Old/New Testament
ಏಸಾವನ ಕುಟುಂಬ
36 ಎದೋಮನೆಂಬ ಏಸಾವನ ಕುಟುಂಬ ಚರಿತ್ರೆ: 2 ಏಸಾವನು ಕಾನಾನ್ ದೇಶದ ಸ್ತ್ರೀಯರನ್ನು ಮದುವೆಯಾದನು. ಏಸಾವನ ಹೆಂಡತಿಯರು: ಹಿತ್ತಿಯನಾದ ಏಲೋನನ ಮಗಳಾದ ಆದಾ; ಹಿವ್ವಿಯನಾದ ಸಿಬೆಯೋನನಿಗೆ ಹುಟ್ಟಿದ ಅನಾಹ ಎಂಬಾಕೆಯ ಮಗಳಾಗಿದ್ದ ಒಹೊಲೀಬಾಮ; 3 ಇಷ್ಮಾಯೇಲನ ಮಗಳೂ ನೆಬಾಯೋತನ ತಂಗಿಯೂ ಆಗಿದ್ದ ಬಾಸೆಮತ್. 4 ಏಸಾವನಿಗೆ ಮತ್ತು ಆದಾಳಿಗೆ ಎಲೀಫಜನೆಂಬ ಮಗನಿದ್ದನು. ಬಾಸೆಮತಳಿಗೆ ರೆಗೂವೇಲನೆಂಬ ಮಗನಿದ್ದನು. 5 ಒಹೊಲೀಬಾಮಳಿಗೆ ಮೂವರು ಗಂಡುಮಕ್ಕಳಿದ್ದರು: ಯೆಗೂಷ, ಯಳಾಮ ಮತ್ತು ಕೋರಹ. ಇವರೆಲ್ಲರೂ ಏಸಾವನ ಗಂಡುಮಕ್ಕಳು ಮತ್ತು ಕಾನಾನ್ ದೇಶದಲ್ಲಿ ಹುಟ್ಟಿದವರು.
6-8 ಯಾಕೋಬ ಮತ್ತು ಏಸಾವರ ಕುಟುಂಬಗಳು ಬಹಳ ವೃದ್ಧಿಯಾದ ಕಾರಣ ಕಾನಾನ್ ದೇಶವು ಅವರಿಗೆ ಸಾಕಾಗಲಿಲ್ಲ. ಆದ್ದರಿಂದ ಏಸಾವನು ತನ್ನ ತಮ್ಮನಾದ ಯಾಕೋಬನಿಂದ ದೂರ ಹೋದನು. ಏಸಾವನು ತನ್ನ ಹೆಂಡತಿಯರನ್ನೂ ಗಂಡುಹೆಣ್ಣುಮಕ್ಕಳನ್ನೂ ಎಲ್ಲಾ ಸೇವಕರನ್ನೂ ದನಗಳನ್ನೂ ಮತ್ತು ಇತರ ಪಶುಗಳನ್ನೂ ತನಗೆ ಕಾನಾನಿನಲ್ಲಿದ್ದ ಪ್ರತಿಯೊಂದು ಆಸ್ತಿಯನ್ನೂ ತೆಗೆದುಕೊಂಡು ಸೇಯೀರ್ ಬೆಟ್ಟದ ಸೀಮೆಗೆ ಹೋದನು. (ಏಸಾವನಿಗೆ ಎದೋಮ್ ಎಂಬ ಹೆಸರೂ ಇದೆ. ಎದೋಮ್ ಎಂಬುದು ಸೇಯೀರ್ ದೇಶದ ಮತ್ತೊಂದು ಹೆಸರು.)
9 ಏಸಾವನು ಎದೋಮ್ ಜನರ ತಂದೆ. ಸೇಯೀರ್ ದೇಶದಲ್ಲಿ ವಾಸವಾಗಿದ್ದ ಏಸಾವನ ಕುಟುಂಬದವರ ಹೆಸರುಗಳು:
10 ಏಸಾವನ ಗಂಡುಮಕ್ಕಳು: ಎಲೀಫಜ, ಇವನು ಏಸಾವನಿಗೆ ಆದಾ ಎಂಬಾಕೆಯಲ್ಲಿ ಹುಟ್ಟಿದ ಮಗನು. ರೆಗೂವೇಲ, ಇವನು ಏಸಾವನಿಗೆ ಬಾಸೆಮತಳಲ್ಲಿ ಹುಟ್ಟಿದ ಮಗನು.
11 ಎಲೀಫಜನಿಗೆ ಐದು ಮಂದಿ ಗಂಡುಮಕ್ಕಳಿದ್ದರು: ತೇಮಾನ್, ಓಮಾರ್, ಚೆಪೋ, ಗತಾಮ್ ಮತ್ತು ಕೆನಜ್.
12 ಎಲೀಫಜನಿಗೆ ತಿಮ್ನ ಎಂಬ ಒಬ್ಬ ದಾಸಿಯೂ ಇದ್ದಳು. ತಿಮ್ನಳಿಗೆ ಮತ್ತು ಎಲೀಫಜನಿಗೆ ಅಮಾಲೇಕ ಎಂಬ ಒಬ್ಬ ಗಂಡುಮಗನಿದ್ದನು.
13 ರೆಗೂವೇಲನಿಗೆ ನಾಲ್ಕು ಮಂದಿ ಗಂಡುಮಕ್ಕಳಿದ್ದರು: ನಹತ್, ಜೆರಹ, ಶಮ್ಮಾ ಮತ್ತು ಮಿಜ್ಜಾ.
ಇವರು ಏಸಾವನ ಮೊಮ್ಮಕ್ಕಳು. ಇವರು ಏಸಾವನ ಹೆಂಡತಿಯಾದ ಬಾಸೆಮತಳ ಸಂತತಿಯವರು.
14 ಏಸಾವನ ಮೂರನೆ ಹೆಂಡತಿಯು ಅನಾಹನ ಮಗಳಾದ ಒಹೊಲೀಬಾಮ. (ಅನಾಹನು ಸಿಬೆಯೋನನ ಮಗನು.) ಏಸಾವನ ಮತ್ತು ಒಹೊಲೀಬಾಮಳ ಮಕ್ಕಳು: ಯೆಗೂಷ್, ಯಳಾಮ್ ಮತ್ತು ಕೋರಹ.
15 ಏಸಾವನ ವಂಶಸ್ಥರ ಕುಲಪತಿಗಳು:
ಏಸಾವನ ಮೊದಲನೆ ಮಗನಾದ ಎಲೀಫಜ. ಎಲೀಫಜನಿಂದ ಬಂದವರು: ತೇಮಾನ್, ಓಮಾರ್, ಚೆಫೋ, ಕೆನೆಜ್, 16 ಕೋರಹ, ಗತಾಮ ಮತ್ತು ಅಮಾಲೇಕ.
ಈ ಕುಲಪತಿಗಳು ಏಸಾವನ ಹೆಂಡತಿಯಾದ ಆದಾಳ ಸಂತತಿಯವರು.
17 ಏಸಾವನ ಮಗನಾದ ರೆಗೂವೇಲನು ಈ ಕುಟುಂಬಗಳ ತಂದೆಯಾಗಿದ್ದನು: ನಹತ, ಜೆರಹ, ಶಮ್ಮಾ ಮತ್ತು ಮಿಜ್ಜಾ.
ಈ ಕುಟುಂಬಗಳೆಲ್ಲವು ಏಸಾವನ ಹೆಂಡತಿಯಾದ ಬಾಸೆಮತಳ ಸಂತತಿಯವರು.
18 ಅನಾಹನ ಮಗಳೂ ಏಸಾವನ ಹೆಂಡತಿಯೂ ಆಗಿದ್ದ ಒಹೊಲೀಬಾಮಳಲ್ಲಿ ಹುಟ್ಟಿದವರು: ಯಗೂಷ್, ಯೆಳಾಮ ಮತ್ತು ಕೋರಹ. ಈ ಮೂವರು ತಮ್ಮ ಕುಟುಂಬಗಳ ತಂದೆಯಾಗಿದ್ದರು.
19 ಈ ಕುಟುಂಬಗಳಿಗೆಲ್ಲಾ ಏಸಾವನೇ ಮೂಲಪುರುಷ.
20 ಏಸಾವನಿಗಿಂತ ಮೊದಲು ಹೋರಿಯ ಜನಾಂಗದ ಸೇಯೀರ್ ಎಂಬವನು ಎದೋಮಿನಲ್ಲಿ ವಾಸವಾಗಿದ್ದನು. ಸೇಯೀರನ ಗಂಡುಮಕ್ಕಳು:
ಲೋಟಾನ್, ಶೋಬಾಲ್, ಸಿಬೆಯೋನ್, ಅನಾಹ, 21 ದೀಶೋನ್, ಏಚೆರ್ ಮತ್ತು ದೀಶಾನ್, ಆ ಗಂಡುಮಕ್ಕಳು ಕುಲಪತಿಗಳಾಗಿದ್ದರು.
22 ಲೋಟಾನನು ಹೋರಿ, ಹೇಮಾಮ್ ಎಂಬುವರ ತಂದೆ. (ತಿಮ್ನಳು ಲೋಟಾನನ ತಂಗಿ.)
23 ಶೋಬಾಲನು ಅಲ್ಪಾನ್, ಮಾನಹತ್, ಗೇಬಾಲ್, ಶೆಫೋ ಮತ್ತು ಓನಾಮ್ ಎಂಬವರ ತಂದೆ.
24 ಸಿಬೆಯೋನನಿಗೆ ಅಯ್ಯಾ ಮತ್ತು ಅನಾಹ ಎಂಬ ಇಬ್ಬರು ಗಂಡುಮಕ್ಕಳಿದ್ದರು. (ತನ್ನ ತಂದೆಯ ಕತ್ತೆಗಳನ್ನು ಮೇಯಿಸುತ್ತಿದ್ದಾಗ ಬಿಸಿನೀರಿನ ಒರತೆಗಳನ್ನು ಕಂಡುಕೊಂಡವನೇ ಅನಾಹ.)
25 ಅನಾಹನು ದೀಶೋನ್ ಮತ್ತು ಓಹೊಲೀಬಾಮಳ ತಂದೆ.
26 ದಿಶೋನನಿಗೆ ಹೆಮ್ದಾನ್, ಎಷ್ಬಾನ್, ಇತ್ರಾನ್ ಮತ್ತು ಕೆರಾನ್ ಎಂಬ ನಾಲ್ಕ ಮಂದಿ ಗಂಡುಮಕ್ಕಳಿದ್ದರು.
27 ಏಚೆರನಿಗೆ ಬಿಲ್ಹಾನ್, ಚಾವಾನ್ ಮತ್ತು ಅಕಾನ್ ಎಂಬ ಮೂರು ಮಂದಿ ಗಂಡುಮಕ್ಕಳಿದ್ದರು.
28 ದೀಶಾನನಿಗೆ ಊಚ್ ಮತ್ತು ಅರಾನ್ ಎಂಬ ಇಬ್ಬರು ಗಂಡುಮಕ್ಕಳಿದ್ದರು.
29 ಹೋರಿಯರ ಕುಟುಂಬಗಳ ನಾಯಕರುಗಳ ಹೆಸರುಗಳು ಇಂತಿವೆ: ಲೋಟಾನ್, ಶೋಬಾಲ್, ಸಿಬೆಯೋನ್, ಅನಾಹ, 30 ದೀಶೋನ್, ಏಚೆರ್ ಮತ್ತು ದೀಶಾನ್. ಸೇಯೀರ್‌ನಲ್ಲಿ ವಾಸವಾಗಿದ್ದ ಹೋರಿಯ ಕುಟುಂಬಗಳ ನಾಯಕರುಗಳು ಇವರೇ.
31 ಆ ಸಮಯದಲ್ಲಿ ಎದೋಮಿನಲ್ಲಿ ರಾಜರುಗಳಿದ್ದರು. ಇಸ್ರೇಲರಿಗಿಂತಲೂ ಮುಂಚೆ ಎದೋಮಿಗೆ ರಾಜರುಗಳಿದ್ದರು.
32 ಬೆಯೋರನ ಮಗನಾದ ಬೆಲಗನು ಎದೋಮಿನ ರಾಜನಾಗಿದ್ದನು. ಅವನು ದಿನ್ಹಾಬಾ ನಗರವನ್ನು ಆಳಿದನು.
33 ಬೆಲಗನು ಸತ್ತಮೇಲೆ, ಯೋಬಾಬನು ರಾಜನಾದನು. ಯೋಬಾಬನು ಬೊಚ್ರದವನಾದ ಚೆರಹನ ಮಗನು.
34 ಯೋಬಾಬನು ಸತ್ತಮೇಲೆ ಹುಷಾಮನು ಆಳಿದನು. ಹುಷಾಮನು ತೇಮಾನೀಯರ ದೇಶದವನು.
35 ಹುಷಾಮನು ಸತ್ತಮೇಲೆ, ಹದದನು ಆ ದೇಶವನ್ನು ಆಳಿದನು. ಹದದನು ಬೆದದನ ಮಗನು. (ಮೊವಾಬ್ಯರನ್ನು ಮಿದ್ಯಾನರ ದೇಶದಲ್ಲಿ ಸೋಲಿಸಿದವನೇ ಬೆದದನು.) ಹದದನು ಅವೀತ್ ಪಟ್ಟಣದವನು.
36 ಹದದನು ಸತ್ತಮೇಲೆ, ಸಮ್ಲಾಹನು ಆ ದೇಶವನ್ನು ಆಳಿದನು; ಸಮ್ಲಾಹನು ಮಸ್ರೇಕದವನು.
37 ಸಮ್ಲಾಹನು ಸತ್ತಮೇಲೆ ಸೌಲನು ಆ ದೇಶವನ್ನು ಆಳಿದನು. ಸೌಲನು ಯೂಫ್ರೇಟೀಸ್ ನದಿತೀರದಲ್ಲಿರುವ ರೆಹೋಬೋತೂರಿನವನು.
38 ಸೌಲನು ಸತ್ತಮೇಲೆ ಆ ದೇಶವನ್ನು ಬಾಳ್ಹಾನಾನನು ಆಳಿದನು. ಬಾಳ್ಹಾನಾನನು ಅಕ್ಬೋರನ ಮಗನು.
39 ಬಾಳ್ಹಾನಾನನು ಸತ್ತಮೇಲೆ ಆ ದೇಶವನ್ನು ಹದದನು ಆಳಿದನು. ಹದದನು ಪಾಗು ಎಂಬ ಪಟ್ಟಣದವನು. ಹದದನ ಹೆಂಡತಿಯ ಹೆಸರು ಮಹೇಟಬೇಲ್. ಮಹೇಟಬೇಲಳು ಮಟ್ರೇದ ಎಂಬಾಕೆಯ ಮಗಳು. (ಮಟ್ರೇದಳು ಮೇಜಾಹಾಬನ ಮಗಳು.)
40-43 ಏಸಾವನು ಎದೋಮ್ಯರಿಗೆ ಮೂಲಪಿತೃ:
ತಿಮ್ನ ಅಲ್ವಾ, ಯತೇತ, ಓಹೊಲೀಬಾಮಾ, ಏಲಾ, ಪೀನೋನ್, ಕೆನೆಜ್, ತೇಮಾನ್, ಮಿಪ್ಚಾರ, ಮಗ್ದೀಯೇಲ್ ಮತ್ತು ಗೀರಾಮ್ ಕುಟುಂಬಗಳವರು ತಮ್ಮ ಕುಟುಂಬಗಳ ಹೆಸರುಗಳನ್ನು ಹೊಂದಿದ್ದ ಪ್ರದೇಶಗಳಲ್ಲಿ ವಾಸಿಸಿದರು.
ಕನಸುಗಾರ ಯೋಸೇಫ
37 ಯಾಕೋಬನು ಕಾನಾನ್ ದೇಶದಲ್ಲಿ ನೆಲೆಸಿದನು. ಅವನ ತಂದೆ ಆ ದೇಶದಲ್ಲೇ ವಾಸವಾಗಿದ್ದನು. 2 ಯಾಕೋಬನ ಕುಟುಂಬದ ಚರಿತ್ರೆಯಿದು:
ಯೋಸೇಫನು ಹದಿನೇಳು ವರ್ಷದ ಯೌವನಸ್ಥನಾಗಿದ್ದನು. ಆಡುಕುರಿಗಳನ್ನು ಸಾಕುವುದು ಅವನ ಕಸುಬಾಗಿತ್ತು. ತನ್ನ ಅಣ್ಣಂದಿರೊಡನೆ ಅಂದರೆ ಬಿಲ್ಹಾ ಮತ್ತು ಜಿಲ್ಪಾ ಎಂಬ ತನ್ನ ಮಲತಾಯಿಗಳ ಮಕ್ಕಳೊಡನೆ ಯೋಸೇಫನು ಆಡುಕುರಿಗಳನ್ನು ಮೇಯಿಸುತ್ತಿದ್ದನು. ಅವರೇನಾದರೂ ಕೆಟ್ಟದ್ದನ್ನು ಮಾಡಿದರೆ ಯೋಸೇಫನು ತಂದೆಗೆ ತಿಳಿಸುತ್ತಿದ್ದನು. 3 ಇಸ್ರೇಲನು ತುಂಬ ಮುಪ್ಪಿನವನಾಗಿದ್ದಾಗ ಯೋಸೇಫನು ಹುಟ್ಟಿದ್ದರಿಂದ ಇಸ್ರೇಲನು ತನ್ನ ಬೇರೆ ಗಂಡುಮಕ್ಕಳಿಗಿಂತಲೂ ಹೆಚ್ಚಾಗಿ ಯೋಸೇಫನನ್ನು ಪ್ರೀತಿಸಿದನು. ಯಾಕೋಬನು ತನ್ನ ಮಗನಿಗೆ ಸುಂದರವಾದ ನಿಲುವಂಗಿಯನ್ನು ಮಾಡಿಸಿ ಕೊಟ್ಟಿದ್ದನು. 4 ತಮ್ಮ ತಂದೆಗೆ ಯೋಸೇಫನ ಮೇಲೆ ಹೆಚ್ಚು ಪ್ರೀತಿಯಿರುವುದನ್ನು ಗಮನಿಸಿದ ಯೋಸೇಫನ ಅಣ್ಣಂದಿರು ಯೋಸೇಫನನ್ನು ದ್ವೇಷಿಸತೊಡಗಿ ಅವನೊಡನೆ ಸ್ನೇಹಭಾವದಿಂದ ಮಾತಾಡುತ್ತಿರಲಿಲ್ಲ.
5 ಒಂದು ದಿನ ಯೋಸೇಫನು ವಿಶೇಷವಾದ ಕನಸನ್ನು ಕಂಡನು. ಯೋಸೇಫನು ಈ ಕನಸನ್ನು ತನ್ನ ಅಣ್ಣಂದಿರಿಗೆ ತಿಳಿಸಿದಾಗ ಅವರು ಅವನನ್ನು ಮತ್ತಷ್ಟು ದ್ವೇಷಿಸತೊಡಗಿದರು.
6 ಯೋಸೇಫನು ಅವರಿಗೆ, “ನನಗೆ ಒಂದು ಕನಸಾಯಿತು. 7 ನಾವೆಲ್ಲರು ಹೊಲದಲ್ಲಿ ಗೋಧಿಯ ಸಿವುಡುಗಳನ್ನು ಕಟ್ಟುತ್ತಿದ್ದೆವು. ಆಗ ನನ್ನ ಸಿವುಡು ಎದ್ದುನಿಂತಿತು; ನನ್ನ ಸಿವುಡಿನ ಸುತ್ತಲೂ ನಿಮ್ಮ ಸಿವುಡುಗಳೆಲ್ಲಾ ಎದ್ದುನಿಂತುಕೊಂಡು ನನ್ನ ಸಿವುಡಿಗೆ ಅಡ್ಡಬಿದ್ದವು” ಎಂದು ಹೇಳಿದನು.
8 ಅವನ ಅಣ್ಣಂದಿರು, “ನೀನು ರಾಜನಾಗಿ ನಮ್ಮನ್ನು ಆಳುವೆ ಎಂಬುದು ಇದರ ಅರ್ಥವೆಂದು ನಿನ್ನ ಆಲೋಚನೆಯೋ?” ಎಂದು ಪ್ರಶ್ನಿಸಿ ಆ ಕನಸಿನ ನಿಮಿತ್ತ ಅವನನ್ನು ಮತ್ತಷ್ಟು ದ್ವೇಷಿಸತೊಡಗಿದರು.
9 ಆಮೇಲೆ ಯೋಸೇಫನಿಗೆ ಮತ್ತೊಂದು ಕನಸಾಯಿತು. ಯೋಸೇಫನು ಈ ಕನಸಿನ ಬಗ್ಗೆಯೂ ತನ್ನ ಅಣ್ಣಂದಿರಿಗೆ ತಿಳಿಸಿದನು. ಯೋಸೇಫನು ಅವರಿಗೆ, “ನನಗೆ ಮತ್ತೊಂದು ಕನಸಾಯಿತು. ಸೂರ್ಯ, ಚಂದ್ರ ಮತ್ತು ಹನ್ನೊಂದು ನಕ್ಷತ್ರಗಳು ನನಗೆ ಅಡ್ಡಬೀಳುವುದನ್ನು ಕಂಡೆನು” ಎಂದು ಹೇಳಿದನು.
10 ಯೋಸೇಫನು ತನ್ನ ತಂದೆಗೂ ಸಹ ಈ ಕನಸಿನ ಬಗ್ಗೆ ತಿಳಿಸಿದನು. ಆದರೆ ಅವನ ತಂದೆ ಅವನನ್ನು ಗದರಿಸಿ, “ಇದೆಂಥಾ ಕನಸು? ನಾನೂ ನಿನ್ನ ತಾಯಿಯೂ ಮತ್ತು ನಿನ್ನ ಸಹೋದರರೂ ನಿನಗೆ ಅಡ್ಡಬೀಳುತ್ತೇವೆಂದು ನಂಬುತ್ತೀಯೋ?” ಎಂದು ಕೇಳಿದನು. 11 ಯೋಸೇಫನ ಅಣ್ಣಂದಿರಿಗೆ ಅವನ ಮೇಲೆ ಹೊಟ್ಟೆಕಿಚ್ಚು ಹೆಚ್ಚಾಯಿತು. ಆದರೆ ಯೋಸೇಫನ ತಂದೆಯು ಆ ಕನಸುಗಳ ಬಗ್ಗೆ ಆಶ್ಚರ್ಯಚಕಿತನಾಗಿ ಆಲೋಚಿಸತೊಡಗಿದನು.
12 ಒಂದು ದಿನ ಯೋಸೇಫನ ಅಣ್ಣಂದಿರು ತಮ್ಮ ತಂದೆಯ ಆಡುಕುರಿಗಳನ್ನು ಕಾಯಲು ಶೆಕೆಮಿಗೆ ಹೋದರು. 13 ಇಸ್ರೇಲನು ಯೋಸೇಫನಿಗೆ, “ಶೆಕೆಮಿಗೆ ಹೋಗು. ನಿನ್ನ ಅಣ್ಣಂದಿರು ಅಲ್ಲಿ ನನ್ನ ಆಡುಕುರಿಗಳನ್ನು ಮೇಯಿಸುತ್ತಿದ್ದಾರೆ” ಎಂದು ಹೇಳಿದನು.
ಯೋಸೇಫನು, “ಸರಿ, ಹೋಗುವೆನು” ಎಂದು ಉತ್ತರಿಸಿದನು.
14 ಇಸ್ರೇಲನು, “ನಿನ್ನ ಅಣ್ಣಂದಿರ ಮತ್ತು ಆಡುಕುರಿಗಳ ಕ್ಷೇಮವನ್ನು ವಿಚಾರಿಸಿಕೊಂಡು ಬಂದು ನನಗೆ ತಿಳಿಸು” ಎಂದು ಹೇಳಿ ಅವನನ್ನು ಹೆಬ್ರೋನಿನ ಕಣಿವೆಯಿಂದ ಶೆಕೆಮಿಗೆ ಕಳುಹಿಸಿಕೊಟ್ಟನು.
15 ಶೆಕೆಮಿನಲ್ಲಿ ದಾರಿತಪ್ಪಿ ಯೋಸೇಫನು ಹೊಲಗಳಲ್ಲಿ ಅಲೆದಾಡುತ್ತಿರಲು ಅವನನ್ನು ಕಂಡ ಒಬ್ಬನು, “ಏನು ಹುಡುಕುತ್ತಿರುವೆ?” ಎಂದು ಕೇಳಿದನು.
16 ಯೋಸೇಫನು, “ನನ್ನ ಅಣ್ಣಂದಿರನ್ನು ಹುಡುಕುತ್ತಿದ್ದೇನೆ. ಅವರು ತಮ್ಮ ಆಡುಕುರಿಗಳನ್ನು ಎಲ್ಲಿ ಮೇಯಿಸುತ್ತಿದ್ದಾರೆ?” ಎಂದು ಕೇಳಿದನು.
17 ಅದಕ್ಕೆ ಅವನು, “ಅವರು ಇಲ್ಲಿಂದ ಹೊರಟುಹೋದರು. ದೋತಾನಿಗೆ ಹೋಗೋಣ ಎಂದು ಅವರು ಮಾತಾಡಿಕೊಳ್ಳುವುದನ್ನು ನಾನು ಕೇಳಿದೆ” ಎಂದು ಹೇಳಿದನು. ಆದ್ದರಿಂದ ಯೋಸೇಫನು ಅವರನ್ನು ಹುಡುಕುತ್ತಾ ಹೋಗಿ ದೋತಾನಿನಲ್ಲಿ ಅವರನ್ನು ಕಂಡನು.
ಯೋಸೇಫನನ್ನು ಗುಲಾಮತನಕ್ಕೆ ಮಾರಿದ್ದು
18 ಯೋಸೇಫನನ್ನು ಬಹುದೂರದಿಂದಲೇ ಕಂಡ ಅವನ ಅಣ್ಣಂದಿರು ಅವನನ್ನು ಕೊಲ್ಲಲು ಒಂದು ಉಪಾಯ ಮಾಡಿದರು. 19 ಅವರು ಒಬ್ಬರಿಗೊಬ್ಬರು, “ಅಗೋ, ಅಲ್ಲಿ ಬರುತ್ತಿದ್ದಾನೆ ಕನಸುಗಾರನಾದ ಯೋಸೇಫ. 20 ಅವನನ್ನು ಕೊಲ್ಲಲು ಇದೇ ತಕ್ಕ ಸಮಯ. ಅವನನ್ನು ಕೊಂದು ನೀರಿಲ್ಲದ ಬಾವಿಯೊಳಗೆ ದಬ್ಬಿ, ಕ್ರೂರ ಪ್ರಾಣಿಯೊಂದು ಅವನನ್ನು ತಿಂದುಬಿಟ್ಟಿತೆಂದು ನಮ್ಮ ತಂದೆಗೆ ಹೇಳೋಣ. ಆಗ ಅವನ ಕನಸುಗಳೆಲ್ಲ ಹೇಗೆ ನಿಜವಾಗುತ್ತವೊ ನೋಡೋಣ” ಎಂದು ಮಾತಾಡಿಕೊಂಡರು.
21 ಆದರೆ ರೂಬೇನನು ಅವರಿಗೆ, “ಅವನನ್ನು ಕೊಲ್ಲಬೇಡಿ; 22 ಅರಣ್ಯದಲ್ಲಿರುವ ಬರಿದಾದ ಬಾವಿಗೆ ಅವನನ್ನು ನೂಕಿಬಿಡಿ; ಆದರೆ ಅವನಿಗೆ ನೋವು ಮಾಡಬೇಡಿ” ಎಂದು ಹೇಳಿದನು. ತರುವಾಯ ಯೋಸೇಫನನ್ನು ಬಾವಿಯಿಂದ ಮೇಲೆತ್ತಿ ತಂದೆಗೆ ಅವನನ್ನು ಒಪ್ಪಿಸಬೇಕೆಂಬುದೇ ರೂಬೇನನ ಅಪೇಕ್ಷೆಯಾಗಿತ್ತು. 23 ಯೋಸೇಫನು ಬಂದಾಗ ಅವನ ಅಣ್ಣಂದಿರು ಅವನನ್ನು ಹಿಡಿದು ಅವನ ನಿಲುವಂಗಿಯನ್ನು ಹರಿದುಹಾಕಿ 24 ನೀರಿಲ್ಲದ ಒಂದು ಬಾವಿಯೊಳಗೆ ತಳ್ಳಿದರು.
25 ಯೋಸೇಫನು ಬಾವಿಯೊಳಗಿದ್ದಾಗ, ಅವನ ಅಣ್ಣಂದಿರು ಊಟಕ್ಕೆ ಕುಳಿತುಕೊಂಡರು. ಅವರು ಕಣ್ಣೆತ್ತಿ ನೋಡಿದಾಗ ಗಿಲ್ಯಾದಿನಿಂದ ಈಜಿಪ್ಟಿಗೆ ಹೋಗುತ್ತಿದ್ದ ವ್ಯಾಪಾರಿಗಳನ್ನು ಕಂಡರು. ಅವರ ಒಂಟೆಗಳು ಅನೇಕ ಬಗೆಯ ಸಾಂಬಾರ ಪದಾರ್ಥಗಳನ್ನು ಮತ್ತು ಬೆಲೆಬಾಳುವ ವಸ್ತುಗಳನ್ನು ಹೊತ್ತುಕೊಂಡು ಹೋಗುತ್ತಿದ್ದವು. 26 ಆದ್ದರಿಂದ ಯೆಹೂದನು ತನ್ನ ಸಹೋದರರಿಗೆ, “ನಾವು ನಮ್ಮ ತಮ್ಮನನ್ನು ಕೊಂದು ಅವನ ಮರಣವನ್ನು ಮರೆಮಾಡಿದರೆ ನಮಗಾಗುವ ಲಾಭವೇನು? 27 ಈ ವ್ಯಾಪಾರಿಗಳಿಗೆ ನಾವು ಅವನನ್ನು ಮಾರಿದರೆ ನಮಗೆ ಹೆಚ್ಚು ಲಾಭವಾಗುವುದು; ಆಮೇಲೆ ನಮ್ಮ ತಮ್ಮನನ್ನು ಕೊಂದ ಅಪರಾಧವೂ ನಮ್ಮ ಮೇಲಿರುವುದಿಲ್ಲ” ಎಂದು ಹೇಳಿದನು. ಅದಕ್ಕೆ ಉಳಿದ ಸಹೋದರರೆಲ್ಲ ಒಪ್ಪಿಕೊಂಡರು. 28 ಮಿದ್ಯಾನಿನ ವ್ಯಾಪಾರಿಗಳು ಸಮೀಪಿಸಿದಾಗ, ಅಣ್ಣಂದಿರು ಯೋಸೇಫನನ್ನು ಬಾವಿಯೊಳಗಿಂದ ಹೊರತೆಗೆದು ಇಪ್ಪತ್ತು ಬೆಳ್ಳಿಯ ನಾಣ್ಯಗಳಿಗೆ ಮಾರಿದರು. ವ್ಯಾಪಾರಿಗಳು ಯೋಸೇಫನನ್ನು ಈಜಿಪ್ಟಿಗೆ ಕೊಂಡೊಯ್ದರು.
29 ಆ ಸಮಯದಲ್ಲಿ ರೂಬೇನನು ತನ್ನ ಸಹೋದರರೊಡನೆ ಇರಲಿಲ್ಲ. ಅವರು ಯೋಸೇಫನನ್ನು ಮಾರಿದ್ದು ಅವನಿಗೆ ಗೊತ್ತಿರಲಿಲ್ಲ. ರೂಬೇನನು ಬಾವಿಗೆ ಹಿಂತಿರುಗಿ ಬಂದಾಗ, ಯೋಸೇಫನನ್ನು ಅಲ್ಲಿ ಕಾಣದೆ ದುಃಖದಿಂದ ತನ್ನ ಬಟ್ಟೆಗಳನ್ನು ಹರಿದುಕೊಂಡನು. 30 ರೂಬೇನನು ತನ್ನ ಸಹೋದರರ ಬಳಿಗೆ ಹೋಗಿ, “ಹುಡುಗನು ಬಾವಿಯೊಳಗೆ ಇಲ್ಲ. ಈಗ ನಾನೇನು ಮಾಡಲಿ?” ಎಂದು ಕೇಳಿದನು. 31 ಬಳಿಕ ಅವರು ಒಂದು ಆಡನ್ನು ಕತ್ತರಿಸಿ ಆಡಿನ ರಕ್ತವನ್ನು ಯೋಸೇಫನ ಸುಂದರವಾದ ನಿಲುವಂಗಿಯ ಮೇಲೆ ಹಾಕಿದರು. 32 ಬಳಿಕ ಆ ನಿಲುವಂಗಿಯನ್ನು ತಮ್ಮ ತಂದೆಯ ಬಳಿಗೆ ತೆಗೆದುಕೊಂಡು ಹೋಗಿ, “ನಾವು ಈ ನಿಲುವಂಗಿಯನ್ನು ಕಂಡೆವು. ಇದು ಯೋಸೇಫನ ನಿಲುವಂಗಿಯೋ?” ಎಂದು ಕೇಳಿದರು.
33 ತಂದೆಯು ಆ ನಿಲುವಂಗಿಯನ್ನು ನೋಡಿ ಅದನ್ನು ಗುರುತಿಸಿ, “ಹೌದು, ಇದು ಯೋಸೇಫನದೇ. ಯಾವುದೋ ಕ್ರೂರ ಪ್ರಾಣಿಯ ಬಾಯಿಗೆ ತುತ್ತಾದನು” ಎಂದು ಹೇಳಿ 34 ದುಃಖದಿಂದ ತನ್ನ ಬಟ್ಟೆಗಳನ್ನು ಹರಿದುಕೊಂಡು ಗೋಣಿತಟ್ಟನ್ನು ಸುತ್ತಿಕೊಂಡು ಬಹುದಿನಗಳವರೆಗೆ ದುಃಖಪಟ್ಟನು. 35 ಯಾಕೋಬನ ಗಂಡುಮಕ್ಕಳು ಮತ್ತು ಹೆಣ್ಣುಮಕ್ಕಳು ಎಷ್ಟೇ ಸಂತೈಸಿದರೂ ಯಾಕೋಬನಿಗೆ ಆದರಣೆಯಾಗಲಿಲ್ಲ. ಯಾಕೋಬನು ಅವರಿಗೆ, “ನಾನು ಸಾಯುವ ತನಕ ನನ್ನ ಮಗನಿಗಾಗಿ ದುಃಖಪಡುವೆ” ಎಂದು ಹೇಳಿ ದುಃಖಿಸುತ್ತಲೇ ಇದ್ದನು.
36 ಮಿದ್ಯಾನಿನ ವ್ಯಾಪಾರಿಗಳು ಯೋಸೇಫನನ್ನು ಈಜಿಪ್ಟಿನಲ್ಲಿ ಮಾರಿದರು. ಅವರು ಅವನನ್ನು ಫರೋಹನ ಕಾವಲುಗಾರರಿಗೆ ನಾಯಕನಾಗಿದ್ದ ಪೋಟೀಫರನಿಗೆ ಮಾರಿದರು.
ಯೆಹೂದನು ಮತ್ತು ತಾಮಾರಳು
38 ಆ ಕಾಲದಲ್ಲಿ ಯೆಹೂದನು ತನ್ನ ಸಹೋದರರನ್ನು ಬಿಟ್ಟು ಹೀರಾ ಎಂಬುವನೊಂದಿಗೆ ವಾಸಿಸಲು ಹೋದನು. ಅವನು ಅದುಲ್ಲಾಮ್ ಊರಿನವನು. 2 ಯೆಹೂದನು ಅಲ್ಲಿ ಒಬ್ಬ ಕಾನಾನ್ಯನ ಮಗಳನ್ನು ಕಂಡು ಆಕೆಯನ್ನು ಮದುವೆಮಾಡಿಕೊಂಡನು. ಆ ಹುಡುಗಿಯ ತಂದೆಯ ಹೆಸರು ಶೂಗ. 3 ಆಕೆಯು ಒಬ್ಬ ಮಗನನ್ನು ಹೆತ್ತಳು. ಅವರು ಅವನಿಗೆ ಏರ ಎಂದು ಹೆಸರಿಟ್ಟರು. 4 ಬಳಿಕ ಆಕೆ ಮತ್ತೊಬ್ಬ ಮಗನಿಗೆ ಜನನವಿತ್ತಳು. ಅವರು ಆ ಮಗನಿಗೆ ಓನಾನ ಎಂದು ಹೆಸರಿಟ್ಟರು. 5 ಆಕೆಗೆ ಮೂರನೆಯ ಮಗನು ಹುಟ್ಟಿದಾಗ ಆಕೆ ಅದಕ್ಕೆ ಶೇಲಹ ಎಂದು ಹೆಸರಿಟ್ಟಳು. ಆ ಮಗು ಹುಟ್ಟಿದಾಗ ಯೆಹೂದನು ಕಜೀಬೂರಿನಲ್ಲಿ ವಾಸಿಸುತ್ತಿದ್ದನು.
6 ಯೆಹೂದನು ತನ್ನ ಮೊದಲನೆ ಮಗನಾದ ಏರನಿಗಾಗಿ ಒಬ್ಬ ಕನ್ನಿಕೆಯನ್ನು ಆಯ್ಕೆಮಾಡಿದನು. ಆಕೆಯ ಹೆಸರು ತಾಮಾರ. 7 ಆದರೆ ಏರನು ಅನೇಕ ಕೆಟ್ಟಕಾರ್ಯಗಳನ್ನು ಮಾಡಿದ್ದರಿಂದ ಯೆಹೋವನು ಅವನನ್ನು ಸಾಯಿಸಿದನು. 8 ಆಗ ಯೆಹೂದನು ಏರನ ತಮ್ಮನಾದ ಓನಾನನಿಗೆ, “ಹೋಗು, ಸತ್ತುಹೋದ ನಿನ್ನ ಅಣ್ಣನ ಹೆಂಡತಿಗೆ ಗಂಡನಂತಿರು. ನಿನ್ನ ಮೂಲಕ ಆಕೆಯಲ್ಲಿ ಹುಟ್ಟುವ ಮಕ್ಕಳು ನಿನ್ನ ಅಣ್ಣನಾದ ಏರನ ಮಕ್ಕಳಾಗಿರಲಿ” ಎಂದು ಹೇಳಿದನು.
9 ತಾಮಾರಳಲ್ಲಿ ತನಗೆ ಹುಟ್ಟುವ ಮಕ್ಕಳು ತನ್ನವರಾಗುವುದಿಲ್ಲವೆಂದು ಅರಿತುಕೊಂಡು ಓನಾನನು ಆಕೆಯನ್ನು ಕೂಡಿದರೂ ವೀರ್ಯವನ್ನು ನೆಲದ ಪಾಲು ಮಾಡುತ್ತಿದ್ದನು. 10 ಇದು ಯೆಹೋವನ ದೃಷ್ಟಿಯಲ್ಲಿ ಕೆಟ್ಟದ್ದಾಗಿದ್ದರಿಂದ ಆತನು ಓನಾನನನ್ನು ಸಹ ಸಾಯಿಸಿದನು. 11 ಆಗ ಯೆಹೂದನು ತನ್ನ ಸೊಸೆಯಾದ ತಾಮಾರಳಿಗೆ, “ನಿನ್ನ ತಂದೆಯ ಮನೆಗೆ ಹಿಂತಿರುಗಿ ಹೋಗಿ ಅಲ್ಲಿರು. ನನ್ನ ಮಗನಾದ ಶೇಲಹನು ದೊಡ್ಡವನಾಗುವ ತನಕ ಮದುವೆಯಾಗಬೇಡ” ಎಂದು ಹೇಳಿದನು. ಶೇಲಹನು ಸಹ ತನ್ನ ಅಣ್ಣಂದಿರಂತೆ ಸಾಯಬಹುದೆಂದು ಯೆಹೂದನು ಹೆದರಿಕೊಂಡಿದ್ದನು. ಆದ್ದರಿಂದ ತಾಮಾರಳು ತನ್ನ ತಂದೆಯ ಮನೆಗೆ ಹಿಂತಿರುಗಿ ಹೋದಳು.
12 ಆಮೇಲೆ ಬಹುದಿನಗಳಾದ ಮೇಲೆ ಯೆಹೂದನ ಹೆಂಡತಿಯಾಗಿದ್ದ ಶೂಗನ ಮಗಳು ತೀರಿಕೊಂಡಳು. ಯೆಹೂದನು ತನ್ನ ದುಃಖದ ಸಮಯ ತೀರಿದ ಮೇಲೆ ಅದುಲ್ಲಾಮ್ಯದವನಾದ ತನ್ನ ಸ್ನೇಹಿತ ಹೀರಾನೊಂದಿಗೆ ತನ್ನ ಕುರಿಗಳ ಉಣ್ಣೆ ಕತ್ತರಿಸುವುದಕ್ಕಾಗಿ ತಿಮ್ನಾ ಊರಿಗೆ ಹೋದನು. 13 ಮಾವನು ಉಣ್ಣೆ ಕತ್ತರಿಸುವುದಕ್ಕಾಗಿ ತಿಮ್ನಾ ಊರಿಗೆ ಹೋಗುತ್ತಿರುವುದು ತಾಮಾರಳಿಗೆ ತಿಳಿಯಿತು. 14 ತಾಮಾರಳು ಯಾವಾಗಲೂ ವಿಧವೆಯ ವಸ್ತ್ರಗಳನ್ನು ಧರಿಸಿಕೊಂಡಿರುತ್ತಿದ್ದಳು. ಆದರೆ ಈಗ ಆಕೆ ಬೇರೆ ಬಟ್ಟೆಗಳನ್ನು ಧರಿಸಿಕೊಂಡು ತನ್ನ ಮುಖವನ್ನು ಮುಸುಕಿನಿಂದ ಮುಚ್ಚಿಕೊಂಡು ತಿಮ್ನಾ ಊರಿನ ಸಮೀಪದಲ್ಲಿರುವ ಏನಯಿಮೂರಿನ ದಾರಿಯಲ್ಲಿ ಕುಳಿತುಕೊಂಡಳು. ಯೆಹೂದನ ಚಿಕ್ಕಮಗನಾದ ಶೇಲಹನು ಬೆಳೆದು ದೊಡ್ಡವನಾಗಿರುವುದು ತಾಮಾರಳಿಗೆ ತಿಳಿದಿತ್ತು. ಆದರೆ ಆಕೆಗೆ ಅವನನ್ನು ಮದುವೆ ಮಾಡಿಸಲು ಯೆಹೂದನು ಆಲೋಚಿಸಿರಲಿಲ್ಲ.
15 ಯೆಹೂದನು ಆ ದಾರಿಯಲ್ಲಿ ಪ್ರಯಾಣ ಮಾಡುತ್ತಿರಲು ಆಕೆಯನ್ನು ಕಂಡು ವೇಶ್ಯೆಯೆಂದು ಭಾವಿಸಿದನು. (ಆಕೆಯು ವೇಶ್ಯೆಯಂತೆ ಮುಸುಕು ಹಾಕಿಕೊಂಡಿದ್ದಳು.) 16 ಆದ್ದರಿಂದ ಯೆಹೂದನು ಆಕೆಯ ಬಳಿಗೆ ಹೋಗಿ, “ನಾನು ನಿನ್ನನ್ನು ಕೂಡಬಹುದೇ?” ಎಂದು ಕೇಳಿದನು. (ಆಕೆ ತನ್ನ ಸೊಸೆಯಾದ ತಾಮಾರಳೆಂದು ಯೆಹೂದನಿಗೆ ತಿಳಿದಿರಲಿಲ್ಲ.)
ಅವಳು “ನೀನು ನನಗೆ ಏನು ಕೊಡುವೆ?” ಎಂದು ಕೇಳಿದಳು.
17 ಯೆಹೂದನು, “ನನ್ನ ಮಂದೆಯಿಂದ ನಿನಗೆ ಒಂದು ಆಡುಮರಿಯನ್ನು ಕಳುಹಿಸಿಕೊಡುವೆ” ಎಂದು ಉತ್ತರಿಸಿದನು.
ಅವಳು “ಸರಿ, ನೀನು ನನಗೆ ಆಡುಮರಿಯನ್ನು ಕಳುಹಿಸಿ ಕೊಡುವ ತನಕ ನನ್ನಲ್ಲಿ ಏನಾದರೂ ಒತ್ತೆಯಿಡಬೇಕು” ಎಂದು ಹೇಳಿದಳು.
18 ಯೆಹೂದನು, “ಏನು ಒತ್ತೆಯಿಡಲಿ?” ಎಂದು ಕೇಳಿದನು.
ತಾಮಾರಳು, “ನಿನ್ನ ಪತ್ರಗಳ ಮೇಲೆ ಉಪಯೋಗಿಸುವ ನಿನ್ನ ಮುದ್ರೆಯನ್ನೂ ಅದರ ದಾರವನ್ನೂ ಮತ್ತು ನಿನ್ನ ಊರುಗೋಲನ್ನೂ ಕೊಡು” ಎಂದು ಉತ್ತರಿಸಿದಳು. ಯೆಹೂದನು ಅವುಗಳನ್ನು ಆಕೆಗೆ ಕೊಟ್ಟನು. ಯೆಹೂದನು ಆಕೆಯನ್ನು ಕೂಡಿದನು; ಅವಳು ಗರ್ಭಿಣಿಯಾದಳು. 19 ತಾಮಾರಳು ಮನೆಗೆ ಹೋಗಿ ಮುಸುಕನ್ನು ತೆಗೆದುಹಾಕಿ ಮತ್ತೆ ವಿಧವಾವಸ್ತ್ರಗಳನ್ನು ಧರಿಸಿಕೊಂಡಳು.
20 ಯೆಹೂದನು ಮಾತು ಕೊಟ್ಟಿದ್ದಂತೆಯೇ ಒಂದು ಆಡುಮರಿಯನ್ನು ತನ್ನ ಸ್ನೇಹಿತನಾದ ಹೀರಾನ ಮೂಲಕ ಏನಯಿಮಿಗೆ ಕಳುಹಿಸಿ ಆ ಮುದ್ರೆಯನ್ನೂ ಊರುಗೋಲನ್ನೂ ತೆಗೆದುಕೊಂಡು ಬರುವಂತೆ ಅವನಿಗೆ ತಿಳಿಸಿದನು. ಆದರೆ ಅವನು ಅವಳನ್ನು ಕಂಡುಹಿಡಿಯಲಾಗಲಿಲ್ಲ. 21 ಅವನು ಏನಯಿಮ್ ಊರಿನ ಕೆಲವು ಗಂಡಸರಿಗೆ, “ಇಲ್ಲಿಯ ದಾರಿಯ ಸಮೀಪದಲ್ಲಿರುತ್ತಿದ್ದ ವೇಶ್ಯೆಯು ಎಲ್ಲಿದ್ದಾಳೆ?” ಎಂದು ಕೇಳಿದನು.
ಅದಕ್ಕೆ ಅವರು, “ಇಲ್ಲಿ ಯಾವ ವೇಶ್ಯೆಯೂ ಇಲ್ಲ” ಎಂದು ಉತ್ತರಿಸಿದರು.
22 ಆದ್ದರಿಂದ ಅವನು ಯೆಹೂದನ ಬಳಿಗೆ ಹಿಂತಿರುಗಿ ಬಂದು, “ನಾನು ಆ ವೇಶ್ಯೆಯನ್ನು ಕಂಡುಹಿಡಿಯಲಾಗಲಿಲ್ಲ. ಅದಲ್ಲದೆ ಆ ಸ್ಥಳದ ಗಂಡಸರು ಅಲ್ಲಿ ಒಬ್ಬ ವೇಶ್ಯೆಯೂ ಇಲ್ಲ ಎಂದು ಹೇಳಿದರು” ಅಂದನು.
23 ಅದಕ್ಕೆ ಯೆಹೂದನು, “ಆಕೆ ಆ ವಸ್ತುಗಳನ್ನು ಇಟ್ಟುಕೊಳ್ಳಲಿ. ಜನರು ನಮ್ಮನ್ನು ಕಂಡು ನಗುವುದು ನನಗೆ ಇಷ್ಟವಿಲ್ಲ. ನಾನು ಅವಳಿಗೆ ಆಡನ್ನು ಕೊಡಲು ಪ್ರಯತ್ನಿಸಿದೆ. ಆದರೆ ಅವಳು ನಿನಗೆ ಸಿಕ್ಕಲಿಲ್ಲವಷ್ಟೇ” ಎಂದು ಹೇಳಿದನು.
ತಾಮಾರಳಿಗೆ ಗರ್ಭಧಾರಣೆ
24 ಮೂರು ತಿಂಗಳಾದ ಬಳಿಕ, ಯಾರೋ ಒಬ್ಬನು ಯೆಹೂದನಿಗೆ, “ನಿನ್ನ ಸೊಸೆಯಾದ ತಾಮಾರಳು ವ್ಯಭಿಚಾರದಿಂದ ಗರ್ಭಿಣಿಯಾಗಿದ್ದಾಳೆ” ಎಂದು ತಿಳಿಸಿದನು.
ಆಗ ಯೆಹೂದನು, “ಆಕೆಯನ್ನು ಎಳೆದುಕೊಂಡು ಹೋಗಿ ಸುಟ್ಟುಬಿಡಿ” ಎಂದು ಹೇಳಿದನು.
25 ಆ ಗಂಡಸರು ತಾಮಾರಳನ್ನು ಕೊಲ್ಲಲು ಆಕೆಯ ಬಳಿಗೆ ಹೋದರು. ಆದರೆ ಆಕೆ ತನ್ನ ಮಾವನಿಗೆ, “ನನ್ನನ್ನು ಗರ್ಭಿಣಿ ಮಾಡಿದವನು ಈ ವಸ್ತುಗಳ ಒಡೆಯ. ಈ ವಸ್ತುಗಳನ್ನು ನೋಡು! ಇವು ಯಾರವು? ಈ ಮುದ್ರೆಯೂ ದಾರವೂ ಯಾರವು? ಇದು ಯಾರ ಕೈಕೋಲು?” ಎಂಬ ಸಂದೇಶವನ್ನು ಹೇಳಿ ಕಳುಹಿಸಿದಳು.
26 ಯೆಹೂದನು ಆ ವಸ್ತುಗಳನ್ನು ಗುರುತಿಸಿ, “ಆಕೆ ಸರಿಯಾದದ್ದನ್ನೇ ಮಾಡಿದ್ದಾಳೆ. ನಾನೇ ತಪ್ಪು ಮಾಡಿದೆ. ನಾನು ಆಕೆಗೆ ಮಾತುಕೊಟ್ಟಂತೆ ನನ್ನ ಮಗನಾದ ಶೇಲಹನನ್ನು ಆಕೆಗೆ ಕೊಡಬೇಕಿತ್ತು” ಎಂದು ಹೇಳಿದನು. ಆದರೆ ಯೆಹೂದನು ಆಕೆಯೊಡನೆ ಮತ್ತೆ ಮಲಗಿಕೊಳ್ಳಲಿಲ್ಲ.
27 ತಾಮಾರಳಿಗೆ ಹೆರಿಗೆಕಾಲ ಬಂತು. ಆಕೆಗೆ ಅವಳಿಜವಳಿ ಮಕ್ಕಳಾಗುವುದನ್ನು ದಾದಿಯು ಗಮನಿಸಿದಳು. 28 ಆಕೆಗೆ ಹೆರಿಗೆಯಾಗುವಾಗ ಒಂದು ಮಗು ತನ್ನ ಕೈಚಾಚಿತು. ದಾದಿಯು ಆ ಮಗುವಿನ ಕೈಗೆ ಕೆಂಪುದಾರವನ್ನು ಕಟ್ಟಿ, “ಮೊದಲನೆಯವನು” ಅಂದಳು. 29 ಆದರೆ ಆ ಮಗು ತನ್ನ ಕೈಯನ್ನು ಹಿಂದಕ್ಕೆ ಎಳೆದುಕೊಂಡಿತು. ಆಮೇಲೆ ಮತ್ತೊಂದು ಮಗುವು ಮೊದಲು ಹುಟ್ಟಿತು. ಆದ್ದರಿಂದ ದಾದಿಯು, “ನೀನು ಮೊದಲನೆಯವನನ್ನು ಛೇದಿಸಿಕೊಂಡು ಬಂದೆ” ಅಂದಳು. ಆದ್ದರಿಂದ ಅವರು ಆ ಮಗುವಿಗೆ “ಪೆರೆಚ್” ಎಂದು ಹೆಸರಿಟ್ಟರು. 30 ಆ ಬಳಿಕ ಮತ್ತೊಂದು ಮಗುವು ಹೊರಬಂದಿತು. ಆ ಮಗುವಿನ ಕೈಯಲ್ಲಿ ಕೆಂಪುದಾರವಿತ್ತು. ಅವರು ಅವನಿಗೆ “ಜೆರಹ” ಎಂದು ಹೆಸರಿಟ್ಟರು.
21 “ಸಹೋದರರು ಸ್ವಂತ ಸಹೋದರರಿಗೆ ವಿರೋಧವಾಗಿ ತಿರುಗಿಬಿದ್ದು ಅವರನ್ನು ಮರಣದಂಡನೆಗೆ ಒಪ್ಪಿಸುವರು. ತಂದೆಯಂದಿರು ತಮ್ಮ ಸ್ವಂತ ಮಕ್ಕಳಿಗೆ ವಿರೋಧವಾಗಿ ತಿರುಗಿಬಿದ್ದು ಅವರನ್ನು ಮರಣದಂಡನೆಗೆ ಒಪ್ಪಿಸುವರು. 22 ನೀವು ನನ್ನನ್ನು ಹಿಂಬಾಲಿಸುವುದರಿಂದ ಜನರೆಲ್ಲರೂ ನಿಮ್ಮನ್ನು ದ್ವೇಷಿಸುತ್ತಾರೆ. ಆದರೆ ಕಡೆಯವರೆಗೂ ತಾಳಿಕೊಳ್ಳುವವನು ರಕ್ಷಣೆ ಹೊಂದುವನು. 23 ಒಂದು ಊರಿನಲ್ಲಿ ನಿಮ್ಮನ್ನು ಹಿಂಸಿಸಿದರೆ ಮತ್ತೊಂದು ಊರಿಗೆ ಹೋಗಿ. ಮನುಷ್ಯಕುಮಾರನು ಪುನಃ ಬರುವುದಕ್ಕಿಂತ ಮುಂಚೆ ನೀವು ಇಸ್ರೇಲರ ಊರುಗಳಿಗೆಲ್ಲಾ ಹೋಗುವುದನ್ನು ಮುಗಿಸಿರುವುದಿಲ್ಲ ಎಂದು ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ.
24 “ಶಿಷ್ಯನು ಗುರುವಿಗಿಂತ ಉತ್ತಮನಲ್ಲ. ಆಳು ತನ್ನ ದಣಿಗಿಂತ ಉತ್ತಮನಲ್ಲ. 25 ಶಿಷ್ಯನು ತನ್ನ ಗುರುವಿನಂತಾದರೆ ಸಾಕು. ಆಳು ತನ್ನ ದಣಿಯಂತಾದರೆ ಸಾಕು. ಕುಟುಂಬದ ಹಿರಿಯನನ್ನೇ ಬೆಲ್ಜೆಬೂಲ (ದೆವ್ವ) ಎಂದು ಕರೆದರೆ, ಆ ಕುಟುಂಬದ ಇತರರನ್ನು ಮತ್ತಷ್ಟು ಕೆಟ್ಟ ಹೆಸರಿನಿಂದ ಕರೆಯುವುದಿಲ್ಲವೇ?
ಭಯಪಡಬೇಕಾದದ್ದು ದೇವರಿಗೆ, ಮನುಷ್ಯರಿಗಲ್ಲ
(ಲೂಕ 12:2-7)
26 “ಆದಕಾರಣ ಆ ಜನರಿಗೆ ಹೆದರಬೇಡಿ. ಮರೆಯಾಗಿರುವ ಪ್ರತಿಯೊಂದೂ ಬಹಿರಂಗವಾಗುವುದು. ಗುಪ್ತವಾಗಿರುವ ಪ್ರತಿ ಸಂಗತಿಯು ಬಯಲಾಗುವುದು. 27 ನಾನು ಕತ್ತಲೆಯಲ್ಲಿ (ರಹಸ್ಯವಾಗಿ) ಈ ಸಂಗತಿಗಳನ್ನು ನಿಮಗೆ ಹೇಳುತ್ತಿದ್ದೇನೆ. ಆದರೆ ನೀವು ಈ ಸಂಗತಿಗಳನ್ನು ಬೆಳಕಿನಲ್ಲಿ ಹೇಳಬೇಕೆಂಬುದು ನನ್ನ ಇಷ್ಟ. ನಾನು ಈ ವಿಷಯಗಳನ್ನು ನಿಮಗೆ ಮೆಲ್ಲಗೆ ಹೇಳುತ್ತಿದ್ದೇನೆ. ಆದರೆ ನೀವು ಈ ವಿಷಯಗಳನ್ನು ಜನರಿಗೆಲ್ಲ ಗಟ್ಟಿಯಾಗಿ ಹೇಳಿರಿ.
28 “ಜನರಿಗೆ ಹೆದರಬೇಡಿ. ಅವರು ಶರೀರವನ್ನು ಮಾತ್ರ ಕೊಲ್ಲಬಹುದು. ಆತ್ಮವನ್ನು ಅವರು ಕೊಲ್ಲಲಾರರು. ಶರೀರವನ್ನೂ ಆತ್ಮವನ್ನೂ ನರಕಕ್ಕೆ ಹಾಕಬಲ್ಲ ದೇವರಿಗೆ ಭಯಪಡಿರಿ. 29 ಮಾರುಕಟ್ಟೆಯಲ್ಲಿ ಎರಡು ಗುಬ್ಬಚ್ಚಿಗಳನ್ನು ಒಂದು ನಾಣ್ಯಕ್ಕೆ[a] ಮಾರುತ್ತಾರೆ. ಆದರೆ ನಿಮ್ಮ ತಂದೆಯು ಅಪ್ಪಣೆ ಕೊಡದ ಹೊರತು ಅವುಗಳಲ್ಲಿ ಒಂದಾದರೂ ಸಾಯುವುದಿಲ್ಲ. 30 ನಿಮ್ಮ ತಲೆಯಲ್ಲಿ ಎಷ್ಟು ಕೂದಲುಗಳು ಇವೆ ಎಂಬುದು ಸಹ ದೇವರಿಗೆ ತಿಳಿದಿದೆ. 31 ಆದಕಾರಣ ಹೆದರಬೇಡಿ. ನೀವು ಅನೇಕ ಗುಬ್ಬಚ್ಚಿಗಳಿಗಿಂತಲೂ ಹೆಚ್ಚು ಬೆಲೆಯುಳ್ಳವರಾಗಿದ್ದೀರಿ.
ನಿಮ್ಮ ನಂಬಿಕೆಯ ಕುರಿತು ಬಹಿರಂಗ ಸಾಕ್ಷಿ
(ಲೂಕ 12:8-9)
32 “ಒಬ್ಬನು ಬೇರೆಯವರ ಮುಂದೆ, ತಾನು ನನ್ನವನೆಂದು ಹೇಳಿದರೆ, ನಾನು ಸಹ ಪರಲೋಕದಲ್ಲಿ ನನ್ನ ತಂದೆಯ ಮುಂದೆ ಅವನನ್ನು ನನ್ನವನೆಂದು ಹೇಳುತ್ತೇನೆ. 33 ಆದರೆ ಒಬ್ಬನು ಜನರ ಮುಂದೆ, ತಾನು ನನ್ನವನಲ್ಲವೆಂದು ಹೇಳಿದರೆ, ನಾನು ಸಹ ಪರಲೋಕದಲ್ಲಿ ನನ್ನ ತಂದೆಯ ಮುಂದೆ ಅವನು ನನ್ನವನಲ್ಲವೆಂದು ಹೇಳುತ್ತೇನೆ.
ಯೇಸುವನ್ನು ಹಿಂಬಾಲಿಸುವವರಿಗೆ ಬರುವ ತೊಂದರೆಗಳು
(ಲೂಕ 12:51-53; 14:26-27)
34 “ಭೂಲೋಕದಲ್ಲಿ ಶಾಂತಿಯನ್ನು ಉಂಟುಮಾಡಲು ನಾನು ಬಂದಿದ್ದೇನೆಂದು ಯೋಚಿಸಬೇಡಿ. ನಾನು ಶಾಂತಿಯನ್ನು ಉಂಟುಮಾಡಲು ಬರಲಿಲ್ಲ, ಖಡ್ಗ ಹಾಕಲು ಬಂದಿದ್ದೇನೆ. 35-36 ಈ ಪ್ರವಾದನೆ ನೆರವೇರುವಂತೆ ಮಾಡಲು ನಾನು ಬಂದಿದ್ದೇನೆ:
‘ಒಬ್ಬನಿಗೆ ಅವನ ಮನೆಯವರೇ ವೈರಿಗಳಾಗುವರು.
ಮಗನು ತಂದೆಗೆ,
ಮಗಳು ತಾಯಿಗೆ,
ಸೊಸೆಯು ಅತ್ತೆಗೆ ವೈರಿಗಳಾಗುವರು.’(A)
37 “ಯಾರಾದರೂ ನನ್ನನ್ನು ಪ್ರೀತಿಸುವುದಕ್ಕಿಂತ ಹೆಚ್ಚಾಗಿ ತನ್ನ ತಂದೆ ಅಥವಾ ತಾಯಿಯನ್ನು ಪ್ರೀತಿಸಿದರೆ, ಅವನು ನನ್ನ ಹಿಂಬಾಲಕನಾಗಲು ಯೋಗ್ಯನಲ್ಲ. ಯಾವನಾದರೂ ನನ್ನನ್ನು ಪ್ರೀತಿಸುವುದಕ್ಕಿಂತ ಹೆಚ್ಚಾಗಿ ತನ್ನ ಮಗನನ್ನು ಇಲ್ಲವೆ ಮಗಳನ್ನು ಪ್ರೀತಿಸಿದರೆ, ಅವನು ನನ್ನ ಹಿಂಬಾಲಕನಾಗಲು ಯೋಗ್ಯನಲ್ಲ. 38 ಯಾವನಾದರೂ ನನ್ನನ್ನು ಹಿಂಬಾಲಿಸುವಾಗ ಅವನಿಗೆ ಕೊಡುವಂಥ ಶಿಲುಬೆಯನ್ನು (ಸಂಕಟವನ್ನು) ಅಂಗೀಕರಿಸದಿದ್ದರೆ, ಅವನು ನನ್ನ ಹಿಂಬಾಲಕನಾಗಲು ಯೋಗ್ಯನಲ್ಲ. 39 ನನ್ನನ್ನು ಪ್ರೀತಿಸುವುದಕ್ಕಿಂತ ಹೆಚ್ಚಾಗಿ ತನ್ನ ಪ್ರಾಣವನ್ನು ಪ್ರೀತಿಸುವವನು ಅದನ್ನು ಕಳೆದುಕೊಳ್ಳುತ್ತಾನೆ. ನನಗಾಗಿ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ಪಡೆದುಕೊಳ್ಳುವನು.
ದೇವಜನರನ್ನು ಸ್ವಾಗತಿಸುವವನಿಗೆ ಆಶೀರ್ವಾದ
(ಮಾರ್ಕ 9:41)
40 “ನಿಮ್ಮನ್ನು ಅಂಗೀಕರಿಸುವವನು ನನ್ನನ್ನು ಸಹ ಅಂಗೀಕರಿಸುವನು. ನನ್ನನ್ನು ಅಂಗೀಕರಿಸುವವನು ನನ್ನನ್ನು ಕಳುಹಿಸಿದಾತನನ್ನು (ದೇವರನ್ನು) ಸಹ ಅಂಗೀಕರಿಸುವನು. 41 ಪ್ರವಾದಿಯನ್ನು ಪ್ರವಾದಿಯೆಂದು ಸಂಧಿಸಿ ಸ್ವಾಗತಿಸುವವನು ಆ ಪ್ರವಾದಿಗೆ ಬರತಕ್ಕ ಪ್ರತಿಫಲವನ್ನು ಪಡೆಯುವನು. ಸತ್ಪುರುಷನನ್ನು ಸತ್ಪುರುಷನೆಂದು ಸ್ವಾಗತಿಸುವವನು ಆ ಸತ್ಪುರುಷನಿಗೆ ಬರತಕ್ಕ ಪ್ರತಿಫಲವನ್ನು ಪಡೆಯುವನು. 42 ದೀನರಾದ ಇವರಿಗೆ ನನ್ನ ಹಿಂಬಾಲಕರೆಂಬ ನಿಮಿತ್ತ ಸಹಾಯ ಮಾಡುವವನು ಖಂಡಿತವಾಗಿಯೂ ಪ್ರತಿಫಲವನ್ನು ಪಡೆಯುವನು. ನನ್ನ ಹಿಂಬಾಲಕರಿಗೆ ಕೇವಲ ಒಂದು ಬಟ್ಟಲು ತಣ್ಣೀರನ್ನು ಕೊಟ್ಟರೂ ಸಹ ಅದಕ್ಕೆ ಬರತಕ್ಕ ಪ್ರತಿಫಲವು ತಪ್ಪುವುದೇ ಇಲ್ಲ.”
Kannada Holy Bible: Easy-to-Read Version. All rights reserved. © 1997 Bible League International