Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ವಿಮೋಚನಕಾಂಡ 25-26

ಪವಿತ್ರ ವಸ್ತುಗಳಿಗಾಗಿ ಕಾಣಿಕೆಗಳು

25 ಯೆಹೋವನು ಮೋಶೆಗೆ, “ಇಸ್ರೇಲರು ನನಗೆ ಕಾಣಿಕೆಗಳನ್ನು ತರಬೇಕೆಂದು ಅವರಿಗೆ ಹೇಳು. ಪ್ರತಿಯೊಬ್ಬನು ನನಗೆ ಕೊಡುವುದರ ಬಗ್ಗೆ ತನ್ನ ಹೃದಯದಲ್ಲಿ ತೀರ್ಮಾನಿಸಿಕೊಳ್ಳಬೇಕು. ಈ ಕಾಣಿಕೆಗಳನ್ನು ನನಗಾಗಿ ಸ್ವೀಕರಿಸು. ಜನರಿಂದ ನೀನು ಸ್ವೀಕರಿಸಬೇಕಾದ ವಸ್ತುಗಳ ಪಟ್ಟಿ ಇಲ್ಲಿದೆ: ಚಿನ್ನ, ಬೆಳ್ಳಿ, ತಾಮ್ರ, ನೀಲಿ, ನೇರಳೆ, ಕೆಂಪುದಾರ, ನಾರುಬಟ್ಟೆ, ಆಡು ಕೂದಲಿನ ಬಟ್ಟೆ, ಕೆಂಪುಬಣ್ಣದ ಕುರಿದೊಗಲು, ಉತ್ತಮ ತೊಗಲುಗಳು,[a] ಜಾಲೀಮರ, ದೀಪಗಳಿಗೆ ಬೇಕಾದ ಎಣ್ಣೆ, ಅಭಿಷೇಕತೈಲಕ್ಕೆ ಮತ್ತು ಪರಿಮಳಧೂಪಕ್ಕೆ ಬೇಕಾದ ಸುಗಂಧದ್ರವ್ಯಗಳು, ಏಪೋದಿಗೆ ದೈವನಿರ್ಣಯದ ಪದಕಚೀಲಕ್ಕೆ ಬೇಕಾದ ಗೋಮೇಧಕರತ್ನಗಳು ಮತ್ತು ಇತರ ರತ್ನಗಳು” ಎಂದು ಹೇಳಿದನು.

ಪವಿತ್ರ ಗುಡಾರ

ಇದಲ್ಲದೆ ದೇವರು ಮೋಶೆಗೆ, “ಜನರು ನನಗೋಸ್ಕರವಾಗಿ ಒಂದು ಪವಿತ್ರ ಗುಡಾರವನ್ನು ಕಟ್ಟಬೇಕು. ಆಗ ನಾನು ಅವರ ನಡುವೆ ಅದರಲ್ಲಿ ವಾಸಿಸುವೆನು. ಪವಿತ್ರ ಗುಡಾರ ಮತ್ತು ಅದರಲ್ಲಿರುವ ಪ್ರತಿಯೊಂದು ವಸ್ತುವೂ ಹೇಗಿರಬೇಕೆಂದು ನಾನು ನಿನಗೆ ತೋರಿಸುವೆನು. ನಾನು ನಿನಗೆ ತೋರಿಸುವ ಮಾದರಿಯ ಪ್ರಕಾರವೇ ಪ್ರತಿಯೊಂದನ್ನು ಮಾಡು.

ಒಡಂಬಡಿಕೆಯ ಪೆಟ್ಟಿಗೆ

10 “ಜಾಲೀಮರದಿಂದ ಒಂದು ವಿಶೇಷ ಪೆಟ್ಟಿಗೆಯನ್ನು ಮಾಡಿಸು. ಈ ಪವಿತ್ರ ಪೆಟ್ಟಿಗೆಯು ಎರಡೂವರೆ ಮೊಳ ಉದ್ದ, ಒಂದೂವರೆ ಮೊಳ ಅಗಲ ಮತ್ತು ಒಂದೂವರೆ ಮೊಳ ಎತ್ತರ ಇರಬೇಕು. 11 ಅದರ ಹೊರಮೈಯನ್ನು ಮತ್ತು ಒಳಮೈಯನ್ನು ಅಪ್ಪಟ ಬಂಗಾರದಿಂದ ಹೊದಿಸಬೇಕು. ಪೆಟ್ಟಿಗೆಯ ಅಂಚುಗಳ ಸುತ್ತಲೂ ಚಿನ್ನದ ಗೋಟು ಕಟ್ಟಿಸಬೇಕು. 12 ಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗಲು ಅನುಕೂಲವಾಗುವಂತೆ ನಾಲ್ಕು ಚಿನ್ನದ ಬಳೆಗಳನ್ನು ಎರಕಹೊಯ್ಯಬೇಕು. ನಾಲ್ಕು ಮೂಲೆಗಳಲ್ಲಿ ಅಂದರೆ ಒಂದೊಂದು ಕಡೆಯಲ್ಲಿ ಎರಡೆರಡು ಬಳೆಗಳನ್ನು ಇಡಬೇಕು. 13 ಬಳಿಕ ಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗಲು ಅನುಕೂಲವಾಗುವಂತೆ ಕಂಬಗಳನ್ನು ಮಾಡಬೇಕು. ಈ ಕಂಬಗಳನ್ನು ಜಾಲೀಮರದಿಂದ ಮಾಡಿ ಬಂಗಾರದಿಂದ ಹೊದಿಸಬೇಕು. 14 ಕಂಬಗಳನ್ನು ಪೆಟ್ಟಿಗೆ ಕೊನೆಗಳಲ್ಲಿರುವ ಬಳೆಗಳಲ್ಲಿ ಸೇರಿಸಿ ಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗಬೇಕು. 15 ಕಂಬಗಳು ಯಾವಾಗಲೂ ಪೆಟ್ಟಿಗೆಯ ಬಳೆಗಳಲ್ಲಿ ಇರಬೇಕು. ಕಂಬಗಳನ್ನು ಅವುಗಳಿಂದ ಹೊರಗೆ ತೆಗೆಯಬಾರದು.

16 “ನಾನು ನಿನಗೆ ಕೊಡುವ ಆಜ್ಞಾಶಾಸನವನ್ನು ಅದರೊಳಗೆ ಇಡು” ಎಂದು ಹೇಳಿದನು. 17 ಇದಲ್ಲದೆ ದೇವರು ಮೋಶೆಗೆ, “ಅಪ್ಪಟ ಬಂಗಾರದಿಂದ ಕೃಪಾಸನವನ್ನು ಮಾಡಿಸಬೇಕು. ಅದು ಎರಡೂವರೆ ಮೊಳ ಉದ್ದವಾಗಿರಬೇಕು. ಒಂದೂವರೆ ಮೊಳ ಅಗಲವಾಗಿರಬೇಕು. 18 ಬಳಿಕ ಕೆರೂಬಿಯರ ಎರಡು ಬಂಗಾರದ ಆಕಾರಗಳನ್ನು ಮಾಡಿಸಿ ಕೃಪಾಸನದ ಎರಡು ಕೊನೆಗಳಲ್ಲಿ ಇಡಬೇಕು. 19 ಕೃಪಾಸನದ ಒಂದು ಕೊನೆಯಲ್ಲಿ ಒಂದು ಕೆರೂಬಿಯನ್ನೂ ಇನ್ನೊಂದು ಕೊನೆಯಲ್ಲಿ ಇನ್ನೊಂದು ಕೆರೂಬಿಯನ್ನೂ ಜೋಡಿಸಬೇಕು. 20 ಅವುಗಳ ರೆಕ್ಕೆಗಳು ಆಕಾಶದ ಕಡೆಗೆ ಚಾಚಿರಬೇಕು; ಪೆಟ್ಟಿಗೆಯನ್ನು ಮುಚ್ಚಿಕೊಂಡಿರಬೇಕು. ಅವುಗಳ ಮುಖಗಳು ಎದುರುಬದುರಾಗಿ ಕೃಪಾಸನವನ್ನು ನೋಡುತ್ತಿರಬೇಕು.

21 “ನಾನು ನಿನಗೆ ಕೊಡುವ ಆಜ್ಞಾಶಾಸನವನ್ನು ಪೆಟ್ಟಿಗೆಯಲ್ಲಿಡಬೇಕು; ಕೃಪಾಸನವನ್ನು ಆ ಪೆಟ್ಟಿಗೆಯ ಮೇಲಿಡಬೇಕು. 22 ನಾನು ನಿನಗೆ ದರ್ಶನ ಕೊಡುವಾಗ ಒಡಂಬಡಿಕೆ ಪೆಟ್ಟಿಗೆಯ ಮೇಲಿರುವ ಕೆರೂಬಿಗಳ ಮಧ್ಯದಿಂದ ನಿನ್ನ ಸಂಗಡ ಮಾತಾಡುವೆನು; ಇಸ್ರೇಲರಿಗೆ ಆಜ್ಞಾಪಿಸಬೇಕಾದವುಗಳನ್ನು ನಿನಗೆ ತಿಳಿಸುವೆನು.

ಮೇಜು

23 “ನೀನು ಜಾಲೀಮರದಿಂದ ಮೇಜನ್ನು ಮಾಡಬೇಕು. ಮೇಜು ಎರಡು ಮೊಳ ಉದ್ದ, ಒಂದು ಮೊಳ ಅಗಲ ಮತ್ತು ಒಂದೂವರೆ ಮೊಳ ಎತ್ತರ ಇರಬೇಕು. 24 ಶುದ್ಧಬಂಗಾರದ ತಗಡುಗಳನ್ನು ಮೇಜಿಗೆ ಹೊದಿಸಿ ಅದರ ಸುತ್ತಲೂ ಚಿನ್ನದ ಗೋಟು ಕಟ್ಟಿಸಬೇಕು. 25 ಬಳಿಕ ಮೇಜಿನ ಸುತ್ತಲೂ ಮೂರು ಇಂಚು[b] ಅಗಲದ ಚೌಕಟ್ಟನ್ನು ಮಾಡಿಸಿ ಅದಕ್ಕೂ ಚಿನ್ನದ ಗೋಟು ಕಟ್ಟಿಸಬೇಕು. 26 ಬಳಿಕ ನಾಲ್ಕು ಚಿನ್ನದ ಬಳೆಗಳನ್ನು ಮಾಡಿಸಿ ಮೇಜಿನ ನಾಲ್ಕು ಕಾಲುಗಳಿಗೆ ಜೋಡಿಸಬೇಕು. 27 ಆ ಬಳೆಗಳು ಅಡ್ಡಪಟ್ಟಿಗೆ ಜೋಡಿಸಿಕೊಂಡಿರಬೇಕು. ಮೇಜನ್ನು ಹೊತ್ತುಕೊಂಡು ಹೋಗುವುದಕ್ಕೆ ಉಪಯೋಗಿಸುವ ಕೋಲುಗಳನ್ನು ಅವುಗಳಲ್ಲಿ ಸೇರಿಸಬೇಕು. 28 ಆ ಕೋಲುಗಳನ್ನು ಜಾಲೀಮರದಿಂದ ಮಾಡಿಸಿ ಅವುಗಳಿಗೆ ಚಿನ್ನದ ತಗಡನ್ನು ಹೊದಿಸಬೇಕು. 29 ತಟ್ಟೆಗಳನ್ನು, ಚಮಚಗಳನ್ನು, ಹೂಜಿಗಳನ್ನು ಮತ್ತು ಬೋಗುಣಿಗಳನ್ನು ಶುದ್ಧಬಂಗಾರದಿಂದ ಮಾಡಬೇಕು. ಹೂಜಿಗಳನ್ನು ಮತ್ತು ಬೋಗುಣಿಗಳನ್ನು ಪಾನದ್ರವ್ಯಗಳನ್ನು ಅರ್ಪಿಸಲು ಉಪಯೋಗಿಸಬೇಕು. 30 ನೈವೇದ್ಯದ ರೊಟ್ಟಿಗಳನ್ನು ಮೇಜಿನ ಮೇಲೆ ನನ್ನ ಮುಂದೆ ಇಡು. ಅವು ಅಲ್ಲಿ ನನ್ನ ಮುಂದೆ ಯಾವಾಗಲೂ ಇರಬೇಕು.

ದೀಪಸ್ತಂಭ

31 “ಬಳಿಕ ಒಂದು ದೀಪಸ್ತಂಭವನ್ನು ಶುದ್ಧಬಂಗಾರದಿಂದ ಮಾಡಿಸಬೇಕು. ಅದರ ಬುಡವನ್ನೂ ಕಂಬವನ್ನೂ ಕಸೂತಿ ಕೆಲಸದಿಂದ ಮಾಡಿಸಬೇಕು. ಆ ದೀಪಸ್ತಂಭವೆಲ್ಲಾ ಅಖಂಡವಾಗಿದ್ದು ಪುಷ್ಪಪಾತ್ರೆಗಳಂತೆಯೂ ಅಲಂಕಾರವಾಗಿ ಕೆತ್ತಲ್ಪಡಬೇಕು.

32 “ದೀಪಸ್ತಂಭಕ್ಕೆ ಒಂದೊಂದು ಪಾರ್ಶ್ವದಲ್ಲಿ ಮೂರುಮೂರು ಕೊಂಬೆಗಳಂತೆ ಆರು ಕೊಂಬೆಗಳಿರಬೇಕು. 33 ಪ್ರತಿಯೊಂದು ಕೊಂಬೆಯಲ್ಲಿ ಬಾದಾಮಿ ಹೂವುಗಳಂತಿರುವ ಮೂರುಮೂರು ಪುಷ್ಪಾಲಂಕಾರಗಳಿರಬೇಕು. ಒಂದೊಂದು ಅಲಂಕಾರಕ್ಕೆ ಒಂದು ಪುಷ್ಪಪಾತ್ರೆಯೂ ಒಂದು ಪುಷ್ಪವೂ ಇರಬೇಕು. ಆರು ಕೊಂಬೆಗಳನ್ನೂ ಹಾಗೇ ಮಾಡಿಸಬೇಕು. 34 ದೀಪಸ್ತಂಭದಲ್ಲಿ ಪುಷ್ಪಪಾತ್ರೆಗಳೂ ಪುಷ್ಪಗಳೂ ಇರುವ ಬಾದಾಮಿ ಹೂವುಗಳಂತೆ ನಾಲ್ಕು ಪುಷ್ಪಾಲಂಕಾರಗಳು ಇರಬೇಕು. 35 ಎರಡೆರಡು ಕೊಂಬೆಗಳು ಕವಲು ಒಡೆದಿರುವ ಸ್ಥಳಗಳಲ್ಲೆಲ್ಲಾ ಒಂದೊಂದು ಪುಷ್ಪಪಾತ್ರೆಯಿರಬೇಕು. 36 ಪುಷ್ಪಪಾತ್ರೆಗಳನ್ನೂ ಕೊಂಬೆಗಳನ್ನೂ ಒಳಗೊಂಡಿರುವ ದೀಪಸ್ತಂಭವು ಅಖಂಡವಾಗಿದ್ದು ಅಪ್ಪಟ ಬಂಗಾರದಿಂದಲೂ ನಕಾಸಿ ಕೆಲಸದಿಂದಲೂ ಮಾಡಿದ್ದಾಗಿರಬೇಕು. 37 ಅದಕ್ಕೆ ಏಳು ಹಣತೆಗಳನ್ನು ಮಾಡಿಸಬೇಕು. ಈ ಹಣತೆಗಳು ದೀಪಸ್ತಂಭದ ಮುಂದಿರುವ ಪ್ರದೇಶಕ್ಕೆ ಬೆಳಕು ಕೊಡುವುದು. 38 ಅದರ ಬತ್ತಿಗಳನ್ನು ಕತ್ತರಿಸುವ ಕತ್ತರಿಯನ್ನು ಮತ್ತು ಹರಿವಾಣಗಳನ್ನು ಅಪ್ಪಟ ಬಂಗಾರದಿಂದ ಮಾಡಿಸಬೇಕು. 39 ದೀಪಸ್ತಂಭವನ್ನು ಮತ್ತು ಅದರ ಎಲ್ಲಾ ಉಪಕರಣಗಳನ್ನು ಎಪ್ಪತ್ತೈದು ಪೌಂಡು[c] 40 ನಾನು ನಿನಗೆ ಬೆಟ್ಟದ ಮೇಲೆ ತೋರಿಸಿದ ಮಾದರಿಯಂತೆಯೇ ಪ್ರತಿಯೊಂದನ್ನು ಮಾಡಬೇಕು” ಎಂದು ಹೇಳಿದನು.

ಪವಿತ್ರಗುಡಾರ

26 ಯೆಹೋವನು ಮೋಶೆಗೆ, “ಪವಿತ್ರಗುಡಾರವನ್ನು ಹತ್ತು ಪರದೆಗಳಿಂದ ಮಾಡಿಸಬೇಕು. ಈ ಪರದೆಗಳನ್ನು ನಾರುಬಟ್ಟೆ ಮತ್ತು ನೀಲಿ, ನೇರಳೆ ಮತ್ತು ಕೆಂಪು ದಾರದಿಂದ ಮಾಡಿಸಬೇಕು. ನುರಿತ ಕೆಲಸಗಾರನು ಪರದೆಗಳಲ್ಲಿ ರೆಕ್ಕೆಗಳಿರುವ ಕೆರೂಬಿಗಳ ಚಿತ್ರವನ್ನು ಕಸೂತಿ ಹಾಕಬೇಕು. ಪ್ರತಿಯೊಂದು ಪರದೆಯ ಅಳತೆಯು ಒಂದೇ ಆಗಿರಬೇಕು. ಪ್ರತಿ ಪರದೆಯು ಇಪ್ಪತ್ತೆಂಟು ಮೊಳ ಉದ್ದವಾಗಿಯೂ ನಾಲ್ಕು ಮೊಳ ಅಗಲವಾಗಿಯೂ ಇರಬೇಕು. ಪರದೆಗಳನ್ನು ಒಟ್ಟಾಗಿ ಜೋಡಿಸಿ ಎರಡು ಭಾಗಗಳನ್ನಾಗಿ ಮಾಡಬೇಕು. ಒಂದು ಭಾಗದಲ್ಲಿ ಐದು ಪರದೆಗಳನ್ನೂ ಇನ್ನೊಂದು ಭಾಗದಲ್ಲಿ ಐದು ಪರದೆಗಳನ್ನೂ ಒಟ್ಟಾಗಿ ಜೋಡಿಸಬೇಕು. ಒಂದು ಭಾಗದ ಕೊನೆಯ ಪರದೆಯ ಅಂಚಿನಲ್ಲಿ ಕುಣಿಕೆಗಳನ್ನು ನೀಲಿ ಬಟ್ಟೆಯಿಂದ ಮಾಡಬೇಕು; ಇನ್ನೊಂದು ಭಾಗದ ಕೊನೆಯ ಪರದೆಯ ಅಂಚಿನಲ್ಲಿಯೂ ಅದೇ ರೀತಿ ಮಾಡಬೇಕು. ಒಂದು ಭಾಗದ ಕೊನೆಯ ಪರದೆಯ ಅಂಚಿನಲ್ಲಿ ಐವತ್ತು ಕುಣಿಕೆಗಳು ಇರಬೇಕು. ಇನ್ನೊಂದು ಭಾಗದ ಕೊನೆಯ ಪರದೆಯ ಅಂಚಿನಲ್ಲೂ ಐವತ್ತು ಕುಣಿಕೆಗಳು ಇರಬೇಕು. ಬಳಿಕ ಪರದೆಗಳನ್ನು ಒಟ್ಟಾಗಿ ಜೋಡಿಸಲು ಅನುಕೂಲವಾಗುವಂತೆ ಐವತ್ತು ಚಿನ್ನದ ಕೊಂಡಿಗಳನ್ನು ಮಾಡಿಸಬೇಕು. ಹೀಗೆ ಒಂದೇ ಗುಡಾರವಾಗುವುದು.

“ಪವಿತ್ರಗುಡಾರದ ಮೇಲೆ ಹೊದಿಸುವುದಕ್ಕೆ ಇನ್ನೊಂದು ಗುಡಾರವನ್ನು ಮಾಡಿಸಬೇಕು. ಈ ಗುಡಾರವನ್ನು ಹನ್ನೊಂದು ಪರದೆಗಳಿಂದ ಮಾಡಿಸಬೇಕು. ಈ ಪರದೆಗಳು ಆಡುಕೂದಲಿನಿಂದ ಮಾಡಲ್ಪಟ್ಟಿರಬೇಕು. ಈ ಎಲ್ಲಾ ಪರದೆಗಳ ಅಳತೆಯು ಒಂದೇ ಆಗಿರಬೇಕು. ಅವು ಮೂವತ್ತು ಮೊಳ ಉದ್ದವಾಗಿಯೂ ನಾಲ್ಕು ಮೊಳ ಅಗಲವಾಗಿಯೂ ಇರಬೇಕು. ಐದು ಪರದೆಗಳನ್ನು ಒಟ್ಟಾಗಿ ಸೇರಿಸಿ ಒಂದು ಭಾಗವನ್ನಾಗಿ ಮಾಡು. ಬಳಿಕ ಉಳಿದ ಆರು ಪರದೆಗಳನ್ನು ಒಟ್ಟಾಗಿ ಸೇರಿಸಿ ಇನ್ನೊಂದು ಭಾಗವನ್ನಾಗಿ ಮಾಡು. ಆರನೇ ಪರದೆಯ ಅರ್ಧದಷ್ಟನ್ನು ಡೇರೆಯ ಮುಂದುಗಡೆಯಲ್ಲಿ ಮಡಚಬೇಕು. 10 ಒಂದು ಭಾಗದ ಕೊನೇ ಪರದೆಯ ಕೆಳಗಿನ ಭಾಗದ ಅಂಚಿನಲ್ಲಿ ಐವತ್ತು ಕುಣಿಕೆಗಳನ್ನು ಮಾಡಬೇಕು. ಇನ್ನೊಂದು ಭಾಗದ ಕೊನೇ ಪರದೆಯ ಕೆಳಭಾಗದಲ್ಲಿಯೂ ಅದೇ ರೀತಿಯಾಗಿ ಮಾಡಬೇಕು. 11 ಬಳಿಕ ಪರದೆಗಳನ್ನು ಒಟ್ಟಾಗಿ ಜೋಡಿಸಲು ಐವತ್ತು ತಾಮ್ರದ ಕೊಂಡಿಗಳನ್ನು ಮಾಡಬೇಕು. ಹೀಗೆ ಒಂದೇ ಗುಡಾರವಾಗುವುದು. 12 ಈ ಗುಡಾರದ ಪರದೆಗಳಲ್ಲಿ ಉಳಿದ ಹೆಚ್ಚಿನ ಭಾಗಗಳನ್ನು ಅಂದರೆ ಉಳಿದ ಅರ್ಧಭಾಗವನ್ನು ಪವಿತ್ರಗುಡಾರದ ಹಿಂಬದಿಯಲ್ಲಿ ತೂಗುಹಾಕಬೇಕು. 13 ಪಾರ್ಶ್ವಗಳಲ್ಲಿ ಈ ಗುಡಾರದ ಪರದೆಗಳು, ಪವಿತ್ರಗುಡಾರದ ಕೆಳಗಣ ಅಂಚುಗಳಿಂದ ಕೆಳಗೆ ಒಂದು ಮೊಳದಷ್ಟು ತೂಗಾಡುವವು. ಆದ್ದರಿಂದ ಈ ಡೇರೆಯು ಸಂಪೂರ್ಣವಾಗಿ ಪವಿತ್ರಗುಡಾರವನ್ನು ಮುಚ್ಚಿಕೊಳ್ಳುವುದು. 14 ಹೊರಗಿನ ಗುಡಾರಕ್ಕೆ ಸರಿಹೊಂದುವ ಎರಡು ಹೊದಿಕೆಗಳನ್ನು ಮಾಡಿಸಬೇಕು. ಒಂದು ಹೊದಿಕೆಯನ್ನು ಕೆಂಪುಬಣ್ಣದ ಕುರಿದೊಗಲಿನ ಚರ್ಮದಿಂದ ಮಾಡಬೇಕು. ಇನ್ನೊಂದು ಹೊದಿಕೆಯನ್ನು ಉತ್ತಮ ತೊಗಲಿನಿಂದ ಮಾಡಿಸಬೇಕು.

15 “ಪವಿತ್ರಗುಡಾರದ ಚೌಕಟ್ಟುಗಳನ್ನು ಜಾಲೀಮರದಿಂದ ಮಾಡಿಸಬೇಕು. 16 ಚೌಕಟ್ಟುಗಳು ಹತ್ತುಮೊಳ ಎತ್ತರವಾಗಿಯೂ ಒಂದೂವರೆ ಮೊಳ ಅಗಲವಾಗಿಯೂ ಇರಬೇಕು. 17 ಪ್ರತಿ ಚೌಕಟ್ಟನ್ನು ಮಾಡುವುದಕ್ಕೆ ಎರಡು ಕಡೆಯ ಕೋಲುಗಳನ್ನು ಅಡ್ಡಪಟ್ಟಿಗಳೊಂದಿಗೆ ಒಟ್ಟಾಗಿ ಜೋಡಿಸಬೇಕು. ಪವಿತ್ರಗುಡಾರದ ಎಲ್ಲಾ ಚೌಕಟ್ಟುಗಳು ಒಂದೇ ರೀತಿಯಾಗಿರಬೇಕು. 18 ಪವಿತ್ರಗುಡಾರದ ದಕ್ಷಿಣ ಭಾಗಕ್ಕೆ ಇಪ್ಪತ್ತು ಚೌಕಟ್ಟುಗಳನ್ನು ಮಾಡಿಸಬೇಕು. 19 ಚೌಕಟ್ಟುಗಳಿಗೆ ನಲವತ್ತು ಬೆಳ್ಳಿಯ ಗದ್ದಿಗೇಕಲ್ಲುಗಳನ್ನು ಮಾಡಿಸು. ಪ್ರತಿಯೊಂದು ಕಡೆಯ ಕಂಬಕ್ಕೆ ಒಂದು ಗದ್ದಿಗೇಕಲ್ಲಿನಂತೆ ಪ್ರತಿಯೊಂದು ಚೌಕಟ್ಟಿಗೆ ಎರಡು ಬೆಳ್ಳಿಯ ಗದ್ದಿಗೇಕಲ್ಲುಗಳು ಇರಬೇಕು. 20 ಪವಿತ್ರಗುಡಾರದ ಇನ್ನೊಂದು ಕಡೆಗೆ ಅಂದರೆ, ಉತ್ತರದಿಕ್ಕಿನಲ್ಲಿಯೂ ಇಪ್ಪತ್ತು ಚೌಕಟ್ಟುಗಳನ್ನು ಮಾಡಿಸಬೇಕು. 21 ಪ್ರತಿಯೊಂದು ಚೌಕಟ್ಟಿನ ಕೆಳಗೆ ಎರಡು ಗದ್ದಿಗೇಕಲ್ಲುಗಳು ಇರುವಂತೆ ಪ್ರತಿಯೊಂದು ಕಡೆಗೆ ನಲವತ್ತು ಬೆಳ್ಳಿಯ ಗದ್ದಿಗೇಕಲ್ಲುಗಳನ್ನು ಮಾಡಿಸಬೇಕು. 22 ಪವಿತ್ರಗುಡಾರದ ಹಿಂಭಾಗಕ್ಕೆ ಅಂದರೆ ಪಶ್ಚಿಮ ದಿಕ್ಕಿನಲ್ಲಿಯೂ ಆರು ಚೌಕಟ್ಟುಗಳನ್ನು ಮಾಡಿಸಬೇಕು. 23 ಪವಿತ್ರಗುಡಾರದ ಹಿಂಭಾಗದಲ್ಲಿರುವ ಮೂಲೆಗಳಿಗೆ ಎರಡು ಚೌಕಟ್ಟುಗಳನ್ನು ಮಾಡಿಸಬೇಕು. 24 ಮೂಲೆಗಳಲ್ಲಿರುವ ಚೌಕಟ್ಟುಗಳು ಕೆಳಗಿನ ಭಾಗದಲ್ಲಿ ಒಟ್ಟಾಗಿ ಜೋಡಿಸಿರಬೇಕು. ತುದಿಯಲ್ಲಿ ಒಂದು ಬಳೆಯು ಚೌಕಟ್ಟುಗಳನ್ನು ಒಟ್ಟಾಗಿ ಹಿಡಿದುಕೊಂಡಿರುವುದು. ಎರಡು ಮೂಲೆಗಳಿಗೂ ಅದೇ ರೀತಿಯಾಗಿ ಮಾಡಿಸಬೇಕು. 25 ಗುಡಾರದ ಪಶ್ಚಿಮ ದಿಕ್ಕಿನ ಕೊನೆಯಲ್ಲಿ ಒಟ್ಟು ಎಂಟು ಚೌಕಟ್ಟುಗಳಿರುವವು. ಪ್ರತಿ ಚೌಕಟ್ಟಿನ ಕೆಳಗೆ ಎರಡು ಗದ್ದಿಗೇಕಲ್ಲುಗಳಂತೆ ಹದಿನಾರು ಬೆಳ್ಳಿಯ ಗದ್ದಿಗೇಕಲ್ಲುಗಳಿರುವವು.

26 “ಜಾಲೀಮರದಿಂದ ಪವಿತ್ರಗುಡಾರದ ಚೌಕಟ್ಟುಗಳಿಗೆ ಅಗುಳಿಗಳನ್ನು ಮಾಡಿಸು. ಪವಿತ್ರಗುಡಾರದ ಒಂದು ಭಾಗದಲ್ಲಿ ಐದು ಅಗುಳಿಗಳು ಇರಬೇಕು. 27 ಪವಿತ್ರಗುಡಾರದ ಇನ್ನೊಂದು ಭಾಗದಲ್ಲಿ ಐದು ಅಗುಳಿಗಳು ಇರಬೇಕು. ಪವಿತ್ರಗುಡಾರದ ಹಿಂಭಾಗದಲ್ಲಿರುವ, ಅಂದರೆ ಪಶ್ಚಿಮ ಭಾಗದಲ್ಲಿರುವ ಚೌಕಟ್ಟುಗಳಿಗೆ ಐದು ಅಗುಳಿಗಳು ಇರಬೇಕು. 28 ಮಧ್ಯದಲ್ಲಿರುವ ಅಗುಳಿಯು ಚೌಕಟ್ಟುಗಳ ಮೂಲಕ ಒಂದು ಕೊನೆಯಿಂದ ಇನ್ನೊಂದು ಕೊನೆಯವರೆಗೂ ಹಾದುಹೋಗಬೇಕು.

29 “ಚೌಕಟ್ಟುಗಳಿಗೆ ಚಿನ್ನದ ತಗಡನ್ನು ಹೊದಿಸಬೇಕು; ಅಗುಳಿಗಳನ್ನು ಹಿಡಿದುಕೊಂಡಿರಲು ಚೌಕಟ್ಟುಗಳಿಗೆ ಬಳೆಗಳನ್ನು ಮಾಡಿಸಬೇಕು. ಮಾತ್ರವಲ್ಲದೆ ಅಗುಳಿಗಳನ್ನು ಚಿನ್ನದಿಂದ ಹೊದಿಸಬೇಕು. 30 ನಾನು ನಿನಗೆ ಬೆಟ್ಟದಲ್ಲಿ ತೋರಿಸಿದ ಪ್ರಕಾರವೇ ಪವಿತ್ರಗುಡಾರವನ್ನು ಮಾಡಿಸಬೇಕು.

ಪವಿತ್ರಗುಡಾರದ ಒಳಭಾಗ

31 “ಪವಿತ್ರಗುಡಾರದ ಒಳಭಾಗವನ್ನು ವಿಂಗಡಿಸಲು ಉತ್ತಮವಾದ ಹುರಿನಾರಿನ ಬಟ್ಟೆಯಿಂದ ಒಂದು ವಿಶೇಷ ಪರದೆಯನ್ನು ಮಾಡಿಸಬೇಕು. ನೀಲಿ, ನೇರಳೆ ಮತ್ತು ಕೆಂಪು ದಾರಗಳಿಂದ ಪರದೆಯ ಮೇಲೆ ಕೆರೂಬಿಗಳ ಚಿತ್ರಗಳನ್ನು ಕಸೂತಿಹಾಕಿಸಬೇಕು. 32 ಜಾಲೀಮರದಿಂದ ನಾಲ್ಕು ಕಂಬಗಳನ್ನು ಮಾಡಿಸಿ ಅವುಗಳನ್ನು ಚಿನ್ನದಿಂದ ಹೊದಿಸಬೇಕು. ನಾಲ್ಕು ಕಂಬಗಳ ಮೇಲೆ ಚಿನ್ನದಿಂದ ಮಾಡಿದ ಕೊಂಡಿಗಳನ್ನು ಹಾಕಿಸಬೇಕು. ಕಂಬಗಳ ಕೆಳಗೆ ಬೆಳ್ಳಿಯ ಗದ್ದಿಗೇಕಲ್ಲುಗಳನ್ನು ಹಾಕಿಸಬೇಕು. ಬಳಿಕ ಚಿನ್ನದ ಕೊಂಡಿಗಳಲ್ಲಿ ಪರದೆಯನ್ನು ತೂಗುಹಾಕಿಸಬೇಕು. 33 ಚಿನ್ನದ ಬಳೆಗಳ ಕೆಳಗೆ ಪರದೆಯನ್ನು ಹಾಕಿಸಬೇಕು; ಪರದೆಯ ಹಿಂಭಾಗದಲ್ಲಿ ಒಡಂಬಡಿಕೆಯ ಪೆಟ್ಟಿಗೆಯನ್ನು ಇಡಬೇಕು. ಈ ಪರದೆಯು ಪವಿತ್ರ ಸ್ಥಳವನ್ನು ಮಹಾಪವಿತ್ರ ಸ್ಥಳದಿಂದ ಪ್ರತ್ಯೇಕಿಸುವುದು. 34 ಮಹಾಪವಿತ್ರ ಸ್ಥಾನದಲ್ಲಿರುವ ಒಡಂಬಡಿಕೆಯ ಪೆಟ್ಟಿಗೆಯ ಮೇಲೆ ಕೃಪಾಸನವನ್ನು ಇಡಬೇಕು.

35 “ಪರದೆಯ ಇನ್ನೊಂದು ಭಾಗದಲ್ಲಿ ನೀನು ಮಾಡಿಸಿದ ವಿಶೇಷ ಮೇಜನ್ನು ಇಡಬೇಕು. ಮೇಜು ಪರಿಶುದ್ಧ ಗುಡಾರದ ಉತ್ತರಭಾಗದಲ್ಲಿರಬೇಕು. ಬಳಿಕ ದೀಪಸ್ತಂಭವನ್ನು ದಕ್ಷಿಣಭಾಗದಲ್ಲಿಡಬೇಕು. ಇದು ಮೇಜಿನ ಎದುರಿಗೆ ಇರಬೇಕು.

ಪವಿತ್ರಗುಡಾರದ ಬಾಗಿಲು

36 “ಬಳಿಕ ಪವಿತ್ರಗುಡಾರದ ಪ್ರವೇಶಸ್ಥಳವನ್ನು ಮುಚ್ಚುವುದಕ್ಕೆ ಒಂದು ಪರದೆಯನ್ನು ಮಾಡಿಸಬೇಕು. ಈ ಪರದೆಯನ್ನು ನೀಲಿ, ನೇರಳೆ, ಕೆಂಪು ದಾರಗಳಿಂದ ಮತ್ತು ಶ್ರೇಷ್ಠ ನಾರುಬಟ್ಟೆಯಿಂದ ಮಾಡಿಸಿ ಅದರಲ್ಲಿ ಚಿತ್ರಗಳನ್ನು ಕಸೂತಿ ಹಾಕಿಸಬೇಕು. 37 ಈ ಪರದೆಗೆ ಚಿನ್ನದ ಕೊಂಡಿಗಳನ್ನು ಮಾಡಿಸಬೇಕು. ಜಾಲೀಮರದಿಂದ ಐದು ಕಂಬಗಳನ್ನು ಮಾಡಿಸಿ ಅವುಗಳಿಗೆ ಚಿನ್ನದ ತಗಡನ್ನು ಹೊದಿಸಬೇಕು ಮತ್ತು ಈ ಕಂಬಗಳಿಗೆ ಐದು ತಾಮ್ರದ ಗದ್ದಿಗೇಕಲ್ಲುಗಳನ್ನು ಮಾಡಿಸಬೇಕು” ಎಂದು ಹೇಳಿದನು.

ಮತ್ತಾಯ 20:17-34

ತನ್ನ ಮರಣದ ಬಗ್ಗೆ ಯೇಸುವಿನ ಮೂರನೆ ಪ್ರಕಟನೆ

(ಮಾರ್ಕ 10:32-34; ಲೂಕ 18:31-34)

17 ಯೇಸು ಜೆರುಸಲೇಮಿಗೆ ಹೋಗುತ್ತಿದ್ದನು. ಆತನ ಹನ್ನೆರಡು ಮಂದಿ ಶಿಷ್ಯರೂ ಆತನೊಂದಿಗೆ ಇದ್ದರು. ಯೇಸು ಅವರನ್ನು ಪ್ರತ್ಯೇಕವಾಗಿ ಕರೆದು, 18 “ನಾವು ಜೆರುಸಲೇಮಿಗೆ ಹೋಗುತ್ತಿದ್ದೇವೆ. ಮನುಷ್ಯಕುಮಾರನನ್ನು ಮಹಾಯಾಜಕರಿಗೆ ಮತ್ತು ಧರ್ಮೋಪದೇಶಕರಿಗೆ ಒಪ್ಪಿಸಿಕೊಡಲಾಗುವುದು. ಅವರು ಆತನನ್ನು ಯೆಹೂದ್ಯರಲ್ಲದವರ ಕೈಗೆ ಒಪ್ಪಿಸುವರು. 19 ಅವರು ಮನುಷ್ಯಕುಮಾರನನ್ನು ಅಪಹಾಸ್ಯ ಮಾಡಿ, ಕೊರಡೆಗಳಿಂದ ಹೊಡೆದು, ಶಿಲುಬೆಗೇರಿಸುವರು. ಆದರೆ ಆತನು ಮರಣ ಹೊಂದಿದ ನಂತರ ಮೂರನೆಯ ದಿನದಂದು ಮತ್ತೆ ಜೀವಂತನಾಗಿ ಎದ್ದುಬರುವನು” ಎಂದು ಹೇಳಿದನು.

ತಾಯಿಯೊಬ್ಬಳ ವಿಶೇಷ ಕೋರಿಕೆ

(ಮಾರ್ಕ 10:35-45)

20 ಆಗ ಜೆಬೆದಾಯನ ಹೆಂಡತಿಯು ಯೇಸುವಿನ ಬಳಿಗೆ ಬಂದಳು. ಅವಳ ಗಂಡುಮಕ್ಕಳು ಅವಳೊಂದಿಗಿದ್ದರು. ಅವಳು ಯೇಸುವಿನ ಮುಂದೆ ಅಡ್ಡಬಿದ್ದು ತನ್ನ ಕೋರಿಕೆಯನ್ನು ಈಡೇರಿಸಬೇಕೆಂದು ಕೇಳಿಕೊಂಡಳು.

21 ಯೇಸು, “ನಿನ್ನ ಕೋರಿಕೆ ಏನು?” ಎಂದನು.

ಅವಳು, “ನಿನ್ನ ರಾಜ್ಯದಲ್ಲಿ, ನನ್ನ ಗಂಡುಮಕ್ಕಳಲ್ಲಿ ಒಬ್ಬನು ನಿನ್ನ ಬಲಗಡೆಯಲ್ಲಿಯೂ ಮತ್ತೊಬ್ಬನು ನಿನ್ನ ಎಡಗಡೆಯಲ್ಲಿಯೂ ಕುಳಿತುಕೊಳ್ಳುವಂತೆ ವಾಗ್ದಾನಮಾಡು” ಎಂದು ಕೇಳಿಕೊಂಡಳು.

22 ಯೇಸು ಅವಳ ಮಕ್ಕಳಿಗೆ, “ನೀವು ಏನು ಕೇಳಿಕೊಳ್ಳುತ್ತಿದ್ದೀರೆಂಬುದೇ ನಿಮಗೆ ಗೊತ್ತಿಲ. ನಾನು ಅನುಭವಿಸಬೇಕಾಗಿರುವ ಸಂಕಟವನ್ನು ಅನುಭವಿಸಲು ನಿಮಗೆ ಸಾಧ್ಯವೋ?” ಎಂದು ಕೇಳಿದನು.

ಅದಕ್ಕೆ ಅವರು, “ಹೌದು, ನಮಗೆ ಸಾಧ್ಯ” ಎಂದು ಉತ್ತರಕೊಟ್ಟರು.

23 ಯೇಸು ಅವರಿಗೆ, “ನಾನು ಅನುಭವಿಸಲಿರುವ ಸಂಕಟಗಳನ್ನು ನೀವು ನಿಜವಾಗಿಯೂ ಅನುಭವಿಸುವಿರಿ. ಆದರೆ ನನ್ನ ಬಲಗಡೆಯಲ್ಲಾಗಲಿ ಎಡಗಡೆಯಲ್ಲಾಗಲಿ ಕುಳಿತುಕೊಳ್ಳುವವನನ್ನು ಆಯ್ಕೆಮಾಡುವವನು ನಾನಲ್ಲ. ನನ್ನ ತಂದೆಯು ಆ ಸ್ಥಳಗಳನ್ನು ಯಾರಿಗಾಗಿ ಕಾಯ್ದಿರಿಸಿದ್ದಾನೋ ಅವರಿಗೇ ಆ ಅವಕಾಶವನ್ನು ಕೊಡುತ್ತಾನೆ” ಎಂದನು.

24 ಉಳಿದ ಹತ್ತು ಮಂದಿ ಶಿಷ್ಯರು ಇದನ್ನು ಕೇಳಿದಾಗ ಆ ಇಬ್ಬರು ಶಿಷ್ಯರ ಮೇಲೆ ಕೋಪಗೊಂಡರು. 25 ಯೇಸು ಶಿಷ್ಯರನ್ನೆಲ್ಲ ಒಟ್ಟಿಗೆ ಕರೆದು, “ಯೆಹೂದ್ಯರಲ್ಲದ ಅಧಿಪತಿಗಳು ಜನರ ಮೇಲೆ ತಮ್ಮ ಅಧಿಕಾರ ತೋರಿಸಲು ಇಷ್ಟಪಡುತ್ತಾರೆ ಎಂಬುದು ನಿಮಗೆ ಗೊತ್ತಿದೆ. ಮತ್ತು ಅವರ ಪ್ರಮುಖ ನಾಯಕರು ಜನರ ಮೇಲೆ ತಮ್ಮ ಅಧಿಕಾರವನ್ನೆಲ್ಲಾ ಚಲಾಯಿಸಲು ಇಷ್ಟಪಡುತ್ತಾರೆ. 26 ಆದರೆ ನೀವು ಹಾಗೆ ಮಾಡಬಾರದು. ನಿಮ್ಮಲ್ಲಿ ದೊಡ್ಡವನಾಗಲು ಇಚ್ಫಿಸುವವನು ಸೇವಕನಂತೆ ಸೇವೆ ಮಾಡಬೇಕು. 27 ನಿಮ್ಮಲ್ಲಿ ಮೊದಲನೆಯವನಾಗಲು ಇಚ್ಛಿಸುವವನು ಗುಲಾಮನಂತೆ ಸೇವೆ ಮಾಡಬೇಕು. 28 ಇದೇ ನಿಯಮ ಮನುಷ್ಯಕುಮಾರನಿಗೂ ಅನ್ವಯಿಸುತ್ತದೆ. ಮನುಷ್ಯಕುಮಾರನು ಬೇರೆಯವರಿಂದ ಸೇವೆ ಮಾಡಿಸಿಕೊಳ್ಳಲು ಬರದೆ ಬೇರೆಯವರಿಗೆ ಸೇವೆ ಮಾಡುವುದಕ್ಕಾಗಿ ಮತ್ತು ಅನೇಕ ಜನರನ್ನು ರಕ್ಷಿಸುವುದಕ್ಕಾಗಿ ತನ್ನ ಪ್ರಾಣವನ್ನೇ ಈಡುಕೊಡಲು ಬಂದನು” ಎಂದು ಹೇಳಿದನು.

ಇಬ್ಬರು ಕುರುಡರಿಗೆ ಯೇಸುವಿನಿಂದ ಸ್ವಸ್ಥತೆ

(ಮಾರ್ಕ 10:46-52; ಲೂಕ 18:35-43)

29 ಯೇಸು ಮತ್ತು ಆತನ ಶಿಷ್ಯರು ಜೆರಿಕೋವಿನಿಂದ ಹೊರಟುಹೋಗುತ್ತಿರುವಾಗ ಬಹಳ ಜನರು ಯೇಸುವನ್ನು ಹಿಂಬಾಲಿಸಿದರು. 30 ದಾರಿಯ ಪಕ್ಕದಲ್ಲಿ ಇಬ್ಬರು ಕುರುಡರು ಕುಳಿತಿದ್ದರು. ಯೇಸು ಈ ಮಾರ್ಗವಾಗಿ ಹೋಗುತ್ತಿದ್ದಾನೆಂಬುದನ್ನು ಅವರು ಕೇಳಿದಾಗ, “ಪ್ರಭುವೇ, ದಾವೀದನ ಕುಮಾರನೇ, ದಯಮಾಡಿ ನಮಗೆ ಸಹಾಯ ಮಾಡು!” ಎಂದು ಕೂಗಿಕೊಂಡರು.

31 ಜನರೆಲ್ಲರೂ ಕುರುಡರನ್ನು ಗದರಿಸಿ, ಸುಮ್ಮನಿರಬೇಕೆಂದು ಹೇಳಿದರು. ಆದರೆ ಆ ಕುರುಡರು, “ಪ್ರಭುವೇ, ದಾವೀದನ ಕುಮಾರನೇ, ದಯಮಾಡಿ ನಮಗೆ ಸಹಾಯ ಮಾಡು!” ಎಂದು ಹೆಚ್ಚುಹೆಚ್ಚು ಕೂಗಿಕೊಂಡರು.

32 ಯೇಸು ನಿಂತು, ಆ ಕುರುಡರಿಗೆ “ನಾನು ನಿಮಗೆ ಏನು ಮಾಡಬೇಕೆಂದು ಆಶಿಸುತ್ತೀರಿ?” ಎಂದನು.

33 ಆಗ ಕುರುಡರು, “ಪ್ರಭುವೇ, ನಮಗೆ ಕಣ್ಣು ಕಾಣಿಸುವಂತೆ ಮಾಡು!” ಅಂದರು.

34 ಯೇಸು ಅವರಿಗಾಗಿ ದುಃಖಪಟ್ಟು ಅವರ ಕಣ್ಣುಗಳನ್ನು ಮುಟ್ಟಿದನು. ಕೂಡಲೇ ಅವರಿಗೆ ದೃಷ್ಟಿ ಬಂದಿತು. ಬಳಿಕ ಅವರು ಯೇಸುವನ್ನು ಹಿಂಬಾಲಿಸಿದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International