Print Page Options
Previous Prev Day Next DayNext

New Testament in a Year

Read the New Testament from start to finish, from Matthew to Revelation.
Duration: 365 days
Kannada Holy Bible: Easy-to-Read Version (KERV)
Version
ಗಲಾತ್ಯದವರಿಗೆ 6

ಒಬ್ಬರಿಗೊಬ್ಬರು ಸಹಾಯ ಮಾಡಿರಿ

ಸಹೋದರ ಸಹೋದರಿಯರೇ, ನಿಮ್ಮ ಸಭೆಯಲ್ಲಿ ಯಾವನಾದರೂ ತಪ್ಪು ಮಾಡಿದರೆ, ಆತ್ಮಿಕರಾದ ನೀವು ಅವನ ಬಳಿಗೆ ಹೋಗಿ ಸೌಮ್ಯತೆಯಿಂದ ಅವನನ್ನು ತಿದ್ದಿ ಸರಿಪಡಿಸಬೇಕು. ಆದರೆ ಎಚ್ಚರಿಕೆಯಿಂದಿರಿ! ನೀವು ಸಹ ಶೋಧನೆಗೊಳಗಾಗಿ ಪಾಪಕ್ಕೆ ಬೀಳುವ ಸಾಧ್ಯವಿದೆ. ನಿಮ್ಮ ಭಾರವಾದ ಹೊರೆಗಳನ್ನು ಹೊರಲು ಒಬ್ಬರಿಗೊಬ್ಬರು ಸಹಾಯಮಾಡಿರಿ. ಹೀಗೆ ನೀವು ಕ್ರಿಸ್ತನ ಆಜ್ಞೆಯನ್ನು ನಿಜವಾಗಿಯೂ ಅನುಸರಿಸಿರಿ. ಯಾವನಾದರೂ ತಾನು ಪ್ರಾಮುಖ್ಯನಲ್ಲದಿದ್ದರೂ ತನ್ನನ್ನು ಪ್ರಾಮುಖ್ಯನೆಂದು ಭಾವಿಸಿಕೊಂಡರೆ ಅವನು ತನ್ನನ್ನೇ ಮೋಸಪಡಿಸಿಕೊಳ್ಳುತ್ತಾನೆ. ಒಬ್ಬನು ತನ್ನನ್ನು ಮತ್ತೊಬ್ಬನೊಡನೆ ಹೋಲಿಸಿಕೊಳ್ಳಕೂಡದು. ಪ್ರತಿಯೊಬ್ಬನು ತನ್ನ ನಡತೆಯನ್ನು ತಾನೇ ವಿಮರ್ಶಿಸಿಕೊಳ್ಳಲಿ. ಆಗ ತಾನೇನಾದರೂ ಹೆಚ್ಚಳಪಡುವಂತ ಕಾರ್ಯಗಳನ್ನು ಮಾಡಿದ್ದರೆ ಅವನಿಗೆ ತಿಳಿಯುವುದು. ಪ್ರತಿಯೊಬ್ಬನು ತನ್ನ ಜವಾಬ್ದಾರಿಕೆಯನ್ನು ತಾನೇ ಹೊತ್ತುಕೊಳ್ಳಬೇಕು.

ಜೀವನವು ಜಮೀನಿನಲ್ಲಿ ಬಿತ್ತುವಂತಿದೆ

ದೇವರ ವಾಕ್ಯವನ್ನು ಕಲಿತುಕೊಳ್ಳುವವನು, (ತನಗೆ) ಕಲಿಸುವವನಿಗೆ ತನ್ನಲ್ಲಿರುವ ಎಲ್ಲಾ ಒಳ್ಳೆತನಗಳಲ್ಲಿ ಪಾಲು ಕೊಡತಕ್ಕದ್ದು.

ಮೋಸಹೋಗಬೇಡಿರಿ! ನೀವು ದೇವರನ್ನು ವಂಚಿಸಲು ಸಾಧ್ಯವಿಲ್ಲ. ಒಬ್ಬನು ತಾನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯುತ್ತಾನೆ. ಒಬ್ಬನು ತನ್ನ ಶರೀರಭಾವವನ್ನು ತೃಪ್ತಿಪಡಿಸುವುದಕ್ಕಾಗಿ ಪಾಪ ಕಾರ್ಯಗಳನ್ನು ಮಾಡಿದರೆ ಆ ಶರೀರಭಾವವು ಅವನಿಗೆ ನಿತ್ಯನಾಶವನ್ನು ಬರಮಾಡುತ್ತದೆ. ಆದರೆ ಒಬ್ಬನು ಪವಿತ್ರಾತ್ಮನನ್ನು ಮೆಚ್ಚಿಸುವುದಕ್ಕಾಗಿ ಒಳ್ಳೆಯ ಕಾರ್ಯಗಳನ್ನು ಮಾಡುವುದಾಗಿದ್ದರೆ, ಅವನು ಪವಿತ್ರಾತ್ಮನಿಂದ ನಿತ್ಯಜೀವವನ್ನು ಹೊಂದಿಕೊಳ್ಳುವನು. ನಾವು ಒಳ್ಳೆಯ ಕಾರ್ಯ ಮಾಡುವುದರಲ್ಲಿ ಬೇಸರಗೊಳ್ಳಬಾರದು. ತಕ್ಕ ಸಮಯದಲ್ಲಿ ನಾವು ನಿತ್ಯಜೀವವೆಂಬ ಸುಗ್ಗಿಯನ್ನು ಪಡೆಯುವೆವು. ಆದ್ದರಿಂದ ಒಳ್ಳೆಯ ಕಾರ್ಯ ಮಾಡುವುದನ್ನು ನಾವು ಬಿಟ್ಟುಬಿಡಬಾರದು. 10 ಯಾರಿಗಾದರೂ ಒಳ್ಳೆಯದನ್ನು ಮಾಡಲು ಅವಕಾಶವಿರುವಾಗ ನಾವು ಮಾಡಲೇಬೇಕು. ಅದರಲ್ಲೂ ಒಂದೇ ಕುಟುಂಬದವರಂತಿರುವ ವಿಶ್ವಾಸಿಗಳ ಬಗ್ಗೆ ನಾವು ವಿಶೇಷವಾದ ಗಮನ ಕೊಡಬೇಕು.

ಪೌಲನ ಕಡೇ ಮಾತುಗಳು

11 ಇದನ್ನು ನಾನೇ ಕೈಯಾರೆ ಬರೆಯುತ್ತಿದ್ದೇನೆ. ನಾನು ಎಷ್ಟು ದೊಡ್ಡ ಅಕ್ಷರಗಳಲ್ಲಿ ಬರೆಯುತ್ತಿದ್ದೇನೆಂಬುದನ್ನು ನೋಡಿರಿ. 12 ನೀವು ಸುನ್ನತಿ ಮಾಡಿಸಿಕೊಳ್ಳಬೇಕೆಂದು ಕೆಲವರು ನಿಮ್ಮನ್ನು ಒತ್ತಾಯಿಸುತ್ತಿದ್ದಾರೆ. ತಮ್ಮನ್ನು (ಯೆಹೂದ್ಯರು) ಸ್ವೀಕರಿಸಿಕೊಳ್ಳಲಿ ಎಂಬುದೇ ಅವರ ಉದ್ದೇಶ. ಕ್ರಿಸ್ತನ ಶಿಲುಬೆಯ ದೆಸೆಯಿಂದ ತಾವು ಹಿಂಸೆಗೆ ಒಳಗಾಗಬಹುದೆಂಬ ಭಯದಿಂದ ಅವರು ಹೀಗೆ ಮಾಡುತ್ತಾರೆ. 13 ಸುನ್ನತಿ ಮಾಡಿಸಿಕೊಂಡಿರುವ ಅವರೇ ಧರ್ಮಶಾಸ್ತ್ರಕ್ಕೆ ವಿಧೇಯರಾಗುತ್ತಿಲ್ಲ. ಆದರೆ ನಿಮಗೂ ಸುನ್ನತಿ ಮಾಡಿಸಿ ಅದರ ಬಗ್ಗೆ ಹೆಚ್ಚಳಪಡಬೇಕೆಂಬುದೇ ಅವರ ಆಸೆ.

14 ಅಂಥ ವಿಷಯಗಳ ಬಗ್ಗೆ ನಾನು ಹೆಚ್ಚಳಪಡುವುದೇ ಇಲ್ಲ. ನಾನು ಹೆಮ್ಮೆಪಡಲು ನನಗಿರುವ ಒಂದೇ ಕಾರಣವೇನೆಂದರೆ ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಶಿಲುಬೆಯೊಂದೇ. ಶಿಲುಬೆಯ ಮೇಲೆ ಯೇಸುವಿಗಾದ ಮರಣದ ಮೂಲಕ ಲೋಕವು ನನ್ನ ಪಾಲಿಗೆ ಸತ್ತುಹೋಯಿತು. ನಾನು ಸಹ ಲೋಕದ ಪಾಲಿಗೆ ಸತ್ತುಹೋದೆನು. 15 ಒಬ್ಬನಿಗೆ ಸುನ್ನತಿಯಾಗಿದೆಯೋ ಸುನ್ನತಿಯಾಗಿಲ್ಲವೋ ಎಂಬುದು ಮುಖ್ಯವಲ್ಲ. ಆದರೆ ದೇವರಿಂದ ಹೊಸ ಸೃಷ್ಟಿಯಾಗಿರುವುದೇ ಮುಖ್ಯವಾದದ್ದು.[a] 16 ಈ ನಿಯಮವನ್ನು ಅನುಸರಿಸುವವರಿಗೆಲ್ಲ, ಅಂದರೆ ನಿಜ ಇಸ್ರೇಲರಾದ ದೇವ ಜನರಿಗೆಲ್ಲ ಶಾಂತಿಯೂ ಕರುಣೆಯೂ ಆಗಲಿ.

17 ಆದ್ದರಿಂದ ಇನ್ನು ಮೇಲೆ ನನಗೆ ತೊಂದರೆ ಕೊಡಬೇಡಿ. ನನ್ನ ದೇಹದ ಮೇಲೆ ಬಾಸುಂಡೆಯ ಗುರುತುಗಳಿವೆ. ನಾನು ಕ್ರಿಸ್ತನವನೆಂಬುದಕ್ಕೆ ಈ ಗುರುತುಗಳೇ ಸಾಕ್ಷಿ.

18 ನನ್ನ ಸಹೋದರ ಸಹೋದರಿಯರೇ, ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮ ಆತ್ಮದೊಂದಿಗಿರಲೆಂದು ಪ್ರಾರ್ಥಿಸುತ್ತೇನೆ. ಆಮೆನ್.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International