Old/New Testament
ಲೇವಿಯರ ಪಟ್ಟಣಗಳು
35 ಜೆರಿಕೊ ಪಟ್ಟಣದ ಆಚೆಕಡೆಯಲ್ಲಿ ಜೋರ್ಡನ್ ನದಿಯ ತೀರದ ಬಳಿಯಿಂದ ಮೋವಾಬ್ಯರ ಬಯಲಿನಲ್ಲಿ ಯೆಹೋವನು ಮೋಶೆಯೊಡನೆ ಮಾತಾಡಿ ಹೇಳಿದ್ದೇನೆಂದರೆ: 2 “ಇಸ್ರೇಲರು ತಾವು ಹೊಂದುವ ಸ್ವಾಸ್ತ್ಯದಲ್ಲಿ ಕೆಲವು ಊರುಗಳನ್ನೂ ಆ ಊರುಗಳ ಸುತ್ತಲಿರುವ ಭೂಮಿಯನ್ನೂ ಲೇವಿಯರಿಗೆ ಕೊಡಬೇಕೆಂದು ಆಜ್ಞಾಪಿಸು. 3 ಅವರು ಆ ಪಟ್ಟಣಗಳಲ್ಲಿ ವಾಸಿಸುವರು. ಆ ಊರುಗಳು ಲೇವಿಯರ ನಿವಾಸಕ್ಕಾಗಿ, ಸುತ್ತಲಿರುವ ಭೂಮಿಗಳು ಅವರ ಪಶುಗಳಿಗಾಗಿ ಮತ್ತು ಇತರ ಪ್ರಾಣಿಗಳಿಗಾಗಿ ಇರುವವು. 4 ನೀವು ಲೇವಿಯರಿಗೆ ಕೊಡುವ ಹುಲ್ಲುಗಾವಲುಗಳು ಅಂದರೆ ಪಟ್ಟಣಗಳ ಸುತ್ತಲೂ ಇರುವ ಹುಲ್ಲುಗಾವಲುಗಳು ಪಟ್ಟಣದ ಗೋಡೆಯ ಹೊರಗೆ ಎಲ್ಲಾ ದಿಕ್ಕಿನಲ್ಲೂ ಒಂದು ಸಾವಿರ ಮೊಳ ವಿಸ್ತರಿಸಬೇಕು. 5 ಪಟ್ಟಣದ ಹೊರಗೆ ಪ್ರತಿಯೊಂದು ದಿಕ್ಕಿನಲ್ಲಿ ಎರಡು ಸಾವಿರ ಮೊಳಗಳನ್ನು ಅಳೆದು ಪಟ್ಟಣಕ್ಕೆ ಗಡಿಯನ್ನು ಗೊತ್ತುಪಡಿಸಬೇಕು; ಪೂರ್ವದಿಕ್ಕಿನಲ್ಲಿ ಎರಡು ಸಾವಿರ ಮೊಳಗಳು; ದಕ್ಷಿಣದಿಕ್ಕಿನಲ್ಲಿ ಎರಡು ಸಾವಿರ ಮೊಳಗಳು; ಪಶ್ಚಿಮದಿಕ್ಕಿನಲ್ಲಿ ಎರಡು ಸಾವಿರ ಮೊಳಗಳು ಮತ್ತು ಉತ್ತರದಿಕ್ಕಿನಲ್ಲಿ ಎರಡು ಸಾವಿರ ಮೊಳಗಳು. ಇವುಗಳ ಮಧ್ಯದಲ್ಲಿ ಪಟ್ಟಣವಿರಬೇಕು. ಅದು ಅವರ ಪಟ್ಟಣಗಳಿಗೆ ಹುಲ್ಲುಗಾವಲುಗಳಾಗಿರುವುದು. 6 ನೀವು ಲೇವಿಯರಿಗೆ ಕೊಡುವ ಆರು ಪಟ್ಟಣಗಳು ಆಶ್ರಯ ನಗರಗಳಾಗಿರುತ್ತವೆ. ಬೇರೊಬ್ಬನನ್ನು ಕೊಂದು ಸಂರಕ್ಷಣೆಗಾಗಿ ಓಡಿಹೋಗುವವರು ಈ ಪಟ್ಟಣಗಳಿಗೆ ಬಂದು ಸಂರಕ್ಷಣೆ ಪಡೆಯಲು ನೀವು ಅವಕಾಶ ಕೊಡಬೇಕು. ಇದಲ್ಲದೆ ಇತರ ನಲವತ್ತೆರಡು ಪಟ್ಟಣಗಳನ್ನು ನೀವು ಲೇವಿಯರಿಗೆ ಕೊಡಬೇಕು. 7 ಅಂದರೆ ನೀವು ಲೇವಿಯರಿಗೆ ಒಟ್ಟು ನಲವತ್ತೆಂಟು ಪಟ್ಟಣಗಳನ್ನು ಅವುಗಳ ಸುತ್ತಲಿರುವ ಹುಲ್ಲುಗಾವಲಿನ ಸಮೇತವಾಗಿ ಕೊಡುತ್ತೀರಿ. 8 ನೀವು ಇತರ ಇಸ್ರೇಲರ ಆಸ್ತಿಯಿಂದ ಲೇವಿಯರಿಗೆ ಪಟ್ಟಣಗಳನ್ನು ಕೊಡುವಾಗ, ಪ್ರತಿಯೊಂದು ಕುಲವು ಹೊಂದಿರುವ ಭೂಮಿಗನುಸಾರವಾಗಿ ಕೊಡಬೇಕು. ದೊಡ್ಡಕುಲಗಳಿಂದ ಹೆಚ್ಚು ಪಟ್ಟಣಗಳನ್ನೂ ಚಿಕ್ಕಕುಲಗಳಿಂದ ಕೆಲವು ಪಟ್ಟಣಗಳನ್ನೂ ತೆಗೆದುಕೊಳ್ಳಿ.”
9 ತರುವಾಯ ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 10 “ಇಸ್ರೇಲರಿಗೆ ಈ ಸಂಗತಿಗಳನ್ನು ತಿಳಿಸು: ನೀವು ಜೋರ್ಡನ್ ನದಿಯನ್ನು ದಾಟಿ ಕಾನಾನ್ ದೇಶವನ್ನು ಸೇರಿದ ನಂತರ 11 ಆಶ್ರಯ ಸ್ಥಳಗಳಾಗುವುದಕ್ಕೆ ಪಟ್ಟಣಗಳನ್ನು ಆರಿಸಿಕೊಳ್ಳಬೇಕು. ಕೈತಪ್ಪಿ ಮತ್ತೊಬ್ಬನನ್ನು ಕೊಂದವನು ಅವುಗಳಲ್ಲಿ ಒಂದಕ್ಕೆ ಓಡಿಹೋಗಿ ಸುರಕ್ಷಿತನಾಗಿರಬಹುದು. 12 ಕೊಂದವನು ನ್ಯಾಯ ವಿಚಾರಣಾಸಭೆಯ ಮುಂದೆ ನಿಂತುಕೊಳ್ಳುವುದಕ್ಕಿಂತ ಮೊದಲೇ ಕೊಲ್ಲಲ್ಪಟ್ಟವನ ಸಂಬಂಧಿಕನಿಂದ ಕೊಲ್ಲಲ್ಪಡದೆ ಸುರಕ್ಷಿತನಾಗಿರಲು ಆ ಆಶ್ರಯ ಸ್ಥಳಗಳು ನಿಮ್ಮ ಮಧ್ಯದಲ್ಲಿ ಇರಲೇಬೇಕು. 13-14 ಹೀಗೆ ಆಶ್ರಯ ಸ್ಥಳಗಳಾಗಿರುವುದಕ್ಕೆ ನೀವು ಜೋರ್ಡನ್ ನದಿಯ ಈಚೆ ಮೂರು ಮತ್ತು ಕಾನಾನ್ ದೇಶದಲ್ಲಿ ಮೂರು, ಹೀಗೆ ಒಟ್ಟು ಆರು ಪಟ್ಟಣಗಳನ್ನು ನೇಮಿಸಬೇಕು. 15 ಕೈತಪ್ಪಿ ಮತ್ತೊಬ್ಬನನ್ನು ಕೊಂದವನು ಇಸ್ರೇಲನಾಗಲಿ ಪರದೇಶದವನಾಗಲಿ ನಿಮ್ಮಲ್ಲಿ ಇಳಿದುಕೊಂಡವನಾಗಲಿ, ಆ ಆರು ಪಟ್ಟಣಗಳೊಳಗೆ ಒಂದಕ್ಕೆ ಓಡಿಹೋಗಿ ಆಶ್ರಯ ಹೊಂದಬಹುದು.
16 “ಯಾವನಾದರೂ ಕಬ್ಬಿಣದ ಆಯುಧದಿಂದ ಮತ್ತೊಬ್ಬನನ್ನು ಹೊಡೆದು ಕೊಂದರೆ ಅವನನ್ನು ಕೊಲೆಗಾರನೆಂದು ನೀವು ತೀರ್ಮಾನಿಸಬೇಕು. ಅಂಥವನಿಗೆ ಮರಣಶಿಕ್ಷೆಯಾಗಬೇಕು. 17 ಯಾವನಾದರೂ ಮನುಷ್ಯನನ್ನು ಕೊಲ್ಲುವಷ್ಟು ದೊಡ್ಡ ಕಲ್ಲನ್ನು ಕೈಯಲ್ಲಿ ಹಿಡಿದು ಮತ್ತೊಬ್ಬನನ್ನು ಹೊಡೆದು ಕೊಂದರೆ, ಅವನು ನರಹತ್ಯ ಮಾಡಿದವನಾಗಿದ್ದಾನೆ. ಅವನಿಗೆ ಮರಣಶಿಕ್ಷೆಯಾಗಬೇಕು. 18 ಯಾವನಾದರೂ ಮನುಷ್ಯನನ್ನು ಕೊಲ್ಲುವಷ್ಟು ದೊಡ್ಡ ಮರದ ವಸ್ತುವನ್ನು ಕೈಯಲ್ಲಿ ಹಿಡಿದು ಮತ್ತೊಬ್ಬನನ್ನು ಹೊಡೆದು ಕೊಂದರೆ, ಅವನು ಕೊಲೆಗಾರ. ಅವನಿಗೆ ಮರಣಶಿಕ್ಷೆಯಾಗಬೇಕು. 19 ಕೊಲ್ಲಲ್ಪಟ್ಟವನ ಸಮೀಪ ಬಂಧುವು ಕೊಲೆಗಾರನನ್ನು ಮರಣಕ್ಕೀಡುಮಾಡಬೇಕು. ಅವನು ಕೊಲೆಗಾರನನ್ನು ಯಾವಾಗ ಕಂಡರೂ ಅವನನ್ನು ಕೊಲ್ಲಬೇಕು.
20 “ಯಾವನಾದರೂ ಮತ್ತೊಬ್ಬನನ್ನು ದ್ವೇಷಿಸಿ ನೂಕುವುದರಿಂದಾಗಲಿ ಉದ್ದೇಶಪೂರ್ವಕವಾಗಿ ಅವನ ಮೇಲೆ ಏನಾದರೂ ಎಸೆಯುವುದರಿಂದಾಗಲಿ 21 ದ್ವೇಷದಿಂದ ಕೈಯಾರೆ ಹೊಡೆಯುವುದರಿಂದಾಗಲಿ ಕೊಂದರೆ, ಅವನು ನರಹತ್ಯ ಮಾಡಿದವನೇ. ಅವನಿಗೆ ಮರಣ ಶಿಕ್ಷೆಯಾಗಬೇಕು. ಹತನಾದವನ ಸಮೀಪ ಬಂಧುವು ಅವನನ್ನು ಎಲ್ಲಿ ಕಂಡರೂ ಕೊಲ್ಲಲಿ.
22 “ಆದರೆ ಒಬ್ಬನು ಯಾವ ದ್ವೇಷವೂ ಇಲ್ಲದೆ ನಿರುದ್ದೇಶದಿಂದ ಎಸೆದ ಯಾವುದೋ ವಸ್ತುವಿನಿಂದ ಒಬ್ಬನನ್ನು ಕೊಂದರೆ, 23 ಅಥವಾ ದೊಡ್ಡ ಕಲ್ಲನ್ನು ತಿಳಿಯದೆ ಬೀಳಿಸಿದ್ದರಿಂದ ಮತ್ತೊಬ್ಬನು ಸತ್ತರೆ, ಅವನು ಕೊಲ್ಲಲ್ಪಟ್ಟವನ ವೈರಿಯಾಗಿರದೆಯೂ ಹಾನಿಯನ್ನು ಮಾಡಬೇಕೆಂಬ ಉದ್ದೇಶವಿಲ್ಲದೆಯೂ ಇದ್ದ ಪಕ್ಷಕ್ಕೆ 24 ಸಭೆಯವರು ಕೊಂದವನಿಗೂ ಕೊಲ್ಲಲ್ಪಟ್ಟವನಿಗೂ ಈ ನಿಯಮಗಳಿಗನುಸಾರವಾಗಿ ನ್ಯಾಯತೀರ್ಪು ನೀಡಬೇಕು. 25 ಕೊಂದವನು ಓಡಿಹೋಗಿದ್ದ ಆಶ್ರಯ ನಗರಕ್ಕೆ ಸಭೆಯವರು ಅವನನ್ನು ಮತ್ತೆ ಕರೆದುಕೊಂಡು ಹೋಗಿ ಕೊಲ್ಲಲ್ಪಟ್ಟವನ ಸಮೀಪಬಂಧುವಿನಿಂದ ರಕ್ಷಿಸಬೇಕು. ಅಭಿಷೇಕ ಹೊಂದಿದ ಮಹಾಯಾಜಕನು ಜೀವದಿಂದಿರುವ ತನಕ ಅವನು ಆ ಪಟ್ಟಣದಲ್ಲೇ ವಾಸಿಸಬೇಕು.
26-27 “ಆ ವ್ಯಕ್ತಿಯು ತನ್ನ ಆಶ್ರಯನಗರದ ಮೇರೆಯನ್ನು ಎಂದಿಗೂ ದಾಟಿ ಹೊರಗೆ ಹೋಗಬಾರದು. ಆ ಮೇರೆಗಳನ್ನು ದಾಟಿ ಹೊರಗೆ ಹೋದರೆ, ಹತವಾದವನ ಸಮೀಪಬಂಧುವು ಅವನನ್ನು ಕಂಡು ಕೊಂದುಹಾಕಿದರೆ, ಆಗ ಆ ಸಮೀಪ ಬಂಧುವು ನರಹತ್ಯ ಮಾಡಿದ ದೋಷಿಯಾಗುವುದಿಲ್ಲ. 28 ಮಹಾಯಾಜಕನು ಜೀವದಿಂದಿರುವ ತನಕ ಅವನು ಆಶ್ರಯನಗರದೊಳಗೆ ಇರಬೇಕು. ಮಹಾಯಾಜಕನು ತೀರಿಹೋದ ನಂತರ ಅವನು ತನ್ನ ಸ್ವಾಸ್ತ್ಯವಿರುವ ಸ್ಥಳಕ್ಕೆ ಹೋಗಬಹುದು. 29 ನೀವೂ ನಿಮ್ಮ ಸಂತತಿಯವರೂ ನಿಮ್ಮ ಎಲ್ಲಾ ನಿವಾಸಗಳಲ್ಲಿ ಈ ಕಟ್ಟಳೆಗೆ ಅನುಸಾರವಾಗಿ ನ್ಯಾಯತೀರಿಸಬೇಕು.
30 “ಯಾವನಾದರೂ ಮತ್ತೊಬ್ಬನನ್ನು ಕೊಂದರೆ, ಸಾಕ್ಷ್ಯಾಧಾರಗಳು ಇದ್ದರೆ ಮಾತ್ರ ಕೊಂದವನು ಕೊಲ್ಲಲ್ಪಡಬೇಕು.
31 “ಮರಣಶಿಕ್ಷೆಗೆ ಒಳಗಾಗಿರುವ ಕೊಲೆಪಾತಕನನ್ನು ಉಳಿಸಲು ನೀವು ಯಾವ ಈಡನ್ನೂ ತೆಗೆದುಕೊಳ್ಳಕೂಡದು. ಅವನಿಗೆ ಮರಣಶಿಕ್ಷೆಯೇ ಆಗಬೇಕು.
32 “ಆಶ್ರಯನಗರಕ್ಕೆ ಓಡಿಹೋದವನಿಂದ ಹಣವನ್ನು ಈಡಾಗಿ ತೆಗೆದುಕೊಂಡು ಮಹಾಯಾಜಕನು ಜೀವದಿಂದಿರುವಾಗಲೇ ತನ್ನ ಸ್ವಂತ ಸ್ಥಳಕ್ಕೆ ಹೋಗಿ ವಾಸಿಸಲು ನೀವು ಅವಕಾಶ ಕೊಡಕೂಡದು.
33 “ನೀವು ವಾಸವಾಗಿರುವ ದೇಶವನ್ನು ಕೆಡಿಸಬಾರದು. ಕೊಲೆಯು ದೇಶವನ್ನು ಕೆಡಿಸುತ್ತದೆ. ಕೊಲೆಯು ನಡೆಯಲ್ಪಟ್ಟಿರುವ ದೇಶಕ್ಕೆ ಕೊಲೆಗಾರನ ರಕ್ತವೇ ಹೊರತು ಬೇರೆ ಯಾವ ಈಡೂ ಇಲ್ಲ. 34 ನಾನು ವಾಸಿಸುವ ದೇಶವನ್ನು ನೀವು ಅಶುದ್ಧಮಾಡಬಾರದು, ಯಾಕೆಂದರೆ ಯೆಹೋವನಾದ ನಾನೇ ಇಸ್ರೇಲರೊಂದಿಗೆ ವಾಸಿಸುತ್ತೇನೆ.”
ಚಲ್ಪಹಾದನ ಹೆಣ್ಣುಮಕ್ಕಳ ಭೂಮಿ
36 ಒಂದು ದಿನ ಗಿಲ್ಯಾದ್ ಕುಲದ ಕುಟುಂಬಗಳ ನಾಯಕರು ಮೋಶೆಯೊಡನೆಯೂ ಇತರ ಇಸ್ರೇಲರ ಕುಟುಂಬಗಳ ನಾಯಕರೊಡನೆಯೂ ಮಾತಾಡುವುದಕ್ಕೆ ಬಂದರು. (ಗಿಲ್ಯಾದನು ಮಾಕೀರನ ಮಗ; ಮಾಕೀರನು ಮನಸ್ಸೆಯ ಮಗ; ಮನಸ್ಸೆಯು ಯೋಸೇಫನ ಮಗ.) 2 ಅವರು, “ಸ್ವಾಮೀ, ಚೀಟುಹಾಕಿ ಇಸ್ರೇಲರಿಗೆ ದೇಶವನ್ನು ಹಂಚಿಕೊಡಬೇಕೆಂದು ಯೆಹೋವನು ನಿಮಗೆ ಆಜ್ಞಾಪಿಸಿದ್ದಾನೆ. ಅದಲ್ಲದೆ ನಮ್ಮ ಸಂಬಂಧಿಕನಾದ ಚಲ್ಪಹಾದನ ಭೂಮಿಯನ್ನು ಅವನ ಹೆಣ್ಣುಮಕ್ಕಳಿಗೆ ಕೊಡಬೇಕೆಂದು ಯೆಹೋವನು ಆಜ್ಞಾಪಿಸಿದ್ದಾನೆ. 3 ಹೀಗಿರಲು ಅವರು ಇಸ್ರೇಲರ ಬೇರೆ ಯಾವ ಕುಲದವರನ್ನಾದರೂ ಮದುವೆಯಾದರೆ ಅವರ ಸ್ವಾಸ್ತ್ಯವು ನಮ್ಮ ಪೂರ್ವಿಕರ ಕುಲದಿಂದ ತೆಗೆಯಲ್ಪಟ್ಟು, ಅವರು ಮದುವೆಯ ಮೂಲಕ ಸೇರಿಕೊಳ್ಳುವ ಕುಲಕ್ಕೆ ಹೋಗುವುದು. ಇದರಿಂದ ನಮ್ಮ ಸ್ವಾಸ್ತ್ಯಕ್ಕೆ ನಷ್ಟವುಂಟಾಗುವುದು. 4 ಇಸ್ರೇಲರ ಜೂಬಿಲಿ ಸಂವತ್ಸರವು ಬಂದಾಗ ಅವರ ಸ್ವಾಸ್ತ್ಯವು ಅವರು ಸೇರಿಕೊಳ್ಳುವ ಕುಲದ ಸ್ವಾಸ್ತ್ಯಕ್ಕೆ ಕೂಡಿಕೊಳ್ಳುವುದರಿಂದ ನಮ್ಮ ಕುಲದಿಂದ ತೆಗೆಯಲ್ಪಡುವುದು” ಎಂದು ಹೇಳಿದರು.
5 ಆಗ ಮೋಶೆಯು ಯೆಹೋವನ ಅಪ್ಪಣೆಯನ್ನು ಹೊಂದಿ ಇಸ್ರೇಲರಿಗೆ, “ಯೋಸೇಫನ ಸಂತತಿಯವರು ಹೇಳುವುದು ನ್ಯಾಯ. 6 ಆದಕಾರಣ ಚಲ್ಫಹಾದನ ಹೆಣ್ಣುಮಕ್ಕಳು ಮದುವೆಯಾಗುವುದಾದರೆ ತಮ್ಮ ತಂದೆಯ ಗೋತ್ರಕ್ಕೆ ಸಂಬಂಧಿಸಿದ ಯಾರನ್ನು ಬೇಕಾದರೂ ಮದುವೆಯಾಗಬಹುದೆಂದು ಯೆಹೋವನು ಆಜ್ಞಾಪಿಸಿದ್ದಾನೆ. 7 ಇಸ್ರೇಲರ ಯಾವ ಸ್ವಾಸ್ತ್ಯವೂ ಒಂದು ಕುಲದಿಂದ ಬೇರೊಂದು ಕುಲಕ್ಕೆ ಹೋಗಬಾರದು. ಇಸ್ರೇಲರೆಲ್ಲರೂ ತಮ್ಮ ಪೂರ್ವಿಕರಿಂದ ಸ್ವಾಸ್ತ್ಯವಾಗಿ ಪಡೆದುಕೊಂಡ ತಮ್ಮ ಗೋತ್ರದ ಭೂಮಿಯನ್ನು ತಮ್ಮ ಸ್ವಾಧೀನದಲ್ಲೇ ಇಟ್ಟುಕೊಂಡಿರಬೇಕು. 8 ಆದ್ದರಿಂದ ಇಸ್ರೇಲರ ಕುಲಗಳಲ್ಲಿ ಭೂಮಿಯನ್ನು ಸ್ವಾಸ್ತ್ಯವಾಗಿ ಹೊಂದುವ ಪ್ರತಿಯೊಬ್ಬ ಮಗಳು, ತನ್ನ ತಂದೆಯ ಗೋತ್ರದವನನ್ನೇ ಮದುವೆಯಾಗಬೇಕು. 9 ಹೀಗೆ ಯಾವ ಸ್ವಾಸ್ತ್ಯವೂ ಒಂದು ಕುಲದಿಂದ ಬೇರೊಂದು ಕುಲಕ್ಕೆ ಹೋಗದೆ ಇಸ್ರೇಲರ ಪ್ರತಿಯೊಂದು ಕುಲವು ತನ್ನ ಸ್ವಾಸ್ತ್ಯವನ್ನು ಹೊಂದಿಕೊಂಡೇ ಇರುವುದು” ಎಂದು ಹೇಳಿದನು.
10 ಯೆಹೋವನು ಮೋಶೆಗೆ ಕೊಟ್ಟ ಆಜ್ಞೆಗೆ ಚಲ್ಪಹಾದನ ಹೆಣ್ಣುಮಕ್ಕಳು ವಿಧೇಯರಾದರು. 11 ಆದ್ದರಿಂದ ಚಲ್ಪಹಾದನ ಹೆಣ್ಣುಮಕ್ಕಳಾದ ಮಹ್ಲಾ, ತಿರ್ಚಾ, ಹೊಗ್ಲಾ, ಮಿಲ್ಕಾ, ನೋವಾ ಎಂಬವರು ಯೆಹೋವನ ಆಜ್ಞಾನುಸಾರವಾಗಿ ನಡೆದು ತಂದೆಯ ಅಣ್ಣತಮ್ಮಂದಿರ ಗಂಡುಮಕ್ಕಳನ್ನು ಮದುವೆಯಾದರು. 12 ಅವರು ಯೋಸೇಫನ ಮಗನಾದ ಮನಸ್ಸೆಯ ಕುಲದವರನ್ನೇ ಮದುವೆಯಾದದ್ದರಿಂದ ಅವರ ಸ್ವಾಸ್ತ್ಯವು ತಂದೆಯ ಕುಲದಲ್ಲಿಯೇ ನಿಂತಿತು.
13 ಜೆರಿಕೊ ಪಟ್ಟಣದ ಎದುರಾಗಿರುವ ಜೋರ್ಡನ್ ನದಿಯ ಬಳಿಯಲ್ಲಿರುವ ಮೋವಾಬಿನ ಬಯಲಿನಲ್ಲಿ ಯೆಹೋವನು ಇಸ್ರೇಲರಿಗೆ ಮೋಶೆಯ ಮೂಲಕ ಕೊಟ್ಟ ಆಜ್ಞಾವಿಧಿಗಳು ಇವೇ.
ವಿವಾಹವಿಚ್ಛೇದನದ ಬಗ್ಗೆ ಯೇಸುವಿನ ಉಪದೇಶ
(ಮತ್ತಾಯ 19:1-12)
10 ನಂತರ ಯೇಸು ಆ ಸ್ಥಳವನ್ನು ಬಿಟ್ಟು ಜುದೇಯ ಪ್ರಾಂತ್ಯಕ್ಕೆ ಹಾಗೂ ಜೋರ್ಡನ್ ನದಿಯ ಆಚೆದಡಕ್ಕೆ ಹೋದನು. ಅನೇಕ ಜನರು ಮತ್ತೆ ಆತನ ಬಳಿಗೆ ಬಂದರು. ಯೇಸು ಎಂದಿನಂತೆ ಆ ಜನರಿಗೆ ಉಪದೇಶಿಸಿದನು.
2 ಕೆಲವು ಫರಿಸಾಯರು ಯೇಸುವಿನ ಬಳಿಗೆ ಬಂದು ಆತನನ್ನು ಪರೀಕ್ಷಿಸಲು, “ಒಬ್ಬನು ತನ್ನ ಹೆಂಡತಿಯನ್ನು ಬಿಟ್ಟುಬಿಡುವುದು ಸರಿಯೇ?” ಎಂದು ಕೇಳಿದರು.
3 ಯೇಸು, “ಮೋಶೆ ನಿಮಗೆ ಏನು ಆಜ್ಞಾಪಿಸಿದ್ದಾನೆ?” ಎಂದು ಉತ್ತರಿಸಿದನು.
4 ಫರಿಸಾಯರು, “ಒಬ್ಬನು ತನ್ನ ಹೆಂಡತಿಗೆ ವಿಚ್ಛೇದನ ಪತ್ರ ಬರೆದುಕೊಟ್ಟು ಆಕೆಯನ್ನು ಬಿಟ್ಟುಬಿಡಬಹುದೆಂದು ಮೋಶೆಯು ಹೇಳಿದ್ದಾನೆ” ಎಂದರು.[a]
5 ಯೇಸು, “ನಿಮ್ಮ ಮೊಂಡುತನದ ನಿಮಿತ್ತ ಮೋಶೆಯು ನಿಮಗೆ ಆ ಆಜ್ಞೆಯನ್ನು ಕೊಟ್ಟನು. 6 ಆದರೆ ದೇವರು ಪ್ರಪಂಚವನ್ನು ಸೃಷ್ಟಿಸಿದಾಗ, ‘ಮನುಷ್ಯರನ್ನು ಗಂಡನ್ನಾಗಿಯೂ ಹೆಣ್ಣನ್ನಾಗಿಯೂ ನಿರ್ಮಿಸಿದನು.’(A) 7 ‘ಆದಕಾರಣ ಪುರುಷನು ತನ್ನ ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು. 8 ಮತ್ತು ಅವರಿಬ್ಬರು ಒಂದೇ ಶರೀರವಾಗುವರು.’(B) ಆದ್ದರಿಂದ ಅವರು ಇಬ್ಬರಲ್ಲ, ಒಬ್ಬರೇ. 9 ಹೀಗಿರಲು ದೇವರು ಸೇರಿಸಿದ್ದನ್ನು ಮನುಷ್ಯನು ಅಗಲಿಸಬಾರದು” ಎಂದು ಹೇಳಿದನು.
10 ಶಿಷ್ಯರು ಮತ್ತು ಯೇಸು ಒಂದು ಮನೆಯಲ್ಲಿದ್ದಾಗ, ವಿವಾಹವಿಚ್ಛೇದನ ಪ್ರಶ್ನೆಯ ಬಗ್ಗೆ ಶಿಷ್ಯರು ಯೇಸುವನ್ನು ಮತ್ತೆ ಕೇಳಿದರು. 11 ಅದಕ್ಕೆ ಯೇಸು, “ತನ್ನ ಹೆಂಡತಿಯನ್ನು ಬಿಟ್ಟು, ಬೇರೆ ಸ್ತ್ರೀಯನ್ನು ಮದುವೆಯಾಗುವವನು ತನ್ನ ಹೆಂಡತಿಗೆ ದ್ರೋಹಮಾಡಿ ವ್ಯಭಿಚಾರಿಯಾಗಿದ್ದಾನೆ. 12 ತನ್ನ ಗಂಡನಿಗೆ ವಿಚ್ಛೇದನಪತ್ರ ಕೊಟ್ಟು ಬೇರೆ ಪುರುಷನನ್ನು ಮದುವೆಯಾಗುವ ಸ್ತ್ರೀಯೂ ವ್ಯಭಿಚಾರಿಣಿಯಾಗಿದ್ದಾಳೆ” ಎಂದು ಉತ್ತರಿಸಿದನು.
ಚಿಕ್ಕ ಮಕ್ಕಳಿಗೆ ಯೇಸುವಿನ ಆಶೀರ್ವಾದ
(ಮತ್ತಾಯ 19:13-15; ಲೂಕ 18:15-17)
13 ಜನರು, ತಮ್ಮ ಚಿಕ್ಕಮಕ್ಕಳನ್ನು ಮುಟ್ಟಿ ಆಶೀರ್ವದಿಸಲೆಂದು ಅವರನ್ನು ಯೇಸುವಿನ ಬಳಿಗೆ ತಂದರು. ಆದರೆ ಮಕ್ಕಳನ್ನು ಯೇಸುವಿನ ಬಳಿಗೆ ತರಕೂಡದೆಂದು ಶಿಷ್ಯರು ಜನರನ್ನು ಗದರಿಸಿದರು. 14 ಇದನ್ನು ಕಂಡ ಯೇಸು ಕೋಪಗೊಂಡು ಅವರಿಗೆ, “ಚಿಕ್ಕಮಕ್ಕಳನ್ನು ನನ್ನ ಬಳಿಗೆ ಬರಗೊಡಿಸಿರಿ. ಅವರನ್ನು ತಡೆಯಬೇಡಿ, ಏಕೆಂದರೆ ದೇವರ ರಾಜ್ಯವು ಇಂಥವರದೇ. 15 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ದೇವರ ರಾಜ್ಯವನ್ನು ಮಕ್ಕಳ ಮನೋಭಾವದಿಂದ ಸ್ವೀಕರಿಸದಿದ್ದರೆ ನೀವು ಅದರೊಳಗೆ ಸೇರುವುದೇ ಇಲ್ಲ” ಎಂದು ಹೇಳಿದನು. 16 ನಂತರ ಯೇಸು ಮಕ್ಕಳನ್ನು ತನ್ನ ಕೈಗಳಿಂದ ಅಪ್ಪಿಕೊಂಡು ಅವರ ಮೇಲೆ ತನ್ನ ಕೈಗಳನ್ನಿಟ್ಟು ಆಶೀರ್ವದಿಸಿದನು.
ಯೇಸುವನ್ನು ಹಿಂಬಾಲಿಸಲು ಹಿಂಜರಿದ ಶ್ರೀಮಂತ
(ಮತ್ತಾಯ 19:16-30; ಲೂಕ 18:18-30)
17 ಯೇಸು ಅಲ್ಲಿಂದ ಹೊರಡಬೇಕೆಂದಿದ್ದಾಗ ಒಬ್ಬನು ಓಡಿಬಂದು, ಆತನ ಮುಂದೆ ತನ್ನ ಮೊಣಕಾಲೂರಿ, “ಒಳ್ಳೆಯ ಉಪದೇಶಕನೇ, ನಿತ್ಯಜೀವವನ್ನು ಪಡೆಯಲು ನಾನು ಏನು ಮಾಡಬೇಕು?” ಎಂದು ಕೇಳಿದನು.
18 ಯೇಸು ಅದಕ್ಕೆ, “ನೀನು ನನ್ನನ್ನು ಒಳ್ಳೆಯವನೆಂದು ಕರೆಯುವುದೇಕೆ? ಯಾವ ಮನುಷ್ಯನೂ ಒಳ್ಳೆಯವನಲ್ಲ. ದೇವರು ಮಾತ್ರ ಒಳ್ಳೆಯವನು. 19 ನೀನು ನಿತ್ಯಜೀವ ಹೊಂದಬೇಕಾದರೆ ನಿನಗೆ ತಿಳಿದೇ ಇರುವ ಈ ಆಜ್ಞೆಗಳನ್ನು ಪಾಲಿಸು: ‘ಕೊಲೆ ಮಾಡಬೇಡ, ವ್ಯಭಿಚಾರ ಮಾಡಬೇಡ, ಕದಿಯಬೇಡ, ಸುಳ್ಳು ಹೇಳಬೇಡ, ಮೋಸ ಮಾಡಬೇಡ, ಅಲ್ಲದೆ ನಿನ್ನ ತಂದೆತಾಯಿಯರನ್ನು ಸನ್ಮಾನಿಸು’” ಎಂದು ಉತ್ತರಿಸಿದನು.
20 ಅವನು, “ಉಪದೇಶಕನೇ, ನಾನು ಬಾಲ್ಯದಿಂದಲೂ ಈ ಆಜ್ಞೆಗಳಿಗೆಲ್ಲಾ ವಿಧೇಯನಾಗಿದ್ದೇನೆ” ಎಂದನು.
21 ಯೇಸು ಆ ಮನುಷ್ಯನನ್ನು ಪ್ರೀತಿಯಿಂದ ದೃಷ್ಟಿಸಿನೋಡಿ, “ನೀನು ಮಾಡಬೇಕಾದ ಕಾರ್ಯವೊಂದಿದೆ. ಹೋಗಿ, ನಿನ್ನ ಆಸ್ತಿಯನ್ನೆಲ್ಲಾ ಮಾರಿ, ಬಂದ ಹಣವನ್ನು ಬಡವರಿಗೆ ಕೊಡು. ನಿನಗೆ ಪರಲೋಕದಲ್ಲಿ ಪ್ರತಿಫಲ ಇರುವುದು. ನಂತರ ಬಂದು, ನನ್ನನ್ನು ಹಿಂಬಾಲಿಸು” ಎಂದು ಹೇಳಿದನು.
22 ಯೇಸುವಿನ ಈ ಮಾತನ್ನು ಕೇಳಿ ಅವನು ನಿರಾಶೆಯಿಂದ ದುಃಖಗೊಂಡು ಹೊರಟುಹೋದನು. ಬಹಳ ಧನವಂತನಾಗಿದ್ದ ಅವನು ತನ್ನ ಅಪಾರ ಆಸ್ತಿಯನ್ನು ಮಾರಲು ಇಷ್ಟಪಡಲಿಲ್ಲ.
23 ಬಳಿಕ ಯೇಸು ತನ್ನ ಶಿಷ್ಯರ ಕಡೆಗೆ ನೋಡಿ, “ಧನವಂತನು ದೇವರ ರಾಜ್ಯವನ್ನು ಪ್ರವೇಶಿಸುವುದು ಬಹಳ ಕಷ್ಟ” ಎಂದನು.
24 ಯೇಸುವಿನ ಈ ಮಾತನ್ನು ಕೇಳಿ ಶಿಷ್ಯರು ಬೆರಗಾದರು. ಆದರೆ ಯೇಸು ಮತ್ತೆ, “ನನ್ನ ಮಕ್ಕಳೇ, ದೇವರ ರಾಜ್ಯವನ್ನು ಪ್ರವೇಶಿಸುವುದು ಬಹಳ ಕಷ್ಟ! 25 ಶ್ರೀಮಂತರು ದೇವರ ರಾಜ್ಯವನ್ನು ಪ್ರವೇಶಿಸುವುದಕ್ಕಿಂತ ಒಂಟೆಯು ಸೂಜಿಯ ಕಣ್ಣಿನ ಮೂಲಕ ನುಸುಳಿ ಹೋಗುವುದು ಸುಲಭ!” ಎಂದನು.
26 ಶಿಷ್ಯರು ಇನ್ನೂ ಬೆರಗಾಗಿ, ಒಬ್ಬರಿಗೊಬ್ಬರು, “ಹಾಗಾದರೆ ರಕ್ಷಣೆಹೊಂದಲು ಯಾರಿಗೆ ಸಾಧ್ಯ?” ಎಂದು ಮಾತಾಡಿಕೊಂಡರು.
27 ಯೇಸು ಶಿಷ್ಯರ ಕಡೆಗೆ ನೋಡಿ, “ಇದು ಮನುಷ್ಯರಿಗಷ್ಟೇ ಅಸಾಧ್ಯ, ದೇವರಿಗಲ್ಲ” ಎಂದನು.
28 ಪೇತ್ರನು ಯೇಸುವಿಗೆ, “ನಿನ್ನನ್ನು ಹಿಂಬಾಲಿಸಲು ನಾವು ಎಲ್ಲವನ್ನೂ ತ್ಯಜಿಸಿದೆವು!” ಎಂದನು.
29 ಯೇಸು, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನನಗಾಗಿ ಮತ್ತು ಸುವಾರ್ತೆಗಾಗಿ ತನ್ನ ಮನೆಯನ್ನಾಗಲಿ ಸಹೋದರರನ್ನಾಗಲಿ ಸಹೋದರಿಯರನ್ನಾಗಲಿ ತಾಯಿಯನ್ನಾಗಲಿ ತಂದೆಯನ್ನಾಗಲಿ ಮಕ್ಕಳನ್ನಾಗಲಿ ಭೂಮಿಯನ್ನಾಗಲಿ ತ್ಯಜಿಸಿದ ಪ್ರತಿಯೊಬ್ಬ ವ್ಯಕ್ತಿಯೂ 30 ನೂರರಷ್ಟು ಹೆಚ್ಚಾಗಿ ಪಡೆಯುತ್ತಾನೆ. ಈ ಪ್ರಪಂಚದಲ್ಲಿ ಅವನು ಅನೇಕ ಮನೆಗಳನ್ನು, ಸಹೋದರರನ್ನು, ಸಹೋದರಿಯರನ್ನು, ತಾಯಂದಿರನ್ನು, ಮಕ್ಕಳನ್ನು ಮತ್ತು ಭೂಮಿಯನ್ನು ಹಿಂಸೆಗಳೊಂದಿಗೆ ಪಡೆದುಕೊಳ್ಳುವನು. ಅಲ್ಲದೆ ಬರಲಿರುವ ಲೋಕದಲ್ಲಿ ಅವನು ನಿತ್ಯಜೀವವನ್ನೂ ಹೊಂದಿಕೊಳ್ಳುವನು. 31 ಆದರೆ ಮೊದಲನೆಯವರಲ್ಲಿ ಅನೇಕರು ಕಡೆಯವರಾಗುವರು; ಕಡೆಯವರಲ್ಲಿ ಅನೇಕರು ಮೊದಲಿನವರಾಗುವರು” ಎಂದು ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International