Print Page Options
Previous Prev Day Next DayNext

New Testament in a Year

Read the New Testament from start to finish, from Matthew to Revelation.
Duration: 365 days
Kannada Holy Bible: Easy-to-Read Version (KERV)
Version
1 ಕೊರಿಂಥದವರಿಗೆ 14:21-40

21 ಪವಿತ್ರ ಗ್ರಂಥದಲ್ಲಿ ಈ ರೀತಿ ಬರೆಯಲ್ಪಟ್ಟಿದೆ:

“ವಿವಿಧ ಭಾಷೆಗಳನ್ನು ಮಾತಾಡುವವರ ಮೂಲಕವೂ
    ವಿದೇಶಿಯರ ನಾಲಿಗೆಯ ಮೂಲಕವೂ
ನಾನು ಈ ಜನರೊಂದಿಗೆ ಮಾತಾಡುವೆನು;
    ಆದರೂ ಇವರು ನನಗೆ ವಿಧೇಯರಾಗುವುದಿಲ್ಲ.”(A)

ಪ್ರಭುವು ಹೇಳುವುದು ಅದನ್ನೇ.

22 ಆದ್ದರಿಂದ ವಿವಿಧ ಭಾಷೆಗಳನ್ನು ಮಾತಾಡುವ ವರವು ನಂಬದ ಜನರಿಗೆ ಆಧಾರವಾಗಿದೆಯೇ ಹೊರತು ನಂಬುವವರಿಗಲ್ಲ. ಆದರೆ ಪ್ರವಾದನೆಯು ನಂಬುವ ಜನರಿಗೋಸ್ಕರವಾಗಿ ಇದೆಯೇ ಹೊರತು ನಂಬದವರಿಗಲ್ಲ. 23 ಒಂದುವೇಳೆ ಇಡೀ ಸಭೆಯು ಕೂಡಿಬಂದಾಗ ನೀವೆಲ್ಲರೂ ವಿವಿಧ ಭಾಷೆಗಳನ್ನು ಮಾತಾಡತೊಡಗಿದರೆ, ಅಲ್ಲಿಗೆ ಬರುವ ತಿಳುವಳಿಕೆಯಿಲ್ಲದ ಅಥವಾ ನಂಬದ ಕೆಲವು ಜನರು ನಿಮ್ಮನ್ನು ಹುಚ್ಚರೆಂದು ಹೇಳುವರು. 24 ಒಂದುವೇಳೆ ನೀವೆಲ್ಲರೂ ಪ್ರವಾದನೆ ಮಾಡುತ್ತಿರುವಾಗ, ತಿಳುವಳಿಕೆಯಿಲ್ಲದ ಅಥವಾ ನಂಬಿಕೆಯಿಲ್ಲದ ವ್ಯಕ್ತಿಯು ಒಳಗೆ ಬಂದರೆ, ನಿಮ್ಮ ಪ್ರವಾದನೆಗಳು ಆ ವ್ಯಕ್ತಿಗೆ ಅವನ ಪಾಪವನ್ನು ತೋರಿಸಿಕೊಡುತ್ತವೆ ಮತ್ತು ನೀವು ಹೇಳುವ ವಿಷಯಗಳ ಆಧಾರದ ಮೇಲೆ ಅವನಿಗೆ ತೀರ್ಪಾಗುವುದು. 25 ಆ ವ್ಯಕ್ತಿಯ ಹೃದಯದಲ್ಲಿರುವ ರಹಸ್ಯ ಸಂಗತಿಗಳು ಬಯಲಾಗುತ್ತವೆ. ಆದ್ದರಿಂದ ಆ ವ್ಯಕ್ತಿಯು ಅಡ್ಡಬಿದ್ದು ದೇವರನ್ನು ಆರಾಧಿಸುವನು. “ನಿಜವಾಗಿಯೂ ದೇವರು ನಿಮ್ಮ ಸಂಗಡವಿದ್ದಾನೆ” ಎಂದು ಅವನು ಹೇಳುವನು.[a]

ನಿಮ್ಮ ಸಭಾಕೂಟಗಳು ಸಭೆಗೆ ಸಹಾಯಕವಾಗಿರಬೇಕು

26 ಆದ್ದರಿಂದ ಸಹೋದರ ಸಹೋದರಿಯರೇ, ನೀವು ಮಾಡತಕ್ಕದ್ದೇನು? ನೀವು ಸಭೆಸೇರಿದಾಗ, ಒಬ್ಬನು ಹಾಡುತ್ತಾನೆ; ಒಬ್ಬನು ಉಪದೇಶ ಮಾಡುತ್ತಾನೆ; ಒಬ್ಬನು ದೇವರಿಂದ ಹೊಸ ಸತ್ಯವನ್ನು ತಿಳಿಸುತ್ತಾನೆ; ಒಬ್ಬನು ಪರಭಾಷೆಯಲ್ಲಿ ಮಾತಾಡುತ್ತಾನೆ; ಒಬ್ಬನು ಆ ಪರಭಾಷೆಯನ್ನು ಅನುವಾದಿಸುತ್ತಾನೆ. ಸಭೆಯು ದೃಢವಾಗಿ ಬೆಳೆಯಬೇಕೆಂಬುದೇ ಇವುಗಳ ಉದ್ದೇಶವಾಗಿರಬೇಕು. 27 ನೀವು ಸಭೆಸೇರಿರುವಾಗ, ಯಾರಾದರೂ ಪರಭಾಷೆಯಲ್ಲಿ ಮಾತಾಡಲು ಬಯಸಿದರೆ, ಇಬ್ಬರು ಅಥವಾ ಮೂವರಿಗಿಂತಲೂ ಹೆಚ್ಚು ಜನರು ಪರಭಾಷೆಯಲ್ಲಿ ಮಾತಾಡಬಾರದು. ಅವರು ಹೇಳುವುದನ್ನು ಮತ್ತೊಬ್ಬ ವ್ಯಕ್ತಿಯು ಅನುವಾದಿಸಬೇಕು. 28 ಆದರೆ ಅನುವಾದಕನು ಇಲ್ಲದಿದ್ದರೆ, ಪರಭಾಷೆಯಲ್ಲಿ ಮಾತಾಡುವವನು ಸಭೆಯಲ್ಲಿ ಮೌನವಾಗಿರಬೇಕು. ಆ ವ್ಯಕ್ತಿಯು ತನ್ನೊಂದಿಗೂ ದೇವರೊಂದಿಗೂ ಮಾತ್ರ ಮಾತಾಡಬೇಕು.

29 ಇಬ್ಬರು ಅಥವಾ ಮೂವರು ಪ್ರವಾದಿಗಳು ಮಾತ್ರ ಮಾತಾಡಬೇಕು. ಅವರು ಹೇಳುವುದನ್ನು ಇತರರು ವಿವೇಚಿಸಬೇಕು. 30 ಸಭೆಯಲ್ಲಿ ಕುಳಿತಿರುವ ಮತ್ತೊಬ್ಬ ವ್ಯಕ್ತಿಗೆ ದೇವರ ಸಂದೇಶವು ದೊರೆತರೆ, ಮೊದಲು ಮಾತಾಡುತ್ತಿರುವವನು ತನ್ನ ಮಾತನ್ನು ನಿಲ್ಲಿಸಲಿ. 31 ನೀವೆಲ್ಲರೂ ಒಬ್ಬರಾದ ನಂತರ ಒಬ್ಬರು ಪ್ರವಾದಿಸಬಹುದು. ಈ ರೀತಿಯಲ್ಲಿ ಎಲ್ಲಾ ಜನರು ಕಲಿತುಕೊಳ್ಳುವರು ಮತ್ತು ಪ್ರೋತ್ಸಾಹಿತರಾಗುವರು. 32 ಪ್ರವಾದಿಗಳ ಜೀವಾತ್ಮಗಳು ಪ್ರವಾದಿಗಳ ಸ್ವಾಧೀನದಲ್ಲಿಯೇ ಇರುತ್ತವೆ. 33 ದೇವರು ಸಮಾಧಾನಕ್ಕೆ ಕಾರಣನೇ ಹೊರತು ಗಲಿಬಿಲಿಗೆ ಕಾರಣನಲ್ಲ.

34 ಸ್ತ್ರೀಯರು ಸಭಾಕೂಟಗಳಲ್ಲಿ ಮೌನವಾಗಿರಬೇಕು. ದೇವಮಕ್ಕಳ ಎಲ್ಲಾ ಸಭೆಗಳಲ್ಲಿಯೂ ಇದೇ ಪದ್ಧತಿ ರೂಢಿಯಲ್ಲಿದೆ. ಸ್ತ್ರೀಯರಿಗೆ ಮಾತಾಡಲು ಅನುಮತಿಯಿಲ್ಲ. ಅವರು ಅಧೀನರಾಗಿರಬೇಕು. ಮೋಶೆಯ ಧರ್ಮಶಾಸ್ತ್ರವು ಸಹ ಇದನ್ನೇ ಹೇಳುತ್ತದೆ. 35 ಸ್ತ್ರೀಯರು ಏನಾದರು ತಿಳಿದುಕೊಳ್ಳಬೇಕೆಂದಿದ್ದರೆ, ತಮ್ಮ ಮನೆಗಳಲ್ಲಿ ತಮ್ಮ ಗಂಡಂದಿರನ್ನು ಕೇಳಬೇಕು. ಬಹಿರಂಗ ಕೂಟದಲ್ಲಿ ಸ್ತ್ರೀಯರು ಮಾತಾಡುವಂಥದ್ದು ನಾಚಿಕೆಕರವಾದದ್ದು.

36 ದೇವರ ಉಪದೇಶವು ನಿಮ್ಮಿಂದ ಬರುತ್ತದೆಯೇ? ಇಲ್ಲ! ಆ ಉಪದೇಶವನ್ನು ಹೊಂದಿಕೊಂಡವರು ನೀವು ಮಾತ್ರವೋ? ಇಲ್ಲ! 37 ಯಾವನಾದರೂ ತಾನು ಪ್ರವಾದಿಯೆಂದು ಅಥವಾ ತನ್ನಲ್ಲಿ ಆತ್ಮಿಕ ವರವಿದೆಯೆಂದು ಯೋಚಿಸುವುದಾದರೆ, ಇದು ಪ್ರಭುವಿನ ಆಜ್ಞೆಯೆಂದು ಅವನು ಅರ್ಥಮಾಡಿಕೊಳ್ಳಬೇಕು. 38 ಯಾವನಾದರೂ ಇದನ್ನು ಒಪ್ಪಿಕೊಳ್ಳದಿದ್ದರೆ, ನೀವೂ ಅವನನ್ನು ಒಪ್ಪಿಕೊಳ್ಳಬಾರದು.

39 ಆದ್ದರಿಂದ ಸಹೋದರ ಸಹೋದರಿಯರೇ, ನೀವು ಪ್ರವಾದನಾ ವರವನ್ನು ನಿಜವಾಗಿಯೂ ಬಯಸಿರಿ. ವಿವಿಧ ಭಾಷೆಗಳಲ್ಲಿ ಮಾತಾಡುವ ವರವನ್ನು ಹೊಂದಿರುವವರು ತಮ್ಮ ವರವನ್ನು ಉಪಯೋಗಿಸಲಿ. ಅವರನ್ನು ತಡೆಯಬೇಡಿರಿ. 40 ಆದರೆ ಪ್ರತಿಯೊಂದನ್ನೂ ಸರಿಯಾದ ರೀತಿಯಲ್ಲಿ ಮತ್ತು ಕ್ರಮಬದ್ಧವಾಗಿ ಮಾಡಿರಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International