Old/New Testament
ಯಾಜಕರು ಅನುಸರಿಸತಕ್ಕ ನಿಯಮಗಳು
21 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: “ಯಾಜಕರಾದ ಆರೋನನ ಮಕ್ಕಳಿಗೆ ಈ ಸಂಗತಿಗಳನ್ನು ಹೇಳು: ಯಾಜಕನು ಸತ್ತ ವ್ಯಕ್ತಿಯನ್ನು ಮುಟ್ಟಿ ತನ್ನನ್ನು ಅಶುದ್ಧಮಾಡಿಕೊಳ್ಳಬಾರದು. 2 ಆದರೆ ಸತ್ತವನು ಅವನ ಹತ್ತಿರದ ಸಂಬಂಧಿಕರಲ್ಲಿ ಒಬ್ಬನಾಗಿದ್ದರೆ, ಆಗ ಅವನು ಆ ಹೆಣವನ್ನು ಮುಟ್ಟಬಹುದು. ಸತ್ತ ವ್ಯಕ್ತಿ ಅವನ ತಾಯಿ, ತಂದೆ, ಮಗ, ಮಗಳು, ಸಹೋದರ ಅಥವಾ 3 ಮದುವೆಯಾಗದ ಸಹೋದರಿಯಾಗಿದ್ದರೆ[a] ಯಾಜಕನು ತನ್ನನ್ನು ಅಶುದ್ಧಮಾಡಿಕೊಳ್ಳಬಹುದು. (ಈ ಸಹೋದರಿಗೆ ಗಂಡನಿಲ್ಲದಿರುವುದರಿಂದ ಅವಳು ಅವನಿಗೆ ಹತ್ತಿರದ ಸಂಬಂಧಿಯಾಗಿದ್ದಾಳೆ. ಆದ್ದರಿಂದ ಯಾಜಕನು ತನ್ನನ್ನು ಅಶುದ್ಧಮಾಡಿಕೊಳ್ಳಬಹುದು.) 4 ಆದರೆ ಸತ್ತವನು ಕೇವಲ ಅವನ ಗುಲಾಮರಲ್ಲಿ ಒಬ್ಬನಾಗಿದ್ದರೆ ಯಾಜಕನು ತನ್ನನ್ನು ಅಶುದ್ಧ ಮಾಡಿಕೊಳ್ಳಬಾರದು.
5 “ಯಾಜಕರು ತಮ್ಮ ತಲೆಗಳನ್ನು ಬೋಳಿಸಿಕೊಳ್ಳಬಾರದು; ತಮ್ಮ ಗಡ್ಡದ ಪಾರ್ಶ್ವಗಳನ್ನು ಕತ್ತರಿಸಿ ವಿಕಾರಗೊಳಿಸಬಾರದು; ತಮ್ಮ ದೇಹಗಳಲ್ಲಿ ಯಾವ ಗಾಯ ಮಾಡಿಕೊಳ್ಳಬಾರದು. 6 ಅವರು ತಮ್ಮ ದೇವರಿಗೆ ಪ್ರತಿಷ್ಠಿತರಾಗಿರಬೇಕು. ಅವರು ದೇವರ ಹೆಸರಿಗೆ ಗೌರವ ತೋರಿಸಬೇಕು. ಯಾಕೆಂದರೆ ಅವರು ಅಗ್ನಿಯ ಮೂಲಕ ಅರ್ಪಿಸಿದ ರೊಟ್ಟಿಯನ್ನು ಮತ್ತು ಕಾಣಿಕೆಗಳನ್ನು ಯೆಹೋವನಿಗೆ ತೆಗೆದುಕೊಂಡು ಹೋಗುತ್ತಾರೆ. ಆದ್ದರಿಂದ ಅವರು ಪವಿತ್ರರಾಗಿರಬೇಕು.
7 “ಯಾಜಕನು ವಿಶೇಷವಾದ ರೀತಿಯಲ್ಲಿ ದೇವರ ಸೇವೆ ಮಾಡುತ್ತಾನೆ. ಆದ್ದರಿಂದ ಯಾಜಕನು ಬೇರೆಯವರೊಡನೆ ಲೈಂಗಿಕ ಸಂಬಂಧಮಾಡಿದ ಸ್ತ್ರೀಯನ್ನು ಮದುವೆಯಾಗಬಾರದು. ಯಾಜಕನು ವೇಶ್ಯೆಯನ್ನಾಗಲಿ ಗಂಡ ಬಿಟ್ಟವಳನ್ನಾಗಲಿ ಮದುವೆಯಾಗಬಾರದು. 8 ಯಾಜಕನು ವಿಶೇಷವಾದ ರೀತಿಯಲ್ಲಿ ದೇವರ ಸೇವೆ ಮಾಡುತ್ತಾನೆ. ಆದ್ದರಿಂದ ನೀವು ಅವನನ್ನು ವಿಶೇಷವಾದ ರೀತಿಯಲ್ಲಿ ನೋಡಿಕೊಳ್ಳಬೇಕು. ಯಾಕೆಂದರೆ ಅವನು ಪವಿತ್ರ ವಸ್ತುಗಳನ್ನು ಸಮರ್ಪಿಸುತ್ತಾನಲ್ಲ! ಅವನು ದೇವರ ಬಳಿಗೆ ಪವಿತ್ರ ರೊಟ್ಟಿಯನ್ನು ತರುತ್ತಾನೆ. ನಾನೇ ಪರಿಶುದ್ಧನು! ನಾನೇ ಯೆಹೋವನು! ಮತ್ತು ನಾನು ನಿಮ್ಮನ್ನು ಪರಿಶುದ್ಧಗೊಳಿಸುತ್ತೇನೆ.
9 “ಯಾಜಕನ ಮಗಳು ವೇಶ್ಯೆಯಾಗಿದ್ದರೆ, ಅವಳು ತನ್ನ ಗೌರವವನ್ನು ಹಾಳುಮಾಡಿಕೊಂಡವಳೂ ತನ್ನ ತಂದೆಗೆ ಅವಮಾನವನ್ನು ಉಂಟುಮಾಡಿದವಳೂ ಆಗಿದ್ದಾಳೆ. ಅವಳನ್ನು ಸುಟ್ಟುಹಾಕಬೇಕು.
10 “ಪ್ರಧಾನಯಾಜಕನು ಅವನ ಸಹೋದರರೊಳಗಿಂದ ಆರಿಸಲ್ಪಟ್ಟವನಾಗಿದ್ದಾನೆ. ಅಭಿಷೇಕತೈಲವು ಅವನ ತಲೆಯ ಮೇಲೆ ಹೊಯ್ಯಲ್ಪಟ್ಟಿದೆ. ಈ ರೀತಿಯಾಗಿ ಅವನು ಪ್ರಧಾನಯಾಜಕನ ವಿಶೇಷ ಕೆಲಸಕ್ಕೆ ಆರಿಸಲ್ಪಟ್ಟಿದ್ದಾನೆ. ಅವನು ವಿಶೇಷ ಬಟ್ಟೆಗಳನ್ನು ಧರಿಸಿಕೊಳ್ಳಲು ಆರಿಸಲ್ಪಟ್ಟಿದ್ದಾನೆ. ಆದ್ದರಿಂದ ಅವನು ಬಹಿರಂಗವಾಗಿ ದುಃಖ ಸೂಚಿಸುವ ಕಾರ್ಯಗಳನ್ನು ಮಾಡಬಾರದು. ಅವನು ತನ್ನ ಕೂದಲನ್ನು ಕೆದರಿಕೊಳ್ಳಬಾರದು. ಅವನು ತನ್ನ ಬಟ್ಟೆಗಳನ್ನು ಹರಿದುಕೊಳ್ಳಬಾರದು. 11 ಅವನು ಹೆಣವನ್ನು ಮುಟ್ಟಿ ತನ್ನನ್ನು ಅಶುದ್ಧನನ್ನಾಗಿ ಮಾಡಿಕೊಳ್ಳಬಾರದು. ಅದು ಅವನ ತಂದೆಯ ಶವವಾಗಿದ್ದರೂ ಸರಿ, ಅಥವಾ ತಾಯಿಯ ಶವವಾಗಿದ್ದರೂ ಸರಿ, ಅವನು ಅದರ ಬಳಿಗೆ ಹೋಗಬಾರದು. 12 ಪ್ರಧಾನಯಾಜಕನು ದೇವರ ಪರಿಶುದ್ಧ ಸ್ಥಳವನ್ನು ಬಿಟ್ಟು ಹೊರಗೆ ಹೋದರೆ ಅಶುದ್ಧನಾಗುವನು. ಅಲ್ಲದೆ ಅವನಿಂದ ದೇವರ ಪರಿಶುದ್ಧಸ್ಥಳವು ಅಶುದ್ಧವಾಗುವುದು. ಅಭಿಷೇಕತೈಲವು ಪ್ರಧಾನಯಾಜಕನ ತಲೆಯ ಮೇಲೆ ಹೊಯ್ಯಲ್ಪಟ್ಟಿದೆ. ಇದು ಅವನನ್ನು ಇತರ ಜನರಿಂದ ಪ್ರತ್ಯೇಕಗೊಳಿಸಿದೆ. ನಾನೇ ಯೆಹೋವನು!
13 “ಪ್ರಧಾನಯಾಜಕನು ಕನ್ಯೆಯಾಗಿರುವವಳನ್ನು ಮದುವೆಯಾಗಬೇಕು. 14 ಪ್ರಧಾನಯಾಜಕನು ಬೇರೆ ಪುರುಷನೊಡನೆ ಲೈಂಗಿಕ ಸಂಬಂಧ ಮಾಡಿದ ಸ್ತ್ರೀಯನ್ನು ಮದುವೆಯಾಗಬಾರದು. ಪ್ರಧಾನಯಾಜಕನು ವೇಶ್ಯಾ ಸ್ತ್ರೀಯನ್ನಾಗಲಿ ಗಂಡ ಬಿಟ್ಟವಳನ್ನಾಗಲಿ ಅಥವಾ ವಿಧವೆಯನ್ನಾಗಲಿ ಮದುವೆಯಾಗಬಾರದು. ಪ್ರಧಾನಯಾಜಕನು ತನ್ನ ಸ್ವಂತ ಜನರಲ್ಲಿ ಒಬ್ಬ ಕನ್ಯೆಯನ್ನು ಮದುವೆಯಾಗಬೇಕು. 15 ಹೀಗಾಗಿ ಜನರು ಅವನ ಮಕ್ಕಳಿಗೆ ಗೌರವ ತೋರಿಸುವರು.[b] ಯೆಹೋವನಾಗಿರುವ ನಾನು ಪ್ರಧಾನಯಾಜಕನನ್ನು ಅವನ ವಿಶೇಷ ಕೆಲಸಕ್ಕಾಗಿ ಪ್ರತ್ಯೇಕಿಸಿದ್ದೇನೆ.”
16 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 17 “ಆರೋನನಿಗೆ ಹೀಗೆ ಹೇಳು: ನಿನ್ನ ಸಂತತಿಯವರ ಮಕ್ಕಳಲ್ಲಿ ಯಾರಾದರೂ ಅಂಗವಿಕಲರಾಗಿದ್ದರೆ, ಅವರು ವಿಶೇಷ ರೊಟ್ಟಿಯನ್ನು ದೇವರ ಬಳಿಗೆ ತೆಗೆದುಕೊಂಡು ಹೋಗಬಾರದು. 18 ಯಾವ ಅಂಗವಿಕಲನೂ ಯಾಜಕನಾಗಿ ಸೇವೆಮಾಡಬಾರದು; ನನಗೆ ಯಜ್ಞಗಳನ್ನು ಅರ್ಪಿಸಬಾರದು. ಯಾಜಕರಾಗಿ ಸೇವೆ ಮಾಡಬಾರದವರು ಯಾರೆಂದರೆ: ಕುರುಡರು, ಕುಂಟರು, ತಮ್ಮ ಮುಖಗಳಲ್ಲಿ ಕೆಟ್ಟದಾದ ಗಾಯದ ಗುರುತುಗಳುಳ್ಳವರು, ಬಹಳ ಉದ್ದವಾದ ಕೈಕಾಲುಗಳುಳ್ಳವರು. 19 ಮುರಿದ ಕೈಕಾಲುಗಳುಳ್ಳವರು. 20 ಗೂನು ಬೆನ್ನುಳ್ಳವರು, ದೇಹ ಬೆಳವಣಿಗೆ ನಿಂತುಹೋಗಿರುವವರು, ಕಣ್ಣು ದೋಷವುಳ್ಳವರು, ಕಜ್ಜಿತುರಿಗಳುಳ್ಳವರು ಅಥವಾ ಚರ್ಮರೋಗವುಳ್ಳವರು, ಬೀಜದೋಷವುಳ್ಳವರು.
21 “ಆರೋನನ ಸಂತತಿಯವರಲ್ಲಿ ಅಂಗವಿಕಲರಾದ ಯಾರೂ ಯೆಹೋವನಿಗೆ ಹೋಮದ್ರವ್ಯಗಳನ್ನು ಸಮರ್ಪಿಸಬಾರದು; ಅಂಥವನು ವಿಶೇಷ ರೊಟ್ಟಿಯನ್ನು ದೇವರ ಬಳಿಗೆ ತೆಗೆದುಕೊಂಡು ಹೋಗಕೂಡದು. 22 ಅವನು ಯಾಜಕರ ಕುಟುಂಬದವನಾಗಿರುವುದರಿಂದ ಪರಿಶುದ್ಧ ರೊಟ್ಟಿಯನ್ನೂ ಮಹಾಪರಿಶುದ್ಧ ರೊಟ್ಟಿಯನ್ನೂ ತಿನ್ನಬಹುದು. 23 ಆದರೆ ಅವನು ತೆರೆಯ ಬಳಿಗೆ ಹೋಗಬಾರದು; ಅವನು ಯಜ್ಞವೇದಿಕೆಯ ಬಳಿಗೆ ಹೋಗಬಾರದು. ಯಾಕೆಂದರೆ ಅವನು ಅಂಗವಿಕಲನಾಗಿದ್ದಾನೆ. ಅವನು ನನ್ನ ಪರಿಶುದ್ಧ ಸ್ಥಳಗಳನ್ನು ಅಶುದ್ಧಗೊಳಿಸಬಾರದು. ಯೆಹೋವನಾದ ನಾನೇ ಆ ಸ್ಥಳಗಳನ್ನು ಪರಿಶುದ್ಧಗೊಳಿಸಿದ್ದೇನೆ.”
24 ಹೀಗೆ ಮೋಶೆ ಈ ಸಂಗತಿಗಳನ್ನು ಆರೋನನಿಗೂ ಅವನ ಪುತ್ರರಿಗೂ ಮತ್ತು ಇಸ್ರೇಲರೆಲ್ಲರಿಗೂ ಹೇಳಿದನು.
22 ದೇವರಾದ ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 2 “ಆರೋನನಿಗೂ ಅವನ ಪುತ್ರರಿಗೂ ಹೀಗೆ ಹೇಳು: ಇಸ್ರೇಲರು ನನಗೆ ಕಾಣಿಕೆಗಳನ್ನು ಸಮರ್ಪಿಸುವರು. ಅವು ಪರಿಶುದ್ಧವಾದವುಗಳು. ಅವು ನನ್ನವು, ಆದ್ದರಿಂದ ಯಾಜಕರಾದ ನೀವು ಅವುಗಳನ್ನು ತೆಗೆದುಕೊಳ್ಳಬಾರದು. ನೀವು ಆ ಪರಿಶುದ್ಧ ವಸ್ತುಗಳನ್ನು ಉಪಯೋಗಿಸಿದರೆ, ನನ್ನ ಪರಿಶುದ್ಧ ಹೆಸರಿಗೆ ಅವಮಾನವಾಗುವುದು. ನಾನೇ ಯೆಹೋವನು! 3 ನಿಮ್ಮ ಸಂತತಿಯವರೆಲ್ಲರಲ್ಲಿ ಯಾವನಾದರೂ ಅಪವಿತ್ರನಾಗಿರುವಾಗ ಅವುಗಳನ್ನು ಮುಟ್ಟಿದರೆ, ಅವನನ್ನು ನನ್ನ ಸನ್ನಿಧಿ ಸೇವೆಯಿಂದ ತೆಗೆದುಹಾಕಬೇಕು! ಇಸ್ರೇಲರು ಅವುಗಳನ್ನು ನನಗೆ ಕೊಟ್ಟಿದ್ದಾರೆ. ನಾನೇ ಯೆಹೋವನು!
4 “ಆರೋನನ ಸಂತತಿಯವರಲ್ಲಿ ಯಾವನಿಗಾದರೂ ಕೆಟ್ಟದಾದ ಚರ್ಮರೋಗವಾಗಲಿ ಸ್ರಾವವಾಗಲಿ ಇದ್ದರೆ, ಅವನು ಶುದ್ಧನಾಗುವವರೆಗೆ ದೇವರಿಗೆ ನೈವೇದ್ಯವಾದ ಪದಾರ್ಥಗಳನ್ನು ತಿನ್ನಬಾರದು. ಅಶುದ್ಧನಾಗುವ ಪ್ರತಿ ಯಾಜಕನಿಗೂ ಈ ನಿಯಮ ಅನ್ವಯಿಸುತ್ತದೆ. ಆ ಯಾಜಕನು ಹೆಣವನ್ನು ಮುಟ್ಟಿದರೆ, ವೀರ್ಯಸ್ಖಲನ ಮಾಡಿಕೊಂಡರೆ, 5 ಯಾವುದೇ ಅಶುದ್ಧವಾದ ಹರಿದಾಡುವ ಜಂತುಗಳನ್ನು ಮುಟ್ಟಿದರೆ, ಅಶುದ್ಧನಾದ ವ್ಯಕ್ತಿಯನ್ನು ಮುಟ್ಟಿದರೆ ಅಶುದ್ಧನಾಗುವನು. ಯಾವುದು ಅವನನ್ನು ಅಶುದ್ಧಪಡಿಸಿತು ಎಂಬುದು ಪ್ರಾಮುಖ್ಯವಲ್ಲ. 6 ಒಬ್ಬನು ಅವುಗಳಲ್ಲಿ ಯಾವುದನ್ನು ಮುಟ್ಟಿದರೂ ಸಾಯಂಕಾಲದವರೆಗೆ ಅಶುದ್ಧನಾಗುವನು. ಅವನು ನೈವೇದ್ಯ ಪದಾರ್ಥಗಳಲ್ಲಿ ಯಾವುದನ್ನೂ ತಿನ್ನಬಾರದು. ಅವನು ತನ್ನನ್ನು ನೀರಿನಿಂದ ತೊಳೆದುಕೊಂಡರೂ ಪವಿತ್ರ ಪದಾರ್ಥವನ್ನು ತಿನ್ನಬಾರದು.[c] 7 ಸೂರ್ಯನು ಮುಳುಗಿದ ನಂತರವೇ ಅವನು ಶುದ್ಧನಾಗುವನು. ಬಳಿಕ ಅವನು ನೈವೇದ್ಯ ಪದಾರ್ಥವನ್ನು ತಿನ್ನಬಹುದು. ಯಾಕೆಂದರೆ ಆ ಪದಾರ್ಥವು ಅವನ ಪಾಲಾಗುತ್ತದೆ.
8 “ಯಾಜಕನು ಸತ್ತ ಪ್ರಾಣಿಯನ್ನಾಗಲಿ ಕ್ರೂರ ಪ್ರಾಣಿಗಳಿಂದ ಕೊಲ್ಲಲ್ಪಟ್ಟ ಪ್ರಾಣಿಯನ್ನಾಗಲಿ ತಿನ್ನಬಾರದು. ಅವನು ಅದನ್ನು ತಿಂದರೆ ಅಶುದ್ಧನಾಗುವನು. ನಾನೇ ಯೆಹೋವನು!
9 “ಯಾಜಕರು ನನ್ನ ಅಗತ್ಯತೆಗಳನ್ನು ಎಚ್ಚರಿಕೆಯಿಂದ ಪೂರೈಸಿದರೆ ಅಪರಾಧಕ್ಕೆ ಒಳಗಾಗುವುದಿಲ್ಲ. ಅವರು ಪವಿತ್ರವಾದವುಗಳನ್ನು ಅಪವಿತ್ರಗೊಳಿಸಿದರೆ ಸಾಯುವರು. ಯೆಹೋವನಾದ ನಾನೇ ಅವರನ್ನು ಪರಿಶುದ್ಧರನ್ನಾಗಿ ಮಾಡಿದ್ದೇನೆ ಮತ್ತು ಈ ವಿಶೇಷ ಸೇವೆಗಾಗಿ ಪ್ರತ್ಯೇಕಿಸಿದ್ದೇನೆ. 10 ಯಾಜಕರ ಕುಟುಂಬದ ಜನರು ಮಾತ್ರವೇ ನೈವೇದ್ಯ ಪದಾರ್ಥಗಳನ್ನು ತಿನ್ನಬಹುದು. ಯಾಜಕನೊಂದಿಗೆ ಇಳಿದುಕೊಂಡವನಾಗಲಿ ಕೂಲಿಯಾಳಾಗಲಿ ನೈವೇದ್ಯ ಪದಾರ್ಥಗಳಲ್ಲಿ ಯಾವುದನ್ನೂ ತಿನ್ನಬಾರದು. 11 ಆದರೆ ಯಾಜಕನು ತನ್ನ ಸ್ವಂತ ಹಣದಿಂದ ಒಬ್ಬನನ್ನು ಗುಲಾಮನನ್ನಾಗಿ ಕೊಂಡುಕೊಂಡರೆ, ಆ ಗುಲಾಮನು ನೈವೇದ್ಯ ಪದಾರ್ಥಗಳಲ್ಲಿ ಕೆಲವನ್ನು ತಿನ್ನಬಹುದು. ಯಾಜಕನ ಮನೆಯಲ್ಲಿ ಹುಟ್ಟಿದ ಗುಲಾಮರು ಸಹ ಯಾಜಕನ ಆಹಾರದಲ್ಲಿ ಕೆಲವನ್ನು ತಿನ್ನಬಹುದು. 12 ಯಾಜಕನ ಮಗಳು ಯಾಜಕನಲ್ಲದವನನ್ನು ಮದುವೆಯಾದರೆ ಅವಳು ನೈವೇದ್ಯ ಸಮರ್ಪಣೆಗಳಲ್ಲಿ ಯಾವುದನ್ನೂ ತಿನ್ನಬಾರದು. 13 ಯಾಜಕನ ಮಗಳು ವಿಧವೆಯಾಗಿದ್ದರೆ ಅಥವಾ ಗಂಡ ಬಿಟ್ಟವಳಾಗಿದ್ದರೆ ಅಲ್ಲದೆ ಅವಳಿಗೆ ಆಧಾರ ನೀಡುವಂಥ ಮಕ್ಕಳೂ ಇಲ್ಲದಿದ್ದರೆ ಮತ್ತು ಅವಳು ತನ್ನ ತಂದೆಯ ಮನೆಗೆ ಹಿಂತಿರುಗಿ ಹೋದರೆ, ಆಗ ಅವಳು ತಂದೆಯ ಆಹಾರದಲ್ಲಿ ಸ್ವಲ್ಪ ತಿನ್ನಬಹುದು. ಆದರೆ ಯಾಜಕನ ಕುಟುಂಬದವರು ಮಾತ್ರವೇ ಈ ಆಹಾರವನ್ನು ತಿನ್ನಬಹುದು.
14 “ಒಬ್ಬನು ತಿಳಿಯದೆ ನೈವೇದ್ಯ ಪದಾರ್ಥವನ್ನು ತಿಂದರೆ ಅವನು ಆ ಪದಾರ್ಥವನ್ನೂ ಪದಾರ್ಥದ ಬೆಲೆಯ ಐದನೆಯ ಒಂದಂಶವನ್ನೂ ಅದಕ್ಕೆ ಸೇರಿಸಿ ಯಾಜಕನಿಗೆ ಕೊಡಬೇಕು.
15 “ಇಸ್ರೇಲರು ಯೆಹೋವನಿಗೆ ಕೊಡುವ ಕಾಣಿಕೆಗಳು ಪರಿಶುದ್ಧವಾಗಿವೆ. ಆದ್ದರಿಂದ ಯಾಜಕರು ಆ ಪರಿಶುದ್ಧ ವಸ್ತುಗಳನ್ನು ಅಶುದ್ಧಮಾಡಬಾರದು. 16 ಯಾಜಕರು ಅವುಗಳನ್ನು ಪರಿಶುದ್ಧವಾದವುಗಳೆಂದು ಪರಿಗಣಿಸದೆ ನೈವೇದ್ಯ ಪದಾರ್ಥಗಳನ್ನು ತಿಂದರೆ ಪಾಪಕ್ಕೆ ಒಳಗಾಗುವರು. ಯೆಹೋವನಾದ ನಾನೇ ಅವುಗಳನ್ನು ಪವಿತ್ರಗೊಳಿಸಿದ್ದೇನೆ.”
17 ಯೆಹೋವನು ಮೋಶೆಗೆ ಹೀಗೆಂದನು: 18 “ಆರೋನನಿಗೆ, ಅವನ ಪುತ್ರರಿಗೆ ಮತ್ತು ಇಸ್ರೇಲರೆಲ್ಲರಿಗೆ ಹೀಗೆ ಹೇಳು: ಒಂದುವೇಳೆ ಇಸ್ರೇಲನಾಗಲಿ ಅಥವಾ ಪರದೇಶಸ್ಥನಾಗಲಿ ಹರಕೆಯಾಗಿ ಅಥವಾ ಕಾಣಿಕೆಯಾಗಿ ಸರ್ವಾಂಗಹೋಮ ಮಾಡುವಾಗ, 19-20 ಅದು ಸ್ವೀಕೃತವಾಗುವಂತೆ ಪೂರ್ಣಾಂಗವಾದ ಹೋರಿಯನ್ನಾಗಲಿ ಟಗರನ್ನಾಗಲಿ ಹೋತವನ್ನಾಗಲಿ ಅರ್ಪಿಸಬೇಕು. ಅಂಗದೋಷವುಳ್ಳ ಯಾವುದನ್ನೂ ನೀವು ಸಮರ್ಪಿಸಬಾರದು. ಅಂಗದೋಷವುಳ್ಳವುಗಳನ್ನು ನಾನು ಸ್ವೀಕರಿಸುವುದಿಲ್ಲ.
21 “ಒಬ್ಬನು ಸಮಾಧಾನಯಜ್ಞವನ್ನು ಹರಕೆಯಾಗಿ ಅಥವಾ ಕಾಣಿಕೆಯಾಗಿ ಅರ್ಪಿಸುವಾಗ ಹೋರಿಯನ್ನಾಗಲಿ ಟಗರನ್ನಾಗಲಿ ಅರ್ಪಿಸಬೇಕು; ಅದು ಅಂಗದೋಷವಿಲ್ಲದ್ದಾಗಿರಬೇಕು; ಆರೋಗ್ಯವುಳ್ಳದ್ದಾಗಿರಬೇಕು. ಆಗ ಅದು ಸ್ವೀಕೃತವಾಗುವುದು. 22 ಕುರುಡಾದದ್ದನ್ನಾಗಲಿ ಮೂಳೆ ಮುರಿದುಕೊಂಡದ್ದನ್ನಾಗಲಿ ಕುಂಟಾದದ್ದನ್ನಾಗಲಿ ಸ್ರಾವವುಳ್ಳದ್ದನ್ನಾಗಲಿ ಕೆಟ್ಟದಾದ ಚರ್ಮರೋಗವುಳ್ಳದ್ದನ್ನಾಗಲಿ ನೀವು ಯೆಹೋವನಿಗೆ ಅರ್ಪಿಸಬಾರದು. ಯೆಹೋವನ ಯಜ್ಞವೇದಿಕೆಯ ಬೆಂಕಿಯಲ್ಲಿ ಅನಾರೋಗ್ಯವಾದ ಪ್ರಾಣಿಗಳನ್ನು ಅರ್ಪಿಸಬಾರದು.
23 “ಕಾಲು ಉದ್ದವಾಗಿರುವ ಅಥವಾ ಮೊಂಡಾಗಿರುವ ಹೋರಿಯನ್ನಾಗಲಿ ಕುರಿಯನ್ನಾಗಲಿ ಒಬ್ಬನು ಯೆಹೋವನಿಗೆ ಕಾಣಿಕೆಯಾಗಿ ಕೊಡಲು ಬಯಸಿದರೆ, ಆಗ ಅದು ಸ್ವೀಕೃತವಾಗುವುದು. ಆದರೆ, ಅವನು ಮಾಡಿದ ವಿಶೇಷ ಹರಕೆಯಾಗಿ ಅದು ಸ್ವೀಕೃತವಾಗುವುದಿಲ್ಲ. ಅದು ಸ್ವಇಚ್ಛೆಯಿಂದ ಅರ್ಪಿಸಿದ ಕಾಣಿಕೆಯಾಗಿ ಸ್ವೀಕರಿಸಲ್ಪಡುವುದು.
24 “ಗಾಯಗೊಂಡ, ಜಜ್ಜಿದ ಅಥವಾ ಒಡೆದ ಬೀಜವುಳ್ಳ ಪಶುವನ್ನು ಯೆಹೋವನಿಗೆ ಅರ್ಪಿಸಬಾರದು. ಇದನ್ನು ನಿಮ್ಮ ಸ್ವಂತ ನಾಡಿನಲ್ಲಿ ಮಾಡಬಾರದು.
25 “ಪರದೇಶಸ್ಥರಿಂದ ಯೆಹೋವನಿಗೆ ಬಲಿಪಶುಗಳನ್ನು ತೆಗೆದುಕೊಳ್ಳಬಾರದು. ಯಾಕೆಂದರೆ ಆ ಪಶುಗಳಿಗೆ ಒಂದುವೇಳೆ ಪೆಟ್ಟಾಗಿರಬಹುದು. ಅವುಗಳಲ್ಲಿ ಏನಾದರೂ ದೋಷವಿರಬಹುದು. ಅವುಗಳು ಸಮರ್ಪಕವಾಗುವುದಿಲ್ಲ.”
26 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 27 “ಕರುವಾಗಲಿ ಕುರಿಮರಿಯಾಗಲಿ ಅಥವಾ ಆಡಾಗಲಿ ಹುಟ್ಟಿದ ಬಳಿಕ ತನ್ನ ತಾಯಿಯೊಂದಿಗೆ ಏಳು ದಿನಗಳವರೆಗೆ ಇರಲೇಬೇಕು. ಎಂಟನೆಯ ದಿನದಲ್ಲಿ ಮತ್ತು ಅದರ ನಂತರ, ಆ ಪಶುವು ಸರ್ವಾಂಗಹೋಮಕ್ಕೆ ಯೋಗ್ಯವಾಗಿರುತ್ತದೆ. 28 ಆದರೆ ನೀವು ಆ ಪಶುವನ್ನೂ ಅದರ ತಾಯಿಯನ್ನೂ ಒಂದೇ ದಿನದಲ್ಲಿ ವಧಿಸಬಾರದು. ಇದೇ ನಿಯಮ ದನಗಳಿಗೂ ಕುರಿಗಳಿಗೂ ಅನ್ವಯಿಸುತ್ತದೆ.
29 “ಯೆಹೋವನಿಗೆ ವಿಶೇಷ ಕೃತಜ್ಞತಾ ಕಾಣಿಕೆಯನ್ನು ಅರ್ಪಿಸಲು ಬಯಸಿದರೆ, ಆ ಕಾಣಿಕೆಯನ್ನು ಯೆಹೋವನಿಗೆ ಮೆಚ್ಚಿಕೆಯಾದ ರೀತಿಯಲ್ಲಿ ಅರ್ಪಿಸಬೇಕು. 30 ನೀವು ಇಡೀ ಪಶುವನ್ನು ಅದೇ ದಿನದಲ್ಲಿ ತಿನ್ನಬೇಕು. ಮರುದಿನ ಮುಂಜಾನೆಯವರೆಗೆ ಮಾಂಸದಲ್ಲಿ ಸ್ವಲ್ಪವನ್ನೂ ಉಳಿಸಬಾರದು. ನಾನೇ ಯೆಹೋವನು!
31 “ನನ್ನ ಆಜ್ಞೆಗಳನ್ನು ಜ್ಞಾಪಕ ಮಾಡಿಕೊಂಡು ಅವುಗಳಿಗೆ ವಿಧೇಯರಾಗಿರಿ. ನಾನೇ ಯೆಹೋವನು! 32 ನನ್ನ ಪವಿತ್ರ ನಾಮವನ್ನು ಗೌರವಿಸಬೇಕು. ನಾನು ಇಸ್ರೇಲರಿಗೆ ಬಹಳ ವಿಶೇಷವಾದವನಾಗಿರಬೇಕು. ಯೆಹೋವನಾದ ನಾನು ನಿಮ್ಮನ್ನು ನನ್ನ ವಿಶೇಷ ಜನರನ್ನಾಗಿ ಮಾಡಿದ್ದೇನೆ. 33 ನಿಮ್ಮ ದೇವರಾಗಿರುವುದಕ್ಕಾಗಿ ನಾನು ನಿಮ್ಮನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದೆನು. ನಾನೇ ಯೆಹೋವನು!”
ಯೇಸುವಿನ ಪುನರುತ್ಥಾನ
(ಮಾರ್ಕ 16:1-8; ಲೂಕ 24:1-12; ಯೋಹಾನ 20:1-10)
28 ಸಬ್ಬತ್ ದಿನ ಕಳೆದಿತ್ತು. ಭಾನುವಾರ ಬೆಳಗಾಗುವುದರಲ್ಲಿತ್ತು. ಮಗ್ಧಲದ ಮರಿಯಳು ಮತ್ತು ಇನ್ನೊಬ್ಬ ಮರಿಯಳು ಸಮಾಧಿಯನ್ನು ನೋಡಲು ಹೋದರು.
2 ಆಗ ಭೀಕರ ಭೂಕಂಪವಾಯಿತು. ಪ್ರಭುವಿನ ದೂತನೊಬ್ಬನು ಆಕಾಶದಿಂದ ಇಳಿದುಬಂದನು. ಆ ದೇವದೂತನು ಸಮಾಧಿಯ ಬಳಿಗೆ ಹೋಗಿ, ಸಮಾಧಿಯ ಬಾಗಿಲಿನಿಂದ ಬಂಡೆಯನ್ನು ಉರುಳಿಸಿ ಆ ಬಂಡೆಯ ಮೇಲೆ ಕುಳಿತುಕೊಂಡನು. 3 ದೇವದೂತನು ಮಿಂಚಿನಂತೆ ಪ್ರಕಾಶಿಸುತ್ತಿದ್ದನು. ಅವನ ಬಟ್ಟೆಗಳು ಮಂಜಿನಂತೆ ಬಿಳುಪಾಗಿದ್ದವು. 4 ಸಮಾಧಿಯನ್ನು ಕಾಯುತ್ತಿದ್ದ ಸೈನಿಕರು ದೇವದೂತನನ್ನು ಕಂಡು ಬಹಳವಾಗಿ ಹೆದರಿ ಭಯದಿಂದ ನಡುಗುತ್ತಾ ಸತ್ತಂತಾದರು.
5 ದೇವದೂತನು ಆ ಸ್ತ್ರೀಯರಿಗೆ, “ಹೆದರಬೇಡಿ, ಶಿಲುಬೆಗೇರಿಸಲ್ಪಟ್ಟ ಯೇಸುವನ್ನು ನೀವು ಹುಡುಕುತ್ತಿದ್ದೀರೆಂಬುದು ನನಗೆ ತಿಳಿದಿದೆ. 6 ಆದರೆ ಯೇಸು ಇಲ್ಲಿಲ್ಲ. ಆತನು ತಾನು ತಿಳಿಸಿದ್ದಂತೆಯೇ ಪುನರುತ್ಥಾನ ಹೊಂದಿದ್ದಾನೆ. ಬನ್ನಿ, ಆತನ ದೇಹವಿದ್ದ ಸ್ಥಳವನ್ನು ನೋಡಿ. 7 ಬೇಗನೆ ಹೋಗಿ ಆತನ ಶಿಷ್ಯರಿಗೆ, ‘ಯೇಸು ಪುನರುತ್ಥಾನ ಹೊಂದಿದ್ದಾನೆ. ಆತನು ಗಲಿಲಾಯಕ್ಕೆ ಹೋಗುತ್ತಿದ್ದಾನೆ. ನಿಮಗಿಂತ ಮುಂಚೆಯೇ ಆತನು ಅಲ್ಲಿರುತ್ತಾನೆ. ನೀವು ಆತನನ್ನು ಅಲ್ಲಿ ನೋಡುತ್ತೀರಿ’ ಎಂದು ಹೇಳಿರಿ. ನಾನು ನಿಮಗೆ ತಿಳಿಸಬೇಕಾದ ಸಮಾಚಾರ ಇದೇ, ಮರೆಯದಿರಿ” ಎಂದನು.
8 ಕೂಡಲೇ ಆ ಸ್ತ್ರೀಯರು ಭಯದಿಂದಲೂ ಸಂತೋಷದಿಂದಲೂ ಸಮಾಧಿಯಿಂದ ಹೊರಟರು. ನಡೆದ ಸಂಗತಿಯನ್ನು ಶಿಷ್ಯರಿಗೆ ತಿಳಿಸಲು ಅವರು ಓಡಿಹೋಗುತ್ತಿರಲು, 9 ಯೇಸು ಅವರ ಮುಂದೆ ಪ್ರತ್ಯಕ್ಷನಾಗಿ, “ನಿಮಗೆ ಶುಭವಾಗಲಿ” ಎಂದನು. ಆ ಸ್ತ್ರೀಯರು ಯೇಸುವಿನ ಬಳಿಗೆ ಹೋಗಿ, ಆತನ ಪಾದಗಳನ್ನು ಹಿಡಿದುಕೊಂಡು ಆತನನ್ನು ಆರಾಧಿಸಿದರು. 10 ಯೇಸು ಆ ಸ್ತ್ರೀಯರಿಗೆ, “ಹೆದರಬೇಡಿ, ನನ್ನ ಸಹೋದರರ ಬಳಿಗೆ ಹೋಗಿ ಗಲಿಲಾಯಕ್ಕೆ ಬರಲು ತಿಳಿಸಿರಿ. ಅವರು ನನ್ನನ್ನು ಅಲ್ಲಿ ಕಾಣುವರು” ಎಂದು ಹೇಳಿದನು.
ಯೆಹೂದ್ಯ ನಾಯಕರಿಗೆ ಬಂದ ವರದಿ
11 ಆ ಸ್ತ್ರೀಯರು ಶಿಷ್ಯರಿಗೆ ತಿಳಿಸಲು ಹೋದರು. ಇತ್ತ ಸಮಾಧಿಯನ್ನು ಕಾಯುತ್ತಿದ್ದ ಕೆಲವು ಸೈನಿಕರು ನಗರದೊಳಕ್ಕೆ ಹೋಗಿ ನಡೆದ ಸಂಗತಿಯನ್ನೆಲ್ಲಾ ಮಹಾಯಾಜಕರಿಗೆ ತಿಳಿಸಿದರು. 12 ಆಗ ಮಹಾಯಾಜಕರು ಹಿರಿಯ ಯೆಹೂದ್ಯರನ್ನು ಭೇಟಿಮಾಡಿ ಚರ್ಚಿಸಿದರು ಮತ್ತು ಸೈನಿಕರಿಗೆ ಹೆಚ್ಚು ಹಣಕೊಟ್ಟು ಅವರಿಂದ ಸುಳ್ಳು ಹೇಳಿಸುವ ಉಪಾಯವನ್ನು ಮಾಡಿದರು. 13 ಅವರು ಸೈನಿಕರಿಗೆ, “ರಾತ್ರಿ ವೇಳೆಯಲ್ಲಿ ನಾವು ನಿದ್ರಿಸುತ್ತಿದ್ದಾಗ ಯೇಸುವಿನ ಶಿಷ್ಯರು ಬಂದು ಅವನ ದೇಹವನ್ನು ಕದ್ದೊಯ್ದರೆಂದು ಜನರಿಗೆ ತಿಳಿಸಿರಿ. 14 ಇದು ರಾಜ್ಯಪಾಲನಿಗೆ ಗೊತ್ತಾದರೂ ನಾವು ಅವನನ್ನು ಸಮಾಧಾನಪಡಿಸುತ್ತೇವೆ ಮತ್ತು ನಿಮಗೇನೂ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ” ಎಂದು ಹೇಳಿದರು. 15 ಸೈನಿಕರು ಹಣವನ್ನು ತೆಗೆದುಕೊಂಡು, ಅವರು ಹೇಳಿದಂತೆಯೇ ಮಾಡಿದರು. ಈ ಕಥೆಯು ಇಂದಿನವರೆಗೂ ಯೆಹೂದ್ಯರಲ್ಲಿ ಹಬ್ಬಿಕೊಂಡಿದೆ.
ಯೇಸು ತನ್ನ ಶಿಷ್ಯರಿಗೆ ಹೇಳಿದ ಕಡೆಯ ಮಾತುಗಳು
(ಮಾರ್ಕ 16:14-18; ಲೂಕ 24:36-49; ಯೋಹಾನ 20:19-23; ಅ.ಕಾ. 1:6-8)
16 ಹನ್ನೊಂದು ಮಂದಿ ಶಿಷ್ಯರು ಗಲಿಲಾಯಕ್ಕೆ ಹೊರಟು ಯೇಸು ತಿಳಿಸಿದ್ದ ಬೆಟ್ಟಕ್ಕೆ ಬಂದರು. 17 ಶಿಷ್ಯರು ಬೆಟ್ಟದ ಮೇಲೆ ಯೇಸುವನ್ನು ಕಂಡು ಆತನನ್ನು ಆರಾಧಿಸಿದರು. ಆದರೆ ಕೆಲವು ಶಿಷ್ಯರು ಆತನೇ ನಿಜವಾದ ಯೇಸು ಎಂಬುದನ್ನು ನಂಬಲಿಲ್ಲ. 18 ಆದ್ದರಿಂದ ಯೇಸು ಅವರ ಬಳಿಗೆ ಬಂದು, “ಪರಲೋಕದ ಮತ್ತು ಈ ಲೋಕದ ಅಧಿಕಾರವೆಲ್ಲವನ್ನು ನನಗೆ ಕೊಡಲಾಗಿದೆ. 19 ಆದ್ದರಿಂದ ನೀವು ಹೋಗಿ, ಲೋಕದಲ್ಲಿರುವ ಜನರೆಲ್ಲರನ್ನು ನನ್ನ ಶಿಷ್ಯರನ್ನಾಗಿ ಮಾಡಿರಿ. ತಂದೆಯ, ಮಗನ ಮತ್ತು ಪವಿತ್ರಾತ್ಮನ ಹೆಸರಿನಲ್ಲಿ ಅವರಿಗೆಲ್ಲ ದೀಕ್ಷಾಸ್ನಾನ ಮಾಡಿಸಿ. 20 ನಾನು ನಿಮಗೆ ಆಜ್ಞಾಪಿಸಿದವುಗಳಿಗೆಲ್ಲಾ ವಿಧೇಯರಾಗುವಂತೆ ಜನರಿಗೆ ಉಪದೇಶಿಸಿ, ಲೋಕಾಂತ್ಯದವರೆಗೂ ಸದಾಕಾಲ ನಾನು ನಿಮ್ಮೊಂದಿಗಿರುತ್ತೇನೆ” ಎಂದು ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International