Old/New Testament
ಮಾಂಸವನ್ನು ತಿನ್ನುವುದರ ಬಗ್ಗೆ ನಿಯಮಗಳು
11 ಯೆಹೋವನು ಮೋಶೆ ಆರೋನರಿಗೆ ಹೀಗೆಂದನು: 2 “ಇಸ್ರೇಲರಿಗೆ ಹೇಳಬೇಕಾದದ್ದೇನೆಂದರೆ, ನೀವು ಈ ಪಶುಗಳನ್ನು ತಿನ್ನಬಹುದು: 3 ಕಾಲ್ಗೊರಸು ಸೀಳಿರುವ ಮತ್ತು ಮೆಲಕು ಹಾಕುವ ಮಾಂಸವನ್ನು ತಿನ್ನಬಹುದು.
4-6 “ಕೆಲವು ಪಶುಗಳು ಮೆಲಕು ಹಾಕುತ್ತವೆ, ಆದರೆ ಅವುಗಳ ಕಾಲ್ಗೊರಸು ಸೀಳಿರುವುದಿಲ್ಲ; ಅವುಗಳ ಮಾಂಸವನ್ನು ತಿನ್ನಕೂಡದು. ಒಂಟೆಗಳು, ಬೆಟ್ಟದ ಮೊಲಗಳು ಮತ್ತು ಮೊಲಗಳು ಮೆಲಕುಹಾಕುತ್ತವೆ. ಆದರೆ ಅವುಗಳ ಗೊರಸು ಸೀಳಿರುವುದಿಲ್ಲ. ಆದ್ದರಿಂದ ಅವು ನಿಮಗೆ ಅಶುದ್ಧ. 7 ಇನ್ನು ಕೆಲವು ಪಶುಗಳ ಕಾಲ್ಗೊರಸುಗಳು ಸೀಳಿರುತ್ತವೆ. ಆದರೆ ಅವು ಮೆಲಕು ಹಾಕುವುದಿಲ್ಲ; ಅವುಗಳ ಮಾಂಸವನ್ನು ತಿನ್ನಕೂಡದು. ಹಂದಿಗಳ ಗೊರಸುಗಳು ಸೀಳಿರುತ್ತವೆ. ಆದರೆ ಮೆಲಕು ಹಾಕುವುದಿಲ್ಲ. ಆದ್ದರಿಂದ ಅವು ನಿಮಗೆ ಅಶುದ್ಧ. 8 ಅವುಗಳ ಮಾಂಸವನ್ನು ತಿನ್ನಕೂಡದು. ಅವುಗಳ ಮೃತಶರೀರಗಳನ್ನು ಸಹ ಮುಟ್ಟಬಾರದು. ಅವು ನಿಮಗೆ ಅಶುದ್ಧ!
ಸಮುದ್ರಾಹಾರದ ಬಗ್ಗೆ ನಿಯಮಗಳು
9 “ನೀರಿನಲ್ಲಿಯಾಗಲಿ ನದಿಯಲ್ಲಾಗಲಿ ಜೀವಿಸುವ ಜಲಪ್ರಾಣಿಗೆ ರೆಕ್ಕೆಯಿದ್ದು ಮೈಯೆಲ್ಲಾ ಪರೆಪರೆಯಿದ್ದರೆ ನೀವು ಅದನ್ನು ತಿನ್ನಬಹುದು. 10-11 ಆದರೆ ನೀರಿನಲ್ಲಿಯಾಗಲಿ ನದಿಯಲ್ಲಾಗಲಿ ಜೀವಿಸುತ್ತಿರುವ ಜಲಪ್ರಾಣಿಗೆ ರೆಕ್ಕೆಗಳು ಮತ್ತು ಪರೆಗಳು ಇಲ್ಲದಿದ್ದರೆ, ನೀವು ಆ ಪ್ರಾಣಿಯನ್ನು ತಿನ್ನಕೂಡದು. ತಿನ್ನುವುದಕ್ಕೆ ಅಯೋಗ್ಯವಾದದ್ದೆಂದು ಯೆಹೋವನು ಹೇಳುವ ಪ್ರಾಣಿಗಳಲ್ಲಿ ಅದು ಒಂದಾಗಿದೆ. ಆ ಪ್ರಾಣಿಯ ಮಾಂಸವನ್ನು ತಿನ್ನಕೂಡದು. ಅದರ ಮೃತಶರೀರವನ್ನೂ ಮುಟ್ಟಕೂಡದು. 12 ನೀರಿನಲ್ಲಿರುವ ಜಲಪ್ರಾಣಿಗೆ ರೆಕ್ಕೆಗಳು ಮತ್ತು ಪರೆಗಳು ಇಲ್ಲದಿದ್ದರೆ ಅದು ತಿನ್ನುವುದಕ್ಕೆ ಅಯೋಗ್ಯವಾಗಿದೆ.
ತಿನ್ನಬಾರದ ಪಕ್ಷಿಗಳು
13 “ನಿಷಿದ್ಧವಾದ ಈ ಪಕ್ಷಿಗಳ ಮಾಂಸವನ್ನು ನೀವು ತಿನ್ನಬಾರದು: ಗರುಡ, ಬೆಟ್ಟದ ಹದ್ದು, ಕ್ರೌಂಚ, 14 ಹದ್ದು, ಎಲ್ಲಾ ವಿಧವಾದ ಗಿಡುಗ, 15 ಎಲ್ಲಾ ವಿಧವಾದ ಕಾಗೆ, 16 ಉಷ್ಟ್ರಪಕ್ಷಿ, ಉಲೂಕ, ಕಡಲ್ಹಕ್ಕಿ ಎಲ್ಲಾ ವಿಧವಾದ ಡೇಗೆ, 17 ಗೂಬೆ, ಹೆಗ್ಗೂಬೆ, ಸಮುದ್ರಪಕ್ಷಿ, 18 ನೀರುಕೋಳಿ, ರಣಹದ್ದು, ನೀರುಕಾಗೆ, 19 ಕೊಕ್ಕರೆ, ಸಕಲ ವಿಧವಾದ ಬಕ, ಹೆಡೆಹಕ್ಕಿ ಮತ್ತು ಬಾವಲಿ.
ಕ್ರಿಮಿಕೀಟಗಳನ್ನು ತಿನ್ನುವುದರ ಬಗ್ಗೆ ನಿಯಮಗಳು
20 “ಕ್ರಿಮಿಕೀಟಗಳು ರೆಕ್ಕೆಗಳುಳ್ಳದ್ದಾಗಿ ನಾಲ್ಕು ಕಾಲುಗಳಲ್ಲಿ ಹರಿದಾಡುವುದಾಗಿದ್ದರೆ ಅವು ನಿಮಗೆ ನಿಷಿದ್ಧವಾಗಿವೆ. ಆ ಕ್ರಿಮಿಕೀಟಗಳನ್ನು ತಿನ್ನಕೂಡದು. 21 ಆದರೆ ಕೀಟಗಳು ನೆಲದ ಮೇಲೆ ಕುಪ್ಪಳಿಸುವುದಕ್ಕೋಸ್ಕರ ಕೀಲುಗಳುಳ್ಳ ಕಾಲುಗಳನ್ನು ಹೊಂದಿದ್ದರೆ ಅವುಗಳನ್ನು ನೀವು ತಿನ್ನಬಹುದು. 22 ಡತೆಗಳನ್ನು, ರೆಕ್ಕೆಗಳುಳ್ಳ ಎಲ್ಲಾ ವಿಧದ ಮಿಡತೆಗಳನ್ನು, ಎಲ್ಲಾ ವಿಧವಾದ ಚಿಟ್ಟೆಮಿಡತೆಗಳನ್ನು, ಎಲ್ಲಾ ವಿಧವಾದ ಸಣ್ಣ ಮಿಡತೆಗಳನ್ನು ಸಹ ತಿನ್ನಬಹುದು.
23 “ಆದರೆ ರೆಕ್ಕೆಗಳಿದ್ದು ನಾಲ್ಕು ಕಾಲುಗಳಿರುವ ಬೇರೆ ಎಲ್ಲಾ ಕ್ರಿಮಿಕೀಟಗಳನ್ನು ನೀವು ತಿನ್ನಬಾರದು. 24 ಆ ಕ್ರಿಮಿಕೀಟಗಳು ನಿಮ್ಮನ್ನು ಅಶುದ್ಧ ಮಾಡುತ್ತವೆ. ಅವುಗಳ ಹೆಣಗಳನ್ನು ಮುಟ್ಟಿದವನು ಸಾಯಂಕಾಲದವರೆಗೆ ಅಶುದ್ಧನಾಗುವನು. 25 ಯಾವನಾದರೂ ಆ ಸತ್ತ ಕ್ರಿಮಿಕೀಟಗಳಲ್ಲಿ ಒಂದನ್ನು ಎತ್ತಿದರೆ, ಅವನು ತನ್ನ ಬಟ್ಟೆಗಳನ್ನು ತೊಳೆದುಕೊಳ್ಳಬೇಕು. ಅವನು ಸಾಯಂಕಾಲದ ತನಕ ಅಶುದ್ಧನಾಗಿರುವನು.
ಪ್ರಾಣಿಗಳ ಬಗ್ಗೆ ಇನ್ನೂ ಹೆಚ್ಚಿನ ನಿಯಮಗಳು
26-27 “ಕೆಲವು ಪ್ರಾಣಿಗಳಿಗೆ ಸೀಳಿದ ಕಾಲ್ಗೊರಸುಗಳು ಇವೆ. ಆದರೆ ಕಾಲ್ಗೊರಸುಗಳು ಸರಿಯಾಗಿ ಎರಡು ಭಾಗಗಳಾಗಿರುವುದಿಲ್ಲ. ಕೆಲವು ಪ್ರಾಣಿಗಳು ಮೆಲಕು ಹಾಕುವುದಿಲ್ಲ. ಕೆಲವು ಪ್ರಾಣಿಗಳಿಗೆ ಕಾಲ್ಗೊರಸುಗಳು ಇರುವುದಿಲ್ಲ. ಅವು ಅಂಗಾಲುಗಳಿಂದ ನಡೆಯುತ್ತವೆ. ಆ ಎಲ್ಲಾ ಪ್ರಾಣಿಗಳು ನಿಮಗೆ ಅಶುದ್ಧ. ಅವುಗಳ ಸತ್ತದೇಹಗಳನ್ನು ಮುಟ್ಟಿದವನು ಸಾಯಂಕಾಲದವರೆಗೆ ಅಶುದ್ಧನಾಗಿರುವನು. 28 ಯಾವನಾದರೂ ಅವುಗಳ ಹೆಣಗಳನ್ನು ಎತ್ತಿದರೆ ಅವನು ತನ್ನ ಬಟ್ಟೆಗಳನ್ನು ತೊಳೆದುಕೊಳ್ಳಬೇಕು. ಅವನು ಸಾಯಂಕಾಲದವರೆಗೆ ಅಶುದ್ಧನಾಗಿರುವನು. ಆ ಪ್ರಾಣಿಗಳು ನಿಮಗೆ ಅಶುದ್ಧವಾಗಿವೆ.
ಹರಿದಾಡುವ ಪ್ರಾಣಿಗಳ ಬಗ್ಗೆ ನಿಯಮಗಳು
29 “ನೆಲದ ಮೇಲೆ ಹರಿದಾಡುವ ಈ ಪ್ರಾಣಿಗಳು ನಿಮಗೆ ಅಶುದ್ಧ; ಮುಂಗುಸಿ, ಇಲಿ, ಎಲ್ಲಾ ವಿಧವಾದ ದೊಡ್ಡಹಲ್ಲಿ, 30 ಹಾವರಾಣಿ, ಮೊಸಳೆ, ಹಲ್ಲಿ, ಬಸವನಹುಳ, ಚಿಟ್ಟಿಲಿ, 31 ನೆಲದ ಮೇಲೆ ಹರಿದಾಡುವ ಈ ಪ್ರಾಣಿಗಳು ನಿಮಗೆ ಅಶುದ್ಧವಾಗಿವೆ. ಅವುಗಳ ಹೆಣಗಳನ್ನು ಮುಟ್ಟಿದವನು ಸಾಯಂಕಾಲದವರೆಗೆ ಅಶುದ್ಧನಾಗುವನು.
ಅಶುದ್ಧ ಪ್ರಾಣಿಗಳ ಬಗ್ಗೆ ನಿಯಮಗಳು
32 “ಅಶುದ್ಧವಾದ ಆ ಪ್ರಾಣಿಗಳಲ್ಲಿ ಯಾವುದಾದರೂ ಸತ್ತು, ಯಾವುದೇ ವಸ್ತುವಿನ ಮೇಲೆ ಬಿದ್ದರೆ, ಆಗ ಆ ವಸ್ತುವು ಅಶುದ್ಧವಾಗುವುದು. ಅದು ಮರದ ವಸ್ತುವಾಗಲಿ ಬಟ್ಟೆಯಾಗಲಿ ಚರ್ಮವಾಗಲಿ ಶೋಕಬಟ್ಟೆಯಾಗಲಿ ಅದು ಎಂಥದ್ದಾಗಿದ್ದರೂ ಕೆಲಸಕ್ಕೆ ಉಪಯುಕ್ತವಾಗಿದ್ದರೂ ಅದನ್ನು ನೀರಿನಲ್ಲಿ ಹಾಕಬೇಕು. ಅದು ಸಾಯಂಕಾಲದವರೆಗೆ ಅಶುದ್ಧವಾಗಿರುವುದು. ನಂತರ ಅದು ಶುದ್ಧವಾಗುವುದು. 33 ಅಶುದ್ಧವಾದ ಆ ಪ್ರಾಣಿಗಳಲ್ಲಿ ಯಾವುದಾದರೊಂದು ಸತ್ತು ಮಣ್ಣಿನ ಬೋಗುಣಿಗೆ ಬಿದ್ದರೆ, ಆಗ ಆ ಬೋಗುಣಿಯಲ್ಲಿ ಇರುವುದೆಲ್ಲಾ ಅಶುದ್ಧವಾಗುವುದು. ಆ ಬೋಗುಣಿಯನ್ನು ನೀವು ಒಡೆದುಹಾಕಬೇಕು. 34 ಅಶುದ್ಧವಾದ ಮಣ್ಣಿನ ಬೋಗುಣಿಯಿಂದ ನೀರು ಯಾವುದೇ ಆಹಾರಕ್ಕೆ ತಾಗಿದರೆ, ಆ ಆಹಾರವು ಅಶುದ್ಧವಾಗುವುದು. ಅಶುದ್ಧವಾದ ಬೋಗುಣಿಯಲ್ಲಿ ಯಾವುದೇ ಪಾನದ್ರವ್ಯವಿದ್ದರೂ ಅದು ಅಶುದ್ಧವಾಗುವುದು. 35 ಸತ್ತ ಪ್ರಾಣಿಯ ಯಾವುದೇ ಭಾಗ ಯಾವುದೇ ವಸ್ತುವಿನ ಮೇಲೆ ಬಿದ್ದರೂ ಆ ವಸ್ತು ಅಶುದ್ಧವಾಗಿದೆ. ಅದು ಮಣ್ಣಿನ ಒಲೆಯಾಗಿದ್ದರೂ ಮಡಿಕೆಯಾಗಿದ್ದರೂ ಅದನ್ನು ಒಡೆದುಹಾಕಬೇಕು. ಆ ವಸ್ತುಗಳು ಇನ್ನೆಂದಿಗೂ ಶುದ್ಧವಾಗಿರುವುದಿಲ್ಲ. ಅವು ನಿಮಗೆ ಯಾವಾಗಲೂ ಅಶುದ್ಧವಾಗಿರುವವು.
36 “ಒರತೆಯಾಗಲಿ ನೀರನ್ನು ಪಡೆಯುವ ಬಾವಿಯಾಗಲಿ ಶುದ್ಧವಾಗಿರುವುದು. ಆದರೆ ಯಾವನಾದರೂ ಅಶುದ್ಧ ಪ್ರಾಣಿಗಳ ಹೆಣವನ್ನು ಮುಟ್ಟಿದರೆ, ಅವನು ಅಶುದ್ಧನಾಗುವನು. 37 ಸತ್ತ ಅಶುದ್ಧ ಪ್ರಾಣಿಗಳ ಯಾವುದೇ ಭಾಗವು ನೆಡುವುದಕ್ಕೆ ಇಟ್ಟಿರುವ ಬೀಜದ ಮೇಲೆ ಬಿದ್ದರೂ ಆ ಬೀಜ ಶುದ್ಧವಾಗಿಯೇ ಇರುತ್ತದೆ. 38 ಆದರೆ ನೀರು ಹಾಕಿ ನೆನಸಿದ ಬೀಜಗಳ ಮೇಲೆ ಸತ್ತ ಅಶುದ್ಧ ಪ್ರಾಣಿಗಳ ಯಾವುದೇ ಭಾಗ ಬಿದ್ದರೆ, ಆ ಬೀಜಗಳು ನಿಮಗೆ ಅಶುದ್ಧವಾಗಿವೆ.
39 “ಅಲ್ಲದೆ ನೀವು ಮಾಂಸಾಹಾರಕ್ಕಾಗಿ ಉಪಯೋಗಿಸುವ ಯಾವುದೇ ಪ್ರಾಣಿ ಸತ್ತರೆ, ಅದನ್ನು ಮುಟ್ಟುವ ವ್ಯಕ್ತಿ ಸಾಯಂಕಾಲದವರೆಗೆ ಅಶುದ್ಧನಾಗಿರುವನು. 40 ಈ ಪ್ರಾಣಿಯ ಮಾಂಸವನ್ನು ತಿನ್ನುವ ವ್ಯಕ್ತಿ ತನ್ನ ಬಟ್ಟೆಗಳನ್ನು ತೊಳೆದುಕೊಳ್ಳಬೇಕು. ಈ ವ್ಯಕ್ತಿ ಸಾಯಂಕಾಲದವರೆಗೆ ಅಶುದ್ಧನಾಗಿರುವನು. ಸತ್ತ ಪ್ರಾಣಿಯನ್ನು ಎತ್ತುವವನು ತನ್ನ ಬಟ್ಟೆಗಳನ್ನು ತೊಳೆದುಕೊಳ್ಳಬೇಕು. ಈ ವ್ಯಕ್ತಿ ಸಾಯಂಕಾಲದವರೆಗೆ ಅಶುದ್ಧನಾಗಿರುವನು.
41 “ನೆಲದ ಮೇಲೆ ಹರಿದಾಡುವ ಕ್ರಿಮಿಕೀಟಗಳನ್ನೆಲ್ಲ ಯೆಹೋವನು ನಿಮಗೆ ನಿಷಿದ್ಧಗೊಳಿಸಿದ್ದಾನೆ. ನೀವು ಅವುಗಳ ಮಾಂಸವನ್ನು ತಿನ್ನಬಾರದು. 42 ಹೊಟ್ಟೆಯ ಮೇಲೆ ತೆವಳಿಕೊಂಡು ಹೋಗುವ ಜಂತುವನ್ನು ಅಥವಾ ತನ್ನ ನಾಲ್ಕು ಕಾಲುಗಳಲ್ಲಿ ನಡೆಯುವ ಜಂತುವನ್ನು ಅಥವಾ ಅನೇಕ ಕಾಲುಗಳುಳ್ಳ ಜಂತುಗಳನ್ನು ನೀವು ತಿನ್ನಬಾರದು. 43 ಆ ಜಂತುಗಳು ನಿಮ್ಮನ್ನು ಹೊಲೆ ಮಾಡದಿರಲಿ. ನೀವು ಅಶುದ್ಧರಾಗಬಾರದು. 44 ಯಾಕೆಂದರೆ, ನಾನೇ ನಿಮ್ಮ ದೇವರಾದ ಯೆಹೋವನು. ನಾನು ಪರಿಶುದ್ಧನಾಗಿದ್ದೇನೆ, ಆದ್ದರಿಂದ ನೀವೂ ಪರಿಶುದ್ಧರಾಗಿರಬೇಕು. ಹರಿದಾಡುವ ಆ ಜಂತುಗಳಿಂದ ನಿಮ್ಮನ್ನು ಅಶುದ್ಧರನ್ನಾಗಿ ಮಾಡಿಕೊಳ್ಳಬೇಡಿರಿ. 45 ನಿಮ್ಮನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದ ಯೆಹೋವನೇ ನಾನು. ನೀವು ನನ್ನ ವಿಶೇಷ ಜನರಾಗಿರಬೇಕೆಂದು ಮತ್ತು ನಾನು ನಿಮ್ಮ ದೇವರಾಗಿರಬೇಕೆಂದು ನಿಮ್ಮನ್ನು ಕರೆದುಕೊಂಡು ಬಂದೆನು. ನಾನು ಪರಿಶುದ್ಧನಾಗಿರುವಂತೆಯೇ ನೀವೂ ಪರಿಶುದ್ಧರಾಗಿರಬೇಕು.”
46 ಎಲ್ಲಾ ಸಾಕುಪ್ರಾಣಿಗಳು, ಪಕ್ಷಿಗಳು ಮತ್ತು ಭೂಮಿಯ ಮೇಲಿರುವ ಇತರ ಪ್ರಾಣಿಗಳ ಬಗ್ಗೆ ಇರುವ ನಿಯಮಗಳು ಇವುಗಳೇ. ಸಮುದ್ರದಲ್ಲಿರುವ ಮತ್ತು ನೆಲದ ಮೇಲೆ ಹರಿದಾಡುವ ಎಲ್ಲಾ ಪ್ರಾಣಿಗಳ ಬಗ್ಗೆ ಇರುವ ನಿಯಮಗಳು ಇವುಗಳೇ. 47 ಅಶುದ್ಧವಾದ ಮತ್ತು ಶುದ್ಧವಾದ ಪ್ರಾಣಿಗಳ ಕುರಿತು ತಿಳಿದುಕೊಳ್ಳಲು ನಿಮಗೆ ಈ ನಿಯಮಗಳು ಸಹಾಯಕವಾಗಿವೆ. ಜನರು ಯಾವ ಪ್ರಾಣಿಗಳ ಮಾಂಸವನ್ನು ತಿನ್ನಬಹುದು ಮತ್ತು ಯಾವುದನ್ನು ತಿನ್ನಬಾರದೆಂದು ಈ ನಿಯಮಗಳು ತಿಳಿಸುತ್ತವೆ.
ಬಾಣಂತಿಯರ ಶುದ್ಧೀಕರಣ
12 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 2 “ಇಸ್ರೇಲರಿಗೆ ಹೀಗೆ ಹೇಳು:
“ಒಬ್ಬ ಸ್ತ್ರೀಯು ಬಸುರಾಗಿ ಗಂಡುಮಗುವನ್ನು ಹೆತ್ತರೆ, ಅವಳು ಏಳು ದಿನಗಳವರೆಗೆ ಅಶುದ್ಧಳಾಗಿರುವಳು. ಅವಳ ತಿಂಗಳ ಮುಟ್ಟಿನಿಂದ ಅಶುದ್ಧಳಾಗುವಂತೆಯೇ ಅಶುದ್ಧಳಾಗಿರುವಳು. 3 ಎಂಟನೆಯ ದಿನದಲ್ಲಿ ಆ ಗಂಡುಮಗುವಿಗೆ ಸುನ್ನತಿ ಮಾಡಬೇಕು. 4 ಆಮೇಲೆ ಅವಳು ತನ್ನ ರಕ್ತಸ್ರಾವದಿಂದ ಶುದ್ಧಳಾಗಲು ಮೂವತ್ತುಮೂರು ದಿನಗಳು ಹಿಡಿಯುವುದು. ಆಕೆ ಪರಿಶುದ್ಧವಾದ ಯಾವುದನ್ನೂ ಮುಟ್ಟಬಾರದು. ಆಕೆಯ ಶುದ್ಧೀಕರಣ ಪೂರ್ತಿಯಾಗುವವರೆಗೆ ಆಕೆ ಪವಿತ್ರಸ್ಥಳವನ್ನು ಪ್ರವೇಶಿಸಬಾರದು. 5 ಆದರೆ ಸ್ತ್ರೀಯು ಹೆಣ್ಣುಮಗುವಿಗೆ ಜನ್ಮವಿತ್ತರೆ, ಅವಳು ಆಕೆಯ ತಿಂಗಳ ಮುಟ್ಟಿನಿಂದ ಅಶುದ್ಧಳಾಗುವಂತೆ ಎರಡು ವಾರಗಳವರೆಗೆ ಅಶುದ್ಧಳಾಗಿರುವಳು. ಆಕೆಯು ರಕ್ತಸ್ರಾವದಿಂದ ಶುದ್ಧಳಾಗಲು ಅರವತ್ತಾರು ದಿನಗಳು ಹಿಡಿಯುವವು.
6 “ಶುದ್ಧೀಕರಣ ಸಮಯ ಪೂರ್ತಿಯಾದ ನಂತರ ಹೆಣ್ಣುಮಗುವಿನ ಅಥವಾ ಗಂಡುಮಗುವಿನ ತಾಯಿಯು ವಿಶೇಷ ಯಜ್ಞಗಳನ್ನು ದೇವದರ್ಶನಗುಡಾರದ ಬಾಗಿಲ ಬಳಿಗೆ ತಂದು ಅವುಗಳನ್ನು ಯಾಜಕನಿಗೆ ಕೊಡಬೇಕು. ಆಕೆಯು ಸರ್ವಾಂಗಹೋಮಕ್ಕಾಗಿ ಒಂದು ವರ್ಷದ ಕುರಿಮರಿಯನ್ನೂ ಪಾಪಪರಿಹಾರಕ ಯಜ್ಞಕ್ಕಾಗಿ ಒಂದು ಬೆಳವಕ್ಕಿಯನ್ನಾಗಲಿ ಅಥವಾ ಪಾರಿವಾಳದ ಮರಿಯನ್ನಾಗಲಿ ತರಬೇಕು. 7-8 ಆಕೆಯು ಕುರಿಮರಿಯನ್ನು ತರಲು ಶಕ್ತಳಾಗಿಲ್ಲದಿದ್ದರೆ, ಎರಡು ಬೆಳವಕ್ಕಿಗಳನ್ನಾಗಲಿ ಅಥವಾ ಎರಡು ಪಾರಿವಾಳದ ಮರಿಗಳನ್ನಾಗಲಿ ತರಬಹುದು. ಅವುಗಳಲ್ಲಿ ಒಂದನ್ನು ಸರ್ವಾಂಗಹೋಮಕ್ಕಾಗಿಯೂ ಇನ್ನೊಂದನ್ನು ಪಾಪಪರಿಹಾರಕ ಯಜ್ಞಕ್ಕಾಗಿಯೂ ತರಬೇಕು. ಯಾಜಕನು ಅವುಗಳನ್ನು ಯೆಹೋವನ ಸನ್ನಿಧಿಯಲ್ಲಿ ಅರ್ಪಿಸಬೇಕು. ಹೀಗೆ ಯಾಜಕನು ಆಕೆಯನ್ನು ಶುದ್ಧಿಗೊಳಿಸುವನು. ಆಗ ಆಕೆಯು ರಕ್ತಸ್ರಾವದ ಅಶುದ್ಧತೆಯಿಂದ ಶುದ್ಧಳಾಗುವಳು. ಗಂಡುಮಗುವಿಗೆ ಅಥವಾ ಹೆಣ್ಣುಮಗುವಿಗೆ ಜನ್ಮವಿತ್ತ ಸ್ತ್ರೀಯು ಅನುಸರಿಸಬೇಕಾದ ನಿಯಮಗಳು ಇವುಗಳೇ.”
ಯೇಸುವನ್ನು ಕೊಲ್ಲಲು ಯೆಹೂದ್ಯ ನಾಯಕರ ಆಲೋಚನೆ
(ಮಾರ್ಕ 14:1-2; ಲೂಕ 22:1-2; ಯೋಹಾನ 11:45-53)
26 ಯೇಸು ಈ ಸಂಗತಿಗಳನ್ನೆಲ್ಲಾ ಹೇಳಿ ಮುಗಿಸಿದ ನಂತರ, ತನ್ನ ಶಿಷ್ಯರಿಗೆ, 2 “ನಾಳಿದ್ದು ಪಸ್ಕಹಬ್ಬವೆಂಬುದು ನಿಮಗೆ ತಿಳಿದಿದೆ. ಅಂದು ಮನುಷ್ಯಕುಮಾರನನ್ನು ಶಿಲುಬೆಗೇರಿಸಲು ವೈರಿಗಳಿಗೆ ಒಪ್ಪಿಸುವರು” ಎಂದನು.
3 ಇತ್ತ ಮಹಾಯಾಜಕರು ಮತ್ತು ಹಿರಿಯ ಯೆಹೂದ್ಯ ನಾಯಕರು, ಪ್ರಧಾನಯಾಜಕನ ಭವನದಲ್ಲಿ ಸಭೆ ಸೇರಿದರು. ಪ್ರಧಾನಯಾಜಕನ ಹೆಸರು ಕಾಯಫ. 4 ಆ ಸಭೆಯಲ್ಲಿ ಅವರು ಯೇಸುವನ್ನು ಉಪಾಯದಿಂದ ಬಂಧಿಸಿ ಕೊಲ್ಲಲು ಸಮಾಲೋಚಿಸಿದರು. 5 ಆದರೆ ಸಭಿಕರು, “ನಾವು ಪಸ್ಕಹಬ್ಬದ ಕಾಲದಲ್ಲಿ ಯೇಸುವನ್ನು ಬಂಧಿಸಲು ಸಾಧ್ಯವಿಲ್ಲ. ಏಕೆಂದರೆ ಜನರು ಕೋಪಗೊಂಡು ದಂಗೆ ಏಳಬಹುದು” ಎಂದು ಹೇಳಿದರು.
ಸ್ತ್ರೀಯೊಬ್ಬಳು ಮಾಡಿದ ವಿಶೇಷ ಕಾರ್ಯ
(ಮಾರ್ಕ 14:9; ಯೋಹಾನ 12:1-8)
6 ಯೇಸು ಬೆಥಾನಿಯಲ್ಲಿದ್ದಾಗ ಸಿಮೋನ ಎಂಬ ಕುಷ್ಠರೋಗಿಯ ಮನೆಯಲ್ಲಿದ್ದನು. 7 ಆಗ ಸ್ತ್ರೀಯೊಬ್ಬಳು ಬಹು ಬೆಲೆಬಾಳುವ ಸುಗಂಧತೈಲದ ಭರಣಿಯನ್ನು ತೆಗೆದುಕೊಂಡು ಬಂದು ಊಟಕ್ಕೆ ಕುಳಿತ್ತಿದ್ದ ಯೇಸುವಿನ ತಲೆಯ ಮೇಲೆ ಆ ಸುಗಂಧ ತೈಲವನ್ನು ಸುರಿದಳು.
8 ಇದನ್ನು ನೋಡಿದ ಶಿಷ್ಯರು ಆ ಸ್ತ್ರೀಯ ಮೇಲೆ ಕೋಪಗೊಂಡು, “ಆ ಸುಗಂಧತೈಲವನ್ನು ಏಕೆ ಹಾಳು ಮಾಡಿದೆ? 9 ಅದನ್ನು ಬಹಳ ಹಣಕ್ಕೆ ಮಾರಿ ಬಡ ಜನರಿಗೆ ಕೊಡಬಹುದಾಗಿತ್ತಲ್ಲಾ” ಎಂದರು.
10 ಆದರೆ ಈ ಘಟನೆಗೆ ಕಾರಣವನ್ನು ತಿಳಿದಿದ್ದ ಯೇಸು ತನ್ನ ಶಿಷ್ಯರಿಗೆ, “ಈ ಸ್ತ್ರೀಗೆ ಏಕೆ ತೊಂದರೆ ಕೊಡುತ್ತೀರಿ? ಆಕೆಯು ನನಗೆ ಬಹಳ ಒಳ್ಳೆಯ ಕಾರ್ಯವನ್ನು ಮಾಡಿದಳು. 11 ಬಡಜನರು ನಿಮ್ಮೊಂದಿಗೆ ಯಾವಾಗಲೂ ಇರುತ್ತಾರೆ. ಆದರೆ ನಾನು ನಿಮ್ಮೊಂದಿಗೆ ಯಾವಾಗಲೂ ಇರುವುದಿಲ್ಲ. 12 ನಾನು ಸತ್ತನಂತರ ನನ್ನನ್ನು ಸಮಾಧಿಗೆ ಸಿದ್ಧಪಡಿಸುವುದಕ್ಕಾಗಿ ಈ ಸ್ತ್ರೀಯು ನನ್ನ ದೇಹದ ಮೇಲೆ ಸುಗಂಧತೈಲವನ್ನು ಸುರಿದಳು. 13 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಪ್ರಪಂಚದಾದ್ಯಂತ ಎಲ್ಲೆಲ್ಲಿ ಸುವಾರ್ತೆಯನ್ನು ತಿಳಿಸಲಾಗುವುದೋ ಅಲ್ಲೆಲ್ಲಾ ಈ ಕಾರ್ಯವನ್ನು ಈಕೆಯ ನೆನಪಿಗಾಗಿ ತಿಳಿಸಲಾಗುವುದು” ಎಂದು ಹೇಳಿದನು.
ಯೇಸುವಿನ ಶತ್ರು ಯೂದ
(ಮಾರ್ಕ 14:10-11; ಲೂಕ 22:3-6)
14 ನಂತರ ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಇಸ್ಕರಿಯೋತ ಯೂದನು ಮಹಾಯಾಜಕರ ಬಳಿಗೆ ಹೋಗಿ, 15 “ಯೇಸುವನ್ನು ನಿಮಗೆ ಹಿಡಿದುಕೊಟ್ಟರೆ ನೀವು ನನಗೆ ಎಷ್ಟು ಹಣ ಕೊಡುವಿರಿ?” ಎಂದು ಕೇಳಿದನು. ಮಹಾಯಾಜಕರು ಮೂವತ್ತು ಬೆಳ್ಳಿಯ ನಾಣ್ಯಗಳನ್ನು ಯೂದನಿಗೆ ಕೊಟ್ಟರು. 16 ಅಂದಿನಿಂದ ಯೇಸುವನ್ನು ಹಿಡಿದುಕೊಡಲು ಯೂದನು ಸಮಯ ಕಾಯುತ್ತಿದ್ದನು.
ಪಸ್ಕಹಬ್ಬದ ಆಚರಣೆಗೆ ಸಿದ್ಧತೆ
(ಮಾರ್ಕ 14:21-22; ಲೂಕ 22:7-14,21-23; ಯೋಹಾನ 13:21-30)
17 ಹುಳಿಯಿಲ್ಲದ ರೊಟ್ಟಿಯ ಹಬ್ಬದ ಮೊದಲನೆಯ ದಿನದಂದು ಶಿಷ್ಯರು ಯೇಸುವಿನ ಬಳಿಗೆ ಬಂದು, “ನಾವು ನಿನಗಾಗಿ ಪಸ್ಕಹಬ್ಬದ ಊಟವನ್ನು ಎಲ್ಲಿ ಸಿದ್ಧಪಡಿಸಬೇಕು?” ಎಂದು ಕೇಳಿದರು.
18 ಅದಕ್ಕೆ ಯೇಸು, “ನೀವು ನಗರಕ್ಕೆ ಹೋಗಿ ನಾನು ಸೂಚಿಸುವ ವ್ಯಕ್ತಿಯನ್ನು ಭೇಟಿಮಾಡಿ ಅವನಿಗೆ, ‘ಆರಿಸಿಕೊಂಡ ಸಮಯ ಸಮೀಪಿಸಿತು. ನಾನು ಪಸ್ಕಹಬ್ಬದ ಊಟವನ್ನು ನಿನ್ನ ಮನೆಯಲ್ಲಿ ನನ್ನ ಶಿಷ್ಯರೊಂದಿಗೆ ಮಾಡುತ್ತೇನೆ ಎಂದು ಉಪದೇಶಕನು ಹೇಳುತ್ತಾನೆ’ ಎಂಬುದಾಗಿ ತಿಳಿಸಿರಿ” ಎಂದು ಉತ್ತರಕೊಟ್ಟನು. 19 ಯೇಸು ಹೇಳಿದಂತೆಯೇ ಶಿಷ್ಯರು ಮಾಡಿ ಪಸ್ಕಹಬ್ಬದ ಊಟವನ್ನು ಏರ್ಪಡಿಸಿದರು.
20 ಸಾಯಂಕಾಲದಲ್ಲಿ ಯೇಸು ತನ್ನ ಹನ್ನೆರಡು ಮಂದಿ ಶಿಷ್ಯರೊಂದಿಗೆ ಊಟಕ್ಕೆ ಕುಳಿತಿದ್ದನು. 21 ಅವರೆಲ್ಲರೂ ಊಟ ಮಾಡುತ್ತಿದ್ದಾಗ ಯೇಸು, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಇಲ್ಲಿರುವ ಹನ್ನೆರಡು ಮಂದಿಯಲ್ಲಿ ಒಬ್ಬನು ನನ್ನನ್ನು ವೈರಿಗಳಿಗೆ ಒಪ್ಪಿಸುತ್ತಾನೆ” ಎಂದು ಹೇಳಿದನು.
22 ಶಿಷ್ಯರು ಇದನ್ನು ಕೇಳಿ ಬಹಳ ದುಃಖಪಟ್ಟರು. ಪ್ರತಿಯೊಬ್ಬ ಶಿಷ್ಯನು ಯೇಸುವಿಗೆ, “ಪ್ರಭುವೇ, ನಿಜವಾಗಿಯೂ ನಾನಲ್ಲ!” ಎಂದು ಹೇಳಿದರು.
23 ಯೇಸು, “ಬಟ್ಟಲಲ್ಲಿ ನನ್ನ ಸಂಗಡ ತನ್ನ ಕೈಗಳನ್ನು ಅದ್ದುವವನೇ ನನಗೆ ವಿರೋಧವಾಗಿದ್ದಾನೆ. 24 ಪವಿತ್ರ ಗ್ರಂಥದಲ್ಲಿ ಬರೆದಿರುವ ಪ್ರಕಾರ ಮನುಷ್ಯಕುಮಾರನು ಹೊರಟುಹೋಗಿ ಮರಣ ಹೊಂದುತ್ತಾನೆ. ಆದರೆ ಆತನನ್ನು ಕೊಲ್ಲಲು ಒಪ್ಪಿಸುವವನಿಗೆ ಬಹಳ ಕೇಡಾಗುತ್ತದೆ. ಅವನು ಹುಟ್ಟದೆ ಇದ್ದಿದ್ದರೆ ಎಷ್ಟೋ ಚೆನ್ನಾಗಿತ್ತು!” ಎಂದು ಹೇಳಿದನು.
25 ಆಗ, ಯೇಸುವನ್ನು ಆತನ ಶತ್ರುಗಳಿಗೆ ಒಪ್ಪಿಸಿಕೊಡಲಿದ್ದ ಯೂದನು, “ಗುರುವೇ, ನಿನಗೆ ವಿರೋಧವಾಗಿರುವವನು ನಾನಲ್ಲ ತಾನೇ?” ಎಂದನು.
ಅದಕ್ಕೆ ಯೇಸು, “ಹೌದು, ಅವನು ನೀನೇ?” ಎಂದು ಉತ್ತರಿಸಿದನು.
Kannada Holy Bible: Easy-to-Read Version. All rights reserved. © 1997 Bible League International