Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಆದಿಕಾಂಡ 18-19

ಮೂವರು ಸಂದರ್ಶಕರು

18 ಅಬ್ರಹಾಮನು ಮಮ್ರೆಯಲ್ಲಿದ್ದ ಓಕ್ ಮರಗಳ ತೋಪಿನ ಸಮೀಪದಲ್ಲಿ ವಾಸಿಸುತ್ತಿದ್ದಾಗ ಯೆಹೋವನು ಅವನಿಗೆ ಕಾಣಿಸಿಕೊಂಡನು. ಅಂದು ಬಿಸಿಲಿನ ತಾಪದಿಂದಾಗಿ ಅಬ್ರಹಾಮನು ತನ್ನ ಗುಡಾರದ ಬಾಗಿಲ ಬಳಿ ಕುಳಿತಿದ್ದನು. ಅಬ್ರಹಾಮನು ದೃಷ್ಟಿಸಿ ನೋಡಿದಾಗ ತನ್ನ ಮುಂದೆ ಮೂವರು ಪುರುಷರು ನಿಂತಿರುವುದನ್ನು ಕಂಡನು. ಕೂಡಲೇ ಅವರ ಬಳಿಗೆ ಓಡಿಹೋಗಿ ಅವರಿಗೆ ಸಾಷ್ಟಾಂಗನಮಸ್ಕಾರ ಮಾಡಿ ಅವರಿಗೆ, “ಸ್ವಾಮಿಗಳೇ, ನಿಮ್ಮ ಸೇವಕನಾದ ನನ್ನ ಜೊತೆಯಲ್ಲಿ ಸ್ವಲ್ಪ ಸಮಯವಿರಿ. ನಿಮ್ಮ ಕಾಲುಗಳನ್ನು ತೊಳೆದುಕೊಳ್ಳಲು ನೀರನ್ನು ತಂದುಕೊಡುವೆನು. ನೀವು ಮರದ ಕೆಳಗೆ ವಿಶ್ರಾಂತಿ ತೆಗೆದುಕೊಳ್ಳಿರಿ. ನಾನು ನಿಮಗೆ ಊಟವನ್ನು ತಂದುಕೊಡುವೆನು. ನೀವು ಬೇಕಾದಷ್ಟು ಊಟ ಮಾಡಿದ ನಂತರ ನಿಮ್ಮ ಪ್ರಯಾಣವನ್ನು ಮುಂದುವರಿಸಬಹುದು” ಎಂದು ಹೇಳಿದನು.

ಆ ಮೂವರು ಪುರುಷರು, “ಸರಿ, ನೀನು ಹೇಳಿದಂತೆಯೇ ಮಾಡು” ಅಂದರು.

ಅಬ್ರಹಾಮನು ಗುಡಾರಕ್ಕೆ ಬೇಗನೆ ಹೋಗಿ ಸಾರಳಿಗೆ, “ಮೂರು ದೊಡ್ಡ ರೊಟ್ಟಿಗಳಿಗೆ ಬೇಕಾಗುವಷ್ಟು ಗೋಧಿ ಹಿಟ್ಟನ್ನು ಬೇಗನೆ ನಾದು” ಎಂದು ಹೇಳಿದನು. ಬಳಿಕ ಅವನು ತನ್ನ ಪಶುಗಳಿದ್ದಲ್ಲಿಗೆ ಓಡಿಹೋಗಿ ಉತ್ತಮವಾದ ಎಳೆಕರುವನ್ನು ತೆಗೆದು ಸೇವಕನಿಗೆ ಕೊಟ್ಟು, “ಬೇಗನೇ ಕರುವನ್ನು ಕೊಯ್ದು, ಊಟಕ್ಕೆ ಸಿದ್ಧಮಾಡು” ಎಂದು ಹೇಳಿದನು. ಅಬ್ರಹಾಮನು ಆ ಮೂವರಿಗೆ ಮಾಂಸದ ಅಡಿಗೆಯನ್ನು ಬಡಿಸಿದನು. ಇದಲ್ಲದೆ ಅವನು ಹಾಲನ್ನೂ ಬೆಣ್ಣೆಯನ್ನೂ ಕೊಟ್ಟನು. ಆ ಮೂವರು ಊಟ ಮಾಡುವಾಗ ಅಬ್ರಹಾಮನು ಅವರ ಸಮೀಪದಲ್ಲಿ ಮರದ ಕೆಳಗೆ ನಿಂತುಕೊಂಡಿದ್ದನು.

ಆ ಪುರುಷರು ಅಬ್ರಹಾಮನಿಗೆ, “ನಿನ್ನ ಹೆಂಡತಿಯಾದ ಸಾರಳು ಎಲ್ಲಿ?” ಎಂದು ಕೇಳಿದರು.

ಅಬ್ರಹಾಮನು ಅವರಿಗೆ, “ಆಕೆ ಗುಡಾರದಲ್ಲಿ ಇದ್ದಾಳೆ” ಅಂದನು.

10 ಆಗ ಯೆಹೋವನು ಅವನಿಗೆ, “ನಾನು ಮತ್ತೆ ವಸಂತಕಾಲದಲ್ಲಿ ಬರುತ್ತೇನೆ. ಆ ಸಮಯದಲ್ಲಿ ನಿನ್ನ ಹೆಂಡತಿಯಾದ ಸಾರಳಿಗೆ ಒಬ್ಬ ಮಗನಿರುವನು” ಎಂದು ಹೇಳಿದನು.

ಸಾರಳು ಗುಡಾರದಲ್ಲಿದ್ದುಕೊಂಡು ಇದನ್ನೆಲ್ಲಾ ಕೇಳಿಸಿಕೊಳ್ಳುತ್ತಿದ್ದಳು. ಅವಳಿಗೆ ಈ ಸಂಗತಿಯೂ ಕೇಳಿಸಿತು. 11 ಅಬ್ರಹಾಮನೂ ಮತ್ತು ಸಾರಳೂ ತುಂಬ ವೃದ್ಧರಾಗಿದ್ದರು. ಸಾರಳಿಗೂ ಮಕ್ಕಳು ಹುಟ್ಟುವ ಕಾಲ ಆಗಿಹೋಗಿತ್ತು. 12 ಆದ್ದರಿಂದ ಸಾರಳಿಗೆ ನಂಬಲಾಗಲಿಲ್ಲ. ಆಕೆ ತನ್ನೊಳಗೆ, “ಈಗಾಗಲೇ ನನಗೆ ವಯಸ್ಸಾಗಿದೆ; ನನ್ನ ಗಂಡನಿಗೂ ವಯಸ್ಸಾಗಿದೆ” ಅಂದುಕೊಂಡಳು.

13 ಆಗ ಯೆಹೋವನು ಅಬ್ರಹಾಮನಿಗೆ, “ನಾನು ಹೇಳುವುದನ್ನು ಸಾರಳು ನಂಬುತ್ತಿಲ್ಲ. ಆಕೆಯು ನಗುತ್ತಾ ತನ್ನೊಳಗೆ, ‘ನನಗೆ ಮಕ್ಕಳಾಗದಷ್ಟು ವಯಸ್ಸಾಗಿದೆ’ ಎಂದು ಹೇಳಿದ್ದೇಕೆ? 14 ಯೆಹೋವನಿಗೆ ಅಸಾಧ್ಯವಾದುದುಂಟೇ? ನಾನು ಮತ್ತೆ ವಸಂತಕಾಲದಲ್ಲಿ ಬರುವೆನು. ಆಗ ನಿನ್ನ ಹೆಂಡತಿಯಾದ ಸಾರಳಿಗೆ ಒಬ್ಬ ಮಗನಿದ್ದೇ ಇರುವನು” ಅಂದನು.

15 ಆದರೆ ಸಾರಳು ಭಯಪಟ್ಟು, “ನಾನು ನಗಲಿಲ್ಲ” ಅಂದಳು.

ಅದಕ್ಕೆ ಯೆಹೋವನು, “ಇಲ್ಲ, ನೀನು ನಕ್ಕಿದ್ದು ನಿಜ!” ಅಂದನು.

16 ಆಮೇಲೆ ಆ ಪುರುಷರು ಹೋಗಲು ಎದ್ದುನಿಂತರು. ಅವರು ಸೊದೋಮಿನ ಕಡೆಗೆ ಕಣ್ಣೆತ್ತಿ ನೋಡಿ ಆ ಕಡೆಗೆ ನಡೆಯಲಾರಂಭಿಸಿದರು. ಅವರನ್ನು ಕಳುಹಿಸಿಕೊಡಲು ಅಬ್ರಹಾಮನು ಅವರ ಸಂಗಡ ಸ್ವಲ್ಪದೂರ ಹೋದನು.

ಅಬ್ರಹಾಮನು ದೇವರಿಗೆ ಮಾಡಿದ ಬಿನ್ನಹ

17 ಯೆಹೋವನು ತನ್ನೊಳಗೆ ಹೀಗೆಂದುಕೊಂಡನು: “ನಾನು ಈಗ ಮಾಡುವ ಕಾರ್ಯವನ್ನು ಅಬ್ರಹಾಮನಿಗೆ ತಿಳಿಸಲೇ? 18 ಅಬ್ರಹಾಮನಿಂದ ಬಲಿಷ್ಠವಾದ ಮಹಾಜನಾಂಗ ಹುಟ್ಟುವುದು; ಅವನ ಮೂಲಕ ಈ ಲೋಕದ ಜನರೆಲ್ಲರೂ ಆಶೀರ್ವಾದ ಹೊಂದುವರು. 19 ನಾನು ಅವನೊಡನೆ ವಿಶೇಷವಾದ ಒಡಂಬಡಿಕೆಯನ್ನು ಮಾಡಿಕೊಂಡಿದ್ದೇನೆ. ಅವನು ತನ್ನ ಮಕ್ಕಳಿಗೂ ಸಂತತಿಯವರಿಗೂ ನನಗೆ ವಿಧೇಯರಾಗುವಂತೆ ಮತ್ತು ನ್ಯಾಯನೀತಿಗಳಿಂದ ಜೀವಿಸುವಂತೆ ಆಜ್ಞಾಪಿಸಲೆಂದು ನಾನು ಅವನೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡೆನು. ಅವರು ಹೀಗೆ ಜೀವಿಸಿದರೆ, ನನ್ನ ವಾಗ್ದಾನಗಳನ್ನೆಲ್ಲಾ ನೆರವೇರಿಸುವೆನು.”

20 ಇದಲ್ಲದೆ ಯೆಹೋವನು, “ಸೊದೋಮ್ ಮತ್ತು ಗೊಮೋರಗಳ ಜನರು ಬಹಳ ಕೆಟ್ಟವರೆಂದು ಅನೇಕ ಸಲ ಕೇಳಿದ್ದೇನೆ. 21 ಆದ್ದರಿಂದ ನಾನು ಕೆಳಗಿಳಿದು ಅಲ್ಲಿಗೆ ಹೋಗಿ ನಾನು ಕೇಳಿದ್ದು ನಿಜವೇ ಎಂದು ಪರೀಕ್ಷಿಸುವೆನು” ಅಂದನು.

22 ಆದ್ದರಿಂದ ಆ ಪುರುಷರು ಸೊದೋಮಿನ ಕಡೆಗೆ ನಡೆಯತೊಡಗಿದರು. ಆದರೆ ಅಬ್ರಹಾಮನು ಯೆಹೋವನ ಎದುರಿನಲ್ಲಿ ನಿಂತುಕೊಂಡಿದ್ದನು. 23 ಅಬ್ರಹಾಮನು ಯೆಹೋವನ ಸಮೀಪಕ್ಕೆ ಬಂದು, “ಯೆಹೋವನೇ, ನೀನು ಕೆಟ್ಟವರನ್ನು ನಾಶಮಾಡುವಾಗ ನೀತಿವಂತರನ್ನು ಸಹ ನಾಶಮಾಡಬೇಕೆಂದಿರುವೆಯೋ? 24 ಒಂದುವೇಳೆ ಆ ಪಟ್ಟಣದಲ್ಲಿ ಐವತ್ತು ಮಂದಿ ನೀತಿವಂತರಿದ್ದರೆ ಏನು ಮಾಡುವೆ? ನೀನು ಆ ಪಟ್ಟಣವನ್ನು ನಾಶಮಾಡುವಿಯೋ? ಖಂಡಿತವಾಗಿಯೂ ಇಲ್ಲ! ಅಲ್ಲಿ ಜೀವಿಸುತ್ತಿರುವ ಐವತ್ತು ಮಂದಿ ನೀತಿವಂತರಿಗಾಗಿ ನೀನು ಆ ಪಟ್ಟಣವನ್ನು ಉಳಿಸಿ ಕಾಪಾಡುವೆ. 25 ಖಂಡಿತವಾಗಿಯೂ ನೀನು ಆ ಪಟ್ಟಣವನ್ನು ನಾಶಮಾಡುವುದಿಲ್ಲ. ಕೆಟ್ಟವರನ್ನು ಕೊಲ್ಲುವುದಕ್ಕಾಗಿ ನೀನು ಐವತ್ತು ಮಂದಿ ನೀತಿವಂತರನ್ನು ಕೊಲ್ಲುವುದಿಲ್ಲ. ಒಂದುವೇಳೆ ನೀನು ಕೊಂದರೆ, ಒಳ್ಳೆಯವರೂ ಕೆಟ್ಟವರೂ ಸರಿಸಮಾನರಾಗುವರು. ಅವರಿಬ್ಬರೂ ದಂಡನೆಗೆ ಗುರಿಯಾಗುವರು. ನೀನು ಲೋಕದವರಿಗೆಲ್ಲ ನ್ಯಾಯಾಧಿಪತಿ. ನೀನು ನ್ಯಾಯವಾದದ್ದನ್ನೇ ಮಾಡುವೆ ಎಂದು ನನಗೆ ಗೊತ್ತಿದೆ” ಎಂದು ಹೇಳಿದನು.

26 ಆಮೇಲೆ ಯೆಹೋವನು, “ನಾನು ಸೊದೋಮಿನಲ್ಲಿ ಐವತ್ತು ಮಂದಿ ನೀತಿವಂತರನ್ನು ಕಂಡರೆ, ನಾನು ಇಡೀ ಪಟ್ಟಣವನ್ನೇ ಉಳಿಸಿ ಕಾಪಾಡುವೆನು” ಎಂದನು.

27 ಆಗ ಅಬ್ರಹಾಮನು ಯೆಹೋವನಿಗೆ, “ನಿನಗೆ ನನ್ನನ್ನು ಹೋಲಿಸಿಕೊಂಡರೆ, ನಾನು ಕೇವಲ ಧೂಳು ಮತ್ತು ಬೂದಿ. ಆದರೆ ಈ ಪ್ರಶ್ನೆಯನ್ನೂ ಕೇಳಲು ನನಗೆ ಅವಕಾಶಕೊಡು. 28 ಒಂದುವೇಳೆ ಐದು ಮಂದಿ ಕಡಿಮೆಯಾಗಿದ್ದು ನಲವತ್ತೈದು ಮಂದಿ ಮಾತ್ರ ನೀತಿವಂತರಿದ್ದರೆ ಆ ಪಟ್ಟಣವನ್ನು ನಾಶಮಾಡುವಿಯಾ?” ಎಂದು ಕೇಳಿದನು.

ಅದಕ್ಕೆ ಯೆಹೋವನು ಅವನಿಗೆ, “ನಾನು ನಲವತ್ತೈದು ಮಂದಿ ನೀತಿವಂತರನ್ನು ಕಂಡರೂ ಆ ಪಟ್ಟಣವನ್ನು ನಾಶಮಾಡುವುದಿಲ್ಲ” ಎಂದು ಹೇಳಿದನು.

29 ಮತ್ತೆ ಅಬ್ರಹಾಮನು ದೇವರಿಗೆ, “ಕೇವಲ ನಲವತ್ತು ಮಂದಿ ನೀತಿವಂತರನ್ನು ಕಂಡರೆ, ನೀನು ಆ ಪಟ್ಟಣವನ್ನು ನಾಶಮಾಡುವೆಯಾ?” ಎಂದು ಕೇಳಿದನು.

ಯೆಹೋವನು ಅವನಿಗೆ, “ನಲವತ್ತು ಮಂದಿ ನೀತಿವಂತರನ್ನು ಕಂಡರೂ ನಾನು ಆ ಪಟ್ಟಣವನ್ನು ನಾಶಮಾಡುವುದಿಲ್ಲ” ಎಂದು ಹೇಳಿದನು.

30 ಆಮೇಲೆ ಅಬ್ರಹಾಮನು, “ಯೆಹೋವನೇ, ನನ್ನ ಮೇಲೆ ಸಿಟ್ಟುಗೊಳ್ಳಬೇಡ. ಈ ಪ್ರಶ್ನೆಯನ್ನೂ ಕೇಳುವೆ: ಆ ಪಟ್ಟಣದಲ್ಲಿ ಕೇವಲ ಮೂವತ್ತು ಮಂದಿ ನೀತಿವಂತರಿದ್ದರೆ ನೀನು ಆ ಪಟ್ಟಣವನ್ನು ನಾಶಮಾಡುವೆಯಾ?” ಎಂದು ಕೇಳಿದನು.

ಯೆಹೋವನು ಅವನಿಗೆ, “ಅಲ್ಲಿ ಮೂವತ್ತು ಮಂದಿ ನೀತಿವಂತರಿದ್ದರೂ ನಾನು ಆ ಪಟ್ಟಣವನ್ನು ನಾಶಮಾಡುವುದಿಲ್ಲ” ಅಂದನು.

31 ಆಮೇಲೆ ಅಬ್ರಹಾಮನು, “ನನ್ನ ಯೆಹೋವನು ಏನೂ ತಿಳಿದುಕೊಳ್ಳದಿರಲಿ. ನಾನು ಮತ್ತೊಂದು ಪ್ರಶ್ನೆ ಕೇಳುವೆ. ಅಲ್ಲಿ ಇಪ್ಪತ್ತು ಮಂದಿ ನೀತಿವಂತರಿದ್ದರೆ ಏನು ಮಾಡುವೆ?” ಎಂದು ಕೇಳಿದನು.

ಯೆಹೋವನು ಅವನಿಗೆ, “ಅಲ್ಲಿ ಇಪ್ಪತ್ತು ಮಂದಿ ನೀತಿವಂತರನ್ನು ಕಂಡರೆ ಆ ಪಟ್ಟಣವನ್ನು ನಾಶಮಾಡುವುದಿಲ್ಲ” ಎಂದು ಹೇಳಿದನು.

32 ಆಮೇಲೆ ಅಬ್ರಹಾಮನು, “ಯೆಹೋವನೇ, ದಯಮಾಡಿ ನನ್ನ ಮೇಲೆ ಸಿಟ್ಟುಗೊಳ್ಳಬೇಡ. ಇದೊಂದು ಸಲ ಮಾತ್ರ ಪ್ರಶ್ನೆ ಕೇಳುವೆ. ಹತ್ತು ಮಂದಿ ನೀತಿವಂತರನ್ನು ಕಂಡರೆ ಏನು ಮಾಡುವೆ?” ಎಂದು ಕೇಳಿದನು.

ಯೆಹೋವನು ಅವನಿಗೆ, “ನಾನು ಆ ಪಟ್ಟಣದಲ್ಲಿ ಹತ್ತು ಮಂದಿ ನೀತಿವಂತರನ್ನು ಕಂಡರೂ, ಅದನ್ನು ನಾಶಮಾಡುವುದಿಲ್ಲ” ಅಂದನು.

33 ಯೆಹೋವನು ಅಬ್ರಹಾಮನೊಂದಿಗೆ ಮಾತಾಡುವುದನ್ನು ಮುಗಿಸಿದ ಮೇಲೆ ಅಲ್ಲಿಂದ ಹೊರಟುಹೋದನು. ಅಬ್ರಹಾಮನು ಸಹ ತನ್ನ ಮನೆಗೆ ಹಿಂತಿರುಗಿದನು.

ಲೋಟನ ಸಂದರ್ಶಕರು

19 ಆ ಸಾಯಂಕಾಲ, ದೇವದೂತರಿಬ್ಬರು ಸೊದೋಮ್ ನಗರಕ್ಕೆ ಬಂದರು. ನಗರದ ಬಾಗಿಲುಗಳ ಬಳಿ ಕುಳಿತುಕೊಂಡಿದ್ದ ಲೋಟನು ದೇವದೂತರನ್ನು ಕಂಡು, ಅವರ ಬಳಿಗೆ ಹೋಗಿ ನಮಸ್ಕರಿಸಿದನು. ಲೋಟನು ಅವರಿಗೆ, “ಸ್ವಾಮಿಗಳೇ, ದಯವಿಟ್ಟು ನನ್ನ ಮನೆಗೆ ಬನ್ನಿ. ನಾನು ನಿಮ್ಮನ್ನು ಉಪಚರಿಸುವೆನು. ನಿಮ್ಮ ಕೈಕಾಲುಗಳನ್ನು ತೊಳೆದುಕೊಂಡು ಈ ರಾತ್ರಿ ನಮ್ಮ ಮನೆಯಲ್ಲೇ ಇರಿ. ನಾಳೆ ಮುಂಜಾನೆ ನಿಮ್ಮ ಪ್ರಯಾಣವನ್ನು ಮುಂದುವರಿಸಬಹುದು” ಎಂದು ಹೇಳಿದನು.

ದೇವದೂತರು, “ಈ ಚೌಕದಲ್ಲಿ ನಾವು ಈ ರಾತ್ರಿ ಕಳೆಯುತ್ತೇವೆ” ಎಂದು ಉತ್ತರಿಸಿದರು.

ಆದರೆ ಲೋಟನು ತನ್ನ ಮನೆಗೆ ಬರುವಂತೆ ಒತ್ತಾಯಿಸಿದ್ದರಿಂದ ಅವರು ಅವನ ಮನೆಗೆ ಹೋದರು. ಲೋಟನು ಅವರಿಗಾಗಿ ಹುಳಿಯಿಲ್ಲದ ರೊಟ್ಟಿಗಳನ್ನು ಸುಡಿಸಿ ಅಡಿಗೆ ಮಾಡಿಸಿದನು. ದೇವದೂತರು ಅದನ್ನು ಊಟಮಾಡಿದರು.

ಆ ರಾತ್ರಿ ಮಲಗುವುದಕ್ಕಿಂತ ಮುಂಚೆ ಸೊದೋಮಿನ ಗಂಡಸರೆಲ್ಲರೂ ಬಂದು ಲೋಟನ ಮನೆಯ ಸುತ್ತಲೂ ನಿಂತುಕೊಂಡು ಲೋಟನಿಗೆ, “ನಿನ್ನ ಮನೆಗೆ ಬಂದ ಆ ಇಬ್ಬರು ಪುರುಷರು ಎಲ್ಲಿದ್ದಾರೆ? ಅವರನ್ನು ಹೊರಗೆ ಕಳುಹಿಸು. ನಾವು ಅವರನ್ನು ಸಂಭೋಗಿಸಬೇಕು” ಎಂದು ಕೂಗಿ ಹೇಳಿದರು.

ಲೋಟನು ಹೊರಗೆ ಬಂದು ಬಾಗಿಲಿಗೆ ಬೀಗ ಹಾಕಿ, ಆ ಗಂಡಸರಿಗೆ, “ನನ್ನ ಸಹೋದರರೇ, ನಾನು ನಿಮ್ಮನ್ನು ಬೇಡಿಕೊಳ್ಳುತ್ತಿದ್ದೇನೆ. ದಯವಿಟ್ಟು ಈ ಕೆಟ್ಟಕಾರ್ಯವನ್ನು ಮಾಡಬೇಡಿ. ನೋಡಿ! ನನಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಅವರು ಹಿಂದೆಂದೂ ಗಂಡಸರೊಡನೆ ಮಲಗಿದವರಲ್ಲ. ನೀವು ಅವರಿಗೆ ಏನುಬೇಕಾದರೂ ಮಾಡಿ, ಆದರೆ ದಯವಿಟ್ಟು ಈ ಪುರುಷರಿಗೆ ಏನನ್ನೂ ಮಾಡಬೇಡಿ. ಇವರು ನನ್ನ ಮನೆಗೆ ಬಂದಿದ್ದಾರೆ; ಇವರನ್ನು ಕಾಪಾಡುವುದು ನನ್ನ ಕರ್ತವ್ಯ” ಎಂದು ಹೇಳಿದನು.

ಮನೆಯ ಸುತ್ತಲೂ ನಿಂತುಕೊಂಡಿದ್ದ ಗಂಡಸರು ಅವನಿಗೆ, “ದಾರಿಬಿಡು” ಎಂದು ಕೂಗಿದರು. ಆಮೇಲೆ ಅವರು ತಮ್ಮೊಳಗೆ, “ಈ ಲೋಟನು ನಮ್ಮ ನಗರಕ್ಕೆ ಪ್ರವಾಸಿಗನಂತೆ ಬಂದು ಈಗ ನಮಗೇ ನ್ಯಾಯವನ್ನು ಹೇಳಿಕೊಡುತ್ತಿದ್ದಾನೆ” ಎಂದು ಮಾತಾಡಿಕೊಂಡರು. ಆಮೇಲೆ ಅವರು ಲೋಟನಿಗೆ, “ನಾವು ಆ ಪುರುಷರಿಗೆ ಮಾಡುವುದಕ್ಕಿಂತ ನಿನಗೇ ಹೆಚ್ಚು ಕೆಟ್ಟದ್ದನ್ನು ಮಾಡುತ್ತೇವೆ” ಎಂದು ಕೂಗಿಹೇಳಿ ಲೋಟನ ಸಮೀಪಕ್ಕೆ ಬಂದು ಬಾಗಿಲನ್ನು ಮುರಿದುಹಾಕಲು ಸಿದ್ಧರಾದರು.

10 ಆದರೆ ಮನೆಯೊಳಗಿದ್ದ ಇಬ್ಬರು ಪುರುಷರು ಬಾಗಿಲನ್ನು ತೆರೆದು ಲೋಟನನ್ನು ಮನೆಯೊಳಗೆ ಎಳೆದುಕೊಂಡು ಬಾಗಿಲನ್ನು ಮುಚ್ಚಿದರು. 11 ಆ ಇಬ್ಬರು ಪುರುಷರು ಮನೆಯ ಹೊರಗೆ ಇದ್ದ ಗಂಡಸರನ್ನೆಲ್ಲಾ ಕುರುಡರಾಗುವಂತೆ ಮಾಡಿದ್ದರಿಂದ ಅವರು ಬಾಗಿಲನ್ನು ಗುರುತಿಸಲಾರದೆ ಹೋದರು.

ಸೊದೋಮಿನಿಂದ ಪಲಾಯನ

12 ಆ ಇಬ್ಬರು ಪುರುಷರು ಲೋಟನಿಗೆ, “ನಿನ್ನ ಕುಟುಂಬದ ಬೇರೆ ಯಾರಾದರೂ ಈ ನಗರದಲ್ಲಿ ಇದ್ದಾರೆಯೇ? ನಿನಗೆ ಅಳಿಯಂದಿರಾಗಲಿ ಗಂಡುಮಕ್ಕಳಾಗಲಿ ಹೆಣ್ಣುಮಕ್ಕಳಾಗಲಿ ಇಲ್ಲಿ ವಾಸವಾಗಿದ್ದಾರೆಯೇ? ನಿನ್ನ ಕುಟುಂಬದ ಯಾರಾದರೂ ಈ ನಗರದಲ್ಲಿದ್ದರೆ ಈಗಲೇ ಇಲ್ಲಿಂದ ಹೊರಡುವಂತೆ ಅವರಿಗೆ ತಿಳಿಸು. 13 ನಾವು ಈ ನಗರವನ್ನು ನಾಶಮಾಡುತ್ತೇವೆ. ಈ ನಗರದ ದುಷ್ಟತನವನ್ನು ಯೆಹೋವನು ನೋಡಿದ್ದಾನೆ. ಆದ್ದರಿಂದ ಇದನ್ನು ನಾಶಮಾಡಲು ಆತನೇ ನಮ್ಮನ್ನು ಕಳುಹಿಸಿದ್ದಾನೆ” ಎಂದು ಹೇಳಿದರು.

14 ಆದ್ದರಿಂದ ಲೋಟನು ಹೊರಗೆ ಹೋಗಿ, ತನ್ನ ಹೆಣ್ಣುಮಕ್ಕಳೊಡನೆ ನಿಶ್ಚಿತಾರ್ಥವಾಗಿದ್ದ ಅಳಿಯಂದಿರೊಡನೆ ಮಾತಾಡಿ, “ಬೇಗನೆ ಈ ಪಟ್ಟಣವನ್ನು ಬಿಟ್ಟು ಹೊರಡಿರಿ; ಯೆಹೋವನು ಈ ಪಟ್ಟಣವನ್ನು ನಾಶಮಾಡುವನು” ಎಂದು ಹೇಳಿದನು. ಲೋಟನ ಈ ಮಾತು ಅವರಿಗೆ ತಮಾಷೆಯಂತೆ ಕಂಡಿತು.

15 ಸೂರ್ಯೋದಯಕ್ಕಿಂತ ಮೊದಲೇ ಹೊರಡುವಂತೆ ದೇವದೂತರು ಲೋಟನನ್ನು ಒತ್ತಾಯಿಸಿ, “ಈ ನಗರವನ್ನು ನಾಶಗೊಳಿಸಲಾಗುವುದು. ಆದ್ದರಿಂದ ನಿನ್ನ ಹೆಂಡತಿಯನ್ನೂ ನಿನ್ನ ಇಬ್ಬರು ಹೆಣ್ಣುಮಕ್ಕಳನ್ನೂ ಕರೆದುಕೊಂಡು ಈ ಸ್ಥಳದಿಂದ ಓಡಿಹೋಗು, ಆಗ ನೀನು ಈ ನಗರದೊಡನೆ ನಾಶವಾಗುವುದಿಲ್ಲ” ಎಂದು ಹೇಳಿದರು.

16 ಆದರೆ ಲೋಟನು ಗಲಿಬಿಲಿಗೊಂಡು ತಡಮಾಡಲು ಆ ಇಬ್ಬರು ಪುರುಷರು ಲೋಟನನ್ನೂ ಅವನ ಹೆಂಡತಿಯನ್ನೂ ಅವನ ಇಬ್ಬರು ಹೆಣ್ಣುಮಕ್ಕಳನ್ನೂ ಕೈಹಿಡಿದುಕೊಂಡು ನಗರದ ಹೊರಕ್ಕೆ ಸುರಕ್ಷಿತವಾಗಿ ತಂದುಬಿಟ್ಟರು. ಹೀಗೆ ಯೆಹೋವನು ಲೋಟನಿಗೂ ಅವನ ಕುಟುಂಬದವರಿಗೂ ದಯೆತೋರಿದನು. 17 ಅವರು ನಗರದ ಹೊರಕ್ಕೆ ಬಂದ ಮೇಲೆ ಆ ಪುರುಷರಲ್ಲಿ ಒಬ್ಬನು, “ಈಗ ಓಡಿಹೋಗಿ ನಿಮ್ಮ ಪ್ರಾಣವನ್ನು ಕಾಪಾಡಿಕೊಳ್ಳಿ; ನಗರದ ಕಡೆಗೆ ತಿರುಗಿ ನೋಡಬೇಡಿ; ಕಣಿವೆಯ ಯಾವ ಸ್ಥಳದಲ್ಲೂ ನಿಂತುಕೊಳ್ಳಬೇಡಿ; ತಪ್ಪಿಸಿಕೊಂಡು ಬೆಟ್ಟಗಳಿಗೆ ಓಡಿಹೋಗಿರಿ; ಇಲ್ಲವಾದರೆ, ಈ ನಗರದೊಡನೆ ನೀವೂ ನಾಶವಾಗುವಿರಿ” ಎಂದು ಹೇಳಿದನು.

18 ಆದರೆ ಲೋಟನು ಆ ಪುರುಷರಿಗೆ, “ಸ್ವಾಮಿಗಳೇ, ದಯವಿಟ್ಟು ಬಹುದೂರದವರೆಗೆ ಓಡಿಹೋಗುವಂತೆ ನಮ್ಮನ್ನು ಒತ್ತಾಯಿಸಬೇಡಿ. 19 ನಿಮ್ಮ ಸೇವಕನಾದ ನನಗೆ ಮಹಾಕರುಣೆಯನ್ನು ತೋರಿ ನನ್ನನ್ನು ಕಾಪಾಡಿದ್ದೀರಿ. ಆದರೆ ನಾನು ಬೆಟ್ಟಗಳವರೆಗೂ ಓಡಿಹೋಗಲಾರೆ. ನಾನು ನಿಧಾನವಾಗಿ ಹೋಗುವುದಾದರೆ ಕೇಡು ಸಂಭವಿಸಿ ಕೊಲ್ಲಲ್ಪಡುವೆನು. 20 ಅಗೋ, ಅಲ್ಲಿ ಒಂದು ಚಿಕ್ಕ ಊರಿದೆ. ಆ ಊರಿಗೆ ಓಡಿಹೋಗಲು ನನಗೆ ಅಪ್ಪಣೆಕೊಡಿ. ನಾನು ಅಲ್ಲಿಗೆ ಓಡಿಹೋಗಿ ಸುರಕ್ಷಿತವಾಗಿರುವೆನು” ಎಂದು ಹೇಳಿದನು.

21 ಆ ಪುರುಷನು ಲೋಟನಿಗೆ, “ಆಗಲಿ, ನಿನಗೆ ಅಪ್ಪಣೆ ಕೊಟ್ಟಿದ್ದೇನೆ. ನಾನು ಆ ಊರನ್ನು ನಾಶಮಾಡುವುದಿಲ್ಲ. 22 ಆದರೆ ಅಲ್ಲಿಗೆ ಬೇಗನೆ ಓಡಿಹೋಗು, ನೀನು ಆ ಊರಿಗೆ ಸುರಕ್ಷಿತವಾಗಿ ಸೇರುವತನಕ ನಾನು ಸೊದೋಮನ್ನು ನಾಶಗೊಳಿಸಲಾಗುವುದಿಲ್ಲ” ಎಂದು ಹೇಳಿದನು. (ಆ ಊರಿಗೆ ಚೋಗರ್ ಎಂದು ಕರೆಯಲಾಯಿತು; ಯಾಕೆಂದರೆ ಅದು ಚಿಕ್ಕ ಊರು.)

ಸೊದೋಮ್ ಮತ್ತು ಗೊಮೋರ ಪಟ್ಟಣಗಳ ನಾಶನ

23 ಸೂರ್ಯೋದಯವಾಗುವಷ್ಟರಲ್ಲಿ ಲೋಟನು ಚೋಗರಿಗೆ ಪ್ರವೇಶಿಸುತ್ತಿದ್ದನು. 24 ಆಗ ಯೆಹೋವನು ಸೊದೋಮ್ ಮತ್ತು ಗೊಮೋರ ಪಟ್ಟಣಗಳ ಮೇಲೆ ಆಕಾಶದಿಂದ ಉರಿಯುವ ಗಂಧಕದ ಮಳೆಯನ್ನು ಸುರಿಸಿದನು. 25 ಹೀಗೆ ಯೆಹೋವನು ಆ ಎರಡು ನಗರಗಳನ್ನು ನಾಶಮಾಡಿದನು; ಇಡೀ ಕಣಿವೆಯನ್ನೂ ಅದರಲ್ಲಿ ಬೆಳೆಯುತ್ತಿದ್ದ ಸಸ್ಯಗಳನ್ನೂ ನಗರಗಳಲ್ಲಿದ್ದ ಎಲ್ಲಾ ಜನರನ್ನೂ ನಾಶಮಾಡಿದನು.

26 ಅವರು ಓಡಿಹೋಗುತ್ತಿರುವಾಗ ಲೋಟನ ಹೆಂಡತಿ ನಗರದ ಕಡೆಗೆ ಹಿಂತಿರುಗಿ ನೋಡಿದಳು. ಆ ಕೂಡಲೇ ಆಕೆಯು ಉಪ್ಪಿನ ಕಂಬವಾದಳು.

27 ಅಂದು ಮುಂಜಾನೆ ಅಬ್ರಹಾಮನು ಎದ್ದು ತಾನು ಯೆಹೋವನ ಮುಂದೆ ನಿಂತುಕೊಂಡಿದ್ದ ಸ್ಥಳಕ್ಕೆ ಹೋದನು. 28 ಅಬ್ರಹಾಮನು ಸೊದೋಮ್ ಮತ್ತು ಗೊಮೋರ ಪಟ್ಟಣಗಳ ಕಡೆಗೂ ಕಣಿವೆ ಪ್ರದೇಶದ ಕಡೆಗೂ ನೋಡಿದಾಗ ಆ ಪ್ರದೇಶದಿಂದ ಹೊಗೆ ಮೇಲೇರುತ್ತಿರುವುದನ್ನು ಕಂಡನು; ಧಗಧಗಿಸುವ ಬೆಂಕಿಯಿಂದ ಬರುವ ಹೊಗೆಯಂತೆ ಅದು ಕಂಡಿತು.

29 ದೇವರು ಆ ಸೀಮೆಯ ನಗರಗಳನ್ನು ನಾಶಮಾಡಿದರೂ ಅಬ್ರಹಾಮನನ್ನು ಜ್ಞಾಪಿಸಿಕೊಂಡು ಲೋಟನ ಪ್ರಾಣವನ್ನು ಉಳಿಸಿದನು; ಆದರೆ ಲೋಟನು ವಾಸಿಸುತ್ತಿದ್ದ ನಗರವನ್ನು ನಾಶಮಾಡಿದನು.

ಲೋಟ ಮತ್ತು ಅವನ ಹೆಣ್ಣುಮಕ್ಕಳು

30 ಚೋಗರ್ ಊರಿನಲ್ಲಿ ವಾಸಮಾಡಿಕೊಂಡಿರಲು ಲೋಟನಿಗೆ ಹೆದರಿಕೆಯಾಯಿತು. ಆದ್ದರಿಂದ ಅವನು ಮತ್ತು ಅವನ ಹೆಣ್ಣುಮಕ್ಕಳು ಬೆಟ್ಟಪ್ರದೇಶಕ್ಕೆ ಹೋಗಿ ಗುಹೆಯೊಂದರಲ್ಲಿ ವಾಸಿಸತೊಡಗಿದರು. 31 ಒಂದು ದಿನ ಹಿರಿಯ ಮಗಳು ತನ್ನ ತಂಗಿಗೆ, “ಭೂಲೋಕದಲ್ಲೆಲ್ಲಾ ಸ್ತ್ರೀಯರೂ ಪುರುಷರೂ ಮದುವೆಯಾಗುತ್ತಾರೆ. ಆದರೆ ಇಲ್ಲಿ ನಾವು ಮದುವೆಯಾಗಲು ಯಾವ ಗಂಡಸರೂ ಇಲ್ಲ. ನಮ್ಮ ತಂದೆಗೂ ವಯಸ್ಸಾಗಿದೆ. 32 ಆದರೆ ನಾವು ಮಕ್ಕಳನ್ನು ನಮ್ಮ ತಂದೆಯಿಂದಲೇ ಪಡೆದುಕೊಳ್ಳೋಣ. ಆಗ ನಮ್ಮ ಕುಟುಂಬ ಕೊನೆಗೊಳ್ಳುವುದಿಲ್ಲ. ನಮ್ಮ ತಂದೆಯನ್ನು ಮತ್ತನನ್ನಾಗಿ ಮಾಡಿ ಅವನೊಂದಿಗೆ ಮಲಗಿಕೊಳ್ಳೋಣ” ಎಂದು ಹೇಳಿದಳು.

33 ಆ ರಾತ್ರಿ ಅವರು ತಮ್ಮ ತಂದೆಗೆ ದ್ರಾಕ್ಷಾರಸವನ್ನು ಕುಡಿಸಿ ಅಮಲೇರಿಸಿದರು. ಬಳಿಕ ಹಿರಿಯ ಮಗಳು ತನ್ನ ತಂದೆಯ ಹಾಸಿಗೆಗೆ ಹೋಗಿ ಅವನೊಂದಿಗೆ ಮಲಗಿಕೊಂಡಳು. ಲೋಟನು ಮತ್ತನಾಗಿದ್ದುದರಿಂದ ಆಕೆ ಅವನೊಂದಿಗೆ ಮಲಗಿಕೊಂಡದ್ದು ಅವನಿಗೆ ತಿಳಿಯಲಿಲ್ಲ.

34 ಮರುದಿನ, ಹಿರಿಯ ಮಗಳು ತನ್ನ ತಂಗಿಗೆ, “ಕಳೆದ ರಾತ್ರಿ ನಾನು ನನ್ನ ತಂದೆಯೊಂದಿಗೆ ಮಲಗಿಕೊಂಡೆ. ಈ ರಾತ್ರಿಯೂ ಅವನನ್ನು ದ್ರಾಕ್ಷಾರಸ ಕುಡಿಸಿ ಅಮಲೇರಿಸೋಣ. ಆಮೇಲೆ ನೀನು ಹಾಸಿಗೆಯ ಮೇಲೆ ಅವನೊಂದಿಗೆ ಮಲಗಿಕೊಳ್ಳಬಹುದು. ಹೀಗೆ ನಾವು ಮಕ್ಕಳನ್ನು ನಮ್ಮ ತಂದೆಯಿಂದಲೇ ಪಡೆದುಕೊಳ್ಳೋಣ” ಎಂದು ಹೇಳಿದಳು. 35 ಆ ರಾತ್ರಿಯೂ ಅವರು ತಮ್ಮ ತಂದೆಗೆ ದ್ರಾಕ್ಷಾರಸವನ್ನು ಕುಡಿಸಿ ಅಮಲೇರಿಸಿದರು. ಆಮೇಲೆ ಚಿಕ್ಕಮಗಳು ಅವನ ಹಾಸಿಗೆಗೆ ಹೋಗಿ ಅವನೊಂದಿಗೆ ಮಲಗಿಕೊಂಡಳು. ಆಕೆ ಮಲಗಿಕೊಂಡದ್ದು ಲೋಟನಿಗೆ ತಿಳಿಯಲಿಲ್ಲ.

36 ಹೀಗೆ ಲೋಟನ ಇಬ್ಬರು ಹೆಣ್ಣುಮಕ್ಕಳು ತಂದೆಯಿಂದಲೇ ಗರ್ಭಧರಿಸಿದರು. 37 ಹಿರಿಯ ಮಗಳು ಗಂಡುಮಗನನ್ನು ಹೆತ್ತಳು. ಆಕೆ ಅವನಿಗೆ ಮೋವಾಬ್ ಎಂದು ಹೆಸರಿಟ್ಟಳು. ಈಗ ಜೀವಿಸುತ್ತಿರುವ ಎಲ್ಲಾ ಮೋವಾಬ್ಯರಿಗೆ ಮೋವಾಬನೇ ಮೂಲಪುರುಷ. 38 ಚಿಕ್ಕಮಗಳು ಸಹ ಗಂಡುಮಗುವನ್ನು ಹೆತ್ತಳು. ಆಕೆ ತನ್ನ ಮಗನಿಗೆ ಬೆನಮ್ಮಿ ಎಂದು ಹೆಸರಿಟ್ಟಳು. ಈಗ ಜೀವಿಸುತ್ತಿರುವ ಅಮ್ಮೋನಿಯರಿಗೆ ಬೆನಮ್ಮಿಯೇ ಮೂಲಪುರುಷ.

ಮತ್ತಾಯ 6:1-18

ಕೊಡುವುದರ ಕುರಿತು ಯೇಸುವಿನ ಉಪದೇಶ

“ಎಚ್ಚರವಾಗಿರಿ! ನೀವು ಒಳ್ಳೆಯ ಕಾರ್ಯಗಳನ್ನು ಜನರ ಮುಂದೆ ಮಾಡಬೇಡಿ. ಜನರು ನೋಡಲೆಂದು ನೀವು ಅವುಗಳನ್ನು ಮಾಡಿದರೆ ಪರಲೋಕದಲ್ಲಿರುವ ನಿಮ್ಮ ತಂದೆಯಿಂದ ನಿಮಗೆ ಪ್ರತಿಫಲ ದೊರೆಯುವುದಿಲ್ಲ.

“ನೀವು ಬಡಜನರಿಗೆ ಮಾಡುವ ದಾನವನ್ನು ಪ್ರಕಟಿಸಬೇಡಿ. ನೀವು ಕಪಟಿಗಳಂತೆ ಮಾಡಕೂಡದು. ತಾವು ಮಾಡುವ ದಾನವನ್ನು ಜನರಿಗೆ ತೋರಿಸಿಕೊಳ್ಳುವುದಕ್ಕಾಗಿ ಕಪಟಿಗಳು ಸಭಾಮಂದಿರಗಳಲ್ಲಿ ಮತ್ತು ಬೀದಿಗಳಲ್ಲಿ ತುತ್ತೂರಿ ಊದಿಸುತ್ತಾರೆ. ಜನರಿಂದ ಗೌರವ ಪಡೆಯಬೇಕೆಂಬುದೇ ಅವರ ಉದ್ದೇಶ. ಆದ್ದರಿಂದ ನೀವು ಬಡಜನರಿಗೆ ಕೊಡುವಾಗ ಬಹಳ ಗುಟ್ಟಾಗಿ ಕೊಡಿ. ನೀವು ಮಾಡುವಂಥದ್ದು ಯಾರಿಗೂ ತಿಳಿಯದಿರಲಿ. ನೀವು ದಾನವನ್ನು ರಹಸ್ಯವಾಗಿ ಕೊಡಬೇಕು. ರಹಸ್ಯದಲ್ಲಿ ನಡೆಯುವ ಕಾರ್ಯಗಳನ್ನು ನೋಡಬಲ್ಲ ನಿಮ್ಮ ತಂದೆ ನಿಮಗೆ ಪ್ರತಿಫಲ ಕೊಡುವನು.

ಪ್ರಾರ್ಥನೆಯ ಕುರಿತು ಯೇಸುವಿನ ಉಪದೇಶ

(ಲೂಕ 11:2-4)

“ನೀವು ಪ್ರಾರ್ಥಿಸುವಾಗ ಕಪಟಿಗಳ ಹಾಗೆ ಪ್ರಾರ್ಥಿಸಬೇಡಿ. ಕಪಟಿಗಳು ಸಭಾಮಂದಿರಗಳಲ್ಲಿ ಮತ್ತು ಬೀದಿಯ ಮೂಲೆಗಳಲ್ಲಿ ನಿಂತುಕೊಂಡು ಗಟ್ಟಿಯಾಗಿ ಪ್ರಾರ್ಥಿಸಲು ಇಷ್ಟಪಡುತ್ತಾರೆ. ತಾವು ಪ್ರಾರ್ಥಿಸುವುದನ್ನು ಜನರು ನೋಡಬೇಕೆಂಬುದೇ ಅವರ ಬಯಕೆ. ಅವರು ಆಗಲೇ ಅದರ ಪೂರ್ಣ ಪ್ರತಿಫಲವನ್ನು ಹೊಂದಿಕೊಂಡಾಯಿತೆಂದು ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ. ನೀವು ಪ್ರಾರ್ಥನೆ ಮಾಡಬೇಕಾದರೆ, ನಿಮ್ಮ ಕೋಣೆಯೊಳಗೆ ಹೋಗಿ ಬಾಗಿಲನ್ನು ಮುಚ್ಚಿಕೊಂಡು ನಿಮಗೆ ಕಾಣದಿರುವ ನಿಮ್ಮ ತಂದೆಗೆ ಪ್ರಾರ್ಥಿಸಿ. ರಹಸ್ಯದಲ್ಲಿ ನಡೆಯುವ ಕಾರ್ಯಗಳನ್ನು ನೋಡಬಲ್ಲ ನಿಮ್ಮ ತಂದೆಯು ನಿಮಗೆ ಪ್ರತಿಫಲವನ್ನು ಕೊಡುವನು.

“ನೀವು ಪ್ರಾರ್ಥಿಸುವಾಗ ದೇವರನ್ನು ತಿಳಿದಿಲ್ಲದ ಜನರಂತೆ ಪ್ರಾರ್ಥಿಸಬೇಡಿ. ಅವರು ಅರ್ಥವಿಲ್ಲದ ಸಂಗತಿಗಳನ್ನು ಹೇಳುತ್ತಲೇ ಇರುತ್ತಾರೆ. ಆ ರೀತಿ ಪ್ರಾರ್ಥಿಸಬೇಡಿ. ತಾವು ಅನೇಕ ವಿಷಯಗಳನ್ನು ಹೇಳುವುದರಿಂದ ದೇವರು ತಮ್ಮ ಪ್ರಾರ್ಥನೆಯನ್ನು ಕೇಳುತ್ತಾನೆಂಬುದು ಅವರ ಆಲೋಚನೆ. ನೀವು ಅವರಂತಾಗಬೇಡಿ. ನೀವು ಕೇಳುವುದಕ್ಕೆ ಮೊದಲೇ ನಿಮಗೆ ಏನೇನು ಬೇಕು ಎಂಬುದು ನಿಮ್ಮ ತಂದೆಗೆ ತಿಳಿದಿದೆ. ಆದ್ದರಿಂದ ನೀವು ಹೀಗೆ ಪ್ರಾರ್ಥಿಸಿರಿ:

‘ಪರಲೋಕದಲ್ಲಿರುವ ನಮ್ಮ ತಂದೆಯೇ,
    ನಿನ್ನ ಹೆಸರು ಪರಿಶುದ್ಧವಾಗಿರಲಿ.
10 ನಿನ್ನ ರಾಜ್ಯ ಬರಲಿ.
    ನಿನ್ನ ಚಿತ್ತ ಪರಲೋಕದಲ್ಲಿ ನೆರವೇರುವಂತೆ ಭೂಲೋಕದಲ್ಲಿಯೂ ನೆರವೇರಲಿ.
11 ನಮ್ಮ ಅನುದಿನದ ಆಹಾರವನ್ನು ಈ ಹೊತ್ತು ನಮಗೆ ದಯಪಾಲಿಸು.
12 ನಮಗೆ ತಪ್ಪು ಮಾಡಿದವರನ್ನು ನಾವು ಕ್ಷಮಿಸಿದಂತೆಯೇ
    ನಮ್ಮ ಪಾಪಗಳನ್ನು ಕ್ಷಮಿಸು.
13 ನಮ್ಮನ್ನು ಶೋಧನೆಗೆ ಒಳಪಡಿಸದೆ
    ಕೆಡುಕನಿಂದ (ಸೈತಾನನಿಂದ) ನಮ್ಮನ್ನು ರಕ್ಷಿಸು.’

14 ಹೌದು, ಬೇರೆಯವರು ನಿಮಗೆ ಮಾಡಿದ ತಪ್ಪುಗಳನ್ನು ನೀವು ಕ್ಷಮಿಸಿದರೆ, ಪರಲೋಕದಲ್ಲಿರುವ ನಿಮ್ಮ ತಂದೆಯೂ ನಿಮ್ಮ ತಪ್ಪುಗಳನ್ನು ಕ್ಷಮಿಸುತ್ತಾನೆ. 15 ಆದರೆ ಜನರು ನಿಮಗೆ ಮಾಡಿದ ತಪ್ಪುಗಳನ್ನು ನೀವು ಕ್ಷಮಿಸದಿದ್ದರೆ, ಪರಲೋಕದಲ್ಲಿರುವ ನಿಮ್ಮ ತಂದೆಯು ಸಹ ನಿಮ್ಮ ತಪ್ಪುಗಳನ್ನು ಕ್ಷಮಿಸುವುದಿಲ್ಲ.

ಉಪವಾಸದ ಕುರಿತು ಯೇಸುವಿನ ಉಪದೇಶ

16 “ನೀವು ಉಪವಾಸ ಮಾಡುವಾಗ ನಿಮ್ಮ ಮುಖವನ್ನು ಸಪ್ಪಗೆ ಮಾಡಿಕೊಳ್ಳಬೇಡಿ. ಕಪಟಿಗಳು ಹಾಗೆ ಮಾಡುತ್ತಾರೆ. ಆದರೆ ನೀವು ಕಪಟಿಗಳಂತಿರಬೇಡಿ. ತಾವು ಉಪವಾಸ ಮಾಡುತ್ತಿರುವುದಾಗಿ ಜನರಿಗೆ ತೋರ್ಪಡಿಸಿಕೊಳ್ಳಲು ಅವರು ತಮ್ಮ ಮುಖಗಳನ್ನು ವಿಕಾರಮಾಡಿಕೊಳ್ಳುತ್ತಾರೆ. ಆ ಕಪಟಿಗಳು ತಮಗೆ ಬರತಕ್ಕ ಪ್ರತಿಫಲವನ್ನು ಸಂಪೂರ್ಣವಾಗಿ ಹೊಂದಾಯಿತೆಂದು ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ. 17 ಆದ್ದರಿಂದ ನೀವು ಉಪವಾಸ ಮಾಡುವಾಗ, ಮುಖವನ್ನು ತೊಳೆದುಕೊಳ್ಳಿರಿ; ತಲೆಗೆ ಎಣ್ಣೆಯನ್ನು ಹಚ್ಚಿಕೊಳ್ಳಿರಿ. 18 ಆಗ ನೀವು ಉಪವಾಸ ಮಾಡುತ್ತಿದ್ದೀರೆಂದು ಜನರಿಗೆ ಗೊತ್ತಾಗುವುದಿಲ್ಲ. ಆದರೆ ನಿಮಗೆ ಅಗೋಚರವಾಗಿರುವ ನಿಮ್ಮ ತಂದೆಯು ನಿಮ್ಮನ್ನು ನೋಡುತ್ತಾನೆ. ರಹಸ್ಯದಲ್ಲಿ ನಡೆಯುವ ಸಂಗತಿಗಳನ್ನು ನೋಡಬಲ್ಲ ನಿಮ್ಮ ತಂದೆಯು ನಿಮಗೆ ಪ್ರತಿಫಲವನ್ನು ಕೊಡುತ್ತಾನೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International