New Testament in a Year
25 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಸತ್ತುಹೋದವರು ದೇವರ ಮಗನ ಸ್ವರವನ್ನು ಕೇಳುವ ಕಾಲ ಬರುತ್ತದೆ. ಅದು ಈಗಲೇ ಬಂದಿದೆ. ಕೇಳಿ ಸ್ವೀಕರಿಸಿಕೊಳ್ಳುವವರು ಜೀವವನ್ನು ಹೊಂದುವರು. 26 ತಂದೆಯು ಜೀವಕೊಡುವ ಶಕ್ತಿಯನ್ನು ತಾನು ಹೊಂದಿರುವಂತೆ ಮಗನಿಗೂ ಜೀವಕೊಡುವ ಶಕ್ತಿಯನ್ನು ಅನುಗ್ರಹಿಸಿದನು, 27 ಮತ್ತು ಎಲ್ಲಾ ಜನರಿಗೆ ತೀರ್ಪುಮಾಡುವ ಅಧಿಕಾರವನ್ನು ತಂದೆಯು ಮಗನಿಗೂ ಕೊಟ್ಟಿದ್ದಾನೆ. ಏಕೆಂದರೆ ಆ ಮಗನು ಮನುಷ್ಯಕುಮಾರನಾಗಿದ್ದಾನೆ.
28 “ಇದರ ಬಗ್ಗೆ ಆಶ್ಚರ್ಯಪಡಬೇಡಿರಿ. ಏಕೆಂದರೆ ಸಮಾಧಿಗಳಲ್ಲಿರುವ ಜನರೆಲ್ಲರೂ ಆತನ ಸ್ವರವನ್ನು ಕೇಳುವ ಕಾಲ ಬರುತ್ತದೆ. 29 ಆಗ ಅವರು ತಮ್ಮ ಸಮಾಧಿಗಳಿಂದ ಎದ್ದುಬರುವರು. ಜೀವನದಲ್ಲಿ ಒಳ್ಳೆಯದನ್ನು ಮಾಡಿದ ಜನರು ಪುನರುತ್ಥಾನಗೊಂಡು ನಿತ್ಯಜೀವವನ್ನು ಹೊಂದಿಕೊಳ್ಳುವರು. ಆದರೆ ಕೆಟ್ಟದ್ದನ್ನು ಮಾಡಿದವರಿಗೆ ತೀರ್ಪಿಗಾಗಿ ಪುನರುತ್ಥಾನವಾಗುವುದು.
30 “ನಾನು ಒಬ್ಬಂಟಿಗನಾಗಿ ಏನೂ ಮಾಡಲಾರೆನು. ನಾನು ಕೇಳಿದ್ದಕ್ಕನುಸಾರವಾಗಿ ತೀರ್ಪು ಮಾಡುತ್ತೇನೆ. ಆದ್ದರಿಂದ ನನ್ನ ತೀರ್ಪು ಸರಿಯಾದದ್ದು. ಏಕೆಂದರೆ, ನಾನು ನನ್ನನ್ನು ಮೆಚ್ಚಿಸಲು ಪ್ರಯತ್ನಿಸದೆ ನನ್ನ ತಂದೆಯನ್ನು ಮೆಚ್ಚಿಸಲು ಪ್ರಯತ್ನಿಸುತ್ತೇನೆ.
ಯೆಹೂದ್ಯ ನಾಯಕರಿಗೆ ಯೇಸು ಹೇಳಿದ ಅಧಿಕ ವಿಷಯಗಳು
31 “ನನ್ನ ವಿಷಯವಾಗಿ ನಾನೇ ಹೇಳಿಕೊಂಡರೆ, ನನ್ನ ಸಾಕ್ಷಿಯು ಸತ್ಯವಾದದ್ದಲ್ಲ. 32 ಆದರೆ ನನ್ನ ವಿಷಯವಾಗಿ ಜನರಿಗೆ ಹೇಳುವ ಮತ್ತೊಬ್ಬ ವ್ಯಕ್ತಿಯಿದ್ದಾನೆ. ನನ್ನ ಬಗ್ಗೆ ಅವನು ಹೇಳುವ ಸಂಗತಿಗಳು ಸತ್ಯವಾಗಿವೆಯೆಂದು ನನಗೆ ಗೊತ್ತಿದೆ.
33 “ನೀವು ಯೋಹಾನನ ಬಳಿಗೆ ಜನರನ್ನು ಕಳುಹಿಸಿದ್ದಿರಿ. ಅವನು ನಿಮಗೆ ಸತ್ಯದ ಬಗ್ಗೆ ತಿಳಿಸಿದನು. 34 ಆದರೆ ನನ್ನ ಬಗ್ಗೆ ಜನರಿಗೆ ತಿಳಿಸುವುದಕ್ಕಾಗಿ ನನಗೆ ಮನುಷ್ಯನೊಬ್ಬನ ಅಗತ್ಯವಿಲ್ಲ. ಆದರೆ ನಿಮಗೆ ರಕ್ಷಣೆಯಾಗಬೇಕೆಂದು ನಾನು ಈ ಸಂಗತಿಗಳನ್ನು ಹೇಳುತ್ತಿದ್ದೇನೆ. 35 ಯೋಹಾನನು ಉರಿಯುವ ದೀಪದಂತೆ ಬೆಳಕನ್ನು ಕೊಟ್ಟನು ಮತ್ತು ನೀವು ಅವನ ಬೆಳಕನ್ನು ಸ್ವಲ್ಪಕಾಲ ಸಂತೋಷದಿಂದ ಅನುಭವಿಸಿದಿರಿ.
36 “ಆದರೆ ನನ್ನ ಬಗ್ಗೆ ನನ್ನಲ್ಲಿ ಯೋಹಾನನಿಗಿಂತಲೂ ಹೆಚ್ಚಿನ ಸಾಕ್ಷಿಗಳಿವೆ. ನಾನು ಮಾಡುವ ಕಾರ್ಯಗಳೇ ನನ್ನ ಸಾಕ್ಷಿಗಳಾಗಿವೆ. ತಂದೆಯು ನನಗೆ ಕೊಟ್ಟಿರುವ ಈ ಕಾರ್ಯಗಳೇ, ತಂದೆಯು ನನ್ನನ್ನು ಕಳುಹಿಸಿಕೊಟ್ಟಿದ್ದಾನೆ ಎಂಬುದನ್ನು ತೋರಿಸುತ್ತವೆ. 37 ಅಲ್ಲದೆ ನನ್ನನ್ನು ಕಳುಹಿಸಿದ ತಂದೆಯು ನನ್ನ ಬಗ್ಗೆ ತಾನೇ ಸಾಕ್ಷಿ ಕೊಟ್ಟಿದ್ದಾನೆ. ಆದರೆ ನೀವು ಆತನ ಧ್ವನಿಯನ್ನು ಎಂದೂ ಕೇಳಿಲ್ಲ. ಆತನು ಹೇಗಿದ್ದಾನೆ ಎಂಬುದನ್ನು ನೀವು ಎಂದೂ ಕಂಡಿಲ್ಲ. 38 ತಂದೆಯ ಉಪದೇಶವು ನಿಮ್ಮಲ್ಲಿ ನೆಲೆಸಿಲ್ಲ. ಏಕೆಂದರೆ ತಂದೆಯು ಕಳುಹಿಸಿರುವಾತನನ್ನು ನೀವು ನಂಬುವುದಿಲ್ಲ. 39 ನೀವು ಪವಿತ್ರ ಗ್ರಂಥವನ್ನು ಜಾಗ್ರತೆಯಿಂದ ಅಧ್ಯಯನ ಮಾಡುತ್ತೀರಿ. ಆ ಪವಿತ್ರ ಗ್ರಂಥವು ನಿಮಗೆ ನಿತ್ಯಜೀವವನ್ನು ಕೊಡುತ್ತದೆ ಎಂಬುದು ನಿಮ್ಮ ಆಲೋಚನೆ. ಅದೇ ಪವಿತ್ರ ಗ್ರಂಥವು ನನ್ನ ಬಗ್ಗೆ ತಿಳಿಸುತ್ತದೆ! 40 ಆದರೆ ನೀವು ಬಯಸುವ ಆ ಜೀವವನ್ನು ನನ್ನ ಬಳಿಗೆ ಬಂದು ಹೊಂದಿಕೊಳ್ಳಲು ನಿಮಗೆ ಇಷ್ಟವಿಲ್ಲ.
41 “ಮನುಷ್ಯರಿಂದ ಬರುವ ಹೊಗಳಿಕೆಯು ನನಗೆ ಬೇಕಾಗಿಲ್ಲ. 42 ಆದರೆ ನಾನು ನಿಮ್ಮನ್ನು ಬಲ್ಲೆನು. ದೇವರ ಮೇಲೆ ನಿಮಗೆ ಪ್ರೀತಿಯಿಲ್ಲವೆಂದು ನನಗೆ ಗೊತ್ತಿದೆ. 43 ನಾನು ನನ್ನ ತಂದೆಯ ಹೆಸರಿನಲ್ಲಿ ಬಂದಿದ್ದೇನೆ. ನಾನು ಆತನಿಗೋಸ್ಕರ ಮಾತಾಡುತ್ತೇನೆ. ಆದರೆ ನೀವು ನನ್ನನ್ನು ಸ್ವೀಕರಿಸಿಕೊಳ್ಳುವುದಿಲ್ಲ. ಮತ್ತೊಬ್ಬನು ಬಂದು ತನಗೋಸ್ಕರವಾಗಿ ಮಾತಾಡಿದರೆ ನೀವು ಅವನನ್ನು ಸ್ವೀಕರಿಸಿಕೊಳ್ಳುತ್ತೀರಿ. 44 ನೀವು ಪರಸ್ಪರ ಸನ್ಮಾನವನ್ನು ಬಯಸುತ್ತೀರಿ. ಆದರೆ ಒಬ್ಬನೇ ದೇವರಿಂದ ಬರುವ ಸನ್ಮಾನವನ್ನು ಪಡೆದುಕೊಳ್ಳಲು ನೀವೆಂದೂ ಪ್ರಯತ್ನಿಸುವುದಿಲ್ಲ. ಹೀಗಿರಲು ನೀವು ಹೇಗೆ ನಂಬಬಲ್ಲಿರಿ? 45 ನಾನು ತಂದೆಯ ಮುಂದೆ ನಿಂತುಕೊಂಡು ನಿಮ್ಮನ್ನು ತಪ್ಪಿತಸ್ಥರೆಂಬುದಾಗಿ ಹೇಳುತ್ತೇನೆಂದು ಯೋಚಿಸಬೇಡಿರಿ. ನಿಮ್ಮನ್ನು ರಕ್ಷಿಸುತ್ತಾನೆಂದು ನೀವು ನಿರೀಕ್ಷಿಸಿಕೊಂಡಿರುವ ಮೋಶೆಯೇ ನಿಮ್ಮ ಮೇಲೆ ದೂರು ಹೇಳುವನು. 46 ನೀವು ಮೋಶೆಯನ್ನು ನಿಜವಾಗಿಯೂ ನಂಬಿದ್ದರೆ, ನನ್ನನ್ನೂ ನಂಬುತ್ತಿದ್ದಿರಿ. ಯಾಕೆಂದರೆ ಅವನು ನನ್ನ ವಿಷಯವಾಗಿ ಬರೆದಿದ್ದಾನೆ. 47 ಆದರೆ ಮೋಶೆ ಬರೆದದ್ದನ್ನು ನೀವು ನಂಬುವುದಿಲ್ಲ. ಹೀಗಿರಲು ನಾನು ಹೇಳುವ ಸಂಗತಿಗಳನ್ನು ನೀವು ಹೇಗೆ ನಂಬಬಲ್ಲಿರಿ?”
Kannada Holy Bible: Easy-to-Read Version. All rights reserved. © 1997 Bible League International