Print Page Options
Previous Prev Day Next DayNext

New Testament in a Year

Read the New Testament from start to finish, from Matthew to Revelation.
Duration: 365 days
Kannada Holy Bible: Easy-to-Read Version (KERV)
Version
ಇಬ್ರಿಯರಿಗೆ 11:20-40

20 ಇಸಾಕನು ಯಾಕೋಬನ ಮತ್ತು ಏಸಾವನ ಭವಿಷ್ಯತ್ತನ್ನು ಆಶೀರ್ವದಿಸಿದನು. ಇಸಾಕನಲ್ಲಿದ್ದ ನಂಬಿಕೆಯೇ ಇದಕ್ಕೆ ಕಾರಣ. 21 ಯಾಕೋಬನು ಯೋಸೇಫನ ಮಕ್ಕಳಿಬ್ಬರನ್ನೂ ತಾನು ಸಾಯುವ ಗಳಿಗೆಯಲ್ಲಿ ಆಶೀರ್ವದಿಸಿದನು. ಅವನು ಊರುಗೋಲಿನ ಮೇಲೆ ಬಾಗಿಕೊಂಡು ದೇವರನ್ನು ಆರಾಧಿಸುತ್ತಿದ್ದನು. ಅವನಲ್ಲಿದ್ದ ನಂಬಿಕೆಯೇ ಇದಕ್ಕೆ ಕಾರಣ.

22 ಯೋಸೇಫನು ಸಾಯುವ ಗಳಿಗೆಯಲ್ಲಿದ್ದಾಗ, ಇಸ್ರೇಲರು ಈಜಿಪ್ಟನ್ನು ಬಿಟ್ಟುಹೋಗುವುದರ ಕುರಿತು ಮಾತನಾಡಿದನು; ತನ್ನ ದೇಹವನ್ನು ಏನು ಮಾಡಬೇಕೆಂಬುದರ ಬಗ್ಗೆಯೂ ತಿಳಿಸಿದನು. ಅದಕ್ಕೆ ಅವನ ನಂಬಿಕೆಯೇ ಕಾರಣ.

23 ಮೋಶೆಯು ಹುಟ್ಟಿದಾಗ ಅವನ ತಂದೆತಾಯಿಗಳು ನಂಬಿಕೆಯಿಂದಲೇ ಅವನನ್ನು ಮೂರು ತಿಂಗಳವರೆಗೆ ಅಡಗಿಸಿಟ್ಟರು. ಮಗುವಾಗಿದ್ದ ಮೋಶೆಯ ಸೌಂದರ್ಯವನ್ನು ಅವರು ಕಂಡದ್ದರಿಂದ ರಾಜನಾದ ಫರೋಹನ ಆಜ್ಞೆಗೂ ಅವಿಧೇಯರಾಗಲು ಹಿಂಜರಿಯಲಿಲ್ಲ.

24 ಮೋಶೆಯು ಬೆಳೆದು ದೊಡ್ಡವನಾದನು. ಅವನು ಫರೋಹನ ಮಗಳ ಮಗನೆಂದು ಕರೆಸಿಕೊಳ್ಳಲು ಒಪ್ಪಲಿಲ್ಲ. 25 ಅವನು ಪಾಪಗಳಿಂದ ಸಿಗುವ ಸುಖವನ್ನು ಆರಿಸಿಕೊಳ್ಳಲಿಲ್ಲ. ಆ ಸುಖಗಳು ಬೇಗನೆ ಕೊನೆಗೊಳ್ಳುತ್ತವೆ. ಆದ್ದರಿಂದ ಅವನು ದೇವಜನರೊಂದಿಗೆ ಕಷ್ಟಪಡುವುದನ್ನೇ ಆರಿಸಿಕೊಂಡನು. ಅವನಲ್ಲಿದ್ದ ನಂಬಿಕೆಯೇ ಇದಕ್ಕೆ ಕಾರಣ. 26 ಈಜಿಪ್ಟಿನ ಭಂಡಾರವನ್ನೆಲ್ಲ ಪಡೆಯುವುದಕ್ಕಿಂತ ಕ್ರಿಸ್ತನಿಗಾಗಿ ಸಂಕಟವನ್ನು ಅನುಭವಿಸುವುದು ಶ್ರೇಯಸ್ಕರವೆಂದು ಅವನು ಭಾವಿಸಿದನು. ದೇವರು ತನಗೆ ನೀಡುವ ಪ್ರತಿಫಲಕ್ಕಾಗಿ ಅವನು ಕಾಯುತ್ತಿದ್ದನು.

27 ಅವನು ಈಜಿಪ್ಟನ್ನು ಬಿಟ್ಟುಹೋದದ್ದು ನಂಬಿಕೆಯಿಂದಲೇ. ಫರೋಹನ ಸಿಟ್ಟಿಗೆ ಅವನು ಭಯಪಡಲಿಲ್ಲ. ಯಾರಿಗೂ ಕಾಣದ ದೇವರು ತನಗೆ ಕಾಣುತ್ತಿರುವನೋ ಎಂಬಂತೆ ಅವನು ದೃಢಚಿತ್ತನಾಗಿದ್ದನು; 28 ಪಸ್ಕಹಬ್ಬವನ್ನು ಆಚರಿಸಿ, ಬಾಗಿಲುಗಳ ಮೇಲೆ ರಕ್ತವನ್ನು ಹಚ್ಚಿದನು. ಯೆಹೂದ್ಯ ಜನರ ಚೊಚ್ಚಲು ಮಕ್ಕಳನ್ನು ಮರಣದೂತನು ಸಂಹರಿಸಿದಂತೆ ರಕ್ತವನ್ನು ಬಾಗಿಲುಗಳ ಮೇಲೆ ಹಚ್ಚಲಾಯಿತು. ಅವನು ತನ್ನಲ್ಲಿದ್ದ ನಂಬಿಕೆಯಿಂದಲೇ ಹೀಗೆ ಮಾಡಿದನು.

29 ಮೋಶೆಯಿಂದ ಮುನ್ನಡೆಸಲ್ಪಟ್ಟ ಜನರು ಕೆಂಪುಸಮುದ್ರವನ್ನು ಒಣಭೂಮಿಯೋ ಎಂಬಂತೆ ದಾಟಿದ್ದು ನಂಬಿಕೆಯಿಂದಲೇ. ಆದರೆ ಈಜಿಪ್ಟ್ ದೇಶದವರು ಕೆಂಪುಸಮುದ್ರವನ್ನು ದಾಟಲು ಪ್ರಯತ್ನಿಸಿ, ಮುಳುಗಿಹೋದರು.

30 ದೇವಜನರ ನಂಬಿಕೆಯಿಂದಲೇ ಜೆರಿಕೊ ಪಟ್ಟಣದ ಗೋಡೆಗಳ ಸುತ್ತಲೂ ಏಳು ದಿನಗಳವರೆಗೆ ಸುತ್ತಿದಾಗ ಅವು ಬಿದ್ದುಹೋದವು.

31 ರಹಾಬಳೆಂಬ ವೇಶ್ಯೆಯು ಇಸ್ರೇಲಿನ ಗೂಢಚಾರರನ್ನು ಬರಮಾಡಿಕೊಂಡು, ಅವರನ್ನು ಸ್ನೇಹಿತರಂತೆ ನೋಡಿಕೊಂಡಳು. ನಂಬಲೊಲ್ಲದ ಜನರನ್ನು ಕೊಂದಾಗ ಅವಳನ್ನು ಕೊಲ್ಲದೆ ಹೋದದ್ದು ಅವಳಲ್ಲಿದ್ದ ಆ ನಂಬಿಕೆಯಿಂದಲೇ.

32 ನಾನು ನಿಮಗೆ ಮತ್ತಷ್ಟು ದೃಷ್ಟಾಂತಗಳನ್ನು ಹೇಳುವ ಅಗತ್ಯವಿದೆಯೋ? ನಾನು ಗಿದ್ಯೋನನ, ಬಾರಾಕನ, ಸಂಸೋನನ, ಯೆಫ್ತಾಹನ, ದಾವೀದನ, ಸಮುವೇಲನ ಮತ್ತು ಪ್ರವಾದಿಗಳ ಕುರಿತು ನಿಮಗೆ ಹೇಳುವಷ್ಟು ಸಮಯ ನನಗಿಲ್ಲ. 33 ಆ ಜನರೆಲ್ಲರೂ ಬಲವಾದ ನಂಬಿಕೆಯುಳ್ಳವರಾಗಿದ್ದರು. ಆ ನಂಬಿಕೆಯಿಂದಲೇ ರಾಜ್ಯಗಳನ್ನು ಸೋಲಿಸಿದರು. ಅವರು ಯೋಗ್ಯವಾದ ಕಾರ್ಯಗಳನ್ನು ಮಾಡಿದರು ಮತ್ತು ದೇವರು ವಾಗ್ದಾನ ಮಾಡಿದ್ದವುಗಳನ್ನು ಪಡೆದುಕೊಂಡರು. ಅವರಲ್ಲಿ ಕೆಲವರು ತಮ್ಮ ನಂಬಿಕೆಯಿಂದ ಸಿಂಹಗಳ ಬಾಯಿಗಳನ್ನು ಮುಚ್ಚಿದರು; 34 ಕೆಲವರು ಉರಿಯುವ ಬೆಂಕಿಯನ್ನು ನಂದಿಸಿದರು; ಇನ್ನು ಕೆಲವರು ಕತ್ತಿಗಳ ಬಾಯಿಂದ ಪಾರಾದರು; ದುರ್ಬಲರಾಗಿದ್ದವರು ತಮ್ಮ ನಂಬಿಕೆಯಿಂದ ಪ್ರಬಲರಾದರು; ಯುದ್ಧದಲ್ಲಿ ಶಕ್ತಿಶಾಲಿಗಳಾಗಿ ಶತ್ರುಗಳನ್ನು ಸೋಲಿಸಿದರು. 35 ಸತ್ತುಹೋಗಿದ್ದವರು ಸಾವಿನಿಂದ ಮೇಲೆದ್ದರು ಮತ್ತು ಅವರನ್ನು ಅವರವರ ಕುಟುಂಬಗಳ ಸ್ತ್ರೀಯರಿಗೆ ಒಪ್ಪಿಸಲಾಯಿತು. ಇತರ ಕೆಲವರು ಯಾತನೆಯನ್ನು ಅನುಭವಿಸುತ್ತಿದ್ದಾಗಲೂ ಪುನರುತ್ಥಾನದ ನಂತರವಿರುವ ಶ್ರೇಷ್ಠ ಜೀವಿತಕ್ಕಾಗಿ ಬಿಡುಗಡೆ ಹೊಂದಲು ಒಪ್ಪಲಿಲ್ಲ. 36 ಕೆಲವರು ಇತರರಿಂದ ಅಪಹಾಸ್ಯಕ್ಕೆ ಗುರಿಯಾದರು, ಪೆಟ್ಟುಗಳನ್ನು ಅನುಭವಿಸಿದರು, ಸೆರೆವಾಸದಲ್ಲಿದ್ದರು. 37 ಕೆಲವರನ್ನು ಕಲ್ಲೆಸೆದು ಕೊಂದರು, ಕೆಲವರನ್ನು ಅರ್ಧಕತ್ತರಿಸಿ ಎರಡು ಭಾಗ ಮಾಡಿದರು. ಕೆಲವರನ್ನು ಕತ್ತಿಗಳಿಂದ ಇರಿದುಕೊಂದರು. ಇವರಲ್ಲಿ ಕೆಲವರು ಕುರಿ ಮತ್ತು ಹೋತಗಳ ಚರ್ಮಗಳನ್ನು ತೊಟ್ಟುಕೊಂಡಿದ್ದರು; ಕೆಲವರು ಬಡವರಾಗಿದ್ದರು; ಹಿಂಸೆಗೆ ಒಳಗಾಗಿದ್ದರು ಮತ್ತು ಜನರ ಕ್ರೂರ ವರ್ತನೆಗೆ ಗುರಿಯಾಗಿದ್ದರು. 38 ಇವರಿಗೆ ಈ ಲೋಕವು ಯೋಗ್ಯವಾಗಿರಲಿಲ್ಲ. ಇವರು ಮರುಭೂಮಿಗಳಲ್ಲಿ, ಬೆಟ್ಟಗಳಲ್ಲಿ ಅಲೆಯುತ್ತಾ ಗುಹೆಗಳಲ್ಲಿಯೂ ನೆಲದ ಕುಣಿಗಳಲ್ಲಿಯೂ ವಾಸಿಸುತ್ತಿದ್ದರು.

39 ಇವರೆಲ್ಲರೂ ತಮ್ಮ ನಂಬಿಕೆಯ ವಿಷಯದಲ್ಲಿ ಪ್ರಸಿದ್ಧರಾಗಿದ್ದರು. ಆದರೆ ದೇವರ ದೊಡ್ಡ ವಾಗ್ದಾನವನ್ನು ಇವರಲ್ಲಿ ಯಾರೂ ಹೊಂದಿಕೊಳ್ಳಲಿಲ್ಲ. 40 ದೇವರು ನಮಗೆ ಶ್ರೇಷ್ಠವಾದದ್ದನ್ನು ಕೊಡಲು ಯೋಜನೆ ಮಾಡಿದನು. ನಮ್ಮೊಡನೆ ಮಾತ್ರ ಅವರು ಪರಿಪೂರ್ಣರಾಗಬೇಕೆಂಬುದೇ ಆ ಯೋಜನೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International