Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಧರ್ಮೋಪದೇಶಕಾಂಡ 22-24

ಇತರ ಕಟ್ಟಳೆಗಳು

22 “ನಿಮ್ಮ ನೆರೆಯವನ ಕಟ್ಟಿರುವ ದನವಾಗಲಿ ಕುರಿಯಾಗಲಿ ಹಗ್ಗ ಬಿಚ್ಚಿಕೊಂಡಿರುವುದನ್ನು ನೀವು ಕಂಡರೆ ಅದನ್ನು ನಿರ್ಲಕ್ಷಿಸದೆ, ಕೂಡಲೇ ಅದನ್ನು ಅದರ ಧಣಿಯ ಬಳಿಗೆ ಅಟ್ಟಿಕೊಂಡು ಹೋಗಬೇಕು. ಆ ಪಶುವಿನ ಧಣಿ ಯಾರೆಂದು ನಿಮಗೆ ಗೊತ್ತಾಗದಿದ್ದರೆ ಅಥವಾ ಅವನು ನಿಮಗೆ ತುಂಬಾ ದೂರದಲ್ಲಿದ್ದರೆ ಅದರ ಧಣಿಯು ಅದನ್ನು ಹುಡುಕಿಕೊಂಡು ಬರುವ ತನಕ ನೀವು ಪಶುವನ್ನು ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳಬೇಕು. ಅವನು ಬಂದಾಗ ಅದನ್ನು ಹಿಂದಿರುಗಿಸಬೇಕು. ನಿಮ್ಮ ನೆರೆಯವನ ಕತ್ತೆಯ ವಿಷಯದಲ್ಲಿಯೂ ಬಟ್ಟೆಯ ವಿಷಯದಲ್ಲಿಯೂ ಇದೇ ನಿಯಮ ಅನ್ವಯಿಸುತ್ತದೆ.

“ನಿಮ್ಮ ನೆರೆಯವನ ಕತ್ತೆಯಾಗಲಿ ಹಸುವಾಗಲಿ ದಾರಿಯಲ್ಲಿ ಬಿದ್ದಿರುವುದನ್ನು ನೋಡಿದರೂ ನೋಡದಂತೆ ಹೋಗದೆ ಅದಕ್ಕೆ ಏಳಲು ಸಹಾಯ ಮಾಡಬೇಕು.

“ಹೆಂಗಸು ಗಂಡಸರ ಬಟ್ಟೆ ಧರಿಸಿಕೊಳ್ಳಬಾರದು, ಗಂಡಸು ಹೆಂಗಸರ ಬಟ್ಟೆ ಧರಿಸಬಾರದು. ಇದು ಯೆಹೋವನ ದೃಷ್ಟಿಯಲ್ಲಿ ಅಸಹ್ಯ.

“ನೀವು ದಾರಿಯಲ್ಲಿ ಹೋಗುತ್ತಿರುವಾಗ ನೆಲದ ಮೇಲಾಗಲಿ ಮರದಲ್ಲಿಯಾಗಲಿ ಗೂಡು ಕಟ್ಟಿಕೊಂಡು ಅದರೊಳಗೆ ತಾಯಿ ಪಕ್ಷಿಯು ತನ್ನ ಮೊಟ್ಟೆಗಳೊಂದಿಗೆ ಇಲ್ಲವೆ ಮರಿಗಳೊಂದಿಗೆ ಇರುವುದನ್ನು ಕಂಡಾಗ ನೀವು ಮರಿಗಳೊಂದಿಗೆ ತಾಯಿಪಕ್ಷಿಯನ್ನು ಹಿಡಿದು ಕೊಂಡೊಯ್ಯಬಾರದು. ನೀವು ತಾಯಿಪಕ್ಷಿಯನ್ನು ಬಿಟ್ಟು ಮರಿಪಕ್ಷಿಗಳನ್ನು ಕೊಂಡೊಯ್ಯಬಹುದು. ಈ ನಿಯಮಗಳನ್ನು ನೀವು ಪಾಲಿಸಿದರೆ ನೀವು ಬಹುಕಾಲ ಬದುಕುವಿರಿ ಮತ್ತು ನಿಮಗೆ ಶುಭವಾಗುವುದು.

“ನೀವು ಮನೆ ಕಟ್ಟುವಾಗ ಅದರ ಮೇಲ್ಛಾವಣಿಯ ಸುತ್ತಲೂ ಅರ್ಧ ಗೋಡೆಯನ್ನು ಕಟ್ಟಬೇಕು. ಹೀಗೆ ಮಾಡದೆಹೋದರೆ ಯಾರಾದರೂ ಮೇಲ್ಛಾವಣಿಯಿಂದ ಕೆಳಗೆ ಬಿದ್ದು ಸತ್ತಲ್ಲಿ ಅವನ ಸಾವಿಗೆ ನೀವು ಕಾರಣರಾಗುವಿರಿ.

“ನೀವು ಧಾನ್ಯವನ್ನು ಮತ್ತು ದ್ರಾಕ್ಷಾಲತೆಗಳನ್ನು ಒಂದೇ ಹೊಲದಲ್ಲಿ ಬೆಳೆಸಬಾರದು. ಯಾಕೆಂದರೆ ಅವೆರಡೂ ಚೆನ್ನಾಗಿ ಬೆಳೆಯದೆ ಫಲ ಕೊಡದೆ ಹೋಗುವುದು.

10 “ಕತ್ತೆಯನ್ನೂ ಹಸುವನ್ನೂ ಒಟ್ಟಿಗೆ ನೊಗಕ್ಕೆ ಕಟ್ಟಿ ನೆಲವನ್ನು ಉಳಬಾರದು.

11 “ನಾರುಮಡಿಯನ್ನೂ ಉಣ್ಣೆಯನ್ನೂ ಮಿಶ್ರವಾಗಿ ನೇಯ್ದ ಬಟ್ಟೆಯನ್ನು ತೊಡಬಾರದು.

12 “ನೂಲಿನಿಂದ ಮಾಡಿದ ಗೊಂಡೆಗಳನ್ನು ನಿಮ್ಮ ನಿಲುವಂಗಿಗಳ ನಾಲ್ಕು ಮೂಲೆಗಳಿಗೆ ಕಟ್ಟಬೇಕು.

ಮದುವೆಗೆ ಸಂಬಂಧಿಸಿದ ಕಟ್ಟಳೆಗಳು

13 “ಒಬ್ಬ ಪುರುಷನು ಒಬ್ಬ ಸ್ತ್ರೀಯನ್ನು ಮದುವೆಯಾಗಿ ಆಕೆಯೊಂದಿಗೆ ಲೈಂಗಿಕ ಸಂಬಂಧವನ್ನಿಟ್ಟುಕೊಂಡಿದ್ದು ಆಮೇಲೆ ಆಕೆಯನ್ನು ಇಷ್ಟಪಡದೆ, 14 ‘ನಾನು ಈಕೆಯನ್ನು ಮದುವೆಯಾದಾಗ ಈಕೆಯು ಕನ್ಯೆಯಲ್ಲವೆಂದು ನನಗೆ ತಿಳಿದುಬಂತು’ ಎಂದು ಜನರಿಗೆ ಸುಳ್ಳು ಹೇಳಿ ಆಕೆಯ ಮೇಲೆ ಸುಳ್ಳು ಅಪರಾಧ ಹೊರಿಸಿದರೆ, 15 ಹುಡುಗಿಯ ತಂದೆತಾಯಿಗಳು ಊರಿನ ಹಿರಿಯರ ಮುಂದೆ ಆಕೆಯು ಕನ್ನಿಕೆಯಾಗಿದ್ದಳೆಂದು ರುಜುವಾತುಪಡಿಸಬೇಕು. 16 ಹುಡುಗಿಯ ತಂದೆಯು ಹಿರಿಯರಿಗೆ, ‘ನನ್ನ ಮಗಳನ್ನು ಇವನಿಗೆ ಹೆಂಡತಿಯನ್ನಾಗಿ ಕೊಟ್ಟೆನು. ಆದರೆ ಈಗ ಅವನು ಆಕೆಯನ್ನು ದ್ವೇಷಿಸಿ ಬೇಡವೆನ್ನುತ್ತಾನೆ. 17 ಅವನು ನನ್ನ ಮಗಳ ವಿಷಯದಲ್ಲಿ ಸುಳ್ಳು ಹೇಳುತ್ತಿದ್ದಾನೆ. “ಆಕೆಯಲ್ಲಿ ಕನ್ನಿಕೆಯ ಗುರುತು ಇರಲಿಲ್ಲ” ಎಂದು ಹೇಳುತ್ತಿದ್ದಾನೆ, ಆದರೆ ನನ್ನ ಮಗಳು ಮದುವೆಗಿಂತ ಮುಂಚೆ ಪುರುಷ ಸಂಪರ್ಕ ಮಾಡಲಿಲ್ಲವೆಂಬುದಕ್ಕೆ ಇದೇ ಗುರುತು’ ಎಂದು ಹೇಳಿ ರಕ್ತದ ಕಲೆಗಳಿರುವ ಬಟ್ಟೆಯನ್ನು ತೋರಿಸಬೇಕು. 18 ಆಗ ಊರಿನ ಹಿರಿಯರು ಆ ಮನುಷ್ಯನಿಗೆ ಶಿಕ್ಷೆ ವಿಧಿಸಬೇಕು. 19 ಹಿರಿಯರು ಅವನಿಂದ ನಲವತ್ತು ತೊಲೆ ಬೆಳ್ಳಿಯನ್ನು ಹುಡುಗಿಯ ತಂದೆಗೆ ಕೊಡಿಸಬೇಕು. ಯಾಕೆಂದರೆ ಒಬ್ಬ ಇಸ್ರೇಲಿನ ಹುಡುಗಿಗೆ ಅವನು ಅವಮಾನಪಡಿಸಿದ ಕಾರಣ ಆ ಹುಡುಗಿಯು ಅವನ ಹೆಂಡತಿಯಾಗಿಯೇ ಬಾಳಬೇಕು. ಅವನು ಆಕೆಯನ್ನು ಎಂದಿಗೂ ವಿವಾಹವಿಚ್ಛೇದನೆ ಮಾಡಬಾರದು.

20 “ಆದರೆ ಹುಡುಗಿಯ ಗಂಡನು ಆಕೆಯ ಬಗ್ಗೆ ಹೇಳಿದ್ದು ಸತ್ಯವಾಗಿದ್ದರೆ, ಹುಡುಗಿಯ ತಂದೆತಾಯಂದಿರ ಬಳಿ ಆಕೆಯು ಪುರುಷ ಸಂಪರ್ಕವಿಲ್ಲದವಳಾಗಿದ್ದಳು ಎಂಬುದಕ್ಕೆ ಪುರಾವೆ ಇಲ್ಲದಿದ್ದಲ್ಲಿ 21 ಊರಹಿರಿಯರು ಆ ಹುಡುಗಿಯನ್ನು ಆಕೆಯ ತಂದೆಯ ಮನೆಬಾಗಿಲಿಗೆ ತರಬೇಕು. ಅಲ್ಲಿ ಊರಜನರು ಆಕೆಯನ್ನು ಕಲ್ಲೆಸೆದು ಸಾಯಿಸಬೇಕು. ಯಾಕೆಂದರೆ ಆಕೆಯು ಇಸ್ರೇಲಿನಲ್ಲಿ ನಾಚಿಕೆಕರವಾದ ಕೃತ್ಯವನ್ನು ನಡೆಸಿದ್ದಾಳೆ; ತನ್ನ ತಂದೆಯ ಮನೆಯಲ್ಲಿದ್ದುಕೊಂಡು ವೇಶ್ಯಾವೃತ್ತಿ ನಡಿಸಿದ್ದಾಳೆ. ಅಂಥಾ ಪಾಪವನ್ನು ನೀವು ನಿಮ್ಮ ಮಧ್ಯದಿಂದ ತೆಗೆದುಹಾಕಬೇಕು.

ಲೈಂಗಿಕ ಪಾಪಕೃತ್ಯಗಳು

22 “ಒಬ್ಬ ಮನುಷ್ಯನು ಇನ್ನೊಬ್ಬ ಮನುಷ್ಯನ ಹೆಂಡತಿಯ ಜೊತೆಗೆ ಲೈಂಗಿಕ ಸಂಬಂಧವನ್ನಿಟ್ಟಿದ್ದರೆ ಅವರಿಬ್ಬರನ್ನೂ ಸಾಯಿಸಬೇಕು. ಆ ಕೆಡುಕನ್ನು ನೀವು ಇಸ್ರೇಲಿನಿಂದ ತೆಗೆದುಹಾಕಬೇಕು.

23 “ಒಬ್ಬನು ಇನ್ನೊಬ್ಬನಿಗೆ ನಿಶ್ಚಿತಾರ್ಥವಾದ ಕನ್ನಿಕೆಯೊಬ್ಬಳನ್ನು ಸಂಧಿಸಿ ಅವಳನ್ನು ಕೂಡಿದರೆ, 24 ನಗರದ ಬಾಗಿಲಿನ ಬಳಿಯಿರುವ ಸಾರ್ವಜನಿಕ ಸ್ಥಳಕ್ಕೆ ನೀವು ಅವರಿಬ್ಬರನ್ನು ಕರೆದುಕೊಂಡು ಬಂದು ಅವರಿಬ್ಬರನ್ನೂ ಕಲ್ಲೆಸೆದು ಕೊಲ್ಲಬೇಕು. ನೀವು ಆ ಪುರುಷನನ್ನು ಕೊಲ್ಲಬೇಕು. ಏಕೆಂದರೆ ಅವನು ಮತ್ತೊಬ್ಬನ ಹೆಂಡತಿಯನ್ನು ಲೈಂಗಿಕವಾಗಿ ಹಿಂಸಿಸಿದನು. ನೀವು ಆ ಸ್ತ್ರೀಯನ್ನು ಕೊಲ್ಲಬೇಕು; ಯಾಕೆಂದರೆ ಆಕೆಯು ನಗರದಲ್ಲಿದ್ದರೂ ಸಹಾಯಕ್ಕಾಗಿ ಕೂಗಿಕೊಳ್ಳಲಿಲ್ಲ. ಆ ಕೆಡುಕನ್ನು ನೀವು ನಿಮ್ಮ ಜನರಿಂದ ತೆಗೆದುಹಾಕಬೇಕು.

25 “ಆದರೆ ಒಬ್ಬನು ಮತ್ತೊಬ್ಬನಿಗೆ ನಿಶ್ಚಿತಾರ್ಥವಾಗಿರುವ ಕನ್ನಿಕೆಯೊಬ್ಬಳನ್ನು ಹೊಲದಲ್ಲಿ ಕಂಡು ಆಕೆಯನ್ನು ಬಲಾತ್ಕಾರವಾಗಿ ಕೂಡಿದರೆ, ಅವನನ್ನು ಮಾತ್ರ ಕೊಲ್ಲಬೇಕು. 26 ಆ ಹುಡುಗಿಗೆ ನೀವು ಏನನ್ನೂ ಮಾಡಬಾರದು. ಆಕೆ ಶಿಕ್ಷೆಗೆ ಅರ್ಹಳಾಗುವಂಥ ಕಾರ್ಯವೇನೂ ಮಾಡಲಿಲ್ಲ. ಒಬ್ಬನು ತನ್ನ ಸ್ನೇಹಿತನ ಮೇಲೆ ಆಕ್ರಮಣ ಮಾಡಿ ಕೊಂದಂತೆಯಷ್ಟೇ. 27 ಆ ಮನುಷ್ಯನು ನಿಶ್ಚಿತಾರ್ಥವಾದ ಹುಡುಗಿಯನ್ನು ಹೊಲದಲ್ಲಿ ಒಬ್ಬಳೇ ಇರುವುದನ್ನು ಕಂಡು ಆಕೆಯ ಮೇಲೆ ಬಿದ್ದನು. ಆಕೆಯು ಸಹಾಯಕ್ಕಾಗಿ ಕೂಗಿಕೊಂಡಾಗ ಸಹಾಯ ಮಾಡಲು ಹತ್ತಿರದಲ್ಲಿ ಯಾರೂ ಇರಲಿಲ್ಲ. ಆದ್ದರಿಂದ ಆಕೆಯು ಶಿಕ್ಷಿಸಲ್ಪಡಬಾರದು.

28 “ಒಬ್ಬನು ನಿಶ್ಚಿತಾರ್ಥವಾಗಿಲ್ಲದ ಒಬ್ಬ ಕನ್ನಿಕೆಯನ್ನು ಕಂಡು ಆಕೆಯನ್ನು ಬಲಾತ್ಕಾರದಿಂದ ಕೂಡುವುದನ್ನು ಬೇರೆಯವರು ಕಂಡರೆ 29 ಅವನು ಹುಡುಗಿಯ ತಂದೆಗೆ ಇಪ್ಪತ್ತು ತೊಲೆ ಬೆಳ್ಳಿಯನ್ನು ಕೊಟ್ಟು ಆಕೆಯನ್ನು ತನ್ನ ಹೆಂಡತಿಯನ್ನಾಗಿ ತೆಗೆದುಕೊಳ್ಳಬೇಕು. ಅವನು ಆಕೆಯನ್ನು ಮದುವೆಗಿಂತ ಮುಂಚೆ ಕೂಡಿದ್ದರಿಂದ ಅವನು ಆಕೆಯನ್ನು ಎಂದಿಗೂ ಬಿಟ್ಟುಬಿಡಬಾರದು.

30 “ಒಬ್ಬನು ತನ್ನ ತಂದೆಯ ಹೆಂಡತಿಯನ್ನು ಕೂಡಿ ತಂದೆಗೆ ಅವಮಾನ ಮಾಡಬಾರದು.”

ಇಸ್ರೇಲರ ದೇವಾರಾಧನೆಗೆ ಯೋಗ್ಯರಾದವರು

23 “ಜನನಾಂಗದ ಬೀಜವನ್ನು ಹೊಡಿಸಿಕೊಂಡವನಾಗಲಿ ಜನನಾಂಗದ ಒಂದು ಭಾಗವನ್ನು ಕತ್ತರಿಸಿಕೊಂಡವನಾಗಲಿ ಇಸ್ರೇಲ್ ಜನರೊಂದಿಗೆ ದೇವಾರಾಧನೆ ಮಾಡಬಾರದು. ಒಬ್ಬನ ತಂದೆತಾಯಿಗಳು ಕಾನೂನು ಬದ್ಧವಾಗಿ ಮದುವೆಯಾಗಿಲ್ಲದಿದ್ದರೆ, ಅವನು ದೇವಾರಾಧನೆಯಲ್ಲಿ ಇಸ್ರೇಲರೊಡನೆ ಸೇರಕೂಡದು. ಅವನ ಸಂತತಿಯವರು ಹತ್ತನೆಯ ತಲೆಮಾರಿನ ತನಕ ಇಸ್ರೇಲ್ ಸಮೂಹದೊಂದಿಗೆ ಆರಾಧನೆ ಮಾಡಬಾರದು.

“ಅಮ್ಮೋನಿಯರಾಗಲಿ ಮೋವಾಬ್ಯರಾಗಲಿ ಇಸ್ರೇಲರೊಂದಿಗೆ ಸೇರಿ ದೇವಾರಾಧನೆ ಮಾಡಕೂಡದು. ಅವರ ಸಂತತಿಯ ಹತ್ತನೆಯ ತಲೆಮಾರಿನವರೆಗೂ ಆರಾಧನೆ ಮಾಡಬಾರದು. ಯಾಕೆಂದರೆ ಇಸ್ರೇಲರು ಈಜಿಪ್ಟಿನಿಂದ ಹೊರಟುಬಂದು ಪ್ರಯಾಣದಲ್ಲಿದ್ದಾಗ ಅವರಿಗೆ ರೊಟ್ಟಿಯನ್ನಾಗಲಿ ನೀರನ್ನಾಗಲಿ ಕೊಡಲು ಅವರು ನಿರಾಕರಿಸಿದ್ದರು. ಅವರು ಮೆಸಪೊಟೋಮಿಯದಿಂದ ಬಿಳಾಮನನ್ನು ಕರೆಸಿ ಇಸ್ರೇಲರನ್ನು ಶಪಿಸುವಂತೆ ಬಲವಂತಪಡಿಸಿದರು. ಆದರೆ ಯೆಹೋವನು ನಿಮ್ಮನ್ನು ಪ್ರೀತಿಸುತ್ತಿದ್ದುದರಿಂದ ಆ ಶಾಪವನ್ನು ನಿಮಗೆ ಆಶೀರ್ವಾದವಾಗಿ ಪರಿವರ್ತಿಸಿದನು. ಅಮ್ಮೋನಿಯರೊಂದಿಗಾಗಲಿ ಮೋವಾಬ್ಯರೊಂದಿಗಾಗಲಿ ನೀವು ಸಂಧಾನ ಮಾಡಿಕೊಳ್ಳಲೇಬಾರದು; ನಿಮ್ಮ ಜೀವಮಾನವೆಲ್ಲಾ ಅವರೊಂದಿಗೆ ಸ್ನೇಹತ್ವದಲ್ಲಿರಬಾರದು.

“ಎದೋಮ್ಯರನ್ನು ನೀವು ದ್ವೇಷಿಸಬಾರದು, ಅವರು ನಿಮ್ಮ ಸಂಬಂಧಿಕರಾಗಿದ್ದಾರೆ. ಈಜಿಪ್ಟಿನವರನ್ನು ನೀವು ದ್ವೇಷಿಸಬಾರದು, ಅವರ ದೇಶದಲ್ಲಿ ನೀವು ಪರದೇಶಿಗಳಾಗಿದ್ದಿರಲ್ಲಾ. ಎದೋಮ್ಯರ ಮತ್ತು ಈಜಿಪ್ಟಿನವರ ಮೂರನೆ ತಲೆಮಾರಿನವರು ಇಸ್ರೇಲರೊಂದಿಗೆ ದೇವಾರಾಧನೆ ಮಾಡಬಹುದು.

ಪಾಳೆಯವನ್ನು ಶುದ್ಧವಾಗಿಡಬೇಕು

“ನಿಮ್ಮ ಸೈನ್ಯವು ವೈರಿಗಳೊಂದಿಗೆ ಯುದ್ಧಮಾಡಲು ಹೋದಾಗ ನಿಮ್ಮನ್ನು ಅಶುದ್ಧಪಡಿಸುವ ಪ್ರತಿಯೊಂದರಿಂದಲೂ ನೀವು ದೂರವಾಗಿರಿ. 10 ಒಬ್ಬನಿಗೆ ರಾತ್ರಿ ಕಾಲದಲ್ಲಿ ವೀರ್ಯಸ್ಖಲನವಾದರೆ ಅವನು ಪಾಳೆಯದಿಂದ ಹೊರಗೆ ಹೋಗಿ ಪ್ರತ್ಯೇಕವಾಗಿರಬೇಕು. 11 ಸಾಯಂಕಾಲವಾದಾಗ ಅವನು ಸ್ನಾನಮಾಡಿ ಸೂರ್ಯ ಮುಳುಗಿದ ಬಳಿಕ ಪಾಳೆಯದೊಳಕ್ಕೆ ಬರಬಹುದು.

12 “ಪಾಳೆಯದ ಹೊರಗೆ ಬಹಿರ್ದೇಶಕ್ಕೆ ಹೋಗಲು ಒಂದು ಸ್ಥಳವನ್ನು ನೇಮಿಸಬೇಕು. 13 ನಿಮ್ಮ ಆಯುಧಗಳೊಂದಿಗೆ ನೀವು ಒಂದು ಕೋಲನ್ನು ಇಟ್ಟುಕೊಳ್ಳಬೇಕು. ಈ ಕೋಲಿನಿಂದ ಮಣ್ಣು ಅಗೆದು ನೆಲದಲ್ಲಿ ಚಿಕ್ಕ ಗುಂಡಿ ತೋಡಲೂ ಮತ್ತು ಹೊಟ್ಟೆ ಖಾಲಿ ಮಾಡಿದ ಬಳಿಕ ಆ ಗುಂಡಿಯನ್ನು ಮಣ್ಣಿನಿಂದ ಮುಚ್ಚಲೂ ಸಹಾಯವಾಗುವುದು. 14 ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಸಂರಕ್ಷಿಸಲೂ ವೈರಿಗಳನ್ನು ಸೋಲಿಸುವಂತೆ ಸಹಾಯ ಮಾಡಲೂ ನಿಮ್ಮೊಂದಿಗೆ ಪಾಳೆಯದಲ್ಲಿರುವುದರಿಂದ ನಿಮ್ಮ ಪಾಳೆಯವು ಪವಿತ್ರವಾಗಿರಬೇಕು. ಇಲ್ಲದಿದ್ದಲ್ಲಿ ನಿಮ್ಮ ಪಾಳೆಯದಲ್ಲಿರುವ ಹೊಲಸನ್ನು ನೋಡಿ ಆತನು ಹಿಂದಿರುಗಿ ಹೋಗುವನು.

ಇತರ ವಿಧಿನಿಯಮಗಳು

15 “ಒಬ್ಬ ಗುಲಾಮನು ತನ್ನ ಧಣಿಯ ಬಳಿಯಿಂದ ನಿಮ್ಮ ಬಳಿಗೆ ಓಡಿ ಬಂದರೆ ನೀವು ಅವನ ಧಣಿಗೆ ಅವನನ್ನು ಒಪ್ಪಿಸಬಾರದು. 16 ಅವನು ನಿಮ್ಮ ಬಳಿಯಲ್ಲಿ ಇರಲು ಇಷ್ಟಪಟ್ಟರೆ ಅಥವಾ ಬೇರೆ ಊರಿಗೆ ಹೋಗಲು ಇಷ್ಟಪಟ್ಟರೆ ನೀವು ಅವನಿಗೆ ತೊಂದರೆಕೊಡಬಾರದು.

17 “ಇಸ್ರೇಲರ ಗಂಡಸಾಗಲಿ ಹೆಂಗಸಾಗಲಿ ದೇವಸ್ಥಾನದ ವೇಶ್ಯೆಯಾಗಬಾರದು. 18 ಸೂಳೆತನದಿಂದ ಗಳಿಸಿದ ಹಣವನ್ನು ನಿಮ್ಮ ದೇವರಾದ ಯೆಹೋವನ ವಿಶೇಷ ವಾಸಸ್ಥಾನಕ್ಕೆ ತೆಗೆದುಕೊಂಡು ಬರಬಾರದು. ಒಬ್ಬನು ತಾನು ಹೊತ್ತುಕೊಂಡ ಹರಕೆಯನ್ನು ಆ ಹಣದಿಂದ ಪೂರೈಸಕೂಡದು. ಯಾಕೆಂದರೆ ಲೈಂಗಿಕ ಪಾಪದಲ್ಲಿ ತಮ್ಮ ದೇಹಗಳನ್ನು ಮಾರುವವರನ್ನು ನಿಮ್ಮ ದೇವರಾದ ಯೆಹೋವನು ದ್ವೇಷಿಸುತ್ತಾನೆ; ಲೈಂಗಿಕ ಪಾಪಗಳ ಆದಾಯದಿಂದ ಬಂದ ಹಣದಿಂದ ಖರೀದಿ ಮಾಡಿದ ಕಾಣಿಕೆಗಳನ್ನು ಆತನು ದ್ವೇಷಿಸುತ್ತಾನೆ.

19 “ನೀವು ಇನ್ನೊಬ್ಬ ಇಸ್ರೇಲಿಗೆ ಸಾಲಕೊಟ್ಟರೆ ಅದಕ್ಕೆ ಬಡ್ಡಿ ವಸೂಲು ಮಾಡಬಾರದು. 20 ಪರದೇಶಸ್ಥರಿಗೆ ನೀವು ಬಡ್ಡಿಗೆ ಸಾಲ ಕೊಡಬಹುದು. ಆದರೆ ಸ್ವದೇಶದವನಾದ ಇಸ್ರೇಲಿನವನಿಗೆ ಬಡ್ಡಿಗೆ ಸಾಲ ಕೊಡಬಾರದು. ನೀವು ಹೀಗೆ ಮಾಡಿದ್ದಲ್ಲಿ, ನೀವು ಹೋಗಿ ನೆಲೆಸುವ ದೇಶದಲ್ಲಿ ನೀವು ಮಾಡುವ ಪ್ರತಿಯೊಂದರಲ್ಲೂ ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಆಶೀರ್ವದಿಸುವನು.

21 “ನೀವು ನಿಮ್ಮ ದೇವರಾದ ಯೆಹೋವನಿಗೆ ಹರಕೆ ಹೊತ್ತರೆ ಅದನ್ನು ಸಲ್ಲಿಸಲು ನಿಧಾನ ಮಾಡಬೇಡಿ. ನಿಮ್ಮ ದೇವರಾದ ಯೆಹೋವನು ಅದನ್ನು ನಿಮ್ಮಿಂದ ಕೇಳುವವನಾಗಿದ್ದಾನೆ. ಹರಕೆಹೊತ್ತು ಸಲ್ಲಿಸದಿದ್ದರೆ ನೀವು ಪಾಪಮಾಡುವವರಾಗಿದ್ದೀರಿ. 22 ನೀವು ಹರಕೆ ಮಾಡಿಕೊಳ್ಳದಿದ್ದರೆ ಪಾಪಮಾಡುವುದಿಲ್ಲ. 23 ಆದರೆ ನೀವು ಮಾಡಿದ ಹರಕೆಯನ್ನು ಪೂರೈಸಬೇಕು. ನೀವು ಹರಕೆ ಮಾಡುವಂತೆ ದೇವರು ನಿಮ್ಮನ್ನು ಬಲವಂತ ಮಾಡಲಿಲ್ಲವಲ್ಲಾ. ಆದ್ದರಿಂದ ನೀವು ವಾಗ್ದಾನ ಮಾಡಿದ್ದನ್ನು ಪೂರೈಸಬೇಕು.

24 “ಒಬ್ಬನ ತೋಟದೊಳಗಿಂದ ನೀವು ಹಾದುಹೋಗುತ್ತಿರುವಾಗ ನಿಮಗೆ ಬೇಕಾಗುವಷ್ಟು ಹಣ್ಣನ್ನು ಕಿತ್ತು ತಿನ್ನಿ. ಆದರೆ ನೀವು ಮಕ್ಕರಿಯಲ್ಲಿ ತುಂಬಿಸಿಕೊಂಡು ಹೋಗಬಾರದು. 25 ಒಬ್ಬನ ಧಾನ್ಯದ ಹೊಲದಲ್ಲಿ ನೀವು ಹಾದುಹೋಗುತ್ತಿರುವಾಗ ನಿಮ್ಮ ಕೈಯಿಂದ ಹೊಸೆದು ತಿನ್ನುವಷ್ಟು ಧಾನ್ಯವನ್ನು ನೀವು ತಿನ್ನಬಹುದು; ಆದರೆ ನೀವು ಕತ್ತಿಯಿಂದ ಧಾನ್ಯವನ್ನು ಕೊಯಿದು ನಿಮ್ಮೊಂದಿಗೆ ಒಯ್ಯಬೇಡಿ.

24 “ಒಬ್ಬಾಕೆಯನ್ನು ಒಬ್ಬನು ಮದುವೆಯಾದ ಬಳಿಕ, ಅವಳಲ್ಲಿ ನಾಚಿಕೆಕರವಾದದ್ದೇನಾದರೂ ಇದ್ದರೆ ಅವನು ವಿವಾಹವಿಚ್ಛೇದನಾ ಪತ್ರಗಳಿಗೆ ಸಹಿಹಾಕಿ ಅವಳ ಕೈಯಲ್ಲಿ ಕೊಡಬೇಕು. ಆಮೇಲೆ ಆಕೆಯನ್ನು ತನ್ನ ಮನೆಯಿಂದ ಹೊರಗೆ ಕಳುಹಿಸಬೇಕು. ಅವನ ಮನೆಯಿಂದ ಅವಳು ಹೊರಗೆ ಕಳುಹಿಸಲ್ಪಟ್ಟ ಮೇಲೆ ಆಕೆ ಬೇರೊಬ್ಬನನ್ನು ಮದುವೆಯಾಗಬಹುದು. 3-4 ಆಕೆಯ ಹೊಸ ಗಂಡನೂ ಆಕೆಯನ್ನು ಇಷ್ಟಪಡದೆ ಮನೆಯಿಂದ ಹೊರಗೆ ಕಳುಹಿಸಿದರೆ ಅಥವಾ ಎರಡನೆ ಗಂಡನು ಸತ್ತುಹೋದರೆ ಆಕೆಯ ಮೊದಲನೆಯ ಗಂಡನು ಆಕೆಯನ್ನು ಮತ್ತೆ ಮದುವೆಯಾಗಬಾರದು. ಅವನಿಗೆ ಆಕೆಯು ಅಶುದ್ಧಳಾದಳು. ಅವನು ಆಕೆಯನ್ನು ಮತ್ತೆ ಮದುವೆಯಾದಲ್ಲಿ ಅವನು ಯೆಹೋವನಿಗೆ ಅಸಹ್ಯವಾದದ್ದನ್ನು ಮಾಡುವವನಾಗಿದ್ದಾನೆ. ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ದೇಶದಲ್ಲಿ ನೀವು ಇಂಥ ಪಾಪಗಳನ್ನು ಮಾಡಬಾರದು.

“ಒಬ್ಬನು ಹೊಸದಾಗಿ ಮದುವೆಯಾಗಿದ್ದಲ್ಲಿ ಅವನನ್ನು ಸೈನ್ಯಕ್ಕೆ ಕಳುಹಿಸಬಾರದು; ವಿಶೇಷವಾದ ಜವಾಬ್ದಾರಿಯನ್ನು ಅವನಿಗೆ ಕೊಡಬಾರದು. ಒಂದು ವರ್ಷ ಅವನು ಮನೆಯಲ್ಲಿದ್ದುಕೊಂಡು ತನ್ನ ಹೆಂಡತಿಯನ್ನು ಸಂತೋಷಪಡಿಸಬೇಕು.

“ಒಬ್ಬನು ನಿಮ್ಮಿಂದ ಏನಾದರೊಂದು ವಸ್ತುವನ್ನು ಎರವಲಾಗಿ ತೆಗೆದುಕೊಳ್ಳುವುದಾದರೆ ಅವನ ಬೀಸುವ ಕಲ್ಲಿನ ಒಂದು ಭಾಗವನ್ನು ಒತ್ತೆಯಾಗಿಟ್ಟುಕೊಳ್ಳಬಾರದು. ಇಲ್ಲವಾದರೆ ಅವನ ಆಹಾರವನ್ನೇ ಅವನಿಂದ ಕಿತ್ತುಕೊಂಡ ಹಾಗಾಯಿತು.

“ಒಬ್ಬನು ಇನ್ನೊಬ್ಬ ಇಸ್ರೇಲನನ್ನು ಕದ್ದುಕೊಂಡು ಹೋಗಿ ಅವನನ್ನು ಗುಲಾಮನನ್ನಾಗಿ ಮಾರಬಾರದು. ಹಾಗೆ ಮಾಡಿದವನನ್ನು ಸಾಯಿಸಬೇಕು. ನಿಮ್ಮ ಕುಲದಿಂದ ಅಂಥಾ ಪಾಪವನ್ನು ತೆಗೆದುಹಾಕಬೇಕು.

“ನಿಮ್ಮಲ್ಲಿ ಯಾರಿಗಾದರೂ ಚರ್ಮರೋಗವಿದ್ದಲ್ಲಿ ಯಾಜಕನು ಹೇಳುವ ರೀತಿಯನ್ನು ಅನುಸರಿಸಬೇಕು. ನಾನು ಯಾಜಕರಿಗೆ ತಿಳಿಸಿದ ಮೇರೆಗೆ ನೀವು ಮಾಡಬೇಕು. ಈಜಿಪ್ಟಿನಿಂದ ಹೊರಟುಬಂದಾಗ ದಾರಿಯಲ್ಲಿ ದೇವರಾದ ಯೆಹೋವನು ಮಿರ್ಯಾಮಳಿಗೆ ಏನು ಮಾಡಿದನೆಂದು ಸ್ಮರಿಸಿರಿ.

10 “ನೀವು ಯಾರಿಗಾದರೂ ಸಾಲಕೊಟ್ಟರೆ ಅದಕ್ಕೆ ಒತ್ತೆಯಾಗಿ ವಸ್ತುವನ್ನು ತೆಗೆದುಕೊಳ್ಳಲು ಅವನ ಮನೆಯೊಳಗೆ ಹೋಗಬೇಡಿ. 11 ನೀವು ಹೊರಗೆ ನಿಂತುಕೊಳ್ಳಬೇಕು. ಸಾಲ ತೆಗೆದುಕೊಂಡ ವ್ಯಕ್ತಿಯು ತನ್ನ ಮನೆಯೊಳಗಿಂದ ಏನಾದರೂ ವಸ್ತುವನ್ನು ಒತ್ತೆಯಾಗಿ ನಿಮಗೆ ತಂದುಕೊಡುವನು. 12 ಅವನು ಬಡವನಾದರೆ ಅವನು ತನ್ನ ಕಂಬಳಿಯನ್ನೇ ತಂದುಕೊಡಬಹುದು. ಅದನ್ನು ರಾತ್ರಿ ಇಟ್ಟುಕೊಳ್ಳಬಾರದು. 13 ಪ್ರತೀ ಸಾಯಂಕಾಲ ಆ ಕಂಬಳಿಯನ್ನು ಹಿಂದಕ್ಕೆ ಕೊಡಬೇಕು. ಆಗ ಅವನಿಗೆ ರಾತ್ರಿ ಹೊದ್ದುಕೊಳ್ಳಲು ಇರುವುದು. ಅವನು ನಿನ್ನನ್ನು ಆಶೀರ್ವದಿಸುವನು. ಅಲ್ಲದೆ ದೇವರಾದ ಯೆಹೋವನು ನಿಮ್ಮ ಆ ಒಳ್ಳೆಯ ಕಾರ್ಯವನ್ನು ಗಣನೆಗೆ ತರುವನು.

14 “ಬಡವನಾಗಿರುವ ದಿನಕೂಲಿಯವನಿಗೆ ಮೋಸ ಮಾಡಬಾರದು. ಅವನು ಇಸ್ರೇಲನಾಗಿರಬಹುದು ಅಥವಾ ಪರದೇಶಸ್ಥನಾಗಿರಬಹುದು. 15 ಸೂರ್ಯ ಮುಳುಗುವುದರೊಳಗೆ ಅವನಿಗೆ ಸಲ್ಲಬೇಕಾದ ಕೂಲಿಯನ್ನು ಕೊಟ್ಟುಬಿಡು, ಅವನು ಬಡವನಾಗಿದ್ದಾನೆ. ನೀನು ಕೊಡುವ ಕೂಲಿಯಿಂದಲೇ ಅವನು ತನ್ನ ಹಸಿವನ್ನು ನೀಗಿಸಿಕೊಳ್ಳಬೇಕು. ನೀನು ಅವನ ಕೂಲಿ ಕೊಡದಿದ್ದಲ್ಲಿ ಅವನು ದೇವರಾದ ಯೆಹೋವನಿಗೆ ದೂರು ಹೇಳುವನು. ಆಗ ನೀನು ಪಾಪಮಾಡುವವನಾಗಿರುವೆ.

16 “ಮಕ್ಕಳು ಮಾಡಿದ ಪಾಪಕ್ಕಾಗಿ ಅವರ ತಂದೆತಾಯಿಗಳಿಗೆ ಮರಣಶಿಕ್ಷೆಯನ್ನು ವಿಧಿಸಕೂಡದು. ತಂದೆತಾಯಿಗಳು ಮಾಡಿದ ಪಾಪಕ್ಕಾಗಿ ಮಕ್ಕಳಿಗೆ ಮರಣಶಿಕ್ಷೆಯನ್ನು ವಿಧಿಸಕೂಡದು. ಪಾಪ ಮಾಡಿದವರಿಗೇ ಮರಣ ಶಿಕ್ಷೆಯಾಗಬೇಕು.

17 “ಪರದೇಶಸ್ಥರನ್ನು ಮತ್ತು ಅನಾಥರನ್ನು ಯೋಗ್ಯವಾದ ರೀತಿಯಲ್ಲಿ ನೋಡಿಕೊಳ್ಳಬೇಕು. ವಿಧವೆಯರ ಬಟ್ಟೆಗಳನ್ನು ಒತ್ತೆಯಿಟ್ಟುಕೊಳ್ಳಕೂಡದು. 18 ನೀವು ಈಜಿಪ್ಟಿನಲ್ಲಿ ಬಡ ಗುಲಾಮರಾಗಿದ್ದುದನ್ನು ಸ್ಮರಿಸಿಕೊಳ್ಳಿರಿ. ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಬಿಡಿಸಿ ಸ್ವತಂತ್ರರನ್ನಾಗಿ ಮಾಡಿದನು. ಆದ್ದರಿಂದ ನೀವು ಬಡವರಿಗೆ ದಯೆ ತೋರಿಸಬೇಕು.

19 “ನೀವು ಹೊಲದಲ್ಲಿ ಬೆಳೆದ ಬೆಳೆಯನ್ನು ಕೊಯ್ದು ಮನೆಗೆ ತರುವಾಗ ಕೆಲವು ಸಿವುಡುಗಳನ್ನು ನೀವು ಹೊಲದಲ್ಲಿಯೇ ಬಿಟ್ಟು ಬಂದಿದ್ದರೆ ಅದನ್ನು ತರಲು ಹಿಂದಕ್ಕೆ ಹೋಗಬೇಡಿ. ಅದನ್ನು ನಿಮ್ಮ ಊರಿನಲ್ಲಿರುವ ಅನಾಥರಿಗೂ ವಿಧವೆಯರಿಗೂ ಪರದೇಶಸ್ಥರಿಗೂ ಬಿಡಿರಿ. ನೀವು ಹಾಗೆ ಮಾಡಿದರೆ ದೇವರಾದ ಯೆಹೋವನು ನಿಮಗೆ ಶುಭವನ್ನು ಉಂಟುಮಾಡುವನು. 20 ನೀವು ನಿಮ್ಮ ಎಣ್ಣೆಮರಗಳ ಕಾಯಿಗಳನ್ನು ಉದುರಿಸುವಾಗ ಮತ್ತೆ ಹೋಗಿ ಕೊಂಬೆಗಳಲ್ಲಿ ಕಾಯಿ ಹುಡುಕಬಾರದು. ಬಿಟ್ಟ ಕಾಯಿಗಳು ಪರದೇಶಸ್ಥರಿಗೂ ಊರಿನ ಅನಾಥ ಮತ್ತು ವಿಧವೆಯವರಿಗೂ ಆಗುವುದು. 21 ನಿಮ್ಮ ತೋಟದಿಂದ ಹಣ್ಣುಗಳನ್ನು ಕೂಡಿಸುವಾಗ ಉಳಿದ ಹಣ್ಣುಗಳನ್ನು ಶೇಖರಿಸಲು ಹಿಂತಿರುಗಬೇಡಿ; ಆ ಉಳಿದ ದ್ರಾಕ್ಷಿಹಣ್ಣುಗಳು ಊರಲ್ಲಿರುವ ಅನಾಥರಿಗೂ ವಿಧವೆಯರಿಗೂ ಮತ್ತು ಪರದೇಶಸ್ಥರಿಗೂ ಬಿಡಿರಿ. 22 ನೀವು ಈಜಿಪ್ಟ್ ದೇಶದಲ್ಲಿ ಬಡ ಗುಲಾಮರಾಗಿದ್ದುದನ್ನು ನೆನಪಿನಲ್ಲಿಟ್ಟುಕೊಳ್ಳಿರಿ. ಆದ್ದರಿಂದಲೇ ಬಡವರಿಗೆ ನೀವು ಹೀಗೆ ಮಾಡಬೇಕೆಂದು ನಿಮಗೆ ತಿಳಿಸುತ್ತಿದ್ದೇನೆ.

ಮಾರ್ಕ 14:1-26

ಯೇಸುವನ್ನು ಕೊಲ್ಲಲು ಯೆಹೂದ್ಯನಾಯಕರ ಯೋಜನೆ

(ಮತ್ತಾಯ 26:1-5; ಲೂಕ 22:1-2; ಯೋಹಾನ 11:45-53)

14 ಪಸ್ಕ ಮತ್ತು ಹುಳಿಯಿಲ್ಲದ ರೊಟ್ಟಿಯ ಹಬ್ಬಕ್ಕೆ ಕೇವಲ ಎರಡು ದಿನಗಳಿದ್ದವು. ಮಹಾಯಾಜಕರು ಹಾಗೂ ಧರ್ಮೋಪದೇಶಕರು ಯಾವುದಾದರೊಂದು ಸುಳ್ಳು ಅಪವಾದವನ್ನು ಕಂಡುಹಿಡಿದು ಯೇಸುವನ್ನು ಬಂಧಿಸಿ ಆತನನ್ನು ಕೊಲ್ಲಬೇಕೆಂದಿದ್ದರು. “ಆದರೆ ಹಬ್ಬದ ಸಮಯದಲ್ಲಿ ನಾವು ಯೇಸುವನ್ನು ಬಂಧಿಸಲು ಸಾಧ್ಯವಿಲ್ಲ. ಜನರು ಕೋಪಗೊಂಡು, ಗಲಭೆ ಎಬ್ಬಿಸುವ ಸಾಧ್ಯತೆಯಿದೆ” ಎಂದು ಅವರು ಮಾತಾಡಿಕೊಂಡರು.

ಸ್ತ್ರೀಯೊಬ್ಬಳು ಯೇಸುವಿಗೆ ಮಾಡಿದ ವಿಶೇಷಕಾರ್ಯ

(ಮತ್ತಾಯ 26:6-13; ಯೋಹಾನ 12:1-8)

ಬೆಥಾನಿಯದಲ್ಲಿ ಯೇಸು ಕುಷ್ಠರೋಗಿ ಸಿಮೋನನ ಮನೆಯಲ್ಲಿ ಊಟಮಾಡುತ್ತಿದ್ದಾಗ ಸ್ತ್ರೀಯೊಬ್ಬಳು ಆತನ ಬಳಿಗೆ ಬಂದಳು. ಆಕೆಯ ಬಳಿ ಅತ್ಯಂತ ಬೆಲೆಬಾಳುವ ಪರಿಮಳದ್ರವ್ಯದ ಭರಣಿ ಇತ್ತು. ಈ ಪರಿಮಳದ್ರವ್ಯವನ್ನು ಶುದ್ಧವಾದ ನಾರ್ಡ್‌[a] ತೈಲದಿಂದ ಮಾಡಲಾಗಿತ್ತು. ಆ ಸ್ತ್ರೀಯು ಭರಣಿಯನ್ನು ತೆರೆದು, ಆ ತೈಲವನ್ನು ಯೇಸುವಿನ ತಲೆಯ ಮೇಲೆ ಸುರಿದಳು.

ಅಲ್ಲಿದ್ದ ಕೆಲವು ಶಿಷ್ಯರು ಇದನ್ನು ನೋಡಿ ಕೋಪಗೊಂಡು ಆಕ್ಷೇಪಿಸಿದರು. “ಆ ಪರಿಮಳತೈಲವನ್ನು ಹಾಳುಮಾಡಿದ್ದೇಕೆ? ಅದು ಒಂದು ವರ್ಷದ ಸಂಪಾದನೆಗಿಂತ ಹೆಚ್ಚು ಬೆಲೆಬಾಳುತ್ತಿತ್ತು. ಅದನ್ನು ಮಾರಿ ಬಂದ ಹಣವನ್ನು ಬಡಜನರಿಗೆ ಕೊಡಬಹುದಾಗಿತ್ತು” ಎಂದು ಹೇಳಿ ಆ ಸ್ತ್ರೀಯನ್ನು ಕಟುವಾಗಿ ಟೀಕಿಸಿದರು.

ಯೇಸು, “ಆಕೆಗೆ ತೊಂದರೆ ಕೊಡಬೇಡಿ. ನೀವು ಆಕೆಯನ್ನು ಕಾಡಿಸುವುದೇಕೆ? ಅವಳು ನನಗಾಗಿ ಬಹಳ ಒಳ್ಳೆಯದನ್ನು ಮಾಡಿದಳು. ನಿಮ್ಮೊಡನೆ ಬಡಜನರು ಯಾವಾಗಲೂ ಇರುತ್ತಾರೆ. ನಿಮಗೆ ಇಷ್ಟಬಂದ ಸಮಯದಲ್ಲಿ ನೀವು ಅವರಿಗೆ ಸಹಾಯ ಮಾಡಬಹುದು. ಆದರೆ ನಾನು ನಿಮ್ಮೊಂದಿಗೆ ಯಾವಾಗಲೂ ಇರುವುದಿಲ್ಲ. ಈಕೆ ನನಗಾಗಿ ತನ್ನಿಂದ ಸಾಧ್ಯವಾದ ಒಂದು ಕಾರ್ಯವನ್ನು ಮಾಡಿದಳು. ನಾನು ಸಾಯುವುದಕ್ಕಿಂತ ಮುಂಚೆ ನನ್ನನ್ನು ಸಮಾಧಿಗೆ ಸಿದ್ಧಮಾಡಲು ಆಕೆ ನನ್ನ ದೇಹದ ಮೇಲೆ ಪರಿಮಳತೈಲ ಸುರಿದಳು. ನಾನು ಸತ್ಯವನ್ನು ಹೇಳುತ್ತೇನೆ. ಪ್ರಪಂಚದಲ್ಲಿ ಸುವಾರ್ತೆ ಸಾರಲ್ಪಡುವಲ್ಲೆಲ್ಲಾ ಈಕೆ ಮಾಡಿದ ಈ ಕಾರ್ಯವನ್ನು ತಿಳಿಸುವುದರಿಂದ ಜನರು ಈಕೆಯನ್ನು ನೆನಪುಮಾಡಿಕೊಳ್ಳುವರು” ಎಂದು ಹೇಳಿದನು.

ಯೇಸುವಿನ ವೈರಿಗಳಿಗೆ ಯೂದನ ಸಹಾಯ

(ಮತ್ತಾಯ 26:14-16; ಲೂಕ 22:3-6)

10 ನಂತರ ಹನ್ನೆರಡು ಮಂದಿ ಅಪೊಸ್ತಲರಲ್ಲಿ ಒಬ್ಬನಾದ ಇಸ್ಕರಿಯೋತ ಯೂದನು ಯೇಸುವನ್ನು ಹಿಡಿದುಕೊಡಬೇಕೆಂಬ ದುರುದ್ದೇಶದಿಂದ ಮಹಾಯಾಜಕರೊಡನೆ ಮಾತಾಡಲು ಹೋದನು. 11 ಮಹಾಯಾಜಕರು ಇದರ ಬಗ್ಗೆ ಬಹಳ ಸಂತೋಷಗೊಂಡು, ಹಣಕೊಡುವುದಾಗಿ ಯೂದನಿಗೆ ಮಾತುಕೊಟ್ಟರು. ಆದ್ದರಿಂದ ಅವರಿಗೆ ಯೇಸುವನ್ನು ಹಿಡಿದುಕೊಡಲು ಅತ್ಯಂತ ಉತ್ತಮವಾದ ಸಮಯಕ್ಕಾಗಿ ಯೂದನು ಕಾಯತ್ತಿದ್ದನು.

ಪಸ್ಕ ಭೋಜನದ ಸಿದ್ಧತೆ

(ಮತ್ತಾಯ 26:17-25; ಲೂಕ 22:7-14,21-23; ಯೋಹಾನ 13:21-30)

12 ಅಂದು ಹುಳಿಯಿಲ್ಲದ ರೊಟ್ಟಿಯ ಹಬ್ಬದ ಮೊದಲನೆಯ ದಿನವಾಗಿತ್ತು. ಯೆಹೂದಿಗಳು ಯಾವಾಗಲೂ ಪಸ್ಕಹಬ್ಬದ ಕುರಿಮರಿಗಳನ್ನು ಯಜ್ಞಮಾಡುವ ಸಮಯ ಇದಾಗಿತ್ತು. ಯೇಸುವಿನ ಶಿಷ್ಯರು ಆತನ ಬಳಿಗೆ ಬಂದು, “ನಾವು ಪಸ್ಕಹಬ್ಬದ ಊಟವನ್ನು ನಿನಗಾಗಿ ಎಲ್ಲಿ ಸಿದ್ಧಪಡಿಸೋಣ?” ಎಂದು ಕೇಳಿದರು.

13 ಯೇಸು ತನ್ನ ಶಿಷ್ಯರಲ್ಲಿ ಇಬ್ಬರನ್ನು ಕರೆದು, “ನೀವು ಪಟ್ಟಣದೊಳಕ್ಕೆ ಹೋದಾಗ, ಒಬ್ಬ ಮನುಷ್ಯನು ನೀರಿನ ಕೊಡವನ್ನು ಹೊತ್ತುಕೊಂಡು ನಿಮ್ಮ ಎದುರಿಗೆ ಬರುವನು. ಅವನನ್ನೇ ಹಿಂಬಾಲಿಸಿರಿ. 14 ಅವನು ಒಂದು ಮನೆಯೊಳಗೆ ನಡೆದು ಹೋಗುತ್ತಾನೆ. ನೀವು ಆ ಮನೆಯ ಯಜಮಾನನಿಗೆ, ‘ನಮ್ಮ ಗುರುವು ತನ್ನ ಶಿಷ್ಯರ ಸಂಗಡ ಪಸ್ಕ ಹಬ್ಬದ ಊಟ ಮಾಡಲು ಒಂದು ಕೋಣೆಯನ್ನು ತೋರಿಸಬೇಕೆಂದು ಕೇಳುತ್ತಾನೆ’ ಎಂದು ಹೇಳಿ. 15 ಆ ಯಜಮಾನನು ಮೇಲಂತಸ್ತಿನಲ್ಲಿ ಸಿದ್ಧವಾಗಿರುವ ಒಂದು ದೊಡ್ಡ ಕೋಣೆಯನ್ನು ತೋರಿಸುತ್ತಾನೆ. ಅಲ್ಲಿ ನಮಗಾಗಿ ಊಟವನ್ನು ಸಿದ್ಧಪಡಿಸಿರಿ” ಎಂದನು.

16 ಆದ್ದರಿಂದ ಶಿಷ್ಯರು ಅಲ್ಲಿಂದ ಹೊರಟು, ಪಟ್ಟಣದೊಳಗೆ ಹೋದರು. ಯೇಸು ಹೇಳಿದ ರೀತಿಯಲ್ಲಿಯೇ ಪ್ರತಿಯೊಂದೂ ನಡೆಯಿತು. ಶಿಷ್ಯರು ಪಸ್ಕಹಬ್ಬದ ಊಟವನ್ನು ಸಿದ್ಧಪಡಿಸಿದರು.

17 ಸಾಯಂಕಾಲದಲ್ಲಿ ಯೇಸು ಹನ್ನೆರಡು ಜನ ಅಪೊಸ್ತಲರೊಂದಿಗೆ ಆ ಮನೆಗೆ ಹೋದನು. 18 ಅವರೆಲ್ಲರೂ ಊಟ ಮಾಡುತ್ತಿರುವಾಗ, ಯೇಸು, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನಿಮ್ಮಲ್ಲಿ ಒಬ್ಬನು ನನಗೆ ದ್ರೋಹ ಬಗೆಯುತ್ತಾನೆ. ಈಗ ಅವನು ನನ್ನೊಂದಿಗೆ ಊಟಮಾಡುತ್ತಿದ್ದಾನೆ” ಎಂದನು.

19 ಇದನ್ನು ಕೇಳಿದಾಗ ಶಿಷ್ಯರಿಗೆ ಬಹಳ ದುಃಖವಾಯಿತು. ಪ್ರತಿಯೊಬ್ಬ ಶಿಷ್ಯನೂ ಯೇಸುವಿಗೆ, “ಖಂಡಿತವಾಗಿ ನಾನು ನಿನಗೆ ದ್ರೋಹಮಾಡುವುದಿಲ್ಲ” ಎಂದನು.

20 ಯೇಸು, “ಈ ಹನ್ನೆರಡು ಜನರಲ್ಲಿ ಒಬ್ಬನು ನನಗೆ ದ್ರೋಹ ಬಗೆಯುತ್ತಾನೆ. ಅವನು ನನ್ನೊಡನೆ ಒಂದೇ ಬಟ್ಟಲಿನಲ್ಲಿ ತನ್ನ ರೊಟ್ಟಿಯನ್ನು ಅದ್ದುತ್ತಿದ್ದಾನೆ. 21 ಮನುಷ್ಯಕುಮಾರನು ಹಿಂಸಿಸಲ್ಪಟ್ಟನು. ಪವಿತ್ರ ಗ್ರಂಥದಲ್ಲಿಯೂ ಅದನ್ನು ಬರೆಯಲಾಗಿದೆ. ಆದರೆ ಮನುಷ್ಯಕುಮಾರನನ್ನು ಕೊಲ್ಲಲು ಹಿಡಿದುಕೊಡುವ ವ್ಯಕ್ತಿಯ ಸ್ಥಿತಿ ಬಹಳ ಭೀಕರವಾಗಿರುತ್ತದೆ. ಅವನು ಹುಟ್ಟದೇ ಇದ್ದಿದ್ದರೆ ಅವನಿಗೆ ಒಳ್ಳೆಯದಾಗುತ್ತಿತ್ತು” ಎಂದನು.

ಪ್ರಭುವಿನ ಭೋಜನ

(ಮತ್ತಾಯ 26:26-30; ಲೂಕ 22:15-20; 1 ಕೊರಿಂಥ. 11:23-25)

22 ಅವರು ಊಟಮಾಡುತ್ತಿರುವಾಗ, ಯೇಸು ರೊಟ್ಟಿಯನ್ನು ತೆಗೆದುಕೊಂಡು, ಅದಕ್ಕಾಗಿ ದೇವರಿಗೆ ಸ್ತೋತ್ರ ಸಲ್ಲಿಸಿ ಅದನ್ನು ಮುರಿದು, ತನ್ನ ಶಿಷ್ಯರಿಗೆ ಕೊಟ್ಟನು. ಯೇಸು ಅವರಿಗೆ, “ಈ ರೊಟ್ಟಿಯನ್ನು ತೆಗೆದುಕೊಂಡು ತಿನ್ನಿರಿ. ಈ ರೊಟ್ಟಿಯು ನನ್ನ ದೇಹ” ಎಂದನು.

23 ನಂತರ ಯೇಸು ದ್ರಾಕ್ಷಾರಸದ ಪಾತ್ರೆಯನ್ನು ತೆಗೆದುಕೊಂಡು, ಅದಕ್ಕಾಗಿ ದೇವರಿಗೆ ಸ್ತೋತ್ರ ಸಲ್ಲಿಸಿ ಅದನ್ನು ತನ್ನ ಶಿಷ್ಯರಿಗೆ ಕೊಟ್ಟನು. ಶಿಷ್ಯರೆಲ್ಲರೂ ಅದರಲ್ಲಿ ಕುಡಿದರು. 24 ಯೇಸು, “ಇದು ನನ್ನ ರಕ್ತ. ಒಡಂಬಡಿಕೆಯ ರಕ್ತ. ಇದು ಬಹು ಜನರಿಗೋಸ್ಕರ ಸುರಿಸಲ್ಪಡುವ ರಕ್ತ. 25 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನಾನು ದೇವರ ರಾಜ್ಯದಲ್ಲಿ ದ್ರಾಕ್ಷಾರಸವನ್ನು ಹೊಸದಾಗಿ ಕುಡಿಯುವ ದಿನದವರೆಗೆ ಇದನ್ನು ಕುಡಿಯುವುದೇ ಇಲ್ಲ” ಎಂದನು.

26 ಆಗ ಶಿಷ್ಯರೆಲ್ಲರೂ ಒಂದು ಹಾಡನ್ನು ಹಾಡಿದರು. ನಂತರ ಅವರು ಆಲಿವ್ ಮರದ ಗುಡ್ಡಕ್ಕೆ ಹೋದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International