Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಧರ್ಮೋಪದೇಶಕಾಂಡ 13-15

ಸುಳ್ಳು ಪ್ರವಾದಿಗಳು

13 “ಒಬ್ಬ ಪ್ರವಾದಿಯಾಗಲಿ ಕನಸಿನ ಅರ್ಥ ಹೇಳುವವನಾಗಲಿ ನಿಮ್ಮ ಬಳಿಗೆ ಬಂದು ನಿಮಗೊಂದು ಸೂಚಕಕಾರ್ಯವನ್ನಾಗಲಿ ಅದ್ಭುತಕಾರ್ಯವನ್ನಾಗಲಿ ಮಾಡಿತೋರಿಸುತ್ತೇನೆ ಎಂದು ಹೇಳಿದರೂ ಹೇಳಬಹುದು. ಅವನು ಅದ್ಭುತಕಾರ್ಯಗಳನ್ನು ಮಾಡಿತೋರಿಸಬಹುದು. ಆಮೇಲೆ ಅವನು ನಿಮಗೆ ಗೊತ್ತಿಲ್ಲದ ದೇವರನ್ನು ಅನುಸರಿಸಲು ನಿಮಗೆ ಹೇಳಬಹುದು. ಅಂಥ ಮನುಷ್ಯನಿಗೆ ಕಿವಿಗೊಡಬೇಡಿ. ದೇವರು ನಿಮ್ಮನ್ನು ಪರೀಕ್ಷೆ ಮಾಡುತ್ತಿದ್ದಾನೆ. ನಿಮ್ಮ ದೇವರಾದ ಯೆಹೋವನನ್ನು ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಪ್ರೀತಿಸುತ್ತೀರೋ ಇಲ್ಲವೋ ಎಂದು ನಿಮ್ಮನ್ನು ಪರೀಕ್ಷಿಸುವನು. ನೀವು ನಿಮ್ಮ ದೇವರಾದ ಯೆಹೋವನನ್ನು ಅನುಸರಿಸಬೇಕು, ಗೌರವಿಸಬೇಕು, ಆತನ ಆಜ್ಞೆಗಳಿಗೆ ವಿಧೇಯರಾಗಬೇಕು. ಆತನು ಹೇಳಿದಂತೆ ನಡೆಯಬೇಕು ಮತ್ತು ಆತನನ್ನು ತೊರೆದುಬಿಡದೆ ಸೇವಿಸಬೇಕು. ಅಂಥ ಪ್ರವಾದಿ ಅಥವಾ ಕನಸಿನ ಅರ್ಥ ಹೇಳುವವನನ್ನು ಕೊಂದು ಹಾಕಬೇಕು. ಯಾಕೆಂದರೆ ಅವನು ಯೆಹೋವನನ್ನು ತೊರೆಯಲು ಪ್ರೇರೇಪಿಸಿದನಲ್ಲಾ? ದೇವರಾದ ಯೆಹೋವನೇ ನಿಮ್ಮನ್ನು ಈಜಿಪ್ಟಿನಿಂದ ಬಿಡಿಸಿದವನು. ಆತನು ನಿಮಗೆ ಹೇಳಿದ ನಿಯಮಗಳಿಗೆ ವಿರುದ್ಧವಾಗಿ ನಡೆಯಲು ಪ್ರೇರೇಪಿಸುವವನನ್ನು ಕೊಲ್ಲಬೇಕು; ನಿಮ್ಮ ಮಧ್ಯದಿಂದ ಅಂಥ ದುಷ್ಟತನವನ್ನು ತೆಗೆದುಹಾಕಬೇಕು.

“ನಿಮ್ಮ ಹತ್ತಿರದ ಸಂಬಂಧಿಕರಲ್ಲಿ ಯಾರಾದರೂ ಇತರ ದೇವರುಗಳನ್ನು ಅನುಸರಿಸಲು ನಿಮ್ಮನ್ನು ಗುಪ್ತವಾಗಿ ಒತ್ತಾಯ ಮಾಡಬಹುದು. ಅವರು ನಿಮ್ಮ ಸ್ವಂತ ಸಹೋದರನಾಗಿರಬಹುದು, ನಿಮ್ಮ ಮಕ್ಕಳಾಗಿರಬಹುದು, ನಿಮ್ಮ ಹೆಂಡತಿಯಾಗಿರಬಹುದು, ಅಥವಾ ಆಪ್ತಗೆಳೆಯನಾಗಿರಬಹುದು. ಅವರು ಬಂದು, ‘ಬಾ, ನಾವು ಬೇರೆ ದೇವರನ್ನು ಹಿಂಬಾಲಿಸೋಣ’ (ಈ ದೇವರನ್ನು ನೀವಾಗಲಿ ನಿಮ್ಮ ಪೂರ್ವಿಕರಾಗಲಿ ತಿಳಿದಿರಲಿಲ್ಲ. ಅವು ನಿಮ್ಮ ಸುತ್ತಮುತ್ತಲಿರುವ ಬೇರೆ ದೇಶಗಳಲ್ಲಿ ವಾಸವಾಗಿರುವ ಜನರ ದೇವರುಗಳು, ಅವುಗಳಲ್ಲಿ ಕೆಲವು ಹತ್ತಿರದವುಗಳಾಗಿವೆ; ಕೆಲವು ದೂರದವುಗಳಾಗಿವೆ.) ಎಂದರೆ ಆ ವ್ಯಕ್ತಿಯ ಸಲಹೆಗೆ ನೀವು ಒಪ್ಪಬಾರದು. ಅವನಿಗೆ ಕಿವಿಗೊಡಬೇಡಿ; ಅವನಿಗೆ ಕನಿಕರತೋರಬೇಡಿ; ಅವನು ಸ್ವತಂತ್ರನಾಗಿ ಹೋಗಲು ಬಿಡಬೇಡಿ; ಅವನನ್ನು ಸಂರಕ್ಷಿಸಬೇಡಿ. 9-10 ನೀವು ಅವನನ್ನು ಕೊಂದುಹಾಕಬೇಕು. ನೀವು ಕಲ್ಲೆಸೆದು ಅವನನ್ನು ಸಾಯಿಸಬೇಕು. ನೀವು ಅವನ ಮೇಲೆ ಮೊದಲನೆ ಕಲ್ಲನ್ನು ಎಸೆಯಬೇಕು. ಈಜಿಪ್ಟಿನ ದಾಸತ್ವದಿಂದ ನಿಮ್ಮನ್ನು ಬಿಡಿಸಿಕೊಂಡು ಬಂದ ನಿಮ್ಮ ದೇವರಾದ ಯೆಹೋವನಿಗೆ ವಿರುದ್ಧವಾಗಿ ನಡೆದುಕೊಳ್ಳುವಂತೆ ನಿಮ್ಮನ್ನು ಪ್ರೇರೇಪಿಸಿದವನು ಅವನೇ ಅಲ್ಲವೇ? 11 ಆಗ ಇಸ್ರೇಲಿನ ಎಲ್ಲಾ ಜನರಲ್ಲಿ ಭಯವುಂಟಾಗಿ ಅಂಥಾ ಕೆಟ್ಟ ಕೆಲಸವನ್ನು ಎಂದಿಗೂ ಮಾಡುವುದಿಲ್ಲ.

12 “ನಿಮ್ಮ ದೇವರಾದ ಯೆಹೋವನು ನಿಮ್ಮ ವಾಸಕ್ಕಾಗಿ ನಿಮಗೆ ಪಟ್ಟಣಗಳನ್ನು ಕೊಟ್ಟಿದ್ದಾನೆ. ಒಂದುವೇಳೆ, ಆ ಪಟ್ಟಣಗಳಲ್ಲಿ ಯಾವುದಾದರೊಂದರ ಬಗ್ಗೆ ನೀವು ಕೆಟ್ಟ ಸುದ್ದಿಯನ್ನು ಕೇಳಬಹುದು. 13 ನಿಮ್ಮ ಸ್ವಂತ ದೇಶದಲ್ಲಿರುವ ಕೆಲವು ಕೆಟ್ಟ ಜನರು ಕೆಟ್ಟದ್ದನ್ನು ಮಾಡಲು ತಮ್ಮ ಪಟ್ಟಣದ ಜನರನ್ನು ಒತ್ತಾಯಪಡಿಸುತ್ತಿದ್ದಾರೆಂದು ನೀವು ಕೇಳಬಹುದು. ಅವರು ತಮ್ಮ ಪಟ್ಟಣದ ಜನರಿಗೆ, ‘ನಾವು ಹೋಗಿ ಬೇರೆ ದೇವರುಗಳ ಸೇವೆಮಾಡೋಣ’ ಎಂದು ಹೇಳಬಹುದು. (ಈ ದೇವರುಗಳನ್ನು ನೀವು ಹಿಂದೆಂದೂ ತಿಳಿದಿಲ್ಲ.) 14 ನೀವು ಇಂಥ ಸುದ್ದಿಯನ್ನು ಕೇಳಿದರೆ, ಅದು ಸತ್ಯವೇ ಎಂಬುದನ್ನು ತಿಳಿದುಕೊಳ್ಳಲು ನಿಮ್ಮಿಂದಾದಷ್ಟು ಪ್ರಯತ್ನಿಸಬೇಕು. ಅದು ಸತ್ಯವೆಂಬುದು ನಿಮಗೆ ತಿಳಿದುಬಂದರೆ ಮತ್ತು ಅಂಥ ಭಯಂಕರ ಸಂಗತಿಯು ನಿಜವಾಗಿಯೂ ಸಂಭವಿಸಿತೆಂದು ನೀವು ರುಜುವಾತುಪಡಿಸಲು ಶಕ್ತರಾಗಿದ್ದರೆ, 15 ನೀವು ಆ ಪಟ್ಟಣದ ಜನರನ್ನು ದಂಡಿಸಬೇಕು; ಅವರೆಲ್ಲರನ್ನೂ ಕೊಲ್ಲಬೇಕು; ಅವರ ಎಲ್ಲಾ ಪಶುಗಳನ್ನು ಸಹ ಕೊಲ್ಲಬೇಕು. ಆ ಪಟ್ಟಣವನ್ನು ಸಂಪೂರ್ಣವಾಗಿ ನಾಶಮಾಡಬೇಕು. 16 ನೀವು ಆ ಪಟ್ಟಣದಲ್ಲಿದ್ದ ಎಲ್ಲಾ ಬೆಲೆಬಾಳುವ ವಸ್ತುಗಳನ್ನು ಪಟ್ಟಣದ ಮಧ್ಯದಲ್ಲಿ ತಂದುಹಾಕಿ ಅದಕ್ಕೆ ಬೆಂಕಿಹೊತ್ತಿಸಿ ಇಡೀ ಪಟ್ಟಣವನ್ನು ಬೆಂಕಿಯಿಂದ ಸುಡಬೇಕು. ಇದು ದೇವರಾದ ಯೆಹೋವನಿಗೆ ಸರ್ವಾಂಗಹೋಮವಾಗುವುದು. ಆ ಪಟ್ಟಣವು ಕಲ್ಲುಗಳ ರಾಶಿಯಾಗಿ ಪರಿಣಮಿಸುವುದು ಮತ್ತು ಯಾರೂ ಆ ಪಟ್ಟಣವನ್ನು ಮತ್ತೆ ಕಟ್ಟಬಾರದು. 17 ಆ ಪಟ್ಟಣದಲ್ಲಿರುವ ಪ್ರತಿಯೊಂದು ವಸ್ತು ನಾಶವಾಗಬೇಕು. ಅದರಲ್ಲಿ ಯಾವುದನ್ನಾದರೂ ನೀವು ನಿಮ್ಮ ಉಪಯೋಗಕ್ಕೆ ಇಟ್ಟುಕೊಳ್ಳಬಾರದು. ನೀವು ಹೀಗೆ ಮಾಡಿದರೆ ಯೆಹೋವನು ನಿಮ್ಮ ಮೇಲೆ ಸಿಟ್ಟುಗೊಳ್ಳುವುದಿಲ್ಲ. ಆತನು ನಿಮ್ಮ ಮೇಲೆ ದಯೆತೋರಿಸುವನು. ನಿಮ್ಮ ಪೂರ್ವಿಕರಿಗೆ ವಾಗ್ದಾನ ಮಾಡಿದ ಪ್ರಕಾರ ನಿಮ್ಮ ದೇಶವನ್ನು ವಿಸ್ತಾರ ಮಾಡುವನು. 18 ನಿಮ್ಮ ದೇವರಾದ ಯೆಹೋವನಿಗೆ ನೀವು ಕಿವಿಗೊಟ್ಟರೆ, ನಾನು ನಿಮಗೆ ಕೊಡುವ ಆತನ ಎಲ್ಲಾ ಆಜ್ಞೆಗಳಿಗೆ ವಿಧೇಯರಾದರೆ ಇದು ಸಂಭವಿಸುವುದು. ನಿಮ್ಮ ದೇವರಾದ ಯೆಹೋವನು ಸರಿಯೆಂದು ಹೇಳುವ ಕಾರ್ಯಗಳನ್ನೇ ನೀವು ಮಾಡಬೇಕು.

ಇಸ್ರೇಲರು ದೇವಜನರು

14 “ನೀವು ನಿಮ್ಮ ದೇವರಾದ ಯೆಹೋವನ ಮಕ್ಕಳು. ನಿಮ್ಮಲ್ಲಿ ಯಾರಾದರೂ ಸತ್ತರೆ ನೀವು ತಲೆಬೋಳಿಸಿಕೊಂಡಾಗಲಿ ನಿಮ್ಮನ್ನು ಕತ್ತರಿಸಿಕೊಂಡಾಗಲಿ ನಿಮ್ಮ ದುಃಖವನ್ನು ಪ್ರದರ್ಶಿಸಕೂಡದು. ಯಾಕೆಂದರೆ ನೀವು ಬೇರೆಯವರಿಗಿಂತ ವಿಭಿನ್ನರು. ನೀವು ಯೆಹೋವನ ವಿಶೇಷ ಜನರಾಗಿದ್ದೀರಿ. ಲೋಕದ ಎಲ್ಲಾ ಜನರಲ್ಲಿ ಯೆಹೋವನು ನಿಮ್ಮನ್ನು ತನ್ನ ಸ್ವಕೀಯ ಜನಾಂಗವನ್ನಾಗಿ ಆರಿಸಿಕೊಂಡಿದ್ದಾನೆ.

ಇಸ್ರೇಲರು ತಿನ್ನಬಹುದಾದ ಆಹಾರ

“ಯೆಹೋವನು ಅಸಹ್ಯಪಡುವ ವಸ್ತುಗಳನ್ನು ನೀವು ತಿನ್ನಬಾರದು. ನೀವು ಹಸು, ಕುರಿ, ಆಡು, ಜಿಂಕೆ, ದುಪ್ಪಿ, ಸಾರಂಗ, ಕಾಡುಕುರಿ, ಕಾಡುಮೇಕೆ, ಕಡವೆ, ಬೆಟ್ಟದ ಆಡು ಇವುಗಳನ್ನು ತಿನ್ನಬಹುದು. ಗೊರಸು ಸೀಳಿರುವ ಮತ್ತು ಮೆಲುಕು ಹಾಕುವ ಪ್ರಾಣಿಯನ್ನು ನೀವು ತಿನ್ನಬಹುದು. ಆದರೆ ಒಂಟೆ, ಮೊಲ, ಬೆಟ್ಟದ ಮೊಲ ಇವುಗಳನ್ನು ತಿನ್ನಬಾರದು. ಈ ಪ್ರಾಣಿಗಳು ಮೆಲುಕು ಹಾಕುತ್ತವೆ ಆದರೆ ಅವುಗಳ ಗೊರಸು ಸೀಳಿಲ್ಲ. ಆದ್ದರಿಂದ ಅವುಗಳು ಶುದ್ಧಪ್ರಾಣಿಗಳಲ್ಲ. ನೀವು ಅವುಗಳನ್ನು ಆಹಾರವಾಗಿ ಉಪಯೋಗಿಸಕೂಡದು. ನೀವು ಹಂದಿಗಳನ್ನು ತಿನ್ನಬಾರದು. ಅವುಗಳ ಗೊರಸುಗಳು ಸೀಳಿವೆ; ಆದರೆ ಅವುಗಳು ಮೆಲುಕು ಹಾಕುವುದಿಲ್ಲ. ಆದ್ದರಿಂದ ಹಂದಿಯು ನಿಮಗೆ ಶುದ್ಧ ಆಹಾರವಾಗುವುದಿಲ್ಲ; ಹಂದಿಯ ಹೆಣವನ್ನೂ ನೀವು ಮುಟ್ಟಬಾರದು.

“ಮೀನುಗಳಲ್ಲಿ ಪರೆ ಮತ್ತು ಈಜುರೆಕ್ಕೆಗಳಿರುವುದನ್ನು ಆಹಾರವಾಗಿ ಉಪಯೋಗಿಸಬಹುದು. 10 ಪರೆ, ಈಜುರೆಕ್ಕೆಗಳಿಲ್ಲದ ಮೀನುಗಳನ್ನು ತಿನ್ನಬಾರದು. ಅವು ಅಶುದ್ಧ.

11 “ನೀವು ಶುದ್ಧಪಕ್ಷಿಗಳನ್ನು ತಿನ್ನಬಹುದು. 12 ಆದರೆ, ಗಿಡುಗ, ರಣಹದ್ದು, ಕ್ರೌಂಚ, 13 ಸಕಲವಿಧವಾದ ಹದ್ದು, ಗಿಡುಗಗಳು, 14 ಸಕಲ ವಿಧವಾದ ಕಾಗೆಗಳು, 15 ಗೂಬೆಗಳು, ಸಣ್ಣಗೂಬೆಗಳು, ಕಡಲಕಾಗೆ, 16-17 ಸಕಲವಿಧವಾದ ಗೂಬೆಗಳು, 18 ಕೊಕ್ಕರೆಗಳು, ಬಕಪಕ್ಷಿ, ಬಾವಲಿಗಳು ಅಶುದ್ಧವಾದ ಕಾರಣ ತಿನ್ನಬಾರದು.

19 “ರೆಕ್ಕೆಯುಳ್ಳ ಹುಳಗಳೆಲ್ಲಾ ಅಶುದ್ಧ. ಆದ್ದರಿಂದ ಅವುಗಳನ್ನು ತಿನ್ನಬೇಡಿ. 20 ಆದರೆ ನೀವು ಶುದ್ಧವಾದ ಯಾವ ಪಕ್ಷಿಯನ್ನು ಬೇಕಾದರೂ ತಿನ್ನಬಹುದು.

21 “ಸತ್ತುಬಿದ್ದ ಯಾವ ಪ್ರಾಣಿಯನ್ನಾಗಲೀ ತಿನ್ನಬಾರದು. ನಿಮ್ಮ ಊರಲ್ಲಿರುವ ಪರದೇಶಿಗೆ ಕೊಡಿರಿ. ಅವನು ತಿನ್ನಬಹುದು, ಅಥವಾ ಆ ಸತ್ತ ಪ್ರಾಣಿಯನ್ನು ಪರದೇಶಿಗೆ ಮಾರಬಹುದು. ಆದರೆ ನೀವು ತಿನ್ನಬಾರದು. ಯಾಕೆಂದರೆ ನೀವು ಯೆಹೋವನ ಜನರಾಗಿದ್ದೀರಿ; ಆತನ ಸ್ವಕೀಯ ಪ್ರಜೆಗಳಾಗಿದ್ದೀರಿ. ಆಡಿನ ಮರಿಯನ್ನು ಅದರ ತಾಯಿಯ ಹಾಲಿನಲ್ಲಿ ಬೇಯಿಸಬೇಡಿರಿ.

ದಶಮಾಂಶ

22 “ಪ್ರತಿ ವರ್ಷ ನಿಮ್ಮ ಹೊಲದ ಬೆಳೆಯಲ್ಲಿ ಹತ್ತನೆಯ ಒಂದು ಅಂಶವನ್ನು ಪ್ರತ್ಯೇಕಿಸಿಡಿರಿ. 23 ನಿಮ್ಮ ದೇವರಾದ ಯೆಹೋವನು ತನ್ನ ವಿಶೇಷ ವಾಸಸ್ಥಾನವಾಗಿ ಯಾವ ಸ್ಥಳವನ್ನು ಆರಿಸಿಕೊಳ್ಳುತ್ತಾನೋ ಆ ಸ್ಥಳಕ್ಕೆ ನೀವು ಹೋಗಬೇಕು. ನಿಮ್ಮ ದೇವರಾದ ಯೆಹೋವನ ಜೊತೆಯಲ್ಲಿರುವುದಕ್ಕಾಗಿ ನೀವು ಅಲ್ಲಿಗೆ ಹೋಗಬೇಕು. ಆ ಸ್ಥಳದಲ್ಲಿ, ನೀವು ಬೆಳೆಯುವ ಬೆಳೆಗಳಲ್ಲಿ ಹತ್ತನೆ ಒಂದು ಭಾಗವನ್ನು, ನಿಮ್ಮ ಧಾನ್ಯಗಳಲ್ಲಿ ಹತ್ತನೆ ಒಂದು ಭಾಗವನ್ನು, ನಿಮ್ಮ ಹೊಸ ದ್ರಾಕ್ಷಾರಸವನ್ನು, ನಿಮ್ಮ ಎಣ್ಣೆಯನ್ನು, ನಿಮ್ಮ ಹಿಂಡುಗಳ ಮತ್ತು ಮಂದೆಗಳ ಚೊಚ್ಚಲು ಪಶುಗಳನ್ನು ಯೆಹೋವನ ಪ್ರಸನ್ನತೆಯಲ್ಲಿ ತಿನ್ನಬೇಕು. ನಿಮ್ಮ ದೇವರಾದ ಯೆಹೋವನನ್ನು ಗೌರವಿಸಬೇಕೆಂಬುದನ್ನು ನೀವು ಯಾವಾಗಲೂ ಈ ರೀತಿಯಲ್ಲಿ ಜ್ಞಾಪಕ ಮಾಡಿಕೊಳ್ಳುವಿರಿ. 24 ಒಂದುವೇಳೆ ಆ ವಿಶೇಷ ಸ್ಥಳವು ನೀವು ಪ್ರಯಾಣ ಮಾಡಲಾರದಷ್ಟು ದೂರವಾಗಿದ್ದರೆ, ಯೆಹೋವನು ಆಶೀರ್ವದಿಸಿದ ನಿಮ್ಮ ಎಲ್ಲಾ ಬೆಳೆಗಳಲ್ಲಿ ದಶಾಂಶವನ್ನು ಅಲ್ಲಿಗೆ ಕೊಂಡೊಯ್ಯಲು ಸಾಧ್ಯವಾಗದಿದ್ದಲ್ಲಿ, 25 ದಶಾಂಶದ ಆ ಬೆಳೆಗಳನ್ನು ಮಾರಿ, ಬಂದ ಹಣವನ್ನು ಯೆಹೋವನು ಆರಿಸಿಕೊಂಡಿರುವ ವಿಶೇಷ ಸ್ಥಳಕ್ಕೆ ತೆಗೆದುಕೊಂಡು ಹೋಗಿ. 26 ಅಲ್ಲಿ ನಿಮಗೆ ಬೇಕಾದ ದನಕುರಿಗಳನ್ನು ಮತ್ತು ನಿಮಗೆ ಬೇಕಾಗುವ ಆಹಾರವಸ್ತುಗಳನ್ನು ಮತ್ತು ಪಾನೀಯಗಳನ್ನು ಆ ಹಣದಿಂದ ಖರೀದಿಮಾಡಿ ನೀವೂ ನಿಮ್ಮ ಕುಟುಂಬದವರೂ ನಿಮ್ಮ ದೇವರಾದ ಯೆಹೋವನ ಆ ಸ್ಥಳದಲ್ಲಿ ತಿಂದು ಸಂತೋಷಪಡಿ. 27 ನಿಮ್ಮ ಊರಲ್ಲಿ ನೆಲೆಸಿರುವ ಲೇವಿಯರನ್ನು ಮರೆಯಬೇಡಿರಿ. ನಿಮ್ಮ ಆಹಾರದಲ್ಲಿ ಅವರಿಗೂ ಪಾಲುಕೊಡಿರಿ. ಯಾಕೆಂದರೆ ಅವರಿಗೆ ದೇಶದಲ್ಲಿ ನಿಮ್ಮ ಹಾಗೆ ಸ್ವಾಸ್ತ್ಯ ದೊರಕುವುದಿಲ್ಲ.

28 “ಮೂರು ವರ್ಷಕ್ಕೊಮ್ಮೆ ನಿಮ್ಮ ದವಸಧಾನ್ಯಗಳ ಹತ್ತನೆಯ ಒಂದು ಭಾಗವನ್ನು ನಿಮ್ಮ ಊರಿನಲ್ಲಿ ಶೇಖರಿಸಿಡಿರಿ. 29 ಇದು ಲೇವಿಯರಿಗಾಗಿ. ಯಾಕೆಂದರೆ ಅವರಿಗೆ ಸ್ವಂತ ಭೂಮಿ ಇಲ್ಲವಲ್ಲಾ. ಅಲ್ಲದೆ ಈ ಧಾನ್ಯವನ್ನು ನಿಮ್ಮ ಊರಲ್ಲಿರುವ ಬಡಜನರಿಗೋಸ್ಕರವಾಗಿಯೂ ಪರದೇಶಿಗಳಿಗಾಗಿಯೂ ವಿಧವೆಯರಿಗಾಗಿಯೂ ಅನಾಥ ಮಕ್ಕಳಿಗಾಗಿಯೂ ಉಪಯೋಗಿಸಬೇಕು. ಅವರು ಬಂದು ಊಟಮಾಡಿ ತೃಪ್ತರಾಗಲಿ. ನೀವು ಹೀಗೆ ಮಾಡಿದರೆ ನಿಮ್ಮ ದೇವರಾದ ಯೆಹೋವನು ನಿಮ್ಮ ಕಾರ್ಯಗಳನ್ನೆಲ್ಲಾ ಸಫಲಪಡಿಸಿ ಆಶೀರ್ವದಿಸುವನು.

ಸಾಲಗಳನ್ನು ವಜಾಮಾಡುವ ವಿಶೇಷ ವರ್ಷ

15 “ಪ್ರತೀ ಏಳು ವರ್ಷಗಳ ಅಂತ್ಯದಲ್ಲಿ ನೀವು ಕೊಟ್ಟ ಸಾಲಗಳನ್ನು ವಜಾಮಾಡಬೇಕು. ಒಬ್ಬನು ಇನ್ನೊಬ್ಬ ಇಸ್ರೇಲನಿಗೆ ಸಾಲಕೊಟ್ಟರೆ ಆ ಸಾಲವನ್ನು ವಜಾಮಾಡಬೇಕು. ತನ್ನ ಸಹೋದರನಾದ ಇಸ್ರೇಲನಿಂದ ಸಾಲ ಹಿಂದೆ ಕೇಳಬಾರದು. ಆ ವರ್ಷದಲ್ಲಿ ಸಾಲವನ್ನೆಲ್ಲಾ ವಜಾ ಮಾಡಬೇಕೆಂಬುದಾಗಿ ದೇವರು ಆದೇಶವನ್ನು ನೀಡಿದ್ದಾನೆ. ಸಾಲಗಾರನು ಪರದೇಶಿಯಾಗಿದ್ದರೆ ಅವನು ಸಾಲ ಹಿಂತಿರುಗಿಸಬೇಕು. ಆದರೆ ಇಸ್ರೇಲರಲ್ಲಿ ಯಾರಾದರೂ ನಿಮ್ಮಿಂದ ಸಾಲ ತೆಗೆದುಕೊಂಡಿದ್ದರೆ ಅದನ್ನು ವಜಾ ಮಾಡಬೇಕು. ನಿಮ್ಮ ದೇಶದಲ್ಲಿ ಯಾರೂ ಬಡವರಾಗಿರಬಾರದು. ಯಾಕೆಂದರೆ ಯೆಹೋವನೇ ನಿಮಗೆ ಈ ದೇಶವನ್ನು ಕೊಡುತ್ತಿದ್ದಾನೆ; ಮತ್ತು ಯೆಹೋವನು ನಿಮ್ಮನ್ನು ಅಧಿಕವಾಗಿ ಆಶೀರ್ವದಿಸುತ್ತಾನೆ. ನೀವು ಆತನ ಆಜ್ಞೆಗಳನ್ನು ಅನುಸರಿಸುವವರಾಗಿದ್ದಲ್ಲಿ, ಆತನ ವಿಧಿಕ್ರಮಗಳಿಗೆ ವಿಧೇಯರಾಗಿದ್ದಲ್ಲಿ ದೇವರು ನಿಮ್ಮನ್ನು ಆಶೀರ್ವದಿಸುವನು. ಆತನು ಮಾಡಿದ ವಾಗ್ದಾನದ ಪ್ರಕಾರ ಆಶೀರ್ವದಿಸುವನು. ಆಗ ನಿಮ್ಮಲ್ಲಿ ಬೇರೆ ಜನಾಂಗಗಳಿಗೆ ಸಾಲ ಕೊಡಲು ಯಥೇಚ್ಛವಾಗಿ ಹಣವಿರುವುದು. ನಿಮಗೆ ಬೇರೆಯವರಿಂದ ಹಣ ಸಾಲ ತೆಗೆದುಕೊಳ್ಳುವ ಅವಶ್ಯಕತೆ ಇರುವುದಿಲ್ಲ. ನೀವು ಎಷ್ಟೋ ದೇಶಗಳನ್ನು ಆಳುವಿರಿ. ಆದರೆ ಆ ದೇಶಗಳು ನಿಮ್ಮನ್ನು ಆಳವು.

“ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ದೇಶದಲ್ಲಿ ನೀವು ವಾಸಿಸುವಾಗ ಒಂದುವೇಳೆ ನಿಮ್ಮ ಮಧ್ಯದಲ್ಲಿ ಒಬ್ಬ ಬಡವನಿರಬಹುದು. ನೀವು ಸ್ವಾರ್ಥರಾಗಿ, ಅವನಿಗೆ ಸಹಾಯಮಾಡಲು ನಿರಾಕರಿಸಬಾರದು. ನಿಮ್ಮಲ್ಲಿರುವುದನ್ನು ನೀವು ಅವನೊಂದಿಗೆ ಹಂಚಿಕೊಳ್ಳಿ. ಅವನ ಅಗತ್ಯತೆಗೆ ತಕ್ಕಂತೆ ಸಾಲಕೊಡಿರಿ.

“ಸಾಲ ವಜಾಮಾಡುವ ಏಳನೆಯ ವರ್ಷ ಸಮೀಪವಾಯಿತೆಂದು ನೀವು ಯಾರಿಗೂ ಸಾಲ ಕೊಡದೇ ಸಹಾಯ ಮಾಡದೇ ಇರಬಾರದು. ಅಂಥಾ ದುಷ್ಟ ಆಲೋಚನೆ ನಿಮ್ಮ ಮನಸ್ಸಿನೊಳಗೆ ಹುಟ್ಟದಿರಲಿ. ಸಹಾಯದ ಅಗತ್ಯವಿರುವ ವ್ಯಕ್ತಿಯ ಬಗ್ಗೆ ನಿಮ್ಮಲ್ಲಿ ಯಾವ ಕೆಟ್ಟ ಆಲೋಚನೆಯೂ ಇರಬಾರದು. ನೀವು ಆ ಬಡ ವ್ಯಕ್ತಿಗೆ ಸಹಾಯ ಮಾಡದಿದ್ದರೆ ನಿಮ್ಮ ವಿರುದ್ಧವಾಗಿ ಅವನು ಯೆಹೋವನಿಗೆ ದೂರು ಹೇಳುವನು. ಆಗ ನೀವು ಯೆಹೋವನ ಮುಂದೆ ದೋಷಿಗಳಾಗಿ ಕಂಡುಬರುವಿರಿ.

10 “ಆ ಬಡ ಮನುಷ್ಯನಿಗೆ ನಿಮ್ಮಿಂದ ಎಷ್ಟು ಸಹಾಯ ಮಾಡಲು ಸಾಧ್ಯವಿದೆಯೋ ಅಷ್ಟು ಸಹಾಯಮಾಡಿ; ಕೊಡುವುದಕ್ಕೆ ಬೇಸರಪಡಬೇಡಿ. ಯಾಕೆಂದರೆ ನಿಮ್ಮ ದೇವರಾದ ಯೆಹೋವನು ನಿಮ್ಮ ಒಳ್ಳೆಯ ಕಾರ್ಯಗಳಿಗಾಗಿ ನಿಮ್ಮನ್ನು ಆಶೀರ್ವದಿಸುವನು; ನಿಮ್ಮ ಕೆಲಸವನ್ನೆಲ್ಲಾ ಸಫಲಪಡಿಸುವನು. 11 ನಿಮ್ಮ ದೇಶದಲ್ಲಿ ಯಾವಾಗಲೂ ಬಡಜನರು ಇರುತ್ತಾರೆ. ಅದಕ್ಕಾಗಿಯೇ ನಿಮ್ಮ ಸಹೋದರರಿಗೆ ಸಹಾಯ ಮಾಡಬೇಕೆಂದು ನಿಮಗೆ ಆಜ್ಞಾಪಿಸುತ್ತೇನೆ.

ಗುಲಾಮರನ್ನು ಸ್ವತಂತ್ರರನ್ನಾಗಿ ಮಾಡುವುದು

12 “ನೀವು ಹೀಬ್ರೂ ಮನುಷ್ಯನನ್ನೋ ಸ್ತ್ರೀಯನ್ನೋ ನಿಮ್ಮ ಗುಲಾಮರಾಗಿ ಕ್ರಯಕ್ಕೆ ತೆಗೆದುಕೊಳ್ಳಬಹುದು. ಅವರನ್ನು ನಿಮ್ಮ ಗುಲಾಮರಾಗಿ ಆರು ವರ್ಷಗಳ ಕಾಲ ಇಟ್ಟುಕೊಳ್ಳಬಹುದು. ಆದರೆ ಏಳನೆಯ ವರ್ಷದಲ್ಲಿ ನೀವು ಅವರನ್ನು ಸ್ವತಂತ್ರರಾಗಿ ಬಿಟ್ಟುಬಿಡಬೇಕು. 13 ಅವರನ್ನು ಹಿಂದಕ್ಕೆ ಕಳುಹಿಸುವಾಗ ಬರೀಗೈಯಲ್ಲಿ ಕಳುಹಿಸಬಾರದು. 14 ನೀವು ಅವರಿಗೆ ನಿಮ್ಮ ಪಶುಗಳಲ್ಲಿ ಕೆಲವನ್ನು, ಸ್ವಲ್ಪ ಧಾನ್ಯವನ್ನು ಮತ್ತು ಸ್ವಲ್ಪ ದ್ರಾಕ್ಷಾರಸವನ್ನು ಕೊಡಬೇಕು. ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಆಶೀರ್ವದಿಸಿ ನಿಮಗೆ ಹೇರಳವಾಗಿ ಅನುಗ್ರಹಿಸಿದ್ದಾನೆ. ಆದ್ದರಿಂದ ನಿಮ್ಮ ಗುಲಾಮರಿಗೆ ಒಳ್ಳೆಯವುಗಳನ್ನು ಹೇರಳವಾಗಿ ಕೊಡಿರಿ. 15 ನೀವು ಈಜಿಪ್ಟಿನಲ್ಲಿ ದಾಸತ್ವದಲ್ಲಿದ್ದುದನ್ನು ನೆನಪುಮಾಡಿರಿ. ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಬಿಡಿಸಿದನು. ಆದ್ದರಿಂದಲೇ ನಾನು ಈ ಆಜ್ಞೆಯನ್ನು ನಿಮಗೆ ಕೊಡುತ್ತಿದ್ದೇನೆ.

16 “ಆದರೆ ನಿಮ್ಮ ಗುಲಾಮರಲ್ಲಿ ಒಬ್ಬನು, ‘ನಾನು ನಿಮ್ಮನ್ನು ಬಿಟ್ಟುಹೋಗುವುದಿಲ್ಲ’ ಎಂದು ಹೇಳಿದರೆ, ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಅವನು ಪ್ರೀತಿಸುವುದರಿಂದ ಮತ್ತು ನಿಮ್ಮೊಂದಿಗೆ ಒಳ್ಳೆಯ ಜೀವಿತವನ್ನು ಅವನು ಅನುಭವಿಸಿದ್ದರಿಂದ ಅವನು ನಿಮ್ಮೊಂದಿಗೆ ಇರಲು ಇಷ್ಟಪಟ್ಟರೆ, 17 ಅವನನ್ನು ನಿಮ್ಮ ಬಾಗಿಲಿನ ನಿಲುವು ಕಂಬದ ಬಳಿಯಲ್ಲಿ ನಿಲ್ಲಿಸಿ ಅವನ ಕಿವಿಯನ್ನು ಒಂದು ಹರಿತವಾದ ಸಾಧನದಿಂದ ರಂಧ್ರ ಮಾಡಬೇಕು. ಇದು, ಅವನು ನಿಮ್ಮ ಶಾಶ್ವತ ಗುಲಾಮನು ಎಂದು ತೋರಿಸುವುದು. ಗುಲಾಮಳಿಗೂ ಇದು ಅನ್ವಯಿಸುತ್ತದೆ.

18 “ನಿಮ್ಮ ಗುಲಾಮರನ್ನು ಸ್ವತಂತ್ರರಾಗಿ ಬಿಡಬೇಕಲ್ಲಾ ಎಂದು ಬೇಸರಪಡಬೇಡಿ. ಅವರು ಅರ್ಧಕೂಲಿ ತೆಗೆದುಕೊಂಡು ಆರು ವರ್ಷ ನಿಮ್ಮ ಸೇವೆ ಮಾಡಿದ್ದಾರಲ್ಲಾ? ನಿಮ್ಮ ಕಾರ್ಯಗಳನ್ನೆಲ್ಲಾ ನಿಮ್ಮ ದೇವರಾದ ಯೆಹೋವನು ಸಫಲಪಡಿಸುವನು.

ಚೊಚ್ಚಲ ಪ್ರಾಣಿಗಳ ಬಗ್ಗೆ ನಿಯಮಗಳು

19 “ನಿಮ್ಮ ಹಿಂಡಿನಲ್ಲಾಗಲಿ ಹಟ್ಟಿಯಲ್ಲಾಗಲಿ ಚೊಚ್ಚಲ ಮರಿಗಳು ನನಗೆ ವಿಶೇಷವಾದವುಗಳು. ನೀವು ಅವುಗಳನ್ನು ಯೆಹೋವನಿಗೆ ಸಮರ್ಪಿಸಬೇಕು. ಅಂಥಾ ಪ್ರಾಣಿಗಳನ್ನು ನಿಮ್ಮ ಕೆಲಸಕಾರ್ಯಗಳಿಗಾಗಿ ಉಪಯೋಗಿಸಕೂಡದು. ಮತ್ತು ಅಂಥಾ ಕುರಿಮರಿಗಳ ಉಣ್ಣೆಯನ್ನು ಕತ್ತರಿಸಬಾರದು. 20 ಪ್ರತಿ ವರ್ಷ, ಚೊಚ್ಚಲು ಪ್ರಾಣಿಗಳನ್ನು ನಿಮ್ಮ ದೇವರಾದ ಯೆಹೋವನು ಆರಿಸಿದ ಸ್ಥಳದಲ್ಲಿ ನೀವು ನಿಮ್ಮ ಹೆಂಡತಿ ಮಕ್ಕಳೊಂದಿಗೆ ತಿನ್ನಬೇಕು.

21 “ಆದರೆ ಆ ಚೊಚ್ಚಲು ಪ್ರಾಣಿಗಳು ಕುಂಟಾಗಿದ್ದರೆ, ಕುರುಡಾಗಿದ್ದರೆ ಅಥವಾ ಬೇರೆ ಯಾವ ಅಂಗವಿಕಲತೆಗೆ ಒಳಗಾಗಿದ್ದರೆ, ನಿಮ್ಮ ದೇವರಾದ ಯೆಹೋವನಿಗೆ ಅವುಗಳನ್ನು ಸಮರ್ಪಿಸಕೂಡದು. 22 ಅವುಗಳನ್ನು ನಿಮ್ಮ ಮನೆಗಳಲ್ಲಿಯೇ ಬೇಕಾದರೆ ತಿನ್ನಬಹುದು. ಅದನ್ನು ಯಾರು ಬೇಕಾದರೂ ಅಂದರೆ ಶುದ್ಧರೂ ಅಶುದ್ಧರೂ ತಿನ್ನಬಹುದು. ಜಿಂಕೆಯನ್ನು, ಟಗರನ್ನು ತಿನ್ನಲು ಯಾವ ನಿಯಮಗಳು ಇವೆಯೋ, ಅದೇ ನಿಯಮಗಳು ಇದಕ್ಕೂ ಅನ್ವಯಿಸುತ್ತವೆ. 23 ಅವುಗಳ ರಕ್ತವನ್ನು ತಿನ್ನಬಾರದು. ಅದನ್ನು ನೀರಿನಂತೆ ನೆಲದ ಮೇಲೆ ಚೆಲ್ಲಿಬಿಡಬೇಕು.

ಮಾರ್ಕ 12:28-44

ಅತ್ಯಂತ ಮುಖ್ಯ ಆಜ್ಞೆ ಯಾವುದು?

(ಮತ್ತಾಯ 22:34-40; ಲೂಕ 10:25-28)

28 ಈ ವಾದವಿವಾದವನ್ನು ಕೇಳುತ್ತಿದ್ದ ಧರ್ಮೋಪದೇಶಕರಲ್ಲಿ ಒಬ್ಬನು ಯೇಸು ಸದ್ದುಕಾಯರಿಗೆ ಹಾಗೂ ಫರಿಸಾಯರಿಗೆ ಒಳ್ಳೆಯ ಉತ್ತರ ಕೊಟ್ಟದ್ದನ್ನು ಗಮನಿಸಿ, ಆತನ ಬಳಿಗೆ ಬಂದು, “ಆಜ್ಞೆಗಳಲ್ಲೆಲ್ಲಾ ಅತ್ಯಂತ ಮುಖ್ಯವಾದ ಆಜ್ಞೆ ಯಾವುದು?” ಎಂದು ಕೇಳಿದನು.

29 ಅದಕ್ಕೆ ಯೇಸು, “ಇಸ್ರೇಲಿನ ಜನರೇ ಕೇಳಿರಿ, ‘ನಮ್ಮ ದೇವರಾದ ಪ್ರಭುವೊಬ್ಬನೇ ದೇವರು. 30 ನಿಮ್ಮ ದೇವರಾದ ಪ್ರಭುವನ್ನು ನೀವು ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಪೂರ್ಣಬುದ್ಧಿಯಿಂದಲೂ ಪೂರ್ಣಶಕ್ತಿಯಿಂದಲೂ ಪ್ರೀತಿಸಬೇಕು.’(A) ಇದೇ ಅತ್ಯಂತ ಮುಖ್ಯವಾದ ಆಜ್ಞೆ. 31 ‘ನೀವು ನಿಮ್ಮನ್ನು ಪ್ರೀತಿಸುವಂತೆ ನಿಮ್ಮ ನೆರೆಯವರನ್ನು ಪ್ರೀತಿಸಬೇಕು’(B) ಎಂಬುದೇ ಅತ್ಯಂತ ಮುಖ್ಯವಾದ ಎರಡನೇ ಆಜ್ಞೆ. ಇವುಗಳೇ ಅತ್ಯಂತ ಮುಖ್ಯವಾದವು” ಎಂದು ಹೇಳಿದನು.

32 ಆಗ ಅವನು, “ಉಪದೇಶಕನೇ, ಅದು ಒಳ್ಳೆಯ ಉತ್ತರ. ನೀನು ಸರಿಯಾಗಿ ಹೇಳಿದೆ. ದೇವರೊಬ್ಬನೇ ಪ್ರಭು. 33 ಆತನಲ್ಲದೆ ಬೇರೆ ದೇವರಿಲ್ಲ. ದೇವರನ್ನು ಪೂರ್ಣಹೃದಯದಿಂದ, ಪೂರ್ಣಬುದ್ಧಿಯಿಂದ ಹಾಗೂ ಪೂರ್ಣಶಕ್ತಿಯಿಂದ ಪ್ರೀತಿಸಬೇಕು ಮತ್ತು ಒಬ್ಬ ವ್ಯಕ್ತಿಯು ತನ್ನನ್ನು ಪ್ರೀತಿಸುವಂತೆಯೇ ಇತರರನ್ನೂ ಪ್ರೀತಿಸಬೇಕು. ನಾವು ದೇವರಿಗೆ ಅರ್ಪಿಸುವ ಪಶುಯಜ್ಞಗಳಿಗಿಂತಲೂ ಈ ಆಜ್ಞೆಗಳು ಹೆಚ್ಚು ಮುಖ್ಯವಾಗಿವೆ” ಎಂದು ಉತ್ತರಿಸಿದನು.

34 ಅವನ ಬುದ್ಧಿವಂತಿಕೆಯ ಉತ್ತರವನ್ನು ಕೇಳಿದ ಯೇಸು, “ನೀನು ದೇವರ ರಾಜ್ಯಕ್ಕೆ ಹತ್ತಿರವಾಗಿರುವೆ” ಎಂದನು. ಅಂದಿನಿಂದ, ಯೇಸುವಿಗೆ ಹೆಚ್ಚು ಪ್ರಶೆಗಳನ್ನು ಕೇಳಲು ಯಾರಿಗೂ ಸಾಕಷ್ಟು ಧೈರ್ಯ ಬರಲಿಲ್ಲ.

ಮೆಸ್ಸೀಯನು ದಾವೀದನ ಮಗನೋ ಅಥವಾ ದಾವೀದನ ಪ್ರಭುವೋ?

(ಮತ್ತಾಯ 22:41-46; ಲೂಕ 20:41-44)

35 ಯೇಸು ದೇವಾಲಯದಲ್ಲಿ ಉಪದೇಶಿಸುತ್ತಿದ್ದಾಗ ಆತನು ಅವರಿಗೆ, “ಕ್ರಿಸ್ತನು ದಾವೀದನ ಮಗನೆಂದು ಧರ್ಮೋಪದೇಶಕರು ಹೇಳುವುದೇಕೆ?

36 ‘ಪ್ರಭುವು ನನ್ನ ಪ್ರಭುವಿಗೆ,
ನಾನು ನಿನ್ನ ವಿರೋಧಿಗಳನ್ನು ನಿನಗೆ ಪಾದಪೀಠವನ್ನಾಗಿ ಮಾಡುವ ತನಕ
    ನನ್ನ ಬಲಗಡೆಯಲ್ಲಿ ನನ್ನೊಂದಿಗೆ ಕುಳಿತುಕೊಂಡಿರು’(C)

ಎಂದು ಹೇಳಿದ್ದಾನೆ ಎಂಬುದಾಗಿ ದಾವೀದನೇ ಪವಿತ್ರಾತ್ಮ ಪ್ರೇರಣೆಯಿಂದ ಬರೆದಿದ್ದಾನಲ್ಲಾ! 37 ದಾವೀದನೇ ಕ್ರಿಸ್ತನನ್ನು ‘ಪ್ರಭು’ ಎಂದು ಕರೆದಿರುವಾಗ ಕ್ರಿಸ್ತನು ದಾವೀದನ ಮಗನಾಗುವುದು ಹೇಗೆ ಸಾಧ್ಯ?” ಎಂದು ಪ್ರಶ್ನಿಸಿದನು. ಯೇಸುವಿನ ಮಾತನ್ನು ಕೇಳಿ, ಅನೇಕ ಜನರು ಬಹಳ ಸಂತೋಷಪಟ್ಟರು.

ಯೇಸು ಧರ್ಮೋಪದೇಶಕರನ್ನು ಖಂಡಿಸಿದ್ದು

(ಮತ್ತಾಯ 23:6-7; ಲೂಕ 20:45-47)

38 ಯೇಸು ತನ್ನ ಉಪದೇಶವನ್ನು ಮುಂದುವರಿಸಿ, “ಧರ್ಮೋಪದೇಶಕರ ಬಗ್ಗೆ ಎಚ್ಚರಿಕೆಯಿಂದಿರಿ! ಅವರು ನಿಲುವಂಗಿಗಳನ್ನು ಧರಿಸಿಕೊಂಡು ತಿರುಗಾಡುತ್ತಾರೆ. ಅವರು ಪೇಟೆಬೀದಿಗಳಲ್ಲಿ ಜನರಿಂದ ಗೌರವ ಪಡೆಯಲು ಅಪೇಕ್ಷಿಸುತ್ತಾರೆ. 39 ಸಭಾಮಂದಿರಗಳಲ್ಲಿ ಮತ್ತು ಔತಣಗಳಲ್ಲಿ ಉನ್ನತ ಆಸನಗಳನ್ನು ಬಯಸುತ್ತಾರೆ. 40 ಅವರು ವಿಧವೆಯರ ಆಸ್ತಿಯನ್ನು ಕಸಿದುಕೊಳ್ಳುತ್ತಾರೆ. ಉದ್ದುದ್ದ ಪ್ರಾರ್ಥನೆಗಳನ್ನು ಮಾಡುವುದರ ಮೂಲಕ ತಮ್ಮನ್ನು ತಾವೇ ಒಳ್ಳೆಯವರೆಂದು ತೋರಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ದೇವರು ಈ ಜನರನ್ನು ಕಠಿಣವಾಗಿ ಶಿಕ್ಷಿಸುತ್ತಾನೆ” ಎಂದು ಹೇಳಿದನು.

ಬಡವಿಧವೆಯ ಕಾಣಿಕೆ

(ಲೂಕ 21:1-4)

41 ಯೇಸು ದೇವಾಲಯದಲ್ಲಿ ಕಾಣಿಕೆ ಪೆಟ್ಟಿಗೆಗಳ ಎದುರಿನಲ್ಲಿ ಕುಳಿತಿದ್ದಾಗ, ಜನರು ಪೆಟ್ಟಿಗೆಯಲ್ಲಿ ಹಣ ಹಾಕುವುದನ್ನು ಗಮನಿಸಿದನು. ಅನೇಕ ಶ್ರೀಮಂತ ಜನರು ಹೆಚ್ಚು ಹಣವನ್ನು ಕೊಟ್ಟರು. 42 ನಂತರ ಒಬ್ಬ ಬಡವಿಧವೆ ಬಂದು, ಎರಡು ತಾಮ್ರದ ನಾಣ್ಯಗಳನ್ನು[a] ಅಂದರೆ ಒಂದು ಪೈಸೆಯನ್ನು ಹಾಕಿದಳು.

43 ಯೇಸು ತನ್ನ ಶಿಷ್ಯರನ್ನು ಬಳಿಗೆ ಕರೆದು, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಕಾಣಿಕೆ ಹಾಕಿದವರೆಲ್ಲರಲ್ಲಿ ಈ ಬಡವಿಧವೆ ಹೆಚ್ಚು ಹಾಕಿದ್ದಾಳೆ. 44 ಉಳಿದವರಾದರೊ ತಮಗೆ ಸಾಕಾಗಿ ಉಳಿದದ್ದರಲ್ಲಿ ಸ್ವಲ್ಪ ಹಾಕಿದರು. ಈಕೆಯಾದರೊ ತನ್ನ ಬಡತನದಲ್ಲಿಯೂ ತನಗಿದ್ದದ್ದನ್ನೆಲ್ಲ ಕೊಟ್ಟುಬಿಟ್ಟಳು. ಈಕೆಗೆ ಆ ಹಣದ ಅಗತ್ಯವಿತ್ತು” ಎಂದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International