New Testament in a Year
ಸಭೆಯ ಸಹಾಯಕ್ಕಾಗಿ ಆತ್ಮಿಕ ವರಗಳನ್ನು ಉಪಯೋಗಿಸಿರಿ
14 ಪ್ರೀತಿಯೇ ನಿಮ್ಮ ಗುರಿಯಾಗಿರಲಿ. ಅಲ್ಲದೆ ಪವಿತ್ರಾತ್ಮನ ವರಗಳನ್ನು ಹೊಂದಿಕೊಳ್ಳಲು ವಿಶೇಷವಾಗಿ ಪ್ರವಾದಿಸುವ ವರವನ್ನು ಬಹಳವಾಗಿ ಅಪೇಕ್ಷಿಸಬೇಕು. 2 ಅದಕ್ಕೆ ಕಾರಣವೇನೆಂದರೆ: ಪರಭಾಷೆಯಲ್ಲಿ ಮಾತಾಡುವ ವರವನ್ನು ಹೊಂದಿರುವವನು ಜನರೊಂದಿಗೆ ಮಾತಾಡುವುದಿಲ್ಲ. ಅವನು ದೇವರೊಂದಿಗೆ ಮಾತಾಡುತ್ತಾನೆ. ಯಾರೂ ಅವನನ್ನು ಅರ್ಥಮಾಡಿಕೊಳ್ಳುವುದಿಲ್ಲ. ಏಕೆಂದರೆ ಅವನು ಪವಿತ್ರಾತ್ಮನ ಮೂಲಕವಾಗಿ ರಹಸ್ಯ ಸಂಗತಿಗಳನ್ನು ಮಾತಾಡುತ್ತಿರುತ್ತಾನೆ. 3 ಆದರೆ ಪ್ರವಾದಿಸುವವನು ಜನರೊಂದಿಗೆ ಮಾತಾಡುತ್ತಾನೆ. ಅವನು ಜನರಿಗೆ ಶಕ್ತಿಯನ್ನು, ಪ್ರೋತ್ಸಾಹವನ್ನು ಮತ್ತು ಆದರಣೆಯನ್ನು ಕೊಡುತ್ತಾನೆ. 4 ಪರಭಾಷೆಯಲ್ಲಿ ಮಾತಾಡುವ ವ್ಯಕ್ತಿಯು ತನಗೆ ಮಾತ್ರ ಸಹಾಯ ಮಾಡಿಕೊಳ್ಳುವನು. ಆದರೆ ಪ್ರವಾದಿಸುವವನು ಇಡೀ ಸಭೆಗೆ ಸಹಾಯ ಮಾಡುತ್ತಾನೆ.
5 ವಿವಿಧ ಭಾಷೆಗಳಲ್ಲಿ ಮಾತಾಡುವ ವರವನ್ನು ನೀವೆಲ್ಲರೂ ಹೊಂದಿರಬೇಕೆಂದು ನನ್ನ ಅಪೇಕ್ಷೆಯಾಗಿದೆ. ಆದರೆ ನೀವು ಪ್ರವಾದಿಸಬೇಕೆಂದು ನಾನು ಇನ್ನೂ ಹೆಚ್ಚಾಗಿ ಅಪೇಕ್ಷಿಸುತ್ತೇನೆ. ಕೇವಲ ವಿವಿಧ ಭಾಷೆಗಳನ್ನು ಮಾತನಾಡುವವನಿಗಿಂತಲೂ ಪ್ರವಾದಿಸುವವನು ಹೆಚ್ಚು ಶ್ರೇಷ್ಠನಾಗಿದ್ದಾನೆ. ಆದರೆ ವಿವಿಧ ಭಾಷೆಗಳಲ್ಲಿ ಮಾತಾಡುವವನು ಆ ಭಾಷೆಗಳನ್ನು ಅನುವಾದಿಸಬಲ್ಲವನಾಗಿದ್ದರೆ, ಅವನು ಪ್ರವಾದಿಸುವವನಷ್ಟೇ ಶ್ರೇಷ್ಠನಾಗುತ್ತಾನೆ. ಆಗ ಅವನು ಹೇಳುವ ಸಂಗತಿಗಳ ಮೂಲಕ ಸಭೆಗೆ ಸಹಾಯವಾಗುವುದು.
6 ಸಹೋದರ ಸಹೋದರಿಯರೇ, ನಾನು ವಿವಿಧ ಭಾಷೆಗಳನ್ನು ಮಾತಾಡುವವನಾಗಿ ನಿಮ್ಮ ಬಳಿಗೆ ಬಂದರೆ ಅದರಿಂದ ನಿಮಗೆ ಸಹಾಯವಾಗುವುದೇ? ಇಲ್ಲ! ನಾನು ನಿಮಗೆ ಹೊಸ ಸತ್ಯವನ್ನು, ಜ್ಞಾನವನ್ನು, ಪ್ರವಾದನೆಯನ್ನು ಮತ್ತು ಉಪದೇಶವನ್ನು ತಂದರೆ ಮಾತ್ರ ನಿಮಗೆ ಸಹಾಯವಾಗುತ್ತದೆ. 7 ನಾದವನ್ನು ಹೊರಹೊಮ್ಮಿಸುವ ಕೊಳಲು ಅಥವಾ ವೀಣೆ ಮುಂತಾದ ನಿರ್ಜೀವ ವಸ್ತುಗಳಿಗೆ ಇದು ಸರಿಹೋಲುತ್ತದೆ. ವಿವಿಧ ಧ್ವನಿಗಳು ಸ್ಪಷ್ಟವಾಗಿಲ್ಲದಿದ್ದರೆ ಯಾವ ಹಾಡನ್ನು ನುಡಿಸಲಾಗುತ್ತಿದೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಲಾರಿರಿ. ಪ್ರತಿಯೊಂದು ಧ್ವನಿಯನ್ನು ಸ್ಪಷ್ಟವಾಗಿ ನುಡಿಸಿದಾಗ ಮಾತ್ರ ನೀವು ಸ್ವರವನ್ನು ಅರ್ಥಮಾಡಿಕೊಳ್ಳುವಿರಿ. 8 ಇದಲ್ಲದೆ ಯುದ್ಧದಲ್ಲಿ ಕಹಳೆಯನ್ನು ಸ್ಪಷ್ಟವಾಗಿ ಊದದಿದ್ದರೆ, ಇದು ಯುದ್ಧಕ್ಕೆ ಸಿದ್ಧರಾಗುವ ಸಮಯವೆಂಬುದು ಸೈನಿಕರಿಗೆ ತಿಳಿಯುವುದಿಲ್ಲ.
9 ಇದು ನಿಮಗೂ ಅನ್ವಯಿಸುತ್ತದೆ. ನೀವು ನಿಮ್ಮ ನಾಲಿಗೆಯಿಂದ ಮಾತಾಡುವ ಪದಗಳು ಸ್ಪಷ್ಟವಾಗಿರಬೇಕು. ನೀವು ಸ್ಪಷ್ಟವಾಗಿ ಮಾತಾಡದಿದ್ದರೆ, ನೀವು ಏನು ಮಾತಾಡುತ್ತಿದ್ದೀರೆಂಬುದನ್ನು ಜನರು ಅರ್ಥಮಾಡಿಕೊಳ್ಳುವುದಿಲ್ಲ. ನೀವು ಗಾಳಿಯೊಂದಿಗೆ ಮಾತಾಡುತ್ತಿರುವಂತೆ ತೋರುವುದು. 10 ಪ್ರಪಂಚದಲ್ಲಿ ಹಲವಾರು ಭಾಷೆಗಳಿರುವುದೇನೋ ಸತ್ಯ ಮತ್ತು ಆ ಭಾಷೆಗಳಿಗೆಲ್ಲಾ ಅರ್ಥವಿದೆ. 11 ಆದ್ದರಿಂದ, ಒಬ್ಬ ವ್ಯಕ್ತಿಯು ಮಾತಾಡುವ ಭಾಷೆಯನ್ನು ನಾನು ಅರ್ಥಮಾಡಿಕೊಳ್ಳದಿದ್ದರೆ ಅವನು ನನಗೆ ವಿದೇಶಿಯನಂತಿರುವನು; ನಾನೂ ಅವನಿಗೆ ವಿದೇಶಿಯನಂತಿರುವೆನು. 12 ಇದು ನಿಮಗೂ ಅನ್ವಯಿಸುತ್ತದೆ. ನೀವು ಆತ್ಮಿಕ ವರಗಳನ್ನು ಬಹಳವಾಗಿ ಅಪೇಕ್ಷಿಸುತ್ತೀರಿ. ಆದ್ದರಿಂದ, ಸಭೆಯು ದೃಢವಾಗಿ ಬೆಳೆಯಲು ಸಹಾಯಕರವಾದ ವರಗಳನ್ನು ಹೊಂದಿಕೊಳ್ಳಲು ಹೆಚ್ಚಾಗಿ ಪ್ರಯತ್ನಿಸಿರಿ.
13 ಪರಭಾಷೆಯಲ್ಲಿ ಮಾತಾಡುವ ವರವುಳ್ಳವನು ತಾನು ಹೇಳುವ ವಿಷಯಗಳನ್ನು ಅನುವಾದಿಸುವ ಸಾಮರ್ಥ್ಯಕ್ಕಾಗಿಯೂ ದೇವರಲ್ಲಿ ಪ್ರಾರ್ಥಿಸಲಿ. 14 ನಾನು ಪರಭಾಷೆಯಲ್ಲಿ ಪ್ರಾರ್ಥಿಸಿದರೆ, ನನ್ನ ಆತ್ಮವು ಪ್ರಾರ್ಥಿಸುವುದೇ ಹೊರತು ನನ್ನ ಮನಸ್ಸು ತಟಸ್ಥವಾಗಿರುವುದು. 15 ಆದ್ದರಿಂದ ನಾನೇನು ಮಾಡಬೇಕು? ನಾನು ನನ್ನ ಆತ್ಮದಿಂದಲೂ ಮನಸ್ಸಿನಿಂದಲೂ ಪ್ರಾರ್ಥಿಸುವೆನು; ನನ್ನ ಜೀವಾತ್ಮದೊಂದಿಗೂ ಮನಸ್ಸಿನೊಂದಿಗೂ ಹಾಡುವೆನು. 16 ನೀನು ನಿನ್ನ ಜೀವಾತ್ಮದಿಂದ ಸುತ್ತಿಸಬಹದು. ಆದರೆ ಅಲ್ಲಿರುವ ಒಬ್ಬನು ನಿನ್ನ ಕೃತಜ್ಞತಾಸ್ತುತಿಯನ್ನು ಅರ್ಥಮಾಡಿಕೊಳ್ಳದ ಹೊರತು “ಆಮೆನ್” ಎಂದು ಹೇಳಲಾರನು. ಏಕೆಂದರೆ ನೀನು ಹೇಳುತ್ತಿರುವುದು ಅವನಿಗೆ ತಿಳಿಯುವುದಿಲ್ಲ. 17 ಸತ್ಯವಾಗಿ ಹೇಳುವುದಾದರೆ, ದೇವರಿಗೆ ಮಾಡುವ ಕೃತಜ್ಞತಾಸ್ತುತಿಯಿಂದ ಬೇರೊಬ್ಬನಿಗೆ ಸಹಾಯವಾಗುವುದಿಲ್ಲ.
18 ವಿವಿಧ ಭಾಷೆಗಳಲ್ಲಿ ಮಾತಾಡಲು ನಿಮ್ಮೆಲ್ಲರಿಗಿಂತಲೂ ಹೆಚ್ಚಿನ ವರವು ನನಗಿದೆ. 19 ಆದರೆ ಸಭಾಕೂಟಗಳಲ್ಲಿ ಅರ್ಥವಾಗದಂಥ ಪರಭಾಷೆಯಲ್ಲಿ ಸಾವಿರಾರು ಮಾತುಗಳನ್ನು ಹೇಳುವುದಕ್ಕಿಂತ ಅರ್ಥವಾಗುವಂಥ ಕೆಲವೇ ಮಾತುಗಳನ್ನು ಹೇಳಲು ಇಷ್ಟಪಡುತ್ತೇನೆ. ಇತರರಿಗೆ ಉಪದೇಶ ಮಾಡುವುದಕ್ಕಾಗಿ ನಾನು ತಿಳುವಳಿಕೆಯಿಂದ ಮಾತಾಡುವೆನು.
20 ಸಹೋದರ ಸಹೋದರಿಯರೇ, ಮಕ್ಕಳಂತೆ ಆಲೋಚಿಸಬೇಡಿ. ಕೆಟ್ಟ ವಿಷಯಗಳಲ್ಲಿ ಎಳೆಗೂಸುಗಳಂತಿರಿ. ಆದರೆ ನಿಮ್ಮ ಆಲೋಚನೆಗಳಲ್ಲಿ ಪ್ರಾಯಸ್ಥರಂತಿರಿ.
Kannada Holy Bible: Easy-to-Read Version. All rights reserved. © 1997 Bible League International