Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಆದಿಕಾಂಡ 10-12

ಜನಾಂಗಗಳ ಬೆಳವಣಿಗೆ ಮತ್ತು ವಿಸ್ತರಣೆ

10 ನೋಹನ ಗಂಡುಮಕ್ಕಳು: ಶೇಮ್, ಹಾಮ್ ಮತ್ತು ಯೆಫೆತ್. ಜಲಪ್ರಳಯದ ನಂತರ ಈ ಮೂವರು ಅನೇಕ ಗಂಡುಮಕ್ಕಳನ್ನು ಪಡೆದರು. ಶೇಮನಿಗೂ ಹಾಮನಿಗೂ ಯೆಫೆತನಿಗೂ ಹುಟ್ಟಿದ ಗಂಡುಮಕ್ಕಳು:

ಯೆಫೆತನ ಸಂತತಿಯವರು

ಯೆಫೆತನ ಗಂಡುಮಕ್ಕಳು: ಗೋಮೆರ್, ಮಾಗೋಗ್, ಮಾದಯ್, ಯಾವಾನ್, ತೂಬಲ್, ಮೆಷೆಕ್ ಮತ್ತು ತೀರಾಸ್.

ಗೋಮೆರನ ಗಂಡುಮಕ್ಕಳು: ಅಷ್ಕೆನಸ್, ರೀಫತ್ ಮತ್ತು ತೋಗರ್ಮ.

ಯಾವಾನನ ಗಂಡುಮಕ್ಕಳು: ಎಲೀಷಾ, ತಾರ್ಷೀಸ್, ಕಿತ್ತೀಮ್ ಮತ್ತು ದೋದಾನೀಮ್.

ತೀರ ಪ್ರದೇಶದ[a] ಜನರೆಲ್ಲರು ಯೆಫೆತನ ಮಕ್ಕಳ ಸಂತಾನಕ್ಕೆ ಸೇರಿದವರು. ಅವನ ಪ್ರತಿಯೊಬ್ಬ ಮಗನಿಗೂ ಸ್ವಂತ ಭೂಮಿ ಇತ್ತು. ಅವರೆಲ್ಲರ ಕುಟುಂಬಗಳು ವೃದ್ಧಿಗೊಂಡು ಅನೇಕ ಜನಾಂಗಗಳಾದವು. ಪ್ರತಿಯೊಂದು ಜನಾಂಗಕ್ಕೂ ಸ್ವಂತ ಭಾಷೆಯಿತ್ತು.

ಹಾಮನ ಸಂತತಿಯವರು

ಹಾಮನ ಗಂಡುಮಕ್ಕಳು: ಕೂಷ್, ಮಿಚ್ರಯಿಮ್, ಪೂತ್ ಮತ್ತು ಕಾನಾನ್.

ಕೂಷನ ಗಂಡುಮಕ್ಕಳು: ಸೆಬಾ, ಹವೀಲ, ಸಬ್ತಾ, ರಗ್ಮ ಮತ್ತು ಸಬ್ತಕಾ.

ರಗ್ಮನ ಗಂಡುಮಕ್ಕಳು: ಶೆಬಾ ಮತ್ತು ದೆದಾನ್.

ಕೂಷನಿಗೆ ನಿಮ್ರೋದನೆಂಬ ಗಂಡುಮಗನಿದ್ದನು. ನಿಮ್ರೋದನು ಭೂಲೋಕದಲ್ಲಿ ಮಹಾಬಲಶಾಲಿಯಾಗಿದ್ದು ಮೊದಲನೆಯ ಭೂರಾಜನಾದನು. ಯೆಹೋವನ ಮುಂದೆ ಅವನು ಚತುರ ಬೇಟೆಗಾರನಾಗಿದ್ದನು. ಆದ್ದರಿಂದ ಜನರು ಬೇರೆಯವರನ್ನು ಅವನಿಗೆ ಹೋಲಿಸಿ, “ಅವನು ನಿಮ್ರೋದನಂತೆ, ಯೆಹೋವನ ಮುಂದೆ ಚತುರ ಬೇಟೆಗಾರ” ಎಂದು ಹೇಳುತ್ತಿದ್ದರು.

10 ನಿಮ್ರೋದನ ರಾಜ್ಯವು ಶಿನಾರ್ ದೇಶದಲ್ಲಿರುವ ಬಾಬಿಲೋನಿನಲ್ಲಿ, ಯೆರೆಕ್‌ನಲ್ಲಿ ಮತ್ತು ಅಕ್ಕದ್ ಮತ್ತು ಕಲ್ನೇ ಎಂಬ ಪಟ್ಟಣಗಳಲ್ಲಿ ಪ್ರಾರಂಭವಾಯಿತು. 11-12 ನಿಮ್ರೋದನು ಅಶ್ಶೂರಕ್ಕೂ ಹೋದನು. ಅಶ್ಶೂರದಲ್ಲಿ ನಿನೆವೆ, ರೆಹೋಬೋತೀರ್, ಕೆಲಹ ಮತ್ತು ರೆಸೆನ್ ಎಂಬ ಪಟ್ಟಣಗಳನ್ನು ಕಟ್ಟಿದನು. ರೆಸೆನ್ ಪಟ್ಟಣವು ನಿನೆವೆಗೂ ದೊಡ್ಡಪಟ್ಟಣವಾದ ಕೆಲಹಕ್ಕೂ ಮಧ್ಯದಲ್ಲಿದೆ.

13-14 ಮಿಚ್ರಯಿಮನು ಲೂದ್, ಅನಾಮ್, ಲೆಹಾಬ್, ನಪ್ತಹ್, ಪತ್ರುಸ್, ಕಸ್ಲುಹ್ಯ ಮತ್ತು ಕಪ್ತೋರ್ಯ ಎಂಬವರ ತಂದೆ. ಕಸ್ಲುಹ್ಯರು ಫಿಲಿಷ್ಟಿಯರ ಪಿತೃಗಳು.

15 ಕಾನಾನನು ಸೀದೋನನ ತಂದೆ. ಕಾನಾನನ ಮೊದಲನೆಯ ಮಗನೇ ಸೀದೋನ್. ಇವನು ಹಿತ್ತಿಯರ ಮೂಲಪಿತೃ. 16-18 ಕಾನಾನನು ಯೆಬೂಸಿಯರಿಗೆ, ಅಮೋರಿಯರಿಗೆ, ಗಿರ್ಗಾಷಿಯರಿಗೆ, ಹಿವ್ವಿಯರಿಗೆ, ಅರ್ಕಿಯರಿಗೆ, ಸೀನಿಯರಿಗೆ, ಅರ್ವಾದಿಯರಿಗೆ, ಚೆಮಾರಿಯರಿಗೆ ಮತ್ತು ಹಮಾತಿಯರಿಗೆ ಮೂಲಪುರುಷನು.

ಕಾನಾನನ ಕುಟುಂಬಗಳು ಪ್ರಪಂಚದ ನಾನಾ ಭಾಗಗಳಲ್ಲಿ ಹರಡಿಕೊಂಡಿದ್ದವು. 19 ಕಾನಾನ್ಯರ ಸೀಮೆಯು ಸೀದೋನಿನ ಉತ್ತರದಿಂದಿಡಿದು ಗೆರಾರಿನ ದಕ್ಷಿಣದವರೆಗೂ, ಗಾಜಾದಿಂದ ಪೂರ್ವದ ಸೊದೋಮ್ ಗೊಮೋರ ಪಟ್ಟಣಗಳವರೆಗೂ, ಅದ್ಮಾ ಮತ್ತು ಚೆಬೋಯಿಮ್‌ಗಳಿಂದ ಲೆಷಾದವರೆಗೆ ವಿಸ್ತರಿಸಿತ್ತು.

20 ಅವರೆಲ್ಲರೂ ಹಾಮನ ಸಂತತಿಯವರು. ಆ ಕುಟುಂಬಗಳವರೆಲ್ಲರು ತಮ್ಮ ಸ್ವಂತ ಭಾಷೆಗಳನ್ನು ಮತ್ತು ತಮ್ಮ ಸ್ವಂತ ನಾಡುಗಳನ್ನು ಹೊಂದಿದ್ದರು. ಅವುಗಳೆಲ್ಲ ಪ್ರತ್ಯೇಕ ಜನಾಂಗಗಳಾದರು.

ಶೇಮನ ಸಂತತಿಯವರು

21 ಶೇಮನು ಯೆಫೆತನ ಅಣ್ಣ. ಶೇಮನ ಸಂತತಿಯವರಲ್ಲಿ ಎಬರನೂ ಒಬ್ಬನು. ಎಬರನು ಹೀಬ್ರೂ ಜನರ ಮೂಲಪಿತೃ.

22 ಶೇಮನ ಗಂಡುಮಕ್ಕಳು: ಏಲಾಮ್, ಅಶ್ಶೂರ್, ಅರ್ಪಕ್ಷದ್, ಲೂದ್ ಮತ್ತು ಅರಾಮ್.

23 ಅರಾಮನ ಗಂಡುಮಕ್ಕಳು: ಊಸ್, ಹೂಲ್, ಗೆತೆರ್ ಮತ್ತು ಮಷ್.

24 ಅರ್ಪಕ್ಷದನು ಶೆಲಹನ ತಂದೆ,

ಶೆಲಹನು ಎಬರನ ತಂದೆ.

25 ಎಬರನಿಗೆ ಇಬ್ಬರು ಗಂಡುಮಕ್ಕಳಿದ್ದರು. ಮೊದಲನೆಯ ಮಗನು ಹುಟ್ಟಿದ ಕಾಲದಲ್ಲಿ ಭೂಮಿಯ ಜನಾಂಗಗಳು ವಿಂಗಡವಾದದ್ದರಿಂದ ಅವನಿಗೆ ಪೆಲೆಗ್ ಎಂದು ಹೆಸರಿಟ್ಟನು; ಎರಡನೆಯ ಮಗನ ಹೆಸರು ಯೊಕ್ತಾನ್.

26 ಯೊಕ್ತಾನನ ಗಂಡುಮಕ್ಕಳು: ಅಲ್ಮೋದಾದ್, ಶೆಲೆಪ್, ಹಚರ್ಮಾವೆತ್ ಮತ್ತು ಯೆರಹ, 27 ಹದೋರಾಮ್, ಊಜಾಲ್, ದಿಕ್ಲಾ. 28 ಓಬಾಲ್, ಅಬೀಮಯೇಲ್, ಶೆಬಾ, 29 ಓಫೀರ್, ಹವೀಲ ಮತ್ತು ಯೋಬಾಬ್. 30 ಇವರೆಲ್ಲರೂ ಮೇಶಾ ಸೀಮೆಯನ್ನು ಮೊದಲುಗೊಂಡು ಪೂರ್ವದ ಬೆಟ್ಟಗುಡ್ಡದ ಪ್ರದೇಶದಲ್ಲಿ ವಾಸಿಸಿದರು. ಸೆಫಾರಿಗೆ ಹೋಗುವ ದಿಕ್ಕಿನಲ್ಲಿ ಮೇಶಾ ಸೀಮೆಯಿತ್ತು.

31 ಇವರೆಲ್ಲರೂ ಶೇಮನ ಕುಟುಂಬಕ್ಕೆ ಸೇರಿದವರು. ಇವರೆಲ್ಲರು ಕುಟುಂಬಾನುಸಾರವಾಗಿಯೂ ಭಾಷಾನುಸಾರವಾಗಿಯೂ ದೇಶಾನುಸಾರವಾಗಿಯೂ ಜನಾಂಗಗಳಿಗನುಸಾರವಾಗಿಯೂ ಹರಡಿಕೊಂಡಿದ್ದರು.

32 ನೋಹನ ಗಂಡುಮಕ್ಕಳಿಂದ ಉಂಟಾದ ವಂಶಗಳವರ ಪಟ್ಟಿಯಿದು. ಅವರು ತಮ್ಮ ಜನಾಂಗಗಳಿಗನುಸಾರವಾಗಿ ಹರಡಿಕೊಂಡಿದ್ದರು. ಜಲಪ್ರಳಯದ ನಂತರ ಭೂಮಿಯಲ್ಲೆಲ್ಲಾ ಹರಡಿಕೊಂಡವರು ಈ ವಂಶಗಳವರೇ.

ಪ್ರಪಂಚದ ವಿಭಜನೆ

11 ಜಲಪ್ರಳಯದ ನಂತರ ಇಡೀ ಪ್ರಪಂಚದ ಜನರು ಒಂದೇ ಭಾಷೆಯನ್ನು ಮಾತಾಡುತ್ತಿದ್ದರು. ಎಲ್ಲಾ ಜನರು ಒಂದೇ ಭಾಷೆಯ ಪದಗಳನ್ನು ಬಳಸುತ್ತಿದ್ದರು. ಜನರು ಪೂರ್ವದಿಕ್ಕಿನಿಂದ ಪ್ರಯಾಣಮಾಡಿ ಶಿನಾರ್ ಪ್ರದೇಶದಲ್ಲಿ ಬಯಲು ಸೀಮೆಯನ್ನು ಕಂಡು ಅಲ್ಲೇ ಉಳಿದುಕೊಂಡರು. ಅವರು ಒಬ್ಬರಿಗೊಬ್ಬರು ಮಾತಾಡುತ್ತಾ, “ಬನ್ನಿ, ಒಳ್ಳೆಯ ಸುಟ್ಟ ಇಟ್ಟಿಗೆಗಳನ್ನು ಮಾಡೋಣ” ಎಂದು ನಿರ್ಧರಿಸಿದರು. ಅವರು ತಮ್ಮ ಮನೆಗಳನ್ನು ಕಟ್ಟಲು ಕಲ್ಲುಗಳ ಬದಲಾಗಿ ಇಟ್ಟಿಗೆಗಳನ್ನೂ ಗಾರೆಗೆ ಬದಲಾಗಿ ಕಲ್ಲರಗನ್ನೂ ಉಪಯೋಗಿಸಿದರು.

ಬಳಿಕ ಅವರು, “ನಾವು ನಮಗಾಗಿ ಒಂದು ಪಟ್ಟಣವನ್ನೂ ಆಕಾಶವನ್ನು ಮುಟ್ಟುವಂಥ ಗೋಪುರವನ್ನೂ ಕಟ್ಟಿದರೆ ನಾವು ಪ್ರಸಿದ್ಧರಾಗುತ್ತೇವೆ. ಆಗ ನಾವು ಭೂಮಿಯಲ್ಲೆಲ್ಲಾ ಚದರಿಹೋಗದೆ ಒಂದೇ ಸ್ಥಳದಲ್ಲಿ ವಾಸಿಸಲು ಸಾಧ್ಯವಾಗುತ್ತದೆ” ಎಂದು ಮಾತಾಡಿಕೊಂಡರು.

ಯೆಹೋವನು ಪಟ್ಟಣವನ್ನೂ ಗೋಪುರವನ್ನೂ ನೋಡಲು ಇಳಿದುಬಂದನು. ಜನರು ಅವುಗಳನ್ನು ಕಟ್ಟುತ್ತಿರುವುದನ್ನು ಕಂಡು ಯೆಹೋವನು, “ಈ ಜನರೆಲ್ಲರು ಒಂದೇ ಭಾಷೆಯನ್ನು ಮಾತಾಡುವುದರಿಂದ ಒಟ್ಟಾಗಿ ಸೇರಿಕೊಂಡಿದ್ದಾರೆ. ಪ್ರಾರಂಭದಲ್ಲೇ ಇಂಥ ಕಾರ್ಯವನ್ನು ಮಾಡುತ್ತಿರುವ ಇವರು ಮುಂದೆ ಏನು ಬೇಕಾದರೂ ಮಾಡಲು ಶಕ್ತರಾಗುವರು. ಆದ್ದರಿಂದ ನಾವು ಕೆಳಗೆ ಹೋಗಿ ಅವರ ಭಾಷೆಯನ್ನು ತಾರುಮಾರು ಮಾಡೋಣ; ಆಗ ಅವರು ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವುದಿಲ್ಲ” ಎಂದು ಹೇಳಿದನು.

ಅಂತೆಯೇ ಯೆಹೋವನು ಜನರನ್ನು ಭೂಮಿಯ ಮೇಲೆಲ್ಲಾ ಚದರಿಸಿಬಿಟ್ಟನು. ಆದ್ದರಿಂದ ಆ ಪಟ್ಟಣವನ್ನು ಕಟ್ಟಿ ಪೂರೈಸಲು ಅವರಿಗೆ ಸಾಧ್ಯವಾಗಲಿಲ್ಲ. ಯೆಹೋವನು ಇಡೀ ಲೋಕದ ಭಾಷೆಯನ್ನು ತಾರುಮಾರು ಮಾಡಿದ್ದು ಆ ಸ್ಥಳದಲ್ಲೇ. ಆದ್ದರಿಂದ ಆ ಸ್ಥಳಕ್ಕೆ ಬಾಬಿಲೋನ್ ಎಂದು ಹೆಸರಾಯಿತು. ಹೀಗೆ ಯೆಹೋವನು ಜನರನ್ನು ಆ ಸ್ಥಳದಿಂದ ಭೂಮಿಯಲ್ಲೆಲ್ಲಾ ಚದರಿಸಿಬಿಟ್ಟನು.

ಶೇಮನ ಕುಟುಂಬ ಚರಿತ್ರೆ

10 ಇದು ಶೇಮನ ಕುಟುಂಬ ಚರಿತ್ರೆ. ಜಲಪ್ರಳಯದ ಎರಡು ವರ್ಷಗಳ ನಂತರ ಶೇಮನು 100 ವರ್ಷದವನಾಗಿದ್ದಾಗ ಅರ್ಪಕ್ಷದ್ ಎಂಬ ಮಗನನ್ನು ಪಡೆದನು. 11 ಆ ಬಳಿಕ ಶೇಮನು 500 ವರ್ಷ ಬದುಕಿದ್ದನು. ಅವನು ಇತರ ಗಂಡು ಮತ್ತು ಹೆಣ್ಣುಮಕ್ಕಳನ್ನು ಪಡೆದನು.

12 ಅರ್ಪಕ್ಷದನು 35 ವರ್ಷದವನಾಗಿದ್ದಾಗ ಶೆಲಹ ಎಂಬ ಮಗನನ್ನು ಪಡೆದನು. 13 ಶೆಲಹನು ಜನಿಸಿದ ಮೇಲೆ ಅರ್ಪಕ್ಷದನು 403 ವರ್ಷ ಬದುಕಿದ್ದನು. ಆ ಅವಧಿಯಲ್ಲಿ ಅವನು ಇತರ ಗಂಡು ಮತ್ತು ಹೆಣ್ಣುಮಕ್ಕಳನ್ನು ಪಡೆದನು.

14 ಶೆಲಹನು 30 ವರ್ಷದವನಾಗಿದ್ದಾಗ ಎಬರ ಎಂಬ ಮಗನನ್ನು ಪಡೆದನು. 15 ಎಬರನು ಹುಟ್ಟಿದ ಮೇಲೆ ಶೆಲಹನು 403 ವರ್ಷ ಬದುಕಿದ್ದನು. ಆ ಕಾಲದಲ್ಲಿ ಅವನು ಇತರ ಗಂಡು ಮತ್ತು ಹೆಣ್ಣುಮಕ್ಕಳನ್ನು ಪಡೆದನು.

16 ಎಬರನು 34 ವರ್ಷದವನಾಗಿದ್ದಾಗ ಪೆಲೆಗ ಎಂಬ ಮಗನನ್ನು ಪಡೆದನು. 17 ಪೆಲೆಗನು ಹುಟ್ಟಿದ ಮೇಲೆ ಎಬರನು 430 ವರ್ಷಕ್ಕಿಂತಲೂ ಹೆಚ್ಚು ವರ್ಷ ಬದುಕಿದ್ದನು. ಆ ಕಾಲದಲ್ಲಿ ಅವನು ಬೇರೆ ಗಂಡು ಮತ್ತು ಹೆಣ್ಣುಮಕ್ಕಳನ್ನು ಪಡೆದನು.

18 ಪೆಲೆಗನು 30 ವರ್ಷದವನಾಗಿದ್ದಾಗ ರೆಗೂವ ಎಂಬ ಮಗನನ್ನು ಪಡೆದನು. 19 ರೆಗೂವನು ಹುಟ್ಟಿದ ಮೇಲೆ ಪೆಲೆಗನು 209 ವರ್ಷ ಬದುಕಿದ್ದನು. ಆ ಕಾಲದಲ್ಲಿ ಅವನು ಬೇರೆ ಗಂಡು ಮತ್ತು ಹೆಣ್ಣುಮಕ್ಕಳನ್ನು ಪಡೆದನು.

20 ರೆಗೂವನು 32 ವರ್ಷದವನಾಗಿದ್ದಾಗ ಸೆರೂಗ ಎಂಬ ಮಗನನ್ನು ಪಡೆದನು. 21 ಸೆರೂಗನು ಹುಟ್ಟಿದ ಮೇಲೆ ರೆಗೂವನು 207 ವರ್ಷ ಬದುಕಿದ್ದನು. ಆ ಕಾಲದಲ್ಲಿ ಅವನು ಬೇರೆ ಗಂಡು ಮತ್ತು ಹೆಣ್ಣುಮಕ್ಕಳನ್ನು ಪಡೆದನು.

22 ಸೆರೂಗನು 30 ವರ್ಷದವನಾಗಿದ್ದಾಗ ನಾಹೋರ ಎಂಬ ಮಗನನ್ನು ಪಡೆದನು. 23 ನಾಹೋರನು ಹುಟ್ಟಿದ ಮೇಲೆ, ಸೆರೂಗನು 200 ವರ್ಷ ಬದುಕಿದ್ದನು. ಆ ಕಾಲದಲ್ಲಿ ಅವನು ಬೇರೆ ಗಂಡು ಮತ್ತು ಹೆಣ್ಣುಮಕ್ಕಳನ್ನು ಪಡೆದನು.

24 ನಾಹೋರನು 29 ವರ್ಷದವನಾಗಿದ್ದಾಗ ತೆರಹ ಎಂಬ ಮಗನನ್ನು ಪಡೆದನು. 25 ತೆರಹನು ಹುಟ್ಟಿದ ಮೇಲೆ ನಾಹೋರನು 119 ವರ್ಷ ಬದುಕಿದ್ದನು. ಆ ಕಾಲದಲ್ಲಿ ಅವನು ಬೇರೆ ಗಂಡು ಮತ್ತು ಹೆಣ್ಣುಮಕ್ಕಳನ್ನು ಪಡೆದನು.

26 ತೆರಹನು 70 ವರ್ಷದವನಾಗಿದ್ದಾಗ ಅಬ್ರಾಮ, ನಾಹೋರ, ಹಾರಾನ ಎಂಬ ಗಂಡುಮಕ್ಕಳನ್ನು ಪಡೆದನು.

ತೆರಹನ ಕುಟುಂಬ ಚರಿತ್ರೆ

27 ಇದು ತೆರಹನ ಕುಟುಂಬ ಚರಿತ್ರೆ. ತೆರಹನು ಅಬ್ರಾಮ, ನಾಹೋರ ಮತ್ತು ಹಾರಾನ ಎಂಬವರ ತಂದೆ. ಹಾರಾನನು ಲೋಟನ ತಂದೆ. 28 ಹಾರಾನನು ಬಾಬಿಲೋನಿನ ತನ್ನ ಸ್ವಂತ ಸ್ಥಳವಾದ ಊರ್ ಎಂಬಲ್ಲಿ ಸತ್ತುಹೋದನು. ಹಾರಾನನು ಸತ್ತಾಗ ಅವನ ತಂದೆ ಇನ್ನೂ ಜೀವಂತವಾಗಿದ್ದನು. 29 ಅಬ್ರಾಮ ಮತ್ತು ನಾಹೋರ ಮದುವೆ ಮಾಡಿಕೊಂಡರು. ಅಬ್ರಾಮನ ಹೆಂಡತಿಯ ಹೆಸರು ಸಾರಯಳು. ನಾಹೋರನ ಹೆಂಡತಿಯ ಹೆಸರು ಮಿಲ್ಕಾ. ಈಕೆಯು ಹಾರಾನನ ಮಗಳು. ಹಾರಾನನು ಮಿಲ್ಕಾ ಮತ್ತು ಇಸ್ಕ ಎಂಬವರ ತಂದೆ. 30 ಸಾರಯಳಿಗೆ ಮಕ್ಕಳಿರಲಿಲ್ಲ, ಯಾಕೆಂದರೆ, ಆಕೆ ಬಂಜೆಯಾಗಿದ್ದಳು.

31 ತೆರಹನು ತನ್ನ ಕುಟುಂಬವನ್ನು ಕರೆದುಕೊಂಡು ಬಾಬಿಲೋನಿನ ಊರ್ ಎಂಬ ಸ್ವಂತ ಸ್ಥಳದಿಂದ ಹೊರಟು ಕಾನಾನಿಗೆ ಪ್ರಯಾಣ ಮಾಡಿದನು. ತೆರಹನು ತನ್ನ ಮಗನಾದ ಅಬ್ರಾಮನನ್ನೂ ತನ್ನ ಮೊಮ್ಮಗನೂ ಹಾರಾನನಿಗೆ ಮಗನೂ ಆಗಿರುವ ಲೋಟನನ್ನೂ ಮತ್ತು ತನಗೆ ಸೊಸೆಯೂ ಅಬ್ರಾಮನ ಹೆಂಡತಿಯೂ ಆಗಿರುವ ಸಾರಯಳನ್ನೂ ಕರೆದುಕೊಂಡು ಹಾರಾನ್ ಪಟ್ಟಣಕ್ಕೆ ಹೋಗಿ ಅಲ್ಲೇ ವಾಸಿಸಲು ತೀರ್ಮಾನಿಸಿದನು. 32 ತೆರಹನು ಇನ್ನೂರೈದು ವರ್ಷ ಬದುಕಿ ಹಾರಾನಿನಲ್ಲಿ ಸತ್ತುಹೋದನು.

ದೇವರು ಅಬ್ರಾಮನನ್ನು ಕರೆದದ್ದು

12 ಯೆಹೋವನು ಅಬ್ರಾಮನಿಗೆ,

“ನಿನ್ನ ದೇಶವನ್ನೂ ನಿನ್ನ ಜನರನ್ನೂ ಬಿಟ್ಟು ಹೊರಡು.
ನಿನ್ನ ತಂದೆಯ ಕುಟುಂಬವನ್ನು ಬಿಟ್ಟು
    ನಾನು ತೋರಿಸುವ ದೇಶಕ್ಕೆ ಹೋಗು.
ನಾನು ನಿನ್ನನ್ನು ಆಶೀರ್ವದಿಸುವೆನು;
    ನಿನ್ನನ್ನು ದೊಡ್ಡ ಜನಾಂಗವನ್ನಾಗಿ ಮಾಡಿ
    ನಿನ್ನ ಹೆಸರನ್ನು ಪ್ರಖ್ಯಾತಿಪಡಿಸುವೆನು;
ನೀನು ಆಶೀರ್ವಾದದಾಯಕನಾಗುವಂತೆ[b] ಮಾಡುವೆನು.
ನಿನಗೆ ಒಳ್ಳೆಯದನ್ನು ಮಾಡುವವರನ್ನು ಆಶೀರ್ವದಿಸುವೆನು;
    ನಿನಗೆ ಕೇಡುಮಾಡುವವರನ್ನು ಶಿಕ್ಷಿಸುವೆನು.
ನಿನ್ನ ನಿಮಿತ್ತವಾಗಿ ಲೋಕದವರೆಲ್ಲರೂ
    ಆಶೀರ್ವಾದ ಹೊಂದುವರು” ಎಂದು ಹೇಳಿದನು.

ಕಾನಾನಿಗೆ ಅಬ್ರಾಮನ ಪ್ರಯಾಣ

ಆದ್ದರಿಂದ ಅಬ್ರಾಮನು ಯೆಹೋವನಿಗೆ ವಿಧೇಯನಾದನು. ಅವನು ಹಾರಾನ್ ಪಟ್ಟಣವನ್ನು ಬಿಟ್ಟು ಹೊರಟನು. ಅವನೊಡನೆ ಲೋಟನು ಸಹ ಹೋದನು. ಆಗ ಅಬ್ರಾಮನಿಗೆ ಎಪ್ಪತ್ತೈದು ವರ್ಷ ವಯಸ್ಸಾಗಿತ್ತು. ಅಬ್ರಾಮನು ಹಾರಾನ್ ಪಟ್ಟಣವನ್ನು ಬಿಟ್ಟು ಒಬ್ಬಂಟಿಗನಾಗಿ ಹೋಗಲಿಲ್ಲ. ಅಬ್ರಾಮನು ತನ್ನ ಹೆಂಡತಿಯಾದ ಸಾರಯಳನ್ನೂ ತನ್ನ ತಮ್ಮನ ಮಗನಾದ ಲೋಟನನ್ನೂ ತನ್ನೊಂದಿಗೆ ಕರೆದುಕೊಂಡು ಹೋದನು. ಹಾರಾನ್ ಪಟ್ಟಣದಲ್ಲಿ ತಮಗಿದ್ದ ಸ್ವತ್ತುಗಳನ್ನೆಲ್ಲ ಅವರು ತೆಗೆದುಕೊಂಡು ಹೋದರು. ಅಬ್ರಾಮನು ಹಾರಾನ್ ಪಟ್ಟಣದಲ್ಲಿ ಹೊಂದಿದ್ದ ಸೇವಕರು ಸಹ ಅವನೊಡನೆ ಹೋದರು. ಅಬ್ರಾಮನು ಮತ್ತು ಅವನ ಸಂಗಡಿಗರು ಹಾರಾನ್ ಪಟ್ಟಣವನ್ನು ಬಿಟ್ಟು ಕಾನಾನ್ ದೇಶಕ್ಕೆ ಪ್ರಯಾಣಮಾಡಿದರು. ಅಬ್ರಾಮನು ಕಾನಾನ್ ದೇಶದಲ್ಲಿ ಪ್ರಯಾಣವನ್ನು ಮುಂದುವರಿಸಿದನು. ಅವನು ಶೆಕೆಮ್ ನಗರವನ್ನು ತಲುಪಿ, ಅಲ್ಲಿಂದ ಮೋರೆ ಎಂಬ ದೊಡ್ಡ ಓಕ್ ಮರವಿದ್ದ ಸ್ಥಳಕ್ಕೆ ಬಂದನು. ಆ ಕಾಲದಲ್ಲಿ ಕಾನಾನ್ಯರು ಆ ದೇಶದಲ್ಲಿ ವಾಸವಾಗಿದ್ದರು.

ಯೆಹೋವನು ಅಬ್ರಾಮನಿಗೆ ಕಾಣಿಸಿಕೊಂಡು, “ನಿನ್ನ ಸಂತತಿಯವರಿಗೆ ಈ ದೇಶವನ್ನು ಕೊಡುವೆನು” ಎಂದು ಹೇಳಿದನು.

ಆ ಸ್ಥಳದಲ್ಲಿ ಯೆಹೋವನು ಅಬ್ರಾಮನಿಗೆ ಕಾಣಿಸಿಕೊಂಡನು. ಆದ್ದರಿಂದ ಅಬ್ರಾಮನು ಯೆಹೋವನನ್ನು ಆರಾಧಿಸುವುದಕ್ಕಾಗಿ ಅಲ್ಲಿ ಒಂದು ಯಜ್ಞವೇದಿಕೆಯನ್ನು ಕಟ್ಟಿದನು. ಆಮೇಲೆ ಅಬ್ರಾಮನು ಆ ಸ್ಥಳದಿಂದ ಹೊರಟು ಬೇತೇಲಿಗೆ ಪೂರ್ವದಲ್ಲಿರುವ ಗುಡ್ಡಗಳ ಬಳಿಗೆ ಪ್ರಯಾಣ ಮಾಡಿದನು. ಅಲ್ಲಿ ಅಬ್ರಾಮನು ತನ್ನ ಗುಡಾರಗಳನ್ನು ಹಾಕಿದನು. ಪಶ್ಚಿಮಕ್ಕೆ ಬೇತೇಲ್ ಪಟ್ಟಣವಿತ್ತು, ಪೂರ್ವಕ್ಕೆ ಆಯಿ ಪಟ್ಟಣವಿತ್ತು. ಆ ಸ್ಥಳದಲ್ಲಿ ಅವನು ಯೆಹೋವನಿಗೋಸ್ಕರ ಒಂದು ಯಜ್ಞವೇದಿಕೆಯನ್ನು ಕಟ್ಟಿ ಅಲ್ಲಿ ಅವನು ಯೆಹೋವನನ್ನು ಆರಾಧಿಸಿದನು. ತರುವಾಯ ಅವನು ಮತ್ತೆ ಪ್ರಯಾಣವನ್ನು ಮುಂದುವರಿಸಿ ನೆಗೆವ್ ಸ್ಥಳದ ಕಡೆಗೆ ಹೋದನು.

ಈಜಿಪ್ಟಿನಲ್ಲಿ ಅಬ್ರಾಮ

10 ಈ ಕಾಲದಲ್ಲಿ ಭೂಮಿಯು ಒಣಗಿಹೋಗಿತ್ತು; ಮಳೆ ಇರಲಿಲ್ಲ. ಅಲ್ಲಿ ಆಹಾರವನ್ನು ಬೆಳೆಯಲು ಸಾಧ್ಯವಿರಲಿಲ್ಲ. ಆದ್ದರಿಂದ ಅಬ್ರಾಮನು ವಾಸಿಸುವುದಕ್ಕಾಗಿ ಈಜಿಪ್ಟಿಗೆ ಹೋದನು. 11 ತನ್ನ ಹೆಂಡತಿ ಸಾರಯಳು ರೂಪವತಿಯಾಗಿರುವುದು ಅಬ್ರಾಮನಿಗೆ ತಿಳಿದಿತ್ತು. ಆದ್ದರಿಂದ ಈಜಿಪ್ಟಿಗೆ ಹೋಗುವ ಮೊದಲೇ, ಅಬ್ರಾಮನು ಸಾರಯಳಿಗೆ, “ನೀನು ರೂಪವತಿಯೆಂದು ನನಗೆ ಗೊತ್ತಿದೆ. 12 ಈಜಿಪ್ಟಿನ ಗಂಡಸರು ನಿನ್ನನ್ನು ನೋಡಿ, ‘ಈಕೆ ಇವನ ಹೆಂಡತಿ’ ಎಂದು ತಿಳಿದು ನಿನ್ನನ್ನು ಪಡೆದುಕೊಳ್ಳುವುದಕ್ಕಾಗಿ ನನ್ನನ್ನು ಕೊಂದು ನಿನ್ನನ್ನು ಜೀವಂತವಾಗಿ ಉಳಿಸುವರು. 13 ಆದ್ದರಿಂದ ನೀನು ನನಗೆ ತಂಗಿಯಾಗಬೇಕೆಂದು ಜನರಿಗೆ ಹೇಳು. ಆಗ ಅವರು ನನ್ನನ್ನು ನಿನ್ನ ಸಹೋದರನೆಂದು ಭಾವಿಸಿ ನನ್ನನ್ನು ಕೊಲ್ಲದೆ ನನಗೆ ದಯೆತೋರುವರು. ಹೀಗೆ ನೀನು ನನ್ನ ಪ್ರಾಣ ಉಳಿಸುವೆ” ಎಂದು ಹೇಳಿದನು.

14 ಅಂತೆಯೇ ಅಬ್ರಾಮನು ಈಜಿಪ್ಟಿಗೆ ಹೋದನು. ಈಜಿಪ್ಟಿನ ಗಂಡಸರು ಸಾರಯಳನ್ನು ಕಂಡು ಈಕೆ ತುಂಬ ರೂಪವತಿ ಎಂದರು. 15 ಈಜಿಪ್ಟಿನ ಕೆಲವು ನಾಯಕರು ಸಹ ಆಕೆಯನ್ನು ಕಂಡರು. ಅವರು ಫರೋಹನ ಬಳಿಗೆ ಹೋಗಿ ಆಕೆಯ ಅಮೋಘ ಸೌಂದರ್ಯವನ್ನು ತಿಳಿಸಿದರು. ಬಳಿಕ ಆ ನಾಯಕರು ಸಾರಯಳನ್ನು ಫರೋಹನ ಬಳಿಗೆ ಕರೆದೊಯ್ದರು. 16 ಅಬ್ರಾಮನು ಸಾರಯಳ ಸಹೋದರನೆಂದು ಭಾವಿಸಿ ಫರೋಹನು ಅಬ್ರಾಮನಿಗೆ ದಯೆತೋರಿದನು. ಫರೋಹನು ಅಬ್ರಾಮನಿಗೆ ದನಕುರಿಗಳನ್ನೂ ಕತ್ತೆಗಳನ್ನೂ ಕೊಟ್ಟನು. ಅಲ್ಲದೆ ಅಬ್ರಾಮನಿಗೆ ದಾಸದಾಸಿಯರನ್ನೂ ಒಂಟೆಗಳನ್ನೂ ಕೊಟ್ಟನು.

17 ಫರೋಹನು ಅಬ್ರಾಮನ ಹೆಂಡತಿಯನ್ನು ತೆಗೆದುಕೊಂಡದ್ದರಿಂದ ಯೆಹೋವನು ಫರೋಹನಿಗೂ ಅವನ ಮನೆಯಲ್ಲಿದ್ದವರಿಗೂ ಭಯಂಕರವಾದ ರೋಗಗಳನ್ನು ಬರಮಾಡಿದನು. 18 ಆಗ ಫರೋಹನು ಅಬ್ರಾಮನನ್ನು ಕರೆಯಿಸಿ, “ನೀನು ನನಗೆ ತುಂಬ ಕೆಟ್ಟದ್ದನ್ನು ಮಾಡಿರುವೆ; ಸಾರಯಳು ನಿನಗೆ ಹೆಂಡತಿಯಾಗಬೇಕೆಂದು ಯಾಕೆ ತಿಳಿಸಲಿಲ್ಲ? 19 ‘ಈಕೆ ನನಗೆ ತಂಗಿಯಾಗಬೇಕು’ ಎಂದು ಯಾಕೆ ಹೇಳಿದೆ? ನೀನು ಹೀಗೆ ಹೇಳಿದ್ದರಿಂದ ನಾನು ಆಕೆಯನ್ನು ನನ್ನ ಹೆಂಡತಿಯಾಗಲಿಕ್ಕೆ ತೆಗೆದುಕೊಂಡೆ. ಆದರೆ ಈಗ ನಾನು ನಿನ್ನ ಹೆಂಡತಿಯನ್ನು ಮತ್ತೆ ನಿನಗೇ ಕೊಡುತ್ತೇನೆ. ನೀನು ಆಕೆಯನ್ನು ನಿನ್ನೊಂದಿಗೆ ಕರೆದುಕೊಂಡು ಹೊರಟುಹೋಗು” ಎಂದು ಹೇಳಿದನು. 20 ಆಮೇಲೆ ಫರೋಹನು ತನ್ನ ಜನರಿಗೆ ಅಬ್ರಾಮನನ್ನು ಈಜಿಪ್ಟಿನಿಂದ ಕಳುಹಿಸಿಕೊಡಬೇಕೆಂದು ಆಜ್ಞಾಪಿಸಿದನು. ಆದ್ದರಿಂದ ಅಬ್ರಾಮನು ಮತ್ತು ಅವನ ಹೆಂಡತಿ ಆ ಸ್ಥಳದಿಂದ ಹೊರಟುಹೋದರು; ಅವರು ತಮ್ಮೊಡನೆ ಇದ್ದವುಗಳನ್ನೆಲ್ಲ ತೆಗೆದುಕೊಂಡು ಹೋದರು.

ಮತ್ತಾಯ 4

ಯೇಸುವಿಗಾದ ಶೋಧನೆ

(ಮಾರ್ಕ 1:12-13; ಲೂಕ 4:1-13)

ಆಗ ದೇವರಾತ್ಮನು ಸೈತಾನನಿಂದ ಶೋಧಿಸಲ್ಪಡಲು ಯೇಸುವನ್ನು ಅಡವಿಗೆ ನಡೆಸಿದನು. ಯೇಸು ನಲವತ್ತು ದಿನ ಹಗಲಿರುಳು ಏನನ್ನೂ ತಿನ್ನಲಿಲ್ಲ. ಬಳಿಕ ಆತನಿಗೆ ಬಹಳ ಹಸಿವಾಯಿತು. ಆಗ ಆತನನ್ನು ಶೋಧಿಸಲು ಸೈತಾನನು ಬಂದು, “ನೀನು ದೇವರ ಮಗನಾಗಿದ್ದರೆ ಈ ಕಲ್ಲುಗಳು ರೊಟ್ಟಿಗಳಾಗಲೆಂದು ಆಜ್ಞಾಪಿಸು” ಅಂದನು.

ಯೇಸು ಅವನಿಗೆ,

“‘ಮನುಷ್ಯನು ಬದುಕುವುದು ಕೇವಲ ರೊಟ್ಟಿಯಿಂದಲ್ಲ,
    ಮನುಷ್ಯನ ಜೀವಿತವು ದೇವರು ಹೇಳುವ ಪ್ರತಿಯೊಂದು ಮಾತನ್ನು ಅವಲಂಬಿಸಿಕೊಂಡಿದೆ’(A)

ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ” ಎಂಬುದಾಗಿ ಉತ್ತರಕೊಟ್ಟನು.

ಆಗ ಸೈತಾನನು ಯೇಸುವನ್ನು ಪರಿಶುದ್ಧ ಪಟ್ಟಣವಾದ ಜೆರುಸಲೇಮಿಗೆ ಕರೆದುಕೊಂಡು ಹೋಗಿ, ದೇವಾಲಯದ ಅತಿ ಎತ್ತರವಾದ ಸ್ಥಳದಲ್ಲಿ ನಿಲ್ಲಿಸಿ, “ನೀನು ದೇವರ ಮಗನಾಗಿದ್ದರೆ, ಕೆಳಕ್ಕೆ ದುಮುಕು.

‘ದೇವರು ನಿನಗೋಸ್ಕರ ತನ್ನ ದೂತರಿಗೆ ಆಜ್ಞಾಪಿಸುವನು.
    ನಿನ್ನ ಪಾದಗಳು ಬಂಡೆಗೆ ಅಪ್ಪಳಿಸದಂತೆ
    ಅವರು ನಿನ್ನನ್ನು ಕೈಗಳಲ್ಲಿ ಎತ್ತಿಕೊಳ್ಳುವರು’(B)

ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆಯಲ್ಲ” ಎಂದನು.

ಅದಕ್ಕೆ ಯೇಸು,

“‘ನಿನ್ನ ದೇವರಾದ ಪ್ರಭುವನ್ನು ನೀನು ಪರೀಕ್ಷಿಸಕೂಡದು’(C)

ಎಂಬುದಾಗಿಯೂ ಪವಿತ್ರ ಗ್ರಂಥದಲ್ಲಿ ಬರೆದಿದೆ” ಎಂದು ಉತ್ತರಕೊಟ್ಟನು.

ಬಳಿಕ ಸೈತಾನನು ಯೇಸುವನ್ನು ಎತ್ತರವಾದ ಬೆಟ್ಟದ ತುದಿಗೆ ಕರೆದುಕೊಂಡು ಹೋಗಿ ಲೋಕದ ಎಲ್ಲಾ ರಾಜ್ಯಗಳನ್ನು ಮತ್ತು ಅವುಗಳ ವೈಭವವನ್ನು ತೋರಿಸಿ, “ನೀನು ನನಗೆ ಅಡ್ಡಬಿದ್ದು ಆರಾಧಿಸಿದರೆ ನಾನು ಅವೆಲ್ಲವನ್ನು ನಿನಗೆ ಕೊಡುತ್ತೇನೆ” ಎಂದು ಹೇಳಿದನು.

10 ಯೇಸು ಸೈತಾನನಿಗೆ, “ಇಲ್ಲಿಂದ ತೊಲಗು!

‘ನಿನ್ನ ದೇವರಾದ ಪ್ರಭುವನ್ನೇ ಆರಾಧಿಸಬೇಕು,
    ಆತನೊಬ್ಬನನ್ನೇ ಸೇವಿಸಬೇಕು’(D)

ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ” ಎಂದು ಹೇಳಿದನು.

11 ಆದ್ದರಿಂದ ಸೈತಾನನು ಯೇಸುವನ್ನು ಬಿಟ್ಟುಹೋದನು. ಆಗ ಕೆಲವು ದೇವದೂತರು ಬಂದು ಆತನನ್ನು ಉಪಚರಿಸಿದರು.

ಗಲಿಲಾಯದಲ್ಲಿ ಯೇಸುವಿನ ಸುವಾರ್ತಾ ಸೇವೆಯ ಆರಂಭ

(ಮಾರ್ಕ 1:14-15; ಲೂಕ 4:14-15)

12 ಯೋಹಾನನನ್ನು ಸೆರೆಯಲ್ಲಿಟ್ಟಿದ್ದಾರೆಂಬುದು ಯೇಸುವಿಗೆ ತಿಳಿಯಿತು. ಆದ್ದರಿಂದ ಯೇಸು ಗಲಿಲಾಯಕ್ಕೆ ಹಿಂತಿರುಗಿ ಹೋದನು. 13 ಆತನು ನಜರೇತಿನಲ್ಲಿ ಇಳಿದುಕೊಳ್ಳದೆ ಹೊರಟುಹೋಗಿ ಗಲಿಲಾಯ ಸರೋವರಕ್ಕೆ ಹತ್ತಿರವಿದ್ದ ಕಪೆರ್ನೌಮ್ ಎಂಬ ಊರಲ್ಲಿ ವಾಸಿಸಿದನು. ಈ ಊರು ಜೆಬುಲೋನ್ ಮತ್ತು ನಫ್ತಾಲಿ ಸೀಮೆಗಳ ಬಳಿಯಲ್ಲಿದೆ. 14 ಪ್ರವಾದಿಯಾದ ಯೆಶಾಯನು ನುಡಿದಿದ್ದ ಮಾತು ಹೀಗೆ ನೆರವೇರಿತು. ಅದೇನೆಂದರೆ:

15 “ಜೆಬುಲೋನ್ ಸೀಮೆಯ, ನಫ್ತಾಲಿ ಸೀಮೆಯ,
    ಜೋರ್ಡನ್ನಿನ ಆಚೆ ಸೀಮೆಯ, ಸಮುದ್ರದ ಕಡೆಗಿರುವ ಸೀಮೆಯ,
    ಯೆಹೂದ್ಯರಲ್ಲದ ಗಲಿಲಾಯ ಸೀಮೆಯ
16 ಜನರು ಕತ್ತಲಲ್ಲಿ ಜೀವಿಸುತ್ತಿದ್ದರು.
    ಆಗ ಅವರಿಗೆ ದೊಡ್ಡ ಬೆಳಕೊಂದು ಕಾಣಿಸಿತು.
ಸಮಾಧಿಯಂತಿರುವ ಕಾರ್ಗತ್ತಲೆಯ ದೇಶದಲ್ಲಿ ವಾಸಿಸುವ ಆ ಜನರಿಗೆ ಬೆಳಕು ದೊರೆಯಿತು.”(E)

17 ಅಂದಿನಿಂದ ಯೇಸು ಬೋಧಿಸುವುದಕ್ಕೆ ಪ್ರಾರಂಭಿಸಿದನು. “ಪರಲೋಕರಾಜ್ಯವು ಬೇಗನೆ ಬರಲಿದೆ. ಆದ್ದರಿಂದ ನೀವು ನಿಮ್ಮ ಹೃದಯಗಳನ್ನು ಮತ್ತು ಜೀವಿತಗಳನ್ನು ಮಾರ್ಪಡಿಸಿಕೊಳ್ಳಿರಿ” ಎಂದು ಯೇಸು ಬೋಧಿಸಿದನು.

ಯೇಸುವಿನ ಪ್ರಥಮ ಶಿಷ್ಯರು

(ಮಾರ್ಕ 1:16-20; ಲೂಕ 5:1-11)

18 ಗಲಿಲಾಯ ಸರೋವರದ ತೀರದಲ್ಲಿ ಯೇಸು ತಿರುಗಾಡುತ್ತಾ ಇದ್ದನು. ಆತನು ಸೀಮೋನ (ಈತನನ್ನೇ ಪೇತ್ರ ಎಂದು ಕರೆಯಲಾಯಿತು.) ಮತ್ತು ಸೀಮೋನನ ಸಹೋದರನಾದ ಅಂದ್ರೆಯ ಎಂಬ ಇಬ್ಬರು ಸಹೋದರರನ್ನು ಕಂಡನು. ಬೆಸ್ತರಾಗಿದ್ದ ಇವರಿಬ್ಬರು ಅಂದು ಸರೋವರದ ತೀರದಲ್ಲಿ ಬಲೆ ಹಾಕಿ ಮೀನು ಹಿಡಿಯುತ್ತಿದ್ದರು. 19 ಯೇಸು, “ಬನ್ನಿರಿ, ನನ್ನನ್ನು ಹಿಂಬಾಲಿಸಿ. ನಿಮ್ಮನ್ನು ಬೇರೆ ರೀತಿಯ ಬೆಸ್ತರನ್ನಾಗಿ ಮಾಡುವೆನು. ನೀವು ಒಟ್ಟುಗೂಡಿಸುವುದು ಮೀನನ್ನಲ್ಲ, ಮನುಷ್ಯರನ್ನು” ಎಂದನು. 20 ಕೂಡಲೇ ಸೀಮೋನ ಮತ್ತು ಅಂದ್ರೆಯ ತಮ್ಮ ಬಲೆಗಳನ್ನು ಬಿಟ್ಟು ಆತನನ್ನು ಹಿಂಬಾಲಿಸಿದರು.

21 ಯೇಸು ಗಲಿಲಾಯ ಸರೋವರದ ತೀರದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಜೆಬೆದಾಯನ ಮಕ್ಕಳಾದ ಯಾಕೋಬ ಮತ್ತು ಯೋಹಾನರೆಂಬ ಇಬ್ಬರು ಸಹೋದರರನ್ನು ನೋಡಿದನು. ಅವರು ತಮ್ಮ ತಂದೆಯಾದ ಜೆಬೆದಾಯನ ಸಂಗಡ ದೋಣಿಯಲ್ಲಿದ್ದರು. ಅವರು ಮೀನು ಹಿಡಿಯಲು ತಮ್ಮ ಬಲೆಗಳನ್ನು ಸರಿಪಡಿಸಿಕೊಳ್ಳುತ್ತಿದ್ದರು. ಯೇಸು ಇವರನ್ನು ಕರೆದನು. 22 ಆಗ ಅವರು ದೋಣಿಯನ್ನು ಮತ್ತು ತಮ್ಮ ತಂದೆಯನ್ನು ಬಿಟ್ಟು ಯೇಸುವನ್ನು ಹಿಂಬಾಲಿಸಿದರು.

ಯೇಸುವಿನ ಉಪದೇಶ ಮತ್ತು ರೋಗಿಗಳಿಗೆ ಸ್ವಸ್ಥತೆ

(ಲೂಕ 6:17-19)

23 ಯೇಸು ಗಲಿಲಾಯ ಪ್ರಾಂತ್ಯದಲ್ಲೆಲ್ಲಾ ಸಂಚರಿಸಿದನು. ಯೇಸು ಸಭಾಮಂದಿರಗಳಲ್ಲಿ ಬೋಧಿಸಿದನು ಮತ್ತು ಪರಲೋಕರಾಜ್ಯದ ವಿಷಯವಾದ ಶುಭವಾರ್ತೆಯನ್ನು ಉಪದೇಶಿಸಿದನು. ಯೇಸು ಎಲ್ಲಾ ಜನರ ಕಾಯಿಲೆಗಳನ್ನು ಮತ್ತು ರೋಗಗಳನ್ನು ವಾಸಿಮಾಡಿದನು. 24 ಯೇಸುವಿನ ವಿಷಯವಾದ ಸುದ್ದಿಯು ಸಿರಿಯ ದೇಶದಲ್ಲೆಲ್ಲಾ ಹರಡಿತು. ಜನರು ಕಾಯಿಲೆಯವರನ್ನೆಲ್ಲ ಯೇಸುವಿನ ಬಳಿಗೆ ತಂದರು. ಅವರು ನಾನಾ ವಿಧವಾದ ವ್ಯಾಧಿಗಳಿಂದ ಮತ್ತು ನೋವಿನಿಂದ ಬಾಧೆಪಡುತ್ತಿದ್ದರು. ಕೆಲವರು ತೀವ್ರವಾದ ನೋವಿನಿಂದ ನರಳುತ್ತಿದ್ದರು. ಕೆಲವರು ದೆವ್ವಗಳಿಂದ ಪೀಡಿತರಾಗಿದ್ದರು. ಕೆಲವರು ಮೂರ್ಛಾರೋಗಿಗಳಾಗಿದ್ದರು. ಕೆಲವರು ಪಾರ್ಶ್ವವಾಯು ರೋಗಿಗಳಾಗಿದ್ದರು. ಯೇಸು ಇವರನ್ನೆಲ್ಲಾ ಗುಣಪಡಿಸಿದನು. 25 ಅನೇಕಾನೇಕ ಜನರು ಯೇಸುವನ್ನು ಹಿಂಬಾಲಿಸಿದರು. ಈ ಜನರು ಗಲಿಲಾಯದಿಂದಲೂ ದೆಕಪೊಲಿ ಎಂಬ ಹತ್ತು ಊರುಗಳಿಂದಲೂ ಜೆರುಸಲೇಮಿನಿಂದಲೂ ಜುದೇಯದಿಂದಲೂ ಮತ್ತು ಜೋರ್ಡನ್ ನದಿಯ ಆಚೆಕಡೆಯ ಪ್ರದೇಶದಿಂದಲೂ ಬಂದಿದ್ದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International