New Testament in a Year
ಫಿಲಿಪ್ಪನು ಇಥಿಯೋಪಿಯದವನಿಗೆ ನೀಡಿದ ಉಪದೇಶ
26 ಪ್ರಭುವಿನ ದೂತನೊಬ್ಬನು ಫಿಲಿಪ್ಪನಿಗೆ, “ನೀನು ಸಿದ್ಧನಾಗಿ ದಕ್ಷಿಣದ ಕಡೆಗೆ ಅಂದರೆ ಜೆರುಸಲೇಮಿನಿಂದ ಗಾಜಾಕ್ಕೆ ಹೋಗುವ ಮರಳುಗಾಡಿನ ಮಾರ್ಗಕ್ಕೆ ಹೋಗು” ಎಂದು ಹೇಳಿದನು.
27 ಆದ್ದರಿಂದ ಫಿಲಿಪ್ಪನು ಸಿದ್ಧನಾಗಿ ಹೊರಟನು. ಇಥಿಯೋಪಿಯಾದ ಒಬ್ಬನನ್ನು ಅವನು ದಾರಿಯಲ್ಲಿ ಕಂಡನು. ಈ ಮನುಷ್ಯನು ನಪುಂಸಕನಾಗಿದ್ದನು. ಇಥಿಯೋಪಿಯದ ರಾಣಿಯಾದ ಕಂದಾಕೆಯ ಆಸ್ಥಾನದಲ್ಲಿ ಇವನು ಮುಖ್ಯಾಧಿಕಾರಿಯಾಗಿದ್ದನು. ಹಣವನ್ನೆಲ್ಲ ನೋಡಿಕೊಳ್ಳುವ ಜವಾಬ್ದಾರಿ ಇವನದೇ ಆಗಿತ್ತು. ಈ ಮನುಷ್ಯನು ಆರಾಧನೆಗಾಗಿ ಜೆರುಸಲೇಮಿಗೆ ಹೋಗಿದ್ದನು. 28 ಈಗ ಅವನು ತನ್ನ ಮನೆಗೆ ಮರಳಿ ಹೋಗುತ್ತಿದ್ದನು. ಅವನು ತನ್ನ ರಥದಲ್ಲಿ ಕುಳಿತುಕೊಂಡು ಯೆಶಾಯನ ಗ್ರಂಥವನ್ನು ಓದುತ್ತಿದ್ದನು.
29 ಪವಿತ್ರಾತ್ಮನು ಫಿಲಿಪ್ಪನಿಗೆ, “ರಥದ ಬಳಿಗೆ ಹೋಗಿ ಅದರ ಸಮೀಪದಲ್ಲಿ ನಿಂತುಕೊ” ಎಂದು ಹೇಳಿದನು. 30 ಅಂತೆಯೇ ಫಿಲಿಪ್ಪನು ರಥದ ಬಳಿಗೆ ಹೋದನು. ಆ ಮನುಷ್ಯನು ಓದುತ್ತಿರುವುದು ಅವನಿಗೆ ಕೇಳಿಸಿತು. ಅವನು ಯೆಶಾಯನ ಪ್ರವಾದನಾ ಗ್ರಂಥವನ್ನು ಓದುತ್ತಿದ್ದನು. ಫಿಲಿಪ್ಪನು ಅವನಿಗೆ, “ನೀನು ಓದುತ್ತಿರುವುದು ನಿನಗೆ ಅರ್ಥವಾಗುತ್ತಿದೆಯೋ?” ಎಂದು ಕೇಳಿದನು.
31 ಆ ಅಧಿಕಾರಿಯು “ನಾನು ಹೇಗೆ ಅರ್ಥಮಾಡಿಕೊಳ್ಳಲಿ? ಬೇರೆ ಯಾರಾದರೂ ನನಗೆ ಅದನ್ನು ವಿವರಿಸಬೇಕು!” ಎಂದು ಉತ್ತರಕೊಟ್ಟನು. ಬಳಿಕ, ರಥವನ್ನು ಹತ್ತಿ ತನ್ನೊಂದಿಗೆ ಕುಳಿತುಕೊಳ್ಳುವಂತೆ ಅವನು ಫಿಲಿಪ್ಪನನ್ನು ಆಹ್ವಾನಿಸಿದನು. 32 ಅವನು ಓದುತ್ತಿದ್ದ ಪವಿತ್ರ ಗ್ರಂಥದ ಭಾಗವು ಇಂತಿದೆ:
“ವಧ್ಯಸ್ಥಾನಕ್ಕೆ ಒಯ್ದ ಕುರಿಯಂತೆ ಆತನಿದ್ದನು.
ಉಣ್ಣೆ ಕತ್ತರಿಸುವವನ ಮುಂದೆ ಮೌನವಾಗಿರುವ ಕುರಿಯಂತೆ ಆತನಿದ್ದನು.
ಆತನು ಬಾಯಿ ತೆರೆಯಲಿಲ್ಲ.
33 ಆತನಿಗೆ ಅವಮಾನ ಮಾಡಿದರು. ಆತನಿಗೆ ನ್ಯಾಯವು ದೊರೆಯಲಿಲ್ಲ.
ಆತನ ಜೀವವನ್ನು ಭೂಮಿಯ ಮೇಲಿನಿಂದ ತೆಗೆದುಬಿಟ್ಟರಲ್ಲಾ!
ಆತನ ಸಂತತಿಯವರ ಬಗ್ಗೆ ಯಾರು ಮಾತಾಡಬಲ್ಲರು?”(A)
34 ಅವನು ಫಿಲಿಪ್ಪನಿಗೆ, “ದಯವಿಟ್ಟು ನನಗೆ ಹೇಳು, ಯಾವ ಪ್ರವಾದಿಯ ಬಗ್ಗೆ ಇಲ್ಲಿ ಹೇಳುತ್ತಿದ್ದಾನೆ? ಅವನು ತನ್ನ ಬಗ್ಗೆ ಹೇಳುತ್ತಿದ್ದಾನೋ ಅಥವಾ ಬೇರೊಬ್ಬನ ಬಗ್ಗೆ ಹೇಳುತ್ತಿದ್ದಾನೋ?” ಎಂದು ಕೇಳಿದನು. 35 ಫಿಲಿಪ್ಪನು ಪವಿತ್ರ ಗ್ರಂಥದ ಈ ಭಾಗದಿಂದಲೇ ಆರಂಭಿಸಿ ಯೇಸುವಿನ ವಿಷಯವಾದ ಸುವಾರ್ತೆಯನ್ನು ಅವನಿಗೆ ತಿಳಿಸಿದನು.
36 ಅವರು ಪ್ರಯಾಣ ಮಾಡುತ್ತಾ ನೀರಿದ್ದ ಒಂದು ಸ್ಥಳಕ್ಕೆ ಬಂದಾಗ ಅಧಿಕಾರಿಯು, “ಇಗೋ! ಇಲ್ಲಿ ನೀರಿದೆ! ನಾನು ದೀಕ್ಷಾಸ್ನಾನ ತೆಗೆದುಕೊಳ್ಳಲು ಏನಾದರೂ ಅಡ್ಡಿಯಿದೆಯೇ?” ಎಂದು ಫಿಲಿಪ್ಪನನ್ನು ಕೇಳಿದನು. 37 [a] 38 ಬಳಿಕ ಅವನು ರಥವನ್ನು ನಿಲ್ಲಿಸಬೇಕೆಂದು ಆಜ್ಞಾಪಿಸಿದನು. ಅವರಿಬ್ಬರೂ ನೀರಿನೊಳಗೆ ಇಳಿದುಹೋದರು. ಫಿಲಿಪ್ಪನು ಅವನಿಗೆ ದೀಕ್ಷಾಸ್ನಾನ ಮಾಡಿಸಿದನು. 39 ಅವರು ನೀರಿನಿಂದ ಮೇಲಕ್ಕೆ ಬಂದಾಗ ಪ್ರಭುವಿನ ಆತ್ಮನಿಂದ ಫಿಲಿಪ್ಪನು ಎತ್ತಲ್ಪಟ್ಟನು. ಅವನು ಫಿಲಿಪ್ಪನನ್ನು ಮತ್ತೆಂದೂ ನೋಡಲಿಲ್ಲ. ಅವನು ಬಹಳ ಸಂತೋಷದಿಂದ ತನ್ನ ಪ್ರಯಾಣವನ್ನು ಮುಂದುವರಿಸಿದನು. 40 ಆದರೆ ಫಿಲಿಪ್ಪನು ಅಜೋತ್ ಎಂಬ ಪಟ್ಟಣದಲ್ಲಿ ಕಾಣಿಸಿಕೊಂಡು ಸೆಜರೇಯ ಎಂಬ ಪಟ್ಟಣಕ್ಕೆ ಹೋದನು. ಅಲ್ಲಿಗೆ ಹೋಗುವಾಗ ದಾರಿಯಲ್ಲಿ ಸಿಕ್ಕಿದ ಎಲ್ಲಾ ಊರುಗಳಲ್ಲಿಯೂ ಸುವಾರ್ತೆಯನ್ನು ಸಾರಿದನು.
Kannada Holy Bible: Easy-to-Read Version. All rights reserved. © 1997 Bible League International