Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಯಾಜಕಕಾಂಡ 14

ಚರ್ಮರೋಗಿಯ ಶುದ್ಧೀಕರಣ

14 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: “ಚರ್ಮರೋಗವಿದ್ದು ವಾಸಿಯಾದ ಜನರು ಅನುಸರಿಸಬೇಕಾದ ನಿಯಮಗಳು ಇಂತಿವೆ. ಇವರನ್ನು ಶುದ್ಧೀಕರಣಕ್ಕಾಗಿ ಯಾಜಕನ ಬಳಿಗೆ ಕರೆದುಕೊಂಡು ಬಂದಾಗ ಅನುಸರಿಸತಕ್ಕ ನಿಯಮಗಳು ಯಾವುವೆಂದರೆ:

“ಚರ್ಮರೋಗವಿದ್ದ ವ್ಯಕ್ತಿಯನ್ನು ಯಾಜಕನು ಪರೀಕ್ಷಿಸಬೇಕು. ಯಾಜಕನು ಪಾಳೆಯದ ಹೊರಗೆ ಹೋಗಿ ಆ ವ್ಯಕ್ತಿಯ ಚರ್ಮರೋಗ ವಾಸಿಯಾಗಿದೆಯೋ ಇಲ್ಲವೋ ಎಂದು ನೋಡಬೇಕು. ಆ ವ್ಯಕ್ತಿಯು ಆರೋಗ್ಯವಂತನಾಗಿದ್ದರೆ, ಆಗ ಯಾಜಕನು ಈ ಸಂಗತಿಗಳನ್ನು ಮಾಡುವುದಕ್ಕೆ ಅವನಿಗೆ ಹೇಳುವನು. ಆ ವ್ಯಕ್ತಿಯು ಎರಡು ಜೀವಂತವಾದ ಶುದ್ಧ ಪಕ್ಷಿಗಳನ್ನು ತರಬೇಕು. ಅಲ್ಲದೆ, ಅವನು ದೇವದಾರುಮರದ ತುಂಡನ್ನು, ಕೆಂಪು ಬಣ್ಣದ ಬಟ್ಟೆಯ ತುಂಡನ್ನು ಮತ್ತು ಹಿಸ್ಸೋಪ್ ಗಿಡದ ಬರಲನ್ನು ತರಬೇಕು. ಬಳಿಕ ಒಂದು ಪಕ್ಷಿಯನ್ನು ಸೆಲೇ ನೀರಿನ ಮೇಲೆ ಮಣ್ಣಿನ ಪಾತ್ರೆಯಲ್ಲಿ ವಧಿಸಬೇಕೆಂದು ಯಾಜಕನು ಅಪ್ಪಣೆ ಕೊಡಬೇಕು. ಯಾಜಕನು ಸಜೀವವಾದ ಎರಡನೆಯ ಪಕ್ಷಿಯನ್ನು, ದೇವದಾರು ಮರದ ತುಂಡನ್ನು, ಕೆಂಪುಬಣ್ಣದ ಬಟ್ಟೆಯ ತುಂಡನ್ನು ಮತ್ತು ಹಿಸ್ಸೋಪ್ ಗಿಡವನ್ನು ತೆಗೆದುಕೊಳ್ಳಬೇಕು. ಸೆಲೇ ನೀರಿನ ಮೇಲೆ ವಧಿಸಲ್ಪಟ್ಟ ಪಕ್ಷಿಯ ರಕ್ತದಲ್ಲಿ ಜೀವಂತವಾಗಿರುವ ಪಕ್ಷಿಯನ್ನು ಮತ್ತು ಇತರ ವಸ್ತುಗಳನ್ನು ಅದ್ದಬೇಕು. ಯಾಜಕನು ಚರ್ಮರೋಗವಿದ್ದ ವ್ಯಕ್ತಿಯ ಮೇಲೆ ರಕ್ತವನ್ನು ಏಳುಸಲ ಚಿಮಿಕಿಸಬೇಕು. ಆ ವ್ಯಕ್ತಿಯನ್ನು ಶುದ್ಧನೆಂದು ಪ್ರಕಟಿಸಬೇಕು. ಬಳಿಕ ಯಾಜಕನು ಬಯಲಿಗೆ ಹೋಗಿ ಜೀವಂತವಾಗಿರುವ ಪಕ್ಷಿಯನ್ನು ಬಿಟ್ಟುಬಿಡಬೇಕು.

“ಬಳಿಕ ಆ ವ್ಯಕ್ತಿ ತನ್ನ ಬಟ್ಟೆಗಳನ್ನು ತೊಳೆದುಕೊಳ್ಳಬೇಕು. ಅವನು ಸರ್ವಾಂಗಕ್ಷೌರ ಮಾಡಿಕೊಂಡು ಸ್ನಾನ ಮಾಡಬೇಕು. ಆಗ ಅವನು ಶುದ್ಧನಾಗುವನು. ಬಳಿಕ ಆ ವ್ಯಕ್ತಿ ಪಾಳೆಯದೊಳಗೆ ಹೋಗಬಹುದು. ಆದರೆ ಅವನು ತನ್ನ ಡೇರೆಯಿಂದ ಏಳು ದಿನಗಳವರೆಗೆ ಹೊರಗೆ ಇರಬೇಕು. ಏಳನೆಯ ದಿನದಲ್ಲಿ ಅವನು ತನ್ನ ಎಲ್ಲಾ ಕೂದಲನ್ನು ಕ್ಷೌರ ಮಾಡಿಕೊಳ್ಳಬೇಕು. ಅವನು ತನ್ನ ತಲೆಯ, ಗಡ್ಡದ ಮತ್ತು ಹುಬ್ಬಿನ ಕೂದಲನ್ನು, ಹೌದು, ಎಲ್ಲಾ ಕೂದಲನ್ನು ಕ್ಷೌರ ಮಾಡಿಸಿಕೊಳ್ಳಬೇಕು. ಬಳಿಕ ಅವನು ತನ್ನ ಬಟ್ಟೆಗಳನ್ನು ತೊಳೆದು ನೀರಿನಲ್ಲಿ ಸ್ನಾನಮಾಡಬೇಕು. ಅಂದಿನಿಂದ ಅವನು ಶುದ್ಧನಾಗಿರುವನು.

10 “ಎಂಟನೆಯ ದಿನದಲ್ಲಿ ಅವನು ಯಾವ ದೋಷವಿಲ್ಲದ ಎರಡು ಟಗರುಗಳನ್ನೂ ಒಂದು ವರ್ಷದ ಹೆಣ್ಣು ಕುರಿಮರಿಯನ್ನೂ ಎಣ್ಣೆ ಬೆರೆಸಿದ ಇಪ್ಪತ್ತನಾಲ್ಕು ಬಟ್ಟಲು[a] ಶ್ರೇಷ್ಠ ಗೋಧಿಹಿಟ್ಟನ್ನೂ ತೆಗೆದುಕೊಂಡು ಬರಬೇಕು. ಈ ಶ್ರೇಷ್ಠ ಗೋಧಿಹಿಟ್ಟು ಧಾನ್ಯನೈವೇದ್ಯಕ್ಕಾಗಿರುತ್ತದೆ. ಅವನು ಒಂದು ಸೇರು ಆಲಿವ್ ಎಣ್ಣೆಯನ್ನೂ ತೆಗೆದುಕೊಂಡು ಬರಬೇಕು. 11 ಯಾಜಕನು ಅವನನ್ನೂ ಅವನ ಸಮರ್ಪಣೆಗಳನ್ನೂ ದೇವದರ್ಶನಗುಡಾರದ ಬಾಗಿಲಿನಲ್ಲಿ ಯೆಹೋವನ ಸನ್ನಿಧಿಗೆ ತೆಗೆದುಕೊಂಡು ಬರಬೇಕು. (ಈ ಯಾಜಕನೇ ಅವನನ್ನು ಶುದ್ಧನೆಂದು ಪ್ರಕಟಿಸುವವನಾಗಿರುತ್ತಾನೆ.) 12 ಯಾಜಕನು ಟಗರುಗಳಲ್ಲಿ ಒಂದನ್ನು ದೋಷಪರಿಹಾರಕ ಯಜ್ಞವಾಗಿ ಅರ್ಪಿಸುವನು. ಅವನು ಆ ಟಗರನ್ನೂ ಎಣ್ಣೆಯನ್ನೂ ಯೆಹೋವನ ಸನ್ನಿಧಿಯಲ್ಲಿ ನೈವೇದ್ಯ ಸಮರ್ಪಣೆಯಾಗಿ ನಿವಾಳಿಸುವನು. 13 ಬಳಿಕ ಯಾಜಕನು ಪಾಪಪರಿಹಾರಕ ಮತ್ತು ಸರ್ವಾಂಗಹೋಮ ಯಜ್ಞಪಶುಗಳನ್ನು ವಧಿಸುವ ಪವಿತ್ರಸ್ಥಳದಲ್ಲಿ ಟಗರನ್ನು ವಧಿಸುವನು. ದೋಷಪರಿಹಾರಕ ಯಜ್ಞವು ಪಾಪಪರಿಹಾರಕ ಯಜ್ಞದಂತಿದೆ. ಅದು ಯಾಜಕನಿಗೆ ಸೇರುತ್ತದೆ. ಅದು ಬಹಳ ಪವಿತ್ರವಾಗಿದೆ.

14 “ಯಾಜಕನು ದೋಷಪರಿಹಾರಕ ಯಜ್ಞಪಶುವಿನ ರಕ್ತದಿಂದ ಸ್ವಲ್ಪವನ್ನು ತೆಗೆದುಕೊಂಡು ಶುದ್ಧನಾಗಿ ಮಾಡಲ್ಪಡುವ ವ್ಯಕ್ತಿಯ ಬಲಗಿವಿಯ ತುದಿಗೂ ಬಲಗೈಯ ಹೆಬ್ಬೆರಳಿಗೂ ಬಲಗಾಲಿನ ಹೆಬ್ಬೆರಳಿಗೂ ಹಚ್ಚಬೇಕು. 15 ಅಲ್ಲದೆ ಯಾಜಕನು ಸ್ವಲ್ಪ ಎಣ್ಣೆಯನ್ನು ತೆಗೆದುಕೊಂಡು ತನ್ನ ಎಡಗೈಗೆ ಹೊಯ್ದುಕೊಳ್ಳಬೇಕು. 16 ಬಳಿಕ ಯಾಜಕನು ತನ್ನ ಬಲಗೈಯ ಬೆರಳನ್ನು ತನ್ನ ಎಡಗೈಯಲ್ಲಿರುವ ಎಣ್ಣೆಯಲ್ಲಿ ಅದ್ದಿ ಯೆಹೋವನ ಸನ್ನಿಧಿಯಲ್ಲಿ ಎಣ್ಣೆಯನ್ನು ಏಳುಸಲ ಚಿಮಿಕಿಸಬೇಕು. 17 ಯಾಜಕನು ತನ್ನ ಅಂಗೈಯಲ್ಲಿರುವ ಎಣ್ಣೆಯಲ್ಲಿ ಸ್ವಲ್ಪವನ್ನು ಶುದ್ಧನಾಗಲಿರುವ ವ್ಯಕ್ತಿಯ ದೋಷಪರಿಹಾರಕ ಯಜ್ಞಪಶುವಿನ ರಕ್ತವನ್ನು ಹಚ್ಚಿದ ಸ್ಥಳದಲ್ಲಿಯೇ ಅಂದರೆ ಬಲಗಿವಿಯ ತುದಿಗೆ, ಬಲಗೈಯ ಹೆಬ್ಬೆರಳಿಗೆ, ಬಲಗಾಲಿನ ಹೆಬ್ಬೆರಳಿಗೆ ಹಚ್ಚುವನು. 18 ಯಾಜಕನು ತನ್ನ ಅಂಗೈಯಲ್ಲಿ ಉಳಿದ ಎಣ್ಣೆಯನ್ನು ಶುದ್ಧನಾಗಿ ಮಾಡಲ್ಪಡುವ ವ್ಯಕ್ತಿಯ ತಲೆಗೆ ಹಚ್ಚುವನು. ಹೀಗೆ ಯಾಜಕನು ಆ ವ್ಯಕ್ತಿಯನ್ನು ಯೆಹೋವನ ಸನ್ನಿಧಿಯಲ್ಲಿ ಶುದ್ಧನನ್ನಾಗಿ ಮಾಡುವನು.

19 “ತರುವಾಯ ಯಾಜಕನು ಶುದ್ಧನಾಗಿ ಮಾಡಲ್ಪಡುವ ವ್ಯಕ್ತಿಗಾಗಿ ಪಾಪಪರಿಹಾರಕ ಯಜ್ಞವನ್ನು ಅರ್ಪಿಸಬೇಕು. ಯಾಜಕನು ಪಾಪಪರಿಹಾರಕ ಯಜ್ಞಮಾಡುವುದರ ಮೂಲಕ ಆ ವ್ಯಕ್ತಿಯ ಅಶುದ್ಧತ್ವಕ್ಕಾಗಿ ಪ್ರಾಯಶ್ಚಿತ್ತ ಮಾಡುವನು. ಅದರ ನಂತರ ಸರ್ವಾಂಗಹೋಮಕ್ಕಾಗಿ ಯಾಜಕನು ಎರಡನೆಯ ಟಗರನ್ನು ವಧಿಸುವನು. 20 ಬಳಿಕ ಯಾಜಕನು ಯಜ್ಞವೇದಿಕೆಯ ಮೇಲೆ ಸರ್ವಾಂಗಹೋಮವನ್ನು ಮತ್ತು ಧಾನ್ಯಸಮರ್ಪಣೆಯನ್ನು ಅರ್ಪಿಸುವನು. ಈ ರೀತಿಯಾಗಿ ಯಾಜಕನು ಆ ವ್ಯಕ್ತಿಗಾಗಿ ಪ್ರಾಯಶ್ಚಿತ್ತ ಮಾಡುವನು. ಆಗ ಅವನು ಶುದ್ಧನಾಗುವನು.

21 “ಆದರೆ ಅವನು ಬಡವನಾಗಿದ್ದು ಆ ಸಮರ್ಪಣೆಗಳನ್ನು ಕೊಡುವುದಕ್ಕೆ ಅಶಕ್ತನಾಗಿದ್ದರೆ, ಆಗ ಅವನು ದೋಷಪರಿಹಾರಕ್ಕಾಗಿ ಒಂದು ಟಗರನ್ನು ತೆಗೆದುಕೊಳ್ಳಬೇಕು. ಅದು ಯೆಹೋವನಿಗೆ ನೈವೇದ್ಯವಾಗಿ ನಿವಾಳಿಸಲ್ಪಡುವ ಅರ್ಪಣೆಯಾಗಿರುವುದು. ಹೀಗೆ ಯಾಜಕನು ಆ ವ್ಯಕಿಗಾಗಿ ಪ್ರಾಯಶ್ಚಿತ್ತ ಮಾಡಬಹುದು. ಅವನು ಎಣ್ಣೆ ಬೆರೆಸಿದ ಮೂರು ಸೇರು ಶ್ರೇಷ್ಠ ಗೋಧಿಹಿಟ್ಟನ್ನು ತೆಗೆದುಕೊಳ್ಳಬೇಕು. ಗೋಧಿಹಿಟ್ಟು ಧಾನ್ಯಸಮರ್ಪಣೆಯಾಗಿ ಉಪಯೋಗಿಸಲ್ಪಡುವುದು. ಅವನು ಒಂದು ಸೇರು ಆಲಿವ್ ಎಣ್ಣೆಯನ್ನು, 22 ಎರಡು ಬೆಳವಕ್ಕಿಗಳನ್ನು ಮತ್ತು ಎರಡು ಪಾರಿವಾಳ ಮರಿಗಳನ್ನು ತೆಗೆದುಕೊಳ್ಳಬೇಕು. ಬಡವರು ಸಹ ಅವುಗಳನ್ನು ಕೊಡಲು ಶಕ್ತರಾಗಿರುವರು. ಒಂದು ಪಕ್ಷಿಯು ಪಾಪಪರಿಹಾರಕ ಯಜ್ಞಕ್ಕಾಗಿಯೂ ಇನ್ನೊಂದು ಪಕ್ಷಿಯು ಸರ್ವಾಂಗಹೋಮಕ್ಕಾಗಿಯೂ ಇರುತ್ತದೆ.

23 “ಎಂಟನೆಯ ದಿನದಲ್ಲಿ, ಅವನು ಅವುಗಳನ್ನು ದೇವದರ್ಶನಗುಡಾರದ ಬಾಗಿಲಲ್ಲಿ ಯಾಜಕನ ಬಳಿಗೆ ತರಬೇಕು. ಅವನು ಶುದ್ಧನಾಗುವಂತೆ ಅವುಗಳನ್ನು ಯೆಹೋವನ ಸನ್ನಿಧಿಯಲ್ಲಿ ಸಮರ್ಪಿಸಬೇಕು. 24 ದೋಷಪರಿಹಾರಕ್ಕಾಗಿ ತಂದ ಕುರಿಮರಿಯನ್ನು ಮತ್ತು ಎಣ್ಣೆಯನ್ನು ಯಾಜಕನು ತೆಗೆದುಕೊಂಡು, ಅವುಗಳನ್ನು ಯೆಹೋವನ ಸನ್ನಿಧಿಯಲ್ಲಿ ನೈವೇದ್ಯವಾಗಿ ನಿವಾಳಿಸಬೇಕು. 25 ಬಳಿಕ ದೋಷಪರಿಹಾರಕ ಯಜ್ಞವಾದ ಕುರಿಮರಿಯನ್ನು ಯಾಜಕನು ವಧಿಸುವನು. ಯಾಜಕನು ದೋಷಪರಿಹಾರಕ ಯಜ್ಞದ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ಶುದ್ಧೀಕರಿಸಲ್ಪಡುವ ವ್ಯಕ್ತಿಯ ಬಲಗಿವಿಯ ತುದಿಗೂ ಬಲಗೈಯ ಹೆಬ್ಬೆರಳಿಗೂ ಬಲಗಾಲಿನ ಹೆಬ್ಬೆರಳಿಗೂ ಹಚ್ಚಬೇಕು. 26 ಅಲ್ಲದೆ ಯಾಜಕನು ಈ ಎಣ್ಣೆಯಲ್ಲಿ ಸ್ವಲ್ಪವನ್ನು ಅವನ ಎಡಗೈಗೆ ಹೊಯ್ಯಬೇಕು. 27 ತನ್ನ ಎಡಗೈಯಲ್ಲಿರುವ ಎಣ್ಣೆಯನ್ನು ಯೆಹೋವನ ಸನ್ನಿಧಿಯಲ್ಲಿ ಏಳುಸಲ ತನ್ನ ಬಲಗೈಯ ಬೆರಳಿನಿಂದ ಚಿಮಿಕಿಸುವನು. 28 ಬಳಿಕ ತನ್ನ ಅಂಗೈಯಲ್ಲಿರುವ ಎಣ್ಣೆಯಲ್ಲಿ ಸ್ವಲ್ಪವನ್ನು ದೋಷಪರಿಹಾರಕ ಯಜ್ಞದ ರಕ್ತವನ್ನು ಹಚ್ಚಿದ ಸ್ಥಳದಲ್ಲಿಯೇ ಹಚ್ಚುವನು; ಸ್ವಲ್ಪ ಎಣ್ಣೆಯನ್ನು ಶುದ್ಧೀಕರಿಸಲ್ಪಡುವ ವ್ಯಕ್ತಿಯ ಬಲಗಿವಿಯ ತುದಿಗೆ ಹಚ್ಚಬೇಕು; ಸ್ವಲ್ಪ ಎಣ್ಣೆಯನ್ನು ಬಲಗೈಯ ಹೆಬ್ಬೆರಳಿಗೂ ಸ್ವಲ್ಪ ಎಣ್ಣೆಯನ್ನು ಬಲಗಾಲಿನ ಹೆಬ್ಬೆರಳಿಗೂ ಹಚ್ಚಬೇಕು. 29 ಯಾಜಕನು ತನ್ನ ಅಂಗೈಯಲ್ಲಿ ಉಳಿದ ಎಣ್ಣೆಯ ನ್ನು ಶುದ್ಧೀಕರಿಸಲ್ಪಡುವ ವ್ಯಕ್ತಿಯ ತಲೆಗೆ ಹಚ್ಚಬೇಕು. ಹೀಗೆ ಯಾಜಕನು ಆ ವ್ಯಕ್ತಿಯನ್ನು ಯೆಹೋವನ ಸನ್ನಿಧಿಯಲ್ಲಿ ಶುದ್ಧೀಕರಿಸುವನು.

30 “ಬಳಿಕ ಯಾಜಕನು ಬೆಳವಕ್ಕಿಗಳಲ್ಲಿ ಅಥವಾ ಪಾರಿವಾಳ ಮರಿಗಳಲ್ಲಿ ಒಂದನ್ನು ಸಮರ್ಪಿಸಬೇಕು (ಆ ವ್ಯಕ್ತಿಯು ಯಾವುದನ್ನು ಕೊಡಲು ಶಕ್ತನಾಗಿದ್ದಾನೊ ಅದನ್ನು ಅವನು ಸಮರ್ಪಿಸಬೇಕು.) 31 ಅವನು ಈ ಪಕ್ಷಿಗಳಲ್ಲಿ ಒಂದನ್ನು ಪಾಪಪರಿಹಾರಕ ಯಜ್ಞವಾಗಿಯೂ ಇನ್ನೊಂದನ್ನು ಸರ್ವಾಂಗಹೋಮವಾಗಿಯೂ ಅರ್ಪಿಸಬೇಕು. ಅವನು ಪಕ್ಷಿಗಳನ್ನು ಧಾನ್ಯಸಮರ್ಪಣೆಯೊಂದಿಗೆ ಅರ್ಪಿಸಬೇಕು. ಹೀಗೆ ಯಾಜಕನು ಆ ವ್ಯಕ್ತಿಯ ಶುದ್ಧೀಕರಣಕ್ಕಾಗಿ ಯೆಹೋವನ ಸನ್ನಿಧಿಯಲ್ಲಿ ಪ್ರಾಯಶ್ಚಿತ್ತ ಮಾಡುವನು; ಆಗ ಆ ವ್ಯಕ್ತಿ ಶುದ್ಧನಾಗುವನು.”

32 ಚರ್ಮರೋಗದಿಂದ ವಾಸಿಯಾದವನನ್ನು ಶುದ್ಧೀಕರಿಸುವ ನಿಯಮಗಳು ಇವೇ. ಶುದ್ಧರಾಗಲು ವಿಧಿಬದ್ಧವಾದ ಯಜ್ಞಗಳನ್ನು ಅರ್ಪಿಸುವುದಕ್ಕೆ ಶಕ್ತರಲ್ಲದ ಜನರಿಗೋಸ್ಕರವಿರುವ ನಿಯಮಗಳು ಇವೇ.

ಬೂಷ್ಟು ಮನೆಯಲ್ಲಿದ್ದರೆ ಅನುಸರಿಸಬೇಕಾದ ನಿಯಮಗಳು

33 ಯೆಹೋವನು ಮೋಶೆ ಆರೋನರಿಗೆ ಹೇಳಿದ್ದೇನೆಂದರೆ; 34 “ನಾನು ನಿಮ್ಮ ಜನರಿಗೆ ಕಾನಾನ್ ದೇಶವನ್ನು ಕೊಡುತ್ತಿದ್ದೇನೆ. ನಿಮ್ಮ ಜನರು ಆ ದೇಶದಲ್ಲಿ ಪ್ರವೇಶಿಸಿ ನೆಲೆಸುವರು. ಆಗ ಯಾರ ಮನೆಯಲ್ಲಾದರೂ ಬೂಷ್ಟು ಉಂಟಾದರೆ, 35 ಆ ಮನೆಯ ಯಾಜಮಾನನು ಬಂದು, ‘ನನ್ನ ಮನೆಯಲ್ಲಿ ಬೂಷ್ಟು ಬಂದಿದೆ’ ಎಂದು ಯಾಜಕನಿಗೆ ಹೇಳಬೇಕು.

36 “ಆಗ ಯಾಜಕನು ಬೂಷ್ಟನ್ನು ನೋಡಲು ಮನೆಯ ಒಳಗೆ ಹೋಗುವುದಕ್ಕಿಂತ ಮೊದಲು ಆ ಮನೆಯಿಂದ ಪ್ರತಿಯೊಂದು ವಸ್ತುವನ್ನು ಹೊರತೆಗೆಯಲು ಜನರಿಗೆ ಆಜ್ಞಾಪಿಸಬೇಕು. ಆಗ ಯಾಜಕನು ಮನೆಯಲ್ಲಿರುವ ಪ್ರತಿಯೊಂದು ವಸ್ತುವನ್ನು ಅಶುದ್ಧವೆಂದು ಹೇಳಬೇಕಾಗಿರುವುದಿಲ್ಲ. ಜನರು ಮನೆಯಿಂದ ಪ್ರತಿಯೊಂದು ವಸ್ತುವನ್ನು ಹೊರಗೆ ತೆಗೆದ ನಂತರ ಯಾಜಕನು ಮನೆಯೊಳಗೆ ಹೋಗುವನು. 37 ಯಾಜಕನು ಬೂಷ್ಟನ್ನು ನೋಡುವನು. ಗೋಡೆಗಳಲ್ಲಿರುವ ಬೂಷ್ಟಿನಲ್ಲಿ ರಂಧ್ರಗಳಿದ್ದು ಅದು ಹಸಿರು ಅಥವಾ ಕೆಂಪು ಬಣ್ಣದ್ದಾಗಿದ್ದರೆ ಮತ್ತು ಬೂಷ್ಟು ಗೋಡೆಗಿಂತ ತಗ್ಗಾಗಿದ್ದರೆ, 38 ಆಗ ಯಾಜಕನು ಹೊರಗೆ ಹೋಗಿ ಮನೆಗೆ ಏಳು ದಿನಗಳವರೆಗೆ ಬೀಗ ಹಾಕಿಸಬೇಕು.

39 “ಏಳನೆಯ ದಿನದಲ್ಲಿ ಯಾಜಕನು ಹಿಂತಿರುಗಿ ಬಂದು ಮನೆಯನ್ನು ಪರೀಕ್ಷಿಸಬೇಕು. ಬೂಷ್ಟು ಮನೆಯ ಗೋಡೆಗಳಲ್ಲಿ ಹರಡಿದ್ದರೆ, 40 ಆಗ ಯಾಜಕನು ಬೂಷ್ಟು ಇರುವ ಕಲ್ಲುಗಳನ್ನು ಒಡೆದುಹಾಕಿ ಬಿಸಾಡಬೇಕೆಂದು ಆಜ್ಞಾಪಿಸಬೇಕು. ಅವರು ಆ ಕಲ್ಲುಗಳನ್ನು ಪಟ್ಟಣದ ಹೊರಗಿರುವ ಪ್ರತ್ಯೇಕವಾದ ಅಶುದ್ಧ ಸ್ಥಳದಲ್ಲಿ ಹಾಕಬೇಕು. 41 ತರುವಾಯ ಯಾಜಕನು ಮನೆಯ ಒಳಗಿನ ಗೋಡೆಯನ್ನೆಲ್ಲಾ ಕೆರೆಯಿಸಬೇಕು. ಜನರು ಕೆರೆದುಹಾಕುವ ಮಣ್ಣನ್ನು ಪಟ್ಟಣದ ಹೊರಗೆ ಎಸೆದುಬಿಡಬೇಕು. ಅವರು ಅದನ್ನು ಪಟ್ಟಣದ ಹೊರಗಿರುವ ಪ್ರತ್ಯೇಕವಾದ ಅಶುದ್ಧ ಸ್ಥಳದಲ್ಲಿ ಹಾಕಬೇಕು. 42 ಬಳಿಕ ಆ ವ್ಯಕ್ತಿಯು ಗೋಡೆಗಳಲ್ಲಿ ಹೊಸ ಕಲ್ಲುಗಳನ್ನು ಇಡಿಸಿ ಹೊಸ ಮಡ್ಡಿ ಮಾಡಿಸಬೇಕು.

43 “ಒಂದುವೇಳೆ ಒಬ್ಬನು ಹಳೆಯ ಕಲ್ಲುಗಳನ್ನು ಮತ್ತು ಮಣ್ಣನ್ನು ತೆಗೆಸಿ ಹೊಸ ಕಲ್ಲುಗಳನ್ನು, ಮಣ್ಣನ್ನು ಮತ್ತು ಹೊಸ ಮಡ್ಡಿಯನ್ನು ಹಾಕಿಸಿದ್ದರೂ ಬೂಷ್ಟು ಮತ್ತೆ ಆ ಮನೆಯಲ್ಲಿ ಕಾಣಿಸಿಕೊಂಡರೆ, 44 ಯಾಜಕನು ಬಂದು ಆ ಮನೆಯನ್ನು ಪರೀಕ್ಷಿಸಬೇಕು. ರೋಗದ ಗುರುತು ಮನೆಯಲ್ಲಿ ಹರಡಿದ್ದರೆ, ಆಗ ಅದು ಬಹುಬೇಗನೆ ಇತರ ಸ್ಥಳಗಳಿಗೆ ಹರಡುವ ರೋಗವಾಗಿದೆ. ಆದ್ದರಿಂದ ಆ ಮನೆಯು ಅಶುದ್ಧವಾಗಿದೆ. 45 ಆ ವ್ಯಕ್ತಿಯು ಆ ಮನೆಯನ್ನು ಕೆಡವಿಹಾಕಿಸಬೇಕು. ಅವರು ಅದರ ಎಲ್ಲಾ ಕಲ್ಲುಗಳನ್ನು, ಮಣ್ಣನ್ನು ಮತ್ತು ಮರದ ತುಂಡುಗಳನ್ನು ಪಟ್ಟಣದ ಹೊರಗಿರುವ ಪ್ರತ್ಯೇಕವಾದ ಅಶುದ್ಧ ಸ್ಥಳಕ್ಕೆ ತೆಗೆದುಕೊಂಡು ಹೋಗಬೇಕು. 46 ಮುಚ್ಚಲ್ಪಟ್ಟಿರುವ ಆ ಮನೆಯೊಳಗೆ ಯಾವನಾದರೂ ಹೋದರೆ, ಅವನು ಸಾಯಂಕಾಲದವರೆಗೆ ಅಶುದ್ಧನಾಗಿರುವನು. 47 ಯಾವನಾದರೂ ಆ ಮನೆಯಲ್ಲಿ ಆಹಾರ ತಿಂದರೆ ಅಥವಾ ಅಲ್ಲಿ ಮಲಗಿಕೊಂಡರೆ ಅವನು ತನ್ನ ಬಟ್ಟೆಗಳನ್ನು ತೊಳೆದುಕೊಳ್ಳಬೇಕು.

48 “ಒಂದು ಮನೆಯಲ್ಲಿ ಹೊಸ ಕಲ್ಲುಗಳನ್ನು ಮತ್ತು ಮಣ್ಣನ್ನು ಹಾಕಿಸಿದ ನಂತರ ಯಾಜಕನು ಅದನ್ನು ಪರೀಕ್ಷಿಸಬೇಕು. ಬೂಷ್ಟು ಮನೆಯಲ್ಲಿ ಹರಡದಿದ್ದರೆ, ಯಾಜಕನು ಮನೆಯನ್ನು ಶುದ್ಧವೆಂದು ಪ್ರಕಟಿಸುವನು.

49 “ಬಳಿಕ ಮನೆಯನ್ನು ಶುದ್ಧೀಕರಿಸುವುದಕ್ಕೆ ಅವನು ಎರಡು ಪಕ್ಷಿಗಳನ್ನು ದೇವದಾರು ಮರದ ಒಂದು ತುಂಡನ್ನು, ಕೆಂಪು ಬಟ್ಟೆಯನ್ನು ಮತ್ತು ಹಿಸ್ಸೋಪ್ ಗಿಡದ ಬರಲನ್ನು ತೆಗೆದುಕೊಂಡು ಬರಬೇಕು. 50 ಯಾಜಕನು ಒಂದು ಪಕ್ಷಿಯನ್ನು ಹರಿಯುವ ನೀರಿನ ಮೇಲೆ ಮಣ್ಣಿನ ಬಟ್ಟಲಲ್ಲಿ ವಧಿಸಬೇಕು. 51 ಬಳಿಕ ಯಾಜಕನು ದೇವದಾರಿನ ಕಟ್ಟಿಗೆಯನ್ನು, ಹಿಸ್ಸೋಪನ್ನು, ಕೆಂಪು ಬಟ್ಟೆಯನ್ನು ಮತ್ತು ಸಜೀವವಾದ ಪಕ್ಷಿಯನ್ನು ತೆಗೆದುಕೊಳ್ಳುವನು. ಯಾಜಕನು ಹರಿಯುವ ನೀರಿನ ಮೇಲೆ ವಧಿಸಲ್ಪಟ್ಟ ಪಕ್ಷಿಯ ರಕ್ತದಲ್ಲಿ ಅವುಗಳನ್ನು ಅದ್ದುವನು. ಬಳಿಕ ಯಾಜಕನು ರಕ್ತವನ್ನು ಆ ಮನೆಯ ಮೇಲೆ ಏಳು ಸಲ ಚಿಮಿಕಿಸುವನು. 52 ಮನೆಯನ್ನು ಶುದ್ಧೀಕರಿಸುವುದಕ್ಕೆ ಯಾಜಕನು ಅವುಗಳನ್ನು ಆ ರೀತಿಯಲ್ಲಿ ಉಪಯೋಗಿಸುವನು. 53 ಯಾಜಕನು ಪಟ್ಟಣದ ಹೊರಗಿರುವ ಬಯಲಿಗೆ ಹೋಗಿ, ಸಜೀವವಾದ ಪಕ್ಷಿಯನ್ನು ಸ್ವತಂತ್ರವಾಗಿ ಬಿಟ್ಟುಬಿಡಬೇಕು. ಹೀಗೆ ಯಾಜಕನು ಆ ಮನೆಗಾಗಿ ಪ್ರಾಯಶ್ಚಿತ್ತ ಮಾಡುವನು. ಆಗ ಆ ಮನೆಯು ಶುದ್ಧವಾಗುವುದು.”

54 ನಾನಾ ವಿಧವಾದ ಕುಷ್ಠರೋಗದ ಗುರುತುಗಳು ಅಂದರೆ ಕೂದಲು ಬೆಳೆಯಲಾಗದ ದದ್ದು, 55 ಬಟ್ಟೆಯಲ್ಲಿ ಅಥವಾ ಮನೆಯಲ್ಲಿ ಕಾಣಿಸಿಕೊಳ್ಳುವ ಬೂಷ್ಟಿನ ಕುರಿತು ಅನುಸರಿಸಬೇಕಾದ ನಿಯಮಗಳು ಇವೇ. 56 ಬಾವು, ಗಂಧೆ ಅಥವಾ ಚರ್ಮದ ಮೇಲೆ ಕಂಡುಬರುವ ಹೊಳೆಯುವ ಕಲೆ ಇವುಗಳ ಶುದ್ಧಾಚಾರದ ನಿಯಮಗಳು ಇವೇ. 57 ಅವು ಶುದ್ಧಾಶುದ್ಧ ಬೇಧವನ್ನು ತಿಳಿಸುವ ನಿಯಮಗಳಾಗಿವೆ. ಅವು ಆ ರೀತಿಯ ರೋಗಗಳ ಶುದ್ಧಾಚಾರದ ನಿಯಮಗಳಾಗಿವೆ.

ಮತ್ತಾಯ 26:51-75

51 ಆಗ ಯೇಸುವಿನ ಶಿಷ್ಯರಲ್ಲೊಬ್ಬನು ತನ್ನ ಖಡ್ಗವನ್ನು ಹೊರಕ್ಕೆ ಸೆಳೆದು ಮಹಾಯಾಜಕನ ಸೇವಕನಿಗೆ ಹೊಡೆದು ಅವನ ಕಿವಿಯನ್ನು ಕತ್ತರಿಸಿಬಿಟ್ಟನು.

52 ಯೇಸು ಅವನಿಗೆ, “ನಿನ್ನ ಖಡ್ಗವನ್ನು ಒರೆಗೆ ಹಾಕು. ಕತ್ತಿಯನ್ನು ಬಳಸುವ ಜನರು ಕತ್ತಿಯಿಂದಲೇ ಸಾಯುತ್ತಾರೆ. 53 ನಾನು ನನ್ನ ತಂದೆಯನ್ನು ಕೇಳಿದ್ದರೆ, ಆತನು ನನಗೆ ದೇವದೂತರ ಹನ್ನೆರಡು ಸೇನಾದಳಗಳನ್ನು ನೀಡುತ್ತಿದ್ದನೆಂಬುದು ನಿನಗೆ ಗೊತ್ತೇ ಇದೆ. 54 ಆದರೆ ಪವಿತ್ರ ಗ್ರಂಥದಲ್ಲಿ ಬರೆದಿರುವಂತೆ ಇದು ಈ ರೀತಿಯಲ್ಲೇ ಆಗಬೇಕಾಗಿದೆ” ಎಂದು ಹೇಳಿದನು.

55 ನಂತರ ಯೇಸು ಆ ಜನರಿಗೆ, “ನೀವು ಅಪರಾಧಿಯನ್ನು ಬಂಧಿಸುವವರಂತೆ ಕತ್ತಿ ಮತ್ತು ದೊಣ್ಣೆಗಳನ್ನು ಹಿಡಿದುಕೊಂಡು ಇಲ್ಲಿಗೆ ಬಂದಿದ್ದೀರಿ. ನಾನು ಪ್ರತಿದಿನವೂ ದೇವಾಲಯದಲ್ಲಿ ಕುಳಿತುಕೊಂಡು ಬೋಧಿಸುತ್ತಿದ್ದಾಗ ನೀವು ನನ್ನನ್ನು ಅಲ್ಲಿ ಬಂಧಿಸಲೇ ಇಲ್ಲ. 56 ಆದರೆ ಪ್ರವಾದಿಗಳು ಬರೆದಿರುವುದೆಲ್ಲಾ ನೆರವೇರುವುದಕ್ಕಾಗಿ ಇದೆಲ್ಲಾ ಆಯಿತು” ಎಂದು ಹೇಳಿದನು. ಆಗ ಶಿಷ್ಯರೆಲ್ಲರೂ ಆತನನ್ನು ಬಿಟ್ಟು ಓಡಿಹೋದರು.

ಯೆಹೂದ್ಯ ನಾಯಕರ ಎದುರಿನಲ್ಲಿ ಯೇಸು

(ಮಾರ್ಕ 14:53-65; ಲೂಕ 22:54-55,63-71; ಯೋಹಾನ 18:13-14,19-24)

57 ಬಳಿಕ ಯೇಸುವನ್ನು ಬಂಧಿಸಿದ್ದವರು ಆತನನ್ನು ಪ್ರಧಾನ ಯಾಜಕನಾದ ಕಾಯಫನ ಮನೆಗೆ ಕರೆದೊಯ್ದರು. ಅಲ್ಲಿ ಧರ್ಮೋಪದೇಶಕರು ಮತ್ತು ಯೆಹೂದ್ಯರ ಹಿರಿಯ ನಾಯಕರು ಒಟ್ಟಿಗೆ ಸೇರಿದ್ದರು. 58 ಯೇಸುವಿಗೆ ಏನಾಗುತ್ತದೋ ಎಂಬುದನ್ನು ನೋಡಲು ಪೇತ್ರನು ಆತನನ್ನು ದೂರದಿಂದ ಹಿಂಬಾಲಿಸುತ್ತಾ ಪ್ರಧಾನಯಾಜಕನ ಭವನದ ಅಂಗಳದೊಳಗೆ ಬಂದು ಕಾವಲುಗಾರರೊಂದಿಗೆ ಕುಳಿತುಕೊಂಡನು.

59 ಮಹಾಯಾಜಕರು ಮತ್ತು ಯೆಹೂದ್ಯರ ಸಮಿತಿಯವರು ಯೇಸುವಿಗೆ ಮರಣದಂಡನೆ ವಿಧಿಸಲು ಅಗತ್ಯವಾದ ಸುಳ್ಳುಸಾಕ್ಷಿಗಳನ್ನು ಹುಡುಕಿದರು. 60 ಅನೇಕರು ಬಂದು, ಯೇಸುವಿನ ವಿಷಯವಾಗಿ ಸುಳ್ಳು ಸಂಗತಿಗಳನ್ನು ಹೇಳಿದರು. ಆದರೆ ಯೇಸುವನ್ನು ಕೊಲ್ಲಲು ಬಲವಾದ ಕಾರಣವೊಂದೂ ಸಮಿತಿಗೆ ಸಿಗಲಿಲ್ಲ. ಆಗ ಇಬ್ಬರು ಬಂದು, 61 “ಈ ಮನುಷ್ಯನು, ‘ನಾನು ದೇವರ ಆಲಯವನ್ನು ಕೆಡವಿ ಅದನ್ನು ಮತ್ತೆ ಮೂರು ದಿನಗಳಲ್ಲಿ ನಿರ್ಮಿಸುತ್ತೇನೆ’ ಎಂದು ಹೇಳಿದನು” ಎಂಬುದಾಗಿ ತಿಳಿಸಿದರು.

62 ಪ್ರಧಾನಯಾಜಕನು ಎದ್ದುನಿಂತು ಯೇಸುವಿಗೆ, “ಈ ಜನರು ನಿನ್ನ ಮೇಲೆ ಹೊರಿಸಿರುವ ಆಪಾದನೆಗಳ ಬಗ್ಗೆ ನೀನು ಏನಾದರೂ ಹೇಳಬೇಕೆಂದಿರುವೆಯಾ? ಇವರು ಹೇಳುತ್ತಿರುವುದೆಲ್ಲಾ ನಿಜವೇ?” ಎಂದು ಕೇಳಿದನು. 63 ಆದರೆ ಯೇಸು ಮೌನವಾಗಿದ್ದನು.

ಪ್ರಧಾನಯಾಜಕನು ಮತ್ತೆ ಯೇಸುವಿಗೆ, “ಜೀವಸ್ವರೂಪನಾದ ದೇವರ ಮೇಲೆ ಆಣೆಯಿಟ್ಟು ಕೇಳುತ್ತಿದ್ದೇನೆ, ನೀನು ದೇವಕುಮಾರನಾದ ಕ್ರಿಸ್ತನೋ? ನಮಗೆ ತಿಳಿಸು” ಎಂದನು.

64 ಯೇಸು, “ಹೌದು, ನೀನು ಹೇಳಿದಂತೆ ಆತನೇ ನಾನು. ಆದರೆ ನಿನಗೆ ಹೇಳುವುದೇನೆಂದರೆ, ಇನ್ನು ಮೇಲೆ ಮನುಷ್ಯಕುಮಾರನು ದೇವರ ಬಲಗಡೆಯಲ್ಲಿ ಕುಳಿತಿರುವುದನ್ನೂ ಆಕಾಶದ ಮೋಡಗಳ ಮೇಲೆ ಕುಳಿತು ಬರುವುದನ್ನೂ ನೀವು ಕಾಣುವಿರಿ” ಎಂದು ಹೇಳಿದನು.

65 ಪ್ರಧಾನಯಾಜಕನು ಇದನ್ನು ಕೇಳಿ ಬಹಳ ಕೋಪಗೊಂಡು ತನ್ನ ಬಟ್ಟೆಗಳನ್ನು ಹರಿದುಕೊಂಡು, “ಈ ಮನುಷ್ಯನು ದೇವದೂಷಣೆ ಮಾಡಿದ್ದಾನೆ. ನಮಗೆ ಇನ್ನು ಯಾವ ಸಾಕ್ಷಿಗಳ ಅಗತ್ಯವೂ ಇಲ್ಲ. ಇವನು ಮಾಡಿದ ದೇವದೂಷಣೆಯನ್ನು ನೀವೇ ಕೇಳಿದಿರಿ. 66 ನಿಮ್ಮ ತೀರ್ಮಾನವೇನು?” ಎಂದು ಕೇಳಿದನು.

ಯೆಹೂದ್ಯರು, “ಇವನು ಅಪರಾಧಿ. ಇವನು ಸಾಯಲೇಬೇಕು” ಎಂದು ಉತ್ತರಕೊಟ್ಟರು.

67 ನಂತರ ಜನರು ಅಲ್ಲಿಯೇ ಯೇಸುವಿನ ಮುಖದ ಮೇಲೆ ಉಗುಳಿದರು. ಮುಷ್ಠಿಯಿಂದ ಆತನನ್ನು ಗುದ್ದಿದರು. ಆತನ ಕೆನ್ನೆಗೆ ಹೊಡೆದರು. 68 ಅವರು, “ಕ್ರಿಸ್ತನೇ, ನಮಗೆ ಪ್ರವಾದನೆ ಹೇಳು! ನಿನಗೆ ಹೊಡೆದವರು ಯಾರು?” ಎಂದು ಅಪಹಾಸ್ಯ ಮಾಡಿದರು.

ಪೇತ್ರನ ವಿಶ್ವಾಸದ್ರೋಹ

(ಮಾರ್ಕ 14:66-72; ಲೂಕ 22:56-62; ಯೋಹಾನ 18:15-18,25-27)

69 ಇತ್ತ ಪೇತ್ರನು ಅಂಗಳದಲ್ಲಿ ಕುಳಿತಿದ್ದನು. ಸೇವಕಿಯೊಬ್ಬಳು ಪೇತ್ರನ ಬಳಿಗೆ ಬಂದು, “ನೀನು ಸಹ ಗಲಿಲಾಯದ ಯೇಸುವಿನೊಂದಿಗಿದ್ದವನು” ಎಂದು ಹೇಳಿದಳು.

70 ಆದರೆ ಪೇತ್ರನು, ಅಲ್ಲಿದ್ದ ಜನರೆಲ್ಲರ ಎದುರಿನಲ್ಲಿ ಆಕೆಗೆ, “ನೀನು ಏನು ಹೇಳುತ್ತಿರುವೆಯೋ ನನಗೆ ಗೊತ್ತೇ ಇಲ್ಲ” ಎಂದು ನಿರಾಕರಿಸಿದನು.

71 ಬಳಿಕ ಪೇತ್ರನು ಅಲ್ಲಿಂದ ಎದ್ದು ಹೆಬ್ಬಾಗಿಲ ಬಳಿಗೆ ಬಂದಾಗ ಮತ್ತೊಬ್ಬ ಸೇವಕಿಯು ಅವನನ್ನು ನೋಡಿ ಅಲ್ಲಿದ್ದ ಜನರಿಗೆ, “ಈ ಮನುಷ್ಯನು ನಜರೇತಿನ ಯೇಸುವಿನೊಂದಿಗಿದ್ದನು” ಎಂದು ಹೇಳಿದಳು.

72 ಆಗ ಪೇತ್ರನು, “ನಾನು ದೇವರ ಮೇಲೆ ಆಣೆಯಿಟ್ಟು ಹೇಳುತ್ತೇನೆ. ನನಗೆ ಯೇಸುವೆಂಬ ಮನುಷ್ಯನು ತಿಳಿದೇ ಇಲ್ಲ!” ಎಂದು ನಿರಾಕರಿಸಿದನು.

73 ಸ್ವಲ್ಪ ಸಮಯದ ತರುವಾಯ, ಅಲ್ಲಿ ನಿಂತಿದ್ದ ಕೆಲವು ಜನರು ಪೇತ್ರನ ಸಮೀಪಕ್ಕೆ ಹೋಗಿ, “ಯೇಸುವನ್ನು ಹಿಂಬಾಲಿಸಿಕೊಂಡು ಬಂದ ಜನರಲ್ಲಿ ನೀನೂ ಒಬ್ಬನಾಗಿರುವೆ ಎಂಬುದನ್ನು ನೀನು ಮಾತಾಡುವ ರೀತಿಯೇ ತೋರಿಸುತ್ತದೆ” ಎಂದು ಹೇಳಿದರು.

74 ಆಗ ಪೇತ್ರನು ಶಪಿಸಿಕೊಳ್ಳತೊಡಗಿ, “ನಾನು ದೇವರ ಮೇಲೆ ಆಣೆಯಿಟ್ಟು ಹೇಳುತ್ತೇನೆ. ಯೇಸುವೆಂಬ ಮನುಷ್ಯನು ನನಗೆ ತಿಳಿದೇ ಇಲ್ಲ!” ಎಂದು ಹೇಳಿದನು. ಆ ಕೂಡಲೇ ಕೋಳಿ ಕೂಗಿತು. 75 “ಆತನು ಯಾರೋ ನನಗೆ ಗೊತ್ತೇ ಇಲ್ಲ ಎಂಬುದಾಗಿ ಕೋಳಿ ಕೂಗುವುದಕ್ಕಿಂತ ಮುಂಚೆ ನೀನು ಮೂರು ಸಲ ಹೇಳುವೆ” ಎಂದು ತನಗೆ ಯೇಸು ಹೇಳಿದ್ದ ಮಾತನ್ನು ಪೇತ್ರನು ನೆನಪು ಮಾಡಿಕೊಂಡು ಹೊರಗೆ ಹೋಗಿ ಬಹಳವಾಗಿ ವ್ಯಥೆಪಟ್ಟು ಅತ್ತನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International