Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ವಿಮೋಚನಕಾಂಡ 23-24

23 “ಬೇರೆಯವರ ವಿರುದ್ಧವಾಗಿ ಸುಳ್ಳು ಹೇಳಬೇಡಿರಿ. ನೀವು ನ್ಯಾಯಾಲಯದಲ್ಲಿ ದುಷ್ಟರ ಸಹಾಯಕ್ಕಾಗಿ ಸುಳ್ಳುಸಾಕ್ಷಿ ಹೇಳದಿರಿ.

“ದುಷ್ಕೃತ್ಯವನ್ನು ಮಾಡುವವರು ಬಹಳ ಮಂದಿಯೆಂದು ಅವರ ಜೊತೆಯಲ್ಲಿ ಸೇರಿಕೊಳ್ಳಬೇಡಿ. ಬಹಳ ಮಂದಿಯ ಮಾತಿಗೆ ಒಪ್ಪಿ ನ್ಯಾಯವನ್ನು ಕೆಡಿಸುವ ಸಾಕ್ಷಿಯನ್ನು ಹೇಳದಿರಿ.

“ಇದಲ್ಲದೆ ಬಡವನೆಂದು ಕರುಣಿಸಿ ಪಕ್ಷಪಾತದ ತೀರ್ಪನ್ನು ನೀಡಬಾರದು.

“ನೀವು ಕಳೆದುಹೋದ ಎತ್ತನ್ನಾಗಲಿ ಕತ್ತೆಯನ್ನಾಗಲಿ ನೋಡಿದರೆ, ಆಗ ನೀವು ಅದನ್ನು ಅದರ ಮಾಲೀಕನಿಗೆ ಹಿಂತಿರುಗಿಸಬೇಕು. ಒಂದುವೇಳೆ ಆ ಮಾಲೀಕನು ನಿಮ್ಮ ವೈರಿಯಾಗಿದ್ದರೂ ನೀವು ಈ ಕಾರ್ಯವನ್ನು ಮಾಡಬೇಕು.

“ಬಹು ತೂಕದ ಹೊರೆಯಿಂದ ನಡೆಯಲಾಗದೆ ಬಿದ್ದಿರುವ ಕತ್ತೆಯನ್ನು ನೀವು ನೋಡಿದರೆ ಅದನ್ನು ಎಬ್ಬಿಸಲು ನೀವು ನಿಂತು ಸಹಾಯ ಮಾಡಬೇಕು. ಆ ಕತ್ತೆಯು ನಿಮ್ಮ ವೈರಿಯದಾಗಿದ್ದರೂ ನೀವು ಅದಕ್ಕೆ ಸಹಾಯ ಮಾಡಬೇಕು.

“ಬಡವರಿಗೆ ವ್ಯಾಜ್ಯದಲ್ಲಿ ನೀವು ಅನ್ಯಾಯವಾದ ತೀರ್ಪನ್ನು ಕೊಡಕೂಡದು.

“ನೀವು ಮೋಸದ ಕಾರ್ಯಕ್ಕೆ ದೂರವಿರಬೇಕು. ನಿರಪರಾಧಿಯೂ ನೀತಿವಂತನೂ ಆಗಿರುವ ವ್ಯಕ್ತಿಗೆ ಮರಣದಂಡನೆ ವಿಧಿಸಕೂಡದು. ಅಂಥ ದುಷ್ಟಕಾರ್ಯ ಮಾಡಿದವನಿಗೆ ನಾನು ದಂಡನೆಯನ್ನು ವಿಧಿಸೇ ವಿಧಿಸುವೆನು.

“ಲಂಚವನ್ನು ತೆಗೆದುಕೊಳ್ಳಕೂಡದು; ಲಂಚವು ಕಣ್ಣುಳ್ಳವರನ್ನು ಕುರುಡರನ್ನಾಗಿ ಮಾಡುತ್ತದೆ; ನಿರಪರಾಧಿಗೆ ಅನ್ಯಾಯ ಮಾಡುತ್ತದೆ.

“ನೀವು ಪರದೇಶಸ್ಥರಿಗೆ ತೊಂದರೆ ಕೊಡಬಾರದು. ನೀವು ಈಜಿಪ್ಟಿನಲ್ಲಿ ಪರದೇಶಸ್ಥರಾಗಿದ್ದಿರೆಂಬುದನ್ನು ಜ್ಞಾಪಕಮಾಡಿಕೊಳ್ಳಿರಿ.

ವಿಶೇಷ ವಿಶ್ರಾಂತಿ ದಿನಗಳು

10 “ಆರು ವರ್ಷ ನಿಮ್ಮ ಭೂಮಿಯಲ್ಲಿ ಬೀಜಬಿತ್ತಿ ಬೆಳೆಯನ್ನು ಬೆಳೆಯಿರಿ. 11 ಆದರೆ ಏಳನೆಯ ವರ್ಷದಲ್ಲಿ ನಿಮ್ಮ ಭೂಮಿಯನ್ನು ಬೀಳುಬಿಡಿರಿ; ಬೀಜಬಿತ್ತಬೇಡಿರಿ. ಏಳನೆಯ ವರ್ಷ ನೀವು ಏನನ್ನೂ ಬೆಳೆಸಬಾರದು. ನಿಮ್ಮ ಭೂಮಿಯಲ್ಲಿ ಏನಾದರೂ ಬೆಳೆದರೆ ಅದನ್ನು ಬಡವರು ತಿನ್ನಲಿ. ಉಳಿದದ್ದನ್ನು ಪ್ರಾಣಿಗಳು ಮೇಯಲಿ. ನಿಮ್ಮ ದ್ರಾಕ್ಷಿತೋಟಗಳ ವಿಷಯದಲ್ಲಿಯೂ ಆಲಿವ್ ಮರಗಳ ತೋಪಿನ ವಿಷಯದಲ್ಲಿಯೂ ಇದೇ ನಿಯಮವನ್ನು ಪಾಲಿಸಬೇಕು.

12 “ಆರು ದಿನಗಳಲ್ಲಿ ನಿಮ್ಮ ಕೆಲಸ ಮಾಡಿರಿ. ಏಳನೆಯ ದಿನದಲ್ಲಿ ವಿಶ್ರಮಿಸಿಕೊಳ್ಳಿರಿ. ಏಳನೆಯ ದಿನದಲ್ಲಿ ನಿಮ್ಮ ಗುಲಾಮರೂ ಎತ್ತುಗಳೂ ಕತ್ತೆಗಳೂ ವಿದೇಶಿಯರೂ ವಿಶ್ರಮಿಸಿಕೊಳ್ಳಲಿ.

13 “ನೀವು ಈ ಆಜ್ಞೆಗಳಿಗೆಲ್ಲಾ ಜಾಗರೂಕತೆಯಿಂದ ವಿಧೇಯರಾಗಬೇಕು. ಸುಳ್ಳುದೇವರುಗಳನ್ನು ಆರಾಧಿಸಬೇಡಿರಿ. ನೀವು ಅವುಗಳ ಹೆಸರುಗಳನ್ನು ಉಚ್ಚರಿಸಲೂ ಕೂಡದು.

14 “ಪ್ರತಿವರ್ಷ ನೀವು ಮೂರುಜಾತ್ರೆಗಳನ್ನು ಮಾಡಬೇಕು. 15 ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕಾದ ಹಬ್ಬ ಅವುಗಳಲ್ಲಿ ಒಂದಾಗಿದೆ. ನಾನು ನಿಮಗೆ ಆಜ್ಞಾಪಿಸಿದಂತೆ ಈ ಜಾತ್ರೆಯಲ್ಲಿ ಏಳು ದಿನ ಹುಳಿಯಿಲ್ಲದ ರೊಟ್ಟಿಯನ್ನು ನೀವು ತಿನ್ನಬೇಕು. ಈ ಹಬ್ಬವು ಏಳು ದಿನಗಳವರೆಗೆ ನಡೆಯುವುದು. ನೀವು ಇದನ್ನು ಅಬೀಬ್ ತಿಂಗಳಲ್ಲಿ ಮಾಡಬೇಕು. ಯಾಕೆಂದರೆ ಈ ತಿಂಗಳಲ್ಲಿಯೇ ನೀವು ಈಜಿಪ್ಟಿನಿಂದ ಹೊರಗೆ ಬಂದಿರಿ! ಈ ಹಬ್ಬದಲ್ಲಿ ಪ್ರತಿಯೊಬ್ಬನೂ ನನಗೆ ಕಾಣಿಕೆಯನ್ನು ಅರ್ಪಿಸಬೇಕು.

16 “ಇದಲ್ಲದೆ ನೀವು ಸುಗ್ಗಿಯ ಜಾತ್ರೆಯನ್ನು ಆಚರಿಸಬೇಕು. ನೀವು ಬಿತ್ತಿದ ಹೊಲಗಳಲ್ಲಿ ಬೆಳೆಗಳನ್ನು ಕೊಯ್ಯುವ ಕಾಲದಲ್ಲಿ ಈ ಜಾತ್ರೆಯು ಆರಂಭವಾಗುವುದು.

“ಇದಲ್ಲದೆ ಫಲಸಂಗ್ರಹ ಜಾತ್ರೆಯನ್ನೂ ನೀವು ಆಚರಿಸಬೇಕು. ವರ್ಷಾಂತ್ಯದಲ್ಲಿ ನೀವು ಹೊಲತೋಟಗಳ ಬೆಳೆಗಳನ್ನೆಲ್ಲಾ ಒಟ್ಟುಗೂಡಿಸುವ ಕಾಲದಲ್ಲಿ ಇದು ಆರಂಭವಾಗುವುದು.

17 “ಹೀಗೆ ಪ್ರತಿವರ್ಷ ಮೂರು ಸಲ ಗಂಡಸರೆಲ್ಲರೂ ಒಂದು ವಿಶೇಷ ಸ್ಥಳಕ್ಕೆ ದೇವರಾದ ಯೆಹೋವನ ಸನ್ನಿಧಿಗೆ ಬರಬೇಕು.

18 “ನೀವು ನನಗೆ ಯಜ್ಞವನ್ನು ಅರ್ಪಿಸುವಾಗ ಯಜ್ಞಪಶುವಿನ ರಕ್ತದೊಡನೆ ಹುಳಿಬೆರಸಿದ ಏನನ್ನೂ ಸಮರ್ಪಿಸಬಾರದು. ಅಲ್ಲದೆ ಅದರ ಮಾಂಸವನ್ನು ಒಂದೇ ದಿನದಲ್ಲಿ ತಿಂದು ಮುಗಿಸಬೇಕು; ಮರುದಿನದವರೆಗೂ ಇಟ್ಟುಕೊಳ್ಳಬಾರದು.

19 “ಸುಗ್ಗಿ ಕಾಲದಲ್ಲಿ ನಿಮ್ಮ ಬೆಳೆಯ ಫಲವನ್ನು ನಿಮ್ಮ ದೇವರಾದ ಯೆಹೋವನ ಆಲಯಕ್ಕೆ[a] ತರಬೇಕು.

“ಆಡುಮರಿಯನ್ನು ಅದರ ತಾಯಿಯ ಹಾಲಿನಲ್ಲಿ ಬೇಯಿಸಬಾರದು.”

20 “ಇಗೋ, ನಿಮ್ಮ ಮುಂದೆ ನಾನು ಒಬ್ಬ ದೂತನನ್ನು[b] ಕಳುಹಿಸುತ್ತಿದ್ದೇನೆ. ನಾನು ನಿಮಗಾಗಿ ಸಿದ್ಧಮಾಡಿದ ಸ್ಥಳಕ್ಕೆ ಈ ದೂತನು ನಿಮ್ಮನ್ನು ಮುನ್ನಡೆಸುವನು; ದಾರಿಯುದ್ದಕ್ಕೂ ಸಂರಕ್ಷಿಸುವನು. 21 ದೂತನಿಗೆ ವಿಧೇಯರಾಗಿ ಆತನನ್ನು ಹಿಂಬಾಲಿಸಿರಿ. ಆತನಿಗೆ ವಿರೋಧವಾಗಿ ದಂಗೆಯೇಳಬೇಡಿರಿ. ನೀವು ಅವಿಧೇಯರಾದರೆ ಆತನು ನಿಮ್ಮನ್ನು ಕ್ಷಮಿಸುವುದಿಲ್ಲ. ಆತನಲ್ಲಿ ನನ್ನ ಶಕ್ತಿಯು ಇರುತ್ತದೆ.[c] 22 ಆತನು ಹೇಳುವ ಪ್ರತಿಯೊಂದಕ್ಕೆ ನೀವು ವಿಧೇಯರಾಗಬೇಕು. ನನ್ನ ಆಜ್ಞೆಗಳನ್ನೆಲ್ಲಾ ನೀವು ಅನುಸರಿಸಬೇಕು. ಆಗ ನಾನು ನಿಮ್ಮ ಸಂಗಡ ಇರುವೆನು. ನಾನು ನಿಮ್ಮ ಶತ್ರುಗಳಿಗೆ ಶತ್ರುವಾಗಿರುವೆನು; ನಿಮಗೆ ಕೇಡುಮಾಡುವವರಿಗೆಲ್ಲಾ ಕೇಡುಮಾಡುವೆನು.

23 “ನನ್ನ ದೂತನು ನಿಮ್ಮ ಮುಂದೆ ನಡೆದು ಅಮೋರಿಯರು, ಹಿತ್ತಿಯರು, ಪೆರಿಜೀಯರು, ಕಾನಾನ್ಯರು, ಹಿವ್ವಿಯರು ಮತ್ತು ಯೆಬೂಸಿಯರು ಇರುವ ದೇಶಕ್ಕೆ ನಿಮ್ಮನ್ನು ನಡಿಸುವನು. ನಾನು ಅವರನ್ನೆಲ್ಲಾ ಸೋಲಿಸುವೆನು.

24 “ಅವರ ದೇವರುಗಳನ್ನು ಪೂಜಿಸಬೇಡಿರಿ. ಆ ದೇವರುಗಳಿಗೆ ನಮಸ್ಕರಿಸಬೇಡಿರಿ. ಅವರ ಆಚರಣೆಗಳನ್ನು ಅನುಸರಿಸಬೇಡಿರಿ. ನೀವು ಅವರ ವಿಗ್ರಹಗಳನ್ನು ನಾಶಮಾಡಬೇಕು. ಅವರ ಸ್ಮಾರಕ ಸ್ತಂಭಗಳನ್ನು ಕೆಡವಿಹಾಕಬೇಕು. 25 ನೀವು ನಿಮ್ಮ ದೇವರಾದ ಯೆಹೋವನನ್ನೇ ಆರಾಧಿಸಬೇಕು. ಆಗ ಆತನು ನಿಮ್ಮ ಅನ್ನಪಾನಗಳನ್ನು ಆಶೀರ್ವದಿಸುವನು. ನಾನು ನಿಮ್ಮೊಳಗಿಂದ ಎಲ್ಲಾ ವ್ಯಾಧಿಯನ್ನು ತೆಗೆದುಬಿಡುವೆನು. 26 ನಿಮ್ಮ ಸ್ತ್ರೀಯರು ಮಕ್ಕಳನ್ನು ಪಡೆಯಲು ಶಕ್ತರಾಗುವರು. ನಿಮ್ಮ ಮಕ್ಕಳು ಹುಟ್ಟುವಾಗಲೇ ಸಾಯುವುದಿಲ್ಲ; ನಿಮಗೆ ದೀರ್ಘಾಯುಷ್ಯವನ್ನು ಅನುಗ್ರಹಿಸುವೆನು.

27 “ನೀವು ನಿಮ್ಮ ವೈರಿಗಳ ವಿರುದ್ಧ ಯುದ್ಧ ಮಾಡುವಾಗ, ನಿಮ್ಮ ವೈರಿಗಳನ್ನೆಲ್ಲಾ ಸೋಲಿಸುವಂತೆ ನಾನು ನಿಮಗೆ ನನ್ನ ಮಹಾಶಕ್ತಿಯಿಂದ ಸಹಾಯ ಮಾಡುವೆನು. ನಿಮ್ಮ ವೈರಿಗಳು ಯುದ್ಧದಲ್ಲಿ ಭಯದಿಂದಲೂ ಗಲಿಬಿಲಿಯಿಂದಲೂ ಓಡಿಹೋಗುವರು. 28 ನಾನು ನಿಮ್ಮ ಮುಂದೆ ಹೆದ್ದುಂಬಿಯನ್ನು[d] ಕಳುಹಿಸುವೆನು. ನಿಮ್ಮ ವೈರಿಗಳಾದ ಹಿವ್ವಿಯರನ್ನು ಕಾನಾನ್ಯರನ್ನು ಮತ್ತು ಹಿತ್ತಿಯರನ್ನು ಅದು ಬಲವಂತದಿಂದ ಅಟ್ಟಿಬಿಡುವುದು. 29 ಆದರೆ ನಾನು ಒಂದೇ ವರ್ಷದಲ್ಲಿ ಅವರೆಲ್ಲರನ್ನೂ ಅಲ್ಲಿಂದ ಹೊರಡಿಸುವುದಿಲ್ಲ. ಯಾಕೆಂದರೆ ದೇಶದಲ್ಲಿ ಜನರು ಕಡಿಮೆಯಾಗುವುದರಿಂದ ಕ್ರೂರ ಪ್ರಾಣಿಗಳೆಲ್ಲಾ ಹೆಚ್ಚಾಗಿ ನಿಮಗೆ ಬಹಳ ತೊಂದರೆಯಾಗಬಹುದು. 30 ಆದ್ದರಿಂದ ನೀವು ಅಭಿವೃದ್ಧಿಯಾಗಿ ದೇಶದಲ್ಲೆಲ್ಲಾ ತುಂಬಿಕೊಳ್ಳುವತನಕ ಅವರನ್ನು ಸ್ವಲ್ಪ ಸ್ವಲ್ಪವಾಗಿ ಹೊರದೂಡುವೆನು.

31 “ಕೆಂಪುಸಮುದ್ರದಿಂದ ಯೂಫ್ರೇಟೀಸ್ ನದಿಯವರೆಗೆ ಇರುವ ಪ್ರದೇಶವನ್ನೆಲ್ಲಾ ಕೊಡುವೆನು. ಪಶ್ಚಿಮ ಗಡಿಯು ಫಿಲಿಷ್ಟಿಯ ಸಮುದ್ರವಾಗಿರುವುದು (ಮೆಡಿಟರೇನಿಯನ್ ಸಮುದ್ರ) ಮತ್ತು ಪೂರ್ವ ಗಡಿಯು ಅರೇಬಿಯಾ ಮರುಭೂಮಿಯಾಗಿರುವುದು. ನೀವು ಅಲ್ಲಿ ವಾಸಿಸುವ ಜನರನ್ನು ಸೋಲಿಸುವಂತೆ ನಾನು ಮಾಡುವೆನು; ಅವರೆಲ್ಲರನ್ನು ನೀವು ಬಲವಂತವಾಗಿ ಹೊರಗಟ್ಟುವಿರಿ.

32 “ನೀವು ಆ ಜನರೊಡನೆಯಾಗಲಿ ಅವರ ದೇವರುಗಳೊಡನೆಯಾಗಲಿ ಯಾವ ಒಡಂಬಡಿಕೆಯನ್ನೂ ಮಾಡಿಕೊಳ್ಳಬಾರದು. 33 ನಿಮ್ಮ ದೇಶದಲ್ಲಿ ವಾಸಿಸಲು ಅವರನ್ನು ಬಿಡಬೇಡಿರಿ. ಇಲ್ಲವಾದರೆ ಅವರು ನಿಮ್ಮಲ್ಲಿ ದ್ರೋಹ ಬುದ್ಧಿಯನ್ನು ಹುಟ್ಟಿಸಬಹುದು. ನೀವು ಅವರ ದೇವರುಗಳನ್ನು ಪೂಜಿಸಿದರೆ ಆ ಪೂಜೆಯೂ ನಿಮಗೆ ಉರುಲಾಗುವುದು.”

ದೇವರ ಮತ್ತು ಇಸ್ರೇಲರ ನಡುವೆ ಒಡಂಬಡಿಕೆ

24 ದೇವರು ಮೋಶೆಗೆ, “ನೀನು, ಆರೋನ, ನಾದಾಬ, ಅಬೀಹೂ ಮತ್ತು ಇಸ್ರೇಲರ ಎಪ್ಪತ್ತು ಮಂದಿ ಹಿರಿಯರು ಬೆಟ್ಟವನ್ನೇರಿಬಂದು ದೂರದಿಂದ ನನ್ನನ್ನು ಆರಾಧಿಸಬೇಕು. ಬಳಿಕ ನೀನು ಮಾತ್ರ ನನ್ನ ಬಳಿಗೆ ಬರಬೇಕು; ಬೇರೆಯವರು ಬರಕೂಡದು; ಆದರೆ ಉಳಿದ ಜನರು ಬೆಟ್ಟವನ್ನೂ ಏರಕೂಡದು” ಎಂದು ಹೇಳಿದನು.

ಮೋಶೆಯು ಯೆಹೋವನ ಎಲ್ಲಾ ನಿಯಮಗಳನ್ನು ಮತ್ತು ಆಜ್ಞೆಗಳನ್ನು ಜನರಿಗೆ ತಿಳಿಸಿದನು. ಆಗ ಜನರೆಲ್ಲರೂ, “ಯೆಹೋವನ ಆಜ್ಞೆಗಳಿಗೆಲ್ಲಾ ನಾವು ವಿಧೇಯರಾಗುವೆವು” ಎಂದು ಒಂದೇ ಸ್ವರದಿಂದ ಹೇಳಿದರು.

ಆದ್ದರಿಂದ ಮೋಶೆ ಯೆಹೋವನ ಆಜ್ಞೆಗಳನ್ನೆಲ್ಲಾ ಒಂದು ಸುರುಳಿಯಲ್ಲಿ ಬರೆದನು. ಮರುದಿನ ಮುಂಜಾನೆ, ಅವನು ಬೇಗನೆ ಎದ್ದು ಬೆಟ್ಟದ ಕೆಳಭಾಗದ ಹತ್ತಿರ, ಹನ್ನೆರಡು ಕುಲಗಳಿಗೆ ಒಂದೊಂದರಂತೆ ಹನ್ನೆರಡು ಕಂಬಗಳುಳ್ಳ ಒಂದು ಯಜ್ಞವೇದಿಕೆಯನ್ನು ಕಟ್ಟಿಸಿದನು. ಇಸ್ರೇಲರ ಹನ್ನೆರಡು ಕುಲಗಳಿಗೆ ಒಂದೊಂದರಂತೆ ಹನ್ನೆರಡು ಕಲ್ಲುಗಳನ್ನು ನಿಲ್ಲಿಸಿದನು. ಬಳಿಕ ಮೋಶೆಯು ಯಜ್ಞಗಳನ್ನು ಸಮರ್ಪಿಸುವುದಕ್ಕೆ ಇಸ್ರೇಲರ ಯೌವನಸ್ಥರನ್ನು ಕಳುಹಿಸಿದನು. ಅವರು ಯೆಹೋವನಿಗೆ ಎತ್ತುಗಳನ್ನು ಸರ್ವಾಂಗಹೋಮಗಳಾಗಿಯೂ ಸಮಾಧಾನಯಜ್ಞಗಳಾಗಿಯೂ ಅರ್ಪಿಸಿದರು.

ಮೋಶೆಯು ಈ ಪಶುಗಳ ರಕ್ತವನ್ನು ತೆಗೆದುಕೊಂಡು ಅದರಲ್ಲಿ ಅರ್ಧಭಾಗವನ್ನು ಬೋಗುಣಿಗಳಲ್ಲಿ ಹಾಕಿದನು; ಉಳಿದ ಅರ್ಧಭಾಗವನ್ನು ಯಜ್ಞವೇದಿಕೆಯ ಮೇಲೆ ಸುರಿದನು.

ವಿಶೇಷ ಒಡಂಬಡಿಕೆಯಿಂದ ಬರೆಯಲ್ಪಟ್ಟಿದ್ದ ಸುರುಳಿಯನ್ನು ಮೋಶೆಯು ಎಲ್ಲಾ ಜನರಿಗೆ ಕೇಳುವಂತೆ ಓದಿದನು. ಆಗ ಜನರು, “ಯೆಹೋವನ ಆಜ್ಞೆಗಳನ್ನೆಲ್ಲ ಅನುಸರಿಸಿ ಆತನಿಗೆ ವಿಧೇಯರಾಗಿರುತ್ತೇವೆ” ಅಂದರು.

ಆಗ ಮೋಶೆ ಯಜ್ಞಗಳ ರಕ್ತದಿಂದ ತುಂಬಿದ ಬೋಗುಣಿಯನ್ನು ತೆಗೆದುಕೊಂಡು ಅದರಲ್ಲಿದ್ದ ರಕ್ತವನ್ನು ಜನರ ಮೇಲೆ ಚಿಮಿಕಿಸಿ, “ಈ ಸುರುಳಿಯಲ್ಲಿರುವ ವಾಕ್ಯಗಳಿಗನುಸಾರವಾಗಿ ಯೆಹೋವನು ನಿಮ್ಮೊಡನೆ ಒಂದು ವಿಶೇಷ ಒಡಂಬಡಿಕೆಯನ್ನು ಮಾಡಿಕೊಂಡಿದ್ದಾನೆಂಬುದನ್ನು ಈ ರಕ್ತವು ಸೂಚಿಸುತ್ತದೆ” ಎಂದು ಹೇಳಿದನು.

ಬಳಿಕ ಮೋಶೆ, ಆರೋನ, ನಾದಾಬ, ಅಬೀಹೂ ಮತ್ತು ಇಸ್ರೇಲರ ಎಪ್ಪತ್ತು ಮಂದಿ ಹಿರಿಯರು ಬೆಟ್ಟವನ್ನೇರಿದರು. 10 ಈ ಜನರು ಇಸ್ರೇಲರ ಯೆಹೋವನನ್ನು ನೋಡಿದರು. ದೇವರು ಆಕಾಶಮಂಡಲದಂತೆ ಅತಿ ನಿರ್ಮಲವಾದ ಇಂದ್ರನೀಲಮಣಿಯ ನೆಲಗಟ್ಟಿನ ಮೇಲೆ ನಿಂತುಕೊಂಡಿದ್ದನು! 11 ಇಸ್ರೇಲರ ನಾಯಕರೆಲ್ಲರೂ ಯೆಹೋವನನ್ನು ನೋಡಿದರು, ಆದರೆ ದೇವರು ಅವರನ್ನು ನಾಶಮಾಡಲಿಲ್ಲ. ಅವರೆಲ್ಲರೂ ದೇವದರ್ಶನ ಮಾಡಿ ಅನ್ನಪಾನಗಳನ್ನು ತೆಗೆದುಕೊಂಡರು.

ಯೆಹೋವನ ನಿಬಂಧನೆಯನ್ನು ಪಡೆಯಲು ಮೋಶೆ ಹೋದದ್ದು

12 ಯೆಹೋವನು ಮೋಶೆಗೆ, “ನೀನು ಬೆಟ್ಟವನ್ನು ಹತ್ತಿ ಬಂದು ನನ್ನ ಬಳಿಯಲ್ಲಿರು. ನಾನು ನನ್ನ ಉಪದೇಶಗಳನ್ನು ಮತ್ತು ಕಟ್ಟಳೆಗಳನ್ನು ಎರಡು ಕಲ್ಲಿನ ಹಲಗೆಗಳ ಮೇಲೆ ಬರೆದಿದ್ದೇನೆ. ಈ ಉಪದೇಶಗಳನ್ನು ಮತ್ತು ಕಟ್ಟಳೆಗಳನ್ನು ನೀನು ಜನರಿಗೆ ಬೋಧಿಸಬೇಕು. ನಾನು ಈ ಕಲ್ಲಿನ ಹಲಗೆಗಳನ್ನು ನಿನಗೆ ಕೊಡುವೆನು” ಎಂದು ಹೇಳಿದನು.

13 ಆದ್ದರಿಂದ ಮೋಶೆಯು ತನ್ನ ಶಿಷ್ಯನಾದ ಯೆಹೋಶುವನೊಡನೆ ಎದ್ದುನಿಂತು ದೇವರ ಬೆಟ್ಟದ ಮೇಲಕ್ಕೆ ಹೋದನು. 14 ಮೋಶೆಯು ಹಿರಿಯರಿಗೆ, “ನಾವು ನಿಮ್ಮ ಬಳಿಗೆ ಹಿಂತಿರುಗಿ ಬರುವ ತನಕ ನೀವು ಇಲ್ಲಿ ಕಾದುಕೊಂಡಿರಿ. ಆರೋನನು ಮತ್ತು ಹೂರನು ನಿಮ್ಮ ಬಳಿಯಿದ್ದಾರೆ; ನಿಮ್ಮಲ್ಲಿ ಯಾರಿಗಾದರೂ ಸಮಸ್ಯೆಯಿದ್ದರೆ ಅವರ ಬಳಿಗೆ ಹೋಗಲಿ” ಎಂದು ಹೇಳಿದನು.

ಮೋಶೆಯು ದೇವರನ್ನು ಭೇಟಿಯಾದದ್ದು

15 ಬಳಿಕ ಮೋಶೆ ಬೆಟ್ಟದ ಮೇಲಕ್ಕೆ ಹೋದನು. ಮೋಡವು ಬೆಟ್ಟವನ್ನು ಕವಿದುಕೊಂಡಿತ್ತು. 16 ಸೀನಾಯಿ ಬೆಟ್ಟದ ಮೇಲೆ ಯೆಹೋವನ ಮಹಿಮೆಯು ಇಳಿದು ಬಂದಿತು. ಮೋಡವು ಆರುದಿನಗಳವರೆಗೆ ಬೆಟ್ಟವನ್ನು ಕವಿದುಕೊಂಡಿತ್ತು. ಏಳನೆಯ ದಿನದಲ್ಲಿ, ಮೋಡದೊಳಗಿಂದ ಯೆಹೋವನು ಮೋಶೆಯೊಡನೆ ಮಾತಾಡಿದನು. 17 ಇಸ್ರೇಲರಿಗೆ ಯೆಹೋವನ ಮಹಿಮೆಯು ಬೆಟ್ಟದ ತುದಿಯಲ್ಲಿ ಉರಿಯುವ ಬೆಂಕಿಯಂತೆ ಕಾಣುತ್ತಿತ್ತು.

18 ಬಳಿಕ ಮೋಶೆಯು ಮೋಡದಲ್ಲಿ ಬೆಟ್ಟದ ಮೇಲೆ ಇನ್ನೂ ಎತ್ತರಕ್ಕೆ ಹೋದನು. ಮೋಶೆಯು ಬೆಟ್ಟದಲ್ಲಿ ಹಗಲಿರುಳು ನಲವತ್ತು ದಿವಸ ಇದ್ದನು.

ಮತ್ತಾಯ 20:1-16

ಕೂಲಿಯಾಳುಗಳ ಕುರಿತು ಯೇಸು ಹೇಳಿದ ಸಾಮ್ಯ

20 “ಪರಲೋಕರಾಜ್ಯವು ಒಬ್ಬ ದ್ರಾಕ್ಷಿತೋಟದ ಯಜಮಾನನಿಗೆ ಹೋಲಿಕೆಯಾಗಿದೆ. ಒಂದು ಮುಂಜಾನೆ ಅವನು ತನ್ನ ತೋಟದಲ್ಲಿ ಕೆಲಸ ಮಾಡಲು ಬೇರೆ ಕೂಲಿಯಾಳುಗಳನ್ನು ಕರೆಯುವುದಕ್ಕೆ ಹೊರಟನು. ಒಂದು ದಿನಕ್ಕೆ ಒಬ್ಬ ಕೆಲಸಗಾರನಿಗೆ ಒಂದು ಬೆಳ್ಳಿನಾಣ್ಯವನ್ನು ಕೊಡುವುದಾಗಿ ಹೇಳಿ ಆ ಕೆಲಸಗಾರರನ್ನು ಅವನು ತೋಟಕ್ಕೆ ಕಳುಹಿಸಿದನು.

“ಸುಮಾರು ಒಂಭತ್ತು ಗಂಟೆಗೆ ಯಜಮಾನನು ಪೇಟೆಯ ಸ್ಥಳಕ್ಕೆ ಹೋದನು. ಏನೂ ಕೆಲಸವಿಲ್ಲದೆ ಸುಮ್ಮನೆ ನಿಂತಿದ್ದ ಕೆಲವರನ್ನು ಅವನು ಅಲ್ಲಿ ಕಂಡನು. ಅವನು ಅವರಿಗೆ, ‘ನೀವು ಹೋಗಿ ನನ್ನ ತೋಟದಲ್ಲಿ ಕೆಲಸ ಮಾಡುವುದಾದರೆ ನಿಮ್ಮ ಕೆಲಸಕ್ಕೆ ಯೋಗ್ಯವಾದ ಕೂಲಿಯನ್ನು ಕೊಡುತ್ತೇನೆ’ ಎಂದು ಹೇಳಿದನು. ಆ ಕೂಲಿಯಾಳುಗಳು ಕೆಲಸ ಮಾಡಲು ಅವನ ತೋಟಕ್ಕೆ ಹೋದರು.

“ಆ ಯಜಮಾನನು ಅದೇ ರೀತಿ ಸುಮಾರು ಹನ್ನೆರಡು ಗಂಟೆಗೊಮ್ಮೆ ಮತ್ತೆ ಮೂರು ಗಂಟೆಗೊಮ್ಮೆ ಪೇಟೆಗೆ ಹೋದನು. ಆ ಎರಡು ಸಲವೂ ತನ್ನ ಹೊಲದಲ್ಲಿ ಕೆಲಸ ಮಾಡಲು ಬೇರೆ ಕೆಲವು ಕೂಲಿಯವರನ್ನು ಅವನು ಗೊತ್ತುಮಾಡಿದನು. ಸುಮಾರು ಐದು ಗಂಟೆಗೆ ಆ ಯಜಮಾನನು ಮತ್ತೊಮ್ಮೆ ಪೇಟೆಗೆ ಹೋದನು. ಅಲ್ಲಿ ನಿಂತಿದ್ದ ಕೆಲವರನ್ನು ಅವನು ಕಂಡು, ‘ನೀವು ದಿನವಿಡೀ ಕೆಲಸ ಮಾಡದೆ ಸುಮ್ಮನೆ ಏಕೆ ನಿಂತಿದ್ದೀರಿ?’ ಎಂದು ಕೇಳಿದನು.

“ಅದಕ್ಕೆ ಅವರು, ‘ನಮಗೆ ಯಾರೂ ಕೆಲಸ ಕೊಡಲಿಲ್ಲ’ ಎಂದು ಉತ್ತರಕೊಟ್ಟರು.

“ಆ ಯಜಮಾನನು, ‘ಹಾಗಾದರೆ ನೀವು ಹೋಗಿ ನನ್ನ ತೋಟದಲ್ಲಿ ಕೆಲಸ ಮಾಡಿರಿ’ ಎಂದು ಹೇಳಿದನು.

“ಅಂದು ಸಾಯಂಕಾಲ, ತೋಟದ ಯಜಮಾನನು ಕೆಲಸಗಾರರನ್ನು ನೋಡಿಕೊಳ್ಳುವವನಿಗೆ, ‘ಕೂಲಿಯಾಳುಗಳನ್ನು ಕರೆದು ಕೊನೆಗೆ ಬಂದವರಿಂದ ಆರಂಭಿಸಿ ಮೊದಲು ಬಂದವರ ತನಕ ಕೂಲಿ ಕೊಡು’ ಎಂದನು.

“ಐದು ಗಂಟೆಯ ಸಮಯದಲ್ಲಿ ಗೊತ್ತುಮಾಡಲ್ಪಟ್ಟ ಕೂಲಿಯಾಳುಗಳು ತಮ್ಮ ಕೂಲಿಯನ್ನು ತೆಗೆದುಕೊಳ್ಳಲು ಬಂದರು. ಪ್ರತಿಯೊಬ್ಬ ಆಳಿಗೂ ಒಂದೊಂದು ಬೆಳ್ಳಿನಾಣ್ಯ ಸಿಕ್ಕಿತು. 10 ನಂತರ ಮೊಟ್ಟಮೊದಲು ಗೊತ್ತುಮಾಡಲ್ಪಟ್ಟಿದ್ದವರು ತಮ್ಮ ಕೂಲಿಯನ್ನು ತೆಗೆದುಕೊಳ್ಳಲು ಬಂದರು. ಬೇರೆ ಆಳುಗಳಿಗಿಂತ ತಮಗೆ ಹೆಚ್ಚು ಸಿಕ್ಕುವುದೆಂದು ಅವರು ಆಲೋಚಿಸಿಕೊಂಡಿದ್ದರು. ಆದರೆ ಅವರಿಗೂ ಸಹ ಒಂದೊಂದು ಬೆಳ್ಳಿನಾಣ್ಯ ಸಿಕ್ಕಿತು. 11 ಅವರು ತಮ್ಮ ಬೆಳ್ಳಿನಾಣ್ಯವನ್ನು ತೆಗೆದುಕೊಂಡಾಗ ತೋಟದ ಯಜಮಾನನ ಬಗ್ಗೆ ಗೊಣಗುಟ್ಟುತ್ತಾ, 12 ‘ಕೊನೆಗೆ ಗೊತ್ತುಮಾಡಲ್ಪಟ್ಟ ಆಳುಗಳು ಒಂದು ಗಂಟೆ ಮಾತ್ರ ಕೆಲಸ ಮಾಡಿದ್ದಾರೆ. ಆದರೆ ಇವನು ಅವರಿಗೂ ನಮ್ಮಷ್ಟೇ ಕೊಟ್ಟಿದ್ದಾನೆ. ನಾವಾದರೋ ದಿನವೆಲ್ಲಾ ಬಿಸಿಲಿನಲ್ಲಿ ಕಷ್ಟಪಟ್ಟು ಕೆಲಸ ಮಾಡಿದ್ದೇವೆ’ ಎಂದರು.

13 “ತೋಟದ ಯಜಮಾನನು ಆ ಆಳುಗಳಲ್ಲಿ ಒಬ್ಬನಿಗೆ, ‘ಸ್ನೇಹಿತನೇ, ನಾನು ನಿನಗೆ ಅನ್ಯಾಯ ಮಾಡಲಿಲ್ಲ. ನೀನು ಒಂದು ಬೆಳ್ಳಿನಾಣ್ಯಕ್ಕಾಗಿ ಕೆಲಸ ಮಾಡಲು ಒಪ್ಪಿಕೊಂಡೆಯಲ್ಲವೇ? 14 ಆದ್ದರಿಂದ ನೀನು ನಿನ್ನ ಕೂಲಿಯನ್ನು ತೆಗೆದುಕೊಂಡು ಹೋಗು. ನಾನು ನಿನಗೆ ಎಷ್ಟು ಕೂಲಿ ಕೊಟ್ಟೆನೋ ಅಷ್ಟೇ ಕೂಲಿಯನ್ನು ಕೊನೆಗೆ ಗೊತ್ತುಮಾಡಲ್ಪಟ್ಟವನಿಗೂ ಕೊಡಲು ಇಷ್ಟಪಡುತ್ತೇನೆ. 15 ನನ್ನ ಸ್ವಂತ ಹಣವನ್ನು ನನಗೆ ಇಷ್ಟಬಂದ ಹಾಗೆ ನಾನು ಕೊಡಬಹುದಲ್ಲವೇ? ನಾನು ಅವರಿಗೆ ಒಳ್ಳೆಯದನ್ನು ಮಾಡಿದ್ದಕ್ಕಾಗಿ ನೀನು ಹೊಟ್ಟೆಕಿಚ್ಚುಪಡುವೆಯಾ?’ ಎಂದನು.

16 “ಇದೇಪ್ರಕಾರ ಕಡೆಯವರು ಮೊದಲಿನವರಾಗುವರು, ಮೊದಲಿನವರು ಕಡೆಯವರಾಗುವರು.”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International