Print Page Options
Previous Prev Day Next DayNext

New Testament in a Year

Read the New Testament from start to finish, from Matthew to Revelation.
Duration: 365 days
Kannada Holy Bible: Easy-to-Read Version (KERV)
Version
ಪ್ರಕಟನೆ 10

ದೇವದೂತನು ಮತ್ತು ಚಿಕ್ಕ ಸುರುಳಿ

10 ನಂತರ ಮತ್ತೊಬ್ಬ ಬಲಿಷ್ಠನಾದ ದೇವದೂತನೊಬ್ಬನು ಪರಲೋಕದಿಂದ ಇಳಿದುಬರುವುದನ್ನು ನಾನು ನೋಡಿದೆನು. ಆ ದೇವದೂತನು ಮೇಘವನ್ನು ಧರಿಸಿಕೊಂಡಿದ್ದನು. ಅವನ ತಲೆಯ ಸುತ್ತಲೂ ಕಾಮನಬಿಲ್ಲಿತ್ತು. ಆ ದೇವದೂತನ ಮುಖವು ಸೂರ್ಯನಂತೆಯೂ ಅವನ ಕಾಲುಗಳು ಬೆಂಕಿಯ ಕಂಬಗಳಂತೆಯೂ ಇದ್ದವು. ಆ ದೇವದೂತನು ಒಂದು ಚಿಕ್ಕ ಸುರುಳಿಯನ್ನು ಹಿಡಿದಿದ್ದನು. ಅವನ ಕೈಯಲ್ಲಿದ್ದ ಸುರುಳಿಯು ಬಿಚ್ಚಿತ್ತು. ಅವನು ತನ್ನ ಬಲಪಾದವನ್ನು ಸಮುದ್ರದ ಮೇಲೆಯೂ, ತನ್ನ ಎಡಪಾದವನ್ನು ಭೂಮಿಯ ಮೇಲೆಯೂ ಇಟ್ಟು, ಸಿಂಹ ಗರ್ಜಿಸುವಂತೆ ಗಟ್ಟಿಯಾಗಿ ಆರ್ಭಟಿಸಿದನು. ಆ ಬಳಿಕ ಏಳು ಗುಡುಗುಗಳ ಧ್ವನಿಯು ಮಾತನಾಡಿತು.

ಅದನ್ನು ನಾನು ಬರೆಯಬೇಕೆಂದಿದ್ದಾಗ ಪರಲೋಕದಿಂದ ಬಂದ ಒಂದು ಧ್ವನಿಯು ನನಗೆ, “ಏಳು ಗುಡುಗುಗಳು ಹೇಳಿದ್ದನ್ನು ನೀನು ಬರೆಯಬೇಡ. ಅವುಗಳನ್ನು ರಹಸ್ಯವಾಗಿಟ್ಟಿರು” ಎಂದು ಹೇಳಿತು.

ಅನಂತರ ಭೂಮಿಯ ಮೇಲೆ ಮತ್ತು ಸಮುದ್ರದ ಮೇಲೆ ನಿಂತಿದ್ದ ಒಬ್ಬ ದೇವದೂತನನ್ನು ಕಂಡೆನು. ಅವನು ತನ್ನ ಬಲಗೈಯನ್ನು ಪರಲೋಕದತ್ತ ಚಾಚಿದನು. ಆ ದೇವದೂತನು ಯುಗ ಯುಗಾಂತರಗಳಲ್ಲಿಯೂ ನೆಲೆಸಿರುವಾತನ ಮತ್ತು ಆಕಾಶವನ್ನು ಮತ್ತು ಅದರಲ್ಲಿರುವ ಸಮಸ್ತವನ್ನು, ಭೂಮಿಯನ್ನು ಮತ್ತು ಅದರಲ್ಲಿರುವ ಸಮಸ್ತವನ್ನು, ಸಮುದ್ರವನ್ನು ಮತ್ತು ಅದರಲ್ಲಿರುವ ಸಮಸ್ತವನ್ನು ಸೃಷ್ಟಿಸ್ಟಿದಾತನ ಶಕ್ತಿಯಿಂದ ಹೀಗೆ ವಾಗ್ದಾನವನ್ನು ಮಾಡಿದನು: “ಇನ್ನು ಕಾಯುವ ಅಗತ್ಯವಿಲ್ಲ; ಏಳನೆಯ ದೇವದೂತನು ತನ್ನ ತುತೂರಿಯನ್ನು ಊದಲು ಸಿದ್ಧನಾಗುವ ದಿನಗಳಲ್ಲಿ ದೇವರ ರಹಸ್ಯವಾದ ಯೋಜನೆಯು ನೆರವೇರುವುದು. ದೇವರು ತನ್ನ ಸೇವಕರಾದ ಪ್ರವಾದಿಗಳಿಗೆ ತಿಳಿಸಿದ ಸುವಾರ್ತೆಯೇ ಈ ಯೋಜನೆ.”

ಬಳಿಕ ಪರಲೋಕದಿಂದ ಮತ್ತೆ ಅದೇ ಧ್ವನಿಯನ್ನು ನಾನು ಕೇಳಿದೆನು. ಆ ಧ್ವನಿಯು ನನಗೆ, “ಹೋಗು, ದೇವದೂತನ ಕೈಯಲ್ಲಿರುವ ಬಿಚ್ಚಿದ ಸುರುಳಿಯನ್ನು ತೆಗೆದುಕೊ. ಆ ದೇವದೂತನು ಸಮುದ್ರದ ಮೇಲೆ ಮತ್ತು ಭೂಮಿಯ ಮೇಲೆ ನಿಂತಿದ್ದಾನೆ” ಎಂದು ಹೇಳಿತು.

ಆದ್ದರಿಂದ ನಾನು ಆ ದೇವದೂತನ ಬಳಿಗೆ ಹೋಗಿ, ಆ ಚಿಕ್ಕ ಸುರುಳಿಯನ್ನು ಕೊಡುವಂತೆ ಕೇಳಿದೆನು. ಆ ದೇವದೂತನು ನನಗೆ, “ಸುರುಳಿಯನ್ನು ತೆಗೆದುಕೊಂಡು ಅದನ್ನು ತಿಂದುಬಿಡು. ಅದು ನಿನ್ನ ಹೊಟ್ಟೆಯಲ್ಲಿ ಕಹಿಯಾಗಿರುವುದು, ಆದರೆ ನಿನ್ನ ಬಾಯಲ್ಲಿ ಅದು ಜೇನಿನಂತೆ ಸಿಹಿಯಾಗಿರುವುದು” ಎಂದು ಹೇಳಿದನು. 10 ಆ ಚಿಕ್ಕ ಸುರುಳಿಯನ್ನು ದೇವದೂತನ ಕೈಯಿಂದ ನಾನು ತೆಗೆದುಕೊಂಡು ತಿಂದೆನು. ನನ್ನ ಬಾಯಲ್ಲಿ ಅದು ಜೇನಿನಂತೆ ಸಿಹಿಯಾಗಿತ್ತು, ಆದರೆ ನಾನು ಅದನ್ನು ತಿಂದಬಳಿಕ, ಅದು ನನ್ನ ಹೊಟ್ಟೆಯಲ್ಲಿ ಕಹಿಯಾಯಿತು. 11 ಆಗ ಅವನು ನನಗೆ, “ನೀನು ಮತ್ತೆ ಅನೇಕ ಜನಾಂಗಗಳ, ಪ್ರಜೆಗಳ, ಭಾಷೆಗಳ ಮತ್ತು ರಾಜರುಗಳ ವಿಷಯದಲ್ಲಿ ಪ್ರವಾದನೆ ಮಾಡಬೇಕು” ಎಂದು ತಿಳಿಸಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International