Print Page Options
Previous Prev Day Next DayNext

New Testament in a Year

Read the New Testament from start to finish, from Matthew to Revelation.
Duration: 365 days
Kannada Holy Bible: Easy-to-Read Version (KERV)
Version
ಯೋಹಾನ 18:1-18

ಯೇಸುವಿನ ಬಂಧನ

(ಮತ್ತಾಯ 26:47-56; ಮಾರ್ಕ 14:43-50; ಲೂಕ 22:47-53)

18 ಯೇಸು ಪ್ರಾರ್ಥಿಸಿದ ಮೇಲೆ ತನ್ನ ಶಿಷ್ಯರೊಂದಿಗೆ ಹೊರಟನು. ಅವರು ಕಿದ್ರೋನ್ ಕಣಿವೆಯನ್ನು ದಾಟಿಹೋದರು. ಅದರ ಮತ್ತೊಂದು ಕಡೆಯಲ್ಲಿ ಆಲಿವ್ ಮರಗಳ ತೋಟವಿತ್ತು. ಯೇಸು ಮತ್ತು ಆತನ ಶಿಷ್ಯರು ಅಲ್ಲಿಗೆ ಹೋದರು.

ಯೇಸುವಿಗೆ ದ್ರೋಹ ಬಗೆದ ಯೂದನಿಗೂ ಈ ಸ್ಥಳವು ತಿಳಿದಿತ್ತು. ಏಕೆಂದರೆ ಯೇಸು ತನ್ನ ಶಿಷ್ಯರೊಂದಿಗೆ ಆಗಾಗ್ಗೆ ಅಲ್ಲಿಗೆ ಬರುತ್ತಿದ್ದನು. ಯೂದನು ಸೈನಿಕರ ಗುಂಪೊಂದನ್ನೂ ಮಹಾಯಾಜಕರ ಮತ್ತು ಫರಿಸಾಯರ ಕಾವಲುಗಾರರಲ್ಲಿ ಕೆಲವರನ್ನೂ ಕರೆದುಕೊಂಡು ತೋಟಕ್ಕೆ ಬಂದನು. ಅವರು ದೀವಟಿಗೆ, ಪಂಜು ಮತ್ತು ಆಯುಧಗಳಿಂದ ಸುಸಜ್ಜಿತರಾಗಿದ್ದರು.

ತನಗೆ ಸಂಭವಿಸಲಿದ್ದ ಪ್ರತಿಯೊಂದೂ ಯೇಸುವಿಗೆ ತಿಳಿದಿತ್ತು. ಆತನು ಹೊರಗೆ ಹೋಗಿ, “ನೀವು ಯಾರನ್ನು ಹುಡುಕುತ್ತಿದ್ದೀರಿ?” ಎಂದು ಕೇಳಿದನು.

ಅವರು, “ನಜರೇತಿನ ಯೇಸುವನ್ನು” ಎಂದು ಉತ್ತರಕೊಟ್ಟರು.

ಆತನು, “ನಾನೇ ಯೇಸು” ಎಂದನು. (ಯೇಸುವಿಗೆ ದ್ರೋಹ ಬಗೆದ ಯೂದನು ಅವರೊಂದಿಗೆ ಅಲ್ಲೇ ನಿಂತಿದ್ದನು.) ಆತನು, “ನಾನೇ ಯೇಸು” ಎಂದಾಗ ಅವರು ಹಿಂದೆ ಸರಿದು ನೆಲದ ಮೇಲೆ ಬಿದ್ದರು.

ಯೇಸು ಅವರಿಗೆ ಮತ್ತೆ “ನೀವು ಯಾರನ್ನು ಹುಡುಕುತ್ತಿದ್ದೀರಿ?” ಎಂದು ಕೇಳಿದನು.

ಅವರು, “ನಜರೇತಿನ ಯೇಸುವನ್ನು” ಎಂದು ಹೇಳಿದರು.

ಆತನು, “ನಾನೇ ಯೇಸು ಎಂದು ನಿಮಗೆ ಹೇಳಿದೆನಲ್ಲಾ. ನೀವು ನನ್ನನ್ನು ಹುಡುಕುತ್ತಿದ್ದರೆ, ಉಳಿದ ಇವರನ್ನು ಹೋಗಬಿಡಿರಿ” ಎಂದು ಹೇಳಿದನು. “ನೀನು ನನಗೆ ಕೊಟ್ಟ ಜನರಲ್ಲಿ ಯಾರನ್ನೂ ನಾನು ಕಳೆದುಕೊಳ್ಳಲಿಲ್ಲ” ಎಂದು ಯೇಸು ಮೊದಲು ಹೇಳಿದ್ದ ಮಾತು ಹೀಗೆ ನಿಜವಾಯಿತು.

10 ಸೀಮೋನ್ ಪೇತ್ರನ ಬಳಿ ಒಂದು ಖಡ್ಗವಿತ್ತು. ಅವನು ಆ ಖಡ್ಗವನ್ನು ಹೊರತೆಗೆದು ಪ್ರಧಾನ ಯಾಜಕನ ಸೇವಕನೊಬ್ಬನಿಗೆ ಹೊಡೆದು, ಅವನ ಬಲಗಿವಿಯನ್ನು ಕತ್ತರಿಸಿದನು. (ಆ ಸೇವಕನ ಹೆಸರು ಮಾಲ್ಕ.) 11 ಯೇಸು ಪೇತ್ರನಿಗೆ, “ನಿನ್ನ ಖಡ್ಗವನ್ನು ಒರೆಯಲ್ಲಿ ಹಾಕು! ತಂದೆಯು ನನಗೆ ಕೊಟ್ಟಿರುವ ಸಂಕಟದ ಪಾತ್ರೆಯನ್ನು ನಾನು ಸ್ವೀಕರಿಸಿಕೊಳ್ಳಬೇಕು” ಎಂದು ಹೇಳಿದನು.

ಅನ್ನನ ಮುಂದೆ ಯೇಸು

(ಮತ್ತಾಯ 26:57-58; ಮಾರ್ಕ 14:53-54; ಲೂಕ 22:54)

12 ಬಳಿಕ ಆ ಸೈನಿಕರು, ಅವರ ಸೇನಾಧಿಪತಿ ಹಾಗೂ ಯೆಹೂದ್ಯ ಕಾವಲುಗಾರರು ಯೇಸುವನ್ನು ಹಿಡಿದು ಕಟ್ಟಿ, ಅನ್ನನ ಬಳಿಗೆ ತಂದರು. 13 ಅನ್ನನು ಕಾಯಫನ ಮಾವ. ಆ ವರ್ಷ ಕಾಯಫನು ಪ್ರಧಾನಯಾಜಕನಾಗಿದ್ದನು. 14 ಎಲ್ಲಾ ಜನರಿಗಾಗಿ ಒಬ್ಬನು ಸಾಯುವುದೇ ಮೇಲು ಎಂಬ ಸಲಹೆಯನ್ನು ಕೊಟ್ಟಿದ್ದವನು ಇವನೇ.

ಪೇತ್ರನ ವಿಶ್ವಾಸದ್ರೋಹ

(ಮತ್ತಾಯ 26:69-70; ಮಾರ್ಕ 14:66-68; ಲೂಕ 22:55-57)

15 ಸೀಮೋನ್ ಪೇತ್ರ ಮತ್ತು ಯೇಸುವಿನ ಶಿಷ್ಯರಲ್ಲಿ ಮತ್ತೊಬ್ಬನು ಯೇಸುವಿನೊಂದಿಗೆ ಹೋದರು. ಆ ಮತ್ತೊಬ್ಬ ಶಿಷ್ಯನಿಗೆ ಪ್ರಧಾನಯಾಜಕನ ಪರಿಚಯವಿತ್ತು. ಆದ್ದರಿಂದ ಅವನು ಪ್ರಧಾನ ಯಾಜಕನ ಮನೆಯ ಅಂಗಳದೊಳಗೆ ಹೋದನು. 16 ಆದರೆ ಪೇತ್ರನು ಹೊರಗೆ ಬಾಗಿಲಿನ ಸಮೀಪದಲ್ಲಿ ಕಾದುಕೊಂಡಿದ್ದನು. ಪ್ರಧಾನಯಾಜಕನ ಪರಿಚಯವಿದ್ದ ಶಿಷ್ಯನು ಹೊರಗೆ ಬಂದು ದ್ವಾರಪಾಲಕಿಯೊಂದಿಗೆ ಮಾತಾಡಿ ಪೇತ್ರನನ್ನು ಒಳಗೆ ಕರೆದುಕೊಂಡು ಹೋದನು. 17 ದ್ವಾರಪಾಲಕಿಯು ಪೇತ್ರನಿಗೆ, “ಆ ಮನುಷ್ಯನ ಶಿಷ್ಯರಲ್ಲಿ ನೀನೂ ಒಬ್ಬನಲ್ಲವೇ?” ಎಂದು ಕೇಳಿದಳು.

ಪೇತ್ರನು, “ಇಲ್ಲ, ನಾನಲ್ಲ!” ಎಂದು ಉತ್ತರಕೊಟ್ಟನು.

18 ಆಗ ಚಳಿಯಿದ್ದುದರಿಂದ ಕಾವಲುಗಾರರು ಬೆಂಕಿ ಹಾಕಿ ಅದರ ಸುತ್ತಲೂ ನಿಂತುಕೊಂಡು ತಮ್ಮನ್ನು ಬೆಚ್ಚಗೆ ಮಾಡಿಕೊಳ್ಳುತ್ತಿದ್ದರು. ಪೇತ್ರನು ಅವರೊಂದಿಗೆ ನಿಂತುಕೊಂಡಿದ್ದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International