Print Page Options
Previous Prev Day Next DayNext

New Testament in a Year

Read the New Testament from start to finish, from Matthew to Revelation.
Duration: 365 days
Kannada Holy Bible: Easy-to-Read Version (KERV)
Version
2 ಕೊರಿಂಥದವರಿಗೆ 11:16-33

ಪೌಲನು ತನಗಾದ ಹಿಂಸೆಯ ಬಗ್ಗೆ ತಿಳಿಸುವನು

16 ನಾನು ನಿಮಗೆ ಮತ್ತೆ ಹೇಳುವುದೇನೆಂದರೆ, ನನ್ನನ್ನು ಬುದ್ಧಿಹೀನನೆಂದು ಯಾರೂ ಯೋಚಿಸಕೂಡದು. ಬುದ್ಧಿಹೀನನೆಂದು ನೀವು ಯೋಚಿಸುವುದಾಗಿದ್ದರೆ, ನೀವು ಬದ್ಧಿಹೀನನನ್ನು ಸ್ವೀಕರಿಸಿಕೊಳ್ಳುವಂತೆ ನನ್ನನ್ನು ಸ್ವೀಕರಿಸಿಕೊಳ್ಳಿರಿ. ಆಗ ನಾನು ಸ್ವಲ್ಪ ಹೆಮ್ಮೆಪಡಲು ಸಾಧ್ಯವಾಗುವುದು. 17 ನನಗೆ ನನ್ನ ವಿಷಯದಲ್ಲಿ ಭರವಸೆ ಇರುವುದರಿಂದ ನಾನು ಹೊಗಳಿಕೊಳ್ಳುತ್ತೇನೆ. ಆದರೆ ಪ್ರಭು ಮಾತಾಡುವಂತೆ ನಾನು ಮಾತಾಡುತ್ತಿಲ್ಲ. ನಾನು ಬುದ್ಧಿಹೀನನೆಂದು ಹೊಗಳಿಕೊಳ್ಳುತ್ತಿದ್ದೇನೆ. 18 ಅನೇಕ ಜನರು ತಮ್ಮ ಪ್ರಾಪಂಚಿಕ ಜೀವನದ ಬಗ್ಗೆ ಹೊಗಳಿಕೊಳ್ಳುತ್ತಿದ್ದಾರೆ. ಆದ್ದರಿಂದ ನಾನು ಸಹ ಹೊಗಳಿಕೊಳ್ಳುತ್ತೇನೆ. 19 ನೀವು ಬುದ್ಧಿವಂತರಾಗಿರುವುದರಿಂದ ಬುದ್ಧಿಹೀನರ ವಿಷಯದಲ್ಲಿ ಸಂತೋಷದಿಂದ ತಾಳ್ಮೆಯಿಂದಿರುತ್ತೀರಿ. 20 ಏಕೆಂದರೆ ನಿಮ್ಮಿಂದ ಬಲವಂತವಾಗಿ ಕೆಲಸ ಮಾಡಿಸಿಕೊಳ್ಳುವವನ ಮತ್ತು ನಿಮ್ಮನ್ನು ಉಪಯೋಗಿಸಿಕೊಳ್ಳುವವನ ವಿಷಯದಲ್ಲಿಯೂ ಸಹ ತಾಳ್ಮೆಯಿಂದಿರುತ್ತೀರಿ. ನಿಮ್ಮನ್ನು ಮೋಸಗೊಳಿಸುವವರ, ತಮ್ಮನ್ನು ನಿಮಗಿಂಥ ಉತ್ತಮರೆಂದು ಭಾವಿಸಿಕೊಂಡಿರುವವರ ಮತ್ತು ನಿಮ್ಮ ಮುಖದ ಮೇಲೆ ಹೊಡೆಯುವವರ ವಿಷಯದಲ್ಲಿಯೂ ನೀವು ತಾಳ್ಮೆಯಿಂದಿರುತ್ತೀರಿ. 21 ಇದನ್ನು ಹೇಳುವುದಕ್ಕೇ ನಾಚಿಕೆಯಾಗುತ್ತದೆ. ಆದರೆ, ನಿಮ್ಮೊಂದಿಗೆ ಆ ರೀತಿ ನಡೆದುಕೊಳ್ಳುವಷ್ಟು “ಬಲ” ನಮಗಿರಲಿಲ್ಲ!

ಆದರೆ ಹೊಗಳಿಕೊಳ್ಳಲು ಯಾರಿಗಾದರೂ ಸಾಕಷ್ಟು ಧೈರ್ಯವಿದ್ದರೆ ನಾನು ಸಹ ಧೈರ್ಯದಿಂದ ಹೊಗಳಿಕೊಳ್ಳುತ್ತೇನೆ. (ನಾನು ಬದ್ಧಿಹೀನನಂತೆ ಮಾತಾಡುತ್ತಿದ್ದೇನೆ.) 22 ಆ ಜನರು ಇಬ್ರಿಯರೇ? ನಾನು ಸಹ ಇಬ್ರಿಯನು. ಅವರು ಇಸ್ರೇಲರೇ? ನಾನು ಸಹ ಇಸ್ರೇಲನು. ಅವರು ಅಬ್ರಹಾಮನ ಕುಟುಂಬಕ್ಕೆ ಸೇರಿದವರೇ? ನಾನು ಸಹ ಅಬ್ರಹಾಮನ ಕುಟುಂಬಕ್ಕೆ ಸೇರಿದವನು. 23 ಅವರು ಕ್ರಿಸ್ತನ ಸೇವೆಮಾಡುತ್ತಿದ್ದಾರೋ? ನಾನು ಸಹ ಅವರಿಗಿಂತಲೂ ಹೆಚ್ಚಾಗಿ ಸೇವೆಮಾಡುತ್ತಿದ್ದೇನೆ. (ನಾನು ಹುಚ್ಚನಂತೆ ಹೀಗೆ ಮಾತಾಡುತ್ತಿದ್ದೇನೆ.) ನಾನು ಅವರಿಗಿಂತಲೂ ಹೆಚ್ಚು ಕಷ್ಟಪಟ್ಟು ದುಡಿದಿದ್ದೇನೆ; ಹೆಚ್ಚು ಸಲ ಸೆರೆಮನೆಯಲ್ಲಿದ್ದೆನು. ಹೆಚ್ಚು ಏಟುಗಳನ್ನು ತಿಂದಿದ್ದೇನೆ, ನಾನು ಅನೇಕ ಸಲ ಮರಣದ ಸಮೀಪದಲ್ಲಿದ್ದೆನು.

24 ಚಾವಟಿಯಿಂದ ಮೂವತ್ತೊಂಭತ್ತು ಏಟುಗಳನ್ನು ಹೊಡೆಯಿಸಿಕೊಳ್ಳುವ ಶಿಕ್ಷೆಯನ್ನು ಯೆಹೂದಿಯರು ನನಗೆ ಐದು ಸಲ ವಿಧಿಸಿದರು. 25 ಮೂರು ಸಲ ಕಬ್ಬಿಣದ ಸರಳುಗಳಿಂದ ಏಟನ್ನು ತಿಂದಿದ್ದೇನೆ. ಒಂದು ಸಲ ಕಲ್ಲೆಸೆದು ನನ್ನನ್ನು ಅರೆಜೀವ ಮಾಡಿದರು. ಮೂರು ಸಲ ನಾನಿದ್ದ ಹಡಗುಗಳು ಒಡೆದುಹೋದವು. ಒಮ್ಮೆ, ಒಂದು ರಾತ್ರಿ ಒಂದು ಹಗಲು ಸಮುದ್ರದ ನೀರಿನಲ್ಲಿರಬೇಕಾಯಿತು. 26 ಅನೇಕ ಪ್ರಯಾಣಗಳನ್ನು ಮಾಡಿದೆನು. ನದಿಗಳಿಂದಲೂ ಕಳ್ಳರಿಂದಲೂ ನನ್ನ ಸ್ವಂತ ಜನರಾದ ಯೆಹೂದ್ಯರಿಂದಲೂ ಮತ್ತು ಯೆಹೂದ್ಯರಲ್ಲದವರಿಂದಲೂ ಅಪಾಯಕ್ಕೀಡಾಗಿದ್ದೆನು. ಪಟ್ಟಣಗಳಲ್ಲಿಯೂ ಜನರು ವಾಸವಾಗಿಲ್ಲದ ಸ್ಥಳಗಳಲ್ಲಿಯೂ ಸಮುದ್ರಗಳಲ್ಲಿಯೂ ಸುಳ್ಳುಸಹೋದರರ ಮಧ್ಯದಲ್ಲಿಯೂ ಅಪಾಯಕ್ಕೀಡಾಗಿದ್ದೆನು.

27 ಕಷ್ಟಕರವಾದ ಮತ್ತು ಅಪಾಯಕರವಾದ ಕೆಲಸಗಳನ್ನು ಮಾಡಿದ್ದೇನೆ. ಕೆಲವು ಸಲ ನಿದ್ರಿಸಲೂ ಇಲ್ಲ. ಹಸಿವೆ ಬಾಯಾರಿಕೆಗಳಿಂದ ಕಷ್ಟಪಟ್ಟಿದ್ದೇನೆ. ಅನೇಕಸಲ ನನಗೆ ಊಟ ಇರಲಿಲ್ಲ. ಚಳಿಯಿಂದ ನಡುಗುತ್ತಿದ್ದರೂ ಬಟ್ಟೆಯಿರಲಿಲ್ಲ. 28 ಹೀಗೆ ನಾನು ಇನ್ನೂ ಅನೇಕ ಸಮಸ್ಯೆಗಳನ್ನು ಎದುರಿಸಿದ್ದೇನೆ. ಎಲ್ಲಾ ಸಭೆಗಳ ಮೇಲೆ ನನಗಿರುವ ಚಿಂತೆಯೂ ಇವುಗಳಲ್ಲಿ ಒಂದು. ನಾನು ಪ್ರತಿನಿತ್ಯ ಅವುಗಳ ಬಗ್ಗೆ ಚಿಂತಿಸುತ್ತೇನೆ. 29 ಯಾವನಾದರೂ ಬಲಹೀನನಾಗಿರುವಾಗ ನಾನೂ ಬಲಹೀನನಾಗಿರುತ್ತೇನೆ. ಯಾವನಾದರೂ ಪಾಪದಲ್ಲಿ ನಡೆಸಲ್ಪಟ್ಟರೆ ನನ್ನೊಳಗೆ ಕೋಪಗೊಳ್ಳುತ್ತೇನೆ.

30 ಹೊಗಳಿಕೊಳ್ಳಬೇಕಾದರೆ, ನನ್ನನ್ನು ಬಲಹೀನನೆಂದು ತೋರಿಸುವ ಸಂಗತಿಗಳ ಬಗ್ಗೆ ಹೊಗಳಿಕೊಳ್ಳುತ್ತೇನೆ. 31 ನಾನು ಸುಳ್ಳು ಹೇಳುತ್ತಿಲ್ಲವೆಂದು ದೇವರಿಗೆ ಗೊತ್ತಿದೆ. ಆತನು ಪ್ರಭು ಯೇಸು ಕ್ರಿಸ್ತನ ದೇವರೂ ತಂದೆಯೂ ಆಗಿದ್ದಾನೆ. ಆತನಿಗೆ ಸದಾಕಾಲ ಸ್ತೋತ್ರ ಸಲ್ಲಿಸಬೇಕು. 32 ನಾನು ದಮಸ್ಕದಲ್ಲಿದ್ದಾಗ ರಾಜನಾದ ಅರೇತನ ಅಧೀನದಲ್ಲಿದ್ದ ರಾಜ್ಯಪಾಲನು ನನ್ನನ್ನು ಬಂಧಿಸಬೇಕೆಂದಿದ್ದನು. ಅವನು ಪಟ್ಟಣದ ಸುತ್ತಲೂ ಕಾವಲುಗಾರರನ್ನು ನಿಲ್ಲಿಸಿದನು. 33 ಆದರೆ ನನ್ನ ಕೆಲವು ಸ್ನೇಹಿತರು ನನ್ನನ್ನು ಬುಟ್ಟಿಯೊಳಗೆ ಕುಳ್ಳಿರಿಸಿ, ಗೋಡೆಯ ಕಿಟಕಿಯೊಳಗಿಂದ ಕೆಳಗಿಳಿಸಿದರು. ಹೀಗೆ ನಾನು ರಾಜ್ಯಪಾಲನಿಂದ ತಪ್ಪಿಸಿಕೊಂಡೆನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International