Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಅರಣ್ಯಕಾಂಡ 7-8

ಪವಿತ್ರಗುಡಾರದ ಪ್ರತಿಷ್ಠೆ

ಮೋಶೆ ಪವಿತ್ರಗುಡಾರದ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿದ ಮೇಲೆ ಅದನ್ನು ಅದರ ವಸ್ತುಗಳೊಡನೆ, ಯಜ್ಞವೇದಿಕೆಯೊಡನೆ ಮತ್ತು ಅದರ ಎಲ್ಲಾ ಉಪಕರಣಗಳೊಡನೆ ಯೆಹೋವನಿಗಾಗಿ ಅಭಿಷೇಕಿಸಿ ಪ್ರತಿಷ್ಠಿಸಿದನು. ಇವು ಯೆಹೋವನ ಆರಾಧನೆಗಾಗಿ ಮಾತ್ರ ಉಪಯೋಗಿಸಲ್ಪಡುತ್ತವೆಂದು ಹೀಗೆ ಪ್ರತ್ಯೇಕಿಸಲ್ಪಟ್ಟವು.

ಬಳಿಕ ಇಸ್ರೇಲಿನ ಪ್ರಧಾನ ಪುರುಷರು, ಅವರ ಕುಟುಂಬಗಳ ನಾಯಕರು ಅಂದರೆ ಜನಗಣತಿಯ ಮೇಲ್ವಿಚಾರಣೆಯನ್ನು ಸಹ ವಹಿಸಿಕೊಂಡಿದ್ದ ಗೋತ್ರಪ್ರಧಾನರು ಮುಂದೆ ಬಂದು, ತಮ್ಮ ಕಾಣಿಕೆಗಳನ್ನು ಸಮರ್ಪಿಸಿದರು. ಇಬ್ಬಿಬ್ಬರು ಆರು ಕಮಾನು ಬಂಡಿಗಳನ್ನೂ ಅವುಗಳನ್ನು ಎಳೆಯುವುದಕ್ಕೆ ಆರು ಜೊತೆ ಎತ್ತುಗಳನ್ನೂ ಕೊಟ್ಟರು. ಪ್ರಧಾನರು ಇವುಗಳನ್ನು ಪವಿತ್ರಗುಡಾರದಲ್ಲಿ ಯೆಹೋವನಿಗೆ ಒಪ್ಪಿಸಿದರು.

ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: “ಪ್ರಧಾನರಿಂದ ಈ ಕಾಣಿಕೆಗಳನ್ನು ಸ್ವೀಕರಿಸು. ಇವು ದೇವದರ್ಶನಗುಡಾರದ ವರ್ಗಾವಣೆಗೆ ಉಪಯೋಗಿಸಲ್ಪಡಲಿ. ಇವುಗಳನ್ನು ಲೇವಿಯರಿಗೆ ಕೊಡು. ಅವರು ತಮ್ಮ ಕೆಲಸಗಳನ್ನು ಮಾಡಲು ಇದು ಸಹಾಯ ಮಾಡುವುದು.”

ಆದ್ದರಿಂದ ಮೋಶೆಯು ಆ ಬಂಡಿಗಳನ್ನೂ ಎತ್ತುಗಳನ್ನೂ ಸ್ವೀಕರಿಸಿ ಅವುಗಳನ್ನು ಲೇವಿಯರಿಗೆ ಕೊಟ್ಟನು. ಅವನು ಗೇರ್ಷೋನ್ ಗೋತ್ರಪುರುಷರಿಗೆ ಅವರ ಕೆಲಸಕ್ಕೆ ಅಗತ್ಯವಾಗಿದ್ದ ಎರಡು ಬಂಡಿಗಳನ್ನು ಮತ್ತು ಎರಡು ಜೊತೆ ಎತ್ತುಗಳನ್ನು ಕೊಟ್ಟನು. ಬಳಿಕ ಮೆರಾರೀಯರ ಕೆಲಸಕ್ಕೆ ಬೇಕಾಗಿದ್ದ ನಾಲ್ಕು ಬಂಡಿಗಳನ್ನೂ ನಾಲ್ಕು ಜೊತೆ ಎತ್ತುಗಳನ್ನೂ ಅವರಿಗೆ ಕೊಟ್ಟನು. ಇವರೆಲ್ಲರು ಮಾಡುವ ಕೆಲಸಕ್ಕೆ ಯಾಜಕನಾದ ಆರೋನನ ಮಗನಾದ ಈತಾಮಾರನು ಮೇಲ್ವಿಚಾರಕನಾಗಿದ್ದನು. ಮೋಶೆಯು ಕೆಹಾತ್ಯರಿಗೆ ಎತ್ತುಗಳನ್ನಾಗಲಿ ಬಂಡಿಗಳನ್ನಾಗಲಿ ಕೊಡಲಿಲ್ಲ. ಯಾಕೆಂದರೆ ಅವರು ಪವಿತ್ರವಸ್ತುಗಳನ್ನು ತಮ್ಮ ಭುಜದ ಮೇಲೆ ಹೊರಬೇಕು. ಅವರಿಗೆ ಈ ಕೆಲಸವು ಕೊಡಲ್ಪಟ್ಟಿತು.

10 ವೇದಿಕೆಯು ಅಭಿಷೇಕಿಸಲ್ಪಟ್ಟಾಗ, ಯಜ್ಞವೇದಿಕೆಯ ಆರಂಭಕ್ಕಾಗಿ ಪ್ರಧಾನರು ಸಹ ತಮ್ಮ ಕಾಣಿಕೆಗಳನ್ನು ವೇದಿಕೆಯ ಮುಂದೆ ತಂದರು. 11 ಯೆಹೋವನು ಮೋಶೆಗೆ, “ಪ್ರತಿದಿನ ಒಬ್ಬ ಪ್ರಧಾನನು ವೇದಿಕೆಯ ಪ್ರತಿಷ್ಠೆಗಾಗಿ ತನ್ನ ಕಾಣಿಕೆಯನ್ನು ತರಬೇಕು” ಎಂದು ಆಜ್ಞಾಪಿಸಿದನು.

12-83 ಹನ್ನೆರಡು ಪ್ರಧಾನರಲ್ಲಿ ಪ್ರತಿಯೊಬ್ಬನೂ ತನ್ನ ಕಾಣಿಕೆಯನ್ನು ತಂದನು. ಅವರು ಕೊಟ್ಟ ಕಾಣಿಕೆಗಳು ಹೀಗಿವೆ:

ಪ್ರತಿಯೊಬ್ಬ ಪ್ರಧಾನನು ಮೂರುಕಾಲು ಪೌಂಡು ತೂಕವುಳ್ಳ ಬೆಳ್ಳಿಯ ತಟ್ಟೆಯನ್ನೂ ಒಂದು ಮುಕ್ಕಾಲು ಪೌಂಡು ತೂಕವುಳ್ಳ ಬೆಳ್ಳಿಯ ಬಟ್ಟಲನ್ನೂ ತಂದನು. ಇವೆರಡನ್ನೂ ಅಧಿಕೃತ ಅಳತೆಯಿಂದ ತೂಕ ಮಾಡಲಾಯಿತು. ಧಾನ್ಯಸಮರ್ಪಣೆಗಾಗಿ ಉಪಯೋಗವಾಗುವ ಎಣ್ಣೆ ಬೆರೆಸಿದ ಶ್ರೇಷ್ಠ ಗೋಧಿಹಿಟ್ಟನ್ನು ಬಟ್ಟಲಲ್ಲಿ ಮತ್ತು ತಟ್ಟೆಯಲ್ಲಿ ತುಂಬಿಡಲಾಗಿತ್ತು.

ಧೂಪದ್ರವ್ಯ ತುಂಬಿದ್ದ ನಾಲ್ಕು ತೊಲೆ ತೂಕವುಳ್ಳ ಚಿನ್ನದ ಧೂಪಾರತಿಯನ್ನೂ ಒಂದು ಎಳೆಯ ಹೋರಿಯನ್ನೂ ಸರ್ವಾಂಗಹೋಮಕ್ಕಾಗಿ ಒಂದು ಹೋರಿಯನ್ನೂ ಒಂದು ಟಗರನ್ನೂ ಒಂದು ವರ್ಷದ ಗಂಡು ಕುರಿಮರಿಯನ್ನೂ ದೋಷಪರಿಹಾರಕ ಯಜ್ಞಕ್ಕಾಗಿ ಒಂದು ಹೋತವನ್ನೂ ಸಮಾಧಾನಯಜ್ಞಕ್ಕಾಗಿ ಎರಡು ಎತ್ತುಗಳನ್ನೂ ಐದು ಟಗರುಗಳನ್ನೂ ಐದು ಹೋತಗಳನ್ನೂ ಒಂದು ವರ್ಷದ ಐದು ಗಂಡು ಕುರಿಮರಿಗಳನ್ನೂ ಪ್ರತಿಯೊಬ್ಬ ಯಾಜಕನೂ ತಂದನು. ಇವೆಲ್ಲವೂ ಯಜ್ಞವಾಗಿ ಸಮರ್ಪಿಸಲ್ಪಟ್ಟವು.

ಮೊದಲನೆಯ ದಿನದಲ್ಲಿ ಯೆಹೂದ ಕುಲಾಧಿಪತಿ ಅಮ್ಮೀನಾದಾಬನ ಮಗನಾದ ನಹಶೋನನು ತನ್ನ ಕಾಣಿಕೆಗಳನ್ನು ತಂದನು.

ಎರಡನೆಯ ದಿನದಲ್ಲಿ ಇಸ್ಸಾಕಾರ್ ಕುಲಾಧಿಪತಿ ಚೂವಾರನ ಮಗನಾದ ನೆತನೇಲನು ತನ್ನ ಕಾಣಿಕೆಗಳನ್ನು ತಂದನು.

ಮೂರನೆಯ ದಿನದಲ್ಲಿ ಜೆಬುಲೂನ್ ಕುಲಾಧಿಪತಿ ಹೇಲೋನನ ಮಗನಾದ ಎಲೀಯಾಬನು ತನ್ನ ಕಾಣಿಕೆಗಳನ್ನು ತಂದನು.

ನಾಲ್ಕನೆಯ ದಿನದಲ್ಲಿ ರೂಬೇನ್ ಕುಲಾಧಿಪತಿ ಶೆದೇಯೂರನ ಮಗನಾದ ಎಲೀಚೂರನು ತನ್ನ ಕಾಣಿಕೆಗಳನ್ನು ತಂದನು.

ಐದನೆಯ ದಿನದಲ್ಲಿ ಸಿಮೆಯೋನ್ ಕುಲಾಧಿಪತಿ ಚೂರೀಷದ್ದೈಯ ಮಗನಾದ ಶೆಲುಮೀಯೇಲನು ತನ್ನ ಕಾಣಿಕೆಗಳನ್ನು ತಂದನು.

ಆರನೆಯ ದಿನದಲ್ಲಿ ಗಾದ್ ಕುಲಾಧಿಪತಿ ದೆಗೂವೇಲನ ಮಗನಾದ ಎಲ್ಯಾಸಾಫನು ತನ್ನ ಕಾಣಿಕೆಗಳನ್ನು ತಂದನು.

ಏಳನೆಯ ದಿನದಲ್ಲಿ ಎಫ್ರಾಯೀಮ್ ಕುಲಾಧಿಪತಿ ಅಮ್ಮೀಹೂದನ ಮಗನಾದ ಎಲೀಷಾಮನು ತನ್ನ ಕಾಣಿಕೆಗಳನ್ನು ತಂದನು.

ಎಂಟನೆಯ ದಿನದಲ್ಲಿ ಮನಸ್ಸೆ ಕುಲಾಧಿಪತಿ ಪೆದಾಚೂರನ ಮಗನಾದ ಗಮ್ಲೀಯೇಲನು ತನ್ನ ಕಾಣಿಕೆಗಳನ್ನು ತಂದನು.

ಒಂಭತ್ತನೆಯ ದಿನದಲ್ಲಿ ಬೆನ್ಯಾಮೀನ್ ಕುಲಾಧಿಪತಿ ಗಿದ್ಯೋನಿಯ ಮಗನಾದ ಅಬೀದಾನನು ತನ್ನ ಕಾಣಿಕೆಗಳನ್ನು ತಂದನು.

ಹತ್ತನೆಯ ದಿನದಲ್ಲಿ ದಾನ್ ಕುಲಾಧಿಪತಿ ಅಮ್ಮೀಷದ್ದೈನ ಮಗನಾದ ಅಹೀಗೆಜರನು ತನ್ನ ಕಾಣಿಕೆಗಳನ್ನು ತಂದನು.

ಹನ್ನೊಂದನೆಯ ದಿನದಲ್ಲಿ ಆಶೇರ್ ಕುಲಾಧಿಪತಿ ಒಕ್ರಾನನ ಮಗನಾದ ಪಗೀಯೇಲನು ತನ್ನ ಕಾಣಿಕೆಗಳನ್ನು ತಂದನು.

ಹನ್ನೆರಡನೆಯ ದಿನದಲ್ಲಿ ನಫ್ತಾಲಿ ಕುಲಾಧಿಪತಿ ಏನಾನನ ಮಗನಾದ ಅಹೀರನು ತನ್ನ ಕಾಣಿಕೆಗಳನ್ನು ತಂದನು.

84 ಇವೆಲ್ಲವೂ ಇಸ್ರೇಲರ ಪ್ರಧಾನರು ತಂದ ಕಾಣಿಕೆಗಳು. ಯಜ್ಞವೇದಿಕೆಯನ್ನು ಅಭಿಷೇಕಿಸಿ ಪ್ರತಿಷ್ಠಿಸಿದಾಗ ಯಜ್ಞವೇದಿಕೆಗೋಸ್ಕರ ಅವರು ಕೊಟ್ಟ ಕಾಣಿಕೆಗಳು ಇವುಗಳೇ. ಅವರು ಹನ್ನೆರಡು ಬೆಳ್ಳಿಯ ತಟ್ಟೆಗಳನ್ನೂ ಹನ್ನೆರಡು ಬೆಳ್ಳಿಯ ಬಟ್ಟಲುಗಳನ್ನೂ ಹನ್ನೆರಡು ಚಿನ್ನದ ಧೂಪಾರತಿಗಳನ್ನೂ ತಂದರು. 85 ಪ್ರತಿಯೊಂದು ಬೆಳ್ಳಿಯ ತಟ್ಟೆಯ ತೂಕ ಸುಮಾರು ಮೂರುಕಾಲು ಪೌಂಡುಗಳು, ಪ್ರತಿ ಬಟ್ಟಲು ಸುಮಾರು ಮೂರುಮುಕ್ಕಾಲು ಪೌಂಡು ತೂಕವುಳ್ಳದ್ದಾಗಿದ್ದವು. ಬೆಳ್ಳಿಯ ತಟ್ಟೆಗಳು ಮತ್ತು ಬೆಳ್ಳಿಯ ಬಟ್ಟಲುಗಳು ಒಟ್ಟಿಗೆ ಅಧಿಕೃತ ಅಳತೆಯ ಪ್ರಕಾರ ಅರವತ್ತು ಪೌಂಡುಗಳಷ್ಟು ತೂಕವಾಗಿದ್ದವು. 86 ಧೂಪವುಳ್ಳ ಹನ್ನೆರಡು ಚಿನ್ನದ ಧೂಪಾರತಿಗಳಲ್ಲಿ ಪ್ರತಿಯೊಂದು ಧೂಪಾರತಿ ಅಧಿಕೃತ ಅಳತೆಯ ಪ್ರಕಾರ ಹತ್ತು ತೊಲೆ ತೂಕವುಳ್ಳದ್ದಾಗಿತ್ತು. ಹನ್ನೆರಡು ಚಿನ್ನದ ಧೂಪಾರತಿಗಳು ಒಟ್ಟಿಗೆ ನೂರಿಪ್ಪತ್ತು ತೊಲೆಗಳಷ್ಟು ತೂಕವುಳ್ಳದ್ದಾಗಿದ್ದವು.

87 ಸರ್ವಾಂಗಹೋಮಕ್ಕಾಗಿ ಉಪಯೋಗಿಸಲ್ಪಟ್ಟ ಒಟ್ಟು ಪಶುಗಳು: ಹನ್ನೆರಡು ಹೋರಿಗಳು, ಹನ್ನೆರಡು ಟಗರುಗಳು, ಒಂದು ವರ್ಷದ ಎರಡು ಗಂಡು ಕುರಿಮರಿಗಳು. ಆ ಸಮರ್ಪಣೆಗಳೊಂದಿಗೆ ಧಾನ್ಯಸಮರ್ಪಣೆಗಳೂ ಅರ್ಪಿಸಲ್ಪಟ್ಟವು. ದೋಷಪರಿಹಾರಕ ಯಜ್ಞವಾಗಿ ಹನ್ನೆರಡು ಹೋತಗಳು ಯೆಹೋವನಿಗೆ ಸಮರ್ಪಿಸಲ್ಪಟ್ಟವು. 88 ಸಮಾಧಾನಯಜ್ಞಕ್ಕಾಗಿಯೂ ಪ್ರಧಾನರು ಪಶುಗಳನ್ನು ಕೊಟ್ಟರು. ಅವುಗಳ ಒಟ್ಟು ಸಂಖ್ಯೆ ಇಪ್ಪತ್ನಾಲ್ಕು ಹೋರಿಗಳು, ಅರವತ್ತು ಟಗರುಗಳು, ಅರವತ್ತು ಹೋತಗಳು, ಒಂದು ವರ್ಷದ ಅರವತ್ತು ಗಂಡು ಕುರಿಮರಿಗಳು. ಯಜ್ಞವೇದಿಕೆಯನ್ನು ಅಭಿಷೇಕಿಸಿ ಪ್ರತಿಷ್ಠಿಸಿದಾಗ ಅದಕೋಸ್ಕರ ಅವರು ಕೊಟ್ಟ ಕಾಣಿಕೆಗಳು ಇವೇ.

89 ಮೋಶೆ ಯೆಹೋವನ ಸಂಗಡ ಮಾತಾಡಲು ದೇವದರ್ಶನಗುಡಾರದೊಳಗೆ ಹೋದಾಗ, ಒಡಂಬಡಿಕೆಯ ಪವಿತ್ರ ಪೆಟ್ಟಿಗೆಯ ಹೊದಿಕೆಯ ಮೇಲಿದ್ದ ಎರಡು ಕೆರೂಬಿಗಳ ಮಧ್ಯದಿಂದ ಯೆಹೋವನ ಸ್ವರವು ಮೋಶೆಗೆ ಕೇಳಿಸಿತು. ಹೀಗೆ ಆತನು ಅವನ ಸಂಗಡ ಮಾತಾಡಿದನು.

ದೀಪಸ್ತಂಭ

ಯೆಹೋವನು ಮೋಶೆಗೆ, “ಆರೋನನು ಪವಿತ್ರಗುಡಾರದಲ್ಲಿ ದೀಪಸ್ತಂಭದ ಮೇಲಿನ ದೀಪಗಳನ್ನು ಕ್ರಮಪಡಿಸಲು ಹೇಳು. ಆಗ ದೀಪಸ್ತಂಭದ ಮುಂದಿನ ಸ್ಥಳದಲ್ಲಿ ಬೆಳಕು ಪ್ರಕಾಶಿಸುವುದು” ಎಂದು ಹೇಳಿದನು.

ಅಂತೆಯೇ ಆರೋನನು ಮಾಡಿದನು. ಆರೋನನು ದೀಪಗಳನ್ನು ಸರಿಯಾದ ಸ್ಥಳದಲ್ಲಿಟ್ಟು ಅವುಗಳು ದೀಪಸ್ತಂಭದ ಎದುರಿನಲ್ಲಿ ಪ್ರಕಾಶಿಸುವಂತೆ ಮಾಡಿದನು. ಹೀಗೆ ಯೆಹೋವನು ಹೇಳಿದಂತೆಯೇ ಮೋಶೆಯು ಮಾಡಿದನು. ಆ ದೀಪಸ್ತಂಭವನ್ನು ಅದರ ಬುಡದಿಂದ ಪುಷ್ಪಾಲಂಕಾರಗಳವರೆಗೂ ಸಂಪೂರ್ಣವಾಗಿ ಚಿನ್ನದ ತಗಡಿನಿಂದ ಮಾಡಲಾಗಿತ್ತು. ಯೆಹೋವನು ಮೋಶೆಗೆ ತೋರಿಸಿದ ಮಾದರಿಯಂತೆ ಅದು ಮಾಡಲ್ಪಟ್ಟಿತ್ತು.

ಲೇವಿಯರ ಶುದ್ಧೀಕರಣ

ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: “ಇಸ್ರೇಲರಿಂದ ಲೇವಿಯರನ್ನು ಪ್ರತ್ಯೇಕಿಸಿ ಶುದ್ಧೀಕರಿಸು. ಅವರನ್ನು ಶುದ್ಧೀಕರಿಸುವ ಕ್ರಮ ಹೇಗೆಂದರೆ, ನೀನು ಅವರ ಮೇಲೆ ದೋಷಪರಿಹಾರಕ ಜಲವನ್ನು ಚಿಮಿಕಿಸಬೇಕು. ಬಳಿಕ ಅವರು ಸರ್ವಾಂಗಕ್ಷೌರ ಮಾಡಿಸಿಕೊಂಡು ತಮ್ಮ ಬಟ್ಟೆಗಳನ್ನು ತೊಳೆದುಕೊಳ್ಳಬೇಕು. ಹೀಗೆ ತಮ್ಮನ್ನು ಶುದ್ಧಪಡಿಸಿಕೊಳ್ಳಬೇಕು.

“ತರುವಾಯ ಲೇವಿಯರು ಸರ್ವಾಂಗಹೋಮಕ್ಕಾಗಿ ಒಂದು ಎಳೆಹೋರಿಯನ್ನು ಮತ್ತು ಅದರೊಡನೆ ಸಮರ್ಪಿಸಬೇಕಾದ ಧಾನ್ಯಸಮರ್ಪಣೆಗಾಗಿ ಎಣ್ಣೆ ಬೆರೆಸಿದ ಗೋಧಿಯಹಿಟ್ಟನ್ನು ತೆಗೆದುಕೊಂಡು ಬರಬೇಕು; ನೀನು ಅವರಿಂದ ದೋಷಪರಿಹಾರಕ ಯಜ್ಞಕ್ಕಾಗಿ ಮತ್ತೊಂದು ಎಳೆಹೋರಿಯನ್ನು ತೆಗೆದುಕೊಳ್ಳಬೇಕು. ಲೇವಿಯರನ್ನು ದೇವದರ್ಶನಗುಡಾರದ ಮುಂಭಾಗಕ್ಕೆ ಕರೆದುಕೊಂಡು ಬಂದು ಇಸ್ರೇಲರನ್ನು ಒಟ್ಟಾಗಿ ಸೇರಿಸು. 10 ನೀನು ಲೇವಿಯರನ್ನು ಯೆಹೋವನ ಮುಂದೆ ಕರೆದುಕೊಂಡು ಬಂದಾಗ ಇಸ್ರೇಲರು ತಮ್ಮ ಕೈಗಳನ್ನು ಅವರ ತಲೆಯ ಮೇಲಿಡುವರು. 11 ಆಗ ಆರೋನನು ಲೇವಿಯರನ್ನು ಯೆಹೋವನಿಗೆ ಇಸ್ರೇಲರ ಕಾಣಿಕೆಯಾಗಿ ಕೊಡುವನು. ಈ ರೀತಿಯಾಗಿ ಲೇವಿಯರು ಯೆಹೋವನ ಪರಿಚರ್ಯ ಕೆಲಸಕ್ಕಾಗಿ ಸಿದ್ಧರಾಗುವರು.

12 “ಲೇವಿಯರು ಆ ಹೋರಿಗಳ ತಲೆಯ ಮೇಲೆ ತಮ್ಮ ಕೈಗಳನ್ನಿಟ್ಟ ನಂತರ, ನೀನು ಯೆಹೋವನಿಗೆ ದೋಷಪರಿಹಾರಕ ಯಜ್ಞವಾಗಿ ಒಂದು ಹೋರಿಯನ್ನೂ ಸರ್ವಾಂಗಹೋಮವಾಗಿ ಇನ್ನೊಂದು ಹೋರಿಯನ್ನೂ ಸಮರ್ಪಿಸಬೇಕು. ಇವು ಲೇವಿಯರಿಗೆ ನೈವೇದ್ಯದ ಸಮರ್ಪಣೆಗಳಾಗಿವೆ. 13 ಈ ರೀತಿಯಲ್ಲಿ ನೀನು ಲೇವಿಯರನ್ನು ಆರೋನ ಮತ್ತು ಅವನ ಪುತ್ರರ ಅಧೀನದಲ್ಲಿ ಸೇವೆ ಮಾಡುವಂತೆ ಮಾಡುವೆ ಮತ್ತು ಲೇವಿಯರನ್ನು ಯೆಹೋವನಿಗೆ ವಿಶೇಷ ಕೊಡುಗೆಯಾಗಿ ಸಲ್ಲಿಸುವೆ. 14 ನೀನು ಲೇವಿಯರನ್ನು ಇತರ ಇಸ್ರೇಲರಿಂದ ಪ್ರತ್ಯೇಕಿಸಬೇಕು. ಲೇವಿಯರು ನನ್ನ ಆಸ್ತಿಯಾಗಿದ್ದಾರೆ.

15 “ನೀನು ಲೇವಿಯರನ್ನು ಶುದ್ಧೀಕರಿಸಿ ಅವರನ್ನು ವಿಶೇಷ ಕೊಡುಗೆಯಾಗಿ ನನಗೆ ಕೊಟ್ಟ ಮೇಲೆ, ಅವರು ಬಂದು ದೇವದರ್ಶನಗುಡಾರದ ಕೆಲಸವನ್ನು ಮಾಡಬಹುದು. 16 ಯಾಕೆಂದರೆ ಲೇವಿಯರು ಇಸ್ರೇಲರ ಮಧ್ಯದಿಂದ ನನಗಾಗಿ ಸಂಪೂರ್ಣವಾಗಿ ಪ್ರತಿಷ್ಠಿತರಾಗಿದ್ದಾರೆ. ಇಸ್ರೇಲರ ಚೊಚ್ಚಲು ಗಂಡುಮಕ್ಕಳಿಗೆ ಬದಲಾಗಿ ನಾನು ಇವರನ್ನೇ ನನ್ನ ಸ್ವಂತಕ್ಕಾಗಿ ತೆಗೆದುಕೊಂಡಿದ್ದೇನೆ. 17 ಇಸ್ರೇಲರಲ್ಲಿ ಚೊಚ್ಚಲಾದ ಮನುಷ್ಯರೂ ಪಶುಗಳೂ ನನ್ನ ಸ್ವತ್ತಾಗಿರುವರು. ಈಜಿಪ್ಟ್ ದೇಶದಲ್ಲಿದ್ದ ಚೊಚ್ಚಲಾದದ್ದನ್ನೆಲ್ಲ ನಾನು ಸಂಹರಿಸಿದಾಗ ಇಸ್ರೇಲರ ಚೊಚ್ಚಲಾದದ್ದನ್ನು ನನ್ನ ಸ್ವಂತಕ್ಕಾಗಿ ಪ್ರತಿಷ್ಠಿಸಿಕೊಂಡೆನಲ್ಲಾ. 18 ಆದರೆ ಈಗ ನಾನು ಇಸ್ರೇಲರ ಚೊಚ್ಚಲು ಗಂಡುಮಕ್ಕಳಿಗೆ ಬದಲಾಗಿ ಲೇವಿಯರನ್ನು ತೆಗೆದುಕೊಳ್ಳುವೆನು. 19 ಇಸ್ರೇಲರ ಮಧ್ಯದಿಂದ ನಾನು ಲೇವಿಯರನ್ನು ಆರಿಸಿಕೊಂಡಿದ್ದೇನೆ ಮತ್ತು ದೇವದರ್ಶನಗುಡಾರದಲ್ಲಿ ಇಸ್ರೇಲರ ಪರವಾಗಿ ಕೆಲಸ ಮಾಡಲೂ ಮತ್ತು ಇಸ್ರೇಲರಿಗೆ ದೋಷಪರಿಹಾರ ಮಾಡುವುದಕ್ಕೂ ನಾನು ಅವರನ್ನು ಆರೋನ ಮತ್ತು ಅವನ ಪುತ್ರರಿಗೆ ಒಪ್ಪಿಸಿಕೊಟ್ಟಿದ್ದೇನೆ. ಇಸ್ರೇಲರನ್ನು ಶುದ್ಧಿಗೊಳಿಸುವ ಯಜ್ಞಗಳನ್ನು ಸಮರ್ಪಿಸುವುದಕ್ಕೆ ಅವರು ಸಹಾಯ ಮಾಡುವರು. ಹೀಗಿರುವುದರಿಂದ ಇಸ್ರೇಲರು ಪವಿತ್ರವಸ್ತುಗಳ ಅತೀ ಸಮೀಪಕ್ಕೆ ಬಂದರೂ ಅವರಿಗೆ ಅಪಾಯವು ಸಂಭವಿಸುವುದಿಲ್ಲ.”

20 ಯೆಹೋವನು ಲೇವಿಯರ ವಿಷಯದಲ್ಲಿ ಆಜ್ಞಾಪಿಸಿದಂತೆ ಮೋಶೆ ಆರೋನರೂ ಇಸ್ರೇಲರ ಸಮೂಹದವರೆಲ್ಲರೂ ಮಾಡಿದರು. 21 ಲೇವಿಯರು ತಮ್ಮನ್ನು ಶುದ್ಧಮಾಡಿಕೊಂಡು ಬಟ್ಟೆಗಳನ್ನು ಒಗೆದುಕೊಂಡರು. ಬಳಿಕ ಆರೋನನು ಅವರನ್ನು ಯೆಹೋವನಿಗೆ ವಿಶೇಷ ಕೊಡುಗೆಯಾಗಿ ಕೊಟ್ಟನು. ಆರೋನನು ಅವರನ್ನು ಶುದ್ಧೀಕರಿಸುವುದಕ್ಕಾಗಿ ದೋಷಪರಿಹಾರ ಮಾಡಿದನು. 22 ಆಗ ಲೇವಿಯರು ದೇವದರ್ಶನಗುಡಾರದಲ್ಲಿ ಆರೋನನ ಮತ್ತು ಅವನ ಪುತ್ರರ ಮೇಲ್ವಿಚಾರಣೆಯಲ್ಲಿ ಕೆಲಸ ಮಾಡಲು ಅರ್ಹರಾದರು. ಯೆಹೋವನು ಮೋಶೆಗೆ ಲೇವಿಯರ ಬಗ್ಗೆ ಆಜ್ಞಾಪಿಸಿದ್ದಂತೆಯೇ ಅವರಿಗೆ ಮಾಡಲಾಯಿತು.

23 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 24 “ಲೇವಿಯರು ಅನುಸರಿಸಬೇಕಾದ ಪದ್ಧತಿ ಏನೆಂದರೆ: ಲೇವಿಯರಲ್ಲಿ ಇಪ್ಪತ್ತೈದು ವರ್ಷಕ್ಕಿಂತ ಹೆಚ್ಚು ವಯಸ್ಸಾಗಿರುವ ಗಂಡಸರು ದೇವದರ್ಶನಗುಡಾರದ ಸೇವೆಯ ದಳದಲ್ಲಿ ಕೆಲಸಮಾಡಲು ಯೋಗ್ಯರಾಗಿದ್ದಾರೆ. 25 ಅವರ ವಯಸ್ಸು ಐವತ್ತು ವರ್ಷವಾದ ನಂತರ ಸೇವೆಯಿಂದ ನಿವೃತ್ತರಾಗಬೇಕು; ಪವಿತ್ರ ಗುಡಾರವನ್ನು ವರ್ಗಾವಣೆ ಮಾಡುವ ಭಾರವಾದ ಕೆಲಸವನ್ನು ಅವರೆಂದಿಗೂ ಮಾಡಕೂಡದು. 26 ಅವರು ಕಾವಲುಗಾರರಾಗಿ ದೇವದರ್ಶನಗುಡಾರದ ಬಳಿ ಇತರ ಲೇವಿಯರಿಗೆ ಸಹಾಯ ಮಾಡಬಹುದೇ ಹೊರತು ಭಾರವಾದ ಕೆಲಸವನ್ನು ಮಾಡಲೇಕೂಡದು. ನೀನು ಈ ರೀತಿಯಲ್ಲಿ ಲೇವಿಯರಿಗೆ ಕೆಲಸವನ್ನು ಹಂಚಿಕೊಡಬೇಕು.”

ಮಾರ್ಕ 4:21-41

ಉರಿಯುವ ದೀಪದಂತಿರಿ

(ಲೂಕ 8:16-18)

21 ನಂತರ ಯೇಸು ಅವರಿಗೆ, “ನೀವು ಉರಿಯುತ್ತಿರುವ ದೀಪವನ್ನು ಪಾತ್ರೆಯ ಒಳಗಾಗಲಿ ಮಂಚದ ಕೆಳಗಾಗಲಿ ಇಡುತ್ತೀರಾ? ಇಲ್ಲ! ದೀಪವನ್ನು ದೀಪಸ್ತಂಭದ ಮೇಲೆ ಇಡುವಿರಿ. 22 ಆಗ ಪ್ರತಿಯೊಂದೂ ಸ್ಪಷ್ಟವಾಗಿ ಗೋಚರವಾಗುವುದು. ರಹಸ್ಯವಾದ ಪ್ರತಿಯೊಂದೂ ಬಟ್ಟಬಯಲಾಗುವುದು. 23 ನನ್ನ ಮಾತುಗಳನ್ನು ಕೇಳುತ್ತಿರುವ ಜನರೇ, ಆಲಿಸಿರಿ! 24 ನೀವು ಕೇಳುತ್ತಿರುವ ಪ್ರತಿಯೊಂದು ವಿಷಯವನ್ನು ಎಚ್ಚರಿಕೆಯಿಂದ ಆಲೋಚಿಸಿರಿ. ನೀವು ಅಳೆಯುವ ಅಳತೆಯಿಂದಲೇ ನಿಮಗೂ ಅಳೆಯುವರು; ನೀವು ಕೊಟ್ಟದ್ದಕ್ಕಿಂತ ಹೆಚ್ಚಾಗಿ ಕೊಡುವರು. 25 ಯಾವನಲ್ಲಿ ಹೆಚ್ಚಾಗಿರುತ್ತದೆಯೋ ಅವನಿಗೆ ಇನ್ನೂ ಕೊಡಲಾಗುವುದು. ಯಾವನಲ್ಲಿ ಇರುವುದಿಲ್ಲವೋ ಅವನಿಂದ ಇದ್ದದ್ದನ್ನೂ ತೆಗೆದುಕೊಳ್ಳಲಾಗುವುದು” ಎಂದು ಹೇಳಿದನು.

ಬಿತ್ತಲ್ಪಟ್ಟ ಬೀಜವನ್ನು ಕುರಿತು ಯೇಸು ಹೇಳಿದ ಸಾಮ್ಯ

26 ನಂತರ ಯೇಸು, “ದೇವರ ರಾಜ್ಯವು ಭೂಮಿಯಲ್ಲಿ ಬೀಜ ಬಿತ್ತಿದ ಮನುಷ್ಯನಂತಿದೆ. 27 ಬೀಜವು ಹಗಲಿರುಳು ಬೆಳೆಯುತ್ತದೆ. ರೈತನು ಮಲಗಿರುವಾಗಲೂ ಎಚ್ಚರದಿಂದಿರುವಾಗಲೂ ಬೀಜ ಬೆಳೆಯುತ್ತಲೇ ಇರುವುದು. ಬೀಜ ಹೇಗೆ ಬೆಳೆಯುತ್ತದೆಂಬುದು ರೈತನಿಗೆ ತಿಳಿಯುವುದಿಲ್ಲ. 28 ಭೂಮಿಯು ಮೊದಲು ಸಸಿಯನ್ನೂ ಅನಂತರ ಹೊಡೆಯನ್ನೂ ತರುವಾಯ ತೆನೆತುಂಬ ಕಾಳನ್ನೂ ತನ್ನಷ್ಟಕ್ಕೇ ತಾನೇ ಉತ್ಪತ್ತಿಮಾಡುತ್ತದೆ. 29 ತೆನೆಯು ಬಲಿತಾಗ ರೈತನು ಗಿಡವನ್ನು ಕೊಯ್ಯುವನು. ಇದನ್ನೇ ಸುಗ್ಗಿಕಾಲ ಎನ್ನುವರು” ಎಂದು ಹೇಳಿದನು.

ದೇವರ ರಾಜ್ಯವು ಸಾಸಿವೆ ಕಾಳಿನಂತಿದೆ

(ಮತ್ತಾಯ 13:31-32,34-35; ಲೂಕ 13:18-19)

30 ನಂತರ ಯೇಸು, “ದೇವರ ರಾಜ್ಯದ ಬಗ್ಗೆ ವಿವರಿಸಲು ನಾನು ನಿಮಗೆ ಯಾವ ಸಾಮ್ಯವನ್ನು ಹೇಳಲಿ? 31 ದೇವರ ರಾಜ್ಯವು ಸಾಸಿವೆ ಕಾಳಿನಂತಿರುತ್ತದೆ. ನೀವು ಭೂಮಿಯಲ್ಲಿ ಬಿತ್ತುವ ಕಾಳುಗಳಲ್ಲಿ ಸಾಸಿವೆ ಕಾಳು ಅತ್ಯಂತ ಸಣ್ಣದಾಗಿದೆ. 32 ಆದರೆ ನೀವು ಈ ಕಾಳನ್ನು ಬಿತ್ತಿದಾಗ, ಅದು ಬೆಳೆದು, ನಿಮ್ಮ ತೋಟದ ಇತರ ಗಿಡಗಳಿಗಿಂತ ಅತಿ ದೊಡ್ಡದಾಗುತ್ತದೆ. ಅದಕ್ಕೆ ದೊಡ್ಡದೊಡ್ಡ ರೆಂಬೆಗಳಿರುತ್ತವೆ. ಕಾಡಿನ ಹಕ್ಕಿಗಳು ಬಂದು, ಅಲ್ಲಿ ಗೂಡುಗಳನ್ನು ಕಟ್ಟಿಕೊಂಡು ಸೂರ್ಯನ ತಾಪದಿಂದ ತಪ್ಪಿಸಿಕೊಳ್ಳುತ್ತವೆ” ಎಂದು ಹೇಳಿದನು.

33 ಯೇಸು ಇಂಥ ಅನೇಕ ಸಾಮ್ಯಗಳ ಮೂಲಕ ಜನರಿಗೆ ಅರ್ಥವಾಗುವಂತೆ ಉಪದೇಶಿಸಿದನು. 34 ಯೇಸುವು ಜನರಿಗೆ ಯಾವಾಗಲೂ ಸಾಮ್ಯಗಳ ಮೂಲಕ ಉಪದೇಶಿಸಿದನು. ಆದರೆ ತನ್ನ ಶಿಷ್ಯರು ಮಾತ್ರ ಇರುವಾಗ ಎಲ್ಲವನ್ನೂ ಅವರಿಗೆ ವಿವರಿಸಿ ತಿಳಿಸುತ್ತಿದ್ದನು.

ಯೇಸುವಿನ ಆಜ್ಞೆಗೆ ಬಿರುಗಾಳಿಯ ವಿಧೇಯತೆ

(ಮತ್ತಾಯ 8:23-27; ಲೂಕ 8:22-25)

35 ಆ ದಿನ ಸಂಜೆ, ಯೇಸು ತನ್ನ ಶಿಷ್ಯರಿಗೆ “ನನ್ನೊಂದಿಗೆ ಬನ್ನಿ, ಸರೋವರದ ಆಚೆದಡಕ್ಕೆ ಹೋಗೋಣ” ಎಂದು ಹೇಳಿದನು. 36 ಯೇಸು ಮತ್ತು ಆತನ ಶಿಷ್ಯರು ಅಲ್ಲಿದ್ದ ಜನರನ್ನು ಅಲ್ಲಿಯೇ ಬಿಟ್ಟುಹೋದರು. ಯೇಸು ಕುಳಿತುಕೊಂಡು ಉಪದೇಶಿಸುತ್ತಿದ್ದ ದೋಣಿಯಲ್ಲಿಯೇ ಅವರು ಹೋದರು. ಅವರೊಂದಿಗೆ ಬೇರೆ ದೋಣಿಗಳೂ ಇದ್ದವು. 37 ಅವರು ಹೋಗುತ್ತಿರಲು ಸರೋವರದ ಮೇಲೆ ಬಿರುಗಾಳಿ ಬೀಸಿತು. ಎತ್ತರವಾದ ಅಲೆಗಳು ದೋಣಿಗೆ ಅಪ್ಪಳಿಸತೊಡಗಿದ್ದರಿಂದ ದೋಣಿಯು ನೀರಿನಿಂದ ತುಂಬಿಹೋಯಿತು. 38 ಯೇಸುವು ದೋಣಿಯ ಹಿಂಭಾಗದಲ್ಲಿ ತಲೆದಿಂಬಿನ ಮೇಲೆ ತಲೆಯನ್ನಿಟ್ಟು ನಿದ್ರಿಸುತ್ತಿದ್ದನು. ಶಿಷ್ಯರು ಆತನ ಬಳಿಗೆ ಹೋಗಿ, ಆತನನ್ನು ಎಬ್ಬಿಸಿ, “ಗುರುವೇ, ನೀನು ನಮ್ಮ ಬಗ್ಗೆ ಚಿಂತಿಸುವುದಿಲ್ಲವೆ? ನಾವು ಮುಳುಗಿಹೋಗುತ್ತಿದ್ದೇವೆ!” ಎಂದರು.

39 ಯೇಸು ಎಚ್ಚೆತ್ತು ಬಿರುಗಾಳಿ ಮತ್ತು ಅಲೆಗಳಿಗೆ, “ಪ್ರಶಾಂತವಾಗಿರಿ! ಮೊರೆಯದಿರಿ!” ಎಂದು ಆಜ್ಞಾಪಿಸಿದನು. ಆಗ ಬಿರುಗಾಳಿ ನಿಂತುಹೋಯಿತು ಮತ್ತು ಸರೋವರವು ಪ್ರಶಾಂತವಾಯಿತು.

40 ಯೇಸು ತನ್ನ ಶಿಷ್ಯರಿಗೆ, “ನೀವೇಕೆ ಹೆದರುತ್ತೀರಿ? ನಿಮ್ಮಲ್ಲಿ ಇನ್ನೂ ನಂಬಿಕೆಯಿಲ್ಲವೇ?” ಎಂದು ಕೇಳಿದನು.

41 ಶಿಷ್ಯರು ಬಹಳ ಭಯಪಟ್ಟು, “ಈತನು ಯಾರಿರಬಹುದು? ಗಾಳಿ ಮತ್ತು ನೀರು ಸಹ ಈತನ ಮಾತನ್ನು ಕೇಳುತ್ತವೆಯಲ್ಲಾ?” ಎಂದು ತಮ್ಮತಮ್ಮೊಳಗೆ ಮಾತಾಡಿಕೊಂಡರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International