Old/New Testament
ಪಸ್ಕ ಹಬ್ಬ
12 ಮೋಶೆ ಆರೋನರು ಇನ್ನೂ ಈಜಿಪ್ಟಿನಲ್ಲಿದ್ದಾಗ ಯೆಹೋವನು ಅವರೊಡನೆ ಮಾತಾಡಿ, 2 “ಈ ತಿಂಗಳು ನಿಮಗೆ ವರ್ಷದ ಮೊದಲನೆ ತಿಂಗಳಾಗಿರುವುದು. 3 ಈ ಆಜ್ಞೆಯು ಇಡೀ ಇಸ್ರೇಲರ ಸಮೂಹಕ್ಕೆ ಅನ್ವಯಿಸುತ್ತದೆ. ಈ ತಿಂಗಳ ಹತ್ತನೆಯ ದಿನದಲ್ಲಿ ಪ್ರತಿಯೊಬ್ಬನು ತನ್ನ ಮನೆಯಲ್ಲಿರುವ ಜನರಿಗಾಗಿ ಒಂದು ಕುರಿಮರಿಯನ್ನು ಅಥವಾ ಒಂದು ಆಡುಮರಿಯನ್ನು ಕೊಯ್ಯಬೇಕು. 4 ಅದನ್ನು ಸಂಪೂರ್ಣವಾಗಿ ತಿನ್ನಲು ಅವನ ಮನೆಯಲ್ಲಿ ಸಾಕಷ್ಟು ಜನರಿಲ್ಲದಿದ್ದರೆ ಅವನು ತನ್ನ ನೆರೆಯವರನ್ನು ಆಮಂತ್ರಿಸಿ ಅವರೊಂದಿಗೆ ಅದರ ಮಾಂಸವನ್ನು ಹಂಚಿಕೊಳ್ಳಬೇಕು. ಪ್ರತಿಯೊಬ್ಬನಿಗೂ ತಿನ್ನಲು ಸಾಕಷ್ಟು ಮಾಂಸವಿರಬೇಕು. 5 ಅದು ಒಂದು ವರ್ಷದ ಗಂಡು ಕುರಿಯಾಗಿರಬೇಕು ಅಥವಾ ಆಡಾಗಿರಬೇಕು. ಅಲ್ಲದೆ ಕಳಂಕ ರಹಿತವಾಗಿರಬೇಕು. 6 ಈ ತಿಂಗಳ ಹದಿನಾಲ್ಕನೆಯ ದಿನದವರೆಗೆ ನೀವು ಆ ಪಶುವನ್ನು ಸಾಕಬೇಕು. ಅಂದು ಸಂಜೆ ಇಸ್ರೇಲರೆಲ್ಲರೂ ಆ ಪಶುಗಳನ್ನು ಕೊಯ್ಯಬೇಕು. 7 ಈ ಪಶುಗಳ ರಕ್ತವನ್ನು ತೆಗೆದಿಟ್ಟು ಜನರು ಭೋಜನಮಾಡುವ ಮನೆಗಳ ಬಾಗಿಲಿನ ಎರಡು ನಿಲುವು ಕಂಬಗಳಿಗೂ ಮೇಲಿನ ಪಟ್ಟಿಗಳಿಗೂ ಆ ರಕ್ತವನ್ನು ಹಚ್ಚಬೇಕು.
8 “ಅಂದು ರಾತ್ರಿ ಆ ಪಶುವಿನ ಮಾಂಸವನ್ನು ಸುಟ್ಟು ಸಂಪೂರ್ಣವಾಗಿ ತಿನ್ನಬೇಕು. ಅದರೊಡನೆ ಕಹಿಯಾದ ಪಲ್ಯಗಳನ್ನೂ ಹುಳಿಯಿಲ್ಲದ ರೊಟ್ಟಿಯನ್ನೂ ತಿನ್ನಬೇಕು. 9 ನೀವು ಆ ಪಶುವಿನ ಮಾಂಸವನ್ನು ಹಸಿಯಾಗಲಿ ನೀರಿನಲ್ಲಿ ಬೇಯಿಸಿಯಾಗಲಿ ತಿನ್ನಬಾರದು; ಅದರ ಮಾಂಸವನ್ನು ಬೆಂಕಿಯ ಮೇಲಿಟ್ಟು ಬೇಯಿಸಬೇಕು. ಅದರ ತಲೆ, ಕಾಲುಗಳನ್ನೂ ಒಳಗಿನ ಭಾಗಗಳನ್ನೂ ಬೆಂಕಿಯ ಮೇಲೆ ಬೇಯಿಸಬೇಕು. 10 ಅದರ ಮಾಂಸವನ್ನೆಲ್ಲಾ ಆ ರಾತ್ರಿಯಲ್ಲಿಯೇ ತಿನ್ನಬೇಕು. ಬೆಳಗಾಗುವವರೆಗೆ ಮಾಂಸವೇನಾದರೂ ಉಳಿದರೆ ಅದನ್ನು ಬೆಂಕಿಯಿಂದ ಸುಟ್ಟುಬಿಡಬೇಕು.
11 “ನೀವು ಭೋಜನ ಮಾಡುವಾಗ ಪ್ರಯಾಣ ಮಾಡುತ್ತಿರುವಂತೆ ಬಟ್ಟೆ ಧರಿಸಿಕೊಂಡಿರಬೇಕು; ಕೆರಗಳನ್ನು ಹಾಕಿಕೊಂಡು ನಿಮ್ಮ ಊರುಗೋಲನ್ನು ಕೈಯಲ್ಲಿ ಹಿಡಿದಿರಬೇಕು. ನೀವು ಅವಸವಸರವಾಗಿ ತಿನ್ನಬೇಕು. ಯಾಕೆಂದರೆ ಇದು ಯೆಹೋವನ ಪಸ್ಕಹಬ್ಬ.
12 “ಆ ರಾತ್ರಿ ನಾನು ಈಜಿಪ್ಟಿನ ಮೂಲಕ ಹಾದುಹೋಗಿ ಈಜಿಪ್ಟಿನ ಚೊಚ್ಚಲು ಪಶುಗಳನ್ನೂ ಚೊಚ್ಚಲು ಗಂಡುಮಕ್ಕಳನ್ನೂ ಕೊಲ್ಲುವೆನು; ಈಜಿಪ್ಟಿನ ಎಲ್ಲಾ ದೇವರುಗಳಿಗೆ ತೀರ್ಪು ಮಾಡುವೆನು. ನಾನೇ ಯೆಹೋವನೆಂದು ತೋರಿಸಿಕೊಡುವೆನು. 13 ಆದರೆ ನಿಮ್ಮ ಮನೆಗಳಿಗೆ ಹಚ್ಚಿರುವ ರಕ್ತವು ಒಂದು ವಿಶೇಷ ಸೂಚನೆಯಾಗಿದೆ. ನಾನು ಆ ರಕ್ತವನ್ನು ನೋಡಿದಾಗ ನಿಮ್ಮ ಮನೆಯನ್ನು ದಾಟಿಹೋಗುವೆನು.[a] ಈಜಿಪ್ಟಿನ ಜನರಿಗೆ ಕೇಡುಗಳಾಗುವಂತೆ ಮಾಡುವೆನು. ಆದರೆ ಆ ವ್ಯಾಧಿಗಳು ನಿಮಗೆ ಹಾನಿ ಮಾಡುವುದಿಲ್ಲ.
14 “ಆದ್ದರಿಂದ ನೀವು ಆ ರಾತ್ರಿಯನ್ನು ಯಾವಾಗಲೂ ಜ್ಞಾಪಿಸಿಕೊಳ್ಳುವಿರಿ. ಅದು ನಿಮಗೆ ವಿಶೇಷವಾದ ಹಬ್ಬವಾಗಿರುವುದು. ನಿಮ್ಮ ಸಂತತಿಯವರು ಈ ಹಬ್ಬದಿಂದ ಯೆಹೋವನನ್ನು ಎಂದೆಂದಿಗೂ ಸನ್ಮಾನಿಸುವರು. 15 ಈ ಹಬ್ಬದಲ್ಲಿ ನೀವು ಹುಳಿಯಿಲ್ಲದ ರೊಟ್ಟಿಯನ್ನು ಏಳು ದಿವಸ ತಿನ್ನುವಿರಿ. ಹಬ್ಬದ ಪ್ರಥಮ ದಿನದಲ್ಲಿ ನೀವು ನಿಮ್ಮ ಮನೆಯಿಂದ ಎಲ್ಲಾ ಹುಳಿಯನ್ನು ತೆಗೆದುಹಾಕುವಿರಿ. ಈ ಹಬ್ಬದ ಏಳು ದಿನಗಳಲ್ಲಿ ಯಾವುದೇ ಹುಳಿಯನ್ನು ತಿನ್ನಬಾರದು. ಯಾವನಾದರೂ ಹುಳಿಯನ್ನು ತಿಂದರೆ, ನೀವು ಅವನನ್ನು ಇಸ್ರೇಲಿನಿಂದ ಬಹಿಷ್ಕರಿಸಬೇಕು. 16 ಈ ಹಬ್ಬದ ಪ್ರಥಮ ಮತ್ತು ಕೊನೆಯ ದಿನಗಳಲ್ಲಿ ಪವಿತ್ರ ಸಭೆಯಾಗಿ ಕೂಡಿಬರಬೇಕು. ಈ ಹಬ್ಬದ ದಿನಗಳಲ್ಲಿ ನೀವು ಯಾವ ಕೆಲಸವನ್ನೂ ಮಾಡಬಾರದು. ಆದರೆ ನಿಮ್ಮ ಭೋಜನಕ್ಕಾಗಿ ಆಹಾರ ಸಿದ್ಧಪಡಿಸಬಹುದು. 17 ನೀವು ಹುಳಿಯಿಲ್ಲದ ರೊಟ್ಟಿಯ ಹಬ್ಬವನ್ನು ಆಚರಿಸಲೇಬೇಕು. ಯಾಕೆಂದರೆ ಆ ದಿನದಲ್ಲಿಯೇ ನಾನು ನಿಮ್ಮ ಎಲ್ಲಾ ಜನರ ಗುಂಪುಗಳನ್ನು ಈಜಿಪ್ಟಿನಿಂದ ಬಿಡಿಸಿ ಕರೆದುಕೊಂಡು ಹೋದೆನು. ಆದ್ದರಿಂದ ನಿಮ್ಮ ಸಂತತಿಯವರೆಲ್ಲರೂ ಆ ದಿನವನ್ನು ಜ್ಞಾಪಕಮಾಡಿಕೊಳ್ಳಬೇಕು. ಇದು ಶಾಶ್ವತವಾದ ಕಟ್ಟಳೆಯಾಗಿದೆ. 18 ಆದ್ದರಿಂದ ಪ್ರಥಮ ತಿಂಗಳಿನ ಹದಿನಾಲ್ಕನೆಯ ದಿನದ ಸಾಯಂಕಾಲ ನೀವು ಹುಳಿಯಿಲ್ಲದ ರೊಟ್ಟಿಯನ್ನು ತಿನ್ನಲು ಆರಂಭಿಸಿ ಅದೇ ತಿಂಗಳ ಇಪ್ಪತ್ತೊಂದನೇ ದಿನದ ಸಾಯಂಕಾಲದವರೆಗೂ ತಿನ್ನುವಿರಿ. 19 ಏಳು ದಿನಗಳವರೆಗೆ ನಿಮ್ಮ ಮನೆಗಳಲ್ಲಿ ಯಾವ ಹುಳಿಯೂ ಇರಬಾರದು. ಯಾವ ಇಸ್ರೇಲಿಯಾದರೂ ಯಾವ ವಿದೇಶಿಯನಾದರೂ ಈ ಹಬ್ಬದಲ್ಲಿ ಹುಳಿಯನ್ನು ತಿಂದರೆ, ಅವನನ್ನು ಇಸ್ರೇಲರ ಸಮುದಾಯದಿಂದ ಬಹಿಷ್ಕರಿಸಬೇಕು. 20 ಈ ಹಬ್ಬದಲ್ಲಿ ನೀವು ಹುಳಿಯನ್ನು ತಿನ್ನಬಾರದು. ನೀವು ಎಲ್ಲೇ ವಾಸವಾಗಿದ್ದರೂ ಹುಳಿಯಿಲ್ಲದ ರೊಟ್ಟಿಯನ್ನೇ ತಿನ್ನಬೇಕು” ಎಂದು ಹೇಳಿದನು.
21 ಆದ್ದರಿಂದ ಮೋಶೆಯು ಹಿರಿಯರ ಸಭೆ ಸೇರಿಸಿ, “ನಿಮ್ಮ ಕುಟುಂಬಗಳಿಗೆ ಬೇಕಾದ ಪಶುಗಳನ್ನು ತೆಗೆದುಕೊಂಡು ಪಸ್ಕಕ್ಕಾಗಿ ಅವುಗಳನ್ನು ಕೊಯ್ಯಿರಿ. 22 ಹಿಸ್ಸೋಪ್ ಗಿಡದ ಬರಲನ್ನು ತೆಗೆದುಕೊಂಡು ರಕ್ತ ತುಂಬಿರುವ ಪಾತ್ರೆಯಲ್ಲಿ ಅದ್ದಿರಿ. ರಕ್ತವನ್ನು ಬಾಗಿಲಿನ ನಿಲುವು ಕಂಬಗಳಿಗೆ ಮತ್ತು ಮೇಲಿನ ಪಟ್ಟಿಗಳಿಗೆ ಹಚ್ಚಿರಿ. ಮುಂಜಾನೆಯಾಗುವವರೆಗೆ ಯಾರೂ ತಮ್ಮ ಮನೆಯನ್ನು ಬಿಟ್ಟು ಹೊರಗೆ ಹೋಗಬಾರದು. 23 ಆ ಸಮಯದಲ್ಲಿ ಚೊಚ್ಚಲಾದವುಗಳನ್ನು ಸಂಹರಿಸಲು ಯೆಹೋವನು ಈಜಿಪ್ಟಿನ ಮೂಲಕ ಹಾದುಹೋಗುವನು. ಬಾಗಿಲಿನ ನಿಲುವು ಕಂಬಗಳಿಗೆ ಮತ್ತು ಮೇಲಿನ ಪಟ್ಟಿಗಳಿಗೆ ಹಚ್ಚಿದ ರಕ್ತವನ್ನು ಯೆಹೋವನು ನೋಡಿ ಆ ಮನೆಯನ್ನು ಸಂರಕ್ಷಿಸುವನು.[b] ಸಂಹಾರಕನು ನಿಮ್ಮ ಮನೆಯೊಳಗೆ ಬಂದು ಸಂಹರಿಸಲು ಯೆಹೋವನು ಬಿಡುವುದಿಲ್ಲ. 24 ನೀವು ಈ ಆಜ್ಞೆಯನ್ನು ಜ್ಞಾಪಕದಲ್ಲಿಡಬೇಕು. ಇದು ನಿಮಗೂ ನಿಮ್ಮ ಸಂತತಿಯವರಿಗೂ ಶಾಶ್ವತವಾದ ನಿಯಮವಾಗಿದೆ. 25 ಯೆಹೋವನು ನಿಮಗೆ ಕೊಡಲಿರುವ ದೇಶಕ್ಕೆ ನೀವು ಹೋದಾಗಲೂ ಈ ಹಬ್ಬವನ್ನು ಆಚರಿಸಬೇಕು. 26 ‘ಈ ಹಬ್ಬವನ್ನು ಮಾಡುವುದೇಕೆ?’ ಎಂದು ನಿಮ್ಮ ಮಕ್ಕಳು ನಿಮ್ಮನ್ನು ಕೇಳುವಾಗ, 27 ‘ಇದು ಯೆಹೋವನನ್ನು ಸನ್ಮಾನಿಸಲು ಮಾಡುವ ಪಸ್ಕಹಬ್ಬವಾಗಿದೆ. ಯಾಕೆಂದರೆ ನಾವು ಈಜಿಪ್ಟಿನಲ್ಲಿದ್ದಾಗ ಯೆಹೋವನು ಇಸ್ರೇಲರ ಮನೆಗಳನ್ನು ಬಿಟ್ಟು ದಾಟಿಹೋದನು; ಈಜಿಪ್ಟಿನವರನ್ನು ಸಂಹರಿಸಿದನು; ಆದರೆ ಆತನು ನಮ್ಮ ಮನೆಗಳಲ್ಲಿದ್ದವರನ್ನು ರಕ್ಷಿಸಿದನು’ ಎಂದು ಹೇಳಬೇಕು.
“ಆಗ ಮೋಶೆಯ ಮಾತನ್ನು ಕೇಳುತ್ತಿದ್ದ ಇಸ್ರೇಲರು ಅಡ್ಡಬಿದ್ದು ಯೆಹೋವನನ್ನು ಆರಾಧಿಸಿದರು.” 28 ಯೆಹೋವನು ಮೋಶೆ ಮತ್ತು ಆರೋನರಿಗೆ ಆಜ್ಞಾಪಿಸಿದ್ದಂತೆಯೇ ಇಸ್ರೇಲರು ಮಾಡಿದರು.
29 ಮಧ್ಯರಾತ್ರಿಯಲ್ಲಿ ಯೆಹೋವನು ಈಜಿಪ್ಟಿನಲ್ಲಿದ್ದ ಚೊಚ್ಚಲು ಗಂಡುಮಕ್ಕಳನ್ನೆಲ್ಲಾ ಸಂಹರಿಸಿದನು. ಫರೋಹನ ಚೊಚ್ಚಲು ಮಗನಿಂದಿಡಿದು ಸೆರೆಮನೆಯಲ್ಲಿದ್ದ ಕೈದಿಯ ಚೊಚ್ಚಲು ಮಗನವರೆಗೆ ಇರುವ ಎಲ್ಲಾ ಚೊಚ್ಚಲು ಮಕ್ಕಳನ್ನು ಆತನು ಸಂಹರಿಸಿದನು. ಚೊಚ್ಚಲು ಪಶುಗಳೂ ಸಂಹರಿಸಲ್ಪಟ್ಟವು. 30 ಆ ರಾತ್ರಿಯಲ್ಲಿ ಫರೋಹನೂ ಅವನ ಅಧಿಕಾರಿಗಳೂ ಈಜಿಪ್ಟಿನ ಜನರೆಲ್ಲರೂ ಎದ್ದರು. ಈಜಿಪ್ಟಿನಲ್ಲಿ ಮಹಾ ಗೋಳಾಟ ಉಂಟಾಯಿತು. ಯಾಕೆಂದರೆ ಸಾವಿಲ್ಲದ ಮನೆಯೇ ಇರಲಿಲ್ಲ.
ಇಸ್ರೇಲರಿಗೆ ಈಜಿಪ್ಟಿನಿಂದ ಬಿಡುಗಡೆ
31 ಆದ್ದರಿಂದ ಆ ರಾತ್ರಿ, ಫರೋಹನು ಮೋಶೆ ಆರೋನರನ್ನು ಕರೆಸಿ, “ನನ್ನ ಜನರನ್ನು ಬಿಟ್ಟುಹೋಗಿ. ನೀವು ಕೇಳಿಕೊಂಡಂತೆ ನೀವು ಮತ್ತು ನಿಮ್ಮ ಜನರು ಹೊರಟುಹೋಗಿ ಯೆಹೋವನನ್ನು ಆರಾಧಿಸಿ. 32 ನೀವು ಕೇಳಿಕೊಂಡಂತೆ ನಿಮ್ಮ ಕುರಿಗಳನ್ನೂ ದನಕರುಗಳನ್ನೂ ನಿಮ್ಮೊಂದಿಗೆ ತೆಗೆದುಕೊಂಡು ಹೋಗಿ! ನನ್ನನ್ನು ಆಶೀರ್ವದಿಸಿ!” ಎಂದು ಹೇಳಿದನು. 33 ಈಜಿಪ್ಟಿನ ಜನರು ಸಹ ತಮ್ಮನ್ನು ಬೇಗನೆ ಬಿಟ್ಟು ಹೋಗಬೇಕೆಂದು ಇಸ್ರೇಲರನ್ನು ಬೇಡಿಕೊಂಡು, “ನೀವು ಬಿಟ್ಟು ಹೋಗದಿದ್ದರೆ, ನಾವೆಲ್ಲಾ ಸಾಯುವೆವು” ಎಂದು ಹೇಳಿದರು.
34 ತಮ್ಮ ರೊಟ್ಟಿಗೆ ಹುಳಿಹಾಕಲು ಇಸ್ರೇಲರಿಗೆ ಸಮಯವಿರಲಿಲ್ಲ. ಅವರು ಹಿಟ್ಟಿನ ಮುದ್ದೆಯನ್ನು ಬಟ್ಟೆಯಲ್ಲಿ ಸುತ್ತಿ ಹೆಗಲಿನ ಮೇಲೆ ಹೊತ್ತುಕೊಂಡು ಹೋದರು. 35 ಅಲ್ಲದೆ ಮೋಶೆಯು ಹೇಳಿದಂತೆಯೇ ಇಸ್ರೇಲರು ತಮ್ಮ ನೆರೆಮನೆಯವರ ಬಳಿಗೆ ಹೋಗಿ ಬಟ್ಟೆಗಳನ್ನೂ ಬೆಳ್ಳಿಬಂಗಾರಗಳ ವಸ್ತುಗಳನ್ನೂ ಕೇಳಿಕೊಂಡರು. 36 ಈಜಿಪ್ಟಿನವರು ಇಸ್ರೇಲರಿಗೆ ದಯೆ ತೋರಿಸುವಂತೆ ಯೆಹೋವನು ಪ್ರೇರೇಪಿಸಿದ್ದರಿಂದ ಈಜಿಪ್ಟಿನವರು ತಮ್ಮ ಸ್ವತ್ತುಗಳನ್ನು ಇಸ್ರೇಲರಿಗೆ ಕೊಟ್ಟುಬಿಟ್ಟರು.
37 ಇಸ್ರೇಲರು ರಮ್ಸೇಸ್‌ನಿಂದ ಸುಕ್ಕೋತಿಗೆ ಪ್ರಯಾಣ ಮಾಡಿದರು. ಅವರಲ್ಲಿ ಸುಮಾರು ಆರು ಲಕ್ಷಮಂದಿ[c] ಗಂಡಸರಿದ್ದರು. (ಈ ಸಂಖ್ಯೆಯಲ್ಲಿ ಮಕ್ಕಳು ಮತ್ತು ಹೆಂಗಸರು ಸೇರಿಲ್ಲ.) 38 ಲೆಕ್ಕವಿಲ್ಲದಷ್ಟು ಕುರಿಗಳೂ ದನಕರುಗಳೂ ಇವರೊಂದಿಗಿದ್ದವು. ಇಸ್ರೇಲರಲ್ಲದ ಬೇರೆ ಜನರು ಸಹ ಇಸ್ರೇಲರೊಂದಿಗೆ ಈಜಿಪ್ಟಿನಿಂದ ಹೊರಟರು. 39 ರೊಟ್ಟಿಗೆ ಹುಳಿಹಾಕುವಷ್ಟು ಸಮಯವೂ ಜನರಿಗೆ ಇರಲಿಲ್ಲ; ಅವರು ತಮ್ಮ ಪ್ರಯಾಣಕ್ಕಾಗಿ ವಿಶೇಷ ಆಹಾರವನ್ನು ತಯಾರಿಸುವುದಕ್ಕೂ ಆಗಲಿಲ್ಲ. ಆದ್ದರಿಂದ ಅವರು ಹುಳಿಯಿಲ್ಲದ ರೊಟ್ಟಿ ಮಾಡಿ ತಮ್ಮೊಡನೆ ತೆಗೆದುಕೊಂಡು ಹೋದರು.
40 ಇಸ್ರೇಲರು ಈಜಿಪ್ಟಿನಲ್ಲಿ ನಾನೂರಮೂವತ್ತು ವರ್ಷ ವಾಸಿಸಿದರು. 41 ನಾನೂರಮೂವತ್ತು ವರ್ಷಗಳಾದ ನಂತರ, ಅದೇ ದಿನದಂದು ಯೆಹೋವನ ಸೈನ್ಯಗಳೆಲ್ಲಾ[d] ಈಜಿಪ್ಟನ್ನು[e] ಬಿಟ್ಟು ಹೊರಟವು. 42 ಆದ್ದರಿಂದ ಯೆಹೋವನು ಅವರನ್ನು ಸಂರಕ್ಷಿಸಿ ಈಜಿಪ್ಟಿನಿಂದ ಹೊರತಂದದ್ದನ್ನು ಜ್ಞಾಪಕಮಾಡುವ ಆ ರಾತ್ರಿ ಬಹು ವಿಶೇಷವಾದ ರಾತ್ರಿಯಾಗಿದೆ. ಇಸ್ರೇಲರೆಲ್ಲರೂ ಆ ರಾತ್ರಿಯನ್ನು ಯಾವಾಗಲೂ ಜ್ಞಾಪಿಸಿಕೊಳ್ಳುವರು.
43 ಯೆಹೋವನು ಮೋಶೆ ಆರೋನರಿಗೆ, “ಪಸ್ಕಹಬ್ಬದ ನಿಯಮಗಳು ಇಂತಿವೆ: ಯಾವ ಪರದೇಶಿಯೂ ಪಸ್ಕಹಬ್ಬದ ಊಟವನ್ನು ಮಾಡಬಾರದು. 44 ಆದರೆ ಸುನ್ನತಿ ಮಾಡಿಸಿಕೊಂಡಿರುವ ಗುಲಾಮನು ಪಸ್ಕಹಬ್ಬದ ಊಟವನ್ನು ಮಾಡಬಹುದು. 45 ಆದರೆ ನಿಮ್ಮ ದೇಶದಲ್ಲಿ ಕೇವಲ ವಾಸವಾಗಿರುವವರಾಗಲಿ ಕೂಲಿಯಾಳಾಗಲಿ ಪಸ್ಕಹಬ್ಬದ ಊಟ ಮಾಡಬಾರದು.
46 “ಪಸ್ಕಹಬ್ಬದ ಊಟವನ್ನು ಮನೆಯೊಳಗೆ ತಿನ್ನಬೇಕು. ಪಸ್ಕದ ಮಾಂಸವನ್ನು ಮನೆಯಿಂದ ಹೊರಗೆ ತೆಗೆದುಕೊಂಡು ಹೋಗಕೂಡದು. ಕುರಿಮರಿಯ ಎಲುಬುಗಳಲ್ಲಿ ಯಾವುದನ್ನೂ ಮುರಿಯಬಾರದು. 47 ಇಸ್ರೇಲರ ಇಡೀ ಸಮೂಹವು ಈ ಹಬ್ಬವನ್ನು ಆಚರಿಸಬೇಕು. 48 ನಿಮ್ಮ ಮಧ್ಯದಲ್ಲಿ ವಾಸವಾಗಿರುವ ಪರದೇಶದವನು ಯೆಹೋವನ ಪಸ್ಕ ಭೋಜನದಲ್ಲಿ ಪಾಲುಗಾರನಾಗಬೇಕೆಂದು ಬಯಸಿದರೆ ಅವನು ಸುನ್ನತಿ ಮಾಡಿಸಿಕೊಳ್ಳಬೇಕು. ಆಗ ಅವನು ಇಸ್ರೇಲಿನವನಾಗುವುದರಿಂದ ಭೋಜನದಲ್ಲಿ ಪಾಲುಗಾರನಾಗಬಹುದು. ಆದರೆ ಸುನ್ನತಿಯಾಗಿಲ್ಲದವನು ಪಸ್ಕದ ಊಟ ಮಾಡಕೂಡದು. 49 ಪ್ರತಿಯೊಬ್ಬರಿಗೂ ಇದೇ ನಿಯಮ ಅನ್ವಯಿಸುತ್ತದೆ. ಸ್ವದೇಶದವನಿಗೂ ನಿಮ್ಮಲ್ಲಿ ವಾಸವಾಗಿರುವ ಪರದೇಶದವನಿಗೂ ಒಂದೇ ನಿಯಮವಿರಬೇಕು” ಅಂದನು.
50 ಯೆಹೋವನು ಮೋಶೆ ಆರೋನರಿಗೆ ಆಜ್ಞಾಪಿಸಿದಂತೆಯೇ ಇಸ್ರೇಲರೆಲ್ಲರೂ ಮಾಡಿದರು. 51 ಆದ್ದರಿಂದ ಅದೇ ದಿನದಲ್ಲಿ ಯೆಹೋವನು ಇಸ್ರೇಲರನ್ನು ಈಜಿಪ್ಟ್ ದೇಶದಿಂದ ಜನರನ್ನು ಗುಂಪುಗುಂಪುಗಳಾಗಿ ಹೊರತಂದನು.
13 ಬಳಿಕ ಯೆಹೋವನು ಮೋಶೆಗೆ, 2 “ಇಸ್ರೇಲರಲ್ಲಿ ಹುಟ್ಟಿದ ಚೊಚ್ಚಲು ಗಂಡುಮಕ್ಕಳೆಲ್ಲಾ ನನಗೆ ಮೀಸಲಾಗಿರಬೇಕು; ಪ್ರತಿಯೊಬ್ಬ ಚೊಚ್ಚಲು ಮಗನು ನನ್ನವನೇ. ಪ್ರತಿಯೊಂದು ಚೊಚ್ಚಲು ಪಶುವು ನನ್ನದೇ” ಎಂದು ಹೇಳಿದನು.
3 ಮೋಶೆಯು ಜನರಿಗೆ, “ನೀವು ಈಜಿಪ್ಟಿನ ಗುಲಾಮತನದಿಂದ ಬಿಡುಗಡೆಯಾದ ಈ ದಿನವನ್ನು ಜ್ಞಾಪಕಮಾಡಿಕೊಳ್ಳಿರಿ. ಆದರೆ ಈ ದಿನದಲ್ಲಿ ಯೆಹೋವನು ತನ್ನ ಮಹಾಶಕ್ತಿಯಿಂದ ನಿಮ್ಮನ್ನು ಸ್ವತಂತ್ರರನ್ನಾಗಿ ಮಾಡಿದನು. ನೀವು ಹುಳಿಯಿರುವ ರೊಟ್ಟಿಯನ್ನು ತಿನ್ನಬಾರದು. 4 ಅಬೀಬ್ ತಿಂಗಳಿನ ಈ ದಿನದಲ್ಲಿ ನೀವು ಈಜಿಪ್ಟನ್ನು ಬಿಟ್ಟು ಹೊರಟಿರಿ. 5 ಆಗ ಯೆಹೋವನು ಒಂದು ವಿಶೇಷ ವಾಗ್ದಾನವನ್ನು ನಿಮ್ಮ ಪೂರ್ವಿಕರಿಗೆ ಮಾಡಿದನು. ಕಾನಾನ್ಯರು, ಹಿತ್ತಿಯರು, ಅಮೋರಿಯರು, ಹಿವ್ವಿಯರು ಮತ್ತು ಯೆಬೂಸಿಯರು ವಾಸಿಸುವ ಸಮೃದ್ಧಿಕರವಾದ ದೇಶವನ್ನು ನಿಮಗೆ ಕೊಡುವುದಾಗಿ ಯೆಹೋವನು ವಾಗ್ದಾನ ಮಾಡಿದನು. ಆತನು ನಿಮಗೆ ಆ ದೇಶವನ್ನು ಕೊಟ್ಟಾಗ ಪ್ರತಿವರ್ಷದ ಮೊದಲನೆಯ ತಿಂಗಳ ಈ ದಿನವನ್ನು ಆರಾಧನೆಯ ವಿಶೇಷ ದಿನವನ್ನಾಗಿ ಇಟ್ಟುಕೊಳ್ಳಬೇಕು.
6 “ಏಳು ದಿನಗಳವರೆಗೆ ನೀವು ಕೇವಲ ಹುಳಿಯಿಲ್ಲದ ರೊಟ್ಟಿಯನ್ನೇ ತಿನ್ನಬೇಕು. ಏಳನೆಯ ದಿನದಲ್ಲಿ ಯೊಹೋವನ ಘನತೆಗಾಗಿ ಒಂದು ದೊಡ್ಡ ಹಬ್ಬ ಮಾಡಬೇಕು. 7 ಆದ್ದರಿಂದ ಹುಳಿಯಿರುವ ರೊಟ್ಟಿಯನ್ನು ಏಳು ದಿನಗಳವರೆಗೆ ತಿನ್ನಬಾರದು. ನಿಮ್ಮ ದೇಶದಲ್ಲಿ ಹುಳಿಯಿರುವ ರೊಟ್ಟಿ ಇರಲೇಕೂಡದು. 8 ಈ ದಿನದಲ್ಲಿ ನೀವು ನಿಮ್ಮ ಮಕ್ಕಳಿಗೆ, ‘ಯೆಹೋವನು ನಮ್ಮನ್ನು ಈಜಿಪ್ಟಿನಿಂದ ಬಿಡಿಸಿಕೊಂಡು ಬಂದದ್ದರಿಂದ ನಾವು ಈ ಹಬ್ಬವನ್ನು ಮಾಡುತ್ತಿದ್ದೇವೆ’ ಎಂದು ಹೇಳಬೇಕು.
9 “ಈ ಹಬ್ಬವು ನಿಮ್ಮ ಕೈಗಳಲ್ಲಿ ಜ್ಞಾಪಕಪಟ್ಟಿಯಂತಿದ್ದು ಯೆಹೋವನು ತನ್ನ ಮಹಾಶಕ್ತಿಯಿಂದ ನಿಮ್ಮನ್ನು ಈಜಿಪ್ಟಿನಿಂದ ಬಿಡಿಸಿದ್ದನ್ನು ಮತ್ತು ನಿಮಗೆ ಆತನು ನೀಡಿದ ಉಪದೇಶಗಳನ್ನು ನೆನಪಿಗೆ ತರುತ್ತದೆ. 10 ಆದ್ದರಿಂದ ಪ್ರತಿವರ್ಷ ನಿಯಮಿತವಾದ ಕಾಲದಲ್ಲಿ ನೀವು ಈ ಹಬ್ಬವನ್ನು ಆಚರಿಸಬೇಕು.
11 “ಯೆಹೋವನು ನಿಮಗೆ ಕೊಡುವುದಾಗಿ ವಾಗ್ದಾನ ಮಾಡಿದ ದೇಶಕ್ಕೆ ನಿಮ್ಮನ್ನು ನಡಿಸುವನು. ಈಗ ಅಲ್ಲಿ ಕಾನಾನ್ಯರು ವಾಸವಾಗಿದ್ದಾರೆ. ಆದರೆ ದೇವರು ಆ ದೇಶವನ್ನು ನಿಮಗೆ ಕೊಡುವುದಾಗಿ ನಿಮ್ಮ ಪೂರ್ವಿಕರಿಗೆ ವಾಗ್ದಾನ ಮಾಡಿದನು. ದೇವರು ಆ ದೇಶವನ್ನು ನಿಮಗೆ ಕೊಟ್ಟನಂತರ 12 ನೀವು ನಿಮ್ಮ ಚೊಚ್ಚಲು ಗಂಡುಮಕ್ಕಳನ್ನು ಆತನಿಗಾಗಿ ಮೀಸಲಿಡಬೇಕು. 13 ಚೊಚ್ಚಲು ಕತ್ತೆಮರಿಯನ್ನು ನೀವು ಯೆಹೋವನಿಂದ ಬಿಡಿಸಿಕೊಳ್ಳಬೇಕೆಂದಿದ್ದರೆ ಅದಕ್ಕೆ ಬದಲಾಗಿ ಒಂದು ಕುರಿಮರಿಯನ್ನು ಕೊಡಬೇಕು. ಕತ್ತೆಮರಿಯನ್ನು ಬಿಡಿಸಿಕೊಳ್ಳಲು ಇಷ್ಟಪಡದಿದ್ದರೆ, ಅದರ ಕುತ್ತಿಗೆಯನ್ನು ಮುರಿದು ಕೊಲ್ಲಬೇಕು. ಆದರೆ ಚೊಚ್ಚಲು ಗಂಡುಮಕ್ಕಳನ್ನೆಲ್ಲಾ ಯೆಹೋವನಿಂದ ಬಿಡಿಸಿಕೊಳ್ಳಲೇಬೇಕು.
14 “ಮುಂದಿನ ಕಾಲದಲ್ಲಿ ನಿಮ್ಮ ಮಕ್ಕಳು, ‘ನೀವು ಹೀಗೇಕೆ ಮಾಡುತ್ತೀರಿ?’ ಎಂದು ಕೇಳುವಾಗ ನೀವು, ‘ಯೆಹೋವನು ನಮ್ಮನ್ನು ಈಜಿಪ್ಟಿನಿಂದ ತನ್ನ ಮಹಾಶಕ್ತಿಯಿಂದ ರಕ್ಷಿಸಿದನು. ನಾವು ಅಲ್ಲಿ ಗುಲಾಮರಾಗಿದ್ದೆವು, ಆದರೆ ಯೆಹೋವನು ನಮ್ಮನ್ನು ಇಲ್ಲಿಗೆ ಕರೆದುಕೊಂಡು ಬಂದನು. 15 ಈಜಿಪ್ಟಿನಲ್ಲಿ ಫರೋಹನು ತನ್ನ ಹೃದಯವನ್ನು ಕಠಿಣಪಡಿಸಿಕೊಂಡು ನಮ್ಮನ್ನು ಕಳುಹಿಸಿಕೊಡಲಿಲ್ಲ. ಆಗ ಯೆಹೋವನು ಆ ದೇಶದ ಚೊಚ್ಚಲು ಗಂಡುಮಕ್ಕಳನ್ನೆಲ್ಲಾ ಸಂಹರಿಸಿದನು. (ಯೆಹೋವನು ಚೊಚ್ಚಲು ಪಶುಗಳನ್ನು ಮತ್ತು ಚೊಚ್ಚಲು ಗಂಡುಮಕ್ಕಳನ್ನು ಕೊಂದನು.) ಆದ್ದರಿಂದ ನಾವು ಚೊಚ್ಚಲಾದ ಪ್ರತಿಯೊಂದು ಗಂಡುಪಶುವನ್ನು ಯೆಹೋವನಿಗೆ ಯಜ್ಞವಾಗಿ ಅರ್ಪಿಸುತ್ತೇವೆ. ಈ ಕಾರಣದಿಂದಲೇ, ನಮ್ಮ ಪ್ರತಿಯೊಂದು ಗಂಡುಮಗುವನ್ನು ಯೆಹೋವನಿಂದ ಮತ್ತೆ ಖರೀದಿ ಮಾಡುತ್ತೇವೆ’ ಎಂದು ಹೇಳುವಿರಿ. 16 ಇದು ನಿಮ್ಮ ಕೈಗೆ ದಾರ ಕಟ್ಟಿದಂತಿರುತ್ತದೆ; ನಿಮ್ಮ ಕಣ್ಣುಗಳ ಮುಂದೆ ಒಂದು ಚಿಹ್ನೆಯಂತೆ ಇರುತ್ತದೆ.[f] ಯೆಹೋವನು ತನ್ನ ಮಹಾಶಕ್ತಿಯಿಂದ ನಮ್ಮನ್ನು ಈಜಿಪ್ಟಿನಿಂದ ಹೊರಗೆ ಕರೆದುಕೊಂಡು ಬಂದನೆಂಬುದನ್ನು ಜ್ಞಾಪಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ.”
ಈಜಿಪ್ಟಿನಿಂದ ಪ್ರಯಾಣ
17 ಇಸ್ರೇಲರು ಈಜಿಪ್ಟನ್ನು ಬಿಟ್ಟುಹೋಗುವಂತೆ ಫರೋಹನು ಅನುಮತಿ ನೀಡಿದನು. ಇಸ್ರೇಲರು ಫಿಲಿಷ್ಟಿಯರ ದೇಶದ ಮೂಲಕ ಹಾದುಹೋಗುವ ರಸ್ತೆಯಲ್ಲಿ ಹೋಗಲು ಯೆಹೋವನು ಅನುಮತಿ ನೀಡಲಿಲ್ಲ. ಸಮುದ್ರದ ಮೂಲಕ ಹಾದುಹೋಗುವ ಆ ರಸ್ತೆ ಬಹಳ ಹತ್ತಿರವಾಗಿತ್ತು. ಆದರೆ ಯೆಹೋವನು, “ಇಸ್ರೇಲರು ಆ ದಾರಿಯಲ್ಲಿ ಹೋದರೆ, ಯುದ್ಧಮಾಡಬೇಕಾಗುವುದು. ಆಗ ಅವರು ತಮ್ಮ ಮನಸ್ಸುಗಳನ್ನು ಬದಲಾಯಿಸಿ ಈಜಿಪ್ಟಿಗೆ ಹಿಂತಿರುಗಬಹುದು” ಅಂದುಕೊಂಡನು. 18 ಆದ್ದರಿಂದ ಯೆಹೋವನು ಅವರನ್ನು ಕೆಂಪು ಸಮುದ್ರದ ಅರಣ್ಯದ ಮೂಲಕ ನಡೆಸಿದನು. ಇಸ್ರೇಲರು ಈಜಿಪ್ಟನ್ನು ಬಿಟ್ಟಾಗ ಯುದ್ಧವಸ್ತ್ರಗಳನ್ನು ಧರಿಸಿಕೊಂಡಿದ್ದರು.
ಯೋಸೇಫನ ಎಲುಬುಗಳನ್ನು ತೆಗೆದುಕೊಂಡರು
19 ಮೋಶೆಯು ತನ್ನೊಡನೆ ಯೋಸೇಫನ ಎಲುಬುಗಳನ್ನು ತೆಗೆದುಕೊಂಡು ಹೋದನು. (ಯೋಸೇಫನು ಸಾಯುವ ಮೊದಲು, ತನಗಾಗಿ ಈ ಕಾರ್ಯವನ್ನು ಮಾಡುವಂತೆ ಇಸ್ರೇಲನ ಪುತ್ರರಿಂದ ಪ್ರಮಾಣ ಮಾಡಿಸಿದ್ದನು. ಯೋಸೇಫನು ಅವರಿಗೆ, “ಯೆಹೋವನು ನಿಮ್ಮನ್ನು ರಕ್ಷಿಸುವಾಗ, ಈಜಿಪ್ಟಿನಿಂದ ನನ್ನ ಎಲುಬುಗಳನ್ನು ತೆಗೆದುಕೊಂಡು ಹೋಗಲು ಮರೆಯಬೇಡಿ” ಎಂದು ಹೇಳಿದ್ದನು.)
ಯೆಹೋವನು ತನ್ನ ಜನರನ್ನು ಮುನ್ನಡೆಸಿದನು
20 ಇಸ್ರೇಲರು ಸುಕ್ಕೋತನ್ನು ಬಿಟ್ಟು ಏತಾಮಿನಲ್ಲಿ ಪಾಳೆಯ ಹಾಕಿದರು. ಏತಾಮು ಮರುಭೂಮಿಗೆ ಹತ್ತಿರವಾಗಿತ್ತು. 21 ಯೆಹೋವನು ದಾರಿಯನ್ನು ತೋರಿಸಿದನು. ಹಗಲಿನಲ್ಲಿ ಜನರನ್ನು ನಡಿಸಲು ಯೆಹೋವನು ಎತ್ತರವಾದ ಮೇಘಸ್ತಂಭವನ್ನು ಉಪಯೋಗಿಸಿದನು; ರಾತ್ರಿ ವೇಳೆಯಲ್ಲಿ ದಾರಿಯನ್ನು ತೋರಿಸಲು ಯೆಹೋವನು ಎತ್ತರವಾದ ಅಗ್ನಿಸ್ತಂಭವನ್ನು ಉಪಯೋಗಿಸಿದನು. ಈ ಬೆಂಕಿಯು ಅವರಿಗೆ ಬೆಳಕು ಕೊಟ್ಟಿದ್ದರಿಂದ ಅವರು ರಾತ್ರಿಯಲ್ಲಿ ಪ್ರಯಾಣ ಮಾಡಲು ಸಾಧ್ಯವಾಯಿತು. 22 ಹಗಲಿನಲ್ಲಿ ಎತ್ತರವಾದ ಮೇಘಸ್ತಂಭವೂ ರಾತ್ರಿವೇಳೆಯಲ್ಲಿ ಅಗ್ನಿಸ್ತಂಭವೂ ಯಾವಾಗಲೂ ಅವರ ಮುಂಭಾಗದಲ್ಲಿ ಅವರೊಂದಿಗಿದ್ದವು.
ಯೇಸುವನ್ನು ಪರೀಕ್ಷಿಸಲು ಯೆಹೂದ್ಯ ನಾಯಕರ ಪ್ರಯತ್ನ
(ಮಾರ್ಕ 8:11-13; ಲೂಕ 12:54-56)
16 ಫರಿಸಾಯರು ಮತ್ತು ಸದ್ದುಕಾಯರು ಯೇಸುವಿನ ಬಳಿಗೆ ಬಂದರು. ಅವರು ಯೇಸುವನ್ನು ಪರೀಕ್ಷಿಸಲು, “ನೀನು ದೇವರಿಂದ ಬಂದವನೆಂಬುದನ್ನು ನಿರೂಪಿಸಲು ಒಂದು ಅದ್ಭುತಕಾರ್ಯವನ್ನು ಮಾಡಿ ತೋರಿಸು” ಎಂದು ಕೇಳಿದರು.
2 ಯೇಸು, “ಸೂರ್ಯನು ಮುಳುಗುವಾಗ ಹವಾಮಾನ ಹೇಗಿರುತ್ತದೆ ಎಂಬುದು ನಿಮಗೆ ತಿಳಿದಿದೆ. ಆಕಾಶವು ಕೆಂಪಾಗಿದ್ದರೆ, ನಮಗೆ ಒಳ್ಳೆಯ ಹವಾಮಾನವಿರುತ್ತದೆ ಎಂದು ಹೇಳುತ್ತೀರಿ. 3 ಬೆಳಿಗ್ಗೆ ಸೂರ್ಯೋದಯವನ್ನು ಗಮನಿಸುತ್ತೀರಿ. ಆಕಾಶವು ಕಪ್ಪಾಗಿದ್ದರೆ ಅಥವಾ ಕೆಂಪಾಗಿದ್ದರೆ, ಈ ದಿನ ಮಳೆ ಬರುತ್ತದೆ ಎಂದು ಹೇಳುತ್ತೀರಿ. ಇವುಗಳು ಹವಾಮಾನದ ಗುರುತುಗಳಾಗಿವೆ. ನೀವು ಈ ಗುರುತುಗಳನ್ನು ಕಂಡು ಅವುಗಳ ಅರ್ಥವನ್ನು ತಿಳಿದುಕೊಳ್ಳುತ್ತೀರಿ. ಅದೇ ರೀತಿಯಲ್ಲಿ ಈಗ ನೀವು ನೋಡುತ್ತಿರುವ ಇಂದಿನ ಸಂಗತಿಗಳು ಸಹ ಗುರುತುಗಳಾಗಿವೆ. ಆದರೆ ನಿಮಗೆ ಈ ಗುರುತುಗಳ ಅರ್ಥವು ಗೊತ್ತಿಲ್ಲ. 4 ಕೆಟ್ಟವರಾದ ಮತ್ತು ಪಾಪಿಗಳಾದ ಜನರು ಸೂಚನೆಗಾಗಿ ಒಂದು ಅದ್ಭುತಕಾರ್ಯವನ್ನು ಅಪೇಕ್ಷಿಸುತ್ತಾರೆ. ಅವರಿಗೆ ಯೋನನಲ್ಲಾದ ಸೂಚಕಕಾರ್ಯವೊಂದೇ[a] ಹೊರತು ಬೇರೆ ಯಾವ ಸೂಚಕಕಾರ್ಯವೂ ದೊರೆಯುವುದಿಲ್ಲ” ಎಂದು ಉತ್ತರಕೊಟ್ಟನು. ಬಳಿಕ ಯೇಸು ಆ ಸ್ಥಳವನ್ನು ಬಿಟ್ಟು ಹೊರಟುಹೋದನು.
ಯೆಹೂದ್ಯನಾಯಕರ ಬಗ್ಗೆ ಯೇಸು ನೀಡಿದ ಎಚ್ಚರಿಕೆ
(ಮಾರ್ಕ 8:14-21)
5 ಯೇಸು ಮತ್ತು ಆತನ ಶಿಷ್ಯರು ಸರೋವರವನ್ನು[b] ದಾಟಿ ಹೋದರು. ಆದರೆ ಶಿಷ್ಯರು ರೊಟ್ಟಿಯನ್ನು ತರಲು ಮರೆತುಬಿಟ್ಟರು. 6 ಯೇಸು ಶಿಷ್ಯರಿಗೆ, “ಎಚ್ಚರಿಕೆಯಿಂದಿರಿ! ಫರಿಸಾಯರ ಮತ್ತು ಸದ್ದುಕಾಯರ ಹುಳಿಗೆ ಒಳಗಾಗಬೇಡಿ” ಎಂದು ಹೇಳಿದನು.
7 ಶಿಷ್ಯರು ಇದರ ಅರ್ಥವನ್ನು ಚರ್ಚಿಸಿದರು. ಅವರು, “ನಾವು ರೊಟ್ಟಿ ತರಲು ಮರೆತುಬಿಟ್ಟದ್ದಕ್ಕಾಗಿ ಯೇಸು ಹೀಗೆ ಹೇಳಿರಬಹುದೆ?” ಎಂದು ಮಾತಾಡಿಕೊಂಡರು.
8 ಶಿಷ್ಯರು ಈ ವಿಷಯವನ್ನು ಚರ್ಚಿಸುತ್ತಿರುವುದು ಯೇಸುವಿಗೆ ತಿಳಿದಿತ್ತು. ಆದ್ದರಿಂದ ಯೇಸು ಅವರಿಗೆ, “ರೊಟ್ಟಿ ಇಲ್ಲವಲ್ಲಾ ಎಂಬ ವಿಷಯದಲ್ಲಿ ನೀವು ಮಾತಾಡಿಕೊಳ್ಳುತ್ತಿರುವುದೇಕೆ? ಅಲ್ಪ ವಿಶ್ವಾಸಿಗಳೇ, 9 ನೀವಿನ್ನೂ ಅರ್ಥಮಾಡಿಕೊಳ್ಳಲಿಲ್ಲವೇ? ಐದು ರೊಟ್ಟಿಗಳಿಂದ ಐದು ಸಾವಿರ ಜನರಿಗೆ ಊಟ ಮಾಡಿಸಿದ್ದು ನಿಮಗೆ ನೆನಪಿಲ್ಲವೇ? ಜನರು ಊಟ ಮಾಡಿದ ಮೇಲೆ ನೀವು ಅನೇಕ ಬುಟ್ಟಿಗಳಲ್ಲಿ ರೊಟ್ಟಿಗಳನ್ನು ತುಂಬಿಸಿದ್ದು ನಿಮಗೆ ನೆನಪಿಲ್ಲವೇ? 10 ಏಳು ರೊಟ್ಟಿಗಳ ತುಂಡುಗಳನ್ನು ನಾಲ್ಕು ಸಾವಿರ ಜನರಿಗೆ ಊಟ ಮಾಡಿಸಿದ್ದು ನಿಮಗೆ ನೆನಪಿಲ್ಲವೇ? ಜನರು ತಿಂದು ಮುಗಿಸಿದ ಮೇಲೆ ನೀವು ಅನೇಕ ಬುಟ್ಟಿಗಳಲ್ಲಿ ರೊಟ್ಟಿಗಳನ್ನು ತುಂಬಿಸಿದ್ದು ನಿಮಗೆ ನೆನಪಿಲ್ಲವೇ? 11 ಆದ್ದರಿಂದ ನಾನು ನಿಮಗೆ ಹೇಳಿದ್ದು ರೊಟ್ಟಿಯ ಕುರಿತಲ್ಲ. ನೀವು ಇದನ್ನು ಅರ್ಥ ಮಾಡಿಕೊಳ್ಳುವುದಿಲ್ಲವೇಕೆ? ಫರಿಸಾಯರು ಮತ್ತು ಸದ್ದುಕಾಯರ ಹುಳಿಗೆ (ಕೆಟ್ಟ ಪ್ರಭಾವಕ್ಕೆ) ಒಳಗಾಗದಂತೆ ನೀವು ಎಚ್ಚರಿಕೆಯಿಂದಿರಬೇಕೆಂದು ನಾನು ನಿಮ್ಮನ್ನು ಎಚ್ಚರಿಸಿದೆನು” ಅಂದನು.
12 ಆಗ ಶಿಷ್ಯರು ಯೇಸು ಹೇಳಿದ್ದನ್ನು ಅರ್ಥಮಾಡಿಕೊಂಡರು. ಆತನು ಅವರಿಗೆ ರೊಟ್ಟಿಯಲ್ಲಿ ಬೆರೆಸಿದ್ದ ಹುಳಿಯನ್ನು ಕುರಿತು ಎಚ್ಚರಿಕೆಯಾಗಿರಬೇಕೆಂದು ಹೇಳಲಿಲ್ಲ. ಫರಿಸಾಯರು ಮತ್ತು ಸದ್ದುಕಾಯರ ಬೋಧನೆಯ ಪ್ರಭಾವಕ್ಕೆ ಒಳಗಾಗದಂತೆ ಎಚ್ಚರಿಕೆಯಾಗಿರಬೇಕೆಂದು ಹೇಳಿದ್ದನು.
ಯೇಸುವೇ ಕ್ರಿಸ್ತನೆಂದು ಪೇತ್ರನ ಪ್ರಕಟನೆ
(ಮಾರ್ಕ 8:27-30; ಲೂಕ 9:18-21)
13 ಯೇಸು ಫಿಲಿಪ್ಪನ ಸೆಜರೇಯ ಎಂಬ ಪ್ರಾಂತ್ಯಕ್ಕೆ ಹೋದನು. ಯೇಸು ತನ್ನ ಶಿಷ್ಯರಿಗೆ, “ಮನುಷ್ಯಕುಮಾರನಾದ ನನ್ನನ್ನು ಜನರು ಯಾರೆಂದು ಹೇಳುತ್ತಾರೆ?” ಎಂದು ಕೇಳಿದನು.
14 ಶಿಷ್ಯರು, “ಕೆಲವರು ‘ಸ್ನಾನಿಕ ಯೋಹಾನ’ನೆಂದು ಹೇಳುತ್ತಾರೆ. ಇನ್ನು ಕೆಲವರು ‘ಎಲೀಯ’ನೆಂದು ಹೇಳುತ್ತಾರೆ. ಮತ್ತೆ ಕೆಲವರು ‘ಯೆರೆಮೀಯ’ನೆಂದು ಇಲ್ಲವೆ ‘ಪ್ರವಾದಿಗಳಲ್ಲಿ ಒಬ್ಬ’ನೆಂದು ಹೇಳುತ್ತಾರೆ” ಎಂದು ಉತ್ತರಕೊಟ್ಟರು.
15 ಅದಕ್ಕೆ ಆತನು, “ನೀವು ನನ್ನನ್ನು ಯಾರೆಂದು ಹೇಳುತ್ತೀರಿ?” ಎಂದು ಕೇಳಿದನು.
16 ಸೀಮೋನ್ ಪೇತ್ರನು, “ನೀನೇ ಬರಬೇಕಾಗಿರುವ ಕ್ರಿಸ್ತನು. ನೀನೇ ಜೀವಸ್ವರೂಪನಾದ ದೇವರ ಮಗನು” ಎಂದು ಉತ್ತರಕೊಟ್ಟನು.
17 ಯೇಸು, “ಯೋನನ ಮಗನಾದ ಸೀಮೋನನೇ ನೀನು ಧನ್ಯನು. ಅದನ್ನು ನಿನಗೆ ತಿಳಿಸಿಕೊಟ್ಟವನು ಯಾವ ಮನುಷ್ಯನೂ ಅಲ್ಲ. ಪರಲೋಕದಲ್ಲಿರುವ ನನ್ನ ತಂದೆಯೇ ನಿನಗೆ ತಿಳಿಸಿಕೊಟ್ಟನು. 18 ಆದ್ದರಿಂದ ನಾನು ನಿನಗೆ ಹೇಳುವುದೇನೆಂದರೆ, ನೀನೇ ಪೇತ್ರ.[c] ನಾನು ಈ ಬಂಡೆಯ ಮೇಲೆ ನನ್ನ ಸಭೆಯನ್ನು ಕಟ್ಟುತ್ತೇನೆ. ಪಾತಾಳಲೋಕದ ಬಲವು ನನ್ನ ಸಭೆಯನ್ನು ಸೋಲಿಸಲಾರದು. 19 ಪರಲೋಕರಾಜ್ಯದ ಬೀಗದ ಕೈಗಳನ್ನು ನಾನು ನಿನಗೆ ಕೊಡುತ್ತೇನೆ. ನೀನು ಭೂಲೋಕದಲ್ಲಿ ನೀಡುವ ನ್ಯಾಯತೀರ್ಪು ದೇವರ ನ್ಯಾಯತೀರ್ಪಾಗಿರುತ್ತದೆ. ನೀನು ಭೂಲೋಕದಲ್ಲಿ ನೀಡುವ ಕ್ಷಮೆಯು ದೇವರ ಕ್ಷಮೆಯಾಗಿರುತ್ತದೆ” ಎಂದು ಉತ್ತರಿಸಿದನು.
20 ಬಳಿಕ ಯೇಸು ತನ್ನ ಶಿಷ್ಯರಿಗೆ, ತಾನು ಕ್ರಿಸ್ತನೆಂಬುದನ್ನು ಯಾರಿಗೂ ಹೇಳಕೂಡದೆಂದು ಎಚ್ಚರಿಕೆ ಕೊಟ್ಟನು.
ಯೇಸು ತನ್ನ ಮರಣದ ಕುರಿತು ಮುಂತಿಳಿಸಿದ್ದು
(ಮಾರ್ಕ 8:31–9:1; ಲೂಕ 9:22-27)
21 ಆ ಸಮಯದಲ್ಲಿ ಯೇಸು ತಾನು ಜೆರುಸಲೇಮಿಗೆ ಹೋಗಬೇಕೆಂದು ಮತ್ತು ಅಲ್ಲಿ ಯೆಹೂದ್ಯರ ಹಿರಿಯ ನಾಯಕರಿಂದಲೂ ಮಹಾಯಾಜಕರಿಂದಲೂ ಮತ್ತು ಧರ್ಮೋಪದೇಶಕರಿಂದಲೂ ತಾನು ಅನೇಕ ಕಷ್ಟಗಳನ್ನು ಅನುಭವಿಸಿ ಕೊಲ್ಲಲ್ಪಟ್ಟು ಮೂರನೆಯ ದಿನದಲ್ಲಿ ಸತ್ತವರೊಳಗಿಂದ ಜೀವಂತವಾಗಿ ಎದ್ದುಬರಬೇಕಾಗಿದೆ ಎಂದು ತನ್ನ ಶಿಷ್ಯರಿಗೆ ವಿವರಿಸಿ ಹೇಳಿದನು.
22 ಆಗ ಪೇತ್ರನು ಯೇಸುವನ್ನು ಸ್ವಲ್ಪ ದೂರದಲ್ಲಿ ಕರೆದೊಯ್ದು, “ದೇವರು ನಿನ್ನನ್ನು ಕಾಪಾಡಲಿ, ನಿನಗೆಂದಿಗೂ ಹಾಗೆ ಸಂಭವಿಸದಿರಲಿ!” ಎಂದು ಪ್ರತಿಭಟಿಸಿದನು.
23 ಆಗ ಯೇಸು ಪೇತ್ರನಿಗೆ, “ಸೈತಾನನೇ, ಇಲ್ಲಿಂದ ತೊಲಗು! ನೀನು ನನಗೆ ಅಡ್ಡಿಯಾಗಿರುವೆ! ನಿನ್ನ ಯೋಚನೆ ಮನುಷ್ಯರ ಯೋಚನೆಯೇ ಹೊರತು ದೇವರದಲ್ಲ” ಎಂದು ಹೇಳಿದನು.
24 ಬಳಿಕ ಯೇಸು ತನ್ನ ಶಿಷ್ಯರಿಗೆ, “ನನ್ನನ್ನು ಹಿಂಬಾಲಿಸಲು ಅಪೇಕ್ಷಿಸುವವನು ತನಗೆ ಇಷ್ಟವಾದದ್ದನ್ನು ತ್ಯಜಿಸಬೇಕು. ಅವನು ತನಗೆ ಕೊಟ್ಟಿರುವ ಶಿಲುಬೆಯನ್ನು (ಸಂಕಟ) ಸ್ವೀಕರಿಸಿಕೊಂಡು ನನ್ನನ್ನು ಹಿಂಬಾಲಿಸಬೇಕು. 25 ತನ್ನ ಪ್ರಾಣವನ್ನು ಉಳಿಸಿಕೊಳ್ಳಬೇಕೆಂದಿರುವವನು ಅದನ್ನು ಕಳೆದುಕೊಳ್ಳುವನು. ನನಗಾಗಿ ತನ್ನ ಪ್ರಾಣವನ್ನು ಕೊಡುವ ಪ್ರತಿಯೊಬ್ಬನೂ ಅದನ್ನು ಉಳಿಸಿಕೊಳ್ಳುವನು. 26 ಒಬ್ಬನು ಪ್ರಪಂಚವನ್ನೆಲ್ಲಾ ಗಳಿಸಿಕೊಂಡು ತನ್ನ ಆತ್ಮವನ್ನೇ ಕಳೆದುಕೊಂಡರೆ ಅದರಿಂದ ಅವನಿಗೇನು ಪ್ರಯೋಜನ? ಮನುಷ್ಯನು ತನ್ನ ಆತ್ಮವನ್ನು ಕೊಂಡುಕೊಳ್ಳಲು ಏನನ್ನು ತಾನೇ ಕೊಡಬಲ್ಲನು? 27 ಮನುಷ್ಯಕುಮಾರನು ತನ್ನ ತಂದೆಯ ಮಹಿಮೆಯೊಡನೆ ಮತ್ತು ತನ್ನ ದೂತರೊಡನೆ ಮರಳಿ ಬಂದು ಪ್ರತಿಯೊಬ್ಬನಿಗೂ ಅವನವನ ಕಾರ್ಯಗಳಿಗೆ ತಕ್ಕಂತೆ ಪ್ರತಿಫಲ ಕೊಡುವನು. 28 ನಾನು ನಿಮಗೆ ಸತ್ಯವನ್ನೇ ಹೇಳುತ್ತೇನೆ. ಈಗ ಇಲ್ಲಿ ನಿಂತಿರುವ ಕೆಲವರು, ಮನುಷ್ಯಕುಮಾರನು ತನ್ನ ರಾಜ್ಯದೊಡನೆ ಬರುವುದನ್ನು ನೋಡುವ ತನಕ ಸಾಯುವುದಿಲ್ಲ” ಎಂದು ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International