Old/New Testament
ಅಬ್ರಹಾಮನು ಗೆರಾರಿಗೆ ಹೋದದ್ದು
20 ಅಬ್ರಹಾಮನು ಅಲ್ಲಿಂದ ಹೊರಟು ನೆಗೆವ್‌ಗೆ ಪ್ರಯಾಣಮಾಡಿ ಕಾದೇಶಿಗೂ ಶೂರಿಗೂ ನಡುವೆ ಇದ್ದ ಗೆರಾರ್ ನಗರದಲ್ಲಿ ನೆಲೆಸಿದನು. 2 ಅಬ್ರಹಾಮನು ಗೆರಾರಿನಲ್ಲಿದ್ದಾಗ ಸಾರಳು ತನಗೆ ತಂಗಿಯಾಗಬೇಕೆಂದು ಹೇಳಿಕೊಂಡನು. ಗೆರಾರಿನ ರಾಜನಾಗಿದ್ದ ಅಬೀಮೆಲೆಕನು ಇದನ್ನು ಕೇಳಿ ಸಾರಳನ್ನು ಪಡೆದುಕೊಳ್ಳಲು ಬಯಸಿದನು. ಬಳಿಕ ಅವನು ಕೆಲವು ಸೇವಕರನ್ನು ಕಳುಹಿಸಿ ಆಕೆಯನ್ನು ಕರೆಯಿಸಿಕೊಂಡನು. 3 ಆದರೆ ಅಂದು ರಾತ್ರಿ ದೇವರು ಅಬೀಮೆಲೆಕನೊಡನೆ ಕನಸಿನಲ್ಲಿ ಮಾತಾಡಿ, “ನೀನು ಸಾಯುವೆ. ನೀನು ತೆಗೆದುಕೊಂಡಿರುವ ಆ ಸ್ತ್ರೀಗೆ ಮದುವೆಯಾಗಿದೆ” ಎಂದು ಹೇಳಿದನು.
4 ಅಬೀಮೆಲೆಕನು ಇನ್ನೂ ಸಾರಳೊಡನೆ ಮಲಗಿಕೊಂಡಿರಲಿಲ್ಲ. ಆದ್ದರಿಂದ ಅಬೀಮೆಲೆಕನು, “ಸ್ವಾಮಿ, ನಾನು ತಪ್ಪಿತಸ್ಥನಲ್ಲ. ಒಬ್ಬ ನಿರಪರಾಧಿಯನ್ನು ನೀನು ಕೊಲ್ಲುವೆಯಾ? 5 ‘ಈಕೆ ನನಗೆ ತಂಗಿಯಾಗಬೇಕು’ ಎಂದು ಅಬ್ರಹಾಮನೇ ಹೇಳಿದನು. ಅಲ್ಲದೆ ಈಕೆಯೂ ‘ಅವನು ನನ್ನ ಸಹೋದರ’ ಎಂದು ಹೇಳಿದಳು. ನಾನು ನಿರಪರಾಧಿ. ನಾನು ಮಾಡಲಿದ್ದ ತಪ್ಪು ನನಗೆ ತಿಳಿದಿರಲಿಲ್ಲ” ಎಂದು ಹೇಳಿದನು.
6 ಆಗ ದೇವರು ಅಬೀಮೆಲೆಕನಿಗೆ ಕನಸಿನಲ್ಲಿ, “ಹೌದು, ನೀನು ನಿರಪರಾಧಿಯೆಂದು ನನಗೆ ಗೊತ್ತಿದೆ. ನೀನು ಮಾಡಲಿದ್ದ ತಪ್ಪು ನಿನಗೆ ತಿಳಿದಿರಲಿಲ್ಲವೆಂದೂ ನನಗೆ ಗೊತ್ತಿದೆ. ಆದ್ದರಿಂದಲೇ ನಾನು ನಿನ್ನನ್ನು ಕಾಪಾಡಿದೆ. ನನಗೆ ವಿರೋಧವಾಗಿ ಪಾಪಮಾಡಲು ನಾನು ನಿನಗೆ ಅವಕಾಶ ಕೊಡಲಿಲ್ಲ. 7 ಆದ್ದರಿಂದ ಅಬ್ರಹಾಮನಿಗೆ ಅವನ ಹೆಂಡತಿಯನ್ನು ಒಪ್ಪಿಸಿಬಿಡು. ಅಬ್ರಹಾಮನು ಪ್ರವಾದಿಯಾಗಿರುವುದರಿಂದ ನಿನಗೋಸ್ಕರ ಪ್ರಾರ್ಥಿಸುವನು, ಆಗ ನೀನು ಬದುಕಿಕೊಳ್ಳುವೆ. ನೀನು ಸಾರಳನ್ನು ಅಬ್ರಹಾಮನಿಗೆ ಹಿಂತಿರುಗಿಸದಿದ್ದರೆ, ನೀನೂ ನಿನ್ನ ಇಡೀ ಕುಟುಂಬದವರೂ ಸಾಯುವಿರೆಂದು ನಾನು ಪ್ರಮಾಣ ಮಾಡುತ್ತೇನೆ” ಎಂದು ಹೇಳಿದನು.
8 ಆದ್ದರಿಂದ ಮರುದಿನ ಮುಂಜಾನೆ, ಅಬೀಮೆಲೆಕನು ತನ್ನ ಸೇವಕರನ್ನೆಲ್ಲ ಕರೆಸಿ ತನ್ನ ಕನಸನ್ನು ತಿಳಿಸಿದನು. ಅವರಿಗೆಲ್ಲಾ ತುಂಬ ಭಯವಾಯಿತು. 9 ಆಮೇಲೆ ಅಬೀಮೆಲೆಕನು ಅಬ್ರಹಾಮನನ್ನು ಕರೆಸಿ, “ನೀನು ನನಗೆ ಹೀಗೇಕೆ ಮಾಡಿದೆ? ನಿನಗೆ ವಿರೋಧವಾಗಿ ನಾನೇನು ಮಾಡಿದೆ? ಆಕೆ ತಂಗಿಯಾಗಬೇಕೆಂದು ನೀನೇಕೆ ಸುಳ್ಳು ಹೇಳಿದೆ? ನೀನು ನನ್ನ ರಾಜ್ಯಕ್ಕೆ ಕೇಡನ್ನು ಬರಮಾಡಿರುವೆ. ನೀನು ಹೀಗೆ ಮಾಡಬಾರದಿತ್ತು. 10 ನೀನು ಭಯಪಟ್ಟಿದ್ದೇಕೆ? ನನಗೆ ಹೀಗೆ ಮಾಡಿದ್ದೇಕೆ?” ಎಂದು ಕೇಳಿದನು.
11 ಅಬ್ರಹಾಮನು ಅವನಿಗೆ, “ನನಗೆ ಹೆದರಿಕೆಯಾಗಿತ್ತು. ಈ ಸ್ಥಳದವರಿಗೆ ದೇವರಲ್ಲಿ ಭಯಭಕ್ತಿಯಿಲ್ಲವೆಂದು ನಾನು ಭಾವಿಸಿಕೊಂಡೆ. ಯಾರಾದರೂ ನನ್ನನ್ನು ಕೊಂದು ಸಾರಳನ್ನು ತೆಗೆದುಕೊಳ್ಳಬಹುದೆಂದು ಯೋಚಿಸಿದೆ. 12 ಆಕೆ ನನ್ನ ಹೆಂಡತಿಯೇನೋ ನಿಜ, ಆದರೆ ಆಕೆ ನನಗೆ ತಂಗಿಯೂ ಆಗಬೇಕು. ಆಕೆ ನನ್ನ ತಂದೆಯ ಮಗಳು; ನನ್ನ ತಾಯಿಯ ಮಗಳಲ್ಲ. 13 ದೇವರು ನನ್ನನ್ನು ತಂದೆಯ ಮನೆಯಿಂದ ಹೊರಡಿಸಿ ಪರಸ್ಥಳಗಳಲ್ಲಿ ಸಂಚರಿಸುವಂತೆ ಮಾಡಿದ್ದರಿಂದ ನಾನು ಸಾರಳಿಗೆ, ‘ನಿನ್ನಿಂದ ನನಗೆ ಒಂದು ಉಪಕಾರವಾಗಬೇಕು. ಅದೇನೆಂದರೆ ನೀನು ನನ್ನನ್ನು ಅಣ್ಣನೆಂಬುದಾಗಿ ಹೇಳಬೇಕು ಎಂದು ಆಕೆಗೆ ತಿಳಿಸಿದೆನು’” ಎಂದನು.
14 ಆಗ ನಡೆದ ಸಂಗತಿಯನ್ನೆಲ್ಲ ಅರ್ಥಮಾಡಿಕೊಂಡು ಸಾರಳನ್ನು ಅಬ್ರಹಾಮನಿಗೆ ಒಪ್ಪಿಸಿದನು; ಅಲ್ಲದೆ ಕುರಿಗಳನ್ನೂ ದನಗಳನ್ನೂ ಸೇವಕಸೇವಕಿಯರನ್ನೂ ಕೊಟ್ಟನು. 15 ಅಬೀಮೆಲೆಕನು ಅಬ್ರಹಾಮನಿಗೆ, “ಇಗೋ, ಇದು ನನ್ನ ದೇಶ. ನಿನಗೆ ಇಷ್ಟವಾದ ಸ್ಥಳದಲ್ಲಿ ವಾಸಮಾಡು” ಎಂದು ಹೇಳಿದನು.
16 ಅಬೀಮೆಲೆಕನು ಸಾರಳಿಗೆ, “ನಾನು ನಿನ್ನ ಅಣ್ಣನಾದ ಅಬ್ರಹಾಮನಿಗೆ ಒಂದು ಸಾವಿರ ಬೆಳ್ಳಿಯ ನಾಣ್ಯಗಳನ್ನು ಕೊಡುವೆ. ನಡೆದ ಈ ಘಟನೆಗಳಿಗೆ ಇದು ಪ್ರಾಯಶ್ಚಿತ್ತವಾಗಿದೆ. ನೀನು ನಿಷ್ಕಳಂಕಳೆಂದು ಇದು ಪ್ರತಿಯೊಬ್ಬರಿಗೂ ಸಾಕ್ಷಿಯಾಗಿರಲಿ” ಎಂದು ಹೇಳಿದನು.
17-18 ದೇವರು ಅಬೀಮೆಲೆಕನ ಕುಟುಂಬದಲ್ಲಿರುವ ಎಲ್ಲ ಸ್ತ್ರೀಯರನ್ನು ಬಂಜೆಯರನ್ನಾಗಿ ಮಾಡಿದ್ದನು. ಅಬ್ರಹಾಮನ ಹೆಂಡತಿಯಾದ ಸಾರಳನ್ನು ಅಬೀಮೆಲೆಕನು ಕರೆಸಿಕೊಂಡಿದ್ದೇ ಅದಕ್ಕೆ ಕಾರಣ. ಅಬ್ರಹಾಮನು ದೇವರಲ್ಲಿ ಪ್ರಾರ್ಥಿಸಿದಾಗ ದೇವರು ಅಬೀಮೆಲೆಕನನ್ನೂ ಅವನ ಹೆಂಡತಿಯನ್ನೂ ಸೇವಕಿಯರನ್ನೂ ಗುಣಪಡಿಸಿದ್ದರಿಂದ ಅವರಿಗೆ ಮಕ್ಕಳಾದರು.
ಸಾರಳಿಗೆ ಮಗುವಾಯಿತು
21 ಯೆಹೋವನು ಸಾರಳಿಗೆ ಮಾಡಿದ ವಾಗ್ದಾನವನ್ನು ಮರೆಯದೆ ಈಡೇರಿಸಿದನು. 2 ಸಾರಳು ವೃದ್ಧನಾಗಿದ್ದ ಅಬ್ರಹಾಮನಿಂದ ಗರ್ಭಿಣಿಯಾಗಿ, ಒಂದು ಗಂಡುಮಗುವನ್ನು ಹೆತ್ತಳು. ದೇವರು ವಾಗ್ದಾನ ಮಾಡಿದಂತೆಯೇ ಈ ಸಂಗತಿಗಳೆಲ್ಲ ತಕ್ಕಕಾಲದಲ್ಲಿ ನಡೆದವು. 3 ಅಬ್ರಹಾಮನು ಸಾರಳಲ್ಲಿ ತನ್ನಿಂದ ಹುಟ್ಟಿದ ಮಗನಿಗೆ ಇಸಾಕ ಎಂದು ಹೆಸರಿಟ್ಟನು. 4 ಇಸಾಕನಿಗೆ ಎಂಟು ದಿನಗಳಾಗಿದ್ದಾಗ, ದೇವರ ಆಜ್ಞೆಗನುಸಾರವಾಗಿ ಅಬ್ರಹಾಮನು ಅವನಿಗೆ ಸುನ್ನತಿ ಮಾಡಿದನು.
5 ಅಬ್ರಹಾಮನಿಗೆ ನೂರು ವರ್ಷಗಳಾಗಿದ್ದಾಗ, ಅವನ ಮಗನಾದ ಇಸಾಕನು ಹುಟ್ಟಿದನು. 6 ಸಾರಳು, “ದೇವರು, ನನ್ನನ್ನು ನಗುವಂತೆ ಮಾಡಿದ್ದಾನೆ, ಇದನ್ನು ಕೇಳಿದ ಪ್ರತಿಯೊಬ್ಬರು ನನ್ನೊಡನೆ ನಗುವರು. 7 ಅಬ್ರಹಾಮನಿಗೆ ಸಾರಳಲ್ಲಿ ಮಗನು ಹುಟ್ಟುತ್ತಾನೆಂದು ಯಾರೂ ಯೋಚಿಸಿರಲಿಲ್ಲ. ಅಬ್ರಹಾಮನು ವೃದ್ಧನಾಗಿದ್ದರೂ ಈಗ ನಾನು ಅವನಿಗೆ ಒಬ್ಬ ಮಗನನ್ನು ಕೊಟ್ಟಿದ್ದೇನೆ” ಅಂದಳು.
ಕುಟುಂಬದಲ್ಲಾದ ಒಡಕು
8 ಇಸಾಕನು ಬೆಳೆದು ಊಟಮಾಡುವಷ್ಟು ದೊಡ್ಡವನಾದನು. ಆಗ ಅಬ್ರಹಾಮನು ಒಂದು ದೊಡ್ಡ ಔತಣವನ್ನು ಮಾಡಿಸಿದನು. 9 ಮೊದಲು, ಈಜಿಪ್ಟಿನ ಸೇವಕಿಯಾದ ಹಾಗರಳಲ್ಲಿ ಒಬ್ಬ ಮಗನು ಹುಟ್ಟಿದ್ದನು. ಅವನಿಗೂ ಅಬ್ರಹಾಮನು ತಂದೆಯಾಗಿದ್ದನು. ಆದರೆ ಆ ಮೊದಲನೆ ಮಗನು ಇಸಾಕನಿಗೆ ತೊಂದರೆ ಕೊಡುವುದನ್ನು ಸಾರಳು ಗಮನಿಸಿದಳು. 10 ಸಾರಳು ಅಬ್ರಹಾಮನಿಗೆ, “ಆ ಸೇವಕಿಯನ್ನೂ ಅವಳ ಮಗನನ್ನೂ ಕಳುಹಿಸಿಬಿಡು. ನಾವು ಸತ್ತಾಗ ನಮ್ಮ ಆಸ್ತಿಯನ್ನೆಲ್ಲ ನಮ್ಮ ಮಗನಾದ ಇಸಾಕನೇ ಪಡೆದುಕೊಳ್ಳಲಿ; ನಮ್ಮ ಆಸ್ತಿಯಲ್ಲಿ ಇಸಾಕನೊಡನೆ ಅವನು ಪಾಲುಹೊಂದುವುದು ನನಗೆ ಇಷ್ಟವಿಲ್ಲ” ಎಂದು ಹೇಳಿದಳು.
11 ಅಬ್ರಹಾಮನಿಗೆ ತುಂಬ ದುಃಖವಾಯಿತು. ಅವನು ತನ್ನ ಮಗನಾದ ಇಷ್ಮಾಯೇಲನ ಬಗ್ಗೆ ಚಿಂತಿಸತೊಡಗಿದನು. 12 ಆದರೆ ದೇವರು ಅಬ್ರಹಾಮನಿಗೆ, “ಆ ಹುಡುಗನ ಕುರಿತಾಗಲಿ ಸೇವಕಿಯ ಕುರಿತಾಗಲಿ ಚಿಂತೆಮಾಡಬೇಡ. ಸಾರಳ ಇಷ್ಟದಂತೆ ಮಾಡು. ಇಸಾಕನೊಬ್ಬನೇ ಬಾಧ್ಯಸ್ತನಾಗಬೇಕು. 13 ಆದರೆ ನಿನ್ನ ಸೇವಕಿಯ ಮಗನನ್ನು ಸಹ ನಾನು ಆಶೀರ್ವದಿಸುವೆನು. ಅವನು ನಿನ್ನ ಮಗನು. ಆದ್ದರಿಂದ ಅವನಿಂದಲೂ ನಾನು ದೊಡ್ಡ ಜನಾಂಗವನ್ನು ಉಂಟುಮಾಡುವೆನು” ಎಂದು ಹೇಳಿದನು.
14 ಮರುದಿನ ಮುಂಜಾನೆ, ಅಬ್ರಹಾಮನು ಸ್ವಲ್ಪ ಆಹಾರವನ್ನು ಮತ್ತು ಸ್ವಲ್ಪ ನೀರನ್ನು ತೆಗೆದು ಹಾಗರಳಿಗೆ ಕೊಟ್ಟನು. ಹಾಗರಳು ಅವುಗಳನ್ನು ತೆಗೆದುಕೊಂಡು ತನ್ನ ಮಗನೊಡನೆ ಅಲ್ಲಿಂದ ಹೊರಟುಹೋದಳು. ಹಾಗರಳು ಆ ಸ್ಥಳವನ್ನು ಬಿಟ್ಟು ಬೇರ್ಷೆಬದ ಮರಳುಗಾಡಿನಲ್ಲಿ ಅಲೆಯತೊಡಗಿದಳು.
15 ಸ್ವಲ್ಪ ಸಮಯದ ನಂತರ, ಇದ್ದ ನೀರೆಲ್ಲಾ ಮುಗಿದುಹೋಯಿತು. ಕುಡಿಯುವುದಕ್ಕೆ ಏನೂ ಇರಲಿಲ್ಲ. ಆದ್ದರಿಂದ ಹಾಗರಳು ತನ್ನ ಮಗನನ್ನು ಪೊದೆಯ ಕೆಳಗೆ ಮಲಗಿಸಿದಳು. 16 ಹಾಗರಳು ಸ್ವಲ್ಪ ದೂರ ನಡೆದುಹೋಗಿ ಕುಳಿತುಕೊಂಡು ತನ್ನ ಮಗನು ಸಾಯುವುದನ್ನು ನೋಡಲಾರದೆ ಅಳತೊಡಗಿದಳು.
17 ಮಗುವಿನ ಕೂಗು ದೇವರಿಗೆ ಕೇಳಿಸಿತು. ಆಗ ದೇವದೂತನು ಆಕಾಶದಿಂದ ಆಕೆಯನ್ನು ಕರೆದು, “ಹಾಗರಳೇ, ನಿನಗೇನಾಯಿತು? ಭಯಪಡಬೇಡ; ಮಗುವಿನ ಕೂಗನ್ನು ಯೆಹೋವನು ಕೇಳಿದ್ದಾನೆ. 18 ಹೋಗಿ ಮಗುವನ್ನು ಎತ್ತಿಕೊ. ಅವನಿಂದ ದೊಡ್ಡ ಜನಾಂಗವಾಗುವಂತೆ ಮಾಡುವೆನು” ಎಂದು ಹೇಳಿದನು.
19 ಆಮೇಲೆ ದೇವರು ಹಾಗರಳಿಗೆ ಒಂದು ಬಾವಿ ಕಾಣಿಸುವಂತೆ ಮಾಡಿದನು. ಹಾಗರಳು ಬಾವಿಗೆ ಹೋಗಿ ತನ್ನ ತಿತ್ತಿಯಲ್ಲಿ ನೀರನ್ನು ತುಂಬಿಸಿಕೊಂಡು ಬಂದು ಮಗುವಿಗೆ ಕುಡಿಸಿದಳು.
20 ದೇವರು ಆ ಮಗುವಿನ ಸಂಗಡವಿದ್ದ ಕಾರಣ ಆ ಮಗುವು ಬೆಳೆದು ದೊಡ್ಡವನಾದನು; ಕಾಡಿನಲ್ಲಿ ವಾಸವಾಗಿದ್ದು ಚತುರ ಬಿಲ್ಲುಗಾರನಾದನು. 21 ಅವನ ತಾಯಿಯು ಅವನಿಗೆ ಈಜಿಪ್ಟಿನ ಹುಡುಗಿಯನ್ನು ತಂದು ಮದುವೆ ಮಾಡಿಸಿದಳು. ಅವರು ಪಾರಾನ್ ಕಾಡಿನಲ್ಲಿ ತಮ್ಮ ವಾಸವನ್ನು ಮುಂದುವರಿಸಿದರು.
ಅಬ್ರಹಾಮನು ಅಬೀಮೆಲೆಕನೊಡನೆ ಮಾಡಿಕೊಂಡ ಒಪ್ಪಂದ
22 ಆಮೇಲೆ ಅಬೀಮೆಲೆಕನು ಮತ್ತು ಫೀಕೋಲನು ಅಬ್ರಹಾಮನೊಡನೆ ಮಾತಾಡಿದರು. ಫೀಕೋಲನು ಅಬೀಮೆಲೆಕನ ಸೈನ್ಯಾಧಿಕಾರಿಯಾಗಿದ್ದನು. ಅಬೀಮೆಲೆಕನು ಅಬ್ರಹಾಮನಿಗೆ, “ನೀನು ಮಾಡುವ ಪ್ರತಿಯೊಂದರಲ್ಲೂ ದೇವರು ನಿನ್ನೊಡನೆ ಇದ್ದಾನೆ. 23 ಆದ್ದರಿಂದ ನೀನು ನನ್ನೊಡನೆ ಮತ್ತು ನನ್ನ ಮಕ್ಕಳೊಡನೆ ನ್ಯಾಯವಾಗಿ ನಡೆದುಕೊಳ್ಳುವುದಾಗಿ ದೇವರ ಮೇಲೆ ಪ್ರಮಾಣಮಾಡು. ನನಗೂ ಮತ್ತು ನೀನು ವಾಸಿಸುತ್ತಿರುವ ಈ ನಾಡಿಗೂ ದಯೆತೋರುವುದಾಗಿ ನೀನು ಪ್ರಮಾಣಮಾಡು. ನಾನು ನಿನಗೆ ದಯೆತೋರಿದಂತೆ ನೀನೂ ನನಗೆ ದಯೆತೋರುವುದಾಗಿ ಪ್ರಮಾಣಮಾಡು” ಎಂದು ಹೇಳಿದನು.
24 ಅದಕ್ಕೆ ಅಬ್ರಹಾಮನು, “ನೀನು ನನ್ನನ್ನು ನೋಡಿಕೊಂಡಂತೆ ನಾನೂ ನಿನ್ನನ್ನು ನೋಡಿಕೊಳ್ಳುವೆನು” ಎಂದು ಪ್ರಮಾಣಮಾಡಿದನು. 25 ಆಮೇಲೆ ಅಬ್ರಹಾಮನು ಅಬೀಮೆಲೆಕನಿಗೆ, “ನಿನ್ನ ಸೇವಕರು ನೀರಿದ್ದ ಒಂದು ಬಾವಿಯನ್ನು ವಶಪಡಿಸಿಕೊಂಡಿದ್ದಾರೆ” ಎಂದು ದೂರು ಹೇಳಿದನು.
26 ಅದಕ್ಕೆ ಅಬೀಮೆಲೆಕನು, “ಅದನ್ನು ಯಾರು ಮಾಡಿದರೋ ನನಗೆ ಗೊತ್ತಿಲ್ಲ. ಇಂದಿನವರೆಗೂ ನೀನು ಇದನ್ನು ನನಗೆ ಹೇಳಲೇ ಇಲ್ಲ” ಎಂದು ಹೇಳಿದನು.
27 ಆಗ ಅಬ್ರಹಾಮನು ಮತ್ತು ಅಬೀಮೆಲೆಕನು ಒಂದು ಒಪ್ಪಂದವನ್ನು ಮಾಡಿಕೊಂಡರು. ಅಬ್ರಹಾಮನು ಅವನಿಗೆ ಕೆಲವು ದನಕುರಿಗಳನ್ನು ಒಪ್ಪಂದದ ಗುರುತಾಗಿ ಕೊಟ್ಟನು; 28 ಅಲ್ಲದೆ ಅಬ್ರಹಾಮನು ಮಂದೆಯ ಏಳು ಹೆಣ್ಣು ಕುರಿಮರಿಗಳನ್ನು ಪ್ರತ್ಯೇಕಿಸಿದನು.
29 ಅಬೀಮೆಲೆಕನು ಅಬ್ರಹಾಮನಿಗೆ, “ಈ ಏಳು ಕುರಿಗಳನ್ನು ಇಲ್ಲಿ ಇರಿಸಿರುವುದೇಕೆ?” ಎಂದು ಕೇಳಿದನು.
30 ಅಬ್ರಹಾಮನು “ಆ ಬಾವಿಯನ್ನು ತೋಡಿಸಿದವನು ನಾನೇ ಎಂಬುದಕ್ಕೆ ಸಾಕ್ಷಿಯಾಗಿ ನೀನು ಈ ಕುರಿಗಳನ್ನು ನನ್ನಿಂದ ಸ್ವೀಕರಿಸಿಕೊಳ್ಳಬೇಕು” ಎಂದು ಉತ್ತರಿಸಿದನು.
31 ಅವರು ಆ ಸ್ಥಳದಲ್ಲಿ ಒಪ್ಪಂದ ಮಾಡಿಕೊಂಡಿದ್ದರಿಂದ ಆ ಬಾವಿಗೆ ಬೇರ್ಷೆಬ ಎಂದು ಹೆಸರಾಯಿತು.
32 ಬೇರ್ಷೆಬದಲ್ಲಿ ಒಪ್ಪಂದವನ್ನು ಮಾಡಿಕೊಂಡ ಮೇಲೆ ಅಬೀಮೆಲೆಕನು ಮತ್ತು ಅವನ ಸೈನ್ಯಾಧಿಕಾರಿಯು ಫಿಲಿಷ್ಟಿಯರ ದೇಶಕ್ಕೆ ಹಿಂತಿರುಗಿದರು.
33 ಅಬ್ರಹಾಮನು ಬೇರ್ಷೆಬದಲ್ಲಿ ವಿಶೇಷವಾದ ಒಂದು ಮರವನ್ನು ನೆಟ್ಟನು. ಆ ಸ್ಥಳದಲ್ಲಿ ಅವನು ಸದಾಕಾಲ ಜೀವಿಸುವ ದೇವರಾದ ಯೆಹೋವನಿಗೆ ಪ್ರಾರ್ಥಿಸಿದನು. 34 ಅವನು ಬಹುಕಾಲದವರೆಗೆ ಫಿಲಿಷ್ಟಿಯರ ದೇಶದಲ್ಲಿ ವಾಸವಾಗಿದ್ದನು.
ಅಬ್ರಹಾಮನೇ, ನಿನ್ನ ಮಗನನ್ನು ಯಜ್ಞವಾಗಿ ಅರ್ಪಿಸು
22 ಇವುಗಳಾದ ಮೇಲೆ, ದೇವರು ಅಬ್ರಹಾಮನ ನಂಬಿಕೆಯನ್ನು ಪರೀಕ್ಷಿಸಲು ನಿರ್ಧರಿಸಿ, “ಅಬ್ರಹಾಮನೇ!” ಎಂದು ಕರೆದನು.
ಅಬ್ರಹಾಮನು, “ಇಗೋ ಇದ್ದೇನೆ” ಅಂದನು.
2 ಆಗ ದೇವರು ಅವನಿಗೆ, “ನಿನಗೆ ಪ್ರಿಯನಾಗಿರುವ ನಿನ್ನ ಒಬ್ಬನೇ ಮಗನಾದ ಇಸಾಕನನ್ನು ಮೊರೀಯ ದೇಶಕ್ಕೆ ಕರೆದುಕೊಂಡು ಹೋಗು. ನಾನು ನಿನಗೆ ತಿಳಿಸುವ ಬೆಟ್ಟದ ಮೇಲೆ ಅವನನ್ನು ಯಜ್ಞವನ್ನಾಗಿ ಅರ್ಪಿಸು” ಎಂದು ಹೇಳಿದನು.
3 ಮುಂಜಾನೆ ಅಬ್ರಹಾಮನು ಎದ್ದು ಕತ್ತೆಗೆ ತಡಿ ಹಾಕಿಸಿದನು; ಇಸಾಕನನ್ನೂ ಅವನೊಂದಿಗೆ ಇಬ್ಬರು ಸೇವಕರನ್ನೂ ಕರೆದುಕೊಂಡನು; ಯಜ್ಞಕ್ಕಾಗಿ ಕಟ್ಟಿಗೆಯನ್ನು ತೆಗೆದುಕೊಂಡನು. ಬಳಿಕ ದೇವರು ಹೇಳಿದ್ದ ಸ್ಥಳಕ್ಕೆ ಅವರು ಹೊರಟರು. 4 ಅವರು ಮೂರು ದಿನಗಳವರೆಗೆ ಪ್ರಯಾಣ ಮಾಡಿದರು. ಅಬ್ರಹಾಮನು ದೃಷ್ಟಿಸಿ ನೋಡಿದಾಗ ತಾವು ಹೋಗಲಿದ್ದ ಸ್ಥಳವು ದೂರದಲ್ಲಿ ಅವನಿಗೆ ಕಾಣಿಸಿತು. 5 ಆಮೇಲೆ ಅಬ್ರಹಾಮನು ತನ್ನ ಸೇವಕರಿಗೆ, “ನೀವು ಇಲ್ಲೇ ಕತ್ತೆಯೊಂದಿಗಿರಿ; ನಾನೂ ನನ್ನ ಮಗನೂ ಆ ಸ್ಥಳಕ್ಕೆ ಹೋಗಿ ಆರಾಧಿಸುತ್ತೇವೆ. ಬಳಿಕ ನಾವು ಹಿಂತಿರುಗಿ ನಿಮ್ಮ ಬಳಿಗೆ ಬರುತ್ತೇವೆ” ಎಂದು ಹೇಳಿದನು.
6 ಅಬ್ರಹಾಮನು ಯಜ್ಞಕ್ಕಾಗಿ ಕಟ್ಟಿಗೆಯನ್ನು ತೆಗೆದು ತನ್ನ ಮಗನ ಭುಜದ ಮೇಲೆ ಹೊರಿಸಿದನು. ಅಬ್ರಹಾಮನು ವಿಶೇಷವಾದ ಕತ್ತಿಯನ್ನು ಮತ್ತು ಬೆಂಕಿಯನ್ನು ತೆಗೆದುಕೊಂಡನು. ಅವರಿಬ್ಬರೂ ಆರಾಧಿಸುವುದಕ್ಕಾಗಿ ಆ ಸ್ಥಳಕ್ಕೆ ಹೊರಟರು.
7 ಇಸಾಕನು ತನ್ನ ತಂದೆಯಾದ ಅಬ್ರಹಾಮನಿಗೆ, “ಅಪ್ಪಾ” ಎಂದು ಕರೆದನು.
ಅಬ್ರಹಾಮನು, “ಏನು ಮಗನೇ?” ಎಂದು ಉತ್ತರಿಸಿದನು.
ಇಸಾಕನು, “ಕಟ್ಟಿಗೆ ಮತ್ತು ಬೆಂಕಿ ನನಗೆ ಕಾಣಿಸುತ್ತಿವೆ. ಆದರೆ ಯಜ್ಞಕ್ಕೆ ಬೇಕಾದ ಕುರಿಮರಿ ಎಲ್ಲಿ?” ಎಂದು ಕೇಳಿದನು.
8 ಅಬ್ರಹಾಮನು, “ಮಗನೇ, ಯಜ್ಞಕ್ಕೆ ಬೇಕಾದ ಕುರಿಮರಿಯನ್ನು ದೇವರೇ ಒದಗಿಸುವನು” ಎಂದು ಹೇಳಿದನು.
ಹೀಗೆ ಅಬ್ರಹಾಮನು ಮತ್ತು ಅವನ ಮಗನು ಆ ಸ್ಥಳಕ್ಕೆ ಹೊರಟು 9 ದೇವರು ತಿಳಿಸಿದ್ದ ಸ್ಥಳಕ್ಕೆ ಬಂದರು. ಅಲ್ಲಿ ಅಬ್ರಹಾಮನು ಒಂದು ಯಜ್ಞವೇದಿಕೆಯನ್ನು ಕಟ್ಟಿ ಅದರ ಮೇಲೆ ಕಟ್ಟಿಗೆಯನ್ನು ಜೋಡಿಸಿದನು; ಆಮೇಲೆ ಅವನು ತನ್ನ ಮಗನಾದ ಇಸಾಕನ ಕೈಕಾಲುಗಳನ್ನು ಕಟ್ಟಿ ಯಜ್ಞವೇದಿಕೆಯ ಮೇಲಿದ್ದ ಕಟ್ಟಿಗೆಯ ಮೇಲೆ ಮಲಗಿಸಿದನು. 10 ಬಳಿಕ ಅವನು ತನ್ನ ಮಗನನ್ನು ವಧಿಸಲು ಕತ್ತಿಯನ್ನು ಮೇಲೆತ್ತಲು.
11 ಯೆಹೋವನ ದೂತನು ಪರಲೋಕದಿಂದ, “ಅಬ್ರಹಾಮನೇ, ಅಬ್ರಹಾಮನೇ!” ಎಂದು ಕರೆದನು.
ಅಬ್ರಹಾಮನು, “ಇಗೋ ಇದ್ದೇನೆ” ಎಂದು ಉತ್ತರಿಸಿದನು.
12 ಯೆಹೋವನ ದೂತನು, “ನಿನ್ನ ಮಗನನ್ನು ವಧಿಸಬೇಡ. ಅವನಿಗೆ ನೋವು ಮಾಡಬೇಡ. ನೀನು ನನಗೋಸ್ಕರವಾಗಿ ನಿನ್ನ ಒಬ್ಬನೇ ಮಗನನ್ನು ಸಮರ್ಪಿಸುವುದಕ್ಕೂ ಹಿಂಜರಿಯಲಿಲ್ಲ; ಆದ್ದರಿಂದ ನೀನು ದೇವರಲ್ಲಿ ಭಯಭಕ್ತಿಯುಳ್ಳವನೆಂದು ಈಗ ತೋರಿಬಂದಿದೆ” ಎಂದು ಹೇಳಿದನು.
13 ಅಬ್ರಹಾಮನು ಕಣ್ಣೆತ್ತಿ ನೋಡಿದಾಗ ಒಂದು ಟಗರನ್ನು ಕಂಡನು. ಆ ಟಗರಿನ ಕೊಂಬುಗಳು ಒಂದು ಪೊದೆಗೆ ಸಿಕ್ಕಿಕೊಂಡಿದ್ದವು. ಕೂಡಲೇ ಅವನು ಹೋಗಿ, ಆ ಟಗರನ್ನು ಎಳೆದುಕೊಂಡು ಬಂದು ದೇವರಿಗೆ ತನ್ನ ಮಗನ ಬದಲಾಗಿ ಯಜ್ಞವಾಗಿ ಅರ್ಪಿಸಿದನು. 14 ಅಲ್ಲದೆ ಆ ಸ್ಥಳಕ್ಕೆ “ಯೆಹೋವ ಯೀರೆ” ಎಂದು ಹೆಸರಿಟ್ಟನು. ಇಂದಿಗೂ ಜನರು, “ಯೆಹೋವನ ಬೆಟ್ಟದಲ್ಲಿ ಒದಗಿಸಲ್ಪಡುವುದು” ಎಂದು ಹೇಳುತ್ತಾರೆ.
15 ಯೆಹೋವನ ದೂತನು ಆಕಾಶದಿಂದ ಅಬ್ರಹಾಮನನ್ನು ಎರಡನೆ ಸಲ ಕರೆದು ಅವನಿಗೆ, 16 “ನೀನು ನನಗೋಸ್ಕರವಾಗಿ ನಿನ್ನ ಒಬ್ಬನೇ ಮಗನನ್ನು ವಧಿಸಲು ಸಿದ್ಧನಾಗಿದ್ದೆ. ಆದ್ದರಿಂದ ನಾನು ನಿನಗೆ ಈ ವಾಗ್ದಾನವನ್ನು ಮಾಡುತ್ತೇನೆ: 17 ನಾನು ನಿನ್ನನ್ನು ಖಂಡಿತವಾಗಿಯೂ ಆಶೀರ್ವದಿಸುವೆನು; ನಿನ್ನ ಸಂತತಿಯನ್ನು ಖಂಡಿತವಾಗಿಯೂ ಹೆಚ್ಚಿಸುವೆನು; ನಿನ್ನ ಸಂತತಿಯವರನ್ನು ಆಕಾಶದ ನಕ್ಷತ್ರಗಳಂತೆಯೂ ಸಮುದ್ರತೀರದ ಮರಳಿನಂತೆಯೂ ಅಸಂಖ್ಯಾತರನ್ನಾಗಿ ಮಾಡುವೆನು. ಅವರು ತಮ್ಮ ಶತ್ರುಗಳ ಪಟ್ಟಣಗಳನ್ನು ವಶಪಡಿಸಿಕೊಳ್ಳುವರು. 18 ನೀನು ನನಗೆ ವಿಧೇಯನಾದದ್ದರಿಂದ ನಿನ್ನ ಸಂತತಿಗಳವರ ಮೂಲಕವಾಗಿ ಭೂಮಿಯ ಮೇಲಿರುವ ಪ್ರತಿಯೊಂದು ಜನಾಂಗವೂ ಆಶೀರ್ವಾದ ಹೊಂದುವುದು” ಎಂದು ಹೇಳಿದನು.
19 ತರುವಾಯ ಅಬ್ರಹಾಮನು ತನ್ನ ಸೇವಕರ ಬಳಿಗೆ ಹಿಂತಿರುಗಿ ಹೋದನು. ಅವರೆಲ್ಲರೂ ಬೇರ್ಷೆಬಕ್ಕೆ ಮರಳಿ ಪ್ರಯಾಣ ಮಾಡಿದರು. ಬಳಿಕ ಅಬ್ರಹಾಮನು ಅಲ್ಲೇ ವಾಸಿಸಿದನು.
20 ಈ ಸಂಗತಿಗಳೆಲ್ಲ ನಡೆದ ಮೇಲೆ ಅಬ್ರಹಾಮನಿಗೆ ಒಂದು ಸಂದೇಶ ಬಂದಿತು. ಆ ಸಂದೇಶವು ಹೀಗಿತ್ತು: “ನಿನ್ನ ತಮ್ಮನಾದ ನಾಹೋರ ಮತ್ತು ಅವನ ಹೆಂಡತಿಯಾದ ಮಿಲ್ಕ ಈಗ ಮಕ್ಕಳನ್ನು ಹೊಂದಿದ್ದಾರೆ. 21 ಮೊದಲನೆ ಮಗನ ಹೆಸರು ಊಚ್; ಎರಡನೆ ಮಗನ ಹೆಸರು ಬೂಚ್; ಮೂರನೆ ಮಗನ ಹೆಸರು ಕೆಮೂವೇಲ್. ಇವನು ಅರಾಮನ ತಂದೆ. 22 ಇವರಲ್ಲದೆ ಕೆಸೆದ್, ಹಜೋ, ಪಿಲ್ದಾಷ್, ಇದ್ಲಾಫ್, ಬೆತೂವೇಲ್ ಎಂಬವರು ಸಹ ಇದ್ದಾರೆ.” 23 ಬೆತೂವೇಲನು ರೆಬೆಕ್ಕಳ ತಂದೆ. ಮಿಲ್ಕಳು ಈ ಎಂಟು ಮಕ್ಕಳ ತಾಯಿ; ನಾಹೋರನು ಅವರ ತಂದೆ. ನಾಹೋರನು ಅಬ್ರಹಾಮನ ಸಹೋದರ. 24 ಇವರಲ್ಲದೆ, ನಾಹೋರನಿಗೆ ಅವನ ಉಪಪತ್ನಿಯಾದ ರೂಮಳಲ್ಲಿ ನಾಲ್ಕು ಮಂದಿ ಗಂಡುಮಕ್ಕಳಿದ್ದರು. ಆ ಗಂಡುಮಕ್ಕಳು ಯಾರಾರೆಂದರೆ: ಟೆಬಹ, ಗಹಮ್, ತಹಷ್ ಮತ್ತು ಮಾಕಾ.
ಹಣಕ್ಕಿಂತ ದೇವರೇ ಬಹು ಮುಖ್ಯ
(ಲೂಕ 12:33-34; 11:34-36; 16:13)
19 “ನಿಮಗೋಸ್ಕರ ಈ ಭೂಮಿಯ ಮೇಲೆ ಭಂಡಾರಗಳನ್ನು ಮಾಡಿಕೊಳ್ಳಬೇಡಿ. ಅವು ಕಿಲುಬುಹತ್ತಿ ಹಾಳಾಗುತ್ತವೆ. ಕಳ್ಳರು ನಿಮ್ಮ ಮನೆಯೊಳಗೆ ಕನ್ನಕೊರೆದು ನಿಮ್ಮಲ್ಲಿರುವುದನ್ನು ಕದಿಯಬಲ್ಲರು. 20 ಆದ್ದರಿಂದ ನಿಮ್ಮ ಭಂಡಾರಗಳನ್ನು ಪರಲೋಕದಲ್ಲಿ ಮಾಡಿಟ್ಟುಕೊಳ್ಳಿ. ಅಲ್ಲಿ ಅವುಗಳಿಗೆ ನುಸಿ ಹಿಡಿಯುವುದಿಲ್ಲ. ಕಿಲುಬುಹತ್ತುವುದಿಲ್ಲ, ಕಳ್ಳರು ಕನ್ನಕೊರೆದು ಕದಿಯುವುದಿಲ್ಲ. 21 ನಿಮ್ಮ ಭಂಡಾರ ಎಲ್ಲಿರುವುದೋ ಅಲ್ಲೇ ನಿಮ್ಮ ಮನಸ್ಸಿರುವುದು.
22 “ಕಣ್ಣು ಶರೀರಕ್ಕೆ ಬೆಳಕಾಗಿದೆ. ನಿನ್ನ ಕಣ್ಣು ಸರಿಯಿದ್ದರೆ, ನಿನ್ನ ದೇಹವೆಲ್ಲಾ ಬೆಳಕಿನಿಂದ ಕೂಡಿರುವುದು. 23 ಆದರೆ ನಿನ್ನ ಕಣ್ಣು ಕೆಟ್ಟಿದ್ದರೆ, ನಿನ್ನ ಶರೀರವೆಲ್ಲ ಕತ್ತಲೆಯಿಂದ (ಪಾಪದಿಂದ) ತುಂಬಿರುವುದು. ನಿನ್ನಲ್ಲಿರುವ ಒಂದೇ ಬೆಳಕು ನಿಜವಾಗಿಯೂ ಕತ್ತಲಾದರೆ, ಆಗ ನೀನು ಕಗ್ಗತ್ತಲಲ್ಲಿರುವೆ.
24 “ಯಾವನೂ ಇಬ್ಬರು ಯಜಮಾನರಿಗೆ ಒಂದೇ ಸಮಯದಲ್ಲಿ ಸೇವೆ ಮಾಡಲಾರನು. ಅವನು ಒಬ್ಬ ಯಜಮಾನನನ್ನು ದ್ವೇಷಿಸಿ ಮತ್ತೊಬ್ಬನನ್ನು ಪ್ರೀತಿಸುತ್ತಾನೆ ಅಥವಾ ಒಬ್ಬ ಯಜಮಾನನನ್ನು ಹಿಂಬಾಲಿಸಿ ಮತ್ತೊಬ್ಬನನ್ನು ತಾತ್ಸಾರ ಮಾಡುತ್ತಾನೆ. ಆದ್ದರಿಂದ ನೀನು ದೇವರಿಗೆ ಮತ್ತು ಹಣಕ್ಕೆ ಒಂದೇ ಸಮಯದಲ್ಲಿ ಸೇವೆ ಮಾಡಲಾರೆ.
ದೇವರ ರಾಜ್ಯಕ್ಕೆ ಪ್ರಥಮ ಸ್ಥಾನ
(ಲೂಕ 12:22-34)
25 “ಆದ್ದರಿಂದ ನಿಮ್ಮ ಪ್ರಾಣಧಾರಣೆಗೆ ಬೇಕಾದ ಆಹಾರಕ್ಕಾಗಲಿ ದೇಹಕ್ಕೆ ಬೇಕಾದ ಬಟ್ಟೆಗಾಗಲಿ ನೀವು ಚಿಂತಿಸಬಾರದು. ಪ್ರಾಣವು ಆಹಾರಕ್ಕಿಂತಲೂ ದೇಹವು ಬಟ್ಟೆಗಿಂತಲೂ ಬಹಳ ಮುಖ್ಯವಾದದ್ದೆಂದು ನಾನು ನಿಮಗೆ ಹೇಳುತ್ತೇನೆ. 26 ಪಕ್ಷಿಗಳ ಕಡೆಗೆ ನೋಡಿ. ಅವು ಬಿತ್ತುವುದಿಲ್ಲ, ಕೊಯ್ಯುವುದಿಲ್ಲ ಇಲ್ಲವೇ ಕಣಜಗಳಲ್ಲಿ ತುಂಬಿಟ್ಟುಕೊಳ್ಳುವುದಿಲ್ಲ. ಆದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ಅವುಗಳಿಗೆ ಆಹಾರವನ್ನು ನೀಡುತ್ತಾನೆ. ನೀವು ಆ ಪಕ್ಷಿಗಳಿಗಿಂತ ಎಷ್ಟೋ ಅಮೂಲ್ಯರೆಂಬುದು ನಿಮಗೆ ಗೊತ್ತಿದೆ. 27 ನೀವು ಚಿಂತಿಸುವುದರಿಂದ ನಿಮ್ಮ ಆಯುಷ್ಯು ಹೆಚ್ಚೇನೂ ಆಗುವುದಿಲ್ಲ.
28 “ಬಟ್ಟೆಗಾಗಿ ಚಿಂತಿಸುವುದೇಕೆ? ಹೊಲದಲ್ಲಿರುವ ಹೂವುಗಳನ್ನು ನೋಡಿ. ಅವು ಬೆಳೆಯುವ ಬಗೆಯನ್ನು ಗಮನಿಸಿ. ಅವು ದುಡಿಯುವುದಿಲ್ಲ ಅಥವಾ ತಮಗಾಗಿ ಬಟ್ಟೆಗಳನ್ನು ನೇಯುವುದಿಲ್ಲ. 29 ಆದರೆ ನಾನು ನಿಮಗೆ ಹೇಳುವುದೇನೆಂದರೆ, ಸೊಲೊಮೋನನು ತನ್ನ ವೈಭವದಿಂದ ಇದ್ದಾಗಲೂ ಈ ಹೂವುಗಳಲ್ಲಿ ಒಂದಕ್ಕಿರುವಷ್ಟು ಸೌಂದರ್ಯವುಳ್ಳ ಬಟ್ಟೆಗಳನ್ನು ಧರಿಸಲಿಲ್ಲ. 30 ಬಯಲಿನಲ್ಲಿರುವ ಹುಲ್ಲಿಗೂ ದೇವರು ಹಾಗೆ ಹೊದಿಸುತ್ತಾನೆ. ಹುಲ್ಲಾದರೋ ಈ ಹೊತ್ತು ಇದ್ದು ನಾಳೆ ಬೆಂಕಿಯ ಪಾಲಾಗುತ್ತದೆ. ಆದ್ದರಿಂದ ದೇವರು ನಿಮಗೆ ಎಷ್ಟೋ ಹೆಚ್ಚಾಗಿ ತೊಡಿಸುತ್ತಾನೆಂದು ನಿಮಗೆ ಗೊತ್ತಿದೆ. ಅಲ್ಪವಿಶ್ವಾಸಿಗಳಾಗಿರಬೇಡಿ!
31 “‘ನಾವು ಏನು ತಿನ್ನಬೇಕು? ಏನು ಕುಡಿಯಬೇಕು? ಏನನ್ನು ಧರಿಸಬೇಕು?’ ಎಂದು ಚಿಂತಿಸಬೇಡಿ. 32 ದೇವರನ್ನು ತಿಳಿಯದ ಜನರೆಲ್ಲರೂ ಇವುಗಳನ್ನು ಪಡೆಯಲು ಪ್ರಯತ್ನಿಸುತ್ತಾರೆ. ಚಿಂತಿಸಬೇಡಿರಿ, ಏಕೆಂದರೆ ಈ ವಸ್ತುಗಳು ನಿಮಗೆ ಅಗತ್ಯವೆಂದು ಪರಲೋಕದಲ್ಲಿರುವ ನಿಮ್ಮ ತಂದೆಗೆ ತಿಳಿದಿದೆ. 33 ಆದ್ದರಿಂದ ನೀವು ದೇವರ ರಾಜ್ಯಕ್ಕಾಗಿ ಮತ್ತು ಆತನ ಚಿತ್ತಕ್ಕನುಸಾರವಾಗಿ ಕಾರ್ಯಗಳನ್ನು ಮಾಡಲು ಬಹಳ ತವಕಪಡಬೇಕು. ಆಗ ನಿಮಗೆ ಅಗತ್ಯವಾದ ಉಳಿದವುಗಳನ್ನು ಸಹ ಕೊಡಲಾಗುವುದು. 34 ಆದ್ದರಿಂದ ನಾಳೆಗಾಗಿ ಚಿಂತಿಸಬೇಡಿ. ಪ್ರತಿದಿನವು ತನ್ನದೇ ಆದ ಎಷ್ಟೋ ಕಷ್ಟಗಳನ್ನು ಹೊಂದಿರುತ್ತದೆ. ನಾಳೆಯು ಸಹ ತನ್ನದೇ ಆದ ಚಿಂತೆಗಳನ್ನು ಹೊಂದಿದೆ.
Kannada Holy Bible: Easy-to-Read Version. All rights reserved. © 1997 Bible League International