Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಆದಿಕಾಂಡ 39-40

ಈಜಿಪ್ಟಿನಲ್ಲಿ ಯೋಸೇಫನನ್ನು ಪೋಟೀಫರನಿಗೆ ಮಾರಿದ್ದು

39 ಯೋಸೇಫನನ್ನು ಖರೀದಿಮಾಡಿದ ವ್ಯಾಪಾರಿಗಳು ಅವನನ್ನು ಈಜಿಪ್ಟಿಗೆ ತೆಗೆದುಕೊಂಡು ಬಂದು ಫರೋಹನ ಕಾವಲುಗಾರರ ನಾಯಕನಾದ ಪೋಟೀಫರನಿಗೆ ಮಾರಿದರು. ಆದರೆ ಯೆಹೋವನ ಸಹಾಯದಿಂದ ಯೋಸೇಫನು ಏಳಿಗೆಯಾಗಿ ತನ್ನ ಯಜಮಾನನಾದ ಈಜಿಪ್ಟಿನ ಪೋಟೀಫರನ ಮನೆಯಲ್ಲಿ ಸೇವಕನಾದನು.

ಯೆಹೋವನು ಯೋಸೇಫನ ಸಂಗಡವಿದ್ದು ಅವನನ್ನು ಎಲ್ಲಾ ಕೆಲಸಕಾರ್ಯಗಳಲ್ಲಿ ಯಶಸ್ವಿಯಾಗುವಂತೆ ಮಾಡುತ್ತಿರುವುದನ್ನು ಪೋಟೀಫರನು ಗಮನಿಸಿದನು. ಪೋಟೀಫರನು ಯೋಸೇಫನ ವಿಷಯದಲ್ಲಿ ತುಂಬ ಸಂತೋಷಪಟ್ಟು ಸ್ವಂತ ಸೇವಕನನ್ನಾಗಿ ಮಾಡಿಕೊಂಡನು; ಅಲ್ಲದೆ ಮನೆಯ ಮೇಲ್ವಿಚಾರಣೆಯನ್ನು ಒಪ್ಪಿಸಿಕೊಟ್ಟನು; ತನ್ನ ಆಸ್ತಿಗೆಲ್ಲಾ ಮೇಲಾಧಿಕಾರಿಯನ್ನಾಗಿ ನೇಮಿಸಿದನು. ಪೋಟೀಫರನು ಯೋಸೇಫನಿಗೆ ಮನೆಯ ಮೇಲ್ವಿಚಾರಣೆಯನ್ನು ಕೊಟ್ಟು ಆಸ್ತಿಗೆ ಅವನನ್ನು ಜವಾಬ್ದಾರನನ್ನಾಗಿ ಮಾಡಿದ ಮೇಲೆ ಯೆಹೋವನು ಪೋಟೀಫರನ ಮನೆಯನ್ನೂ ಬೆಳೆಗಳನ್ನೂ ಆಸ್ತಿಯನ್ನೂ ಆಶೀರ್ವದಿಸಿದನು. ಆದ್ದರಿಂದ ಪೋಟೀಫರನು ತಾನು ಊಟಮಾಡುವ ಆಹಾರವೊಂದನ್ನು ಬಿಟ್ಟು ಉಳಿದೆಲ್ಲದರ ಜವಾಬ್ದಾರಿಯನ್ನು ಯೋಸೇಫನಿಗೆ ವಹಿಸಿ ನಿಶ್ಚಿಂತೆಯಿಂದ ಇದ್ದನು.

ಯೋಸೇಫನು ಪೋಟೀಫರನ ಹೆಂಡತಿಯನ್ನು ತಿರಸ್ಕರಿಸಿದ್ದು

ಯೋಸೇಫನು ನೋಡಲು ಸುಂದರನಾಗಿಯೂ ರೂಪವಂತನಾಗಿಯೂ ಇದ್ದನು. ಸ್ವಲ್ಪ ಕಾಲದನಂತರ, ಯೋಸೇಫನ ಒಡೆಯನ ಹೆಂಡತಿಯು ಯೋಸೇಫನ ಮೇಲೆ ಆಸೆಪಟ್ಟಳು. ಒಂದು ದಿನ ಆಕೆ ಅವನಿಗೆ, “ನನ್ನೊಂದಿಗೆ ಮಲಗಿಕೊ” ಎಂದು ಹೇಳಿದಳು.

ಆದರೆ ಯೋಸೇಫನು ತಿರಸ್ಕರಿಸಿದನು. ಅವನು, “ನನ್ನ ಧಣಿಯು ಈ ಮನೆಯ ಜವಾಬ್ದಾರಿಕೆಗಳನ್ನೆಲ್ಲಾ ನನಗೆ ವಹಿಸಿ ನಿಶ್ಚಿಂತೆಯಿಂದಿದ್ದಾನೆ. ನನ್ನ ಧಣಿಯು ಈ ಮನೆಯ ಸರ್ವಾಧಿಕಾರವನ್ನು ನನಗೆ ಕೊಟ್ಟಿದ್ದರೂ ತನ್ನ ಧರ್ಮಪತ್ನಿಯಾದ ನಿನ್ನನ್ನು ನನಗೆ ಅಧೀನಪಡಿಸಿಲ್ಲ. ಹೀಗಿರಲು ಇಂಥಾ ಮಹಾ ದುಷ್ಕೃತ್ಯವನ್ನು ನಡೆಸಿ ದೇವರಿಗೆ ವಿರುದ್ಧವಾಗಿ ಹೇಗೆ ಪಾಪಮಾಡಲಿ” ಎಂದು ಉತ್ತರಕೊಟ್ಟನು.

10 ಆ ಸ್ತ್ರೀಯು ಪ್ರತಿದಿನವೂ ಯೋಸೇಫನನ್ನು ಒತ್ತಾಯಿಸಿದಳು. ಆದರೆ ಯೋಸೇಫನು ಆಕೆಯೊಂದಿಗೆ ಮಲಗಿಕೊಳ್ಳಲು ಒಪ್ಪಲಿಲ್ಲ. 11 ಒಂದು ದಿನ ಯೋಸೇಫನು ತನ್ನ ಕೆಲಸದ ನಿಮಿತ್ತ ಮನೆಯೊಳಗೆ ಹೋದನು. ಆಗ ಮನೆಯಲ್ಲಿ ಇದ್ದವನು ಅವನೊಬ್ಬನೇ. 12 ಅವನ ಧಣಿಯ ಹೆಂಡತಿಯು ಅವನ ಮೇಲಂಗಿಯನ್ನು ಹಿಡಿದುಕೊಂಡು, “ಬಾ ನನ್ನೊಂದಿಗೆ ಮಲಗಿಕೊ” ಎಂದು ಕರೆದಳು. ಕೂಡಲೇ ಯೋಸೇಫನು ತನ್ನ ಮೇಲಂಗಿಯನ್ನೇ ಬಿಟ್ಟು ಅಲ್ಲಿಂದ ಓಡಿಹೋದನು.

13 ಯೋಸೇಫನು ತನ್ನ ಮೇಲಂಗಿಯನ್ನು ಬಿಟ್ಟು ಓಡಿಹೋದದ್ದರಿಂದ ಸಿಟ್ಟುಗೊಂಡ ಅವಳು 14 ಮನೆಯ ಹೊರಗಿದ್ದ ಸೇವಕರನ್ನು ಕರೆದು, “ನೋಡಿ, ನಮಗೆ ಅವಮಾನ ಮಾಡುವುದಕ್ಕಾಗಿ ಈ ಇಬ್ರಿಯ ಗುಲಾಮನನ್ನು ಇಲ್ಲಿಗೆ ತರಲಾಗಿದೆ. ಅವನು ಮನೆಯೊಳಗೆ ಬಂದು ನನ್ನ ಮೇಲೆ ಬಲಾತ್ಕಾರ ಮಾಡಲು ಪ್ರಯತ್ನಿಸಿದ. ಆಗ ನಾನು ಗಟ್ಟಿಯಾಗಿ ಕೂಗಿಕೊಂಡೆ. 15 ನನ್ನ ಕೂಗಿನಿಂದ ಭಯಗೊಂಡು ತನ್ನ ಮೇಲಂಗಿಯನ್ನೇ ಬಿಟ್ಟು ಓಡಿಹೋದ” ಎಂದು ಹೇಳಿದಳು. 16 ಆಕೆ ಆ ಮೇಲಂಗಿಯನ್ನು ತನ್ನ ಗಂಡನೂ ಯೋಸೇಫನಿಗೆ ಧಣಿಯೂ ಆಗಿದ್ದ ಪೋಟೀಫರನು ಬರುವ ತನಕ ಇಟ್ಟುಕೊಂಡಿದ್ದಳು. 17 ಪತಿಯು ಬಂದಾಗ ಆಕೆ ಅದೇ ರೀತಿ ಹೇಳಿ, “ನೀನು ಸೇರಿಸಿಕೊಂಡ ಈ ಇಬ್ರಿಯ ಗುಲಾಮನು ನನ್ನ ಮೇಲೆ ಬಲಾತ್ಕಾರ ಮಾಡಲು ಪ್ರಯತ್ನಿಸಿದ. 18 ಆದರೆ ನಾನು ಕೂಗಿಕೊಂಡದ್ದರಿಂದ ಅವನು ಮೇಲಂಗಿಯನ್ನೇ ಬಿಟ್ಟು ಓಡಿಹೋದ” ಎಂದು ಹೇಳಿದಳು.

19 ಯೋಸೇಫನ ಧಣಿಯು ತನ್ನ ಹೆಂಡತಿಯ ಮಾತು ಕೇಳಿ ತುಂಬ ಕೋಪಗೊಂಡನು. 20 ರಾಜನ ವೈರಿಗಳನ್ನು ಹಾಕುವ ಒಂದು ಸೆರೆಮನೆಯಿತ್ತು. ಆದ್ದರಿಂದ ಪೋಟೀಫರನು ಯೋಸೇಫನನ್ನು ಆ ಸೆರೆಮನೆಗೆ ಹಾಕಿಸಿದನು. ಅಂದಿನಿಂದ ಯೋಸೇಫನು ಅಲ್ಲಿದ್ದನು.

ಯೋಸೇಫನಿಗೆ ಸೆರೆವಾಸ

21 ಆದರೆ ಯೆಹೋವನು ಯೋಸೇಫನ ಸಂಗಡವಿದ್ದು ಕರುಣೆತೋರಿದನು. ಸ್ವಲ್ಪಕಾಲವಾದ ಮೇಲೆ ಸೆರೆಮನೆಯ ಮುಖ್ಯಾಧಿಕಾರಿಯು ಯೋಸೇಫನನ್ನು ಪ್ರೀತಿಸತೊಡಗಿದನು. 22 ಅವನು ಎಲ್ಲಾ ಕೈದಿಗಳನ್ನು ಯೋಸೇಫನ ವಶಕ್ಕೆ ಒಪ್ಪಿಸಿದನು. ಅಲ್ಲಿ ಮಾಡಬೇಕಾದದ್ದನ್ನೆಲ್ಲಾ ಯೋಸೇಫನೇ ಮಾಡಿಸುತ್ತಿದ್ದನು. 23 ಯೆಹೋವನು ಯೋಸೇಫನ ಸಂಗಡವಿದ್ದು ಅವನ ಎಲ್ಲಾ ಕೆಲಸಕಾರ್ಯಗಳನ್ನು ಯಶಸ್ವಿಗೊಳಿಸುತ್ತಿದ್ದದ್ದರಿಂದ ಮುಖ್ಯಾಧಿಕಾರಿಯು ಎಲ್ಲಾ ವಿಷಯಗಳನ್ನು ಯೋಸೇಫನಿಗೆ ವಹಿಸಿ ನಿಶ್ಚಿಂತೆಯಾಗಿದ್ದನು.

ಯೋಸೇಫನು ಎರಡು ಕನಸುಗಳ ಅರ್ಥವನ್ನು ತಿಳಿಸಿದ್ದು

40 ತರುವಾಯ ಫರೋಹನ ಇಬ್ಬರು ಸೇವಕರು ಫರೋಹನಿಗೆ ಯಾವುದೋ ತಪ್ಪುಮಾಡಿದರು. ಈ ಇಬ್ಬರು ಸೇವಕರುಗಳಲ್ಲಿ ಒಬ್ಬನು ಭಕ್ಷ್ಯಗಾರ ಮತ್ತೊಬ್ಬನು ಪಾನದಾಯಕ. ಫರೋಹನು ತನ್ನ ಭಕ್ಷ್ಯಗಾರನ ಮೇಲೆಯೂ ಪಾನದಾಯಕನ ಮೇಲೆಯೂ ಕೋಪಗೊಂಡನು. ಆದ್ದರಿಂದ ಅವರನ್ನು ಯೋಸೇಫನಿದ್ದ ಸೆರೆಮನೆಗೆ ಹಾಕಿಸಿದನು. ಪೋಟೀಫರನು ಫರೋಹನ ಕಾವಲುಗಾರ ಅಧಿಕಾರಿಯಾಗಿದ್ದು ಈ ಸೆರೆಮನೆಯ ಜವಾಬ್ದಾರಿಯನ್ನು ಹೊಂದಿದ್ದನು. ಸೆರೆಮನೆಯ ಮುಖ್ಯಾಧಿಕಾರಿಯು ಈ ಇಬ್ಬರು ಕೈದಿಗಳನ್ನು ಯೋಸೇಫನ ವಶಕ್ಕೆ ಒಪ್ಪಿಸಿದನು. ಸ್ವಲ್ಪಕಾಲದವರೆಗೆ ಆ ಇಬ್ಬರು ಸೆರೆಮನೆಯೊಳಗೆ ಇದ್ದರು. ಒಂದು ರಾತ್ರಿ ಆ ಇಬ್ಬರು ಕೈದಿಗಳಿಗೆ ಅಂದರೆ ಭಕ್ಷ್ಯಗಾರನಿಗೂ ಪಾನದಾಯಕನಿಗೂ ಒಂದೊಂದು ಕನಸು ಬಿತ್ತು. ಮತ್ತು ಅವರಿಬ್ಬರ ಕನಸುಗಳು ತಮ್ಮದೇ ಆದ ಅರ್ಥವನ್ನು ಹೊಂದಿದ್ದವು. ಮರುದಿನ ಮುಂಜಾನೆ ಯೋಸೇಫನು ಅವರ ಬಳಿಗೆ ಹೋದನು. ಅವರಿಬ್ಬರು ಚಿಂತೆಯಿಂದ ಇರುವುದನ್ನು ಯೋಸೇಫನು ಕಂಡು, “ಈ ದಿನ ನೀವು ತುಂಬ ಚಿಂತೆಯಿಂದ ಇರುವಂತೆ ಕಾಣುತ್ತಿದೆ, ಕಾರಣವೇನು?” ಎಂದು ಕೇಳಿದನು.

ಆ ಇಬ್ಬರು, “ನಾವು ಕಳೆದ ರಾತ್ರಿ ಕನಸನ್ನು ಕಂಡೆವು; ಆದರೆ ನಾವು ಕಂಡ ಕನಸು ನಮಗೆ ಅರ್ಥವಾಗುತ್ತಿಲ್ಲ. ನಮಗೆ ಕನಸುಗಳ ಅರ್ಥವನ್ನು ತಿಳಿಸುವವರಾಗಲಿ ವಿವರಿಸುವವರಾಗಲಿ ಯಾರೂ ಇಲ್ಲ” ಎಂದು ಹೇಳಿದರು.

ಯೋಸೇಫನು ಅವರಿಗೆ, “ದೇವರೊಬ್ಬನು ಮಾತ್ರ ಕನಸುಗಳನ್ನು ಅರ್ಥಮಾಡಿಕೊಳ್ಳಬಲ್ಲನು ಮತ್ತು ಕನಸುಗಳ ಅರ್ಥವನ್ನು ಹೇಳಬಲ್ಲನು. ಆದ್ದರಿಂದ ದಯಮಾಡಿ ನಿಮ್ಮ ಕನಸುಗಳನ್ನು ನನಗೆ ತಿಳಿಸಿರಿ” ಎಂದು ಹೇಳಿದನು.

ದ್ರಾಕ್ಷಾರಸ ಕೊಡುವವನ ಕನಸು

ಆಗ ಪಾನದಾಯಕನು ಯೋಸೇಫನಿಗೆ, “ನಾನು ಕನಸಿನಲ್ಲಿ ದ್ರಾಕ್ಷಾಲತೆಯನ್ನು ಕಂಡೆನು. 10 ಆ ದ್ರಾಕ್ಷಾಲತೆಯ ಮೇಲೆ ಮೂರು ಕವಲುಗಳಿದ್ದವು. ಆ ಕವಲುಗಳು ಚಿಗುರುತ್ತಲೇ ಹೂವುಗಳನ್ನು ಬಿಟ್ಟವು; ಆ ಹೂವುಗಳು ಹಣ್ಣುಗಳಾದವು. 11 ನಾನು ಫರೋಹನ ಲೋಟವನ್ನು ಹಿಡಿದುಕೊಂಡಿದ್ದರಿಂದ ದ್ರಾಕ್ಷಿಹಣ್ಣುಗಳನ್ನು ತೆಗೆದುಕೊಂಡು ಲೋಟದೊಳಗೆ ರಸಹಿಂಡಿ ಲೋಟವನ್ನು ಫರೋಹನಿಗೆ ಕೊಟ್ಟೆನು” ಎಂದು ಹೇಳಿದನು.

12 ಅದಕ್ಕೆ ಯೋಸೇಫನು, “ನಾನು ಕನಸಿನ ಅರ್ಥವನ್ನು ನಿನಗೆ ತಿಳಿಸುವೆನು. ಆ ಮೂರು ಕವಲುಗಳು ಎಂದರೆ ಮೂರು ದಿನಗಳು. 13 ಮೂರುದಿನಗಳೊಳಗಾಗಿ ಫರೋಹನು ನಿನ್ನನ್ನು ಕ್ಷಮಿಸಿ ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳುವನು. ನೀನು ಮೊದಲಿನಂತೆ ಅವನಿಗೆ ಪಾನದಾಯಕನಾಗಿರುವೆ. 14 ಆದರೆ ನೀನು ಸುಖದಿಂದಿರುವಾಗ ನನ್ನನ್ನು ನೆನಸಿಕೊಂಡು ನನ್ನ ವಿಷಯವಾಗಿ ಫರೋಹನಿಗೆ ತಿಳಿಸಿ ನನಗೆ ಸೆರೆಮನೆಯಿಂದ ಬಿಡುಗಡೆಯಾಗುವಂತೆ ಮಾಡು. 15 ಇಬ್ರಿಯರ ದೇಶದವನಾದ ನನ್ನನ್ನು ಕೆಲವರು ಅಪಹರಿಸಿಕೊಂಡು ಬಂದರು. ಆದರೆ ಇಲ್ಲಿಯೂ ನಾನು ಯಾವ ತಪ್ಪನ್ನೂ ಮಾಡಲಿಲ್ಲ. ಆದ್ದರಿಂದ ನಾನು ಸೆರೆಮನೆಯಲ್ಲಿರಬಾರದು” ಎಂದು ಹೇಳಿದನು.

ಭಕ್ಷ್ಯಗಾರನ ಕನಸು

16 ಪಾನದಾಯಕನ ಕನಸಿನ ಅರ್ಥವು ಒಳ್ಳೆಯದಾಗಿರುವುದನ್ನು ಕಂಡ ಭಕ್ಷ್ಯಗಾರನು ಯೋಸೇಫನಿಗೆ, “ನನಗೂ ಒಂದು ಕನಸಾಯಿತು. ನನ್ನ ಕನಸಿನಲ್ಲಿ ನನ್ನ ತಲೆಯ ಮೇಲೆ ಮೂರು ಬುಟ್ಟಿಗಳಿದ್ದವು. 17 ಅವುಗಳಲ್ಲಿ ರಾಜನಿಗೋಸ್ಕರವಾಗಿ ಎಲ್ಲಾ ಬಗೆಯ ಭಕ್ಷ್ಯಗಳಿದ್ದವು. ಆದರೆ ಪಕ್ಷಿಗಳು ಆ ಆಹಾರವನ್ನು ತಿನ್ನುತ್ತಿದ್ದವು” ಎಂದು ಹೇಳಿದನು.

18 ಯೋಸೇಫನು, “ಕನಸಿನ ಅರ್ಥವನ್ನು ನಾನು ನಿನಗೆ ತಿಳಿಸುತ್ತೇನೆ. ಮೂರು ಬುಟ್ಟಿಗಳ ಅರ್ಥ ಮೂರು ದಿನಗಳು. 19 ಮೂರುದಿನಗಳೊಳಗಾಗಿ ರಾಜನು ನಿನ್ನನ್ನು ಸೆರೆಮನೆಯಿಂದ ಬಿಡಿಸಿ ನಿನ್ನ ಶಿರಚ್ಛೇದನ ಮಾಡಿಸುವನು; ನಿನ್ನ ದೇಹವನ್ನು ಕಂಬಕ್ಕೆ ನೇತುಹಾಕಿಸುವನು; ಪಕ್ಷಿಗಳು ನಿನ್ನ ದೇಹವನ್ನು ತಿಂದುಬಿಡುತ್ತವೆ” ಎಂದು ಹೇಳಿದನು.

ಯೋಸೇಫನನ್ನು ಮರೆತನು

20 ಮೂರನೆಯ ದಿನ ಬಂದಿತು. ಅದು ಫರೋಹನ ಜನ್ಮದಿನವಾಗಿತ್ತು. ಫರೋಹನು ತನ್ನ ಎಲ್ಲಾ ಸೇವಕರಿಗೆ ಔತಣಕೂಟವನ್ನು ಏರ್ಪಡಿಸಿದನು. ಔತಣಕೂಟದಲ್ಲಿ ಫರೋಹನು ಭಕ್ಷ್ಯಗಾರನನ್ನೂ ಮತ್ತು ಪಾನದಾಯಕನನ್ನೂ ಸೆರೆಮನೆಯಿಂದ ಬಿಡುಗಡೆ ಮಾಡಿದನು. 21 ಫರೋಹನು ಪಾನದಾಯಕನನ್ನು ಮತ್ತೆ ಅದೇ ಕೆಲಸಕ್ಕೆ ನೇಮಿಸಿದನು; ಅವನು ಪಾನಪಾತ್ರೆಯನ್ನು ಫರೋಹನ ಕೈಗೆ ಕೊಡುವವನಾದನು. 22 ಆದರೆ ಫರೋಹನು ಭಕ್ಷ್ಯಗಾರನನ್ನು ಕೊಲ್ಲಿಸಿದನು. ಯೋಸೇಫನು ಹೇಳಿದಂತೆಯೇ ಪ್ರತಿಯೊಂದು ನಡೆಯಿತು. 23 ಆದರೆ ಪಾನದಾಯಕನು ಯೋಸೇಫನಿಗೆ ಸಹಾಯ ಮಾಡಬೇಕೆಂಬುದನ್ನು ಮರೆತುಬಿಟ್ಟು ಯೋಸೇಫನ ಬಗ್ಗೆ ಫರೋಹನಿಗೆ ಏನೂ ತಿಳಿಸಲಿಲ್ಲ.

ಮತ್ತಾಯ 11

ಶ್ರೇಷ್ಠನಾದ ಸ್ನಾನಿಕ ಯೋಹಾನ

(ಲೂಕ 7:18-35)

11 ಯೇಸು ತನ್ನ ಹನ್ನೆರಡು ಮಂದಿ ಶಿಷ್ಯರಿಗೆ ಈ ಸಂಗತಿಗಳನ್ನು ಹೇಳಿದ ನಂತರ ಅಲ್ಲಿಂದ ಹೊರಟು ಬೋಧಿಸುವುದಕ್ಕೆ ಮತ್ತು ಉಪದೇಶಿಸುವುದಕ್ಕೆ ಗಲಿಲಾಯ ಪಟ್ಟಣಕ್ಕೆ ಹೋದನು.

ಸ್ನಾನಿಕನಾದ ಯೋಹಾನನು ಸೆರೆಯಲ್ಲಿದ್ದನು. ಕ್ರಿಸ್ತನು ಮಾಡುತ್ತಿದ್ದ ಸಂಗತಿಗಳು ಅವನಿಗೆ ತಿಳಿಯಿತು. ಆದ್ದರಿಂದ ಯೋಹಾನನು ತನ್ನ ಕೆಲವು ಶಿಷ್ಯರನ್ನು ಯೇಸುವಿನ ಬಳಿಗೆ ಕಳುಹಿಸಿದನು. ಯೋಹಾನನ ಶಿಷ್ಯರು ಯೇಸುವಿಗೆ, “ಯೋಹಾನನು ಹೇಳಿದ್ದಂತೆ ಬರಬೇಕಾಗಿದ್ದವನು ನೀನೋ ಅಥವಾ ಬೇರೊಬ್ಬನಿಗಾಗಿ ನಾವು ಎದುರುನೋಡಬೇಕೋ?” ಎಂದು ಕೇಳಿದರು.

ಅದಕ್ಕೆ ಯೇಸು, “ನೀವು ಇಲ್ಲಿ ಕೇಳಿದ ಮತ್ತು ನೋಡಿದ ಸಂಗತಿಗಳನ್ನು ಯೋಹಾನನಿಗೆ ತಿಳಿಸಿರಿ. ಕುರುಡರು ದೃಷ್ಟಿ ಹೊಂದುತ್ತಾರೆ; ಕುಂಟರು ಮತ್ತೆ ನಡೆದಾಡಲು ಸಮರ್ಥರಾಗುತ್ತಾರೆ; ಕುಷ್ಟರೋಗಿಗಳು ಗುಣಹೊಂದುತ್ತಾರೆ; ಕಿವುಡರು ಕೇಳಲು ಸಮರ್ಥರಾಗುತ್ತಾರೆ; ಸತ್ತವರು ಜೀವವನ್ನು ಹೊಂದುತ್ತಾರೆ ಮತ್ತು ಬಡಜನರಿಗೆ ಶುಭವಾರ್ತೆಯನ್ನು ಹೇಳಲಾಗುತ್ತದೆ. ನನ್ನನ್ನು ಸ್ವೀಕರಿಸಿಕೊಳ್ಳುವವನು ಧನ್ಯನಾಗಿದ್ದಾನೆ” ಎಂದು ಉತ್ತರಕೊಟ್ಟನು.

ಯೋಹಾನನ ಶಿಷ್ಯರು ಹೊರಟುಹೋಗುತ್ತಿರಲು ಯೇಸುವು ಜನರೊಡನೆ ಯೋಹಾನನನ್ನು ಕುರಿತು ಮಾತನಾಡಲು ಪ್ರಾರಂಭಿಸಿದನು. ಯೇಸು, “ನೀವು ಏನು ನೋಡಬೇಕೆಂದು ಅಡವಿಗೆ ಹೋಗಿದ್ದಿರಿ? ಗಾಳಿಯಿಂದ ಅಲ್ಲಾಡುವ ದಂಟನ್ನೋ? ಇಲ್ಲ! ನಿಜವಾಗಿಯೂ ನೀವು ಏನನ್ನು ನೋಡುವುದಕ್ಕೆ ಹೋಗಿದ್ದಿರಿ? ನಯವಾದ ಉಡುಪನ್ನು ಹಾಕಿಕೊಂಡಿರುವ ಮನುಷ್ಯನನ್ನೋ? ಇಲ್ಲ! ನಯವಾದ ಉಡುಪನ್ನು ಹಾಕಿಕೊಂಡಿರುವ ಜನರು ರಾಜರ ಅರಮನೆಗಳಲ್ಲಿ ವಾಸಿಸುತ್ತಾರೆ. ಹಾಗಾದರೆ, ಏನನ್ನು ನೋಡಲು ಹೋಗಿದ್ದಿರಿ? ಒಬ್ಬ ಪ್ರವಾದಿಯನ್ನೋ? ಹೌದು! ಯೋಹಾನನು ಪ್ರವಾದಿಗಿಂತಲೂ ಹೆಚ್ಚಿನವನು ಎಂದು ನಾನು ನಿಮಗೆ ಹೇಳುತ್ತೇನೆ. 10 ಯೋಹಾನನನ್ನು ಕುರಿತು ಪವಿತ್ರ ಗ್ರಂಥದಲ್ಲಿ ಹೀಗೆ ಬರೆದಿದೆ:

‘ಇಗೋ! ನಾನು (ದೇವರು) ನನ್ನ ದೂತನನ್ನು ನಿನಗಿಂತ ಮೊದಲು ಕಳುಹಿಸುತ್ತೇನೆ.
ಅವನು ನಿನಗೆ ದಾರಿಯನ್ನು ಸಿದ್ಧಮಾಡುತ್ತಾನೆ.’(A)

11 “ಸ್ನಾನಿಕ ಯೋಹಾನನು ಹಿಂದೆ ಜೀವಿಸಿದ್ದವರಿಗಿಂತ ದೊಡ್ಡವನು. ಆದರೆ ಪರಲೋಕರಾಜ್ಯದಲ್ಲಿರುವ ಚಿಕ್ಕವನು ಸಹ ಯೋಹಾನನಿಗಿಂತಲೂ ಹೆಚ್ಚಿನವನಾಗಿದ್ದಾನೆಂದು ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ. 12 ಸ್ನಾನಿಕ ಯೋಹಾನನು ಬಂದ ಸಮಯದಿಂದ ಇಲ್ಲಿಯವರೆಗೂ ಪರಲೋಕರಾಜ್ಯ ಪ್ರಬಲವಾದ ಆಕ್ರಮಣಗಳಿಗೆ ಒಳಗಾಗಿದೆ. ಬಲಾತ್ಕಾರವನ್ನು ಉಪಯೋಗಿಸಿ ಜನರು ರಾಜ್ಯವನ್ನು ಪಡೆದುಕೊಳ್ಳುವುದಕ್ಕಾಗಿ ಪ್ರಯತ್ನಿಸುತ್ತಾರೆ. 13 ಎಲ್ಲಾ ಪ್ರವಾದನೆಗಳು ಮತ್ತು ಮೋಶೆಯ ಧರ್ಮಶಾಸ್ತ್ರವು ಯೋಹಾನನು ಬರುವ ತನಕ ಪರಲೋಕರಾಜ್ಯದ ಕುರಿತಾಗಿ ಮುಂತಿಳಿಸಿದವು. 14 ಧರ್ಮಶಾಸ್ತ್ರವನ್ನು ಮತ್ತು ಪ್ರವಾದಿಗಳು ಹೇಳಿದ್ದನ್ನು ನೀವು ನಂಬುವುದಾದರೆ ಈ ಯೋಹಾನನೇ ಎಲೀಯನು. ಅವನು ಬರುತ್ತಾನೆಂದು ಧರ್ಮಶಾಸ್ತ್ರವೂ ಹೇಳಿದೆ. 15 ಜನರೇ, ನಾನು ಹೇಳುವುದನ್ನು ಕೇಳಿರಿ. ಆಲಿಸಿರಿ!

16 “ಈ ಕಾಲದ ಜನರನ್ನು ಕುರಿತು ನಾನು ಏನು ಹೇಳಲಿ? ಅವರು ಯಾವ ರೀತಿ ಇದ್ದಾರೆ? ಈ ಕಾಲದ ಜನರು ಮಾರುಕಟ್ಟೆಯಲ್ಲಿ ಕುಳಿತುಕೊಂಡಿರುವ ಮಕ್ಕಳಂತಿದ್ದಾರೆ. ಒಂದು ಗುಂಪಿನ ಮಕ್ಕಳು ಮತ್ತೊಂದು ಗುಂಪಿನ ಮಕ್ಕಳಿಗೆ ಹೀಗೆನ್ನುತ್ತಾರೆ:

17 ‘ನಾವು ನಿಮಗೋಸ್ಕರ ವಾದ್ಯ ಬಾರಿಸಿದೆವು.
    ನೀವು ಕುಣಿಯಲಿಲ್ಲ;
ನಾವು ಶೋಕಗೀತೆ ಹಾಡಿದೆವು,
    ನೀವು ದುಃಖಿಸಲಿಲ್ಲ.’

18 ಇಂದಿನ ಜನರು ಈ ಮಕ್ಕಳಂತಿದ್ದಾರೆ ಎಂದು ನಾನು ಹೇಳಿದ್ದೇಕೆ? ಏಕೆಂದರೆ ಯೋಹಾನನು ಬಂದನು. ಆದರೆ ಅವನು ಬೇರೆ ಜನರಂತೆ ಊಟಮಾಡಲಿಲ್ಲ; ದ್ರಾಕ್ಷಾರಸವನ್ನು ಕುಡಿಯಲಿಲ್ಲ. ಆದರೆ ಜನರು, ‘ಅವನಿಗೆ ದೆವ್ವ ಹಿಡಿದಿದೆ’ ಎಂದು ಹೇಳುತ್ತಾರೆ.’ 19 ಮನುಷ್ಯಕುಮಾರನು ಬಂದನು. ಆತನು ಬೇರೆ ಜನರಂತೆ ಊಟಮಾಡುತ್ತಾನೆ; ದ್ರಾಕ್ಷಾರಸವನ್ನು ಕುಡಿಯುತ್ತಾನೆ. ಆದರೆ ಜನರು, ‘ನೋಡಿರಿ! ಅವನು ಹೊಟ್ಟೆಬಾಕ, ಅವನು ಕುಡುಕ, ಸುಂಕವಸೂಲಿಗಾರರು ಮತ್ತು ಕೆಟ್ಟ ಜನರು ಅವನ ಸ್ನೇಹಿತರಾಗಿದ್ದಾರೆ’ ಎಂದು ಹೇಳುತ್ತಾರೆ. ಆದರೆ ಜ್ಞಾನವು ತನ್ನ ಕ್ರಿಯೆಗಳಿಂದಲೇ ತನ್ನ ಯೋಗ್ಯತೆಯನ್ನು ತೋರ್ಪಡಿಸುತ್ತದೆ.”

ನಂಬದ ಜನರಿಗೆ ಯೇಸುವಿನ ಎಚ್ಚರಿಕೆ

(ಲೂಕ 10:13-15)

20 ನಂತರ ಯೇಸು, ತಾನು ಯಾವ ಪಟ್ಟಣಗಳಲ್ಲಿ ಹೇರಳವಾಗಿ ಅದ್ಭುತಕಾರ್ಯಗಳನ್ನು ಮಾಡಿದ್ದನೋ ಆ ಪಟ್ಟಣಗಳನ್ನು ಖಂಡಿಸಿದನು. ಏಕೆಂದರೆ ಆ ಪಟ್ಟಣಗಳಲ್ಲಿದ್ದ ಜನರು ತಮ್ಮ ಜೀವಿತವನ್ನು ಬದಲಾಯಿಸಿಕೊಳ್ಳಲಿಲ್ಲ ಮತ್ತು ಪಾಪ ಮಾಡುವುದನ್ನು ನಿಲ್ಲಿಸಲಿಲ್ಲ. 21 ಯೇಸು ಹೇಳಿದ್ದೇನೆಂದರೆ: “ಖೊರಾಜಿನೇ, ನಿನ್ನ ಗತಿಯನ್ನು ಏನು ಹೇಳಲಿ? ಬೆತ್ಸಾಯಿದವೇ, ನಿನ್ನ ಗತಿಯನ್ನು ಏನು ಹೇಳಲಿ! ನಾನು ನಿಮ್ಮಲ್ಲಿ ಅನೇಕ ಅದ್ಭುತಕಾರ್ಯಗಳನ್ನು ಮಾಡಿದೆನು. ಅದೇ ಅದ್ಭುತಕಾರ್ಯಗಳನ್ನು ಟೈರ್, ಸೀದೋನ್‌ಗಳಲ್ಲಿ ಮಾಡಿದ್ದರೆ, ಅವುಗಳ ಜನರು ಬಹಳ ಕಾಲದ ಹಿಂದೆಯೇ ತಮ್ಮ ಜೀವಿತವನ್ನು ಬದಲಾಯಿಸಿಕೊಳ್ಳುತ್ತಿದ್ದರು; ತಮ್ಮ ಪಾಪಗಳಿಗಾಗಿ ದುಃಖಪಟ್ಟು ಗೋಣಿತಟ್ಟನ್ನು ಕಟ್ಟಿಕೊಳ್ಳುತ್ತಿದ್ದರು; ಮೈಮೇಲೆ ಬೂದಿಯನ್ನು ಹಾಕಿಕೊಳ್ಳುತ್ತಿದ್ದರು. 22 ಆದರೆ ನ್ಯಾಯತೀರ್ಪಿನ ದಿನದಲ್ಲಿ ಟೈರ್, ಸೀದೋನ್‌ಗಳಿಗಿಂತಲೂ ನಿಮ್ಮ ಸ್ಥಿತಿಯು ಬಹಳ ದುಸ್ಥಿತಿಗೆ ಒಳಗಾಗುವುದೆಂದು ನಾನು ನಿಮಗೆ ಹೇಳುತ್ತೇನೆ.

23 “ಕಪೆರ್ನೌಮೇ, ನೀನು ಪರಲೋಕಕ್ಕೆ ಎತ್ತಲ್ಪಡುವುದಾಗಿ ಯೋಚಿಸುವಿಯೋ? ಇಲ್ಲ! ನೀನು ಪಾತಾಳಕ್ಕೆ ಇಳಿಯುವೆ. ನಾನು ನಿನ್ನಲ್ಲಿ ಅನೇಕ ಅದ್ಭುತಕಾರ್ಯಗಳನ್ನು ನಡೆಸಿದೆ. ಸೊದೋಮಿನಲ್ಲಿ ಆ ಅದ್ಭುತಕಾರ್ಯಗಳನ್ನು ನಡೆಸಿದ್ದರೆ ಆ ಜನರು ಪಾಪಮಾಡುವುದನ್ನು ನಿಲ್ಲಿಸಿಬಿಡುತ್ತಿದ್ದರು ಮತ್ತು ಇಂದಿನವರೆಗೂ ಅದು ಪಟ್ಟಣವಾಗಿಯೇ ಉಳಿದಿರುತ್ತಿತ್ತು. 24 ಆದರೆ ನ್ಯಾಯತೀರ್ಪಿನ ದಿನದಲ್ಲಿ ನಿನ್ನ ಪರಿಸ್ಥಿತಿ ಸೊದೋಮಿಗಿಂತಲೂ ದುಸ್ಥಿತಿಗೆ ಒಳಗಾಗುವುದು ಎಂದು ನಾನು ನಿನಗೆ ಹೇಳುತ್ತೇನೆ.”

ಯೇಸು ಜನರಿಗೆ ವಿಶ್ರಾಂತಿದಾಯಕ

(ಲೂಕ 10:21-22)

25 ಬಳಿಕ ಯೇಸು, “ಪರಲೋಕ ಭೂಲೋಕಗಳ ಪ್ರಭುವಾದ ತಂದೆಯೇ, ನಿನಗೆ ನಾನು ವಂದನೆ ಸಲ್ಲಿಸುತ್ತೇನೆ. ನಾನು ನಿನ್ನನ್ನು ಕೊಂಡಾಡುತ್ತೇನೆ. ಏಕೆಂದರೆ, ನೀನು ಈ ಸಂಗತಿಗಳನ್ನು ಜ್ಞಾನಿಗಳಿಗೂ ಸೂಕ್ಷ್ಮಬುದ್ದಿಯುಳ್ಳವರಿಗೂ ಮರೆಮಾಡಿರುವೆ. ಆದರೆ ಚಿಕ್ಕ ಮಕ್ಕಳಂತಿರುವ ಈ ಜನರಿಗೆ ನೀನು ಗೋಚರಪಡಿಸಿರುವೆ. 26 ಹೌದು ತಂದೆಯೇ, ಇದು ನಿಜವಾಗಿಯೂ ನಿನ್ನ ಚಿತ್ತವಾಗಿದ್ದುದರಿಂದ ನೀನು ಹೀಗೆ ಮಾಡಿರುವೆ.

27 “ನನ್ನ ತಂದೆ ನನಗೆ ಎಲ್ಲವನ್ನು ಕೊಟ್ಟಿದ್ದಾನೆ. ಯಾವನೂ ಮಗನನ್ನು ಅರಿತಿಲ್ಲ. ತಂದೆ ಮಾತ್ರ ಮಗನನ್ನು ಅರಿತಿದ್ದಾನೆ. ಯಾವನೂ ತಂದೆಯನ್ನು ಅರಿತಿಲ್ಲ. ಮಗನು ಮಾತ್ರ ತಂದೆಯನ್ನು ಅರಿತಿದ್ದಾನೆ. ಮಗನು ತಂದೆಯನ್ನು ಯಾರಿಗೆ ಪ್ರಕಟಿಸಬೇಕೆಂದು ಇಷ್ಟಪಡುತ್ತಾನೋ ಅವರು ತಂದೆಯನ್ನು ತಿಳಿದುಕೊಳ್ಳುತ್ತಾರೆ.

28 “ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ. ನಾನು ನಿಮಗೆ ವಿಶ್ರಾಂತಿಯನ್ನು ಕೊಡುತ್ತೇನೆ. 29 ನನ್ನ ನೊಗಕ್ಕೆ ಹೆಗಲು ಕೊಟ್ಟು ನನ್ನಿಂದ ಕಲಿತುಕೊಳ್ಳಿರಿ. ನಾನು ಸಾತ್ವಿಕನೂ ದೀನನೂ ಆಗಿರುವುದರಿಂದ ನೀವು ನಿಮ್ಮ ಆತ್ಮಗಳಿಗೆ ವಿಶ್ರಾಂತಿಯನ್ನು ಕಂಡುಕೊಳ್ಳುವಿರಿ. 30 ಹೌದು, ನಿಮಗೆ ನನ್ನ ನೊಗವು ಮೃದುವಾಗಿದೆ; ನನ್ನ ಹೊರೆಯು ಹಗುರವಾಗಿದೆ.”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International