Old/New Testament
ಯಾಕೋಬನ ಪಲಾಯನ
31 ಒಂದು ದಿನ ಲಾಬಾನನ ಗಂಡುಮಕ್ಕಳು ಮಾತಾಡುತ್ತಿರುವುದನ್ನು ಯಾಕೋಬನು ಕೇಳಿಸಿಕೊಂಡನು. ಅವರು, “ನಮ್ಮ ತಂದೆ ಹೊಂದಿದ್ದ ಪ್ರತಿಯೊಂದನ್ನೂ ಯಾಕೋಬನು ತೆಗೆದುಕೊಂಡು ಐಶ್ವರ್ಯವಂತನಾಗಿದ್ದಾನೆ; ಅವನು ನಮ್ಮ ತಂದೆಯ ಐಶ್ವರ್ಯವನ್ನೆಲ್ಲ ತೆಗೆದುಕೊಂಡಿದ್ದಾನೆ” ಎಂದು ಹೇಳುತ್ತಿದ್ದರು. 2 ಲಾಬಾನನು ಮೊದಲಿನಂತೆ ಸ್ನೇಹದಿಂದ ಇಲ್ಲದಿರುವುದನ್ನು ಸಹ ಯಾಕೋಬನು ಗಮನಿಸಿದನು. 3 ಯೆಹೋವನು ಯಾಕೋಬನಿಗೆ, “ನಿನ್ನ ಪೂರ್ವಿಕರು ವಾಸಿಸಿದ ನಿನ್ನ ಸ್ವಂತ ಸ್ಥಳಕ್ಕೆ ಹಿಂತಿರುಗಿ ಹೋಗು. ನಾನು ನಿನ್ನ ಸಂಗಡವಿರುತ್ತೇನೆ” ಎಂದು ಹೇಳಿದನು.
4 ಆದ್ದರಿಂದ ಯಾಕೋಬನು ರಾಹೇಲಳಿಗೆ ಮತ್ತು ಲೇಯಳಿಗೆ ತನ್ನ ಆಡುಕುರಿಗಳು ಮೇಯುತ್ತಿರುವ ಹೊಲದಲ್ಲಿ ತನ್ನನ್ನು ಭೇಟಿಯಾಗಬೇಕೆಂದು ಹೇಳಿದನು. 5 ಯಾಕೋಬನು, ರಾಹೇಲಳಿಗೆ ಮತ್ತು ಲೇಯಾಳಿಗೆ, “ನಿಮ್ಮ ತಂದೆ ನನ್ನ ಮೇಲೆ ಕೋಪದಿಂದಿರುವುದನ್ನು ನಾನು ಗಮನಿಸಿದ್ದೇನೆ. ಮೊದಲು ಅವನು ನನ್ನೊಂದಿಗೆ ಸ್ನೇಹದಿಂದಿದ್ದನು. ಆದರೆ ಈಗ ಅವನು ಸ್ನೇಹದಿಂದಿಲ್ಲ. ಆದರೆ ನನ್ನ ತಂದೆಯ ದೇವರು ನನ್ನೊಂದಿಗಿದ್ದಾನೆ. 6 ನಿಮ್ಮಿಬ್ಬರಿಗೂ ತಿಳಿದಿರುವಂತೆ, ನಾನು ನಿಮ್ಮ ತಂದೆಗಾಗಿ ನನ್ನಿಂದಾದಷ್ಟು ಕಷ್ಟಪಟ್ಟು ದುಡಿದಿದ್ದೇನೆ. 7 ಆದರೆ ನಿಮ್ಮ ತಂದೆ ನನಗೆ ಮೋಸ ಮಾಡಿದನು. ನಿಮ್ಮ ತಂದೆ ನನ್ನ ಸಂಬಳವನ್ನು ಹತ್ತು ಸಲ ಬದಲಾಯಿಸಿದನು. ಆದರೆ ಆ ಸಮಯದಲ್ಲೆಲ್ಲ ದೇವರು ನನ್ನನ್ನು ಲಾಬಾನನ ಎಲ್ಲಾ ಮೋಸಗಳಿಂದ ಕಾಪಾಡಿದನು.
8 “ಒಂದು ಸಲ ಲಾಬಾನನು, ‘ಚುಕ್ಕೆಯಿರುವ ಆಡುಕುರಿಗಳನ್ನೆಲ್ಲ ನೀನು ಇಟ್ಟುಕೊಳ್ಳಬಹುದು. ಇದೇ ನಿನಗೆ ಸಂಬಳ’ ಎಂದು ಹೇಳಿದನು. ಅವನು ಹೀಗೆ ಹೇಳಿದ ಮೇಲೆ ಎಲ್ಲಾ ಆಡುಕುರಿಗಳು ಚುಕ್ಕೆಯಿರುವ ಮರಿಗಳನ್ನು ಈಯ್ದವು. ಆದ್ದರಿಂದ ಅವೆಲ್ಲ ನನ್ನದಾದವು. ಆಗ ಲಾಬಾನನು, ‘ನಾನು ಚುಕ್ಕೆಯಿರುವ ಆಡುಕುರಿಗಳನ್ನು ತೆಗೆದುಕೊಳ್ಳುವೆ. ನೀನು ಮಚ್ಚೆಯಿರುವ ಆಡುಕುರಿಗಳನ್ನು ತೆಗೆದುಕೊಳ್ಳಬಹುದು. ಅದೇ ನಿನಗೆ ಸಂಬಳ’ ಎಂದು ಹೇಳಿದನು. ಅವನು ಹೀಗೆ ಹೇಳಿದ ಮೇಲೆ, ಎಲ್ಲಾ ಆಡುಕುರಿಗಳು ಮಚ್ಚೆಯಿರುವ ಮರಿಗಳನ್ನು ಈಯ್ದವು. 9 ಹೀಗೆ ದೇವರು ನಿಮ್ಮ ತಂದೆಯಿಂದ ಆಡುಕುರಿಗಳನ್ನು ತೆಗೆದುಕೊಂಡು ಅವುಗಳನ್ನು ನನಗೆ ಕೊಟ್ಟನು.
10 “ಪ್ರಾಣಿಗಳು ಸಂಗಮಿಸುವಾಗ ನನಗೆ ಒಂದು ಕನಸಾಯಿತು. ಸಂಗಮಿಸುತ್ತಿದ್ದ ಹೋತಗಳೆಲ್ಲ ಚುಕ್ಕೆಗಳನ್ನು ಮತ್ತು ಮಚ್ಚೆಗಳನ್ನು ಹೊಂದಿದ್ದವು. 11 ದೇವದೂತನು ಕನಸಿನಲ್ಲಿ ನನ್ನ ಚೊತೆ ಮಾತಾಡಿ ‘ಯಾಕೋಬನೇ’ ಎಂದು ಕರೆದನು.
“ನಾನು ‘ಇಗೋ ಇದ್ದೇನೆ’ ಎಂದು ಉತ್ತರಿಸಿದೆ.
12 “ದೇವದೂತನು ನನಗೆ, ‘ನೋಡು ಚುಕ್ಕೆಮಚ್ಚೆಗಳಿರುವ ಆಡುಕುರಿಗಳು ಮಾತ್ರ ಸಂಗಮಿಸುತ್ತವೆ. ಹೀಗಾಗುವಂತೆ ನಾನೇ ಮಾಡಿರುವೆನು. ನಿನಗೆ ಲಾಬಾನನು ಮಾಡುತ್ತಿರುವ ಅನ್ಯಾಯಗಳನ್ನೆಲ್ಲ ನಾನು ನೋಡಿರುವೆನು. ಆದ್ದರಿಂದ ಹುಟ್ಟುವ ಮರಿಗಳೆಲ್ಲ ನಿನ್ನದಾಗುವಂತೆ ನಾನೇ ಮಾಡಿದ್ದೇನೆ. 13 ಬೇತೇಲಿನಲ್ಲಿ ನಿನ್ನ ಬಳಿಗೆ ಬಂದಿದ್ದ ದೇವರು ನಾನೇ. ಆ ಸ್ಥಳದಲ್ಲಿ ನೀನು ಒಂದು ಯಜ್ಞವೇದಿಕೆಯನ್ನು ಕಟ್ಟಿದೆ. ನೀನು ಯಜ್ಞವೇದಿಕೆಯ ಮೇಲೆ ಆಲಿವ್ ಎಣ್ಣೆಯನ್ನು ಸುರಿದು ನನಗೆ ಒಂದು ಪ್ರಮಾಣವನ್ನು ಮಾಡಿದೆ. ಈಗ ನೀನು ನಿನ್ನ ಹುಟ್ಟುಸ್ಥಳಕ್ಕೆ ಹಿಂತಿರುಗಿ ಹೋಗಬೇಕೆಂಬುದು ನನ್ನ ಅಪೇಕ್ಷೆ’ ಎಂದು ತಿಳಿಸಿದನು” ಎಂಬುದಾಗಿ ಹೇಳಿದನು.
14 ರಾಹೇಲಳು ಮತ್ತು ಲೇಯಳು ಯಾಕೋಬನಿಗೆ, “ನಮ್ಮ ತಂದೆ ಸಾಯುವಾಗ ನಮಗೆ ಕೊಡಲು ಅವನಲ್ಲಿ ಏನೂ ಇಲ್ಲ. 15 ಅವನು ನಮ್ಮನ್ನು ಅನ್ಯರಂತೆ ಕಂಡನು; ಅವನು ನಮ್ಮನ್ನು ನಿನಗೆ ಮಾರಿದ್ದಾನೆ; ನಮ್ಮ ಐಶ್ವರ್ಯವನ್ನೆಲ್ಲ ಅವನು ಉಪಯೋಗಿಸಿದನು. 16 ದೇವರು ಈ ಐಶ್ವರ್ಯವನ್ನೆಲ್ಲ ನಮ್ಮ ತಂದೆಯಿಂದ ತೆಗೆದುಕೊಂಡಿದ್ದಾನೆ. ಈಗ ಅದು ನಮಗೂ ನಮ್ಮ ಮಕ್ಕಳಿಗೂ ಸೇರಿದೆ. ಆದ್ದರಿಂದ ದೇವರು ನಿನಗೆ ಹೇಳಿದಂತೆಯೇ ಮಾಡು” ಅಂದರು.
17 ಆದ್ದರಿಂದ ಯಾಕೋಬನು ತನ್ನ ಪ್ರಯಾಣಕ್ಕಾಗಿ ಸಿದ್ಧತೆ ಮಾಡಿದನು. ಅವನು ತನ್ನ ಗಂಡುಮಕ್ಕಳನ್ನು ಮತ್ತು ಹೆಂಡತಿಯರನ್ನು ಒಂಟೆಗಳ ಮೇಲೆ ಕುಳ್ಳಿರಿಸಿದನು. 18 ನಂತರ ಅವರೆಲ್ಲರೂ, ಯಾಕೋಬನ ತಂದೆ ವಾಸಿಸಿದ ಸ್ಥಳವಾದ ಕಾನಾನಿಗೆ ಮರಳಿ ಪ್ರಯಾಣ ಬೆಳೆಸಿದರು. ಯಾಕೋಬನು ಹೊಂದಿದ್ದ ಎಲ್ಲಾ ಆಡುಕುರಿಗಳ ಮಂದೆಗಳು ಅವರ ಮುಂದೆ ನಡೆದವು. ಅವನು ಪದ್ದನ್‌ಅರಾಮಿನಲ್ಲಿದ್ದಾಗ ಹೊಂದಿಕೊಂಡಿದ್ದ ಪ್ರತಿಯೊಂದನ್ನೂ ಅವರು ತೆಗೆದುಕೊಂಡು ಹೋದರು.
19 ಆ ಸಮಯದಲ್ಲಿ ಲಾಬಾನನು ತನ್ನ ಕುರಿಗಳ ಉಣ್ಣೆಯನ್ನು ಕತ್ತರಿಸಲು ಹೋಗಿದ್ದನು. ಅವನು ಇಲ್ಲದಿದ್ದಾಗ, ರಾಹೇಲಳು ಅವನ ಮನೆಯೊಳಗೆ ಹೋಗಿ, ತನ್ನ ತಂದೆಯ ವಿಗ್ರಹಗಳನ್ನು ಕದ್ದುಕೊಂಡಳು.
20 ಅರಾಮ್ಯನಾದ ಲಾಬಾನನಿಗೆ ಯಾಕೋಬನು ಮೋಸ ಮಾಡಿದನು. ತಾನು ಹೋಗುತ್ತಿರುವುದಾಗಿ ಯಾಕೋಬನು ಅವನಿಗೆ ತಿಳಿಸಲಿಲ್ಲ. 21 ಯಾಕೋಬನು ತನ್ನ ಕುಟುಂಬವನ್ನು ಕರೆದುಕೊಂಡು, ತನ್ನ ಪ್ರತಿಯೊಂದು ಸ್ವತ್ತನ್ನು ತೆಗೆದುಕೊಂಡು ಬೇಗನೆ ಅಲ್ಲಿಂದ ಹೊರಟನು. ಅವರು ಯೂಫ್ರೇಟೀಸ್ ಮಹಾನದಿಯನ್ನು ದಾಟಿ, ಬೆಟ್ಟಗಳ ಸೀಮೆಯಿಂದ ಗಿಲ್ಯಾದ್ ದೇಶದ ಕಡೆಗೆ ಪ್ರಯಾಣ ಮಾಡಿದರು.
22 ಯಾಕೋಬನು ಓಡಿಹೋದದ್ದು ಮೂರು ದಿನಗಳಾದ ಮೇಲೆ ಲಾಬಾನನಿಗೆ ತಿಳಿಯಿತು. 23 ಆದ್ದರಿಂದ ಲಾಬಾನನು ತನ್ನ ಜನರನ್ನು ಕರೆದುಕೊಂಡು ಯಾಕೋಬನನ್ನು ಬೆನ್ನಟ್ಟಿದನು. ಏಳು ದಿನಗಳಾದ ಮೇಲೆ ಲಾಬಾನನು ಯಾಕೋಬನನ್ನು ಬೆಟ್ಟದ ಸೀಮೆಯಾದ ಗಿಲ್ಯಾದಿನಲ್ಲಿ ಕಂಡನು. 24 ಆ ರಾತ್ರಿ ದೇವರು ಲಾಬಾನನಿಗೆ ಕನಸಿನಲ್ಲಿ ಕಾಣಿಸಿಕೊಂಡು, “ಎಚ್ಚರಿಕೆಯಾಗಿರು; ನೀನು ಯಾಕೋಬನಿಗೆ ಹೇಳುವ ಪ್ರತಿಯೊಂದು ಮಾತಿನ ಬಗ್ಗೆ ಎಚ್ಚರಿಕೆಯಾಗಿರು” ಎಂದು ಹೇಳಿದನು.
ಕದ್ದುಕೊಂಡು ಬಂದಿದ್ದ ವಿಗ್ರಹಗಳಿಗಾಗಿ ಹುಡುಕಾಟ
25 ಮರುದಿನ ಮುಂಜಾನೆ ಲಾಬಾನನು ಯಾಕೋಬನನ್ನು ಸಂಧಿಸಿದನು. ಯಾಕೋಬನು ಬೆಟ್ಟದ ಮೇಲೆ ಪಾಳೆಯ ಮಾಡಿಕೊಂಡಿದ್ದನು. ಆದ್ದರಿಂದ ಲಾಬಾನನು ಮತ್ತು ಅವನ ಜನರೆಲ್ಲರು ಬೆಟ್ಟದ ಸೀಮೆಯಾದ ಗಿಲ್ಯಾದಿನಲ್ಲಿ ಪಾಳೆಯ ಮಾಡಿಕೊಂಡರು.
26 ಲಾಬಾನನು ಯಾಕೋಬನಿಗೆ, “ನೀನು ನನಗೇಕೆ ಮೋಸ ಮಾಡಿದೆ? ಯುದ್ಧದಲ್ಲಿ ಸೆರೆ ಒಯ್ಯುವ ಸ್ತ್ರೀಯರಂತೆ, ನೀನು ನನ್ನ ಹೆಣ್ಣುಮಕ್ಕಳನ್ನು ಕರೆದುಕೊಂಡು ಬಂದದ್ದೇಕೆ? 27 ನೀನು ನನಗೆ ಹೇಳದೆ ಓಡಿಬಂದದ್ದೇಕೆ? ನೀನು ನನ್ನನ್ನು ಕೇಳಿದ್ದರೆ ನಾನು ನಿನಗಾಗಿ ಒಂದು ಔತಣಕೂಟವನ್ನೇರ್ಪಡಿಸುತ್ತಿದ್ದೆ. ಅಲ್ಲಿ ಗಾಯನ, ನೃತ್ಯ ಮತ್ತು ವಾದ್ಯಗೋಷ್ಠಿಗಳಿರುತ್ತಿದ್ದವು. 28 ನಾನು ನನ್ನ ಮೊಮ್ಮಕ್ಕಳಿಗೆ ಮುದ್ದಿಡುವುದಕ್ಕೂ ನನ್ನ ಹೆಣ್ಣುಮಕ್ಕಳನ್ನು ಬೀಳ್ಕೊಡುವುದಕ್ಕೂ ನೀನು ನನಗೆ ಅವಕಾಶ ಕೊಡಲಿಲ್ಲ. ನಿನ್ನ ಮೂಢತನದಿಂದ ಹೀಗೆ ಮಾಡಿರುವೆ. 29 ನಿನಗೆ ಕೇಡುಮಾಡಲು ನನಗೆ ಶಕ್ತಿಯಿದೆ. ಆದರೆ ಕಳೆದ ರಾತ್ರಿ ನಿನ್ನ ತಂದೆಯ ದೇವರು ಕನಸಿನಲ್ಲಿ ನನಗೆ ಕಾಣಿಸಿಕೊಂಡು, ನಿನಗೆ ಕೇಡುಮಾಡಕೂಡದೆಂದು ನನಗೆ ಎಚ್ಚರಿಕೆ ಕೊಟ್ಟನು. 30 ನೀನು ನಿನ್ನ ಮನೆಗೆ ಹಿಂತಿರುಗಿ ಹೋಗಬೇಕೆಂಬುದು ನಿನ್ನ ಅಪೇಕ್ಷೆ ಎಂದು ನನಗೆ ತಿಳಿದಿದೆ. ಆದ್ದರಿಂದಲೇ ನೀನು ಹೊರಟು ಬಂದೆ. ಆದರೆ ನೀನು ನನ್ನ ಮನೆಯಿಂದ ವಿಗ್ರಹಗಳನ್ನು ಕದ್ದುಕೊಂಡು ಬಂದದ್ದೇಕೆ?” ಎಂದು ಹೇಳಿದನು.
31 ಯಾಕೋಬನು, “ನಾನು ನಿನಗೆ ಹೇಳದೆ ಹೊರಟು ಬಂದೆ. ಯಾಕೆಂದರೆ ನನಗೆ ಭಯವಾಗಿತ್ತು; ನೀನು ನಿನ್ನ ಹೆಣ್ಣುಮಕ್ಕಳನ್ನು ನನ್ನಿಂದ ತೆಗೆದುಕೊಳ್ಳಬಹುದೆಂದು ನಾನು ಭಾವಿಸಿದೆ. 32 ಆದರೆ ನಾನು ನಿನ್ನ ವಿಗ್ರಹಗಳನ್ನು ಕದ್ದುಕೊಳ್ಳಲಿಲ್ಲ. ನಿನ್ನ ವಿಗ್ರಹಗಳನ್ನು ತೆಗೆದುಕೊಂಡಿರುವ ಯಾವ ವ್ಯಕ್ತಿಯನ್ನಾದರೂ ಇಲ್ಲಿ ಕಂಡರೆ ಆ ವ್ಯಕ್ತಿಯನ್ನು ಕೊಲ್ಲಲಾಗುವುದು. ನಿನ್ನ ಜನರೇ ನನಗೆ ಸಾಕ್ಷಿಗಳು. ನಿನಗೆ ಸೇರಿದ ಏನಾದರೂ ಇದೆಯೋ ಎಂದು ನೀನೇ ನೋಡಬಹುದು. ನಿನಗೆ ಸೇರಿದ ಯಾವುದಾದರೂ ಇದ್ದರೆ ತೆಗೆದುಕೊ” ಎಂದು ಹೇಳಿದನು. (ಲಾಬಾನನ ವಿಗ್ರಹಗಳನ್ನು ರಾಹೇಲಳು ಕದ್ದುಕೊಂಡಿರುವುದು ಯಾಕೋಬನಿಗೆ ತಿಳಿದಿರಲಿಲ್ಲ.)
33 ಆದ್ದರಿಂದ ಲಾಬಾನನು ಹೋಗಿ ಯಾಕೋಬನ ಪಾಳೆಯದಲ್ಲಿಯೂ ಗುಡಾರದಲ್ಲಿಯೂ ಲೇಯಳ ಗುಡಾರದಲ್ಲಿಯೂ ಹುಡುಕಿದನು. ಬಳಿಕ ಇಬ್ಬರು ಸೇವಕಿಯರಿದ್ದ ಗುಡಾರಕ್ಕೂ ಹೋಗಿ ಹುಡುಕಿದನು; ಅಲ್ಲಿಯೂ ಅವನಿಗೆ ಅವನ ವಿಗ್ರಹಗಳು ಸಿಕ್ಕಲಿಲ್ಲ. ಅಲ್ಲಿಂದ ರಾಹೇಲಳ ಗುಡಾರಕ್ಕೆ ಹೋದನು. 34 ರಾಹೇಲಳು ಆ ವಿಗ್ರಹಗಳನ್ನು ತನ್ನ ಒಂಟೆಯ ಸಬರದೊಳಗಿಟ್ಟು ಅದರ ಮೇಲೆ ಕುಳಿತುಕೊಂಡಿದ್ದಳು. ಲಾಬಾನನು ಇಡೀ ಗುಡಾರವನ್ನು ಹುಡುಕಿದರೂ ತನ್ನ ವಿಗ್ರಹಗಳನ್ನು ಕಂಡುಕೊಳ್ಳಲಿಲ್ಲ.
35 ಆಗ ರಾಹೇಲಳು ತನ್ನ ತಂದೆಗೆ, “ಅಪ್ಪಾ, ನನ್ನ ಮೇಲೆ ಕೋಪಗೊಳ್ಳಬೇಡ. ನಿನ್ನ ಮುಂದೆ ನಿಂತುಕೊಳ್ಳಲು ನನಗೆ ಸಾಧ್ಯವಿಲ್ಲ. ಯಾಕೆಂದರೆ ನಾನು ಮುಟ್ಟಾಗಿದ್ದೇನೆ” ಎಂದು ಹೇಳಿದಳು. ಲಾಬಾನನು ಪಾಳೆಯದಲ್ಲೆಲ್ಲಾ ಹುಡುಕಿದರೂ ತನ್ನ ವಿಗ್ರಹಗಳನ್ನು ಕಂಡುಕೊಳ್ಳಲಾಗಲಿಲ್ಲ.
36 ಆಗ ಯಾಕೋಬನು ತುಂಬಾ ಕೋಪಗೊಂಡು, “ನಾನು ಯಾವ ತಪ್ಪು ಮಾಡಿದೆ? ಯಾವ ನಿಯಮವನ್ನು ನಾನು ಉಲ್ಲಂಘಿಸಿರುವೆ? ನನ್ನನ್ನು ಬೆನ್ನಟ್ಟಿಕೊಂಡು ಬಂದು ತಡೆಯಲು ನಿನಗೆ ಯಾವ ಹಕ್ಕಿದೆ? 37 ನಾನು ಹೊಂದಿರುವ ಪ್ರತಿಯೊಂದನ್ನು ನೀನು ಪರೀಕ್ಷಿಸಿ ನೋಡಿದರೂ ನಿನಗೆ ಸೇರಿರುವ ಯಾವುದೂ ನಿನಗೆ ಸಿಕ್ಕಲಿಲ್ಲ. ನಿನಗೆ ಅಂಥದ್ದೇನಾದರೂ ಸಿಕ್ಕಿದರೆ ತೋರಿಸು. ನನ್ನ ಜನರಿಗೆಲ್ಲ ಕಾಣಿಸುವಂತೆ ಅದನ್ನು ಇಲ್ಲಿಡು. ನಮ್ಮಲ್ಲಿ ಯಾರು ಸರಿಯಾದವರೆಂದು ನಮ್ಮ ಜನರೇ ನಿರ್ಣಯಿಸಲಿ. 38 ನಾನು ನಿನಗೋಸ್ಕರ ಇಪ್ಪತ್ತು ವರ್ಷ ದುಡಿದೆ. ಆ ಸಮಯದಲ್ಲೆಲ್ಲ ಯಾವ ಕುರಿಮರಿಯಾಗಲಿ ಆಡಾಗಲಿ ಹುಟ್ಟುವಾಗ ಸಾಯಲಿಲ್ಲ; ನಿನ್ನ ಮಂದೆಗಳಲ್ಲಿನ ಯಾವ ಟಗರನ್ನಾಗಲಿ ನಾನು ತಿಂದುಬಿಡಲಿಲ್ಲ. 39 ಕ್ರೂರ ಮೃಗಗಳು ಕುರಿಯನ್ನು ಕೊಂದಾಗಲೆಲ್ಲಾ ಅದಕ್ಕೆ ಬದಲಾಗಿ ನನ್ನ ಕುರಿಯನ್ನು ನಿನಗೆ ಕೊಟ್ಟೆನು. ಸತ್ತುಹೋದ ಪಶುವನ್ನು ನಿನ್ನ ಮುಂದೆ ತಂದು, ‘ಇದು ನನ್ನ ತಪ್ಪಲ್ಲ’ ಎಂದು ನಿನಗೆ ಹೇಳಲಿಲ್ಲ. ಕಳುವು ಹಗಲಲ್ಲಾಗಿದ್ದರೂ ರಾತ್ರಿಯಲ್ಲಾಗಿದ್ದರೂ ಕಳುವಾದ ಪಶುಗಳಿಗೆ ಪ್ರತಿಯಾಗಿ ಪಶುಗಳನ್ನು ನೀನು ನನ್ನಿಂದ ವಸೂಲಿ ಮಾಡಿದೆ. 40 ಹಗಲಿನಲ್ಲಿ ಸೂರ್ಯನಿಂದ ನನ್ನ ಶಕ್ತಿಯನ್ನು ಕುಂದಿಸಿದೆ; ರಾತ್ರಿಯಲ್ಲಿ ಚಳಿಯಿಂದ ನನಗೆ ನಿದ್ರೆಯು ಬರಲಿಲ್ಲ. 41 ನಾನು ಇಪ್ಪತ್ತು ವರ್ಷ ನಿನಗೆ ಗುಲಾಮನಂತೆ ಸೇವೆ ಮಾಡಿದೆನು. ಮೊದಲ ಹದಿನಾಲ್ಕು ವರ್ಷಗಳಲ್ಲಿ ನಿನ್ನ ಇಬ್ಬರು ಹೆಣ್ಣುಮಕ್ಕಳನ್ನು ಪಡೆದುಕೊಳ್ಳುವುದಕ್ಕಾಗಿ ದುಡಿದೆನು. ಕಡೆಯ ಆರು ವರ್ಷಗಳಲ್ಲಿ ನಿನ್ನ ಪಶುಗಳನ್ನು ಪಡೆದುಕೊಳ್ಳುವುದಕ್ಕಾಗಿ ದುಡಿದೆನು. ಆ ಅವಧಿಯಲ್ಲಿ ನೀನು ನನ್ನ ಸಂಬಳವನ್ನು ಹತ್ತು ಸಲ ಬದಲಾಯಿಸಿದೆ. 42 ಆದರೆ ನನ್ನ ಪೂರ್ವಿಕರ ದೇವರೂ ಅಬ್ರಹಾಮನ ದೇವರೂ ಇಸಾಕನು ಭಯಪಡುವ ದೇವರೂ[a] ನನ್ನ ಸಂಗಡವಿದ್ದನು. ದೇವರು ನನ್ನ ಜೊತೆಯಲ್ಲಿ ಇಲ್ಲದಿದ್ದರೆ ನೀನು ನನ್ನನ್ನು ಬರಿಗೈಲಿ ಕಳುಹಿಸಿಬಿಡುತ್ತಿದ್ದೆ. ಆದರೆ ನನ್ನ ಕಷ್ಟವನ್ನೂ ನಾನು ಮಾಡಿದ ಕೆಲಸವನ್ನೂ ದೇವರು ನೋಡಿದನು. ನಿನ್ನೆಯ ರಾತ್ರಿ ನಾನು ತಪ್ಪಿತಸ್ಥನಲ್ಲವೆಂದು ದೇವರು ನಿನಗೆ ತೋರಿಸಿಕೊಟ್ಟಿದ್ದಾನೆ” ಎಂದು ಹೇಳಿದನು.
ಯಾಕೋಬ ಮತ್ತು ಲಾಬಾನರ ಒಪ್ಪಂದ
43 ಲಾಬಾನನು ಯಾಕೋಬನಿಗೆ, “ಈ ಸ್ತ್ರೀಯರು ನನ್ನ ಮಕ್ಕಳು. ಅವರ ಮಕ್ಕಳು ನನಗೆ ಸೇರಿದವರು; ಈ ಪಶುಗಳು ನನ್ನವು. ನೀನು ಇಲ್ಲಿ ನೋಡುವ ಪ್ರತಿಯೊಂದೂ ನನಗೆ ಸೇರಿದ್ದು. ಆದರೆ ನನ್ನ ಹೆಣ್ಣುಮಕ್ಕಳನ್ನಾಗಲಿ ಅವರ ಮಕ್ಕಳನ್ನಾಗಲಿ ತೆಗೆದುಕೊಳ್ಳಲು ಸಾಧ್ಯವಿಲ್ಲ. 44 ಆದ್ದರಿಂದ ನಿನ್ನೊಡನೆ ಒಂದು ಒಪ್ಪಂದ ಮಾಡಿಕೊಳ್ಳಲು ಸಿದ್ಧನಾಗಿದ್ದೇನೆ. ನಮ್ಮ ಒಪ್ಪಂದಕ್ಕೆ ಸಾಕ್ಷಿಯಾಗಿ ಕಲ್ಲುಗಳ ಒಂದು ಕುಪ್ಪೆಯನ್ನು ಮಾಡೋಣ” ಎಂದು ಹೇಳಿದನು.
45 ಅಂತೆಯೇ ಯಾಕೋಬನು ಮಾಡಿಕೊಂಡ ಒಪ್ಪಂದಕ್ಕೆ ಸಾಕ್ಷಿಯಾಗಿ ಒಂದು ದೊಡ್ಡ ಕಲ್ಲನ್ನು ತೆಗೆದುಕೊಂಡು ಬಂದು ಅಲ್ಲಿಟ್ಟನು. 46 ಅವನು ತನ್ನ ಜನರಿಗೆ ಮತ್ತಷ್ಟು ಕಲ್ಲುಗಳನ್ನು ತೆಗೆದುಕೊಂಡು ಬಂದು ಕಲ್ಲಿನ ಕುಪ್ಪೆ ಮಾಡುವಂತೆ ಹೇಳಿದನು. ಬಳಿಕ ಅವರು ಆ ಕುಪ್ಪೆಯ ಬಳಿಯಲ್ಲಿ ಊಟಮಾಡಿದರು. 47 ಲಾಬಾನನು ಆ ಸ್ಥಳಕ್ಕೆ ಯಗರ್‌ಸಾಹದೂತ ಎಂದು ಹೆಸರಿಟ್ಟನು. ಆದರೆ ಯಾಕೋಬನು ಆ ಸ್ಥಳಕ್ಕೆ ಗಲೀದ್ ಎಂದು ಹೆಸರಿಟ್ಟನು.
48 ಲಾಬಾನನು ಯಾಕೋಬನಿಗೆ, “ಈ ಕಲ್ಲುಗಳ ಕುಪ್ಪೆಯು ನಮ್ಮಿಬ್ಬರಿಗೂ ನಮ್ಮ ಒಪ್ಪಂದವನ್ನು ಜ್ಞಾಪಕಕ್ಕೆ ತರುತ್ತದೆ” ಎಂದು ಹೇಳಿದನು. ಆದಕಾರಣ ಯಾಕೋಬನು ಆ ಸ್ಥಳಕ್ಕೆ ಗಲೀದ್ ಎಂದು ಹೆಸರಿಟ್ಟನು.
49 ಲಾಬಾನನು, “ನಾವು ಒಬ್ಬರನ್ನೊಬ್ಬರು ಅಗಲಿರುವಾಗ ಯೆಹೋವನೇ ನಮ್ಮನ್ನು ನೋಡಿಕೊಳ್ಳಲಿ” ಎಂದು ಹೇಳಿದನು. ಆದ್ದರಿಂದ ಆ ಸ್ಥಳಕ್ಕೆ ಮಿಚ್ಪಾ ಎಂದೂ ಹೆಸರಿಡಲಾಯಿತು.
50 ಆಮೇಲೆ ಲಾಬಾನನು “ನೀನು ನನ್ನ ಹೆಣ್ಣುಮಕ್ಕಳನ್ನು ನೋಯಿಸಿದರೆ, ದೇವರು ನಿನ್ನನ್ನು ದಂಡಿಸುವನು ಎಂಬುದನ್ನು ನೆನಪು ಮಾಡಿಕೊ. ನೀನು ಬೇರೆ ಸ್ತ್ರೀಯರನ್ನು ಮದುವೆ ಮಾಡಿಕೊಂಡರೆ, ದೇವರು ನಿನ್ನನ್ನು ನೋಡುತ್ತಿದ್ದಾನೆ ಎಂಬುದನ್ನು ನೆನಪು ಮಾಡಿಕೊ. 51 ನಮ್ಮಿಬ್ಬರ ಮಧ್ಯದಲ್ಲಿ ನಾನಿಟ್ಟಿರುವ ಈ ಕಲ್ಲುಗಳು ಇಲ್ಲಿವೆ; ನಾವು ಒಪ್ಪಂದ ಮಾಡಿಕೊಂಡಿದ್ದೇವೆ ಎಂಬುದನ್ನು ಸೂಚಿಸುವ ವಿಶೇಷವಾದ ಕಲ್ಲೂ ಇಲ್ಲಿದೆ. 52 ಈ ಕಲ್ಲುಗಳ ಕುಪ್ಪೆಯೂ ವಿಶೇಷವಾದ ಈ ಕಲ್ಲೂ ನಮ್ಮ ಒಪ್ಪಂದವನ್ನು ನೆನಪುಮಾಡಿಕೊಳ್ಳಲು ನಮ್ಮಿಬ್ಬರಿಗೂ ಸಹಾಯ ಮಾಡುತ್ತವೆ. ನಾನು ನಿನಗೆ ವಿರೋಧವಾಗಿ ಹೋರಾಡುವುದಕ್ಕಾಗಿ ಈ ಕಲ್ಲುಗಳನ್ನು ದಾಟಿ ಬರುವುದಿಲ್ಲ. ನೀನು ನನಗೆ ವಿರೋಧವಾಗಿ ಈ ಕಲ್ಲುಗಳನ್ನು ದಾಟಿ ನನ್ನ ಕಡೆಗೆ ಬರಕೂಡದು. 53 ನಾವು ಈ ಒಪ್ಪಂದವನ್ನು ಮುರಿದುಹಾಕಿದರೆ, ನಮ್ಮಲ್ಲಿ ಅಪರಾಧಿಯಾದವನಿಗೆ ಅಬ್ರಹಾಮನ ದೇವರು, ನಾಹೋರನ ದೇವರು ಮತ್ತು ಅವರ ಪೂರ್ವಿಕರ ದೇವರು ನ್ಯಾಯತೀರಿಸಲಿ” ಎಂದು ಹೇಳಿದನು.
ಅದೇ ರೀತಿಯಲ್ಲಿ ಯಾಕೋಬನು ತನ್ನ ತಂದೆಯಾದ ಇಸಾಕನು ಭಯಭಕ್ತಿಯಿಂದ ಸೇವೆಮಾಡುವ ದೇವರ ಮೇಲೆ ಆಣೆಯಿಟ್ಟು ಪ್ರಮಾಣಮಾಡಿದನು. 54 ಆಮೇಲೆ ಯಾಕೋಬನು ಒಂದು ಪಶುವನ್ನು ಕೊಂದು ಅದನ್ನು ಬೆಟ್ಟದ ಮೇಲೆ ಯಜ್ಞವಾಗಿ ಅರ್ಪಿಸಿದನು; ತನ್ನ ಜನರನ್ನು ಊಟಕ್ಕೆ ಆಹ್ವಾನಿಸಿದನು. ಅವರು ಊಟ ಮಾಡಿದ ಮೇಲೆ, ಆ ರಾತ್ರಿ ಬೆಟ್ಟದ ಮೇಲೆ ಇದ್ದರು. 55 ಮರುದಿನ ಮುಂಜಾನೆ ಲಾಬಾನನು ತನ್ನ ಮೊಮ್ಮಕ್ಕಳಿಗೂ ಹೆಣ್ಣುಮಕ್ಕಳಿಗೂ ಮುದ್ದಿಟ್ಟು ಆಶೀರ್ವದಿಸಿ ತನ್ನ ಮನೆಗೆ ಹಿಂತಿರುಗಿದನು.
ಏಸಾವನೊಂದಿಗೆ ಮತ್ತೆ ಒಂದಾದದ್ದು
32 ಯಾಕೋಬನು ಅಲ್ಲಿಂದ ಹೊರಟು ಪ್ರಯಾಣ ಮಾಡುತ್ತಿರುವಾಗ ದೇವದೂತರನ್ನು ನೋಡಿದನು. 2 ಆದ್ದರಿಂದ ಅವನು, “ಇದು ದೇವರ ಪಾಳೆಯ” ಎಂದು ಹೇಳಿ “ಮಹನಯಿಮ್” ಎಂದು ಹೆಸರಿಟ್ಟನು.
3 ಯಾಕೋಬನ ಅಣ್ಣನಾದ ಏಸಾವನು ಸೇಯೀರ್ ಎಂಬ ಸ್ಥಳದಲ್ಲಿ ವಾಸವಾಗಿದ್ದನು. ಈ ಸ್ಥಳವು ಎದೋಮಿನ ಗುಡ್ಡಗಾಡು ಪ್ರದೇಶವಾಗಿತ್ತು. ಯಾಕೋಬನು ತನ್ನ ಸಂದೇಶಕರ ಮೂಲಕ 4 ಏಸಾವನಿಗೆ ಈ ಸಂಗತಿಗಳನ್ನು ತಿಳಿಸಿದನು: “ನಿನ್ನ ಸೇವಕನಾದ ಯಾಕೋಬನು ಹೇಳುವುದೇನೆಂದರೆ, ‘ನಾನು ಕಳೆದ ವರ್ಷಗಳೆಲ್ಲಾ ಲಾಬಾನನೊಡನೆ ಜೀವಿಸಿದೆನು. 5 ನನಗೆ ಅನೇಕ ದನಗಳೂ, ಕತ್ತೆಗಳೂ, ಆಡುಕುರಿಗಳೂ ಮತ್ತು ಸೇವಕಸೇವಕಿಯರೂ ಇದ್ದಾರೆ. ಸ್ವಾಮೀ, ನೀವು ನಮ್ಮನ್ನು ಸ್ವೀಕರಿಸಿಕೊಳ್ಳಬೇಕೆಂದು ಕೇಳಿಕೊಳ್ಳುತ್ತಿದ್ದೇನೆ.’”
6 ಸಂದೇಶಕರು ಯಾಕೋಬನ ಬಳಿಗೆ ಹಿಂತಿರುಗಿ ಬಂದು, “ನಾವು ನಿನ್ನ ಅಣ್ಣನಾದ ಏಸಾವನ ಬಳಿಗೆ ಹೋದೆವು. ಅವನು ನಿನ್ನನ್ನು ಭೇಟಿಯಾಗಲು ಬರುತ್ತಿದ್ದಾನೆ. ಅವನೊಡನೆ ನಾನೂರು ಮಂದಿ ಗಂಡಸರಿದ್ದಾರೆ” ಎಂದು ಹೇಳಿದರು.
7 ಯಾಕೋಬನಿಗೆ ಭಯವಾಯಿತು. ಅವನು ತನ್ನೊಡನೆ ಇದ್ದ ಜನರನ್ನು ಎರಡು ಗುಂಪುಗಳನ್ನಾಗಿ ವಿಂಗಡಿಸಿದನು. ಅವನು ಎಲ್ಲಾ ಆಡುಕುರಿಗಳನ್ನೂ ದನಕರುಗಳನ್ನೂ ಒಂಟೆಗಳನ್ನೂ ಎರಡು ಗುಂಪುಗಳನ್ನಾಗಿ ವಿಂಗಡಿಸಿದನು. 8 “ಒಂದುವೇಳೆ ಏಸಾವನು ಬಂದು ಒಂದು ಗುಂಪನ್ನು ನಾಶಗೊಳಿಸಿದರೆ, ಮತ್ತೊಂದು ಗುಂಪು ಓಡಿಹೋಗಿ ತಪ್ಪಿಸಿಕೊಳ್ಳಬಹುದು” ಎಂಬುದು ಅವನ ಆಲೋಚನೆಯಾಗಿತ್ತು.
9 ಯಾಕೋಬನು, “ನನ್ನ ತಂದೆಯಾದ ಅಬ್ರಹಾಮನ ದೇವರೇ, ನನ್ನ ತಂದೆಯಾದ ಇಸಾಕನ ದೇವರಾಗಿರುವ ಯೆಹೋವನೇ, ನನ್ನ ದೇಶಕ್ಕೆ ಮತ್ತು ನನ್ನ ಕುಟುಂಬಕ್ಕೆ ಹಿಂತಿರುಗಿ ಬರುವಂತೆ ನೀನು ಹೇಳಿದೆ. ನೀನು ನನಗೆ ಒಳ್ಳೆಯದನ್ನು ಮಾಡುವುದಾಗಿ ಹೇಳಿದೆ. 10 ನೀನು ನನಗೆ ತುಂಬ ಕರುಣೆ ತೋರಿದೆ. ನೀನು ನನಗೆ ಅನೇಕ ಒಳ್ಳೆಯ ಕಾರ್ಯಗಳನ್ನು ಮಾಡಿದೆ. ಮೊದಲನೆ ಸಲ ನಾನು ಜೋರ್ಡನ್ ನದಿಯನ್ನು ದಾಟಿ ಪ್ರಯಾಣ ಮಾಡಿದಾಗ, ಕೇವಲ ನನ್ನ ಊರುಗೋಲೇ ಹೊರತು ಬೇರೇನೂ ನನಗಿರಲಿಲ್ಲ. ಆದರೆ ಈಗ ಎರಡು ಗುಂಪುಗಳಿಗೆ ಬೇಕಾದ ವಸ್ತುಗಳನ್ನು ನಾನು ಪಡೆದಿದ್ದೇನೆ. 11 ಇಂತಿರಲು, ದಯವಿಟ್ಟು ನನ್ನ ಅಣ್ಣನಿಂದ ನನ್ನನ್ನು ಕಾಪಾಡಬೇಕೆಂದು ನಿನ್ನನ್ನು ಬೇಡಿಕೊಳ್ಳುತ್ತಿರುವೆ. ಏಸಾವನಿಂದ ನನ್ನನ್ನು ಕಾಪಾಡು. ಅವನು ಬಂದು ನಮ್ಮೆಲ್ಲರನ್ನೂ ತಾಯಂದಿರನ್ನೂ ಮಕ್ಕಳನ್ನೂ ಕೊಲ್ಲುವನೆಂಬ ಭಯ ನನಗಿದೆ. 12 ‘ನಾನು ನಿನಗೆ ಒಳ್ಳೆಯದನ್ನು ಮಾಡುವೆ. ನಾನು ನಿನ್ನ ಕುಟುಂಬವನ್ನು ಹೆಚ್ಚಿಸಿ ನಿನ್ನ ಮಕ್ಕಳನ್ನು ಸಮುದ್ರದ ಮರಳಿನಷ್ಟು ವೃದ್ಧಿಗೊಳಿಸುವೆನು. ಅವರು ಲೆಕ್ಕಿಸಲಾಗದಷ್ಟು ಅಸಂಖ್ಯಾತವಾಗಿರುವರು’ ಎಂದು ನೀನು ನನಗೆ ವಾಗ್ದಾನ ಮಾಡಿದಿಯಲ್ಲವೇ” ಎಂದು ಪ್ರಾರ್ಥಿಸಿದನು.
13 ಯಾಕೋಬನು ಆ ರಾತ್ರಿ ಅಲ್ಲಿಯೇ ಉಳಿದುಕೊಂಡು ಏಸಾವನಿಗೆ ಉಡುಗೊರೆಯಾಗಿ ಕೊಡಲು ಕೆಲವು ವಸ್ತುಗಳನ್ನು ಸಿದ್ಧಗೊಳಿಸಿದನು. 14 ಯಾಕೋಬನು ಇನ್ನೂರು ಮೇಕೆಗಳನ್ನು, ಇಪ್ಪತ್ತು ಹೋತಗಳನ್ನು, ಇನ್ನೂರು ಕುರಿಗಳನ್ನು ಮತ್ತು ಇಪ್ಪತ್ತು ಟಗರುಗಳನ್ನು ತೆಗೆದುಕೊಂಡನು. 15 ಯಾಕೋಬನು ಮೂವತ್ತು ಒಂಟೆಗಳನ್ನು ಮತ್ತು ಅವುಗಳ ಮರಿಗಳನ್ನು ನಲವತ್ತು ಹಸುಗಳನ್ನು ಮತ್ತು ಹತ್ತು ಹೋರಿಗಳನ್ನು, ಇಪ್ಪತ್ತು ಹೆಣ್ಣು ಕತ್ತೆಗಳನ್ನು ಮತ್ತು ಹತ್ತು ಗಂಡು ಕತ್ತೆಗಳನ್ನು ತೆಗೆದುಕೊಂಡನು. 16 ಯಾಕೋಬನು ಪಶುಗಳ ಪ್ರತಿಯೊಂದು ಮಂದೆಯನ್ನೂ ತನ್ನ ಸೇವಕರ ವಶಕ್ಕೆ ಕೊಟ್ಟನು. ಆಮೇಲೆ ಯಾಕೋಬನು ಸೇವಕರಿಗೆ, “ಪಶುಗಳ ಪ್ರತಿಯೊಂದು ಗುಂಪನ್ನು ವಿಂಗಡಿಸಿ ನನ್ನ ಮುಂದೆ ಹೋಗಿರಿ; ಅಲ್ಲದೆ ಪ್ರತಿಯೊಂದು ಮಂದೆಯ ನಡುವೆಯೂ ಸ್ವಲ್ಪ ಅಂತರವಿರಲಿ” ಎಂದು ಹೇಳಿದನು. 17 ಯಾಕೋಬನು ಅವರಿಗೆ ಅವರವರ ಕರ್ತವ್ಯಗಳನ್ನು ತಿಳಿಸಿದನು. ಯಾಕೋಬನು ಪಶುಗಳ ಮೊದಲನೆ ಗುಂಪಿನ ಸೇವಕನಿಗೆ, “ನನ್ನ ಅಣ್ಣನಾದ ಏಸಾವನು ನಿನ್ನ ಬಳಿಗೆ ಬಂದು, ‘ಇವು ಯಾರ ಪಶುಗಳು? ನೀನು ಎಲ್ಲಿಗೆ ಹೋಗುತ್ತಿರುವೆ? ನೀನು ಯಾರ ಸೇವಕನು?’ ಎಂದು ಕೇಳುವನು. 18 ಆಗ ನೀನು, ‘ಪಶುಗಳು ನಿನ್ನ ಸೇವಕನಾದ ಯಾಕೋಬನವು. ನನ್ನ ಒಡೆಯನಾದ ಏಸಾವನೇ, ಯಾಕೋಬನು ಇವುಗಳನ್ನು ನಿನಗೆ ಉಡುಗೊರೆಯಾಗಿ ಕಳುಹಿಸಿದ್ದಾನೆ. ಅಲ್ಲದೆ ಅವನು ಸಹ ನಮ್ಮ ಹಿಂದೆ ಬರುತ್ತಿದ್ದಾನೆ’ ಎಂದು ತಿಳಿಸಬೇಕು” ಎಂದು ಹೇಳಿದನು.
19 ಇದೇ ರೀತಿ ಮಾಡುವಂತೆ ಯಾಕೋಬನು ಎರಡನೆಯ ಸೇವಕನಿಗೆ, ಮೂರನೆಯ ಸೇವಕನಿಗೆ ಮತ್ತು ಉಳಿದೆಲ್ಲಾ ಸೇವಕರಿಗೆ ಆಜ್ಞಾಪಿಸಿದನು. ಅವನು ಅವರಿಗೆ, “ನೀವು ಏಸಾವನನ್ನು ಭೇಟಿಯಾದಾಗ ಇದೇ ರೀತಿ ಮಾಡಬೇಕು. 20 ನೀವು ಅವನಿಗೆ, ‘ಇದು ನಿನಗೆ ಕಳುಹಿಸಿರುವ ಉಡುಗೊರೆ. ಅಲ್ಲದೆ ನಿನ್ನ ಸೇವಕನಾದ ಯಾಕೋಬನು ನಮ್ಮ ಹಿಂದೆ ಬರುತ್ತಿದ್ದಾನೆ’ ಎಂದು ಹೇಳಬೇಕು” ಎಂದು ತಿಳಿಸಿದನು.
“ನಾನು ಈ ಜನರನ್ನು ಉಡುಗೊರೆಗಳೊಡನೆ ಮುಂದೆ ಕಳುಹಿಸಿದರೆ, ಒಂದುವೇಳೆ ಏಸಾವನು ನನ್ನನ್ನು ಕ್ಷಮಿಸಿ ನನ್ನನ್ನು ಸ್ವೀಕರಿಸಿಕೊಳ್ಳಬಹುದು” ಎಂಬುದು ಯಾಕೋಬನ ಆಲೋಚನೆಯಾಗಿತ್ತು. 21 ಯಾಕೋಬನು ಏಸಾವನಿಗೆ ಉಡುಗೊರೆಗಳನ್ನು ಕಳುಹಿಸಿ ಆ ರಾತ್ರಿ ಪಾಳೆಯದಲ್ಲಿ ಉಳಿದುಕೊಂಡನು.
22 ಆ ರಾತ್ರಿ, ಯಾಕೋಬನು ಎದ್ದು ತನ್ನ ಇಬ್ಬರು ಹೆಂಡತಿಯರನ್ನೂ ತನ್ನ ಇಬ್ಬರು ದಾಸಿಯರನ್ನೂ ತನ್ನ ಹನ್ನೊಂದು ಮಂದಿ ಗಂಡುಮಕ್ಕಳನ್ನೂ ಕರೆದುಕೊಂಡು ಹೊರಟು ಯಬ್ಬೋಕ್ ಹೊಳೆಯನ್ನು ದಾಟತಕ್ಕ ಸ್ಥಳಕ್ಕೆ ಬಂದನು. 23 ಯಾಕೋಬನು ತನ್ನ ಕುಟುಂಬದವರನ್ನೂ ತನ್ನಲ್ಲಿದ್ದ ಪ್ರತಿಯೊಂದನ್ನೂ ಆಚೆದಡಕ್ಕೆ ಕಳುಹಿಸಿದನು.
ದೇವರೊಡನೆ ಹೋರಾಟ
24 ಎಲ್ಲರನ್ನೂ ಹೊಳೆ ದಾಟಿಸಿದ ಮೇಲೆ ಕೊನೆಯವನಾಗಿ ತಾನೊಬ್ಬನೇ ಹೊಳೆದಾಟಲು ನಿಂತಿದ್ದಾಗ ಒಬ್ಬ ಪುರುಷನು ಬಂದು ಸೂರ್ಯೋದಯದವರೆಗೂ ಹೋರಾಡಿದನು. 25 ಯಾಕೋಬನನ್ನು ಸೋಲಿಸಲು ತನಗೆ ಸಾಧ್ಯವಾಗದಿರುವುದನ್ನು ಗಮನಿಸಿದ ಆ ಪುರುಷನು ಯಾಕೋಬನ ತೊಡೆಯನ್ನು ಮುಟ್ಟಿದನು. ಆಗ ಯಾಕೋಬನ ಕೀಲು ತಪ್ಪಿತು.
26 ಆ ಪುರುಷನು ಯಾಕೋಬನಿಗೆ, “ನನ್ನನ್ನು ಬಿಡು, ಸೂರ್ಯೋದಯವಾಗುತ್ತಿದೆ” ಎಂದು ಹೇಳಿದನು.
ಆದರೆ ಯಾಕೋಬನು, “ನೀನು ನನ್ನನ್ನು ಆಶೀರ್ವದಿಸದ ಹೊರತು ನಾನು ನಿನ್ನನು ಬಿಡುವುದಿಲ್ಲ” ಎಂದು ಹೇಳಿದನು.
27 ಆ ಪುರುಷನು ಅವನಿಗೆ, “ನಿನ್ನ ಹೆಸರೇನು?” ಎಂದು ಕೇಳಿದನು.
ಅದಕ್ಕೆ ಯಾಕೋಬನು, “ನನ್ನ ಹೆಸರು ಯಾಕೋಬ” ಅಂದನು.
28 ಆಗ ಆ ಪುರುಷನು, “ಇನ್ನು ಮೇಲೆ ನಿನ್ನ ಹೆಸರು ‘ಯಾಕೋಬ’ ಎಂದಿರುವುದಿಲ್ಲ. ಇಂದಿನಿಂದ ನಿನ್ನ ಹೆಸರು ‘ಇಸ್ರೇಲ್’ ಎಂದಾಗುವುದು. ನಾನೇ ನಿನಗೆ ಈ ಹೆಸರನ್ನು ಕೊಟ್ಟಿದ್ದೇನೆ; ಯಾಕೆಂದರೆ ನೀನು ದೇವರೊಡನೆಯೂ ಮನುಷ್ಯರೊಡನೆಯೂ ಹೋರಾಡಿದೆ; ಆದರೂ ನೀನು ಸೋಲಲಿಲ್ಲ” ಎಂದು ಹೇಳಿದನು.
29 ಯಾಕೋಬನು ಆತನಿಗೆ, “ದಯವಿಟ್ಟು ನಿನ್ನ ಹೆಸರನ್ನು ತಿಳಿಸು” ಎಂದು ಕೇಳಿದನು.
ಅದಕ್ಕೆ ಆ ಪುರುಷನು, “ನನ್ನ ಹೆಸರನ್ನು ವಿಚಾರಿಸುವುದೇಕೆ?” ಎಂದು ಹೇಳಿ ಯಾಕೋಬನನ್ನು ಆಶೀರ್ವದಿಸಿದನು.
30 ಆದ್ದರಿಂದ ಯಾಕೋಬನು, “ಈ ಸ್ಥಳದಲ್ಲಿ ನಾನು ದೇವರನ್ನು ಮುಖಾಮುಖಿಯಾಗಿ ನೋಡಿದರೂ ನನ್ನ ಜೀವ ಉಳಿಯಿತು” ಎಂದು ಹೇಳಿ ಆ ಸ್ಥಳಕ್ಕೆ ಪೆನೀಯೇಲ್ ಎಂದು ಹೆಸರಿಟ್ಟನು. 31 ಆಮೇಲೆ ಅವನು ಪೆನೀಯೇಲ್‌ನಿಂದ ಹೊರಟುಹೋಗುತ್ತಿರುವಾಗ ಸೂರ್ಯೋದಯವಾಯಿತು. ಯಾಕೋಬನು ತನ್ನ ಕೀಲುನೋವಿನಿಂದ ಕುಂಟುತ್ತಾ ಹೋದನು. 32 ಈ ಮಾಂಸಖಂಡದಲ್ಲಿ ಯಾಕೋಬನಿಗೆ ನೋವು ಉಂಟಾಗಿದ್ದರಿಂದ ಇಂದಿಗೂ ಇಸ್ರೇಲರು ತೊಡೆಯ ಕೀಲಿನ ಮೇಲಿರುವ ಸೊಂಟದ ಮಾಂಸವನ್ನು ತಿನ್ನುವುದಿಲ್ಲ.
ಮರುಜೀವ ಹೊಂದಿದ ಬಾಲಕಿ ಮತ್ತು ಗುಣಮುಖಳಾದ ಸ್ತ್ರೀ
(ಮಾರ್ಕ 5:21-43; ಲೂಕ 8:40-56)
18 ಯೇಸು ಈ ಸಂಗತಿಗಳನ್ನು ಹೇಳುತ್ತಿರುವಾಗ ಸಭಾಮಂದಿರದ ಅಧಿಕಾರಿಯೊಬ್ಬನು ಆತನ ಬಳಿಗೆ ಬಂದು ಆತನಿಗೆ ಬಾಗಿ ನಮಸ್ಕರಿಸಿ, “ನನ್ನ ಮಗಳು ಈಗ ತಾನೇ ಸತ್ತುಹೋದಳು. ನೀನು ಬಂದು ಅವಳನ್ನು ಮುಟ್ಟಿದರೆ ಅವಳು ಮತ್ತೆ ಜೀವಂತಳಾಗುವಳು” ಎಂದು ಹೇಳಿದನು.
19 ಆದ್ದರಿಂದ ಯೇಸು ಎದ್ದು ಅಧಿಕಾರಿಯ ಸಂಗಡ ಹೋದನು. ಯೇಸುವಿನ ಶಿಷ್ಯರು ಸಹ ಹೋದರು.
20 ಹನ್ನೆರಡು ವರ್ಷಗಳಿಂದ ರಕ್ತಸ್ರಾವ ಕಾಯಿಲೆ ಹೊಂದಿದ್ದ ಒಬ್ಬ ಹೆಂಗಸು ಅಲ್ಲಿದ್ದಳು. ಆ ಹೆಂಗಸು ಯೇಸುವಿನ ಹಿಂದೆಯೇ ಬಂದು ಆತನ ಮೇಲಂಗಿಯ ತುದಿಯನ್ನು ಮುಟ್ಟಿದಳು. 21 ಆ ಹೆಂಗಸು, “ನಾನು ಆತನ ಅಂಗಿಯನ್ನು ಮುಟ್ಟಿದರೆ ಸಾಕು, ನಾನು ಗುಣವಾಗಬಲ್ಲೆ” ಎಂದು ಆಲೋಚನೆ ಮಾಡಿಕೊಂಡಿದ್ದಳು.
22 ಯೇಸು ಹಿಂತಿರುಗಿ ಆ ಹೆಂಗಸನ್ನು ನೋಡಿ, “ಮಗಳೇ, ಸಂತೋಷಪಡು! ನಿನ್ನ ನಂಬಿಕೆಯಿಂದಲೇ ನಿನಗೆ ಗುಣವಾಯಿತು” ಎಂದು ಹೇಳಿದನು. ಆಗ ಅವಳು ಗುಣಮುಖಳಾದಳು.
23 ಬಳಿಕ ಯೇಸು ಅಧಿಕಾರಿಯೊಡನೆ ಮುಂದೆ ಸಾಗಿ ಅವನ ಮನೆಯೊಳಕ್ಕೆ ಹೋದನು. ಶವಸಂಸ್ಕಾರಕ್ಕಾಗಿ ಬಂದಿದ್ದ ವಾದ್ಯವೃಂದದವರಿಗೂ ಗೋಳಾಡುತ್ತಿದ್ದವರಿಗೂ ಯೇಸು, 24 “ದೂರ ಹೋಗಿರಿ, ಹುಡುಗಿ ಸತ್ತಿಲ್ಲ. ಅವಳು ನಿದ್ದೆ ಮಾಡುತ್ತಿದ್ದಾಳೆ” ಅಂದನು. ಆದರೆ ಅವರು ಯೇಸುವನ್ನು ಅಪಹಾಸ್ಯ ಮಾಡಿದರು. 25 ಜನರನ್ನು ಮನೆಯ ಹೊರಗೆ ಕಳುಹಿಸಿದ ಮೇಲೆ ಯೇಸು ಹುಡುಗಿಯ ಕೋಣೆಯ ಒಳಗೆ ಹೋದನು. ಯೇಸು ಹುಡುಗಿಯ ಕೈಯನ್ನು ಹಿಡಿದಾಗ ಆ ಹುಡುಗಿಯು ಎದ್ದುನಿಂತಳು. 26 ಈ ಸುದ್ದಿಯು ಸುತ್ತಮುತ್ತಲಿನ ಪ್ರದೇಶದಲ್ಲೆಲ್ಲಾ ಹಬ್ಬಿತು.
ಅನೇಕರಿಗೆ ಸ್ವಸ್ಥತೆ
27 ಯೇಸು ಅಲ್ಲಿಂದ ಹೊರಡುತ್ತಿರುವಾಗ ಇಬ್ಬರು ಕುರುಡರು ಆತನನ್ನು ಹಿಂಬಾಲಿಸಿದರು. ಅವರು, “ದಾವೀದನ ಕುಮಾರನೇ, ನಮಗೆ ದಯೆ ತೋರು” ಎಂದು ಗಟ್ಟಿಯಾಗಿ ಕೂಗಿದರು.
28 ಯೇಸು ಮನೆಯೊಳಗೆ ಹೋದನು. ಕುರುಡರೂ ಆತನ ಸಂಗಡ ಹೋದರು. ಯೇಸು ಅವರಿಗೆ, “ನಾನು ನಿಮ್ಮನ್ನು ಗುಣಪಡಿಸಬಲ್ಲೆನೆಂದು ನೀವು ನಂಬುತ್ತೀರೋ?” ಎಂದು ಕೇಳಿದನು. ಕುರುಡರು, “ಹೌದು ಪ್ರಭುವೇ, ನಾವು ನಂಬುತ್ತೇವೆ” ಎಂದು ಉತ್ತರಕೊಟ್ಟರು.
29 ಆಗ ಯೇಸು ಅವರ ಕಣ್ಣುಗಳನ್ನು ಮುಟ್ಟಿ, “ನೀವು ನಂಬಿದಂತೆಯೇ ನಿಮಗೆ ಗುಣವಾಗಲಿ” ಅಂದನು. 30 ಕೂಡಲೇ ಅವರಿಗೆ ದೃಷ್ಟಿ ಬಂದಿತು. “ಈ ವಿಷಯವನ್ನು ಯಾರಿಗೂ ಹೇಳಬಾರದು” ಎಂದು ಯೇಸು ಅವರಿಗೆ ಎಚ್ಚರಿಕೆ ನೀಡಿದನು. 31 ಆದರೆ ಆ ಕುರುಡರು ಅಲ್ಲಿಂದ ಹೊರಟುಹೋಗಿ ಯೇಸುವಿನ ಸುದ್ದಿಯನ್ನು ಆ ಪ್ರದೇಶದ ಸುತ್ತಮುತ್ತಲೆಲ್ಲಾ ಹಬ್ಬಿಸಿದರು.
32 ಅವರಿಬ್ಬರು ಹೋಗುತ್ತಿರುವಾಗ ಕೆಲವರು ಬೇರೊಬ್ಬನನ್ನು ಯೇಸುವಿನ ಬಳಿಗೆ ತಂದರು. ಅವನಲ್ಲಿ ದೆವ್ವವಿದ್ದುದರಿಂದ ಅವನು ಮೂಕನಾಗಿದ್ದನು. 33 ಯೇಸು ಆ ದೆವ್ವಕ್ಕೆ ಅವನನ್ನು ಬಿಟ್ಟುಹೋಗುವಂತೆ ಆಜ್ಞಾಪಿಸಿದನು. ಅವನು ಮಾತನಾಡತೊಡಗಿದನು. ಇದನ್ನು ಕಂಡ ಜನರು ಆಶ್ಚರ್ಯಚಕಿತರಾಗಿ, “ಇಸ್ರೇಲಿನಲ್ಲಿ ಇಂಥ ಕಾರ್ಯವನ್ನು ನೋಡಿಯೇ ಇಲ್ಲ” ಅಂದರು.
34 ಆದರೆ ಫರಿಸಾಯರು, “ಇವನು ದೆವ್ವಗಳ ಒಡೆಯನ ಶಕ್ತಿಯಿಂದಲೇ ದೆವ್ವಗಳನ್ನು ಬಿಡಿಸುತ್ತಾನೆ” ಎಂದರು.
ಜನರ ವಿಷಯದಲ್ಲಿ ಯೇಸುವಿನ ದುಃಖ
35 ಯೇಸು ಊರುಗಳಲ್ಲೆಲ್ಲಾ ಮತ್ತು ಹಳ್ಳಿಗಳಲ್ಲೆಲ್ಲಾ ಸಂಚಾರ ಮಾಡಿದನು. ಯೇಸು ಅವರ ಸಭಾಮಂದಿರಗಳಲ್ಲಿ ಉಪದೇಶಿಸಿ ಪರಲೋಕರಾಜ್ಯದ ವಿಷಯವಾಗಿ ಶುಭವಾರ್ತೆಯನ್ನು ಹೇಳಿದನು. ಎಲ್ಲಾ ತರದ ರೋಗಗಳನ್ನು ಬೇನೆಗಳನ್ನು ವಾಸಿಮಾಡಿದನು. 36 ನೋವಿನಿಂದ ನರಳುತ್ತಿದ್ದ ಮತ್ತು ಅಸಹಾಯಕರಾಗಿದ್ದ ಅನೇಕ ಜನರನ್ನು ಯೇಸು ನೋಡಿ ದುಃಖಪಟ್ಟನು. ಕುರುಬನಿಲ್ಲದ ಕುರಿಗಳಂತೆ ಅವರಿದ್ದರು. 37 ಯೇಸು ತನ್ನ ಶಿಷ್ಯರಿಗೆ, “ಬೆಳೆಯು ಬಹಳ, ಆದರೆ ಕೆಲಸಗಾರರು ಸ್ವಲ್ಪ. 38 ಬೆಳೆಯ ಯಜಮಾನ ದೇವರೇ. ಆದ್ದರಿಂದ ಹೆಚ್ಚು ಕೆಲಸಗಾರರನ್ನು ಸುಗ್ಗಿಗಾಗಿ ಕಳುಹಿಸಿಕೊಡುವಂತೆ ಆತನಿಗೆ ಪ್ರಾರ್ಥನೆ ಮಾಡಿರಿ” ಎಂದು ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International