೇಸುವಿನ ಪ್ರತಿಷ್ಠೆ
22 ಶುದ್ಧೀಕರಣದ[b] ಬಗ್ಗೆ ಮೋಶೆಯ ಧರ್ಮಶಾಸ್ತ್ರವು ಬೋಧಿಸಿದ್ದ ಕಾರ್ಯಗಳನ್ನು ಮರಿಯಳು ಮತ್ತು ಯೋಸೇಫನು ಮಾಡುವ ಸಮಯ ಬಂತು. ಯೇಸುವನ್ನು ಪ್ರಭುವಿಗೆ (ದೇವರಿಗೆ) ಪ್ರತಿಷ್ಠಿಸಲು ಯೋಸೇಫನು ಮತ್ತು ಮರಿಯಳು ಆತನನ್ನು ಜೆರುಸಲೇಮಿಗೆ ಕರೆದುಕೊಂಡು ಬಂದರು. 23 ಏಕೆಂದರೆ “ಪ್ರತಿ ಕುಟುಂಬದಲ್ಲಿ, ‘ಚೊಚ್ಚಲು ಗಂಡುಮಗುವನ್ನು ಪ್ರಭುವಿಗೆ ಪ್ರತಿಷ್ಠಿಸಬೇಕು’”[c] ಎಂದು ಪ್ರಭುವಿನ ಧರ್ಮಶಾಸ್ತ್ರದಲ್ಲಿ ಬರೆದಿದೆ. 24 “ಎರಡು ಪಾರಿವಾಳಗಳನ್ನು ಅಥವಾ ಎರಡು ಬೆಳವಕ್ಕಿಗಳನ್ನು ಯಜ್ಞವಾಗಿ ಸಮರ್ಪಿಸಬೇಕು”(A) ಎಂದು ಸಹ ಪ್ರಭುವಿನ ಧರ್ಮಶಾಸ್ತ್ರವು ಹೇಳುತ್ತದೆ. ಆದ್ದರಿಂದ ಯೋಸೇಫನು ಮತ್ತು ಮರಿಯಳು ಜೆರುಸಲೇಮಿಗೆ ಹೋದರು.
Kannada Holy Bible: Easy-to-Read Version. All rights reserved. © 1997 Bible League International