Print Page Options
Previous Prev Day Next DayNext

New Testament in a Year

Read the New Testament from start to finish, from Matthew to Revelation.
Duration: 365 days
Kannada Holy Bible: Easy-to-Read Version (KERV)
Version
1 ತಿಮೊಥೆಯನಿಗೆ 4

ಸುಳ್ಳುಬೋಧಕರ ಬಗ್ಗೆ ಎಚ್ಚರಿಕೆ

ಮುಂದಿನ ದಿನಗಳಲ್ಲಿ ಕೆಲವು ಜನರು ಸತ್ಯ ಬೋಧನೆಯನ್ನು ನಂಬುವುದಿಲ್ಲವೆಂದು ಪವಿತ್ರಾತ್ಮನು ಸ್ಪಷ್ಟವಾಗಿ ಹೇಳುತ್ತಾನೆ. ಆ ಜನರು ಸುಳ್ಳಾಡುವ ದುರಾತ್ಮಗಳಿಗೆ ವಿಧೇಯರಾಗುವರು; ದೆವ್ವಗಳ ಬೋಧನೆಯನ್ನು ಅನುಸರಿಸುವರು. ಆ ಬೋಧನೆಗಳು ಸುಳ್ಳು ಹೇಳುವ ಮತ್ತು ವಂಚಿಸುವ ಜನರ ಮೂಲಕ ಬರುತ್ತವೆ. ಅವರು ಸರಿತಪ್ಪುಗಳ ಭೇದವನ್ನು ಗುರುತಿಸುವುದಿಲ್ಲ. ಕಾದ ಕಬ್ಬಿಣದಿಂದ ಸುಟ್ಟು ಬೂದಿಯಾಗುವಂತೆ ಅವರ ವಿವೇಕವು ನಾಶಗೊಂಡಿದೆ. ಜನರು ಮದುವೆಮಾಡಿಕೊಳ್ಳಬಾರದೆಂದೂ ಕೆಲವು ಆಹಾರಪದಾರ್ಥಗಳನ್ನು ತಿನ್ನಬಾರದೆಂದೂ ಅವರು ಹೇಳುತ್ತಾರೆ. ಆದರೆ ನಂಬಿಕೆಯುಳ್ಳವರು ಮತ್ತು ಸತ್ಯವನ್ನು ತಿಳಿದಿರುವವರು ಕೃತಜ್ಞತಾಸ್ತುತಿ ಮಾಡಿ ಆ ಆಹಾರಪದಾರ್ಥಗಳನ್ನು ತಿನ್ನಲಿ. ಏಕೆಂದರೆ ಅವುಗಳನ್ನು ನಿರ್ಮಿಸಿದಾತನು ದೇವರೇ. ಆತನು ನಿರ್ಮಿಸಿದ ಪ್ರತಿಯೊಂದೂ ಉತ್ತಮವಾಗಿರುತ್ತದೆ. ಆತನಿಗೆ ಕೃತಜ್ಞತಾಸ್ತುತಿ ಮಾಡಿ ತೆಗೆದುಕೊಳ್ಳುವ ಯಾವುದನ್ನೇ ಆಗಲಿ ನಿಷಿದ್ಧವೆಂದು ತಿರಸ್ಕರಿಸಬಾರದು. ಏಕೆಂದರೆ ದೇವರ ವಾಕ್ಯದಿಂದ ಮತ್ತು ಪ್ರಾರ್ಥನೆಯಿಂದ ಅದು ಪವಿತ್ರವಾಗಿದೆ.

ಕ್ರಿಸ್ತ ಯೇಸುವಿನ ಒಳ್ಳೆಯ ಸೇವಕನಾಗಿರು

ಅಲ್ಲಿರುವ ಸಹೋದರ ಸಹೋದರಿಯರಿಗೆ ಈ ಸಂಗತಿಗಳನ್ನು ತಿಳಿಸಿದರೆ, ನೀನು ಕ್ರಿಸ್ತ ಯೇಸುವಿನ ಒಳ್ಳೆಯ ಸೇವಕನಾಗಿರುವೆ ಎಂಬುದನ್ನೂ ನಂಬಿಕೆಯ ನುಡಿಗಳಿಂದ ಮತ್ತು ಉತ್ತಮ ಉಪದೇಶಗಳನ್ನು ಅನುಸರಿಸಿದ್ದರಿಂದ ಬಲಗೊಂಡಿರುವೆ ಎಂಬುದನ್ನೂ ತೋರಿಸಿದಂತಾಗುತ್ತದೆ. ದೇವರ ಸತ್ಯಕ್ಕೆ ಹೊಂದಿಕೆಯಾಗದ ಕ್ಷುಲ್ಲಕ ಕಥೆಗಳನ್ನು ಜನರು ಹೇಳುತ್ತಾರೆ. ಆ ಕಥೆಗಳ ಬೋಧನೆಯನ್ನು ಅನುಸರಿಸಬೇಡ. ದೇವರಿಗೆ ನಿಜವಾದ ಸೇವೆ ಮಾಡಲು ನಿನಗೆ ನೀನೇ ಬೋಧಿಸಿಕೊ. ನೀನು ದೇಹವನ್ನು ಪಳಗಿಸಿಕೊಂಡರೆ ನಿನಗೆ ಕೆಲವು ರೀತಿಯಲ್ಲಿ ಸಹಾಯಕವಾಗುವುದು. ಆದರೆ ದೇವರ ಸೇವೆಯು ನಿನಗೆ ಎಲ್ಲಾ ರೀತಿಯಲ್ಲಿಯೂ ಸಹಾಯಕವಾಗುವುದು. ದೇವರ ಸೇವೆಯು ಇಹಪರಗಳೆರಡರಲ್ಲೂ ನಿನಗೆ ಆಶೀರ್ವಾದವನ್ನು ಉಂಟು ಮಾಡುವುದು. ಈ ಸಂಗತಿಯು ನಂಬತಕ್ಕದ್ದೂ ಸರ್ವಾಂಗಿಕಾರಕ್ಕೆ ಯೋಗ್ಯವಾದದ್ದೂ ಆಗಿದೆ. 10 ಆದಕಾರಣವೇ, ನಾವು ಜೀವಸ್ವರೂಪನಾದ ದೇವರ ಮೇಲೆ ನಿರೀಕ್ಷೆಯಿಟ್ಟು ದುಡಿಯುತ್ತಿದ್ದೇವೆ ಮತ್ತು ಹೋರಾಡುತ್ತಿದ್ದೇವೆ. ಆತನು ಎಲ್ಲಾ ಜನರಿಗೆ ರಕ್ಷಕನಾಗಿದ್ದಾನೆ. ತನ್ನಲ್ಲಿ ನಂಬಿಕೆಯಿಡುವ ಜನರಿಗೆಲ್ಲಾ ಆತನು ವಿಶೇಷವಾದ ರೀತಿಯಲ್ಲಿ ರಕ್ಷಕನಾಗಿದ್ದಾನೆ.

11 ಇವುಗಳನ್ನು ಆಜ್ಞಾಪಿಸು ಮತ್ತು ಬೋಧಿಸು. 12 ನೀನು ಯೌವನಸ್ಥನಾಗಿರುವುದರಿಂದ ನಿನ್ನನ್ನು ಪ್ರಮುಖನಲ್ಲವೆಂದು ಪರಿಗಣಿಸಿ ಅಸಡ್ಡೆಮಾಡಲು ಯಾರಿಗೂ ಅವಕಾಶಕೊಡದಿರು. ವಿಶ್ವಾಸಿಗಳು ಹೇಗೆ ಜೀವಿಸಬೇಕೆಂಬುದಕ್ಕೆ ನೀನೇ ಅವರಿಗೆ ಮಾದರಿಯಾಗಿರು. ನಡೆನುಡಿಗಳಲ್ಲಿ, ಪ್ರೀತಿಯಲ್ಲಿ, ನಂಬಿಕೆಯಲ್ಲಿ ಮತ್ತು ಪರಿಶುದ್ಧ ಜೀವನದಲ್ಲಿ ನೀನೇ ಅವರಿಗೆ ಮಾದರಿಯಾಗಿರು.

13 ದೇವರ ವಾಕ್ಯವನ್ನು ಜನರಿಗೆ ಓದಿಹೇಳಿ ಅವರನ್ನು ಬಲಪಡಿಸು ಮತ್ತು ಅವರಿಗೆ ಬೋಧಿಸು. ನಾನು ಬರುವತನಕ ಈ ಕಾರ್ಯಗಳನ್ನು ಮಾಡುತ್ತಿರು. 14 ನಿನ್ನಲ್ಲಿರುವ ವರವನ್ನು ಜ್ಞಾಪಿಸಿಕೊಳ್ಳುತ್ತಿರು. ಸಭೆಯ ಹಿರಿಯರು ಪ್ರವಾದನೆಗಳೊಂದಿಗೆ ತಮ್ಮ ಕೈಗಳನ್ನು ನಿನ್ನ ಮೇಲಿಟ್ಟಾಗ ಆ ವರವು ನಿನಗೆ ಕೊಡಲ್ಪಟ್ಟಿತು. 15 ಈ ಕಾರ್ಯಗಳನ್ನು ಮಾಡುತ್ತಲೇ ಇರು. ಈ ಕಾರ್ಯಗಳನ್ನು ಮಾಡಲು ನಿನ್ನ ಜೀವನವನ್ನು ಮುಡಿಪಾಗಿಡು. ಆಗ ನಿನ್ನ ಕಾರ್ಯವು ಅಭಿವೃದ್ಧಿಗೊಳ್ಳುತ್ತಿರುವುದನ್ನು ಜನರೆಲ್ಲರೂ ನೋಡುವರು. 16 ನಿನ್ನ ಜೀವನದಲ್ಲಿಯೂ ನಿನ್ನ ಬೋಧನೆಯಲ್ಲಿಯೂ ಎಚ್ಚರಿಕೆಯಿಂದಿರು. ಯೋಗ್ಯವಾದ ರೀತಿಯಲ್ಲಿ ಜೀವಿಸುತ್ತಾ ಬೋಧಿಸು. ಆಗ ನೀನು, ನಿನ್ನನ್ನೂ ನಿನ್ನ ಬೋಧನೆ ಕೇಳುವವರನ್ನೂ ರಕ್ಷಿಸುವೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International