Old/New Testament
ದೇವರು ಯೆಹೋಶುವನನ್ನು ಇಸ್ರೇಲರ ನಾಯಕನನ್ನಾಗಿ ಆರಿಸಿದನು
1 ಮೋಶೆಯು ಯೆಹೋವನ ಸೇವಕನಾಗಿದ್ದನು. ನೂನನ ಮಗನಾದ ಯೆಹೋಶುವನು ಮೋಶೆಯ ಸಹಾಯಕನಾಗಿದ್ದನು. ಮೋಶೆಯ ಮರಣಾನಂತರ ಯೆಹೋವನು ಯೆಹೋಶುವನೊಡನೆ ಮಾತನಾಡಿ, 2 “ನನ್ನ ಸೇವಕನಾದ ಮೋಶೆಯು ಸತ್ತನು. ಈಗ ನೀನು ಮತ್ತು ಈ ಜನರು ಜೋರ್ಡನ್ ನದಿಯನ್ನು ದಾಟಿಹೋಗಬೇಕು. ಇಸ್ರೇಲಿನ ಜನರಾದ ನಿಮಗೆ ನಾನು ಕೊಡಲಿರುವ ದೇಶಕ್ಕೆ ನೀವು ಹೋಗಬೇಕು. 3 ನಾನು ಆ ದೇಶವನ್ನು ನಿಮಗೆ ಕೊಡುವುದಾಗಿ ಮೋಶೆಗೆ ವಾಗ್ದಾನ ಮಾಡಿದ್ದೇನೆ. ಆದ್ದರಿಂದ ನೀವು ಕಾಲಿಡುವ ಪ್ರದೇಶವನ್ನೆಲ್ಲಾ ನಿಮಗೆ ಕೊಡುತ್ತೇನೆ. 4 ಅರಣ್ಯ ಮತ್ತು ಲೆಬನೋನ್ ಪರ್ವತ ಇವುಗಳನ್ನು ಮೊದಲುಗೊಂಡು ಯೂಫ್ರೇಟೀಸ್ ಮಹಾನದಿಯವರೆಗಿರುವ ಹಿತ್ತಿಯರ ಪ್ರದೇಶವೆಲ್ಲಾ ನಿಮ್ಮದಾಗುವುದು. ನಿಮ್ಮ ಪ್ರದೇಶವು ಪಶ್ಚಿಮದಲ್ಲಿನ ಮೆಡಿಟರೇನಿಯನ್ ಸಮುದ್ರದವರೆಗೆ ವಿಸ್ತರಿಸಿಕೊಳ್ಳುವುದು. 5 ನಾನು ಮೋಶೆಯ ಸಂಗಡ ಇದ್ದಂತೆ ನಿನ್ನ ಸಂಗಡವೂ ಇರುತ್ತೇನೆ. ನಿನ್ನ ಜೀವಮಾನದಲ್ಲೆಲ್ಲಾ ಯಾವನೂ ನಿನ್ನನ್ನು ತಡೆಯಲಾರನು. ನಾನು ನಿನ್ನನ್ನು ಕೈಬಿಡುವುದಿಲ್ಲ; ತೊರೆದುಬಿಡುವುದಿಲ್ಲ” ಎಂದು ಹೇಳಿದನು.
6 “ಯೆಹೋಶುವನೇ, ನೀನು ಸ್ಥಿರಚಿತ್ತನಾಗಿರಬೇಕು; ಧೈರ್ಯವಂತನಾಗಿರಬೇಕು; ಈ ಜನರು ತಮ್ಮ ದೇಶವನ್ನು ಪಡೆಯುವುದಕ್ಕೆ ನೀನು ಇವರ ಮುಂದಾಳಾಗಿ ನಡೆಸಬೇಕು. ನಾನು ಇವರಿಗೆ ಈ ಪ್ರದೇಶವನ್ನು ಕೊಡುವುದಾಗಿ ಇವರ ಪೂರ್ವಿಕರಿಗೆ ಪ್ರಮಾಣ ಮಾಡಿದ್ದೇನೆ. 7 ಆದರೆ ನೀನು ಇನ್ನೊಂದು ವಿಷಯದಲ್ಲಿಯೂ ಸ್ಥಿರಚಿತ್ತನಾಗಿರಬೇಕು; ಧೈರ್ಯವಂತನಾಗಿರಬೇಕು. ನನ್ನ ಸೇವಕನಾಗಿದ್ದ ಮೋಶೆಯು ನಿನಗೆ ಕೊಟ್ಟ ಆಜ್ಞೆಗಳನ್ನು ನೀನು ನಿಶ್ಚಿತವಾಗಿ ಪಾಲಿಸಬೇಕು. ಅವನ ಧರ್ಮೋಪದೇಶವನ್ನೆಲ್ಲಾ ಚಾಚೂತಪ್ಪದೆ ಅನುಸರಿಸಿದ್ದೇ ಆದರೆ ನೀನು ಮಾಡುವ ಎಲ್ಲ ಕಾರ್ಯಗಳಲ್ಲಿ ನಿನಗೆ ಜಯಸಿಗುವುದು ಖಂಡಿತ. 8 ಆ ಧರ್ಮಶಾಸ್ತ್ರದಲ್ಲಿ ಬರೆದ ವಿಷಯಗಳನ್ನು ಸದಾ ನೆನಪಿಡು. ಹಗಲೂ ರಾತ್ರಿ ಆ ಧರ್ಮಶಾಸ್ತ್ರವನ್ನು ಧ್ಯಾನಿಸು. ಆಗ ಅದರಲ್ಲಿ ಬರೆದ ವಿಷಯಗಳಿಗೆ ನೀನು ನಿಶ್ಚಿತವಾಗಿ ವಿಧೇಯನಾಗಿರುವೆ. ನೀನು ಹೀಗೆ ಮಾಡಿದರೆ ನೀನು ಮಾಡುವ ಪ್ರತಿಯೊಂದು ಕಾರ್ಯದಲ್ಲಿ ನೀನು ವಿವೇಕಶಾಲಿಯಾಗುವೆ ಮತ್ತು ಜಯಶಾಲಿಯಾಗುವೆ. 9 ನೆನಪಿಡು, ನೀನು ಸ್ಥಿರಚಿತ್ತನಾಗಿರಬೇಕೆಂತಲೂ ಧೈರ್ಯಶಾಲಿಯಾಗಿರಬೇಕೆಂತಲೂ ನಾನು ನಿನಗೆ ಆಜ್ಞಾಪಿಸುತ್ತೇನೆ. ಆದ್ದರಿಂದ ಹೆದರಬೇಡ, ಯಾಕೆಂದರೆ ನೀನು ಹೋಗುವಲ್ಲೆಲ್ಲಾ ನಿನ್ನ ದೇವರಾದ ಯೆಹೋವನೇ ನಿನ್ನ ಸಂಗಡ ಇರುವನು” ಎಂದು ಹೇಳಿದನು.
ಯೆಹೋಶುವನು ಅಧಿಪತ್ಯವನ್ನು ವಹಿಸಿಕೊಂಡನು
10 ಆಗ ಯೆಹೋಶುವನು ಜನಾಧಿಪತಿಗಳಿಗೆ, 11 “ನೀವು ಪಾಳೆಯದ ಎಲ್ಲಾ ಕಡೆಗೆ ಹೋಗಿ ಜನರಿಗೆ ಸಿದ್ಧವಾಗಿರಲು ತಿಳಿಸಿರಿ; ಸ್ವಲ್ಪ ಆಹಾರವನ್ನು ಸಿದ್ಧಪಡಿಸಿಕೊಳ್ಳಲು ಹೇಳಿರಿ. ಇನ್ನು ಮೂರು ದಿವಸಗಳಲ್ಲಿ ನಾವು ಈ ಜೋರ್ಡನ್ ನದಿಯನ್ನು ದಾಟಿ ಹೋಗುವೆವು. ನಾನು ಹೋಗಿ ಯೆಹೋವನಾದ ನಮ್ಮ ದೇವರು ನಮಗೆ ಕೊಡುವ ದೇಶವನ್ನು ವಶಪಡಿಸಿಕೊಳ್ಳುವೆವು ಎಂದು ಹೇಳಿರಿ” ಎಂದು ಆಜ್ಞಾಪಿಸಿದನು.
12 ಅನಂತರ ಯೆಹೋಶುವನು ರೂಬೇನ್ಯರ, ಗಾದ್ಯರ ಮತ್ತು ಮನಸ್ಸೆಕುಲದ ಅರ್ಧಜನರ ಜೊತೆಗೆ ಮಾತನಾಡಿ ಅವರಿಗೆ, 13 “ಯೆಹೋವನ ಸೇವಕನಾದ ಮೋಶೆಯು ನಿಮಗೆ ಹೇಳಿದ್ದನ್ನು ನೆನಪುಮಾಡಿಕೊಳ್ಳಿರಿ. ನಿಮ್ಮ ದೇವರಾದ ಯೆಹೋವನು ವಿಶ್ರಾಂತಿಗಾಗಿ ಒಂದು ದೇಶವನ್ನು ನಿಮಗೆ ಕೊಡುವುದಾಗಿ ವಾಗ್ದಾನ ಮಾಡಿದ್ದನು. 14 ಯೆಹೋವನು ಈಗಾಗಲೇ ಜೋರ್ಡನ್ ನದಿಯ ಪೂರ್ವದ ಪ್ರದೇಶವನ್ನು ನಿಮಗೆ ಕೊಟ್ಟಿದ್ದಾನೆ. ನಿಮ್ಮ ಹೆಂಡಂದಿರು, ಮಕ್ಕಳು ಮತ್ತು ನಿಮ್ಮ ದನಕುರಿಗಳು ಈ ಪ್ರದೇಶದಲ್ಲಿಯೇ ಇರಬಹುದು. ಆದರೆ ನಿಮ್ಮ ಯೋಧರು ನಿಮ್ಮ ಸಹೋದರರ ಸಂಗಡ ಜೋರ್ಡನ್ ನದಿಯನ್ನು ದಾಟಬೇಕು. ನೀವು ಯುದ್ಧಸನ್ನದ್ಧರಾಗಿ ನಿಮ್ಮ ಸಹೋದರರಿಗೆ ಅವರ ದೇಶವನ್ನು ಪಡೆಯುವುದರಲ್ಲಿ ಸಹಾಯ ಮಾಡಬೇಕು. 15 ಯೆಹೋವನು ನಿಮ್ಮ ವಿಶ್ರಾಂತಿಗಾಗಿ ಒಂದು ಸ್ಥಳವನ್ನು ಕೊಟ್ಟಿದ್ದಾನೆ. ಯೆಹೋವನು ನಿಮ್ಮ ಸಹೋದರರಿಗಾಗಿಯೂ ಒಂದು ಸ್ಥಳವನ್ನು ಕೊಡುತ್ತಾನೆ. ಆದರೆ ನಿಮ್ಮ ದೇವರಾದ ಯೆಹೋವನು ಅವರಿಗೆ ಕೊಡುವ ದೇಶವನ್ನು ಅವರು ಪಡೆದುಕೊಳ್ಳುವವರೆಗೆ ನೀವು ನಿಮ್ಮ ಸಹೋದರರಿಗೆ ಸಹಾಯ ಮಾಡಬೇಕು. ಆಮೇಲೆ ನೀವು ಜೋರ್ಡನ್ ನದಿಯ ಪೂರ್ವದಿಕ್ಕಿನಲ್ಲಿರುವ ನಿಮ್ಮ ದೇಶಕ್ಕೆ ಹೋಗಬಹುದು. ಯೆಹೋವನ ಸೇವಕನಾದ ಮೋಶೆಯು ನಿಮಗೆ ಕೊಟ್ಟ ದೇಶವು ಅದೇ ಆಗಿದೆ” ಎಂದನು.
16 ಆಗ ಅವರು ಯೆಹೋಶುವನಿಗೆ, “ನೀನು ಆಜ್ಞಾಪಿಸಿದ್ದನ್ನೆಲ್ಲಾ ನಾವು ಮಾಡುತ್ತೇವೆ; ನೀನು ನಮ್ಮನ್ನು ಕಳಿಸಿದ್ದಲ್ಲಿಗೆಲ್ಲ ಹೋಗುತ್ತೇವೆ. 17 ನಾವು ಮೋಶೆಯ ಆಜ್ಞೆಗಳನ್ನೆಲ್ಲಾ ಪಾಲಿಸಿದೆವು. ಅದೇ ರೀತಿ ನಿನ್ನ ಆಜ್ಞೆಗಳನ್ನೆಲ್ಲಾ ಪಾಲಿಸುತ್ತೇವೆ. ನಿನ್ನ ದೇವರಾದ ಯೆಹೋವನು ಮೋಶೆಯ ಸಂಗಡ ಇದ್ದಂತೆ ನಿನ್ನ ಸಂಗಡವೂ ಇರಲಿ. 18 ಯಾರಾದರೂ ನಿನ್ನ ಆಜ್ಞೆಗಳನ್ನು ಉಲ್ಲಂಘಿಸಿದರೆ ಅಥವಾ ಯಾರಾದರೂ ನಿನ್ನನ್ನು ವಿರೋಧಿಸಿದರೆ ಅವನನ್ನು ಕೊಲ್ಲಲಾಗುವುದು. ನೀನು ಮಾತ್ರ ಸ್ಥಿರಚಿತ್ತನಾಗಿರು; ಧೈರ್ಯಶಾಲಿಯಾಗಿರು” ಎಂದು ಹೇಳಿದರು.
ಜೆರಿಕೊದಲ್ಲಿ ಗೂಢಚಾರರು
2 ನೂನನ ಮಗನಾದ ಯೆಹೋಶುವನು ಮತ್ತು ಎಲ್ಲಾ ಜನರು ಆಕಾಶಿಯಾದಲ್ಲಿ ಬಿಡಾರ ಮಾಡಿದ್ದರು. ಯೆಹೋಶುವನು ಇಬ್ಬರು ಗೂಢಚಾರರನ್ನು ಜೆರಿಕೊ ಪಟ್ಟಣದ ಬಗ್ಗೆ ತಿಳಿದುಕೊಳ್ಳಲು ಕಳುಹಿಸಿದನು. ಈ ಜನರನ್ನು ಯೆಹೋಶುವನು ಕಳುಹಿಸಿದ ಸಂಗತಿ ಬೇರೆ ಯಾರಿಗೂ ತಿಳಿದಿರಲಿಲ್ಲ.
“ಹೋಗಿ ಆ ಜೆರಿಕೊ ನಗರವನ್ನು ಬಹಳ ಸೂಕ್ಷ್ಮವಾಗಿ ಪರೀಕ್ಷಿಸಿರಿ” ಎಂದು ಯೆಹೋಶುವನು ಆ ಗೂಢಚಾರರಿಗೆ ಹೇಳಿದ್ದನು.
ಅವರಿಬ್ಬರು ಜೆರಿಕೊ ನಗರಕ್ಕೆ ಹೋಗಿ ಒಬ್ಬ ವೇಶ್ಯೆಯ ಮನೆಯಲ್ಲಿ ಇಳಿದುಕೊಂಡರು. ಆ ಹೆಂಗಸಿನ ಹೆಸರು “ರಾಹಾಬ.”
2 ಆಗ ಯಾರೋ ಒಬ್ಬರು ಜೆರಿಕೊ ನಗರದ ರಾಜನಿಗೆ, “ನಿನ್ನೆ ರಾತ್ರಿ ಇಸ್ರೇಲರ ಕಡೆಯ ಕೆಲವರು ನಮ್ಮ ದೇಶದ ದೌರ್ಬಲ್ಯಗಳನ್ನು ಕಂಡುಹಿಡಿಯುವುದಕ್ಕಾಗಿ ಬಂದಿದ್ದಾರೆ” ಎಂದು ಹೇಳಿದರು.
3 ಆಗ ಜೆರಿಕೊ ನಗರದ ಅರಸನು ರಾಹಾಬಳಿಗೆ, “ನಿನ್ನ ಮನೆಗೆ ಬಂದು ಇಳಿದುಕೊಂಡ ಆ ಜನರನ್ನು ಬಚ್ಚಿಡಬೇಡ. ಅವರನ್ನು ಹೊರಗೆ ಕರೆದುಕೊಂಡು ಬಾ. ಅವರು ನಮ್ಮ ದೇಶದ ಬಗ್ಗೆ ತಿಳಿದುಕೊಳ್ಳುವುದಕ್ಕೆ ಬಂದಿದ್ದಾರೆ” ಎಂದು ಹೇಳಿ ಕಳುಹಿಸಿದನು.
4 ರಾಹಾಬಳು ಈ ಇಬ್ಬರನ್ನು ಅಡಗಿಸಿಟ್ಟಿದ್ದಳು. ಆದರೆ ಆಕೆಯು ಕೇಳಬಂದವರಿಗೆ, “ಇಬ್ಬರು ಮನುಷ್ಯರು ಇಲ್ಲಿಗೆ ಬಂದಿದ್ದರು, ಆದರೆ ಅವರು ಎಲ್ಲಿಂದ ಬಂದಿದ್ದರೆಂಬುದು ನನಗೆ ಗೊತ್ತಿರಲಿಲ್ಲ. 5 ಸಾಯಂಕಾಲ ನಗರದ ದ್ವಾರವನ್ನು ಮುಚ್ಚುವ ಸಮಯವಾದಾಗ ಅವರು ಹೊರಟುಹೋದರು. ಅವರು ಎಲ್ಲಿಗೆ ಹೋದರೆಂಬುದು ನನಗೆ ತಿಳಿಯದು. ಆದರೂ ನೀವು ಬೇಗ ಹೋದರೆ ಅವರನ್ನು ಹಿಡಿಯಬಹುದು” ಎಂದಳು. 6 ಆದರೆ ಅವಳು ನಿಜವಾಗಿ ಆ ಗೂಢಚಾರರನ್ನು ಮಾಳಿಗೆಯ[a] ಮೇಲೆ ಕರೆದುಕೊಂಡು ಹೋಗಿ ಒಟ್ಟಿದ ಹುಲ್ಲಿನಲ್ಲಿ ಅವರನ್ನು ಅಡಗಿಸಿಟ್ಟಿದ್ದಳು.
7 ರಾಜಭಟರು ನಗರದ ಹೊರಗೆ ಹೋಗಿ ನಗರದ ದ್ವಾರಗಳನ್ನು ಮುಚ್ಚಿ ಇಸ್ರೇಲಿನಿಂದ ಬಂದ ಆ ಇಬ್ಬರನ್ನು ಹುಡುಕಿಕೊಂಡು ಹೋದರು. ಅವರು ಜೋರ್ಡನ್ ನದಿಯವರೆಗೆ ಹೋಗಿ ಜನರು ನದಿದಾಟುವ ಎಲ್ಲ ಸ್ಥಳಗಳಲ್ಲಿ ಹುಡುಕಿದರು.
8 ಆ ಇಬ್ಬರು ಗೂಢಚಾರರು ಆ ರಾತ್ರಿ ಅಲ್ಲಿಯೇ ಮಲಗಲು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ರಾಹಾಬಳು ಮಾಳಿಗೆಯ ಮೇಲೆ ಹೋಗಿ ಅವರೊಂದಿಗೆ ಮಾತನಾಡಿ, 9 “ಯೆಹೋವನು ಈ ದೇಶವನ್ನು ನಿಮ್ಮ ಜನರಿಗೆ ಕೊಟ್ಟಿದ್ದಾನೆಂದು ನಾನು ಬಲ್ಲೆ. ನಿಮ್ಮ ವಿಷಯ ಕೇಳಿ ನಮಗೆ ಭಯ ಉಂಟಾಗಿದೆ. ಈ ದೇಶದಲ್ಲಿರುವ ಎಲ್ಲಾ ಜನರು ನಿಮ್ಮಿಂದ ಭಯಭೀತರಾಗಿದ್ದಾರೆ. 10 ಯೆಹೋವನು ನಿಮಗೆ ಸಹಾಯ ಮಾಡಿದ ರೀತಿಯ ಬಗ್ಗೆ ನಾವು ಕೇಳಿ ಭಯಗೊಂಡಿದ್ದೇವೆ. ನೀವು ಈಜಿಪ್ಟಿನಿಂದ ಹೊರಬಂದ ಮೇಲೆ ಆತನು ಕೆಂಪುಸಮುದ್ರದ ನೀರನ್ನು ಬತ್ತಿಸಿದ್ದನ್ನು ನಾವು ಕೇಳಿದ್ದೇವೆ. ಜೋರ್ಡನ್ ನದಿಯ ಪೂರ್ವದಿಕ್ಕಿನಲ್ಲಿದ್ದ ಸೀಹೋನ್ ಮತ್ತು ಓಗ್ ಎಂಬ ಅಮೋರಿಯರ ಅರಸರಿಬ್ಬರನ್ನು ನೀವು ಹೇಗೆ ನಾಶಮಾಡಿದಿರೆಂಬುದನ್ನೂ ಕೇಳಿದ್ದೇವೆ. 11 ಇವೆಲ್ಲವುಗಳ ಬಗ್ಗೆ ಕೇಳಿ ನಮಗೆ ಅತೀವ ಭಯವಾಗಿದೆ; ನಮ್ಮಲ್ಲಿ ಯಾರಿಗೂ ನಿಮ್ಮೊಂದಿಗೆ ಯುದ್ಧ ಮಾಡಲು ಧೈರ್ಯವಿಲ್ಲ. ಏಕೆಂದರೆ ನಿಮ್ಮ ದೇವರಾದ ಯೆಹೋವನು, ಭೂಪರಲೋಕಗಳನ್ನು ಆಳುವವನಾಗಿದ್ದಾನೆ. 12 ಈಗ ನೀವು ನನಗೊಂದು ಪ್ರಮಾಣ ಮಾಡಬೇಕು. ನಾನು ನಿಮಗೆ ದಯೆತೋರಿ ಸಹಾಯ ಮಾಡಿದೆ. ಆದ್ದರಿಂದ ನೀವು ಸಹ ನನ್ನ ಕುಟುಂಬದವರಿಗೆ ದಯೆತೋರುವಿರೆಂಬುದಕ್ಕೆ ಒಂದು ಗುರುತನ್ನು ಕೊಡಿರಿ. 13 ನನ್ನ ಕುಟುಂಬದವರನ್ನು ಅಂದರೆ ನನ್ನ ತಂದೆತಾಯಿಗಳನ್ನು, ಸಹೋದರ ಸಹೋದರಿಯರನ್ನು ಮತ್ತು ಅವರೆಲ್ಲರ ಕುಟುಂಬ ವರ್ಗದವರನ್ನು ಜೀವಂತವಾಗಿ ಉಳಿಸುವುದಾಗಿ ಪ್ರಮಾಣ ಮಾಡಿರಿ” ಎಂದು ಬೇಡಿಕೊಂಡಳು.
14 ಅದಕ್ಕೆ ಅವರು, “ನಮ್ಮ ಪ್ರಾಣವನ್ನಾದರೂ ಕೊಟ್ಟು ನಿಮ್ಮ ಪ್ರಾಣ ಉಳಿಸುತ್ತೇವೆ. ಆದರೆ ನೀವು ಇದನ್ನು ಯಾರಿಗೂ ಹೇಳಬೇಡಿ. ಯೆಹೋವನು ಈ ದೇಶವನ್ನು ನಮಗೆ ಅನುಗ್ರಹಿಸಿದ ಮೇಲೆ ನಾವು ನಿಮಗೆ ದಯೆ ತೋರುತ್ತೇವೆ. ನೀನು ನಮ್ಮನ್ನು ನಂಬಬಹುದು” ಎಂದರು.
15 ರಾಹಾಬಳ ಮನೆಯನ್ನು ಊರಗೋಡೆಗೆ ಸೇರಿಸಿ ಕಟ್ಟಲಾಗಿತ್ತು, ಆದ್ದರಿಂದ ಅವರನ್ನು ಒಂದು ಹಗ್ಗದ ಮೂಲಕ ಕಿಟಿಕಿಯಿಂದ ಕೆಳಕ್ಕೆ ಇಳಿಸಿದಳು. 16 ಆಕೆ ಅವರಿಗೆ, “ನೀವು ಪಶ್ಚಿಮದಿಕ್ಕಿನ ಕಡೆಗೆ ಹೋಗಿ ಬೆಟ್ಟಗಳಲ್ಲಿ ಅಡಗಿಕೊಳ್ಳಿರಿ; ಆಗ ರಾಜಭಟರು ನಿಮ್ಮನ್ನು ಕಂಡುಹಿಡಿಯಲಾರರು; ಅಲ್ಲಿ ಮೂರು ದಿನಗಳವರೆಗೆ ಅಡಗಿಕೊಂಡಿದ್ದು ರಾಜಭಟರು ಹಿಂದಿರುಗಿದ ಮೇಲೆ ನೀವು ನಿಮ್ಮ ಸ್ಥಳಕ್ಕೆ ಹೋಗಬಹುದು” ಎಂದು ಹೇಳಿದಳು.
17 ಅವರು ಅವಳಿಗೆ, “ನಾವು ನಿನಗೊಂದು ಪ್ರಮಾಣ ಮಾಡಿದ್ದೇವೆ; ಆದರೆ ನೀನು ಒಂದು ಕೆಲಸ ಮಾಡಬೇಕು. ಇಲ್ಲವಾದರೆ ನಾವು ನಮ್ಮ ಪ್ರಮಾಣಕ್ಕೆ ಹೊಣೆಗಾರರಾಗುವುದಿಲ್ಲ. 18 ನಮ್ಮನ್ನು ಇಳಿಸುವುದಕ್ಕಾಗಿ ನೀನು ಉಪಯೋಗಿಸಿದ ಈ ಕೆಂಪು ಹಗ್ಗವನ್ನು ನಾವು ಈ ದೇಶಕ್ಕೆ ಹಿಂತಿರುಗಿ ಬರುವಾಗ ನೀನು ಕಿಟಕಿಗೆ ಕಟ್ಟಿರಬೇಕು. ನಿನ್ನ ತಂದೆತಾಯಿಗಳು, ನಿನ್ನ ಸಹೋದರ ಸಹೋದರಿಯರು ಮತ್ತು ನಿನ್ನ ಕುಟುಂಬ ವರ್ಗದವರು ನಿನ್ನ ಸಂಗಡ ಈ ಮನೆಯಲ್ಲಿರಬೇಕು. 19 ಈ ಮನೆಯಲ್ಲಿರುವ ಪ್ರತಿಯೊಬ್ಬರನ್ನು ನಾವು ಕಾಪಾಡುತ್ತೇವೆ. ನಿನ್ನ ಮನೆಯಲ್ಲಿ ಯಾರಿಗಾದರೂ ಪೆಟ್ಟಾದರೆ ಅದಕ್ಕೆ ನಾವು ಹೊಣೆಗಾರರಾಗುವೆವು. ಆದರೆ ಯಾರಾದರೂ ನಿನ್ನ ಮನೆಯಿಂದ ಹೊರಗೆ ಹೋದಾಗ ಕೊಲ್ಲಲ್ಪಟ್ಟರೆ ಅದಕ್ಕೆ ನಾವು ಹೊಣೆಗಾರರಲ್ಲ; ಅದಕ್ಕೆ ಅವರೇ ಹೊಣೆಗಾರರು. 20 ನಾನು ನಿನಗೆ ಈ ಪ್ರಮಾಣವನ್ನು ಮಾಡಿದ್ದೇವೆ. ಆದರೆ ಇದನ್ನು ನೀನು ಯಾರಿಗೂ ಹೇಳಕೂಡದು; ಒಂದುವೇಳೆ ಹೇಳಿದರೆ, ನಾವು ಈ ಪ್ರಮಾಣದಿಂದ ಮುಕ್ತರಾಗುತ್ತೇವೆ” ಎಂದು ಹೇಳಿದರು.
21 ಅದಕ್ಕೆ ಅವಳು, “ಹಾಗೇ ಆಗಲಿ” ಎಂದು ಹೇಳಿ ಅವರನ್ನು ಕಳುಹಿಸಿಕೊಟ್ಟಳು. ಆ ಜನರು ಅವಳ ಮನೆಯಿಂದ ಹೊರಟರು. ಆಗ ಆ ಹೆಂಗಸು ಆ ಕೆಂಪು ಹಗ್ಗವನ್ನು ಕಿಟಿಕಿಗೆ ಕಟ್ಟಿದಳು.
22 ಅವರು ಅವಳ ಮನೆಯಿಂದ ಹೋಗಿ ಬೆಟ್ಟಗಳಲ್ಲಿ ಅಡಗಿಕೊಂಡು ಮೂರು ದಿನಗಳವರೆಗೆ ಅಲ್ಲೇ ಇದ್ದರು. ರಾಜಭಟರು ದಾರಿಯಲ್ಲೆಲ್ಲಾ ಹುಡುಕಾಡಿ ಕಾಣದೆ ಮೂರು ದಿನಗಳ ತರುವಾಯ ಪಟ್ಟಣಕ್ಕೆ ಹಿಂದಿರುಗಿದರು. 23 ಆಗ ಇವರಿಬ್ಬರು ಬೆಟ್ಟದಿಂದಿಳಿದು ನದಿಯನ್ನು ದಾಟಿ ಯೆಹೋಶುವನ ಬಳಿಗೆ ಹೋಗಿ ತಾವು ತಿಳಿದುಕೊಂಡ ಎಲ್ಲವನ್ನು ತಿಳಿಸಿದರು. ಅವರು ಯೆಹೋಶುವನಿಗೆ, 24 “ಯೆಹೋವನು ನಿಜವಾಗಿಯೂ ಆ ದೇಶವನ್ನೆಲ್ಲಾ ನಮಗೆ ದಯಪಾಲಿಸಿದ್ದಾನೆ. ಆ ದೇಶದ ಎಲ್ಲ ಜನರು ನಮ್ಮಿಂದ ಭಯಗೊಂಡಿದ್ದಾರೆ” ಎಂದು ತಿಳಿಸಿದರು.
ಜೋರ್ಡನ್ ನದಿಯಲ್ಲಿ ಅದ್ಭುತಕಾರ್ಯ
3 ಮರುದಿನ, ಬೆಳಗಿನ ಜಾವದಲ್ಲಿ ಯೆಹೋಶುವನು ಮತ್ತು ಎಲ್ಲಾ ಇಸ್ರೇಲರು ಎದ್ದು ಆಕಾಶಿಯದಿಂದ ಹೊರಟು ಜೋರ್ಡನ್ ನದಿಯವರೆಗೆ ಬಂದರು. ಅವರು ಜೋರ್ಡನ್ ನದಿಯನ್ನು ದಾಟುವ ಮೊದಲು ಅಲ್ಲಿ ಪಾಳೆಯ ಮಾಡಿಕೊಂಡರು. 2 ಮೂರು ದಿನಗಳ ತರುವಾಯ ಜನನಾಯಕರು ಪಾಳೆಯದ ಎಲ್ಲಾ ಕಡೆಗೂ ಹೋಗಿ ಜನರಿಗೆ, 3 “ಯಾಜಕರು ಮತ್ತು ಲೇವಿಯರು ನಿಮ್ಮ ದೇವರಾದ ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗುವುದನ್ನು ನೀವು ಕಾಣುವಾಗ ಅವರನ್ನು ಹಿಂಬಾಲಿಸಿರಿ. 4 ನಿಮಗೂ ಒಡಂಬಡಿಕೆಯ ಪೆಟ್ಟಿಗೆಗೂ ಮೂರು ಸಾವಿರ ಅಡಿ ಅಂತರವಿರಲಿ. ಅದರ ಸಮೀಪ ನೀವು ಹೋಗಕೂಡದು. ಈ ದಾರಿಯಲ್ಲಿ ನೀವು ಹಿಂದೆಂದೂ ಪ್ರಯಾಣ ಮಾಡಿಲ್ಲ. ಆದರೆ ನೀವು ಅವರನ್ನು ಹಿಂಬಾಲಿಸಿದರೆ ಎಲ್ಲಿಗೆ ಹೋಗಬೇಕೆಂದು ನಿಮಗೆ ತಿಳಿಯುತ್ತದೆ” ಎಂದು ಸಾರಿದರು.
5 “ನಿಮ್ಮನ್ನು ನೀವು ಶುದ್ಧೀಕರಿಸಿಕೊಳ್ಳಿರಿ. ನಾಳೆ ನಿಮ್ಮ ದೇವರಾದ ಯೆಹೋವನು ನಿಮ್ಮ ಮಧ್ಯದಲ್ಲಿ ಅದ್ಭುತಗಳನ್ನು ಮಾಡುತ್ತಾನೆ” ಎಂದು ಯೆಹೋಶುವನು ಜನರಿಗೆ ತಿಳಿಸಿದನು.
6 ಬಳಿಕ ಯೆಹೋಶುವನು ಯಾಜಕರಿಗೆ, “ಒಡಂಬಡಿಕೆಯ ಪೆಟ್ಟಿಗೆಯನ್ನು ಹೊತ್ತುಕೊಂಡು ಜನಗಳ ಮುಂದೆ ನದಿಯ ಕಡೆಗೆ ನಡೆಯಿರಿ” ಎಂದನು. ಯಾಜಕರು ಪೆಟ್ಟಿಗೆಯನ್ನು ಹೊತ್ತುಕೊಂಡು ಜನರ ಮುಂದೆ ನಡೆದರು.
7 ಆಗ ಯೆಹೋವನು ಯೆಹೋಶುವನಿಗೆ, “ನಾನು ನಿನ್ನನ್ನು ಇಂದಿನಿಂದ ಎಲ್ಲಾ ಇಸ್ರೇಲರ ಮುಂದೆ ಘನವಂತನನ್ನಾಗಿ ಮಾಡುವೆನು. ನಾನು ಮುಂಚೆ ಮೋಶೆಯ ಸಂಗಡ ಇದ್ದಂತೆಯೇ ನಿನ್ನ ಸಂಗಡವೂ ಇದ್ದೇನೆಂಬುದು ಆಗ ಜನರಿಗೆ ತಿಳಿಯುತ್ತದೆ. 8 ಒಡಂಬಡಿಕೆಯ ಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗುತ್ತಿರುವ ಯಾಜಕರಿಗೆ, ‘ನೀವು ಜೋರ್ಡನ್ ನದಿಯ ತೀರಕ್ಕೆ ಹೋಗಿ, ನೀರಿನೊಳಗೆ ಕಾಲಿಡದೆ ಅದರ ಅಂಚಿನಲ್ಲೇ ನಿಂತುಕೊಳ್ಳಿರಿ’ ಎಂದು ಹೇಳು” ಅಂದನು.
9 ಆಗ ಯೆಹೋಶುವನು ಇಸ್ರೇಲರಿಗೆ, “ಇಲ್ಲಿ ಬನ್ನಿರಿ; ನಿಮ್ಮ ದೇವರಾದ ಯೆಹೋವನ ಮಾತುಗಳನ್ನು ಕೇಳಿರಿ. 10 ಚೈತನ್ಯಸ್ವರೂಪನಾದ ದೇವರು ನಿಜವಾಗಿಯೂ ನಿಮ್ಮ ಸಂಗಡ ಇದ್ದಾನೆ ಎಂಬುದಕ್ಕೆ ಇಲ್ಲಿ ಒಂದು ಸಾಕ್ಷಿ ಇದೆ. ಆತನು ನಿಜವಾಗಿಯೂ ನಿಮ್ಮ ವೈರಿಗಳನ್ನು ಸೋಲಿಸುತ್ತಾನೆ ಎಂಬುದಕ್ಕೆ ಇಲ್ಲಿ ಸಾಕ್ಷಿ ಇದೆ. ಕಾನಾನ್ಯರು, ಹಿತ್ತಿಯರು, ಹಿವ್ವಿಯರು, ಪೆರಿಜೀಯರು, ಗಿರ್ಗಾಷಿಯರು, ಅಮೋರಿಯರು, ಯೆಬೂಸಿಯರು, ಇವರನ್ನೆಲ್ಲಾ ಆತನು ಸೋಲಿಸುತ್ತಾನೆ. ಆ ದೇಶದಿಂದ ಅವರನ್ನು ಬಲವಂತವಾಗಿ ಹೊರಗಟ್ಟುತ್ತಾನೆ. 11 ಇದೋ ಇಲ್ಲಿದೆ ಸಾಕ್ಷಿ. ನೀವು ಜೋರ್ಡನ್ ನದಿಯನ್ನು ದಾಟುವಾಗ ಸರ್ವಲೋಕದ ಒಡೆಯನಾದ ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯು ನಿಮ್ಮ ಮುಂದೆ ಹೋಗುವುದು. 12 ಈಗ ಇಸ್ರೇಲರ ಕುಲಗಳಿಂದ ಪ್ರತಿಕುಲಕ್ಕೆ ಒಬ್ಬನಂತೆ ಹನ್ನೆರಡು ಮಂದಿಯನ್ನು ಆರಿಸಿಕೊಳ್ಳಿರಿ. 13 ಯಾಜಕರು ಯೆಹೋವನ ಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗುವರು. ಯೆಹೋವನು ಸರ್ವಲೋಕದ ಒಡೆಯನಾಗಿದ್ದಾನೆ. ಅವರು ಆ ಪೆಟ್ಟಿಗೆಯನ್ನು ನಿಮ್ಮ ಮುಂದೆ ಜೋರ್ಡನ್ ನದಿಯಲ್ಲಿ ತೆಗೆದುಕೊಂಡು ಹೋಗುವರು. ಅವರು ನೀರಿನಲ್ಲಿ ಪ್ರವೇಶ ಮಾಡಿದಾಗ ಜೋರ್ಡನ್ ನದಿಯ ನೀರು ಹರಿಯದೆ ನಿಂತುಬಿಡುವುದು. ನೀರು ಮುಂದಕ್ಕೆ ಹರಿಯದೆ ಹರಡಿಕೊಂಡು ಸರೋವರದಂತೆ ತೋರುವುದು” ಎಂದು ತಿಳಿಸಿದನು.
14 ಯಾಜಕರು ಒಡಂಬಡಿಕೆಯ ಪೆಟ್ಟಿಗೆಯನ್ನು ಹೊತ್ತುಕೊಂಡು ನಡೆದರು. ಜನರು ತಾವು ಪಾಳೆಯ ಮಾಡಿಕೊಂಡಿದ್ದ ಸ್ಥಳದಿಂದ ಹೊರಟು ಜೋರ್ಡನ್ ನದಿಯ ಕಡೆಗೆ ಹೋದರು. 15 (ಆಗ ಸುಗ್ಗಿಕಾಲವಾದ್ದರಿಂದ ಜೋರ್ಡನ್ ನದಿಯು ದಡಮೀರಿ ಹರಿಯುತ್ತಿತ್ತು.) ಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗುತ್ತಿದ್ದ ಯಾಜಕರು ನದಿಯ ತೀರಕ್ಕೆ ಬಂದರು. ಅವರು ನೀರಿನಲ್ಲಿ ಹೆಜ್ಜೆ ಇಟ್ಟರು. 16 ಆಗ ನೀರು ಹರಿಯದೆ ನಿಂತುಬಿಟ್ಟಿತು. ಆ ಸ್ಥಳದ ಹಿಂಭಾಗದಲ್ಲಿ ಒಂದು ಸರೋವರದಂತೆ ನೀರು ತುಂಬಿಕೊಂಡಿತು. ನೀರು ಬಹುದೂರದಲ್ಲಿರುವ ಆದಾಮ್ ಊರು ಅಂದರೆ ಜಾರೆತಾನಿನ ಹತ್ತಿರ ಇರುವ ಒಂದು ಊರಿನವರೆಗೂ ರಾಶಿರಾಶಿಯಾಗಿ ನಿಂತುಕೊಂಡಿತು. ಜನರು ಜೆರಿಕೊವಿನ ಹತ್ತಿರ ನದಿಯನ್ನು ದಾಟಿದರು. 17 ಆ ಸ್ಥಳದಲ್ಲಿ ನೆಲವು ಒಣಗಿತ್ತು; ಯಾಜಕರು ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯನ್ನು ನದಿಯ ಮಧ್ಯದವರೆಗೆ ತೆಗೆದುಕೊಂಡು ಹೋಗಿ ಅಲ್ಲಿ ನಿಂತುಕೊಂಡರು. ಯಾಜಕರು ಅಲ್ಲಿಯೇ ನಿಂತುಕೊಂಡಿರಲಾಗಿ ಎಲ್ಲಾ ಇಸ್ರೇಲರು ಒಣನೆಲದ ಮೇಲೆ ನಡೆದುಕೊಂಡು ಹೋಗಿ ಜೋರ್ಡನ್ ನದಿಯನ್ನು ದಾಟಿದರು.
ಯೇಸುವಿನ ಪುನರುತ್ಥಾನ
(ಮತ್ತಾಯ 28:1-8; ಲೂಕ 24:1-12; ಯೋಹಾನ 20:1-10)
16 ಸಬ್ಬತ್ ದಿನದ ಮರುದಿನ, ಮಗ್ದಲದ ಮರಿಯಳು, ಸಲೋಮೆ ಮತ್ತು ಯಾಕೋಬನ ತಾಯಿಯಾದ ಮರಿಯಳು ಕೆಲವು ಸುಗಂಧದ್ರವ್ಯಗಳನ್ನು ಯೇಸುವಿನ ದೇಹಕ್ಕೆ ಹಚ್ಚಬೇಕೆಂದಿದ್ದರು. 2 ವಾರದ ಮೊದಲನೆಯ ದಿನ, ಮುಂಜಾನೆಯಲ್ಲಿಯೇ, ಅವರು ಸಮಾಧಿಗೆ ಹೊರಟರು. ಆಗ ಸೂರ್ಯೋದಯವಾಗಿದ್ದರೂ ಇನ್ನೂ ನಸುಕಾಗಿತ್ತು. 3 ಆ ಸ್ತ್ರೀಯರು ಒಬ್ಬರಿಗೊಬ್ಬರು, “ದೊಡ್ಡ ಬಂಡೆಯಿಂದ ಸಮಾಧಿಯ ಬಾಗಿಲನ್ನು ಮುಚ್ಚಲಾಗಿದೆ. ಈ ಬಂಡೆಯನ್ನು ನಮಗಾಗಿ ಯಾರು ಉರುಳಿಸುತ್ತಾರೆ?” ಎಂದುಕೊಂಡರು.
4 ಆ ಸ್ತ್ರೀಯರು ಸಮಾಧಿಯನ್ನು ತಲುಪಿದಾಗ ಆ ಬಂಡೆ ಉರುಳಿರುವುದನ್ನು ಕಂಡರು. ಆ ಬಂಡೆಯು ಬಹಳ ದೊಡ್ಡದಾಗಿತ್ತು ಆದರೆ ಅದನ್ನು ಬಾಗಿಲಿನಿಂದ ದೂರಕ್ಕೆ ಉರುಳಿಸಲಾಗಿತ್ತು. 5 ಆ ಸ್ತ್ರೀಯರು ಸಮಾಧಿಯೊಳಗೆ ಹೋದಾಗ ಬಿಳುಪಾದ ನಿಲುವಂಗಿ ಧರಿಸಿದ್ದ ಒಬ್ಬ ಯುವಕನು ಸಮಾಧಿಯ ಬಲಗಡೆ ಕುಳಿತಿರುವುದನ್ನು ಕಂಡು ಭಯಗೊಂಡರು.
6 ಆದರೆ ಅವನು, “ಭಯಪಡಬೇಡಿ! ಶಿಲುಬೆಗೇರಿಸಲ್ಪಟ್ಟ ನಜರೇತಿನ ಯೇಸುವನ್ನು ನೀವು ಹುಡುಕುತ್ತಿದ್ದೀರಲ್ಲವೇ? ಆತನು ಜೀವಂತನಾಗಿ ಎದ್ದಿದ್ದಾನೆ. ಆತನು ಇಲ್ಲಿಲ್ಲ. ನೋಡಿರಿ, ಆತನ ದೇಹವನ್ನು ಇಟ್ಟಿದ್ದ ಸ್ಥಳ ಇದೇ. 7 ಈಗ ಹೋಗಿ ಆತನ ಶಿಷ್ಯರಿಗೆ ತಿಳಿಸಿರಿ. ಪೇತ್ರನಿಗಂತೂ ಖಂಡಿತವಾಗಿ ತಿಳಿಸಿರಿ. ನೀವು ಅವರಿಗೆ, ‘ಯೇಸು ಗಲಿಲಾಯಕ್ಕೆ ಹೋಗುತ್ತಿದ್ದಾನೆ. ಆತನು ನಿಮಗಿಂತ ಮುಂಚೆ ಅಲ್ಲಿರುತ್ತಾನೆ. ಆತನು ನಿಮಗೆ ಮೊದಲೇ ಹೇಳಿದಂತೆ ನೀವು ಆತನನ್ನು ಅಲ್ಲಿ ನೋಡುವಿರಿ’ ಎಂದು ಹೇಳಿರಿ” ಎಂದನು.
8 ಆ ಸ್ತ್ರೀಯರು ಬಹಳ ಭಯದಿಂದ ಗಲಿಬಿಲಿಗೊಂಡು, ಸಮಾಧಿಯನ್ನು ಬಿಟ್ಟು ಓಡಿಹೋದರು. ಅವರು ಬಹಳ ಭಯಗೊಂಡಿದ್ದರಿಂದ ಈ ವಿಷಯವನ್ನು ಯಾರಿಗೂ ಹೇಳಲಿಲ್ಲ.[a]
ಶಿಷ್ಯರಿಗೆ ಯೇಸುವಿನ ದರ್ಶನ
(ಮತ್ತಾಯ 28:9-10; ಯೋಹಾನ 20:11-18; ಲೂಕ 24:13-35)
9 ವಾರದ ಮೊದಲನೆಯ ದಿನದ ಬೆಳಿಗ್ಗೆ ಯೇಸು ಜೀವಂತನಾಗಿ ಎದ್ದನು. ಯೇಸು ಮೊಟ್ಟಮೊದಲು ಮಗ್ದಲದ ಮರಿಯಳಿಗೆ ಕಾಣಿಸಿಕೊಂಡನು. ಹಿಂದೊಮ್ಮೆ ಯೇಸು ಮರಿಯಳಿಂದ ಏಳು ದೆವ್ವಗಳನ್ನು ಬಿಡಿಸಿದ್ದನು. 10 ಮರಿಯಳು ಹೋಗಿ ಆತನ ಶಿಷ್ಯರಿಗೆ ತಿಳಿಸಿದಳು. ಅವರಾದರೋ ಇನ್ನೂ ಶೋಕಭರಿತರಾಗಿ ಅಳುತ್ತಿದ್ದರು. 11 ಯೇಸು ಬದುಕಿರುವುದಾಗಿಯೂ ತಾನು ಆತನನ್ನು ನೋಡಿದ್ದಾಗಿಯೂ ಮರಿಯಳು ತಿಳಿಸಿದಾಗ ಶಿಷ್ಯರು ಅವಳನ್ನು ನಂಬಲಿಲ್ಲ.
12 ನಂತರ, ಇಬ್ಬರು ಶಿಷ್ಯರು ಹಳ್ಳಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ, ಯೇಸು ಅವರಿಗೆ ಬೇರೊಂದು ರೂಪದಲ್ಲಿ ಕಾಣಿಸಿಕೊಂಡನು. 13 ಈ ಶಿಷ್ಯರು ಇತರ ಶಿಷ್ಯರ ಬಳಿಗೆ ಹಿಂತಿರುಗಿ, ಈ ವಿಷಯವನ್ನು ತಿಳಿಸಿದರು. ಆದರೆ ಆ ಶಿಷ್ಯರು ಅವರನ್ನು ನಂಬಲಿಲ್ಲ.
ಯೇಸು ಮತ್ತು ಅಪೊಸ್ತಲರ ಸಂಭಾಷಣೆ
(ಮತ್ತಾಯ 28:16-20; ಲೂಕ 24:36-49; ಯೋಹಾನ 20:19-23; ಅ.ಕಾ. 1:6-8)
14 ನಂತರ ಹನ್ನೊಂದು ಜನ ಶಿಷ್ಯರು ಊಟ ಮಾಡುತ್ತಿರುವಾಗ, ಯೇಸು ಅವರಿಗೆ ಕಾಣಿಸಿಕೊಂಡನು. ಶಿಷ್ಯರಲ್ಲಿ ಕೊಂಚ ನಂಬಿಕೆ ಇದ್ದುದರಿಂದ ಯೇಸು ಅವರನ್ನು ಖಂಡಿಸಿದನು. ಏಕೆಂದರೆ, ಯೇಸು ಸಾವಿನಿಂದ ಎದ್ದುಬಂದಿದ್ದಾನೆಂದು ದೃಢವಾಗಿ ಹೇಳಿದ ಮಾತನ್ನು ಅವರು ನಂಬಲಿಲ್ಲ.
15 ಯೇಸು ಶಿಷ್ಯರಿಗೆ, “ಪ್ರಪಂಚದ ಎಲ್ಲಾ ಕಡೆಗೆ ಹೋಗಿರಿ. ಪ್ರತಿಯೊಬ್ಬನಿಗೂ ಸುವಾರ್ತೆಯನ್ನು ಹೇಳಿರಿ. 16 ನಂಬಿಕೆಯಿಟ್ಟು, ದೀಕ್ಷಾಸ್ನಾನ ಮಾಡಿಸಿಕೊಳ್ಳುವವನು ರಕ್ಷಣೆಹೊಂದುವನು. ಆದರೆ ನಂಬದವನು ಅಪರಾಧಿ ಎಂಬ ನಿರ್ಣಯ ಹೊಂದುವನು. 17 ನಂಬುವವರಾದರೋ ಅದ್ಭುತಕಾರ್ಯಗಳನ್ನು ಮಾಡುವರು. ಅವರು ನನ್ನ ಹೆಸರಿನ ಮೂಲಕ ದೆವ್ವಗಳನ್ನು ಬಿಡಿಸುವರು. ತಾವೆಂದೂ ಕಲಿತಿಲ್ಲದ ಭಾಷೆಗಳಲ್ಲಿ ಮಾತನಾಡುವರು. 18 ಅವರು ಹಾವುಗಳನ್ನು ಹಿಡಿದುಕೊಂಡರೂ ಅವು ಅವರನ್ನು ಕಚ್ಚುವುದಿಲ್ಲ. ವಿಷಕುಡಿದರೂ ಅವರಿಗೆ ಯಾವ ತೊಂದರೆಯೂ ಆಗುವುದಿಲ್ಲ. ಅವರು ಮುಟ್ಟಿದರೆ ರೋಗಿಗಳು ಗುಣಹೊಂದುವರು” ಎಂದು ಹೇಳಿದನು.
ಯೇಸುವಿನ ಪರಲೋಕಾರೋಹಣ
(ಲೂಕ 24:50-53; ಅ.ಕಾ. 1:9-11)
19 ಪ್ರಭುವಾದ ಯೇಸು ಈ ಸಂಗತಿಗಳನ್ನು ಶಿಷ್ಯರಿಗೆ ಹೇಳಿದ ಮೇಲೆ, ಸ್ವರ್ಗದೊಳಗೆ ಒಯ್ಯಲ್ಪಟ್ಟು ದೇವರ ಬಲಗಡೆಯಲ್ಲಿ ಕುಳಿತುಕೊಂಡನು. 20 ಶಿಷ್ಯರು ಪ್ರಪಂಚದ ಎಲ್ಲಾ ಕಡೆಗೆ ಹೋಗಿ, ಜನರಿಗೆ ಸುವಾರ್ತೆಯನ್ನು ಸಾರಿದರು. ಪ್ರಭುವು ಅವರೊಂದಿಗೆ ಕಾರ್ಯಸಾಧಿಸುತ್ತಾ, ಸೂಚಕಕಾರ್ಯಗಳಿಂದ ಸುವಾರ್ತೆಯ ವಾಕ್ಯವನ್ನು ಬಲಪಡಿಸಿದನು.
Kannada Holy Bible: Easy-to-Read Version. All rights reserved. © 1997 Bible League International