Old/New Testament
ಜನರಿಗೆ ನೆನಪನ್ನು ತರುವ ಕಲ್ಲುಗಳು
4 ಜನರೆಲ್ಲರೂ ಜೋರ್ಡನ್ ನದಿಯನ್ನು ದಾಟಿದರು. ಆಗ ಯೆಹೋವನು ಯೆಹೋಶುವನಿಗೆ, 2 “ಪ್ರತಿಯೊಂದು ಕುಲದಿಂದ ಒಬ್ಬನಂತೆ ಹನ್ನೆರಡು ಮಂದಿಯನ್ನು ಆರಿಸು. 3 ನದಿಯಲ್ಲಿ ಯಾಜಕರು ನಿಂತುಕೊಂಡಿದ್ದ ಸ್ಥಳದಿಂದ ಹನ್ನೆರಡು ಕಲ್ಲುಗಳನ್ನು ಹುಡುಕಿ ತೆಗೆದುಕೊಂಡು ಬರುವುದಕ್ಕೆ ಅವರಿಗೆ ಹೇಳು. ನೀವು ಈ ರಾತ್ರಿ ಇಳಿದುಕೊಳ್ಳುವ ಸ್ಥಳದಲ್ಲಿ ಆ ಕಲ್ಲುಗಳನ್ನು ನಿಲ್ಲಿಸಿರಿ” ಎಂದು ಹೇಳಿದನು.
4 ಆದ್ದರಿಂದ ಯೆಹೋಶುವನು ಪ್ರತಿಯೊಂದು ಕುಲದಿಂದ ಒಬ್ಬೊಬ್ಬನನ್ನು ಆರಿಸಿದನು. ಆಮೇಲೆ ಆ ಹನ್ನೆರಡು ಜನರನ್ನು ಒಟ್ಟಿಗೆ ಕರೆದು ಅವರಿಗೆ, 5 “ನದಿಯಲ್ಲಿ ನಿಮ್ಮ ದೇವರಾದ ಯೆಹೋವನ ಪವಿತ್ರ ಪೆಟ್ಟಿಗೆ ಇರುವ ಸ್ಥಳಕ್ಕೆ ಹೋಗಿ. ನಿಮ್ಮಲ್ಲಿ ಪ್ರತಿಯೊಬ್ಬರೂ ಒಂದೊಂದು ಕಲ್ಲನ್ನು ಹೆಗಲ ಮೇಲೆ ಹೊತ್ತುಕೊಂಡು ಬನ್ನಿರಿ. 6 ಈ ಕಲ್ಲುಗಳು ನಿಮ್ಮ ಮಧ್ಯದಲ್ಲಿ ಗುರುತಾಗಿರುವವು. ಮುಂದಿನ ಕಾಲದಲ್ಲಿ ನಿಮ್ಮ ಮಕ್ಕಳು ನಿಮ್ಮನ್ನು, ‘ಈ ಕಲ್ಲುಗಳು ಏನು ಸೂಚಿಸುತ್ತವೆ?’ ಎಂದು ಕೇಳುತ್ತಾರೆ. 7 ಅದಕ್ಕೆ ನೀವು, ‘ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯು ಜೋರ್ಡನ್ ನದಿಯನ್ನು ದಾಟುತ್ತಿರುವಾಗ ಹರಿಯುವ ನೀರು ನಿಂತುಹೋಯಿತು’ ಎಂದು ಹೇಳಿರಿ. ಆ ಕಲ್ಲುಗಳು ಇಸ್ರೇಲರಿಗೆ ಸದಾಕಾಲ ಸಾಕ್ಷಿಗಳಾಗಿರುತ್ತವೆ” ಎಂದು ಹೇಳಿದನು.
8 ಇಸ್ರೇಲರು ಯೆಹೋಶುವನ ಆಜ್ಞೆಯಂತೆ ಜೋರ್ಡನ್ ನದಿಯ ಮಧ್ಯಭಾಗದಿಂದ ಹನ್ನೆರಡು ಕಲ್ಲುಗಳನ್ನು ತೆಗೆದುಕೊಂಡು ಬಂದರು. ಇಸ್ರೇಲಿನ ಹನ್ನೆರಡು ಕುಲಗಳಿಗೆ ಸರಿಯಾಗಿ ಹನ್ನೆರಡು ಕಲ್ಲುಗಳಿದ್ದವು. ಯೆಹೋವನು ಯೆಹೋಶುವನಿಗೆ ಹೇಳಿದಂತೆಯೇ ಅವರು ಕಲ್ಲುಗಳನ್ನು ತಮ್ಮ ಸಂಗಡ ತೆಗೆದುಕೊಂಡು ಬಂದು ತಾವು ಇಳಿದುಕೊಂಡಿದ್ದ ಸ್ಥಳದಲ್ಲಿ ಆ ಕಲ್ಲುಗಳನ್ನು ಇಟ್ಟರು. 9 (ಇದಲ್ಲದೆ ಯೆಹೋಶುವನು ಹನ್ನೆರಡು ಕಲ್ಲುಗಳನ್ನು ಜೋರ್ಡನ್ ನದಿಯ ಮಧ್ಯದಲ್ಲಿ ಅಂದರೆ ಯೆಹೋವನ ಪವಿತ್ರ ಪೆಟ್ಟಿಗೆಯನ್ನು ತೆಗೆದುಕೊಂಡು ಹೋಗುವಾಗ ಯಾಜಕರು ನಿಂತಿದ್ದ ಸ್ಥಳದಲ್ಲಿ ಇಟ್ಟನು. ಆ ಕಲ್ಲುಗಳು ಇಂದಿಗೂ ಆ ಸ್ಥಳದಲ್ಲಿವೆ.)
10 ಮೋಶೆಯು ಆಜ್ಞಾಪಿಸಿದಂತೆ ಯೆಹೋಶುವನು ಜನರಿಗೆ ತಿಳಿಸಿದ. ಯೆಹೋವನ ಅಪ್ಪಣೆಗಳನ್ನೆಲ್ಲ ಅವರು ಕೈಗೊಳ್ಳುವವರೆಗೆ ಪವಿತ್ರ ಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗುತ್ತಿದ್ದ ಯಾಜಕರು ನದಿಯ ಮಧ್ಯದಲ್ಲಿ ನಿಂತುಕೊಂಡೇ ಇದ್ದರು. ಜನರು ತ್ವರಿತಗತಿಯಿಂದ ನದಿಯನ್ನು ದಾಟಿದರು. 11 ಜನರು ನದಿ ದಾಟಿದ ಮೇಲೆ ಯಾಜಕರು ಯೆಹೋವನ ಪವಿತ್ರ ಪೆಟ್ಟಿಗೆಯನ್ನು ಜನರ ಮುಂದಗಡೆಯಲ್ಲಿ ತೆಗೆದುಕೊಂಡು ಹೋದರು.
12 ರೂಬೇನ್ಯರು, ಗಾದ್ಯರು ಮತ್ತು ಮನಸ್ಸೆ ಕುಲದ ಅರ್ಧಜನರು ಮೋಶೆಯ ಆಜ್ಞೆಯನ್ನು ಪಾಲಿಸಿದರು. ಇವರು ಬೇರೆಯವರಿಗಿಂತ ಮುಂಚೆಯೇ ನದಿಯನ್ನು ದಾಟಿದರು. ಯೆಹೋವನು ವಾಗ್ದಾನ ಮಾಡಿದ ದೇಶವನ್ನು ಪಡೆಯಲು ಇಸ್ರೇಲರಿಗೆ ಸಹಾಯ ಮಾಡಲು ಇವರು ಯುದ್ಧಸನ್ನದ್ಧರಾಗಿ ಹೋಗುತ್ತಿದ್ದರು. 13 ಯುದ್ಧಸನ್ನದ್ಧರಾದ ಸುಮಾರು ನಲವತ್ತು ಸಾವಿರ ಭಟರು ಯೆಹೋವನ ಮುಂದೆ ಜೆರಿಕೊವಿನ ಬಯಲಿನ ಕಡೆಗೆ ಹೋದರು.
14 ಯೆಹೋವನು ಆ ದಿನ ಇಸ್ರೇಲಿನ ಎಲ್ಲಾ ಜನರ ದೃಷ್ಟಿಯಲ್ಲಿ ಯೆಹೋಶುವನನ್ನು ಘನವಂತನನ್ನಾಗಿ ಮಾಡಿದನು. ಆ ಹೊತ್ತಿನಿಂದ ಜನರು ಯೆಹೋಶುವನನ್ನು ಗೌರವಿಸತೊಡಗಿದರು. ಅವರು ಮೋಶೆಯನ್ನು ಗೌರವಿಸಿದಂತೆ ಯೆಹೋಶುವನನ್ನು ಅವನ ಜೀವಮಾನವೆಲ್ಲಾ ಗೌರವಿಸಿದರು.
15 ಪವಿತ್ರ ಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗುತ್ತಿದ್ದ ಯಾಜಕರು ಇನ್ನೂ ನದಿಯಲ್ಲಿ ಇದ್ದಾಗ ಯೆಹೋವನು ಯೆಹೋಶುವನಿಗೆ, 16 “ನದಿಯಿಂದ ಹೊರಬರಲು ಯಾಜಕರಿಗೆ ಆಜ್ಞಾಪಿಸು” ಎಂದು ಹೇಳಿದನು.
17 ಯೆಹೋಶುವನು ಯಾಜಕರಿಗೆ, “ಜೋರ್ಡನ್ ನದಿಯಿಂದ ಹೊರಗೆ ಬನ್ನಿರಿ” ಎಂದು ಆಜ್ಞಾಪಿಸಿದನು.
18 ಯಾಜಕರು ಯೆಹೋಶುವನ ಆಜ್ಞೆಯಂತೆ ಪವಿತ್ರ ಪೆಟ್ಟಿಗೆಯನ್ನು ತಮ್ಮ ಸಂಗಡ ತೆಗೆದುಕೊಂಡು ನದಿಯಿಂದ ಹೊರಗಡೆ ಬಂದರು. ಯಾಜಕರ ಪಾದಗಳು ನದಿಯ ಆಚೆದಡದ ನೆಲವನ್ನು ಮುಟ್ಟಿದ ಕೂಡಲೇ ನದಿಯ ನೀರು ಮತ್ತೆ ಹರಿಯುವುದಕ್ಕೆ ಆರಂಭಿಸಿತು. ಜನರು ದಾಟುವುದಕ್ಕಿಂತ ಮುಂಚೆ ಹರಿಯುತ್ತಿದ್ದಂತೆ ನೀರು ಮತ್ತೆ ದಡಮೀರಿ ಹರಿಯಿತು.
19 ಅವರು ಜೋರ್ಡನ್ ನದಿಯನ್ನು ಮೊದಲನೆಯ ತಿಂಗಳಿನ ಹತ್ತನೆಯ ದಿನ ದಾಟಿದರು. ಅವರು ಜೆರಿಕೊವಿನ ಪೂರ್ವಕ್ಕಿರುವ ಗಿಲ್ಗಾಲಿನಲ್ಲಿ ಇಳಿದುಕೊಂಡಿದ್ದರು. 20 ಅವರು ಜೋರ್ಡನ್ ನದಿಯಿಂದ ತೆಗೆದುಕೊಂಡು ಬಂದ ಆ ಹನ್ನೆರಡು ಕಲ್ಲುಗಳನ್ನು ತಮ್ಮ ಸಂಗಡ ತೆಗೆದುಕೊಂಡು ಹೋದರು. ಯೆಹೋಶುವನು ಆ ಕಲ್ಲುಗಳನ್ನು ಗಿಲ್ಗಾಲಿನಲ್ಲಿ ನಿಲ್ಲಿಸಿದನು. 21 ಅನಂತರ ಯೆಹೋಶುವನು ಜನರಿಗೆ, “ಮುಂದಿನ ಕಾಲದಲ್ಲಿ ನಿಮ್ಮ ಮಕ್ಕಳು ನಿಮ್ಮನ್ನು, ‘ಈ ಕಲ್ಲುಗಳು ಏನು ಸೂಚಿಸುತ್ತವೆ?’ ಎಂದು ಕೇಳುವಾಗ ನೀವು ಹೀಗೆ ಹೇಳಬೇಕು: 22 ‘ಇಸ್ರೇಲಿನ ಜನರು ಜೋರ್ಡನ್ ನದಿಯನ್ನು ಒಣನೆಲದ ಮೇಲೆ ಹೇಗೆ ದಾಟಿದರು ಎಂಬುದನ್ನು ನಮ್ಮ ನೆನಪಿಗೆ ತರಲು ಈ ಕಲ್ಲುಗಳು ಸಹಾಯಕವಾಗಿವೆ.’ 23 ನಿಮ್ಮ ದೇವರಾದ ಯೆಹೋವನು ಜೋರ್ಡನ್ ನದಿಯ ನೀರಿನ ಚಲನೆಯನ್ನು ನಿಲ್ಲಿಸಿದನು. ಕೆಂಪುಸಮುದ್ರದ ಹಾಗೆ ಈ ನದಿಯೂ ಸಹ ಜನರೆಲ್ಲರೂ ದಾಟುವವರೆಗೆ ಬತ್ತಿಹೋಗಿತ್ತು. ಜನರು ದಾಟಲು ಸಾಧ್ಯವಾಗುವಂತೆ ಕೆಂಪುಸಮುದ್ರದ ನೀರಿನ ಚಲನೆಯನ್ನು ಸಹ ಯೆಹೋವನು ತಡೆದಿದ್ದನೆಂಬುದನ್ನು ಸ್ಮರಿಸಿಕೊಳ್ಳಿ ಎಂದು ನೀವು ಮಕ್ಕಳಿಗೆ ಹೇಳಬೇಕು. 24 ಈ ಭೂಲೋಕದ ಜನರೆಲ್ಲರೂ ಯೆಹೋವನೇ ಸರ್ವಶಕ್ತನೆಂದು ತಿಳಿದುಕೊಳ್ಳಬೇಕೆಂದು ಆತನು ಹೀಗೆ ಮಾಡಿದನು. ಹೀಗೆ ಅವರು ನಿಮ್ಮ ದೇವರಾದ ಯೆಹೋವನಿಗೆ ಯಾವಾಗಲೂ ಭಯಪಡುವರು” ಅಂದನು.
5 ಇಸ್ರೇಲರು ಜೋರ್ಡನ್ ನದಿಯನ್ನು ದಾಟುವವರೆಗೆ ಯೆಹೋವನು ಆ ನದಿಯನ್ನು ಬತ್ತಿಸಿದನು. ಜೋರ್ಡನ್ ನದಿಯ ಪಶ್ಚಿಮ ದಿಕ್ಕಿನಲ್ಲಿರುವ ಅಮೋರಿಯರ ಅರಸರು ಮತ್ತು ಭೂಮಧ್ಯ ಸಾಗರದ ಹತ್ತಿರವಿರುವ ಕಾನಾನ್ಯರ ಅರಸರು ಈ ಸಂಗತಿಯನ್ನು ಕೇಳಿ ಭಯಗ್ರಸ್ತರಾದರು; ಇಸ್ರೇಲರ ವಿರುದ್ಧವಾಗಿ ಹೋರಾಡುವಷ್ಟು ಧೈರ್ಯವಿಲ್ಲದವರಾದರು.
ಇಸ್ರೇಲಿನ ಜನರಿಗೆ ಸುನ್ನತಿ ಮಾಡಲಾಯಿತು
2 ಆ ಸಮಯದಲ್ಲಿ ಯೆಹೋವನು ಯೆಹೋಶುವನಿಗೆ, “ಕಲ್ಲುಗಳಿಂದ ಚೂರಿಗಳನ್ನು ಮಾಡಿಸಿ ಇಸ್ರೇಲಿನ ಗಂಡಸರಿಗೆ ಇನ್ನೊಮ್ಮೆ ಸುನ್ನತಿಯನ್ನು ಮಾಡಿಸು” ಎಂದು ಹೇಳಿದನು.
3 ಯೆಹೋಶುವನು ಕಲ್ಲುಗಳಿಂದ ಚೂರಿಗಳನ್ನು ಮಾಡಿಸಿ ಇಸ್ರೇಲರಿಗೆ ಗಿಬೆಯತ್ ಹಾರಲೋತ್‌ನಲ್ಲಿ[a] ಸುನ್ನತಿಯನ್ನು ಮಾಡಿದನು.
4-7 ಯೆಹೋಶುವನು ಸುನ್ನತಿ ಮಾಡಲು ಕಾರಣವೇನೆಂದರೆ: ಈಜಿಪ್ಟನ್ನು ಬಿಟ್ಟುಹೊರಟಾಗ ಸೈನ್ಯಸೇರಲು ಯೋಗ್ಯರಾದ ಇಸ್ರೇಲಿನ ಗಂಡಸರಿಗೆ ಸುನ್ನತಿಯಾಗಿತ್ತು. ಅವರು ಮರುಭೂಮಿಯಲ್ಲಿದ್ದಾಗ ಅನೇಕ ಯುದ್ಧವೀರರು ಯೆಹೋವನಿಗೆ ಕಿವಿಗೂಡಲಿಲ್ಲ. ಆದಕಾರಣ, “ಹಾಲೂ ಜೇನೂ ಹರಿಯುವ ವಾಗ್ದತ್ತ ನಾಡನ್ನು” ಆ ಜನರು ಕಾಣುವುದಿಲ್ಲ ಎಂದು ಯೆಹೋವನು ಪ್ರಮಾಣ ಮಾಡಿದನು. ನಮ್ಮ ಪೂರ್ವಿಕರಿಗೆ ಆ ಭೂಮಿಯನ್ನು ಕೊಡುವುದಾಗಿ ಯೆಹೋವನು ವಾಗ್ದಾನ ಮಾಡಿದ್ದನು. ಆದರೆ ಆ ಜನರು ಯೆಹೋವನ ಮಾತನ್ನು ಕೇಳದೆ ಅವಿಧೇಯರಾದ ಕಾರಣ ಆತನು ಅವರನ್ನು ನಲವತ್ತು ವರ್ಷಗಳ ಕಾಲ ಅಂದರೆ ಆ ಯೋಧರು ಸಾಯುವವರೆಗೆ ಮರುಭೂಮಿಯಲ್ಲಿ ಅಲೆದಾಡುವಂತೆ ಮಾಡಿದನು. ಆ ಎಲ್ಲ ಯುದ್ಧವೀರರು ಸತ್ತುಹೋದರು ಮತ್ತು ಅವರ ಸ್ಥಾನಕ್ಕೆ ಅವರ ಗಂಡುಮಕ್ಕಳು ಬಂದರು. ಆದರೆ ಈಜಿಪ್ಟಿನಿಂದ ಹೊರಟು ಮರುಭೂಮಿಯಲ್ಲಿ ಪ್ರಯಾಣ ಮಾಡುತ್ತಿದ್ದಾಗ ಹುಟ್ಟಿದ ಯಾವ ಗಂಡುಮಕ್ಕಳಿಗೂ ಸುನ್ನತಿ ಆಗಿರಲಿಲ್ಲ. ಅದಕ್ಕಾಗಿ ಯೆಹೋಶುವನು ಅವರಿಗೆ ಸುನ್ನತಿ ಮಾಡಿಸಿದನು.
8 ಯೆಹೋಶುವನು ಅವರೆಲ್ಲರಿಗೂ ಸುನ್ನತಿ ಮಾಡಿಸಿದನು. ಅವರೆಲ್ಲರ ಗಾಯಗಳು ವಾಸಿಯಾಗುವವರೆಗೆ ಅವರು ಅಲ್ಲಿಯೇ ತಮ್ಮತಮ್ಮ ಸ್ಥಳದ ಪಾಳೆಯದಲ್ಲಿ ಇದ್ದರು.
ಕಾನಾನಿನಲ್ಲಿ ಮೊದಲನೆಯ ಪಸ್ಕಹಬ್ಬ
9 ಆಗ ಯೆಹೋವನು ಯೆಹೋಶುವನಿಗೆ, “ನೀವು ಈಜಿಪ್ಟಿನಲ್ಲಿ ಗುಲಾಮರಾಗಿದ್ದಾಗ ಅವಮಾನಕ್ಕೆ ಗುರಿಯಾಗಿದ್ದಿರಿ. ಆದರೆ ಇಂದು ಆ ನಾಚಿಕೆಯನ್ನು ತೆಗೆದು ಹಾಕಿದ್ದೇನೆ” ಎಂದನು. ಆದ್ದರಿಂದ ಯೆಹೋಶುವನು ಆ ಸ್ಥಳಕ್ಕೆ “ಗಿಲ್ಗಾಲ್” ಎಂದು ಹೆಸರಿಟ್ಟನು. ಈಗಲೂ ಆ ಸ್ಥಳಕ್ಕೆ “ಗಿಲ್ಗಾಲ್” ಎಂಬ ಹೆಸರಿದೆ.
10 ಇಸ್ರೇಲರು ಇನ್ನೂ ಗಿಲ್ಗಾಲಿನಲ್ಲಿಯೇ ಇಳಿದುಕೊಂಡಿದ್ದಾಗ ಜೆರಿಕೊವಿನ ಮೈದಾನಗಳಲ್ಲಿ ಅವರು ಆ ತಿಂಗಳಿನ ಹದಿನಾಲ್ಕನೆಯ ದಿನದ ಸಾಯಂಕಾಲ ಪಸ್ಕಹಬ್ಬವನ್ನು ಆಚರಿಸಿದರು. 11 ಪಸ್ಕಹಬ್ಬದ ಮರುದಿನ ಮುಂಜಾನೆಯಲ್ಲಿ ಅವರು ಆ ಭೂಮಿಯಲ್ಲಿ ಬೆಳೆದ ಆಹಾರವನ್ನು ಊಟಮಾಡಿದರು; ಅವರು ಹುಳಿ ರಹಿತವಾದ ರೊಟ್ಟಿಯನ್ನು ಮತ್ತು ಹುರಿದ ಕಾಳುಗಳನ್ನು ಊಟ ಮಾಡಿದರು. 12 ಮೂರನೆಯ ದಿನ ಮುಂಜಾನೆ ಪರಲೋಕದಿಂದ ಬರುತ್ತಿದ್ದ ವಿಶಿಷ್ಟ ಆಹಾರವಾದ ಮನ್ನವು ನಿಂತುಹೋಯಿತು. ಜನರು ಕಾನಾನ್ ಪ್ರದೇಶದಲ್ಲಿ ಬೆಳೆದ ಆಹಾರವನ್ನು ತಿಂದ ದಿನದಿಂದ ಹೀಗಾಯಿತು. ಅಂದಿನಿಂದ ಇಸ್ರೇಲರು ಪರಲೋಕದ ವಿಶಿಷ್ಟವಾದ ಆಹಾರವನ್ನು ಪಡೆಯಲಿಲ್ಲ.
ಯೆಹೋವನ ಸೇನಾಧಿಪತಿ
13 ಯೆಹೋಶುವನು ಜೆರಿಕೊವಿನ ಸಮೀಪದಲ್ಲಿದ್ದಾಗ ಕಣ್ಣೆತ್ತಿ ನೋಡಲು ಒಬ್ಬ ಮನುಷ್ಯನು ಅವನ ಎದುರಿಗೆ ನಿಂತಿರುವುದನ್ನು ಕಂಡನು. ಆ ಮನುಷ್ಯನ ಕೈಯಲ್ಲಿ ಒಂದು ಖಡ್ಗವಿತ್ತು. ಯೆಹೋಶುವನು ಆ ಮನುಷ್ಯನ ಹತ್ತಿರಹೋಗಿ, “ನೀನು ನಮ್ಮ ಜನರ ಸ್ನೇಹಿತನೋ ಅಥವಾ ನೀನು ನಮ್ಮ ಶತ್ರುಗಳಲ್ಲಿ ಒಬ್ಬನೋ?” ಎಂದು ಕೇಳಿದನು.
14 ಆ ಮನುಷ್ಯನು, “ನಾನು ಶತ್ರುವಲ್ಲ, ನಾನು ಯೆಹೋವನ ಸೇನಾಧಿಪತಿ. ನಾನು ಈಗಲೇ ನಿನ್ನಲ್ಲಿಗೆ ಬಂದಿದ್ದೇನೆ” ಎಂದು ಉತ್ತರಿಸಿದನು.
ಆಗ ಯೆಹೋಶುವನು ನೆಲದವರೆಗೂ ತಲೆಬಾಗಿ ನಮಸ್ಕರಿಸಿ ಅವನಿಗೆ, “ನಾನು ನಿನ್ನ ಸೇವಕ. ನನ್ನ ಒಡೆಯನು ನನಗೆ ಯಾವುದಾದರೂ ಆಜ್ಞೆಯನ್ನು ವಿಧಿಸಬೇಕಾಗಿದೆಯೇ?” ಎಂದು ಕೇಳಿದನು.
15 ಯೆಹೋವನ ಸೇನಾಧಿಪತಿಯು, “ನಿನ್ನ ಪಾದರಕ್ಷೆಗಳನ್ನು ಬಿಚ್ಚಿಬಿಡು. ಈಗ ನೀನು ನಿಂತುಕೊಂಡಿರುವ ಸ್ಥಳವು ಪವಿತ್ರವಾದದ್ದು” ಎಂದು ಹೇಳಿದನು. ಯೆಹೋಶುವನು ಅವನು ಹೇಳಿದಂತೆಯೇ ಮಾಡಿದನು.
6 ಜೆರಿಕೊ ಪಟ್ಟಣದ ಬಾಗಿಲನ್ನು ಮುಚ್ಚಲಾಗಿತ್ತು. ಇಸ್ರೇಲರು ಸಮೀಪದಲ್ಲೇ ಇದ್ದುದರಿಂದ ಪಟ್ಟಣದ ಜನರು ಹೆದರಿಕೊಂಡಿದ್ದರು. ಒಬ್ಬರಾದರೂ ಪಟ್ಟಣದಲ್ಲಿ ಪ್ರವೇಶ ಮಾಡಲಿಲ್ಲ; ಒಬ್ಬರಾದರೂ ಪಟ್ಟಣದಿಂದ ಹೊರ ಬರಲಿಲ್ಲ.
2 ಆಗ ಯೆಹೋವನು ಯೆಹೋಶುವನಿಗೆ, “ಇಗೋ ನೋಡು, ನೀನು ಜೆರಿಕೊ ನಗರವನ್ನು ಗೆಲ್ಲುವಂತೆ ಮಾಡುತ್ತೇನೆ. ನೀನು ಅರಸನನ್ನು ಮತ್ತು ನಗರದ ಎಲ್ಲ ಯೋಧರನ್ನು ಸೋಲಿಸುವೆ. 3 ಪ್ರತಿ ನಿತ್ಯ ಒಂದು ಸಲ ನಿನ್ನ ಸೇನೆಯೊಂದಿಗೆ ನಗರದ ಸುತ್ತಲೂ ಸುತ್ತಬೇಕು. ಹೀಗೆ ಆರು ದಿನಗಳವರೆಗೆ ಸುತ್ತಬೇಕು. 4 ಏಳು ಮಂದಿ ಯಾಜಕರಿಗೆ ಟಗರಿನ ಕೊಂಬಿನಿಂದ ಮಾಡಿದ ತುತ್ತೂರಿಗಳನ್ನು ಹಿಡಿದುಕೊಂಡು ಪವಿತ್ರ ಪೆಟ್ಟಿಗೆಯ ಮುಂದೆ ಹೋಗಲು ಹೇಳು. ಏಳನೆಯ ದಿನದಲ್ಲಿ ನಗರದ ಸುತ್ತಲೂ ನೀವು ಏಳುಸಲ ಸುತ್ತಬೇಕು. ಏಳನೆಯ ದಿನದಲ್ಲಿ ಸುತ್ತುವಾಗ ತುತ್ತೂರಿಯನ್ನು ಊದಬೇಕೆಂದು ಯಾಜಕರಿಗೆ ಹೇಳು. 5 ಯಾಜಕರ ತುತ್ತೂರಿ ಧ್ವನಿಯನ್ನು ಕೇಳಿದಾಗ ಜನರು ಆರ್ಭಟಿಸಬೇಕು. ಆಗ ನಗರದ ಗೋಡೆಗಳು ಬೀಳುವವು; ಆಗ ನೀವು ನೇರವಾಗಿ ನಗರದೊಳಗೆ ಹೋಗಿರಿ” ಅಂದನು.
ಜೆರಿಕೊವನ್ನು ಸ್ವಾಧೀನಪಡಿಸಿಕೊಂಡದ್ದು
6 ಆದ್ದರಿಂದ ನೂನನ ಮಗನಾದ ಯೆಹೋಶುವನು ಯಾಜಕರನ್ನು ಒಟ್ಟಿಗೆ ಕರೆದು, ಅವರಿಗೆ, “ಯೆಹೋವನ ಪವಿತ್ರ ಪೆಟ್ಟಿಗೆಯನ್ನು ತೆಗೆದುಕೊಂಡು ಹೋಗಿರಿ. ಏಳು ಮಂದಿ ಯಾಜಕರು ತುತ್ತೂರಿಗಳನ್ನು ತೆಗೆದುಕೊಂಡು ಪೆಟ್ಟಿಗೆಯ ಮುಂದೆ ನಡೆಯಬೇಕು” ಎಂದು ಹೇಳಿದನು.
7 ಬಳಿಕ ಯೆಹೋಶುವನು ಜನರಿಗೆ, “ಈಗ ನಗರದ ಸುತ್ತ ಪ್ರದಕ್ಷಿಣೆ ಹಾಕಿರಿ. ಆಯುಧಗಳನ್ನು ಹಿಡಿದುಕೊಂಡು ಯೋಧರು ಯೆಹೋವನ ಪವಿತ್ರಪೆಟ್ಟಿಗೆಯ ಮುಂದೆ ನಡೆಯಬೇಕು” ಎಂದು ಆಜ್ಞಾಪಿಸಿದನು.
8 ಯೆಹೋಶುವನು ಜನರೊಂದಿಗೆ ಮಾತನಾಡುವದನ್ನು ಮುಗಿಸಿದ ಮೇಲೆ, ಏಳು ಮಂದಿ ಯಾಜಕರು ಏಳು ತುತ್ತೂರಿಗಳನ್ನು ತೆಗೆದುಕೊಂಡು ಊದುತ್ತಾ ಯೆಹೋವನ ಮುಂದೆ ನಡೆಯಲು ಪ್ರಾರಂಭಿಸಿದರು. ಯೆಹೋವನ ಪವಿತ್ರ ಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗುತ್ತಿದ್ದ ಯಾಜಕರು ಅವರನ್ನು ಹಿಂಬಾಲಿಸಿದರು. 9 ಆಯುಧಗಳನ್ನು ಹಿಡಿದುಕೊಂಡ ಯೋಧರು ಯಾಜಕರ ಮುಂದೆ ನಡೆದರು. ಪವಿತ್ರ ಪೆಟ್ಟಿಗೆಯ ಹಿಂದೆ ಜನರು ಕ್ರಮಬದ್ಧವಾಗಿ ಹೆಜ್ಜೆಯನ್ನು ಹಾಕುತ್ತಾ ತಮ್ಮ ತುತ್ತೂರಿಗಳನ್ನು ಊದುತ್ತಿದ್ದರು. 10 ಯೆಹೋಶುವನು ಜನರಿಗೆ, “ಆರ್ಭಟಿಸಬೇಡಿರಿ, ನಾನು ಹೇಳುವ ದಿನದವರೆಗೆ ಒಂದು ಶಬ್ದವನ್ನೂ ಉಚ್ಚರಿಸಬೇಡಿರಿ. ಆಮೇಲೆ ನೀವು ಆರ್ಭಟಿಸಬಹುದು” ಎಂದು ಹೇಳಿದನು.
11 ಯಾಜಕರು ಯೆಹೋವನ ಪವಿತ್ರ ಪೆಟ್ಟಿಗೆಯನ್ನು ಹೊತ್ತುಕೊಂಡು ಒಂದು ಸಲ ನಗರವನ್ನು ಸುತ್ತಿದ ಮೇಲೆ ಪಾಳೆಯಕ್ಕೆ ಹಿಂತಿರುಗಿ ಬಂದು ಆ ರಾತ್ರಿ ಅಲ್ಲಿಯೇ ಉಳಿದುಕೊಂಡರು.
12 ಯೆಹೋಶುವನು ಮರುದಿನ ಬೆಳಿಗ್ಗೆ ಎದ್ದನು. ಯಾಜಕರು ಯೆಹೋವನ ಪವಿತ್ರ ಪೆಟ್ಟಿಗೆಯನ್ನು ಪುನಃ ಹೊತ್ತುಕೊಂಡು ಹೋದರು. 13 ಏಳುಮಂದಿ ಯಾಜಕರು ಏಳು ತುತ್ತೂರಿಗಳನ್ನು ತೆಗೆದುಕೊಂಡು ಯೆಹೋವನ ಪವಿತ್ರ ಪೆಟ್ಟಿಗೆಯ ಮುಂದೆ ಕ್ರಮಬದ್ಧವಾಗಿ ಹೆಜ್ಜೆಹಾಕುತ್ತಾ ತುತ್ತೂರಿಗಳನ್ನು ಊದುತ್ತಾ ನಡೆದರು. ಆಯಧ ಸನ್ನದ್ಧರಾದ ಸೈನಿಕರು ಅವರ ಮುಂದೆ ಕ್ರಮಬದ್ಧವಾಗಿ ಹೆಜ್ಜೆಹಾಕುತ್ತಾ ನಡೆದರು. ಯೆಹೋವನ ಪವಿತ್ರ ಪೆಟ್ಟಿಗೆಯ ಹಿಂಭಾಗದಲ್ಲಿ ಉಳಿದ ಜನರು ಕ್ರಮಬದ್ಧವಾಗಿ ಹೆಜ್ಜೆಹಾಕುತ್ತಾ ತುತ್ತೂರಿಗಳನ್ನು ಊದುತ್ತಾ ಪಟ್ಟಣದ ಸುತ್ತಲೂ ನಡೆದರು. 14 ಎರಡನೆಯ ದಿನ ಅವರೆಲ್ಲರು ನಗರವನ್ನು ಒಂದು ಸಲ ಕ್ರಮಬದ್ಧವಾಗಿ ಸುತ್ತಿ ಪಾಳೆಯಕ್ಕೆ ಹಿಂತಿರುಗಿದರು. ಹೀಗೆ ಅವರು ಆರು ದಿನಗಳವರೆಗೆ ಮಾಡಿದರು.
15 ಏಳನೆಯ ದಿನ ಸೂರ್ಯೋದಯವಾಗುತ್ತಲೇ ಅವರು ಎದ್ದರು. ಪಟ್ಟಣದ ಸುತ್ತಲು ಅವರು ಏಳು ಸಲ ಸುತ್ತಿದರು. ಅವರು ಮುಂಚಿನ ದಿನಗಳಲ್ಲಿ ನಡೆದ ಕ್ರಮದಲ್ಲಿಯೇ ನಡೆದರು. ಆದರೆ ಆ ದಿನ ಅವರು ನಗರದ ಸುತ್ತಲು ಏಳು ಸಲ ಸುತ್ತಿದರು. 16 ಏಳನೆಯ ಸಲ ಅವರು ನಗರವನ್ನು ಸುತ್ತುವಾಗ ಯಾಜಕರು ತುತ್ತೂರಿಗಳನ್ನು ಊದಿದರು. ಆಗ ಯೆಹೋಶುವನು ಜನರಿಗೆ, “ಈಗ ಆರ್ಭಟಿಸಿರಿ, ಯೆಹೋವನು ಈ ನಗರವನ್ನು ನಿಮಗೆ ಕೊಟ್ಟಿದ್ದಾನೆ. 17 ಈ ನಗರ ಮತ್ತು ಇದರಲ್ಲಿರುವದೆಲ್ಲವೂ ಯೆಹೋವನ ಸ್ವತ್ತಾಗಿದೆ. ವೇಶ್ಯೆಯಾದ ರಾಹಾಬಳು ಮತ್ತು ಅವಳ ಮನೆಯಲ್ಲಿರುವ ಎಲ್ಲ ಜನರು ಮಾತ್ರ ಜೀವಸಹಿತ ಉಳಿಯಲಿ, ಅವರನ್ನು ಕೊಲ್ಲಬಾರದು. ಏಕೆಂದರೆ ರಾಹಾಬಳು ನಮ್ಮ ಆ ಇಬ್ಬರು ಗೂಢಚಾರರಿಗೆ ಸಹಾಯ ಮಾಡಿದ್ದಾಳೆ. 18 ಅಲ್ಲದೆ ನಾವು ಉಳಿದೆಲ್ಲವನ್ನು ನಾಶಪಡಿಸಬೇಕೆಂಬುದನ್ನು ನೆನಪಿಡಿ. ಅವರ ವಸ್ತುಗಳನ್ನು ತೆಗೆದುಕೊಳ್ಳಬೇಡಿ. ನೀವು ಅವರ ವಸ್ತುಗಳನ್ನು ತೆಗೆದುಕೊಂಡರೆ ಮತ್ತು ಅವುಗಳನ್ನು ನಮ್ಮ ಪಾಳೆಯಕ್ಕೆ ತಂದರೆ ನೀವೇ ನಾಶವಾಗುವಿರಿ; ಇಸ್ರೇಲಿನ ಎಲ್ಲಾ ಜನರಿಗೆ ಕಷ್ಟವನ್ನುಂಟುಮಾಡುವಿರಿ. 19 ಬೆಳ್ಳಿ, ಬಂಗಾರ, ಕಂಚು ಮತ್ತು ಕಬ್ಬಿಣಗಳಿಂದ ಮಾಡಿದ ಎಲ್ಲಾ ವಸ್ತುಗಳು ಯೆಹೋವನ ಸ್ವತ್ತಾಗಿವೆ. ಆದ್ದರಿಂದ ಅವುಗಳನ್ನು ಆತನ ಭಂಡಾರಕ್ಕೆ ಸೇರಿಸಬೇಕು” ಎಂದು ಆಜ್ಞಾಪಿಸಿದನು.
20 ಯಾಜಕರು ತುತ್ತೂರಿಗಳನ್ನು ಊದಿದಾಗ ಜನರು ಆರ್ಭಟಿಸತೊಡಗಿದರು. ಆಗ ಗೋಡೆಗಳು ಬಿದ್ದವು; ಜನರು ನೇರವಾಗಿ ನಗರದೊಳಗೆ ನುಗ್ಗಿದರು. ಹೀಗೆ ಇಸ್ರೇಲರು ನಗರವನ್ನು ಸ್ವಾಧೀನಪಡಿಸಿಕೊಂಡರು. 21 ಅವರು ನಗರದಲ್ಲಿದ್ದ ಎಲ್ಲವನ್ನು ನಾಶಪಡಿಸಿದರು; ಅಲ್ಲಿದ್ದ ತರುಣರನ್ನು, ವೃದ್ಧರನ್ನು, ತರುಣಿಯರನ್ನು, ವೃದ್ಧೆಯರನ್ನು, ದನಕರುಗಳನ್ನು, ಕುರಿಗಳನ್ನು ಮತ್ತು ಕತ್ತೆಗಳನ್ನು ಕೊಂದುಹಾಕಿದರು.
22 ಯೆಹೋಶುವನು ಆ ಇಬ್ಬರು ಗೂಢಚಾರರಿಗೆ, “ನೀವು ಪ್ರಮಾಣ ಮಾಡಿರುವುದರಿಂದ ಆ ವೇಶ್ಯೆಯ ಮನೆಗೆ ಹೋಗಿ ಅವಳನ್ನು ಹೊರಗೆ ಕರೆದುಕೊಂಡು ಬನ್ನಿ. ಅವಳ ಸಂಗಡ ಇರುವ ಎಲ್ಲಾ ಜನರನ್ನೂ ಕರೆದುಕೊಂಡು ಬನ್ನಿ” ಎಂದು ಹೇಳಿದನು.
23 ಆ ಇಬ್ಬರು, ರಾಹಾಬಳ ಮನೆಗೆ ಹೋಗಿ ಅವಳನ್ನು ಹೊರಗೆ ಕರೆದುಕೊಂಡು ಬಂದರು. ಅವಳ ತಂದೆ, ತಾಯಿ, ಸಹೋದರರು ಮತ್ತು ಅವಳ ಎಲ್ಲ ಕುಟುಂಬದವರನ್ನು ಮತ್ತು ಅವಳ ಸಂಗಡ ಅಲ್ಲಿ ಇದ್ದ ಬೇರೆ ಎಲ್ಲ ಜನರನ್ನು ಸಹ ಅವರು ಹೊರಗೆ ಕರೆದುಕೊಂಡು ಬಂದರು. ಅವರೆಲ್ಲರನ್ನು ಇಸ್ರೇಲಿನ ಜನರ ಪಾಳೆಯದ ಹೊರಗಡೆ ಒಂದು ಸುರಕ್ಷಿತವಾದ ಸ್ಥಳದಲ್ಲಿ ಇರಿಸಿದರು.
24 ಬಳಿಕ ಇಸ್ರೇಲರು ಇಡೀ ನಗರವನ್ನು ಸುಟ್ಟು ಹಾಕಿದರು. ಅವರು ಬೆಳ್ಳಿ, ಬಂಗಾರ, ಕಂಚು ಮತ್ತು ಕಬ್ಬಿಣಗಳಿಂದ ಮಾಡಿದ ವಸ್ತುಗಳನ್ನು ಬಿಟ್ಟು ನಗರದಲ್ಲಿನ ಉಳಿದೆಲ್ಲವನ್ನು ಸುಟ್ಟು ಹಾಕಿದರು. ಅವರು ಆ ವಸ್ತುಗಳನ್ನು ಯೆಹೋವನಿಗಾಗಿ ಉಳಿಸಿದರು. 25 ಯೆಹೋಶುವನು ವೇಶ್ಯೆಯಾದ ರಾಹಾಬಳನ್ನೂ ಅವಳ ಕುಟುಂಬವನ್ನೂ ಅವಳ ಸಂಗಡ ಇದ್ದ ಬೇರೆ ಜನರನ್ನೂ ಉಳಿಸಿದನು. ಯೆಹೋಶುವನು ಜೆರಿಕೊವಿಗೆ ಕಳಿಸಿಕೊಟ್ಟ ಗೂಢಚಾರರಿಗೆ ರಾಹಾಬಳು ಸಹಾಯ ಮಾಡಿದ್ದಕ್ಕಾಗಿ ಯೆಹೋಶುವನು ಅವರೆಲ್ಲರನ್ನು ಉಳಿಸಿದನು. ರಾಹಾಬಳು ಇಂದಿಗೂ ಸಹ ಇಸ್ರೇಲಿನ ಜನರೊಂದಿಗೆ ವಾಸವಾಗಿದ್ದಾಳೆ.
26 ಆ ಸಮಯದಲ್ಲಿ ಯೆಹೋಶುವನು, ಇಸ್ರೇಲಿನ ಜನರಿಂದ ಪ್ರಮಾಣಮಾಡಿಸಿ ಅವರಿಗೆ,
“ಈ ಜೆರಿಕೊ ಪಟ್ಟಣವನ್ನು ಪುನಃ ಕಟ್ಟಲು ಪ್ರಯತ್ನಿಸುವವನು
ಯೆಹೋವನ ದೃಷ್ಟಿಯಲ್ಲಿ ಶಾಪಗ್ರಸ್ತನಾಗಲಿ.
ಈ ನಗರಕ್ಕೆ ಅಡಿಗಲ್ಲನ್ನಿಡುವ ವ್ಯಕ್ತಿಯು
ತನ್ನ ಹಿರಿಯ ಮಗನನ್ನು ಕಳೆದುಕೊಳ್ಳಲಿ;
ಹೆಬ್ಬಾಗಿಲನ್ನು ನಿಲ್ಲಿಸುವ ವ್ಯಕ್ತಿ
ತನ್ನ ಕಿರಿಯ ಮಗನನ್ನು ಕಳೆದುಕೊಳ್ಳಲಿ”[b]
ಎಂದು ಹೇಳಿದನು.
27 ಯೆಹೋವನು ಯೆಹೋಶುವನ ಸಂಗಡ ಇದ್ದನು. ಯೆಹೋಶುವನು ದೇಶದಲ್ಲೆಲ್ಲಾ ಸುಪ್ರಸಿದ್ಧನಾದನು.
ಯೇಸುವಿನ ಜೀವನದ ಬಗ್ಗೆ ಲೂಕನ ಬರಹ
1 ಸನ್ಮಾನ್ಯ ಥೆಯೊಫಿಲನೇ,
ನಮ್ಮ ಮಧ್ಯದಲ್ಲಿ ಸಂಭವಿಸಿದ ಸಂಗತಿಗಳ ಚರಿತ್ರೆಯನ್ನು ತಿಳಿಸುವುದಕ್ಕೆ ಅನೇಕರು ಪ್ರಯತ್ನಿಸಿದ್ದಾರೆ. 2 ಪ್ರಾರಂಭದಿಂದಲೂ ಆ ಸಂಗತಿಗಳನ್ನು ಕಣ್ಣಾರೆ ಕಂಡು ದೇವರ ಸಂದೇಶವನ್ನು ಸಾರಿದವರಿಂದ ನಾವು ಕೇಳಿದ ಸಂಗತಿಗಳನ್ನೇ ಅವರು ಬರೆದಿದ್ದಾರೆ. 3 ಪ್ರತಿಯೊಂದು ಸಂಗತಿಯನ್ನು ಪ್ರಾರಂಭದಿಂದ ನಾನೇ ಶ್ರದ್ಧೆವಹಿಸಿ ಅಧ್ಯಯನ ಮಾಡಿರುವುದರಿಂದ ಅವೆಲ್ಲವನ್ನೂ ನಿನಗೆ ಕ್ರಮಬದ್ಧವಾಗಿ ತಿಳಿಸಲು ಪುಸ್ತಕ ರೂಪದಲ್ಲಿ ಬರೆದಿದ್ದೇನೆ. 4 ನಿನಗೆ ಉಪದೇಶಿಸಿರುವ ವಿಷಯಗಳು ಸತ್ಯವಾದವುಗಳೆಂದು ಇದರಿಂದ ನಿನಗೆ ಸ್ಪಷ್ಟವಾಗಿರುವುದು.
ಜಕರೀಯ ಮತ್ತು ಎಲಿಜಬೇತ್
5 ಹೆರೋದನು[a] ಜುದೇಯವನ್ನು ಆಳುತ್ತಿದ್ದ ಕಾಲದಲ್ಲಿ ಜಕರೀಯನೆಂಬ ಒಬ್ಬ ಯಾಜಕನಿದ್ದನು. ಜಕರೀಯನು ಅಬೀಯನ ವರ್ಗಕ್ಕೆ[b] ಸೇರಿದವನು. ಜಕರೀಯನ ಹೆಂಡತಿ ಆರೋನನ ಕುಟುಂಬದವಳು. ಆಕೆಯ ಹೆಸರು ಎಲಿಜಬೇತ್. 6 ಜಕರೀಯನು ಮತ್ತು ಎಲಿಜಬೇತಳು ನಿಜವಾಗಿಯೂ ದೇವರ ದೃಷ್ಟಿಯಲ್ಲಿ ಒಳ್ಳೆಯವರಾಗಿದ್ದರು. ಪ್ರಭುವಿನ (ದೇವರ) ಆಜ್ಞೆಗಳನ್ನೆಲ್ಲಾ ಕೈಕೊಂಡು ನಡೆಯುತ್ತಿದ್ದ ಅವರು, ಅದೇರೀತಿ ಬಾಳಲು ಇತರರಿಗೂ ಉಪದೇಶಿಸುತ್ತಿದ್ದರು. ಅವರು ತಪ್ಪಿಲ್ಲದವರಾಗಿದ್ದರು. 7 ಅವರಿಗೆ ಮಕ್ಕಳಿರಲಿಲ್ಲ. ಎಲಿಜಬೇತಳು ಬಂಜೆಯಾಗಿದ್ದಳು; ಮತ್ತು ಅವರಿಬ್ಬರೂ ಬಹಳ ಮುಪ್ಪಿನವರಾಗಿದ್ದರು.
8 ಒಮ್ಮೆ ತನ್ನ ವರ್ಗದ ಸರದಿ ಬಂದಾಗ, ಜಕರೀಯನು ದೇವರ ಸನ್ನಿಧಿಯಲ್ಲಿ ಯಾಜಕಸೇವೆ ಸಲ್ಲಿಸುತ್ತಿದ್ದನು. 9 ಯಾಜಕರು ಧೂಪವನು ಅರ್ಪಿಸುವುದಕ್ಕಾಗಿ ತಮ್ಮ ಸಂಪ್ರದಾಯದ ಪ್ರಕಾರ ಚೀಟಿಹಾಕಿ ಒಬ್ಬ ಯಾಜಕನನ್ನು ಆರಿಸುತ್ತಿದ್ದರು. ಈ ಸಲ ಅದು ಜಕರೀಯನ ಪಾಲಿಗೆ ಬಂದಿತು. ಆದ್ದರಿಂದ ಜಕರೀಯನು ಧೂಪ ಅರ್ಪಿಸುವುದಕ್ಕಾಗಿ ಪ್ರಭುವಿನ ಆಲಯದೊಳಗೆ ಹೋದನು. 10 ಹೊರಗಡೆ ಬಹು ಜನರಿದ್ದರು. ಧೂಪವನ್ನರ್ಪಿಸುತ್ತಿದ್ದ ಸಮಯದಲ್ಲಿ ಅವರು ಪ್ರಾರ್ಥಿಸುತ್ತಿದ್ದರು.
11 ಆಗ, ಧೂಪಪೀಠದ ಬಲಗಡೆಯಲ್ಲಿ, ಪ್ರಭುವಿನ ದೂತನೊಬ್ಬನು ಬಂದು ಜಕರೀಯನ ಮುಂದೆ ನಿಂತನು. 12 ಅವನು ದೇವದೂತನನ್ನು ನೋಡಿ ಗಲಿಬಿಲಿಗೊಂಡು ಬಹು ಭಯಪಟ್ಟನು. 13 ಆದರೆ ದೇವದೂತನು ಅವನಿಗೆ, “ಜಕರೀಯನೇ, ಹೆದರಬೇಡ. ನಿನ್ನ ಪ್ರಾರ್ಥನೆ ದೇವರಿಗೆ ಕೇಳಿಸಿತು. ನಿನ್ನ ಹೆಂಡತಿಯಾದ ಎಲಿಜಬೇತಳು ಒಂದು ಗಂಡುಮಗುವನ್ನು ಹೆರುವಳು. ನೀನು ಅವನಿಗೆ ಯೋಹಾನ ಎಂದು ಹೆಸರಿಡಬೇಕು. 14 ಅವನ ಜನನದಿಂದ ನಿಮಗೆ ಹರ್ಷಾನಂದವಾಗುವುದು. ಬಹುಜನರು ಸಂತೋಷಪಡುವರು. 15 ಪ್ರಭುವಿನ ದೃಷ್ಟಿಯಲ್ಲಿ ಯೋಹಾನನು ಮಹಾಪುರುಷನಾಗಿರುವನು. ಅವನು ದ್ರಾಕ್ಷಾರಸವನ್ನಾಗಲಿ ಮದ್ಯವನ್ನಾಗಲಿ ಕುಡಿಯುವುದಿಲ್ಲ. ಯೋಹಾನನು ಹುಟ್ಟಿದಂದಿನಿಂದಲೇ ಪವಿತ್ರಾತ್ಮಭರಿತನಾಗಿರುವನು.[c]
16 “ಅನೇಕ ಯೆಹೂದ್ಯರು ತಮ್ಮ ದೇವರಾದ ಪ್ರಭುವಿನ ಕಡೆಗೆ ತಿರುಗಿಕೊಳ್ಳಲು ಅವನು ಸಹಾಯ ಮಾಡುವನು. 17 ಅವನು ಪ್ರಭುವಿಗೆ ಮುಂದೂತನಾಗಿ ಹೋಗುವನು. ಅವನು ಎಲೀಯನ[d] ಗುಣಶಕ್ತಿಗಳಿಂದ ಕೂಡಿದವನಾಗಿರುವನು; ತಂದೆ ಮತ್ತು ಮಕ್ಕಳ ನಡುವೆ ಸಮಾಧಾನವನ್ನು ಉಂಟುಮಾಡುವನು; ಅವಿಧೇಯರಾದ ಅನೇಕರನ್ನು ನೀತಿವಂತರ ಜ್ಞಾನದ ಕಡೆಗೆ ನಡೆಸುವನು; ಜನರನ್ನು ಪ್ರಭುವಿನ ಆಗಮನಕ್ಕೆ ಸಿದ್ಧಪಡಿಸುವನು” ಎಂದು ಹೇಳಿದನು.
18 ಜಕರೀಯನು ದೇವದೂತನಿಗೆ, “ನೀನು ಹೇಳುತ್ತಿರುವುದು ಸತ್ಯವೆಂಬುದಕ್ಕೆ ಆಧಾರವೇನು? ನಾನು ಮುದುಕನಾಗಿದ್ದೇನೆ ಮತ್ತು ನನ್ನ ಹೆಂಡತಿ ಸಹ ಮುಪ್ಪಿನವಳಾಗಿದ್ದಾಳೆ” ಎಂದು ಹೇಳಿದನು.
19 ದೇವದೂತನು, “ನನ್ನ ಹೆಸರು ಗಬ್ರಿಯೇಲ. ನಾನು ದೇವರ ಸನ್ನಿಧಿಯಲ್ಲಿ ನಿಂತುಕೊಂಡಿರುವವನು. ನಿನಗೆ ಈ ಶುಭಸಮಾಚಾರವನ್ನು ತಿಳಿಸಲು ದೇವರು ನನ್ನನ್ನು ಕಳುಹಿಸಿದ್ದಾನೆ. 20 ಈಗ ಕೇಳು! ಈ ಸಂಗತಿಗಳು ನೆರವೇರುವ ತನಕ ನೀನು ಮೂಕನಾಗಿರುವೆ. ಏಕೆಂದರೆ ನೀನು ನನ್ನ ಮಾತನ್ನು ನಂಬಲಿಲ್ಲ. ಆದರೆ ನಾನು ಹೇಳಿದ ಈ ಸಂಗತಿಗಳು ಖಂಡಿತವಾಗಿ ನೆರವೇರುತ್ತವೆ” ಎಂದು ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International