Old/New Testament
ಆಕಾನನ ಪಾಪ
7 ಇಸ್ರೇಲರು ಯೆಹೋವನ ಆಜ್ಞೆಗೆ ವಿಧೇಯರಾಗಲಿಲ್ಲ. ಯೆಹೂದ ಕುಲದವನೂ ಕರ್ಮೀಯ ಮಗನೂ ಜಬ್ದೀಯ ಮೊಮ್ಮಗನೂ ಜೆರಹನ ಗೋತ್ರದವನೂ ಆದ ಆಕಾನ ಎಂಬವನು ನಾಶಮಾಡಬೇಕಾದ ವಸ್ತುಗಳಲ್ಲಿ ಕೆಲವನ್ನು ಇಟ್ಟುಕೊಂಡಿದ್ದನು. ಅದಕ್ಕಾಗಿ ಯೆಹೋವನು ಇಸ್ರೇಲಿನವರ ಮೇಲೆ ತುಂಬಾ ಕೋಪಗೊಂಡನು.
2 ಜೆರಿಕೊವನ್ನು ಸ್ವಾಧೀನಪಡಿಸಿಕೊಂಡ ಮೇಲೆ ಯೆಹೋಶುವನು ಕೆಲವು ಜನರನ್ನು “ಆಯಿ” ಎಂಬ ಪಟ್ಟಣಕ್ಕೆ ಕಳುಹಿಸಿದನು. “ಆಯಿ” ಬೇತಾವೆನಿನ ಸಮೀಪಕ್ಕೂ ಬೇತೇಲಿನ ಪೂರ್ವಕ್ಕೂ ಇತ್ತು. ಯೆಹೋಶುವನು “‘ಆಯಿ’ಗೆ ಹೋಗಿರಿ ಮತ್ತು ಆ ಪ್ರಾಂತ್ಯದ ದುರ್ಬಲತೆಗಳನ್ನು ಕಂಡುಹಿಡಿಯಿರಿ” ಎಂದು ಹೇಳಿದನು. ಆಗ ಅವರು ಆ ಪ್ರದೇಶದಲ್ಲಿ ಗೂಢಚರ್ಯ ಮಾಡುವುದಕ್ಕೆ ಹೋದರು.
3 ತರುವಾಯ ಆ ಜನರು ಯೆಹೋಶುವನಲ್ಲಿಗೆ ಬಂದು, “ಆಯಿ ಒಂದು ದುರ್ಬಲ ಪ್ರದೇಶವಾಗಿದೆ, ಆ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕೆ ನಮ್ಮ ಎಲ್ಲ ಜನರು ಬೇಕಾಗುವುದಿಲ್ಲ. ಅಲ್ಲಿ ಯುದ್ಧ ಮಾಡಲು ಎರಡು ಅಥವಾ ಮೂರುಸಾವಿರ ಜನರನ್ನು ಕಳುಹಿಸಿದರೆ ಸಾಕು, ಇಡೀ ಸೈನ್ಯವನ್ನು ಉಪಯೋಗಿಸುವ ಅವಶ್ಯಕತೆ ಇಲ್ಲ. ಅಲ್ಲಿ ನಮ್ಮ ವಿರುದ್ಧ ಹೋರಾಡಬಲ್ಲ ಕೆಲವೇ ಜನರು ಇದ್ದಾರೆ” ಎಂದು ಹೇಳಿದರು.
4-5 ಸುಮಾರು ಮೂರು ಸಾವಿರ ಜನರು “ಆಯಿ”ಗೆ ಹೋದರು. ಆದರೆ “ಆಯಿ”ಯ ಜನರು ಇಸ್ರೇಲಿನ ಸುಮಾರು ಮೂವತ್ತಾರು ಜನರನ್ನು ಕೊಂದು ಹಾಕಿದರು. ಆದ್ದರಿಂದ ಇಸ್ರೇಲಿನ ಜನರು ಓಡಿಹೋದರು. “ಆಯಿ”ಯ ಜನರು ಅವರನ್ನು ಪಟ್ಟಣದ ದ್ವಾರದಿಂದ ಕಲ್ಲುಗಣಿಗಳವರೆಗೆ ಬೆನ್ನಟ್ಟಿಕೊಂಡು ಬಂದರು. “ಆಯಿ”ಯ ಜನರು ಅವರನ್ನು ಚೆನ್ನಾಗಿ ಥಳಿಸಿದರು.
ಆಗ ಇಸ್ರೇಲರು ತುಂಬ ಭಯಗೊಂಡು ಧೈರ್ಯವನ್ನು ಕಳೆದುಕೊಂಡರು. 6 ಇದನ್ನು ಕೇಳಿ ಯೆಹೋಶುವನು ದುಃಖದಿಂದ ತನ್ನ ಬಟ್ಟೆಗಳನ್ನು ಹರಿದುಕೊಂಡು ಪವಿತ್ರ ಪೆಟ್ಟಿಗೆಯ ಮುಂದೆ ನೆಲದ ಮೇಲೆ ಬೋರಲಾಗಿ ಬಿದ್ದುಕೊಂಡನು. ಸಾಯಂಕಾಲದವರೆಗೂ ಯೆಹೋಶುವನು ಹಾಗೆಯೇ ಇದ್ದನು. ಇಸ್ರೇಲಿನ ಹಿರಿಯರೂ ಹಾಗೆಯೇ ಮಾಡಿದರು. ಅವರು ದುಃಖದಿಂದ ತಮ್ಮ ತಲೆಯ ಮೇಲೆ ಧೂಳನ್ನು ಸುರಿದುಕೊಂಡರು.
7 ಯೆಹೋಶುವನು, “ಯೆಹೋವನೇ ನನ್ನ ಒಡೆಯನೇ, ನಮ್ಮ ಜನರನ್ನು ನೀನು ಜೋರ್ಡನ್ ನದಿ ದಾಟಿಸಿ ಕರೆದುಕೊಂಡು ಬಂದೆ. ನಮ್ಮನ್ನು ಇಲ್ಲಿಯವರೆಗೆ ಕರೆದು ತಂದು ಅಮೋರಿಯರಿಂದ ನಾಶವಾಗಲು ನಮ್ಮನ್ನು ಬಿಟ್ಟು ಕೊಡುವುದೇಕೆ? ನಾವು ಇದ್ದುದರಲ್ಲಿ ತೃಪ್ತಿಪಟ್ಟುಕೊಂಡು ಜೋರ್ಡನ್ ನದಿಯ ಆಚೆಯಲ್ಲಿಯೇ ಇರಬೇಕಾಗಿತ್ತು. 8 ಯೆಹೋವನೇ, ಇಸ್ರೇಲರು ವೈರಿಗಳ ಮುಂದೆ ಸೋತು ಹೋಗಿದ್ದಾರಲ್ಲಾ! ಈಗ ನಾನೇನು ಹೇಳಲಿ? 9 ಈ ವಿಷಯವು ಕಾನಾನ್ಯರಿಗೂ ದೇಶದ ಉಳಿದ ಎಲ್ಲಾ ಜನರಿಗೂ ತಿಳಿಯುವುದು. ಆಗ ಅವರು ನಮ್ಮ ಮೇಲೆ ಧಾಳಿಮಾಡಿ ನಮ್ಮೆಲ್ಲರನ್ನು ಕೊಂದು ಹಾಕುತ್ತಾರೆ. ಆಗ ನೀನು ನಿನ್ನ ಕೀರ್ತಿಯನ್ನು ಉಳಿಸಿಕೊಳ್ಳಲು ಏನು ಮಾಡುವೆ?” ಎಂದು ಪ್ರಲಾಪಿಸಿದನು.
10 ಯೆಹೋವನು ಯೆಹೋಶುವನಿಗೆ, “ಮೇಲಕ್ಕೆ ಏಳು, ನೀನು ಹೀಗೆ ಬೋರಲು ಬಿದ್ದಿರುವುದೇಕೆ? 11 ಇಸ್ರೇಲರು ಪಾಪಮಾಡಿದ್ದಾರೆ. ನಾನು ಮಾಡಿಕೊಂಡ ಒಡಂಬಡಿಕೆಯನ್ನು ಮೀರಿದ್ದಾರೆ. ನಾನು ನಾಶಪಡಿಸಲು ಹೇಳಿದ ವಸ್ತುಗಳಲ್ಲಿ ಕೆಲವನ್ನು ಅವರು ತೆಗೆದುಕೊಂಡಿದ್ದಾರೆ; ಅವರು ನನ್ನಿಂದ ಕದ್ದಿದ್ದಾರೆ; ಸುಳ್ಳು ಹೇಳಿದ್ದಾರೆ. ಅವರು ಆ ವಸ್ತುಗಳನ್ನು ತಮಗಾಗಿ ತೆಗೆದುಕೊಂಡಿದ್ದಾರೆ. 12 ಅದಕ್ಕಾಗಿಯೇ ಇಸ್ರೇಲಿನ ಸೈನ್ಯವು ಯುದ್ಧದಿಂದ ವಿಮುಖವಾಗಿ ಓಡಿಬಂತು. ಅವರು ತಪ್ಪನ್ನು ಮಾಡಿದ್ದರಿಂದಲೇ ಶಾಪಕ್ಕೆ ಗುರಿಯಾಗಿದ್ದಾರೆ. ಆ ಪಾಪವನ್ನು ನಿಮ್ಮಿಂದ ತೆಗೆದುಹಾಕಬೇಕು, ಅಲ್ಲಿಯವರೆಗೆ ನಾನು ನಿಮಗೆ ಸಹಾಯ ಮಾಡುವುದಿಲ್ಲ, ನಾನು ನಿಮ್ಮ ಸಂಗಡ ಬರುವುದೇ ಇಲ್ಲ.
13 “ಈಗ ಹೋಗಿ ಜನರನ್ನು ಶುದ್ಧಗೊಳಿಸು, ನೀನು ಜನರಿಗೆ, ‘ನೀವು ನಿಮ್ಮನ್ನು ಶುದ್ಧಿಗೊಳಿಸಿಕೊಳ್ಳಿರಿ, ನಾಳೆಗಾಗಿ ಸಿದ್ಧರಾಗಿರಿ, ಇಸ್ರೇಲಿನ ದೇವರಾದ ಯೆಹೋವನು ನಾಶಪಡಿಸಬೇಕೆಂದು ಆಜ್ಞಾಪಿಸಿದ ವಸ್ತುಗಳನ್ನು ಕೆಲ ಜನರು ಇಟ್ಟುಕೊಂಡಿದ್ದಾರೆಂದು ಹೇಳುತ್ತಾನೆ. ನೀವು ಆ ವಸ್ತುಗಳನ್ನು ಬಿಸಾಡುವವರೆಗೆ ನಿಮಗೆ ನಿಮ್ಮ ಶತ್ರುಗಳನ್ನು ಸೋಲಿಸಲು ಎಂದಿಗೂ ಸಾಧ್ಯವಿಲ್ಲ.
14 “‘ನಾಳೆ ಬೆಳಿಗ್ಗೆ ನೀವೆಲ್ಲರು ಯೆಹೋವನ ಮುಂದೆ ಬಂದು ನಿಲ್ಲಬೇಕು. ಎಲ್ಲಾ ಕುಲಗಳು ಯೆಹೋವನ ಮುಂದೆ ಬಂದು ನಿಲ್ಲಬೇಕು. ಯೆಹೋವನು ಒಂದು ಕುಲವನ್ನು ಸೂಚಿಸುತ್ತಾನೆ. ಆಗ ಆ ಕುಲ ಮಾತ್ರ ಮುಂದೆ ನಿಲ್ಲಬೇಕು. ಆಗ ಯೆಹೋವನು ಒಂದು ಗೋತ್ರವನ್ನು ಸೂಚಿಸುತ್ತಾನೆ. ಆಗ ಆ ಗೋತ್ರದವರು ಮಾತ್ರ ಯೆಹೋವನ ಮುಂದೆ ನಿಲ್ಲಬೇಕು. ಆಗ ಯೆಹೋವನು ಆ ಗೋತ್ರದ ಪ್ರತಿಯೊಂದು ಕುಟುಂಬವನ್ನು ನೋಡಿ, ಒಂದು ಕುಟುಂಬವನ್ನು ಸೂಚಿಸುತ್ತಾನೆ. ಬಳಿಕ ಯೆಹೋವನು ಆ ಕುಟುಂಬದ ಪ್ರತಿಯೊಬ್ಬ ಮನುಷ್ಯನನ್ನು ನೋಡುತ್ತಾನೆ. 15 ಆಗ ನಾವು ನಾಶಪಡಿಸಬೇಕಾಗಿದ್ದ ವಸ್ತುಗಳನ್ನು ಇಟ್ಟುಕೊಂಡ ಮನುಷ್ಯನು ಸಿಕ್ಕಿಬೀಳುತ್ತಾನೆ. ಬಳಿಕ ಆ ಮನುಷ್ಯನು ಬೆಂಕಿಯಿಂದ ನಾಶವಾಗುವನು. ಅವನ ಎಲ್ಲಾ ಸ್ವತ್ತು ಅವನೊಂದಿಗೆ ನಾಶವಾಗುವುದು. ಆ ಮನುಷ್ಯನು ಯೆಹೋವನ ಆಜ್ಞೆಯನ್ನು ಮೀರಿದ್ದಾನೆ. ಇಸ್ರೇಲರಿಗೆ ಕೇಡನ್ನು ಬರಮಾಡಿದ್ದಾನೆ’” ಎಂದನು.
16 ಮಾರನೆಯ ದಿನ, ಬೆಳಿಗ್ಗೆ ಯೆಹೋಶುವನು ಇಸ್ರೇಲಿನ ಎಲ್ಲ ಜನರನ್ನು ಯೆಹೋವನ ಮುಂದೆ ಕರೆದುಕೊಂಡು ಬಂದನು. ಎಲ್ಲ ಕುಲಗಳು ಯೆಹೋವನ ಮುಂದೆ ನಿಂತುಕೊಂಡವು. ಯೆಹೋವನು ಯೆಹೂದ ಕುಲವನ್ನು ಸೂಚಿಸಿದನು. 17 ಆದ್ದರಿಂದ ಯೆಹೂದ ಕುಲದ ಎಲ್ಲ ಗೋತ್ರಗಳು ಯೆಹೋವನ ಮುಂದೆ ಬಂದು ನಿಂತವು. ಯೆಹೋವನು ಜೆರಹನ ಗೋತ್ರವನ್ನು ಸೂಚಿಸಿದನು. ಆಗ ಜೆರಹನ ಗೋತ್ರದ ಎಲ್ಲ ಕುಟುಂಬಗಳು ಯೆಹೋವನ ಎದುರಿಗೆ ಬಂದು ನಿಂತವು. ಆಗ ಜಬ್ದೀಯ ಕುಟುಂಬವನ್ನು ಸೂಚಿಸಲಾಯಿತು. 18 ಆಗ ಯೆಹೋಶುವನು ಆ ಕುಟುಂಬದ ಎಲ್ಲ ಗಂಡಸರನ್ನು ಯೆಹೋವನ ಮುಂದೆ ಬರಲು ಹೇಳಿದನು. ಯೆಹೋವನು ಆಗ ಕರ್ಮೀಯ ಮಗನಾದ ಆಕಾನನನ್ನು ಸೂಚಿಸಿದನು. ಕರ್ಮೀಯು ಜಬ್ದೀಯ ಮಗನಾಗಿದ್ದನು, ಜಬ್ದೀಯು ಜೆರಹನ ಮಗನಾಗಿದ್ದನು.
19 ಆಗ ಯೆಹೋಶುವನು ಆಕಾನನಿಗೆ, “ನನ್ನ ಮಗನೇ, ಇಸ್ರೇಲಿನ ದೇವರಾದ ಯೆಹೋವನನ್ನು ಸನ್ಮಾನಿಸು; ಆತನಿಗೆ ಸ್ತೋತ್ರಸಲ್ಲಿಸು. ನಿನ್ನ ಪಾಪಗಳನ್ನು ಆತನಿಗೆ ಅರಿಕೆಮಾಡು. ನೀನು ಮಾಡಿದ್ದನ್ನು ನನಗೆ ಹೇಳು; ನನ್ನಿಂದ ಏನನ್ನೂ ಮುಚ್ಚಿಡಬೇಡ” ಎಂದನು.
20 ಆಗ ಆಕಾನನು, “ಇದು ಸತ್ಯ. ನಾನು ಇಸ್ರೇಲಿನ ದೇವರಾದ ಯೆಹೋವನಿಗೆ ವಿರೋಧವಾಗಿ ಪಾಪಮಾಡಿದ್ದೇನೆ. 21 ನಾವು ಜೆರಿಕೊ ನಗರವನ್ನು ಮತ್ತು ಅದರಲ್ಲಿದ್ದ ಎಲ್ಲ ವಸ್ತುಗಳನ್ನು ಸ್ವಾಧೀನಪಡಿಸಿಕೊಂಡು ಕೊಳ್ಳೆ ಹೊಡೆಯುತ್ತಿದ್ದಾಗ, ಬಾಬಿಲೋನಿನ ಒಂದು ಸುಂದರವಾದ ನಿಲುವಂಗಿಯನ್ನೂ ಸುಮಾರು ಐದು ಪೌಂಡಿನಷ್ಟು ಬೆಳ್ಳಿಯನ್ನೂ ಒಂದು ಪೌಂಡಿಗಿಂತಲೂ ಹೆಚ್ಚು ಬಂಗಾರವನ್ನೂ ಕಂಡೆನು. ಈ ವಸ್ತುಗಳನ್ನು ನನಗಾಗಿ ಇಟ್ಟುಕೊಳ್ಳಬೇಕೆಂದು ತುಂಬ ಆಶೆಯಾಯಿತು. ಅದಕ್ಕಾಗಿ ನಾನು ಅವುಗಳನ್ನು ತೆಗೆದುಕೊಂಡೆ. ಅವುಗಳನ್ನು ನನ್ನ ಗುಡಾರದಲ್ಲಿ ಹುಗಿದಿಟ್ಟಿದ್ದೇನೆ. ಬೆಳ್ಳಿಯು ನಿಲುವಂಗಿಯ ಕೆಳಗಡೆ ಇದೆ” ಎಂದು ಒಪ್ಪಿಕೊಂಡನು.
22 ಆಗ ಯೆಹೋಶುವನು ಕೆಲವರನ್ನು ಗುಡಾರಕ್ಕೆ ಕಳುಹಿಸಿದನು. ಅವರು ಗುಡಾರಕ್ಕೆ ಓಡಿಹೋಗಿ ಹುಗಿದಿಟ್ಟಿದ್ದ ಆ ವಸ್ತುಗಳನ್ನು ಕಂಡರು. ಬೆಳ್ಳಿಯು ನಿಲುವಂಗಿಯ ಕೆಳಗಡೆ ಇತ್ತು. 23 ಜನರು ಆ ವಸ್ತುಗಳನ್ನು ಗುಡಾರದ ಹೊರಗೆ ತೆಗೆದುಕೊಂಡು ಬಂದು ಯೆಹೋಶುವನ ಮತ್ತು ಎಲ್ಲಾ ಇಸ್ರೇಲರ ಬಳಿಗೆ ಬಂದರು. ಅವರು ಯೆಹೋವನ ಮುಂದೆ ಆ ವಸ್ತುಗಳನ್ನೆಲ್ಲಾ ನೆಲದ ಮೇಲೆ ಹಾಕಿದರು.
24 ಆಗ ಯೆಹೋಶುವನು ಮತ್ತು ಎಲ್ಲಾ ಇಸ್ರೇಲರು ಸೇರಿ ಜೆರಹನ ಮಗನಾದ ಆಕಾನನನ್ನು, ಬೆಳ್ಳಿಯನ್ನು, ನಿಲುವಂಗಿಯನ್ನು, ಬಂಗಾರವನ್ನು, ಆಕಾನನ ಮಕ್ಕಳನ್ನು, ಅವನ ದನಕರುಗಳನ್ನು, ಕತ್ತೆಗಳನ್ನು, ಅವನ ಕುರಿಗಳನ್ನು, ಅವನ ಗುಡಾರವನ್ನು ಮತ್ತು ಅವನ ಎಲ್ಲ ಸ್ವತ್ತನ್ನು “ಆಕೋರ್” ಕಣಿವೆಗೆ ತೆಗೆದುಕೊಂಡು ಹೋದರು. 25 ಆಗ ಯೆಹೋಶುವನು ಅವನಿಗೆ, “ನೀನು ನಮಗೆ ಕೇಡನ್ನು ಬರಮಾಡಿರುವೆ! ಆದ್ದರಿಂದ ಯೆಹೋವನು ನಿನಗೂ ಕೇಡನ್ನು ಮಾಡಲಿ!” ಎಂದನು. ಆಗ ಜನರೆಲ್ಲರೂ ಕಲ್ಲುಗಳನ್ನು ತೂರಿ ಆಕಾನನನ್ನೂ ಅವನ ಕುಟುಂಬದವರನ್ನೂ ಕೊಂದರು ಮತ್ತು ಅವನ ಎಲ್ಲ ಸ್ವತ್ತನ್ನು ಸುಟ್ಟುಹಾಕಿದರು. 26 ಆಕಾನನನ್ನು ಸುಟ್ಟ ಬಳಿಕ ಅವರು ಅವನ ದೇಹದ ಮೇಲೆ ಕಲ್ಲುಗಳ ಒಂದು ದೊಡ್ಡ ಕುಪ್ಪೆಯನ್ನು ಹಾಕಿದರು. ಆ ಕುಪ್ಪೆಯು ಇಂದಿಗೂ ಅಲ್ಲಿದೆ. ಹೀಗೆ ದೇವರು ಆಕಾನನನ್ನು ಶಿಕ್ಷಿಸಿದನು. ಅದಕ್ಕಾಗಿ ಆ ಕಣಿವೆಗೆ “ಆಕೋರ್ ಕಣಿವೆ” ಎಂಬ ಹೆಸರು ಬಂದಿತು. ಬಳಿಕ ಯೆಹೋವನಿಗೆ ಜನರ ಮೇಲಿದ್ದ ಕೋಪ ಶಮನವಾಯಿತು.
“ಆಯಿ”ಯ ವಿನಾಶ
8 ಆಗ ಯೆಹೋವನು ಯೆಹೋಶುವನಿಗೆ, “ಭಯಪಡಬೇಡ, ನಿರಾಶೆಗೊಳ್ಳಬೇಡ. ನಿಮ್ಮ ಎಲ್ಲ ಯೋಧರನ್ನು ‘ಆಯಿ’ಗೆ ತೆಗೆದುಕೊಂಡು ಹೋಗು. ‘ಆಯಿ’ಯ ಅರಸನನ್ನು ಸೋಲಿಸಲು ನಾನು ನಿನಗೆ ಸಹಾಯ ಮಾಡುತ್ತೇನೆ. ನಾನು ನಿನಗೆ ಅವನ ಜನರನ್ನು, ಅವನ ಪಟ್ಟಣವನ್ನು ಮತ್ತು ಅವನ ಪ್ರದೇಶವನ್ನು ಕೊಡುವೆನು. 2 ಜೆರಿಕೊ ಮತ್ತು ಅದರ ಅರಸನಿಗೆ ಮಾಡಿದಂತೆಯೇ ನೀವು ‘ಆಯಿ’ ಮತ್ತು ಅದರ ಅರಸನಿಗೆ ಮಾಡಬೇಕು. ಈ ಸಲ ಮಾತ್ರ ನೀವು ಎಲ್ಲ ಸಂಪತ್ತನ್ನು ತೆಗೆದುಕೊಂಡು ನಿಮಗಾಗಿ ಇಟ್ಟುಕೊಳ್ಳಬೇಕು. ನೀವು ಈ ಸಂಪತ್ತನ್ನು ನಿಮ್ಮ ಜನರೊಂದಿಗೆ ಹಂಚಿಕೊಳ್ಳಿರಿ. ಈಗ, ನಿಮ್ಮ ಕೆಲವು ಯೋಧರಿಗೆ ಪಟ್ಟಣದ ಹಿಂಭಾಗದಲ್ಲಿ ಅಡಗಿಕೊಂಡಿರಲು ತಿಳಿಸು” ಅಂದನು.
3 ಯೆಹೋಶುವನು “ಆಯಿ”ಯ ಮೇಲೆ ಆಕ್ರಮಣಮಾಡಲು ಸೈನ್ಯಸಮೇತವಾಗಿ ಹೋದನು. ಮೂವತ್ತು ಸಾವಿರ ಯುದ್ಧವೀರರನ್ನು ಆರಿಸಿಕೊಂಡನು. 4 ಯೆಹೋಶುವನು ಅವರಿಗೆ, “ಗಮನಕೊಟ್ಟು ಕೇಳಿರಿ. ನೀವು ನಗರದ ಹಿಂಭಾಗದ ಸ್ಥಳದಲ್ಲಿ ಅಡಗಿಕೊಂಡಿದ್ದು ಆಕ್ರಮಣಮಾಡಲು ಸಿದ್ಧರಾಗಿರಿ. ನಗರದಿಂದ ಬಹಳ ದೂರ ಹೋಗಬೇಡಿರಿ. 5 ನಾನು ನನ್ನ ಸಂಗಡವಿರುವ ಜನರನ್ನು ಕರೆದುಕೊಂಡು ಪಟ್ಟಣದ ಕಡೆಗೆ ಹೋಗುತ್ತೇನೆ. ಪಟ್ಟಣದೊಳಗಿರುವ ಜನರು ನಮ್ಮ ಸಂಗಡ ಕಾದಾಡಲು ಹೊರಗೆ ಬರುತ್ತಾರೆ. ನಾವು ಮುಂಚಿನಂತೆ ಹಿಂತಿರುಗಿ ಅಲ್ಲಿಂದ ಓಡುತ್ತೇವೆ. 6 ಅವರು ನಗರದಿಂದ ನಮ್ಮನ್ನು ಬೆನ್ನಟ್ಟಿಕೊಂಡು ಬರುತ್ತಾರೆ. ನಾವು ಮುಂಚಿನಂತೆ ಅವರ ಮುಂದೆ ಸೋತು ಓಡಿಹೋಗುತ್ತಿದ್ದೇವೆ ಎಂದು ಅವರು ತಿಳಿದುಕೊಳ್ಳುತ್ತಾರೆ. ಹೀಗೆ ನಾವು ಬಹುದೂರ ಓಡಿಹೋದಾಗ 7 ನೀವು ಯಾವ ಸ್ಥಳದಲ್ಲಿ ಅಡಗಿಕೊಂಡಿದ್ದೀರೋ ಆ ಸ್ಥಳದಿಂದ ಹೊರಬಂದು ಪಟ್ಟಣವನ್ನು ಸ್ವಾಧೀನಪಡಿಸಿಕೊಳ್ಳಬೇಕು. ನಿಮ್ಮ ದೇವರಾದ ಯೆಹೋವನು ನಿಮಗೆ ಗೆಲ್ಲುವ ಸಾಮರ್ಥ್ಯವನ್ನು ದಯಪಾಲಿಸುತ್ತಾನೆ.
8 “ಯೆಹೋವನು ಹೇಳಿದಂತೆಯೇ ನೀವು ಮಾಡಬೇಕು. ನೀವು ಪಟ್ಟಣವನ್ನು ಸ್ವಾಧೀನಪಡಿಸಿಕೊಂಡ ಮೇಲೆ ಅದನ್ನು ಸುಟ್ಟುಹಾಕಬೇಕು. ನನ್ನ ಕಡೆಗೆ ಗಮನವಿರಲಿ! ಆಕ್ರಮಣ ಮಾಡುವುದಕ್ಕೆ ನಾನು ಆಜ್ಞೆಯನ್ನು ಕೊಡುತ್ತೇನೆ” ಎಂದು ಆಜ್ಞಾಪಿಸಿದನು.
9 ಬಳಿಕ ಯೆಹೋಶುವನು ಅವರನ್ನು ಅವರು ಅಡಗಿಕೊಳ್ಳಬೇಕಾದ ಸ್ಥಳಕ್ಕೆ ಕಳುಹಿಸಿದನು. ಅವರು “ಬೇತೇಲ್” ಮತ್ತು “ಆಯಿ”ಯ ಮಧ್ಯದಲ್ಲಿದ್ದ ಒಂದು ಸ್ಥಳಕ್ಕೆ ಹೋದರು. ಇದು ಆಯಿಯ ಪಶ್ಚಿಮಕ್ಕಿತ್ತು. ಯೆಹೋಶುವನು ತನ್ನ ಜನರೊಂದಿಗೆ ಆ ರಾತ್ರಿ ಅಲ್ಲಿಯೇ ಇದ್ದನು.
10 ಮರುದಿನ ಬೆಳಿಗ್ಗೆ ಯೆಹೋಶುವನು ಎಲ್ಲ ಜನರನ್ನು ಒಂದು ಕಡೆ ಬೇಗನೆ ಸೇರಿಸಿದನು. ಆಮೇಲೆ ಯೆಹೋಶುವನು ಮತ್ತು ಇಸ್ರೇಲಿನ ನಾಯಕರು ಜನರನ್ನು “ಆಯಿ”ಗೆ ಮುನ್ನಡೆಸಿದರು. 11 ಅವನ ಜೊತೆಗಿದ್ದ ಎಲ್ಲ ಸೈನಿಕರು “ಆಯಿ”ಯ ಕಡೆಗೆ ಹೋದರು. ಅವರು ನಗರದ ಮುಂದುಗಡೆ ನಿಂತರು. ಸೈನ್ಯವು ನಗರದ ಉತ್ತರ ದಿಕ್ಕಿನಲ್ಲಿಳಿದುಕೊಂಡಿತು. ಈ ಸೈನ್ಯ ಮತ್ತು “ಆಯಿ” ಪಟ್ಟಣದ ನಡುವೆ ಒಂದು ಕಣಿವೆ ಇತ್ತು.
12 ಆಗ ಯೆಹೋಶುವನು ಸುಮಾರು ಐದು ಸಾವಿರ ಜನರನ್ನು ಆರಿಸಿ ಪಟ್ಟಣದ ಪಶ್ಚಿಮದಲ್ಲಿರುವ “ಬೇತೇಲ್” ಮತ್ತು “ಆಯಿ”ಯ ಮಧ್ಯದಲ್ಲಿರುವ ಕ್ಷೇತ್ರದಲ್ಲಿ ಅಡಗಿಕೊಳ್ಳಲು ಕಳುಹಿಸಿಕೊಟ್ಟನು. 13 ಯೆಹೋಶುವನು ತನ್ನ ಜನರನ್ನು ಯುದ್ಧಕ್ಕೆ ಸಿದ್ಧಗೊಳಿಸಿದ್ದನು. ಮುಖ್ಯ ಪಾಳೆಯವು ಪಟ್ಟಣದ ಉತ್ತರ ದಿಕ್ಕಿನಲ್ಲಿತ್ತು. ಉಳಿದ ಜನರು ಪಶ್ಚಿಮದಲ್ಲಿ ಅಡಗಿಕೊಂಡಿದ್ದರು. ಆ ರಾತ್ರಿ ಯೆಹೋಶುವನು ಕಣಿವೆಗೆ ಹೋದನು.
14 ತರುವಾಯ “ಆಯಿ”ಯ ಅರಸನು ಇಸ್ರೇಲರ ಸೈನ್ಯವನ್ನು ನೋಡಿದನು. ಅರಸನು ಮತ್ತು ಅವನ ಜನರು ಇಸ್ರೇಲರ ಸೈನ್ಯದೊಂದಿಗೆ ಯುದ್ಧಮಾಡಿ ಮುಗಿಸುವುದಕ್ಕಾಗಿ ತ್ವರೆಮಾಡಿ ಹೊರಟರು. “ಆಯಿ”ಯ ಅರಸನು ಪಟ್ಟಣದ ಪೂರ್ವಕ್ಕೆ ಹೋದನು. ಆದ್ದರಿಂದ ಅವನು ಪಟ್ಟಣದ ಹಿಂಭಾಗದಲ್ಲಿ ಅಡಗಿದ್ದ ಸೈನಿಕರನ್ನು ನೋಡಲಿಲ್ಲ.
15 ಯೆಹೋಶುವನು ಮತ್ತು ಇಸ್ರೇಲರ ಎಲ್ಲ ಜನರು “ಆಯಿ”ಯ ಸೈನ್ಯವು ತಮ್ಮನ್ನು ಹಿಮ್ಮೆಟ್ಟುವುದಕ್ಕೆ ಅವಕಾಶ ಮಾಡಿಕೊಟ್ಟರು. ಯೆಹೋಶುವನು ಮತ್ತು ಅವನ ಜನರು ಪೂರ್ವಕ್ಕೆ ಮರಭೂಮಿಯ ಕಡೆಗೆ ಓಡಲು ಪ್ರಾರಂಭಿಸಿದರು. 16 ಯೆಹೋಶುವನನ್ನು ಮತ್ತು ಅವನ ಜನರನ್ನು ಬೆನ್ನಟ್ಟಲು “ಆಯಿ” ಪಟ್ಟಣದಲ್ಲಿದ್ದ ಗಂಡಸರನ್ನೆಲ್ಲ ಕರೆಸಲಾಯಿತು. ಎಲ್ಲ ಜನರು ಪಟ್ಟಣವನ್ನು ಬಿಟ್ಟರು. 17 “ಆಯಿ” ಮತ್ತು ಬೇತೇಲಿನ ಎಲ್ಲ ಜನರು ಇಸ್ರೇಲಿನ ಸೈನ್ಯವನ್ನು ಬೆನ್ನಟ್ಟಿದರು. ಪಟ್ಟಣದ ಬಾಗಿಲನ್ನು ತೆರೆದಿಟ್ಟಿದ್ದರು; ಒಬ್ಬನಾದರೂ ಪಟ್ಟಣದ ರಕ್ಷಣೆಗೆ ಉಳಿದಿರಲಿಲ್ಲ.
18 ಆಗ ಯೆಹೋವನು ಯೆಹೋಶುವನಿಗೆ, “ನಿನ್ನ ಕೈಯಲ್ಲಿರುವ ಈಟಿಯನ್ನು ‘ಆಯಿ’ ಕಡೆಗೆ ಚಾಚು, ಆ ಪಟ್ಟಣವನ್ನು ನಾನು ನಿಮಗೆ ಕೊಟ್ಟಿದ್ದೇನೆ” ಎಂದನು. ಯೆಹೋಶುವನು ತನ್ನ ಈಟಿಯನ್ನು “ಆಯಿ”ಯ ಕಡೆಗೆ ಚಾಚಿದನು. 19 ಅಡಗಿಕೊಂಡಿದ್ದ ಇಸ್ರೇಲಿನ ಜನರು ಇದನ್ನು ನೋಡಿ ಕೂಡಲೇ ತಾವು ಅಡಗಿದ್ದ ಸ್ಥಳದಿಂದ ಹೊರಬಂದು ವೇಗವಾಗಿ ಪಟ್ಟಣದ ಕಡೆಗೆ ಧಾವಿಸಿದರು. ಅವರು ಪಟ್ಟಣವನ್ನು ಪ್ರವೇಶಿಸಿ ಅದನ್ನು ಸ್ವಾಧೀನಪಡಿಸಿಕೊಂಡು ಅದಕ್ಕೆ ಬೆಂಕಿ ಹಚ್ಚಿದರು.
20 “ಆಯಿ”ಯ ಜನರು ಹಿಂತಿರುಗಿ ನೋಡಿದಾಗ ತಮ್ಮ ಪಟ್ಟಣ ಉರಿಯುತ್ತಿರುವುದನ್ನೂ ಹೊಗೆಯು ಆಕಾಶಕ್ಕೆ ಏರುತ್ತಿರುವುದನ್ನೂ ಕಂಡು ತಮ್ಮ ಶಕ್ತಿಯನ್ನೂ ಧೈರ್ಯವನ್ನೂ ಕಳೆದುಕೊಂಡರು. ಅವರು ಇಸ್ರೇಲಿನ ಜನರ ಬೆನ್ನಟ್ಟುವುದನ್ನು ಬಿಟ್ಟರು. ಇಸ್ರೇಲಿನ ಜನರು ಓಡಿಹೋಗುವುದನ್ನು ನಿಲ್ಲಿಸಿ “ಆಯಿ”ಯ ಜನರೊಂದಿಗೆ ಹೋರಾಡತೊಡಗಿದರು. “ಆಯಿ”ಯ ಜನರಿಗೆ ಓಡಿಹೋಗಲು ಸುರಕ್ಷಿತವಾದ ಯಾವ ಸ್ಥಳವೂ ಇರಲಿಲ್ಲ. 21 ಯೆಹೋಶುವನು ಮತ್ತು ಅವನ ಜನರು, ತಮ್ಮ ಸೈನ್ಯವು ಪಟ್ಟಣವನ್ನು ಸ್ವಾಧೀನಪಡಿಸಿಕೊಂಡದ್ದನ್ನು ನೋಡಿದರು. ಅವರು ಪಟ್ಟಣದಿಂದ ಏಳುತ್ತಿರುವ ಹೊಗೆಯನ್ನು ನೋಡಿದರು. ಆಗ ಅವರು ಓಡಿಹೋಗುವುದನ್ನು ನಿಲ್ಲಿಸಿ “ಆಯಿ” ಜನರೊಂದಿಗೆ ಹೋರಾಡಲು ಬಂದರು. 22 ಆಗ ಅಡಗಿಕೊಂಡಿದ್ದ ಜನರು ಯುದ್ಧದಲ್ಲಿ ಸಹಾಯ ಮಾಡಲು ಪಟ್ಟಣದಿಂದ ಹೊರಬಂದರು. ಇಸ್ರೇಲಿನ ಸೈನ್ಯವು “ಆಯಿ”ಯ ಜನರ ಎರಡು ಕಡೆಗೂ ಇತ್ತು. “ಆಯಿ”ಯ ಜನರು ಸಿಕ್ಕಿಬಿದ್ದರು. ಇಸ್ರೇಲರು ಅವರನ್ನು ಸೋಲಿಸಿ ಅವರಲ್ಲಿ ಒಬ್ಬರನ್ನೂ ಜೀವಂತವಾಗಿ ಉಳಿಸಲಿಲ್ಲ. ಅವರಲ್ಲಿ ಒಬ್ಬನಾದರೂ ತಪ್ಪಿಸಿಕೊಳ್ಳಲಾಗಲಿಲ್ಲ. 23 ಆದರೆ “ಆಯಿ”ಯ ಅರಸನನ್ನು ಜೀವಸಹಿತ ಉಳಿಸಿ ಯೆಹೋಶುವನ ಬಳಿಗೆ ತಂದರು.
ಯುದ್ಧದ ಪುನರಾವಲೋಕನ
24 ಯುದ್ಧದಲ್ಲಿ ಇಸ್ರೇಲರು “ಆಯಿ”ಯ ಜನರನ್ನು ಬೆನ್ನಟ್ಟಿ ಬಯಲುಗಳಲ್ಲಿಯೂ ಅರಣ್ಯದಲ್ಲಿಯೂ ಕೊಂದುಹಾಕಿದರು. ಬಳಿಕ ಇಸ್ರೇಲರು “ಆಯಿ”ಗೆ ಹಿಂತಿರುಗಿ ಪಟ್ಟಣದಲ್ಲಿ ಜೀವಸಹಿತ ಉಳಿದಿದ್ದ ಎಲ್ಲರನ್ನು ಕೊಂದುಹಾಕಿದರು. 25 “ಆಯಿ”ಯ ಜನರೆಲ್ಲಾ ಆ ದಿನ ಸತ್ತುಹೋದರು. ಅಲ್ಲಿ ಹನ್ನೆರಡು ಸಾವಿರ ಗಂಡಸರು ಮತ್ತು ಹೆಂಗಸರು ಇದ್ದರು. 26 ಆ ಪಟ್ಟಣವನ್ನು ನಾಶಮಾಡಲು ಸೂಚಿಸುವ ಸಂಕೇತದಂತೆ ಯೆಹೋಶುವನು ತನ್ನ ಈಟಿಯನ್ನು “ಆಯಿ”ಯ ಕಡೆಗೆ ಚಾಚಿದನು. ಆ ಪಟ್ಟಣದ ಜನರೆಲ್ಲರೂ ನಾಶವಾಗುವವರೆಗೆ ಯೆಹೋಶುವನು ಈಟಿ ಹಿಡಿದು ಚಾಚಿದ ಕೈಯನ್ನು ಹಿಂದೆಗೆಯಲಿಲ್ಲ. 27 ಆ ಪಟ್ಟಣ ನಿವಾಸಿಗಳ ಸ್ವತ್ತಾಗಿದ್ದ ಪಶುಗಳನ್ನು ಮತ್ತು ವಸ್ತುಗಳನ್ನು ಇಸ್ರೇಲಿನ ಜನರು ತಮಗಾಗಿ ಇಟ್ಟುಕೊಂಡರು. ಅವುಗಳನ್ನು ಇಟ್ಟುಕೊಳ್ಳಲು ಯೆಹೋವನು ಯೆಹೋಶುವನಿಗೆ ಅಪ್ಪಣೆಕೊಟ್ಟಿದ್ದನು.
28 ಅನಂತರ ಯೆಹೋಶುವನು “ಆಯಿ” ನಗರವನ್ನು ಸುಟ್ಟುಹಾಕಿದನು. ಆ ನಗರವು ಕೇವಲ ಕಲ್ಲುಬಂಡೆಗಳ ದಿಬ್ಬವಾಯಿತು. ಅದು ಇಂದಿಗೂ ಹಾಗೆಯೇ ಇದೆ. 29 ಯೆಹೋಶುವನು “ಆಯಿ”ಯ ಅರಸನನ್ನು ಒಂದು ಮರಕ್ಕೆ ಸಾಯಂಕಾಲದವರೆಗೂ ನೇತುಹಾಕಿದನು. ಸೂರ್ಯನು ಮುಳುಗಿದ ಮೇಲೆ, ಯೆಹೋಶುವನು ಆ ಅರಸನ ಶವವನ್ನು ಮರದಿಂದ ಕೆಳಗಿಳಿಸಿ ನಗರದ ದ್ವಾರದಲ್ಲೇ ಬಿಸಾಡಿ ಅದರ ಮೇಲೆ ಕಲ್ಲಿನ ದೊಡ್ಡ ಕುಪ್ಪೆಯನ್ನು ಮಾಡಿಸಿದನು. ಅದು ಇಂದಿನವರೆಗೂ ಹಾಗೆಯೇ ಇದೆ.
ಆಶೀರ್ವಾದಗಳ ಮತ್ತು ಶಾಪಗಳ ವಚನ
30 ಆಗ ಇಸ್ರೇಲಿನ ದೇವರಾದ ಯೆಹೋವನಿಗಾಗಿ ಯೆಹೋಶುವನು ಒಂದು ಯಜ್ಞವೇದಿಕೆಯನ್ನು ಏಬಾಲ್ ಬೆಟ್ಟದ ಮೇಲೆ ಕಟ್ಟಿಸಿದನು. 31 ಯಜ್ಞವೇದಿಕೆಯನ್ನು ಹೇಗೆ ಕಟ್ಟಬೇಕೆಂಬುದನ್ನು ಯೆಹೋವನ ಸೇವಕನಾದ ಮೋಶೆಯು ಇಸ್ರೇಲರಿಗೆ ಹೇಳಿ ಕೊಟ್ಟಿದ್ದನು. ಆದ್ದರಿಂದ ಮೋಶೆಯ ಧರ್ಮಶಾಸ್ತ್ರದ ಗ್ರಂಥದಲ್ಲಿ ವಿವರಿಸಿದಂತೆ ಯೆಹೋಶುವನು ಯಜ್ಞವೇದಿಕೆಯನ್ನು ಕಟ್ಟಿಸಿದನು. ಯಜ್ಞವೇದಿಕೆಯನ್ನು ಕಡಿಯದ ಕಲ್ಲುಗಳಿಂದ ಮಾಡಲಾಯಿತು. ಆ ಕಲ್ಲುಗಳ ಮೇಲೆ ಯಾವ ಉಪಕರಣವನ್ನೂ ಉಪಯೋಗಿಸಿರಲಿಲ್ಲ. ಯೆಹೋವನಿಗೆ ಆ ಯಜ್ಞವೇದಿಕೆಯ ಮೇಲೆ ಸರ್ವಾಂಗಹೋಮಗಳನ್ನೂ ಸಮಾಧಾನಯಜ್ಞಗಳನ್ನೂ ಅರ್ಪಿಸಿದರು.
32 ಆ ಸ್ಥಳದಲ್ಲಿ ಯೆಹೋಶುವನು ಮೋಶೆಯ ಧರ್ಮಶಾಸ್ತ್ರವನ್ನು ಕಲ್ಲಿನ ಹಲಗೆಗಳ ಮೇಲೆ ಬರೆಸಿದನು. ಇಸ್ರೇಲರೆಲ್ಲರೂ ಅದನ್ನು ನೋಡಬೇಕೆಂಬುದೇ ಅದರ ಉದ್ದೇಶವಾಗಿತ್ತು. 33 ಹಿರಿಯರು, ಅಧಿಕಾರಿಗಳು, ನ್ಯಾಯಾಧೀಶರು ಮತ್ತು ಇಸ್ರೇಲರೆಲ್ಲರು ಪವಿತ್ರ ಪೆಟ್ಟಿಗೆಯ ಸುತ್ತಲೂ ನಿಂತುಕೊಂಡಿದ್ದರು. ಯೆಹೋವನ ಒಡಂಬಡಿಕೆಯ ಪವಿತ್ರ ಪೆಟ್ಟಿಗೆಯನ್ನು ಹೊತ್ತುತಂದ ಲೇವಿಯರ ಎದುರುಗಡೆ ಅವರು ನಿಂತುಕೊಂಡಿದ್ದರು. ಅರ್ಧಜನರು ಏಬಾಲ್ ಬೆಟ್ಟದ ಎದುರಿಗೂ ಮತ್ತು ಇನ್ನುಳಿದ ಅರ್ಧಜನರು ಗೆರಿಜ್ಜೀಮ್ ಬೆಟ್ಟದ ಎದುರಿಗೂ ನಿಂತುಕೊಂಡಿದ್ದರು. ಆಶೀರ್ವಾದವನ್ನು ಹೊಂದಿಕೊಳ್ಳಲು ಹೀಗೆ ಮಾಡಬೇಕೆಂದು ಯೆಹೋವನ ಸೇವಕನಾದ ಮೋಶೆಯು ಜನರಿಗೆ ಹೇಳಿದ್ದನು.
34 ಆಗ ಯೆಹೋಶುವನು ಧರ್ಮಶಾಸ್ತ್ರದ ಎಲ್ಲಾ ಆಶೀರ್ವಾದಗಳನ್ನು ಮತ್ತು ಶಾಪದ ವಾಕ್ಯಗಳನ್ನು ಧರ್ಮಶಾಸ್ತ್ರದಲ್ಲಿ ಬರೆದಿರುವಂತೆಯೇ ಓದಿದನು. 35 ಅಲ್ಲಿ ಇಸ್ರೇಲಿನ ಎಲ್ಲ ಜನರು ಸೇರಿ ಬಂದಿದ್ದರು. ಎಲ್ಲ ಹೆಂಗಸರು ಮತ್ತು ಮಕ್ಕಳು ಮತ್ತು ಇಸ್ರೇಲಿನ ಜನರೊಂದಿಗೆ ಇದ್ದ ಎಲ್ಲ ವಿದೇಶಿಯರು ಅಲ್ಲಿ ಇದ್ದರು. ಅವರೆಲ್ಲರಿಗೆ ಕೇಳಿಸುವಂತೆ ಮೋಶೆಯು ಕೊಟ್ಟಿದ್ದ ಪ್ರತಿಯೊಂದು ಆಜ್ಞೆಯನ್ನು ಯೆಹೋಶುವನು ಓದಿದನು.
ಗಿಬ್ಯೋನ್ಯರು ಯೆಹೋಶುವನಿಗೆ ಮಾಡಿದ ಮೋಸ
9 ಜೋರ್ಡನ್ ನದಿಯ ಪಶ್ಚಿಮದ ಎಲ್ಲ ಅರಸರು ಈ ವಿಷಯಗಳ ಬಗ್ಗೆ ಕೇಳಿದರು. ಇವರು ಹಿತ್ತಿಯರ, ಅಮೋರಿಯರ, ಕಾನಾನ್ಯರ, ಪೆರಿಜ್ಜೀಯರ, ಹಿವ್ವಿಯರ, ಯೆಬೂಸಿಯರ ರಾಜರಾಗಿದ್ದರು. ಅವರು ಬೆಟ್ಟಪ್ರದೇಶಗಳಲ್ಲಿ ಮತ್ತು ಸಮತಲ ಪ್ರದೇಶಗಳಲ್ಲಿ ವಾಸವಾಗಿದ್ದರು. ಅವರು ಭೂಮಧ್ಯಸಾಗರದ ತೀರ ಪ್ರದೇಶದಲ್ಲಿ, ಲೆಬನೋನಿನವರೆಗೆ ಸಹ ವಾಸವಾಗಿದ್ದರು. 2 ಈ ಎಲ್ಲ ಅರಸರು ಒಂದು ಕಡೆ ಸೇರಿದರು. ಅವರು ಯೆಹೋಶುವನ ಮತ್ತು ಇಸ್ರೇಲರ ವಿರುದ್ಧ ಯುದ್ಧ ಮಾಡುವ ಯೋಜನೆಗಳನ್ನು ಹಾಕಿಕೊಂಡರು.
3 ಯೆಹೋಶುವನು “ಜೆರಿಕೊ” ಮತ್ತು “ಆಯಿ” ನಗರಗಳನ್ನು ಸ್ವಾಧೀನಪಡಿಸಿಕೊಂಡ ಬಗೆಯನ್ನು ಗಿಬ್ಯೋನ್ ನಗರದ ಜನರು ಕೇಳಿದ್ದರು. 4 ಇಸ್ರೇಲರಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಒಂದು ಉಪಾಯಮಾಡಿದರು. ಅವರು ಹರುಕು-ಮುರುಕಾದ ಹಳೆಯ ದ್ರಾಕ್ಷಾರಸದ ಬುದ್ದಲಿಗಳನ್ನು ತಮ್ಮ ಕತ್ತೆಗಳ ಬೆನ್ನ ಮೇಲೆ ಹೇರಿಸಿದರು; ತಾವು ಬಹುದೂರ ಪ್ರಯಾಣ ಮಾಡಿ ಬಂದಿರುವುದಾಗಿ ತೋರಿಸಲು ತಮ್ಮ ಕತ್ತೆಗಳ ಮೇಲೆ ಹಳೆಯ ಗೋಣಿಚೀಲಗಳನ್ನು ಹಾಕಿದರು. 5 ಅವರು ಹಳೆಯ ಪಾದರಕ್ಷೆಗಳನ್ನು ಮೆಟ್ಟಿಕೊಂಡರು; ಹಳೆಯ ಬಟ್ಟೆಗಳನ್ನು ಧರಿಸಿಕೊಂಡರು; ಒಣಗಿದ ಮತ್ತು ಕೆಟ್ಟುಹೋದ ರೊಟ್ಟಿಗಳನ್ನು ಕಟ್ಟಿಕೊಂಡರು. ಹೀಗೆ ಅವರು ಬಹುದೂರ ಪ್ರಯಾಣಮಾಡಿ ಬಂದವರಂತೆ ತೋರಿಸಿಕೊಂಡರು. 6 ಅವರು ಇಸ್ರೇಲರ ಪಾಳೆಯಕ್ಕೆ ಹೋದರು. ಈ ಪಾಳೆಯವು ಗಿಲ್ಗಾಲಿನ ಹತ್ತಿರ ಇತ್ತು.
ಅವರು ಯೆಹೋಶುವನ ಬಳಿಗೆ ಹೋಗಿ ಅವನಿಗೆ, “ನಾವು ಬಹುದೂರ ದೇಶದಿಂದ ಪ್ರಯಾಣ ಮಾಡಿ ಬಂದಿದ್ದೇವೆ. ನಾವು ನಿಮ್ಮ ಜೊತೆ ಶಾಂತಿ ಒಪ್ಪಂದವನ್ನು ಮಾಡಿಕೊಳ್ಳಲು ಇಚ್ಛಿಸುತ್ತೇವೆ” ಎಂದು ಹೇಳಿದರು.
7 ಹಿವ್ವಿಯರಾದ ಅವರಿಗೆ ಇಸ್ರೇಲಿನ ಜನರು, “ಒಂದುವೇಳೆ ನೀವು ನಮ್ಮನ್ನು ಮೋಸಗೊಳಿಸಲು ಪ್ರಯತ್ನಿಸುತ್ತಿರಬಹುದು. ಒಂದುವೇಳೆ ನೀವು ನಮ್ಮ ಹತ್ತಿರದಲ್ಲಿಯೇ ವಾಸಮಾಡುತ್ತಿರಬಹುದು; ನೀವು ಎಲ್ಲಿಯವರು ಎಂಬುದು ನಮಗೆ ಗೊತ್ತಾಗುವವರೆಗೆ ನಾವು ನಿಮ್ಮ ಸಂಗಡ ಶಾಂತಿ ಒಪ್ಪಂದವನ್ನು ಮಾಡಿಕೊಳ್ಳಲು ಸಾಧ್ಯವಿಲ್ಲ” ಎಂದು ಉತ್ತರಕೊಟ್ಟರು.
8 ಹಿವ್ವಿಯರು ಯೆಹೋಶುವನಿಗೆ, “ನಾವು ನಿಮ್ಮ ಸೇವಕರು” ಎಂದು ಹೇಳಿದರು.
ಆದರೆ ಯೆಹೋಶುವನು, “ನೀವು ಯಾರು? ಎಲ್ಲಿಂದ ಬಂದಿರುವಿರಿ?” ಎಂದು ಪ್ರಶ್ನಿಸಿದನು.
9 ಅದಕ್ಕೆ ಅವರು, “ನಿನ್ನ ಸೇವಕರಾದ ನಾವು ಬಹುದೂರ ದೇಶದಿಂದ ಬಂದಿದ್ದೇವೆ. ನಾವು ಬಂದದ್ದಕ್ಕೆ ಕಾರಣವೇನೆಂದರೆ ನಾವು ನಿಮ್ಮ ದೇವರಾದ ಯೆಹೋವನ ಅದ್ಭುತಶಕ್ತಿಯ ಬಗ್ಗೆ ಕೇಳಿದೆವು. ಆತನು ಮಾಡಿದ ಅದ್ಭುತಕಾರ್ಯಗಳ ಬಗ್ಗೆ ಕೇಳಿದೆವು. ಆತನು ಈಜಿಪ್ಟಿನಲ್ಲಿ ಮಾಡಿದ ಪ್ರತಿಯೊಂದು ಅದ್ಭುತದ ಬಗ್ಗೆ ಕೇಳಿದೆವು. 10 ಆತನು ಜೋರ್ಡನ್ ನದಿಯ ಪೂರ್ವದಲ್ಲಿರುವ ಅಮೋರಿಯರ ಇಬ್ಬರು ಅರಸರನ್ನು ಸೋಲಿಸಿದ್ದನ್ನು ನಾವು ಕೇಳಿದೆವು. ಹೆಷ್ಬೋನಿನ ಅರಸನಾದ ಸೀಹೋನ್ ಮತ್ತು ಅಷ್ಟರೋತಿನಲ್ಲಿ ವಾಸವಾಗಿದ್ದ ಬಾಷಾನಿನ ಅರಸನಾದ ಓಗ್ ಇವರೇ ಆ ಅರಸರು. 11 ಆದ್ದರಿಂದ ನಮ್ಮ ಹಿರಿಯರು ಮತ್ತು ನಮ್ಮ ಜನರು ನಮಗೆ, ‘ನಿಮ್ಮ ಪ್ರಯಾಣಕ್ಕೆ ಸಾಕಷ್ಟು ಆಹಾರವನ್ನು ತೆಗೆದುಕೊಂಡು ಹೋಗಿ ಇಸ್ರೇಲರನ್ನು ಭೇಟಿಮಾಡಿ, ನಾವು ನಿಮ್ಮ ಸೇವಕರು. ನಮ್ಮ ಜೊತೆ ಶಾಂತಿ ಒಪ್ಪಂದವನ್ನು ಮಾಡಿಕೊಳ್ಳಿರಿ ಎಂದು ಅವರಿಗೆ ತಿಳಿಸಿ’ ಎಂಬುದಾಗಿ ಹೇಳಿ ನಮ್ಮನ್ನು ಕಳುಹಿಸಿದ್ದಾರೆ.
12 “ನಮ್ಮ ರೊಟ್ಟಿಯನ್ನು ನೋಡಿರಿ, ನಾವು ಮನೆಯನ್ನು ಬಿಟ್ಟಾಗ ಬಿಸಿಯಾಗಿತ್ತು ಮತ್ತು ಮೃದುವಾಗಿತ್ತು. ಆದರೆ ಈಗ ಅವುಗಳನ್ನು ನೋಡಿರಿ, ಒಣಗಿಹೋಗಿವೆ. 13 ನಮ್ಮ ದ್ರಾಕ್ಷಾರಸದ ಬುದ್ದಲಿಗಳನ್ನು ನೋಡಿರಿ, ನಾವು ಮನೆಯನ್ನು ಬಿಟ್ಟಾಗ ಅವು ಹೊಸದಾಗಿದ್ದವು ಮತ್ತು ದ್ರಾಕ್ಷಾರಸದಿಂದ ತುಂಬಿದ್ದವು. ಆದರೆ ಈಗ ಹಳೆಯದಾಗಿ ಹರಿದುಹೋಗಿವೆ. ನಮ್ಮ ಬಟ್ಟೆಗಳನ್ನು ಮತ್ತು ಪಾದರಕ್ಷೆಗಳನ್ನು ನೋಡಿರಿ, ಈಗ ಅವು ದೂರ ಪ್ರಯಾಣದಿಂದ ಹಾಳಾಗಿಹೋಗಿವೆ” ಎಂದು ಹೇಳಿದರು.
14 ಅವರು ಹೇಳುತ್ತಿರುವುದು ನಿಜವೇ ಎಂದು ತಿಳಿದುಕೊಳ್ಳಲು ಇಸ್ರೇಲರು ಅವರ ರೊಟ್ಟಿಯನ್ನು ತಿಂದು ನೋಡಿದರು; ಆದರೆ ತಾವು ಏನು ಮಾಡಬೇಕೆಂದು ಯೆಹೋವನನ್ನು ಕೇಳಲಿಲ್ಲ. 15 ಯೆಹೋಶುವನು ಅವರೊಂದಿಗೆ ಶಾಂತಿ ಒಪ್ಪಂದವನ್ನು ಮಾಡಿಕೊಳ್ಳಲು ಒಪ್ಪಿಕೊಂಡನು. ಅವರು ಜೀವಸಹಿತ ಇರಲು ಅವಕಾಶ ಮಾಡಿಕೊಟ್ಟನು. ಯೆಹೋಶುವನ ಈ ಒಪ್ಪಂದಕ್ಕೆ ಇಸ್ರೇಲಿನ ಜನನಾಯಕರು ಒಪ್ಪಿಕೊಂಡರು.
16 ಮೂರು ದಿನಗಳ ತರುವಾಯ ಆ ಜನರು ತಮ್ಮ ಪಾಳೆಯದ ಸಮೀಪ ವಾಸಿಸುವವರು ಎಂಬುದು ಇಸ್ರೇಲರಿಗೆ ತಿಳಿದುಬಂತು. 17 ಆದ್ದರಿಂದ ಇಸ್ರೇಲರು ಅವರಿದ್ದ ಸ್ಥಳಕ್ಕೆ ಹೋದರು. ಮೂರನೆಯ ದಿನ ಇಸ್ರೇಲರು ಗಿಬ್ಯೋನ್, ಕೆಫೀರಾ, ಬೇರೋತ್ ಮತ್ತು ಕಿರ್ಯತ್ಯಾರೀಮ್ ಪಟ್ಟಣಗಳಿಗೆ ಬಂದರು. 18 ಆದರೆ ಇಸ್ರೇಲರ ಸೈನ್ಯವು ಆ ಪಟ್ಟಣದ ಜನರೊಂದಿಗೆ ಯುದ್ಧಮಾಡಲಿಲ್ಲ. ಅವರು ಆ ಜನರೊಂದಿಗೆ ಶಾಂತಿ ಒಪ್ಪಂದ ಮಾಡಿಕೊಂಡಿದ್ದರು. ಅವರು ಇಸ್ರೇಲಿನ ದೇವರಾದ ಯೆಹೋವನ ಹೆಸರಿನಲ್ಲಿ ಪ್ರಮಾಣ ಮಾಡಿದ್ದರು.
ಒಪ್ಪಂದವನ್ನು ಮಾಡಿಕೊಂಡ ಜನನಾಯಕರ ಬಗ್ಗೆ ಜನರೆಲ್ಲರೂ ಅಸಮಾಧಾನ ವ್ಯಕ್ತಪಡಿಸಿದರು. 19 ಆದರೆ ಜನನಾಯಕರು, “ನಾವು ಮಾತುಕೊಟ್ಟಿದ್ದೇವೆ; ಇಸ್ರೇಲಿನ ದೇವರಾದ ಯೆಹೋವನ ಮುಂದೆ ಪ್ರಮಾಣ ಮಾಡಿದ್ದೇವೆ; ಈಗ ನಾವು ಅವರ ವಿರುದ್ಧ ಯುದ್ಧ ಮಾಡಲು ಸಾಧ್ಯವಿಲ್ಲ. 20 ನಾವು ಅವರನ್ನು ಜೀವಂತವಾಗಿ ಉಳಿಸಲೇಬೇಕು. ನಾವು ಅವರಿಗೆ ಕೊಟ್ಟ ಮಾತನ್ನು ಮೀರಿದರೆ ದೇವರ ಕೋಪಕ್ಕೆ ಗುರಿಯಾಗುತ್ತೇವೆ. 21 ಆದ್ದರಿಂದ ಅವರು ಜೀವಂತವಾಗಿ ಉಳಿಯಲಿ. ಆದರೆ ಅವರು ನಮ್ಮ ಸೇವಕರಾಗಲಿ. ಅವರು ನಮಗಾಗಿ ಸೌಧೆಯನ್ನು ಕಡಿಯಲಿ ಮತ್ತು ನಮ್ಮೆಲ್ಲರಿಗಾಗಿ ನೀರು ತಂದುಹಾಕಲಿ” ಎಂದು ಉತ್ತರಿಸಿದರು. ಹೀಗೆ ಜನನಾಯಕರು ಆ ಜನರೊಂದಿಗೆ ಮಾಡಿಕೊಂಡ ಶಾಂತಿ ಒಪ್ಪಂದವನ್ನು ಮುರಿಯಲಿಲ್ಲ.
22 ಯೆಹೋಶುವನು ಗಿಬ್ಯೋನಿನ ಜನರನ್ನು ಕರೆದು, “ನೀವು ನಮಗೆ ಸುಳ್ಳು ಹೇಳಿದ್ದೇಕೆ? ನಿಮ್ಮ ನಾಡು ನಮ್ಮ ಪಾಳೆಯದ ಹತ್ತಿರವೇ ಇತ್ತು. ಆದರೆ ನೀವು ನಿಮ್ಮನ್ನು ದೂರದೇಶದವರು ಎಂದು ಹೇಳಿಕೊಂಡಿರಿ. 23 ಈಗ ನೀವು ಶಾಪಕ್ಕೆ ಗುರಿಯಾಗಿದ್ದೀರಿ. ದೇವರ ಮಂದಿರಕ್ಕಾಗಿ ಸೌಧೆಯನ್ನು ಕಡಿಯುವುದೂ ನೀರನ್ನು ಹೊರುವುದೂ ನಿಮಗೆಂದಿಗೂ ತಪ್ಪಿದ್ದಿಲ್ಲ” ಎಂದು ಹೇಳಿದನು.
24 ಗಿಬ್ಯೋನ್ಯರು, “ನೀವು ನಮ್ಮನ್ನು ಕೊಲ್ಲಬಹುದೆಂಬ ಭಯದಿಂದ ನಾವು ನಿಮಗೆ ಸುಳ್ಳು ಹೇಳಿದೆವು; ದೇವರು ತನ್ನ ಸೇವಕನಾದ ಮೋಶೆಗೆ ಈ ಎಲ್ಲ ಭೂಪ್ರದೇಶವನ್ನು ನಿಮಗೆ ಕೊಡಬೇಕೆಂದು ಆಜ್ಞಾಪಿಸಿರುವುದನ್ನೂ ಈ ಪ್ರದೇಶದ ಎಲ್ಲ ಜನರನ್ನು ಕೊಂದುಬಿಡಬೇಕೆಂದು ನಿಮಗೆ ಹೇಳಿರುವನೆಂದೂ ನಾವು ಕೇಳಿದ್ದೆವು. ಆದ್ದರಿಂದ ನಾವು ನಿಮಗೆ ಸುಳ್ಳು ಹೇಳಿದೆವು. 25 ನಾವು ಈಗ ನಿಮ್ಮ ಸೇವಕರು. ನಿಮಗೆ ಸರಿ ಎನಿಸಿದ್ದನ್ನು ನೀವು ಮಾಡಬಹುದು” ಎಂದು ಉತ್ತರಿಸಿದರು.
26 ಹೀಗೆ ಗಿಬ್ಯೋನಿನ ಜನರು ಗುಲಾಮರಾದರು. ಆದರೆ ಯೆಹೋಶುವನು ಅವರನ್ನು ಜೀವಂತವಾಗಿ ಉಳಿಸಿದನು. ಇಸ್ರೇಲರು ಅವರನ್ನು ಕೊಲ್ಲದಂತೆ ನೋಡಿಕೊಂಡರು. 27 ಯೆಹೋಶುವನು ಗಿಬ್ಯೋನಿನ ಜನರನ್ನು ಇಸ್ರೇಲರ ಸೇವಕರನ್ನಾಗಿ ಮಾಡಿಕೊಂಡನು. ತನ್ನ ನಿವಾಸಕ್ಕಾಗಿ ಯೆಹೋವನು ಆರಿಸಿಕೊಳ್ಳುವ ಸ್ಥಳಗಳಲ್ಲಿ ಅವರು ಇಸ್ರೇಲರಿಗಾಗಿಯೂ ಯೆಹೋವನ ಯಜ್ಞವೇದಿಕೆಗಾಗಿಯೂ ಮರವನ್ನು ಕಡಿಯುತ್ತಿದ್ದರು ಮತ್ತು ನೀರನ್ನು ಹೊರುತ್ತಿದ್ದರು. ಆ ಜನರು ಇಂದಿಗೂ ಗುಲಾಮರಾಗಿಯೇ ಇದ್ದಾರೆ.
21 ಜನರು ಜಕರೀಯನಿಗಾಗಿ ಎದುರುನೋಡುತ್ತಾ ದೇವಾಲಯದೊಳಗೆ ಅವನು ಇಷ್ಟುಹೊತ್ತು ಇರಲು ಕಾರಣವೇನಿರಬಹುದೆಂದು ಆಶ್ಚರ್ಯಚಕಿತರಾದರು. 22 ಬಳಿಕ ಜಕರೀಯನು ಹೊರಗೆ ಬಂದಾಗ, ಅವನಿಗೆ ಅವರೊಡನೆ ಮಾತಾಡಲಾಗಲಿಲ್ಲ. ಆದ್ದರಿಂದ ಅವನಿಗೆ ದೇವಾಲಯದಲ್ಲಿ ದರ್ಶನವಾಗಿರಬೇಕೆಂದು ಅವರು ತಿಳಿದುಕೊಂಡರು. ಅಂದಿನಿಂದ ಅವನು ಮಾತಾಡಲಾಗದೆ ಕೇವಲ ಸನ್ನೆಗಳ ಮೂಲಕ ತಿಳಿಸುತ್ತಿದ್ದನು. 23 ತನ್ನ ಯಾಜಕಸೇವೆಯ ಸರದಿಯು ಮುಗಿದ ಮೇಲೆ ಜಕರೀಯನು ಮನೆಗೆ ಹಿಂತಿರುಗಿ ಹೋದನು.
24 ಆ ಬಳಿಕ, ಜಕರೀಯನ ಹೆಂಡತಿಯಾದ ಎಲಿಜಬೇತಳು ಗರ್ಭಿಣಿಯಾದಳು. ಆದ್ದರಿಂದ ಆಕೆ ಐದು ತಿಂಗಳವರೆಗೆ ತನ್ನ ಮನೆಯಿಂದ ಹೊರಗೆ ಹೋಗಲಿಲ್ಲ. 25 ಎಲಿಜಬೇತಳು, “ನೋಡಿ, ಪ್ರಭುವು ನನಗೋಸ್ಕರ ಎಂಥಾ ಕಾರ್ಯಮಾಡಿದ್ದಾನೆ! ನನ್ನ ಜನರ ನಡುವೆ ನನಗಿದ್ದ ಅವಮಾನವನ್ನು ಪ್ರಭುವು ತೊಲಗಿಸಿದ್ದಾನೆ” ಎಂದು ಹೇಳಿದಳು.
ಕನ್ಯೆ ಮರಿಯಳು
26-27 ಎಲಿಜಬೇತಳು ಆರು ತಿಂಗಳ ಗರ್ಭಿಣಿಯಾಗಿದ್ದಾಗ, ದೇವರು ತನ್ನ ದೂತನಾದ ಗಬ್ರಿಯೇಲನನ್ನು ಗಲಿಲೇಯ ಪ್ರಾಂತ್ಯದ ನಜರೇತ್ ಎಂಬ ಊರಿನಲ್ಲಿ ವಾಸಿಸುತ್ತಿದ್ದ ಒಬ್ಬ ಕನ್ಯೆಯ ಬಳಿಗೆ ಕಳುಹಿಸಿದನು. ಆಕೆಗೆ ದಾವೀದನ ಮನೆತನದ ಯೋಸೇಫನೊಂದಿಗೆ ನಿಶ್ಚಿತಾರ್ಥವಾಗಿತ್ತು. ಆಕೆಯ ಹೆಸರು ಮರಿಯಳು. 28 ದೇವದೂತನು ಆಕೆಯ ಬಳಿಗೆ ಬಂದು, “ದೇವರಾಶೀರ್ವಾದ ಹೊಂದಿದವಳೇ, ನಿನಗೆ ಶುಭವಾಗಲಿ! ಪ್ರಭುವು ನಿನ್ನೊಡನೆ ಇದ್ದಾನೆ” ಎಂದು ಹೇಳಿದನು.
29 ದೇವದೂತನ ಮಾತನ್ನು ಕೇಳಿ ಬಹು ಗಲಿಬಿಲಿಗೊಂಡ ಮರಿಯಳು, “ಇದರ ಅರ್ಥವೇನಿರಬಹುದು?” ಎಂದು ಆಶ್ಚರ್ಯಪಟ್ಟಳು.
30 ದೇವದೂತನು ಆಕೆಗೆ, “ಮರಿಯಳೇ, ಭಯಪಡಬೇಡ. ದೇವರು ನಿನ್ನನ್ನು ಬಹಳವಾಗಿ ಆಶೀರ್ವದಿಸಿದ್ದಾನೆ. 31 ಕೇಳು! ನೀನು ಗರ್ಭಿಣಿಯಾಗಿ ಒಂದು ಗಂಡುಮಗುವನ್ನು ಹೆರುವೆ. ಆತನಿಗೆ, ‘ಯೇಸು’ ಎಂದು ಹೆಸರಿಡಬೇಕು. 32 ಆತನು ಮಹಾಪುರುಷನಾಗುವನು. ಜನರು ಆತನನ್ನು ಮಹೋನ್ನತನ (ದೇವರ) ಮಗನೆಂದು ಕರೆಯುವರು. ಪ್ರಭುವಾದ ದೇವರು ಆತನಿಗೆ ಆತನ ಪೂರ್ವಿಕನಾದ ದಾವೀದನ ಅಧಿಕಾರವನ್ನು ಕೊಡುವನು. 33 ಯೇಸುವು ಯಾಕೋಬನ ಜನರನ್ನು ಸದಾಕಾಲ ಆಳುವನು. ಆತನ ರಾಜ್ಯ ಎಂದಿಗೂ ಅಂತ್ಯವಾಗುವುದಿಲ್ಲ” ಎಂದು ಹೇಳಿದನು.
34 ಮರಿಯಳು ದೇವದೂತನಿಗೆ, “ಇದು ಹೇಗೆ ಸಂಭವಿಸುವುದು? ನಾನು ಮದುವೆಯಾಗಿಲ್ಲವಲ್ಲಾ!” ಎಂದು ಹೇಳಿದಳು.
35 ದೇವದೂತನು ಮರಿಯಳಿಗೆ, “ಪವಿತ್ರಾತ್ಮನು ನಿನ್ನ ಮೇಲೆ ಬರುವನು; ಮಹೋನ್ನತನ ಶಕ್ತಿಯು ನಿನ್ನನ್ನು ಆವರಿಸುವುದು. ಈ ಕಾರಣದಿಂದ ನಿನ್ನಲ್ಲಿ ಹುಟ್ಟುವ ಈ ಪವಿತ್ರಮಗುವು ‘ದೇವರ ಮಗ’ ಎನಿಸಿಕೊಳ್ಳುವನು. 36 ಇದಲ್ಲದೆ, ನಿನ್ನ ಬಂಧುವಾದ ಎಲಿಜಬೇತಳು ಗರ್ಭಿಣಿಯಾಗಿದ್ದಾಳೆ. ಆಕೆಯು ಬಹಳ ಮುಪ್ಪಿನವಳಾಗಿದ್ದರೂ ಆಕೆಗೊಬ್ಬ ಮಗ ಹುಟ್ಟುವನು. ಜನರಿಂದ ಬಂಜೆ ಎನಿಸಿಕೊಂಡಿದ್ದ ಆಕೆ ಈಗ ಆರು ತಿಂಗಳ ಗರ್ಭಿಣಿಯಾಗಿದ್ದಾಳೆ. 37 ದೇವರಿಗೆ ಯಾವುದೂ ಅಸಾಧ್ಯವಲ್ಲ,” ಎಂದು ಹೇಳಿದನು.
38 ಮರಿಯಳು, “ನಾನು ಪ್ರಭುವಿನ ದಾಸಿ. ನೀನು ಹೇಳಿದಂತೆಯೇ ನನಗಾಗಲಿ!” ಅಂದಳು. ಬಳಿಕ ದೇವದೂತನು ಹೊರಟುಹೋದನು.
Kannada Holy Bible: Easy-to-Read Version. All rights reserved. © 1997 Bible League International