Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಅರಣ್ಯಕಾಂಡ 23-25

ಬಿಳಾಮನ ಮೊದಲನೆಯ ಸಂದೇಶ

23 ಬಿಳಾಮನು ಬಾಲಾಕನಿಗೆ, “ಇಲ್ಲಿ ನೀನು ಏಳು ಯಜ್ಞವೇದಿಕೆಗಳನ್ನು ನನಗೆ ಕಟ್ಟಿಸಿ ಏಳು ಹೋರಿಗಳನ್ನೂ ಏಳು ಟಗರುಗಳನ್ನೂ ನನಗೆ ಸಿದ್ಧಪಡಿಸು” ಅಂದನು. ಬಾಲಾಕನು ಹಾಗೆಯೇ ಮಾಡಿದನು. ಬಾಲಾಕನೂ ಬಿಳಾಮನೂ ಪ್ರತಿಯೊಂದು ಯಜ್ಞವೇದಿಕೆಯ ಮೇಲೆ ಒಂದು ಹೋರಿಯನ್ನೂ ಒಂದು ಟಗರನ್ನೂ ಸರ್ವಾಂಗಹೋಮವಾಗಿ ಸಮರ್ಪಿಸಿದಾಗ, ಬಿಳಾಮನು ಬಾಲಾಕನಿಗೆ, “ನೀನು ಸರ್ವಾಂಗಹೋಮ ಮಾಡಿದ ಸ್ಥಳದಲ್ಲೇ ಇರು. ನಾನು ಸ್ವಲ್ಪದೂರ ಹೋಗಿ ಬರುತ್ತೇನೆ. ಒಂದುವೇಳೆ ಯೆಹೋವನು ನನ್ನನ್ನು ಸಂಧಿಸಲು ಬರಬಹುದು. ಆತನು ನನಗೆ ಪ್ರಕಟಿಸುವುದನ್ನು ನಿನಗೆ ತಿಳಿಸುವೆನು” ಎಂದು ಹೇಳಿ ಮರವಿಲ್ಲದ ಒಂದು ದಿಣ್ಣೆಗೆ ಹೋದನು.

ದೇವರು ಬಿಳಾಮನಿಗೆ ಎದುರಾಗಿ ಬಂದಾಗ ಬಿಳಾಮನು ಆತನಿಗೆ, “ನಾನು ಏಳು ಯಜ್ಞವೇದಿಕೆಗಳನ್ನು ಕಟ್ಟಿಸಿ ಒಂದೊಂದು ಪೀಠದಲ್ಲಿ ಒಂದು ಹೋರಿಯನ್ನೂ ಒಂದು ಟಗರನ್ನೂ ಸರ್ವಾಂಗಹೋಮವಾಗಿ ಸಮರ್ಪಿಸಿದ್ದೇನೆ” ಎಂದು ಹೇಳಿದನು.

ಆಗ ಯೆಹೋವನು ಬಿಳಾಮನಿಗೆ ಅವನು ಹೇಳಬೇಕಾದ ಮಾತನ್ನು ಕಲಿಸಿಕೊಟ್ಟು, “ನೀನು ಬಾಲಾಕನ ಬಳಿಗೆ ತಿರುಗಿಹೋಗಿ ಹೀಗೆ ಹೇಳಬೇಕು” ಎಂದು ಆಜ್ಞಾಪಿಸಿದನು.

ಬಿಳಾಮನು ಬಾಲಾಕನ ಬಳಿಗೆ ತಿರುಗಿಬಂದಾಗ ಬಾಲಾಕನು ಯಜ್ಞವೇದಿಕೆಯ ಬಳಿಯಲ್ಲಿ ನಿಂತಿದ್ದನು. ಮೋವಾಬ್ಯರ ಪ್ರಧಾನರೆಲ್ಲರೂ ಅವನೊಡನೆ ನಿಂತಿದ್ದರು. ಆಗ ಬಿಳಾಮನು ಹೀಗೆ ಹೇಳಿದನು:

“ಮೋವಾಬ್ಯರ ಅರಸನಾದ ಬಾಲಾಕನು
    ನನ್ನನ್ನು ಅರಾಮಿನ ಪೂರ್ವ ದಿಕ್ಕಿನ ಬೆಟ್ಟಗಳಿಂದ ನನ್ನನ್ನು ಕರೆಸಿದನು.
‘ನೀನು ಬಂದು ನನಗೋಸ್ಕರ ಯಾಕೋಬ್ಯರನ್ನು ಶಪಿಸು;
    ಇಸ್ರೇಲರ ವಿರುದ್ಧ ಮಾತನಾಡು’ ಎಂದು ಬಾಲಾಕನು ಹೇಳಿದನು.
ಆದರೆ ದೇವರು ಅವರನ್ನು ಆಶೀರ್ವದಿಸಿರುವಾಗ
    ನಾನು ಅವರನ್ನು ಶಪಿಸಲು ಆಗುವುದಿಲ್ಲ.
ಯೆಹೋವನು ಅವರ ಮೇಲೆ ನಾಶನವನ್ನು ಬರಮಾಡಲಿಲ್ಲ.
    ಆದ್ದರಿಂದ ನಾಶನವು ಅವರ ಮೇಲೆ ಇಳಿದುಬರುವಂತೆ ಮಾಡಲು ನನಗೆ ಸಾಧ್ಯವಿಲ್ಲ.
ಬೆಟ್ಟದ ಶಿಖರದಿಂದ ಅವರನ್ನು ನಾನು ನೋಡಿದೆನು;
    ಗುಡ್ಡದಿಂದ ಅವರನ್ನು ಕಂಡೆನು.
ಅವರು ತಮ್ಮನ್ನು ಇತರ ಜನಾಂಗಗಳಿಗಿಂತ
    ಬೇರೆಯಾದವರು ಎಂದು ಪರಿಗಣಿಸಿಕೊಂಡಿದ್ದಾರೆ.
10 ಧೂಳಿನಷ್ಟು ಅಸಂಖ್ಯವಾದ ಯಾಕೋಬ್ಯರನ್ನು ಲೆಕ್ಕಿಸುವುದಕ್ಕೆ ಯಾರಿಂದಾದೀತು;
    ಇಸ್ರೇಲರ ಕಾಲು ಭಾಗವನ್ನಾದರೂ ಯಾರೂ ಲೆಕ್ಕಿಸಲಾರರು.
ಸಜ್ಜನರಾದ ಅವರು ಸಾಯುವ ರೀತಿಯಲ್ಲೇ ನಾನೂ ಸಾಯಲು ಬಯಸುವೆ.
    ಅವರಿಗುಂಟಾಗುವ ಅಂತ್ಯ ನನಗೂ ಉಂಟಾಗಲಿ.”

11 ಬಾಲಾಕನು ಬಿಳಾಮನಿಗೆ, “ಇದೇನು ನೀನು ನನಗೆ ಮಾಡಿದ್ದು! ನನ್ನ ಶತ್ರುಗಳನ್ನು ಶಪಿಸುವುದಕ್ಕೆ ನಿನ್ನನ್ನು ಕರೆಸಿದೆನು. ನೀನು ಅವರನ್ನು ಶಪಿಸದೆ ಆಶೀರ್ವಾದವನ್ನೇ ಮಾಡಿಬಿಟ್ಟೆ” ಎಂದು ಹೇಳಿದನು.

12 ಅದಕ್ಕೆ ಬಿಳಾಮನು, “ಯೆಹೋವನು ನನಗೆ ತಿಳಿಸುವುದನ್ನು ನಾನು ಹೇಳಬಾರದೇ?” ಎಂದು ಕೇಳಿದನು.

13 ಆಗ ಬಾಲಾಕನು, “ದಯಮಾಡಿ ನನ್ನೊಂದಿಗೆ ಇನ್ನೊಂದು ಸ್ಥಳಕ್ಕೆ ಬಾ; ಅಲ್ಲಿಂದ ಅವರನ್ನು ನೋಡಬಹುದು. ಆದರೆ ಅವರೆಲ್ಲರೂ ಕಾಣಿಸದೆ ಕಡೇ ಭಾಗವು ಮಾತ್ರ ಕಾಣಿಸುವುದು. ಅಲ್ಲಿಂದ ನನಗೋಸ್ಕರ ಅವರನ್ನೇ ಶಪಿಸಬೇಕು” ಎಂದು ಹೇಳಿದನು. 14 ಹೀಗೆ ಬಾಲಾಕನು ಬಿಳಾಮನನ್ನು “ಕಾವಲುಗಾರರ ಬೆಟ್ಟಗಳು” ಎಂಬ ಸ್ಥಳಕ್ಕೆ ಕರೆದುಕೊಂಡು ಹೋದನು. ಇದು ಪಿಸ್ಗಾ ಪರ್ವತಶ್ರೇಣಿಯ ತುದಿಯಲ್ಲಿತ್ತು. ಅಲ್ಲಿಯೂ ಏಳು ಯಜ್ಞವೇದಿಕೆಗಳನ್ನು ಕಟ್ಟಿಸಿ ಪ್ರತಿಯೊಂದು ವೇದಿಕೆಯಲ್ಲಿ ಒಂದು ಹೋರಿಯನ್ನು ಮತ್ತು ಒಂದು ಟಗರನ್ನು ಸರ್ವಾಂಗಹೋಮವಾಗಿ ಸಮರ್ಪಿಸಿದನು.

15 ಬಿಳಾಮನು ಬಾಲಾಕನಿಗೆ, “ನೀನು ನಿನ್ನ ಯಜ್ಞವೇದಿಕೆಯ ಬಳಿಯಲ್ಲಿರು. ನಾನು ಆ ಕಡೆ ಹೋಗಿ ಯೆಹೋವನನ್ನು ಸಂಧಿಸುವೆನು” ಎಂದು ಹೇಳಿದನು.

16 ಯೆಹೋವನು ಬಿಳಾಮನಿಗೆ ಎದುರಾಗಿ ಬಂದು ಅವನು ಹೇಳಬೇಕಾದ ಮಾತನ್ನು ಕಲಿಸಿಕೊಟ್ಟು, “ನೀನು ಬಾಲಾಕನ ಬಳಿಗೆ ಮತ್ತೆ ಹೋಗಿ ಹೀಗೆ ಹೇಳಬೇಕು” ಅಂದನು. 17 ಬಿಳಾಮನು ಬಾಲಾಕನ ಬಳಿಗೆ ಬಂದಾಗ ಅವನು ಇನ್ನೂ ಯಜ್ಞಪೀಠದ ಬಳಿಯಲ್ಲಿ ನಿಂತಿದ್ದನು. ಮೋವಾಬ್ಯರ ಪ್ರಧಾನರು ಅವನ ಸಂಗಡ ಇದ್ದರು. ಬಾಲಾಕನು, “ಯೆಹೋವನು ಏನು ಹೇಳಿದ್ದಾನೆ?” ಎಂದು ಕೇಳಿದನು.

ಬಿಳಾಮನ ಎರಡನೆಯ ಸಂದೇಶ

18 ಆಗ ಬಿಳಾಮನು ಈ ಸಂಗತಿಗಳನ್ನು ಹೇಳಿದನು,

“ಬಾಲಾಕನೇ, ಎದ್ದುನಿಂತು ನಾನು ಹೇಳುವುದನ್ನು ಕೇಳು.
    ಚಿಪ್ಪೋರನ ಮಗನಾದ ಬಾಲಾಕನೇ, ಕೇಳು:
19 ದೇವರು ಮನುಷ್ಯನಲ್ಲ;
    ಆತನು ಸುಳ್ಳಾಡುವುದಿಲ್ಲ.
ದೇವರು ಮಾನವನಲ್ಲ;
    ಆತನ ಉದ್ದೇಶಗಳು ಬದಲಾಗುವುದಿಲ್ಲ.
ಯೆಹೋವನು ತಾನು ಮಾಡುತ್ತೇನೆಂದು ಹೇಳಿದರೆ,
    ಅದನ್ನು ಮಾಡಿಯೇ ಮಾಡುತ್ತಾನೆ.
ಯೆಹೋವನು ವಾಗ್ದಾನ ಮಾಡಿದರೆ,
    ಅದನ್ನು ನೆರವೇರಿಸುತ್ತಾನೆ.
20 ಆ ಜನರನ್ನು ಆಶೀರ್ವದಿಸಬೇಕೆಂದು ಯೆಹೋವನು ನನಗೆ ಆಜ್ಞಾಪಿಸಿದನು;
    ಯೆಹೋವನು ಅವರನ್ನು ಆಶೀರ್ವದಿಸಿದ್ದಾನೆ. ಅದನ್ನು ಬದಲಾಯಿಸಲು ನನಗೆ ಸಾಧ್ಯವಿಲ್ಲ.
21 ಯಾಕೋಬನ ಜನರಲ್ಲಿ ಯಾವ ದೋಷವೂ ಇಲ್ಲ.
    ಇಸ್ರೇಲಿನ ಜನರಲ್ಲಿ ಯಾವ ಆಪತ್ತು ಕಾಣುತ್ತಿಲ್ಲ.
ಯೆಹೋವನೇ ಅವರ ದೇವರು.
    ಆತನು ಅವರೊಂದಿಗಿದ್ದಾನೆ.
22 ದೇವರು ಅವರನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದನು.
    ಅವರು ಕಾಡು ಕೋಣದಂತೆ ಬಲಿಷ್ಠರಾಗಿದ್ದಾರೆ.
23 ನಿಜವಾಗಿಯೂ ಯಾಕೋಬನ ಜನರ ಮಧ್ಯದಲ್ಲಿ ಶಕುನ ನೋಡುವವರು ಇಲ್ಲ.
    ಇಸ್ರೇಲಿನಲ್ಲಿ ಕಣಿ ಹೇಳುವವರು ಇಲ್ಲ.
ಜನರು, ಯಾಕೋಬನ ಮತ್ತು ಇಸ್ರೇಲರ ಬಗ್ಗೆ ಹೀಗೆ ಹೇಳುವರು:
    ‘ದೇವರು ಮಾಡಿದ ಮಹಾಕಾರ್ಯಗಳನ್ನು ನೋಡಿರಿ!’
24 ಆ ಜನರು ಪ್ರಾಯಸಿಂಹದಂತೆ ಬಲಿಷ್ಠರು.
    ಅವರು ಸಿಂಹದಂತೆ ಹೋರಾಡುತ್ತಾರೆ.
ಆ ಸಿಂಹ ತನ್ನ ವೈರಿಯನ್ನು ತಿಂದುಬಿಡುವತನಕ ವಿಶ್ರಮಿಸುವುದಿಲ್ಲ.
    ಆ ಸಿಂಹವು ತನಗೆ ಬಲಿಯಾದವರ ರಕ್ತವನ್ನು ಹೀರುವವರೆಗೆ ಎಂದಿಗೂ ವಿಶ್ರಮಿಸುವುದಿಲ್ಲ.”

25 ಆಗ ಬಾಲಾಕನು ಬಿಳಾಮನಿಗೆ, “ನೀನು ಅವರನ್ನು ಶಪಿಸಲೂ ಬೇಡ, ಆಶೀರ್ವದಿಸಲೂ ಬೇಡ” ಎಂದು ಹೇಳಿದನು.

26 ಅದಕ್ಕೆ ಬಿಳಾಮನು, “ಯೆಹೋವನು ಹೇಳುವುದನ್ನೇ ನಾನು ಮಾಡುತ್ತೇನೆ ಎಂದು ನಾನು ನಿನಗೆ ಮೊದಲೇ ಹೇಳಲಿಲ್ಲವೆ?” ಅಂದನು.

27 ಆಮೇಲೆ ಬಾಲಾಕನು ಬಿಳಾಮನಿಗೆ, “ಸರಿ, ಇನ್ನೊಂದು ಸ್ಥಳಕ್ಕೆ ಬಾ. ಒಂದುವೇಳೆ ನೀನು ಅವರನ್ನು ಶಪಿಸಬೇಕೆಂದು ದೇವರು ಅಪೇಕ್ಷೆಪಡಬಹುದು” ಎಂದು ಹೇಳಿದನು. 28 ಬಾಲಾಕನು ಬಿಳಾಮನನ್ನು “ಪೆಗೋರ್” ಬೆಟ್ಟದ ತುದಿಗೆ ಕರೆದುಕೊಂಡು ಹೋದನು. ಆ ಬೆಟ್ಟದ ಮೇಲಿಂದ ಕೆಳಗಿರುವ ಮರುಭೂಮಿಯು ಕಾಣಿಸುತ್ತದೆ.

29 ಆಗ ಬಿಳಾಮನು ಬಾಲಾಕನಿಗೆ, “ಇಲ್ಲಿಯೂ ಏಳು ಯಜ್ಞವೇದಿಕೆಗಳನ್ನು ಕಟ್ಟಿಸಿ ಏಳು ಹೋರಿಗಳನ್ನು ಮತ್ತು ಏಳು ಟಗರುಗಳನ್ನು ಸಿದ್ಧಪಡಿಸು” ಎಂದು ಹೇಳಿದನು. 30 ಬಾಲಾಕನು ಅವನ ಅಪ್ಪಣೆಯ ಮೇರೆಗೆ ಮಾಡಿ ಪ್ರತಿಯೊಂದು ಪೀಠದಲ್ಲಿ ಒಂದು ಹೋರಿಯನ್ನು ಮತ್ತು ಒಂದು ಟಗರನ್ನು ಸರ್ವಾಂಗಹೋಮವಾಗಿ ಅರ್ಪಿಸಿದನು.

ಬಿಳಾಮನ ಮೂರನೆಯ ಸಂದೇಶ

24 ಇಸ್ರೇಲರನ್ನು ಆಶೀರ್ವದಿಸುವುದೇ ಯೆಹೋವನ ಆಸೆಯೆಂದು ಬಿಳಾಮನು ತಿಳಿದುಕೊಂಡನು. ಆದ್ದರಿಂದ ಬಿಳಾಮನು ಮೊದಲಿನಂತೆ ಶಕುನ ನೋಡುವುದಕ್ಕೆ ಹೋಗದೆ ಮರುಭೂಮಿಯ ಕಡೆಗೆ ಮುಖವನ್ನು ತಿರುಗಿಸಿಕೊಂಡನು. ಬಿಳಾಮನು ಕಣ್ಣೆತ್ತಿ ನೋಡಿದಾಗ ಇಸ್ರೇಲರೆಲ್ಲರನ್ನು ಕಂಡನು. ಅವರು ತಮ್ಮ ಕುಲಗಳ ಪ್ರಕಾರ ಡೇರೆಗಳನ್ನು ಹಾಕಿಕೊಂಡಿದ್ದರು. ಆಗ ಅವನು ದೇವರಾತ್ಮ ಪ್ರೇರಿತನಾಗಿ ಹೀಗೆಂದನು:

“ಬೆಯೋರನ ಮಗನಾದ ಬಿಳಾಮನ ಸಂದೇಶವಿದು.
    ನನ್ನ ಕಣ್ಣುಗಳು ತೆರೆಯಲ್ಪಟ್ಟಿವೆ. ನಾನು ನೋಡುವುದನ್ನೇ ಹೇಳುತ್ತೇನೆ.
ನಾನು ಈ ಸಂದೇಶವನ್ನು ದೇವರಿಂದ ಕೇಳಿದೆನು.
    ಸರ್ವಶಕ್ತನಾದ ದೇವರು ತೋರಿಸಿದವುಗಳನ್ನು ನೋಡಿದೆನು.
    ನಾನು ಸ್ಪಷ್ಟವಾಗಿ ನೋಡುವುದನ್ನು ದೀನತೆಯಿಂದ ತಿಳಿಸುತ್ತೇನೆ.

“ಯಾಕೋಬ್ಯರೇ, ನಿಮ್ಮ ಡೇರೆಗಳು ಬಹಳ ಸುಂದರವಾಗಿವೆ!
    ಇಸ್ರೇಲರೇ, ನೀವು ವಾಸಿಸುವ ಸ್ಥಳಗಳು ಬಹಳ ರಮ್ಯವಾಗಿವೆ!
ನಿಮ್ಮ ಗುಡಾರಗಳು ಕಣಿವೆಗಳಂತೆ ಹರಡಿಕೊಂಡಿವೆ.
    ನಿಮ್ಮ ಗುಡಾರಗಳು ನದಿಯ ಬಳಿಯಿರುವ ತೋಟಗಳಂತಿವೆ.
ನಿಮ್ಮ ಗುಡಾರಗಳು ಯೆಹೋವನು ನೆಟ್ಟ ಸುವಾಸನೆಯ ಪೊದೆಗಳಂತೆಯೂ
    ನೀರಿನ ಬಳಿಯಿರುವ ದೇವದಾರಿನ ಮರಗಳಂತೆಯೂ ಇವೆ.
ನಿಮಗೆ ಯಾವಾಗಲೂ ಬೇಕಾದಷ್ಟು ನೀರು ಇರುವುದು;
    ನೀವು ಬಿತ್ತಿದ ಬೀಜಗಳು ಬೆಳೆಯಲು ಸಾಕಷ್ಟು ನೀರು ಇರುವುದು.
ನಿಮ್ಮ ಅರಸನು ಆಗಾಗ್ ಎಂಬವನಿಗಿಂತಲೂ ದೊಡ್ಡವನಾಗಿದ್ದಾನೆ.
    ನಿಮ್ಮ ರಾಜ್ಯವು ಬಹಳ ಬಲಿಷ್ಠವಾಗಿರುವುದು.

“ದೇವರು ಆ ಜನರನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದನು.
    ಅವರು ಕಾಡುಕೋಣದಂತೆ ಬಲಿಷ್ಠರಾಗಿದ್ದಾರೆ.
ಅವರು ತಮ್ಮೆಲ್ಲಾ ಶತ್ರುಗಳನ್ನು ಸೋಲಿಸುವರು.
    ಅವರು ತಮ್ಮ ವೈರಿಗಳ ಮೂಳೆಗಳನ್ನು ಮುರಿದುಹಾಕುವರು. ಅವರ ಬಾಣಗಳು ಅವರ ವೈರಿಗಳನ್ನು ಕೊಲ್ಲುವವು.
ಅವರು ಅಡಗಿಕೊಂಡಿರುವರು;
    ಇಸ್ರೇಲರು ಸಿಂಹದಂತೆಯೂ
ಹೆಣ್ಣು ಸಿಂಹದಂತೆಯೂ ವಿಶ್ರಮಿಸುವರು.
    ಅದನ್ನು ಎಬ್ಬಿಸಲು ಯಾರಿಗೆ ಧೈರ್ಯವಿದೆ?
ನಿಮ್ಮನ್ನು ಆಶೀರ್ವದಿಸುವವನು ಆಶೀರ್ವದಿಸಲ್ಪಡುವನು.
    ನಿಮ್ಮನ್ನು ಶಪಿಸುವವನು ಶಪಿಸಲ್ಪಡುವನು.”

10 ಬಾಲಾಕನು ಬಿಳಾಮನ ಮೇಲೆ ಕೋಪಗೊಂಡು, ಚಪ್ಪಾಳೆ ಹೊಡೆದು ಅವನಿಗೆ, “ನನ್ನ ಶತ್ರುಗಳನ್ನು ಶಪಿಸುವುದಕ್ಕೆ ನಿನ್ನನ್ನು ಕರೆಸಿದೆನು. ಆದರೆ ನೀನು ಅವರನ್ನು ಮೂರು ಸಾರಿಯೂ ಆಶೀರ್ವದಿಸಿದೆ. 11 ಆದ್ದರಿಂದ ನೀನೀಗ ನೇರವಾಗಿ ಮನೆಗೆ ಹೋಗಿಬಿಡು. ನಿನಗೆ ಹೆಚ್ಚು ಹಣ ಕೊಡುವುದಾಗಿ ಆಲೋಚಿಸಿದ್ದೆನು. ಆದರೆ ನೀನು ನಿನ್ನ ಬಹುಮಾನವನ್ನು ಕಳೆದುಕೊಳ್ಳುವಂತೆ ಯೆಹೋವನು ಮಾಡಿದನು” ಎಂದು ಹೇಳಿದನು.

12-13 ಅದಕ್ಕೆ ಬಿಳಾಮನು ಬಾಲಾಕನಿಗೆ, “ಬಾಲಾಕನು, ಬೆಳ್ಳಿಬಂಗಾರಗಳಿಂದ ತುಂಬಿದ ತನ್ನ ಅರಮನೆಯನ್ನು ಕೊಟ್ಟರೂ ನಾನು ಯೆಹೋವನ ಆಜ್ಞೆಯನ್ನು ಮೀರಿ ನನಗೆ ಇಷ್ಟಬಂದಂತೆ ಕೆಟ್ಟದ್ದನ್ನಾಗಲಿ ಒಳ್ಳೆಯದನ್ನಾಗಲಿ ನಾನು ಮಾಡಲಾರೆನು; ಆದರೆ ಯೆಹೋವನು ಆಜ್ಞಾಪಿಸುವುದನ್ನೇ ಮಾತಾಡುವೆನೆಂದು ನೀನು ನನ್ನ ಬಳಿಗೆ ಕಳುಹಿಸಿದ ದೂತರಿಗೆ ಹೇಳಲಿಲ್ಲವೇ? 14 ಆಗಲಿ, ನಾನು ನನ್ನ ಸ್ವಜನರ ಬಳಿಗೆ ಹೋಗುತ್ತೇನೆ. ಆದರೆ ಮುಂದೆ ಆ ಜನರು ನಿನ್ನ ಜನರಿಗೆ ಏನು ಮಾಡುವರೋ ಅದನ್ನು ನಿನಗೆ ತಿಳಿಸುತ್ತೇನೆ, ಕೇಳು” ಎಂದು ಹೇಳಿದನು.

ಬಿಳಾಮನ ಕೊನೆಯ ಸಂದೇಶ

15 ಆಗ ಬಿಳಾಮನು ಹೀಗೆಂದನು:

“ಬೆಯೋರನ ಮಗನಾದ ಬಿಳಾಮನ ಸಂದೇಶವಿದು:
    ನಾನು ಸ್ಪಷ್ಟವಾಗಿ ನೋಡುತ್ತಿರುವ ಸಂಗತಿಗಳ ಬಗ್ಗೆ ಮಾತಾಡುತ್ತಿದ್ದೇನೆ.
16 ನಾನು ದೇವರ ಮುಂದೆ ಅಡ್ಡಬೀಳುತ್ತೇನೆ,
    ಆದರೆ ನನ್ನ ಕಣ್ಣುಗಳು ಮುಚ್ಚಲ್ಪಟ್ಟಿಲ್ಲ.
ನಾನು ದೇವರ ವಾಕ್ಯಗಳನ್ನು ಕೇಳುತ್ತಿದ್ದೇನೆ.
    ನಾನು ಮಹೋನ್ನತನಾದ ದೇವರಿಂದ ಜ್ಞಾನವನ್ನು ಹೊಂದಿಕೊಳ್ಳುತ್ತಿದ್ದೇನೆ.
ಸರ್ವಶಕ್ತನಾದ ದೇವರು ತೋರಿಸುವ ಸಂಗತಿಗಳನ್ನು
    ನಾನು ನೋಡುತ್ತಿದ್ದೇನೆ.

17 “ಬರುತ್ತಿರುವ ಒಬ್ಬನನ್ನು ನೋಡುತ್ತಿದ್ದೇನೆ.
    ಆದರೆ ಈಗಲ್ಲ. ಬರುತ್ತಿರುವ ಒಬ್ಬನನ್ನು ನೋಡುತ್ತಿದ್ದೇನೆ, ಆದರೆ ಬೇಗನೆ ಅಲ್ಲ.
ಯಾಕೋಬನ ವಂಶದಿಂದ ನಕ್ಷತ್ರವೊಂದು ಬರುವುದು.
    ಇಸ್ರೇಲರಿಂದ ಅರಸನೊಬ್ಬನು ಬರುವನು.
ಅವನು ಮೋವಾಬ್ಯರ ತಲೆಯನ್ನು ಜಜ್ಜುವನು.
    ಆ ಅರಸನು ಶೇತನ ಪುತ್ರರೆಲ್ಲರ ತಲೆಗಳನ್ನು ಜಜ್ಜುವನು.
18 ಇಸ್ರೇಲರು ಬಲಿಷ್ಠರಾಗುವರು.
    ಅವರು ಎದೋಮ್ ದೇಶವನ್ನು ಪಡೆಯುವರು.
    ಅವರು ತಮ್ಮ ವೈರಿಯಾದ ಸೇಯೀರನ ದೇಶವನ್ನು ಪಡೆಯುವರು.

19 “ಯಾಕೋಬನ ವಂಶದಿಂದ ಹೊಸ ಅರಸನೊಬ್ಬನು ಬರುವನು.
    ಆ ಅರಸನು ಆ ಪಟ್ಟಣದಲ್ಲಿ ಉಳಿದವರನ್ನು ನಾಶಮಾಡುವನು.”

20 “ತರುವಾಯ ಬಿಳಾಮನು ಅಮಾಲೇಕ್ಯರನ್ನು ನೋಡಿ ಹೀಗೆಂದನು:

“ಅಮಾಲೇಕ್ಯರು ಎಲ್ಲಾ ಜನಾಂಗಗಳಲ್ಲಿ ಬಲಿಷ್ಠರು; ಅಮಾಲೇಕ್ಯರು ಎಲ್ಲಾ ಜನಾಂಗಗಳಲ್ಲಿ ಮೊದಲನೆಯವರು;
    ಆದರೆ ಕೊನೆಯಲ್ಲಿ ಅವರು ನಾಶವಾಗುವರು.”

21 ಆಗ ಬಿಳಾಮನು ಕೇನ್ಯರನ್ನು ನೋಡಿ ಹೀಗೆಂದನು:

“ನಿಮ್ಮ ಮನೆಯು ಬೆಟ್ಟದ ತುದಿಯಲ್ಲಿರುವ ಪಕ್ಷಿಯ ಗೂಡಿನಂತೆ[a]
    ಸುರಕ್ಷಿತವಾಗಿದೆಯೆಂದು ನೀವು ನಂಬುತ್ತೀರಿ.
22 ಆದರೆ ಕೇನ್ಯರೇ, ಅಶ್ಶೂರ್ಯವು ನಿಮ್ಮನ್ನು ಸೆರೆ ಒಯ್ಯುವಾಗ
    ಅದು ನಾಶವಾಗುವುದು.”

23 ಆಗ ಬಿಳಾಮನು ಹೀಗೆಂದನು:

“ದೇವರು ಇದನ್ನು ಮಾಡುವಾಗ ಯಾರೂ ಉಳಿಯರು.
24     ಸೈಪ್ರಸ್‌ನ ತೀರಗಳಿಂದ ಹಡಗುಗಳು ಬರುವವು.
ಅವರು ಅಶ್ಶೂರ್ಯವನ್ನೂ ಏಬೆರವನ್ನೂ ಸೋಲಿಸುವರು;
    ಆದರೆ ಅವರು ಸಹ ನಾಶವಾಗುವರು.”

25 ಆಗ ಬಿಳಾಮನು ಎದ್ದು ತನ್ನ ಸ್ಥಳಕ್ಕೆ ಹಿಂತಿರುಗಿ ಹೋದನು. ಬಾಲಾಕನೂ ಸಹ ಹೊರಟುಹೋದನು.

ಪೆಯೋರಿನಲ್ಲಿ ಇಸ್ರೇಲರು

25 ಇಸ್ರೇಲರು ಅಖಾಸಿಯದ ಸಮೀಪದಲ್ಲಿ ಇಳಿದುಕೊಂಡಿದ್ದರು. ಅವರು ಅಲ್ಲಿದ್ದಾಗ ಮೋವಾಬ್ ಸ್ತ್ರೀಯರೊಡನೆ ಲೈಂಗಿಕ ಪಾಪಗಳನ್ನು ಮಾಡತೊಡಗಿದರು. 2-3 ಮೋವಾಬ್ ಸ್ತ್ರೀಯರು ತಮ್ಮ ಸುಳ್ಳುದೇವರಿಗೆ ಮಾಡಿದ ಔತಣಯಜ್ಞಗಳಿಗೆ ಅವರನ್ನು ಆಮಂತ್ರಿಸಿದರು. ಆದ್ದರಿಂದ ಇಸ್ರೇಲರು ಅವರ ಯಜ್ಞಗಳ ಆಹಾರವನ್ನು ತಿಂದರು ಮತ್ತು ಅವರ ದೇವರನ್ನು ಪೂಜಿಸಿದರು. ಈ ರೀತಿ ಇಸ್ರೇಲರು ಸುಳ್ಳುದೇವರಾದ ಪೆಗೋರ್ ಬಾಳನ ಭಕ್ತರಾದರು. ಹೀಗಾಗಿ ಯೆಹೋವನು ಅವರ ಮೇಲೆ ಬಹಳವಾಗಿ ಕೋಪಗೊಂಡನು.

ಯೆಹೋವನು ಮೋಶೆಗೆ, “ನೀನು ಜನರ ನಾಯಕರನ್ನೆಲ್ಲ ಬಂಧಿಸಿ ಯೆಹೋವನ ಮುಂದೆ ಬಹಿರಂಗವಾಗಿ ಅವರನ್ನು ನೇಣುಗಂಬಕ್ಕೆ ಏರಿಸು. ಹೀಗೆ ಯೆಹೋವನ ಕೋಪಾಗ್ನಿಯನ್ನು ಇಸ್ರೇಲರಿಂದ ತೊಲಗಿಸಬೇಕು” ಎಂದು ಹೇಳಿದನು.

ಆದಕಾರಣ ಮೋಶೆ ಇಸ್ರೇಲರ ನ್ಯಾಯಾಧಿಪತಿಗಳಿಗೆ, “ನಿಮ್ಮಲ್ಲಿ ಪ್ರತಿಯೊಬ್ಬನೂ ಸುಳ್ಳುದೇವರಾದ ಪೆಗೋರದ ಬಾಳನನ್ನು ಆರಾಧಿಸುವಂತೆ ಜನರನ್ನು ಪ್ರೋತ್ಸಾಹಿಸಿದವರನ್ನು ಕಂಡುಹಿಡಿದು ಅವರನ್ನು ಕೊಲ್ಲಬೇಕು” ಎಂದು ಆಜ್ಞಾಪಿಸಿದನು.

ಆಗ ಮೋಶೆ ಮತ್ತು ಇಡೀ ಇಸ್ರೇಲ್ ಸಮುದಾಯವು ಒಟ್ಟಾಗಿ ಸೇರಿಬಂದು ದೇವದರ್ಶನಗುಡಾರದ ಬಾಗಿಲಲ್ಲಿ ಅಳುತ್ತಿದ್ದರು. ಅಷ್ಟರಲ್ಲಿ ಇಸ್ರೇಲ್ ಮನುಷ್ಯನೊಬ್ಬನು ಮಿದ್ಯಾನ್ ಸ್ತ್ರೀಯೊಬ್ಬಳನ್ನು ತನ್ನ ಸಂಬಂಧಿಕರ ಬಳಿಗೆ ಕರೆದುಕೊಂಡು ಬಂದನು. ಮೋಶೆಯ ಮತ್ತು ಎಲ್ಲಾ ಜನರ ಕಣ್ಣೆದುರಿನಲ್ಲೇ ಅವನು ಹೀಗೆ ಮಾಡಿದನು. ಕೂಡಲೇ ಯಾಜಕನಾಗಿದ್ದ ಆರೋನನ ಮೊಮ್ಮಗನೂ ಎಲ್ಲಾಜಾರನ ಮಗನೂ ಆದ ಫೀನೆಹಾಸನು ಸಭೆಯ ನಡುವೆಯಿಂದೆದ್ದು ಈಟಿಯನ್ನು ತೆಗೆದುಕೊಂಡು ಆ ಇಸ್ರೇಲನನ್ನು ಹಿಂಬಾಲಿಸಿ ಮಲಗುವ ಕೋಣೆಯೊಳಗೆ ಹೋಗಿ ಅವನನ್ನೂ ಆ ಮಿದ್ಯಾನ್ ಸ್ತ್ರೀಯನ್ನೂ ಒಂದೇ ಏಟಿನಿಂದ ಹೊಟ್ಟೆಯಲ್ಲಿ ತಿವಿದು ಕೊಂದನು. ಆಗ ಇಸ್ರೇಲರಿಗುಂಟಾದ ವ್ಯಾಧಿ ನಿಂತುಹೋಯಿತು. ಆ ವ್ಯಾಧಿಯಿಂದ ಒಟ್ಟು 24,000 ಜನರು ಸತ್ತುಹೋದರು.

10-11 ಆಗ ಯೆಹೋವನು ಮೋಶೆಗೆ, “ನಾನೇ ನನ್ನ ಗೌರವವನ್ನು ಕಾಪಾಡಿಕೊಳ್ಳುವ ಮೇರೆಗೆ ಯಾಜಕನಾಗಿದ್ದ ಆರೋನನ ಮೊಮ್ಮಗನೂ ಎಲ್ಲಾಜಾರನ ಮಗನೂ ಆಗಿರುವ ಫೀನೆಹಾಸನು ನನ್ನ ಗೌರವವನ್ನು ಕಾಪಾಡಿ ಇಸ್ರೇಲರ ಮೇಲಿದ್ದ ನನ್ನ ಕೋಪವನ್ನು ತೊಲಗಿಸಿದ್ದಾನೆ. ಹೀಗಿರುವುದರಿಂದ ನಾನು ನನ್ನ ಗೌರವವನ್ನು ಕಾಪಾಡಿಕೊಳ್ಳುವುದಕ್ಕಾಗಿ ಇಸ್ರೇಲರನ್ನು ನಿರ್ಮೂಲ ಮಾಡುವ ಅಗತ್ಯವಿಲ್ಲ. 12 ಆದಕಾರಣ ನಾನು ಅವನ ಸಂಗಡ ಸಮಾಧಾನದ ಒಡಂಬಡಿಕೆಯನ್ನು ಮಾಡಿಕೊಳ್ಳುತ್ತೇನೆಂದು ಎಲ್ಲರಿಗೂ ತಿಳಿಸು; 13 ಆ ಒಡಂಬಡಿಕೆಯ ಪ್ರಕಾರವಾಗಿ ಅವನಿಗೂ ಅವನ ತರುವಾಯ ಅವನ ಸಂತತಿಯವರಿಗೂ ಯಾಜಕತ್ವವು ಶಾಶ್ವತವಾಗಿಯೇ ಇರುವುದೆಂದು ಮಾತುಕೊಡುತ್ತೇನೆ. ಅವನು ತನ್ನ ದೇವರ ಗೌರವವನ್ನು ಕಾಪಾಡಿ ಇಸ್ರೇಲರಿಗೋಸ್ಕರ ದೋಷಪರಿಹಾರವನ್ನು ಮಾಡಿದ್ದರಿಂದ ನಾನು ಅವನಿಗೆ ಈ ಮಾತನ್ನು ಕೊಟ್ಟಿದ್ದೇನೆ” ಎಂದು ಹೇಳಿದನು.

14 ಆ ಮಿದ್ಯಾನ್ ಸ್ತ್ರೀಯೊಡನೆ ಕೊಲ್ಲಲ್ಪಟ್ಟವನು ಸಿಮೆಯೋನ್ ಕುಲದವರಲ್ಲಿ ಗೋತ್ರಪ್ರಧಾನನಾಗಿದ್ದ ಜಿಮ್ರೀ. ಇವನು ಸಾಲೂ ಎಂಬವನ ಮಗ. 15 ಹತಳಾದ ಮಿದ್ಯಾನ್ ಸ್ತ್ರೀಯ ಹೆಸರು ಕೊಜ್ಬೀ. ಅವಳು ಮಿದ್ಯಾನ್ಯರಲ್ಲಿ ಗೋತ್ರ ಪ್ರಧಾನನಾದ ಜೂರ್ ಎಂಬವನ ಮಗಳು.

16 ತರುವಾಯ ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 17 “ನೀನು ಮಿದ್ಯಾನ್ಯರನ್ನು ವೈರಿಗಳೆಂದು ಪರಿಗಣಿಸಿರುವುದರಿಂದ ಅವರನ್ನು ಸಂಹರಿಸಬೇಕು. 18 ಯಾಕೆಂದರೆ ಅವರು ನಿಮ್ಮನ್ನು ವೈರಿಗಳೆಂದು ಪರಿಗಣಿಸಿ ಪೆಗೋರನ ಘಟನೆಯಲ್ಲಿ ನಿಮ್ಮನ್ನು ಮೋಸಗೊಳಿಸಿದರು. ಮಿದ್ಯಾನಿನ ನಾಯಕನೊಬ್ಬನ ಮಗಳೂ ತಮ್ಮ ರಕ್ತಸಂಬಂಧಿಯೂ ಆಗಿದ್ದ ಕೊಜ್ಬೀಯ ವಿಷಯದಲ್ಲಿಯೂ ಅವರು ನಿಮ್ಮನ್ನು ಮೋಸಗೊಳಿಸಿದರು. ಪೆಗೋರಿನ ಘಟನೆಯಿಂದ ಇಸ್ರೇಲರಿಗೆ ಕಾಯಿಲೆ ಉಂಟಾದಾಗ ಆ ಸ್ತ್ರೀಯೂ ಸತ್ತಳು.”

ಮಾರ್ಕ 7:14-37

14 ಯೇಸು ಜನರನ್ನು ಮತ್ತೆ ತನ್ನ ಬಳಿಗೆ ಕರೆದು, “ನಾನು ಹೇಳುವುದನ್ನು ಪ್ರತಿಯೊಬ್ಬರು ಕೇಳಿರಿ ಮತ್ತು ಅರ್ಥಮಾಡಿಕೊಳ್ಳಿರಿ. 15 ಒಬ್ಬ ವ್ಯಕ್ತಿಯ ಅಂತರಂಗದೊಳಕ್ಕೆ ಹೋಗಿ ಅವನನ್ನು ಅಶುದ್ಧನನ್ನಾಗಿ ಮಾಡುವಂಥದ್ದು ಯಾವುದೂ ಇಲ್ಲ. ಒಬ್ಬ ವ್ಯಕ್ತಿಯ ಒಳಗಿಂದ ಬಂದ ಸಂಗತಿಗಳೇ ಅವನನ್ನು ಅಶುದ್ಧನನ್ನಾಗಿ ಮಾಡುತ್ತವೆ” ಎಂದು ಹೇಳಿದನು. 16 [a]

17 ನಂತರ ಯೇಸು ಜನರನ್ನು ಅಲ್ಲೇ ಬಿಟ್ಟು ಮನೆಯೊಳಕ್ಕೆ ಹೋದನು. ಶಿಷ್ಯರು ಈ ಕಥೆಯ ಬಗ್ಗೆ ಯೇಸುವನ್ನು ಕೇಳಿದರು. 18 ಯೇಸು, “ನಿಮಗೂ ಅರ್ಥವಾಗುವುದಿಲ್ಲವೇ? ಒಬ್ಬ ವ್ಯಕ್ತಿಯ ಒಳಗೆ ಹೋಗುವ ಯಾವ ಪದಾರ್ಥವೂ ಅವನನ್ನು ಅಶುದ್ಧನನ್ನಾಗಿ ಮಾಡುವುದಿಲ್ಲ ಎಂಬುದು ನಿಮಗೆ ತಿಳಿದೇ ಇದೆ. 19 ಆಹಾರವು ಒಬ್ಬ ಮನುಷ್ಯನ ಹೃದಯದೊಳಕ್ಕೆ ಹೋಗದೆ ಹೊಟ್ಟೆಯೊಳಕ್ಕೆ ಹೋಗುತ್ತದೆ. ಅನಂತರ ಅದು ಅಲ್ಲಿಂದ ಹೊರಬರುತ್ತದೆ” ಎಂದು ಹೇಳಿದನು. (ಹೀಗೆ ತಿನ್ನತಕ್ಕ ಯಾವ ಆಹಾರವೂ ಅಶುದ್ಧವಲ್ಲವೆಂದು ಯೇಸು ಸೂಚಿಸಿದನು.)

20 ಇದಲ್ಲದೆ ಯೇಸು ಅವರಿಗೆ, “ಒಬ್ಬ ಮನುಷ್ಯನಿಂದ ಹೊರಬರುವ ಸಂಗತಿಗಳೇ ಅವನನ್ನು ಅಶುದ್ಧನನ್ನಾಗಿ ಮಾಡುತ್ತವೆ. 21 ಒಬ್ಬ ವ್ಯಕ್ತಿಯ ಅಂತರಂಗದಲ್ಲಿ ಈ ಕೆಟ್ಟ ಆಲೋಚನೆಗಳೆಲ್ಲವೂ ಆರಂಭವಾಗುತ್ತವೆ: ದುರಾಲೋಚನೆ, ಲೈಂಗಿಕಪಾಪ, ಕಳ್ಳತನ, ಕೊಲೆ, 22 ವ್ಯಭಿಚಾರ, ಹಣದಾಶೆ, ಕೆಡುಕುತನ, ಭಂಡತನ, ಅಸೂಯೆ, ಚಾಡಿಕೋರತನ, ಅಹಂಕಾರ ಮತ್ತು ಬುದ್ಧಿಗೇಡಿತನ. 23 ಈ ಕೆಟ್ಟ ವಿಷಯಗಳೆಲ್ಲಾ ಮನುಷ್ಯನ ಅಂತರಂಗದಿಂದ ಬಂದು ಅವನನ್ನು ಅಶುದ್ಧನನ್ನಾಗಿ ಮಾಡುತ್ತವೆ” ಎಂದು ಹೇಳಿದನು.

ಯೆಹೂದ್ಯಳಲ್ಲದ ಸ್ತ್ರೀಗೆ ಯೇಸುವಿನ ಸಹಾಯ

(ಮತ್ತಾಯ 15:21-28)

24 ಯೇಸು ಆ ಸ್ಥಳವನ್ನು ಬಿಟ್ಟು ಟೈರ್ ಪಟ್ಟಣದ ಸುತ್ತಮುತ್ತಲಿನ ಪ್ರದೇಶಕ್ಕೆ ಹೋದನು. ಯೇಸು ಅಲ್ಲಿ ಒಂದು ಮನೆಯೊಳಕ್ಕೆ ಹೋದನು. ತಾನು ಅಲ್ಲಿರುವುದು ಅಲ್ಲಿಯ ಜನರಿಗೆ ತಿಳಿಯಬಾರದೆಂಬುದು ಆತನ ಅಪೇಕ್ಷೆಯಾಗಿತ್ತು. ಆದರೆ ಯೇಸುವಿಗೆ ಅಡಗಿಕೊಳ್ಳಲಿಕ್ಕಾಗಲಿಲ್ಲ. 25 ಯೇಸು ಅಲ್ಲಿರುವನೆಂಬುದು ಒಬ್ಬ ಸ್ತ್ರೀಗೆ ತಿಳಿಯಿತು. ಅವಳ ಕಿರಿಯ ಮಗಳಿಗೆ ದೆವ್ವ ಹಿಡಿದಿತ್ತು. ಆದ್ದರಿಂದ ಆ ಸ್ತ್ರೀಯು ಯೇಸುವಿನ ಬಳಿಗೆ ಬಂದು, ಆತನ ಪಾದಗಳ ಮುಂದೆ ಅಡ್ಡಬಿದ್ದು ನಮಸ್ಕರಿಸಿದಳು. 26 ಅವಳು ಸಿರಿಯ ಪ್ರದೇಶದ ಪೊಯಿನಿಕ್ಯದಲ್ಲಿ ಹುಟ್ಟಿದ್ದಳು ಮತ್ತು ಗ್ರೀಕಳಾಗಿದ್ದಳು. ಆ ಸ್ತ್ರೀಯು ತನ್ನ ಮಗಳಲ್ಲಿರುವ ದೆವ್ವವನ್ನು ಹೊರಗಟ್ಟಬೇಕೆಂದು ಯೇಸುವಿನಲ್ಲಿ ಬೇಡಿಕೊಂಡಳು.

27 ಯೇಸು ಆ ಸ್ತ್ರೀಗೆ, “ಮಕ್ಕಳಿಗೆ ಕೊಡುವ ರೊಟ್ಟಿಯನ್ನು ತೆಗೆದುಕೊಂಡು ನಾಯಿಗಳಿಗೆ ಕೊಡುವುದು ಸರಿಯಲ್ಲ. ತಮಗೆ ಬೇಕಾದುದನ್ನು ಮಕ್ಕಳು ಮೊದಲು ತಿನ್ನಲಿ” ಎಂದು ಹೇಳಿದನು.

28 ಆ ಸ್ತ್ರೀಯು, “ಅದು ನಿಜ ಪ್ರಭು. ಆದರೆ ಮಕ್ಕಳು ತಿನ್ನದೆ ಬಿಟ್ಟ ಆಹಾರದ ಚೂರುಗಳನ್ನು ಮೇಜಿನ ಕೆಳಗಿರುವ ನಾಯಿಗಳು ತಿನ್ನಬಹುದಲ್ಲವೇ?” ಎಂದು ಉತ್ತರಕೊಟ್ಟಳು.

29 ಆಗ ಯೇಸು ಆ ಸ್ತ್ರೀಗೆ, “ನೀನು ಒಳ್ಳೆಯ ಉತ್ತರ ಕೊಟ್ಟೆ. ಹೋಗು, ನಿನ್ನ ಮಗಳನ್ನು ದೆವ್ವವು ಬಿಟ್ಟುಹೋಗಿದೆ” ಎಂದು ಹೇಳಿದನು.

30 ಆ ಸ್ತ್ರೀಯು ಮನೆಗೆ ಹೋದಾಗ ತನ್ನ ಮಗಳು ಹಾಸಿಗೆಯಲ್ಲಿ ಮಲಗಿರುವುದನ್ನು ಕಂಡಳು. ದೆವ್ವವು ಅವಳನ್ನು ಬಿಟ್ಟುಹೋಗಿತ್ತು.

ಕಿವುಡನಿಗೆ ಸ್ವಸ್ಥತೆ

31 ನಂತರ ಯೇಸು ಟೈರ್ ಪಟ್ಟಣದ ಆ ಪ್ರದೇಶವನ್ನು ಬಿಟ್ಟು ಸಿದೋನ್ ಪಟ್ಟಣದ ಮಾರ್ಗವಾಗಿ ದೆಕಪೊಲಿ[b] ಪ್ರದೇಶವನ್ನು ಹಾದು ಗಲಿಲಾಯ ಸರೋವರಕ್ಕೆ ಹೋದನು. 32 ಆತನು ಅಲ್ಲಿದ್ದಾಗ, ಕೆಲವರು ಕಿವುಡನೂ ತೊದಲನೂ ಆಗಿದ್ದ ಒಬ್ಬನನ್ನು ಯೇಸುವಿನ ಬಳಿಗೆ ಕರೆದುತಂದು ಅವನ ಮೇಲೆ ಕೈಯಿಟ್ಟು ಗುಣಪಡಿಸಬೇಕೆಂದು ಬೇಡಿಕೊಂಡರು.

33 ಯೇಸು ಅವನನ್ನು ಜನರಿಂದ ಸ್ವಲ್ಪ ದೂರ ತನ್ನೊಂದಿಗೆ ಕರೆದೊಯ್ದು ತನ್ನ ಬೆರಳುಗಳನ್ನು ಅವನ ಕಿವಿಗಳಲ್ಲಿಟ್ಟು ಉಗುಳಿ, ಅವನ ನಾಲಿಗೆಯನ್ನು ಮುಟ್ಟಿದನು. 34 ಬಳಿಕ ಆಕಾಶದ ಕಡೆಗೆ ನೋಡಿ, ನಿಟ್ಟುಸಿರು ಬಿಟ್ಟು, “ಎಪ್ಫಥಾ” ಎಂದು ಹೇಳಿದನು. (ಎಪ್ಫಥಾ ಎಂದರೆ “ತೆರೆಯಲಿ”) 35 ಆಗ ಅವನ ಕಿವಿಗಳು ತೆರೆದವು. ನಾಲಿಗೆ ಸಡಿಲಗೊಂಡಿತು. ಅವನು ಸ್ಪಷ್ಟವಾಗಿ ಮಾತಾಡಿದನು.

36 ಈ ಸಂಗತಿಯನ್ನು ತಿಳಿಸಕೂಡದೆಂದು ಯೇಸು ಜನರಿಗೆ ಆಜ್ಞಾಪಿಸಿದನು. ತನ್ನ ಬಗ್ಗೆ ಇತರ ಜನರಿಗೆ ತಿಳಿಸಕೂಡದಂತೆ ಯೇಸು ಯಾವಾಗಲೂ ಆಜ್ಞಾಪಿಸುತ್ತಿದ್ದನು. ಆದರೂ ಜನರು ಆತನ ಬಗ್ಗೆ ಇನ್ನೂ ಹೆಚ್ಚಾಗಿ ಹಬ್ಬಿಸಿದರು. 37 ಜನರು ನಿಜವಾಗಿಯೂ ಅತ್ಯಾಶ್ಚರ್ಯಗೊಂಡು, “ಯೇಸು ಎಲ್ಲವನ್ನೂ ಒಳ್ಳೆಯ ರೀತಿಯಲ್ಲಿ ಮಾಡುತ್ತಾನೆ. ಆತನು ಕಿವುಡರಿಗೆ ಕಿವಿ ಕೇಳಿಸುವಂತೆ ಮಾಡುತ್ತಾನೆ. ಮೂಕರು ಮಾತಾಡುವಂತೆ ಮಾಡುತ್ತಾನೆ” ಎಂದು ಹೇಳಿದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International