Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಯಾಜಕಕಾಂಡ 19-20

ಇಸ್ರೇಲರು ದೇವಜನರಾಗಿದ್ದಾರೆ

19 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: “ಇಸ್ರೇಲರಿಗೆ ಹೀಗೆ ಹೇಳು: ನಾನೇ ನಿಮ್ಮ ದೇವರಾದ ಯೆಹೋವನು ನಾನು ಪರಿಶುದ್ಧನಾಗಿರುವಂತೆಯೇ ನೀವೂ ಪರಿಶುದ್ಧರಾಗಿರಬೇಕು!

“ನಿಮ್ಮಲ್ಲಿ ಪ್ರತಿಯೊಬ್ಬನು ತನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು; ನನ್ನ ವಿಶ್ರಾಂತಿಯ ವಿಶೇಷ ದಿನಗಳನ್ನು ಆಚರಿಸಬೇಕು. ನಾನೇ ನಿಮ್ಮ ದೇವರಾದ ಯೆಹೋವನು!

“ವಿಗ್ರಹಾರಾಧನೆ ಮಾಡಬೇಡಿರಿ! ಎರಕದ ವಿಗ್ರಹಗಳನ್ನು ಮಾಡಿಕೊಳ್ಳಬೇಡಿರಿ. ನಾನೇ ನಿಮ್ಮ ದೇವರಾದ ಯೆಹೋವನು!

“ನೀವು ಸಮಾಧಾನಯಜ್ಞಗಳನ್ನು ಯೆಹೋವನಿಗೆ ಸಮರ್ಪಿಸುವಾಗ, ನೀವು ಅಂಗೀಕೃತರಾಗುವಂತೆ ಅವುಗಳನ್ನು ಅರ್ಪಿಸಬೇಕು. ನೀವು ಅರ್ಪಿಸಿದ ದಿನದಲ್ಲಿ ಅಥವಾ ಮರುದಿನದಲ್ಲಿ ಅದನ್ನು ತಿನ್ನಬಹುದು. ಆದರೆ ಆ ಯಜ್ಞದಲ್ಲಿ ಏನಾದರೂ ಮೂರನೆಯ ದಿನದವರೆಗೆ ಉಳಿದರೆ, ನೀವು ಅದನ್ನು ಬೆಂಕಿಯಿಂದ ಸುಟ್ಟುಬಿಡಬೇಕು. ಅದರಲ್ಲಿ ಯಾವುದನ್ನಾದರೂ ಮೂರನೆಯ ದಿನದಲ್ಲಿ ತಿಂದರೆ, ಅದು ಅಪವಿತ್ರವಾಗುವುದು. ಅದು ಅಂಗೀಕೃತವಾಗುವುದಿಲ್ಲ. ಒಬ್ಬನು ಅದನ್ನು ಮೂರನೆಯ ದಿನದಲ್ಲಿ ತಿಂದರೆ ಅವನು ಪಾಪಮಾಡಿದ ದೋಷಿಯಾಗಿರುವನು. ಯಾಕೆಂದರೆ ಯೆಹೋವನಿಗೆ ಮೀಸಲಾದ ಪವಿತ್ರ ವಸ್ತುಗಳ ವಿಷಯದಲ್ಲಿ ಅವನಿಗೆ ಗೌರವವಿಲ್ಲ; ಆ ವ್ಯಕ್ತಿಯನ್ನು ಅವನ ಜನರಿಂದ ತೆಗೆದುಹಾಕಬೇಕು.

“ಸುಗ್ಗಿಕಾಲದಲ್ಲಿ ನಿಮ್ಮ ಬೆಳೆಯನ್ನು ಕೊಯ್ಯುವಾಗ, ಹೊಲಗಳ ಮೂಲೆಗಳಲ್ಲಿರುವುದನ್ನೆಲ್ಲಾ ಕೊಯ್ಯಬೇಡಿರಿ; ಧಾನ್ಯವೇನಾದರೂ ನೆಲದ ಮೇಲೆ ಬಿದ್ದರೆ ಅದನ್ನು ಕೂಡಿಸಿಕೊಳ್ಳಬಾರದು. 10 ನಿಮ್ಮ ದ್ರಾಕ್ಷಿತೋಟಗಳಲ್ಲಿರುವ ದ್ರಾಕ್ಷಿಗಳನ್ನೆಲ್ಲಾ ತೆಗೆದುಕೊಳ್ಳಬೇಡಿರಿ: ನೆಲದ ಮೇಲೆ ಬೀಳುವ ದ್ರಾಕ್ಷಿಹಣ್ಣುಗಳನ್ನು ಹೆಕ್ಕಿಕೊಳ್ಳಬಾರದು. ಯಾಕೆಂದರೆ ನೀವು ಅವುಗಳನ್ನು ಬಡವರಿಗಾಗಿಯೂ ನಿಮ್ಮ ದೇಶದಲ್ಲಿ ವಾಸಿಸಲು ಬಂದ ಪರದೇಶಸ್ಥರಿಗಾಗಿಯೂ ಬಿಡಬೇಕು. ನಾನೇ ನಿಮ್ಮ ದೇವರಾದ ಯೆಹೋವನು!

11 “ನೀವು ಕದಿಯಬಾರದು; ಮೋಸಮಾಡಬಾರದು; ಒಬ್ಬರಿಗೊಬ್ಬರು ಸುಳ್ಳಾಡಬಾರದು. 12 ನೀವು ನನ್ನ ಹೆಸರನ್ನು ಉಪಯೋಗಿಸಿ ಸುಳ್ಳಾಣೆ ಇಟ್ಟುಕೊಳ್ಳಬಾರದು; ಇಲ್ಲವಾದರೆ ನೀವು ದೇವರ ಹೆಸರನ್ನು ಅಪಕೀರ್ತಿಗೆ ಗುರಿಪಡಿಸುವಿರಿ; ನಾನೇ ನಿಮ್ಮ ದೇವರಾದ ಯೆಹೋವನು!

13 “ನಿಮ್ಮ ನೆರೆಯವನಿಗೆ ಕೆಡುಕುಗಳನ್ನು ಮಾಡಬಾರದು. ನೀವು ಅವನನ್ನು ಸುಲಿಗೆ ಮಾಡಬಾರದು. ನಿಮ್ಮ ಕೂಲಿಯವರ ಕೂಲಿಯನ್ನು ಮರುದಿನದ ಮುಂಜಾನೆಯವರೆಗೆ ಹಿಡಿದಿಟ್ಟುಕೊಳ್ಳಬಾರದು.

14 “ನೀವು ಕಿವುಡನನ್ನು ಶಪಿಸಬಾರದು. ಕುರುಡನು ಬೀಳುವಂತೆ ನೀವು ಅವನ ಮುಂದೆ ಅಡ್ಡವಾಗಿ ಏನನ್ನೂ ಇಡಬಾರದು. ಆದರೆ ನೀವು ನಿಮ್ಮ ದೇವರನ್ನು ಸನ್ಮಾನಿಸಬೇಕು. ನಾನೇ ನಿಮ್ಮ ದೇವರಾದ ಯೆಹೋವನು.

15 “ನೀವು ಕೊಡುವ ತೀರ್ಪು ನ್ಯಾಯವಾಗಿರಬೇಕು. ಬಡವರ ಬಡತನವನ್ನಾಗಲಿ ಪ್ರಾಮುಖ್ಯರ ದೊಡ್ಡಸ್ತಿಕೆಯನ್ನಾಗಲಿ ಗಮನಿಸದೆ ಪಕ್ಷಪಾತವಿಲ್ಲದೆ ತೀರ್ಪುಕೊಡಬೇಕು. ನೀವು ನಿಮ್ಮ ನೆರೆಯವನಿಗೆ ತೀರ್ಪುಮಾಡುವಾಗ ನ್ಯಾಯದ ತೀರ್ಪುಕೊಡಿರಿ. 16 ಬೇರೆ ಜನರ ವಿರುದ್ಧ ಚಾಡಿ ಹೇಳಬಾರದು. ನಿಮ್ಮ ನೆರೆಯವನ ಪ್ರಾಣವನ್ನು ಅಪಾಯಕ್ಕೆ ಈಡುಮಾಡುವ ಯಾವ ಕಾರ್ಯವನ್ನೂ ನೀವು ಮಾಡಬಾರದು. ನಾನೇ ಯೆಹೋವನು!

17 “ನೀವು ನಿಮ್ಮ ಸಹೋದರನನ್ನು ಮನಸ್ಸಿನಲ್ಲಿ ದ್ವೇಷಿಸಬಾರದು. ನಿಮ್ಮ ಸಹೋದರನು ಏನಾದರೂ ತಪ್ಪುಮಾಡಿದರೆ, ಅವನೊಡನೆ ಅದರ ಕುರಿತು ಮಾತಾಡು. ಅವನ ಅಪರಾಧದಲ್ಲಿ ನೀವು ಪಾಲುಹೊಂದದಂತೆ ನೇರವಾಗಿ ಗದರಿಸಿ. ಆಗ ನೀವು ಅವನನ್ನು ಕ್ಷಮಿಸಬಹುದು. 18 ಜನರು ನಿಮಗೆ ಮಾಡುವ ಕೆಟ್ಟಕಾರ್ಯಗಳನ್ನು ಮರೆತುಬಿಡಿರಿ. ನಿಮ್ಮ ಜನರಲ್ಲಿ ಒಬ್ಬನಾಗಿರುವವನ ಮೇಲೆ ಸೇಡನ್ನು ತೀರಿಸಿಕೊಳ್ಳಲು ಪ್ರಯತ್ನಿಸಬೇಡಿರಿ; ದ್ವೇಷವನ್ನೂ ಇಟ್ಟುಕೊಳ್ಳಬೇಡಿ. ನಿಮ್ಮ ನೆರೆಯವನನ್ನು ನಿಮ್ಮಂತೆಯೇ ಪ್ರೀತಿಸಿರಿ. ನಾನೇ ಯೆಹೋವನು!

19 “ನೀವು ನನ್ನ ಕಟ್ಟಳೆಗಳಿಗೆ ವಿಧೇಯರಾಗಿರಬೇಕು. ಎರಡು ಬೇರೆ ಜಾತಿಯ ಪಶುಗಳನ್ನು ಒಟ್ಟಿಗೆ ಸೇರಿಸಿ ಈಯಿಸಬಾರದು. ನಿಮ್ಮ ಹೊಲಗಳಲ್ಲಿ ಎರಡು ವಿಧದ ಬೀಜಗಳನ್ನು ಬಿತ್ತಬಾರದು. ಎರಡು ವಿಧದ ದಾರಗಳನ್ನು ಸೇರಿಸಿ ಮಾಡಿದ ಬಟ್ಟೆಯನ್ನು ಧರಿಸಿಕೊಳ್ಳಬಾರದು.

20 “ಇನ್ನೊಬ್ಬನ ದಾಸಿಯಾಗಿರುವ ಸ್ತ್ರೀಯೊಡನೆ ಒಬ್ಬನು ಲೈಂಗಿಕ ಸಂಬಂಧವಿಟ್ಟುಕೊಂಡಿದ್ದರೆ, ಈ ದಾಸಿಯು ಹಣದಿಂದಾಗಲಿ ಉಚಿತವಾಗಿಯಾಗಲಿ ಬಿಡುಗಡೆಯಾಗಲು ಸಾಧ್ಯವಿಲ್ಲದಿದ್ದರೆ ಅವರಿಬ್ಬರಿಗೆ ಶಿಕ್ಷೆ ವಿಧಿಸಬೇಕು. ಆದರೆ ಅವರಿಗೆ ಮರಣ ಶಿಕ್ಷೆಯಾಗಬಾರದು. ಯಾಕೆಂದರೆ ಸ್ತ್ರೀಯು ಸ್ವತಂತ್ರಳಾಗಿಲ್ಲ. 21 ಆ ಪುರುಷನು ತನ್ನ ದೋಷಪರಿಹಾರಕ ಯಜ್ಞಕ್ಕಾಗಿ ಒಂದು ಟಗರನ್ನು ಯೆಹೋವನ ಬಳಿಗೆ ದೇವದರ್ಶನಗುಡಾರದ ಬಾಗಿಲಿಗೆ ತರಬೇಕು. 22 ಯಾಜಕನು ಅವನನ್ನು ಶುದ್ಧಿಮಾಡುವ ಕಾರ್ಯಗಳನ್ನು ಮಾಡುವನು. ಯಾಜಕನು ಯೆಹೋವನ ಸನ್ನಿಧಿಯಲ್ಲಿ ಆ ಟಗರನ್ನು ದೋಷಪರಿಹಾರಕ ಯಜ್ಞವಾಗಿ ಅರ್ಪಿಸುವನು. ಅದು ಆ ಪುರುಷನು ಮಾಡಿದ ಪಾಪಗಳ ಪರಿಹಾರಕ್ಕಾಗಿರುವುದು. ಆಗ ಅವನಿಗೆ ಕ್ಷಮಾಪಣೆಯಾಗುವುದು.

23 “ಮುಂದೆ ನೀವು ನಿಮ್ಮ ದೇಶವನ್ನು ಪ್ರವೇಶಿಸುವಿರಿ. ಆ ಸಮಯದ ಆಹಾರಕ್ಕಾಗಿ ಅನೇಕ ವಿಧಗಳ ಮರಗಳನ್ನು ನೆಡುವಿರಿ. ಸಸಿಯನ್ನು ನೆಟ್ಟನಂತರ, ನೀವು ಆ ಮರದಿಂದ ಹಣ್ಣನ್ನು ಉಪಯೋಗಿಸುವುದಕ್ಕೆ ಮೂರು ವರ್ಷಗಳು ಕಾಯಬೇಕು. ನೀವು ಆ ಹಣ್ಣನ್ನು ಉಪಯೋಗಿಸಬಾರದು. 24 ನಾಲ್ಕನೆಯ ವರ್ಷದಲ್ಲಿ ಆ ಮರದ ಎಲ್ಲಾ ಹಣ್ಣುಗಳು ಯೆಹೋವನದಾಗುವುದು. ಅದು ಯೆಹೋವನ ಸ್ತುತಿಗೆ ಅರ್ಪಿತವಾಗುವ ಪವಿತ್ರ ಕಾಣಿಕೆಯಾಗಿರುವುದು. 25 ಬಳಿಕ ಐದನೆಯ ವರ್ಷದಲ್ಲಿ, ನೀವು ಆ ಮರದ ಹಣ್ಣುಗಳನ್ನು ತಿನ್ನಬಹುದು ಮತ್ತು ಮರವು ನಿಮಗೆ ಹೆಚ್ಚೆಚ್ಚಾಗಿ ಹಣ್ಣುಗಳನ್ನು ನೀಡುವುದು. ನಾನೇ ನಿಮ್ಮ ದೇವರಾದ ಯೆಹೋವನು!

26 “ರಕ್ತಸಹಿತವಾದ ಮಾಂಸವನ್ನು ನೀವು ತಿನ್ನಬಾರದು.

“ನೀವು ಕಣಿ ಹೇಳಬಾರದು; ಮಂತ್ರತಂತ್ರಗಳನ್ನು ಮಾಡಬಾರದು.

27 “ನಿಮ್ಮ ಮುಖದ ಪಾರ್ಶ್ವದಲ್ಲಿ ಬೆಳೆಯುವ ಕೂದಲನ್ನು ನೀವು ಕತ್ತರಿಸಬಾರದು. ನಿಮ್ಮ ಮುಖದ ಪಾರ್ಶ್ವದಲ್ಲಿರುವ ಗಡ್ಡವನ್ನು ಕತ್ತರಿಸಿಕೊಳ್ಳುವುದರ ಮೂಲಕ ನೀವು ನಿಮ್ಮ ಗಡ್ಡವನ್ನು ವಿಕಾರ ಮಾಡಿಕೊಳ್ಳಬಾರದು. 28 ಸತ್ತವರನ್ನು ಜ್ಞಾಪಕ ಮಾಡಿಕೊಳ್ಳುವುದಕ್ಕಾಗಿ ನಿಮ್ಮ ದೇಹವನ್ನು ಗಾಯಮಾಡಿಕೊಳ್ಳಬಾರದು. ಶರೀರದ ಮೇಲೆ ಹಚ್ಚೇ ಚುಚ್ಚಿಸಿಕೊಳ್ಳಬಾರದು. ನಾನೇ ಯೆಹೋವನು!

29 “ಮಗಳನ್ನು ಸೂಳೆಯನ್ನಾಗಿ ಮಾಡಬಾರದು. ಇದರಿಂದ ಸೂಳೆಗಾರಿಕೆ ಹೆಚ್ಚಾಗುತ್ತದೆ. ನಿಮ್ಮ ದೇಶದಲ್ಲಿ ಸೂಳೆಗಾರಿಕೆ ಇರದಂತೆ ನೋಡಿಕೊಳ್ಳಿರಿ. ಇಂಥ ಪಾಪದಿಂದ ನಿಮ್ಮ ದೇಶವು ತುಂಬಿಹೋಗಲು ಬಿಡಬೇಡಿರಿ.

30 “ನೀವು ನನ್ನ ಸಬ್ಬತ್ ದಿನಗಳನ್ನು ಅನುಸರಿಸಬೇಕು. ನನ್ನ ವಿಶ್ರಾಂತಿಯ ವಿಶೇಷ ದಿನಗಳಲ್ಲಿ ನೀವು ಕೆಲಸ ಮಾಡಬಾರದು. ನೀವು ನನ್ನ ಪವಿತ್ರಸ್ಥಳವನ್ನು ಗೌರವಿಸಬೇಕು. ನಾನೇ ಯೆಹೋವನು!

31 “ಸಲಹೆಗಾಗಿ, ಸತ್ತವರಲ್ಲಿ ವಿಚಾರಿಸುವವರ ಮತ್ತು ಬೇತಾಳಿಕರ ಬಳಿಗೆ ಹೋಗಬೇಡಿರಿ. ಅವರು ನಿಮ್ಮನ್ನು ಕೇವಲ ಅಶುದ್ಧರನ್ನಾಗಿ ಮಾಡುವರು. ನಾನೇ ನಿಮ್ಮ ದೇವರಾದ ಯೆಹೋವನು!

32 “ವೃದ್ಧರ ಮುಂದೆ ಎದ್ದು ನಿಂತುಕೊಳ್ಳಿರಿ. ಹಿರಿಯರಿಗೆ ಗೌರವಕೊಡಿರಿ. ನಿಮ್ಮ ದೇವರನ್ನು ಸನ್ಮಾನಿಸಿರಿ. ನಾನೇ ಯೆಹೋವನು!

33 “ನಿಮ್ಮ ದೇಶದಲ್ಲಿ ವಾಸಿಸುವ ಪರದೇಶಸ್ಥರಿಗೆ ಕೆಟ್ಟದ್ದನ್ನು ಮಾಡಬೇಡಿರಿ. 34 ನಿಮ್ಮ ಸ್ವಂತ ದೇಶದವರೊಡನೆ ವರ್ತಿಸುವ ಪ್ರಕಾರ ಪರದೇಶಸ್ಥರೊಡನೆ ವರ್ತಿಸಿರಿ. ನಿಮ್ಮನ್ನು ಪ್ರೀತಿಸುವಂತೆ ಪರದೇಶಸ್ಥರನ್ನು ಪ್ರೀತಿಸಿರಿ. ಯಾಕೆಂದರೆ ನೀವು ಸಹ ಒಂದು ಕಾಲದಲ್ಲಿ ಈಜಿಪ್ಟಿನಲ್ಲಿದ್ದಾಗ ಪರದೇಶಸ್ಥರಾಗಿದ್ದಿರಿ. ನಾನೇ ನಿಮ್ಮ ದೇವರಾದ ಯೆಹೋವನು!

35 “ನೀವು ಜನರಿಗೆ ತೀರ್ಪುಮಾಡುವಾಗ ನ್ಯಾಯವಾಗಿ ತೀರ್ಪುಮಾಡಬೇಕು. ನೀವು ಅಳೆಯುವಾಗ ಮತ್ತು ತೂಕಮಾಡುವಾಗ ನ್ಯಾಯವಾಗಿ ನಡೆದುಕೊಳ್ಳಬೇಕು. 36 ನಿಮ್ಮ ಪುಟ್ಟಿಗಳು ಸರಿಯಾದ ಪ್ರಮಾಣದ್ದಾಗಿರಬೇಕು. ನಿಮ್ಮ ಕೊಳಗಗಳು ದ್ರವಪದಾರ್ಥಗಳನ್ನು ಸರಿಯಾದ ಪ್ರಮಾಣದಲ್ಲಿ ಹಿಡಿಸಿಕೊಳ್ಳುವಂತವುಗಳಾಗಿರಬೇಕು. ನಿಮ್ಮ ತೂಕದ ಕಲ್ಲುಗಳು ಮತ್ತು ತಕ್ಕಡಿಗಳು ವಸ್ತುಗಳನ್ನು ಸರಿಯಾಗಿ ತೂಕ ಮಾಡುವಂಥವುಗಳಾಗಿರಬೇಕು. ನಾನೇ ನಿಮ್ಮ ದೇವರಾದ ಯೆಹೋವನು! ನಾನು ನಿಮ್ಮನ್ನು ಈಜಿಪ್ಟಿನಿಂದ ಹೊರತಂದೆನು.

37 “ನೀವು ನನ್ನ ಕಟ್ಟಳೆಗಳನ್ನು ಮತ್ತು ನಿಯಮಗಳನ್ನು ಜ್ಞಾಪಕಮಾಡಿಕೊಳ್ಳಬೇಕು; ಅವುಗಳಿಗೆ ವಿಧೇಯರಾಗಬೇಕು. ನಾನೇ ಯೆಹೋವನು.”

ವಿಗ್ರಹಾರಾಧನೆಯ ಕುರಿತು ಎಚ್ಚರಿಕೆ

20 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: “ನೀನು ಇಸ್ರೇಲರಿಗೆ ಹೀಗೆ ಆಜ್ಞಾಪಿಸಬೇಕು. ನಿಮ್ಮ ದೇಶದಲ್ಲಿರುವ ಒಬ್ಬನು ತನ್ನ ಮಕ್ಕಳಲ್ಲಿ ಒಬ್ಬನನ್ನು ಸುಳ್ಳು ದೇವರಾದ ಮೊಲೆಕನಿಗೆ ಅರ್ಪಿಸಿದರೆ ಅವನನ್ನು ಕೊಲ್ಲಬೇಕು. ಅವನು ಸ್ವದೇಶಸ್ಥನಾದರೂ ಇಸ್ರೇಲರಲ್ಲಿ ವಾಸಿಸುವ ಪರದೇಶಸ್ಥನಾದರೂ ಅವನನ್ನು ಕಲ್ಲೆಸೆದು ಕೊಲ್ಲಬೇಕು. ನಾನು ಅವನಿಗೆ ವಿರುದ್ಧವಾಗಿರುವೆನು. ನಾನು ಅವನನ್ನು ಅವನ ಕುಟುಂಬದಿಂದ ಬೇರ್ಪಡಿಸುವೆನು. ಯಾಕೆಂದರೆ ಅವನು ತನ್ನ ಮಕ್ಕಳನ್ನು ಮೊಲೆಕನಿಗೆ ಅರ್ಪಿಸುವುದರ ಮೂಲಕ ನನ್ನ ಪವಿತ್ರಾಲಯವನ್ನು ಅಪವಿತ್ರಗೊಳಿಸಿದನು; ನನ್ನ ನಾಮಕ್ಕೆ ಅವಮಾನ ಮಾಡಿದನು. ಒಂದುವೇಳೆ ದೇಶದ ಜನರು ಅವನು ಮಾಡಿದ ಕಾರ್ಯವನ್ನು ನಿರ್ಲಕ್ಷಿಸಿ ಅವನನ್ನು ಕೊಲ್ಲದಿದ್ದರೆ, ನಾನು ಅವನಿಗೂ ಅವನ ಕುಟುಂಬಕ್ಕೂ ವಿರುದ್ಧನಾಗಿರುವೆನು; ನಾನು ಅವನನ್ನು ಅವನ ಜನರಿಂದ ಬೇರ್ಪಡಿಸುವೆನು. ಮೊಲೆಕನೊಡನೆ ಸೂಳೆತನ ಮಾಡುವ ಅವನನ್ನೂ ಅವನ ಹಿಂಬಾಲಕರನ್ನೂ ಅವರ ಜನರಿಂದ ಬೇರ್ಪಡಿಸುವೆನು.

“ಸತ್ತವರಲ್ಲಿ ವಿಚಾರಿಸುವವರ ಮತ್ತು ಬೇತಾಳಿಕರ ಬಳಿಗೆ ಹೋಗುವ ಯಾವುದೇ ವ್ಯಕ್ತಿಯಾದರೂ ಸರಿಯೇ ಅವನಿಗೆ ನಾನು ವಿರುದ್ಧವಾಗಿರುವೆನು. ಆ ವ್ಯಕ್ತಿ ನನಗೆ ಅಪನಂಬಿಗಸ್ತನಾಗಿದ್ದಾನೆ.[a] ಆದ್ದರಿಂದ ನಾನು ಅವನನ್ನು ಅವನ ಕುಲದಿಂದ ತೆಗೆದುಹಾಕುವೆನು.

“ನೀವು ನನಗೆ ವಿಶೇಷ ಜನರಾಗಿದ್ದೀರಿ. ನಿಮ್ಮನ್ನು ಪವಿತ್ರರನ್ನಾಗಿ ಮಾಡಿಕೊಳ್ಳಿರಿ. ಯಾಕೆಂದರೆ ನಾನೇ ನಿಮ್ಮ ದೇವರಾದ ಯೆಹೋವನು. ನಾನು ಪರಿಶುದ್ಧನಾಗಿದ್ದೇನೆ. ನನ್ನ ನಿಯಮಗಳನ್ನು ಜ್ಞಾಪಕಮಾಡಿ ಅವುಗಳಿಗೆ ವಿಧೇಯರಾಗಿರಿ. ನಿಮ್ಮನ್ನು ಪವಿತ್ರರನ್ನಾಗಿ ಮಾಡುವ[b] ಯೆಹೋವನೇ ನಾನು. ನಿಮ್ಮನ್ನು ನನ್ನ ವಿಶೇಷ ಜನರನ್ನಾಗಿ ಮಾಡಿದ್ದೇನೆ.

“ಯಾವನಾದರೂ ತನ್ನ ತಂದೆಯನ್ನಾಗಲಿ ತಾಯಿಯನ್ನಾಗಲಿ ಶಪಿಸಿದರೆ, ಅವನಿಗೆ ಮರಣಶಿಕ್ಷೆಯಾಗಬೇಕು. ಅವನು ತನ್ನ ತಂದೆತಾಯಿಗಳನ್ನು ಶಪಿಸಿದನು. ಅವನ ಮರಣಕ್ಕೆ[c] ಅವನೇ ಜವಾಬ್ದಾರನಾಗಿದ್ದಾನೆ.

ಲೈಂಗಿಕ ಪಾಪಗಳಿಗೆ ವಿಧಿಸತಕ್ಕ ಶಿಕ್ಷೆಗಳು

10 “ಒಬ್ಬನು ನೆರೆಯವನ ಹೆಂಡತಿಯೊಡನೆ ಲೈಂಗಿಕ ಸಂಬಂಧ ಹೊಂದಿದರೆ, ಆಗ ಅವರಿಬ್ಬರೂ ವ್ಯಭಿಚಾರ ಮಾಡಿದ ದೋಷಿಗಳಾಗಿದ್ದಾರೆ. ಆದ್ದರಿಂದ ಅವರಿಬ್ಬರಿಗೂ ಅಂದರೆ ಗಂಡಸಿಗೂ ಹೆಂಗಸಿಗೂ ಮರಣಶಿಕ್ಷೆಯಾಗಬೇಕು! 11 ಒಬ್ಬನು ತನ್ನ ತಂದೆಯ ಹೆಂಡತಿಯೊಡನೆ ಲೈಂಗಿಕ ಸಂಬಂಧ ಬೆಳೆಸಿದರೆ, ಅವನಿಗೂ ಆಕೆಗೂ ಮರಣಶಿಕ್ಷೆಯಾಗಬೇಕು. ಅವನು ತನ್ನ ತಂದೆಗೆ ಅವಮಾನ ಮಾಡಿದ್ದಾನೆ. ಅವರು ತಮ್ಮ ಮರಣಕ್ಕೆ ತಾವೇ ಜವಾಬ್ದಾರರಾಗಿದ್ದಾರೆ.

12 “ಒಬ್ಬನು ತನ್ನ ಸೊಸೆಯೊಡನೆ ಲೈಂಗಿಕ ಸಂಬಂಧ ಬೆಳೆಸಿದರೆ, ಅವರಿಬ್ಬರೂ ಕೊಲ್ಲಲ್ಪಡಬೇಕು. ಅವರ ಮರಣಕ್ಕೆ ಅವರೇ ಜವಾಬ್ದಾರರಾಗಿದ್ದಾರೆ. ಅವರು ಬಹಳ ಕೆಟ್ಟದಾದ ಲೈಂಗಿಕ ಪಾಪವನ್ನು ಮಾಡಿದವರಾಗಿದ್ದಾರೆ.

13 “ಒಬ್ಬನು ಸ್ತ್ರೀಯೊಂದಿಗೆ ಸಂಗಮಿಸುವಂತೆ ಪುರುಷನೊಡನೆ ಲೈಂಗಿಕ ಸಂಬಂಧ ಮಾಡಿದರೆ, ಆಗ ಈ ಇಬ್ಬರೂ ಭಯಂಕರವಾದ ಪಾಪ ಮಾಡಿದವರಾಗಿದ್ದಾರೆ. ಅವರಿಗೆ ಮರಣಶಿಕ್ಷೆಯಾಗಬೇಕು. ಅವರು ಕೊಲ್ಲಲ್ಪಡಬೇಕು. ಅವರ ಮರಣಕ್ಕೆ ಅವರೇ ಜವಾಬ್ದಾರರಾಗಿದ್ದಾರೆ.

14 “ಒಬ್ಬನು ಒಬ್ಬ ಸ್ತ್ರೀಯೊಂದಿಗೂ ಅವಳ ತಾಯಿಯೊಂದಿಗೂ ಲೈಂಗಿಕ ಸಂಬಂಧಗಳನ್ನು ಬೆಳೆಸಿದರೆ, ಆಗ ಇದು ಲೈಂಗಿಕ ಪಾಪವಾಗಿದೆ. ಜನರು ಆ ಮನುಷ್ಯನನ್ನು ಇಬ್ಬರು ಸ್ತ್ರೀಯರನ್ನು ಬೆಂಕಿಯಿಂದ ಸುಟ್ಟುಹಾಕಬೇಕು. ನಿಮ್ಮ ಜನರ ಮಧ್ಯದಲ್ಲಿ ಈ ಲೈಂಗಿಕ ಪಾಪ ನಡೆಯಲು ಬಿಡಬೇಡಿರಿ.

15 “ಒಬ್ಬನು ಪಶುವಿನೊಡನೆ ಲೈಂಗಿಕ ಸಂಬಂಧ ಮಾಡಿದರೆ, ಆ ಮನುಷ್ಯನಿಗೆ ಮರಣಶಿಕ್ಷೆಯಾಗಬೇಕು ಮತ್ತು ನೀವು ಆ ಪಶುವನ್ನು ಕೊಲ್ಲಬೇಕು. 16 ಸ್ತ್ರೀಯು ಪಶುವಿನೊಡನೆ ಲೈಂಗಿಕ ಸಂಬಂಧ ಮಾಡಿದರೆ, ಆಗ ನೀವು ಸ್ತ್ರೀಯನ್ನೂ ಪಶುವನ್ನೂ ಕೊಲ್ಲಬೇಕು. ಅವಳಿಗೆ ಮತ್ತು ಅದಕ್ಕೆ ಮರಣ ಶಿಕ್ಷೆಯಾಗಬೇಕು. ಅವರ ಮರಣಕ್ಕೆ ಅವರೇ ಜವಾಬ್ದಾರರಾಗಿದ್ದಾರೆ.

17 “ಒಬ್ಬನು ತನ್ನ ಸಹೋದರಿಯನ್ನಾಗಲಿ ತನ್ನ ತಂದೆಯ ಅಥವಾ ತಾಯಿಯ ಮಗಳನ್ನಾಗಲಿ ಮದುವೆಯಾಗಿ ಲೈಂಗಿಕ ಸಂಬಂಧ ಬೆಳೆಸಿದರೆ, ಅದು ಅವಮಾನಕರವಾದ ಕಾರ್ಯವಾಗಿದೆ! ಅವರಿಗೆ ಬಹಿರಂಗವಾಗಿ ಶಿಕ್ಷೆಯಾಗಬೇಕು. ಅವರನ್ನು ಅವರ ಕುಲದಿಂದ ತೆಗೆದುಹಾಕಬೇಕು. ತನ್ನ ಸಹೋದರಿಯೊಂದಿಗೆ ಲೈಂಗಿಕ ಸಂಬಂಧ ಮಾಡಿದ ಪುರುಷನಿಗೆ ಅವನು ಮಾಡಿದ ಪಾಪಕ್ಕಾಗಿ ಶಿಕ್ಷೆಯಾಗಬೇಕು.[d]

18 “ಒಬ್ಬನು ಸ್ತ್ರೀಯನ್ನು ಅವಳ ತಿಂಗಳ ಮುಟ್ಟಿನ ಸಮಯದಲ್ಲಿ ಸಂಭೋಗ ಮಾಡಿದರೆ, ಅವರಿಬ್ಬರನ್ನೂ ಕುಲದಿಂದ ತೆಗೆದುಹಾಕಬೇಕು. ಯಾಕೆಂದರೆ ಅವನು ಅವಳ ಶೋಣಿತಸ್ಥಾನವನ್ನು ಬಯಲುಪಡಿಸಿದನು; ಅವಳು ಬಯಲುಪಡಿಸಿಕೊಂಡಳು.

19 “ತಾಯಿಯ ಸಹೋದರಿ ಅಥವಾ ತಂದೆಯ ಸಹೋದರಿಯೊಂದಿಗೆ ಲೈಂಗಿಕ ಸಂಬಂಧ ಮಾಡಬಾರದು. ಅದು ರಕ್ತ ಸಂಬಂಧಿಯೊಡನೆ ಸಂಭೋಗ ಮಾಡಿದ ಪಾಪವಾಗಿದೆ. ನಿಮ್ಮ ಪಾಪಗಳಿಗಾಗಿ ನಿಮಗೆ ಶಿಕ್ಷೆಯಾಗಬೇಕು. (ಅದಕ್ಕೆ ನೀವಿಬ್ಬರೂ ಜವಾಬ್ದಾರರಾಗಿದ್ದೀರಿ.)

20 “ಒಬ್ಬನು ತನ್ನ ದೊಡ್ಡಪ್ಪ ಅಥವಾ ಚಿಕ್ಕಪ್ಪನ ಹೆಂಡತಿಯೊಡನೆ ಮಲಗಿಕೊಳ್ಳಬಾರದು. ಅವರ ಪಾಪಗಳಿಗಾಗಿ ಅವರಿಬ್ಬರಿಗೂ ಶಿಕ್ಷೆಯಾಗುವುದು. ಅವರು ಮಕ್ಕಳಿಲ್ಲದೆ ಸಾಯುವರು.[e]

21 “ತನ್ನ ಸಹೋದರನ ಹೆಂಡತಿಯೊಡನೆ ಲೈಂಗಿಕ ಸಂಬಂಧ ಬೆಳೆಸುವುದು ತಪ್ಪಾಗಿದೆ. ಅವನು ತನ್ನ ಸಹೋದರನಿಗೆ ಅವಮಾನ ಮಾಡಿದವನಾಗಿದ್ದಾನೆ. ಅವರಿಗೆ ಮಕ್ಕಳಾಗುವುದಿಲ್ಲ.

22 “ನೀವು ನನ್ನ ಕಟ್ಟಳೆ ಮತ್ತು ನಿಯಮಗಳನ್ನೆಲ್ಲಾ ಜ್ಞಾಪಕಮಾಡಿಕೊಳ್ಳಬೇಕು. ನೀವು ಅವುಗಳಿಗೆ ವಿಧೇಯರಾಗಬೇಕು. ನಾನು ನಿಮ್ಮನ್ನು ನಿಮ್ಮ ದೇಶಕ್ಕೆ ನಡಿಸುತ್ತಿದ್ದೇನೆ. ನೀವು ಆ ದೇಶದಲ್ಲಿ ವಾಸಿಸುವಿರಿ. ನೀವು ನನ್ನ ಕಟ್ಟಳೆಗಳಿಗೆ ಮತ್ತು ನಿಯಮಗಳಿಗೆ ವಿಧೇಯರಾದರೆ, ಆಗ ಆ ದೇಶವು ನಿಮ್ಮನ್ನು ಕಾರಿಬಿಡುವುದಿಲ್ಲ. 23 ಆ ದೇಶವನ್ನು ಬಿಟ್ಟುಹೋಗುವಂತೆ ಅಲ್ಲಿಯ ಜನರನ್ನು ನಾನು ಹೊರಡಿಸಿಬಿಡುತ್ತಿದ್ದೇನೆ. ಯಾಕೆಂದರೆ ಅವರು ಆ ಪಾಪಗಳನ್ನೆಲ್ಲಾ ಮಾಡಿದರು. ನಾನು ಆ ಪಾಪಗಳನ್ನು ದ್ವೇಷಿಸುತ್ತೇನೆ. ಆದ್ದರಿಂದ ಅವರು ಜೀವಿಸಿದಂತೆ ನೀವು ಜೀವಿಸಬೇಡಿರಿ! 24 ನೀವು ಅವರ ದೇಶವನ್ನು ಪಡೆಯುವಿರಿ ಎಂದು ನಾನು ನಿಮಗೆ ಹೇಳಿದ್ದೇನೆ. ನಾನು ಅವರ ದೇಶವನ್ನು ನಿಮಗೆ ಕೊಡುವೆ. ಅದು ನಿಮ್ಮ ದೇಶವಾಗಿರುವದು. ಅದು ಅನೇಕ ಒಳ್ಳೆ ಸಂಗತಿಗಳಿಂದ ತುಂಬಿದ ದೇಶವಾಗಿದೆ.[f] ನಾನು ನಿಮ್ಮ ದೇವರಾಗಿರುವ ಯೆಹೋವನು!

“ನಾನು ನಿಮ್ಮನ್ನು ನನ್ನ ವಿಶೇಷ ಜನರನ್ನಾಗಿ ಮಾಡಿಕೊಂಡಿದ್ದೇನೆ. ನಾನು ನಿಮ್ಮನ್ನು ಇತರ ಜನರಿಂದ ಆರಿಸಿಕೊಂಡಿದ್ದೇನೆ. 25 ಆದ್ದರಿಂದ ಶುದ್ಧವಾದ ಪ್ರಾಣಿಗಳನ್ನು ಅಶುದ್ಧವಾದ ಪ್ರಾಣಿಗಳಿಗಿಂತ ಭಿನ್ನವಾಗಿ ಕಾಣಬೇಕು. ನೀವು ಶುದ್ಧವಾದ ಪಕ್ಷಿಗಳನ್ನು ಅಶುದ್ಧವಾದ ಪಕ್ಷಿಗಳಿಗಿಂತ ಭಿನ್ನವಾಗಿ ಕಾಣಬೇಕು. ಆ ಅಶುದ್ಧವಾದ ಪಕ್ಷಿಗಳಲ್ಲಿ, ಪ್ರಾಣಿಗಳಲ್ಲಿ ಮತ್ತು ನೆಲದ ಮೇಲೆ ಹರಿದಾಡುವ ಪ್ರಾಣಿಗಳಲ್ಲಿ ಯಾವುದನ್ನೂ ತಿನ್ನಬೇಡಿರಿ. ನಾನು ಅವುಗಳನ್ನು ಅಶುದ್ಧವಾಗಿ ಮಾಡಿದ್ದೇನೆ. 26 ನಾನು ನಿಮ್ಮನ್ನು ಇತರ ಜನಾಂಗಗಳಿಂದ ಪ್ರತ್ಯೇಕಿಸಿ, ನನ್ನ ವಿಶೇಷ ಜನರನ್ನಾಗಿ ಮಾಡಿದ್ದೇನೆ. ಆದ್ದರಿಂದ ನೀವು ಪರಿಶುದ್ಧರಾಗಿರಬೇಕು. ಯಾಕೆಂದರೆ ನಾನು ಯೆಹೋವನು ಮತ್ತು ನಾನು ಪರಿಶುದ್ಧನಾಗಿದ್ದೇನೆ.

27 “ಸತ್ತವರಲ್ಲಿ ವಿಚಾರಿಸುವವರು ಅಥವಾ ಬೇತಾಳಿಕರು, ಪುರುಷರಾಗಲಿ ಸ್ತ್ರೀಯರಾಗಲಿ ಆಗಿದ್ದರೂ, ಅವರಿಗೆ ಮರಣಶಿಕ್ಷೆಯಾಗಬೇಕು. ಜನರು ಅವರನ್ನು ಕಲ್ಲೆಸೆದು ಕೊಲ್ಲಬೇಕು. ಅವರ ಮರಣಕ್ಕೆ ಅವರೇ ಜವಾಬ್ದಾರರಾಗಿದ್ದಾರೆ.”

ಮತ್ತಾಯ 27:51-66

51 ಆಗ ದೇವಾಲಯದ ತೆರೆಯು ಮೇಲ್ಗಡೆಯಿಂದ ತಳಭಾಗದವರೆಗೂ ಹರಿದು ಎರಡು ಭಾಗವಾಯಿತು. ಭೂಮಿಯು ನಡುಗಿತು. ಬಂಡೆಗಳು ಒಡೆದುಹೋದವು. 52 ಸಮಾಧಿಗಳು ತೆರೆದವು, ಸತ್ತುಹೋಗಿದ್ದ ಅನೇಕ ದೇವಜನರು ಸಮಾಧಿಗಳೊಳಗಿಂದ ಜೀವಂತವಾಗಿ ಮೇಲೆದ್ದರು. 53 ಯೇಸು ಪುನರುತ್ಥಾನ ಹೊಂದಿದ ಬಳಿಕ, ಅವರು ಪವಿತ್ರ ನಗರವಾದ ಜೆರುಸಲೇಮಿಗೆ ಹೋದರು. ಜನರು ಅವರನ್ನು ಕಣ್ಣಾರೆ ಕಂಡರು.

54 ಯೇಸುವನ್ನು ಕಾಯುತ್ತಿದ್ದ ಸೇನಾಧಿಪತಿ ಮತ್ತು ಸೈನಿಕರು ಭೂಕಂಪವನ್ನು ಮತ್ತು ನಡೆದದ್ದನ್ನು ಕಂಡು ಬಹಳವಾಗಿ ಹೆದರಿ, “ಈತನು ನಿಜವಾಗಿಯೂ ದೇವರ ಮಗನಾಗಿದ್ದನು!” ಎಂದು ಹೇಳಿದರು.

55 ಯೇಸುವಿನ ಸೇವೆ ಮಾಡುತ್ತಾ ಗಲಿಲಾಯದಿಂದ ಆತನನ್ನು ಹಿಂಬಾಲಿಸಿಕೊಂಡು ಬಂದಿದ್ದ ಅನೇಕ ಸ್ತ್ರೀಯರು ದೂರದಲ್ಲಿ ನೋಡುತ್ತಾ ನಿಂತಿದ್ದರು. 56 ಮಗ್ದಲದ ಮರಿಯಳು, ಯಾಕೋಬ ಮತ್ತು ಯೋಸೇಫನ ತಾಯಿಯಾದ ಮರಿಯಳು, ಹಾಗೂ ಯೋಹಾನ ಮತ್ತು ಯಾಕೋಬನ ತಾಯಿ ಅಲ್ಲಿದ್ದರು.

ಯೇಸುವಿನ ಸಮಾಧಿ

(ಮಾರ್ಕ 15:42-47; ಲೂಕ 23:50-56; ಯೋಹಾನ 19:38-42)

57 ಆ ಸಂಜೆ ಯೋಸೇಫ ಎಂಬ ಶ್ರೀಮಂತ ವ್ಯಕ್ತಿ ಜೆರುಸಲೇಮಿಗೆ ಬಂದನು. ಅರಿಮತಾಯ ಪಟ್ಟಣದವನಾದ ಇವನು ಯೇಸುವಿನ ಶಿಷ್ಯನಾಗಿದ್ದನು. 58 ಇವನು ಪಿಲಾತನ ಬಳಿಗೆ ಹೋಗಿ, ಯೇಸುವಿನ ದೇಹವನ್ನು ತನಗೆ ಕೊಡಬೇಕೆಂದು ಕೇಳಿದನು. ಯೇಸುವಿನ ದೇಹವನ್ನು ಯೋಸೇಫನಿಗೆ ಕೊಡುವಂತೆ ಪಿಲಾತನು ಸೈನಿಕರಿಗೆ ಅಪ್ಪಣೆ ಮಾಡಿದನು. 59 ಯೋಸೇಫನು ಆತನ ದೇಹವನ್ನು ತೆಗೆದುಕೊಂಡು, ಅದನ್ನು ಹೊಸ ನಾರುಮಡಿಯ ಬಟ್ಟೆಯಿಂದ ಸುತ್ತಿ 60 ಬಂಡೆಯಲ್ಲಿ ತಾನು ತೋಡಿಸಿದ್ದ ಹೊಸ ಸಮಾಧಿಯಲ್ಲಿ ಇಟ್ಟನು. ಸಮಾಧಿಯ ಬಾಗಿಲಿಗೆ ಒಂದು ದೊಡ್ಡ ಬಂಡೆಯನ್ನು ಉರುಳಿಸಿ ಹೊರಟುಹೋದನು. 61 ಮಗ್ದಲದ ಮರಿಯಳು ಮತ್ತು ಇನ್ನೊಬ್ಬ ಮರಿಯಳು ಆ ಸಮಾಧಿಯ ಹತ್ತಿರ ಕುಳಿತುಕೊಂಡಿದ್ದರು.

ಯೇಸುವಿನ ಸಮಾಧಿಗೆ ಕಾವಲು

62 ಶುಕ್ರವಾರ ಮುಗಿದ ಮೇಲೆ ಮಹಾಯಾಜಕರು ಮತ್ತು ಫರಿಸಾಯರು ಪಿಲಾತನ ಬಳಿಗೆ ಹೋಗಿ, 63 “ಸ್ವಾಮೀ, ಆ ಸುಳ್ಳುಗಾರನು ಬದುಕಿದ್ದಾಗ, ‘ಮೂರು ದಿನಗಳ ಬಳಿಕ ನಾನು ಪುನರುತ್ಥಾನ ಹೊಂದುತ್ತೇನೆ’ ಎಂದು ಹೇಳಿದ್ದು ನಮಗಿನ್ನೂ ನೆನಪಿದೆ. 64 ಆದ್ದರಿಂದ ಮೂರು ದಿನಗಳವರೆಗೆ ಆ ಸಮಾಧಿಯನ್ನು ಭದ್ರವಾಗಿ ಕಾಯಲು ಆಜ್ಞಾಪಿಸಿರಿ. ಅವನ ಶಿಷ್ಯರು ಬಂದು, ಅವನ ದೇಹವನ್ನು ಕದ್ದುಕೊಂಡು ಹೋಗಿ, ಅವನು ಸಮಾಧಿಯಿಂದ ಮೇಲೆದ್ದಿದ್ದಾನೆ ಎಂದು ಜನರಿಗೆ ಹೇಳಬಹುದು. ಆಗ ಮೊದಲನೆಯ ಮೋಸಕ್ಕಿಂತ ಕಡೆಯದೇ ಕಡು ಮೋಸವಾದೀತು” ಎಂದು ಹೇಳಿದರು.

65 ಪಿಲಾತನು, “ಕೆಲವು ಸೈನಿಕರನ್ನು ಕರೆದುಕೊಂಡು ಹೋಗಿ, ನಿಮಗೆ ಬೇಕಾದ ರೀತಿಯಲ್ಲಿ ಸಮಾಧಿಯನ್ನು ಭದ್ರಪಡಿಸಿರಿ” ಎಂದು ಹೇಳಿದನು. 66 ಅವರು ಹೋಗಿ, ಸಮಾಧಿಗೆ ಮುದ್ರೆ ಹಾಕಿ, ಸೈನಿಕರನ್ನು ಕಾವಲಿರಿಸಿ, ಸಮಾಧಿಯನ್ನು ಸುಭದ್ರಪಡಿಸಿದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International