Old/New Testament
ಜೋರ್ಡನ್ ಹೊಳೆಯ ಪೂರ್ವದಲ್ಲಿ ಇಸ್ರೇಲರ ಕುಟುಂಬಗಳು
32 ರೂಬೇನ್ ಕುಲದವರಿಗೂ ಗಾದ್ ಕುಲದವರಿಗೂ ಬಹಳ ದನಕುರಿಗಳಿದ್ದವು. ಅವರು ಯಗ್ಜೇರ್ ಮತ್ತು ಗಿಲ್ಯಾದ್ ಪ್ರದೇಶಗಳನ್ನು ನೋಡಿದಾಗ ಅವು ಅವರ ಪಶುಗಳ ಮೇವಿಗೆ ಒಳ್ಳೆಯ ಸ್ಥಳವೆಂದು ತಿಳಿದುಕೊಂಡರು. 2 ಆದ್ದರಿಂದ ರೂಬೇನ್ ಮತ್ತು ಗಾದ್ ಕುಲದವರು ಮೋಶೆಯ ಬಳಿಗೆ ಬಂದರು. ಅವರು ಮೋಶೆಯ ಸಂಗಡದಲ್ಲೂ ಯಾಜಕನಾದ ಎಲ್ಲಾಜಾರನ ಸಂಗಡದಲ್ಲೂ ಜನರ ನಾಯಕರ ಸಂಗಡದಲ್ಲೂ ಮಾತಾಡಿ ಹೀಗೆ ಹೇಳಿದರು: 3-4 “ಯೆಹೋವನು ಇಸ್ರೇಲರಿಗೆ ಅಧೀನಪಡಿಸಿದ ಈ ಪ್ರದೇಶವು ಅಂದರೆ, ಅಟಾರೋತ್, ದೀಬೋನ್, ಯಗ್ಜೇರ್, ನಿಮ್ರಾ, ಹೆಷ್ಬೋನ್, ಎಲೆಯಾಲೆ, ಸೆಬಾಮ್, ನೆಬೋ, ಬೆಯೋನ್ ಎಂಬ ಪಟ್ಟಣಗಳ ಪ್ರದೇಶವು ಪಶುಗಳ ಮೇವಿಗೆ ಒಳ್ಳೆಯ ಸ್ಥಳವಾಗಿದೆ. ನಿಮ್ಮ ದಾಸರಾದ ನಮಗೆ ಬಹಳ ಪಶುಗಳು ಇವೆ. 5 ಆದ್ದರಿಂದ ಈ ಪ್ರದೇಶವನ್ನೇ ನಮಗೆ ಸ್ವಾಸ್ತ್ಯವನ್ನಾಗಿ ಕೊಟ್ಟರೆ ನಮಗೆ ಉಪಕಾರ ಮಾಡಿದಂತಾಗುವುದು. ನಾವು ಜೋರ್ಡನ್ ನದಿಯನ್ನು ದಾಟಿ ಹೋಗುವಂತೆ ಮಾಡಬೇಡ.”
6 ಮೋಶೆಯು ರೂಬೇನ್ ಮತ್ತು ಗಾದ್ ಕುಲಗಳವರಿಗೆ, “ನಿಮ್ಮ ಸಹೋದರರು ಯುದ್ಧಕ್ಕೆ ಹೋಗುವಾಗ ನೀವು ಇಲ್ಲೇ ಕುಳಿತಿರಬೇಕೇ? 7 ಯೆಹೋವನು ಇಸ್ರೇಲರಿಗೆ ಕೊಟ್ಟ ದೇಶಕ್ಕೆ ಅವರು ಹೋಗದಂತೆ ನೀವು ಯಾಕೆ ಅವರಿಗೆ ಅಧೈರ್ಯವನ್ನು ಹುಟ್ಟಿಸುತ್ತೀರಿ? 8 ಆ ದೇಶವನ್ನು ನೋಡಿಕೊಂಡು ಬರುವುದಕ್ಕೆ ನಾನು ಕಾದೇಶ್ ಬರ್ನೇಯದಿಂದ ನಿಮ್ಮ ಪೂರ್ವಿಕರನ್ನು ಗೂಢಚಾರರನ್ನಾಗಿ ಕಳುಹಿಸಿದಾಗ ಅವರೂ ಹಾಗೆಯೇ ಮಾಡಿದರಲ್ಲಾ. 9 ಅವರು ಎಷ್ಕೋಲ್ ತಗ್ಗಿಗೆ ಬಂದು ಆ ದೇಶವನ್ನು ನೋಡಿ ಇಸ್ರೇಲರಿಗೆ ಅಧೈರ್ಯವನ್ನು ಹುಟ್ಟಿಸಿದ್ದರಿಂದ ಇಸ್ರೇಲರು ತಮಗೆ ಯೆಹೋವನು ವಾಗ್ದಾನ ಮಾಡಿದ್ದ ದೇಶಕ್ಕೆ ಹೋಗಲೇ ಇಲ್ಲ. 10 ಆಗ ಯೆಹೋವನು ಕೋಪಗೊಂಡು, 11-12 ‘ಈಜಿಪ್ಟಿನಿಂದ ಬಂದ ಈ ಜನರಲ್ಲಿ ಮತ್ತು ಇಪ್ಪತ್ತು ವರ್ಷ ಮೊದಲುಗೊಂಡು ಅದಕ್ಕಿಂತ ಹೆಚ್ಚು ವಯಸ್ಸಾದ ನಿಮ್ಮವರೆಲ್ಲಾ ಕೆನಿಜ್ಜೀಯನಾದ ಯೆಫುನ್ನೆಯ ಮಗ ಕಾಲೇಬನ ಮತ್ತು ನೂನನ ಮಗನಾದ ಯೆಹೋಶುವನ ಹೊರತು ಯಾರೂ ನನ್ನನ್ನು ನಿಜವಾಗಿಯೂ ಅನುಸರಿಸದೆ ಹೋದದ್ದರಿಂದ, ನಾನು ಅಬ್ರಹಾಮ್, ಇಸಾಕ್, ಯಾಕೋಬರಿಗೆ ಪ್ರಮಾಣಪೂರ್ವಕವಾಗಿ ಕೊಟ್ಟ ದೇಶವನ್ನು ಅವರಿಬ್ಬರೇ ಹೊರತು ಬೇರೆ ಯಾರೂ ನೋಡುವುದೇ ಇಲ್ಲ’ ಎಂದು ಖಂಡಿತವಾಗಿ ಹೇಳಿದನು.
13 “ಆದ್ದರಿಂದ ಯೆಹೋವನು ಇಸ್ರೇಲರ ಮೇಲೆ ಕೋಪಗೊಂಡು, ತನ್ನನ್ನು ಬೇಸರಗೊಳಿಸಿದ್ದ ಇಡೀ ತಲೆಮಾರು ಸಾಯುವತನಕ ಇಸ್ರೇಲರನ್ನು ಮರುಭೂಮಿಯಲ್ಲಿ ನಲವತ್ತು ವರ್ಷಗಳ ಕಾಲ ಅಲೆದಾಡಿಸಿದನು. 14 ದುಷ್ಟ ಸಂತತಿಯವರೇ, ಈಗ ನೀವು ಯೆಹೋವನ ಭಯಂಕರವಾದ ಕೋಪವನ್ನು ಇನ್ನೂ ಹೆಚ್ಚಾಗಿ ಮಾಡಲು ನಿಮ್ಮ ಪೂರ್ವಿಕರ ಸ್ಥಾನವನ್ನು ತೆಗೆದುಕೊಂಡಿದ್ದೀರಿ. 15 ನೀವು ಆತನನ್ನು ಹಿಂಬಾಲಿಸದೆ ಹೋದರೆ, ಆತನು ಇಸ್ರೇಲರನ್ನು ಮರುಭೂಮಿಯಲ್ಲಿ ಇನ್ನೂ ಹೆಚ್ಚು ಕಾಲ ಬಿಟ್ಟುಬಿಡುವನು. ಈ ಜನರೆಲ್ಲರ ನಾಶನಕ್ಕೆ ನೀವೇ ಕಾರಣರಾಗುವಿರಿ” ಎಂದು ಹೇಳಿದನು.
16 ಆಗ ಅವರು ಮೋಶೆಯ ಬಳಿಗೆ ಬಂದು, “ನಮ್ಮ ಪಶುಗಳಿಗಾಗಿ ನಾವು ಬೇಲಿಯನ್ನು ಹಾಕೋಣ ಮತ್ತು ಸ್ತ್ರೀಯರಿಗಾಗಿ ಮತ್ತು ಮಕ್ಕಳಿಗಾಗಿ ಊರುಗಳನ್ನು ಕಟ್ಟುವೆವು. 17 ಬಳಿಕ ಇಸ್ರೇಲರನ್ನು ಅವರವರ ಸ್ಥಳಗಳಿಗೆ ಸೇರಿಸುವವರೆಗೆ ನಾವು ಅವರ ಮುಂದೆ ಹೋಗುವ ಸೈನಿಕರಾಗಿ ಹೊರಡುವೆವು ಅಲ್ಲದೆ ನಮ್ಮ ಸ್ತ್ರೀಯರು ಮತ್ತು ಮಕ್ಕಳು ಈ ದೇಶದ ಇತರ ನಿವಾಸಿಗಳಿಂದ ತೊಂದರೆಗೊಳಗಾಗದೆ ಕೋಟೆಗಳುಳ್ಳ ಊರುಗಳಲ್ಲಿ ಸುರಕ್ಷಿತವಾಗಿರುವರು. 18 ಪ್ರತಿಯೊಬ್ಬ ಇಸ್ರೇಲನು ದೇಶದಲ್ಲಿ ತನಗೆ ಬರಬೇಕಾದ ಸ್ವಾಸ್ತ್ಯವನ್ನು ತೆಗೆದುಕೊಳ್ಳುವ ತನಕ ನಾವು ನಮ್ಮ ಮನೆಗಳಿಗೆ ಹೋಗುವುದಿಲ್ಲ. 19 ನಮಗೆ ಜೋರ್ಡನ್ ಹೊಳೆಯ ಈಚೆ ಪೂರ್ವದಿಕ್ಕಿನಲ್ಲಿ ಸ್ವಾಸ್ತ್ಯವು ದೊರಕಿದ್ದರಿಂದ ನಾವು ಹೊಳೆಯ ಆಚೆ ಎಲ್ಲಿಯೂ ಅವರೊಂದಿಗೆ ಸ್ವಾಸ್ತ್ಯವನ್ನು ಅಪೇಕ್ಷಿಸುವುದಿಲ್ಲ” ಅಂದರು.
20-22 ಅದಕ್ಕೆ ಮೋಶೆ, “ನೀವು ನಿಮ್ಮ ಮಾತಿನಂತೆ ಯೆಹೋವನ ಮುಂದೆ ಸನ್ನದ್ಧರಾದ ಸೈನಿಕರಾಗಿ ಯುದ್ಧಕ್ಕೆ ಹೋಗುವುದಾದರೆ, ಯೆಹೋವನು ತನ್ನ ವೈರಿಗಳನ್ನು ಓಡಿಸುವ ತನಕ ಮತ್ತು ಆ ದೇಶವನ್ನು ಗೆದ್ದುಕೊಳ್ಳುವ ತನಕ ಪ್ರತಿಯೊಬ್ಬ ಪ್ರವೀಣ ಸೈನಿಕನು ಯೆಹೋವನ ಮುಂದೆ ಜೋರ್ಡನ್ ನದಿಯನ್ನು ದಾಟುವುದಾದರೆ, ಆ ಬಳಿಕ ನೀವು ನಿಮ್ಮ ಮನೆಗಳಿಗೆ ಹಿಂತಿರುಗಬಹುದು ಮತ್ತು ನೀವು ಯೆಹೋವನ ದೃಷ್ಟಿಯಲ್ಲಿಯೂ ಇಸ್ರೇಲರ ದೃಷ್ಟಿಯಲ್ಲಿಯೂ ನಿಮ್ಮ ಕರ್ತವ್ಯವನ್ನು ಮಾಡಿದವರಾಗಿರುವಿರಿ. 23 ಆದರೆ ನೀವು ಈ ಸಂಗತಿಗಳನ್ನು ಮಾಡದಿದ್ದರೆ, ಯೆಹೋವನಿಗೆ ವಿರೋಧವಾಗಿ ಪಾಪ ಮಾಡಿದವರಾಗಿರುವಿರಿ. ಮತ್ತು ನಿಮ್ಮ ಪಾಪವು ನಿಮ್ಮನ್ನು ಹಿಡಿಯುವ ತನಕ ಹುಡುಕಿಕೊಂಡೇ ಬರುವುದು ಎಂದು ಖಚಿತವಾಗಿ ತಿಳಿದುಕೊಳ್ಳಿರಿ. 24 ನಿಮ್ಮ ಸ್ತ್ರೀಯರಿಗಾಗಿಯೂ ಮಕ್ಕಳಿಗಾಗಿಯೂ ಊರುಗಳನ್ನು ಕಟ್ಟಿರಿ ಮತ್ತು ಪಶುಗಳಿಗಾಗಿ ದೊಡ್ಡಿಯನ್ನು ಕಟ್ಟಿರಿ. ಬಳಿಕ ನೀವು ವಾಗ್ದಾನ ಮಾಡಿದಂತೆಯೇ ಮಾಡಿರಿ” ಎಂದನು.
25 ಆಗ ಗಾದ್ಯರು ಮತ್ತು ರೂಬೇನ್ಯರು ಮೋಶೆಗೆ, “ಸ್ವಾಮೀ, ನಾವು ನಿನ್ನ ಸೇವಕರಾಗಿದ್ದೇವೆ. ಆದ್ದರಿಂದ ನೀನು ಆಜ್ಞಾಪಿಸಿದಂತೆಯೇ ನಾವು ಮಾಡುತ್ತೇವೆ. 26 ನಮ್ಮ ಹೆಂಡತಿಯರು, ಮಕ್ಕಳು, ಪಶುಗಳು ಮತ್ತು ಇತರ ಪ್ರಾಣಿಗಳು ಗಿಲ್ಯಾದಿನ ಊರುಗಳಲ್ಲಿ ವಾಸಿಸುವರು. 27 ಆದರೆ ನಿನ್ನ ಸೇವಕರಾದ ನಾವು ಮತ್ತು ದಂಡೆಯಾತ್ರೆಗಾಗಿ ಆರಿಸಲ್ಪಟ್ಟವರು ನಿನ್ನ ಆಜ್ಞೆಯ ಪ್ರಕಾರ ಜೋರ್ಡನ್ ನದಿಯನ್ನು ಯೆಹೋವನ ಮುಂದೆ ದಾಟಿಹೋಗಿ ಹೋರಾಡುತ್ತೇವೆ” ಎಂದರು.
28 ಆದ್ದರಿಂದ ಮೋಶೆಯು, ಅವರ ಬಗ್ಗೆ ಯಾಜಕ ಎಲ್ಲಾಜಾರನಿಗೂ ನೂನನ ಮಗನಾದ ಯೆಹೋಶುವನಿಗೂ ಇಸ್ರೇಲ್ ಕುಲಗಳ ಗೋತ್ರಪ್ರಧಾನರಿಗೂ ಆದೇಶಗಳನ್ನು ಕೊಟ್ಟನು. 29 ಮೋಶೆ ಅವರಿಗೆ, “ಗಾದ್ ಮತ್ತು ರೂಬೇನ್ ಕುಲಗಳಿಂದ ಯುದ್ಧಕ್ಕಾಗಿ ಆರಿಸಲ್ಪಟ್ಟವರು ಜೋರ್ಡನ್ ನದಿಯನ್ನು ಯೆಹೋವನ ಮುಂದೆ ದಾಟಿ ಆ ದೇಶವನ್ನು ಗೆದ್ದುಕೊಂಡರೆ, ನೀವು ಅವರಿಗೆ ಗಿಲ್ಯಾದ್ ಪ್ರಾಂತ್ಯವನ್ನು ಸ್ವಾಸ್ತ್ಯವಾಗಿ ಕೊಡಬೇಕು. 30 ಆದರೆ ಆರಿಸಲ್ಪಟ್ಟವರು ನಿಮ್ಮೊಂದಿಗೆ ನದಿಯನ್ನು ದಾಟದಿದ್ದರೆ, ಅವರು ನಿಮ್ಮೊಂದಿಗೆ ಕಾನಾನ್ ದೇಶದಲ್ಲಿ ಭೂಮಿಯನ್ನು ಪಡೆದುಕೊಳ್ಳಬೇಕು” ಎಂದು ಹೇಳಿದನು.
31 ಅದಕ್ಕೆ ಗಾದ್ ಮತ್ತು ರೂಬೇನ್ ಕುಲಗಳವರು ಒಪ್ಪಿ, “ನಿನ್ನ ಸೇವಕರಾದ ನಾವು ಯೆಹೋವನ ಆಜ್ಞೆಯಂತೆಯೇ ಮಾಡುವೆವು. 32 ನಾವೇ ಯುದ್ಧ ಮಾಡುವ ಸೈನಿಕರಾಗಿ ನದಿಯನ್ನು ದಾಟಿ ಯೆಹೋವನ ಮುಂದೆ ಕಾನಾನ್ ದೇಶದೊಳಗೆ ಹೋಗುವೆವು. ಆದರೆ ನಮ್ಮ ಸ್ವಾಸ್ತ್ಯವಾದ ಭೂಮಿಯು ಜೋರ್ಡನ್ ನದಿಯ ಈಚೆಕಡೆಯಲ್ಲಿರುವುದು” ಎಂದರು.
33 ಆಗ ಮೋಶೆಯು ಗಾದ್ ಮತ್ತು ರೂಬೇನ್ ಕುಲಗಳವರಿಗೆ ಮತ್ತು ಯೋಸೇಫನ ಮಗನಾದ ಮನಸ್ಸೆಯ ಅರ್ಧಕುಲದವರಿಗೆ ಅಮೋರಿಯರ ರಾಜನಾದ ಸೀಹೋನನ ರಾಜ್ಯವನ್ನೂ ಬಾಷಾನಿನ ರಾಜನಾದ ಓಗನ ರಾಜ್ಯವನ್ನೂ ಅವುಗಳ ಎಲ್ಲಾ ಊರುಗಳನ್ನೂ ಆ ಊರುಗಳಿಗೆ ಸೇರಿದ ಭೂಮಿಗಳನ್ನೂ ಕೊಟ್ಟನು.
34 ಗಾದ್ ಕುಲದವರು ದೀಬೋನ್, ಅಟಾರೋತ್, ಅರೋಯೇರ್, 35 ಅಟ್ರೋತ್ಷೋಫಾನ್, ಯಗ್ಜೇರ್, ಯೊಗ್ಬೆಹಾ, ಬೇತ್ನಿಮ್ರಾ, 36 ಬೇತ್‌ಹಾರಾನ್ ಎಂಬ ಕೋಟೆಗಳುಳ್ಳ ಊರುಗಳನ್ನು ಹೊಸದಾಗಿ ಕಟ್ಟಿಕೊಂಡರು ಮತ್ತು ತಮ್ಮ ಪಶುಗಳಿಗಾಗಿ ದೊಡ್ಡಿಗಳನ್ನು ಕಟ್ಟಿಕೊಂಡರು.
37-38 ರೂಬೇನ್ ಕುಲದವರು ಹೆಷ್ಬೋನ್, ಎಲೆಯಾಲೆ, ಕಿರ್ಯಾತಯಿಮ್, ನೆಬೋ, ಬಾಳ್ಮೆಯೋನ್ ಮತ್ತು ಸಿಬ್ಮಾ ಎಂಬ ಊರುಗಳನ್ನು ಕೋಟೆ ಸಮೇತವಾಗಿ ಕಟ್ಟಿದರು; ಅಲ್ಲದೆ ತಮ್ಮ ಪಶುಗಳಿಗಾಗಿ ದೊಡ್ಡಿಯನ್ನು ಕಟ್ಟಿದರು. ಅವರು ತಾವು ಮತ್ತೆ ಕಟ್ಟಿದ ಊರುಗಳಿಗೆ ಅವುಗಳ ಮೊದಲಿನ ಹೆಸರುಗಳನ್ನು ಕೊಟ್ಟರು; ಆದರೆ ನೆಬೋ ಮತ್ತು ಬಾಳ್ಮೆಯೋನ್‌ಗಳ ಹೆಸರುಗಳನ್ನು ಬದಲಾಯಿಸಿದರು.
39 ಮಾಕೀರನ ವಂಶದವರು ಗಿಲ್ಯಾದಿಗೆ ಹೋದರು. (ಮಾಕೀರನು ಮನಸ್ಸೆಯ ಮಗ.) ಅವರು ಆ ಪಟ್ಟಣದಲ್ಲಿ ವಾಸಿಸುತ್ತಿದ್ದ ಅಮೋರಿಯರನ್ನು ಓಡಿಸಿ ಅದನ್ನು ವಶಪಡಿಸಿಕೊಂಡರು. 40 ಆದ್ದರಿಂದ ಮೋಶೆಯು ಗಿಲ್ಯಾದನ್ನು ಮನಸ್ಸೆಯ ಮಗನಾದ ಮಾಕೀರನ ವಂಶದವರಿಗೆ ಕೊಟ್ಟನು. ಮಾಕೀರನ ವಂಶದವರು ಅಲ್ಲಿ ನೆಲೆಸಿದರು. 41 ಮನಸ್ಸೆಯ ಕುಲದವನಾದ ಯಾಯೀರನು ಅಮೋರಿಯರ ಕೋಟೆಗಳುಳ್ಳ ಹಳ್ಳಿಗಳನ್ನು ವಶಪಡಿಸಿಕೊಂಡು ಅವುಗಳಿಗೆ, “ಯಾಯೀರನ ಹಳ್ಳಿಗಳು” ಎಂದು ಹೆಸರಿಟ್ಟನು. 42 ನೋಬಹ ಎಂಬವನು ಕೆನಾತ್ ಮತ್ತು ಅದರ ಹತ್ತಿರವಿದ್ದ ಚಿಕ್ಕ ಊರುಗಳನ್ನು ವಶಪಡಿಸಿಕೊಂಡು ಅವುಗಳಿಗೆ “ನೋಬಹ” ಎಂಬ ತನ್ನ ಹೆಸರನ್ನೇ ಕೊಟ್ಟನು.
ಇಸ್ರೇಲರು ಈಜಿಪ್ಟಿನಿಂದ ಪ್ರಯಾಣ ಮಾಡಿದ ಸ್ಥಳಗಳ ಪಟ್ಟಿ
33 ಮೋಶೆ ಮತ್ತು ಆರೋನರ ನೇತೃತ್ವದಲ್ಲಿ ಈಜಿಪ್ಟ್ ದೇಶದಿಂದ ಹೊರಬಂದ ಇಸ್ರೇಲರ ಪ್ರಯಾಣಗಳ ವಿವರ: 2 ಮೋಶೆ ಯೆಹೋವನ ಅಪ್ಪಣೆಯನ್ನು ಹೊಂದಿ ಇಸ್ರೇಲರು ಪ್ರಯಾಣಗಳಲ್ಲಿ ಇಳಿದುಕೊಂಡ ಸ್ಥಳಗಳ ಹೆಸರುಗಳನ್ನು ಬರೆದನು.
3 ಮೊದಲನೆ ತಿಂಗಳಿನ ಹದಿನೈದನೆಯ ದಿನದಲ್ಲಿ ಅವರು ರಮ್ಸೇಸ್ ಪಟ್ಟಣವನ್ನು ಬಿಟ್ಟು ಹೊರಟರು. ಪಸ್ಕಹಬ್ಬದ ಮರುದಿನದಲ್ಲಿ ಇಸ್ರೇಲರು ಜಯದೊಂದಿಗೆ ತಮ್ಮ ಕೈಗಳನ್ನು ಎತ್ತಿಕೊಂಡು ಈಜಿಪ್ಟಿನಿಂದ ಹೊರಗೆ ನಡೆದರು. ಈಜಿಪ್ಟಿನ ಜನರೆಲ್ಲರೂ ಇದನ್ನು ನೋಡಿದರು. 4 ಈಜಿಪ್ಟಿನವರು ಯೆಹೋವನು ಕೊಂದುಹಾಕಿದ ತಮ್ಮ ಚೊಚ್ಚಲು ಮಕ್ಕಳನ್ನು ಹೂಳಿಡುತ್ತಿದ್ದರು. ಯೆಹೋವನು ಈಜಿಪ್ಟಿನ ದೇವರುಗಳನ್ನು ಶಿಕ್ಷಿಸಿದನು.
5 ಇಸ್ರೇಲರು ರಮ್ಸೇಸ್‌ನಿಂದ ಹೊರಟು ಸುಕ್ಕೋತಿಗೆ ಪ್ರಯಾಣಮಾಡಿ ಅಲ್ಲಿ ಪಾಳೆಯ ಮಾಡಿಕೊಂಡರು. 6 ಸುಕ್ಕೋತಿನಿಂದ ಅವರು ಏತಾಮಿಗೆ ಪ್ರಯಾಣಮಾಡಿ ಅಲ್ಲಿ ಪಾಳೆಯ ಮಾಡಿಕೊಂಡರು. ಜನರು ಅಲ್ಲಿ ಮರುಭೂಮಿಯ ಗಡಿಯಲ್ಲಿ ಪಾಳೆಯಮಾಡಿಕೊಂಡರು. 7 ಅವರು ಏತಾಮನ್ನು ಬಿಟ್ಟು ಪೀಹಹೀರೋತಿಗೆ ಪ್ರಯಾಣಮಾಡಿ ಅಲ್ಲಿ ಪಾಳೆಯ ಮಾಡಿಕೊಂಡರು. ಇದು ಬಾಳ್ಚೆಫೋನಿನ ಹತ್ತಿರವಿತ್ತು. ಜನರು ಮಿಗ್ದೋಲಿನ ಬಳಿ ಪಾಳೆಯ ಮಾಡಿಕೊಂಡರು.
8 ಜನರು ಪೀಹಹೀರೋತನ್ನು ಬಿಟ್ಟು ಸಮುದ್ರದ ಮಧ್ಯದಲ್ಲೇ ನಡೆದು ಮರುಭೂಮಿಗೆ ಬಂದರು. ಅವರು ಏತಾಮ್ ಮರುಭೂಮಿಯಲ್ಲಿ ಮೂರು ದಿನಗಳವರೆಗೆ ಪ್ರಯಾಣಮಾಡಿ ಅಲ್ಲಿ ಪಾಳೆಯ ಮಾಡಿಕೊಂಡರು.
9 ಜನರು ಮಾರವನ್ನು ಬಿಟ್ಟು ಏಲೀಮಿಗೆ ಪ್ರಯಾಣ ಮಾಡಿ ಅಲ್ಲಿ ಇಳಿದುಕೊಂಡರು. ಅಲ್ಲಿ ಹನ್ನೆರಡು ನೀರಿನ ಒರತೆಗಳೂ ಎಪ್ಪತ್ತು ಖರ್ಜೂರದ ಮರಗಳೂ ಇದ್ದವು.
10 ಜನರು ಏಲೀಮನ್ನು ಬಿಟ್ಟು ಕೆಂಪುಸಮುದ್ರದ ಹತ್ತಿರ ಪಾಳೆಯ ಮಾಡಿಕೊಂಡರು.
11 ಕೆಂಪುಸಮುದ್ರದಿಂದ ಹೊರಟು ಸೀನ್ ಅರಣ್ಯದಲ್ಲಿ ಪಾಳೆಯ ಮಾಡಿಕೊಂಡರು.
12 ಸೀನ್ ಅರಣ್ಯದಿಂದ ಹೊರಟು ದೊಫ್ಕದಲ್ಲಿ ಇಳಿದುಕೊಂಡರು.
13 ದೊಫ್ಕದಿಂದ ಹೊರಟು ಆಲೂಷಿನಲ್ಲಿ ಇಳಿದುಕೊಂಡರು.
14 ಆಲೂಷಿನಿಂದ ಹೊರಟು ರೆಫೀದೀಮಿನಲ್ಲಿ ಇಳಿದುಕೊಂಡರು. ಅಲ್ಲಿ ಜನರಿಗೆ ಕುಡಿಯಲು ನೀರು ಇರಲಿಲ್ಲ.
15 ರೆಫೀದೀಮಿನಿಂದ ಹೊರಟು ಸೀನಾಯಿ ಮರುಭೂಮಿಯಲ್ಲಿ ಇಳಿದುಕೊಂಡರು.
16 ಸೀನಾಯಿ ಮರುಭೂಮಿಯಿಂದ ಹೊರಟು ಕಿಬ್ರೋತ್ ಹತಾವದಲ್ಲಿ ಇಳಿದುಕೊಂಡರು.
17 ಕಿಬ್ರೋತ್ ಹತಾವದಿಂದ ಹೊರಟು ಹಚೇರೋತಿನಲ್ಲಿ ಇಳಿದುಕೊಂಡರು.
18 ಹಚೇರೋತಿನಿಂದ ಹೊರಟು ರಿತ್ಮದಲ್ಲಿ ಇಳಿದುಕೊಂಡರು.
19 ರಿತ್ಮದಿಂದ ಹೊರಟು ರಿಮ್ಮೋನ್ ಪೆರೆಚಿನಲ್ಲಿ ಇಳಿದುಕೊಂಡರು.
20 ರಿಮ್ಮೋನ್ ಪೆರೆಚಿನಿಂದ ಹೊರಟು ಲಿಬ್ನದಲ್ಲಿ ಇಳಿದುಕೊಂಡರು.
21 ಲಿಬ್ನದಿಂದ ಹೊರಟು ರಿಸ್ಸದಲ್ಲಿ ಇಳಿದುಕೊಂಡರು.
22 ರಿಸ್ಸದಿಂದ ಹೊರಟು ಕೆಹೇಲಾತದಲ್ಲಿ ಇಳಿದುಕೊಂಡರು.
23 ಕೆಹೇಲಾತದಿಂದ ಹೊರಟು ಶೆಫೆರ್ ಬೆಟ್ಟದಲ್ಲಿ ಇಳಿದುಕೊಂಡರು.
24 ಶೆಫೆರ್ ಬೆಟ್ಟದಿಂದ ಹೊರಟು ಹರಾದದಲ್ಲಿ ಇಳಿದುಕೊಂಡರು.
25 ಹರಾದದಿಂದ ಹೊರಟು ಮಖೇಲೋತಿನಲ್ಲಿ ಇಳಿದುಕೊಂಡರು.
26 ಮಖೇಲೋತಿನಿಂದ ಹೊರಟು ತಹತಿನಲ್ಲಿ ಇಳಿದುಕೊಂಡರು.
27 ತಹತಿನಿಂದ ಹೊರಟು ತೆರಹದಲ್ಲಿ ಇಳಿದುಕೊಂಡರು.
28 ತೆರಹದಿಂದ ಹೊರಟು ಮಿತ್ಕದಲ್ಲಿ ಇಳಿದುಕೊಂಡರು.
29 ಮಿತ್ಕದಿಂದ ಹೊರಟು ಹಷ್ಮೋನದಲ್ಲಿ ಇಳಿದುಕೊಂಡರು.
30 ಹಷ್ಮೋನದಿಂದ ಹೊರಟು ಮೋಸೇರೋತಿನಲ್ಲಿ ಇಳಿದುಕೊಂಡರು.
31 ಮೋಸೇರೋತಿನಿಂದ ಹೊರಟು ಬೆನೇಯಾಕಾನಿನಲ್ಲಿ ಇಳಿದುಕೊಂಡರು.
32 ಬೆನೇಯಾಕಾನಿನಿಂದ ಹೊರಟು ಹೋರ್ಹಗಿದ್ಗಾದ್‌ನಲ್ಲಿ ಇಳಿದುಕೊಂಡರು.
33 ಹೋರ್ಹಗಿದ್ಗಾದ್‌ನಿಂದ ಹೊರಟು ಯೊಟ್ಬಾತದಲ್ಲಿ ಇಳಿದುಕೊಂಡರು.
34 ಯೊಟ್ಬಾತದಿಂದ ಹೊರಟು ಅಬ್ರೋನದಲ್ಲಿ ಇಳಿದುಕೊಂಡರು.
35 ಅಬ್ರೋನದಿಂದ ಹೊರಟು ಎಚ್ಯೋನ್‌ಗೆಬೆರಿನಲ್ಲಿ ಇಳಿದುಕೊಂಡರು.
36 ಎಚ್ಯೋನ್‌ಗೆಬೆರಿನಿಂದ ಹೊರಟು ಚಿನ್ ಮರುಭೂಮಿಯಲ್ಲಿ ಇಳಿದುಕೊಂಡರು. ಅದು ಕಾದೇಶ್.
37 ಕಾದೇಶಿನಿಂದ ಹೊರಟು ಎದೋಮ್ಯರ ದೇಶದ ಅಂಚಿನಲ್ಲಿರುವ ಹೋರ್ ಬೆಟ್ಟದ ಬಳಿಯಲ್ಲಿ ಇಳಿದುಕೊಂಡರು. 38 ಮಹಾಯಾಜಕನಾದ ಆರೋನನು ಯೆಹೋವನಿಂದ ಆಜ್ಞಾಪಿಸಲ್ಪಟ್ಟ ಹೋರ್ ಬೆಟ್ಟವನ್ನು ಹತ್ತಿದನು. ಇಸ್ರೇಲರು ಈಜಿಪ್ಟನ್ನು ಬಿಟ್ಟು ಹೊರಟ ನಂತರ ನಲವತ್ತನೆ ವರ್ಷದ ಐದನೆ ತಿಂಗಳಿನ ಮೊದಲನೆ ದಿನದಲ್ಲಿ ಆರೋನನು ಅಲ್ಲಿ ಪ್ರಾಣಬಿಟ್ಟನು. 39 ಆರೋನನು “ಹೋರ್” ಬೆಟ್ಟದಲ್ಲಿ ಸತ್ತಾಗ ಅವನಿಗೆ ನೂರಿಪ್ಪತ್ಮೂರು ವರ್ಷ ವಯಸ್ಸಾಗಿತ್ತು.
40 ಇಸ್ರೇಲರು ಬರುತ್ತಾರೆಂಬ ಸುದ್ದಿಯನ್ನು ನೆಗೆವ್‌ನಲ್ಲಿ ವಾಸವಾಗಿದ್ದ ಅರಾದ್ ಪಟ್ಟಣದ ಅರಸನು ಕೇಳಿದನು. 41 ಇಸ್ರೇಲರು ಹೋರ್ ಬೆಟ್ಟದಿಂದ ಹೊರಟು ಚಲ್ಮೋನದಲ್ಲಿ ಇಳಿದುಕೊಂಡರು.
42 ಚಲ್ಮೋನದಿಂದ ಹೊರಟು ಪೂನೋನಿನಲ್ಲಿ ಇಳಿದುಕೊಂಡರು.
43 ಪೂನೋನಿನಿಂದ ಹೊರಟು ಓಬೋತಿನಲ್ಲಿ ಇಳಿದುಕೊಂಡರು.
44 ಓಬೋತಿನಿಂದ ಹೊರಟು ಮೋವಾಬ್ಯರ ಸರಹದ್ದಿನಲ್ಲಿರುವ ಜೋರ್ಡನ್ ಆಚೆ ಇರುವ ಇಯ್ಯಿಮಿನಲ್ಲಿ ಇಳಿದುಕೊಂಡರು.
45 ಇಯ್ಯಿಮಿನಿಂದ ಹೊರಟು ದೀಬೋನ್‌ಗಾದಿನಲ್ಲಿ ಇಳಿದುಕೊಂಡರು.
46 ದೀಬೋನ್‌ಗಾದಿನಿಂದ ಹೊರಟು ಅಲ್ಮೋನ್ ದಿಬ್ಲಾತಯಿಮಿನಲ್ಲಿ ಇಳಿದುಕೊಂಡರು.
47 ಅಲ್ಮೋನ್ ದಿಬ್ಲಾತಯಿಮಿನಿಂದ ಹೊರಟು ಅಬಾರೀಮ್ ಬೆಟ್ಟಗಳಲ್ಲಿರುವ ನೆಬೋವಿನ ಪೂರ್ವದಿಕ್ಕಿನಲ್ಲಿ ಇಳಿದುಕೊಂಡರು.
48 ಅಬಾರೀಮ್ ಬೆಟ್ಟಗಳಿಂದ ಹೊರಟು, ಜೆರಿಕೊ ಪಟ್ಟಣದ ಆಚೆಕಡೆಯಲ್ಲಿರುವ ಜೋರ್ಡನ್ ನದಿಯ ತೀರದಲ್ಲಿ ಮೋವಾಬ್ಯರ ಮೈದಾನದಲ್ಲಿ ಇಳಿದುಕೊಂಡರು. 49 ಅವರು ಮೋವಾಬ್ಯರ ಮೈದಾನದಲ್ಲಿ ಬೇತ್‌ಯೆಷೀಮೋತಿನಿಂದ ಅಬೇಲ್ ಶಿಟ್ಟೀಮಿನವರೆಗೂ ಜೋರ್ಡನ್ ನದಿಯ ತೀರದಲ್ಲಿ ಇಳಿದುಕೊಂಡರು.
50 ಆ ಸ್ಥಳದಲ್ಲಿದ್ದಾಗ ಯೆಹೋವನು ಮೋಶೆಯೊಡನೆ ಮಾತಾಡಿ ಹೇಳಿದ್ದೇನೆಂದರೆ: 51 “ನೀನು ಇಸ್ರೇಲರಿಗೆ ಹೀಗೆ ಆಜ್ಞಾಪಿಸು: ನೀವು ಜೋರ್ಡನ್ ಹೊಳೆದಾಟಿ ಕಾನಾನ್ ದೇಶವನ್ನು ಸೇರಿದಾಗ 52 ಆ ದೇಶದ ನಿವಾಸಿಗಳನ್ನೆಲ್ಲ ಹೊರಡಿಸಿಬಿಟ್ಟು ಅವರ ಕೆತ್ತಿದ ಪ್ರತಿಮೆಗಳನ್ನು ಮತ್ತು ಲೋಹದ ವಿಗ್ರಹಗಳನ್ನು ನಾಶಮಾಡಿ ಅವರ ಪೂಜಾಸ್ಥಳಗಳನ್ನು ಹಾಳುಮಾಡಬೇಕು. 53 ನಾನು ನಿಮಗೆ ಆ ದೇಶವನ್ನು ಸ್ವದೇಶವಾಗುವುದಕ್ಕೆ ಕೊಟ್ಟಿದ್ದೇನೆ. ನೀವು ಅದನ್ನು ಸ್ವಾಧೀನಮಾಡಿಕೊಂಡು ಅದರಲ್ಲಿ ವಾಸಿಸಬೇಕು. 54 ನೀವು ಚೀಟುಹಾಕಿ ಆ ದೇಶವನ್ನು ನಿಮ್ಮನಿಮ್ಮ ಕುಲಗಳಿಗೆ ಹಂಚಿಕೊಳ್ಳಬೇಕು. ಹೆಚ್ಚು ಮಂದಿಯುಳ್ಳ ಕುಲಕ್ಕೆ ಹೆಚ್ಚಾಗಿಯೂ ಕಡಿಮೆ ಮಂದಿಯುಳ್ಳ ಕುಲಕ್ಕೆ ಕಡಿಮೆಯಾಗಿಯೂ ಸ್ವಾಸ್ತ್ಯವು ದೊರೆಯಬೇಕು. ಒಂದೊಂದು ಕುಲಕ್ಕೆ ಯಾವ ಯಾವ ಸ್ಥಳವನ್ನು ಸೂಚಿಸುತ್ತದೋ ಆ ಸ್ಥಳದಲ್ಲಿಯೇ ಆ ಕುಲದ ಸ್ವಾಸ್ತ್ಯವಿರಬೇಕು. ಒಂದೊಂದು ಕುಲದ ಕುಟುಂಬಗಳು ಒಂದೇ ಪ್ರದೇಶದಲ್ಲಿರಬೇಕು.
55 “ನೀವು ಆ ದೇಶದ ನಿವಾಸಿಗಳನ್ನು ಹೊರಡಿಸದೆ ಹೋದರೆ, ಅವರು ಉಳಿದುಕೊಂಡು ನಿಮ್ಮ ಕಣ್ಣುಗಳಲ್ಲಿ ಮರದ ಚೂರಿನಂತೆಯೂ ನಿಮ್ಮ ಪಕ್ಕೆಗಳಲ್ಲಿ ಮುಳ್ಳುಗಳಂತೆಯೂ ಇರುವರು. ನೀವು ವಾಸಿಸುವ ದೇಶದಲ್ಲಿ ನಿಮಗೆ ತೊಂದರೆ ಮಾಡುವರು. 56 ಅದಲ್ಲದೆ, ನಾನು ಅವರಿಗೆ ಏನನ್ನು ಮಾಡಲು ಯೋಚಿಸಿದೆನೋ ಅದನ್ನು ನಿಮಗೆ ಮಾಡುವೆನು.”
ಕಾನಾನಿನ ಮೇರೆಗಳು
34 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 2 “ನೀನು ಇಸ್ರೇಲರಿಗೆ ಹೀಗೆ ಆಜ್ಞಾಪಿಸಬೇಕು: ನೀವು ಕಾನಾನ್ ದೇಶವನ್ನು ಪ್ರವೇಶಿಸಿದಾಗ, ಇಡೀ ಕಾನಾನ್ ದೇಶವನ್ನು ಅದರ ಗಡಿಗಳೊಡನೆ ನಿಮಗೆ ಸ್ವಾಸ್ತ್ಯವಾಗಿ ಕೊಡಲಾಗುವುದು. 3 ದಕ್ಷಿಣಭಾಗವು ಎದೋಮಿನ ಗಡಿಯಲ್ಲಿರುವ ಚಿನ್ ಮರುಭೂಮಿಯನ್ನು ಒಳಗೊಂಡಿದೆ. ಪೂರ್ವದ ಕಡೆಯಿರುವ ದಕ್ಷಿಣ ಗಡಿಯು ಉಪ್ಪುಸಮುದ್ರದ ದಕ್ಷಿಣಭಾಗದಿಂದ ಆರಂಭವಾಗುತ್ತದೆ. 4 ಅಲ್ಲಿಂದ ಅದು ಅಕ್ರಬ್ಬೀಮ್ ಕಣಿವೆಗೆ ತಿರುಗಿಕೊಂಡು ಚಿನಿಗೆ ಮುಂದುವರಿಯುವುದು. ಅದರ ಪರಿಮಿತಿ ದಕ್ಷಿಣ ಕಾದೇಶ್ ಬರ್ನೇಯಾ. ಅಲ್ಲಿಂದ ಅದು ಹಚರದ್ದಾರ್‌ಗೆ ಹೋಗಿ ಅಚ್ಮೋನಿಗೆ ಮುಂದುವರಿಯುತ್ತದೆ. 5 ಗಡಿಯು ಅಚ್ಮೋನಿನಿಂದ ಈಜಿಪ್ಟಿನ ನದಿಯ ಕಡೆಗೆ ತಿರುಗಿಕೊಂಡು ಸಮುದ್ರವನ್ನು ಸೇರುವುದು. 6 ಪಶ್ಚಿಮದಿಕ್ಕಿನಲ್ಲಿ ಮೆಡಿಟೆರೇನಿಯನ್ ಸಮುದ್ರದ ತೀರ ನಿಮ್ಮ ದೇಶದ ಮೇರೆಯಾಗಿರುವುದು. 7 ಉತ್ತರದಿಕ್ಕಿನ ಮೇರೆ ಮೆಡಿಟೆರೇನಿಯನ್ ಸಮುದ್ರದಿಂದ ಹಿಡಿದು ಲೆಬನೋನಿನಲ್ಲಿರುವ ಹೋರ್ ಬೆಟ್ಟದವರೆಗೂ ಇರುವುದು. 8 ಹೋರ್ ಬೆಟ್ಟದಿಂದ ಅದು ಲೆಬೊಹಮಾತಿಗೆ ಹೋಗಿ ಅಲ್ಲಿಂದ ಚೆದಾದಿಗೆ ಹೋಗುವುದು. 9 ಬಳಿಕ ಆ ಮೇರೆಯು ಜಿಫ್ರೋನಿಗೆ ಹೋಗಿ ಹಚರೇನಾನಿನಲ್ಲಿ ಮುಗಿಯುವುದು. ಹೀಗೆ ಅದು ನಿಮ್ಮ ಉತ್ತರ ಮೇರೆಯಾಗಿರುವುದು. 10 ನಿಮ್ಮ ಪೂರ್ವದಿಕ್ಕಿನಲ್ಲಿರುವ ಮೇರೆಯು ಹಚರೇನಾನಿನಿಂದ ಹೊರಟು ಶೆಫಾಮಿಗೆ ಹೋಗುವುದು. 11 ಶೆಫಾಮಿನಿಂದ ಆ ಮೇರೆಯು ಆಯಿನಿನ ಪೂರ್ವದಲ್ಲಿರುವ ರಿಬ್ಲಕ್ಕೆ ಹೋಗಿ ಗಲಿಲೇಯ ಸರೋವರದ ಪೂರ್ವದಲ್ಲಿರುವ ಬೆಟ್ಟಗಳನ್ನು ಮುಟ್ಟುವುದು. 12 ಬಳಿಕ ಈ ಮೇರೆಯು ಜೋರ್ಡನ್ ನದಿಯ ಉದ್ದಕ್ಕೂ ಮುಂದುವರೆಯುವುದು. ಅದು ಉಪ್ಪು ಸಮುದ್ರದಲ್ಲಿ ಕೊನೆಗೊಳ್ಳುವುದು. ಇವುಗಳೇ ನಿಮ್ಮ ದೇಶದ ಸುತ್ತಲಿನ ಮೇರೆಗಳು.”
13 ಮೋಶೆಯು ಇಸ್ರೇಲರಿಗೆ ಹೀಗೆ ಆಜ್ಞಾಪಿಸಿದನು: “ನೀವು ಚೀಟುಹಾಕಿ ಭಾಗಮಾಡಿಕೊಳ್ಳುವ ದೇಶವೇ ಇದು. ಒಂಭತ್ತುವರೆ ಕುಲಗಳವರಿಗೆ ಈ ದೇಶವನ್ನು ಕೊಡಬೇಕೆಂದು ಯೆಹೋವನು ಆಜ್ಞಾಪಿಸಿದ್ದಾನೆ. 14-15 ಬೇರೆ ಎರಡೂವರೆ ಕುಲಗಳವರು ಅಂದರೆ ರೂಬೇನ್ ಕುಲ ಮತ್ತು ಗಾದ್ ಕುಲ ಮತ್ತು ಮನಸ್ಸೆಯ ಅರ್ಧಕುಲವು ಜೆರಿಕೊ ಪಟ್ಟಣದ ಆಚೆಯಲ್ಲಿರುವ ಜೋರ್ಡನ್ ನದಿಯ ಪೂರ್ವಭಾಗದಲ್ಲಿ ಈಗಾಗಲೇ ಸ್ವಾಸ್ತ್ಯವನ್ನು ಹೊಂದಿ ತಮ್ಮ ಕುಟುಂಬಗಳ ಪ್ರಕಾರ ಹಂಚಿಕೊಂಡಿದ್ದಾರೆ.”
16 ಆಗ ಯೆಹೋವನು ಮೋಶೆಗೆ ಆಜ್ಞಾಪಿಸಿದ್ದೇನೆಂದರೆ: 17 “ನಿಮಗೋಸ್ಕರ ದೇಶವನ್ನು ಹಂಚಿಕೊಡುವ ಕುಲಪ್ರಧಾನರು ಯಾರೆಂದರೆ: ಮಹಾಯಾಜಕನಾದ ಎಲ್ಲಾಜಾರ್, ನೂನನ ಮಗನಾದ ಯೆಹೋಶುವ 18 ಮತ್ತು ಪ್ರತಿಯೊಂದು ಕುಲದಿಂದ ಒಬ್ಬ ಕುಲಪ್ರಧಾನ. 19 ಪ್ರತಿಯೊಂದು ಕುಲದಿಂದ ನೀವು ನೇಮಿಸಬೇಕಾದವರು ಇವರೇ:
ಯೆಹೂದ ಕುಲದಿಂದ ಯೆಫುನ್ನೆಯ ಮಗನಾದ ಕಾಲೇಬ್.
20 ಸಿಮೆಯೋನ್ ಕುಲದಿಂದ ಅಮ್ಮೀಹೂದನ ಮಗನಾದ ಶೆಮೂವೇಲ್.
21 ಬೆನ್ಯಾಮೀನ್ ಕುಲದಿಂದ ಕಿಸ್ಲೋನನ ಮಗನಾದ ಎಲೀದಾದ್.
22 ದಾನ್ ಕುಲದಿಂದ ಯೊಗ್ಲೀಯ ಮಗನಾದ ಬುಕ್ಕೀ ಕುಲಾಧಿಪತಿ.
23 ಯೋಸೇಫನ ಸಂತತಿಯವರಲ್ಲಿ ಮನಸ್ಸೆ ಕುಲದಿಂದ ಏಫೋದನ ಮಗನಾದ ಹನ್ನೀಯೇಲ್ ಕುಲಾಧಿಪತಿ.
24 ಎಫ್ರಾಯೀಮ್ ಕುಲದಿಂದ ಶಿಫ್ಟಾನನ ಮಗನಾದ ಕೆಮೂವೇಲ್ ಕುಲಾಧಿಪತಿ.
25 ಜೆಬುಲೂನ್ ಕುಲದಿಂದ ಪರ್ನಾಕನ ಮಗನಾದ ಎಲೀಚಾಫಾನ್ ಕುಲಾಧಿಪತಿ.
26 ಇಸ್ಸಾಕಾರ್ ಕುಲದಿಂದ ಅಜ್ಜಾನನ ಮಗನಾದ ಪಲ್ಟೀಯೇಲ್ ಕುಲಾಧಿಪತಿ.
27 ಆಶೇರ್ ಕುಲದಿಂದ ಶೆಲೋಮಿಯ ಮಗನಾದ ಅಹೀಹೂದ್ ಕುಲಾಧಿಪತಿ.
28 ನಫ್ತಾಲಿ ಕುಲದಿಂದ ಅಮ್ಮೀಹೂದನ ಮಗನಾದ ಪೆದಹೇಲ್ ಕುಲಾಧಿಪತಿ.”
29 ಕಾನಾನ್ ದೇಶದಲ್ಲಿ, ಇಸ್ರೇಲರಿಗೆ ಅವರವರ ಸ್ವಾಸ್ತ್ಯಗಳನ್ನು ಹಂಚಿಕೊಡುವುದಕ್ಕೆ ಯೆಹೋವನು ಇವರನ್ನೆಲ್ಲಾ ನೇಮಿಸಿದನು.
ತನ್ನ ಮರಣದ ಬಗ್ಗೆ ಯೇಸುವಿನ ಪ್ರಕಟನೆ
(ಮತ್ತಾಯ 17:22-23; ಲೂಕ 9:43-45)
30 ನಂತರ ಯೇಸು ಮತ್ತು ಆತನ ಶಿಷ್ಯರು ಆ ಸ್ಥಳದಿಂದ ಹೊರಟು ಗಲಿಲಾಯದ ಮೂಲಕ ಪ್ರಯಾಣ ಮಾಡಿದರು. ತಾವು ಎಲ್ಲಿದ್ದೇವೆಂಬುದು ಜನರಿಗೆ ತಿಳಿಯಬಾರದೆಂಬುದು ಯೇಸುವಿನ ಉದ್ದೇಶವಾಗಿತ್ತು. 31 ಏಕೆಂದರೆ ಆತನು ತನ್ನ ಶಿಷ್ಯರಿಗೆ ಏಕಾಂತವಾಗಿ ಉಪದೇಶಿಸಬೇಕೆಂದಿದ್ದನು. ಯೇಸು ಅವರಿಗೆ, “ಮನುಷ್ಯಕುಮಾರನನ್ನು ಜನರ ವಶಕ್ಕೆ ಕೊಡುವರು. ಜನರು ಆತನನ್ನು ಕೊಲ್ಲುವರು. ಕೊಲ್ಲಲ್ಪಟ್ಟ ಮೂರನೆಯ ದಿನದಲ್ಲಿ ಆತನು ಜೀವಂತವಾಗಿ ಎದ್ದುಬರುವನು” ಎಂದು ಹೇಳಿದನು. 32 ಆದರೆ ಯೇಸು ಹೇಳಿದ್ದು ಶಿಷ್ಯರಿಗೆ ಅರ್ಥವಾಗಲಿಲ್ಲ. ಮತ್ತು ಅದರ ಅರ್ಥವನ್ನು ಕೇಳುವುದಕ್ಕೂ ಅವರು ಭಯಪಟ್ಟರು.
ಯಾರು ಅತ್ಯಂತ ದೊಡ್ಡವರು?
(ಮತ್ತಾಯ 18:1-5; ಲೂಕ 9:46-48)
33 ಯೇಸು ಮತ್ತು ಆತನ ಶಿಷ್ಯರು ಕಪೆರ್ನೌಮಿಗೆ ಹೋದರು. ಅವರು ಒಂದು ಮನೆಯೊಳಗಿದ್ದಾಗ ಆತನು ತನ್ನ ಶಿಷ್ಯರಿಗೆ, “ಈ ದಿನ ನೀವು ದಾರಿಯಲ್ಲಿ ವಾದಮಾಡುತ್ತಿದ್ದುದ್ದನ್ನು ಕೇಳಿಸಿಕೊಂಡೆ. ನೀವು ಯಾವುದರ ಬಗ್ಗೆ ವಾದಮಾಡುತ್ತಿದ್ದಿರಿ?” ಎಂದನು. 34 ಆದರೆ ಶಿಷ್ಯರು ಉತ್ತರಿಸಲಿಲ್ಲ. ಏಕೆಂದರೆ ತಮ್ಮಲ್ಲಿ ಎಲ್ಲರಿಗಿಂತಲೂ ದೊಡ್ಡವನು ಯಾರೆಂಬುದರ ಕುರಿತು ಅವರು ವಾಗ್ವಾದ ಮಾಡಿದ್ದರು.
35 ಯೇಸು ಕುಳಿತುಕೊಂಡು, ಹನ್ನೆರಡು ಜನ ಅಪೊಸ್ತಲರನ್ನು ತನ್ನ ಬಳಿಗೆ ಕರೆದು ಅವರಿಗೆ, “ನಿಮ್ಮಲ್ಲಿ ಅತ್ಯಂತ ಪ್ರಮುಖ ವ್ಯಕ್ತಿಯಾಗಬೇಕೆಂದು ಬಯಸುವವನು ಉಳಿದ ಎಲ್ಲರನ್ನು ತನಗಿಂತಲೂ ಹೆಚ್ಚು ಪ್ರಮುಖರೆಂದು ಭಾವಿಸಿಕೊಂಡು ಎಲ್ಲರ ಸೇವೆಮಾಡಬೇಕು” ಎಂದು ಹೇಳಿದನು.
36 ನಂತರ ಯೇಸು ಒಂದು ಚಿಕ್ಕ ಮಗುವನ್ನು ಕರೆದು, ಆ ಮಗುವನ್ನು ಶಿಷ್ಯರ ಮುಂದೆ ನಿಲ್ಲಿಸಿ, ಅದನ್ನು ತನ್ನ ಕೈಗಳಲ್ಲಿ ಎತ್ತಿಕೊಂಡು ಅವರಿಗೆ, 37 “ನನ್ನ ಹೆಸರಿನಲ್ಲಿ ಇಂಥ ಮಕ್ಕಳನ್ನು ಸ್ವೀಕರಿಸಿಕೊಳ್ಳುವವನು ನನ್ನನ್ನೇ ಸ್ವೀಕರಿಸಿಕೊಂಡಂತಾಯಿತು. ನನ್ನನ್ನು ಸ್ವೀಕರಿಸಿಕೊಳ್ಳುವವನು, ನನ್ನನ್ನು ಕಳುಹಿಸಿದಾತನನ್ನೇ ಸ್ವೀಕರಿಸಿಕೊಂಡಂತಾಯಿತು” ಎಂದು ಹೇಳಿದನು.
ನಮ್ಮ ವೈರಿಯಲ್ಲದವನು ನಮ್ಮ ಮಿತ್ರನೇ
(ಲೂಕ 9:49-50)
38 ಆಗ ಯೋಹಾನನು, “ಗುರುವೇ, ಯಾರೋ ಒಬ್ಬನು ನಿನ್ನ ಹೆಸರಿನ ಮೂಲಕ ದೆವ್ವಗಳನ್ನು ಬಿಡಿಸುತ್ತಿರುವುದನ್ನು ನಾವು ನೋಡಿದೆವು. ಅವನು ನಮ್ಮವನಲ್ಲ. ಆದ್ದರಿಂದ ನಿನ್ನ ಹೆಸರನ್ನು ಹೇಳಕೂಡದೆಂದು ಅವನಿಗೆ ಹೇಳಿದೆವು” ಎಂದನು.
39 ಯೇಸು ಅವರಿಗೆ, “ಅವನನ್ನು ತಡೆಯಬೇಡಿ. ನನ್ನ ಹೆಸರಿನ ಮೂಲಕ ಅದ್ಭುತಕಾರ್ಯಗಳನ್ನು ಮಾಡುವವನು ಆ ಕೂಡಲೇ ನನ್ನ ಬಗ್ಗೆ ಕೆಟ್ಟ ಸಂಗತಿಗಳನ್ನು ಹೇಳಲು ಸಾಧ್ಯವಿಲ್ಲ. 40 ನಮ್ಮ ವೈರಿಯಲ್ಲದವನು ನಮ್ಮ ಮಿತ್ರನೇ ಸರಿ. 41 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ಕ್ರಿಸ್ತನವರೆಂದು ಯಾವನಾದರೂ ನಿಮಗೆ ಕುಡಿಯಲು ನೀರು ಕೊಟ್ಟರೂ ಅವನಿಗೆ ಅದರ ಪ್ರತಿಫಲ ಖಂಡಿತವಾಗಿ ಸಿಕ್ಕುವುದು.
ಇತರರನ್ನು ಪಾಪಕ್ಕೆ ನಡೆಸುವುದರ ಬಗ್ಗೆ ಯೇಸುವಿನ ಎಚ್ಚರಿಕೆ
(ಮತ್ತಾಯ 18:6-9; ಲೂಕ 17:1-2)
42 “ನನ್ನಲ್ಲಿ ನಂಬಿಕೆಯಿಟ್ಟಿರುವ ಈ ಚಿಕ್ಕ ಮಕ್ಕಳಲ್ಲಿ ಒಬ್ಬನನ್ನು ಪಾಪಕ್ಕೆ ನಡೆಸುವ ವ್ಯಕ್ತಿಯು ತನ್ನ ಕುತ್ತಿಗೆಗೆ ಬೀಸುವ ಕಲ್ಲನ್ನು ಕಟ್ಟಿಕೊಂಡು, ಸಮುದ್ರದಲ್ಲಿ ಮುಳುಗುವುದೇ ಒಳ್ಳೆಯದು. 43 ನಿನ್ನ ಕೈ ನಿನ್ನನ್ನು ಪಾಪದಲ್ಲಿ ಸಿಲುಕಿಸುವುದಾದರೆ ಅದನ್ನು ಕತ್ತರಿಸಿಬಿಡು. ಎರಡು ಕೈಗಳನ್ನು ಇಟ್ಟುಕೊಂಡು, ನಂದಿಹೋಗದ ಬೆಂಕಿಯಿರುವ ನರಕಕ್ಕೆ ಹೋಗುವುದಕ್ಕಿಂತ ಅಂಗವಿಕಲನಾಗಿದ್ದು ನಿತ್ಯಜೀವವನ್ನು ಪಡೆಯುವುದೇ ಮೇಲು. ಆ ಸ್ಥಳದಲ್ಲಿ ಬೆಂಕಿ ಆರಿಹೋಗುವುದೇ ಇಲ್ಲ. 44 [a] 45 ನಿನ್ನ ಕಾಲು ನಿನ್ನನ್ನು ಪಾಪದಲ್ಲಿ ಸಿಕ್ಕಿಸುವುದಾದರೆ, ಅದನ್ನು ಕತ್ತರಿಸಿಬಿಡು. ಎರಡು ಕಾಲುಗಳನ್ನು ಇಟ್ಟುಕೊಂಡು ನರಕದೊಳಗೆ ಎಸೆಯಲ್ಪಡುವುದಕ್ಕಿಂತ ಕುಂಟನಾಗಿರುವುದೇ ಮೇಲು. 46 [b] 47 ನಿನ್ನ ಕಣ್ಣು ನಿನ್ನನ್ನು ಪಾಪದಲ್ಲಿ ಸಿಲುಕಿಸುವುದಾದರೆ, ಅದನ್ನು ಕಿತ್ತುಬಿಡು. ಎರಡು ಕಣ್ಣುಗಳನ್ನಿಟ್ಟುಕೊಂಡು ನರಕದೊಳಗೆ ಎಸೆಯಲ್ಪಡುವುದಕ್ಕಿಂತ ಒಂದೇ ಕಣ್ಣುಳ್ಳವನಾಗಿದ್ದು ನಿತ್ಯಜೀವವನ್ನು ಹೊಂದಿಕೊಳ್ಳುವುದೇ ಮೇಲು. 48 ನರಕದಲ್ಲಿ ಮನುಷ್ಯರನ್ನು ತಿನ್ನುವ ಹುಳಗಳು ಸಾಯುವುದೇ ಇಲ್ಲ ಮತ್ತು ಬೆಂಕಿಯು ಆರುವುದೇ ಇಲ್ಲ.
49 “ಪ್ರತಿಯೊಬ್ಬನನ್ನೂ ಬೆಂಕಿಯಿಂದ ಶಿಕ್ಷಿಸಲಾಗುತ್ತದೆ.
50 “ಉಪ್ಪು ಒಳ್ಳೆಯದು. ಆದರೆ ಉಪ್ಪು ತನ್ನ ರುಚಿಯನ್ನು ಕಳೆದುಕೊಂಡರೆ, ಅದನ್ನು ಮತ್ತೆ ನೀವು ಉಪ್ಪನ್ನಾಗಿ ಮಾಡಲಾರಿರಿ. ಆದ್ದರಿಂದ ಒಳ್ಳೆಯತನದಿಂದ[c] ತುಂಬಿದವರಾಗಿರಿ ಮತ್ತು ಒಬ್ಬರೊಡನೊಬ್ಬರು ಸಮಾಧಾನದಿಂದಿರಿ” ಎಂದು ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International