Old/New Testament
ಯಾಕೋಬನು ತೋರಿದ ಧೈರ್ಯ
33 ಯಾಕೋಬನು ಕಣ್ಣೆತ್ತಿ ನೋಡಿದಾಗ ಏಸಾವನು ನಾನೂರು ಜನರೊಂದಿಗೆ ಬರುವುದನ್ನು ಕಂಡನು. ಯಾಕೋಬನು ತನ್ನ ಕುಟುಂಬವನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಿದನು. ಲೇಯಾ ಮತ್ತು ಅವಳ ಮಕ್ಕಳು ಒಂದು ಗುಂಪಿನಲ್ಲಿದ್ದರು. ರಾಹೇಲಳು ಮತ್ತು ಯೋಸೇಫನು ಇನ್ನೊಂದು ಗುಂಪಿನಲ್ಲಿದ್ದರು. ಇಬ್ಬರು ದಾಸಿಯರು ಮತ್ತು ಅವರ ಮಕ್ಕಳು ಎರಡು ಗುಂಪುಗಳಲ್ಲಿದ್ದರು. 2 ಯಾಕೋಬನು ದಾಸಿಯರನ್ನು ಮತ್ತು ಅವರ ಮಕ್ಕಳನ್ನು ಮುಂಭಾಗದಲ್ಲಿಯೂ ಲೇಯಳನ್ನು ಮತ್ತು ಅವಳ ಮಕ್ಕಳನ್ನು ಅವರ ಹಿಂಭಾಗದಲ್ಲಿಯೂ, ರಾಹೇಲಳನ್ನು ಮತ್ತು ಯೋಸೇಫನನ್ನು ಕೊನೆಯ ಸ್ಥಳದಲ್ಲೂ ಇರಿಸಿದನು.
3 ಯಾಕೋಬನು ತಾನೇ ಮುಂದಾಗಿ ಏಸಾವನ ಬಳಿಗೆ ನಡೆದುಹೋಗುತ್ತಾ ಏಳು ಸಲ ನೆಲದ ತನಕ ಬಗ್ಗಿ ನಮಸ್ಕರಿಸಿದನು.
4 ಏಸಾವನು ಯಾಕೋಬನನ್ನು ಕಂಡಾಗ, ಓಡಿಬಂದು ತನ್ನ ಕೈಗಳಿಂದ ತಬ್ಬಿಕೊಂಡು ಅವನ ಕೊರಳಿನ ಮೇಲೆ ಮುದ್ದಿಟ್ಟನು; ಅವರಿಬ್ಬರೂ ಕಣ್ಣೀರು ಸುರಿಸಿದರು. 5 ಏಸಾವನು ಸ್ತ್ರೀಯರನ್ನು ಮತ್ತು ಮಕ್ಕಳನ್ನು ಕಣ್ಣೆತ್ತಿ ನೋಡಿ, “ನಿನ್ನೊಡನೆ ಇರುವ ಈ ಜನರು ಯಾರು?” ಎಂದು ಕೇಳಿದನು.
ಯಾಕೋಬನು, “ದೇವರು ನನಗೆ ಕೊಟ್ಟ ಮಕ್ಕಳೇ ಇವರು. ದೇವರು ನನಗೆ ಒಳ್ಳೆಯವನಾಗಿದ್ದನು” ಎಂದು ಹೇಳಿದನು.
6 ಆಮೇಲೆ ಇಬ್ಬರು ದಾಸಿಯರು ಮತ್ತು ಅವರೊಂದಿಗೆ ಇದ್ದ ಮಕ್ಕಳು ಏಸಾವನ ಬಳಿಗೆ ಹೋಗಿ ಅವನಿಗೆ ತಲೆಬಾಗಿ ನಮಸ್ಕರಿಸಿದರು. 7 ಆಮೇಲೆ ಲೇಯಾ ಮತ್ತು ಅವಳೊಂದಿಗೆ ಇದ್ದ ಮಕ್ಕಳು ಏಸಾವನ ಬಳಿಗೆ ಹೋಗಿ ಅವನಿಗೆ ತಲೆಬಾಗಿ ನಮಸ್ಕರಿಸಿದರು. ತರುವಾಯ, ರಾಹೇಲಳು ಮತ್ತು ಯೋಸೇಫನು ಏಸಾವನ ಬಳಿಗೆ ಹೋಗಿ ತಲೆಬಾಗಿ ನಮಸ್ಕರಿಸಿದರು.
8 ಏಸಾವನು, “ನಾನು ಬರುತ್ತಿರುವಾಗ ಕಂಡ ಆ ಜನರೆಲ್ಲಾ ಯಾರು? ಆ ಪಶುಗಳೆಲ್ಲಾ ಯಾತಕ್ಕೆ?” ಎಂದು ಕೇಳಿದನು.
ಯಾಕೋಬನು, “ನೀನು ನನ್ನನ್ನು ಸ್ವೀಕರಿಸಿಕೊಳ್ಳಲಿ ಎಂದು ಅವುಗಳನ್ನು ಉಡುಗೊರೆಗಳನ್ನಾಗಿ ಕಳುಹಿಸಿಕೊಟ್ಟೆನು” ಎಂದು ಹೇಳಿದನು.
9 ಆದರೆ ಏಸಾವನು, “ತಮ್ಮನೇ, ನೀನು ನನಗೆ ಉಡುಗೊರೆಗಳನ್ನು ಕೊಡಬೇಕಾಗಿಲ್ಲ, ನನಗೆ ಬೇಕಾದಷ್ಟಿದೆ” ಎಂದು ಹೇಳಿದನು.
10 ಯಾಕೋಬನು, “ಇಲ್ಲ! ನಾನು ನಿನ್ನನ್ನು ಬೇಡಿಕೊಳ್ಳುತ್ತೇನೆ; ನೀನು ನನ್ನನ್ನು ನಿಜವಾಗಿಯೂ ಸ್ವೀಕರಿಸಿಕೊಳ್ಳುವುದಾದರೆ, ನಾನು ಕೊಡುವ ಉಡುಗೊರೆಗಳನ್ನು ದಯವಿಟ್ಟು ಸ್ವೀಕರಿಸಬೇಕು. ನಿನ್ನ ಮುಖವನ್ನು ಮತ್ತೆ ನೋಡಿ ನನಗೆ ತುಂಬ ಸಂತೋಷವಾಗಿದೆ. ದೇವರ ಮುಖವನ್ನೇ ನೋಡಿದಂತಾಯಿತು. ನೀನು ನನ್ನನ್ನು ಸ್ವೀಕರಿಸಿಕೊಂಡದ್ದರಿಂದ ನನಗೆ ತುಂಬ ಸಂತೋಷವಾಗಿದೆ. 11 ಆದ್ದರಿಂದ ನಾನು ಕೊಡುವ ಈ ಉಡುಗೊರೆಗಳನ್ನು ಸ್ವೀಕರಿಸಿಕೊಳ್ಳಬೇಕೆಂದು ಬೇಡಿಕೊಳ್ಳುತ್ತಿರುವೆ. ದೇವರು ನನಗೆ ತುಂಬ ಒಳ್ಳೆಯವನಾಗಿದ್ದನು. ನನಗೆ ಬೇಕಾದದ್ದಕ್ಕಿಂತಲೂ ಹೆಚ್ಚಾಗಿ ನನ್ನಲ್ಲಿದೆ” ಎಂದು ಹೇಳಿದನು. ಹೀಗೆ ಯಾಕೋಬನು ಉಡುಗೊರೆಗಳನ್ನು ತೆಗೆದುಕೊಳ್ಳುವಂತೆ ಏಸಾವನನ್ನು ಬೇಡಿಕೊಂಡನು. ಆದ್ದರಿಂದ ಏಸಾವನು ಉಡುಗೊರೆಗಳನ್ನು ಸ್ವೀಕರಿಸಿದನು.
12 ಆಮೇಲೆ ಏಸಾವನು, “ಈಗ ನೀನು ನಿನ್ನ ಪ್ರಯಾಣವನ್ನು ಮುಂದುವರಿಸಬಹುದು. ನಾನು ನಿನ್ನ ಜೊತೆಯಲ್ಲಿ ಬರುತ್ತೇನೆ” ಎಂದು ಹೇಳಿದನು.
13 ಆದರೆ ಯಾಕೋಬನು ಅವನಿಗೆ, “ನನ್ನ ಮಕ್ಕಳು ಬಲಹೀನರೆಂದು ನಿನಗೆ ಗೊತ್ತಿದೆ. ನಾನು ನನ್ನ ದನಕುರಿಗಳನ್ನೂ ಅವುಗಳ ಮರಿಗಳನ್ನೂ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು. ಒಂದೇ ದಿನದಲ್ಲಿ ಬಹುದೂರದವರೆಗೆ ಎಡಬಿಡದೆ ನಡೆಸಿಕೊಂಡು ಹೋದರೆ, ಎಲ್ಲಾ ಪಶುಗಳು ಸತ್ತುಹೋಗುತ್ತವೆ. 14 ಆದ್ದರಿಂದ ನೀನು ಮುಂದಾಗಿ ಹೋಗು. ನಾನು ನಿನ್ನನ್ನು ನಿಧಾನವಾಗಿ ಹಿಂಬಾಲಿಸುವೆನು. ದನಕುರಿಗಳು ಮತ್ತು ಇತರ ಪಶುಗಳು ಸುರಕ್ಷಿತವಾಗಿರುವಂತೆಯೂ ನನ್ನ ಮಕ್ಕಳು ತುಂಬ ಆಯಾಸಗೊಳ್ಳದಂತೆಯೂ ನಾನು ಸಾಕಷ್ಟು ನಿಧಾನವಾಗಿ ಬಂದು ನಿನ್ನನ್ನು ಸೇಯೀರ್‌ನಲ್ಲಿ ಭೇಟಿಯಾಗುವೆನು” ಎಂದು ಹೇಳಿದನು.
15 ಅದಕ್ಕೆ ಏಸಾವನು, “ಹಾಗಾದರೆ ನನ್ನ ಜನರಲ್ಲಿ ಕೆಲವರನ್ನು ನಿನ್ನ ಸಹಾಯಕ್ಕಾಗಿ ಬಿಟ್ಟುಹೋಗುವೆನು” ಎಂದು ಹೇಳಿದನು.
ಆದರೆ ಯಾಕೋಬನು, “ಅದು ನಿನ್ನ ದಯೆ. ಆದರೆ ಅಂಥ ಅಗತ್ಯವೇನೂ ಇಲ್ಲ” ಎಂದು ಹೇಳಿದನು. 16 ಆದ್ದರಿಂದ ಆ ದಿನ ಏಸಾವನು ಸೇಯೀರಿಗೆ ಮರಳಿ ಪ್ರಯಾಣ ಮಾಡಿದನು. 17 ಆದರೆ ಯಾಕೋಬನು ಸುಕ್ಕೋತಿಗೆ ಹೋದನು. ಆ ಸ್ಥಳದಲ್ಲಿ ಅವನು ತನಗಾಗಿ ಒಂದು ಮನೆಯನ್ನೂ ತನ್ನ ದನಕುರಿಗಳಿಗಾಗಿ ಚಿಕ್ಕ ಕೊಟ್ಟಿಗೆಗಳನ್ನೂ ಕಟ್ಟಿಸಿದನು. ಆದ್ದರಿಂದ ಆ ಸ್ಥಳಕ್ಕೆ “ಸುಕ್ಕೋತ್” ಎಂದು ಹೆಸರಾಯಿತು.
18 ಆಮೇಲೆ ಯಾಕೋಬನು ಕಾನಾನ್ ದೇಶದ ಶೆಕೆಮ್ ಪಟ್ಟಣಕ್ಕೆ ಬಂದು ತನ್ನ ಪಾಳೆಯನ್ನು ಪಟ್ಟಣದ ಸಮೀಪದಲ್ಲಿದ್ದ ಒಂದು ಹೊಲದಲ್ಲಿ ಹಾಕಿಸಿದನು. 19 ಯಾಕೋಬನು ನೂರು ಬೆಳ್ಳಿನಾಣ್ಯಗಳನ್ನು ಕೊಟ್ಟು ಶೆಕೆಮನ ತಂದೆಯಾದ ಹಮೋರನ ಕುಟುಂಬದಿಂದ ಆ ಹೊಲವನ್ನು ಕೊಂಡುಕೊಂಡನು. 20 ದೇವರನ್ನು ಆರಾಧಿಸುವುದಕ್ಕಾಗಿ ಒಂದು ಯಜ್ಞವೇದಿಕೆಯನ್ನು ಕಟ್ಟಸಿ ಆ ಸ್ಥಳಕ್ಕೆ “ಇಸ್ರೇಲರ ದೇವರಾದ ಏಲೆಲೋಹೇ” ಎಂದು ಹೆಸರಿಟ್ಟನು.
ದೀನಳ ಮಾನಭಂಗ
34 ದೀನಳು ಲೇಯಾ ಮತ್ತು ಯಾಕೋಬನ ಮಗಳು. ದೀನಳು ಒಂದು ದಿನ ಆ ದೇಶದ ಸ್ತ್ರೀಯರನ್ನು ನೋಡಲು ಹೊರಗೆ ಹೋದಳು. 2 ಆ ದೇಶದ ರಾಜನಾಗಿದ್ದ ಹಮೋರನ ಮಗನಾದ ಶೆಕೆಮನು ದೀನಳನ್ನು ಕಂಡು ಅವಳನ್ನು ಎಳೆದುಕೊಂಡು ಹೋಗಿ ಬಲಾತ್ಕಾರ ಮಾಡಿದನು. 3 ಶೆಕೆಮನಿಗೆ ದೀನಳ ಮೇಲೆ ಪ್ರೀತಿಯುಂಟಾಗಿ ಆಕೆಯನ್ನು ಮದುವೆ ಮಾಡಿಕೊಳ್ಳಲು ಇಷ್ಟಪಟ್ಟನು. ಅವನು ತನ್ನನ್ನು ಮದುವೆಯಾಗಬೇಕೆಂದು ಆಕೆಯ ಸಂಗಡ ಮನವೊಲಿಸುವ ಮಾತುಗಳನ್ನಾಡಿದನು. 4 ಶೆಕೆಮನು ತನ್ನ ತಂದೆಗೆ, “ದಯವಿಟ್ಟು ಈ ಹುಡುಗಿಯನ್ನು ನನಗೆ ಮದುವೆಮಾಡಿಸು” ಎಂದು ಕೇಳಿಕೊಂಡನು.
5 ಯಾಕೋಬನು ತನ್ನ ಮಗಳಿಗೆ ಶೆಕೆಮನಿಂದ ಮಾನಭಂಗವಾದ ಸುದ್ದಿಯನ್ನು ಕೇಳಿದನು. ಆದರೆ ಅವನ ಗಂಡುಮಕ್ಕಳೆಲ್ಲ ಕುರಿಗಳೊಂದಿಗೆ ಹೊಲದಲ್ಲಿದ್ದುದರಿಂದ ಅವರು ಮನೆಗೆ ಬರುವತನಕ ಏನೂ ಮಾಡಲಿಲ್ಲ. 6 ಆ ಸಮಯದಲ್ಲಿ ಶೆಕೆಮನ ತಂದೆಯಾದ ಹಮೋರನು ಯಾಕೋಬನೊಂದಿಗೆ ಮಾತಾಡಲು ಬಂದನು.
7 ಹೊಲದಲ್ಲಿದ್ದ ಯಾಕೋಬನ ಗಂಡುಮಕ್ಕಳು ನಡೆದ ಸಂಗತಿಯನ್ನು ಕೇಳಿ ತುಂಬ ಕೋಪಗೊಂಡರು. ಶೆಕೆಮನು ಯಾಕೋಬನ ಮಗಳನ್ನು ಮಾನಭಂಗ ಮಾಡಿ ಇಸ್ರೇಲರಿಗೆ ಅವಮಾನ ಮಾಡಿದ್ದರಿಂದ ಅವರು ಆವೇಶಗೊಂಡರು. ಶೆಕೆಮನು ತುಂಬ ಕೆಟ್ಟದ್ದನ್ನು ಮಾಡಿದ್ದರಿಂದ ಅಣ್ಣಂದಿರು ಹೊಲದಿಂದ ಹಿಂತಿರುಗಿದರು.
8 ಆದರೆ ಹಮೋರನು ದೀನಳ ಅಣ್ಣಂದಿರೊಡನೆ ಮಾತಾಡಿದನು. ಅವನು ಅವರಿಗೆ, “ನನ್ನ ಮಗನಾದ ಶೆಕೆಮನು ದೀನಳನ್ನು ತುಂಬ ಇಷ್ಟಪಡುತ್ತಾನೆ. ಅವನು ಆಕೆಯನ್ನು ಮದುವೆ ಮಾಡಿಕೊಳ್ಳಲು ದಯವಿಟ್ಟು ಅವಕಾಶಕೊಡಿ. 9 ಈ ಮದುವೆಯು ನಮಗಾಗಿರುವ ಒಂದು ವಿಶೇಷ ಒಪ್ಪಂದವನ್ನು ತೋರಿಸುತ್ತದೆ. ಅದೇನೆಂದರೆ, ನಮ್ಮ ಗಂಡಸರು ನಿಮ್ಮ ಸ್ತ್ರೀಯರನ್ನು ಮದುವೆಯಾಗಬಹುದು ಮತ್ತು ನಿಮ್ಮ ಗಂಡಸರು ನಮ್ಮ ಸ್ತ್ರೀಯರನ್ನು ಮದುವೆಯಾಗಬಹುದು. 10 ನೀವು ನಮ್ಮೊಂದಿಗೆ ಒಂದೇ ದೇಶದಲ್ಲಿ ವಾಸವಾಗಿರಬಹುದು. ನಿಮಗೆ ಇಲ್ಲಿ ಜಮೀನು ಮಾಡಿಕೊಳ್ಳಲು ಮತ್ತು ವ್ಯಾಪಾರ ಮಾಡಲು ಸ್ವತಂತ್ರವಿದೆ” ಎಂದು ಹೇಳಿದನು.
11 ಶೆಕೆಮನು ಸಹ ಯಾಕೋಬನೊಡನೆ ಮತ್ತು ದೀನಳ ಅಣ್ಣಂದಿರೊಡನೆ ಮಾತಾಡಿದನು. ಶೆಕೆಮನು ಅವರಿಗೆ, “ದಯವಿಟ್ಟು ನನ್ನನ್ನು ಸ್ವೀಕಾರಮಾಡಿ ನೀವು ಏನೇ ಹೇಳಿದರೂ ನಾನು ಮಾಡುತ್ತೇನೆ. 12 ನಾನು ದೀನಳನ್ನು ಮದುವೆಯಾಗಲು ನೀವು ನನಗೆ ಅವಕಾಶಕೊಟ್ಟರೆ ಸಾಕು. ನಾನು ನಿಮಗೆ ಯಾವ ಉಡುಗೊರೆಯನ್ನು ಬೇಕಾದರೂ ಕೊಡುವೆನು. ನೀವು ಏನು ಕೇಳಿದರೂ ಕೊಡುವೆನು. ಆದರೆ ನನಗೆ ದೀನಳನ್ನು ಮದುವೆ ಮಾಡಿಸಿಕೊಡಿ” ಎಂದು ಕೇಳಿಕೊಂಡನು.
13 ಯಾಕೋಬನ ಗಂಡುಮಕ್ಕಳು ಶೆಕೆಮನಿಗೂ ಅವನ ತಂದೆಗೂ ಸುಳ್ಳು ಹೇಳಲು ನಿರ್ಧರಿಸಿದರು. ತಮ್ಮ ತಂಗಿಯಾದ ದೀನಳಿಗೆ ಶೆಕೆಮನು ಅಂಥ ಕೆಟ್ಟಕಾರ್ಯವನ್ನು ಮಾಡಿದ್ದರಿಂದ ಅವರು ಇನ್ನೂ ಆವೇಶದಿಂದ ಇದ್ದರು. 14 ಆದ್ದರಿಂದ ಆಕೆಯ ಅಣ್ಣಂದಿರು ಅವನಿಗೆ, “ನೀನು ನಮ್ಮ ತಂಗಿಯನ್ನು ಮದುವೆಯಾಗಲು ನಾವು ಅವಕಾಶ ಕೊಡುವಂತಿಲ್ಲ; ಯಾಕೆಂದರೆ ನಿನಗಿನ್ನೂ ಸುನ್ನತಿಯಾಗಿಲ್ಲ. ನಮ್ಮ ತಂಗಿಯು ನಿನ್ನನ್ನು ಮದುವೆಯಾಗುವುದು ತಪ್ಪಾಗುತ್ತದೆ. 15 ಆದರೆ ನೀನು ಮತ್ತು ನಿಮ್ಮ ಪಟ್ಟಣದಲ್ಲಿರುವ ಪ್ರತಿಯೊಬ್ಬ ಗಂಡಸು ನಮ್ಮಂತೆ ಸುನ್ನತಿ ಮಾಡಿಸಿಕೊಂಡರೆ ನೀನು ಆಕೆಯನ್ನು ಮದುವೆಯಾಗಬಹುದು. 16 ಆಮೇಲೆ ನಿಮ್ಮ ಗಂಡಸರು ನಮ್ಮ ಸ್ತ್ರೀಯರನ್ನು ಮದುವೆಯಾಗಬಹುದು ಮತ್ತು ನಮ್ಮ ಗಂಡಸರು ನಿಮ್ಮ ಸ್ತ್ರೀಯರನ್ನು ಮದುವೆಯಾಗಬಹುದು. ಆಗ ನಾವು ಒಂದೇ ಜನಾಂಗವಾಗುವೆವು. 17 ಆದರೆ ನೀವು ಸುನ್ನತಿ ಮಾಡಿಸಿಕೊಳ್ಳದಿದ್ದರೆ ನಾವು ದೀನಳನ್ನು ಕರೆದುಕೊಂಡು ಹೋಗುತ್ತೇವೆ” ಎಂದು ಹೇಳಿದರು.
18 ಅವರು ಹೇಳಿದ್ದು ಹಮೋರನಿಗೂ ಶೆಕೆಮನಿಗೂ ಒಳ್ಳೆಯದೆಂದು ತೋಚಿತು. 19 ದೀನಳ ಅಣ್ಣಂದಿರು ಹೇಳಿದ್ದನ್ನು ಮಾಡಲು ಶೆಕೆಮನು ಸಂತೋಷದಿಂದ ಒಪ್ಪಿಕೊಂಡನು.
ಶೆಕೆಮನಿಗೆ ಅವರ ಕುಟುಂಬದಲ್ಲಿ ತುಂಬ ಗೌರವವಿತ್ತು. 20 ಹಮೋರನು ಮತ್ತು ಶೆಕೆಮನು ತಮ್ಮ ನಗರದ ಸಭಾಸ್ಥಳಕ್ಕೆ ಹೋದರು. ಅವರು ಪಟ್ಟಣದ ಗಂಡಸರೊಂದಿಗೆ ಮಾತಾಡಿ, 21 “ಈ ಇಸ್ರೇಲರಿಗೆ ನಮ್ಮ ಸ್ನೇಹಿತರಾಗಿರಲು ಇಷ್ಟ; ಇವರು ನಮ್ಮ ದೇಶದಲ್ಲಿ ವಾಸವಾಗಿದ್ದುಕೊಂಡು ನಮ್ಮೊಂದಿಗೆ ಸಮಾಧಾನದಿಂದಿರುವುದು ನಮಗೂ ಇಷ್ಟ; ನಮ್ಮೆಲ್ಲರಿಗೂ ಬೇಕಾಗುವಷ್ಟು ಭೂಮಿ ನಮ್ಮಲ್ಲಿದೆ. ನಾವು ಅವರ ಸ್ತ್ರೀಯರನ್ನು ಮದುವೆಯಾಗವುದಕ್ಕೂ ನಮ್ಮ ಸ್ತ್ರೀಯರನ್ನು ಅವರಿಗೆ ಮದುವೆ ಮಾಡಿಕೊಡುವುದಕ್ಕೂ ಸಂತೋಷಪಡುತ್ತೇವೆ. 22 ಆದರೆ ನಾವು ಮಾಡಬೇಕಾದ ಒಂದೇ ಒಂದು ಕಾರ್ಯವೇನೆಂದರೆ, ಇಸ್ರೇಲರಂತೆ ನಮ್ಮ ಎಲ್ಲಾ ಗಂಡಸರು ಸುನ್ನತಿ ಮಾಡಿಸಿಕೊಳ್ಳಬೇಕು. 23 ನಾವು ಹೀಗೆ ಮಾಡಿದರೆ, ಅವರ ಎಲ್ಲಾ ದನಕುರಿಗಳಿಂದಲೂ ಪಶುಗಳಿಂದಲೂ ಐಶ್ವರ್ಯವಂತರಾಗುತ್ತೇವೆ. ನಾವು ಈ ಒಪ್ಪಂದವನ್ನು ಅವರೊಂದಿಗೆ ಮಾಡಿಕೊಂಡರೆ ಅವರು ನಮ್ಮೊಂದಿಗೆ ಇಲ್ಲಿ ವಾಸಿಸುವರು” ಎಂದು ಹೇಳಿದರು. 24 ಸಭಾಸ್ಥಳದಲ್ಲಿದ್ದ ಗಂಡಸರೆಲ್ಲರೂ ಹಮೋರ ಮತ್ತು ಶೆಕೆಮರ ಮಾತಿಗೆ ಒಪ್ಪಿಕೊಂಡರು. ಬಳಿಕ ಎಲ್ಲಾ ಗಂಡಸರು ಸುನ್ನತಿ ಮಾಡಿಸಿಕೊಂಡರು.
25 ಮೂರು ದಿನಗದರೂ ಸುನ್ನತಿ ಮಾಡಿಸಿಕೊಂಡಿದ್ದ ಗಂಡಸರು ಇನ್ನೂ ಗಾಯದ ನೋವಿನಲ್ಲಿದ್ದರು. ಈ ಸಮಯದಲ್ಲಿ ಗಂಡಸರು ಬಲಹೀನರಾಗಿರುತ್ತಾರೆ ಎಂಬುದು ಯಾಕೋಬನ ಇಬ್ಬರು ಗಂಡುಮಕ್ಕಳಾದ ಸಿಮೆಯೋನ್ ಮತ್ತು ಲೇವಿಗೆ ತಿಳಿದಿತ್ತು. ಆದ್ದರಿಂದ ಅವರು ಪಟ್ಟಣಕ್ಕೆ ಹೋಗಿ ಅಲ್ಲಿದ್ದ ಎಲ್ಲಾ ಗಂಡಸರನ್ನು ಕೊಂದುಹಾಕಿದರು. 26 ದೀನಳ ಅಣ್ಣಂದಿರಾದ ಸಿಮೆಯೋನನು ಮತ್ತು ಲೇವಿಯು ಹಮೋರನನ್ನೂ ಅವನ ಮಗನಾದ ಶೆಕೆಮನನ್ನೂ ಕೊಂದುಹಾಕಿ ದೀನಳನ್ನು ಶೆಕಮನ ಮನೆಯಿಂದ ಕರೆದುಕೊಂಡು ಬಂದರು. 27 ಯಾಕೋಬನ ಗಂಡುಮಕ್ಕಳು ಪಟ್ಟಣದೊಳಗೆ ಹೋಗಿ ಅಲ್ಲಿದ್ದ ಪ್ರತಿಯೊಂದನ್ನು ತೆಗೆದುಕೊಂಡರು. ತಮ್ಮ ತಂಗಿಗೆ ಶೆಕೆಮನು ಮಾಡಿದ ಮಾನಭಂಗದಿಂದ ಅವರು ಇನ್ನೂ ಕೋಪದಲ್ಲಿದ್ದರು. 28 ಹೀಗೆ ದೀನಳ ಅಣ್ಣಂದಿರು ಅವರ ದನಕುರಿಗಳನ್ನೂ ಕತ್ತೆಗಳನ್ನೂ ಪಟ್ಟಣದಲ್ಲಿಯೂ ಹೊಲದಲ್ಲಿಯೂ ಇದ್ದ ಆಸ್ತಿಯೆಲ್ಲವನ್ನೂ ತೆಗೆದುಕೊಂಡರು. 29 ಅವರ ಹೆಂಡತಿಯರನ್ನೂ ಮಕ್ಕಳನ್ನೂ ಸೆರೆಹಿಡಿದು ಮನೆಯಲ್ಲಿದ್ದದ್ದನ್ನೆಲ್ಲಾ ದೋಚಿಕೊಂಡರು.
30 ಆದರೆ ಯಾಕೋಬನು ಸಿಮೆಯೋನನಿಗೆ ಮತ್ತು ಲೇವಿಗೆ, “ನೀವು ನನ್ನನ್ನು ಅಪಾಯಕ್ಕೆ ಗುರಿಮಾಡಿದಿರಿ. ಈ ದೇಶದಲ್ಲಿರುವ ಎಲ್ಲಾ ಕಾನಾನ್ಯರು ಮತ್ತು ಪೆರಿಜೀಯರು ನನ್ನನ್ನು ದ್ವೇಷಿಸಿ ನನಗೆ ವಿರೋಧವಾಗುವರು. ನನಗಿರುವ ಜನರು ಕೆಲವರೇ. ಈ ದೇಶದಲ್ಲಿರುವ ಜನರು ಒಟ್ಟಾಗಿ ಸೇರಿಕೊಂಡು ನನಗೆ ವಿರೋಧವಾಗಿ ಹೋರಾಡಿದರೆ ನಾನೂ ನನ್ನ ಜನರೆಲ್ಲರೂ ನಾಶವಾಗುವೆವು” ಎಂದು ಹೇಳಿದನು.
31 ಆದರೆ ದೀನಳ ಅಣ್ಣಂದಿರು, “ನಮ್ಮ ತಂಗಿಯನ್ನು ಆ ಜನರು ಸೂಳೆಯಂತೆ ಉಪಯೋಗಿಸಿಕೊಳ್ಳಲು ನಾವು ಬಿಡಬೇಕೇ? ಇಲ್ಲ, ನಮ್ಮ ತಂಗಿಗೆ ಆ ಜನರು ಮಾಡಿದ್ದು ತಪ್ಪು” ಎಂದು ಹೇಳಿದರು.
ಬೇತೇಲಿನಲ್ಲಿ ಯಾಕೋಬನು
35 ದೇವರು ಯಾಕೋಬನಿಗೆ, “ನೀನು ಬೇತೇಲ್ ಪಟ್ಟಣಕ್ಕೆ ಹೋಗಿ ಅಲ್ಲೇ ವಾಸಿಸು ಮತ್ತು ಆರಾಧನೆಗಾಗಿ ಒಂದು ಯಜ್ಞವೇದಿಕೆಯನ್ನು ಕಟ್ಟಿಸು. ನೀನು ನಿನ್ನ ಅಣ್ಣನಾದ ಏಸಾವನ ಬಳಿಯಿಂದ ಓಡಿಹೋಗುತ್ತಿದ್ದಾಗ ದೇವರಾದ ‘ಏಲ್’ ನಿನಗೆ ಅಲ್ಲಿ ಕಾಣಿಸಿಕೊಳ್ಳಲಿಲ್ಲವೇ! ಆತನ ಆರಾಧನೆಗಾಗಿ ಅಲ್ಲಿ ಯಜ್ಞವೇದಿಕೆಯನ್ನು ಕಟ್ಟಿಸು” ಎಂದು ಹೇಳಿದನು.
2 ಆದ್ದರಿಂದ ಯಾಕೋಬನು ತನ್ನ ಕುಟುಂಬದವರಿಗೂ ತನ್ನ ಎಲ್ಲಾ ಸೇವಕರಿಗೂ, “ನಿಮ್ಮಲ್ಲಿರುವ ಮರದ ಮತ್ತು ಲೋಹದ ಎಲ್ಲಾ ಅನ್ಯದೇವರುಗಳನ್ನು ನಾಶಮಾಡಿರಿ. ನಿಮ್ಮನ್ನು ಶುದ್ಧಿ ಮಾಡಿಕೊಂಡು ಶುದ್ಧವಾದ ಬಟ್ಟೆಗಳನ್ನು ಧರಿಸಿಕೊಳ್ಳಿರಿ. 3 ನಾವು ಇಲ್ಲಿಂದ ಹೊರಟು ಬೇತೇಲಿಗೆ ಹೋಗೋಣ; ನಾನು ಕಷ್ಟದಲ್ಲಿದ್ದಾಗ ಸಹಾಯಮಾಡಿದ ದೇವರಿಗಾಗಿ ಒಂದು ಯಜ್ಞವೇದಿಕೆಯನ್ನು ಅಲ್ಲಿ ಕಟ್ಟಿಸುತ್ತೇನೆ. ನಾನು ಹೋದಕಡೆಗಳಲ್ಲೆಲ್ಲಾ ಆ ದೇವರು ನನ್ನೊಂದಿಗೆ ಇದ್ದನು” ಎಂದು ಹೇಳಿದನು.
4 ಆದ್ದರಿಂದ ಅವರು ತಮ್ಮಲ್ಲಿದ್ದ ಎಲ್ಲಾ ಅನ್ಯದೇವರುಗಳನ್ನೂ ತಮ್ಮ ಕಿವಿಗಳಲ್ಲಿದ್ದ ವಾಲೆಗಳನ್ನೂ ಯಾಕೋಬನಿಗೆ ಕೊಟ್ಟರು. ಯಾಕೋಬನು ಅವುಗಳನ್ನೆಲ್ಲಾ ಶೆಕೆಮ್ ಪಟ್ಟಣದ ಸಮೀಪದಲ್ಲಿರುವ ಏಲಾವೃಕ್ಷದ ಬುಡದಲ್ಲಿ ಹೂಳಿಟ್ಟನು.
5 ಯಾಕೋಬನು ಮತ್ತು ಅವನ ಗಂಡುಮಕ್ಕಳು ಆ ಸ್ಥಳದಿಂದ ಹೊರಟರು. ಆ ಪ್ರದೇಶದಲ್ಲಿದ್ದ ಜನರು ಅವರನ್ನು ಹಿಂಬಾಲಿಸಿ ಕೊಲ್ಲಬೇಕೆಂದಿದ್ದರು. ಆದರೆ ಅವರು ಭಯಪಟ್ಟು ಯಾಕೋಬನನ್ನು ಹಿಂಬಾಲಿಸಲಿಲ್ಲ. 6 ಯಾಕೋಬನು ಮತ್ತು ಅವರ ಜನರು ಲೂಜಿಗೆ ಹೋದರು. ಈಗ ಲೂಜನ್ನು “ಬೇತೇಲ್” ಎಂದು ಕರೆಯುತ್ತಾರೆ. ಅದು ಕಾನಾನ್ ದೇಶದಲ್ಲಿದೆ. 7 ಯಾಕೋಬನು ಅಲ್ಲಿ ಒಂದು ಯಜ್ಞವೇದಿಕೆಯನ್ನು ಕಟ್ಟಸಿದನು. ಯಾಕೋಬನು ತನ್ನ ಅಣ್ಣನ ಬಳಿಯಿಂದ ಓಡಿ ಹೋಗುತ್ತಿದ್ದಾಗ ದೇವರು ಅವನಿಗೆ ಮೊದಲು ಕಾಣಿಸಿಕೊಂಡದ್ದು ಆ ಸ್ಥಳದಲ್ಲೇ. ಆದ್ದರಿಂದ ಯಾಕೋಬನು ಆ ಸ್ಥಳಕ್ಕೆ “ಏಲ್ ಬೇತೇಲ್” ಎಂದು ಹೆಸರಿಟ್ಟನು.
8 ರೆಬೆಕ್ಕಳ ದಾಸಿಯಾದ ದೆಬೋರಳು ಅಲ್ಲಿ ಸತ್ತುಹೋದಳು. ಆದ್ದರಿಂದ ಅವರು ಆಕೆಯನ್ನು ಬೇತೇಲಿನ ಬಳಿಯಲ್ಲಿರುವ ಏಲಾವೃಕ್ಷದ ಬುಡದಲ್ಲಿ ಸಮಾಧಿ ಮಾಡಿದರು. ಆ ಸ್ಥಳಕ್ಕೆ “ಅಲ್ಲೋನ್ ಬಾಕೂತ್” ಎಂದು ಹೆಸರಿಟ್ಟರು.
ಯಾಕೋಬನ ಹೊಸ ಹೆಸರು
9 ಯಾಕೋಬನು ಪದ್ದನ್‌ಅರಾಮಿನಿಂದ ಹಿಂತಿರುಗಿ ಬಂದಾಗ, ದೇವರು ಅವನಿಗೆ ಮತ್ತೆ ಕಾಣಿಸಿಕೊಂಡು ಅವನನ್ನು ಆಶೀರ್ವದಿಸಿದನು. 10 ದೇವರು ಯಾಕೋಬನಿಗೆ, “ನಿನ್ನ ಹೆಸರು ಯಾಕೋಬ. ಆದರೆ ನಾನು ಆ ಹೆಸರನ್ನು ಬದಲಾಯಿಸುವೆನು. ಇನ್ನು ಮುಂದೆ ನೀನು ಯಾಕೋಬನೆಂದು ಕರೆಸಿಕೊಳ್ಳುವುದಿಲ್ಲ. ನಿನ್ನ ಹೊಸ ಹೆಸರು ‘ಇಸ್ರೇಲ್’” ಎಂದು ಹೇಳಿ ಅವನಿಗೆ “ಇಸ್ರೇಲ್” ಎಂದು ಹೆಸರಿಟ್ಟನು.
11 ದೇವರು ಅವನಿಗೆ, “ನಾನೇ ಸರ್ವಶಕ್ತನಾದ ದೇವರು. ನೀನು ಅನೇಕ ಮಕ್ಕಳನ್ನು ಪಡೆದು ಮಹಾಜನಾಂಗವಾಗಿ ಬೆಳೆಯುವೆ. ಅನೇಕ ಜನಾಂಗಗಳೂ ರಾಜರುಗಳೂ ನಿನ್ನೊಳಗಿಂದ ಬರುವರು. 12 ನಾನು ಅಬ್ರಹಾಮನಿಗೂ ಇಸಾಕನಿಗೂ ವಿಶೇಷವಾದ ದೇಶವನ್ನು ಕೊಟ್ಟೆನು. ಈಗ ನಾನು ಆ ದೇಶವನ್ನು ನಿನಗೆ ಕೊಡುವೆನು. ನಾನು ಆ ದೇಶವನ್ನು ನಿನ್ನ ಮುಂದಿನ ಸಂತತಿಗಳವರಿಗೆ ಕೊಡುವೆನು” ಎಂದು ಹೇಳಿದನು. 13 ಆಮೇಲೆ ದೇವರು ಆ ಸ್ಥಳದಿಂದ ಹೊರಟುಹೋದನು. 14-15 ಯಾಕೋಬನು ಈ ಸ್ಥಳದಲ್ಲಿ ಜ್ಞಾಪಕಾರ್ಥವಾಗಿ ಒಂದು ಸ್ಮಾರಕಕಲ್ಲನ್ನು ನಿಲ್ಲಿಸಿ ಅದರ ಮೇಲೆ ದ್ರಾಕ್ಷಾರಸವನ್ನೂ ಎಣ್ಣೆಯನ್ನೂ ಸುರಿದನು. ಇದು ಒಂದು ವಿಶೇಷವಾದ ಸ್ಥಳ. ಯಾಕೆಂದರೆ ಅಲ್ಲಿ ದೇವರು ಯಾಕೋಬನೊಂದಿಗೆ ಮಾತಾಡಿದನು. ಯಾಕೋಬನು ಆ ಸ್ಥಳಕ್ಕೆ “ಬೇತೇಲ್” ಎಂದು ಹೆಸರಿಟ್ಟನು.
ಹೆರಿಗೆ ಬೇನೆಯಿಂದ ರಾಹೇಲಳ ಮರಣ
16 ಯಾಕೋಬನು ಮತ್ತು ಅವನ ಜನರು ಬೇತೇಲಿನಿಂದ ಹೊರಟು ಬೆತ್ಲೆಹೇಮೆಂಬ ಎಫ್ರಾತೂರಿಗೆ ಬರುವುದಕ್ಕಿಂತ ಸ್ವಲ್ಪಮುಂಚೆ ರಾಹೇಲಳಿಗೆ ಹೆರಿಗೆ ಕಾಲ ಬಂದಿತು. 17 ಆದರೆ ರಾಹೇಲಳು ಈ ಹೆರಿಗೆಯಲ್ಲಿ ತುಂಬ ಕಷ್ಟಪಡಬೇಕಾಯಿತು. ಆಕೆಗೆ ಬಹಳ ನೋವಿತ್ತು. ರಾಹೇಲಳ ದಾದಿಯು ಇದನ್ನು ಕಂಡು, ಆಕೆಗೆ, “ರಾಹೇಲಳೇ, ಭಯಪಡಬೇಡ. ನೀನು ಮತ್ತೊಬ್ಬ ಮಗನಿಗೆ ಜನನ ಕೊಡುತ್ತಿರುವೆ” ಎಂದು ಹೇಳಿದಳು.
18 ರಾಹೇಲಳು ಮಗನನ್ನು ಹೆರುವಾಗ ಸತ್ತುಹೋದಳು; ಸಾಯುವುದಕ್ಕೆ ಮೊದಲು, ರಾಹೇಲಳು ಆ ಮಗುವಿಗೆ ಬೆನೋನಿ ಎಂದು ಹೆಸರಿಟ್ಟಳು. ಆದರೆ ಯಾಕೋಬನು ಅವನಿಗೆ ಬೆನ್ಯಾಮೀನ್ ಎಂದು ಹೆಸರಿಟ್ಟನು. ಹಾಗೆ ರಾಹೇಳಲು ಮೃತಪಟ್ಟಳು.
19 ರಾಹೇಲಳನ್ನು ಬೆತ್ಲೆಹೇಮೆಂಬ ಎಫ್ರಾತಿಗೆ ಹೋಗುವ ದಾರಿಯಲ್ಲಿ ಸಮಾಧಿ ಮಾಡಲಾಯಿತು. 20 ಯಾಕೋಬನು ರಾಹೇಲಳ ಗೌರವಾರ್ಥವಾಗಿ ಆಕೆಯ ಸಮಾಧಿಯ ಮೇಲೆ ವಿಶೇಷವಾದ ಒಂದು ಕಲ್ಲನ್ನು ಇಟ್ಟನು. ಇಂದಿಗೂ ಆ ವಿಶೇಷವಾದ ಕಲ್ಲು ಅಲ್ಲಿದೆ. 21 ಆಮೇಲೆ ಇಸ್ರೇಲನು ತನ್ನ ಪ್ರಯಾಣವನ್ನು ಮುಂದುವರೆಸಿ “ಮಿಗ್ದಲ್‌ಏದರ್” ಗೋಪುರದ ದಕ್ಷಿಣದಲ್ಲಿ ಗುಡಾರವನ್ನು ಹಾಕಿಸಿದನು.
22 ಇಸ್ರೇಲನು ಸ್ವಲ್ಪಕಾಲದವರೆಗೆ ಅಲ್ಲಿ ಇಳಿದುಕೊಂಡನು. ಅವನು ಅಲ್ಲಿದ್ದಾಗ ರೂಬೇನನು ಇಸ್ರೇಲನ ದಾಸಿಯಾದ[a] ಬಿಲ್ಹಳೊಡನೆ ಮಲಗಿಕೊಂಡನು. ಇಸ್ರೇಲನು ಇದರ ಬಗ್ಗೆ ಕೇಳಿದಾಗ ತುಂಬ ಕೋಪಗೊಂಡನು.
ಇಸ್ರಾಯೇಲನ ಕುಟುಂಬ
ಯಾಕೋಬನಿಗೆ (ಇಸ್ರೇಲ) ಹನ್ನೆರಡು ಗಂಡುಮಕ್ಕಳಿದ್ದರು.
23 ಲೇಯಳ ಗಂಡುಮಕ್ಕಳು: ಯಾಕೋಬನ ಚೊಚ್ಚಲ ಮಗನಾದ ರೂಬೇನ್, ಸಿಮೆಯೋನ್, ಲೇವಿ, ಯೆಹೂದ, ಇಸ್ಸಾಕಾರ್ ಮತ್ತು ಜೆಬುಲೂನ್.
24 ರಾಹೇಲಳ ಗಂಡುಮಕ್ಕಳು: ಯೋಸೇಫ ಮತ್ತು ಬೆನ್ಯಾಮೀನ್.
25 ಬಿಲ್ಹಳು ರಾಹೇಲಳ ದಾಸಿ. ಬಿಲ್ಹಳ ಗಂಡುಮಕ್ಕಳು: ದಾನ್ ಮತ್ತು ನಫ್ತಾಲಿ.
26 ಜಿಲ್ಪಳು ಲೇಯಳ ದಾಸಿ. ಜಿಲ್ಪಳ ಗಂಡುಮಕ್ಕಳು: ಗಾದ್ ಮತ್ತು ಆಶೇರ್.
ಇವರೆಲ್ಲರು ಯಾಕೋಬನಿಗೆ ಪದ್ದನ್‌ಅರಾಮಿನಲ್ಲಿ ಹುಟ್ಟಿದ ಗಂಡುಮಕ್ಕಳು.
27 ಯಾಕೋಬನು ತನ್ನ ತಂದೆಯಾದ ಇಸಾಕನ ಬಳಿಗೆ ಹೆಬ್ರೋನೆಂಬ ಕಿರ್ಯತರ್ಬದಲ್ಲಿದ್ದ ಮಮ್ರೆಗೆ ಬಂದನು. ಅಬ್ರಹಾಮನು ಮತ್ತು ಇಸಾಕನು ವಾಸವಾಗಿದ್ದದ್ದು ಇಲ್ಲೇ. 28 ಇಸಾಕನು ನೂರೆಂಭತ್ತು ವರ್ಷಗಳವರೆಗೆ ಜೀವಿಸಿದನು. 29 ಆಮೇಲೆ ಇಸಾಕನು ದಿನ ತುಂಬಿದ ಮುದುಕನಾಗುವವರೆಗೆ ಜೀವಿಸಿ ತೀರಿಕೊಂಡನು. ಅವನ ಮಕ್ಕಳಾದ ಏಸಾವನು ಮತ್ತು ಯಾಕೋಬನು ತಮ್ಮ ಅಜ್ಜನಿಗೆ ಸಮಾಧಿಯಾಗಿದ್ದ ಸ್ಥಳದಲ್ಲೇ ತಮ್ಮ ತಂದೆಗೆ ಸಮಾಧಿ ಮಾಡಿದರು.
ಯೇಸು ಅಪೊಸ್ತಲರಿಗೆ ಕೊಟ್ಟ ಆದೇಶ
(ಮಾರ್ಕ 3:13-19; 6:7-13; ಲೂಕ 6:12-16; 9:1-6)
10 ಯೇಸು ತನ್ನ ಹನ್ನೆರಡು ಮಂದಿ ಶಿಷ್ಯರನ್ನು ಒಟ್ಟಿಗೆ ಕರೆದು, ಅವರಿಗೆ ದುರಾತ್ಮಗಳನ್ನು ಬಿಡಿಸುವುದಕ್ಕೂ ಎಲ್ಲಾ ತರದ ವ್ಯಾಧಿ ಮತ್ತು ಕಾಯಿಲೆಗಳನ್ನು ವಾಸಿಮಾಡುವುದಕ್ಕೂ ಅಧಿಕಾರ ಕೊಟ್ಟನು. 2 ಹನ್ನೆರಡು ಮಂದಿ ಅಪೊಸ್ತಲರ ಹೆಸರುಗಳು ಹೀಗಿವೆ:
ಸೀಮೋನ (ಪೇತ್ರನೆಂದು ಕರೆಯುತ್ತಾರೆ) ಮತ್ತು
ಇವನ ಸಹೋದರ ಅಂದ್ರೆಯ,
ಜೆಬೆದಾಯನ ಮಗನಾದ ಯಾಕೋಬ,
ಅವನ ಸಹೋದರ ಯೋಹಾನ,
3 ಫಿಲಿಪ್ಪ
ಮತ್ತು ಬಾರ್ತೊಲೊಮಾಯ,
ತೋಮ,
ಸುಂಕವಸೂಲಿಗಾರನಾಗಿದ್ದ ಮತ್ತಾಯ,
ಅಲ್ಛಾಯನ ಮಗನಾದ ಯಾಕೋಬ,
ತದ್ದಾಯ,
4 ಯೆಹೂದ್ಯರ ರಾಜಕೀಯ ಪಂಗಡಕ್ಕೆ ಸೇರಿದ ಸಿಮೋನ
ಮತ್ತು ಯೇಸುವನ್ನು ಶತ್ರುಗಳಿಗೆ ಒಪ್ಪಿಸಿದ ಇಸ್ಕರಿಯೋತ ಯೂದ.
5 ಯೇಸು ಈ ಹನ್ನೆರಡು ಅಪೊಸ್ತಲರಿಗೆ ಕೆಲವು ಆಜ್ಞೆಗಳನ್ನು ನೀಡಿ ಪರಲೋಕರಾಜ್ಯವನ್ನು ಕುರಿತು ತಿಳಿಸುವುದಕ್ಕಾಗಿ ಅವರನ್ನು ಕಳುಹಿಸಿದನು. ಯೇಸು ಅವರಿಗೆ ಹೇಳಿದ್ದೇನೆಂದರೆ: “ಯೆಹೂದ್ಯರಲ್ಲದ ಜನರ ಬಳಿಗಾಗಲಿ ಸಮಾರ್ಯದವರು ವಾಸಿಸುವ ಯಾವ ಊರಿಗಾಗಲಿ ಹೋಗಬೇಡಿ. 6 ಆದರೆ ತಪ್ಪಿಸಿಕೊಂಡ ಕುರಿಗಳಂತಿರುವ ಇಸ್ರೇಲರ ಬಳಿಗೆ ಹೋಗಿ, 7 ಪರಲೋಕರಾಜ್ಯವು ಬೇಗನೆ ಬರುತ್ತದೆ ಎಂದು ಬೋಧಿಸಿ. 8 ರೋಗಿಗಳನ್ನು ವಾಸಿಮಾಡಿರಿ. ಸತ್ತವರನ್ನು ಬದುಕಿಸಿರಿ. ಕುಷ್ಠರೋಗಿಗಳನ್ನು ವಾಸಿಮಾಡಿರಿ. ಜನರನ್ನು ದೆವ್ವಗಳಿಂದ ಬಿಡಿಸಿರಿ. ನಾನು ನಿಮಗೆ ಈ ಅಧಿಕಾರಗಳನ್ನು ಉಚಿತವಾಗಿ ಕೊಡುತ್ತೇನೆ. ಆದ್ದರಿಂದ ಬೇರೆಯವರಿಗೆ ಉಚಿತವಾಗಿ ಸಹಾಯಮಾಡಿ. 9 ನಿಮ್ಮೊಂದಿಗೆ ಹಣವನ್ನಾಗಲಿ ತಾಮ್ರ, ಬೆಳ್ಳಿಬಂಗಾರಗಳನ್ನಾಗಲಿ ತೆಗೆದುಕೊಂಡು ಹೋಗಬೇಡಿ. 10 ಚೀಲವನ್ನಾಗಲಿ ಹೆಚ್ಚಿನ ಬಟ್ಟೆಗಳನ್ನಾಗಲಿ ಪಾದರಕ್ಷೆಗಳನ್ನಾಗಲಿ ಊರುಗೋಲುಗಳನ್ನಾಗಲಿ ತೆಗೆದುಕೊಂಡು ಹೋಗಬೇಡಿ. ಕೆಲಸಗಾರನಿಗೆ ಅಗತ್ಯವಾದವುಗಳನ್ನು ಒದಗಿಸಲಾಗುವುದು.
11 “ನೀವು ಯಾವುದೇ ಊರಿನೊಳಕ್ಕೆ ಅಥವಾ ನಗರಕ್ಕೆ ಪ್ರವೇಶಿಸಿದಾಗ ಅಲ್ಲಿರುವ ಉತ್ತಮ ವ್ಯಕ್ತಿಯನ್ನು ಗುರುತಿಸಿ, ನೀವು ಆ ಊರನ್ನು ಬಿಡುವ ತನಕ ಅವನ ಮನೆಯಲ್ಲೇ ತಂಗಿರಿ. 12 ಆ ಮನೆಗೆ ನೀವು ಪ್ರವೇಶಿಸಿದಾಗ, ‘ನಿಮಗೆ ಶುಭವಾಗಲಿ’ ಎಂದು ಹೇಳಿರಿ. 13 ಆ ಮನೆಯಲ್ಲಿರುವ ಜನರು ನಿಮ್ಮನ್ನು ಸ್ವಾಗತಿಸಿದರೆ ನಿಮ್ಮ ಆಶೀರ್ವಾದಕ್ಕೆ ಅವರು ಯೋಗ್ಯರಾಗಿರುವುದರಿಂದ ಆ ಆಶೀರ್ವಾದವು ಅವರಿಗೆ ದೊರೆಯಲಿ. ಅವರು ನಿಮ್ಮನ್ನು ಸ್ವಾಗತಿಸದಿದ್ದರೆ, ನಿಮ್ಮ ಆಶೀರ್ವಾದವು ನಿಮಗೇ ಹಿಂತಿರುಗಿಬರಲಿ. 14 ಒಂದು ಮನೆಯವರು ಅಥವಾ ಒಂದು ಊರಿನವರು ನಿಮ್ಮನ್ನು ಸ್ವಾಗತಿಸದಿದ್ದರೆ ಇಲ್ಲವೇ ನಿಮ್ಮ ಮಾತನ್ನು ಕೇಳದಿದ್ದರೆ ನೀವು ಆ ಸ್ಥಳವನ್ನು ಬಿಟ್ಟುಹೋಗುವಾಗ, ನಿಮ್ಮ ಕಾಲಿಗೆ ಹತ್ತಿದ ಧೂಳನ್ನು ಝಾಡಿಸಿಬಿಡಿರಿ. 15 ನ್ಯಾಯವಿಚಾರಣೆಯ ದಿನದಲ್ಲಿ ಈ ಊರಿನ ಗತಿಯು ಸೊದೋಮ್ ಮತ್ತು ಗೊಮೋರಗಳಿಗಿಂತ ಬಹಳ ಕೆಟ್ಟದ್ದಾಗಿರುವುದು ಎಂದು ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ.
ಹಿಂಸೆಯ ಕುರಿತು ಯೇಸುವಿನ ಎಚ್ಚರಿಕೆ
(ಮಾರ್ಕ 13:9-13; ಲೂಕ 21:12-17)
16 “ಕೇಳಿರಿ! ತೋಳಗಳ ನಡುವೆ ಕುರಿಗಳನ್ನು ಬಿಟ್ಟಂತೆ ನಾನು ನಿಮ್ಮನ್ನು ಕಳುಹಿಸುತ್ತಿದ್ದೇನೆ. ಆದ್ದರಿಂದ ನೀವು ಹಾವುಗಳಂತೆ ಸೂಕ್ಷ್ಮ ಬುದ್ದಿಯುಳ್ಳವರಾಗಿರಿ, ಪಾರಿವಾಳಗಳಂತೆ ಯಾವ ಹಾನಿಯನ್ನೂ ಮಾಡದಿರಿ. 17 ಜನರ ವಿಷಯದಲ್ಲಿ ಎಚ್ಚರಿಕೆಯಿಂದಿರಿ. ನಿಮ್ಮನ್ನು ಅವರು ಬಂಧಿಸಿ ನ್ಯಾಯಾಲಯಕ್ಕೆ ಕರೆದುಕೊಂಡು ಹೋಗುವರು. ಅವರು ತಮ್ಮ ಸಭಾಮಂದಿರಗಳಲ್ಲಿ ನಿಮ್ಮನ್ನು ಕೊರಡೆಗಳಿಂದ ಹೊಡೆಯುವರು. 18 ನಿಮ್ಮನ್ನು ಅಧಿಕಾರಿಗಳ ಸಮ್ಮುಖಕ್ಕೂ ಅರಸುಗಳ ಸಮ್ಮುಖಕ್ಕೂ ಕರೆದುಕೊಂಡು ಹೋಗುವರು. ನನ್ನ ನಿಮಿತ್ತ ಜನರು ನಿಮಗೆ ಹೀಗೆ ಮಾಡುವರು. ಆದರೆ ನೀವು ಆ ಅರಸುಗಳಿಗೂ ಅಧಿಕಾರಿಗಳಿಗೂ ಯಹೂದ್ಯರಲ್ಲದ ಜನರಿಗೂ ನನ್ನ ವಿಷಯವಾಗಿ ಹೇಳುವಿರಿ. 19 ನಿಮ್ಮನ್ನು ಬಂಧಿಸಿದಾಗ ನೀವು ಏನು ಮಾತಾಡಬೇಕು, ಹೇಗೆ ಮಾತಾಡಬೇಕು ಎಂದು ಚಿಂತಿಸಬೇಡಿ. ನೀವು ಹೇಳಬೇಕಾದುವುಗಳನ್ನು ಆ ಸಮಯದಲ್ಲಿ ನಿಮಗೆ ಅನುಗ್ರಹಿಸಲಾಗುವುದು. 20 ಮಾತಾಡುವವರು ನಿಜವಾಗಿಯೂ ನೀವಲ್ಲ. ನಿಮ್ಮ ತಂದೆಯ ಆತ್ಮನೇ ನಿಮ್ಮ ಮೂಲಕ ಮಾತನಾಡುತ್ತಾನೆ.
Kannada Holy Bible: Easy-to-Read Version. All rights reserved. © 1997 Bible League International