New Testament in a Year
ಯೇಸು ಮತ್ತು ಸಮಾರ್ಯ ಸ್ತ್ರೀಯ ಸಂಭಾಷಣೆ
4 ತಾನು ಯೋಹಾನನಿಗಿಂತಲೂ ಹೆಚ್ಚು ಶಿಷ್ಯರನ್ನು ಮಾಡಿಕೊಂಡು ಅವರಿಗೆ ದೀಕ್ಷಾಸ್ನಾನ ಮಾಡಿಸುತ್ತಿರುವ ಸುದ್ದಿಯು ಫರಿಸಾಯರಿಗೆ ತಿಳಿಯಿತೆಂಬುದು ಯೇಸುವಿಗೆ ಗೊತ್ತಾಯಿತು. 2 (ವಾಸ್ತವವಾಗಿ ಜನರಿಗೆ ದೀಕ್ಷಾಸ್ನಾನ ಕೊಟ್ಟದ್ದು ಯೇಸುವಲ್ಲ. ಆತನ ಶಿಷ್ಯರೇ ಜನರಿಗೆ ದೀಕ್ಷಾಸ್ನಾನ ಮಾಡಿಸಿದರು.) 3 ಆಗ, ಆತನು ಜುದೇಯವನ್ನು ಬಿಟ್ಟು ಮತ್ತೆ ಗಲಿಲಾಯಕ್ಕೆ ಹೋದನು. 4 ಸಮಾರ್ಯ ಪ್ರಾಂತ್ಯದ ಮೂಲಕವೇ ಗಲಿಲಾಯಕ್ಕೆ ಹೋಗಬೇಕಿತ್ತು.
5 ಯೇಸು ಸಮಾರ್ಯದ ಪಟ್ಟಣವಾದ ಸಿಖಾರ್ ಎಂಬಲ್ಲಿಗೆ ಬಂದನು. ಯಾಕೋಬನು ತನ್ನ ಮಗನಾದ ಯೋಸೇಫನಿಗೆ ಕೊಟ್ಟ ಭೂಮಿಯ ಸಮೀಪದಲ್ಲಿ ಆ ಊರಿದೆ. 6 ಯಾಕೋಬನ ಬಾವಿಯು ಅಲ್ಲಿತ್ತು. ಯೇಸು ತನ್ನ ದೀರ್ಘ ಪ್ರಯಾಣದಿಂದ ಆಯಾಸಗೊಂಡಿದ್ದನು. ಆದ್ದರಿಂದ ಆತನು ಬಾವಿಯ ಬಳಿ ಕುಳಿತುಕೊಂಡನು. ಆಗ ಸುಮಾರು ಮಧ್ಯಾಹ್ನದ ಸಮಯವಾಗಿತ್ತು. 7 ಸಮಾರ್ಯದ ಸ್ತ್ರೀಯೊಬ್ಬಳು ನೀರನ್ನು ತೆಗೆದುಕೊಂಡು ಹೋಗುವುದಕ್ಕಾಗಿ ಆ ಬಾವಿಗೆ ಬಂದಳು. ಯೇಸು ಆಕೆಗೆ, “ದಯವಿಟ್ಟು, ಕುಡಿಯಲು ಸ್ವಲ್ಪ ನೀರು ಕೊಡು” ಎಂದು ಕೇಳಿದನು. 8 (ಯೇಸುವಿನ ಶಿಷ್ಯರು ಆಹಾರಪದಾರ್ಥವನ್ನು ಕೊಂಡುಕೊಂಡು ಬರಲು ಪಟ್ಟಣದೊಳಗೆ ಹೋಗಿದ್ದಾಗ ಇದು ಸಂಭವಿಸಿತು.)
9 ಸಮಾರ್ಯದ ಸ್ತ್ರೀಯು, “ಕುಡಿಯುವ ನೀರಿಗಾಗಿ ನೀನು ನನ್ನನ್ನು ಕೇಳುತ್ತಿರುವುದು ನನಗೆ ಆಶ್ಚರ್ಯವನ್ನು ಉಂಟುಮಾಡಿದೆ! ನೀನಾದರೋ ಯೆಹೂದ್ಯನು. ನಾನಾದರೋ ಸಮಾರ್ಯದವಳು!” ಎಂದು ಹೇಳಿದಳು. (ಯೆಹೂದ್ಯರು ಸಮಾರ್ಯದವರೊಂದಿಗೆ ಸ್ನೇಹದಿಂದಿರಲಿಲ್ಲ.)
10 ಯೇಸು ಆಕೆಗೆ, “ದೇವರು ಏನು ಕೊಡುತ್ತಾನೆಂಬುದು ನಿನಗೆ ಗೊತ್ತಿಲ್ಲ ಮತ್ತು ಕುಡಿಯಲು ನೀರನ್ನು ಕೇಳಿದ ನಾನು ಯಾರೆಂಬುದೂ ನಿನಗೆ ಗೊತ್ತಿಲ್ಲ. ನಿನಗೆ ಈ ಸಂಗತಿಗಳು ಗೊತ್ತಿದ್ದರೆ, ನೀನು ನನ್ನನ್ನು ಕೇಳಿಕೊಳ್ಳುತ್ತಿದ್ದೆ, ಮತ್ತು ನಾನು ನಿನಗೆ ಜೀವಜಲವನ್ನು ಕೊಡುತ್ತಿದ್ದೆ” ಎಂದನು.
11 ಆ ಸ್ತ್ರೀಯು, “ಅಯ್ಯಾ, ಆ ಜೀವಜಲ ನಿನಗೆಲ್ಲಿ ಸಿಕ್ಕುವುದು? ಬಾವಿಯು ಬಹು ಆಳವಾಗಿದೆ ಮತ್ತು ನೀರು ಸೇದುವುದಕ್ಕೆ ನಿನ್ನಲ್ಲಿ ಏನೂ ಇಲ್ಲ. 12 ನಮ್ಮ ಪಿತೃವಾದ ಯಾಕೋಬನಿಗಿಂತಲೂ ನೀನು ದೊಡ್ಡವನೋ? ನಮಗೆ ಈ ಬಾವಿಯನ್ನು ಯಾಕೋಬನೇ ಕೊಟ್ಟನು. ಸ್ವತಃ ಅವನೇ ಈ ನೀರನ್ನು ಕುಡಿದನು. ಅಲ್ಲದೆ ಅವನ ಮಕ್ಕಳು ಈ ಬಾವಿಯ ನೀರನ್ನು ಕುಡಿದರು ಮತ್ತು ಅವನ ಪಶುಗಳೆಲ್ಲಾ ಈ ಬಾವಿಯ ನೀರನ್ನು ಕುಡಿದವು” ಎಂದು ಹೇಳಿದಳು.
13 ಯೇಸು, “ಈ ನೀರನ್ನು ಕುಡಿಯುವ ಪ್ರತಿಯೊಬ್ಬನಿಗೂ ಮತ್ತೆ ದಾಹವಾಗುವುದು. 14 ಆದರೆ ನಾನು ಕೊಡುವ ನೀರನ್ನು ಕುಡಿಯುವವನಿಗೆ ದಾಹವಾಗುವುದೇ ಇಲ್ಲ. ನಾನು ಅವನಿಗೆ ಕೊಡುವ ನೀರು ಅವನೊಳಗೆ ಉಕ್ಕಿಹರಿಯುವ ನೀರಿನ ಬುಗ್ಗೆಯಾಗುವುದು. ಆ ನೀರು ಅವನಿಗೆ ನಿತ್ಯಜೀವವನ್ನು ತರುತ್ತದೆ” ಎಂದು ಉತ್ತರಕೊಟ್ಟನು.
15 ಆ ಸ್ತ್ರೀಯು ಯೇಸುವಿಗೆ, “ಅಯ್ಯಾ, ಆ ನೀರನ್ನು ನನಗೆ ಕೊಡು. ಆಗ ನನಗೆ ಮತ್ತೆಂದಿಗೂ ದಾಹವಾಗುವುದಿಲ್ಲ. ನೀರನ್ನು ತೆಗೆದುಕೊಂಡು ಹೋಗುವುದಕ್ಕಾಗಿ ನಾನು ಇಲ್ಲಿಗೆ ಮತ್ತೆ ಬರುವ ಅಗತ್ಯವೂ ಇರುವುದಿಲ್ಲ” ಎಂದು ಹೇಳಿದಳು.
16 ಯೇಸು ಆಕೆಗೆ, “ಹೋಗಿ ನಿನ್ನ ಗಂಡನನ್ನು ಕರೆದುಕೊಂಡು ಬಾ” ಎಂದನು.
17 ಆ ಸ್ತ್ರೀಯು, “ನನಗೆ ಗಂಡನಿಲ್ಲ” ಎಂದು ಹೇಳಿದಳು.
ಯೇಸು ಆಕೆಗೆ, “ಗಂಡನಿಲ್ಲವೆಂದು ಸರಿಯಾಗಿ ಹೇಳಿದೆ. 18 ನಿಜವಾಗಿಯೂ ನಿನಗೆ ಐದು ಮಂದಿ ಗಂಡಂದಿರಿದ್ದರು. ಆದರೆ ಈಗ ನೀನು ಯಾರೊಂದಿಗೆ ವಾಸಿಸುತ್ತಿರುವಿಯೋ ಅವನು ನಿನ್ನ ಗಂಡನಲ್ಲ. ನೀನು ನನಗೆ ಸತ್ಯವನ್ನು ತಿಳಿಸಿದೆ” ಎಂದು ಹೇಳಿದನು.
19 ಆ ಸ್ತ್ರೀಯು, “ಅಯ್ಯಾ, ನೀನು ಪ್ರವಾದಿಯೆಂದು ಕಾಣುತ್ತದೆ. 20 ನಮ್ಮ ಪಿತೃಗಳು ಈ ಗುಡ್ಡದ ಮೇಲೆ ಆರಾಧಿಸಿದರು. ಆದರೆ ಜನರು ಆರಾಧಿಸಬೇಕಾದ ಸ್ಥಳ ಜೆರುಸಲೇಮ್ ಎಂದು ಯೆಹೂದ್ಯರಾದ ನೀವು ಹೇಳುತ್ತೀರಲ್ಲಾ” ಎಂದಳು.
21 ಯೇಸು, “ಅಮ್ಮಾ, ನನ್ನನ್ನು ನಂಬು! ನೀವು ಇನ್ನೆಂದಿಗೂ ತಂದೆಯನ್ನು (ದೇವರನ್ನು) ಜೆರುಸಲೇಮಿನಲ್ಲಾಗಲಿ ಈ ಗುಡ್ಡದ ಮೇಲಾಗಲಿ ಆರಾಧಿಸಬೇಕಿಲ್ಲ. 22 ನೀವು ನಿಮಗೆ ತಿಳಿದಿಲ್ಲದ ಯಾವುದನ್ನೋ ಆರಾಧಿಸುತ್ತೀರಿ. ನಮಗಾದರೋ ನಾವು ಯಾರನ್ನು ಆರಾಧಿಸುತ್ತಿದ್ದೇವೆ ಎಂಬುದು ತಿಳಿದಿದೆ. ರಕ್ಷಣೆಯು ಯೆಹೂದ್ಯರಿಂದ ಬರುತ್ತದೆ. 23 ನಿಜವಾದ ಆರಾಧಕರು ತಂದೆಯ ಚಿತ್ತಕ್ಕನುಸಾರವಾಗಿ ತಂದೆಯನ್ನು ಆತ್ಮದಿಂದಲೂ ಸತ್ಯದಿಂದಲೂ ಆರಾಧಿಸುವ ಕಾಲ ಬರುತ್ತದೆ. ಆ ಕಾಲ ಈಗಲೇ ಬಂದಿದೆ ಮತ್ತು ಅಂಥ ಜನರೇ ತನ್ನ ಆರಾಧಕರಾಗಿರಬೇಕೆಂದು ತಂದೆಯು ಬಯಸುತ್ತಾನೆ. 24 ದೇವರು ಆತ್ಮಸ್ವರೂಪಿ. ಆದ್ದರಿಂದ ದೇವರನ್ನು ಆರಾಧಿಸುವವರು ಆತ್ಮದಿಂದಲೂ ಸತ್ಯದಿಂದಲೂ ಆರಾಧಿಸಬೇಕು” ಎಂದು ಹೇಳಿದನು.
25 ಆ ಸ್ತ್ರೀಯು, “ಮೆಸ್ಸೀಯನು ಬರುತ್ತಾನೆಂದು ನನಗೆ ಗೊತ್ತು. ಆತನು ಬಂದಾಗ ನಮಗೆ ಪ್ರತಿಯೊಂದನ್ನೂ ವಿವರಿಸುವನು” ಎಂದು ಹೇಳಿದಳು. (“ಮೆಸ್ಸೀಯನು” ಅಂದರೆ “ಕ್ರಿಸ್ತನು”)
26 ಆಗ ಯೇಸು, “ಆತನೇ ಈಗ ನಿನ್ನೊಂದಿಗೆ ಮಾತಾಡುತ್ತಿದ್ದಾನೆ. ನಾನೇ ಮೆಸ್ಸೀಯ” ಎಂದು ಹೇಳಿದನು.
27 ಆ ಸಮಯದಲ್ಲಿ ಆತನ ಶಿಷ್ಯರು ಹಿಂತಿರುಗಿ ಬಂದರು. ಯೇಸು ಒಬ್ಬ ಸ್ತ್ರೀಯೊಂದಿಗೆ ಮಾತಾಡುತ್ತಿರುವುದನ್ನು ನೋಡಿ ಅವರು ಆಶ್ಚರ್ಯಗೊಂಡರು. ಆದರೆ, “ನಿನಗೇನು ಬೇಕು?” ಎಂದಾಗಲಿ “ನೀನು ಆಕೆಯೊಂದಿಗೆ ಏಕೆ ಮಾತಾಡುತ್ತಿರುವೆ?” ಎಂದಾಗಲಿ ಅವರಲ್ಲಿ ಒಬ್ಬರೂ ಕೇಳಲಿಲ್ಲ.
28 ಬಳಿಕ ಆ ಸ್ತ್ರೀಯು, ತನ್ನ ಕೊಡವನ್ನು ಅಲ್ಲಿಯೇ ಬಿಟ್ಟು ಊರಿಗೆ ಹಿಂತಿರುಗಿ ಹೋಗಿ ಜನರಿಗೆ, 29 “ನಾನು ಈವರೆಗೆ ಮಾಡಿರುವ ಪ್ರತಿಯೊಂದನ್ನೂ ಒಬ್ಬ ವ್ಯಕ್ತಿ ನನಗೆ ತಿಳಿಸಿದನು. ಬಂದು ಅವನನ್ನು ನೋಡಿರಿ. ಆತನೇ ಕ್ರಿಸ್ತನಿರಬಹುದು” ಎಂದು ಹೇಳಿದಳು. 30 ಆದ್ದರಿಂದ ಜನರು ಆತನನ್ನು ನೋಡಲು ಪಟ್ಟಣದಿಂದ ಹೊರಬಂದರು.
Kannada Holy Bible: Easy-to-Read Version. All rights reserved. © 1997 Bible League International