Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಆದಿಕಾಂಡ 23-24

ಸಾರಳ ಮರಣ

23 ಸಾರಳು ನೂರಿಪ್ಪತ್ತೇಳು ವರ್ಷ ಬದುಕಿದ್ದಳು. ಅವಳು ಕಾನಾನ್ ದೇಶದ ಹೆಬ್ರೋನೆಂಬ ಕಿರ್ಯತರ್ಬದಲ್ಲಿ ಮರಣಹೊಂದಿದಳು. ಅಬ್ರಹಾಮನು ಅವಳಿಗೋಸ್ಕರ ಅಲ್ಲಿ ಬಹಳವಾಗಿ ಅತ್ತನು. ಬಳಿಕ ಆಕೆಯ ಶವದ ಬಳಿಯಿಂದ ಎದ್ದು ಹಿತ್ತಿಯರ ಬಳಿಗೆ ಹೋಗಿ, ಅವರಿಗೆ, “ನಾನು ಈ ನಾಡಿನವನಲ್ಲ. ನಾನು ಇಲ್ಲಿ ಕೇವಲ ಪ್ರವಾಸಿಗನಷ್ಟೇ. ಆದ್ದರಿಂದ ನನ್ನ ಹೆಂಡತಿಯನ್ನು ಸಮಾಧಿಮಾಡಲು ನನಗೆ ಸ್ವಲ್ಪ ಸ್ಥಳ ಬೇಕು” ಎಂದು ಹೇಳಿದನು.

ಹಿತ್ತಿಯರು ಅಬ್ರಹಾಮನಿಗೆ, “ಸ್ವಾಮೀ, ನೀನು ನಮ್ಮ ಮಹಾನಾಯಕರುಗಳಲ್ಲಿ ಒಬ್ಬನು. ತೀರಿಕೊಂಡ ನಿನ್ನ ಹೆಂಡತಿಯ ಸಮಾಧಿಗಾಗಿ ನಮ್ಮಲ್ಲಿರುವ ಸ್ಮಶಾನಗಳಲ್ಲಿ ಅತ್ಯುತ್ತಮವಾದ ಸ್ಥಳವನ್ನು ನೀನು ತೆಗೆದುಕೊಳ್ಳಬಹುದು. ನಿನ್ನ ಹೆಂಡತಿಯನ್ನು ಸಮಾಧಿಮಾಡಲು ನಮ್ಮಲ್ಲಿ ಯಾರೂ ಅಡ್ಡಿ ಮಾಡುವುದಿಲ್ಲ” ಎಂದು ಉತ್ತರಕೊಟ್ಟರು.

ಅಬ್ರಹಾಮನು ಎದ್ದುನಿಂತು ಅವರಿಗೆ ನಮಸ್ಕರಿಸಿ, ಅವರಿಗೆ, “ತೀರಿಹೋದ ನನ್ನ ಹೆಂಡತಿಯನ್ನು ಸಮಾಧಿಮಾಡಲು ನೀವು ನಿಜವಾಗಿಯೂ ಸಹಾಯ ಮಾಡಬೇಕೆಂದಿದ್ದರೆ, ಚೋಹರನ ಮಗನಾದ ಎಫ್ರೋನನ ಸಂಗಡ ನನಗೋಸ್ಕರ ಮಾತಾಡಿರಿ. ಮಕ್ಪೇಲದ ಗವಿಯನ್ನು ಕೊಂಡುಕೊಳ್ಳಲು ನನಗೆ ಇಷ್ಟವಿದೆ. ಅದು ಎಫ್ರೋನನದು. ಅದು ಅವನ ಜಮೀನಿನ ಅಂಚಿನಲ್ಲಿದೆ. ಅದಕ್ಕಾಗುವ ಬೆಲೆಯನ್ನು ನಾನು ಪೂರ್ತಿ ಕೊಡುತ್ತೇನೆ. ನಾನು ಅದನ್ನು ಸಮಾಧಿಯ ಸ್ಥಳಕ್ಕಾಗಿ ಕೊಂಡುಕೊಂಡಿರುವೆ ಎಂಬುದಕ್ಕೆ ನೀವೆಲ್ಲರೂ ಸಾಕ್ಷಿಗಳಾಗಿರಬೇಕು” ಎಂದು ಹೇಳಿದನು.

10 ಎಫೋನನು ಪಟ್ಟಣದ ಬಾಗಿಲ ಬಳಿಯಲ್ಲಿ ಹಿತ್ತಿಯರೊಂದಿಗೆ ಕುಳಿತುಕೊಂಡಿದ್ದನು. ಕೂಡಲೇ ಅವನು ಅಬ್ರಹಾಮನಿಗೆ, 11 “ಸ್ವಾಮೀ ನಾನು ಆ ಸ್ಥಳವನ್ನೂ ಆ ಗವಿಯನ್ನೂ ನನ್ನ ಜನರ ಎದುರಿನಲ್ಲಿಯೇ ನಿನಗೆ ಕೊಡುವೆನು. ನಿನ್ನ ಹೆಂಡತಿಯನ್ನು ಅಲ್ಲಿ ಸಮಾಧಿಮಾಡು” ಎಂದು ಹೇಳಿದನು.

12 ಆಗ ಅಬ್ರಹಾಮನು ಹಿತ್ತಿಯರಿಗೆ ತಲೆಬಾಗಿ ನಮಸ್ಕರಿಸಿದನು. 13 ಅಬ್ರಹಾಮನು ಜನರೆಲ್ಲರ ಎದುರಿನಲ್ಲಿ ಎಫ್ರೋನನಿಗೆ, “ಆ ಸ್ಥಳಕ್ಕಾಗುವ ಪೂರ್ತಿ ಬೆಲೆಯನ್ನು ನಾನು ನಿನಗೆ ಕೊಡುತ್ತೇನೆ; ನೀನು ಹಣವನ್ನು ತೆಗೆದುಕೊಳ್ಳುವುದಾದರೆ, ನನ್ನ ಹೆಂಡತಿಯನ್ನು ಅಲ್ಲಿ ಸಮಾಧಿಮಾಡುವೆನು” ಎಂದು ಹೇಳಿದನು.

14 ಎಫ್ರೋನನು ಅಬ್ರಹಾಮನಿಗೆ, 15 “ಸ್ವಾಮೀ, ನನ್ನ ಮಾತನ್ನು ಕೇಳು. ಆ ಸ್ಥಳದ ಬೆಲೆ ನಾನೂರು ಬೆಳ್ಳಿ ರೂಪಾಯಿಗಳಷ್ಟೇ. ಆದರೆ ನಿನಗಾಗಲಿ, ನನಗಾಗಲಿ ಆ ನಾನೂರು ರೂಪಾಯಿ ಹೆಚ್ಚೇನೂ ಅಲ್ಲ. ಸ್ಥಳವನ್ನು ತೆಗೆದುಕೊಂಡು ನಿನ್ನ ಹೆಂಡತಿಯನ್ನು ಸಮಾಧಿಮಾಡು” ಎಂದು ಉತ್ತರಕೊಟ್ಟನು.

16 ಅಬ್ರಹಾಮನು ಎಫ್ರೋನನ ಮಾತಿಗೆ ಒಪ್ಪಿದನು. ಅಬ್ರಹಾಮನು ಆ ಸ್ಥಳಕ್ಕಾಗಿ ನಾನೂರು ಬೆಳ್ಳಿ ರೂಪಾಯಿಗಳನ್ನು ಹಿತ್ತಿಯರ ಎದುರಿನಲ್ಲಿ ಹೇಳಿದ ಎಫ್ರೋನನಿಗೆ ಎಣಿಸಿಕೊಟ್ಟನು.

17-18 ಈ ಜಮೀನು ಮಮ್ರೆಗೆ ಪೂರ್ವದಲ್ಲಿರುವ ಮಕ್ಪೇಲದಲ್ಲಿತ್ತು. ಅಬ್ರಹಾಮನು ಆ ಜಮೀನಿಗೂ ಅದರಲ್ಲಿದ್ದ ಗವಿಗೂ ಜಮೀನಿನಲ್ಲಿದ್ದ ಎಲ್ಲಾ ಮರಗಳಿಗೂ ಒಡೆಯನಾದನು. ಎಫ್ರೋನನಿಗೂ ಅಬ್ರಹಾಮನಿಗೂ ಆದ ಒಪ್ಪಂದಕ್ಕೆ ನಗರದವರೆಲ್ಲರು ಸಾಕ್ಷಿಗಳಾದರು. 19 ಬಳಿಕ ಅಬ್ರಹಾಮನು ತನ್ನ ಹೆಂಡತಿಯಾದ ಸಾರಳನ್ನು ಮಮ್ರೆಗೆ ಸಮೀಪದಲ್ಲಿದ್ದ ಜಮೀನಿನ ಗವಿಯಲ್ಲಿ ಸಮಾಧಿಮಾಡಿದನು. (ಅದು ಕಾನಾನ್ ದೇಶದ ಹೆಬ್ರೋನ್). 20 ಅಬ್ರಹಾಮನು ಆ ಜಮೀನನ್ನು ಮತ್ತು ಅದರಲ್ಲಿದ್ದ ಗವಿಯನ್ನು ಹಿತ್ತಿಯರಿಂದ ಕೊಂಡುಕೊಂಡನು. ಅದು ಅವನ ಆಸ್ತಿಯಾಯಿತು. ಅವನು ಅದನ್ನು ಸಮಾಧಿ ಸ್ಥಳವನ್ನಾಗಿ ಉಪಯೋಗಿಸಿದನು.

ಇಸಾಕನಿಗಾಗಿ ಹೆಂಡತಿ

24 ಅಬ್ರಹಾಮನು ಬಹಳ ವೃದ್ಧನಾದನು. ಯೆಹೋವನು ಅಬ್ರಹಾಮನನ್ನೂ ಅವನು ಮಾಡಿದ ಪ್ರತಿಯೊಂದನ್ನೂ ಆಶೀರ್ವದಿಸಿದನು. ಅಬ್ರಹಾಮನ ಆಸ್ತಿಯನ್ನೆಲ್ಲಾ ನೋಡಿಕೊಳ್ಳಲು ಒಬ್ಬ ಸೇವಕನಿದ್ದನು. ಅಬ್ರಹಾಮನು ಆ ಸೇವಕನನ್ನು ಕರೆದು, “ನನ್ನ ತೊಡೆಯ ಕೆಳಗೆ ನಿನ್ನ ಕೈಯಿಟ್ಟು ನನಗೆ ಪ್ರಮಾಣಮಾಡು. ಕಾನಾನ್ ದೇಶದ ಕನ್ನಿಕೆಯನ್ನು ನನ್ನ ಮಗನು ಮದುವೆಯಾಗದಂತೆ ನೀನು ನೋಡಿಕೊಳ್ಳುವುದಾಗಿಯೂ ನನ್ನ ಸ್ವದೇಶದಲ್ಲಿರುವ ನನ್ನ ಸ್ವಜನರ ಬಳಿಗೆ ಹೋಗಿ ನನ್ನ ಮಗನಾದ ಇಸಾಕನಿಗೆ ಕನ್ನಿಕೆಯನ್ನು ಹುಡುಕಿ ಕರೆದುಕೊಂಡು ಬರುವುದಾಗಿಯೂ ಭೂಪರಲೋಕಗಳ ದೇವರಾದ ಯೆಹೋವನ ಮೇಲೆ ಪ್ರಮಾಣಮಾಡು” ಎಂದು ಹೇಳಿದನು.

ಸೇವಕನು ಅವನಿಗೆ, “ಆ ಕನ್ಯೆಯು ನನ್ನೊಡನೆ ಈ ದೇಶಕ್ಕೆ ಬರಲು ಒಪ್ಪದಿದ್ದರೆ, ನಾನು ನಿನ್ನ ಮಗನನ್ನು ನಿನ್ನ ಸ್ವದೇಶಕ್ಕೆ ಕರೆದುಕೊಂಡು ಹೋಗಬೇಕೇ?” ಎಂದು ಕೇಳಿದನು.

ಅಬ್ರಹಾಮನು ಅವನಿಗೆ, “ಇಲ್ಲ, ಆ ದೇಶಕ್ಕೆ ನನ್ನ ಮಗನನ್ನು ಕರೆದುಕೊಂಡು ಹೋಗಬೇಡ. ಪರಲೋಕದ ದೇವರಾದ ಯೆಹೋವನು ನನ್ನನ್ನು ಸ್ವದೇಶದಿಂದ ಈ ಸ್ಥಳಕ್ಕೆ ಕರೆದುಕೊಂಡು ಬಂದನು. ಆ ದೇಶ ನನ್ನ ತಂದೆಗೂ ನನ್ನ ಕುಟುಂಬಕ್ಕೂ ಸೇರಿದೆ. ಆದರೆ ಯೆಹೋವನು ಈ ದೇಶವನ್ನು ನನ್ನ ಸಂತತಿಗೆ ಕೊಡುವುದಾಗಿ ವಾಗ್ದಾನ ಮಾಡಿದನು. ನೀನು ನನ್ನ ಮಗನಿಗೆ ಕನ್ಯೆಯನ್ನು ಹುಡುಕಿ ಕರೆದುಕೊಂಡು ಬರಲು ಸಾಧ್ಯವಾಗುವಂತೆ ಯೆಹೋವನು ತನ್ನ ದೂತನನ್ನು ನಿನ್ನ ಮುಂದೆ ಕಳುಹಿಸಲಿ. ಆದರೆ ಆ ಕನ್ಯೆಯು ನಿನ್ನೊಡನೆ ಬರಲು ಇಷ್ಟಪಡದಿದ್ದರೆ, ಈ ಪ್ರಮಾಣದಿಂದ ನೀನು ಬಿಡುಗಡೆಯಾಗುವೆ. ಆದರೆ ನೀನು ನನ್ನ ಮಗನನ್ನು ನನ್ನ ಸ್ವದೇಶಕ್ಕೆ ಕರೆದುಕೊಂಡು ಹೋಗಕೂಡದು” ಎಂದು ಹೇಳಿದನು.

ಆಗ ಆ ಸೇವಕನು ತನ್ನ ಒಡೆಯನಾದ ಅಬ್ರಹಾಮನ ತೊಡೆಯ ಕೆಳಗೆ ಕೈಯಿಟ್ಟು ಪ್ರಮಾಣ ಮಾಡಿದನು.

ಕನ್ಯೆಯನ್ನು ಹುಡುಕಲು ಪ್ರಯಾಣ

10 ಆ ಸೇವಕನು ಅಬ್ರಹಾಮನ ಹತ್ತು ಒಂಟೆಗಳನ್ನು ಸಿದ್ಧಮಾಡಿ ಶ್ರೇಷ್ಠವಾದ ಅನೇಕ ಉಡುಗೊರೆಗಳನ್ನು ತೆಗೆದುಕೊಂಡು ಮೆಸೊಪೋಟೊಮಿಯಕ್ಕೆ ಬಂದು ನಾಹೋರನು ವಾಸವಾಗಿದ್ದ ಊರನ್ನು ತಲುಪಿದನು. 11 ಅವನು ಊರ ಹೊರಗಿದ್ದ ಬಾವಿಯ ಬಳಿಯಲ್ಲಿ ಒಂಟೆಗಳನ್ನು ಮಲಗಿಸಿದನು; ಪ್ರತಿಸಾಯಂಕಾಲ ಸ್ತ್ರೀಯರು ನೀರನ್ನು ತೆಗೆದುಕೊಂಡು ಹೋಗುವುದಕ್ಕಾಗಿ ಆ ಬಾವಿಗೆ ಬರುತ್ತಿದ್ದರು.

12 ಆ ಸೇವಕನು, “ಯೆಹೋವನೇ, ನೀನು ನನ್ನ ಒಡೆಯನಾದ ಅಬ್ರಹಾಮನ ದೇವರು. ಈ ದಿನ ಅವನ ಮಗನಿಗಾಗಿ ಕನ್ಯೆಯನ್ನು ಕಂಡುಕೊಳ್ಳಲು ಸಹಾಯಮಾಡು. ನನ್ನ ಒಡೆಯನಾದ ಅಬ್ರಹಾಮನಿಗೋಸ್ಕರವಾಗಿಯೇ ಈ ಉಪಕಾರ ಮಾಡು. 13 ನಾನು ಈ ನೀರಿನ ಬಾವಿಯ ಬಳಿಯಲ್ಲಿ ನಿಂತಿರುತ್ತೇನೆ; ಈ ಊರಿನ ಯುವತಿಯರು ನೀರನ್ನು ತೆಗೆದುಕೊಳ್ಳಲು ಇಲ್ಲಿಗೆ ಬರುತ್ತಾರೆ. 14 ಇಸಾಕನಿಗೆ ಯೋಗ್ಯಳಾದ ಕನ್ಯೆಯನ್ನು ಕಂಡುಕೊಳ್ಳಲು ನಾನು ಒಬ್ಬಳಿಗೆ, ‘ದಯವಿಟ್ಟು ನಿನ್ನ ಕೊಡವನ್ನು ಕೆಳಗಿಳಿಸಿ ಕುಡಿಯಲು ನೀರು ಕೊಡು’ ಎನ್ನುವೆ. ಆಕೆ ನನಗೆ, ‘ನೀನೂ ಕುಡಿ, ನಿನ್ನ ಒಂಟೆಗಳಿಗೂ ನೀರು ಕೊಡುತ್ತೇನೆ’ ಎಂದರೆ ಆಕೆಯೇ ನಿನ್ನಿಂದ ಆಯ್ಕೆಗೊಂಡ ಯೋಗ್ಯ ಕನ್ಯೆಯೆಂದೂ ನೀನು ನನ್ನ ಒಡೆಯನಿಗೆ ಕರುಣೆ ತೋರಿದೆಯೆಂದೂ ನಾನು ತಿಳಿದುಕೊಳ್ಳುವೆ” ಎಂದು ಪ್ರಾರ್ಥಿಸಿದನು.

ಕನ್ಯೆಯ ಆಯ್ಕೆ

15 ಆ ಸೇವಕನು ಪ್ರಾರ್ಥನೆ ಮಾಡಿ ಮುಗಿಸುವುದಕ್ಕಿಂತ ಮೊದಲೇ ರೆಬೆಕ್ಕ ಎಂಬ ಯುವತಿಯು ಬಾವಿಯ ಬಳಿಗೆ ಬಂದಳು. ರೆಬೆಕ್ಕಳು ಬೆತೂವೇಲನ ಮಗಳು. ಬೆತೂವೇಲನು ಮಿಲ್ಕಳ ಮತ್ತು ನಾಹೋರನ ಮಗನು. ನಾಹೋರನು ಅಬ್ರಹಾಮನ ತಮ್ಮ. ರೆಬೆಕ್ಕಳು ತನ್ನ ಹೆಗಲ ಮೇಲೆ ನೀರಿನ ಕೊಡವನ್ನು ತೆಗೆದುಕೊಂಡು ಬಾವಿಗೆ ಬಂದಳು. 16 ಆಕೆ ಬಹು ಸುಂದರಿಯಾಗಿಯೂ ಕನ್ನಿಕೆಯಾಗಿಯೂ ಇದ್ದಳು. ಆಕೆ ಬಾವಿಯ ಬಳಿಗೆ ಹೋಗಿ ಕೊಡದಲ್ಲಿ ನೀರನ್ನು ತುಂಬಿಸಿಕೊಂಡಳು. 17 ಆಗ ಆ ಸೇವಕನು ಅವಳ ಬಳಿಗೆ ಓಡಿಹೋಗಿ, “ದಯವಿಟ್ಟು ಕುಡಿಯಲು ನಿನ್ನ ಕೊಡದಿಂದ ಸ್ವಲ್ಪ ನೀರನ್ನು ಕೊಡು” ಎಂದು ಕೇಳಿದನು.

18 ರೆಬೆಕ್ಕಳು ಕೂಡಲೇ ತನ್ನ ಕೊಡವನ್ನು ಹೆಗಲ ಮೇಲಿಂದ ಕೆಳಗಿಳಿಸಿ ಅವನಿಗೆ ಕುಡಿಯಲು ನೀರನ್ನು ಕೊಟ್ಟು, “ಅಯ್ಯಾ, ನೀರನ್ನು ಕುಡಿ” ಅಂದಳು. 19 ಅವನು ನೀರು ಕುಡಿದಾದ ಮೇಲೆ ಆಕೆ ಅವನಿಗೆ, “ನಿನ್ನ ಒಂಟೆಗಳಿಗೂ ಬೇಕಾದಷ್ಟು ನೀರನ್ನು ತಂದುಕೊಡುತ್ತೇನೆ” ಎಂದು ಹೇಳಿ, 20 ನೀರನ್ನೆಲ್ಲ ತೊಟ್ಟಿಯಲ್ಲಿ ಸುರಿದು ಮತ್ತೆ ನೀರನ್ನು ತೆಗೆದುಕೊಂಡು ಬರಲು ಬಾವಿಯ ಬಳಿಗೆ ಬೇಗಬೇಗನೆ ಹೋದಳು. ಹೀಗೆ ಅವನ ಒಂಟೆಗಳಿಗೆಲ್ಲಾ ನೀರನ್ನು ಕೊಟ್ಟಳು.

21 ಆ ಸೇವಕನು ಆಕೆಯನ್ನೇ ಗಮನಿಸುತ್ತಾ, ಯೆಹೋವನು ತನ್ನ ಪ್ರಾರ್ಥನೆಗೆ ಉತ್ತರ ಕೊಟ್ಟನೋ ಇಲ್ಲವೋ ಎಂದು ಖಚಿತಪಡಿಸಿಕೊಳ್ಳಲು ಕಾದುಕೊಂಡಿದ್ದನು. 22 ಒಂಟೆಗಳು ನೀರನ್ನು ಕುಡಿದಾದ ಮೇಲೆ ಅವನು ರೆಬೆಕ್ಕಳಿಗೆ ಅರ್ಧತೊಲೆಯ ಒಂದು ಚಿನ್ನದ ಉಂಗುರವನ್ನು ಕೊಟ್ಟನು. ಇದಲ್ಲದೆ ಅವನು ಆಕೆಗೆ ಹತ್ತು ತೊಲೆಯ ಎರಡು ಚಿನ್ನದ ಬಳೆಗಳನ್ನು ಕೊಟ್ಟನು. 23 ಆ ಸೇವಕನು, “ನಿನ್ನ ತಂದೆ ಯಾರು? ನನ್ನ ಜನರು ಇಳಿದುಕೊಳ್ಳಲು ನಿನ್ನ ತಂದೆಯ ಮನೆಯಲ್ಲಿ ಸ್ಥಳವಿದೆಯೋ?” ಎಂದು ಕೇಳಿದನು.

24 ರೆಬೆಕ್ಕಳು ಅವನಿಗೆ, “ನನ್ನ ತಂದೆಯ ಹೆಸರು ಬೆತೂವೇಲ. ಅವನು ಮಿಲ್ಕಳ ಮತ್ತು ನಾಹೋರನ ಮಗನು” ಎಂದು ಹೇಳಿದಳು. 25 ಬಳಿಕ, “ಹೌದು, ನಿನ್ನ ಒಂಟೆಗಳಿಗೆ ಹುಲ್ಲೂ ಮೇವೂ ನಮ್ಮಲ್ಲಿವೆ ಮತ್ತು ನೀವು ಇಳಿದುಕೊಳ್ಳಲೂ ಸ್ಥಳವಿದೆ” ಎಂದಳು.

26 ಆಗ ಆ ಸೇವಕನು ತಲೆಬಾಗಿ ಯೆಹೋವನನ್ನು ಆರಾಧಿಸಿದನು. 27 ಬಳಿಕ ಆಕೆಗೆ, “ನನ್ನ ಒಡೆಯನಾದ ಅಬ್ರಹಾಮನ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ. ಆತನು ನನ್ನ ಒಡೆಯನಿಗೆ ದಯಾಳುವೂ ನಂಬಿಗಸ್ತನೂ ಆಗಿದ್ದಾನೆ. ನನ್ನ ಒಡೆಯನ ಮಗನಿಗಾಗಿ ಯೆಹೋವನು ನನ್ನನ್ನು ನನ್ನ ಒಡೆಯನ ಕುಟುಂಬಕ್ಕೆ ನಡೆಸಿದ್ದಾನೆ” ಎಂದು ಹೇಳಿದನು.

28 ಆಗ ರೆಬೆಕ್ಕಳು ಬೇಗನೆ ಹೋಗಿ ಈ ಸಂಗತಿಗಳನ್ನೆಲ್ಲಾ ತನ್ನ ಕುಟುಂಬದವರಿಗೆ ತಿಳಿಸಿದಳು. 29-30 ರೆಬೆಕ್ಕಳಿಗೆ ಒಬ್ಬ ಅಣ್ಣನಿದ್ದನು. ಅವನ ಹೆಸರು ಲಾಬಾನ. ನಡೆದ ಸಂಗತಿಗಳನ್ನೆಲ್ಲ ರೆಬೆಕ್ಕಳು ಅವನಿಗೆ ತಿಳಿಸಿದಳು. ಲಾಬಾನನು ಆಕೆಯ ಮಾತುಗಳನ್ನೆಲ್ಲ ಕೇಳಿದಾಗ ಮತ್ತು ಉಂಗುರವನ್ನು ಮತ್ತು ಕೈಗಳಲ್ಲಿದ್ದ ಬಳೆಗಳನ್ನು ಕಂಡಾಗ ಬಾವಿಯ ಬಳಿಗೆ ಓಡಿಹೋದನು. ಬಾವಿಯ ಬಳಿಯಲ್ಲಿ ಒಂಟೆಗಳ ಹತ್ತಿರ ಆ ಸೇವಕನು ನಿಂತುಕೊಂಡಿದ್ದನು. 31 ಲಾಬಾನನು ಅವನಿಗೆ, “ಯೆಹೋವನ ಆಶೀರ್ವಾದ ಹೊಂದಿದವನೇ, ಒಳಗೆ ಬಾ. ನೀನು ಹೊರಗಡೆ ನಿಂತುಕೊಳ್ಳಬೇಕಾಗಿಲ್ಲ. ನೀನು ಇಳಿದುಕೊಳ್ಳುವುದಕ್ಕಾಗಿ ಕೋಣೆಯನ್ನೂ ನಿನ್ನ ಒಂಟೆಗಳಿಗಾಗಿ ಸ್ಥಳವನ್ನೂ ಸಿದ್ಧಪಡಿಸಿದ್ದೇನೆ” ಎಂದು ಹೇಳಿದನು.

32 ಆದ್ದರಿಂದ ಅಬ್ರಹಾಮನ ಸೇವಕನು ಲಾಬಾನನ ಮನೆಗೆ ಹೋದನು. ಒಂಟೆಗಳ ಮೇಲಿದ್ದ ಹೊರೆಗಳನ್ನು ಇಳಿಸಲು ಲಾಬಾನನು ಸಹಾಯಮಾಡಿದನು; ಒಂಟೆಗಳಿಗೆ ಸ್ಥಳಮಾಡಿಕೊಟ್ಟು ಮೇವನ್ನು ಕೊಡಿಸಿದನು; ಆಮೇಲೆ ಆ ಸೇವಕನಿಗೆ ಮತ್ತು ಅವನ ಸಂಗಡ ಇದ್ದವರಿಗೆ, ಕಾಲು ತೊಳೆದುಕೊಳ್ಳಲು ನೀರು ಕೊಟ್ಟನು. 33 ನಂತರ ಲಾಬಾನನು ಅವನಿಗೆ ಊಟವನ್ನು ಕೊಟ್ಟನು. ಆದರೆ ಆ ಸೇವಕನು ಊಟಮಾಡದೆ ಅವರಿಗೆ, “ನಾನು ಬಂದ ಉದ್ದೇಶವನ್ನು ತಿಳಿಸದೆ ಊಟಮಾಡುವುದಿಲ್ಲ” ಎಂದು ಹೇಳಿದನು.

ಅದಕ್ಕೆ ಲಾಬಾನನು, “ಸರಿ, ಹೇಳು” ಅಂದನು.

ರೆಬೆಕ್ಕಳನ್ನು ಇಸಾಕನಿಗಾಗಿ ಕೇಳಿದ್ದು

34 ಆ ಸೇವಕನು “ನಾನು ಅಬ್ರಹಾಮನ ಸೇವಕನು. 35 ಯೆಹೋವನು ನನ್ನ ಒಡೆಯನನ್ನು ಪ್ರತಿಯೊಂದರಲ್ಲಿಯೂ ಬಹಳವಾಗಿ ಆಶೀರ್ವದಿಸಿದ್ದಾನೆ. ನನ್ನ ಒಡೆಯನು ಮಹಾವ್ಯಕ್ತಿಯಾಗಿದ್ದಾನೆ. ಯೆಹೋವನು ಅಬ್ರಹಾಮನಿಗೆ ಅನೇಕ ಕುರಿಹಿಂಡುಗಳನ್ನೂ ದನಕರುಗಳ ಮಂದೆಗಳನ್ನೂ ಕೊಟ್ಟಿದ್ದಾನೆ. ಅಬ್ರಹಾಮನಿಗೆ ಬೇಕಾದಷ್ಟು ಬೆಳ್ಳಿಬಂಗಾರಗಳಿವೆ. ಅನೇಕ ಸೇವಕರಿದ್ದಾರೆ. ಅನೇಕ ಒಂಟೆಗಳೂ ಕತ್ತೆಗಳೂ ಇವೆ. 36 ಸಾರಳು ನನ್ನ ಒಡೆಯನ ಹೆಂಡತಿ. ಆಕೆ ತುಂಬಾ ವಯಸ್ಸಾಗಿರುವಾಗ ಒಬ್ಬ ಗಂಡುಮಗನನ್ನು ಹೆತ್ತಳು. ನನ್ನ ಒಡೆಯನು ತನ್ನ ಆಸ್ತಿಯನ್ನೆಲ್ಲ ಆ ಮಗನಿಗೇ ಕೊಟ್ಟಿದ್ದಾನೆ. 37 ನನ್ನ ಒಡೆಯನ್ನು ನನ್ನಿಂದ ಒಂದು ಪ್ರಮಾಣವನ್ನು ಬಲವಂತವಾಗಿ ಮಾಡಿಸಿದನು. ನನ್ನ ಒಡೆಯನು ನನಗೆ, ‘ನನ್ನ ಮಗನಿಗೆ ಕಾನಾನಿನ ಹುಡುಗಿಯೊಡನೆ ಮದುವೆಯಾಗದಂತೆ ನೀನು ನೋಡಿಕೊಳ್ಳಬೇಕು; ನಾವು ಈ ಜನರೊಡನೆ ವಾಸಿಸುತ್ತಿದ್ದೇವೆ. ಆದರೆ ಕಾನಾನಿನ ಹುಡುಗಿಯೊಂದಿಗೆ ನನ್ನ ಮಗನಿಗೆ ಮದುವೆಯಾಗುವುದು ನನಗೆ ಇಷ್ಟವಿಲ್ಲ. 38 ಆದ್ದರಿಂದ ನೀನು ನನ್ನ ಸ್ವದೇಶಕ್ಕೆ ಹೋಗಿ ನನ್ನ ಸ್ವಜನರಿಂದಲೇ ನನ್ನ ಮಗನಿಗೆ ಕನ್ಯೆಯನ್ನು ತೆಗೆದುಕೊಳ್ಳಬೇಕು’ ಎಂದು ಹೇಳಿದನು. 39 ನಾನು ನನ್ನ ಒಡೆಯನಿಗೆ, ‘ಆ ಕನ್ಯೆಯು ಈ ದೇಶಕ್ಕೆ ನನ್ನೊಂದಿಗೆ ಬರಲು ಒಪ್ಪದಿರಬಹುದು’ ಎಂದು ಹೇಳಿದೆ. 40 ಆದರೆ ನನ್ನ ಒಡೆಯನು ನನಗೆ, ‘ನಾನು ಯೆಹೋವನ ಸೇವೆ ಮಾಡುತ್ತಿದ್ದೇನೆ. ಆದ್ದರಿಂದ ಯೆಹೋವನು ತನ್ನ ದೂತನನ್ನು ನಿನ್ನೊಂದಿಗೆ ಕಳುಹಿಸಿ ನಿನಗೆ ಸಹಾಯ ಮಾಡುವನು. ಅಲ್ಲಿರುವ ನನ್ನ ತಂದೆಯ ಕುಟುಂಬದವರಲ್ಲಿ ನೀನು ನನ್ನ ಮಗನಿಗಾಗಿ ಒಬ್ಬ ಕನ್ಯೆಯನ್ನು ಕಂಡುಕೊಳ್ಳುವೆ. 41 ಆದರೆ ನೀನು ನನ್ನ ತಂದೆಯ ನಾಡಿಗೆ ಹೋದಾಗ ಅವರು ನನ್ನ ಮಗನಿಗೆ ಒಬ್ಬ ಕನ್ಯೆಯನ್ನು ಕೊಡಲು ಒಪ್ಪದಿದ್ದರೆ ನೀನು ಈ ಪ್ರಮಾಣದಿಂದ ಬಿಡುಗಡೆಯಾಗಿರುವೆ’ ಎಂದು ಹೇಳಿದನು.

42 “ಇಂದು ನಾನು ಈ ಬಾವಿಯ ಬಳಿಗೆ ಬಂದು, ‘ನನ್ನ ಒಡೆಯನಾದ ಅಬ್ರಹಾಮನ ದೇವರಾಗಿರುವ ಯೆಹೋವನೇ, ದಯವಿಟ್ಟು ನನ್ನ ಪ್ರವಾಸವನ್ನು ಯಶಸ್ವಿಗೊಳಿಸು. 43 ನಾನು ಬಾವಿಯ ಬಳಿಯಲ್ಲಿ ನಿಂತುಕೊಂಡು ನೀರನ್ನು ತೆಗೆದುಕೊಳ್ಳಲು ಬರುವ ಒಬ್ಬ ಯುವತಿಗಾಗಿ ಕಾದಿರುತ್ತೇನೆ. ಆಮೇಲೆ ನಾನು ಆಕೆಗೆ, “ದಯವಿಟ್ಟು ಕುಡಿಯಲು ನಿನ್ನ ಕೊಡದಿಂದ ನೀರನ್ನು ಕೊಡು” ಎಂದು ಕೇಳುತ್ತೇನೆ. 44 ಅವಳು ನನಗೆ, “ನೀನೂ ನೀರನ್ನು ಕುಡಿ, ನಿನ್ನ ಒಂಟೆಗಳಿಗೂ ನೀರನ್ನು ತಂದುಕೊಡುವೆ” ಎಂದು ಹೇಳಿದರೆ, ನನ್ನ ಒಡೆಯನ ಮಗನಿಗೆ ಯೆಹೋವನು ಆರಿಸಿಕೊಂಡಿರುವ ಕನ್ನಿಕೆ ಇವಳೇ ಎಂಬುದಾಗಿ ತಿಳಿದುಕೊಳ್ಳುವೆ’ ಎಂದು ಪ್ರಾರ್ಥಿಸಿದೆ.

45 “ನಾನು ಪ್ರಾರ್ಥನೆ ಮುಗಿಸುವಷ್ಟರಲ್ಲಿ ರೆಬೆಕ್ಕಳು ನೀರಿಗಾಗಿ ಬಾವಿಗೆ ಬಂದಳು. ಆಕೆ ಹೆಗಲ ಮೇಲೆ ಕೊಡವನ್ನು ಹೊತ್ತುಕೊಂಡಿದ್ದಳು. ಆಕೆ ಬಾವಿಗೆ ಹೋಗಿ ನೀರನ್ನು ತೆಗೆದುಕೊಂಡಳು. ನಾನು ಆಕೆಗೆ, ದಯವಿಟ್ಟು ಸ್ವಲ್ಪ ನೀರನ್ನು ಕೊಡು ಎಂದು ಕೇಳಿದೆ. 46 ಆ ಕೂಡಲೆ ಆಕೆಯು ಕೊಡವನ್ನು ಹೆಗಲಿನಿಂದ ಕೆಳಗಿಳಿಸಿ, ನನಗೆ ನೀರನ್ನು ಕೊಟ್ಟು, ‘ನೀರನ್ನು ಕುಡಿ; ನಿನ್ನ ಒಂಟೆಗಳಿಗೂ ನೀರನ್ನು ತಂದುಕೊಡುವೆ’ ಎಂದು ಹೇಳಿದಳು. ನಾನು ನೀರನ್ನು ಕುಡಿದ ಮೇಲೆ ಆಕೆ ನನ್ನ ಒಂಟೆಗಳಿಗೂ ನೀರನ್ನು ತಂದುಕೊಟ್ಟಳು. 47 ಆಮೇಲೆ ನಾನು ಆಕೆಗೆ, ‘ನಿನ್ನ ತಂದೆ ಯಾರು?’ ಎಂದು ಕೇಳಿದೆ, ಆಕೆ ‘ನನ್ನ ತಂದೆಯ ಹೆಸರು ಬೆತೂವೇಲ. ಅವನು ಮಿಲ್ಕಳ ಮತ್ತು ನಾಹೋರನ ಮಗನು’ ಎಂದು ಹೇಳಿದಳು. ಆಗ ನಾನು ಆಕೆಗೆ ಉಂಗುರವನ್ನೂ ಕೈಬಳೆಗಳನ್ನೂ ಕೊಟ್ಟೆನು. 48 ಆ ಸಮಯದಲ್ಲಿ ನಾನು ತಲೆಬಾಗಿ ಯೆಹೋವನಿಗೆ ವಂದನೆ ಸಲ್ಲಿಸಿದೆನು. ನನ್ನ ಒಡೆಯನಾದ ಅಬ್ರಹಾಮನ ದೇವರಾದ ಯೆಹೋವನನ್ನು ಸ್ತುತಿಸಿ ಕೊಂಡಾಡಿದೆನು; ಯಾಕೆಂದರೆ ಆತನು ನನ್ನನ್ನು ನನ್ನ ಒಡೆಯನ ತಮ್ಮನ ಮೊಮ್ಮಗಳ ಬಳಿಗೆ ನೇರವಾಗಿ ನಡೆಸಿದನು. 49 ಈಗ ನಿಮ್ಮ ಅಭಿಪ್ರಾಯವನ್ನು ತಿಳಿಸಿರಿ. ನೀವು ನನ್ನ ಒಡೆಯನಿಗೆ ಪ್ರೀತಿಯಿಂದಲೂ ನಂಬಿಕೆಯಿಂದಲೂ ನಿಮ್ಮ ಮಗಳನ್ನು ಕೊಡುವಿರಾ? ಅಥವಾ ಕೊಡುವುದಿಲ್ಲವೇ? ನಿಮ್ಮ ಉತ್ತರಕ್ಕನುಸಾರವಾಗಿ ನಾನು ಮುಂದಿನ ಕಾರ್ಯದ ಬಗ್ಗೆ ಆಲೋಚಿಸುವೆ” ಎಂದು ಹೇಳಿದನು.

50 ಅದಕ್ಕೆ ಲಾಬಾನನು ಮತ್ತು ಬೆತೂವೇಲನು, “ನಿನ್ನನ್ನು ಯೆಹೋವನೇ ಕಳುಹಿಸಿದ್ದಾನೆ. ನಡೆಯತಕ್ಕದ್ದನ್ನು ಬದಲಾಯಿಸಲು ನಮಗೆ ಸಾಧ್ಯವಿಲ್ಲ. 51 ರೆಬೆಕ್ಕಳು ನಿಮ್ಮವಳು. ನೀನು ಆಕೆಯನ್ನು ಕರೆದುಕೊಂಡು ಹೋಗಿ ಯೆಹೋವನ ಇಷ್ಟಕ್ಕನುಸಾರವಾಗಿ ನಿನ್ನ ಒಡೆಯನ ಮಗನಿಗೆ ಮದುವೆ ಮಾಡಿಸು” ಎಂದು ಹೇಳಿದರು.

52 ಅಬ್ರಹಾಮನ ಸೇವಕನು ಈ ಮಾತುಗಳನ್ನು ಕೇಳಿ ಯೆಹೋವನಿಗೆ ನೆಲದವರೆಗೂ ತಲೆಬಾಗಿ ನಮಸ್ಕರಿಸಿದನು. 53 ಆಮೇಲೆ ಆ ಸೇವಕನು ತಾನು ತಂದಿದ್ದ ಉಡುಗೊರೆಗಳನ್ನು ರೆಬೆಕ್ಕಳಿಗೆ ಕೊಟ್ಟನು. ಅವನು ರೆಬೆಕ್ಕಳಿಗೆ ಬೆಳ್ಳಿಬಂಗಾರಗಳ ಒಡವೆಗಳನ್ನೂ ಶ್ರೇಷ್ಠವಾದ ಬಟ್ಟೆಗಳನ್ನೂ ಕೊಟ್ಟನು. ಇದಲ್ಲದೆ ಅವನು ಬೆಲೆಬಾಳುವ ಉಡುಗೊರೆಗಳನ್ನು ಆಕೆಯ ಅಣ್ಣನಿಗೂ ತಾಯಿಗೂ ಕೊಟ್ಟನು. 54 ಆ ಸೇವಕನು ಮತ್ತು ಅವನ ಸಂಗಡಿಗರು ಅಲ್ಲಿ ಇಳಿದುಕೊಂಡು ಊಟಮಾಡಿದರು. ಅವರು ಮರುದಿನ ಮುಂಜಾನೆ ಎದ್ದು, “ಈಗ ನಾವು ನಮ್ಮ ಒಡೆಯನ ಬಳಿಗೆ ಹೋಗುತ್ತೇವೆ” ಎಂದು ಹೇಳಿದರು.

55 ರೆಬೆಕ್ಕಳ ತಾಯಿ ಮತ್ತು ಅಣ್ಣನು ಅವರಿಗೆ, “ರೆಬೆಕ್ಕಳು ಸ್ವಲ್ಪ ದಿನಗಳವರೆಗೆ ನಮ್ಮ ಜೊತೆ ಇರಲಿ. ಹತ್ತು ದಿನಗಳವರೆಗಾದರೂ ನಮ್ಮೊಡನೆ ಇರಲಿ. ಆಮೇಲೆ ಆಕೆಯನ್ನು ಕರೆದುಕೊಂಡು ಹೋಗು” ಎಂದು ಹೇಳಿದರು.

56 ಆದರೆ ಆ ಸೇವಕನು ಅವರಿಗೆ, “ನನ್ನನ್ನು ತಡೆಯಬೇಡಿ. ಯೆಹೋವನು ನನ್ನ ಪ್ರಯಾಣವನ್ನು ಯಶಸ್ವಿಗೊಳಿಸಿದ್ದಾನೆ. ಈಗ ನನ್ನನ್ನು ನನ್ನ ಒಡೆಯನ ಬಳಿಗೆ ಕಳುಹಿಸಿಕೊಡಿ” ಎಂದು ಹೇಳಿದನು.

57 ರೆಬೆಕ್ಕಳ ಅಣ್ಣ ಮತ್ತು ತಾಯಿ ಅವನಿಗೆ, “ನಾವು ರೆಬೆಕ್ಕಳನ್ನು ಕರೆದು ಆಕೆಯ ಇಷ್ಟವನ್ನು ಕೇಳುತ್ತೇವೆ” ಅಂದರು. 58 ಅವರು ರೆಬೆಕ್ಕಳನ್ನು ಕರೆದು, “ಈಗಲೇ ಈ ಮನುಷ್ಯನೊಡನೆ ಹೋಗಲು ನಿನಗೆ ಇಷ್ಟವಿದೆಯೋ?” ಎಂದು ಕೇಳಿದರು.

ರೆಬೆಕ್ಕಳು, “ಹೌದು, ನಾನು ಹೋಗುತ್ತೇನೆ” ಅಂದಳು.

59 ಆದ್ದರಿಂದ ಅವರು ರೆಬೆಕ್ಕಳನ್ನು ಅಬ್ರಹಾಮನ ಸೇವಕನೊಂದಿಗೂ ಅವನ ಸಂಗಡಿಗರೊಂದಿಗೂ ಕಳುಹಿಸಿಕೊಟ್ಟರು. ರೆಬೆಕ್ಕಳ ಸೇವಕಿ ಸಹ ಅವರೊಂದಿಗೆ ಹೋದಳು. 60 ಅವರು ಹೊರಡಲು ಸಿದ್ಧರಾಗಿದ್ದಾಗ ಅವರು ರೆಬೆಕ್ಕಳಿಗೆ,

“ನಮ್ಮ ತಂಗಿಯೇ,
    ನೀನು ಕೋಟ್ಯಾನುಕೋಟಿ ಜನರ ತಾಯಿಯಾಗು.
ನಿನ್ನ ಸಂತತಿಗಳವರು ತಮ್ಮ ಶತ್ರುಗಳನ್ನು ಸೋಲಿಸಿ
    ಅವರ ನಗರಗಳನ್ನು ವಶಮಾಡಿಕೊಳ್ಳಲಿ”

ಎಂದು ಹೇಳಿ ಹರಸಿದರು.

61 ಆಮೇಲೆ ರೆಬೆಕ್ಕಳು ಮತ್ತು ಆಕೆಯ ಸೇವಕಿಯರು ಒಂಟೆಯ ಮೇಲೆ ಹತ್ತಿ ಕುಳಿತುಕೊಂಡು ಆ ಸೇವಕನನ್ನೂ ಅವನ ಸಂಗಡಿಗರನ್ನೂ ಹಿಂಬಾಲಿಸಿದರು. ಹೀಗೆ ಆ ಸೇವಕನು ರೆಬೆಕ್ಕಳನ್ನು ಕರೆದುಕೊಂಡು ಮನೆಗೆ ಮರಳಿ ಪ್ರಯಾಣಮಾಡಿದನು.

62 ಆ ಸಮಯದಲ್ಲಿ, ಇಸಾಕನು ಬೀರ್‌ಲಹೈರೋಯಿಗೆ ಹೋಗಿ ಬಂದಿದ್ದನು; ಯಾಕೆಂದರೆ ಅವನು ನೆಗವ್‌ನಲ್ಲಿ ವಾಸವಾಗಿದ್ದನು. 63 ಸಾಯಂಕಾಲದಲ್ಲಿ ಇಸಾಕನು ಧ್ಯಾನಮಾಡಲು ಹೊಲಕ್ಕೆ ಹೋದನು. ಇಸಾಕನು ಕಣ್ಣೆತ್ತಿ ನೋಡಿದಾಗ ಬಹುದೂರದಲ್ಲಿ ಒಂಟೆಗಳು ಬರುತ್ತಿರುವುದನ್ನು ಕಂಡನು.

64 ರೆಬೆಕ್ಕಳು ಕಣ್ಣೆತ್ತಿ ನೋಡಿದಾಗ ಇಸಾಕನನ್ನು ಕಂಡಳು. ಆಮೇಲೆ ಆಕೆ ಒಂಟೆಯಿಂದ ಬೇಗನೆ ಇಳಿದು ಬಂದಳು. 65 ಆಕೆ, ಆ ಸೇವಕನಿಗೆ, “ನಮ್ಮನ್ನು ಭೇಟಿಯಾಗಲು ಹೊಲದಲ್ಲಿ ಬರುತ್ತಿರುವ ಆ ಯೌವನಸ್ಥನು ಯಾರು?” ಎಂದು ಕೇಳಿದಳು.

ಆ ಸೇವಕನು, “ಅವನು ನನ್ನ ಒಡೆಯನ ಮಗನು” ಎಂದು ಹೇಳಿದನು. ಆ ಕೂಡಲೇ ರೆಬೆಕ್ಕಳು ತನ್ನ ಮುಖಕ್ಕೆ ಮುಸುಕನ್ನು ಹಾಕಿಕೊಂಡಳು.

66 ಆ ಸೇವಕನು ನಡೆದ ಸಂಗತಿಯನ್ನೆಲ್ಲಾ ಇಸಾಕನಿಗೆ ತಿಳಿಸಿದನು. 67 ನಂತರ ಇಸಾಕನು ಆಕೆಯನ್ನು ಕರೆದುಕೊಂಡು ತನ್ನ ತಾಯಿಯ ಗುಡಾರಕ್ಕೆ ಬಂದನು. ಅಂದು ರೆಬೆಕ್ಕಳು ಇಸಾಕನ ಹೆಂಡತಿಯಾದಳು. ಇಸಾಕನು ಅವಳನ್ನು ಬಹಳವಾಗಿ ಪ್ರೀತಿಸಿದನು. ತಾಯಿಯ ಸಾವಿನಿಂದ ಉಂಟಾಗಿದ್ದ ದುಃಖವು ಕಡಿಮೆಯಾಗಿ ಇಸಾಕನಿಗೆ ಆದರಣೆಯಾಯಿತು.

ಮತ್ತಾಯ 7

ತೀರ್ಪು ಮಾಡುವುದರ ಕುರಿತು ಯೇಸುವಿನ ಉಪದೇಶ

(ಲೂಕ 6:37-38,41-42)

“ಬೇರೆಯವರಿಗೆ ತೀರ್ಪು ನೀಡಬೇಡಿ. ಆಗ ದೇವರೂ ನಿಮಗೆ ತೀರ್ಪು ಮಾಡುವುದಿಲ್ಲ. ನೀವು ಬೇರೆಯವರಿಗೆ ತೀರ್ಪು ಮಾಡಿದರೆ, ಅದೇ ಪ್ರಕಾರ ನಿಮಗೂ ತೀರ್ಪಾಗುವುದು. ನೀವು ಬೇರೆಯವರನ್ನು ಕ್ಷಮಿಸಿದರೆ ನಿಮಗೂ ಕ್ಷಮೆ ದೊರೆಯುವುದು.

“ನಿನ್ನ ಸ್ವಂತ ಕಣ್ಣಿನಲ್ಲಿ ಇರುವ ತೊಲೆಯನ್ನು ನೀನು ನೋಡದೆ ನಿನ್ನ ಸಹೋದರನ ಕಣ್ಣಿನಲ್ಲಿರುವ ಅಣುವನ್ನು ಏಕೆ ನೋಡುವೆ? ‘ನಿನ್ನ ಕಣ್ಣಿನಲ್ಲಿರುವ ಅಣುವನ್ನು ನಾನು ಹೊರಗೆ ತೆಗೆಯುವೆನು’ ಎಂದು ನಿನ್ನ ಸಹೋದರನಿಗೆ ಹೇಳುವುದೇಕೆ? ಮೊದಲು ನಿನ್ನ ಕಣ್ಣನ್ನು ನೋಡಿಕೊ! ನಿನ್ನ ಕಣ್ಣಿನಲ್ಲಿ ತೊಲೆ ಇನ್ನೂ ಇದೆ. ನೀನು ಕಪಟಿ! ನಿನ್ನ ಕಣ್ಣಿನಲ್ಲಿರುವ ತೊಲೆಯನ್ನು ಹೊರಗೆ ತೆಗೆದುಬಿಡು. ಆಗ ನಿನ್ನ ಸಹೋದರನ ಕಣ್ಣಿನಲ್ಲಿರುವ ಅಣುವನ್ನು ಹೊರತೆಗೆಯಲು ನಿನಗೆ ಸ್ಪಷ್ಟವಾಗಿ ಕಾಣುವುದು.

“ಪರಿಶುದ್ಧವಾದ ವಸ್ತುಗಳನ್ನು ನಾಯಿಗಳಿಗೆ ಹಾಕಬೇಡಿ. ಅವು ಹಿಂದಕ್ಕೆ ತಿರುಗಿ ನಿಮ್ಮನ್ನು ಕಚ್ಚುತ್ತವೆ. ಹಂದಿಗಳ ಮುಂದೆ ನಿಮ್ಮ ಮುತ್ತುಗಳನ್ನು ಎಸೆಯಬೇಡಿ. ಅವು ಮುತ್ತುಗಳನ್ನು ತುಳಿದುಹಾಕುತ್ತವೆ.

ಪ್ರಾರ್ಥನೆಯ ಪ್ರತಿಫಲ

(ಲೂಕ 11:9-13)

“ಬೇಡಿಕೊಳ್ಳಿರಿ, ಆಗ ದೇವರು ನಿಮಗೆ ಕೊಡುತ್ತಾನೆ. ಹುಡುಕಿರಿ, ಆಗ ನೀವು ಕಂಡುಕೊಳ್ಳುವಿರಿ. ಬಾಗಿಲು ತಟ್ಟಿರಿ, ಆಗ ಅದು ನಿಮಗೆ ತೆರೆಯುವುದು. ಹೌದು, ಕೇಳುತ್ತಲೇ ಇರುವವನು ಪಡೆದುಕೊಳ್ಳುತ್ತಾನೆ, ಹುಡುಕುತ್ತಲೇ ಇರುವವನು ಕಂಡುಕೊಳ್ಳುತ್ತಾನೆ, ತಟ್ಟುತ್ತಲೇ ಇರುವವನಿಗೆ ಬಾಗಿಲು ತೆರೆಯುತ್ತದೆ.

“ನಿಮ್ಮ ಮಗನು ರೊಟ್ಟಿಯನ್ನು ಕೇಳಿದರೆ ಕಲ್ಲನ್ನು ಕೊಡುವಿರೋ? 10 ಮೀನನ್ನು ಕೇಳಿದರೆ, ಹಾವನ್ನು ಕೊಡುವಿರೋ? 11 ನೀವು ದೇವರಂತೆ ಒಳ್ಳೆಯವರಲ್ಲ, ಕೆಟ್ಟವರು. ಆದರೂ ನಿಮ್ಮ ಮಕ್ಕಳಿಗೆ ಒಳ್ಳೆಯ ವಸ್ತುಗಳನ್ನು ಕೊಡಬೇಕೆಂಬುದು ನಿಮಗೆ ತಿಳಿದಿದೆ. ಹೀಗಿರಲಾಗಿ ಪರಲೋಕದ ನಿಮ್ಮ ತಂದೆಯು ಸಹ ತನ್ನನ್ನು ಕೇಳುವವರಿಗೆ ಒಳ್ಳೆಯ ವಸ್ತುಗಳನ್ನು ನಿಶ್ಚಯವಾಗಿಯೂ ಕೊಡುತ್ತಾನೆ.

ಬಹಳ ಮುಖ್ಯ ನಿಯಮ

12 “ನಿಮಗೆ ಬೇರೆಯವರು ಏನನ್ನು ಮಾಡಬೇಕೆಂದು ನೀವು ಆಶಿಸುತ್ತೀರೋ ಅಂಥವುಗಳನ್ನೇ ನೀವು ಅವರಿಗೆ ಮಾಡಿರಿ. ಇದು ಮೋಶೆಯ ಧರ್ಮಶಾಸ್ತ್ರದ ಮತ್ತು ಪ್ರವಾದಿಗಳ ಬೋಧನೆಯ ಸಾರಾಂಶ.

ನಿತ್ಯಜೀವದ ದಾರಿ ಕಷ್ಟಕರ

(ಲೂಕ 13:24)

13 “ಇಕ್ಕಟ್ಟಾದ ಬಾಗಿಲಿನ ಮೂಲಕ ಪರಲೋಕರಾಜ್ಯವನ್ನು ಪ್ರವೇಶಿಸಿರಿ. ನರಕಕ್ಕೆ ಹೋಗುವ ದಾರಿ ದೊಡ್ಡದು, ಬಾಗಿಲು ಬಹಳ ವಿಶಾಲ. ಅನೇಕ ಜನರು ಆ ಬಾಗಿಲಲ್ಲಿ ಪ್ರವೇಶಿಸುತ್ತಾರೆ. 14 ಆದರೆ ನಿತ್ಯಜೀವಕ್ಕಿರುವ ಬಾಗಿಲು ಬಹಳ ಚಿಕ್ಕದು, ದಾರಿ ಕಷ್ಟಕರ. ಕೆಲವರು ಮಾತ್ರ ಆ ಮಾರ್ಗವನ್ನು ಕಂಡುಕೊಳ್ಳುವರು.

ಜನರ ನಡತೆಯನ್ನು ಗಮನಿಸಿ

(ಲೂಕ 6:43-44; 13:25-27)

15 “ಸುಳ್ಳುಪ್ರವಾದಿಗಳ ಬಗ್ಗೆ ಎಚ್ಚರವಾಗಿರಿ. ಅವರು ಕುರಿಗಳ ಹಾಗೆ ಕಾಣಿಸಿಕೊಂಡು ನಿಮ್ಮ ಬಳಿಗೆ ಬರುತ್ತಾರೆ. ಆದರೆ ಅವರು ತೋಳಗಳಂತೆ ನಿಜವಾಗಿಯೂ ಅಪಾಯಕಾರಿಗಳಾಗಿದ್ದಾರೆ. 16 ಅವರ ಕ್ರಿಯೆಗಳಿಂದ ನೀವು ಅವರನ್ನು ತಿಳಿದುಕೊಳ್ಳುವಿರಿ. ಮುಳ್ಳಿನ ಪೊದೆಗಳಲ್ಲಿ ದ್ರಾಕ್ಷಿಯು ಹೇಗೆ ದೊರೆಯುವುದಿಲ್ಲವೋ ಅದೇ ರೀತಿ ಒಳ್ಳೆಯವುಗಳು ಕೆಟ್ಟ ಜನಗಳಿಂದ ಬರುವುದಿಲ್ಲ. ಅಂಜೂರವು ಮುಳ್ಳುಗಿಡಗಳಲ್ಲಿ ದೊರೆಯುವುದಿಲ್ಲ. 17 ಅದೇ ರೀತಿ ಪ್ರತಿಯೊಂದು ಒಳ್ಳೆಯ ಮರವು ಒಳ್ಳೆಯ ಫಲವನ್ನು ಕೊಡುತ್ತದೆ. ಕೆಟ್ಟ ಮರವು ಕೆಟ್ಟ ಫಲವನ್ನು ಕೊಡುತ್ತದೆ. 18 ಒಳ್ಳೆಯ ಮರವು ಕೆಟ್ಟ ಫಲವನ್ನು ಕೊಡುವುದಿಲ್ಲ ಮತ್ತು ಕೆಟ್ಟ ಮರವು ಒಳ್ಳೆಯ ಫಲವನ್ನು ಕೊಡುವುದಿಲ್ಲ. 19 ಒಳ್ಳೆಯ ಫಲವನ್ನು ಕೊಡದ ಪ್ರತಿಯೊಂದು ಮರವನ್ನು ಕಡಿದು ಬೆಂಕಿಯಲ್ಲಿ ಎಸೆಯಲಾಗುವುದು. 20 ಈ ಸುಳ್ಳು ಬೋಧಕರನ್ನು ಅವರು ಕೊಡುವ ಫಲದಿಂದಲೇ (ಕಾರ್ಯಗಳಿಂದಲೇ) ನೀವು ತಿಳಿದುಕೊಳ್ಳುವಿರಿ.

21 “‘ನಾನು ಪ್ರಭುವಿನವನು’ ಎಂದು ಹೇಳಿದ ಮಾತ್ರಕ್ಕೆ ಮನುಷ್ಯನು ಪರಲೋಕರಾಜ್ಯಕ್ಕೆ ಪ್ರವೇಶಿಸಲು ಸಾಧ್ಯವಿಲ್ಲ. ಪರಲೋಕದಲ್ಲಿರುವ ನನ್ನ ತಂದೆಯ ಇಷ್ಟದಂತೆ ಮಾಡುವವರೇ ಪರಲೋಕರಾಜ್ಯಕ್ಕೆ ಪ್ರವೇಶಿಸುವರು. 22 ಕೊನೆಯ ದಿನಗಳಲ್ಲಿ ಅನೇಕರು ನನಗೆ, ‘ನೀನೇ ನಮ್ಮ ಪ್ರಭು! ನಿನ್ನ ವಿಷಯವಾಗಿ ನಾವು ಬೋಧಿಸಿದೆವು. ನಿನ್ನ ಹೆಸರಿನ ಮೂಲಕ ದೆವ್ವಗಳನ್ನು ಬಿಡಿಸಿದೆವು ಮತ್ತು ಅನೇಕ ಅದ್ಭುತಕಾರ್ಯಗಳನ್ನು ಮಾಡಿದೆವು’ ಎಂದು ಹೇಳುವರು. 23 ಆದರೆ ನಾನು ಅವರಿಗೆ, ‘ಅಧರ್ಮಿಗಳೇ, ನನ್ನಿಂದ ತೊಲಗಿರಿ. ನೀವು ಯಾರೋ ನನಗೆ ತಿಳಿಯದು’ ಎಂದು ಸ್ಪಷ್ಟವಾಗಿ ಹೇಳಿಬಿಡುವೆನು.

ಬುದ್ಧಿವಂತ ಮತ್ತು ಬುದ್ಧಿಹೀನ

(ಲೂಕ 6:47-49)

24 “ನನ್ನ ಈ ಮಾತುಗಳನ್ನು ಕೇಳಿ ಅವುಗಳಿಗೆ ವಿಧೇಯನಾಗಿರುವ ಪ್ರತಿಯೊಬ್ಬನೂ ತನ್ನ ಮನೆಯನ್ನು ಬಂಡೆಯ ಮೇಲೆ ಕಟ್ಟಿದ ಬುದ್ಧಿವಂತನಿಗೆ ಹೋಲಿಕೆಯಾಗಿದ್ದಾನೆ. 25 ಬಿರುಸಾದ ಮಳೆಯು ಸುರಿದು ನೀರು ಮೇಲಕ್ಕೆ ಏರುತ್ತದೆ. ಗಾಳಿ ಬೀಸಿ ಆ ಮನೆಗೆ ಬಡಿಯುತ್ತದೆ. ಆದರೆ ಆ ಮನೆಯನ್ನು ಬಂಡೆಯ ಮೇಲೆ ಕಟ್ಟಿದ್ದರಿಂದ ಅದು ಬೀಳಲಿಲ್ಲ.

26 “ಆದರೆ ನನ್ನ ಮಾತುಗಳನ್ನು ಕೇಳಿಯೂ ಅವುಗಳಿಗೆ ವಿಧೇಯನಾಗದವನು ಬುದ್ಧಿಹೀನನಾಗಿದ್ದಾನೆ. ಆ ಬುದ್ಧಿಹೀನನು ಮರಳಿನ ಮೇಲೆ ತನ್ನ ಮನೆಯನ್ನು ಕಟ್ಟಿದನು. 27 ಬಿರುಸಾದ ಮಳೆ ಸುರಿದು ನೀರು ಮೇಲಕ್ಕೆ ಏರಿತು, ಗಾಳಿ ಬೀಸಿ ಆ ಮನೆಗೆ ಬಡಿಯಿತು. ಆಗ ಆ ಮನೆಯು ಕುಸಿದು ಬಿತ್ತು.”

28 ಯೇಸು ಉಪದೇಶಿಸಿದ ಈ ಸಂಗತಿಗಳನ್ನು ಕೇಳಿ ಜನರು ಅತ್ಯಾಶ್ಚರ್ಯಪಟ್ಟರು. 29 ಏಕೆಂದರೆ, ಆತನು ಧರ್ಮೋಪದೇಶಕರಂತೆ ಉಪದೇಶಿಸದೆ ಅಧಿಕಾರವಿದ್ದವನಂತೆ ಉಪದೇಶಿಸಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International