Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಯಾಜಕಕಾಂಡ 1-3

ಯಜ್ಞಗಳು ಮತ್ತು ಕಾಣಿಕೆಗಳು

ಯೆಹೋವನು ಮೋಶೆಯನ್ನು ಕರೆದು ದೇವದರ್ಶನಗುಡಾರದೊಳಗಿಂದ ಅವನ ಸಂಗಡ ಮಾತಾಡಿದನು. ಯೆಹೋವನು ಹೀಗೆ ಹೇಳಿದನು: “ಇಸ್ರೇಲರಿಗೆ ನೀನು ಹೇಳಬೇಕಾದದ್ದೇನೆಂದರೆ, ನೀವು ಯೆಹೋವನಿಗೆ ಯಜ್ಞವನ್ನು ಕಾಣಿಕೆಯಾಗಿ ಅರ್ಪಿಸುವುದಾದರೆ ನೀವು ಸಾಕಿದ ಪಶುಗಳನ್ನೇ ಅರ್ಪಿಸಬೇಕು. ಅದು ದನವಾಗಲಿ ಕುರಿಯಾಗಲಿ ಆಡಾಗಲಿ ಆಗಿರಬಹುದು.

“ಒಬ್ಬನು ತನ್ನ ದನಗಳಲ್ಲಿ ಒಂದನ್ನು ಸರ್ವಾಂಗಹೋಮವಾಗಿ ಅರ್ಪಿಸಬಯಸಿದರೆ ಆ ಪಶುವು ಯಾವ ದೋಷವಿಲ್ಲದ ಹೋರಿಯಾಗಿರಬೇಕು. ಅವನು ಆ ಪಶುವನ್ನು ದೇವದರ್ಶನಗುಡಾರದ ಬಾಗಿಲಿಗೆ ತರಬೇಕು. ಆಗ ಯೆಹೋವನು ಆ ಸಮರ್ಪಣೆಯನ್ನು ಮೆಚ್ಚಿಕೊಳ್ಳುವನು. ಅವನು ತನ್ನ ಕೈಯನ್ನು ಪ್ರಾಣಿಯ ತಲೆಯ ಮೇಲಿಡಬೇಕು. ಆ ವ್ಯಕ್ತಿಯ ದೋಷಪರಿಹಾರಕ್ಕಾಗಿ ಯೆಹೋವನು ಆ ಸರ್ವಾಂಗಹೋಮವನ್ನು ಸ್ವೀಕರಿಸುವನು.

“ಅವನು ಹೋರಿಯನ್ನು ಯೆಹೋವನ ಸನ್ನಿಧಿಯಲ್ಲಿ ವಧಿಸಬೇಕು. ಬಳಿಕ ಯಾಜಕರಾದ ಆರೋನನ ಪುತ್ರರು ರಕ್ತವನ್ನು ದೇವದರ್ಶನಗುಡಾರದ ಬಾಗಿಲಿನ ಹತ್ತಿರವಿರುವ ಯಜ್ಞವೇದಿಕೆಯ ಬಳಿಗೆ ತರಬೇಕು; ರಕ್ತವನ್ನು ಸುತ್ತಲೂ ಯಜ್ಞವೇದಿಕೆಯ ಮೇಲೆ ಚಿಮಿಕಿಸಬೇಕು. ಯಾಜಕನು ಆ ಪಶುವಿನ ಚರ್ಮವನ್ನು ಸುಲಿದು, ಪಶುವನ್ನು ತುಂಡುತುಂಡುಗಳಾಗಿ ಕಡಿಯಬೇಕು. ಯಾಜಕರಾದ ಆರೋನನ ಪುತ್ರರು ವೇದಿಕೆಯ ಮೇಲೆ ಬೆಂಕಿಯನ್ನಿಟ್ಟು ಅದರ ಮೇಲೆ ಕಟ್ಟಿಗೆಯನ್ನು ಇಡಬೇಕು. ಆರೋನನ ವಂಶದವರಾದ ಯಾಜಕರು ವೇದಿಕೆಯ ಮೇಲೆ ಬೆಂಕಿಯಲ್ಲಿರುವ ಕಟ್ಟಿಗೆಯ ಮೇಲೆ ಪಶುವಿನ ತುಂಡುಗಳನ್ನೂ ತಲೆ ಮತ್ತು ಕೊಬ್ಬನ್ನೂ ಇಡಬೇಕು. ಯಾಜಕನು ಪಶುವಿನ ಕಾಲುಗಳನ್ನು ಮತ್ತು ಒಳಗಿನ ಭಾಗಗಳನ್ನು ನೀರಿನಿಂದ ತೊಳೆದು ಈ ಎಲ್ಲಾ ಭಾಗಗಳನ್ನು ವೇದಿಕೆಯ ಮೇಲೆ ಹೋಮಮಾಡಬೇಕು. ಈ ಸರ್ವಾಂಗಹೋಮದ ಸುವಾಸನೆಯು ಯೆಹೋವನಿಗೆ ಪ್ರಿಯವಾಗಿದೆ.

10 “ಒಬ್ಬನು ಕುರಿಯನ್ನಾಗಲಿ ಆಡನ್ನಾಗಲಿ ಸರ್ವಾಂಗಹೋಮವಾಗಿ ಅರ್ಪಿಸುವಾಗ, ಆ ಪ್ರಾಣಿಯು ಯಾವ ದೋಷವಿಲ್ಲದ ಗಂಡಾಗಿರಬೇಕು. 11 ಅವನು ಯೆಹೋವನ ಸನ್ನಿಧಿಯಲ್ಲಿ ಅಂದರೆ ವೇದಿಕೆಯ ಉತ್ತರ ಭಾಗದಲ್ಲಿ ಪಶುವನ್ನು ವಧಿಸಬೇಕು. ಬಳಿಕ ಯಾಜಕರಾದ ಆರೋನನ ಪುತ್ರರು ರಕ್ತವನ್ನು ವೇದಿಕೆಯ ಮೇಲೆ ಸುತ್ತಲೂ ಚಿಮಿಕಿಸಬೇಕು. 12 ಬಳಿಕ ಯಾಜಕನು ಆ ಪಶುವನ್ನು ತುಂಡುತುಂಡುಗಳಾಗಿ ಕತ್ತರಿಸಬೇಕು. ಯಾಜಕನು ವೇದಿಕೆಯ ಮೇಲೆ ಬೆಂಕಿಯಲ್ಲಿರುವ ಕಟ್ಟಿಗೆಯ ಮೇಲೆ ತುಂಡುಗಳನ್ನೂ ತಲೆ ಮತ್ತು ಕೊಬ್ಬನ್ನೂ ಇಡಬೇಕು. 13 ಯಾಜಕನು ಪಶುವಿನ ಕಾಲುಗಳನ್ನೂ ಒಳಗಿನ ಭಾಗಗಳನ್ನೂ ನೀರಿನಿಂದ ತೊಳೆಯಬೇಕು. ಬಳಿಕ ಯಾಜಕನು ಪಶುವಿನ ಈ ಎಲ್ಲಾ ಭಾಗಗಳನ್ನೂ ವೇದಿಕೆಯ ಮೇಲೆ ಹೋಮಮಾಡಬೇಕು. ಅದು ಅಗ್ನಿಯ ಮೂಲಕ ಸಮರ್ಪಿಸಲ್ಪಟ್ಟ ಸರ್ವಾಂಗಹೋಮವಾಗಿರುತ್ತದೆ. ಅದರ ಸುವಾಸನೆಯು ಯೆಹೋವನಿಗೆ ಪ್ರಿಯವಾಗಿದೆ.

14 “ಒಬ್ಬನು ಪಕ್ಷಿಯನ್ನು ಯೆಹೋವನಿಗೆ ಸರ್ವಾಂಗಹೋಮವಾಗಿ ಅರ್ಪಿಸುವಾಗ ಆ ಪಕ್ಷಿಯು ಬೆಳೆವಕ್ಕಿಯಾಗಲಿ ಪಾರಿವಾಳದ ಮರಿಯಾಗಲಿ ಆಗಿರಬೇಕು. 15 ಯಾಜಕನು ಅದನ್ನು ವೇದಿಕೆಯ ಬಳಿಗೆ ತರಬೇಕು. ಯಾಜಕನು ಪಕ್ಷಿಯ ಕುತ್ತಿಗೆಯನ್ನು ಮುರಿದು ವೇದಿಕೆಯ ಮೇಲೆ ಹೋಮಮಾಡಬೇಕು. ಪಕ್ಷಿಯ ರಕ್ತವು ವೇದಿಕೆಯ ಪಾರ್ಶ್ವದಲ್ಲಿ ಹಿಂಡಲ್ಪಡಬೇಕು. 16 ಯಾಜಕನು ಪಕ್ಷಿಯ ಕರುಳುಗಳನ್ನು ಮತ್ತು ಗರಿಗಳನ್ನು ತೆಗೆದು ಅವುಗಳನ್ನು ವೇದಿಕೆಯ ಪೂರ್ವದಿಕ್ಕಿನಲ್ಲಿ ಬಿಸಾಡಬೇಕು. ಈ ಸ್ಥಳವು ವೇದಿಕೆಯಿಂದ ತೆಗೆದ ಬೂದಿಯನ್ನು ಹಾಕುವ ಸ್ಥಳವಾಗಿದೆ. 17 ತರುವಾಯ ಯಾಜಕನು ಪಕ್ಷಿಯ ರೆಕ್ಕೆಗಳನ್ನು ಕಿತ್ತುಹಾಕಬೇಕು. ಆದರೆ ಅವನು ಪಕ್ಷಿಯನ್ನು ಎರಡು ಭಾಗಗಳಾಗಿ ವಿಭಾಗಿಸಬಾರದು. ಯಾಜಕನು ಪಕ್ಷಿಯನ್ನು ವೇದಿಕೆಯ ಮೇಲೆ ಬೆಂಕಿಯಲ್ಲಿರುವ ಕಟ್ಟಿಗೆಗಳ ಮೇಲಿಟ್ಟು ಹೋಮಮಾಡಬೇಕು. ಇದು ಅಗ್ನಿಯ ಮೂಲಕ ಸಮರ್ಪಣೆಯಾದ ಸರ್ವಾಂಗಹೋಮವಾಗಿದೆ. ಅದರ ಸುವಾಸನೆ ಯೆಹೋವನಿಗೆ ಪ್ರಿಯವಾಗಿದೆ.

ಧಾನ್ಯಸಮರ್ಪಣೆಗಳು

“ಒಬ್ಬನು ದೇವರಾದ ಯೆಹೋವನಿಗೆ ಧಾನ್ಯಸಮರ್ಪಣೆ ಮಾಡಬೇಕೆಂದಿದ್ದರೆ, ಅದು ಗೋಧಿಹಿಟ್ಟಾಗಿರಬೇಕು. ಅವನು ಈ ಹಿಟ್ಟಿನ ಮೇಲೆ ಎಣ್ಣೆಯನ್ನು ಹೊಯಿದು, ಧೂಪವನ್ನಿಡಬೇಕು. ಬಳಿಕ ಅವನು ಅದನ್ನು ಯಾಜಕರಾದ ಆರೋನನ ಪುತ್ರರ ಬಳಿಗೆ ತರಬೇಕು. ಯಾಜಕನು ಎಣ್ಣೆ ಬೆರೆಸಿದ ಹಿಟ್ಟಿನಲ್ಲಿ ಒಂದು ಹಿಡಿ ಹಿಟ್ಟನ್ನೂ ಧೂಪವೆಲ್ಲವನ್ನೂ ತೆಗೆದುಕೊಂಡು ನೈವೇದ್ಯವಾದದ್ದನ್ನು ಸೂಚಿಸುವುದಕ್ಕಾಗಿ ವೇದಿಕೆಯ ಮೇಲೆ ಅದನ್ನು ಹೋಮಮಾಡಬೇಕು. ಅದು ಅಗ್ನಿಯ ಮೂಲಕ ಮಾಡಿದ ಸಮರ್ಪಣೆಯಾಗಿದೆ. ಅದರ ಸುವಾಸನೆಯು ಯೆಹೋವನಿಗೆ ಪ್ರಿಯವಾಗಿದೆ. ಧಾನ್ಯಸಮರ್ಪಣೆಯಲ್ಲಿ ಉಳಿದ ಭಾಗವು ಆರೋನನಿಗೂ ಅವನ ಪುತ್ರರಿಗೂ ಸೇರಿದ್ದಾಗಿವೆ. ಅಗ್ನಿಯ ಮೂಲಕ ಯೆಹೋವನಿಗೆ ಮಾಡಿದ ಈ ಸಮರ್ಪಣೆಯು ಮಹಾಪರಿಶುದ್ಧವಾಗಿದೆ.

ಬೇಯಿಸಿದ ಧಾನ್ಯಸಮರ್ಪಣೆಗಳು

“ಒಬ್ಬನು ಒಲೆಯಲ್ಲಿ ಬೇಯಿಸಿದ ಧಾನ್ಯನೈವೇದ್ಯವನ್ನು ಅರ್ಪಿಸಿದರೆ, ಆಗ ಅದು ಎಣ್ಣೆ ಬೆರೆಸಿದ ಹುಳಿಯಿಲ್ಲದ ರೊಟ್ಟಿಯಾಗಲಿ ಅಥವಾ ಎಣ್ಣೆ ಹೊಯಿದು ಮಾಡಿದ ಕಡುಬುಗಳಾಗಲಿ ಆಗಿರಬೇಕು. ನಿಮ್ಮ ಧಾನ್ಯನೈವೇದ್ಯವು ಕಬ್ಬಿಣದ ಹಂಚಿನಲ್ಲಿ ಬೇಯಿಸಲ್ಪಟ್ಟಿದ್ದರೆ, ಅದು ಎಣ್ಣೆ ಬೆರೆಸಿದ ಹುಳಿಯಿಲ್ಲದ ಶ್ರೇಷ್ಠ ಹಿಟ್ಟಿನಿಂದ ಮಾಡಿದ್ದಾಗಿರಬೇಕು. ನೀವು ಅದನ್ನು ಚೂರುಚೂರುಗಳಾಗಿ ಮುರಿದು ಅದರ ಮೇಲೆ ಎಣ್ಣೆ ಹೊಯ್ಯಬೇಕು. ಅದು ಧಾನ್ಯನೈವೇದ್ಯವಾಗಿದೆ. ನೀವು ಬಾಂಡ್ಲಿಯಲ್ಲಿ ಪಕ್ವಮಾಡಿದ ಪದಾರ್ಥವನ್ನು ಅರ್ಪಿಸಿದರೆ, ಅದು ಎಣ್ಣೆ ಬೆರೆಸಿದ ಶ್ರೇಷ್ಠ ಗೋಧಿಹಿಟ್ಟಿನಿಂದ ಮಾಡಿದ್ದಾಗಿರಬೇಕು.

“ನೀವು ಈ ವಸ್ತುಗಳಿಂದ ಮಾಡಿದ ಧಾನ್ಯನೈವೇದ್ಯಗಳನ್ನು ಯೆಹೋವನಿಗೆ ಅರ್ಪಿಸುವುದಾದರೆ ನೀವು ಆ ವಸ್ತುಗಳನ್ನು ಯಾಜಕನ ಬಳಿಗೆ ತೆಗೆದುಕೊಂಡು ಹೋಗಬೇಕು. ಅವನು ಅದನ್ನು ವೇದಿಕೆಯ ಮೇಲಿಡುವನು. ಬಳಿಕ ಯಾಜಕನು ಧಾನ್ಯನೈವೇದ್ಯದ ಸ್ವಲ್ಪ ಭಾಗವನ್ನು ತೆಗೆದುಕೊಂಡು ನೈವೇದ್ಯವಾದದ್ದನ್ನು ಸೂಚಿಸುವುದಕ್ಕಾಗಿ ವೇದಿಕೆಯ ಮೇಲೆ ಹೋಮಮಾಡುವನು. ಅದು ಅಗ್ನಿಯ ಮೂಲಕ ಮಾಡಿದ ಸಮರ್ಪಣೆಯಾಗಿದೆ. ಅದರ ಸುವಾಸನೆಯು ಯೆಹೋವನಿಗೆ ಪ್ರಿಯವಾಗಿದೆ. 10 ಧಾನ್ಯನೈವೇದ್ಯದಲ್ಲಿ ಉಳಿದದ್ದು ಆರೋನನಿಗೂ ಅವನ ಪುತ್ರರಿಗೂ ಸೇರುವುದು. ಅಗ್ನಿಯ ಮೂಲಕ ಯೆಹೋವನಿಗೆ ಮಾಡಿದ ಈ ನೈವೇದ್ಯವು ಮಹಾಪರಿಶುದ್ಧವಾಗಿದೆ.

11 “ನೀವು ಹುಳಿಹಿಟ್ಟಿನಿಂದ ಮಾಡಿದ[a] ಯಾವದನ್ನೂ ಯೆಹೋವನಿಗೆ ಧಾನ್ಯಸಮರ್ಪಣೆಯಾಗಿ ಕೊಡಬಾರದು. ನೀವು ಹುಳಿಯನ್ನಾಗಲಿ ಜೇನುತುಪ್ಪವನ್ನಾಗಲಿ ಯೆಹೋವನಿಗೆ ಅಗ್ನಿಯ ಮೂಲಕ ಹೋಮಮಾಡಬಾರದು. 12 ನೀವು ಹುಳಿಯನ್ನು ಮತ್ತು ಜೇನುತುಪ್ಪವನ್ನು ಪ್ರಥಮಫಲವಾಗಿ ಅರ್ಪಿಸಬಹುದು. ಆದರೆ ಅವುಗಳನ್ನು ವೇದಿಕೆಯ ಮೇಲೆ ಹೋಮಮಾಡಕೂಡದು. 13 ನೀವು ಅರ್ಪಿಸುವ ಪ್ರತಿ ಧಾನ್ಯಸಮರ್ಪಣೆಯಲ್ಲೂ ಉಪ್ಪನ್ನು ಹಾಕಬೇಕು. ನಿಮ್ಮ ಧಾನ್ಯಸಮರ್ಪಣೆಯಲ್ಲಿ ದೇವರ ಒಡಂಬಡಿಕೆಯೆಂಬ ಉಪ್ಪು ಇರಲೇಬೇಕು. ನೀವು ಅರ್ಪಿಸುವ ನಿಮ್ಮ ಎಲ್ಲಾ ಕಾಣಿಕೆಗಳಲ್ಲಿ ಉಪ್ಪನ್ನು ಸೇರಿಸಬೇಕು.”

ಪ್ರಥಮಫಲದ ನೈವೇದ್ಯಗಳು

14 “ನೀವು ಪ್ರಥಮಫಲವನ್ನು ಯೆಹೋವನಿಗೆ ನೈವೇದ್ಯವಾಗಿ ಅರ್ಪಿಸುವಾಗ ಬೆಂಕಿಯಲ್ಲಿ ಸುಟ್ಟ ಗೋಧಿತೆನೆಗಳನ್ನು ತರಬೇಕು. ಅವುಗಳು ಜಜ್ಜಲ್ಪಟ್ಟ ಹಸಿ ತೆನೆಗಳಾಗಿರಬೇಕು. ಇದು ನಿಮ್ಮ ಪ್ರಥಮಫಲ ನೈವೇದ್ಯವಾಗಿರುವುದು. 15 ನೀವು ಅದಕ್ಕೆ ಎಣ್ಣೆಯನ್ನು ಹಾಕಿ ಅದರ ಮೇಲೆ ಧೂಪವನ್ನಿಡಬೇಕು. ಅದು ಧಾನ್ಯಸಮರ್ಪಣೆಯಾಗಿದೆ. 16 ಯಾಜಕನು ಜಜ್ಜಿದ ಧಾನ್ಯದಲ್ಲಿ ಒಂದು ಭಾಗವನ್ನೂ ಎಣ್ಣೆಯನ್ನೂ ಎಲ್ಲಾ ಧೂಪವನ್ನೂ ತೆಗೆದುಕೊಂಡು ನೈವೇದ್ಯವಾದದ್ದನ್ನು ಸೂಚಿಸುವುದಕ್ಕಾಗಿ ಹೋಮಮಾಡಬೇಕು. ಇದು ಅಗ್ನಿಯ ಮೂಲಕ ಯೆಹೋವನಿಗೆ ಅರ್ಪಿಸಿದ ಸಮರ್ಪಣೆಯಾಗಿದೆ.

ಸಮಾಧಾನಯಜ್ಞವನ್ನು ಅರ್ಪಿಸುವ ಕ್ರಮ

“ಯಾವನಾದರೂ ಸಮಾಧಾನಯಜ್ಞ ಮಾಡಬೇಕಾದರೆ ಅವನು ತನ್ನ ಪಶುಮಂದೆಯಿಂದ ಗಂಡುಪಶುವನ್ನಾಗಲಿ ಹೆಣ್ಣುಪಶುವನ್ನಾಗಲಿ ಅರ್ಪಿಸಬಹುದು. ಯೆಹೋವನ ಎದುರಿನಲ್ಲಿ ಅರ್ಪಿಸಲ್ಪಡುವ ಅದು ಅಂಗದೋಷವಿಲ್ಲದ್ದಾಗಿರಬೇಕು. ಆ ವ್ಯಕ್ತಿಯು ತನ್ನ ಕೈಯನ್ನು ಪಶುವಿನ ತಲೆಯ ಮೇಲಿಟ್ಟು ದೇವದರ್ಶನಗುಡಾರದ ಬಾಗಿಲಲ್ಲಿ ಅದನ್ನು ವಧಿಸಬೇಕು. ಬಳಿಕ ಯಾಜಕರಾದ ಆರೋನನ ಪುತ್ರರು ಆ ರಕ್ತವನ್ನು ಯಜ್ಞವೇದಿಕೆಯ ಮೇಲೆ ಸುತ್ತಲೂ ಚಿಮಿಕಿಸಬೇಕು. 3-4 ಆ ಯಜ್ಞಪಶುವಿನ ವಪೆಯನ್ನೂ ಕರುಳುಗಳ ಮೇಲಿನ ಎಲ್ಲಾ ಕೊಬ್ಬನ್ನೂ ಎರಡು ಮೂತ್ರಪಿಂಡಗಳನ್ನೂ ಇವುಗಳ ಮೇಲೆ ಸೊಂಟದಲ್ಲಿರುವ ಕೊಬ್ಬನ್ನೂ ತೆಗೆದು ಪಿತ್ತಕೋಶದ ಹತ್ತಿರ ಮೂತ್ರಪಿಂಡಗಳವರೆಗೆ ಇರುವ ಕೊಬ್ಬನ್ನೂ ತೆಗೆದು ಯೆಹೋವನಿಗೆ ಹೋಮಮಾಡಬೇಕು. ಬಳಿಕ ಆರೋನನ ಪುತ್ರರು ಕೊಬ್ಬನ್ನು ವೇದಿಕೆಗೆ ತಂದು ಅದನ್ನು ಬೆಂಕಿಯಲ್ಲಿ ಕಟ್ಟಿಗೆಯ ಮೇಲಿರುವ ಸರ್ವಾಂಗಹೋಮದ ಮೇಲಿಡಬೇಕು. ಅದು ಅಗ್ನಿಯ ಮೂಲಕ ಅರ್ಪಿಸುವ ಹೋಮವಾಗಿರುತ್ತದೆ. ಅದರ ಸುವಾಸನೆಯು ಯೆಹೋವನಿಗೆ ಪ್ರಿಯವಾಗಿದೆ.

“ಒಬ್ಬನು ಕುರಿಯನ್ನಾಗಲಿ ಆಡನ್ನಾಗಲಿ ಯೆಹೋವನಿಗೆ ಸಮಾಧಾನಯಜ್ಞವಾಗಿ ಕೊಡುವಾಗ, ಆ ಪಶುವಿನಲ್ಲಿ ಯಾವ ದೋಷವೂ ಇರಬಾರದು. ಅದು ಗಂಡು ಅಥವಾ ಹೆಣ್ಣಾಗಿರಬಹುದು. ಅವನು ಕುರಿಮರಿಯನ್ನು ಅರ್ಪಿಸುವುದಾದರೆ, ಅದನ್ನು ಯೆಹೋವನ ಸನ್ನಿಧಿಗೆ ತರಬೇಕು. ಅವನು ತನ್ನ ಕೈಯನ್ನು ಪಶುವಿನ ಮೇಲಿಟ್ಟು ದೇವದರ್ಶನಗುಡಾರದ ಮುಂದೆ ಅದನ್ನು ವಧಿಸಬೇಕು. ತರುವಾಯ ಆರೋನನ ಪುತ್ರರು ಅದರ ರಕ್ತವನ್ನು ವೇದಿಕೆಯ ಮೇಲೆ ಸುತ್ತಲೂ ಚಿಮಿಕಿಸಬೇಕು. ಅವನು ಸಮಾಧಾನಯಜ್ಞ ಪಶುವಿನ ಕೊಬ್ಬನ್ನು ಅಂದರೆ ಬಾಲದ ಮೇಲಿರುವ ಕೊಬ್ಬನ್ನು ಕರುಳುಗಳ ಮೇಲಿರುವ ಮತ್ತು ಅವುಗಳ ಸುತ್ತಲಿರುವ ಕೊಬ್ಬನ್ನೆಲ್ಲಾ ಹೋಮಮಾಡಬೇಕು. 10 ಅವನು ಎರಡು ಮೂತ್ರಪಿಂಡಗಳನ್ನೂ ಇವುಗಳ ಮೇಲೆ ಸೊಂಟದಲ್ಲಿರುವ ಕೊಬ್ಬನ್ನೂ ಪಿತ್ತಕೋಶದ ಮೇಲೆ ಮೂತ್ರಪಿಂಡಗಳವರೆಗೆ ಇರುವ ಕೊಬ್ಬನ್ನೂ ಯಾಜಕನು ಯಜ್ಞವೇದಿಕೆಯ ಮೇಲೆ ಹೋಮಮಾಡಬೇಕು. 11 ಅದು ಯೆಹೋವನಿಗೆ ಬೆಂಕಿಯ ಮೂಲಕ ಅರ್ಪಿಸಿದ ಆಹಾರವಾಗುವುದು.

12 “ಸಮರ್ಪಿಸಲ್ಪಡುವ ಪಶು ಆಡಾಗಿದ್ದರೆ, ಸಮರ್ಪಿಸುವವನು ಅದನ್ನು ಯೆಹೋವನ ಸನ್ನಿಧಿಗೆ ತರಬೇಕು. 13 ಅವನು ತನ್ನ ಕೈಯನ್ನು ಆಡಿನ ತಲೆಯ ಮೇಲಿಟ್ಟು ದೇವದರ್ಶನಗುಡಾರದ ಮುಂದೆ ಅದನ್ನು ವಧಿಸಬೇಕು. ಬಳಿಕ ಆರೋನನ ಗಂಡುಮಕ್ಕಳು ಆಡಿನ ರಕ್ತವನ್ನು ವೇದಿಕೆಯ ಮೇಲೆ ಅದರ ಸುತ್ತಲೂ ಚಿಮಿಕಿಸಬೇಕು. 14 ಅವನು ಸಮಾಧಾನಯಜ್ಞದ ಪಶುವಿನ ವಪೆಯನ್ನೂ ಕರುಳುಗಳ ಮೇಲಿರುವ ಎಲ್ಲಾ ಕೊಬ್ಬನ್ನೂ ಎರಡು ಮೂತ್ರಪಿಂಡಗಳನ್ನೂ ಇವುಗಳ ಮೇಲೆ ಸೊಂಟದಲ್ಲಿರುವ ಕೊಬ್ಬನ್ನೂ ಪಿತ್ತಾಶಯದ ಹತ್ತಿರ ಮೂತ್ರಪಿಂಡಗಳ ತನಕ ಇರುವ ಕೊಬ್ಬನ್ನೂ ಯೆಹೋವನಿಗೋಸ್ಕರ ಸಮರ್ಪಿಸಬೇಕು. 15 ಅವನು ಅದರ ಎರಡು ಮೂತ್ರಪಿಂಡಗಳನ್ನು ಮತ್ತು ಸೊಂಟದವರೆಗೆ ಅವುಗಳನ್ನು ಆವರಿಸಿರುವ ಕೊಬ್ಬನ್ನು ಸಮರ್ಪಿಸಬೇಕು. ಅವನು ಪಿತ್ತಾಶಯವನ್ನು ಮತ್ತು ಅದನ್ನು ಅವರಿಸಿರುವ ಕೊಬ್ಬನ್ನು ಸಮರ್ಪಿಸಬೇಕು. ಅವನು ಮೂತ್ರಪಿಂಡಗಳೊಂದಿಗೆ ಪಿತ್ತಾಶಯವನ್ನೂ ಸಮರ್ಪಿಸಬೇಕು. 16 ಬಳಿಕ ಯಾಜಕನು ಅವುಗಳನ್ನು ವೇದಿಕೆಯ ಮೇಲೆ ಹೋಮಮಾಡಬೇಕು. ಇದು ಆಹಾರದ ರೂಪದಲ್ಲಿ ಯೆಹೋವನಿಗೆ ಅರ್ಪಿಸಿದ ಸುವಾಸನೆಯನ್ನು ಉಂಟುಮಾಡುವ ಸಮಾಧಾನಯಜ್ಞವಾಗಿರುತ್ತದೆ. ಆದರೆ ಅದರ ಕೊಬ್ಬು ಯೆಹೋವನಿಗೆ ಸೇರಿದೆ. 17 ನಿಮ್ಮ ಎಲ್ಲಾ ಸಂತತಿಗಳವರಿಗೆ ಈ ನಿಯಮವು ಶಾಶ್ವತವಾದದ್ದು. ನೀವೆಲ್ಲೇ ವಾಸಿಸಿದರೂ ಕೊಬ್ಬನ್ನಾಗಲಿ ರಕ್ತವನ್ನಾಗಲಿ ಎಂದಿಗೂ ತಿನ್ನಬಾರದು.”

ಮತ್ತಾಯ 24:1-28

ನೆಲಸಮವಾಗಲಿರುವ ಮಹಾದೇವಾಲಯ

(ಮಾರ್ಕ 13:1-31; ಲೂಕ 21:5-33)

24 ಯೇಸು ದೇವಾಲಯದಿಂದ ಹೋಗುತ್ತಿದ್ದಾಗ ಆತನ ಶಿಷ್ಯರು ದೇವಾಲಯದ ಕಟ್ಟಡಗಳನ್ನು ತೋರಿಸಲು ಆತನ ಬಳಿಗೆ ಬಂದರು. ಆಗ ಯೇಸು “ಈ ಕಟ್ಟಡಗಳನ್ನೆಲ್ಲ ನೋಡುತ್ತಿದ್ದೀರಾ? ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಇವುಗಳೆಲ್ಲಾ ನಾಶವಾಗುತ್ತವೆ. ಇಲ್ಲಿ ಕಲ್ಲಿನ ಮೇಲೆ ಕಲ್ಲು ಉಳಿಯದಂತೆ ಎಲ್ಲಾ ಕಲ್ಲುಗಳು ಕೆಡವಲ್ಪಡುತ್ತವೆ” ಎಂದು ಹೇಳಿದನು.

ಬಳಿಕ ಯೇಸು ಆಲಿವ್ ಗುಡ್ಡದ ಮೇಲೆ ಕುಳಿತುಕೊಂಡಿದ್ದಾಗ, ಶಿಷ್ಯರು ಪ್ರತ್ಯೇಕವಾಗಿ ಯೇಸುವಿನ ಬಳಿಗೆ ಬಂದು, “ಇವುಗಳೆಲ್ಲಾ ಯಾವಾಗ ಸಂಭವಿಸುತ್ತವೆ! ನೀನು ಈ ಲೋಕಕ್ಕೆ ಮತ್ತೊಮ್ಮೆ ಬರುವಾಗ ಮತ್ತು ಲೋಕದ ಸಮಾಪ್ತಿಯ ಸಮಯ ಬಂದಾಗ ಸೂಚನೆಗಾಗಿ ಏನು ಸಂಭವಿಸುವುದು? ನಮಗೆ ತಿಳಿಸು!” ಎಂದು ಕೇಳಿದರು.

ಯೇಸು ಅವರಿಗೆ ಕೊಟ್ಟ ಉತ್ತರವಿದು: “ಎಚ್ಚರವಾಗಿರಿ! ನಿಮ್ಮನ್ನು ಮೋಸಗೊಳಿಸಲು ಯಾರಿಗೂ ಅವಕಾಶ ಕೊಡಬೇಡಿ. ಅನೇಕರು ನನ್ನ ಹೆಸರಿನಲ್ಲಿ ಬಂದು, ‘ನಾನೇ ಕ್ರಿಸ್ತನು’ ಎಂದು ಹೇಳಿ ಅನೇಕರನ್ನು ಮೋಸಪಡಿಸುವರು. ನಿಮ್ಮ ಸಮೀಪದಲ್ಲಿ ನಡೆಯುತ್ತಿರುವ ಯುದ್ಧಗಳ ಶಬ್ದವನ್ನೂ ಬಹು ದೂರದಲ್ಲಿ ನಡೆಯುತ್ತಿರುವ ಯುದ್ಧಗಳ ಸುದ್ದಿಯನ್ನೂ ನೀವು ಕೇಳುವಿರಿ. ಆದರೆ ಹೆದರಬೇಡಿ. ಅಂತ್ಯವು ಬರುವುದಕ್ಕಿಂತ ಮುಂಚೆ ಇವುಗಳು ಸಂಭವಿಸಲೇಬೇಕು. ಜನಾಂಗಗಳು ಬೇರೆ ಜನಾಂಗಗಳಿಗೆ ವಿರೋಧವಾಗಿ ಯುದ್ದ ಮಾಡುತ್ತವೆ. ರಾಜ್ಯಗಳು ಬೇರೆಬೇರೆ ರಾಜ್ಯಗಳಿಗೆ ವಿರೋಧವಾಗಿ ಯುದ್ಧ ಮಾಡುತ್ತವೆ. ಬರಗಾಲಗಳು ಬರುತ್ತವೆ. ಬೇರೆಬೇರೆ ಸ್ಥಳಗಳಲ್ಲಿ ಭೂಕಂಪಗಳು ಆಗುತ್ತವೆ. ಇವೆಲ್ಲಾ ಪ್ರಸವವೇದನೆಯ ಆರಂಭವಷ್ಟೇ.

“ಆಗ ಜನರು ನಿಮ್ಮನ್ನು ಹಿಂಸಿಸಿ, ಮರಣದಂಡನೆ ವಿಧಿಸಲು ಅಧಿಕಾರಿಗಳಿಗೆ ಒಪ್ಪಿಸಿಕೊಡುವರು. ಜನರೆಲ್ಲರೂ ನಿಮ್ಮನ್ನು ವಿರೋಧಿಸುವರು. ನೀವು ನನ್ನಲ್ಲಿ ನಂಬಿಕೆ ಇಟ್ಟದ್ದಕ್ಕಾಗಿ ಇವುಗಳೆಲ್ಲಾ ನಿಮಗೆ ಸಂಭವಿಸುವವು. 10 ಆ ಸಮಯದಲ್ಲಿ ಅನೇಕ ವಿಶ್ವಾಸಿಗಳು ತಮ್ಮ ನಂಬಿಕೆಯನ್ನು ಕಳೆದುಕೊಳ್ಳುವರು. ಅವರು ಒಬ್ಬರಿಗೊಬ್ಬರಿಗೆ ವಿರೋಧವಾಗಿ ತಿರುಗಿಕೊಂಡು ಒಬ್ಬರನ್ನೊಬ್ಬರು ದ್ವೇಷಿಸುವರು. 11 ಅನೇಕ ಸುಳ್ಳುಪ್ರವಾದಿಗಳು ಬಂದು ಎಷ್ಟೋ ಜನರನ್ನು ವಂಚಿಸುವರು. 12 ಲೋಕದಲ್ಲಿ ದುಷ್ಟತನವು ಹೆಚ್ಚಾಗಿ ಬಹುಜನ ವಿಶ್ವಾಸಿಗಳ ಪ್ರೀತಿಯು ಅಡಗಿಹೋಗುವುದು. 13 ಆದರೆ ಕಡೆಯವರೆಗೂ ದೃಢವಾಗಿರುವವನು ರಕ್ಷಣೆಹೊಂದುತ್ತಾನೆ. 14 ದೇವರ ರಾಜ್ಯದ ಶುಭವಾರ್ತೆಯನ್ನು ಲೋಕದಲ್ಲೆಲ್ಲಾ ಪ್ರತಿ ಜನಾಂಗಕ್ಕೂ ಸಾರಲಾಗುವುದು. ಆಗ ಅಂತ್ಯವು ಬರುತ್ತದೆ.

15 “ಭಯಂಕರವಾದ ನಾಶಕ್ಕೆ ಕಾರಣವಾದ ವಸ್ತುವೊಂದನ್ನು[a] ಕುರಿತು ಪ್ರವಾದಿ ದಾನಿಯೇಲನು ಹೇಳಿದ್ದಾನೆ. ಈ ಭಯಂಕರವಾದ ವಸ್ತುವು ದೇವಾಲಯದ ಪರಿಶುದ್ಧ ಸ್ಥಳದಲ್ಲಿ ನಿಂತಿರುವುದನ್ನು ನೀವು ನೋಡುವಿರಿ. (ಇದನ್ನು ಓದುತ್ತಿರುವವನು ಇದರ ಅರ್ಥವನ್ನು ಗ್ರಹಿಸಿಕೊಳ್ಳಲಿ.) 16 ಆ ಸಮಯದಲ್ಲಿ ಜುದೇಯದಲ್ಲಿರುವ ಜನರು ಬೆಟ್ಟಗಳಿಗೆ ಓಡಿಹೋಗಲಿ. 17 ಮಾಳಿಗೆಯ ಮೇಲಿರುವವನು ಇಳಿದು ತನ್ನ ವಸ್ತುಗಳನ್ನು ಮನೆಯಿಂದ ತೆಗೆದುಕೊಳ್ಳದೆ ಓಡಿಹೋಗಲಿ. 18 ಹೊಲದಲ್ಲಿರುವವನು ತನ್ನ ಮೇಲಂಗಿಯನ್ನು ತೆಗೆದುಕೊಳ್ಳುವುದಕ್ಕಾಗಿ ಮನೆಗೆ ಹಿಂತಿರುಗದಿರಲಿ.

19 “ಆ ಸಮಯದಲ್ಲಿ ಗರ್ಭಿಣಿಯರಿಗೂ ಮೊಲೆಕೂಸುಗಳಿರುವ ಸ್ತ್ರೀಯರಿಗೂ ಎಂಥಾ ಗೋಳಾಟ! 20 ನೀವು ಓಡಿಹೋಗಬೇಕಾದ ಈ ಸಮಯವು ಚಳಿಗಾಲದಲ್ಲಾಗಲಿ ಸಬ್ಬತ್ ದಿನದಲ್ಲಾಗಲಿ ಬರದಂತೆ ಪ್ರಾರ್ಥಿಸಿರಿ. 21 ಏಕೆಂದರೆ ಆ ಸಮಯದಲ್ಲಿ ಮಹಾ ಸಂಕಟ ಇರುವುದು. ಲೋಕವು ಸೃಷ್ಟಿಯಾದಂದಿನಿಂದ ಇಂಥ ಸಂಕಟವು ಎಂದೂ ಸಂಭವಿಸಿಲ್ಲ. ಇನ್ನು ಮುಂದೆಯೂ ಸಂಭವಿಸುವುದಿಲ್ಲ.

22 “ದೇವರು ಭಯಂಕರವಾದ ಆ ಸಮಯವನ್ನು ಕಡಿಮೆಗೊಳಿಸಲು ತೀರ್ಮಾನಿಸಿದ್ದಾನೆ. ಇಲ್ಲವಾದರೆ, ಜೀವದಿಂದ ಉಳಿಯಲು ಯಾರಿಗೂ ಸಾಧ್ಯವಿಲ್ಲ. ತಾನು ಆರಿಸಿಕೊಂಡ ಜನರ ನಿಮಿತ್ತ ದೇವರು ಆ ಸಮಯವನ್ನು ಕಡಿಮೆ ಮಾಡಿದ್ದಾನೆ.

23 “ಆ ಸಮಯದಲ್ಲಿ ಕೆಲವರು ನಿಮಗೆ, ‘ನೋಡಿ, ಕ್ರಿಸ್ತನು ಅಲ್ಲಿದ್ದಾನೆ!’ ಎಂದು ಹೇಳಬಹುದು. ಇಲ್ಲವೆ ಬೇರೊಬ್ಬನು, ‘ಆತನು ಇಲ್ಲಿದ್ದಾನೆ!’ ಎಂದು ಹೇಳಬಹುದು. ಆದರೆ ಅವರನ್ನು ನಂಬಬೇಡಿ. 24 ಸುಳ್ಳುಕ್ರಿಸ್ತರು ಮತ್ತು ಸುಳ್ಳುಪ್ರವಾದಿಗಳು ಬಂದು ದೇವರು ಆರಿಸಿಕೊಂಡಿರುವ ಜನರನ್ನು ಮೋಸಗೊಳಿಸುವುದಕ್ಕಾಗಿ ಮಹತ್ಕಾರ್ಯಗಳನ್ನು ಮತ್ತು ಅದ್ಭುತಕಾರ್ಯಗಳನ್ನು ಮಾಡುವರು. 25 ಅದು ಸಂಭವಿಸುವುದಕ್ಕೆ ಮುಂಚೆಯೇ ನಾನು ಅದರ ವಿಷಯವಾಗಿ ನಿಮಗೆ ಎಚ್ಚರಿಕೆ ಕೊಟ್ಟಿದ್ದೇನೆ.

26 “‘ಕ್ರಿಸ್ತನು ಅಡವಿಯಲ್ಲಿದ್ದಾನೆ!’ ಎಂದು ಕೆಲವರು ಹೇಳಿದರೆ ಅಡವಿಗೆ ಹೋಗಬೇಡಿ. ‘ಕ್ರಿಸ್ತನು ಆ ಕೋಣೆ ಒಳಗೆ ಇದ್ದಾನೆ!’ ಎಂದು ಹೇಳಿದರೆ ಅದನ್ನು ನಂಬಬೇಡಿ. 27 ಮನುಷ್ಯಕುಮಾರನು ಜನರಿಗೆಲ್ಲ ಕಾಣಿಸುವಂತೆ ಬರುತ್ತಾನೆ. ಮನುಷ್ಯಕುಮಾರನ ಪ್ರತ್ಯಕ್ಷತೆಯು ಆಕಾಶದಲ್ಲಿ ಮಿಂಚು ಹೊಳೆಯುವಂತೆ ಪ್ರಕಾಶಿಸುತ್ತಾ ಲೋಕದ ಎಲ್ಲಾ ಕಡೆಗಳಲ್ಲೂ ಕಾಣಿಸುವುದು. 28 ಹದ್ದುಗಳು ಎಲ್ಲಿ ಕೂಡಿಬರುತ್ತವೆಯೋ ಅಲ್ಲಿ ಹೆಣವಿರುತ್ತದೆ ಎಂಬುದು ನಿಮಗೆ ಗೊತ್ತೇ ಇದೆ. ಅದೇ ರೀತಿ ನನ್ನ ಬರುವಿಕೆಯೂ ಸ್ಪಷ್ಟವಾಗಿರುವುದು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International