Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಅರಣ್ಯಕಾಂಡ 12-14

ಮಿರ್ಯಾಮಳು ಮತ್ತು ಆರೋನನು ಮೋಶೆಗೆ ವಿರುದ್ಧವಾಗಿ ಗೊಣಗುಟ್ಟಿದ್ದು

12 ಮೋಶೆಯು ಇಥಿಯೋಪ್ಯದ ಸ್ತ್ರೀಯನ್ನು ಮದುವೆ ಮಾಡಿಕೊಂಡ ಕಾರಣ ಮಿರ್ಯಾಮಳೂ ಆರೋನನೂ ಮೋಶೆಗೆ ವಿರೋಧವಾಗಿ ಮಾತಾಡಿದರು. ಅವರು, “ಯೆಹೋವನು ಮೋಶೆಯೊಡನೆ ಮಾತ್ರ ಮಾತಾಡಿದ್ದಾನೋ? ಆತನು ನಮ್ಮೊಡನೆಯೂ ಮಾತಾಡಿದನಲ್ಲವೇ?” ಅಂದರು.

ಯೆಹೋವನು ಅವರ ಮಾತುಗಳನ್ನು ಕೇಳಿದನು. (ಮೋಶೆಯು ಬಹಳ ದೀನನಾದ ವ್ಯಕ್ತಿ. ಅವನು ಭೂಮಿಯ ಮೇಲಿರುವ ಎಲ್ಲಾ ಮನುಷ್ಯರಿಗಿಂತಲೂ ದೀನನಾಗಿದ್ದನು.) ಆದ್ದರಿಂದ ಕೂಡಲೇ ಯೆಹೋವನು, ಮೋಶೆ, ಆರೋನರ ಮತ್ತು ಮಿರ್ಯಾಮಳ ಸಂಗಡ ಮಾತಾಡಿ, “ನೀವು ಮೂವರು ದೇವದರ್ಶನಗುಡಾರಕ್ಕೆ ಬನ್ನಿ” ಎಂದು ಹೇಳಿದನು.

ಆದ್ದರಿಂದ ಮೋಶೆ, ಆರೋನರು ಮತ್ತು ಮಿರ್ಯಾಮಳು ದೇವದರ್ಶನಗುಡಾರಕ್ಕೆ ಹೋದರು. ಯೆಹೋವನು ಎತ್ತರವಾದ ಮೇಘದಲ್ಲಿ ಇಳಿದು ಬಂದು ದೇವದರ್ಶನಗುಡಾರದ ಪ್ರವೇಶದ್ವಾರದ ಬಳಿ ನಿಂತನು. ಯೆಹೋವನು ಆರೋನನನ್ನೂ ಮಿರ್ಯಾಮಳನ್ನೂ ಕರೆದನು. ಆರೋನನೂ ಮಿರ್ಯಾಮಳೂ ಹತ್ತಿರಕ್ಕೆ ಹೋದರು. ದೇವರು, “ನನ್ನ ಮಾತನ್ನು ಕೇಳಿರಿ. ನಿಮ್ಮಲ್ಲಿ ಪ್ರವಾದಿಯಿದ್ದರೆ, ನಾನು ಅವನಿಗೆ ನನ್ನನ್ನು ದರ್ಶನದಲ್ಲಿ ಗೊತ್ತುಪಡಿಸಿಕೊಳ್ಳುವೆನು ಅಥವಾ ಸ್ವಪ್ನದಲ್ಲಿ ಅವನ ಸಂಗಡ ಮಾತಾಡುವೆನು. ಆದರೆ ಮೋಶೆಯೊಡನೆ ನಾನು ಆ ರೀತಿ ಮಾಡುವುದಿಲ್ಲ. ಮೋಶೆಯು ನನ್ನ ನಂಬಿಗಸ್ತನಾದ ಸೇವಕನು. ಅವನ ಮೇಲೆ ನನಗೆ ಭರವಸೆಯಿದೆ. ನಾನು ಅವನೊಂದಿಗೆ ಗೂಡಾರ್ಥದಿಂದ ಮಾತಾಡದೆ ನೇರವಾಗಿಯೂ ಸ್ಪಷ್ಟವಾಗಿಯೂ ಮಾತಾಡುತ್ತೇನೆ. ಅವನು ನನ್ನ ಸ್ವರೂಪವನ್ನೇ ನೋಡಬಲ್ಲನು. ನನ್ನ ಸೇವಕನಾದ ಮೋಶೆಗೆ ವಿರೋಧವಾಗಿ ಮಾತಾಡಲು ನೀವು ಯಾಕೆ ಭಯಪಡಲಿಲ್ಲ?” ಎಂದು ಹೇಳಿದನು.

ಯೆಹೋವನು ಅವರ ಮೇಲೆ ಬಹಳವಾಗಿ ಕೋಪಗೊಂಡು ಹೊರಟುಹೋದನು. 10 ಮೇಘವು ಗುಡಾರದಿಂದ ಮೇಲಕ್ಕೆ ಎದ್ದಿತು. ಆರೋನನು ಹಿಂತಿರುಗಿ ಮಿರ್ಯಾಮಳನ್ನು ನೋಡಿದನು. ಆಕೆಯ ಚರ್ಮವು ಹಿಮದಂತೆ ಬೆಳ್ಳಗಾಗಿತ್ತು. ಆಕೆಗೆ ಭಯಂಕರವಾದ ಚರ್ಮರೋಗ ಹಿಡಿದಿತ್ತು.

11 ಆಗ ಆರೋನನು ಮೋಶೆಗೆ, “ಸ್ವಾಮೀ, ನಾವು ಮೂರ್ಖತನದಿಂದ ಮಾಡಿದ ಪಾಪಕ್ಕೆ ದಯವಿಟ್ಟು ನಮ್ಮನ್ನು ದಂಡಿಸಬೇಡ. 12 ಗರ್ಭದಲ್ಲೇ ಅರ್ಧ ಮಾಂಸ ಕೊಳೆತುಹೋಗಿ, ಹುಟ್ಟುವಾಗಲೇ ಸತ್ತ ಮಗುವಿನಂತೆ ಈಕೆಗೆ ಆಗದಂತೆ ದಯವಿಟ್ಟು ಕಾಪಾಡು” ಎಂದು ಬೇಡಿಕೊಂಡನು.

13 ಆದ್ದರಿಂದ ಮೋಶೆ ಯೆಹೋವನಿಗೆ ಪ್ರಾರ್ಥಿಸಿ, “ದೇವರೇ, ದಯಮಾಡಿ ಈಕೆಯನ್ನು ವಾಸಿಮಾಡು” ಎಂದು ಮೊರೆಯಿಟ್ಟನು.

14 ಅದಕ್ಕೆ ಯೆಹೋವನು, “ಆಕೆಯ ತಂದೆ ಮುಖದ ಮೇಲೆ ಉಗುಳಿದ್ದರೆ ಆಕೆ ಏಳು ದಿವಸ ನಾಚಿಕೆಯಿಂದ ಇರುತ್ತಿರಲಿಲ್ಲವೇ? ಹಾಗಾದರೆ ಆಕೆ ಏಳು ದಿವಸ ಪಾಳೆಯದ ಹೊರಗೆ ಇರಬೇಕು. ತರುವಾಯ ಆಕೆ ಪಾಳೆಯದೊಳಗೆ ಬರಬಹುದು” ಎಂದು ಉತ್ತರಿಸಿದನು.

15 ಆದಕಾರಣ ಅವರು ಮಿರ್ಯಾಮಳನ್ನು ಏಳು ದಿವಸಗಳವರೆಗೆ ಪಾಳೆಯದ ಹೊರಗೆ ಇಟ್ಟರು. ಆಕೆ ತಿರುಗಿ ಸೇರಿಕೊಳ್ಳುವ ತನಕ ಇಸ್ರೇಲರು ಪ್ರಯಾಣ ಮಾಡಲಿಲ್ಲ. 16 ಇದಾದನಂತರ, ಜನರು ಹಚೇರೋತಿನಿಂದ ಹೊರಟು ಪಾರಾನ್ ಮರುಭೂಮಿಯಲ್ಲಿ ಪಾಳೆಯ ಮಾಡಿಕೊಂಡರು.

ಗೂಢಚಾರರು ಕಾನಾನ್ ದೇಶಕ್ಕೆ ಹೋದದ್ದು

13 ಯೆಹೋವನು ಮೋಶೆಗೆ, “ಕಾನಾನ್ ದೇಶದ ಬಗ್ಗೆ ವಿಷಯವನ್ನು ಸಂಗ್ರಹಿಸಿಕೊಂಡು ಬರಲು ಗೂಢಚಾರರನ್ನು ಕಳುಹಿಸು. ನಾನು ಇಸ್ರೇಲರಿಗೆ ಕೊಡುವ ದೇಶ ಇದಾಗಿದೆ. ಹನ್ನೆರಡು ಕುಲಗಳಿಂದ ಒಬ್ಬೊಬ್ಬ ನಾಯಕನನ್ನು ಕಳುಹಿಸು” ಎಂದು ಹೇಳಿದನು.

ಜನರು ಪಾರಾನ್ ಮರುಭೂಮಿಯಲ್ಲಿ ಇಳಿದುಕೊಂಡಿದ್ದಾಗ ಯೆಹೋವನ ಆಜ್ಞೆಗನುಸಾರವಾಗಿ ಮೋಶೆಯು ಈ ನಾಯಕರನ್ನು ಕಳುಹಿಸಿದನು. ಆ ನಾಯಕರು ಯಾರೆಂದರೆ:

ರೂಬೇನ್ ಕುಲದಿಂದ ಜಕ್ಕೂರನ ಮಗನಾದ ಶಮ್ಮೂವ,

ಸಿಮೆಯೋನ್ ಕುಲದಿಂದ ಹೋರಿಯ ಮಗನಾದ ಶಾಫಾಟ್,

ಯೆಹೂದ ಕುಲದಿಂದ ಯೆಫುನ್ನೆಯ ಮಗನಾದ ಕಾಲೇಬ್,

ಇಸ್ಸಾಕಾರ್ ಕುಲದಿಂದ ಯೋಸೇಫನ ಮಗನಾದ ಇಗಾಲ್,

ಎಫ್ರಾಯೀಮ್ ಕುಲದಿಂದ ನೂನನ ಮಗನಾದ ಹೋಶೇಯ,

ಬೆನ್ಯಾಮೀನ್ ಕುಲದಿಂದ ರಾಫೂವನ ಮಗನಾದ ಪಲ್ಟೀ,

10 ಜೆಬುಲೂನ್ ಕುಲದಿಂದ ಸೋದೀಯ ಮಗನಾದ ಗದ್ದೀಯೇಲ್,

11 ಯೋಸೇಫನ ಮಗನಾದ ಮನಸ್ಸೆ ಕುಲದಿಂದ ಸೂಸೀಯ ಮಗನಾದ ಗದ್ದೀ,

12 ದಾನ್ ಕುಲದಿಂದ ಗೆಮಲ್ಲೀಯ ಮಗನಾದ ಅಮ್ಮೀಯೇಲ್,

13 ಆಶೇರ್ ಕುಲದಿಂದ ಮೀಕಾಯೇಲನ ಮಗನಾದ ಸೆತೂರ್,

14 ನಫ್ತಾಲಿ ಕುಲದಿಂದ ವಾಪೆಸೀಯನ ಮಗನಾದ ನಹಬೀ,

15 ಗಾದ್ ಕುಲದಿಂದ ಮಾಕೀಯನ ಮಗನಾದ ಗೆಯೂವೇಲ್.

16 ದೇಶದ ವಿಷಯವನ್ನು ಸಂಗ್ರಹಿಸಿಕೊಂಡು ಬರಲು ಮೋಶೆ ಕಳುಹಿಸಿದ ಗೂಢಚಾರರ ಹೆಸರುಗಳು ಇವೇ. (ಮೋಶೆಯು ನೂನನ ಮಗನಾದ ಹೋಶೇಯನಿಗೆ ಯೆಹೋಶುವನೆಂದು ಹೆಸರಿಟ್ಟನು.)

17 ಕಾನಾನ್ ದೇಶದ ವಿಷಯವನ್ನು ಸಂಗ್ರಹಿಸಿಕೊಂಡು ಬರಲು ಮೋಶೆ ಅವರನ್ನು ಕಳುಹಿಸುವಾಗ ಅವರಿಗೆ, “ನೀವು ಬೆಟ್ಟದ ಸೀಮೆಗೆ ನೆಗೆವ್ ಮೂಲಕ ಹತ್ತಿ ಹೋಗಿ 18 ಆ ದೇಶದ ಸಂಗತಿಯನ್ನೆಲ್ಲಾ ತಿಳಿದುಕೊಳ್ಳಿರಿ. ಅಲ್ಲಿನ ನಿವಾಸಿಗಳು ಬಲಿಷ್ಠರೋ ಅಥವಾ ಬಲಹೀನರೋ, ಬಹಳ ಮಂದಿಯೋ ಅಥವಾ ಸ್ವಲ್ಪ ಮಂದಿಯೋ, 19 ಅವರ ದೇಶ ಒಳ್ಳೆಯದೋ ಅಥವಾ ಕೆಟ್ಟದ್ದೋ, ಅವರ ಪಟ್ಟಣಗಳು ಗೋಡೆಗಳನ್ನು ಹೊಂದಿವೆಯೋ ಅಥವಾ ಇಲ್ಲವೋ, 20 ಭೂಮಿಯು ಸಾರವಾದದ್ದೋ ಅಥವಾ ನಿಸ್ಸಾರವಾದದ್ದೋ, ಮರಗಳನ್ನು ಹೊಂದಿದೆಯೋ ಅಥವಾ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಿ. ಅದಲ್ಲದೆ ಆ ದೇಶದ ಉತ್ಪನ್ನಗಳಲ್ಲಿ ಕೆಲವನ್ನು ತರಲು ಪ್ರಯತ್ನ ಮಾಡಿ” ಎಂದು ಹೇಳಿದನು. (ಆಗ ದ್ರಾಕ್ಷಾಲತೆಗಳ ಪ್ರಥಮ ಫಲದ ಕಾಲವಾಗಿತ್ತು.)

21 ಅವರು ಬೆಟ್ಟದ ಸೀಮೆಗೆ ಹತ್ತಿಹೋಗಿ, ಚಿನ್ ಮರುಭೂಮಿಯಿಂದಿಡಿದು ಲೆಬೊಹಮಾತಿನ ಬಳಿಯಲ್ಲಿರುವ ರೆಹೋಬಿನವರೆಗೂ ದೇಶದ ವಿಷಯಗಳನ್ನು ಸಂಗ್ರಹಿಸಿಕೊಂಡರು. 22 ಅವರು ನೆಗೆವ್ ಮೂಲಕ ದೇಶವನ್ನು ಪ್ರವೇಶಿಸಿ ಹೆಬ್ರೋನಿಗೆ ಹೋದರು. ಹೆಬ್ರೋನ್ ಪಟ್ಟಣವು ಈಜಿಪ್ಟ್ ದೇಶದಲ್ಲಿರುವ ಚೋವನ್ ಪಟ್ಟಣಕ್ಕಿಂತ ಏಳು ವರ್ಷಗಳ ಮುಂಚೆ ಕಟ್ಟಲ್ಪಟ್ಟಿತ್ತು. ಅಲ್ಲಿ ಅಹೀಮನ್, ಶೇಫೈ ಮತ್ತು ತಲ್ಮೈ ಎಂಬವರು ವಾಸಿಸುತ್ತಿದ್ದರು. ಇವರು ಅನಾಕನ ಸಂತತಿಯವರು. 23 ಬಳಿಕ ಅವರು ಎಷ್ಕೋಲ್ ಕಣಿವೆಗೆ ಹೋದರು. ಅಲ್ಲಿ ಅವರು ದ್ರಾಕ್ಷಾಲತೆಯಿಂದ ಒಂದು ಕೊಂಬೆಯನ್ನು ಕಡಿದರು. ಆ ಕೊಂಬೆಯಲ್ಲಿ ದ್ರಾಕ್ಷೆಯ ಗೊಂಚಲಿತ್ತು. ಅವರು ಅದನ್ನು ಒಂದು ಕೋಲಿಗೆ ಕಟ್ಟಿ ಇಬ್ಬರು ಅದನ್ನು ಹೊತ್ತುಕೊಂಡು ಬಂದರು. ಕೆಲವು ದಾಳಿಂಬೆ ಹಣ್ಣುಗಳನ್ನು ಮತ್ತು ಅಂಜೂರದ ಹಣ್ಣುಗಳನ್ನು ಹೊತ್ತುತಂದರು. 24 ಇಸ್ರೇಲರು ಅಲ್ಲಿ ದ್ರಾಕ್ಷೆಯ ಗೊಂಚಲನ್ನು ಕತ್ತರಿಸಿದ್ದರಿಂದ ಆ ಸ್ಥಳಕ್ಕೆ ಎಷ್ಕೋಲ್ ಕಣಿವೆ ಎಂದು ಹೆಸರಾಯಿತು.

25 ಜನರು ನಲವತ್ತು ದಿನಗಳವರೆಗೆ ದೇಶವನ್ನು ಸಂಚರಿಸಿ ನೋಡಿ, ತಮ್ಮ ಪಾಳೆಯಕ್ಕೆ ಹಿಂತಿರುಗಿದರು. 26 ಇಸ್ರೇಲರು ಪಾರಾನ್ ಮರುಭೂಮಿಯ ಕಾದೇಶಿನಲ್ಲಿ ತಂಗಿದ್ದರು. ಅವರು ನೋಡಿದ್ದರ ಬಗ್ಗೆ ಎಲ್ಲವನ್ನು ಮೋಶೆಗೂ ಆರೋನನಿಗೂ ಎಲ್ಲಾ ಇಸ್ರೇಲರಿಗೂ ತಿಳಿಸಿದರು. ಅವರು ಕಾನಾನ್ ದೇಶದಿಂದ ತಂದ ಹಣ್ಣುಗಳನ್ನು ತೋರಿಸಿದರು. 27 ಜನರು ಮೋಶೆಗೆ, “ನೀನು ಕಳುಹಿಸಿದ ದೇಶಕ್ಕೆ ನಾವು ಹೋಗಿ ಸಂಚರಿಸಿ ನೋಡಿದೆವು. ಅದು ಹಾಲೂ ಜೇನೂ ಹರಿಯುವ ದೇಶವಾಗಿದೆ. ಇಗೋ, ಹಣ್ಣುಗಳಲ್ಲಿ ಕೆಲವು ಇಲ್ಲಿವೆ. 28 ಅಲ್ಲಿನ ಜನರು ಬಲಿಷ್ಠರು. ಪಟ್ಟಣಗಳೂ ಬಹಳ ದೊಡ್ಡದಾಗಿವೆ. ಪಟ್ಟಣಗಳು ಕೋಟೆಕೊತ್ತಲುಗಳುಳ್ಳದಾಗಿವೆ. ನಾವು ಕೆಲವು ಅನಾಕ್ಯರನ್ನು ಸಹ ನೋಡಿದೆವು. 29 ಅಮಾಲೇಕ್ಯರು ನೆಗೆವ್‌ನಲ್ಲಿ ವಾಸಿಸುತ್ತಾರೆ. ಹಿತ್ತಿಯರು, ಯೆಬೂಸಿಯರು ಮತ್ತು ಅಮೋರಿಯರು ಪರ್ವತ ಪ್ರದೇಶದಲ್ಲಿ ವಾಸಿಸುತ್ತಾರೆ. ಕಾನಾನ್ಯರು ಸಮುದ್ರ ತೀರದಲ್ಲಿಯೂ ಮತ್ತು ಯೋರ್ದನ್ ನದಿಯ ಉದ್ದಕ್ಕೂ ವಾಸಿಸುತ್ತಾರೆ” ಎಂದು ಹೇಳಿದರು.

30 ಕಾಲೇಬನು ಮೋಶೆಯ ಬಳಿಯಲ್ಲಿದ್ದ ಗೊಣಗುಟ್ಟುವ ಜನರನ್ನು ಸುಮ್ಮನಿರಿಸಿ, “ನಾವು ಹೋಗಿ ದೇಶವನ್ನು ವಶಪಡಿಸಿಕೊಳ್ಳಬೇಕು. ನಾವು ಸುಲಭವಾಗಿ ದೇಶವನ್ನು ವಶಪಡಿಸಿಕೊಳ್ಳಬಹುದು” ಎಂದು ಹೇಳಿದನು.

31 ಆದರೆ ಅವನೊಡನೆ ಹೋದ ಜನರು, “ನಾವು ಆ ಜನರೊಡನೆ ಹೋರಾಡಲಾರೆವು, ಅವರು ನಮಗಿಂತಲೂ ಬಲಿಷ್ಠರು” ಎಂದು ಹೇಳಿದರು. 32 “ನಾವು ಸಂಚರಿಸಿ ವಿಷಯ ಸಂಗ್ರಹಿಸಿಕೊಂಡು ಬಂದ ದೇಶವು ಅಲ್ಲಿ ವಾಸಿಸುವವರನ್ನು ನಾಶಪಡಿಸುವ ದೇಶವಾಗಿದೆ. ನಾವು ಅಲ್ಲಿ ನೋಡಿದ ಎಲ್ಲಾ ಜನರು ರಾಕ್ಷಸರಂತಿದ್ದಾರೆ. 33 ಪ್ರಚಂಡರಾದ ನೆಫೀಲಿಯರು ಅಲ್ಲಿ ವಾಸವಾಗಿರುವುದನ್ನು ನಾವು ನೋಡಿದೆವು. (ಅನಾಕ್ಯರು ನೆಫೀಲಿಯ ಜನರ ಸಂತತಿಯವರಾಗಿದ್ದಾರೆ.) ಅವರ ಮುಂದೆ ನಾವು ಮಿಡತೆಗಳೊ ಎಂದೆನಿಸಿತು. ಅವರಿಗೂ ಸಹ ನಾವು ಮಿಡತೆಗಳಂತೆ ಕಂಡುಬಂದೆವು” ಎಂದರು.

ಜನರು ಮತ್ತೆ ಗೊಣಗುಟ್ಟಿದ್ದು

14 ಆ ರಾತ್ರಿಯಲ್ಲಿ ಜನರೆಲ್ಲರೂ ಗಟ್ಟಿಯಾಗಿ ಕೂಗಿಕೊಂಡರು. ಇಸ್ರೇಲರು ಮೋಶೆ ಆರೋನರ ವಿರುದ್ಧ ಗೊಣಗುಟ್ಟಿದರು. ಜನರೆಲ್ಲರೂ ಒಟ್ಟಾಗಿ ಮೋಶೆ ಆರೋನರ ಬಳಿಗೆ ಬಂದು, “ನಾವು ಈಜಿಪ್ಟಿನಲ್ಲಿಯಾಗಲೀ ಅಥವಾ ಈ ಮರುಭೂಮಿಯಲ್ಲಾಗಲಿ ಸತ್ತಿದ್ದರೆ ಒಳ್ಳೆಯದಿತ್ತು. ಯುದ್ಧದಲ್ಲಿ ನಾವು ಸತ್ತುಹೋಗುವಂತೆ ಯೆಹೋವನು ನಮ್ಮನ್ನು ಈ ಹೊಸ ದೇಶಕ್ಕೆ ತರುತ್ತಿರುವುದೇಕೆ? ವೈರಿಗಳು ನಮ್ಮನ್ನು ಕೊಂದು ನಮ್ಮ ಹೆಂಡತಿಯರನ್ನೂ ಮಕ್ಕಳನ್ನೂ ತೆಗೆದುಕೊಳ್ಳುವರು. ನಾವು ಈಜಿಪ್ಟಿಗೆ ಮರಳಿಹೋಗುವುದೇ ಉತ್ತಮ” ಎಂದು ಹೇಳಿದರು.

ಬಳಿಕ ಜನರು, “ನಾವು ಇನ್ನೊಬ್ಬ ನಾಯಕನನ್ನು ಆರಿಸಿಕೊಂಡು ಈಜಿಪ್ಟಿಗೆ ಮರಳಿಹೋಗೋಣ” ಎಂದು ಮಾತಾಡಿಕೊಂಡರು.

ಆಗ ಮೋಶೆ ಆರೋನರು ಇಸ್ರೇಲರ ಸರ್ವ ಸಮೂಹದವರ ಮುಂದೆ ಬೋರಲಬಿದ್ದರು. ನೂನನ ಮಗನಾದ ಯೆಹೋಶುವನೂ ಯೆಫುನ್ನೆಯ ಮಗನಾದ ಕಾಲೇಬನೂ ದೇಶದ ವಿಷಯವನ್ನು ಸಂಗ್ರಹಿಸಿಕೊಂಡು ಬಂದವರಲ್ಲಿ ಇಬ್ಬರಾಗಿದ್ದರು. ಅವರು ಬೇಸರಗೊಂಡು ತಮ್ಮ ಬಟ್ಟೆಗಳನ್ನು ಹರಿದುಕೊಂಡರು. ಇವರಿಬ್ಬರು ಇಸ್ರೇಲರೆಲ್ಲರಿಗೆ, “ನಾವು ಸಂಚರಿಸಿ ನೋಡಿದ ದೇಶವು ಅತ್ಯುತ್ತಮವಾದದ್ದು, ಅದು ಹಾಲೂ ಜೇನೂ ಹರಿಯುವ ದೇಶ. ಯೆಹೋವನು ನಮ್ಮನ್ನು ಮೆಚ್ಚಿಕೊಂಡರೆ ಆ ದೇಶದೊಳಗೆ ನಮ್ಮನ್ನು ಕರೆದೊಯ್ದು ಅದನ್ನು ನಮ್ಮ ಸ್ವಾಧೀನಕ್ಕೆ ಕೊಡುವನು. ಹೀಗಿರುವುದರಿಂದ ಯೆಹೋವನಿಗೆ ವಿರುದ್ಧವಾಗಿ ಏಳಬೇಡಿರಿ. ಆ ದೇಶದ ಜನರಿಗೆ ಭಯಪಡಬೇಡಿರಿ. ನಾವು ಅವರನ್ನು ಸೋಲಿಸಬಹುದು. ಅವರಿಗೆ ಯಾವ ಸಂರಕ್ಷಣೆ ಇರುವುದಿಲ್ಲ. ಆದರೆ ನಮ್ಮ ಕಡೆ ಯೆಹೋವನು ಇದ್ದಾನೆ. ಆದ್ದರಿಂದ ಭಯಪಡಬೇಡಿರಿ” ಅಂದರು.

10 ಎಲ್ಲಾ ಜನರು ಯೆಹೋಶುವನನ್ನು ಮತ್ತು ಕಾಲೇಬನನ್ನು ಕಲ್ಲೆಸೆದು ಕೊಲ್ಲಬೇಕೆಂದು ಮಾತಾಡತೊಡಗಿದರು. ಆದರೆ ಯೆಹೋವನ ಮಹಿಮೆ ದೇವದರ್ಶನಗುಡಾರ ಮೇಲೆ ಪ್ರತ್ಯಕ್ಷವಾದದ್ದು ಇಸ್ರೇಲರೆಲ್ಲರಿಗೆ ಕಾಣಿಸಿತು. ಯೆಹೋವನು ಮೋಶೆಯೊಡನೆ ಮಾತಾಡಿ, 11 “ಈ ಜನರು ಇನ್ನೆಷ್ಟು ಕಾಲದವರೆಗೆ ನನ್ನನ್ನು ತಿರಸ್ಕರಿಸುವರು? ನಾನು ಮಾಡಿದ ಎಲ್ಲಾ ಮಹತ್ಕಾರ್ಯಗಳನ್ನು ಇವರು ಪ್ರತ್ಯಕ್ಷವಾಗಿ ನೋಡಿದಾಗ್ಯೂ ಇನ್ನೆಷ್ಟು ಕಾಲದವರೆಗೆ ನನ್ನನ್ನು ನಂಬದೆ ಇರುವರು? 12 ಸರಿ, ನಾನು ಇವರಿಗೆ ವ್ಯಾಧಿಯನ್ನು ಉಂಟುಮಾಡಿ ಇವರನ್ನು ನಿರ್ಮೂಲಮಾಡಿ ಈ ಜನಕ್ಕಿಂತ ಹೆಚ್ಚಾಗಿಯೂ ಬಲಿಷ್ಠವಾಗಿಯೂ ಇರುವ ಜನಾಂಗವನ್ನು ನಿನ್ನ ಮೂಲಕವೇ ಹುಟ್ಟಿಸುವೆನು” ಎಂದು ಹೇಳಿದನು.

13 ಅದಕ್ಕೆ ಮೋಶೆ ಯೆಹೋವನಿಗೆ, “ನೀನು ನಿನ್ನ ಜನರಾದ ಇಸ್ರೇಲರನ್ನು ನಿನ್ನ ಶಕ್ತಿಯ ಮೂಲಕ ಈಜಿಪ್ಟಿನಿಂದ ಕರೆದುಕೊಂಡು ಬಂದೆ. ನೀನು ನಿನ್ನ ಜನರನ್ನು ನಾಶಮಾಡಿದರೆ, ಈಜಿಪ್ಟಿನವರು ಈ ಸುದ್ದಿಯನ್ನು ಕೇಳಿ ಕಾನಾನಿನ ನಿವಾಸಿಗಳಿಗೆ ಅದರ ಬಗ್ಗೆ ತಿಳಿಸುವರು. 14 ಅದಲ್ಲದೆ, ಈ ದೇಶದವರು ನೀನು ಇಸ್ರೇಲರ ಮಧ್ಯದಲ್ಲಿರುವ ಸಂಗತಿಯನ್ನು ಕೇಳಿದ್ದಾರೆ. ನೀನು ಇಸ್ರೇಲರಿಗೆ ಪ್ರತ್ಯಕ್ಷನಾಗಿ ಕಾಣಿಸಿಕೊಂಡದ್ದು ಅವರಿಗೆ ತಿಳಿದಿದೆ. ನಿನ್ನ ಮೇಘವು ಇಸ್ರೇಲರ ಮೇಲಿರುವುದು ಅವರಿಗೆ ಗೊತ್ತಿದೆ. ನೀನು ಇಸ್ರೇಲರನ್ನು ಹಗಲಲ್ಲಿ ಮೇಘಸ್ತಂಭದ ಮೂಲಕವಾಗಿಯೂ ರಾತ್ರಿಯಲ್ಲಿ ಅಗ್ನಿಸ್ತಂಭದ ಮೂಲಕವಾಗಿಯೂ ಮುನ್ನಡೆಸುತ್ತಿರುವುದು ಅವರಿಗೆ ತಿಳಿದಿದೆ. 15 ಹೀಗಿರಲಾಗಿ, ನೀನು ಒಂದೇ ಪೆಟ್ಟಿನಿಂದ ಈ ಜನರನ್ನು ಸಾಯಿಸಿದರೆ, ನಿನ್ನ ಪ್ರಖ್ಯಾತಿಯನ್ನು ಕೇಳಿದ ಜನಾಂಗಗಳವರು ನಿನ್ನ ವಿಷಯದಲ್ಲಿ, 16 ‘ಯೆಹೋವನು ಪ್ರಮಾಣಪೂರ್ವಕವಾಗಿ ವಾಗ್ದಾನಮಾಡಿದ ದೇಶದಲ್ಲಿ ಇಸ್ರೇಲರನ್ನು ಸೇರಿಸುವುದಕ್ಕೆ ಶಕ್ತಿಸಾಲದೆ ಅವರನ್ನು ಮರುಭೂಮಿಯಲ್ಲಿ ನಾಶಮಾಡಿದನು’ ಎಂದು ಮಾತಾಡಿಕೊಳ್ಳುವರು.

17 “ಆದ್ದರಿಂದ ಒಡೆಯನೇ, ನೀನು ಹೇಳಿದಂತೆಯೇ ನಿನ್ನ ತಾಳ್ಮೆಯು ದೀರ್ಘವಾಗಿರಲಿ. 18 ನೀನು ನಿನ್ನ ವಿಷಯದಲ್ಲಿ ‘ಯೆಹೋವನು ದೀರ್ಘಶಾಂತನು, ಬಹುಪ್ರೀತಿಯುಳ್ಳವನು, ಅಪರಾಧ, ಪಾಪಗಳನ್ನು ಕ್ಷಮಿಸುವವನಾಗಿದ್ದರೂ ಎಲ್ಲಾ ದಂಡನೆಯನ್ನು ರದ್ದುಪಡಿಸದವನು, ತಂದೆಗಳ ಪಾಪಫಲವನ್ನು ಮಕ್ಕಳ ಮೇಲೆ ಮೂರು ನಾಲ್ಕು ತಲೆಗಳವರೆಗೆ ಬರಮಾಡುವವನು’ ಎಂದು ನೀನೇ ಹೇಳಿರುವಿಯಲ್ಲಾ! 19 ನಾವು ಈಜಿಪ್ಟಿನಿಂದ ಬಂದದ್ದು ಮೊದಲುಗೊಂಡು ಇದುವರೆಗೆ ನೀನು ಈ ಜನರ ಪಾಪಗಳನ್ನು ಕ್ಷಮಿಸಿದ ಪ್ರಕಾರವೇ ಈಗಲೂ ಮಹಾಕೃಪೆಯಿಂದ ಇವರ ಪಾಪವನ್ನು ಕ್ಷಮಿಸಬೇಕೆಂದು ನಿನ್ನನ್ನು ಬೇಡಿಕೊಳ್ಳುತ್ತೇನೆ” ಎಂದು ಪ್ರಾರ್ಥಿಸಿದನು.

20 ಅದಕ್ಕೆ ಯೆಹೋವನು, “ನೀನು ಕೇಳಿಕೊಂಡಂತೆ ನಾನು ಜನರನ್ನು ಕ್ಷಮಿಸುವೆನು. 21 ಆದಾಗ್ಯೂ ನನ್ನ ಜೀವದಾಣೆ ಮತ್ತು ಯೆಹೋವನ ಮಹಿಮೆಯು ಭೂಲೋಕದಲ್ಲೆಲ್ಲಾ ತುಂಬಿರಬೇಕೆಂಬುವ ನಿಶ್ಚಯ ವಾಕ್ಯದ ಆಣೆ, 22 ಈಜಿಪ್ಟಿನಲ್ಲಿಯೂ ಮರುಭೂಮಿಯಲ್ಲಿಯೂ ನಾನು ನಡಿಸಿರುವ ಮಹಾತ್ಕಾರ್ಯಗಳನ್ನೂ ನನ್ನ ಮಹಿಮೆಯನ್ನೂ ನೋಡಿದ ಈ ಜನರೆಲ್ಲರೂ ಪದೇಪದೇ ನನ್ನನ್ನು ಪರೀಕ್ಷಿಸಿದ್ದರಿಂದ ಮತ್ತು ನನಗೆ ವಿಧೇಯರಾಗದಿದ್ದ ಕಾರಣ, 23 ನಾನು ಅವರ ಪೂರ್ವಿಕರಿಗೆ ಪ್ರಮಾಣಪೂರ್ವಕವಾಗಿ ವಾಗ್ದಾನ ಮಾಡಿದ ದೇಶವನ್ನು ಇವರಲ್ಲಿ ಯಾರೂ ನೋಡುವುದಿಲ್ಲ. ನನ್ನನ್ನು ತಿರಸ್ಕರಿಸಿದ ಇವರಲ್ಲಿ ಯಾರೂ ಅದನ್ನು ನೋಡುವುದಿಲ್ಲ. 24 ಆದರೆ ನನ್ನ ಸೇವಕನಾದ ಕಾಲೇಬನು ಅವರ ಹಾಗಲ್ಲ, ಅವನು ನನ್ನನ್ನು ಮನಃಪೂರ್ವಕವಾಗಿ ಹಿಂಬಾಲಿಸಿದ್ದಾನೆ. ಆದ್ದರಿಂದ ಅವನು ಸಂಚರಿಸಿ ನೋಡಿದ ದೇಶಕ್ಕೆ ಅವನನ್ನು ಬರಮಾಡುವೆನು ಮತ್ತು ಅವನ ಸಂತತಿಯವರು ಆ ದೇಶವನ್ನು ಹೊಂದುವರು. 25 ಅಮಾಲೇಕ್ಯರೂ ಕಾನಾನ್ಯರೂ ಆ ಕಣಿವೆಯಲ್ಲಿ ವಾಸವಾಗಿದ್ದಾರೆ. ಆದ್ದರಿಂದ ಕೆಂಪುಸಮುದ್ರಕ್ಕೆ ಹೋಗುವ ದಾರಿಯ ಮೂಲಕ ಮರುಭೂಮಿಗೆ ಮರಳಿ ಪ್ರಯಾಣ ಮಾಡಬೇಕು” ಎಂದು ಹೇಳಿದನು.

ಯೆಹೋವನು ಜನರನ್ನು ಶಿಕ್ಷಿಸಿದ್ದು

26-27 ಯೆಹೋವನು ಮೋಶೆ ಆರೋನರಿಗೆ, “ಈ ದುಷ್ಟ ಸಮೂಹದವರು ನನಗೆ ವಿರುದ್ಧವಾಗಿ ಇನ್ನೆಷ್ಟರವರೆಗೆ ಗುಣುಗುಟ್ಟುತ್ತಲೇ ಇರುತ್ತಾರೆ. ಇಸ್ರೇಲರು ನನಗೆ ವಿರೋಧವಾಗಿ ಗುಣುಗುಟ್ಟುವುದು ನನಗೆ ಕೇಳಿಸಿದೆ. 28 ಆದ್ದರಿಂದ ನೀನು ಅವರಿಗೆ ಹೀಗೆ ಹೇಳಬೇಕು: ‘ಯೆಹೋವನು ಹೇಳುವುದೇನೆಂದರೆ: ನನ್ನ ಜೀವದಾಣೆ. ನೀವು ಏನನ್ನು ಹೇಳಿದಿರೋ ಅದನ್ನೇ ನಿಮಗೆ ಮಾಡುತ್ತೇನೆ; 29 ನಿಮ್ಮ ಶವಗಳು ಈ ಮರುಭೂಮಿಯಲ್ಲಿಯೇ ಬೀಳುವವು. ನೀವು ನನಗೆ ವಿರೋಧವಾಗಿ ಗುಣುಗುಟ್ಟಿದ್ದರಿಂದ ನಿಮ್ಮಲ್ಲಿ ಲೆಕ್ಕಿಸಲ್ಪಟ್ಟವರೆಲ್ಲರೂ ಅಂದರೆ ಇಪ್ಪತ್ತು ವರ್ಷ ಮೊದಲುಗೊಂಡು ಹೆಚ್ಚಾದ ವಯಸ್ಸುಳ್ಳವರೆಲ್ಲರೂ ಮರುಭೂಮಿಯಲ್ಲೇ ಸಾಯುವರು. 30 ಯೆಫುನ್ನೆಯ ಮಗನಾದ ಕಾಲೇಬ್ ಮತ್ತು ನೂನನ ಮಗನಾದ ಯೆಹೋಶುವ ಇವರಿಬ್ಬರೇ ಹೊರತು ನಿಮ್ಮಲ್ಲಿ ಬೇರೆ ಯಾರೂ ನಾನು ಪ್ರಮಾಣಪೂರ್ವಕವಾಗಿ ವಾಗ್ದಾನ ಮಾಡಿದ ದೇಶವನ್ನು ಸೇರುವುದಿಲ್ಲ. 31 ಪರರ ಪಾಲಾಗುವರೆಂದು ನೀವು ಹೇಳಿದ ನಿಮ್ಮ ಚಿಕ್ಕ ಮಕ್ಕಳನ್ನು ಅಲ್ಲಿಗೆ ಪ್ರವೇಶಿಸುವಂತೆ ಮಾಡುವೆನು. ನೀವು ತಿರಸ್ಕರಿಸಿದ ದೇಶವನ್ನು ಅವರು ಅನುಭೋಗಿಸುವರು. 32 ನೀವಂತೂ ಈ ಮರುಭೂಮಿಯಲ್ಲಿ ಸಾಯುವಿರಿ. ನಿಮ್ಮೆಲ್ಲರ ಶವಗಳು ಈ ಮರುಭೂಮಿಯಲ್ಲ್ಲಿ ಪರ್ಯಂತರ ಬೀಳುವವು.

33 “‘ನಿಮ್ಮ ಅಪನಂಬಿಗಸ್ತಿಕೆಯ ಫಲವನ್ನು ನಿಮ್ಮ ಮಕ್ಕಳು ಅನುಭವಿಸುವವರಾಗಿ ನೀವು ಸಾಯುವತನಕ ನಲವತ್ತು ವರ್ಷ ಮರುಭೂಮಿಯಲ್ಲಿ ಅಲೆದಾಡುವರು. 34 ನೀವು ಆ ದೇಶವನ್ನು ಸಂಚರಿಸಿ ನೋಡಿದ ನಲವತ್ತು ದಿನಗಳಿಗೆ ಸಮನಾಗಿ, ದಿನ ಒಂದಕ್ಕೆ ಒಂದು ಸಂವತ್ಸರದ ಮೇರೆಗೆ ನಲವತ್ತು ವರ್ಷ ನಿಮ್ಮ ಪಾಪದ ಫಲವನ್ನು ಅನುಭವಿಸುವಿರಿ. ನನ್ನನ್ನು ತಿರಸ್ಕರಿಸುವುದೆಂದರೆ ಏನೆಂಬುದು ನಿಮಗೆ ಗೊತ್ತಾಗುತ್ತದೆ.’

35 “ಇದು ಯೆಹೋವನೆಂಬ ನಾನು ಹೇಳಿದ ಮಾತು. ನನಗೆ ವಿರೋಧವಾಗಿ ಕೂಡಿಕೊಂಡಿರುವ ಈ ದುಷ್ಟ ಸಮೂಹದವರೆಲ್ಲರಿಗೆ ಈ ಮಾತಿನ ಮೇರೆಗೆ ಖಂಡಿತವಾಗಿ ಮಾಡುತ್ತೇನೆ. ಈ ಮರುಭೂಮಿಯಲ್ಲಿಯೇ ಇವರೆಲ್ಲರೂ ಸಾಯಬೇಕು” ಎಂದು ಹೇಳಿದನು.

36-37 ಆ ದೇಶವನ್ನು ಸಂಚರಿಸಿ ನೋಡುವುದಕ್ಕೆ ಮೋಶೆಯಿಂದ ಕಳುಹಿಸಲ್ಪಟ್ಟು ಹಿಂದಿರುಗಿಬಂದು ಆ ದೇಶದ ವಿಷಯದಲ್ಲಿ ಅಶುಭಸಮಾಚಾರವನ್ನು ಹೇಳಿ ಸರ್ವಸಮೂಹದರವರನ್ನು ಅವರಿಗೆ ವಿರೋಧವಾಗಿ ಗುಣುಗುಟ್ಟುವಂತೆ ಮಾಡಿದ ಹತ್ತು ಜನರು ಯೆಹೋವನಿಂದ ವ್ಯಾಧಿಗೊಳಗಾಗಿ ಸತ್ತರು. 38 ನೂನನ ಮಗನಾದ ಯೆಹೋಶುವನು ಮತ್ತು ಯೆಫುನ್ನೆಯ ಮಗನಾದ ಕಾಲೇಬನ ಹೊರತು ಉಳಿದ ಹತ್ತು ಮಂದಿ ಸತ್ತರು. ಯೆಹೋವನು ಅವರಿಬ್ಬರನ್ನು ಉಳಿಸಿದನು. ಅವರಿಗೆ ವ್ಯಾಧಿಯು ತಗಲಲಿಲ್ಲ.

ಜನರು ಕಾನಾನಿಗೆ ಹೋಗಲು ಪ್ರಯತ್ನಿಸಿದ್ದು

39 ಮೋಶೆಯು ಈ ಎಲ್ಲಾ ಸಂಗತಿಗಳನ್ನು ಇಸ್ರೇಲರಿಗೆಲ್ಲಾ ಹೇಳಲಾಗಿ ಅವರು ಬಹಳ ದುಃಖಪಟ್ಟರು. 40 ಮರುದಿನ ಬೆಳಿಗ್ಗೆ ಜನರು ಎದ್ದು, “ನಾವು ಪಾಪ ಮಾಡಿರುವುದು ನಿಜ. ಯೆಹೋವನು ವಾಗ್ದಾನ ಮಾಡಿರುವ ದೇಶಕ್ಕೆ ಹೋಗಲು ನಾವು ಈಗ ಸಿದ್ಧರಾಗಿದ್ದೇವೆ” ಎಂದು ಹೇಳಿದರು.

41 ಆದರೆ ಮೋಶೆ ಅವರಿಗೆ, “ನೀವು ಯಾಕೆ ಹೀಗೆ ಮಾಡಿ ಯೆಹೋವನ ಆಜ್ಞೆಯನ್ನು ಮೀರುತ್ತೀರಿ? ನೀವು ಯಶಸ್ವಿಯಾಗುವುದಿಲ್ಲ. 42 ಯೆಹೋವನು ನಿಮ್ಮ ಸಂಗಡ ಇರುವುದಿಲ್ಲ. ನೀವು ಆ ದೇಶಕ್ಕೆ ಹೋಗಬೇಡಿರಿ. ಇಲ್ಲವಾದರೆ, ನಿಮ್ಮ ಶತ್ರುಗಳಿಂದ ಸೋಲಿಸಲ್ಪಡುವಿರಿ. 43 ಅಮಾಲೇಕ್ಯರೂ ಕಾನಾನ್ಯರೂ ನಿಮ್ಮನ್ನು ಎದುರಿಸಲು ಅಲ್ಲಿರುವುದರಿಂದ ನೀವು ಅವರ ಖಡ್ಗದಿಂದ ಸಾಯುವಿರಿ. ನೀವು ಯೆಹೋವನಿಗೆ ವಿರೋಧವಾಗಿ ದಂಗೆಯೆದ್ದ ಕಾರಣ ಆತನು ನಿಮ್ಮೊಂದಿಗೆ ಇರುವುದಿಲ್ಲ” ಎಂದು ಹೇಳಿದನು.

44 ಆದರೆ ಜನರು ಮೋಶೆಯ ಮಾತನ್ನು ನಂಬಲಿಲ್ಲ. ಅವರು ಪರ್ವತಪ್ರದೇಶದ ಕಡೆಗೆ ಹೊರಟರು. ಆದರೆ ಮೋಶೆಯೂ ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯೂ ಜನರೊಂದಿಗೆ ಹೋಗಲಿಲ್ಲ. 45 ಆಗ ಬೆಟ್ಟದ ಸೀಮೆಯಲ್ಲಿ ವಾಸವಾಗಿದ್ದ ಅಮಾಲೇಕ್ಯರೂ ಕಾನಾನ್ಯರೂ ಇಳಿದುಬಂದು ಅವರನ್ನು ಸೋಲಿಸಿ ಹೊರ್ಮಾ ಪಟ್ಟಣದವರೆಗೂ ಅಟ್ಟಿಸಿಕೊಂಡುಬಂದು ಸಂಹರಿಸಿದರು.

ಮಾರ್ಕ 5:21-43

ಸತ್ತು ಹೋಗಿದ್ದ ಹುಡುಗಿಯೊಬ್ಬಳಿಗೆ ಜೀವದಾನ ಕಾಯಿಲೆಯ ಸ್ತ್ರೀಗೆ ಆರೋಗ್ಯದಾನ

(ಮತ್ತಾಯ 9:18-26; ಲೂಕ 8:40-56)

21 ಯೇಸು ದೋಣಿಯಲ್ಲಿ ಸರೋವರದ ಆಚೆ ದಡಕ್ಕೆ ಹೋದನು. ಸರೋವರದ ತೀರದಲ್ಲಿ ಅನೇಕ ಜನರು ಆತನ ಸುತ್ತಲೂ ಸೇರಿದರು. 22 ಸಭಾಮಂದಿರದ ಅಧಿಕಾರಿಯೊಬ್ಬನು ಆ ಸ್ಥಳಕ್ಕೆ ಬಂದನು. ಅವನ ಹೆಸರು ಯಾಯಿರ. ಅವನು ಯೇಸುವನ್ನು ಕಂಡು, ಆತನ ಮುಂದೆ ಅಡ್ಡಬಿದ್ದು ನಮಸ್ಕರಿಸಿ, 23 “ನನ್ನ ಚಿಕ್ಕಮಗಳು ಸಾಯುತ್ತಿದ್ದಾಳೆ. ದಯವಿಟ್ಟು ನೀನು ಬಂದು, ನಿನ್ನ ಕೈಗಳಿಂದ ಅವಳನ್ನು ಸ್ಪರ್ಶಿಸು. ಆಗ ಅವಳು ಗುಣವಾಗಿ ಬದುಕಿಕೊಳ್ಳುತ್ತಾಳೆ” ಎಂದು ಬಹಳವಾಗಿ ಬೇಡಿಕೊಂಡನು.

24 ಯೇಸು ಅಧಿಕಾರಿಯೊಂದಿಗೆ ಹೋದನು. ಅನೇಕ ಜನರು ಯೇಸುವನ್ನು ಹಿಂಬಾಲಿಸಿದರು. ಅವರು ಆತನ ಸುತ್ತಲೂ ನೂಕುತ್ತಾ ಹೋದರು.

25 ಆ ಜನರ ನಡುವೆ ಒಬ್ಬ ಸ್ತ್ರೀ ಇದ್ದಳು. ಆಕೆಗೆ ಹನ್ನೆರಡು ವರ್ಷಗಳಿಂದ ರಕ್ತಸ್ರಾವವಾಗುತ್ತಿತ್ತು. 26 ಆಕೆಯು ಬಹಳ ಸಂಕಟಪಟ್ಟಿದ್ದಳು. ಅವಳಿಗೆ ಸಹಾಯ ಮಾಡಲು ಅನೇಕ ವೈದ್ಯರು ಪ್ರಯತ್ನಿಸಿದ್ದರು. ಆಕೆಯಲ್ಲಿದ್ದ ಹಣವೆಲ್ಲವೂ ವೆಚ್ಚವಾಯಿತು. ಆದರೆ ಆಕೆಗೆ ವಾಸಿಯಾಗಲಿಲ್ಲ. ಅವಳ ಕಾಯಿಲೆಯು ಇನ್ನೂ ಹೆಚ್ಚಾಗುತ್ತಿತ್ತು.

27 ಆಕೆಗೆ ಯೇಸುವನ್ನು ಕುರಿತು ತಿಳಿದುಬಂತು. ಆದ್ದರಿಂದ ಆಕೆಯು ಜನರ ಗುಂಪಿನಲ್ಲಿ ಹಿಂದಿನಿಂದ ಬಂದು ಆತನ ಮೇಲಂಗಿಯನ್ನು ಮುಟ್ಟಿದಳು. 28 ಆ ಸ್ತ್ರೀಯು, “ಆತನ ಉಡುಪನ್ನು ಮುಟ್ಟಿದರೆ ಸಾಕು ನಾನು ಗುಣಮುಖಳಾಗುತ್ತೇನೆ” ಎಂದುಕೊಂಡದ್ದರಿಂದ 29 ಮುಟ್ಟಿದ ಕೂಡಲೆ, ಆಕೆಯ ರಕ್ತಸ್ರಾವ ನಿಂತುಹೋಯಿತು. ತನಗೆ ಗುಣವಾಯಿತೆಂಬುದು ಆಕೆಗೆ ಅರಿವಾಯಿತು. 30 ತನ್ನಿಂದ ಶಕ್ತಿಯು ಹೊರಟದ್ದು ಸಹ ಯೇಸುವಿಗೆ ತಿಳಿಯಿತು. ಆತನು ಅಲ್ಲೇ ನಿಂತು ಹಿಂತಿರುಗಿ ನೋಡಿ, “ನನ್ನ ಉಡುಪನ್ನು ಮುಟ್ಟಿದವರು ಯಾರು?” ಎಂದು ಕೇಳಿದನು.

31 ಶಿಷ್ಯರು ಯೇಸುವಿಗೆ, “ಅನೇಕ ಜನರು ನಿನ್ನ ಮೇಲೆ ಬೀಳುತ್ತಿದ್ದಾರೆ. ಹೀಗಿರಲು ‘ನನ್ನನ್ನು ಸ್ಪರ್ಶಿಸಿದವರು ಯಾರು?’ ಎಂದು ಕೇಳುತ್ತಿರುವೆಯಲ್ಲಾ” ಎಂದರು.

32 ಆದರೆ ಯೇಸು ತನ್ನನ್ನು ಸ್ಪರ್ಶಿಸಿದವರು ಯಾರೆಂದು ಇನ್ನೂ ನೋಡುತ್ತಲೇ ಇದ್ದನು. 33 ತನಗೆ ಗುಣವಾಯಿತೆಂಬುದು ಆ ಸ್ತ್ರೀಗೆ ತಿಳಿದಿತ್ತು. ಆದ್ದರಿಂದ ಆಕೆ ಬಂದು, ಯೇಸುವಿನ ಪಾದಗಳ ಮುಂದೆ ಅಡ್ಡಬಿದ್ದು ನಡೆದ ಸಂಗತಿಯನ್ನೆಲ್ಲಾ ಹೇಳಿದಳು. 34 ಯೇಸು ಆಕೆಗೆ, “ಮಗಳೇ, ನಿನ್ನ ನಂಬಿಕೆಯಿಂದಲೇ ನಿನಗೆ ವಾಸಿಯಾಯಿತು. ಸಮಾಧಾನದಿಂದ ಹೋಗು. ನಿನಗೆ ಇನ್ನು ಮೇಲೆ ಆ ಕಾಯಿಲೆಯ ಬಾಧೆ ಇರುವುದಿಲ್ಲ” ಎಂದು ಹೇಳಿದನು.

35 ಯೇಸು ಅಲ್ಲಿ ಇನ್ನೂ ಮಾತನಾಡುತ್ತಿದ್ದನು. ಅಷ್ಟರಲ್ಲಿ ಕೆಲವು ಜನರು ಸಭಾಮಂದಿರದ ಅಧಿಕಾರಿಯಾದ ಯಾಯಿರನ ಮನೆಯಿಂದ ಬಂದು ಯಾಯಿರನಿಗೆ, “ನಿನ್ನ ಮಗಳು ಸತ್ತುಹೋದಳು. ಈಗ ಬೋಧಕನಿಗೆ ತೊಂದರೆ ಕೊಡುವ ಅಗತ್ಯವಿಲ್ಲ” ಎಂದು ಹೇಳಿದರು.

36 ಆದರೆ ಯೇಸು ಅವರ ಮಾತನ್ನು ಗಣನೆಗೆ ತಂದುಕೊಳ್ಳದೆ, ಸಭಾಮಂದಿರದ ಅಧಿಕಾರಿಗೆ, “ಹೆದರಬೇಡ, ನಂಬಿಕೆ ಮಾತ್ರ ಇರಲಿ” ಎಂದು ಹೇಳಿದನು.

37 ಯೇಸು ಪೇತ್ರನನ್ನು, ಯಾಕೋಬನನ್ನು ಮತ್ತು ಯಾಕೋಬನ ತಮ್ಮನಾದ ಯೋಹಾನನನ್ನು ಮಾತ್ರ ತನ್ನ ಜೊತೆಯಲ್ಲಿ ಕರೆದೊಯ್ದನು. 38 ಯೇಸು ಮತ್ತು ಈ ಶಿಷ್ಯರು ಸಭಾಮಂದಿರದ ಅಧಿಕಾರಿಯಾದ ಯಾಯಿರನ ಮನೆಗೆ ಹೋದರು. ಅಲ್ಲಿ ಅನೇಕ ಜನರು ಜೋರಾಗಿ ಅಳುತ್ತಿರುವುದನ್ನು ಯೇಸು ನೋಡಿದನು. ಅಲ್ಲಿ ಬಹಳ ಗದ್ದಲವಿತ್ತು. 39 ಯೇಸು ಮನೆಯನ್ನು ಪ್ರವೇಶಿಸಿ, ಆ ಜನರಿಗೆ, “ನೀವು ಅಳುತ್ತಿರುವುದೇಕೆ? ಇಷ್ಟೊಂದು ಗದ್ದಲ ಮಾಡುತ್ತಿರುವುದೇಕೆ? ಈ ಹುಡುಗಿ ಸತ್ತಿಲ್ಲ, ನಿದ್ರಿಸುತ್ತಿದ್ದಾಳೆ” ಎಂದು ಹೇಳಿದನು. 40 ಆದರೆ ಆ ಜನರೆಲ್ಲರೂ ಯೇಸುವನ್ನು ಗೇಲಿ ಮಾಡಿದರು.

ಯೇಸು ಆ ಜನರೆಲ್ಲರನ್ನು ಹೊರಗೆ ಕಳುಹಿಸಿ, ಆ ಬಾಲಕಿಯ ತಂದೆತಾಯಿಗಳನ್ನು ಮತ್ತು ತನ್ನ ಮೂವರು ಶಿಷ್ಯರನ್ನು ಮಾತ್ರ ತನ್ನೊಂದಿಗೆ ಕರೆದುಕೊಂಡು ಆ ಬಾಲಕಿಯ ಕೊಠಡಿಯೊಳಕ್ಕೆ ಹೋದನು. 41 ಯೇಸು ಆ ಬಾಲಕಿಯ ಕೈ ಹಿಡಿದು, ಅವಳಿಗೆ, “ತಲಿಥಾ ಕೂಮ್!” ಎಂದು ಹೇಳಿದನು. (ಅಂದರೆ “ಚಿಕ್ಕ ಹುಡುಗಿಯೇ, ಎದ್ದೇಳು ಎಂದು ನಾನು ಹೇಳುತ್ತಿದ್ದೇನೆ” ಎಂದರ್ಥ.) 42 ಕೂಡಲೇ ಆ ಬಾಲಕಿ ಎದ್ದುನಿಂತು ನಡೆಯಲಾರಂಭಿಸಿದಳು. ಆ ಬಾಲಕಿಗೆ ಹನ್ನೆರಡು ವರ್ಷ ವಯಸ್ಸಾಗಿತ್ತು. ಅವಳ ತಂದೆತಾಯಿಗಳು ಮತ್ತು ಶಿಷ್ಯರು ಅತ್ಯಾಶ್ಚರ್ಯಗೊಂಡರು. 43 ಈ ವಿಷಯವನ್ನು ಯಾರಿಗೂ ಹೇಳಕೂಡದೆಂದು ಯೇಸು ಆಕೆಯ ತಂದೆತಾಯಿಗಳಿಗೆ ಖಂಡಿತವಾಗಿ ಹೇಳಿ, “ಆ ಬಾಲಕಿಗೆ ಊಟ ಮಾಡಿಸಿರಿ” ಎಂದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International