Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಯಾಜಕಕಾಂಡ 23-24

ವಿಶೇಷ ಹಬ್ಬದ ದಿನಗಳು

23 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: “ಇಸ್ರೇಲರಿಗೆ ಹೀಗೆ ಆಜ್ಞಾಪಿಸು: ಯೆಹೋವನಿಂದ ಆರಿಸಲ್ಪಟ್ಟ ಹಬ್ಬದದಿನಗಳಲ್ಲಿ ಪವಿತ್ರಸಭೆ ಕೂಡಬೇಕೆಂಬುದಾಗಿ ಪ್ರಕಟಿಸಬೇಕು. ಇವು ನನ್ನ ವಿಶೇಷ ಹಬ್ಬದ ದಿನಗಳು.

ಸಬ್ಬತ್ತು

“ಆರು ದಿನಗಳಲ್ಲಿ ನೀವು ಕೆಲಸಮಾಡಿರಿ. ಆದರೆ ಏಳನೆಯ ದಿನವು ವಿಶೇಷವಾದ ವಿಶ್ರಾಂತಿ ದಿನವಾದ ಸಬ್ಬತ್ತಾಗಿದೆ. ಆ ದಿನದಲ್ಲಿ ಪವಿತ್ರಸಭೆ ಕೂಡಬೇಕು. ನೀವು ಯಾವ ಕೆಲಸವನ್ನೂ ಮಾಡಬಾರದು. ನಿಮ್ಮ ಎಲ್ಲಾ ಮನೆಗಳಲ್ಲಿ ಅದು ಯೆಹೋವನಿಗೆ ಮೀಸಲಾದ ಸಬ್ಬತ್ತಾಗಿದೆ.

ಪಸ್ಕಹಬ್ಬ

“ಇವುಗಳು ಯೆಹೋವನಿಂದ ಆರಿಸಲ್ಪಟ್ಟ ಹಬ್ಬದ ದಿನಗಳು. ಆ ಕಾಲಗಳಲ್ಲಿ ದೇವಾರಾಧನೆಗಾಗಿ ಸಭೆಕೂಟಗಳು ನಡೆಸಲ್ಪಡಬೇಕು. ನೇಮಕವಾದ ದಿನಗಳಲ್ಲಿ ಇವುಗಳನ್ನು ಪ್ರಕಟಿಸಬೇಕು. ಯೆಹೋವನ ಪಸ್ಕಹಬ್ಬವು ಮೊದಲನೆ ತಿಂಗಳ ಹದಿನಾಲ್ಕನೆಯ ದಿನದ ಸಾಯಂಕಾಲ ಅಂದರೆ ಸೂರ್ಯಸ್ತಮಾನವಾದ ಸಮಯದಲ್ಲಿ ನಡೆಯುತ್ತದೆ.

ಹುಳಿಯಿಲ್ಲದ ರೊಟ್ಟಿಯ ಹಬ್ಬ

“ಅದೇ ತಿಂಗಳ ಹದಿನೈದನೆಯ ದಿನದಲ್ಲಿ ಯೆಹೋವನ ಹುಳಿಯಿಲ್ಲದ ರೊಟ್ಟಿಯ ಹಬ್ಬವಿರುತ್ತದೆ. ನೀವು ಹುಳಿಯಿಲ್ಲದ ರೊಟ್ಟಿಯನ್ನು ಏಳು ದಿನಗಳವರೆಗೆ ತಿನ್ನುವಿರಿ. ಈ ಹಬ್ಬದ ದಿನದ ಮೊದಲನೆಯ ದಿನದಲ್ಲಿ ನೀವು ವಿಶೇಷ ಸಭೆಯಾಗಿ ಸೇರಬೇಕು. ಆ ದಿನದಲ್ಲಿ ಯಾವ ಕೆಲಸವನ್ನೂ ಮಾಡಬಾರದು. ಏಳು ದಿನಗಳವರೆಗೆ ನೀವು ಯೆಹೋವನಿಗೆ ಹೋಮವನ್ನು ಅರ್ಪಿಸಬೇಕು. ಏಳನೆಯ ದಿನದಲ್ಲಿ ನೀವು ಇನ್ನೊಂದು ಬಾರಿ ವಿಶೇಷ ಸಭೆಯಾಗಿ ಸೇರಬೇಕು. ನೀವು ಆ ದಿನದಲ್ಲಿ ಯಾವ ಕೆಲಸವನ್ನೂ ಮಾಡಬಾರದು.”

ಪ್ರಥಮ ಬೆಳೆಗಳ ಹಬ್ಬ

ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 10 “ಇಸ್ರೇಲರಿಗೆ ಹೀಗೆ ಹೇಳು: ನಾನು ನಿಮಗೆ ಕೊಡುವ ದೇಶದಲ್ಲಿ ನೀವು ನೆಲೆಸಿದ ನಂತರ ಅಲ್ಲಿ ಬೆಳೆಯನ್ನು ಕೊಯ್ಯುವಿರಿ. ಆ ಸಮಯದಲ್ಲಿ ನಿಮ್ಮ ಬೆಳೆಯ ಪ್ರಥಮ ಸಿವುಡನ್ನು ಯಾಜಕನ ಬಳಿಗೆ ತರಬೇಕು. 11 ಯಾಜಕನು ಸಿವುಡನ್ನು ಯೆಹೋವನ ಸನ್ನಿಧಿಯಲ್ಲಿ ನಿವಾಳಿಸುವನು. ಆಗ ನೀವು ಸ್ವೀಕೃತರಾಗಲು ಯೋಗ್ಯರಾಗುವಿರಿ. ಸಬ್ಬತ್ತಾದ ನಂತರ ಯಾಜಕನು ಸಿವುಡನ್ನು ಯೆಹೋವನಿಗೆ ನಿವಾಳಿಸುವನು.

12 “ನೀವು ಸಿವುಡನ್ನು ನಿವಾಳಿಸುವ ದಿನದಲ್ಲಿ ಒಂದು ವರ್ಷದ ಗಂಡು ಕುರಿಮರಿಯನ್ನು ಅರ್ಪಿಸಬೇಕು. ಆ ಕುರಿಮರಿಯಲ್ಲಿ ಯಾವ ದೋಷವೂ ಇರಬಾರದು. ಅದು ಯೆಹೋವನಿಗೆ ಸರ್ವಾಂಗಹೋಮವಾಗಿ ಅರ್ಪಿತವಾಗುವುದಕ್ಕಾಗಿ ನೇಮಿತವಾಗಿರುವುದು. 13 ನೀವು ಎಣ್ಣೆ ಬೆರೆಸಿದ ಹದಿನಾರು ಬಟ್ಟಲು[a] ಶ್ರೇಷ್ಠ ಗೋಧಿಹಿಟ್ಟನ್ನು ಧಾನ್ಯಸಮರ್ಪಣೆಗಾಗಿ ಅರ್ಪಿಸಬೇಕು. ನೀವು ಕಾಲುಭಾಗ[b] ದ್ರಾಕ್ಷಾರಸವನ್ನು ಅರ್ಪಿಸಬೇಕು. ಆ ಯಜ್ಞದ ಸುವಾಸನೆಯು ಯೆಹೋವನಿಗೆ ಮೆಚ್ಚಿಕೆಯಾಗಿರುತ್ತದೆ. 14 ನೀವು ಯಾವ ಹೊಸ ಧಾನ್ಯವನ್ನಾಗಲಿ ಹಣ್ಣನ್ನಾಗಲಿ ಹೊಸ ಧಾನ್ಯದಿಂದ ಮಾಡಿದ ರೊಟ್ಟಿಯನ್ನಾಗಲಿ ದೇವರಿಗೆ ಅರ್ಪಿಸುವ ಮೊದಲು ತಿನ್ನಬಾರದು. ಈ ನಿಯಮವು ನಿಮ್ಮ ಎಲ್ಲಾ ಸಂತತಿಯವರಿಗೂ ನಿಮ್ಮ ಎಲ್ಲಾ ನಿವಾಸ ಸ್ಥಾನಗಳಲ್ಲಿಯೂ ಶಾಶ್ವತವಾಗಿದೆ.

ಪಂಚಾಶತ್ತಮ ಹಬ್ಬ

15 “ಆ ಭಾನುವಾರ ಬೆಳಿಗ್ಗೆ ಮೊದಲುಗೊಂಡು ಅಂದರೆ ನೈವೇದ್ಯವಾಗಿ ನಿವಾಳಿಸುವುದಕ್ಕಾಗಿ ಸಿವುಡನ್ನು ತಂದ ದಿನದಿಂದ ಹಿಡಿದು ಏಳು ವಾರಗಳನ್ನು ಲೆಕ್ಕಿಸಿರಿ. 16 ಏಳು ವಾರಗಳು ಮುಗಿದ ಭಾನುವಾರ ಅಂದರೆ ಐವತ್ತು ದಿನಗಳ ನಂತರ ನೀವು ಯೆಹೋವನಿಗೆ ಹೊಸಬೆಳೆಯನ್ನು ಸಮರ್ಪಿಸುವಿರಿ. 17 ಆ ದಿನದಲ್ಲಿ ನಿಮ್ಮ ಮನೆಗಳಿಂದ ಎರಡು ರೊಟ್ಟಿಗಳನ್ನು ತನ್ನಿರಿ. ಆ ರೊಟ್ಟಿಗಳು ನೈವೇದ್ಯವಾಗಿ ನಿವಾಳಿಸಲ್ಪಡುವುದಕ್ಕಾಗಿದೆಯಷ್ಟೆ. ಹುಳಿಯನ್ನು ಉಪಯೋಗಿಸಿ ಹದಿನಾರು ಬಟ್ಟಲು[c] ಗೋಧಿಹಿಟ್ಟಿನಿಂದ ಎರಡು ರೊಟ್ಟಿಗಳನ್ನು ಮಾಡಿರಿ. ಅದು ನಿಮ್ಮ ಪ್ರಥಮ ಬೆಳೆಯಿಂದ ಯೆಹೋವನಿಗೆ ಸಮರ್ಪಿಸುವ ಕಾಣಿಕೆಯಾಗಿರುವುದು.

18 “ಜನರು ಸಮರ್ಪಿಸುವ ರೊಟ್ಟಿ, ಧಾನ್ಯ ಮತ್ತು ದ್ರಾಕ್ಷಾರಸಗಳೊಂದಿಗೆ ಒಂದು ಹೋರಿ, ಎರಡು ಟಗರು ಮತ್ತು ಒಂದು ವರ್ಷದ ಏಳು ಕುರಿಮರಿಗಳನ್ನು ಅರ್ಪಿಸಲಾಗುವುದು. ಆ ಪಶುಗಳಲ್ಲಿ ಯಾವ ದೋಷವು ಇರಬಾರದು. ಅವುಗಳು ಯೆಹೋವನಿಗೆ ಅಗ್ನಿಯ ಮೂಲಕ ಅರ್ಪಿತವಾಗಲಿರುವ ಸಮರ್ಪಣೆಗಳಾಗಿವೆ. ಅದರ ಸುವಾಸನೆಯು ಯೆಹೋವನಿಗೆ ಮೆಚ್ಚಿಕೆಯಾಗಿದೆ. 19 ನೀವು ಪಾಪಪರಿಹಾರಕ ಸಮರ್ಪಣೆಯಾಗಿ ಒಂದು ಹೋತವನ್ನೂ ಸಮಾಧಾನಯಜ್ಞವಾಗಿ ಒಂದು ವರ್ಷದ ಎರಡು ಟಗರುಗಳನ್ನೂ ಅರ್ಪಿಸಬೇಕು.

20 “ಯಾಜಕನು ಅವುಗಳನ್ನು ಪ್ರಥಮ ಬೆಳೆಯಿಂದ ಮಾಡಿದ ರೊಟ್ಟಿಯೊಂದಿಗೆ ನೈವೇದ್ಯವಾಗಿ ಎರಡು ಕುರಿಮರಿಗಳೊಂದಿಗೆ ಯೆಹೋವನ ಸನ್ನಿಧಿಯಲ್ಲಿ ನಿವಾಳಿಸುವನು. ಅವು ಯೆಹೋವನಿಗೆ ಪವಿತ್ರವಾಗಿರುತ್ತವೆ. ಅವು ಯಾಜಕರಿಗೆ ಸಲ್ಲುತ್ತವೆ. 21 ಅದೇ ದಿನದಲ್ಲಿ ನೀವು ಪವಿತ್ರಸಭೆಯಾಗಿ ಕೂಡಬೇಕು. ನೀವು ಯಾವ ಕೆಲಸವನ್ನು ಮಾಡಬಾರದು. ನಿಮ್ಮ ಎಲ್ಲಾ ಮನೆಗಳಲ್ಲಿ ಈ ನಿಯಮವು ಶಾಶ್ವತವಾಗಿರುವುದು.

22 “ಅಲ್ಲದೆ ನಿಮ್ಮ ದೇಶದಲ್ಲಿ ಪೈರುಗಳನ್ನು ಕೊಯ್ಯುವಾಗ ಹೊಲದ ಮೂಲೆಗಳವರೆಗೆ ಇರುವುದನ್ನೆಲ್ಲಾ ಕೊಯ್ಯಬೇಡಿರಿ. ನೆಲದ ಮೇಲೆ ಬೀಳುವ ಧಾನ್ಯಗಳನ್ನು ಹಕ್ಕಲಾಯಬಾರದು. ಬಡವರಿಗಾಗಿಯೂ ನಿಮ್ಮ ದೇಶದ ಮೂಲಕ ಪ್ರಯಾಣಮಾಡುವ ಪರದೇಶಸ್ಥರಿಗಾಗಿಯೂ ಅವುಗಳನ್ನು ಬಿಡಿರಿ. ನಾನೇ ನಿಮ್ಮ ದೇವರಾದ ಯೆಹೋವನು!”

ತುತ್ತೂರಿಗಳ ಹಬ್ಬ

23 ಯೆಹೋವನು ತಿರುಗಿ ಮೋಶೆಗೆ ಹೇಳಿದ್ದೇನೆಂದರೆ: 24 “ಇಸ್ರೇಲರಿಗೆ ಹೀಗೆ ಹೇಳು: ಏಳನೆಯ ತಿಂಗಳಿನ ಮೊದಲಿನ ದಿನವು ನಿಮಗೆ ವಿಶ್ರಾಂತಿಯ ವಿಶೇಷ ದಿನವಾಗಿರಬೇಕು. ಆಗ ನೀವು ಪವಿತ್ರಸಭೆಯಾಗಿ ಸೇರಬೇಕು. ಜ್ಞಾಪಕಮಾಡುವ ವಿಶೇಷ ಸಮಯಕ್ಕಾಗಿ ನೀವು ತುತ್ತೂರಿಯನ್ನು ಊದಿಸಬೇಕು. 25 ನೀವು ಯಾವ ಕೆಲಸವನ್ನೂ ಮಾಡಬಾರದು. ನೀವು ಅಗ್ನಿಯ ಮೂಲಕ ಯೆಹೋವನಿಗೆ ಸಮರ್ಪಣೆಯನ್ನು ಸಲ್ಲಿಸುವಿರಿ.”

ದೋಷಪರಿಹಾರಕ ದಿನ

26 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 27 “ಏಳನೆಯ ತಿಂಗಳಿನ ಹತ್ತನೆಯ ದಿನವು ದೋಷಪರಿಹಾರಕ ದಿನವಾಗಿರುವುದು. ಆಗ ಪವಿತ್ರ ಸಭೆಯಾಗಿ ಸೇರಬೇಕು. ನೀವು ಆಹಾರವನ್ನು ತಿನ್ನಬಾರದು. ನೀವು ಅಗ್ನಿಯ ಮೂಲಕ ಯೆಹೋವನಿಗೆ ಕಾಣಿಕೆಯನ್ನು ಸಲ್ಲಿಸಬೇಕು. 28 ನೀವು ಆ ದಿನದಲ್ಲಿ ಯಾವ ಕೆಲಸವನ್ನೂ ಮಾಡಬಾರದು. ಯಾಕೆಂದರೆ ಅದು ದೋಷಪರಿಹಾರಕ ದಿನವಾಗಿರುತ್ತದೆ. ಆ ದಿನದಲ್ಲಿ ಯಾಜಕರು ಯೆಹೋವನ ಸನ್ನಿಧಿಗೆ ಹೋಗಿ ಆಚಾರವಿಧಿಗಳ ಪ್ರಕಾರ ನಿಮಗಾಗಿ ಪ್ರಾಯಶ್ಚಿತ್ತ ಮಾಡುವರು.

29 “ಈ ದಿನದಲ್ಲಿ ಯಾವನಾದರೂ ಉಪವಾಸ ಮಾಡದಿದ್ದರೆ ಅವನನ್ನು ಅವನ ಕುಲದಿಂದ ತೆಗೆದುಹಾಕಬೇಕು. 30 ಈ ದಿನದಲ್ಲಿ ಕೆಲಸಮಾಡುವವನನ್ನು ಇಸ್ರೇಲರೊಂದಿಗೆ ಇರದಂತೆ ನಾಶಮಾಡುವೆ. 31 ನೀವು ಅಂದು ಯಾವ ಕೆಲಸವನ್ನೂ ಮಾಡಬಾರದು. ನೀವು ಎಲ್ಲೇ ವಾಸವಾಗಿದ್ದರೂ ಈ ಕಟ್ಟಳೆ ನಿಮಗೆ ಶಾಶ್ವತವಾಗಿದೆ. 32 ಅದು ನಿಮಗಾಗಿ ವಿಶ್ರಾಂತಿಯ ವಿಶೇಷ ದಿನವಾಗಿರುವುದು. ನೀವು ಆಹಾರವನ್ನು ತಿನ್ನಬಾರದು.[d] ತಿಂಗಳಿನ ಒಂಭತ್ತನೆಯ ದಿನದ ನಂತರ ಸಾಯಂಕಾಲದಲ್ಲಿ ಈ ವಿಶ್ರಾಂತಿಯ ವಿಶೇಷ ದಿನವನ್ನು ಪ್ರಾರಂಭಿಸುವಿರಿ. ಈ ವಿಶ್ರಾಂತಿಯ ವಿಶೇಷ ದಿನವು ಆ ಸಾಯಂಕಾಲದಿಂದ ಹಿಡಿದು ಮರುದಿನ ಸಾಯಂಕಾಲದವರೆಗೆ ಮುಂದುವರಿಯುವುದು.”

ಪರ್ಣಶಾಲೆಗಳ ಹಬ್ಬ

33 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 34 “ಇಸ್ರೇಲರಿಗೆ ಹೀಗೆ ಹೇಳು: ಏಳನೆಯ ತಿಂಗಳಿನ ಹದಿನೈದನೆಯ ದಿನವು ಪರ್ಣಶಾಲೆಗಳ ಹಬ್ಬವಾಗಿರುತ್ತದೆ. ಯೆಹೋವನ ಈ ಹಬ್ಬದ ಕಾಲವು ಏಳು ದಿನಗಳವರೆಗೆ ಮುಂದುವರಿಯುವುದು. 35 ಮೊದಲನೆಯ ದಿನದಲ್ಲಿ ಪವಿತ್ರಸಭೆಯಾಗಿ ಸೇರಬೇಕು. ಅಂದು ನೀವು ಯಾವ ಕೆಲಸವನ್ನೂ ಮಾಡಬಾರದು. 36 ನೀವು ಏಳು ದಿನಗಳವರೆಗೆ ಅಗ್ನಿಯ ಮೂಲಕ ಯೆಹೋವನಿಗೆ ಯಜ್ಞವನ್ನು ಅರ್ಪಿಸಬೇಕು. ಎಂಟನೆಯ ದಿನದಲ್ಲಿ ಇನ್ನೊಂದು ಬಾರಿ ಸಭೆಯಾಗಿ ಸೇರಬೇಕು. ನೀವು ಅಗ್ನಿಯ ಮೂಲಕ ಯಜ್ಞವನ್ನು ಅರ್ಪಿಸಬೇಕು. ಇದು ಪವಿತ್ರಸಭೆಯಾಗಿರುವುದು. ಅಂದು ನೀವು ಯಾವ ಕೆಲಸವನ್ನೂ ಮಾಡಬಾರದು.

37 “ಯೆಹೋವನಿಗೆ ವಿಶೇಷ ಹಬ್ಬದ ದಿನಗಳು ಇವುಗಳೇ. ಈ ವಿಶೇಷ ದಿನಗಳಲ್ಲಿ ನೀವು ಪವಿತ್ರಸಭೆಯಾಗಿ ಸೇರಬೇಕು. ನೀವು ಅಗ್ನಿಯ ಮೂಲಕ ಯೆಹೋವನಿಗೆ ಸಮರ್ಪಣೆಯಾಗುವ ಸರ್ವಾಂಗಹೋಮ, ಧಾನ್ಯಸಮರ್ಪಣೆ, ಯಜ್ಞಗಳು ಮತ್ತು ಪಾನದ್ರವ್ಯಗಳನ್ನು ಅರ್ಪಿಸಬೇಕು. ನೀವು ಆ ಕಾಣಿಕೆಗಳನ್ನು ಸರಿಯಾದ ಸಮಯದಲ್ಲಿ ಅರ್ಪಿಸಬೇಕು. 38 ಯೆಹೋವನನ್ನು ಜ್ಞಾಪಕಮಾಡುವ ಸಬ್ಬತ್ ದಿನಗಳ ಜೊತೆಗೆ ನೀವು ಆ ಹಬ್ಬದ ದಿನಗಳನ್ನು ಆಚರಿಸಬೇಕು. ನೀವು ಆ ಕಾಣಿಕೆಗಳನ್ನು ನಿಮ್ಮ ಇತರ ಕಾಣಿಕೆಗಳ ಜೊತೆಗೆ ಅರ್ಪಿಸಬೇಕು. ನೀವು ಮಾಡಿದ ಹರಕೆಗಳನ್ನು ನೆರವೇರಿಸುವುದಕ್ಕಾಗಿ ಯೆಹೋವನಿಗೆ ಅರ್ಪಿಸುವ ಕಾಣಿಕೆಗಳ ಜೊತೆಗೆ ಅವುಗಳನ್ನು ಅರ್ಪಿಸಬೇಕು. ನೀವು ಯೆಹೋವನಿಗೆ ಅರ್ಪಿಸುವ ಯಾವುದೇ ವಿಶೇಷ ಸಮರ್ಪಣೆಗಳೊಂದಿಗೆ ಅವುಗಳನ್ನು ಸಮರ್ಪಿಸಬೇಕು.

39 “ಏಳನೆಯ ತಿಂಗಳಿನ ಹದಿನೈದನೆಯ ದಿನದಲ್ಲಿ ನೀವು ನಿಮ್ಮ ದೇಶದಲ್ಲಿ ಪೈರುಗಳನ್ನು ಸಂಗ್ರಹಿಸಿದ ನಂತರ, ಏಳು ದಿನಗಳವರೆಗೆ ನೀವು ಯೆಹೋವನ ಹಬ್ಬವನ್ನು ಆಚರಿಸಬೇಕು. ನೀವು ಮೊದಲನೆಯ ಮತ್ತು ಎಂಟನೆಯ ದಿನದಲ್ಲಿ ವಿಶ್ರಮಿಸಬೇಕು. 40 ಪ್ರಥಮ ದಿನದಲ್ಲಿ ನೀವು ಮರಗಳಿಂದ ಉತ್ತಮ ಹಣ್ಣುಗಳನ್ನೂ ಖರ್ಜೂರಮರದ ಗರಿಗಳನ್ನೂ ಎಲೆತುಂಬಿದ ಕೊಂಬೆಗಳನ್ನೂ ವಿಲೋಸಸ್ಯಗಳನ್ನೂ ತೆಗೆದುಕೊಳ್ಳಬೇಕು. ನಿಮ್ಮ ದೇವರಾದ ಯೆಹೋವನ ಸನ್ನಿಧಿಯಲ್ಲಿ ಈ ಹಬ್ಬದ ದಿನವನ್ನು ಏಳು ದಿನಗಳವರೆಗೆ ಆಚರಿಸಬೇಕು. 41 ನೀವು ಪ್ರತಿ ವರ್ಷ ಏಳು ದಿನಗಳವರೆಗೆ ಈ ಹಬ್ಬದ ದಿನವನ್ನು ಆಚರಿಸಬೇಕು. ಈ ನಿಯಮ ಶಾಶ್ವತವಾಗಿದೆ. ಏಳನೆಯ ತಿಂಗಳಲ್ಲಿ ಈ ಹಬ್ಬದ ದಿನವನ್ನು ನೀವು ಆಚರಿಸಬೇಕು. 42 ನೀವು ಏಳು ದಿನಗಳವರೆಗೆ ಪರ್ಣಶಾಲೆಗಳಲ್ಲಿ ವಾಸಿಸಬೇಕು. ಇಸ್ರೇಲರಲ್ಲಿ ಹುಟ್ಟಿದವರೆಲ್ಲರೂ ಆ ಪರ್ಣಶಾಲೆಗಳಲ್ಲಿ ವಾಸಿಸುವರು. 43 ನಾನು ಇಸ್ರೇಲರನ್ನು ಈಜಿಪ್ಟಿನಿಂದ ಹೊರಗೆ ಕರೆದು ತಂದಾಗ, ಈ ಪರ್ಣಶಾಲೆಗಳಲ್ಲಿ ವಾಸಿಸುವಂತೆ ಮಾಡಿದವನು ನಾನೇ ಎಂದು ನಿಮ್ಮ ಸಂತತಿಯವರು ತಿಳಿದುಕೊಳ್ಳುವರು. ನಾನೇ ನಿಮ್ಮ ದೇವರಾದ ಯೆಹೋವನು!”

44 ಆದ್ದರಿಂದ ಮೋಶೆಯು ಯೆಹೋವನನ್ನು ಸನ್ಮಾನಿಸುವುದಕ್ಕಾಗಿ ಸೇರಿಬರುವ ವಿಶೇಷ ಸಭೆಗಳ ಕುರಿತು ಜನರಿಗೆ ಹೇಳಿದನು.

ದೀಪಸ್ತಂಭ ಮತ್ತು ಪವಿತ್ರ ರೊಟ್ಟಿ

24 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: “ಎಣ್ಣೆ ಮರದ ಕಾಯಿಗಳನ್ನು ಕುಟ್ಟಿ ತೆಗೆದ ಶುದ್ಧವಾದ ಎಣ್ಣೆಯನ್ನು ಇಸ್ರೇಲರು ನಿನ್ನ ಬಳಿಗೆ ತರಬೇಕೆಂದು ಆಜ್ಞಾಪಿಸು. ದೇವದರ್ಶನಗುಡಾರದಲ್ಲಿರುವ ದೀಪಗಳನ್ನು ಉರಿಸಲು ಆ ಎಣ್ಣೆ ಬೇಕಾಗಿರುತ್ತದೆ. ಆ ದೀಪಗಳು ಆರಿಹೋಗದೆ ಉರಿಯುತ್ತಲೇ ಇರಬೇಕು. ದೇವದರ್ಶನಗುಡಾರದಲ್ಲಿ ಯೆಹೋವನ ಸನ್ನಿಧಿಯಲ್ಲಿ ಸಾಯಂಕಾಲದಿಂದ ಉದಯದವರೆಗೆ ದೀಪಗಳು ಉರಿಯುತ್ತಿರುವಂತೆ ಆರೋನನು ಅವುಗಳನ್ನು ಸರಿಪಡಿಸುವನು. ಇದು ತೆರೆಯ ಹೊರಗೆ ಒಡಂಬಡಿಕೆಯ ಪೆಟ್ಟಿಗೆಯ ಮುಂದೆ ಇರುವುದು. ಈ ನಿಯಮ ಶಾಶ್ವತವಾದದ್ದು. ಶುದ್ಧಚಿನ್ನದಿಂದ ಮಾಡಿದ ದೀಪಸ್ತಂಭದಲ್ಲಿ ದೀಪಗಳು ಯೆಹೋವನ ಸನ್ನಿಧಿಯಲ್ಲಿ ಯಾವಾಗಲೂ ಉರಿಯುತ್ತಿರುವಂತೆ ಆರೋನನು ನೋಡಿಕೊಳ್ಳಬೇಕು.

“ಶ್ರೇಷ್ಠ ಗೋಧಿಹಿಟ್ಟನ್ನು ತೆಗೆದುಕೊಂಡು ಹನ್ನೆರಡು ರೊಟ್ಟಿಗಳನ್ನು ಮಾಡಬೇಕು. ಪ್ರತಿ ರೊಟ್ಟಿಯನ್ನು ಮಾಡಲು ಆರು ಸೇರು ಹಿಟ್ಟನ್ನು ಉಪಯೋಗಿಸಬೇಕು. ಅವುಗಳನ್ನು ಯೆಹೋವನ ಸನ್ನಿಧಿಯಲ್ಲಿರುವ ಚಿನ್ನದ ಮೇಜಿನ ಮೇಲೆ ಎರಡು ಸಾಲಾಗಿ ಇಡಬೇಕು. ಒಂದೊಂದು ಸಾಲಿನಲ್ಲಿ ಆರಾರು ರೊಟ್ಟಿಗಳಿರುವವು. ಪ್ರತಿ ಸಾಲಿನಲ್ಲಿ ಶುದ್ಧವಾದ ಧೂಪದ್ರವ್ಯವನ್ನಿಡಬೇಕು. ಇದು ಅಗ್ನಿಯ ಮೂಲಕ ಯೆಹೋವನಿಗೆ ಅರ್ಪಿತವಾದ ಸಮರ್ಪಣೆಯನ್ನು ಯೆಹೋವನ ಜ್ಞಾಪಕಕ್ಕೆ ತರುವುದು. ಪ್ರತಿ ಸಬ್ಬತ್‌ದಿನದಲ್ಲಿ ಆರೋನನು ಯೆಹೋವನ ಸನ್ನಿಧಿಯಲ್ಲಿ ರೊಟ್ಟಿಯನ್ನು ಕ್ರಮವಾಗಿ ಯಾವಾಗಲೂ ಇಡಬೇಕು. ಇಸ್ರೇಲರೊಂದಿಗೆ ಮಾಡಲ್ಪಟ್ಟ ಒಡಂಬಡಿಕೆಯು ಶಾಶ್ವತವಾದದ್ದು. ಆ ರೊಟ್ಟಿಯು ಆರೋನನಿಗೆ ಮತ್ತು ಅವನ ಪುತ್ರರಿಗೆ ಸಲ್ಲತಕ್ಕದ್ದು. ಅವರು ರೊಟ್ಟಿಯನ್ನು ಪವಿತ್ರಸ್ಥಳದಲ್ಲಿ ತಿನ್ನುವರು. ಯಾಕೆಂದರೆ ಅದು ಮಹಾ ಪವಿತ್ರವಾದದ್ದು. ಅದು ಅಗ್ನಿಯ ಮೂಲಕ ಅರ್ಪಿಸಿದ ಯಜ್ಞಗಳಲ್ಲಿ ಒಂದಾಗಿದೆ. ಆ ರೊಟ್ಟಿಯು ಶಾಶ್ವತವಾಗಿ ಆರೋನನಿಗೆ ಸಲ್ಲತಕ್ಕದ್ದು.”

ದೇವರನ್ನು ಶಪಿಸಿದ ಮನುಷ್ಯನು

10 ಇಸ್ರೇಲಿನ ಒಬ್ಬ ಸ್ತ್ರೀಗೆ ಒಬ್ಬ ಮಗನಿದ್ದನು. ಅವನ ತಂದೆ ಈಜಿಪ್ಟಿನವನು. ಪಾಳೆಯದಲ್ಲಿದ್ದ ಇಸ್ರೇಲರ ಮಧ್ಯದಿಂದ ಅವನು ಹೊರಬಂದನು. ಅವನು ಒಬ್ಬ ಇಸ್ರೇಲನೊಡನೆ ಜಗಳವಾಡತೊಡಗಿದನು. 11 ಅವನು ದೂಷಿಸಲು ಪ್ರಾರಂಭಿಸಿ ಯೆಹೋವನ ನಾಮದ ಬಗ್ಗೆ ಕೆಟ್ಟಮಾತುಗಳನ್ನು ಹೇಳತೊಡಗಿದನು. ಆದ್ದರಿಂದ ಜನರು ಅವನನ್ನು ಮೋಶೆಯ ಬಳಿಗೆ ಹಿಡಿದು ತಂದರು. (ಆ ಮನುಷ್ಯನ ತಾಯಿಯ ಹೆಸರು ಶೆಲೋಮೀತ್. ಅವಳು ದಾನ್ ಕುಲದವನಾದ ದಿಬ್ರೀಯನ ಮಗಳು.) 12 ಜನರು ಅವನನ್ನು ಸೆರೆಹಿಡಿದು, ಯೆಹೋವನ ಸ್ಪಷ್ಟವಾದ ಆಜ್ಞೆಗಾಗಿ ಕಾದುಕೊಂಡಿದ್ದರು.

13 ಆಗ ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 14 “ದೂಷಣೆ ಮಾಡಿದ ಮನುಷ್ಯನನ್ನು ಪಾಳೆಯದ ಹೊರಗಿರುವ ಸ್ಥಳಕ್ಕೆ ತನ್ನಿರಿ. ಬಳಿಕ ಅವನ ದೂಷಣೆ ಮಾತುಗಳನ್ನು ಕೇಳಿದ ಎಲ್ಲಾ ಜನರನ್ನು ಒಟ್ಟಾಗಿ ಕರೆಸಿರಿ. ಆ ಜನರು ತಮ್ಮ ಕೈಗಳನ್ನು ಅವನ ತಲೆಯ ಮೇಲೆ ಇಡುವರು. ಆ ಬಳಿಕ ಎಲ್ಲಾ ಜನರು ಅವನಿಗೆ ಕಲ್ಲೆಸೆದು ಕೊಲ್ಲಬೇಕು. 15 ನೀನು ಇಸ್ರೇಲರಿಗೆ ಹೀಗೆ ಹೇಳಬೇಕು: ದೇವದೂಷಣೆ ಮಾಡಿದವನಿಗೆ ಶಿಕ್ಷೆಯಾಗಬೇಕು. 16 ಯಾವನಾದರೂ ಯೆಹೋವನ ನಾಮದ ವಿರುದ್ಧ ಮಾತಾಡಿದರೆ, ಅವನಿಗೆ ಮರಣಶಿಕ್ಷೆಯಾಗಬೇಕು. ಜನರೆಲ್ಲರೂ ಅವನಿಗೆ ಕಲ್ಲೆಸೆದು ಕೊಲ್ಲಬೇಕು. ಯೆಹೋವನ ನಾಮವನ್ನು ನಿಂದಿಸುವ ಪರದೇಶಸ್ಥರಿಗೂ ಅದೇ ರೀತಿಯ ಶಿಕ್ಷೆಯಾಗಬೇಕು. ಯೆಹೋವನ ನಾಮವನ್ನು ನಿಂದಿಸುವವನಿಗೆ ಮರಣಶಿಕ್ಷೆಯಾಗಬೇಕು.

17 “ಒಬ್ಬನು ಇನ್ನೊಬ್ಬನನ್ನು ಕೊಂದರೆ, ಕೊಂದವನಿಗೆ ಮರಣಶಿಕ್ಷೆಯಾಗಬೇಕು. 18 ಇನ್ನೊಬ್ಬನಿಗೆ ಸೇರಿದ ಪಶುವನ್ನು ಕೊಲ್ಲುವವನು ಅದಕ್ಕೆ ಪ್ರತಿಯಾಗಿ ಇನ್ನೊಂದು ಪಶುವನ್ನು ಕೊಡಬೇಕು.

19 “ಒಬ್ಬನು ತನ್ನ ನೆರೆಯವನನ್ನು ಅಂಗವಿಕಲನನ್ನಾಗಿ ಮಾಡಿದರೆ, ಅವನಿಗೂ ಅದೇ ರೀತಿ ಮಾಡಬೇಕು. 20 ಮುರಿದ ಮೂಳೆಗೆ ಬದಲಾಗಿ ಅವನ ಮೂಳೆಯನ್ನು ಮುರಿಯಬೇಕು. ಕಣ್ಣಿಗೆ ಪ್ರತಿಯಾಗಿ ಕಣ್ಣನ್ನೂ ಹಲ್ಲಿಗೆ ಪ್ರತಿಯಾಗಿ ಹಲ್ಲನ್ನೂ ತೆಗೆಯಬೇಕು. 21 ಒಬ್ಬನು ಪಶುವೊಂದನ್ನು ಕೊಂದರೆ, ಅವನು ಅದಕ್ಕೆ ಬದಲಾಗಿ ಈಡು ಕೊಡಬೇಕು. ಆದರೆ ಒಬ್ಬನು ಇನ್ನೊಬ್ಬನನ್ನು ಕೊಂದರೆ, ಕೊಂದವನಿಗೆ ಮರಣಶಿಕ್ಷೆಯಾಗಬೇಕು.

22 “ಈ ಕಟ್ಟಳೆ ನ್ಯಾಯವಾದದ್ದು. ಅದು ನಿಮ್ಮ ಸ್ವದೇಶದವರಿಗೆ ಅನ್ವಯಿಸುವಂತೆ ಪರದೇಶಸ್ಥರಿಗೂ ಅನ್ವಯಿಸುವುದು. ಯಾಕೆಂದರೆ ನಾನೇ ನಿಮ್ಮ ದೇವರಾದ ಯೆಹೋವನು!”

23 ಬಳಿಕ ಮೋಶೆಯು ಇಸ್ರೇಲರೊಂದಿಗೆ ಮಾತಾಡಿದನು. ಆಗ ಅವರು ದೂಷಣೆ ಮಾಡಿದ ಮನುಷ್ಯನನ್ನು ಪಾಳೆಯದ ಹೊರಗೆ ತೆಗೆದುಕೊಂಡು ಹೋಗಿ ಅವನಿಗೆ ಕಲ್ಲೆಸೆದು ಕೊಂದರು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಅವರು ಮಾಡಿದರು.

ಮಾರ್ಕ 1:1-22

ಯೇಸುವಿನ ಆಗಮನ

(ಮತ್ತಾಯ 3:1-12; ಲೂಕ 3:1-9,15-17; ಯೋಹಾನ 1:19-28)

ದೇವಕುಮಾರನಾದ ಯೇಸು ಕ್ರಿಸ್ತನನ್ನು ಕುರಿತ ಸುವಾರ್ತೆಯ ಆರಂಭವಿದು. ಪ್ರವಾದಿಯಾದ ಯೆಶಾಯನು ತನ್ನ ಪ್ರವಾದನೆಯ ಗ್ರಂಥದಲ್ಲಿ ಹೀಗೆ ಬರೆದಿದ್ದಾನೆ.

“ಇಗೋ! ನಾನು ನನ್ನ ಸಂದೇಶಕನನ್ನು ನಿನ್ನ ಮುಂದೆ ಕಳುಹಿಸುತ್ತೇನೆ.
    ಅವನು ನಿನಗಾಗಿ ಮಾರ್ಗವನ್ನು ಸಿದ್ಧಪಡಿಸುತ್ತಾನೆ.”(A)

“‘ಪ್ರಭುವಿಗಾಗಿ ಮಾರ್ಗವನ್ನು ಸಿದ್ಧಗೊಳಿಸಿರಿ,
ಆತನ ದಾರಿಯನ್ನು ಸುಗಮಗೊಳಿಸಿರಿ’
    ಎಂದು ಒಬ್ಬ ವ್ಯಕ್ತಿಯು ಅಡವಿಯಲ್ಲಿ ಕೂಗುತ್ತಿದ್ದಾನೆ.”(B)

ಅಂತೆಯೇ ಸ್ನಾನಿಕ ಯೋಹಾನನು ಬಂದು, ಅಡವಿಯಲ್ಲಿ ಜನರಿಗೆ, “ನೀವು ನಿಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಂಡು ದೀಕ್ಷಾಸ್ನಾನ ಮಾಡಿಸಿಕೊಳ್ಳಿರಿ. ಆಗ ನಿಮಗೆ ಪಾಪಕ್ಷಮೆ ಆಗುವುದು” ಎಂದು ಉಪದೇಶಿಸುತ್ತಿದ್ದನು ಮತ್ತು ದೀಕ್ಷಾಸ್ನಾನ ಕೊಡುತ್ತಾ ಇದ್ದನು. ಜುದೇಯ ಮತ್ತು ಜೆರುಸಲೇಮಿನ ಜನರೆಲ್ಲರೂ ಯೋಹಾನನ ಬಳಿಗೆ ಬಂದು ತಮ್ಮ ಪಾಪಗಳನ್ನು ಅರಿಕೆಮಾಡಿಕೊಂಡರು. ಆಗ ಯೋಹಾನನು ಅವರಿಗೆ ಜೋರ್ಡನ್ ನದಿಯಲ್ಲಿ ದೀಕ್ಷಾಸ್ನಾನ ಕೊಟ್ಟನು.

ಯೋಹಾನನು ಒಂಟೆಯ ತುಪ್ಪಟದಿಂದ ಮಾಡಿದ ಹೊದಿಕೆಯನ್ನು ಹೊದ್ದುಕೊಂಡು ಸೊಂಟಕ್ಕೆ ತೊಗಲಿನ ನಡುಪಟ್ಟಿಯನ್ನು ಕಟ್ಟಿಕೊಳ್ಳುತ್ತಿದ್ದನು. ಅವನು ಮಿಡತೆಗಳನ್ನು ಮತ್ತು ಕಾಡುಜೇನನ್ನು ತಿನ್ನುತ್ತಿದ್ದನು.

ಯೋಹಾನನು ಜನರಿಗೆ, “ನನ್ನ ತರುವಾಯ ಬರುವಾತನು ನನಗಿಂತಲೂ ಶಕ್ತನಾಗಿದ್ದಾನೆ. ನಾನು ಮೊಣಕಾಲೂರಿ, ಆತನ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ಯೋಗ್ಯನಲ್ಲ. ನಾನು ನಿಮಗೆ ನೀರಿನಲ್ಲಿ ದೀಕ್ಷಾಸ್ನಾನ ಮಾಡಿಸುತ್ತೇನೆ, ಆದರೆ ಆತನು ನಿಮಗೆ ಪವಿತ್ರಾತ್ಮನಲ್ಲಿ ದೀಕ್ಷಾಸ್ನಾನ ಮಾಡಿಸುತ್ತಾನೆ” ಎಂದು ಬೋಧಿಸಿದನು.

ಯೇಸುವಿಗೆ ದೀಕ್ಷಾಸ್ನಾನ

(ಮತ್ತಾಯ 3:13-17; ಲೂಕ 3:21-22)

ಆ ದಿನಗಳಲ್ಲಿ ಯೇಸು ಗಲಿಲಾಯದ ನಜರೇತಿನಿಂದ ಯೋಹಾನನಿದ್ದ ಸ್ಥಳಕ್ಕೆ ಬಂದನು. ಯೋಹಾನನು ಯೇಸುವಿಗೆ ಜೋರ್ಡನ್ ನದಿಯಲ್ಲಿ ದೀಕ್ಷಾಸ್ನಾನ ಮಾಡಿಸಿದನು. 10 ಯೇಸು ನೀರಿನಿಂದ ಮೇಲಕ್ಕೆ ಬರುತ್ತಿದ್ದಾಗ, ಆಕಾಶವು ತೆರೆಯಂತೆ ಹರಿದುಹೋಯಿತು; ಮತ್ತು ಪವಿತ್ರಾತ್ಮನು ತನ್ನ ಮೇಲೆ ಪಾರಿವಾಳದ ರೂಪದಲ್ಲಿ ಇಳಿದುಬರುತ್ತಿರುವುದನ್ನು ಕಂಡನು. 11 ಆಗ ಪರಲೋಕದಿಂದ ಧ್ವನಿಯೊಂದು ಹೊರಟು, “ನೀನೇ ನನ್ನ ಪ್ರಿಯ ಮಗನು. ನಾನು ನಿನ್ನನ್ನು ಮೆಚ್ಚಿಕೊಂಡಿದ್ದೇನೆ” ಎಂದು ಹೇಳಿತು.

ಯೇಸುವಿಗಾದ ಪರಿಶೋಧನೆ

(ಮತ್ತಾಯ 4:1-11; ಲೂಕ 4:1-13)

12 ಆಗ ದೇವರಾತ್ಮನು ಯೇಸುವನ್ನು ಅಡವಿಗೆ ನಡೆಸಿದನು. 13 ಯೇಸು ಅಲ್ಲಿ ನಲವತ್ತು ದಿನಗಳ ಕಾಲ ಕಾಡುಮೃಗಗಳೊಂದಿಗಿದ್ದು ಸೈತಾನನಿಂದ ಪರಿಶೋಧಿಸಲ್ಪಟ್ಟನು. ಬಳಿಕ ದೇವದೂತರು ಬಂದು ಯೇಸುವಿಗೆ ಉಪಚಾರ ಮಾಡಿದರು.

ಗಲಿಲಾಯದಲ್ಲಿ ಯೇಸುವಿನ ಸೇವೆಯ ಆರಂಭ

(ಮತ್ತಾಯ 4:12-17; ಲೂಕ 4:14-15)

14 ಯೋಹಾನನನ್ನು ಸೆರೆಮನೆಗೆ ಹಾಕಿದ ಮೇಲೆ, ಯೇಸು ಗಲಿಲಾಯಕ್ಕೆ ಹೋಗಿ ಜನರಿಗೆ, 15 “ಕಾಲ ಪರಿಪೂರ್ಣವಾಯಿತು. ದೇವರ ರಾಜ್ಯ ಸಮೀಪಿಸಿತು. ನಿಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಂಡು ಸುವಾರ್ತೆಯನ್ನು ನಂಬಿರಿ” ಎಂಬ ದೇವರ ಸುವಾರ್ತೆಯನ್ನು ಉಪದೇಶಿಸಿದನು.

ಯೇಸುವಿನ ಪ್ರಥಮ ಶಿಷ್ಯರು

(ಮತ್ತಾಯ 4:18-22; ಲೂಕ 5:1-11)

16 ಯೇಸು ಗಲಿಲಾಯ ಸರೋವರದ ಬಳಿ ನಡೆದುಹೋಗುತ್ತಿದ್ದಾಗ ಸೀಮೋನನನ್ನು ಮತ್ತು ಸೀಮೋನನ ಸಹೋದರನಾದ ಅಂದ್ರೆಯನನ್ನು ಕಂಡನು. ಇವರಿಬ್ಬರೂ ಬೆಸ್ತರಾಗಿದ್ದರು. ಇವರು ಮೀನುಗಳನ್ನು ಹಿಡಿಯಲು ಸರೋವರದೊಳಕ್ಕೆ ಬಲೆಯನ್ನು ಬೀಸುತ್ತಿದ್ದರು. 17 ಯೇಸು, “ಬನ್ನಿರಿ, ನನ್ನನ್ನು ಹಿಂಬಾಲಿಸಿರಿ, ನಾನು ನಿಮ್ಮನ್ನು ಬೇರೆ ವಿಧದ ಬೆಸ್ತರನ್ನಾಗಿ ಮಾಡುವೆನು. ಇನ್ನು ಮೇಲೆ ನೀವು ಒಂದುಗೂಡಿಸುವುದು ಜನರನ್ನೇ, ಮೀನುಗಳನ್ನಲ್ಲ” ಎಂದು ಅವರಿಗೆ ಹೇಳಿದನು. 18 ಆಗ ಅವರು ತಮ್ಮ ಬಲೆಗಳನ್ನು ಅಲ್ಲಿಯೇ ಬಿಟ್ಟು ಆತನನ್ನು ಹಿಂಬಾಲಿಸಿದರು.

19 ಯೇಸು ಗಲಿಲಾಯ ಸರೋವರದ ಬಳಿಯಲ್ಲಿ ಇನ್ನೂ ತಿರುಗಾಡುತ್ತಲೇ ಇದ್ದಾಗ ಜೆಬೆದಾಯನ ಮಕ್ಕಳಾದ ಯಾಕೋಬ ಮತ್ತು ಯೋಹಾನರೆಂಬ ಇಬ್ಬರು ಸಹೋದರರನ್ನು ಕಂಡನು. ಅವರು ಮೀನುಗಳನ್ನು ಹಿಡಿಯಲು ಬಲೆಯನ್ನು ಸಿದ್ಧಪಡಿಸುತ್ತಾ ತಮ್ಮ ದೋಣಿಯಲ್ಲಿದ್ದರು. 20 ಅವರ ತಂದೆಯಾದ ಜೆಬೆದಾಯನೂ ಅವನ ಕೆಲಸಗಾರರೂ ಸಹೋದರರೊಂದಿಗೆ ದೋಣಿಯಲ್ಲಿದ್ದರು. ಯೇಸು ಅವರನ್ನು ಕರೆದನು. ಕೂಡಲೇ ಅವರು ತಮ್ಮ ತಂದೆಯನ್ನು ಬಿಟ್ಟು ಯೇಸುವನ್ನು ಹಿಂಬಾಲಿಸಿದರು.

ದೆವ್ವದಿಂದ ಪೀಡಿತನಾಗಿದ್ದವನಿಗೆ ವಿಮೋಚನೆ

(ಲೂಕ 4:31-37)

21 ಯೇಸು ಮತ್ತು ಆತನ ಶಿಷ್ಯರು ಕಪೆರ್ನೌಮಿಗೆ ಹೋದರು. ಸಬ್ಬತ್‌ದಿನದಂದು ಯೇಸು ಸಭಾಮಂದಿರಕ್ಕೆ ಹೋಗಿ ಜನರಿಗೆ ಉಪದೇಶಮಾಡಿದನು. 22 ಯೇಸುವಿನ ಉಪದೇಶವನ್ನು ಕೇಳಿ ಅಲ್ಲಿದ್ದ ಜನರು ಆಶ್ಚರ್ಯಗೊಂಡರು. ಆತನು ಅವರ ಧರ್ಮೋಪದೇಶಕರಂತೆ ಉಪದೇಶಮಾಡದೆ, ಅಧಿಕಾರವುಳ್ಳವನಂತೆ ಉಪದೇಶ ಮಾಡಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International