Old/New Testament
ಇಸ್ರೇಲ್, ದೇವಜನಾಂಗ
7 “ನಿಮಗೆ ಸ್ವಾಸ್ತ್ಯವಾಗಿ ಕೊಡುವ ದೇಶಕ್ಕೆ ಯೆಹೋವನು ನಿಮ್ಮನ್ನು ನಡೆಸುವನು. ನಿಮಗಿಂತ ಬಲಿಷ್ಠವಾಗಿದ್ದು ಅಲ್ಲಿ ವಾಸಿಸುತ್ತಿರುವ ಹಿತ್ತಿಯರು, ಗಿರ್ಗಾಷಿಯರು, ಅಮೋರಿಯರು, ಕಾನಾನ್ಯರು, ಪೆರಿಜ್ಜೀಯರು, ಹಿವ್ವಿಯರು ಮತ್ತು ಯೆಬೂಸಿಯರು ಎಂಬ ಏಳು ಜನಾಂಗಗಳನ್ನು ಆ ದೇಶದಿಂದ ನಿಮಗಾಗಿ ಹೊರಗಟ್ಟುವನು. 2 ನಿಮ್ಮ ದೇವರಾದ ಯೆಹೋವನು ಆ ಜನಾಂಗಗಳನ್ನು ನಿಮಗೆ ಅಧೀನಪಡಿಸುವನು. ನೀವು ಅವರನ್ನು ಸೋಲಿಸಿಬಿಡುವಿರಿ. ನೀವು ಅವರನ್ನು ಸಂಪೂರ್ಣವಾಗಿ ನಾಶಮಾಡಬೇಕು. ಅವರೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳಬೇಡಿ ಮತ್ತು ಅವರಿಗೆ ಕರುಣೆಯನ್ನು ತೋರಬೇಡಿ. 3 ಅವರೊಳಗಿಂದ ಹೆಣ್ಣನ್ನು ತರಬೇಡಿ. ನಿಮ್ಮ ಗಂಡುಮಕ್ಕಳಾಗಲಿ ಹೆಣ್ಣುಮಕ್ಕಳಾಗಲಿ ಅವರನ್ನು ಮದುವೆಯಾಗಬಾರದು. 4 ಯಾಕೆಂದರೆ, ನನ್ನನ್ನು ಹಿಂಬಾಲಿಸದಂತೆ ಅವರು ನಿಮ್ಮ ಮಕ್ಕಳನ್ನು ಮಾರ್ಪಡಿಸುವರು. ಆಗ ನಿಮ್ಮ ಮಕ್ಕಳು ಅನ್ಯದೇವರುಗಳ ಸೇವೆಮಾಡುವರು. ಆಗ ಯೆಹೋವನು ನಿಮ್ಮ ಮೇಲೆ ಬಹಳ ಕೋಪಗೊಂಡು ನಿಮ್ಮನ್ನು ಬೇಗನೆ ನಾಶಮಾಡುವನು.
ಸುಳ್ಳುದೇವರುಗಳನ್ನು ನಾಶಮಾಡಿರಿ
5 “ಆ ಜನಾಂಗಗಳ ಯಜ್ಞವೇದಿಕೆಗಳನ್ನೆಲ್ಲಾ ನೀವು ಕೆಡವಿಹಾಕಿ ನೆಲಸಮಮಾಡಬೇಕು. ಅವರ ಸ್ಮಾರಕ ಕಲ್ಲುಗಳನ್ನು ಒಡೆದು ಚೂರುಚೂರು ಮಾಡಬೇಕು. ಅವರ ಅಶೇರಸ್ತಂಭಗಳನ್ನು ಕತ್ತರಿಸಿಹಾಕಬೇಕು; ಅವುಗಳ ಪ್ರತಿಮೆಗಳನ್ನು ಸುಟ್ಟುಹಾಕಬೇಕು. 6 ಯಾಕೆಂದರೆ ನೀವು ಯೆಹೋವನ ಪ್ರಜೆಗಳಾಗಿದ್ದೀರಿ. ಭೂಲೋಕದಲ್ಲಿರುವ ಎಲ್ಲಾ ಜನಾಂಗಗಳಿಂದ ಆತನು ನಿಮ್ಮನ್ನು ಆರಿಸಿಕೊಂಡಿದ್ದಾನೆ. ನೀವು ಆತನ ಸ್ವಕೀಯ ಪ್ರಜೆಯಾಗಿದ್ದೀರಿ. 7 ದೇವರು ನಿಮ್ಮನ್ನೇ ಯಾಕೆ ಪ್ರೀತಿಸಿ ಆರಿಸಿಕೊಂಡನು? ನೀವು ದೊಡ್ಡ ಜನಾಂಗವಾಗಿರುವ ಕಾರಣದಿಂದಲ್ಲ, ನಿಜವಾಗಿಯೂ ನೀವು ಚಿಕ್ಕ ಜನಾಂಗವೇ. 8 ಆದರೆ ಯೆಹೋವನು ತನ್ನ ಪರಾಕ್ರಮವನ್ನು ತೋರಿಸಿ ನಿಮ್ಮನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದನು. ನಿಮ್ಮನ್ನು ದಾಸತ್ವದಿಂದ ಬಿಡುಗಡೆ ಮಾಡಿದನು; ಫರೋಹನ ಹಿಡಿತದಿಂದ ನಿಮ್ಮನ್ನು ಬಿಡಿಸಿದನು; ಯಾಕೆಂದರೆ ಆತನು ನಿಮ್ಮನ್ನು ಪ್ರೀತಿಸುತ್ತಾನೆ; ನಿಮ್ಮ ಪೂರ್ವಿಕರಿಗೆ ತಾನು ಮಾಡಿದ ವಾಗ್ದಾನವನ್ನು ನೆರವೇರಿಸಬೇಕೆಂದಿದ್ದಾನೆ.
9 “ಆದ್ದರಿಂದ ನಿಮ್ಮ ದೇವರಾದ ಯೆಹೋವನೊಬ್ಬನೇ ನಿಜವಾದ ದೇವರೆಂಬುದು ನಿಮಗೆ ತಿಳಿದಿರಲಿ. ನೀವು ಆತನ ಮೇಲೆ ಭರವಸವಿಡಬಹುದು. ಆತನು ತಾನು ಮಾಡಿದ ಒಡಂಬಡಿಕೆಯನ್ನು ನೆರವೇರಿಸುವಾತನಾಗಿದ್ದಾನೆ. ಆತನನ್ನು ಪ್ರೀತಿಸಿ ಆತನ ಕಟ್ಟಳೆಗಳಿಗೆ ವಿಧೇಯರಾಗುವವರನ್ನೆಲ್ಲಾ ಆತನು ಪ್ರೀತಿಸುತ್ತಾನೆ; ಅವರಿಗೆ ಕರುಣೆ ತೋರುತ್ತಾನೆ. ಈ ಪ್ರೀತಿ, ಕರುಣೆಗಳು ಸಾವಿರ ತಲೆಮಾರುಗಳವರೆಗೂ ಮುಂದುವರಿಯುವವು. 10 ಆದರೆ ಆತನು ತನ್ನನ್ನು ದ್ವೇಷಿಸುವವರನ್ನು ಶಿಕ್ಷಿಸುತ್ತಾನೆ. ತನ್ನನ್ನು ದ್ವೇಷಿಸುವ ಜನರನ್ನು ಶಿಕ್ಷಿಸಲು ಆತನು ನಿಧಾನ ಮಾಡುವುದಿಲ್ಲ. 11 ಆದ್ದರಿಂದ ನಾನು ಈ ದಿನ ನಿಮಗೆ ಕೊಡುವ ಆಜ್ಞಾವಿಧಿನಿಯಮಗಳನ್ನು ನೀವು ಚೆನ್ನಾಗಿ ಮನದಟ್ಟು ಮಾಡಿಕೊಳ್ಳಬೇಕು.
12 “ನೀವು ಈ ಕಟ್ಟಳೆಗಳಿಗೆ ಕಿವಿಗೊಡುವುದಾದರೆ ಮತ್ತು ಅವುಗಳಿಗೆ ಎಚ್ಚರಿಕೆಯಿಂದ ವಿಧೇಯರಾದರೆ, ನಿಮ್ಮ ದೇವರಾದ ಯೆಹೋವನು ನಿಮ್ಮ ಪೂರ್ವಿಕರೊಡನೆ ಮಾಡಿಕೊಂಡ ಪ್ರೀತಿಯ ಒಡಂಬಡಿಕೆಯನ್ನು ನೆರವೇರಿಸುವನು; 13 ಮತ್ತು ಆತನು ಆಶೀರ್ವದಿಸುವನು. ನಿಮ್ಮ ಜನಾಂಗವು ವೃದ್ಧಿಯಾಗುವಂತೆ ಮಾಡುವನು. ನಿಮ್ಮನ್ನೂ ನಿಮ್ಮ ಮಕ್ಕಳನ್ನೂ ಆಶೀರ್ವದಿಸುವನು. ನಿಮ್ಮ ಹೊಲಗಳಲ್ಲಿ ಸಮೃದ್ಧಿಯಾದ ಬೆಳೆಯು ಉಂಟಾಗುವಂತೆ ಆಶೀರ್ವದಿಸುವನು. ಆತನು ನಿಮಗೆ ಧಾನ್ಯ, ಹೊಸ ದ್ರಾಕ್ಷಾರಸ ಮತ್ತು ಎಣ್ಣೆಗಳನ್ನು ಕೊಡುವನು. ನಿಮ್ಮ ದನಕುರಿಗಳು ಮರಿಗಳನ್ನು ಈಯುವಂತೆ ಆಶೀರ್ವದಿಸುವನು. ನಿಮ್ಮ ಪೂರ್ವಿಕರಿಗೆ ವಾಗ್ದಾನ ಮಾಡಿದ ದೇಶದಲ್ಲಿ ನೀವು ನೆಲೆಸಿರುವಾಗ ನಿಮಗೆ ಈ ಆಶೀರ್ವಾದಗಳೆಲ್ಲಾ ಪ್ರಾಪ್ತವಾಗುವವು.
14 “ಎಲ್ಲಾ ಜನರಿಗಿಂತ ನೀವು ಹೆಚ್ಚಾಗಿ ಆಶೀರ್ವದಿಸಲ್ಪಡುವಿರಿ. ಪ್ರತಿಯೊಂದು ಕುಟುಂಬದಲ್ಲಿ ಹೆಚ್ಚು ಮಕ್ಕಳಿರುವರು. ನಿಮ್ಮ ಹಸುಗಳು ಮರಿಗಳನ್ನು ಈಯುವವು. 15 ನಿಮ್ಮಿಂದ ಎಲ್ಲಾ ತರದ ಕಾಯಿಲೆಗಳನ್ನು ಯೆಹೋವನು ತೆಗೆದುಹಾಕುವನು. ಈಜಿಪ್ಟಿನಲ್ಲಿ ನಿಮ್ಮನ್ನು ಬಾಧಿಸುತ್ತಿದ್ದ ಭಯಂಕರ ಕಾಯಿಲೆಗಳು ನಿಮ್ಮನ್ನು ಬಾಧಿಸುವುದಿಲ್ಲ. ಆ ಕಾಯಿಲೆಗಳು ನಿಮ್ಮ ವೈರಿಗಳಿಗೆ ಉಂಟಾಗುವವು. 16 ಆ ದೇಶದಲ್ಲಿ ನೀವು ಯೆಹೋವನ ಸಹಾಯದಿಂದ ಸೋಲಿಸುವ ಜನರನ್ನೆಲ್ಲಾ ಕೊಂದುಬಿಡಬೇಕು. ಅವರಿಗೆ ಕನಿಕರ ತೋರಬಾರದು. ಅವರ ದೇವರುಗಳನ್ನು ಪೂಜಿಸಕೂಡದು! ಯಾಕೆಂದರೆ ಅವು ನಿಮಗೆ ಉರುಲಾಗಿ ನಿಮ್ಮ ಜೀವಿತವನ್ನು ಹಾಳುಮಾಡುತ್ತವೆ.
ತನ್ನ ಜನರಿಗೆ ಸಹಾಯ ಮಾಡುವುದಾಗಿ ಯೆಹೋವನ ವಾಗ್ದಾನ
17 “ನಿಮ್ಮ ಮನಸ್ಸಿನಲ್ಲಿ, ‘ಈ ಜನಾಂಗಗಳು ನಮ್ಮ ಜನಾಂಗಗಳಿಗಿಂತ ದೊಡ್ಡದಾಗಿವೆ. ಇವರನ್ನು ಹೀಗೆ ಹೊರಡಿಸಲು ಸಾಧ್ಯವೇ ಎಂದು ಯಾಕೆ ಅಂದುಕೊಳ್ಳುತ್ತೀರಿ.’ 18 ನೀವು ಅವರಿಗೆ ಭಯಪಡಬಾರದು. ನಿಮ್ಮ ದೇವರಾದ ಯೆಹೋವನು ಫರೋಹನಿಗೂ ಈಜಿಪ್ಟಿನ ಎಲ್ಲಾ ಜನರಿಗೂ ಮಾಡಿದ್ದನ್ನು ನೆನಪು ಮಾಡಿಕೊಳ್ಳಿರಿ. 19 ಆತನು ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ನಡೆಸಿದ್ದನ್ನು ನೀವು ನೋಡಿದಿರಿ. ಆತನು ನಿಮ್ಮನ್ನು ಈಜಿಪ್ಟಿನಿಂದ ಕರೆದುಕೊಂಡು ಬರಲು ತನ್ನ ಮಹಾಶಕ್ತಿಯನ್ನೂ ಬಲವನ್ನೂ ಬಳಸಿದ್ದನ್ನು ನೀವು ನೋಡಿದಿರಿ. ನೀವು ಭಯಪಡುವ ಎಲ್ಲಾ ಜನರ ಮೇಲೆ ದೇವರಾದ ಯೆಹೋವನು ಅದೇ ಶಕ್ತಿಯನ್ನು ಬಳಸುವನು.
20 “ನಿಮ್ಮಿಂದ ತಪ್ಪಿಸಿಕೊಂಡು ಅಡಗಿಕೊಳ್ಳುವ ಜನರನ್ನು ಶಿಕ್ಷಿಸಲು ದೇವರು ಕಡಜದ ಹುಳಗಳನ್ನು ಅವರ ಮಧ್ಯಕ್ಕೆ ಕಳುಹಿಸುವನು ಮತ್ತು ಅವರನ್ನೆಲ್ಲಾ ನಾಶಮಾಡುವನು. 21 ಅವರಿಗೆ ನೀವು ಭಯಪಡಬೇಡಿರಿ; ಯಾಕೆಂದರೆ ನಿಮ್ಮ ದೇವರಾದ ಯೆಹೋವನು ನಿಮ್ಮೊಂದಿಗಿದ್ದಾನೆ. ಆತನು ಭಯಂಕರನೂ ಮಹಾ ದೇವರೂ ಆಗಿದ್ದಾನೆ. 22 ನಿಮ್ಮ ದೇವರಾದ ಯೆಹೋವನು ಆ ಜನಾಂಗಗಳವರನ್ನು ಸ್ವಲ್ಪ ಸ್ವಲ್ಪವಾಗಿಯೇ ಅಲ್ಲಿಂದ ತೆಗೆದುಬಿಡುವನು. ನೀವು ಒಂದೇ ಸಮಯಕ್ಕೆ ಎಲ್ಲರನ್ನು ನಾಶಮಾಡಬಾರದು. ಹಾಗೆ ಮಾಡಿದ್ದಲ್ಲಿ ದೇಶದಲ್ಲೆಲ್ಲಾ ಕಾಡುಪ್ರಾಣಿಗಳು ತುಂಬಿಹೋಗುತ್ತವೆ. 23 ನಿಮ್ಮ ದೇವರಾದ ಯೆಹೋವನು ಆ ಜನಾಂಗಗಳವರನ್ನು ಸೋಲಿಸಲು ನಿಮಗೆ ಅವಕಾಶ ಮಾಡಿಕೊಡುವನು. ಯುದ್ಧಮಾಡುವಾಗ ಅವರ ಮಧ್ಯದಲ್ಲಿ ಗಲಿಬಿಲಿ ಹುಟ್ಟಿಸಿ ಅವರು ನಾಶವಾಗುವಂತೆ ಮಾಡುವನು. 24 ಅವರ ರಾಜರನ್ನು ನೀವು ಸೋಲಿಸುವಂತೆ ಮಾಡುವನು. ನೀವು ಅವರನ್ನು ಕೊಂದು ಅವರ ಹೆಸರು ಉಳಿಯದಂತೆ ಮಾಡುವಿರಿ. ನಿಮ್ಮನ್ನು ಯಾರೂ ತಡೆಯಲಾರರು. ನೀವು ಪ್ರತಿಯೊಬ್ಬರನ್ನು ನಾಶಮಾಡಿಬಿಡುವಿರಿ.
25 “ಅವರ ದೇವರುಗಳ ಪ್ರತಿಮೆಗಳನ್ನು ಬೆಂಕಿಯಲ್ಲಿ ಸುಟ್ಟುಬಿಡಬೇಕು. ಅವರ ವಿಗ್ರಹಗಳಲ್ಲಿರುವ ಬೆಳ್ಳಿಬಂಗಾರಗಳನ್ನು ನೀವು ತೆಗೆದುಕೊಳ್ಳಬೇಡಿ. ನೀವು ತೆಗೆದುಕೊಂಡರೆ ಅವು ನಿಮಗೆ ಉರುಲಾಗಿ ನಿಮ್ಮನ್ನೇ ನಾಶಮಾಡುತ್ತವೆ. ಯಾಕೆಂದರೆ ನಿಮ್ಮ ದೇವರಾದ ಯೆಹೋವನು ವಿಗ್ರಹಗಳನ್ನು ದ್ವೇಷಿಸುತ್ತಾನೆ. 26 ಅಂಥ ಅಸಹ್ಯ ವಿಗ್ರಹಗಳನ್ನು ನಿಮ್ಮ ಮನೆಯೊಳಗೆ ತರಲೂಬಾರದು, ಅವುಗಳನ್ನು ಬಯಸಲೂಬಾರದು; ನೀವು ಅವುಗಳನ್ನು ದ್ವೇಷಿಸಬೇಕು ಮತ್ತು ನಾಶಮಾಡಬೇಕು. ಇಲ್ಲವಾದರೆ ನೀವೂ ಅವುಗಳಂತೆಯೇ ನಾಶನಕ್ಕೆ ಗುರಿಯಾಗುವಿರಿ.
ದೇವರಾದ ಯೆಹೋವನನ್ನು ಸ್ಮರಿಸಿರಿ
8 “ನಾನು ಈ ದಿನ ಕೊಡುವ ಎಲ್ಲಾ ಆಜ್ಞೆಗಳನ್ನು ನೀವು ಅನುಸರಿಸಬೇಕು. ಆಗ ನೀವು ದೊಡ್ಡ ಜನಾಂಗವಾಗಿ ಅಭಿವೃದ್ಧಿಯಾಗುವಿರಿ. ನಿಮ್ಮ ಪೂರ್ವಿಕರಿಗೆ ಯೆಹೋವನು ವಾಗ್ದಾನ ಮಾಡಿದ ದೇಶವನ್ನು ನೀವು ಪಡೆದುಕೊಳ್ಳುವಿರಿ. 2 ನಿಮ್ಮ ದೇವರಾದ ಯೆಹೋವನು ಈ ನಲವತ್ತು ವರ್ಷಗಳ ಕಾಲ ನಿಮ್ಮನ್ನು ಅರಣ್ಯ ಪ್ರಯಾಣದಲ್ಲಿ ಮೊದಲು ನಡೆಸಿದ್ದನ್ನು ನೀವು ಯಾವಾಗಲೂ ಸ್ಮರಿಸಬೇಕು. ಯೆಹೋವನು ನಿಮ್ಮನ್ನು ಪರೀಕ್ಷಿಸುತ್ತಿದ್ದನು ಮತ್ತು ನಿಮ್ಮನ್ನು ದೀನರನ್ನಾಗಿ ಮಾಡಬೇಕೆಂದಿದ್ದನು. ನಿಮ್ಮ ಹೃದಯದ ಆಲೋಚನೆಗಳನ್ನು ಆತನು ತಿಳಿದುಕೊಳ್ಳಬೇಕೆಂದಿದ್ದನು; ನೀವು ಆತನ ಆಜ್ಞೆಗಳಿಗೆ ವಿಧೇಯರಾಗುವಿರೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬೇಕೆಂದಿದ್ದನು. 3 ಯೆಹೋವನು ನಿಮ್ಮನ್ನು ದೀನರನ್ನಾಗಿ ಮಾಡಿ ನಿಮಗೆ ಹಸಿವೆಯಾಗುವಂತೆ ಮಾಡಿದನು. ಆ ಬಳಿಕ ಮನ್ನದ ಮೂಲಕ ನಿಮ್ಮ ಹಸಿವೆಯನ್ನು ನೀಗಿದನು. ಇದರ ವಿಷಯವಾಗಿ ನೀವು ಹಿಂದೆಂದೂ ಕೇಳಿರಲಿಲ್ಲ. ನಿಮ್ಮ ಪೂರ್ವಿಕರೂ ನೋಡಿರಲಿಲ್ಲ. ಆತನು ಹೀಗೇಕೆ ಮಾಡಿದನು? ಯಾಕೆಂದರೆ ಕೇವಲ ರೊಟ್ಟಿ ತಿಂದ ಮಾತ್ರದಿಂದ ಮನುಷ್ಯರು ಬದುಕದೆ ಯೆಹೋವನ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೇ ಬದುಕುವರೆಂಬುದನ್ನು ನೀವು ತಿಳಿಯಬೇಕೆಂದು ಹೀಗೆ ಮಾಡಿದನು. 4 ಆತನು ನಿಮ್ಮನ್ನು ಕಾಪಾಡಿ ಸಂರಕ್ಷಿಸಿದ್ದರಿಂದ ಈ ನಲವತ್ತು ವರ್ಷ ನಿಮ್ಮ ಬಟ್ಟೆಗಳು ಹರಿದುಹೋಗಲಿಲ್ಲ; ನಿಮ್ಮ ಕಾಲುಗಳು ಊದಿಕೊಳ್ಳಲಿಲ್ಲ. 5 ಇವೆಲ್ಲವನ್ನು ನಿಮ್ಮ ದೇವರಾದ ಯೆಹೋವನು ನಿಮಗೆ ಮಾಡಿದನು. ತಂದೆಯು ತನ್ನ ಮಗನನ್ನು ತಿದ್ದಿ ಶಿಸ್ತಿನಲ್ಲಿ ನಡೆಸುವಂತೆ ದೇವರು ನಿಮ್ಮೊಂದಿಗೆ ವರ್ತಿಸಿದನು.
6 “ಆತನ ಆಜ್ಞೆಗಳಿಗೆ ವಿಧೇಯರಾಗಿರಿ. ಆತನನ್ನು ಅನುಸರಿಸಿ ಗೌರವಿಸಿರಿ. 7 ನಿಮ್ಮ ದೇವರಾದ ಯೆಹೋವನು ಉತ್ತಮವಾದ ದೇಶವನ್ನು ನಿಮಗೆ ಕೊಡುತ್ತಿದ್ದಾನೆ. ಆ ದೇಶದಲ್ಲಿ ನೀರು ಸಮೃದ್ಧಿಯಾಗಿರುವುದು. ನೀರು ಕಣಿವೆಗಳಲ್ಲಿಯೂ ಬೆಟ್ಟಗಳಲ್ಲಿಯೂ ನೆಲದ ಮೇಲೂ ಹರಿದುಬರುವುದು. 8 ಆ ದೇಶವು ಗೋಧಿ, ಜವೆಗೋಧಿ, ದ್ರಾಕ್ಷಾಲತೆಗಳು, ಅಂಜೂರ, ದಾಳಿಂಬೆ ಮರಗಳಿಂದ ತುಂಬಿದೆ. ಅಲ್ಲಿ ಎಣ್ಣೆ, ಜೇನುತುಪ್ಪ ಧಾರಾಳವಾಗಿ ಸಿಗುವವು. 9 ಅಲ್ಲಿ ನೀವು ಯಥೇಚ್ಛವಾಗಿ ತಿನ್ನುವಿರಿ. ನಿಮಗೆ ಬೇಕಾದದ್ದೆಲ್ಲಾ ನಿಮಗಿರುವುದು. ಅಲ್ಲಿಯ ಕಲ್ಲುಗಳು ಕಬ್ಬಿಣದಂತಿವೆ. ಬೆಟ್ಟಗಳಿಂದ ನೀವು ತಾಮ್ರವನ್ನು ಅಗೆದು ತೆಗೆಯುವಿರಿ. 10 ನಿಮಗೆ ಬೇಕಾದಷ್ಟು ಆಹಾರ ಇರುವುದು. ಆಗ ನೀವು ನಿಮಗೆ ಉತ್ತಮ ದೇಶವನ್ನು ಕೊಟ್ಟಿರುವ ಯೆಹೋವ ದೇವರನ್ನು ಸ್ತುತಿಸುವಿರಿ.
ಯೆಹೋವನು ಮಾಡಿದ್ದನ್ನು ಮರೆಯಬೇಡಿರಿ
11 “ನೀವು ನಿಮ್ಮ ದೇವರಾದ ಯೆಹೋವನನ್ನು ಮರೆತುಬಿಡದಂತೆ ಎಚ್ಚರವಾಗಿರಿ. ನಾನು ಕೊಡುವ ವಿಧಿನಿಯಮಗಳಿಗೆ ವಿಧೇಯರಾಗಿರಿ. 12 ಆಗ ನಿಮಗೆ ಸಮೃದ್ಧಿಯಾಗಿ ಆಹಾರವಿರುವುದು. ನೀವು ಒಳ್ಳೆಯ ಮನೆಗಳನ್ನು ಕಟ್ಟಿಕೊಂಡು ವಾಸಿಸುವಿರಿ. 13 ನಿಮ್ಮ ಹಿಂಡು ವೃದ್ಧಿಯಾಗುವುದು. ನಿಮಗೆ ಬೆಳ್ಳಿಬಂಗಾರಗಳು ಹೇರಳವಾಗಿ ದೊರಕುವವು ಮತ್ತು ನೀವು ಪ್ರತಿಯೊಂದು ವಿಷಯದಲ್ಲೂ ಸಮೃದ್ಧಿಯನ್ನು ಕಾಣುವಿರಿ. 14 ಆಗ ನೀವು ಹೆಮ್ಮೆಯಿಂದ ಸೊಕ್ಕಿನ ಕಣ್ಣುಳ್ಳವರಾಗಿರಬೇಡಿ. ನಿಮ್ಮ ದೇವರಾದ ಯೆಹೋವನನ್ನು ಮರೆತುಬಿಡಬೇಡಿರಿ. ನೀವು ಈಜಿಪ್ಟಿನಲ್ಲಿ ಗುಲಾಮರಾಗಿದ್ದಾಗ ಆತನು ನಿಮ್ಮನ್ನು ಬಿಡಿಸಿ ಸ್ವತಂತ್ರರನ್ನಾಗಿ ಮಾಡಿದನು. 15 ಆತನು ನಿಮ್ಮನ್ನು ಭಯಂಕರವಾದ ಆ ಅಡವಿಯಲ್ಲಿ ಮೊದಲು ನಡೆಸಿದನು. ಅಲ್ಲಿ ವಿಷದ ಹಾವುಗಳು, ಚೇಳುಗಳು ಇದ್ದವು. ನೆಲವು ಕಾದಿದ್ದು ಎಲ್ಲಿಯೂ ನೀರು ಸಿಗುತ್ತಿರಲಿಲ್ಲ. ಆದರೆ ನಿಮ್ಮ ದೇವರಾದ ಯೆಹೋವನು ಬಂಡೆಯೊಳಗಿಂದ ನೀರನ್ನು ನಿಮಗೆ ಒದಗಿಸಿದನು. 16 ನಿಮ್ಮ ಪೂರ್ವಿಕರು ನೋಡಿಲ್ಲದ ಮನ್ನವನ್ನು ಯೆಹೋವನು ನಿಮಗೆ ಮರುಭೂಮಿಯಲ್ಲಿ ತಿನ್ನಲು ಕೊಟ್ಟನು. ಯೆಹೋವನು ನಿಮ್ಮನ್ನು ಪರೀಕ್ಷಿಸಿದನು. ನೀವು ಒಳ್ಳೆಯ ಫಲಭರಿತವಾದ ಜೀವಿತವನ್ನು ನಡೆಸಬೇಕೆಂದು ಯೆಹೋವನು ನಿಮ್ಮನ್ನು ದೀನರನ್ನಾಗಿ ಮಾಡಿದನು. 17 ‘ಇವೆಲ್ಲಾ ನಾವೇ ಸಂಪಾದಿಸಿದ್ದು, ನಮ್ಮ ಶಕ್ತಿಸಾಮರ್ಥ್ಯಗಳಿಂದ ಇವುಗಳನ್ನು ನಾವು ಪಡೆದೆವು’ ಎಂದು ನಿಮ್ಮೊಳಗೆ ಅಂದುಕೊಳ್ಳಬೇಡಿ. 18 ನಿಮ್ಮ ದೇವರಾದ ಯೆಹೋವನನ್ನು ಜ್ಞಾಪಕಮಾಡಿಕೊಳ್ಳಿ. ಇವೆಲ್ಲಾ ಸಂಪಾದಿಸುವುದಕ್ಕೆ ಆತನೇ ನಿಮಗೆ ಶಕ್ತಿ ಕೊಟ್ಟನು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಯೆಹೋವನು ನಿಮಗೆ ಹೀಗೆ ಮಾಡುವುದರ ಉದ್ದೇಶವೇನಾಗಿತ್ತು? ಆತನು ನಿಮ್ಮ ಪೂರ್ವಿಕರಿಗೆ ಮಾಡಿದ ವಾಗ್ದಾನವನ್ನು ನೆರವೇರಿಸಬೇಕೆಂಬುದೇ ಆತನ ಉದ್ದೇಶವಾಗಿತ್ತು.
19 “ನಿಮ್ಮ ದೇವರಾದ ಯೆಹೋವನನ್ನು ಮರೆತುಬಿಡಬೇಡಿ. ಅನ್ಯದೇವರುಗಳನ್ನು ಅನುಸರಿಸಬೇಡಿ. ಅವುಗಳನ್ನು ಪೂಜಿಸಬೇಡಿ; ಅವುಗಳ ಸೇವೆ ಮಾಡಬೇಡಿ. ಇಲ್ಲವಾದರೆ ನೀವು ಖಂಡಿತವಾಗಿ ನಾಶವಾಗುವಿರಿ. 20 ಯೆಹೋವನು ನಿಮಗೋಸ್ಕರ ಇತರ ಜನಾಂಗಗಳನ್ನು ನಾಶಮಾಡುತ್ತಾನೆ. ನಿಮ್ಮ ದೇವರಾದ ಯೆಹೋವನಿಗೆ ನೀವು ಕಿವಿಗೊಡದೆ ಅನ್ಯದೇವರುಗಳನ್ನು ಅನುಸರಿಸುವುದಾದರೆ ನೀವೂ ಅವರಂತೆ ನಾಶವಾಗುವಿರಿ.
ಯೆಹೋವನು ಇಸ್ರೇಲರೊಂದಿಗಿರುವನು
9 “ಇಸ್ರೇಲ್ ಜನರೇ, ಕೇಳಿರಿ. ಈ ದಿನ ನೀವು ಜೋರ್ಡನ್ ನದಿಯನ್ನು ದಾಟಿ ಆ ದೇಶವನ್ನು ಪ್ರವೇಶಿಸಿ ನಿಮಗಿಂತ ಬಲಿಷ್ಠವಾದ ಜನಾಂಗಗಳನ್ನು ಹೊಡೆದೋಡಿಸುವಿರಿ. ಅವರ ಪಟ್ಟಣಗಳು ದೊಡ್ಡದಾಗಿವೆ; ಅದರ ಗೋಡೆಗಳು ಆಕಾಶದಷ್ಟು ಎತ್ತರವಾಗಿವೆ; 2 ಅಲ್ಲಿಯ ಜನರು ಬಲಿಷ್ಠರಾಗಿದ್ದಾರೆ. ಅನಾಕ್ಯರು ಎತ್ತರವಾಗಿ ಬೆಳೆದವರು ಎಂದು ಆ ದೇಶಕ್ಕೆ ಹೋದ ಗೂಢಚಾರರು ನಿಮಗೆ ತಿಳಿಸಿದ್ದು ನೆನಪಿಲ್ಲವೇ? ‘ಅನಾಕ್ಯರ ಮುಂದೆ ಯಾರೂ ನಿಲ್ಲಲಾರರು’ ಎಂದು ಅವರು ಹೇಳಿದರು. 3 ಆದರೆ ನಿಮ್ಮ ದೇವರಾದ ಯೆಹೋವನು ನಿಮ್ಮ ಮುಂದೆ ನದಿಯನ್ನು ದಾಟುತ್ತಾನೆಂಬುದು ನಿಮಗೆ ನಿಶ್ಚಯವಾಗಿ ತಿಳಿದಿರಲಿ. ಆತನು ದಹಿಸುವ ಬೆಂಕಿಯಂತಿದ್ದಾನೆ. ಆತನು ಆ ಜನಾಂಗಗಳನ್ನು ಬೇಗನೆ ನಾಶಪಡಿಸುವನು; ನಿಮ್ಮ ಎದುರಿನಲ್ಲಿ ಅವರು ಬಿದ್ದುಹೋಗುವಂತೆ ಮಾಡುವನು. ಇದು ನೆರವೇರುವುದಾಗಿ ಯೆಹೋವನೇ ನಿಮಗೆ ವಾಗ್ದಾನ ಮಾಡಿದ್ದಾನೆ.
4 “ಅಲ್ಲಿಯ ಜನರನ್ನು ದೇವರಾದ ಯೆಹೋವನು ಹೊಡೆದೋಡಿಸುವನು. ಆದರೆ ನೀವು ನಿಮ್ಮ ಮನಸ್ಸಿನಲ್ಲಿ, ‘ನಾವು ನೀತಿವಂತರಾಗಿದುದ್ದರಿಂದ ಮತ್ತು ಒಳ್ಳೆಯವರಾಗಿದ್ದುದರಿಂದ ಆತನು ನಮ್ಮನ್ನು ಈ ಒಳ್ಳೆಯ ದೇಶಕ್ಕೆ ತಂದನು’ ಎಂದು ನೆನಸಿಕೊಳ್ಳಬೇಡಿ. ಅದು ಕಾರಣವಲ್ಲ. ಅಲ್ಲಿಯ ಜನರು ಬಹು ಕೆಟ್ಟವರಾಗಿದ್ದ ಕಾರಣ ಯೆಹೋವನು ಅವರನ್ನು ಹೊರಡಿಸಿದನು. 5 ನೀವು ಉತ್ತಮ ರೀತಿಯಲ್ಲಿ ಜೀವಿಸುವಿರಿ ಎಂದು ದೇವರು ನಿಮಗೆ ಆ ದೇಶವನ್ನು ಕೊಡುವುದಿಲ್ಲ. ಅವರು ಕೆಟ್ಟದ್ದಾಗಿ ಜೀವಿಸುತ್ತಿರುವುದರಿಂದ ದೇವರು ಅವರನ್ನು ಹೊರಡಿಸಿ ನೀವು ಆ ದೇಶವನ್ನು ಅನುಭವಿಸುವಂತೆ ಮಾಡಿದನು; ಆತನು ನಿಮ್ಮ ಪೂರ್ವಿಕರಾದ ಅಬ್ರಹಾಮನಿಗೆ, ಇಸಾಕನಿಗೆ, ಯಾಕೋಬನಿಗೆ ಕೊಟ್ಟಿರುವ ವಾಗ್ದಾನಗಳನ್ನು ನೆರವೇರಿಸುವುದಕ್ಕಾಗಿ ನಿಮಗೆ ಆ ದೇಶವನ್ನು ಕೊಡುವನು. 6 ನಿಮ್ಮ ದೇವರಾದ ಯೆಹೋವನು ಆ ಉತ್ತಮವಾದ ದೇಶವನ್ನು ನಿಮಗೆ ವಾಸಿಸಲು ಕೊಡುವನು. ನೀವು ಒಳ್ಳೆಯವರು ಎಂಬುದಾಗಿ ಅಲ್ಲ. ನಿಜವಾಗಿ ಹೇಳಬೇಕಾದರೆ ನೀವು ಹಠಮಾರಿಗಳು.
ಯೆಹೋವನ ಕೋಪವನ್ನು ನೆನಪಿಗೆ ತಂದುಕೊಳ್ಳಿರಿ
7 “ನೀವು ಅರಣ್ಯದಲ್ಲಿ ಪ್ರಯಾಣ ಮಾಡುತ್ತಿದ್ದಾಗ ನಿಮ್ಮ ದೇವರಾದ ಯೆಹೋವನನ್ನು ನೀವು ಸಿಟ್ಟಿಗೆಬ್ಬಿಸಿದ್ದನ್ನು ಮರೆಯಬೇಡಿರಿ. ನೀವು ಈಜಿಪ್ಟ್ ದೇಶವನ್ನು ಬಿಟ್ಟುಬಂದಂದಿನಿಂದ ಈ ದಿನದ ತನಕವೂ ಆತನ ಮಾತನ್ನು ಅನುಸರಿಸಲು ನಿರಾಕರಿಸಿರುವಿರಿ. 8 ನೀವು ಹೋರೇಬ್ ಎಂಬ ಸೀನಾಯ್ ಬೆಟ್ಟದಲ್ಲಿ ಯೆಹೋವನನ್ನು ಬಹಳ ಸಿಟ್ಟಿಗೆಬ್ಬಿಸಿದ್ದೀರಿ. ಯೆಹೋವನು ನಿಮ್ಮನ್ನು ನಾಶಪಡಿಸುವಷ್ಟು ಕೋಪಗೊಂಡಿದ್ದನು. 9 ನಾನು ಕಲ್ಲಿನ ಹಲಗೆಗಳನ್ನು ತೆಗೆದುಕೊಂಡು ಬರಲು ಬೆಟ್ಟದ ಮೇಲೇರಿದ್ದೆನು. ಯೆಹೋವ ದೇವರು ನಿಮ್ಮೊಂದಿಗೆ ಮಾಡಿಕೊಂಡ ಒಡಂಬಡಿಕೆ ಆ ಹಲಗೆಯ ಮೇಲೆ ಬರೆಯಲ್ಪಟ್ಟಿತ್ತು. ನಾನು ಆ ಬೆಟ್ಟದ ಮೇಲೆ ನಲವತ್ತು ದಿವಸ ಹಗಲಿರುಳು ಕಳೆದೆನು. ನಾನು ಅನ್ನವನ್ನಾಗಲಿ ನೀರನ್ನಾಗಲಿ ತೆಗೆದುಕೊಳ್ಳಲಿಲ್ಲ. 10 ಯೆಹೋವನು ತನ್ನ ಬೆರಳಿನಿಂದ ಕಲ್ಲಿನ ಹಲಗೆಗಳ ಮೇಲೆ ಆಜ್ಞೆಗಳನ್ನು ಬರೆದು ನನಗೆ ಕೊಟ್ಟನು. ನೀವು ಸೀನಾಯ್ ಬೆಟ್ಟದ ಬಳಿ ಸಮೂಹವಾಗಿ ಸೇರಿಬಂದಿದ್ದಾಗ ಆತನು ಬೆಂಕಿಯ ಜ್ವಾಲೆಯೊಳಗಿಂದ ನಿಮಗೆ ತಿಳಿಸಿದ ಪ್ರತಿಯೊಂದನ್ನೂ ಬರೆದಿದ್ದನು.
11 “ಹಾಗೆ ನಲವತ್ತು ದಿನಗಳ ಅಂತ್ಯದಲ್ಲಿ ಯೆಹೋವನು ಒಡಂಬಡಿಕೆಯನ್ನು ಬರೆದಿದ್ದ ಆ ಎರಡು ಕಲ್ಲಿನ ಹಲಗೆಗಳನ್ನು ನನಗೆ ಕೊಟ್ಟನು. 12 ಆಗ ಆತನು ನನಗೆ, ‘ಎದ್ದು ಬೇಗನೆ ಕೆಳಗಿಳಿ. ಯಾಕೆಂದರೆ ನೀನು ಈಜಿಪ್ಟಿನಿಂದ ಬಿಡಿಸಿತಂದ ಜನರು ತಮ್ಮನ್ನು ತಾವೇ ಕೆಡಿಸಿಕೊಂಡಿದ್ದಾರೆ. ಇಷ್ಟು ಬೇಗನೆ ಅವರು ನನ್ನ ಆಜ್ಞೆಗಳನ್ನು ಮೀರಿದ್ದಾರೆ. ಅವರು ಬಂಗಾರವನ್ನು ಕರಗಿಸಿ ತಮಗಾಗಿ ವಿಗ್ರಹವನ್ನು ಮಾಡಿಕೊಂಡಿದ್ದಾರೆ’ ಎಂದು ಹೇಳಿದನು.
13 “ಅಲ್ಲದೆ ಯೆಹೋವನು ನನಗೆ, ‘ನಾನು ಈ ಜನರನ್ನು ಗಮನಿಸುತ್ತಿದ್ದೇನೆ. ಇವರು ತುಂಬಾ ಹಠಮಾರಿಗಳು. 14 ಇವರನ್ನು ನಾನು ಸಂಪೂರ್ಣವಾಗಿ ನಾಶಮಾಡುತ್ತೇನೆ. ಅವರ ಹೆಸರುಗಳನ್ನು ಯಾರೂ ನೆನಪಿನಲ್ಲಿಟ್ಟುಕೊಳ್ಳದಂತೆ ಮಾಡುತ್ತೇನೆ. ಆಮೇಲೆ ನಾನು ನಿನ್ನಿಂದ ಬಲಿಷ್ಠವಾದ ಮಹಾಜನಾಂಗವನ್ನು ನಿರ್ಮಿಸುತ್ತೇನೆ’ ಎಂದು ಹೇಳಿದನು.
ಬಂಗಾರದ ಬಸವ
15 “ನಾನು ಕೂಡಲೇ ಬೆಟ್ಟದಿಂದ ಹಿಂತಿರುಗಿ ಬಂದೆನು. ಅದು ಬೆಂಕಿಯಿಂದ ಸುಡುತ್ತಲಿತ್ತು ಮತ್ತು ಒಡಂಬಡಿಕೆಯ ಕಲ್ಲಿನ ಹಲಗೆಗಳು ನನ್ನ ಬಳಿಯಲ್ಲಿ ಇದ್ದವು. 16 ನಾನು ಕೆಳಗೆ ನೋಡಿದಾಗ ಬಂಗಾರದಿಂದ ಬಸವನನ್ನು ಮಾಡಿಕೊಂಡು ಯೆಹೋವನ ವಿರುದ್ಧವಾಗಿ ಪಾಪ ಮಾಡಿದ್ದಿರಿ. ಯೆಹೋವನ ಆಜ್ಞೆಯನ್ನು ಅಷ್ಟು ಬೇಗನೇ ನೀವು ಉಲ್ಲಂಘಿಸಿದ್ದಿರಿ. 17 ನನ್ನ ಬಳಿಯಲ್ಲಿದ್ದ ಆ ಕಲ್ಲಿನ ಹಲಗೆಗಳನ್ನು ನಾನು ನೆಲಕ್ಕೆ ಅಪ್ಪಳಿಸಿದೆನು. ನಿಮ್ಮ ಕಣ್ಣೆದುರಿನಲ್ಲಿ ಅವುಗಳನ್ನು ತುಂಡುತುಂಡಾಗಿ ಮಾಡಿದೆನು. 18 ಆಮೇಲೆ ನಾನು ನಲವತ್ತು ದಿನ ಹಗಲಿರುಳು ಯೆಹೋವನ ಮುಂದೆ ಬೋರಲ ಬಿದ್ದಿದ್ದೆನು. ನಾನು ಊಟ ಮಾಡಲಿಲ್ಲ, ನೀರನ್ನು ಕುಡಿಯಲಿಲ್ಲ ಯಾಕೆಂದರೆ ನೀವು ಪಾಪಮಾಡಿ ಯೆಹೋವನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದ್ದರಿಂದ ಆತನು ಕೋಪಗೊಂಡಿದ್ದನು. 19 ಯೆಹೋವನ ಭಯಂಕರ ಕೋಪಕ್ಕೆ ನಾನು ಹೆದರಿದ್ದೆನು. ನಿಮ್ಮನ್ನು ನಾಶಮಾಡುವಷ್ಟರ ತನಕ ಆತನು ಕೋಪಗೊಂಡಿದ್ದನು. ಆದರೆ ಆತನು ನನ್ನ ಬಿನ್ನಹಗಳನ್ನು ಲಾಲಿಸಿದನು. 20 ಯೆಹೋವನು ಆರೋನನನ್ನು ನಾಶಪಡಿಸುವಷ್ಟು ಕೋಪೋದ್ರಿಕ್ತನಾಗಿದ್ದನು. ನಾನು ಅವನಿಗಾಗಿ ಪ್ರಾರ್ಥಿಸಿದೆನು. 21 ನೀವು ಮಾಡಿದ ಬಂಗಾರದ ಬಸವನನ್ನು ತೆಗೆದುಕೊಂಡು ಚೂರುಚೂರು ಮಾಡಿ, ಬೆಂಕಿಯಲ್ಲಿ ಸುಟ್ಟುಬಿಟ್ಟೆನು. ಮತ್ತೆ ಅದನ್ನು ಒಡೆದು ಧೂಳನ್ನಾಗಿ ಮಾಡಿ ಆ ಧೂಳನ್ನು ಬೆಟ್ಟದಿಂದ ಹರಿಯುತ್ತಿದ್ದ ನದಿಯಲ್ಲಿ ಬಿಸಾಡಿಬಿಟ್ಟೆನು.
ಇಸ್ರೇಲರನ್ನು ಮನ್ನಿಸಲು ದೇವರಿಗೆ ಮೋಶೆಯ ಬಿನ್ನಹ
22 “ಅದೇ ಪ್ರಕಾರ ತಬೇರಾ, ಮಸ್ಸಾ ಮತ್ತು ಕಿಬ್ರೋತ್‌ಹತಾವಾಗಳಲ್ಲಿಯೂ ನೀವು ಯೆಹೋವನನ್ನು ಸಿಟ್ಟಿಗೆಬ್ಬಿಸಿದ್ದಿರಿ. 23 ಕಾದೇಶ್‌ಬರ್ನೇಯದಿಂದ ಹೊರಡಲು ಆತನು ನಿಮಗೆ ಹೇಳಿದಾಗ ನೀವು ಆತನಿಗೆ ವಿಧೇಯರಾಗಲಿಲ್ಲ. ಆತನು ನಿಮಗೆ, ‘ನೀವು ಬೆಟ್ಟಪ್ರದೇಶವನ್ನು ಹತ್ತಿಹೋಗಿ ನಾನು ನಿಮಗೆ ಕೊಡುವ ದೇಶವನ್ನು ವಶಪಡಿಸಿಕೊಳ್ಳಿ’ ಎಂದು ಹೇಳಿದಾಗ ನಿಮ್ಮ ದೇವರಾದ ಯೆಹೋವನಿಗೆ ವಿಧೇಯರಾಗಲಿಲ್ಲ. ನೀವು ಆತನಲ್ಲಿ ಭರವಸೆ ಇಡಲಿಲ್ಲ. ನೀವು ಆತನ ಆಜ್ಞೆಗೆ ಕಿವಿಗೊಡಲಿಲ್ಲ. 24 ನಾನು ನಿಮ್ಮನ್ನು ತಿಳಿದಿರುವ ಕಾಲದಿಂದ ನೀವು ಯೆಹೋವನಿಗೆ ಅವಿಧೇಯರಾಗಿಯೇ ಇದ್ದೀರಿ.
25 “ನಾನು ಯೆಹೋವನ ಮುಂದೆ ನಲವತ್ತು ದಿನ ಹಗಲಿರುಳು ಬೋರಲಬಿದ್ದು ಆತನು ನಾಶಮಾಡಬೇಕೆಂದಿದ್ದ ನಿಮಗಾಗಿ ಪ್ರಾರ್ಥಿಸಿದೆನು. 26 ‘ನನ್ನ ಒಡೆಯನೇ, ಯೆಹೋವನೇ, ನಿನ್ನ ಜನರನ್ನು ನೀನು ನಾಶಮಾಡಬೇಡ. ಅವರು ನಿನ್ನ ಜನಾಂಗ. ನಿನ್ನ ಪರಾಕ್ರಮದಿಂದ ನೀನು ಈಜಿಪ್ಟಿನಿಂದ ಅವರನ್ನು ಬಿಡಿಸಿ ಹೊರತಂದಿರುವೆ. 27 ಯೆಹೋವನೇ, ನೀನು ಅಬ್ರಹಾಮನಿಗೆ, ಇಸಾಕನಿಗೆ, ಯಾಕೋಬನಿಗೆ ಮಾಡಿದ ವಾಗ್ದಾನವನ್ನು ನಿನ್ನ ನೆನಪಿಗೆ ತಂದುಕೋ. ಇವರು ಎಷ್ಟು ಹಠಮಾರಿಗಳೆಂಬುದನ್ನು ಮರೆತುಬಿಡು. ಅವರ ಪಾಪಮಾರ್ಗವನ್ನಾಗಲಿ ಪಾಪಗಳನ್ನಾಗಲಿ ನೋಡಬೇಡ. 28 ನೀನು ಇವರಿಗೆ ಶಿಕ್ಷೆಕೊಟ್ಟರೆ ಈಜಿಪ್ಟಿನವರು, “ದೇವರು ತನ್ನ ಜನರನ್ನು ತಾನು ವಾಗ್ದಾನ ಮಾಡಿದ ದೇಶಕ್ಕೆ ನಡೆಸಲು ಅಸಮರ್ಥನಾದನು. ಆತನು ಅವರನ್ನು ದ್ವೇಷಿಸುತ್ತಾನೆ; ಆದ್ದರಿಂದ ಅವರನ್ನು ಮರುಭೂಮಿಯಲ್ಲಿ ಹತಮಾಡಲು ಕೊಂಡೊಯ್ದಿದ್ದಾನೆ” ಎಂದು ಹೇಳುವರು. 29 ಆದರೆ ಅವರು ನಿನ್ನ ಜನರಾಗಿದ್ದಾರೆ. ಅವರು ನಿನಗೆ ಸಂಬಂಧಪಟ್ಟವರಾಗಿದ್ದಾರೆ; ನಿನ್ನ ಬಲಪರಾಕ್ರಮದಿಂದ ಅವರನ್ನು ದಾಸತ್ವದಿಂದ ಬಿಡುಗಡೆ ಮಾಡಿರುವೆ.’
19 ಆ ರಾತ್ರಿ ಯೇಸು ಮತ್ತು ಆತನ ಶಿಷ್ಯರು ಪಟ್ಟಣವನ್ನು ಬಿಟ್ಟುಹೋದರು.
ನಂಬಿಕೆಯ ಶಕ್ತಿ
(ಮತ್ತಾಯ 21:20-22)
20 ಮರುದಿನ ಬೆಳಿಗ್ಗೆ, ಯೇಸು ತನ್ನ ಶಿಷ್ಯರೊಂದಿಗೆ ಹೋಗುತ್ತಿದ್ದನು. ಹಿಂದಿನ ದಿನ ಯೇಸು ಶಪಿಸಿದ ಅಂಜೂರದ ಮರವನ್ನು ಶಿಷ್ಯರು ನೋಡಿದರು. ಅಂಜೂರದ ಮರವು ಬೇರುಸಹಿತ ಒಣಗಿಹೋಗಿತ್ತು. 21 ಪೇತ್ರನು ಆ ಮರವನ್ನು ಜ್ಞಾಪಿಸಿಕೊಂಡು, ಯೇಸುವಿಗೆ, “ಗುರುವೇ, ನೋಡು! ನಿನ್ನೆ ನೀನು ಶಪಿಸಿದ ಅಂಜೂರದ ಮರ ಒಣಗಿಹೋಗಿದೆ!” ಎಂದನು.
22 ಯೇಸು, “ದೇವರಲ್ಲಿ ನಂಬಿಕೆ ಇಡಿರಿ. 23 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ಈ ಬೆಟ್ಟಕ್ಕೆ, ‘ನೀನು ಹೋಗಿ ಸಮುದ್ರದೊಳಗೆ ಬೀಳು’ ಎಂದು ಹೇಳಿ, ಸಂಶಯವನ್ನೇಪಡದೆ, ನೀವು ಹೇಳಿದ್ದು ಖಂಡಿತವಾಗಿ ನೆರವೇರುತ್ತದೆ ಎಂದು ನಂಬಿದರೆ, ದೇವರು ಅದನ್ನು ನಿಮಗಾಗಿ ಮಾಡುತ್ತಾನೆ. 24 ಆದ್ದರಿಂದ ನೀವು ಪ್ರಾರ್ಥನೆಯಲ್ಲಿ ಬೇಡಿಕೊಂಡು, ಅದನ್ನೆಲ್ಲಾ ಹೊಂದಿಕೊಂಡಾಯಿತೆಂದು ನಂಬಿದರೆ, ಅದೆಲ್ಲಾ ನಿಮ್ಮದಾಗುತ್ತವೆ ಎಂದು ನಾನು ನಿಮಗೆ ಹೇಳುತ್ತೇನೆ. 25 ನೀವು ಪ್ರಾರ್ಥಿಸಲು ಸಿದ್ಧರಾಗಿರುವಾಗ, ನೀವು ಇನ್ನೊಬ್ಬನ ವಿಷಯದಲ್ಲಿ ಯಾವುದೇ ಕಾರಣದಿಂದಾಗಲಿ ಕೋಪದಿಂದಿರುವುದು ನಿಮ್ಮ ನೆನಪಿಗೆ ಬಂದರೆ, ಅವನನ್ನು ಕ್ಷಮಿಸಿಬಿಡಿ. ಆಗ ಪರಲೋಕದಲ್ಲಿರುವ ನಿಮ್ಮ ತಂದೆಯೂ ನಿಮ್ಮ ಪಾಪಗಳನ್ನು ಕ್ಷಮಿಸುವನು” ಎಂದು ಉತ್ತರಿಸಿದನು. 26 [a]
ಯೇಸುವಿನ ಅಧಿಕಾರವನ್ನು ಕುರಿತು ಯೆಹೂದ್ಯ ನಾಯಕರ ಸಂಶಯ
(ಮತ್ತಾಯ 21:23-27; ಲೂಕ 20:1-8)
27 ಯೇಸು ಮತ್ತು ಆತನ ಶಿಷ್ಯರು ಜೆರುಸಲೇಮಿಗೆ ಮತ್ತೆ ಹೋದರು. ಯೇಸು ದೇವಾಲಯದಲ್ಲಿ ತಿರುಗಾಡುತ್ತಿದ್ದಾಗ, ಮಹಾಯಾಜಕರು ಮತ್ತು ಹಿರಿಯ ಯೆಹೂದ್ಯನಾಯಕರು ಆತನ ಬಳಿಗೆ ಬಂದು, 28 “ಇವುಗಳನ್ನೆಲ್ಲ ಮಾಡಲು ನಿನಗೆ ಯಾವ ಅಧಿಕಾರವಿದೆ? ಈ ಅಧಿಕಾರವನ್ನು ನಿನಗೆ ಯಾರು ಕೊಟ್ಟರು? ನಮಗೆ ತಿಳಿಸು!” ಎಂದರು.
29 ಯೇಸು, “ನಾನೂ ನಿಮಗೊಂದು ಪ್ರಶ್ನೆಯನ್ನು ಕೇಳುತ್ತೇನೆ. ನೀವು ನನ್ನ ಪ್ರಶ್ನೆಗೆ ಉತ್ತರಿಸಿದರೆ ನಾನು ಯಾವ ಅಧಿಕಾರದಿಂದ ಇದನ್ನೆಲ್ಲಾ ಮಾಡುತ್ತಿದ್ದೇನೆ ಎಂಬುದನ್ನು ನಿಮಗೆ ತಿಳಿಸುತ್ತೇನೆ. 30 ಯೋಹಾನನು ಜನರಿಗೆ ದೀಕ್ಷಾಸ್ನಾನ ಮಾಡಿಸಿದ್ದು ದೇವರಿಂದ ಬಂದ ಅಧಿಕಾರದಿಂದಲೋ ಅಥವಾ ಮನುಷ್ಯರಿಂದ ಬಂದ ಅಧಿಕಾರದಿಂದಲೋ? ನನಗೆ ತಿಳಿಸಿ!” ಎಂದನು.
31 ಯೆಹೂದ್ಯನಾಯಕರು ಈ ಪ್ರಶ್ನೆಯ ಬಗ್ಗೆ ಚರ್ಚಿಸಿ ಒಬ್ಬರಿಗೊಬ್ಬರು, “‘ಯೋಹಾನನು ದೀಕ್ಷಾಸ್ನಾನ ಕೊಟ್ಟದ್ದು ದೇವರಿಂದ ಬಂದ ಅಧಿಕಾರದಿಂದ’ ಎಂದು ನಾವು ಉತ್ತರಿಸಿದರೆ, ಆಗ ‘ಮತ್ತೆ ನೀವು ಏಕೆ ಯೋಹಾನನನ್ನು ನಂಬಲಿಲ್ಲ?’ ಎಂದು ಯೇಸು ಕೇಳುತ್ತಾನೆ. 32 ಆದರೆ ‘ಯೋಹಾನನು ದೀಕ್ಷಾಸ್ನಾನ ಮಾಡಿಸಿದ್ದು ಮನುಷ್ಯನಿಂದ ಬಂದ ಅಧಿಕಾರದಿಂದ’ ಎಂದು ಹೇಳಿದರೆ, ಆಗ ಜನರು ನಮ್ಮ ಮೇಲೆ ಕೋಪಗೊಳ್ಳುತ್ತಾರೆ” ಎಂದು ಮಾತಾಡಿಕೊಂಡರು. ಜನರೆಲ್ಲರೂ ಯೋಹಾನನನ್ನು ಒಬ್ಬ ಪ್ರವಾದಿಯೆಂದು ನಂಬಿದ್ದರಿಂದ ಅವರು ಜನರಿಗೆ ಭಯಪಟ್ಟರು.
33 ಆದಕಾರಣ ಅವರು ಯೇಸುವಿಗೆ, “ನಮಗೆ ಗೊತ್ತಿಲ್ಲ” ಎಂದು ಉತ್ತರಿಸಿದರು.
ಯೇಸು ಅವರಿಗೆ, “ಹಾಗಾದರೆ ನಾನು ಸಹ ಯಾವ ಅಧಿಕಾರದಿಂದ ಇವುಗಳನ್ನು ಮಾಡುತ್ತಿದ್ದೇನೆಂದು ನಿಮಗೆ ಹೇಳುವುದಿಲ್ಲ” ಎಂದನು.
Kannada Holy Bible: Easy-to-Read Version. All rights reserved. © 1997 Bible League International